ಶುಕ್ರವಾರ, ಫೆಬ್ರವರಿ 5, 2016

ಕೃಷಿಯಲ್ಲಿ ನಾಟಿಕೋಳಿಗಳ ಚಮತ್ಕಾರ, ಕೂಲಿ ಬೇಡದ ಆಳುಗಳು

- ಕಿಶನ್ ರಾವ್ ಕುಲಕರ್ಣಿ
ಸೌಜನ್ಯ: ಕಣಜ

ತಮ್ಮ ಪಾಡಿಗೆ ತಾವು ಹಾರಿಡಿಕೊಂಡು ಹೊಗುವ ಬೆಳ್ಳಕ್ಕಿ, ಕೋಳಿಗಳು ಅದ್ಹೇಗಪ್ಪಾ ಕೂಲಿ ಆಳಾಗಿ ಹೊಲ ಕಾಯುವುದು ಅಂತ ನೀವು ಹುಬ್ಬೇರಿಸಬೇಡಿ, ಅಂತಹದ್ದೊಂದು ಮಾದರಿ ಕೃಷಿ ಪದ್ಧತಿ ಕೆಲವೊಂದು ಗ್ರಾಮೀಣ ಪ್ರದೇಶದಲ್ಲಿ ಈಗಲೂ ಇದೆ ನೋಡಿ.
ಮೊದಲೇ ಸರಿಯಾಗಿ ಮಳೆ ಇಲ್ಲ, ಅಂತದ್ರೊಳಗೆ ಶಿವಾಶಿವಾ ಅಂತ ಎರೆ ಹೊಲದಲ್ಲಿ ರೈತರು ಕಡಲೆ, ಜೋಳ ಬಿತ್ತನೆ ಮಾರುತ್ತಾರೆ. ಆದರೇನು ಮಾಡುವುದು ಕೀಡೆಗಳ ಹಾವಳಿ ಹೇಳತೀರದಂತಾಗಿರುತ್ತದೆ.
ಏನೆಲ್ಲ ಕಸರತ್ತು ಮಡಿದರೂ ಕೀಡೆಗಳು ನಿಯಂತ್ರಣಕ್ಕೆ ಬಾರದಿರುವುದನ್ನು ಕಂಡಾಗ ರೈತರು ಕೈ ಸೋತು ಕುಳಿತ ಸಂದರ್ಭದಲ್ಲಿ ಅಂಬರದಿಂದ ಹಾರಿ ಬಂದ ಬೆಳ್ಳಕ್ಕಿಗಳು ಮೆಲ್ಲ-ಮೆಲ್ಲಗೆ ಕಡಲೆ ಬೆಳೆಯಲ್ಲಿ ಇಳಿದು ತಮ್ಮ ಸೂಕ್ಷ್ಮ ದೃಷ್ಠಿ ಹರಿಸಿ ಚಳಿಗೆ ಮುದುಡಿಕೊಂಡು ಕುಳಿತ ಅಥವಾ ಎಲೆಯಲ್ಲಿ ಮರೆಯಗಿ ಕುಳಿತಂತಹ ಕೀಡೆಗಳ ಬೆನ್ನತ್ತಿ ಹುಡುಕಿ, ಹೆಕ್ಕಿ ತಿನ್ನಲು ಆರಂಭಿಸುತ್ತವೆ. ಕ್ರಮೇಣ ಕೀಡೆಗಳ ಸಂತತಿ ಕಡಿಮೆಯಗಿ ಬೆಳೆ ನಿಯಂತ್ರಣಕ್ಕೆ ಬಂರುತ್ತದೆ.
ಕಡಲೆ ಹೊಲಗಳಿಗೆ ಬರುತ್ತಿರುವ ಬೆಳ್ಳಕಿಗಳ ದಂಡು
“ಸಾಲ-ಸೂಲ ಮಡಿ ಕಡಲಿ ಬಿತ್ತಿದ್ವಿ, ಹೂ ಮೂಡದಕ್ಕಿಂತ ಮುಂಚೆ ಹುಳುಗಳು ಅಮರಿಕೊಂಡು ಕುಂತಿದ್ವು, ಇಂತಾದ್ರಾಗ ಏನ ಮಡಬೇಕಪಾ ಅಂತ ಚಿಂತಿಟ್ಟಾಗ ಈ ಪಕ್ಷಿಗಳೇ ಬಂದು ಬೆಳೆಗಲ್ಲಿದ್ದ ಹುಳುಗಳನ್ನೆ ಸ್ವಚ್ಚಮಡ್ಯಾವ ನೋಡ್ರಿ, ಕೈತುಂಬ ಕೂಲಿ ಕೊಡುತೀವಿ ಬರ್ರೋ… ಎಂದರೂ ಬಾರದ ಕೂಲ್ಯಾಳುಗಳು ಈ ಕಾಲ್ದಾಗ ಕೂಲಿ ಬಯಸದೇ ಬೆಳೆ ಹಸನ ಮಾಡಿ ಹೋಗುವ ಈ ಪಕ್ಷಿಗಳು ಬಂದಿದ್ದು ನಮ್ಮ ಪುಣ್ಯ ನೋಡ್ರಿ ” ಎಂದು ಕೀಡೆಯ ಹಾವಳಿಗೆ ನಲುಗಿದ ರೈತರು ಹೀಗೆ ಹೇಳುತ್ತಾರೆ.
ಪಕ್ಷಿಗಳಿಗೆ ಮರಕವಾಗುವ ರಾಸಾಯನಿಕ :
ಬೆಳ್ಳಕ್ಕಿಗಳು ಈ ಪ್ರಮಾಣದಲ್ಲಿ ಮೊದಲಿನಿಂದಲೂ ಬರುತ್ತವೆ. ಆದರೆ ಕ್ರಮೇಣ ಕೃಷಿಯಲ್ಲಿ ರೈತರು ಅನುಸರಿಸುತ್ತಿರುವ ವಿಷ ಚಟುವಟಿಕೆಗಳು ಪಕ್ಷಿಗಳಿಗೆ ಮರಕವಾಗುತ್ತಿರುವುದರಿಂದಲೇ ಪಕ್ಷಿಗಳ ಸಂಖ್ಯೆ ಕ್ರಮೇಣ ಇಳಿಮುಖವಾಯಿತು, ಜೊತೆಗೆ ಕ್ರಿಮಿನಾಶಕಗಳ ಬಳಕೆಯಿಂದ ಅವುಗಳ ಸಂತತಿಯ ಮೇಲೆ ಪರಿಣಾಮ ಬೀರಿ ಪಕ್ಷಿಗಳು ನಸಿಸಲು ಕಾರಣವಾಯಿತು. ಯಾವ ಜಮೀನಿನಲ್ಲಿ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರದ ಭರಾಟೆ ಇರುವುದಿಲ್ಲವೋ ಆ ಜಮೀನಿಗೆ ಅಲ್ಲಿಂದ… ಇಲ್ಲಿಂದ… ಹಾರಿಬಂದ ಕಾಬಕ್ಕಿಗಳು ಅಲ್ಲಿ ಒಟ್ಟುಗೂಡಿ ಕೀಡೆಗಳನ್ನು ಗುಳುಂ ಮಾಡುತ್ತಿವೆ.
ಆದರೆ ವಿಪರ‍್ಯಾಸವೆಂದರೆ ಸಾಮೂಹಿಕವಾಗಿ ರೈತರು ಕ್ರಿಮಿನಾಶಕಗಳ ಬಳಕೆ ನಿಯಂತ್ರಿಸಿಲ್ಲ ಕೆಲವರು ಈಗಲೂ ಅಂತಹ ವಿಷ ಪದಾರ್ಥಗಳನ್ನು ಕಡಲೆ ಬೆಳೆಗಳಿಗೆ ಬಳಸುತ್ತಿರುವುದರಿಂದ ವಿಷ ಪದಾರ್ಥ ಸೇವಿಸಿ ಸತ್ತು ಬಿದ್ದಿರುವ ಕೀಡೆಗಳನ್ನು ಏನು ಅರಿಯದೇ ಹಾರಿ ಬರುವ ಈ ಹಕ್ಕಿಗಳು ನುಂಗಿ ಕೀಡೆಗಳ ತರಹ ಅಲ್ಲಿಯೇ ಪಕ್ಷಿಗಳೂ ಪ್ರಾಣ ಬಿಡುವುದು ನೋವಿನ ಸಂಗತಿಯಗಿದೆ.
ಆಕರ್ಷಣೆಗೆ ಏನೆಲ್ಲ ಕಸರತ್ತು :
ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದ ರೈತರು ಈಗ ಬೆಳ್ಳಕ್ಕಿಗಳ ಮೊರೆ ಹೋಗುತ್ತಿರವುದು ಕಂಡು ಬರುತ್ತಿದೆ. ‘ಬಾ… ಬಾ… ಎಂದರೂ ಬಾರುವುದೂ ಇಲ್ಲ, ಪ್ರತಿ ದಿನ ಒಂದೇ ಹೊಲಕ್ಕೂ ಬರುವುದೂ ಇಲ್ಲ, ಒಂದೆಡೆ ಕೂಡುವುದು ಇಲ್ಲ,
ಹೇಗಿದೆ ನೋಡಿ ಬೆಳ್ಳಕ್ಕಿಗಳು ರಕ್ಷಿಸಿದ ಕಡಲೆ ಬೆಳೆ
ಕೊಂಚ ಸದ್ದಾದರೂ ಸಾಕು ಪುರ್ರೆಂದು ಹಾರಿ ಹೋಗುವ ಈ ನಾಜೂಕು ಮನಸ್ಸಿನ ಹಕ್ಕಿಗಳನ್ನು ಹೇಗಪ್ಪಾ ನಮ್ಮ ಹೊಲದೆಡೆಗೆ ಬರಸೆಳೆಯುವುದು?’ ಎಂಬಂತಹ ಲೆಕ್ಕಾಚಾರದಲ್ಲಿ ತೊಡಗಿರುವ ರೈತರು ಪಕ್ಷಿಗಳ ಆಕರ್ಷಣೆಗೆ ಕಸರತ್ತ್ತೂ ನಡೆಸುತ್ತಾರೆ. ಹಾರಿಬಂದ ಹಕ್ಕಿಗಳು ಇಲ್ಲಿಯೇ ನೀರು ಕುಡಿದು ತಮ್ಮ ಜಮೀನಿನಲ್ಲಿಯೇ ನೆಲಸಿ ಹುಳು-ಹುಪ್ಪಡಿಗಳನ್ನು ತಿನ್ನಲಿ ಎಂದು ತಮ್ಮ-ತಮ್ಮ ಜಮೀನುಗಳ ಮಧ್ಯದಲ್ಲಿ ಹಾಗೂ ಆಸುಪಾಸು ಗಿಡಗಳ ರೆಂಬೆಗಳಿಗೆ ನೀರು ತುಂಬಿದ ಮಣ್ಣಿನ ತಟ್ಟೆಗಳನ್ನು ತೂಗುಬಿಟ್ಟಿರುತ್ತಾರೆ, ಅಲ್ಲದೇ ಬೆಳಗಿನ ಹಾಗೂ ಸಾಯಂಕಾಲದ ಸಮಯದಲ್ಲಿ ಕಡಲೆ ಬೆಳೆಯ ಹೊಲಗಳಲ್ಲಿ ಮಂಡಕ್ಕಿ (ಮಂಡಾಳು, ಚೂರಮರಿ) ಚೆಲ್ಲುವ ಕೆಲಸ ಮಾಡುತ್ತಾರೆ. ದೂರದಲ್ಲಿ ಹಾರಿ ಹೋಗುವ ಹಕ್ಕಿಗಳ ಕಣ್ಣಿಗೆ ಮಂಡಕ್ಕಿ ಫಳಕ್ಕೆಂದು ಹೊಳೆದು ಹಕ್ಕಿಗಳ ಹಾರಿ ಬರಲಿ ಎಂಬ ಉದ್ದೇಶವೇ ಈ ಮಂಡಕ್ಕಿ ಚಲ್ಲುವ ಕರಾಮತ್ತಾಗಿದೆ.
ಕೋಳಿ ಹಿಂಡು ತಂದ ಮಕ್ಕಳ ದಂಡು.
ಕಡಲೆಯಲ್ಲಿ ಕೋಳಿ ಚಮತ್ಕಾರ’! :
ಬೆಳ್ಳಕ್ಕಿಗಳ ಹಿಂಡುಗಳು ಬಂದವರ ಬೆಳೆಯೇನೂ ಉಜ್ವಲವಾಯಿತು, ಆದರೆ ಬೆಳ್ಳಕ್ಕಿಗಳು ಬಾರದವರ ಗತಿ ಏನು? ಎಂದು ವಿಚಾರಿಸದಿರಿ! ಅತ್ಯಂತ ಹಳೆಯ ಕೃಷಿ ಪದ್ಧತಿಯೊಂದಾದ ಕಡಲೆ ಹೊಲದಲ್ಲಿ ನಾಟಿ ಕೋಳಿಗಳ ಚಮತ್ಕಾರ ಇಲ್ಲಿ ಈಗಲೂ ಜೀವಂತವಾಗಿದೆ. ಹೈಟೆಕ್ ಕೃಷಿಗೆ ಸೆಡ್ಡು ಹೊಡೆದ ಕೊಪ್ಪಳ ಜಿಲ್ಲೆಯ ನೆರೆಬೆಂಚಿ ಗ್ರಾಮದ ಸಣ್ಣ ಹನಮಗೌಡ ಪೊಲೀಸಪಾಟೀಲ ಎಂಬ ಸಣ್ಣ ರೈತ ತನ್ನ ಕಡಲೆ ಹೊಲದಲ್ಲಿ ಪ್ರತಿ ವರ್ಷ ಈ ಪದ್ಧತಿ ಅನುಸರಿಸುತ್ತಾ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
ಸಣ್ಣ ಹನಮಗೌಡ ಪೊಲೀಸಪಾಟೀಲರದ ದೊಡ್ಡ ಸಂಸಾರ ಆದರೆ ಅವರಿಗೆ ಇರುವುದು ಒಂದೇ ಎಕರೆ ಭೂಮಿ ಮಾತ್ರ. ಆ ಒಂದು ಎಕರೆಯಲ್ಲಿ ಬೆಳೆ ದಕ್ಕದಿದ್ದರೆ ಆ ವರ್ಷದ ಅನ್ನಕ್ಕೆ ಕಲ್ಲುಬಿದ್ದಂತೆ. ಅಲ್ಲದೇ ದುಬಾರಿ ಕ್ರಿಮಿನಾಶಕಗಳನ್ನು (ವಿಷ) ತಂದು ಸಿಂಪಡಿಸಿವಷ್ಟು ಸ್ಥಿತಿವಂತರೂ ಅವರಲ್ಲ. ಈ ಕಾರಣದಿಂದ ತಮ್ಮ ಮುತ್ತಜ್ಜನ ಕಾಲದಿಂದಲೂ ನಡೆದು ಬಂದಿರುವ ಕೋಳಿ ಚಮತ್ಕಾರವನ್ನು ಈಗಲೂ ಮುನ್ನಡೆಸಿಕೊಂಡು ಬಂದಿದ್ದಾರೆ. ಇದರಿಂದ ವರ್ಷಕ್ಕೆ ನೂರಾರು ಕೋಳಿಗಳು ಬೆಳೆಗಳಲ್ಲಿನ  ಹುಳು-ಹುಪ್ಪಡಿಗಳನ್ನು ತಿಂದು ದಷ್ಟಪುಷ್ಟವಾಗಿ ಬೆಳೆದು ಪೇಟೆಯಲ್ಲಿ ನಾಲ್ಕು ದುಡ್ಡು ಹೆಚ್ಚಿಗೆ ಸಂಪಾದಿಸಲು ಪಾಟೀಲರಿಗೆ ನೆರವಾಗುತ್ತವೆ. ಈ ಕೆಲಸಕ್ಕೇನೂ ಅವರ ದೊಡ್ಡ ಬಂಡವಾಳ ಹಾಕಿಲ್ಲ!! ಮನೆಯಲ್ಲಿ ೨೦-೩೦ ನಾಟಿ ಕೋಳಿಗಳನ್ನು ಸಾಕಿದ್ದಾರೆ, ಹಂತ-ಹಂತವಾಗಿ ಮಾರುತ್ತಾ ಹೋದಂತೆ ತಾಯಿ ಕೋಳಿಗಳು ಮೊಟ್ಟೆ ಹಾಕುತ್ತಾ ಹೋಗುತ್ತವೆ, ಅದೇ ಮೊಟ್ಟೆಗಳನ್ನು ಮರಿ ಮಾಡಿಸಿ ಕೋಳಿ ಸಂತತಿ ಹೆಚ್ಚಿಸುತ್ತಾರೆ, ಮೊಟ್ಟೆ, ಬಲಿತ ಕೋಳಿಗಳನ್ನು ಮಾರುಕಟ್ಟೆಗೆ ಸಾಗಿಸುತ್ತಾರೆ. ಹೈಬ್ರಿಡ್ ಹಾಗೂ ಕಲಬೆರಕೆಯ ಈ ಕಾಲದಲ್ಲಿ ಹೇಳಿ ಕೇಳಿ ಇವರ ನಾಟಿ ಕೋಳಿಗಳೆಂದರೆ ಜನರು ಬಾಯಿಯಲ್ಲಿ ನೀರೂರಿ ಕೊಂಚ ಹೆಚ್ಚು ಬೆಲೆಯಾದರೂ ಪರ‍್ವಾಯಿಲ್ಲ ಖರೀದಿಸುತ್ತಾರೆ. ಬೆಳಗಿನ ಸಮಯದಲ್ಲಿ ಮಕ್ಕಳು ಕೋಳಿಗಳನ್ನು ಬುಟ್ಟಿಯಲ್ಲಿ ಹಾಕಿಕೊಂಡು ಬಂದು ಹೊಲದಲ್ಲಿ ಬಿಟ್ಟು ಹೋದರೆ ನಂತರ ಬಂದ ಹಿರಿಯರು ಕೋಳಿಗಳನ್ನು ಮೇಯಿಸಿಕೊಂಡು ಮುಸ್ಸಂಜೆ ಹೊತ್ತಿಗೆ ಮನೆಯೆಡೆಗೆ ಸಾಗಿಸುತ್ತಾರೆ. ಹೂವು ಬಿಡುವ ಅವಧಿಯಿಂದ ಒಂದೂವರೆ ತಿಂಗಳವರೆಗೆ ಈ ಕೆಲಸ ನಿರಂತರ ನಡೆಯುತ್ತದೆ. ಮತ್ತೇ ಮುಂದಿನ ಬೆಳೆಗೆ ಹೀಗೆನೇ ಕೋಳಿ ಕರಾಮತ್ತು ನಡೆಯುತ್ತಿರುತ್ತದೆ. ಇದು ಕೋಳಿ ಮತ್ತು ಗೌಡರ ನಿತ್ಯದ ದಿನಚರಿಯಾಗಿದೆ.
ಬಾ... ಬಾ... ಕೋಳಿ.
ಆಧುನಿಕ ಕೃಷಿ ಪದ್ಧತಿ ಚಾಲ್ತಿಗೆ ಬಂದ ನಂತರ ಸಾಂಪ್ರದಾಯಿಕ ಜ್ಞಾನ ಮೂಲೆ ಗುಂಪಾಯಿತು. ಈಗೇನಿದ್ದರೂ ಅತ್ಯಾಧುನಿಕ ಕೃಷಿಯ ಭರಾಟೆಯಾಗಿದೆ. ಹಾಗೆಂದು ಸಣ್ಣಹನಮಗೌಡರಂತಹ ಅನೇಕ ರೈತರು ತಮ್ಮ ಕ್ರಿಯಶೀಲತೆ ಬಿಟ್ಟುಕೊಟ್ಟಿಲ್ಲ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆಯಾದೀತು.
ಜಗತ್ತಿನ ಕೃಷಿ ವ್ಯವಸ್ಥೆಯಲ್ಲಿ ಏನೆಲ್ಲ ವೈಜ್ಞಾನಿಕ ಬದಲಾವಣೆಗಳಾದರೂ ಬಹುತೇಕ ರೈತರ ಬದುಕು ಹಸನಾಗಿಸುವುದಕ್ಕೆ ಸಾಧ್ಯವಾಗಿಲ್ಲ ಎಂಬುದಕ್ಕೆ ಪಟ್ಟಿ ಮಾಡಿದರೆ ಸಾಕಷ್ಟು ಉದಾಹರಣೆಗಳು ದೊರಕುತ್ತವೆ. ಆದರೆ ಪಾರಂಪರಿಕ ವ್ಯವಸ್ಥೆಯಲ್ಲಿಯೇ ಅನೇಕ ರೈತರು ತಮ್ಮ ಅನುಭವದಿಂದ ಕಲಿತ ಇಂತಹ ಪಾಠವನ್ನೇ ಕೃಷಿ ವ್ಯವಸಾಯದಲ್ಲಿ ಅಳವಡಿಸಿ ಯಶಸ್ವಿಯಗುತ್ತಿರುವುದು ಸಮಧಾನ ತರುವ ಸಂಗತಿಯಾಗಿದೆ.
ಈ ಬಾರಿ ಬಂಪರ್ ಫಸಲು ತರುತ್ತಿರುವ ಹಿಂಗಾರಿ ಕಡಲೆ ಬೆಳೆಯಲ್ಲಿನ  ಕೀಡೆಗಳ ನಿಯಂತ್ರಣಕ್ಕಾಗಿ ಪೇಟೆಯಲ್ಲಿ ರೈತರಿಗಾಗಿಯೇ (?) ಆಕರ್ಷಕ ಡಬ್ಬಾಗಳಲ್ಲಿ ಸಿದ್ಧವಾಗಿರುವ ತರಹೇವಾರಿ ಪೀಡೆನಾಶಗಳನ್ನು ಇಟ್ಟಿದ್ದಾರೆ. ಇವುಗಳನ್ನು ತಂದು ಬೆಳೆಗಳಿಗೆ ಸ್ನಾನ ಮಡಿಸಿದರೂ ಕಾಯಿಕೊರಕ ಹುಳು ನಿಯಂತ್ರಿಸಲಾಗುತ್ತಿಲ್ಲ. ಆದರೆ ಕ್ರಿಮಿನಾಶಕಗಳಿಗೆ ಮಾಡಿದ ಖರ್ಚು ಮಾತ್ರ ಸಾಲವಾಗಿ ಉಳಿದಿರುತ್ತದೆ. ಅಂಥದ್ದರಲ್ಲಿ ಒಂದಿಷ್ಟೂ ವಿಷ ಉಣಿಸದೆ ನಾಟಿ ಕೋಳಿಗಳಿಂದಲೇ ಕೀಡೆಗಳನ್ನು ನಿಯಂತ್ರಿಸಿ ‘ಸೈ’ಎನ್ನುವ ರೀತಿಯಲ್ಲಿ ಬೆಳೆ ಬೆಳೆಯುತ್ತಿರುವ ಪೊಲೀಸಪಾಟೀಲ ಅವರದು ಕಡಿಮೆ ಸಾಧನೆ ಅಲ್ಲ. ಕುಷ್ಟಗಿ ಯಿಂದ ಕೊಪ್ಪಳಕ್ಕೆ ಹೋಗುವ ಮರ್ಗದಲ್ಲಿ ಇರುವ ನೆರೆಬೆಂಚಿ ಗ್ರಾಮದ ಬಳಿ ಅವರ ಕಡಲೆ ಹೊಲ ಕಾಣುತ್ತದೆ. ಹಗಲು ಹೊತ್ತಿನಲ್ಲಿ ಸದಾ ಕೋಳಿಗಳಿಗೆ ‘ಬಾಯಿತುಂಬ’ ಕೆಲ್ಸ ಎಂದರೆ ಅಚ್ಚರಿ ಅಲ್ಲವೆ? ಯಾವುದೋ ಒಂದು ಕೋಳಿಗೆ ಒಂದು ಕೀಡೆ ದೊರೆತರೆ ಕ್ಕೊ… ಕ್ಕೊ… ಎಂದು ಎಲ್ಲ ಕೋಳಿಗಳಿಗೆ ಹುಯ್ಲೆಬ್ಬಿಸಿ ಕೀಡೆ ಹುಡುಕುವುದಕ್ಕೆ ಪ್ರೇರಣೆ ನೀಡುತ್ತವೆ.
ಹೀಗಿದೆ ನೋಡಿ ಕಡಲೆ ಬೆಳೆ
ಕಾರಣವಿಲ್ಲದೇ ಕಾದಾಡುವುದಕ್ಕೆ ಕೋಳಿ ಜಗಳ ಎಂದೇ ಜರಿಯುವುದುಂಟು. ಆದರೆ ಕೋಳಿಗಳಿಲ್ಲಿ ಕಾದಾಡುವುದಿಲ್ಲ, ಬದಲಾಗಿ  ಕಡಲೆ ಹೊಲದಲ್ಲಿ ಈ ನಾಟಿ ಕೋಳಿಗದ್ದೇ ಕಾರುಬಾರು! ಕೀಟನಿಯಂತ್ರಣದಲ್ಲಿ ಮುಖ್ಯಪಾತ್ರಧಾರಿಗಳಾದ ಅವುಗಳ ನಿತ್ಯ ಕಾಯಕವನ್ನು ನೋಡಿಯೇ ತಿಳಿಯಬೇಕು. ಒಂದೂವರೆ ತಿಂಗಳವರೆಗೂ ಹುಳು ‘ಗುಳುಂ’ ಮಡಿರುವ ಕೋಳಿಗಳೂ ದಷ್ಟಪುಷವಾಗಿವೆ. ಹಾಗೇನೇ ಗಿಡಗಳೂ ಮೈತುಂಬ ಕಾಯಿ ಹೊತ್ತು ನಿಂತಿರುವುದು ಕಂಡುಬರುತ್ತದೆ.
ಅಕ್ಕಪಕ್ಕದ ರೈತರು ತಮ್ಮ ಜೇಬಿನಲ್ಲಿನ ಸಾವಿರಾರು ರೂಪಾಯಿಗಳನ್ನು ಬರೀ ಪೀಡೆನಾಶಕಗಳಿಗೇ ಖರ್ಚು ಮಡಿದ್ದಾರೆ. ಆದರೆ ಕೋಳಿಗಳನ್ನೇ ನಂಬಿದ ಹನಮಗೌಡರಿಗೆ ಒಂದು ನಯಪೈಸೆ ಖರ್ಚು ಇಲ್ಲ, ಸಂಜೆವರೆಗೂ ಆಜೂ ಬಾಜಿನ ಮತ್ತೊಬ್ಬರ ಹೊಲಗಳಿಗೆ ಹೋಗದಂತೆ ಕೋಳಿಗಳನ್ನು ಕಾಯುತ್ತ ನಿಂತರೆ ಸಾಕು. ಇದು ಹನಮಗೌಡ ಅಥವಾ ಅವರ ಪತ್ನಿ ಹನುಮವ್ವ ಅವರ ನಿತ್ಯದ ಜವಾಬ್ದಾರಿ.
ಚಳಿ, ಬಿಸಿಲಿಗೆ ಒಗ್ಗಿಕೊಳ್ಳುವ ನಾಟಿ ಕೋಳಿಗಳು ಸಂಜೆವರೆಗೂ ಫುಲ್‌ಬ್ಯೂಸಿ! ಗಿಡಗಳಲ್ಲಷ್ಟೇ ಅಲ್ಲ ಕಾಯಿಯ ಒಳಗೆ ಅವಿತಿರುವ ಬಾಲಹುಳುಗಳನ್ನೂ ಹೆಕ್ಕಿಹೆಕ್ಕಿ ತಿಂದು ತೇಗುತ್ತವೆ. ಅತ್ತ ಬೆಳೆಗೆ ಗಂಟುಬಿದ್ದ ಪೀಡೆ ನಾಪತ್ತೆ, ಇತ್ತ ಕೋಳಿಗಳಿಗೆ ತೃಪ್ತಿ. ಈ ವಿಧಾನ ಅನುಸರಿಸಿದ ಹನುಮಗೌಡರಿಗೂ ಎರಡು ಲಾಭ ಹೇಗಿದೆ ಕೋಳಿ ಚಮತ್ಕಾರ!.
‘ಕಡ್ಲಿಗೆ ಯವ ಎಣ್ಣಿನೂ ಹೊಡ್ದಿಲ್ರಿ, ಮುಂಜಾನಿಂದ ಸಂಜೀಮಟ ಹೊಲ್ದಾಗ ಇದ್ದಾಂಗೂ ಆತೂ ಕೋಳಿ ಮೇಯ್ಸಿದಾಂಗೂ ಆಕೈತಿ ಮತ್ತ ಕೋಳ್ಗಿನೂ ಹೊಲ್ದಾಗ ಯವ ಜಡ್ಡೂ ಬರಂಗಿಲ್ಲ ನೋಡ್ರಿ’ ನಾಳೆ ಪ್ಯಾಟ್ಯಾಗ ಕೋಳಿ ಮರಿದ್ರ ನಾಲ್ಕು ಕಾಸೂ ಕೈಗೆ ಹತ್ತಾವ, ನಾವ್ಯಾಕ ಎಣ್ಣಿಪಣ್ಣಿಹೊಡ್ದು ಸಾಲ ಮಾಡ್ಕೋಳ್ಳಾಣ, ಅಲ್ದ ಹೊಲಗಳಿಗ್ಯಾಕೆ ವಿಷಾಉಣ್ಸಬೇಕ್ರಿ?’ ಎನ್ನುವ ಈ ಮುಗ್ಧ ದಂಪತಿಗಳ ಮತಿನ ಹಿಂದೆ ಎಂಥ ಉದಾತ್ತ ಚಿಂತನೆ ಅಡಗಿದೆ ಅಲ್ಲವೇ. ಅಂದಹಾಗೆ ಯವ ವಿಶ್ವವಿದ್ಯಾಲಯಗಳೂ ಗೌಡರ ಕುಟುಂಬಕ್ಕೆ ಈ ಕೋಳಿ ಪಾಠ ಕಲಿಸಿ ಕೊಟ್ಟಿಲ್ಲ.
ಪರಿಸರದಲ್ಲಿ ಇಂತಹ ಅನೇಕ ಸಹಜ ಹಾಗೂ ಕೃತಕ ನೈಸರ್ಗಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಇತ್ತೀಚಿಗೆ ಬಂದ ಕೃಷಿಯಲ್ಲಿನ ವಿಷಕಾರಿ ಚಟುವಟಿಕೆಗಳು ಈ ಸಹಜ ಪ್ರಕ್ರಿಯೆಗೆ ಮುಳುವಾಗಿವೆ. ಅದರ ಜೊತೆಗೆ ಕೃಷಿ ಸಮತೋಲನ ತಪ್ಪಿದೆ. ಅಂದ ಹಾಗೆ
ಈ ಮೇಲಿನ ಎರಡೂ ಪದ್ಧತಿಗಳು ಸಹಜ ಕೃಷಿ ವಿಧಾನಗಳು ಜೊತೆಗೆ ಬಂಡವಾಳ ಬಯಸದ ಕೃಷಿಗಳೂ ಆಗಿವೆ

ಕಾಮೆಂಟ್‌ಗಳಿಲ್ಲ: