ಮೂಲ: ಗೂಗಿ ವಾ ಥಿಯಾಂಗೊ
ಅನುವಾದ: ಶಶಿ ಸಂಪಳ್ಳಿ
ಸೌಜನ್ಯ:https://jalada.org
ಒಂದಾನೊಂದು ಕಾಲದಲ್ಲಿ ಮನುಷ್ಯ ಕೂಡ ಇತರೆಲ್ಲಾ ನಾಲ್ಕು ಕಾಲಿನ ಪ್ರಾಣಿಗಳಂತೆಯೇ ಕೈ ಮತ್ತು ಕಾಲುಗಳನ್ನು ಬಳಸಿ ನಡೆದಾಡುತ್ತಿದ್ದ. ಮೊಲ, ಚಿರತೆ ಮತ್ತು ರೈನೋಗಿಂತಲೂ ಆತನೇ ವೇಗವಾಗಿ ಓಡುತ್ತಿದ್ದ. ಕೈ ಮತ್ತು ಕಾಲುಗಳು ಆತನ ಇತರೆಲ್ಲಾ ಅಂಗಗಳಿಗಿಂತ ಅನೋನ್ಯವಾಗಿದ್ದವು. ಅವು ಒಂದೇ ಬಗೆಯ ಸಂದು, ಮಂಡಿ ಹೊಂದಿದ್ದವು; ಭುಜ ಮತ್ತು ಕಟಿ; ಮೊಳಕೈ ಮತ್ತು ಮೊಣಕಾಲು; ಹಿಮ್ಮಡಿ ಮತ್ತು ಮಣಿಕಟ್ಟು; ಪಾದ ಮತ್ತು ಹಸ್ತ, ಹಾಗೂ ಎರಡರ ತುದಿಗೂ ತಲಾ ಐದು ಬೆರಳುಗಳು, ಪ್ರತಿ ಕೈ ಮತ್ತು ಕಾಲು ಬೆರಳಿಗೆ ಉಗುರು. ಪ್ರತಿ ಹಸ್ತ ಮತ್ತು ಪಾದಗಳು ಆಯಾ ಹೆಬ್ಬೆರಳಿನಿಂದ ಕಿರುಬೆರಳಿನವರೆಗೆ ಸಮಾನ ರಚನೆ ಹೊಂದಿದ್ದವು. ಆ ದಿನಗಳಲ್ಲಿ ಕೈ ಮತ್ತು ಕಾಲಿನ ಹೆಬ್ಬೆಟ್ಟುಗಳು ಇತರ ಬೆರಳುಗಳಿಗೆ ತಾಗಿಕೊಂಡಿದ್ದವು. ಕಾಲು ಮತ್ತು ಕೈಗಳು ಸೋದರ ಸಂಬಂಧಿಗಳಂತೆಯೇ ಅನುರೂಪವಾಗಿದ್ದವು.
ಮಾರ್ಕೆಟ್, ಶಾಪಿಂಗ್, ಗಿಡ-ಮರ ಹತ್ತಿಳಿಯುವುದು, ಬೆಟ್ಟ-ಗುಡ್ಡ ಸುತ್ತುವುದು ಸೇರಿದಂತೆ ದೇಹ ಯಾವೆಡೆಯೆಲ್ಲಾ ಹೋಗಲು ಬಯಸುವುದೋ ಅಲ್ಲಿಗೆಲ್ಲಾ ಅದನ್ನು ಹೊತ್ತುಕೊಂಡುಹೋಗಲು ಅವುಗಳೆರಡೂ ಪರಸ್ಪರ ನೆರವಾಗುತ್ತಿದ್ದವು. ನೀರಿನಲ್ಲೂ ಕೂಡ ತೇಲಲು, ಈಜಾಡಲು ಮತ್ತು ನೆಗೆಯಲು ಅವೆರಡೂ ಜೊತೆಯಾಗಿ ಶ್ರಮಿಸುತ್ತಿದ್ದವು. ಹಾಗಾಗಿ ಅವು ತಮ್ಮ ಸಂಬಂಧದಲ್ಲಿ ಸಮಾನತೆಯಿಂದಲೂ, ಅತ್ಯಂತ ಪ್ರಜಾಸತ್ತಾತ್ಮಕವಾಗಿಯೂ ನಡೆದುಕೊಳ್ಳುತ್ತಿದ್ದವು. ಅದೇ ಹೊತ್ತಿಗೆ ಅವು ಅಗತ್ಯಬಿದ್ದಾಗ ಬಾಯಿಯ ಸದ್ದು, ಕಿವಿಯ ಕೇಳುವಿಕೆ, ಮೂಗಿನಿಂದ ವಾಸನೆ ಗ್ರಹಿಕೆ, ಕಣ್ಣುಗಳಿಂದ ನೋಡುವುದು ಮುಂತಾದ ವಿವಿಧ ಅಂಗಗಳ ಉಪಯೋಗವನ್ನು ಸಹ ಪಡೆದುಕೊಳ್ಳುತ್ತಿದ್ದವು.
ಕೈ- ಕಾಲುಗಳ ಪರಸ್ಪರ ಲಯ ಮತ್ತು ಸಾಟಿಯಿಲ್ಲದ ಹೊಂದಾಣಿಕೆ ಇತರ ಅಂಗಗಳಲ್ಲಿ ಹೊಟ್ಟೆಕಿಚ್ಚಿ ಹೊತ್ತಿಸಿತ್ತು. ಹಾಗಾಗಿ ಈ ಇಬ್ಬರು ಅಪೂರ್ವ ಸಹೋದರರಿಗೆ ತಮ್ಮ ಮೇಧಾವಿತನವನ್ನೆಲ್ಲಾ ಕೊಟ್ಟದ್ದಕ್ಕೆ ಒಳಗೊಳಗೇ ಕುದಿಯುತ್ತಿದ್ದವು. ಕೈ-ಕಾಲುಗಳು ತಮ್ಮನ್ನು ಎಲ್ಲಾ ಕಡೆ ಓಡಾಡಿಸಿವೆ, ಏನೆಲ್ಲಾವನ್ನೂ ತೋರಿಸಿವೆ ಎಂಬುದನ್ನು ಈ ಅಂಗಾಂಗಗಳಿಗೆ ಅವುಗಳ ಹೊಟ್ಟೆಕಿಚ್ಚು ಮರೆಸಿಬಿಟ್ಟಿತ್ತು. ಹಾಗಾಗಿ ಎಲ್ಲಾ ಅಂಗಗಳು ಕೈ-ಕಾಲು ಜೋಡಿಯ ವಿರುದ್ಧ ಸಂಚು ಮಾಡಲಾರಂಭಿಸಿದವು.
ನಾಲಿಗೆ ಮೆದುಳಿನಿಂದ ಒಂದು ಉಪಾಯ ಪಡೆಯಿತು ಮತ್ತು ಅದನ್ನು ಕೂಡಲೇ ಕಾರ್ಯಗತ ಮಾಡಿತು. ಕೈ ಮತ್ತು ಕಾಲುಗಳಲ್ಲಿ ಯಾರು ಹೆಚ್ಚು ಗಟ್ಟಿ, ಬಲಶಾಲಿ ಎಂದು ಅದು ದೊಡ್ಡದಾಗಿಯೇ ಆಶ್ಚರ್ಯ ವ್ಯಕ್ತಪಡಿಸಿತು. ಅಬ್ಬಾ ಯಾರು ಗಟ್ಟಿ ನಿಮ್ಮಬ್ಬರಲ್ಲಿ! ಎಂದಿತು ನಾಲಿಗೆ, ಜೋರಾಗಿಯೇ! ಆವರೆಗೆ ತಮ್ಮಿಬ್ಬರ ನಡುವೆ ಈ ರೀತಿಯ ಹೋಲಿಕೆಯನ್ನೇ ಮಾಡಿಕೊಳ್ಳದೇ ಇದ್ದ ಕೈ-ಕಾಲುಗಳಿಗೆ ದಿಢೀರನೇ ಏನೋ ಹೊಸ ಭಾವ ಹೊಳೆಯಿತು. ಕೂಡಲೇ ಬಾಯಿಯಿಂದ ಸದ್ದು ಪಡೆದು ದೇಹಕ್ಕೆ ನಾನೇ ಮುಖ್ಯ, ನಾನೇ ಮುಖ್ಯ ಎಂದು ಪೈಪೋಟಿಯಲ್ಲಿ ಕೂಗಲಾರಂಭಿಸಿದವು. ಈ ವಾದ-ವಾಗ್ವಾದ ಬಹಳ ಬೇಗ ಯಾರು ಸುಂದರ, ನೀಳ ಎಂಬ ಚರ್ಚೆಗೂ ತಿರುಗಿತು. ತನ್ನ ಹಸ್ತದ ಉದ್ದನೆಯ ಸಪೂರ ಬೆರಳನ್ನು ತೋರಿಸಿದ ಕೈ ಅವುಗಳನ್ನು ನಾಜೂಕಾಗಿ ಬಳುಕಿಸಿ ತನ್ನ ಅಂದ ತೋರಿತು. ಅದೇ ಹೊತ್ತಿಗೆ ಅದು ಕಾಲಿನ ಪಾದದ ಬೆರಳುಗಳ ಬಗ್ಗೆ ಟೊಣಪ, ಮೋಟು ಎಂದು ಹಿಯ್ಯಾಳಿಸಿ ಮಾತನಾಡಿತು. ಅದಕ್ಕೆ ಪ್ರತ್ಯುತ್ತರವಾಗಿ ಕಾಲಿನ ಬೆರಳುಗಳು, ತಿನ್ನಲು ಇಲ್ಲದೆ ಬಡಕಲಾದ ಬಡ ಸಹೋದರರು ಎಂದು ಸಪೂರವಾಗಿದ್ದ ಕೈ ಬೆರಳುಗಳನ್ನು ಕಿಚಾಯಿಸಿದವು. ಕೈ-ಕಾಲುಗಳ ನಡುವಿನ ಈ ಜಗಳ ಹಲವು ದಿನಗಳ ಕಾಲ ಮುಂದುವರಿಯಿತು. ಆಗೆಲ್ಲಾ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲ ಅವುಗಳ ಹೊಂದಾಣಿಕೆಯ ಕಲೆ ಸೊರಗಿತು. ಕೊನೆಗೆ ಅದು ಯಾರು ಶಕ್ತಿಶಾಲಿ, ಯಾರು ಹೆಚ್ಚು ಗಟ್ಟಿ ಎಂಬ ಮೂಲಭೂತ ಪ್ರಶ್ನೆಗೆ ಬಂದು ನಿಂತಿತು. ಈ ವಿಷಯದಲ್ಲಿ ಇತರ ಅಂಗಗಳೇ ತೀರ್ಮಾನ ಕೈಗೊಳ್ಳಬೇಕು ಎಂದು ಅವು ಕೇಳಿಕೊಂಡವು.
ಕೊನೆಗೂ ಇದೇ ದಿನಕ್ಕೆ ಕಾದಿದ್ದ ನಾಲಿಗೆ ಒಂದು ಸ್ಪರ್ಧೆ ಮಾಡೋಣ. ಯಾರು ಗಟ್ಟಿ ನೋಡೇ ಬಿಡೋಣ ಎಂದಿತು. ಅದೊಂದು ಅದ್ಭುತ ಉಪಾಯ, ಹಾಗಾಗಿ ಎಲ್ಲ ಅಂಗಗಳೂ ಸರಿ, ಸರಿ ಸ್ಪರ್ಧೆಯನ್ನೇ ಮಾಡೋಣ ಎಂದು ಒಪ್ಪಿಕೊಂಡವು. ಆದರೆ, ಯಾವ ಸ್ಪರ್ಧೆ? ಕೆಲವು ಅಂಗಗಳು ಕುಸ್ತಿ ಎಂದವು! ಕೈ-ಕಾಲು ಕುಸ್ತಿ? ಮತ್ತೆ ಕೆಲವು ಕತ್ತಿವರಸೆ ಎಂದವು. ಓಟ, ಕಣ್ಣಾಮುಚ್ಚಾಲೆ, ಚೆಸ್,.. ಹೀಗೆ ಒಂದೊಂದು ಅಂಗವೂ ಒಂದೊಂದು ಆಟ, ಸ್ಪರ್ಧೆಯನ್ನು ಸೂಚಿಸಿದವು. ಆದರೆ, ಅವುಗಳೆಲ್ಲವನ್ನೂ ನ್ಯಾಯಯುತವಾಗಿ ಆಡಲು ಆಗದು ಎಂದೋ, ಇಬ್ಬರಿಗೂ ಸಮಾನ ಅವಕಾಶ ಸಿಗದು ಎಂದೋ ತಳ್ಳಿಹಾಕಲಾಯಿತು. ಕೊನೆಗೆ ಮತ್ತೆ ನಾಲಿಗೆಯೇ ಮುಂದೆ ಬಂದು, ಮೆದುಳಿನಿಂದ ಉಪಾಯ ಪಡೆದು ಒಂದು ಸರಳ ಪರಿಹಾರ ನೀಡಿತು. ಎರಡೂ ಅಂಗಗಳು ಒಂದರ ನಂತರ ಮತ್ತೊಂದರಂತೆ ಒಂದೊಂದು ಸಾಹಸ ಪ್ರದರ್ಶಿಸಬೇಕು ಎಂದು ಹೇಳಿತು. ನಾಲಿಗೆಯ ಮಾತಿಗೆ ಕೈ, ಕಾಲುಗಳೆರಡೂ ಒಪ್ಪಿಕೊಂಡವು.
ಕಾಡಿನ ನಡುವೆ ನದಿ ಪಕ್ಕದ ಒಂದು ಚಿಕ್ಕ ಬಯಲಿನಲ್ಲಿ ಸ್ಪರ್ಧೆ ಆರಂಭವಾಯಿತು. ದೇಹದ ಎಲ್ಲಾ ಅಂಗಗಳೂ ಆಗಬಹುದಾದ ಅನಿರೀಕ್ಷಿತ ಅಪಾಯ ಅಥವಾ ಆಘಾತವನ್ನು ಗ್ರಹಿಸಿ ಭಾರೀ ಎಚ್ಚರಿಕೆಯಿಂದ ಜಾಗರೂಕತೆ ವಹಿಸಿದವು. ತಮ್ಮದೇ ದೇಹದ ಅಂಗಗಳೆರಡು ಪರಸ್ಪರ ಸಮರಕ್ಕೆ ಸಜ್ಜಾಗಿದ್ದವು. ಇದು ಸಹಜವಾಗೇ ಭಯ ಮತ್ತು ಕುತೂಹಲಕ್ಕೆ ಕಾರಣವಾಗಿತ್ತು. ಕಣ್ಣುಗಳು ದೂರ-ದೂರದವರೆಗೆ ದೃಷ್ಟಿ ಹರಿಸಿ ಉದ್ದಗಲವನ್ನೂ ನಿರುಕಿಸಿ ಯಾವ ದಿಕ್ಕಿನಿಂದಾದರೂ ಏನಾದರೂ ಅಪಾಯವಿದೆಯೇ ಎಂದು ಪರೀಕ್ಷಿಸಿದವು. ಕಿವಿಗಳು ನೆಟ್ಟಗೆ ಸೆಟೆದು ಯಾವ ಮೂಲೆಯಿಂದಾದರೂ ಅಪಾಯದ ಸದ್ದೇನಾದರೂ ಕೇಳೀತೆ ಎಂದು ಮತ್ತೆ ಮತ್ತೆ ದಿಕ್ಕುದಿಕ್ಕಿಗೂ ತಿರುತಿರುಗಿ ಆಲಿಸಿದವು. ಮೂಗು ತನ್ನ ಹೊಳ್ಳೆಗಳನ್ನು ಅಗಲಿಸಿ ಕಣ್ಣು, ಕಿವಿಗಳನ್ನೂ ತಪ್ಪಿಸಿ ಏನಾದರೂ ಅಪಾಯ ಸುಳಿಯುತ್ತಿದೆಯೇ ಎಂದು ವಾಸನೆ ಹಿಡಿದು ನೋಡಿತು. ಅದೇ ಹೊತ್ತಿಗೆ ನಾಲಿಗೆ ಯಾವುದೇ ಕ್ಷಣದಲ್ಲೂ ಅಪಾಯ ಎಂದು ಕೂಗಿ ಕೂಡಲೇ ಎಚ್ಚರಿಸಲು ತುದಿನಾಲಿಗೆಯಾಗಿ ಸಜ್ಜಾಗಿತ್ತು.
ಕೈ ಕಾಲುಗಳ ನಡುವಿನ ಈ ವಿಶೇಷ ಸ್ಪರ್ಧೆಯ ಸುದ್ದಿಯನ್ನು ಹೊತ್ತು ಗಾಳಿ ಕಾಡು, ನೀರು, ಆಕಾಶದ ಮೂಲೆ-ಮೂಲೆಗೆ ಹರಡಿತು. ಅದನ್ನು ಕೇಳಿ ನಾಲ್ಕು ಕಾಲಿನ ಪ್ರಾಣಿಗಳು ಮೊದಲು ಸ್ಪರ್ಧೆಯ ಕಣಕ್ಕೆ ಬಂದವು. ಅವುಗಳಲ್ಲಿ ಕೆಲವಂತೂ ತಾವು ಬಂದಿರುವುದನ್ನು ತೋರಿಸಲು ಮರದ ಕೊಂಬೆಗಳನ್ನು ಹಿಡಿದು ಅಲುಗಾಡಿಸಿ ತೋರಿಸಿದವು. ಚಿರತೆ, ಚೀತಾ, ಸಿಂಹ, ರೈನೋ, ಕತ್ತೆಕಿರುಬ, ಆನೆ, ಜಿರಾಫೆ, ಒಂಟೆ, ಉದ್ದ ಕೊಂಬಿನ ದನ, ಗಿಡ್ಡನೆಯ ಕೊಂಬಿನ ಎಮ್ಮೆ, ಜಿಂಕೆ, ಕಡವೆ, ಮೊಲ, ಕತ್ತೆ, ಇಲಿಗಳೆಲ್ಲಾ ನೆರೆದವು. ಜಲಚರಗಳಾದ ನೀರಾನೆ, ಮೀನು, ಮೊಸಳೆ ಮುಂತಾದವು ನದಿಯ ದಡದಂಚಿಗೆ ಬಂದು ಅರ್ಧ ನೀರಲ್ಲಿ, ಅರ್ದ ದಡದಲ್ಲಿ ದೇಹ ಹರಡಿ ತದೇಕಚಿತ್ತದಿಂದ ನೋಡತೊಡಗಿದವು. ಎರಡು ಕಾಲಿನ ಆಸ್ಟ್ರಿಚ್, ಗಿನಿಯಾ ಗೂಬೆ ಮತ್ತು ನವಿಲುಗಳು ಖುಷಿಯಲ್ಲಿ ತಮ್ಮ ರೆಕ್ಕೆ ಬಿಚ್ಚಿ ಕೇಕೆ ಹಾಕಿದವು. ಮರಗಳ ನಡುವಿನಿಂದ ಹಕ್ಕಿಗಳು ಗಿಜಿಗುಟ್ಟಿದವು. ಮಿಡತೆ, ಜೀರುಂಡೆಗಳು ಹಾಡುತ್ತಲೇ ಇದ್ದವು. ಜೇಡ, ಹುಳು-ಹುಪ್ಪಟೆ, ಚೇಳು, ಸಹಸ್ರಪದಿಗಳು ನೆಲ, ಗಿಡ-ಮರಗಳ ಮೇಲೆಲ್ಲಾ ಹರಿದಾಡಿದವು. ಒಂದೆಡೆ ಓತಿ ಓಡುತ್ತಾ ಅವಸರವಸರವಾಗಿ ಬಂದರೆ, ಗೋಸುಂಬೆ ನಿಧಾನವಾಗಿ ತನ್ನದೇ ಗತ್ತಿನಲ್ಲಿ ಕಳ್ಳ ಹೆಜ್ಜೆ ಇಡುತ್ತಾ ಬರುತ್ತಿತ್ತು. ಕೋತಿ, ಚಿಂಪಾಂಜಿ, ಗೊರಿಲ್ಲಾಗಳು ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಾ ಬಂದು ಇತರ ಪ್ರಾಣಿಗಳನ್ನು ಸೇರಿಕೊಂಡವು. ಗಿಡ-ಮರ-ಪೊದೆಗಳು ಕೂಡ ಅತ್ತಿತ್ತ ಅಲುಗಾಡಿ, ತೊನೆದಾಡಿ ಕೊನೆಗೂ ನಿಶ್ಚಲವಾಗಿ ನಿಂತು ನಡೆಯಲಿರುವ ಭರ್ಜರಿ ಪೈಪೋಟಿಗೆ ಕಣ್ಣಾದವು.
ನಾವಾಡುತ್ತೇವೆ ಖುಷಿಗಾಗಿ,
ನಾವಿದನ್ನು ಮಾಡುತ್ತೇವೆ ಖುಷಿಗಾಗಿ
ನಾವೆಲ್ಲಾ ಒಂದೇ, ಒಂದೇ ನಿಸರ್ಗಮಾತೆಯ ಮಕ್ಕಳು ನಾವು
ಎಂದು ಬಾಯಿ ಹಾಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿತು.
ಕೈ ಕಾಲುಗಳು ತಮ್ಮ ಪೈಪೋಟಿಯ ಫಲಿತಾಂಶ ಏನೇ ಆಗಿದ್ದರೂ ಅದನ್ನು ಸೋಲು- ಗೆಲುವು ಎಂದೆಣಿಸದೆ ಸಮಾನವಾಗಿ ಸ್ವೀಕರಿಸುವುದಾಗಿ ಪ್ರಮಾಣ ಮಾಡಿದವು. ಯಾವುದೇ ಧರಣಿ, ಹೋರಾಟ, ಆರೋಪ, ಬಹಿಷ್ಕಾರ ಮಾಡುವುದಿಲ್ಲ ಎಂದು ಹೇಳಿದವು.
ಕೈಗಳು ಮೊದಲ ಸವಾಲು ಒಡ್ಡಿದವು. ಮರದ ತುಂಡೊಂದನ್ನು ನೆಲದ ಮೇಲೆ ಎಸೆದವು. ಕಾಲು; ಬಲಗಾಲು ಅಥವಾ ಎಡಗಾಲು ಅಥವಾ ಎರಡೂ ಸೇರಿ; ಆ ಮರದ ತುಂಡನ್ನು ನೆಲದಿಂದ ಮೇಲೆತ್ತಿ, ದೂರ ಎಸೆಯಬೇಕು ಎಂಬುದು ಸವಾಲು. ಎರಡೂ ಕಾಲುಗಳು ಸ್ಪರ್ಧೆಯ ಯಾವುದೇ ಹಂತದಲ್ಲಿ ಪರಸ್ಪರ ಸಮಾಲೋಚಿಸಬಹುದು, ತಮ್ಮ ಬೆರಳುಗಳನ್ನು ಒಟ್ಟಾಗಿ ಅಥವಾ ಬೇರೆ-ಬೇರೆಯಾಗಿ ಈ ಕೆಲಸಕ್ಕೆ ನೇಮಿಸಬಹುದು ಎಂಬ ಷರತ್ತನ್ನೂ ವಿಧಿಸಲಾಯಿತು. ಕಾಲುಗಳು ಮರದ ತುಂಡನ್ನು ಹೊರಳಿಸಲು ಪ್ರಯತ್ನಪಟ್ಟವು. ತಳ್ಳಲು ಯತ್ನಿಸಿದವು. ಪಾದದಿಂದ, ಬೆರಳುಗಳಿಂದ, ಮೊಣಕಾಲಿನಿಂದ,.. ಯಾವ ಬಗೆಯಲ್ಲಿ ಪ್ರಯತ್ನಿಸಿದರೂ ಅದನ್ನು ಎತ್ತಿಕೊಳ್ಳಲಾಗಲೇ ಇಲ್ಲ. ಇನ್ನು ಅದನ್ನು ಹೊರಳಿಸುವ ವಿಷಯದಲ್ಲಿ ಕೆಲವೇ ಇಂಚುಗಳಷ್ಟು ಅದನ್ನು ಕದಲಿಸಲು ಮಾತ್ರ ಅವು ಯಶಸ್ವಿಯಾದವು. ಇದನ್ನು ಕಂಡ ಕೈಬೆರಳುಗಳು ಬಾಯಿಯಿಂದ ಸದ್ದು ಪಡೆದು ಜೋರಾಗಿ ನಕ್ಕುಬಿಟ್ಟವು. ತಾನು ಒಡ್ಡಿದ ಸವಾಲಿನಲ್ಲಿ ಕಾಲುಗಳು ಹೀನಾಯವಾಗಿ ಸೋತವು ಎಂದು ಕೈಗಳು ಸೌಂದರ್ಯ ಸ್ಪರ್ಧೆಯಲ್ಲಿ ಲಲನೆಯರು ನಾಜೂಕು ನಡಿಗೆಯ ಪರೇಡ್ ನಡೆಸುವಂತೆ ಪರೇಡ್ ನಡೆಸಿದವು. ವಯ್ಯಾರದಿಂದ ಗಾಳಿಯಲ್ಲಿ ಬಳುಕಿ, ತಮ್ಮ ಸಪೂರ ಮೈಮಾಟ ಪ್ರದರ್ಶಿಸಿ ಬೇರೆ ಬೇರೆ ಬೆರಳುಗಳನ್ನು ಬಳಸಿ ಬಾರಿ ಬಾರಿ ಮರದ ತುಂಡನ್ನು ಎತ್ತಿ ಗಾಳಿಯಲ್ಲಿ ತೇಲಿಸಿ, ಸಭಿಕರಿಗೆ ತೋರಿಸಿ, ಕೊನೆಗೆ ದೂರದ ಕಾಡಿನೊಳಕ್ಕೆ ಬೀಳುವಂತೆ ಎಸೆದವು.
ಆಗ ದೇಹದ ಇತರ ಅಂಗಗಳು ಮತ್ತು ಸ್ಪರ್ಧೆಯ ವೀಕ್ಷಕರಾಗಿ ಬಂದಿದ್ದ ಪ್ರಾಣಿ, ಪಕ್ಷಿ, ಕೀಟಗಳು ಹೋ ಎಂದು ಮೆಚ್ಚುಗೆ ಸೂಚಿಸಿದವು. ಈ ಮೆಚ್ಚುಗೆ ಪ್ರತಿಕ್ರಿಯೆಯಿಂದ ಮತ್ತಷ್ಟು ಹುರಿದುಂಬಿದ ಕೈಗಳು ಇನ್ನಷ್ಟು ಸಾಹಸ ಪ್ರದರ್ಶಿಸಿದವು; ತಪ್ಪಲೆಯೊಂದರಲ್ಲಿ ತುಂಬಿದ್ದ ಅಕ್ಕಿಯಿಂದ ಸಣ್ಣ- ಸಣ್ಣ ಮರಳಿನ ಹರಳುಗಳನ್ನು ಹೆಕ್ಕಿ ತೆಗೆದವು; ಸೂಜಿಗೆ ದಾರ ಪೋಣಿಸಿದವು; ಭಾರದ ಮರಗಳನ್ನು ಸಾಗಿಸಲು ರಾಟೆಗಳನ್ನು ಮಾಡಿದವು. ಕೆಲವು ಗೋಳಾಕಾರದ ವಸ್ತುಗಳನ್ನು ಮಾಡಿ, ಮುಗಿಲಿನೆತ್ತರಕ್ಕೆ ಹಾರಿಸಿದವು. ಇದೆಲ್ಲವನ್ನೂ ಕನಸಲ್ಲೂ ಕಾಣದಿದ್ದ ಕಾಲು ಮತ್ತು ಕಾಲಿನ ಬೆರಳುಗಳು ಕುಳಿತು ಎಲ್ಲವನ್ನೂ ಬೆರಗಿನಿಂದ ನೋಡುತ್ತಿದ್ದವು ಅಷ್ಟೆ. ತಮ್ಮ ಸಪೂರ ಸಹೋದರರ ಈ ಚಾಕಚಕ್ಯತೆಗಳನ್ನು ಅವು ನೋಡಿ ಮಾತ್ರ ಖುಷಿಪಡಲು ಸಾಧ್ಯವಿತ್ತು. ಕೈಗಳ ವಿಧ ವಿಧ ವರಸೆಗಳನ್ನು ಕಂಡ ವೀಕ್ಷಕರ ಕೈಗಳು ತಮ್ಮ ಸಹ ಕೈಗಳನ್ನು ಅಭಿನಂದಿಸಿ ಜೋರಾಗಿ ಚಪ್ಪಾಳೆ ತಟ್ಟಿದವು. ಆ ಮೂಲಕ ಕೈಗಳ ಒಗ್ಗಟ್ಟು ಪ್ರದರ್ಶನವಾಯಿತು. ಇದು ಅಲ್ಲಿ ಸ್ಪರ್ಧೆಗೆ ಇಳಿದಿದ್ದ ಕಾಲುಗಳೂ ಸೇರಿದಂತೆ ಇದ್ದ ಎಲ್ಲಾ ಕಾಲುಗಳಿಗೆ ಭಾರೀ ಬೇಸರ ತರಿಸಿತು. ಆದರೂ ಅವು ಏನೂ ಮಾಡದ ಸ್ಥಿತಿಯಲ್ಲಿದ್ದವು. ಕೂತಲ್ಲೇ ಕಾಲುಗಳ ಬೆರಳುಗಳು ನೆಲದ ಮರಳಿನ ಮೇಲೆ ಸಣ್ಣ ಸಣ್ಣ ವೃತ್ತಗಳನ್ನು ಬರೆಯುತ್ತಾ ಕೈಗಳಿಗೆ ಒಡ್ಡಬೇಕಾದ ದೊಡ್ಡ ಸವಾಲಿನ ಬಗ್ಗೆ ಯೋಚಿಸುತ್ತಿದ್ದವು.
ಕೊನೆಗೂ ಕೈಗಳ ಶೋ ಮುಗಿದು, ಕಾಲು ಮತ್ತು ಕಾಲ್ಬೆರಳುಗಳು ಅವಕ್ಕೆ ಸವಾಲೊಡ್ಡುವ ಸಮಯ ಬಂತು. ಅವು ಒಡ್ಡಿದ ಸವಾಲು ಸರಳವಾಗಿತ್ತು. ನೆಲದ ಮೇಲೆ ತುಸು ಅಂತರದಲ್ಲಿ ಎರಡು ವೃತ್ತ ಬರೆದವು. ಆ ಎರಡು ವೃತ್ತಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಇಡೀ ದೇಹವನ್ನು ಹೊತ್ತುಕೊಂಡು ಕೈಗಳು ಚಲಿಸಬೇಕು ಎಂಬುದು ಆ ಸವಾಲು. ಈಗಷ್ಟೇ ಮುಗಿದ ತಮ್ಮ ಪ್ರದರ್ಶನದಿಂದ ಬೀಗುತ್ತಿದ್ದ ಕೈ ಬೆರಳುಗಳಿಗೆ ಇದೊಂದು ತೀರಾ ಕ್ಷುಲ್ಲಕ ಸವಾಲು ಎನಿಸಿತು. ಇಡೀ ದೇಹ ತಲೆಕೆಳಗಾಯಿತು. ಕೈಗಳು ನೆಲಕ್ಕೆ ಊರಿದವು. ಕಣ್ಣುಗಳು ನೆಲದ ಸಮೀಪಕ್ಕೆ ಹೋದವು, ನೆಲಕ್ಕೆ ಅಂಟಿಕೊಂಡಂತೆ ಇದ್ದುದರಿಂದ ಅವುಗಳ ನೋಟದ ವ್ಯಾಪ್ತಿ ತೀರಾ ಕ್ಷೀಣಿಸಿತು. ನೆಲದ ದೂಳು ಮೂಗಿನ ಒಳ ನುಸುಳಿ, ಸೀನು ಬಂತು. ಕಾಲು ಮತ್ತು ಕಾಲ್ಬೆರಳುಗಳು ಗಾಳಿಯಲ್ಲಿ ತೇಲುತ್ತಿದ್ದವು. ಇದೊಂದು ಅಪರೂಪದ ದೃಶ್ಯವಾಗಿತ್ತು. ವೀಕ್ಷಕರು ನ್ಯಾಯೊ ಜುಜು ಎಂಬ ಹರ್ಷೋದ್ಗಾರದೊಂದಿಗೆ ಹಾಡುತ್ತಾ ಕೈಗಳನ್ನು ಸ್ವಾಗತಿಸಿದವು.
ನ್ಯಾಯೊ ನ್ಯಾಯೊ ಜುಜು
ಹಕೂನ ಮಟಾಟ
ಫುಅಟ ನ್ಯಾಯೊ
ಹಕೂನ ಮಟಾಟ
ಟುರುಕೆನಿ ಅಂಗನಿ..
ಹಾಡು ಗುನುಗುತ್ತಿದ್ದರೂ ಅವರ ಗಮನವೆಲ್ಲಾ ಕೈಗಳ ಮೇಲೇ ಇತ್ತು. ಕೆಲವೇ ಕ್ಷಣಗಳ ಹಿಂದೆ ಬಗೆಬಗೆಯ ಕೌಶಲ್ಯ ಪ್ರದರ್ಶನ ಮಾಡಿದ ಕೈಗಳು ಈಗ ನಾಲ್ಕು ಮಾರು ದೂರುವನ್ನೂ ಕ್ರಮಿಸಲಾಗಲಿಲ್ಲ. ಒಂದೆರಡು ಮಾರು ಸಾಗುವುದರಲ್ಲೇ ಕೈಗಳು ನೋವಿನಿಂದ ಚೀತ್ಕರಿಸಿದವು. ಗಢಗಢ ನಡುಗಿದವು, ಬಳುಕಾಡಿದವು, ಕೊನೆಗೂ ದೇಹ ನೆಲಕ್ಕುರುಳಿಯೇ ಬಿಟ್ಟಿತು! ತುಸು ಹೊತ್ತು ವಿಶ್ರಾಂತಿ ಪಡೆದು, ಸುಧಾರಿಸಿಕೊಂಡು ಮತ್ತೆ ಇನ್ನೊಂದು ಯತ್ನ ಮಾಡಿದವು. ಈ ಬಾರಿ ನೆಲವನ್ನು ಬಿಗಿದುಹಿಡಿಯಲು ಪ್ರಯತ್ನಿಸಿ ಕೈ ಬೆರಳುಗಳನ್ನು ಸಾಧ್ಯವಾದಷ್ಟು ಹಿಗ್ಗಿಸಿದವು. ಆದರೆ, ಹೆಬ್ಬೆರಳು ಮಾತ್ರ ತುಸು ಹಿಗ್ಗಿತು ಅಷ್ಟೇ. ಲಾಗಾ ಹಾಕಲು ಪ್ರಯತ್ನಿಸಿದವು. ಆದರೆ, ಅದಕ್ಕೆ ಕಾಲು ಬಳಕೆ ಅನಿವಾರ್ಯವಾದ್ದರಿಂದ ಆಟದಿಂದ ಅನರ್ಹಗೊಳಿಸಲಾಯಿತು. ಈಗ ಗಹಗಹಿಸಿ ನಗುವ ಸರದಿ ಕಾಲಿನ ಬೆರಳುಗಳದ್ದಾಯಿತು. ಅವು ಅಟ್ಟಹಾಸದ ನಗೆಯನ್ನು ಬಾಯಿಯಿಂದ ಪಡೆದು ಕೈಗಳ ಕೀರಲು ನಗೆಯನ್ನು ಅಣಕಿಸಿ ಜೋರಾಗಿ ನಕ್ಕವು. ಈ ಅಪಹಾಸ್ಯದ ನಗು ಕೇಳಿ ಕೈಗಳ ಸಿಟ್ಟು ಕೆಂಪೇರಿತು. ಆ ಅವಮಾನ, ಸಿಟ್ಟಿನಲ್ಲೇ ದೇಹವನ್ನು ಹೊತ್ತು ಸಾಗುವ ಮತ್ತೊಂದು ಅಂತಿಮ ಸಾಹಸ ಮಾಡಿದವು. ಒಂದಡಿ ಕೂಡ ಮುಂದೆ ಸಾಗದಾದವು. ಕೊನೆಗೂ ಸುಸ್ತಾದ ಕೈ ಮತ್ತು ಕೈಬೆರಳು ಸವಾಲು ಬಿಟ್ಟುಕೊಟ್ಟವು. ಈಗ ಕಾಲುಗಳು ಕಣಕ್ಕಿಳಿದವು. ತಮ್ಮ ಅದ್ಭುತ ಕ್ರೀಡಾ ಸಾಹಸಗಳನ್ನು ಪ್ರದರ್ಶನಕ್ಕಿಟ್ಟವು. ಅವು ಓಡಿದವು, ಹಾರಿದವು, ಜಿಗಿದವು, ಹೈಜಂಪ್, ಲಾಂಗ್ಜಂಪ್ಗಳನ್ನೆಲ್ಲಾ ಪ್ರದರ್ಶಿಸಿದವು; ಒಮ್ಮೆಯೂ ದೇಹವನ್ನು ಬೀಳಿಸದೇ! ಕಾಲುಗಳ ಈ ಸಾಹಸ, ಕೌಶಲ್ಯ ಬೆಂಬಲಿಸಿ ನೆರೆದ ವೀಕ್ಷಕರೆಲ್ಲಾ ತಮ್ಮ ಕಾಲುಗಳನ್ನು ಲಯವಾಗಿ ನೆಲಕ್ಕೆ ಅಪ್ಪಳಿಸಿದವು. ಆ ಮೂಲಕ ಕಾಲುಗಳ ಒಗ್ಗಟ್ಟು ಪ್ರದರ್ಶಿಸಿದವು. ಆಗ ಕೈಗಳು ಇದು ಸ್ಪರ್ಧಾ ಮನೋಭಾವಕ್ಕೆ ವಿರುದ್ಧ ಎಂದು ಗಾಳಿಯಲ್ಲಿ ಸೆಟೆದುನಿಂತು ವಿರೋಧ ವ್ಯಕ್ತಪಡಿಸಿದವು. ಆದರೆ, ಈ ಆಟವನ್ನು ತಾವೇ ಆರಂಭಿಸಿದ್ದು ಎಂಬುದನ್ನು ಮರೆತಿದ್ದವು.
ಆದರೆ, ವೀಕ್ಷಕರನ್ನೂ ಸೇರಿದಂತೆ ಅಲ್ಲಿದ್ದವರೆಲ್ಲಾ ಒಂದು ವಿಚಿತ್ರವನ್ನು ಗಮನಿಸಿದರು; ಕೈಗಳು ದೇಹವನ್ನು ಹೊತ್ತೊಯ್ಯಲು ಪ್ರಯತ್ನಿಸುತ್ತಿದ್ದಾಗ ಇತರ ಬೆರಳುಗಳಿಂದ ದೂರಕ್ಕೆ ಹಿಗ್ಗಿದ್ದ ಕೈ ಹೆಬ್ಬೆರಳುಗಳು ಹಾಗೇ ಚಾಚಿದಂತೆಯೇ ಉಳಿದುಬಿಟ್ಟಿದ್ದವು. ಹೀಗೆ ಚಾಚಿಕೊಂಡಿದ್ದ ಹೆಬ್ಬೆರಳುಗಳನ್ನು ಕಂಡು ಮತ್ತೆ ನಗಬೇಕು ಎಂದುಕೊಂಡಿದ್ದ ಕೈಗಳ ದಾಯಾದಿ ಅಂಗಗಳಿಗೆ ಒಂದು ಅಚ್ಚರಿ ಕಾದಿತ್ತು; ಹೆಬ್ಬೆರಳು ಚಾಚಿಕೊಂಡಿರುವುದು ಕೈಗಳ ಶಕ್ತಿಗುಂದಿಸುವ ಬದಲು ಅವನ್ನು ಇನ್ನಷ್ಟು ಸದೃಢಗೊಳಿಸಿತ್ತು. ಹಸ್ತದ ಹಿಡಿಪನ್ನು ಮತ್ತಷ್ಟು ಬಲಗೊಳಿಸುವ ಮೂಲಕ ಕೈಗೆ ಬಲ ತಂದುಕೊಟ್ಟಿತ್ತು ಆ ಬದಲಾವಣೆ. ವಿರೂಪವೇ ರೂಪದ ಬಲವೃದ್ಧಿಸಿದ ಬೆಳವಣಿಗೆ ಅದು!
ಇದೆಲ್ಲಾ ಮುಗಿದ ಬಳಿಕ ದೇಹದ ಇತರ ಅಂಗಗಳಿಗೆ ಸ್ಪರ್ಧೆಯ ವಿಜೇತರು ಯಾರು ಎಂಬುದನ್ನು ನಿರ್ಧರಿಸಲು ಕೈ ಮತ್ತು ಕಾಲುಗಳ ಬೆರಳುಗಳ ಸಂಖ್ಯೆಯಷ್ಟೇ; ಐದು ದಿನಗಳು; ಬೇಕಾದವು. ಎಷ್ಟು ಚರ್ಚಿಸಿದರೂ, ವಾದ- ವಿವಾದ ನಡೆದರೂ ಅಂತಿಮವಾಗಿ ಯಾರಿಗೆ ಜಯದ ಕಿರೀಟ ತೊಡಿಸುವುದು ಎಂಬುದನ್ನು ನಿರ್ಧರಿಸುವುದು ಸಾಧ್ಯವಾಗಲೇ ಇಲ್ಲ. ಏಕೆಂದರೆ; ಕೈ ಮತ್ತು ಕಾಲುಗಳ ಜೋಡಿಗಳೆರಡೂ ತಮ್ಮದೇ ರೀತಿಯಲ್ಲಿ ತಾವು ಮಾಡಬಹುದಾದ್ದನ್ನು ಮಾಡಿದ್ದವು. ಹಾಗೇ ಒಂದರ ಹೊರತಾಗಿ ಮತ್ತೊಂದು ಅದಕ್ಕಿಂತ ಉತ್ತಮವಾಗಿ ಏನನ್ನೂ ಮಾಡಲಾಗುತ್ತಿರಲಿಲ್ಲ. ಆಗ ಅಲ್ಲಿ ತಾತ್ವಿಕ ಲೆಕ್ಕಾಚಾರಗಳು ಆರಂಭವಾದವು; ದೇಹ ಎಂದರೆ ಏನು ಎಂದು ಎಲ್ಲಾ ಅಂಗಗಳು ಪ್ರಶ್ನೆ ಮುಂದಿಟ್ಟವು. ತಾವೆಲ್ಲರೂ ಸೇರಿ ಒಂದು ದೇಹ ಎಂಬುದನ್ನು ಚರ್ಚೆಯ ಬಳಿಕ ಅರ್ಥಮಾಡಿಕೊಂಡವು. ಪ್ರತಿ ಅಂಗವೂ ಮತ್ತೊಂದರ ಮೇಲೆ ಅವಲಂಬಿತ. ಎಲ್ಲರೂ ಹೊಂದಾಣಿಕೆಯಿಂದ ಉತ್ತಮ ಕೆಲಸ ಮಾಡಿದರೆ ಮಾತ್ರ ಅಂತಿಮವಾಗಿ ಎಲ್ಲವೂ ಉತ್ತಮವಾಗಿರಲು ಸಾಧ್ಯ ಎಂಬುದು ಕೂಡ ಗೊತ್ತಾಯಿತು.
ಆದರೆ, ಮುಂದಿನ ದಿನಗಳಲ್ಲಿ ಇಂತಹ ಸ್ಪರ್ಧೆ ಅಥವಾ ಒಬ್ಬರಿಗೆ ಅಡ್ಡಗಾಲಾಗಿ ಮತ್ತೊಬ್ಬರು ಬರುವುದನ್ನು ತಪ್ಪಿಸಲು ಎಲ್ಲಾ ಅಂಗಗಳು ಒಂದು ಒಮ್ಮತದ ತೀರ್ಮಾನ ಕೈಗೊಂಡವು. ಅದೆಂದರೆ; ಇನ್ನು ಮುಂದೆ ದೇಹ ನೇರವಾಗಿ ತಲೆ ಎತ್ತಿ ನಿಲ್ಲಬೇಕು. ಕಾಲುಗಳು ಗಟ್ಟಿಯಾಗಿ ನೆಲಕ್ಕೆ ಅಂಟಿಕೊಂಡಿರಬೇಕು. ಕೈಗಳು ಮೇಲೆ ಗಾಳಿಯಲ್ಲಿ ಬೀಸುತ್ತಾ ನಡೆಯಲು ನೆರವಾಗಬೇಕು. ಈ ನಿರ್ಧಾರ ಕೇಳಿ ದೇಹ ಖುಷಿಯಾಯಿತು. ಆದರೆ, ಮಕ್ಕಳು ಮಾತ್ರ ಕೆಲ ದಿನಗಳ ಮಟ್ಟಿಗಾದರೂ ಕೈ ಕಾಲುಗಳನ್ನು ಬಳಸಿ ನಾಲ್ಕು ಕಾಲಿನ ಮೇಲೆ ನಡೆಯಬೇಕು. ಹಾಗಾದರೂ ಅವರು ತನ್ನ ಮೂಲ ಸ್ವರೂಪವನ್ನು ನೆನಪಿಸಿಕೊಳ್ಳುವಂತಾಗಲಿ ಎಂದು ದೇಹ ಹೇಳಿತು. ಬಳಿಕ ಅಂಗಗಳು ತಮ್ಮ ತಮ್ಮ ಕೆಲಸಗಳನ್ನು ಹಂಚಿಕೊಂಡವು; ಕಾಲುಗಳು ದೇಹವನ್ನು ಹೊತ್ತುಕೊಂಡು ಓಡಾಡಬೇಕು. ಆದರೆ, ಒಮ್ಮೆ ನಿಗದಿ ಸ್ಥಳ ತಲುಪಿದ ಬಳಿಕ ಉಳಿದ ಸಲಕರಣೆಗಳನ್ನು ಮಾಡುವ ಅಥವಾ ಬಳಸುವ ಕೆಲಸವನ್ನು ಕೈಗಳೇ ಮಾಡಬೇಕು ಎಂದಾಯಿತು. ಕಾಲು ಮತ್ತು ಪಾದಗಳು ದೇಹವನ್ನು ಹೊತ್ತುಕೊಂಡು ಸಾಗುವ ಕಠಿಣ ಶ್ರಮದ ಕೆಲಸ ಮಾಡುತ್ತಿದ್ದರೆ, ಕೈಗಳು ದೇಹದ ನೆರವಿಗೆ ಬಂದು ಯಾವುದೇ ಕೆಲಸ, ಕಾರ್ಯಗಳನ್ನು ಮಾಡಲು ತಮ್ಮ ಕೌಶಲ ಉಪಯೋಗಿಸತೊಡಗಿದವು. ಊಟ ಬಾಯಿಗೆ ತಲುಪುವಂತೆ ಮಾಡುವುದು, ಬಳಿಕ ಬಾಯಿ, ಅದರಲ್ಲೂ ಅದರ ಹಲ್ಲುಗಳು ಆಹಾರವನ್ನು ಜಗಿಯುವುದು, ನಂತರ ಗಂಟಲ ಮೂಲಕ ಅದನ್ನು ಹೊಟ್ಟೆಗೆ ಸಾಗಿಸುವುದು. ಹೊಟ್ಟೆ ಆಹಾರದಲ್ಲಿನ ಎಲ್ಲ ಒಳ್ಳೆಯದನ್ನು ಹೀರಿಕೊಂಡು, ದೇಹದ ಪ್ರತಿ ಮೂಲೆಗೂ ಹಂಚಿಕೆ ಮಾಡುವ ವ್ಯವಸ್ಥಿತ ಚಾನೆಲ್ಗಳಿಗೆ(ರಕ್ತನಾಳ) ಸರಬರಾಜು ಮಾಡಬೇಕು. ನಂತರ ಉಳಿಕೆ ಆಹಾರ ಪದಾರ್ಥವನ್ನು ತನ್ನ ವಿಸರ್ಜನಾ ವ್ಯವಸ್ಥೆಗೆ ಕಳಿಸಬೇಕು. ಆ ಬಳಿಕ ದೇಹ ಆ ತ್ಯಾಜ್ಯವನ್ನು ಹೊರಗಿನ ಜಮೀನಿನಲ್ಲಿ ಹಾಕುತ್ತದೆ. ಅಲ್ಲಿ ಅದು ಮಣ್ಣಿನಡಿ ಹೂತು ಮಣ್ಣನ್ನು ಫಲವತ್ತಾಗಿಸುತ್ತದೆ. ಆ ಫಲವತ್ತಾದ ಮಣ್ಣ್ಣನ್ನು ಉಂಡು ಬೆಳೆಯುವ ಮರಗಳು ಹಣ್ಣು ಕೊಡುತ್ತವೆ. ಕೈಗಳು ಆ ಕೆಲವು ಹಣ್ಣನ್ನು ಕಿತ್ತು ಬಾಯಲ್ಲಿ ಇಡುತ್ತವೆ. ಓ.. ಇದು ಜೀವನ ಚಕ್ರ.
ಆಟೋಟ, ಮನರಂಜನೆಗಳನ್ನು ಕೂಡ ಒಂದೊಂದು ಅಂಗದ ಜವಾಬ್ದಾರಿಗೆ ವಹಿಸಲಾಯಿತು. ಹಾಡುವುದು, ನಗುವುದು ಮತ್ತು ಮಾತನಾಡುವುದನ್ನು ಬಾಯಿಗೆ ವಹಿಸಲಾಯಿತು. ಓಡುವುದು ಮತ್ತು ಫುಟ್ಬಾಲ್ ಆಟವನ್ನು ಬಹುತೇಕ ಕಾಲುಗಳಿಗೆ ವಹಿಸಲಾಯಿತು. ಬೇಸ್ ಬಾಲ್, ಬ್ಯಾಸ್ಕೆಟ್ ಬಾಲ್ ಆಟವನ್ನು ಕೈಗಳಿಗೆ ಮೀಸಲಿಡಲಾಯಿತು, ಕಾಲುಗಳಿಗೆ ಅವಕ್ಕೆ ಪೂರಕವಾಗಿ ಓಡುವುದು ಮಾತ್ರ ಎಂದಾಯಿತು. ಇನ್ನು ಆಟೋಟಗಳಲ್ಲಿ ಕಾಲುಗಳೇ ಬಹುತೇಕ ಎಲ್ಲಾ ಕಾರ್ಯ ಮಾಡಬೇಕು. ಹೀಗೆ ಎಲ್ಲಾ ಚಟುವಟಿಕೆಗಳ ಕುಶಲ ಹಂಚಿಕೆ ಮಾನವ ದೇಹವನ್ನು ಒಂದು ಬಯೋ ಮಷೀನ್ ರೀತಿ ಮಾಡಿ, ಪ್ರಮಾಣ ಮತ್ತು ಗುಣಮಟ್ಟದಲ್ಲಿ ಭೂಮಿ ಮೇಲಿನ ಅತ್ಯಂತ ದೊಡ್ಡ ಪ್ರಾಣಿಗಳನ್ನೂ ಮೀರಿಸಿತು.
ತಾವೇ ಕೂತು ನಿರ್ಣಯಿಸಿದ ಈ ಶಾಶ್ವತ ವ್ಯವಸ್ಥೆ ಕೂಡ ತಮ್ಮ ನಡುವೆ ಸಂಘರ್ಷ ತರಬಹುದು ಎಂಬ ಆತಂಕ ದೇಹದ ಅಂಗಗಳನ್ನು ಕಾಡಿತು. ದೇಹದ ಮೇಲೆ ತುತ್ತತುದಿಯಲ್ಲಿರುವ ತಲೆ ತಾನು ಕೆಳಗೆ ನೆಕ್ಕಂಟಿರುವ ಕಾಲುಗಳಿಗಿಂತ ಶ್ರೇಷ್ಠ ಎಂದುಕೊಳ್ಳಬಹುದು. ತಾನು ಯಜಮಾನ, ಉಳಿದ ಅಂಗಗಳೆಲ್ಲಾ ತನ್ನ ಸೇವಕರು ಎಂದು ಅದು ಭಾವಿಸಬಹುದು. ಹಾಗಾಗಿ, ಅಧಿಕಾರ ವಿಷಯದಲ್ಲಿ ತಲೆಯಂತೆಯೇ ಅದರ ಕೆಳಗಿರುವ ಎಲ್ಲಾ ಅಂಗಗಳೂ ಸಮಾನರು ಎಂದೂ ಒತ್ತಿ ಹೇಳಿದವು. ಈ ಮಾತನ್ನು ರುಜುವಾತು ಮಾಡಲು ಅವು ಯಾವುದೇ ಅಂಗದ ಯಾವುದೇ ಭಾಗಕ್ಕೆ ಆಗುವ ನೋವು ಮತ್ತು ಖುಷಿ ಎಲ್ಲಾ ಅಂಗಗಳ ಅನುಭವಕ್ಕೆ ಬರುವಂತೆ ನೋಡಿಕೊಂಡವು. ಹಾಗೇ, ಬಾಯಿ ನನ್ನ ಅದು, ನನ್ನ ಇದು, ಎನ್ನುವಾಗೆಲ್ಲಾ ತಾನು ಇಡೀ ದೇಹದ ಪರವಾಗಿ ಹೇಳುತ್ತಿದ್ದೇನೆಯೇ ಹೊರತು ತನ್ನೊಬ್ಬನ ಪರವಾಗಿ ಅಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದೂ ಸರ್ವಾಂಗಗಳೂ ನೆನಪಿಸಿದವು.
ಅವು ಜೊತೆಯಾಗಿ;
ನಮ್ಮ ದೇಹದಲ್ಲಿ
ಸೇವಕರಾರೂ ಇಲ್ಲ,
ನಾನೇ ನೆರವಾಗುತ್ತೇವೆೆ,
ಒಬ್ಬರಿಗೊಬ್ಬರು.
ನಮಗಾಗಿ ನಾವು.
ನಾನೇ ನೆರವಾಗುತ್ತೇವೆೆ,
ಒಬ್ಬರಿಗೊಬ್ಬರು
ನಮಗಾಗಿ ನಾವು.
ನಾನೇ ನೆರವಾಗುತ್ತೇವೆೆ
ಒಬ್ಬರಿಗೊಬ್ಬರು,
ನಮ್ಮ ಸಮೂಹ ಗಾನವಿದು
ನಾನವನಿಗೆ, ಅವ ನನಗೆ ಆಸರೆ,
ನಾವೆಲ್ಲಾ ಸೇರಿ ಸದೃಢ ದೇಹ ಕಟ್ಟುತ್ತೇವೆ
ನಾನವನಿಗೆ, ಅವ ನಗೆ ಆಸರೆ,
ನಾವೆಲ್ಲಾ ಸೇರಿ ಸದೃಢ ದೇಹ ಕಟ್ಟುತ್ತೇವೆ.
ಒಗ್ಗಟ್ಟಲ್ಲೇ ನಮ್ಮ ಸೌಂದರ್ಯ.
ಒಟ್ಟಾಗಿ ನಾವು ದುಡಿಯುತ್ತೇವೆ
ಸದೃಢ ದೇಹಕ್ಕಾಗಿ.
ಒಟ್ಟಾಗಿ ನಾವು ದುಡಿಯುತ್ತೇವೆ
ಆರೋಗ್ಯಕರ ದೇಹಕ್ಕಾಗಿ
ಒಗ್ಗಟ್ಟೇ ನಮ್ಮ ಶಕ್ತಿ.. ಎಂದು ಹಾಡಿದವು ರಾಗವಾಗಿ.
ಇದು ದೇಹದ ರಾಷ್ಟ್ರಗೀತೆಯೇ ಆಗಿಹೋಯಿತು. ಈ ಗೀತೆಯನ್ನು ಇಂದಿಗೂ ದೇಹ ಹಾಡುತ್ತಲೇ ಇದೆ. ಇದುವೇ ಮನುಷ್ಯ ಮತ್ತು ಪ್ರಾಣಿಗಳ- ತಲೆ ಮೇಲ್ಮುಖ ಕ್ರಾಂತಿಯನ್ನು ತಿರಸ್ಕರಿಸಿದವರ- ನಡುವೆ ಇರುವ ಭಿನ್ನತೆ.
ನಾಲ್ಕು ಕಾಲಿನ ಪ್ರಾಣಿಗಳು ಮನುಷ್ಯನಲ್ಲಿ ಆದ ಈ ಬದಲಾವಣೆಯನ್ನು ಕಂಡದ್ದು ಬಿಟ್ಟರೆ, ಅವುಗಳಿಗೆ ಇದರ ಅನುಭವವಾಗಲಿಲ್ಲ. ಈ ಕ್ರಾಂತಿಯನ್ನು ಅವು ಕಾಣಲಿಲ್ಲ. ಅವುಗಳಲ್ಲಿ ಹಾಡುವುದೆಂದರೆ ಅದೊಂದು ಅಪಹಾಸ್ಯಕರ ಚಟುವಟಿಕೆ. ಅವುಗಳ ಬಾಯಿ ತಿನ್ನಲು ಮಾತ್ರ ಮಾಡಲಾಗಿದೆಯೇ ವಿನಃ ಹಾಡಲು ಅಲ್ಲ. ಅವುಗಳೆಲ್ಲಾ ಪ್ರಕೃತಿಯ ಸಂಪ್ರದಾಯಬದ್ಧ ಪಕ್ಷವನ್ನು ಕಟ್ಟಿಕೊಂಡವು ಹಾಗೂ ತಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳದೆ, ಯಾವ ಬದಲಾವಣೆಯನ್ನೂ ಕಾಣದೆ ಹಾಗೇ ಉಳಿದುಬಿಟ್ಟವು.
ಯಾವಾಗ ಮನುಷ್ಯನ ಅಂಗಾಂಗಗಳ ಜಾಲ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತದೆಯೋ ಆಗ ಆತ ಉತ್ತಮವಾದದ್ದನ್ನು ಸಾಧಿಸುತ್ತಾನೆ. ಯಾವಾಗ ದೇಹ ಮತ್ತು ತಲೆ ಪರಸ್ಪರ ನಾಮೇಲು, ತಾಮೇಲು ಎಂದು ಕದನಕ್ಕೆ ಇಳಿಯುತ್ತವೆಯೋ ಆಗ ಆತ ಮೇಲ್ಮಖ ಕ್ರಾಂತಿಯನ್ನು ತಿರಸ್ಕರಿಸಿದ ತನ್ನ ದಾಯಾದಿ ಸಂಬಂಧಿಗಳಾದ ಪ್ರಾಣಿಗಳ ಮಟ್ಟಕ್ಕೆ ಇಳಿಯುತ್ತಾನೆ.
Shashi Sampalli is a journalist. He is presently working at Kannada Prabha, a regional daily. He is also a well-known poet in Kannada language. His first poetry collection ‘Charithreya Jaadinachege’ was published in 2004. It has got good response from writers as well as critics. He hails from a sleepy village Sampalli in Shimoga district of Karnataka, an Indian state. He did his post-graduation in English Literature at Kuvempu University. He has translated some British and South African poets to his native language as well. As a journalist he has worked extensively on the life and development challenges of Western Ghats. He is presently residing at Shimoga, a town on the verge of Western Ghats.
ಗೂಗಿ ಪರಿಚಯ
ಗೂಗಿ ವಾ ಥಿಯಾಂಗೊ ಕೀನ್ಯಾದ ಲೇಖಕ. ವಸಾಹತೀಕರಣದ ಪ್ರಭಾವದಿಂದಾಗಿ ತನ್ನ ಆಫ್ರಿಕಾ ಖಂಡದ ಜನಜೀವನದಲ್ಲಿ ಆದ ಬದಲಾವಣೆ ಭಾಷೆಯೂ ಮೇಲೂ ಆಯಿತು. ಅದರಿಂದಾಗಿ 2000ಕ್ಕೂ ಹೆಚ್ಚು ಭಾಷೆಗಳು ಸಾವಿನ ಅಂಚಿಗೆ ತಳ್ಳಲ್ಪಟ್ಟವು. ಆ ಒಂದು ಸಂಸ್ಕೃತಿಯ ಸಜೀವ ವಾಹಕವಾದ ಭಾಷೆಯ ಅಳಿವು ಎಂದರೆ, ಆಯಾ ಸಂಸ್ಕೃತಿಯ ಅಳಿವು ಎಂದು ಪ್ರತಿಪಾದಿಸಿದ ಗೂಗಿ, ಆರಂಭದ ತನ್ನ ಬರಹಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆದರೂ ಬಳಿಕ, ತನ್ನ ಸೃಜನಶೀಲ ಅಭಿವ್ಯಕ್ತಿ ಮಾಧ್ಯಮವಾಗಿ ಕೀನ್ಯಾದ ತನ್ನ ಬುಡಕಟ್ಟು ಭಾಷೆ ಗಿಕುಯುನಲ್ಲೇ ಬರೆಯಲಾರಂಭಿಸಿದರು. ತಮ್ಮ ಡಿ ಕಲೊನೈಜಿಂಗ್ ದ ಮೈಂಡ್ ಕೃತಿಯ ಮೂಲಕ ಇಡೀ ವಸಾಹತು ರಾಷ್ಟ್ರಗಳಿಗೆ ಹೊಸ ಭಾಷೆ ಮತ್ತು ಸಂಸ್ಕೃತಿ ನಿರ್ವಚನೆಯ ಹೊಸ ಮಾದರಿ ಕಟ್ಟಿಕೊಟ್ಟ ಗೂಗಿ, ವಿಶ್ವದ ಪ್ರಮುಖ ವಸಾಹತೋತ್ತರ ಸಾಂಸ್ಕೃತಿಕ ಚಿಂತಕರಲ್ಲಿ ಪ್ರಮುಖರು. ಸದ್ಯ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯದ ಪ್ರಾಧ್ಯಾಪಕರಾಗಿದ್ದಾರೆ.
ಕನ್ನಡದ ಮಟ್ಟಿಗೆ 80ರ ದಶಕದ ನಂತರದ ಸಂಸ್ಕೃತಿ ಅಧ್ಯಯನ ಮತ್ತು ವಿಮರ್ಶೆ ರಂಗದ ಮೇಲೆ ಬಹುದೊಡ್ಡ ಪ್ರಭಾವ ಬೀರಿರುವ ಲೇಖಕ ಗೂಗಿ. ಅವರ ಡಿ ಕಲೊನೈಜಿಂಗ್ ದ ಮೈಂಡ್ ಕೃತಿಯನ್ನು ವಿಮರ್ಶಕ ರಹಮತ್ ತರೀಕೆರೆ ಅವರು ವಸಾಹತು ಪ್ರಜ್ಞೆ ಮತ್ತು ವಿಮೋಚನೆ ಹೆಸರಿನಲ್ಲಿ 90ರ ದಶಕದಲ್ಲೇ ಕನ್ನಡಕ್ಕೆ ತಂದಿದ್ದಾರೆ. ಇನ್ನು ಡಾ ಸಿ ಎಸ್ ನಂಜುಂಡಯ್ಯ, ಡಾ ನಟರಾಜ್ ಹುಳಿಯಾರ್ ಮುಂತಾದವರು ಗೂಗಿಯ ಬಗ್ಗೆ ಬರೆದು, ಮಾತನಾಡಿ ಆತನನ್ನು ಜನಪ್ರಿಯಗೊಳಿಸಿದ್ದಾರೆ. ನಮ್ಮ ಕಥೆ, ಕಾವ್ಯ, ನಾಟಕ, ವಿಮರ್ಶೆಗಳನ್ನು ಕೂಡ ಪ್ರಭಾವಿಸಿರುವ ಗೂಗಿ ಒಂದು ರೀತಿಯಲ್ಲಿ ಇತ್ತೀಚಿನ ಕನ್ನಡ ಸಾಹಿತ್ಯದ ಪ್ರಜ್ಞೆಯ ಭಾಗವೇ ಆಗಿಬಿಟ್ಟಿದ್ದಾರೆ.