ಸೋಮವಾರ, ಫೆಬ್ರವರಿ 27, 2017

ಕರಾವಳಿ ಸೌಹಾರ್ದ ರ‌್ಯಾಲಿ: ಪಿಣರಾಯಿ ವಿಜಯನ್ ಭಾಷಣದ ಕನ್ನಡಾನುವಾದಅನುವಾದ: ಮುನೀರ್ ಕಾಟಿಪಳ್ಳ
Image may contain: 1 person, smiling, glasses, close-up and outdoor

ದೇಶದುದ್ದಗಲ ಮತ ಸೌಹಾರ್ದಕ್ಕೆ ಧಕ್ಕೆ ಉಂಟಾಗುತ್ತಿರುವ ಈ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಸೌಹಾರ್ದ ರ‌್ಯಾಲಿಯಲ್ಲಿ ಭಾಗವಹಿಸುತ್ತಿರುವುದು ನನಗೆ ಸಂತಸ ತಂದಿದೆ.

ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಜನರ ಐಕ್ಯವನ್ನು ನಾಶ ಮಾಡುವ ಪ್ರಕರಣಗಳು ನಡೆಯುತ್ತಿವೆ. ಐಕ್ಯವನ್ನು ಒಡೆಯುವ ಶಕ್ತಿಗಳೇ ಇಂದು ಕೇಂದ್ರದಲ್ಲಿ ಅಧಿಕಾರ ಚಲಾಯಿಸಲು ನಿರ್ದೇಶನ ನೀಡುತ್ತಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘದವರು ಯಾವತ್ತೂ ಸಮಾಜದಲ್ಲಿ ಸಾಮರಸ್ಯವನ್ನು ಬಯಸುವವರಲ್ಲ. ಬದಲಾಗಿ ಜನಗಳ ಮಧ್ಯೆ ಬಿರುಕು ಸೃಷ್ಟಿಸಿ ಸಮಾಜವನ್ನು ಒಡೆದು ತಮ್ಮ ವರ್ಗೀಯ ದ್ವೇಷವನ್ನು ಸಾಧಿಸಲು ಇರುವ ಸಂಘಟನೆಯಿದು. ಈ ಆರೆಸ್ಸೆಸ್ ಸಂಘಟನೆಯ ಆದೇಶವನ್ನು ಕೇಂದ್ರ ಸರಕಾರ ಚಾಚೂ ತಪ್ಪದೆ ಪಾಲಿಪಾಲಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

೧೯೨೫ರಲ್ಲಿ ಆರೆಸ್ಸೆಸ್ ಹುಟ್ಟಿಕೊಂಡಿತು. ಭಾರತದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಆರೆಸ್ಸೆಸ್ ಕೆಲಸ ಮಾಡುತ್ತಿತ್ತು. ಅಂದಿನಿಂದ ಮುಂದೆ ೨೨ ವರ್ಷಗಳ ಕಾಲ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡ ಕಾಲದಲ್ಲಿ ಕೂಡ ಆರೆಸ್ಸೆಸ್ ಅದರಲ್ಲಿ ಯಾವುದೇ ಪಾತ್ರ ವಹಿಸಲಿಲ್ಲ. ೧೯೫೨ರಲ್ಲಿ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಕೂಗು ಎದ್ದಾಗಲೂ ಆರೆಸ್ಸೆಸ್ ಅದಕ್ಕೆ ದನಿಗೂಡಿಸಲಿಲ್ಲ. ಈ ಚಳವಳಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಎಲ್ಲ ಸಂಘಟನೆಗಳೂ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಾಲ್ಗೊಂಡಿದ್ದವು.

ಆದರೆ, ಆರೆಸ್ಸೆಸ್ ವಿರೋಧಕ್ಕೆ ಬದಲಾಗಿ ಬ್ರಿಟಿಷರೊಡನೆ ಹೊಂದಾಣಿಕೆಯ ಮಾತುಗಳನ್ನಾಡಿತು. ಆರೆಸ್ಸೆಸ್ ಮುಖಂಡರಲ್ಲೊಬ್ಬರಾದ ಸಾವರ್ಕರ್ ಬ್ರಿಟಿಷ್ ವೈಸರಾಯ್ ಅವರನ್ನು ಭೇಟಿ ಮಾಡಿ ನಮ್ಮ ನಿಮ್ಮ ಚಿಂತನೆಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಬ್ರಿಟಿಷರ ಆಳ್ವಿಕೆಗೆ ನಮ್ಮ ವಿರೋಧವಿಲ್ಲ ಎಂದು ಆರೆಸ್ಸೆಸ್ ನಿಲುವನ್ನು ಪ್ರಕಟಿಸಿದ್ದರು. ಈ ಮೂಲಕ ದೇಶಕ್ಕೆ ಮೋಸ ಮಾಡಿದ ಸಂಘಟನೆ ಆರೆಸ್ಸೆಸ್.

ದೇಶದ ಜನರೆಲ್ಲರನ್ನೂ ಒಂದೇ ಎಂದು ನೋಡಲು ಆರೆಸ್ಸೆಸ್ ತಯಾರಿರಲಿಲ್ಲ. ದೇಶವಾಸಿಗಳನ್ನು ಜಾತಿ ಧರ್ಮಗಳ ಹೆಸರಲ್ಲಿ ವಿಭಜಿಸುವುದು ಅದರ ಕಾರ್ಯತಂತ್ರವಾಗಿತ್ತು. ಅದರ ಭಾಗವಾಗಿ ದೇಶದ ವಿವಿಧೆಡೆ ಜರುಗಿದ ಎಲ್ಲ ಜಾತೀಯ ಗಲಭೆಗಳ ನೇತೃತ್ವವನ್ನು ಆರೆಸ್ಸೆಸ್ ವಹಿಸಿತು. ಆರೆಸ್ಸೆಸ್ ಜನರ ಏಕತೆಯನ್ನು ಯಾವತ್ತೂ ಬಯಸಿದ್ದಿಲ್ಲ.

ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಏಕೆ ಕೊಂದರು ಅನ್ನುವ ಪ್ರಶ್ನೆ ನಮ್ಮ ಮುಂದಿದೆ. ಗಾಂಧೀಜಿ ಯಾರಿಗೂ ಅನ್ಯಾಯ ಮಾಡಿದವರಲ್ಲ. ಅವರನ್ನು ಕೊಲ್ಲಲು ಆರೆಸ್ಸೆಸ್ ಬಹಳ ಕಾಲ ತಯಾರಿ ನಡೆಸಿದ್ದರು. ಗೋಡ್ಸೆ ಗಾಂಧೀಜಿಯನ್ನು ಕೊಲ್ಲಲು ಪಿಸ್ತೂಲನ್ನು ಆಯುಧವನ್ನಾಗಿ ಬಳಸಿದರೆ, ಆರೆಸ್ಸೆಸ್ ಗೋಡ್ಸೆಯನ್ನು ಗಾಂಧೀಜಿಯವರ ಕೊಲೆಗೆ ಆಯುಧವಾಗಿ ಬಳಸಿದ್ದರು.

ಗಾಂಧೀಜಿ ಹತ್ಯೆಯ ಸುದ್ದಿ ಹರಡುತ್ತಿದ್ದಂತೆಯೇ ಆರೆಸ್ಸೆಸ್ ಘಟಕಗಳಲ್ಲಿ ಸಿಹಿ ಹಂಚಲಾಗಿತ್ತು. ಗಾಂಧೀಜಿ ಕೊಲೆಯಿಂದಾಗಿ ಜನರಲ್ಲಿ ರೋಷ ಕೆರಳಿತು. ಆರೆಸ್ಸೆಸ್ ಅನ್ನು ನಿಷೇಧಿಸಬೇಕೆಂಬ ಕೂಗು ಹೊರಟಿತು. ಜನರ ಆಕ್ರೋಶಕ್ಕೆ ಮಣಿದು ಆರೆಸ್ಸೆಸ್ ಅನ್ನು ನಿಷೇಧಿಸಲಾಯಿತಾದರೂ ಕೆಲವೇ ಸಮಯದ ಅನಂತರ ಅದನ್ನು ತೆರವುಗೊಳಿಸಲಾಯ್ತು. ಅಂದಿನ ಸರಕಾರ ತನ್ನ ಮೇಲೆ ಉಂಟಾದ ಒತ್ತಡ ಹಾಗೂ ಬೆದರಿಕೆಗಳಿಗೆ ಅಧೀನವಾಗಿ ನಿಷೇಧ ರದ್ದುಗೊಳಿಸಿತು. ಅನಂತರದಲ್ಲಿಯೂ ಆರೆಸ್ಸೆಸಿನ ಬಣ್ಣ ಬದಲಾಗಲಿಲ್ಲ. ಅದರ ತಂತ್ರಗಾರಿಕೆ ಬದಲಾಗಲಿಲ್ಲ.

ಆರೆಸ್ಸೆಸಿನ ರಾಜಕೀಯ ತತ್ತ್ವಶಾಸ್ತ್ರವೇನು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಈ ಸಂಘಟನೆ ಹುಟ್ಟಿದ ೫ ವರ್ಷಗಳ ಅನಂತರ ಅದರ ಮುಖಂಡರಲ್ಲೊಬ್ಬರಾದ ಮೂಂಜಿಯವರು ವಿಶ್ವದ ಹಲವು ಭಾಗಗಳಿಗೆ ಭೇಟಿಕೊಟ್ಟರು. ಅದರಲ್ಲಿ ಅವರು ಮುಖ್ಯವಾಗಿ ಭೇಟಿ ಮಾಡಿದ್ದು ಇಟಲಿಯ ಮುಸ್ಸೋಲಿನಿಯನ್ನು. ಅಲ್ಲಿಯ ಫ್ಯಾಸಿಸ್ಟ್ ಸಂಘಟನೆಯ ಪರಿಶೀಲನಾ ಕೇಂದ್ರಗಳನ್ನು ಸಂದರ್ಶಿಸಿದರು. ಮುಸ್ಸೋಲಿನಿಯ ಜೊತೆ ಆ ರೀತಿಯ ಪರಿಶೀಲನಾ ತಂತ್ರಗಳನ್ನು ಭಾರತದಲ್ಲಿ ಅಳವಡಿಸುವ ಬಗ್ಗೆ ಚರ್ಚೆ ನಡೆಸಿದರು. ಹಿಂದಿರುಗಿದ ಅನಂತರ ಫ್ಯಾಸಿಸ್ಟ್ ಚಿಂತನೆಗಳನ್ನು ಪ್ರಯೋಗಿಸಲು ಶುರು ಮಾಡಿದರು.

ಆರೆಸ್ಸೆಸಿಙನ ರಾಜಕೀಯ ತತ್ತ್ವಗಳಿಗೆ ಜರ್ಮನಿಯ ಹಿಟ್ಲರನ ‘ನಾಜಿಸಂ’ ಪ್ರೇರಣೆಯಾಗಿದೆ. ಹಿಟ್ಲರ್ ಜರ್ಮನಿಯಲ್ಲಿ ಯಹೂದ್ಯರ ಸರ್ವನಾಶಕ್ಕೆ ಪಣತೊಟ್ಟು ಅದಕ್ಕೆ ಪೂರಕವಾಗಿ ನಿಯಮಗಳನ್ನು ರೂಪಿಸಿಕೊಂಡಿದ್ದ. ಇದನ್ನು ಜಗತ್ತಿನ ಎಲ್ಲ ಸಂಘಟನೆಗಳೂ ವಿರೋಧಿಸಿದ್ದವು. ಈ ಸಂದರ್ಭದಲ್ಲಿ ಹಿಟ್ಲರನಿಗೆ ಬೆಂಬಲ ಸೂಚಿಸಿದ್ದು ಆರೆಸ್ಸೆಸ್ ಮಾತ್ರ.

ಅಷ್ಟೇ ಅಲ್ಲ, ರಾಷ್ಟ್ರನಿರ್ಮಾಣಕ್ಕೆ ಹಿಟ್ಲರನ ತತ್ವಗಳು ಮಾದರಿ ಎಂದು ಕೊಂಡಾಡಿತು. ಜರ್ಮನಿಯಲ್ಲಿ ಯಹೂದಿಗಳು ಅಲ್ಪಸಂಖ್ಯಾತರಾಗಿದ್ದರು. ಅವರನ್ನು ನಿರ್ನಾಮಗೊಳಿಸುವುದು ಹಿಟ್ಲರನ ಗುರಿಯಾಗಿತ್ತು. ಆರೆಸ್ಸೆಸ್ ಭಾರತದಲ್ಲಿಯೂ ಅದೇ ತತ್ವವನ್ನು ಪ್ರಯೋಗಿಸಿ ಇಲ್ಲಿರುವ ಅಲ್ಪಸಂಖ್ಯಾತರ ನಾಶವನ್ನು ಗುರಿಯಾಗಿಸಿಕೊಂಡಿತು. ಈ ದಿನದವರೆಗೂ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದಾಳಿಯ ಹಿನ್ನೆಲೆ ಇದೇ ಆಗಿದೆ.

ಜರ್ಮನಿಯಲ್ಲಿ ಅಲ್ಪಸಂಖ್ಯಾತ ಯಹೂದ್ಯರು ಹಾಗೂ ಪ್ರಜ್ಞಾವಂತ ಕಮ್ಯುನಿಸ್ಟರನ್ನು ಹಿಟ್ಲರ್ ಗುರಿಯಾಗಿಸಿಕೊಂಡಿದ್ದ. ಅವರನ್ನು ದೇಶದ ಶತ್ರುಗಳೆಂದು ಕರೆದ. ಅದನ್ನು ಅನುಸರಿಸಿ ಭಾರತದಲ್ಲಿ ಆರೆಸ್ಸೆಸಿನ ಗೋಳವಲ್ಕರ್ ಇಲ್ಲಿಯ ಅಲ್ಪಸಂಖ್ಯಾತರಾದ ಮುಸ್ಲಿಮ್, ಕ್ರಿಶ್ಚಿಯನ್ ಹಾಗೂ ಕಮ್ಯುನಿಸ್ಟರನ್ನು ದೇಶದ (ಹಿಂದೂಗಳ) ಶತ್ರುಗಳೆಂದು ಕರೆದು ಅವರ ಮೇಲೆ ದಾಳಿ ನಡೆಸುವುದನ್ನು ಪ್ರಚೋದಿಸಿದರು. ಇದು ಇಂದಿಗೂ ಮುಂದುವರೆದಿದೆ.

ತನ್ನ ಮೂಲಭೂತ ಧ್ಯೇಯೋದ್ದೇಶ ಸಾಧನೆಗಾಗಿ ಆರೆಸ್ಸೆಸ್ ದೇಶದ ವಿವಿಧ ಭಾಗಗಳಲ್ಲಿ ಯುವಕರಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದೆ. ಘರ್ಷಣೆ ನಡೆಸಲು ಪೂರಕವಾಗಿ ಯುವಜನರ ಮನಸ್ಸಿನಲ್ಲಿ ದ್ವೇಷವನ್ನು ಬಿತ್ತುತ್ತಾ ಸಂಘರ್ಷಗಳನ್ನು ಹುಟ್ಟುಹಾಕುತ್ತಿದೆ. ಘರ್ಷಣೆಗಳಿಗೆ ಬಣ್ಣ ಕಟ್ಟಿ ಅಲ್ಪಸಂಖ್ಯಾತರ ಹಾಗೂ ಕಮ್ಯುನಿಸ್ಟರ ವಿರುದ್ಧ ಅಪಪ್ರಚಾರ ಮಾಡುವ ಬಗೆಯನ್ನೂ ಅದು ಕಲಿಸಿಕೊಡುತ್ತದೆ. ಆದ್ದರಿಂದಲೇ ದೇಶದ ಯಾವುದೇ ಭಾಗದಲ್ಲಿ ನಡೆಯುವ ಕೋಮುಗಲಭೆಯ ಹಿಂದೆ ಆರೆಸ್ಸೆಸ್ ಕಾಣಸಿಗುತ್ತದೆ.

೧೯೪೭ರ ಜುಲೈ ೧೭ರಂದು ಆರೆಸ್ಸೆಸ್ ಮುಖವಾಣಿಯಾದ Organiser ಪತ್ರಿಕೆಯಲ್ಲಿ ದೇಶದ ಹೆಸರು ‘India’ ಎಂದಿರುವುದಕ್ಕೂ ಆರೆಸ್ಸೆಸ್ ವಿರೋಧ ವ್ಯಕ್ತಪಡಿಸಿ ದೇಶದ ಹೆಸರನ್ನು ‘ಹಿಂದೂಸ್ತಾನ್’ ಎಂದು ಬದಲಾಯಿಸಲು ಪ್ರಯತ್ನಿಸಿತು.

ಇದೀಗ ಅಧಿಕಾರದಲ್ಲಿರುವ ಆರೆಸ್ಸೆಸ್ ನಿಯಂತ್ರಣದ ಕೇಂದ್ರ ಸರಕಾರ ಸಂವಿಧಾನದಲ್ಲಿ secularism ಎಂಬ ಪದ ಇರುವುದೇ ಒಂದು ದೊಡ್ಡ ಸವಾಲಾಗಿದೆ ಎಂದು ಹೇಳಿದೆ. ಅಂದರೆ, ಜಾತ್ಯತೀತ ರಾಷ್ಟ್ರ ಆಗಿರುವುದು ಆರೆಸ್ಸೆಸ್ನವರಿಗೆ ಬೇಕಾಗಿಲ್ಲ. ಅದರ ಅಸಹಿಷ್ಣುತೆ ಬಗ್ಗೆ ಮಾತಾಡಲು ಹಲವು ಗಂಟೆಗಳೇ ಬೇಕಾಗಬಹುದು.

ಕರ್ನಾಟಕದ ಎಂ.ಎಂ.ಕಲಬುರ್ಗಿಯವರ ಕೊಲೆ ಇರಬಹುದು, ಮಹಾರಾಷ್ಟ್ರದ ಗೋವಿಂದ ಪನ್ಸಾರೆ, ನರೇಂದ್ರ ಧಾಬೋಲ್ಕರ್ ಕೊಲೆಗಳಿರಬಹುದು ಇವೆಲ್ಲವೂ ಸಂಘ ಪರಿವಾರದ ಕೃತ್ಯಗಳೇ ಆಗಿವೆ. ಅವರು ಸತ್ಯವನ್ನಾಡಿದರು ಅನ್ನುವುದೇ ಅವರ ಅಸಹಿಷ್ಣುತೆಗೆ ಕಾರಣ. ಸಂಘ ಪರಿವಾರಕ್ಕೆ ಇತರರ ಮಾತುಗಳನ್ನು ಕೇಳಿಸಿಕೋಳ್ಳುವ ತಾಳ್ಮೆಯೇ ಇಲ್ಲ. ಮಾತ್ರವಲ್ಲ, ತನ್ನ ಮಾತುಗಳನ್ನು ಅನುಸರಿಸದವರನ್ನೂ ಅದು ಸಹಿಸುವುದಿಲ್ಲ. ಅಂಥವರನ್ನು ನಾಶಮಾಡುವುದು ಅದರ ಜಾಯಮಾನ.

ಅನೇಕ ಸಾಹಿತಿಗಳೂ ಬರಹಗಾರರೂ ಆರೆಸ್ಸೆಸ್ನ ಈ ಅಸಹಿಷ್ಣುತೆಗೆ ಗುರಿಯಾಗಿದ್ದಾರೆ. ಅನಂತಮೂರ್ತಿ, ಪೆರುಮಾಳ್ ಮುರುಗನ್ ಥರದ ಸಾಹಿತಿಗಳು, ಅಮೀರ್ ಖಾನ್, ಶಾರುಖ್ ಖಾನ್, ಕಮಲ್ ಮೊದಲಾದ ಸಿನೆಮಾ ಕ್ಷೇತ್ರದವರೆಲ್ಲ ಇವರ ವಾಗ್ದಾಳಿಗೆ ಒಳಗಾಗಿದ್ದಾರೆ. ಇವರನ್ನೆಲ್ಲ ಪಾಕಿಸ್ತಾನಕ್ಕೆ ಅಟ್ಟಬೇಕು ಅನ್ನುವುದು ಸಂಘಪರಿವಾರದ ಫರ್ಮಾನು. ಇತ್ತೀಚೆಗೆ ಜ್ಞಾನಪೀಠ ಪುರಸ್ಕೃತ ಮಲಯಾಳಿ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್ ಅನಾಣ್ಯೀಕರಣದಿಂದಾದ ಸಮಸ್ಯೆಗಳ ಬಗ್ಗೆ ಮಾತಾಡಿದ್ದಕ್ಕಾಗಿ ಇಂಥದೇ ವಾಗ್ದಾಳಿಯನ್ನು ಎದುರಿಸಬೇಕಾಯ್ತು. ಅದು ಈಗಲೂ ಮುಂದುವರೆದಿದೆ.

ಏಕಿದು? ಜನರೆಲ್ಲ ಆರೆಸ್ಸೆಸ್ ಹೇಳಿದಂತೆಯೇ ಕೇಳಬೇಕಾ? ಅದರಂತೆಯೇ ನಡೆಯಬೇಕಾ? ಇಲ್ಲದಿದ್ದರೆ ಭಾರತದಲ್ಲಿ ವಾಸ ಮಾಡುವಂತಿಲ್ಲವಾ? ನಾನು ಆರೆಸ್ಸೆಸ್ನವರಿಗೆ ಒಂದು ಮಾತು ಹೇಳಬಯಸುತ್ತೇನೆ.

ಭಾರತ ಆರೆಸ್ಸೆಸ್ನವರ ದೇಶವಲ್ಲ. ಇದು ಜಾತ್ಯತೀತ ಜನರ ದೇಶ. ಇದು ಎಲ್ಲರ ದೇಶ. ಇಲ್ಲಿ ಪ್ರತಿಯೊಬ್ಬರಿಗೂ ಮಾನವರಾಗಿ ಜೀವಿಸಲು, ಸ್ವತಂತ್ರವಾದ ಅಭಿಪ್ರಾಯವನ್ನು ಹಂಚಿಕೊಳ್ಳಲು ಅವಕಾಶವಿದೆ. ಇದನ್ನು ವಿರೋಧಿಸುವ ಆರೆಸ್ಸೆಸ್ನ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಜಾತ್ಯತೀತ ಶಕ್ತಿಗಳು ಐಕ್ಯದಿಂದ ಪ್ರತಿಭಟಿಸಬೇಕಾಗಿದೆ. ಜನ ಯಾವ ಆಹಾರ ಸೇವಿಸಬೇಕು, ಯಾವ ಕೆಲಸ ಮಾಡಬೇಕು, ಏನು ಬಟ್ಟೆ ಹಾಕಬೇಕು ಎಂದು ಆರೆಸ್ಸೆಸ್ ಆದೇಶ ಕೊಡುವುದನ್ನು ನಾವು ನೋಡುತ್ತಿದ್ದೇವೆ.

ಮಧ್ಯಪ್ರದೇಶದ ದಾದ್ರಿಯಲ್ಲಿ ಮುಸ್ಲಿಮನೊಬ್ಬನನ್ನು ದನದ ಮಾಂಸ ತಿಂದನೆಂದು ಕೊಂದುಹಾಕಿದರು. ಅನಂತರ ಅವರ ಮನೆಯ ಫ್ರಿಜ್ ನಲ್ಲಿದ್ದ ಮಾಂಸವನ್ನು ಪರೀಕ್ಷಿಸಿದಾಗ ಅದು ದನದ ಮಾಂಸವಾಗಿರಲಿಲ್ಲವೆಂದೂ ಆಡಿನ ಮಾಂಸವೆಂದೂ ಸಾಬೀತಾಯ್ತು. ಗುಜರಾತ್’ನಲ್ಲಿ ೪ ಮಂದಿ ದಲಿತರನ್ನು ನಗ್ನವಾಗಿಸಿ ಕಾರಿಗೆ ಕಟ್ಟಿ ಕ್ರೂರವಾಗಿ ಹೊಡೆದು ಹಿಂಸಿಸಿದರು. ಅವರು ಸತ್ತ ದನದ ಚರ್ಮ ಸುಲಿಯುತ್ತಿದ್ದರು, ಪಾಯಿಖಾನೆಗಳನ್ನು ತೊಳೆಯಲಿಲ್ಲ ಎನ್ನುವುದು ಅದಕ್ಕೆ ಕಾರಣವಾಗಿತ್ತು. ಚತುರ್ವರ್ಣ ವ್ಯವಸ್ಥೆಯಲ್ಲಿ ನಿರ್ದಿಷ್ಟ ಜಾತಿಗೆ ನಿರ್ದಿಷ್ಟ ಕೆಲಸ ಸೂಚಿಸಲಾಗಿದೆ. ಅದನ್ನು ಅವರು ಮಾಡಲೇಬೇಕು ಅನ್ನೋದು ಆರೆಸ್ಸೆಸ್ ಧೋರಣೆ.

ಇದೇ ರೀತಿ ಹರಿಯಾಣಾದಲ್ಲಿ ವೃದ್ಧ ರೈತ ಮತ್ತು ಅವನ ಹೆಂಡತಿಯನ್ನು ಕೊಲೆ ಮಾಡಿ, ಭಯದಿಂದ ಓಡಿಹೋದ ಅವರ ಹರೆಯದ ಹೆಣ್ಣುಮಕ್ಕಳನ್ನು ಚಿಕ್ಕ ಮಕ್ಕಳ ಕುತ್ತಿಗೆಗೆ ಚಾಕುವಿಟ್ಟು ಬೆದರಿಸಿ ಕರೆಸಿಕೊಂಡು ಸರಣಿ ಅತ್ಯಾಚಾರ ನಡೆಸಲಾಯ್ತು. ಇಂಥ ಕೃತ್ಯಗಳು ಪಂಜಾಬ್, ಜಾರ್ಖಂಡ್, ಜಮ್ಮು – ಕಾಶ್ಮೀರಗಳಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರದವರು ತಮ್ಮದೇ ಸದಸ್ಯರ ಕೊಲೆ ಮಾಡಿರುವುದನ್ನೂ ನಾವು ನೋಡಿದ್ದೇವೆ. ಇದೇ ಫೆಬ್ರವರಿ ೧೯ರಂದು ಪ್ರತಾಪ ಪೂಜಾರಿ ಎಂಬ ಹಿಂದೂ ಜಾಗರಣ ವೇದಿಕೆಯ ಸದಸ್ಯನನ್ನು ಅದೇ ಸಂಘಟನೆಯ ಸದಸ್ಯರು ಕೊಲೆ ಮಾಡಿದರು. ಕಟೀಲಿನಲ್ಲಿ ಯಕ್ಷಗಾನ ಮೇಳದವರ ಹಣ ಕದ್ದ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಕ್ಕಾಗಿ ನಡೆಸಿದ ಸೇಡಿನ ಕೊಲೆ ಅದಾಗಿತ್ತು.

ಬಿಜೆಪಿಯ ಕಾರ್ಯಕರ್ತರೂ ಮಹಾ ಆಸ್ತಿಕರೂ ಆಗಿದ್ದ ವಿನಾಯಕ ಬಾಳಿಗರ ಕೊಲೆಯಲ್ಲಿ ನಮೋ ಬ್ರಿಗೇಡ್ ಸ್ಥಾಪಕ ನರೇಶ್ ಶೆಣೈ ಮುಖ್ಯ ಆರೋಪಿಯಾಗಿದ್ದಾನೆ. ಈತ ಚುನಾವಣೆಯಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲರಿಗೆ ಸಹಾಯ ಮಾಡಿದವ. ಈ ಪ್ರಕರಣದಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧವೂ ಆರೋಪಗಳು ಕೇಳಿಬಂದಿವೆ.

ಉಡುಪಿಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿಯ ಮೇಲೆ ಗೋಸಾಗಾಟದ ಆರೋಪ ಹೊರಿಸಿದ ಹಿಂದುತ್ವವಾದಿಗಳು ಹಿಂಸಿಸಿ ಕೊಲೆ ಮಾಡಿದ್ದರು. ಇಂಥ ಪ್ರಕರಣಗಳು ಅನೇಕ.

ಕೇರಳದಲ್ಲಿ ಶ್ರೀ ನಾರಾಯಣ ಗುರುಗಳಿಂದಾಗಿ ಒಂದು ನವೋತ್ಥಾನ ಯುಗ ಪ್ರಾರಂಭವಾಯ್ತು. ಅಲ್ಲಿಯ ಜಾತ್ಯತೀತ ಶಕ್ತಿಗಳು ಒಂದಾದವು. ಹಿಂದುಳಿದ ವರ್ಗದ ಜನ ಒಂದಾದರು. ಈ ಶಕ್ತಿಯನ್ನು ಒಡೆದು ಹಾಕಲು ಆರೆಸ್ಸೆಸ್ ತಂತ್ರ ಪ್ರಾರಂಭಿಸಿತು. ಕಮ್ಯುನಿಸ್ಟರ ಮೇಲೆ ಆಕ್ರಮಣಗಳಾದವು. CPIM ಪಕ್ಷದ ೬೦೦ಕ್ಕೂ ಹೆಚ್ಚು ಮಂದಿ ಯುವಕರು ಇದಕ್ಕೆ ಬಲಿಯಾದರು. ಅದರಲ್ಲಿ ೨೦೫ ಮಂದಿ ಯುವ ಕಣ್ಮಣಿಗಳನ್ನು ನೇರವಾಗಿ ಸಂಘಪರಿವಾರದವರೇ ಕೊಲೆ ಮಾಡಿದ್ದಾರೆ.

ಮಂಗಳೂರಿನ ಸೌಹಾರ್ದ ರ್ಯಾಲಿಗೆ ಆಗಮಿಸಬೇಕೆಂದು ಸುಮಾರು ೪ ತಿಂಗಳ ಹಿಂದೆಯೇ ಕಾಂ.ಶ್ರೀರಾಮ ರೆಡ್ಡಿ ದೂರವಾಣಿ ಮೂಲಕ ಮಾತಾಡಿದ್ದರು. ಇದೀಗ ಕಾಲ ಕೂಡಿಬಂದು ನಾನು ಒಪ್ಪಿಕೊಂಡಿದ್ದೆ. ಯಾವಾಗ ಪಿಣರಾಯಿ ವಿಜಯನ್ ಮಂಗಳೂರಿಗೆ ಬರಲಿದ್ದಾರೆಂದು ತಿಳಿಯಿತೋ ಅಂದಿನಿಂದ ಆರೆಸ್ಸೆಸ್ನವರ ಅಸಹಿಷ್ಣುತೆ ತಾರಕಕ್ಕೇರಿತು.

ಆರೆಸ್ಸೆಸ್ನವರು, ಬಿಜೆಪಿ ಹಾಗೂ ಸಂಘ ಪರಿವಾರದವರು ನನ್ನನ್ನು ಮಂಗಳೂರಿಗೆ ಕಾಲಿಡಲು ಬಿಡುವುದಿಲ್ಲ ಎಂದು ವೀರಾವೇಶದಿಂದ ಹೇಳಿಕೆ ಕೊಟ್ಟು ಬಂದ್ ಘೋಷಿಸಿದ್ದಾರೆ. ಪಕ್ಷದ ಬ್ಯಾನರ್, ಫ್ಲೆಕ್ಸ್ ಗಳನ್ನು ಹರಿದು ಹಾಕಿದ್ದಾರೆ. ಕೇರಳದ ಒಬ್ಬ ಮುಖ್ಯಮಂತ್ರಿಯಾಗಿ ಬರುವಾಗ ಆಡಳಿತ ಯಂತ್ರದ ಸಂಪ್ರದಾಯದಂತೆ ನನಗೆ ಸುತ್ತಲೂ ಭದ್ರತೆಯನ್ನು ಕೊಟ್ಟು ಕರ್ನಾಟಕದ ಸರ್ಕಾರ ಎಲ್ಲ ಸಹಕಾರವನ್ನೂ ನೀಡಿರುವುದಕ್ಕಾಗಿ ನಾನು ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.


ನನ್ನ ವಿರುದ್ಧ ವೀರಾವೇಶದ ಮಾತಾಡಿದ ಸಂಘಪರಿವಾರಕ್ಕೆ ನಾನೊಂದು ಮಾತು ಹೇಳಬಯಸುತ್ತೇನೆ. ಪಿಣರಾಯಿ ವಿಜಯನ್ ಎನ್ನುವ ಮನುಷ್ಯ ಆಕಾಶದಿಂದ ಉದುರಿ ಮುಖ್ಯಮಂತ್ರಿ ಗಾದಿ ಮೇಲೆ ಬಿದ್ದವನಲ್ಲ. ತಲಶ್ಶೇರಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ನಾನು ಕಾರ್ಯಕರ್ತನಾಗಿ ಆರೆಸ್ಸೆಸ್ ನವರ ಕತ್ತಿ – ಚೂರಿಗಳ ನಡುವಲ್ಲೇ ಓಡಾಡಿದವನು. ಆಗಲೇ ನನಗೆ ಏನನ್ನೂ ಮಾಡಲಾಗದವರು ಈಗ ತಾನೆ ಏನು ಮಾಡಬಲ್ಲಿರಿ?

ನನಗೆ ಮಧ್ಯಪ್ರದೇಶದ ಭೋಪಾಲ್ ಗೆ ಹೋಗಲು ಸಾಧ್ಯವಾಗಲಿಲ್ಲ. ಒಬ್ಬ ಮುಖ್ಯಮಂತ್ರಿಯಾಗಿ ಭೇಟಿಕೊಡುವಾಗ ಆ ರಾಜ್ಯದ ನಿರ್ದೇಶನಗಳಿಗೆ ಬೆಲೆ ಕೊಡುವುದು ನನ್ನ ಕರ್ತವ್ಯವಾಗಿತ್ತು. ನಾನು ಮುಖ್ಯಮಂತ್ರಿಯಲ್ಲದೆ ಕೇವಲ ಪಿಣರಾಯಿ ವಿಜಯನ್ ಆಗಿರುತ್ತಿದ್ದರೆ ನನ್ನನ್ನು ತಡೆಯಲು ಸೂರ್ಯ-ಚ೦ದ್ರರಿಂದಲೂ ಸಾಧ್ಯವಾಗುತ್ತಿರಲಿಲ್ಲ.

ನೀವು ಮಂಗಳೂರಿನ ಜನ ನನ್ನನ್ನು ಕರೆಸಿಕೊಂಡಿದ್ದೀರಿ. ಈ ಸೌಹಾರ್ದ ರ‌್ಯಾಲಿಯನ್ನು ಆಯೋಜಿಸಿದ, ಇದಕ್ಕೆ ಸಹಕರಿಸಿದ ಎಲ್ಲರಿಗೂ ನಾನು ಮತ್ತೊಮ್ಮೆ ವಂದಿಸುತ್ತೇನೆ.

- ಪಿಣರಾಯಿ ವಿಯಯನ್, ಕೇರಳ ಮುಖ್ಯಮಂತ್ರಿ
ಅನುವಾದ: ಮುನೀರ್ ಕಾಟಿಪಳ್ಳ
ಸೌಜನ್ಯ : ವಾಭಾ ೨೭.೨.೨೦೧೭

ಕಾಮೆಂಟ್‌ಗಳಿಲ್ಲ: