ಸೋಮವಾರ, ಫೆಬ್ರವರಿ 27, 2017

ಭ್ರಷ್ಟ್ರರ ಬೇಟೆ:ಭ್ರಷ್ಟಾಚಾರ ವಿರೋಧಿ ಕಾನೂನುಗಳು

ಅನು: ಶಿವಸುಂದರ್
ಅಕ್ರಮ ಆಸ್ತಿ ಪ್ರಕರಣದದ ಬಗೆಗಿನ ನ್ಯಾಯಾದೇಶವು ಭ್ರಷ್ಟ ರಾಜಕಾರಣಿಗಳಿಗೆ ಕಡಿವಾಣ ಹಾಕುತ್ತದೆಯೇ?

ಆಕೆ ಇನ್ನೇನು ತಮಿಳುನಾಡಿನ ಮುಖ್ಯಮಂತ್ರಿಯೇ ಆಗಿಬಿಡುತ್ತಿದ್ದರು; ಈಗ ಆಕೆ ಸೆರೆಮನೆಯಲ್ಲಿ ಸರಳುಗಳ ಹಿಂದಿದ್ದಾರೆ. ಆಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂನ (ಎಐಎಡಿಎಂಕೆ) ಅಧಿನಾಯಕಿ ಜೆ. ಜಯಲಲಿತಾ ಅವರು 2016ರ ಡಿಸೆಂಬರ್ 5 ರಂದು ಚೆನ್ನೈನಲ್ಲಿ ನಿಧನರಾದ ನಂತರದಲ್ಲಿ ಅವರ ಕೃಪಾಶ್ರಯದಲ್ಲೇ ಬೆಳೆದ ವಿ.ಕೆ.ಶಶಿಕಲಾ ಭವಿಷ್ಯವೇನಾಗುತ್ತದೆಂಬ ಪ್ರಶ್ನೆ ತಮಿಳುನಾಡಿನ ಜನತೆ ಮತ್ತು ಮಾಧ್ಯಮಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಆದರೆ ಇದರ ಬಗೆಗಿನ ಎಲ್ಲಾ ಊಹಾಪೆಹಗಳಿಗೂ ಸುಪ್ರಿಂ ಕೋರ್ಟಿನ ಬ್ರವರಿ 14ರ ಆದೇಶದ ಮೂಲಕ ನಾಟಕೀಯವಾದ ತೆರೆ ಬಿದ್ದಿದೆ. ವಿವರಿಸಲಸಾಧ್ಯವಾದಷ್ಟು ವಿಳಂಬದ ನಂತರ ದೇಶದ ವರಿಷ್ಠ ನ್ಯಾಯಾಲಯವು ಎರಡು ದಶಕಗಳಷ್ಟು ಹಳೆಯದಾದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ, ಶಶಿಕಲ ಮತ್ತವರ ಇಬ್ಬರು ಸಬಂಧಿಕರಾದ ವಿ.ಎನ್. ಸುಧಾಕರನ್ ಮತ್ತು ಜೆ. ಇಳವರಸಿಯವರುಗಳು, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 ರಡಿಯಲ್ಲಿ ಅಪರಾಧವೆಸಗಿದ್ದಾರೆ ಎಂದು ತೀರ್ಪನ್ನಿತ್ತಿದೆ. ಆದರೆ ಮಾಧ್ಯಮಗಳು ತಮಿಳುನಾಡಿನ ಆಡಳಿತ ಚುಕ್ಕಾಣಿಯನ್ನು ಹಿಡಿಯಲು ತನಗೆ ನಿಷ್ಠರಾಗಿದ್ದ ಶಾಸಕರೊಂದಿಗೆ ಶಶಿಕಲಾ ಅವರು ವಿಶ್ರಾಂತಿ ಧಾಮದಲ್ಲಿ ರಚಿಸುತ್ತಿದ್ದ ರಾಜಕೀಯ ತಂತ್ರಗಳ ರೋಚಕ ರಾಜಕೀಯ ನಾಟಕಗಳನ್ನು ವರದಿ ಮಾಡುವದರಲ್ಲಿ ಸಂಪೂರ್ಣವಾಗಿ ತೊಡಗಿದ್ದರಿಂದ, ಅಕ್ರಮ ಆಸ್ತಿ ಗಳಿಕೆಯ ನಿಯಂತ್ರಣದ ಮೇಲೆ ಈ ತೀರ್ಪಿನ ಮಹತ್ವದ ಪರಿಣಾಮಗಳೇನೆಂಬುದು ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳಲಿಲ್ಲ. ವರಿಷ್ಠ ನ್ಯಾಯಾಲಯವು ಈ ತೀರ್ಪನ್ನು ಘೋಷಿಸಿದ ಸಮಯ- ಸಂದರ್ಭದ ಕುರಿತು ಪ್ರಶ್ನೆಗಳು ಕೇಳಿಬರುತ್ತಿರುವುದು ನಿಜವೇ ಆದರೂ ಈ ಆದೇಶಕ್ಕೆ ತನ್ನದೇ ಆದ ಮಹತ್ವವಿದೆ.

 2014ರ ಸೆಪ್ಟೆಂಬರ್‍ನಲ್ಲಿ ಕರ್ನಾಟಕ ರಾಜ್ಯದ ವಿಶೇಷ ಸೆಷನ್ ಕೋರ್ಟು ಜಯಲಲಿತಾ ಅವರು ತಮ್ಮ ಘೊಷಿತ ಆದಾಯ ಮೂಲಗಳಿಗಿಂತ ಹೆಚ್ಚಿನ ಆದಾಯವನ್ನು ಹೊಂದಿರುವ ಅಪರಾಧವನ್ನು ಎಸಗಿದ್ದಾರೆಂದು ತೀರ್ಪು ನೀಡಿತು. ಜೊತೆಗೆ ಈ ಅಕ್ರಮ ಆಸ್ತಿಯನ್ನು ಗಳಿಸಲು ಮತ್ತು ಬಚ್ಚಿಡಲು ಜಯಲಲಿತಾರೊಂದಿಗೆ ಶಶಿಕಲಾ ಮತ್ತು ಅವರ ಇಬ್ಬರು ಸಂಬಂಧಿಕರು ಸಹಕರಿಸುವ ಅಪರಾಧವನ್ನೆಸಗಿದ್ದಾರೆಂದೂ ಘೋಷಿಸಿತು. ಈ ಆದೇಶವನ್ನು ಕರ್ನಾಟಕ ಹೈಕೋರ್ಟು 2015ರ ಮೇ 15ರಂದು ರದ್ದುಗೊಳಿಸಿತು. ಹೈಕೋರ್ಟಿನ ಈ ಆದೇಶದ ವಿರುದ್ದ ಸಲ್ಲಿಸಿದ ಮೇಲ್ಮನವಿಯನು ವರಿಷ್ಠ ನ್ಯಾಯಾಲಯವು ತನ್ನ ಫೆಬ್ರವರಿ 14ರ ಆದೇಶದಲ್ಲಿ ಪುರಸ್ಕರಿಸಿದೆ. ಮತ್ತು ಜಯಲಲಿತಾ ಮತ್ತವರ ಸಂಗಡಿಗರನ್ನು ದೋಷಿಗಳೆಂದು ಘೋಷಿಸಿದÀ ಸೆಷನ್ ಕೋರ್ಟು ನೀಡಿದ ಆದೇಶವನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ. ಈ ಪ್ರಕರಣದಲ್ಲಿ ಮೊದಲ ಆರೋಪಿ ಜಯಲಲಿತಾ ನಿಧನರಾಗಿದ್ದರೂ ಶಶಿಕಲಾ ಅವರನ್ನು ಒಳಗೊಂಡಂತೆ ಉಳಿದ ಮೂವರು ಅಪರಾಧಿಗಳು ಸೆಷನ್ ನ್ಯಾಯಾಲಯವು ವಿಧಿಸಿದಂತೆ ತಲಾ 10 ಕೋಟಿ ದಂಡವನ್ನು ತೆರಬೇಕು ಮತ್ತು ನಾಲ್ಕು ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸಬೇಕೆಂದು ಸುಪ್ರೀಂ ಕೋರ್ಟು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಪಿನಾಕಿ ಚಂದ್ರ ಘೋಷ್ ಮತ್ತು ಅಮಿತಾವ್ ರಾಯ್ ರವರ ಪೀಠವು ನೀಡಿರುವ ಈ ಬೃಹತ್ 570 ಪುಟಗಳ ಆದೇಶವು ಅಕ್ರಮ ಆಸ್ತಿಯ ಗಳಿಕೆಯನ್ನು ಹೇಗೆ ಬಚ್ಚಿಡಬೇಕೆಂಬ ಬಗ್ಗೆ ಒಂದು ಮೂಲಪಾಠದಂತಿದೆ. ಮತ್ತು ಸೆಷನ್ ಕೋರ್ಟಿನ ನ್ಯಾಯಾಧೀಶ ಜಾನ್ ಮೈಕೆಲ್ ಡಿ’ಕುನ್ಹಾ ಅವರ ಮುಂದಿದ್ದ ಸಾಕ್ಷ್ಯಗಳು ಹೇಗೆ ತಮ್ಮ ಅಕ್ರಮ ಆಸ್ತಿಯನ್ನು ಬಚ್ಚಿಟ್ಟುಕೊಳ್ಳಲು ಜಯಲಲಿತಾ ಅವರು ಶಶಿಕಲಾ ಮತ್ತವರ ಸಂಬಂಧಿಗಳ ಸಹಾಯವನ್ನು ಪಡೆದುಕೊಂಡಿದ್ದರೆಂಬ ಬಗ್ಗೆ ಖಚಿತ ತೀರ್ಮಾನಕ್ಕೆ ಬರುವಂತೆ ಮಾಡಿತೆಂಬುದನ್ನು ವಿವರಿಸುತ್ತದೆ. ಅಕ್ರಮ ಆಸ್ತಿಯನ್ನು ಬಚ್ಚಿಡಲು ಬಳಸಿದ ವಿಧಾನಗಳು ಹೊಸತೂ ಅಲ್ಲ. ಸ್ವಂತದ್ದೂ ಅಲ್ಲ; ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಅಕ್ರಮ ಆಸ್ತಿಯನ್ನು ಮುಚ್ಚಿಟ್ಟುಕೊಳ್ಳಲು ಹೆಚ್ಚೂಕಡಿಮೆ ಎಲ್ಲರೂ ಇದೇ ವಿಧಾನಗಳನ್ನು ಬಳಸುತ್ತಾರೆ.
js

ಈ ಪ್ರಕರಣದಲ್ಲಿ ಒಂದೇ ವಿಳಾಸವನ್ನು ಹೊಂದಿರುವ 34 ಶೆಲ್ (ನಕಲಿ) ಕಂಪನಿಗಳನ್ನು ನೊಂದಾಯಿಸಲಾಗಿತ್ತು; ಅದರಲ್ಲಿ 10 ಕಂಪನಿಗಳನ್ನು ಒಂದೇ ದಿನ ಮತ್ತು ಆರು ಕಂಪನಿಗಳು ಮತ್ತೊಂದು ದಿನ ಏಕಕಾಲದಲ್ಲಿ ನೊಂದಾವಣೆಗೊಂಡಿದ್ದವು. ಈ ಕಂಪನಿಗಳ ವ್ಯವಹಾರಕ್ಕೆಂದೇ 50 ಬ್ಯಾಂಕು ಖಾತೆಗಳನ್ನು ತೆರೆಯಲಾಗಿತ್ತು. ಅವುಗಳಲ್ಲಿ 47 ಖಾತೆಗಳಿದ್ದದ್ದು ಒಂದೇ ಬ್ಯಾಂಕಿನಲ್ಲಿ. ಇವುಗಳಲ್ಲಿ ಬಹುಪಾಲು ಕಂಪನಿಗಳು ಮಾಡುತ್ತಿದ್ದ ಏಕೈಕ ವ್ಯವಹಾರವೆಂದರೆ ಉದ್ದೇಶಪೂರ್ವಕವಾಗಿ ಅಪಮೌಲ್ಯೀಕರಿಸಿದ ಆಸ್ತಿಪಾಸ್ತಿಗಳನ್ನು ಕೊಳ್ಳುವುದು. ಇವುಗಳಿಗಾಗಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ಹರಿದಾಡುತ್ತಿತ್ತು. ಬ್ಯಾಂಕುಗಳಿಂದ ಸಾಲವನ್ನು ಪಡೆದುಕೊಳ್ಳುವುದು. ಮತ್ತು ಸಾಲದ ಮೊತ್ತ ಸಂಪೂರ್ಣವಾಗಿ ಬಿಡುಗಡೆಯಾಗದಿದ್ದರೂ ಅಷ್ಟೂ ಮೊತ್ತವನ್ನು ಕಂಪನಿಯು ತೀರಿಸಬೇಕಿರುವ “ಹೊಣೆಗಾರಿ” (Liability)ಯೆಂದು ತೋರಿಸುವುದು. ಈ ಕೆಲವು ವ್ಯವಹಾರಗಳಲ್ಲಿರುವ ಲಜ್ಜೆಗೇಡಿತನವು ಇದರಲ್ಲಿ ತೊಡಗಿದವರಿಗೆ ತಮ್ಮ ಕಪಟ ಎಂದಿಗೂ ಪತ್ತೆಯಾಗಲಾರದೆಂಬ ಬಗ್ಗೆ ಇದ್ದ ವಿಶ್ವಾಸವನಷ್ಟೇ ಸೂಚಿಸುತ್ತದೆ.

ಸ್ವೇಚ್ಚಾ ಪ್ರವೃತ್ತಿಯ ರಾಜಕಾರಣಿಯಾದ ಸುಬ್ರಮಣಿಯನ್ ಸ್ವಾಮಿಯವರು 1996ರ ಜೂನ್ ನಷ್ಟು ಹಿಂದೆ ಹೂಡಿದ ಈ ದಾವೆಯ ಅಂತಿಮ ತೀರ್ಮಾನ ಹೊರಬರಲು ಸಾಕಷ್ಟು ವಿಳಂಬವಾಗಿದೆ. ಆದರೂ ವಿಚಾರಣಾ ನ್ಯಾಯಾಲಯ ಮತ್ತು ವರಿಷ್ಠ ನ್ಯಾಯಾಲಯಗಳೆರಡೂ ಆರೋಪಿಗಳ ಈ ಅಕ್ರಮಗಳನ್ನು ಅಪರಾಧವೆಂದು ತೀರ್ಪಿತ್ತಿರುವುದು ಮಹತ್ವದ ಪೂರ್ವನಿದರ್ಶನವನ್ನು ಹಾಕಿಕೊಟ್ಟಿದೆ. ಜಯಲಲಿತಾ ಅವರನ್ನು ದೋಷಮುಕ್ತಗೊಳಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಕುಮಾರ ಸ್ವಾಮಿಯವರ ಆದೇಶವನ್ನು ವರಿಷ್ಠ ನ್ಯಾಯಾಲಯವು ತಿರಸ್ಕರಿಸಿದೆ. ಮತ್ತು ಆ ಆದೇಶವು “ ದಾಖಲಾಗಿದ್ದ ಸಾಕ್ಷ್ಯಗಳ ತಪ್ಪು ಗ್ರಹಿಕೆ” ಮತ್ತು ಆರೋಪಿಗಳ ಆದಾಯ, ಆಸ್ತಿ ಪಾಸ್ತಿ ಮತ್ತು ಹೊಣೆಗಾರಿಕೆಗಳ ಲೆಕ್ಕಾಚಾರದ “ಕೂಡುಕಳೆಯುವಿಕೆಗಳನ್ನು ತಪ್ಪಾಗಿ ಮಾಡಿದೆಯೆಂದು” ಟೀಕಿಸಿದೆ. ಸಾಮಾನ್ಯವಾಗಿ ವರಿಷ್ಠ ನ್ಯಾಯಾಲಯಗಳು ಕೆಳಹಂತದ ಕೋರ್ಟುಗಳ ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯುವುದು ಅಪರೂಪ.

1991ರ ಜುಲೈ 1 ಮತ್ತು 1996ರ ಏಪ್ರಿಲ್ 30 ರ ನಡುವಿನ ಅವಧಿಯಲ್ಲಿ ಜಯಲಲಿತಾ ಸಂಪಾದಿಸಿದ ಆಸ್ತಿಪಾಸ್ತಿಗಳು ಮತ್ತು ಅವರ ಆದಾಯ ಮೂಲಗಳ ಬಗ್ಗೆ ವಿಶೇಷ ವಿಚಾರಣಾ ನ್ಯಾಯಾಲಯವು ಅತ್ಯಂತ ಸಣ್ಣಪುಟ್ಟ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿತ್ತು. ಆಕೆಯ ಆಸ್ತಿ 1991ರಲ್ಲಿ 2.01 ಕೋಟಿಯಿದ್ದದ್ದು 1996ರಲ್ಲಿ 64.44 ಕೋಟಿಯಷ್ಟಾದದ್ದು ಅಕ್ರಮ ವ್ಯವಹಾರಗಳ ಮೂಲಕವೇ ಎಂದು ಅದು ಸ್ಪಷ್ಟವಾಗಿ ನಿರೂಪಿಸಿತು. ವರಿಷ್ಟ ನ್ಯಾಯಾಲಯವು ವ್ಯಾಖ್ಯಾನಿಸಿದಂತೆ ವಿಚಾರಣಾ ನ್ಯಾಯಾಲಯದ ಈ “ಕರಾರುವಕ್ಕಾದ, ಸೂಕ್ಷ್ಮತೆಯಿಂದ ಕೂಡಿತ, ವಿವೇಚನಾ ಪೂರ್ಣ” ತೀರ್ಪು ಅಪರೂಪವೂ ಮತ್ತು ಸ್ವಾಗತಾರ್ಹವೂ ಆಗಿದೆ. “ಸಾರ್ವಜನಿಕ ಸೇವಕ”ರೆಂದು ಕರೆಸಿಕೊಳ್ಳಲ್ಪಡುವ ಪ್ರಬಲರು ಮಾಡುವ ಕಾನೂನು ಉಲ್ಲಂಘನೆಯನ್ನು ಬಯಲುಮಾಡಲು ನ್ಯಾಯಾಂಗ ಏನು ಮಾಡಬಹುದೆನ್ನುವುದಕ್ಕೆ ಇದು ಒಂದು ಉದಾಹರಣೆಯಾಗಿದೆ. ಈ ಏಕಸದಸ್ಯ ನ್ಯಾಯಾಧೀಶರು ತಾವು ವಿಚಾರಣೆ ನಡೆಸುತ್ತಿದ್ದ ಪ್ರಬಲ ರಾಜಕಾರಣಿಯಿಂದ ಯಾವುದೇ ರೀತಿ ಪ್ರಭಾವಕ್ಕೊಳಗಾಗದಿದ್ದದ್ದು ಮತ್ತು ಪ್ರತಿಯೊಂದು ಆರೋಪಗಳನ್ನು ಮತ್ತದರ ಸಮರ್ಥನೆಗಳನ್ನು ಪ್ರಬಲವಾಗಿ ಮಂಡಿಸಿರುವುದು ಅಧ್ಯಯನಕ್ಕೆ ಯೋಗ್ಯವಾದ ವಿಷಯವಾಗಿದೆ.

ಪ್ರಕರಣವನ್ನು ತಮಿಳುನಾಡಿನಿಂದ ಕರ್ನಾಟಕ್ಕೆ ವರ್ಗಾಯಿಸಿದ್ದೂ ಕೂಡಾ ಸಹಾಯಕ್ಕೆ ಬಂದಿರುವುದು ಸ್ಪಷ್ಟವಾಗಿದೆ. ಜಯಲಲಿತಾ ಅವರು ತನ್ನ ಆದಾಯದ ಕೆಲವನ್ನು ತನಗೆ ನೀಡಲಾದ “ಉಡುಗೊರೆ” ಯೆಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಈ ತೀರ್ಪು, ಸಾರ್ವಜನಿಕ ಸೇವಕರು ಪಡೆಯುವ “ಉಡುಗೊರೆ”ಯು ಪರೋಕ್ಷ ರೂಪದ ಲಂಚವೇ ಆಗುತ್ತದಾದ್ದರಿಂದ ಅವುಗಳನ್ನು ಕಾನೂನು ಬದ್ಧ ಆದಾಯ ಮೂಲವೆಂದು ಪರಿಗಣನೆ ಮಾಡಲಾಗದೆಂದು ಸ್ಪಷ್ಟೀಕರಿಸುತ್ತದೆ. ಇದು ಮತ್ತೊಂದು ಮಹತ್ವದ ಸಂಗತಿಯಾಗಿದೆ. ನಗದು ಅಥವಾ ವಸ್ತುಗಳ ರೂಪದಲ್ಲಿ ಪಡೆದ ಅಂಥ ಉಡುಗೊರೆಗಳನ್ನು ಕೇವಲ ಘೋಷಿಸಿಕೊಂಡ ಮಾತ್ರಕ್ಕೆ ಅವುಗಳು “ಕಾನೂನುಬದ್ಧ ಆದಾಯದ ಹಂತಕ್ಕೆ ಏರುವುದಿಲ್ಲವೆಂದು” ಕೂಡಾ ಈ ತೀರ್ಪು ಸೂಚಿಸುತ್ತದೆ.

ತಾವು ಪಡೆದುಕೊಳ್ಳುವ “ಉಡುಗೊರೆ”ಗೆ ಪ್ರತಿಯಾಗಿ ಅವರ ಪರವಾಗಿ ಕೆಲಸಗಳನ್ನು ಮಾಡಿಕೊಡುವುದು ಈ ದೇಶದ ಸಹಸ್ರಾರು “ಸಾರ್ವಜನಿಕ ಸೇವಕರ” ಅಘೋಷಿತ ಪದ್ದತಿಯಾಗಿರುವಾಗ ಮತ್ತು ತೆರಿಗೆ ಅಧಿಕಾರಿಗಳ ಗಮನದಿಂದ ತಮ್ಮ ಅಕ್ರಮ ಆಸ್ತಿಪಾಸ್ತಿಗಳನ್ನು ಬಚ್ಚಿಟ್ಟುಕೊಳ್ಳುವಲ್ಲಿ ಅಂಥವರು ಈಗಾಗಲೇ ಹಲವಾರು ಸೃಜನಶೀಲ ಮಾರ್ಗಗಳನ್ನು ಕಂಡುಕೊಂಡಿರುವಾಗ, ಈ ತೀರ್ಪು ಅವರ ಭ್ರಷ್ಟಾಚಾರಕ್ಕೆ ನಿಜಕ್ಕೂ ಕಡಿವಾಣ ಹಾಕಬಹುದೇ ಎಂಬುದನ್ನು ಕಾದು ನೋಡಬೇಕು. ಆದರೆ ಅದು ಒಂದನ್ನಂತೂ ಸಾಬೀತುಪಡಿಸುತ್ತದೆ. ಭ್ರಷ್ಟಾಚಾರ ನಿಗ್ರಹ ಕಾಯಿದೆ ಮತ್ತು ಅದರಂಥ ಇತರ ಕಾಯಿದೆಗಳಲ್ಲಿರುವ ಕಠಿಣ ಕ್ರಮಗಳನ್ನು ಭ್ರಷ್ಟ ವ್ಯಕ್ತಿಗಳ ವಿರುದ್ಧ ಬಳಸಲು ನಾಗರಿಕರು ಎಷ್ಟು ಸಮರ್ಥರಿರುತ್ತಾರೋ, ಕಾಯಿದೆಯೂ ಅಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿರುತ್ತದೆ. ದುರದೃಷ್ಟವಶಾತ್, ಕಾನೂನು ವ್ಯವಸ್ಥೆಯ ಸುದೀರ್ಘ ಪ್ರಕ್ರಿಯೆ ಮತ್ತು ಅಂತಿಮ ತೀರ್ಪು ನೀಡಲು ಅದು ತೆಗೆದುಕೊಳ್ಳುವ ದೀರ್ಘ ಕಾಲಾವಧಿಗಳು ಭ್ರಷ್ಟಾಚಾರ ವಿರೋಧಿ ಕಾನೂನುಗಳು ಅನುಷ್ಠಾನಕ್ಕೆ ಬರಬೇಕೆಂದು ಬಯಸುವವರ ಬದ್ಧತೆಗೆ ತಣ್ಣೀರೆರಚುತ್ತದೆ.

ಕೃಪೆ: Economic and Political Weekly,  
      February 18, 2017. Vol 52. No. 7

ಕಾಮೆಂಟ್‌ಗಳಿಲ್ಲ: