ಸೋಮವಾರ, ಫೆಬ್ರವರಿ 1, 2016

ಸಾವಿನ ಬಾಗಿಲಲ್ಲಿ ಇಣುಕುತ್ತ…


-ಡಾ. ಅನಸೂಯ ಕಾಂಬಳೆ
kamble
ನಾನು ಪಿ.ಯು.ಸಿ ಓದಲು ಹಾರೂಗೇರಿಯ ಎಚ್.ವಿ.ಎಚ್ ಕಾಲೇಜಿಗೆ ಸೇರಿದ್ದೆ. ಬಸ್ ಪಾಸ್ ತೆಗೆಸಿ ಓಡಾಡುತ್ತಿದ್ದುದರಿಂದ ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡಲು ಸಾಧ್ಯವಾಗುತ್ತಿತ್ತು. (ಯಾಕೆ ಎನ್ನುವುದು ಮುಂದಿನ ಭಾಗದಲ್ಲಿಗೆ). ಇದರಿಂದಾಗಿ ರಕ್ತಹೀನತೆಯಿಂದ ಬಳಲುತ್ತಿದ್ದೆ. ಮುಂದೆ ಆರೋಗ್ಯ ಸಮಸ್ಯೆ ತೀವ್ರವಾಗಿ ವಿಲ್ಬಣಿಸಿತು. ನಾನು ತೀರ ಹತಾಸೆಯಿಂದ “ನಂಗೆ ಈ ನೋವು ತಡೆಯೋಕಾಗಲ್ಲ… ನನಗಿನ್ನು ಸಾವು ಬರಲಿ” ಎಂದು ನನ್ನ ತಾಯಿಯ ಮುಂದೆ ಹೇಳಿದೆ. ಆಗ ಅವ್ವ ದುಖಃದಿಂದ ‘ನೀನು ಇಷ್ಟು ದೊಡ್ಡವಳಾದ ಮೇಲೆ ಸಾಯೋದು ಬ್ಯಾಡ; ನಿನ್ನ ತೂಕದಷ್ಟು ರೊಕ್ಕ ಹಾಕಿ ನಿನ್ನ ಬದುಕಿಸಿಕೊಂಡಿದ್ದೇವೆ’ ಎಂದಳು. ನಾನು ಕುತೂಹಲ ತಡೆಯದೆ ಯಾಕೆ ಬದುಕಿಸಿಕೊಂಡೆ, ಏನಾಗಿತ್ತು ನನಗೆ ಎಂದೆ.
ಅವ್ವ ನನ್ನನ್ನು ಹೆತ್ತಾಗ ಅವಳಿಗೆ ಕೇವಲ ಹದಿಮೂರು ವರ್ಷ. ಹೆರಿಗೆ ಸಮಯದಲ್ಲಿ ತನಗೆ ಏನಾಗುತ್ತಿದೆ ಎಂಬುದೇ ತಿಳಿಯುತ್ತಿರಲಿಲ್ಲವಂತೆ. ಏನಾಗುತ್ತಿದೆ ಎಂದು ಕೇಳಿದಾಗ ತನಗೆ ಇಲ್ಲಿ… ಇಲ್ಲಿ… ಇಲ್ಲಿ ನೋಯುತ್ತಿದೆ ಎಂದು ಬೆನ್ನು, ತೊಡೆ, ಹೊಟ್ಟೆ ತೋರಿಸುತ್ತಿದ್ದಳಂತೆ. ನಾನು ಹುಟ್ಟಿದ ಮೇಲೆ ನನಗೂ ಅವ್ವನಿಗೂ ಇಬ್ಬರಿಗೂ ಆರೋಗ್ಯ ಸರಿ ಇಲ್ಲದಿದ್ದರಿಂದ ದನಹಟ್ಟಿಯ ದವಾಖಾನೆಗೆ ಕರೆದೊಯ್ದರಂತೆ. ನನಗೆ ಗಂಟಲಲ್ಲಿ ಗುಳ್ಳೆಗಳೆದ್ದು, ಲಿವರ್ ತೊಂದರೆಯೂ ಇತ್ತು. ಅವ್ವನ ಮೊಲೆಗೆ ಹಾಲು ಬರದ್ದರಿಂದ ನಮ್ಮ ದೊಡ್ಡವ್ವ ಆಡಿನ ಹಾಲನ್ನು ಹಿಂಡಿ ಹತ್ತಿ ಅರಳಿ ಅದ್ದಿ ಅದರಿಂದ ನನಗೆ ಹಾಲು ಕುಡಿಸುತ್ತಿದ್ದಳಂತೆ.
ಒಂದು ತಿಂಗಳ ನಂತರ ಮತ್ತೆ ನನಗೆ ತೀವ್ರವಾಗಿ ಆರೋಗ್ಯ ಕೆಟ್ಟು ನಿತ್ರಾಣವಾಗಿ ಒಂದು ದಿನ ಉಸಿರಾಡಿಸುವುದನ್ನು ನಿಲ್ಲಿಸಿದೆ. ನನ್ನನ್ನು ಮಣ್ಣುಮಾಡಲು, ಗೋರಿ ತೆಗೆಯಲು ಗುದ್ದಲಿ, ಸಲಿಕೆ, ಬುಟ್ಟಿ ತೆಗೆದುಕೊಂಡು ಹೋಗಲು ನಾಲ್ಕಾರು ಜನ ಸಜ್ಜಾದರು. ನನ್ನ ಅಜ್ಜ (ತಾಯಿಯ ತಂದೆ) ‘ಇಷ್ಟು ಚಂದದ ಕೂಸನ್ನು ಹ್ಯಾಂಗ ಮಣ್ಣಾಗ ಹಾಕಲಿ’ ಎಂದು ಸ್ವಲ್ಪ ಹೊತ್ತು ಅಂಗಳದಲ್ಲಿ ಕುಸಿದು ಕುಳಿತನಂತೆ. ಎಲ್ಲರೂ ಅಜ್ಜನನ್ನು ಸಮಾಧಾನ ಪಡಿಸತೊಡಗಿದರು. ನನ್ನನ್ನು ಎಲ್ಲರೂ ಮುಟ್ಟಿ ಮುಟ್ಟಿ ಅಳುತ್ತಿದ್ದಾಗ ಮತ್ತೆ ನನಗೆ ಸಣ್ಣಗೆ ಉಸಿರಾಟ ಪ್ರಾರಂಭವಾಗಿ ಕೈ, ಕಾಲು ಆಡಿಸಲು ಪ್ರಾರಂಭಿಸಿದೆನಂತೆ.
‘ಏ…. ಹುಡುಗಿ ಇನ್ನ ಜೀವಂತ ಐತಿ’ ಎಂದು ದೊಡ್ಡವ್ವ ಗಾಬರಿಯಿಂದ ಜೋರಾಗಿ ಹೇಳಿದಾಗ ನಾ ‘ಹೂಂ…’ ಅಂತ ಏನೋ ಮಾತಾಡಿದೆನಂತೆ. ಆಗ ಎಲ್ಲರೂ ಕಂಗಾಲಾಗಿ ಒಂದ ತಿಂಗಳ್ನ್ಯಾಗ ಹ್ಯಾಂಗ ಮಾತಾಡತ್ತೈತಿ… ಇದಕ್ಕ ಏನೋ ಆಗೇತಿ… ದೇವರ ಪ್ರಸಾದ ಹಚ್ಚರಿ’ ಎಂದು ಹೇಳಿದಾಗ ನನ್ನ ಹಣೆಗೆ ದೇವರ ಮುಂದಿನ ಬೂದಿ-ಭಂಡಾರ ಹಚ್ಚಿದರು.
ಹೀಗೆ ಹುಟ್ಟಿದಾಗಲೇ ಸಾವಿನ ಮನೆಗೆ ಹೋಗಿ ಬಂದ ಜೀವ ಆಗಾಗ ಅನಾರೋಗ್ಯದಿಂದ ನರಳುತ್ತಲೇ ಇತ್ತು. ಹಳ್ಳಿಗಳಲ್ಲಿ ಎಂ.ಬಿ.ಬಿ.ಎಸ್/ಎಂ.ಡಿ ಪದವಿ ಪಡೆದ ಡಾಕ್ಟರ್‍ಗಳಾರೂ ಇರುವುದಿಲ್ಲ. ಡಾಕ್ಟರ್ ಹತ್ತಿರ ಕಂಪೌಡರ್ ಅಥವಾ ಸಹಾಯಕರಾಗಿ ಸೇವೆ ಸಲ್ಲಿಸಿದವರೇ ಹಳ್ಳಿಗಳಲ್ಲಿ ದೊಡ್ಡ ಡಾಕ್ಟರು. ಹಳ್ಳಿಯ ಜನರು ನಗರದ ಆಸ್ಪತ್ರೆಗಳಿಗೆ ಹೋಗಿ ತೋರಿಸಿಕೊಳ್ಳುವಷ್ಟು ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ನನ್ನ ತಂದೆಗೆ ನಾನು ಹುಟ್ಟಿದಾಗ ಕೇವಲ ಮಾಸಿಕ ಎಂಬತ್ತು ರೂಪಾಯಿ ಸಂಬಳ ಬರುತ್ತಿತ್ತು. ನನ್ನನ್ನು ಪರಿಣತ ವೈದ್ಯರಲ್ಲಿಗೆ ತೋರಿಸುವಷ್ಟು ಸಬಲರಾಗಿರಲಿಲ್ಲ. ಪರಮಾನಂದವಾಡಿಯಲ್ಲಿ ಡಾಕ್ಟರ್ ಕುಮಾರ ಅಂತ ಅಪ್ಪನ ಸ್ನೇಹಿತರು ಆಸ್ಪತ್ರೆ ಇಟ್ಟುಕೊಂಡಿದ್ದರು. ಅಪ್ಪ ನಮ್ಮ ಜನರ ಆರೋಗ್ಯ ಕೆಟ್ಟಾಗ ಅವರಲ್ಲಿಯೇ ಕರೆದುಕೊಂಡು ಹೋಗಿ ತೋರಿಸುತ್ತಿದ್ದರು. ನನ್ನನ್ನು ಅವರ ಹತ್ತಿರವೇ ತೋರಿಸುತ್ತಿದ್ದರು.
ನನಗೆ ಇನ್ನೂ ಒಂದು ವರ್ಷ ಆಗಿರಲಿಲ್ಲ. ಮತ್ತೊಮ್ಮೆ ನನ್ನ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಅವ್ವ-ಅಪ್ಪ ನನ್ನನ್ನು ಡಾಕ್ಟರ್ ಕುಮಾರ ಅವರ ಹತ್ತಿರ ಕರೆದುಕೊಂಡು ಹೋದರು. ಮರಳಿ ಮನೆಗೆ ಬರುವಾಗ ನಡು ರಸ್ತೆಯಲ್ಲಿ ನನಗೆ ಮತ್ತೆ ಪ್ರಜ್ಞೆ ತಪ್ಪಿತ್ತು. ದಾರಿಯಲ್ಲಿ ಹೋಗುತ್ತಿರುವ ಜನರೆಲ್ಲ ಸೇರಿ ಕಿವಿಯಲ್ಲಿ ಊದಿ, ಕಿರು ಬೆರಳು ಗಟ್ಟಿಯಾಗಿ ಹಿಡಿದು ತಿಕ್ಕಿದರು. ಮತ್ತೆ ಉಸಿರಾಡಿದೆ. ಅವ್ವ-ಅಪ್ಪ ಕುಮಾರ ಡಾಕ್ಟರ್ ಹತ್ತಿರ ಮರಳಿ ಕರೆದೊಯ್ದರು. ರಾತ್ರಿ ಮತ್ತೆ ಏನಾದರೂ ಆದರೆ ನಿಮಗೆ ಬರಲು ಕಷ್ಟವಾಗುತ್ತದೆ ಇಲ್ಲೇ ಉಳಿದುಕೊಳ್ಳಿ ಎಂದರು.
ಆದರೆ ಆ ದವಾಖಾನೆಯಲ್ಲಿ ಕೇವಲ ಎರಡೇ ರೂಮುಗಳಿದ್ದವು. ಅದರಲ್ಲಿ ಒಂದು ಒಳಗೆ ರೋಗಿಗಳನ್ನು ನೋಡಲು ಇರುವ ರೂಮಾದರೆ ಇನ್ನೊಂದು ರೋಗಿಗಳು ಚಿಕಿತ್ಸೆಗಾಗಿ ಕಾಯ್ದು ಕುಳಿತುಕೊಳ್ಳಲು ಇರುವ ರೂಮು. ಇದರಿಂದಾಗಿ ಅಪ್ಪ-ಅವ್ವ ಅಪ್ಪನ ಸರ್ಕಾರಿ ಶಾಲೆಯಲ್ಲಿ ರಾತ್ರಿ ಕಳೆಯಲು ನಿರ್ಧರಿಸಿದರು. ಹಾಸಲು-ಹೊದೆಯಲು ಏನು ಇರಲಿಲ್ಲ. ಅವ್ವ ನನ್ನನ್ನು ತನ್ನ ಸೀರೆ ಸೆರಗಲ್ಲಿ ಸುತ್ತಿಕೊಂಡು ಮಗು ಬೆಚ್ಚಗಿರಲಿ ಅಂತ ಹೊಟ್ಟೆಗೆ ಆನಿಸಿಕೊಂಡು ಗಟ್ಟಿಯಾಗಿ ಹಿಡಿದುಕೊಂಡು ಕುಳಿತು ಇಡೀ ರಾತ್ರಿ ಶಾಲೆಯಲ್ಲಿ ಕಳೆದರು. ಬೆಳಗ್ಗೆ ಡಾಕ್ಟರಿಗೆ ತೋರಿಸಿಕೊಂಡು ಮನೆಗೆ ಬಂದರು.
ಹೀಗೆ ನನ್ನ ಆರೋಗ್ಯ ಆಗಾಗ ಕೆಡುತ್ತಲೇ ಇತು. ಮತ್ತೊಮ್ಮೆ ತೀವ್ರ ಆರೋಗ್ಯ ಕೆಟ್ಟಾಗ ಕುಡಚಿಯ ಕದ್ದು ದವಾಖಾನೆಯಲ್ಲಿ ಅಡ್ಮಿಟ್ ಮಾಡಿದರು. ಮೂರು ತಾಸಿಗೆ ಒಂದು ಇಂಜೆಕ್ಷನ್ ಕೊಡುತ್ತಿದ್ದರು. ಹೀಗೆ ಅನಾರೋಗ್ಯದ ಮಧ್ಯೆಯೇ ನನ್ನನ್ನು ಬೆಳೆಸಿದ್ದರಿಂದ ನನಗೆ ಏನಾದರು ಆದರೆ ಅವ್ವ-ಅಪ್ಪ ದಿಗಿಲುಗೊಳ್ಳುತ್ತಿದ್ದರು. ನನ್ನ ಅಪ್ಪ ಶಿಕ್ಷಣ ಪಡೆದು ನೌಕರಿ ಇದ್ದುದರಿಂದ ಇಷ್ಟಾದರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗಿತ್ತು. ನಮ್ಮ ಜನ ಆನಾರೋಗ್ಯ ಪೀಡಿತರಾದಾಗ ಬಹಳ ನರಳುತ್ತಿದ್ದರು. ವಯಸ್ಸಾದವರಂತೂ ಸಾವಿನ ದಿನ ಎನಿಸುತ್ತಾ ಕಳೆಯಬೇಕಿತ್ತು. ನನ್ನ ಬಾಲ್ಯದಲ್ಲಿ ನಡೆದ ಘಟನೆಯೊಂದು ನನ್ನ ಮನಸ್ಸಲ್ಲಿ ಹಾಗೇ ಅಚ್ಚಳಿಯದೆ ಉಳಿದಿದೆ.
ನಮ್ಮ ಓಣಿಯಲ್ಲಿ ಅತ್ಯಂತ ಹಿರಿಯರೆಂದರೆ ಯಮನಪ್ಪ ಅಂತ ಇದ್ದರು. ಅವರನ್ನು ಎಲ್ಲರೂ ಗೌರವದಿಂದ ಯಮನಪ್ಪಣ್ಣಾ ಅಂತ ಕರೆಯುತ್ತಿದ್ದರು. ಅವರ ದೂರದ ಸಂಬಂಧಿ ಒಬ್ಬಳು ತೀವ್ರ ಅನಾರೋಗ್ಯದಿಂದ ತನ್ನ ಊರಾದ ಕೋಳಿಗುಡ್ಡದಿಂದ ಅವರ ಮನೆಗೆ ಬಂದಿದ್ದಳು. ಅವಳಿಗೆ ಅರವತ್ತರ ಸಮೀಪ ವಯಸ್ಸಿರಬಹುದೆಂದು ತೋರುತ್ತದೆ. ಅವಳನ್ನು ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವಷ್ಟು ಯಮನಪ್ಪಣ್ಣಾ ಆರ್ಥಿಕವಾಗಿ ಸ್ಥಿತಿವಂತನಾಗಿರಲಿಲ್ಲ. ಮಹಾರಾಷ್ಟ್ರದ ಮೀರಜ ದವಾಖಾನೆಗಳ ನಗರ ಎಂದೇ ಪ್ರಸಿದ್ದಿ ಪಡೆದದ್ದು. ಅದು ನಮಗೆ ತೀವ್ರ ಹತ್ತಿರದಲ್ಲಿರುವ ನಗರ. ಅಲ್ಲಿ ಮಶಿನ್ ಹಾಸ್ಪೀಟಲ್ ಅಂತ ತುಂಬಾ ಫೇಮಸ್ಸು. ಈಗಲೂ ಇದೆ. ಆದರೆ ಅಲ್ಲಿಗೆ ಹೋದವರು ಜೀವಂತ ಮರಳಿ ಬರುವುದಿಲ್ಲ ಅಂತ ನಮ್ಮ ಜನರ ನಂಬಿಕೆ ಆಗಿತ್ತು. ಹೀಗಾಗಿ ಆ ಹಾಸ್ಪೀಟಲ್‍ಗೆ ಕರೆದುಕೊಂಡು ಹೋಗಲು ಹೆದರುತ್ತಿದ್ದರು. ತಾವು ಕೊನೆ ಕ್ಷಣದಲ್ಲಿ ಅಲ್ಲಿಗೆ ಕರೆದುಕೊಂಡು ಹೋಗಿರುತ್ತೇವೆಂಬ ಬಗ್ಗೆ ಅವರಿಗೆ ಅರಿವಿರುತ್ತಿರಲಿಲ್ಲ.
ಹೀಗೆ ಅಣ್ಣನೆಂದು ನಂಬಿ ಬಂದಿದ್ದ ಆ ಹೆಣ್ಣು ಮಗಳನ್ನು ಒಳಗೆ ಬಾಗಿಲಿಗೆ ಎದುರಾಗಿ ಒಂದು ಚಾಪೆ ಹಾಸಿ ಮಲಗಿಸಿದ್ದರು. ಅವಳ ಹೊಟ್ಟೆ ದಿನದಿಂದ ದಿನಕ್ಕೆ ಉಬ್ಬುತ್ತಲೇ ಇತ್ತು. ಅವಳು ಓ ಎಂದು ಒದರುತ್ತ ನರಳುತ್ತಿದ್ದಳು. ಕಂಡ ಕಂಡ ದೇವರಿಗೆ ಕೈ ಮುಗಿದ ಸಾಯಿಸಲು ಕೇಳುತ್ತಿದ್ದಳು. ಓಣಿಯ ಬಂಧುಗಳೆಲ್ಲ ದಿನಾ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದರು. ದೇವರು ಅವಳನ್ನು ಬೇಗ ಕರೆದುಕೊಂಡು ಒಳ್ಳೆಯದು ಮಾಡಲಿ ಎಂದು ಹಾರೈಸುತ್ತಿದ್ದರು. ಕೆಲವರು “ಈ ಪರಿ ನೆಳ್ಳುದ ನೋಡಕೊಂತ ಹ್ಯಾಂಗ ಕುಂತೈರಿ… ಮಿರಜಕ್ಕಾದರೂ ಒಯ್ಯಿರಿ” ಎಂದು ಸಲಹೆ ನೀಡುತ್ತಿದ್ದರು. “ಅವಳಿಗೆ ವಯಸ್ಸ್ ಆಗೇತಿ…. ಇನ್ನೆಷ್ಟ ದಿನಾ ಬದಕ್ತಾಳು? ಸಾಯೋ ಮುಂದ ಮಕ್ಕಳಿಗೆ ಸಾಲಾ ಮಾಡಿ ಹೋಗೋದು ಬ್ಯಾಡ. ನಮ್ಮ ಕಣ್ಮುಂದ ಜೀಂವಾ ಬಿಡಲಿ ಇರೂತನಾ ಏನ್ ತಿಂತಾಳು ತಿನ್ನಲ್ಲಿ.” ಅಂತಾ ಯಮನಪ್ಪಣ್ಣಾ ಹೇಳುತ್ತಿದ್ದ. ಆ ಮಾತೂ ಜನರಿಗೆ ಖರೆ ಅನಿಸ್ತಿತ್ತು. ಸೈಕಲ್ ಮ್ಯಾಲ ಹಳ್ಳಿ ಹಳ್ಳಿ ತಿರುಗ್ಯಾಡೊ ಡಾಕ್ಟರ್ ಎರಡು ದಿನಕ್ಕೊಮ್ಮೆ ಬಂದು ನೋವು ಕಡಿವೆ ಆಗುವ ಇಂಜೆಕ್ಷನ್ ಮಾಡಿ ಗುಳಗಿ (ಮಾತ್ರೆ) ಕೊಟ್ಟು ಹೋಗುತ್ತಿದ್ದ.
ನಾನು ಶಾಲೆಗೆ ಹೋಗುವ ಮೊದಲು ಒಂದು ಸಲ, ಶಾಲೆ ಬಿಟ್ಟು ಬಂದ ಮೇಲೆ ಸಂಜೆ ಒಂದು ಸಲ ಅವಳನ್ನು ನೋಡಲು ಓಡೋಡಿ ಹೋಗುತ್ತಿದ್ದೆ. ನಾನು ಶಾಲೆಯಲ್ಲಿ ಕುಳಿತಾಗಲೂ ಅವಳು ಸತ್ತಿದ್ದಾಳೋ ಇಲ್ಲಾ ಬದುಕಿದ್ದಾಳೋ ಎಂದು ಯೋಚಿಸುತ್ತ ಕುಳಿತಿರುತ್ತಿದ್ದೆ. ಮುಂದೆ ನೋವು ತಡೆಯಲಾರದೆ ಅವಳು ಊಟ ಮಾಡುವುದನ್ನು ನಿಲ್ಲಿಸಿದಳು. ಜನರೆಲ್ಲಾ “ ಯಮನಪ್ಪಣ್ಣಾ ದವಾಖಾನಿಗೆ ಒಯ್ಯಲಿಲ್ಲಾ. ಅಣ್ಣ ಉಳಿಸಿಕೋತಾನು ಅಂತ ನಂಬಿ ಬಂದಾಳು. ಆದಕ್ಕ ಆಕಿ ಸಿಟ್ಟಾಗಿ ಊಟಾ ಬಿಟ್ಟು ಸಾಯೋ ನಿರ್ಧಾರ ಮಾಡ್ಯಾಳ. ಬಡವರ ಜೀವನಾ ಅಂದ್ರ ಬಾಳ ಕೆಟ್ಟದ್ದು ಅಂತ ಮರಗತೊಡಗಿದರು.
ಅವಳು ಊಟ ಬಿಟ್ಟರೂ ಅವಳ ಹೊಟ್ಟೆ ಊದಿಕೊಳ್ಳುವುದು ನಿಲ್ಲಲಿಲ್ಲ. ನರಳಿ ನರಳಿ ಹದಿನೈದು ದಿನಗಳ ನಂತರ ಕಣ್ಮುಚ್ಚಿದಳು. ಎಲ್ಲರೂ ನಿಟ್ಟುಸಿರು ಬಿಟ್ಟರು. ಅವಳು ಸತ್ತ ದಿನ ಸೋಮವಾರವಾಗಿತ್ತು. ನರು “ಬಾಳ ಛೋಲೋ ಆತು. ಶ್ರಾವಣ ಸ್ವಾಮಾರ ಸತ್ತು ಶಿವನ ಪಾದ ಸೇರಿದಳು” ಅಂದರು. ಅನಾರೋಗ್ಯದಿಂದ ನರಳುತ್ತಿದ್ದರೂ ಸಾಲಮಾಡುವುದಕ್ಕಿಂತ ಅನಿವಾರ್ಯವಾಗಿ ಸಾವನ್ನು ಬರಮಾಡಿಕೊಳ್ಳುವ ನನ್ನ ಜನರ ಈ ಸಲ್ಲೇಖನಗಳು ನನ್ನನ್ನು ಕಾಡುತ್ತಲೇ ಇರುತ್ತವೆ.
ಹೀಗೆ ಮನ ಕಲಕುವ ಸಾವಿನ ಕುರಿತು ಯೋಚಿಸುವಾಗಲೆಲ್ಲ ನಾನು ಅಂದೇ ಸತ್ತಿದ್ದರೆ!…. ನಾನು ಬರೆದ ಕವಿತೆಗಳಲ್ಲಿ ಯಾವುದಾದರೊಂದು ಜೀವಂತ ಸಾಲು ಇದ್ದರೆ ಅದು ನನ್ನೊಂದಿಗೇ ಸತ್ತು ಹೋಗುತ್ತಿತ್ತಲ್ಲಾ ಅಂತ ಅನಿಸುತ್ತದೆ. ಆದರೂ ಶಾಶ್ವತವಾದ ಸಾವಿನ ಬಗ್ಗೆ ಭಯವಿಲ್ಲ; ಮೋಹವಿದೆ.

ಕಾಮೆಂಟ್‌ಗಳಿಲ್ಲ: