ಬುಧವಾರ, ಆಗಸ್ಟ್ 26, 2015

ಗಾಂಧಿ, ಅಂಬೇಡ್ಕರ್, ಲೋಹಿಯಾ, ಕಾರ್ಲ್‍ಮಾಕ್ರ್ಸ್ ಜೋಕಾಲಿ



                                            
ದೇವನೂರ ಮಹಾದೇವ


ಸೌಜನ್ಯ: www.nammabanavasi.com

(ಸಮಾನ ಮನಸ್ಕ ಸಾಮಾಜಿಕ ಕಾರ್ಯಕರ್ತರ ಚಿಂತನಾ ಸಮಾವೇಶ  ಮಾತುಗಳ ಬರಹ ರೂಪ)

ಇಲ್ಲಾಗುತ್ತಿರುವ ಬೆಳವಣಿಗೆಗಳನ್ನು ಸುಮ್ಮನೆ ಗಮನಿಸಬೇಕು ಅಂದುಕೊಂಡಿದ್ದೆ, ಆದರೆ ಮೌನಕ್ಕೆ ನಾನಾರ್ಥ. ಹಾಗಾಗಿ ಒಂದಿಷ್ಟು ಮಾತು, ಮಾತುಗಳಲ್ಲ ತೊಳಲಾಟ.

ನಾನೀಗ ಮರೆಯಕ್ಕಾಗದೆ ಒದ್ದಾಡ್ತ ಇರೋದು- ಅದು ಬರ್ಮಾ ದೇಶದ ಉಗ್ರಗಾಮಿ ಬೌದ್ಧರಿಗೆ ರೋಹಿಂಗ್ಯಾ ಮುಸ್ಲಿಮ್ ಜನಾಂಗದ ಬಗ್ಗೆ ಇರುವ ದ್ವೇಷದ ಕಿಚ್ಚಿನ ಆಳ ಅಗಲ ತಿಳಿಯದೆ ಒದ್ದಾಡುತ್ತಿದ್ದೇನೆ. ದ್ವೇಷ ಈಗಲೂ ಬರ್ಮಾದಲ್ಲಿ ಧಗಧಗಿಸುತ್ತಿದೆ. 2012ರಲ್ಲಿ ಬೌದ್ಧ ಮಹಿಳೆಯ ಮೇಲೆ ಮೂವರು ರೋಹಿಂಗ್ಯಾ ಮುಸ್ಲಿಮ್ ಯುವಕರು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂಬ ಗಾಳಿಸುದ್ದಿಗೆ ವಾಟ್ಸಪ್, ಫೇಸ್ಬುಕ್, ಕರಪತ್ರಗಳು ಉಪ್ಪುಖಾರ ಸುರಿದವು. ‘ವಿರಂಟುನಂಥ ಉಗ್ರ ಬೌದ್ಧ ಸನ್ಯಾಸಿಗಳು ಪ್ರಚೋದನಕಾರಿ ಭಾಷಣ ಮಾಡಿ ಅದು ಉಲ್ಬಣವಾಗಿ ನಂತರ ಭುಗಿಲೆದ್ದ ಜನಾಂಗೀಯ ಹಿಂಸೆಯಲ್ಲಿ ಸುಮಾರು ಐದು ಸಾವಿರ ರೋಹಿಂಗ್ಯಾ ಮುಸ್ಲಿಮರು, ಕೆಲ ಬೌದ್ಧರು ಜೀವ ಕಳೆದುಕೊಂಡರು. ಲಕ್ಷಾಂತರ ಮುಸ್ಲಿಮರು ದೇಶ ತೊರೆದರು. ಇಂದಿಗೂ ಸುಮಾರು ಎಂಟು ಸಾವಿರದಷ್ಟು ರೋಹಿಂಗ್ಯಾ ಮುಸ್ಲಿಮರು, ಬೇರೆ ದೇಶಗಳಲ್ಲಿ ಪ್ರವೇಶ ಸಿಗದ ಕಾರಣವಾಗಿ ಸಮುದ್ರದ ಮಧ್ಯೆ ಅನ್ನ ಆಹಾರಕ್ಕೆ ಹಾತೊರೆಯುತ್ತ ದೇವರ ಮೊರೆ ಹೋಗಿದ್ದಾರೆ. ದಕ್ಷಿಣ ಥಾಯ್ಲೆಂಡ್ನಲ್ಲಿ ಅನಧಿಕೃತವಾಗಿ ದೇಶ ಪ್ರವೇಶಿಸಿದವರನ್ನು ಕೊಂದು ಹೂಳಲಾಗಿದೆ ಎಂದು ಶಂಕಿಸಿರುವ ಕೆಲವು ಸಾಮೂಹಿಕ ಸಮಾಧಿಗಳೂ ಪತ್ತೆಯಾಗಿವೆ. ಹಾಗೂ ಇದಕ್ಕೆ ಒಳ ಕಾರಣ- ಅಮೆರಿಕಾ ಮತ್ತು ಚೈನಾಗಳು ಒಬ್ಬರಿಗಿಂತ ಇನ್ನೊಬ್ಬರು ಪ್ರಬಲರಾಗಲು ಬಡದೇಶಗಳನ್ನು ತಿಂದು ಮುಗಿಸುವ ಆಟದ ಭಾಗ ಇದು ಎಂಬ ವಿಶ್ಲೇಷಣೆಯೂ ಇದೆ.

ಇದೆಲ್ಲವನ್ನೂ ಅರ್ಥ ಮಾಡಿಕೊಳ್ಳುವುದು ಹೇಗೆ? ನನ್ನನ್ನು ಮತ್ತೂ ಸುಸ್ತು ಮಾಡಿದ್ದು ಎಂದರೆಬುದ್ಧನ ಉಪಾಸಕರು ಅನ್ನಿಸಿಕೊಂಡವರು ಅದರಲ್ಲೂ ಬೌದ್ಧ ಸನ್ಯಾಸಿಗಳು- ಬುದ್ಧನ ಕಾರುಣ್ಯ, ಎಚ್ಚರ, ಕ್ಷಣ-ಇವುಗಳನ್ನು ದಿನಾ ಜಪಿಸುವವರು ಇದನ್ನೆಲ್ಲಾ ಹೇಗೆ ಮಾಡಿದರು?

ಈಗ ನಾವೂ ನಮ್ಮನ್ನು ನೋಡಿಕೊಳ್ಳಬೇಕಾಗಿದೆ, ನಾವು ನಂಬಿಕೊಂಡ ಸಿದ್ಧಾಂತ, ಆಲೋಚನಾ ಪಥ, ಪಂಥ, ಧರ್ಮ- ಅದು ಎಷ್ಟೇ ಮಹೋನ್ನತ ಇದ್ದರೂಸಕಲೆಂಟು ರೋಗಕ್ಕೂ ಸಾರಾಯಿ ಮದ್ದುಲುಎಂಬಂತೆ ಅದು ನಮ್ಮೊಳಗೆ ಸರ್ವಸ್ವವಾಗಿ ಇದ್ದಲ್ಲಿ, ತನ್ನಂತೆ ಅಲ್ಲದ ಇನ್ನೊಂದು ಇರಬಾರದು ಎಂಬ ಅಸಹನೆಗೆ ಇದು ಕಾರಣವಾಗಬಹುದೆ? ಬರ್ಮಾದ ಬೌದ್ಧರ ಮುಸ್ಲಿಮ್ ಅಸಹನೆಗೂ ಹೀಗೇನೊ ಕಾರಣ ಇದ್ದಿರಬಹುದೇ? ಈಗ ನಾವು ನಮ್ಮ ಕಲಿತ ಬುದ್ಧಿಯನ್ನೆಲ್ಲಾ ಕೈಬಿಟ್ಟು- ಇದನ್ನು ನೋಡಬೇಕಾಗಿದೆ. ಯಾಕೆಂದರೆ, ಇಂದು ನೂರ್ ಮತ್ತು ಸಿರಿಮನೆ ಜಂಟಿ ಪ್ರಯತ್ನದಿಂದಾಗಿ ಸಭೆ ಇಲ್ಲಾಗ್ತ ಇದೆ. ನಾಳೆ ನೂರ್ ಒಂಟಿ ಸಭೆ, ಸಿರಿಮನೆ ಒಂಟಿ ಸಭೆ ಜರುಗುವುದು ಅಸಾಧ್ಯ ಎಂದು ಹೇಳುವ ಧೈರ್ಯ ನಮಗಿಲ್ಲ. ಹಾಗೆಯೇ ನಾಳಿದ್ದು ಅವರ ಸಂತಾನಗಳದ್ದೂ ಆಗಬಹುದು. ಹಾಗಾಗಿ ಐಕ್ಯತೆ ಹೇಳಿದರೂ ಅದರ ಸೆರಗಿನೊಳಗೇನೆ ಒಡಕಿನ ಬೀಜಗಳು ಇರಬಹುದು. ಇದು, ನಮ್ಮ ಒಳಗನ್ನು ನಾವು ನೋಡಿಕೊಳ್ಳಬೇಕಾದ ಕಾಲ.

ದಿಕ್ಕೆಟ್ಟಂತಾಗುತ್ತಿದೆ, ಈಗ ಒಂದು ಚಂದಮಾಮ ಕತೆ, ಇನ್ನೊಂದು ಕಲ್ಪನೆ ಮುಂದಿಡುವೆ. ಕತೆಒಂದೂರಲ್ಲಿ ಒಂದು ಹಳ್ಳ ಇತ್ತು. ಹಳ್ಳವನ್ನು ದಾಟವುದಕ್ಕೆ ದಡಕ್ಕೂ ದಡಕ್ಕೂ ಒಂದು ಚಪ್ಪಡಿ ಕಲ್ಲಿನಂತಿದ್ದ ಕಲ್ಲಿತ್ತು. ಜನರು ಅದನ್ನು ತುಳ್ಕಂಡು ದಡದಿಂದ ದಡ, ದಡದಿಂದ ದಡ ದಾಟ್ತಿದ್ದರು. ಇದು ಮಾಮೂಲಿ. ಹೀಗೆ ಒಂದಿನ ಒಬ್ಬ ಚಪ್ಪಡಿ ಕಲ್ಲನ್ನು ದಾಟಿದ ಮೇಲೆ ತಿರುಗಿ ನೋಡ್ತನೆ- ಅವನಿಗೆ ಕಲ್ಲಲ್ಲಿ ಕೆತ್ತಿದ್ದ ದೇವಿ ವಿಗ್ರಹ ಕಂಡುಬಿಡುತ್ತದೆ. ಅವ ಭಯಭೀತನಾಗುತ್ತಾನೆ. ತುಳಿದದ್ದಕ್ಕೆ ತಪ್ಪಾಯ್ತು ಅಂತ ದಾಟು ಕಲ್ಲಿಗೆ ಶರಣು ಮಾಡ್ತಾನೆ. ಶರಣು ಮಾಡಿ ಮುಂದೆ ಹೋಗಲು ತಿರುಗಿದಾಗ ಯಾರೋ ಬಿಗಿಯಾಗಿ ಅವನ ಮೊಣಕಾಲು ಹಿಡಿದು ನಿಲ್ಲಿಸಿದಂತಾಗಿ ಮುಂದಕ್ಕೆ ಚಲಿಸಲಾಗದೆ ತಿರುಗಿ ನೋಡ್ತಾನೆ- ನೋಡಿದರೆ ಕಲ್ಲಲ್ಲಿ ಇದ್ದ ದೇವಿ ಕಾಣಿಸಿಕೊಳ್ಳುತ್ತಾಳೆ. ಅಂತಾಳೆ- ‘ಲೋ ಮಗನೆ, ನನಗೆ ಗುಡಿ ಕಟ್ಟಿಸದೆ ಹೆಂಗೊ ತಪ್ಪಿಸಿಕೊಂಡು ಹೋಗ್ತಿಯಾ?’- ಇದು ಕತೆ.
ಇದು ನಮ್ಮ ಕತೆಯೂ ಹೌದು. ನಾವು ಅಂದುಕೊಂಡ ದೊಡ್ಡ ಸಿದ್ಧಾಂತವೋ ಮತ್ತೊಂದೋ ಮಗದೊಂದೋ ಅದರ ಮೇಲೆ ನಡೆದುಕೊಂಡು ಹೋದರೆ ನಾವು ದಾಟ್ಕೊಂಡು ಹೋಗಬಹುದು. ಅದಕ್ಕೆ ಶರಣು ಮಾಡಿ ಪೂಜ್ಯ ಮಾಡಿದರೆ ಅದಕ್ಕೆ ಗುಡಿ ಕಟ್ಟಬೇಕಾಗುತ್ತದೆ. ಅದು ರಕ್ತವನ್ನೂ ಕೇಳಬಹುದು.

ಈಗ ಕಲ್ಪನೆಗೆ ಬರುವ: ಒಂದು ಇಂಥದೇ ಸಭೆ. ಇದೇ ವೇದಿಕೆಗೆ ಬುದ್ಧನೂ ಬರಲಿ. ಬೌದ್ಧ ಮೀಮಾಂಸಕ ನಾಗಾರ್ಜುನನೂ ಬರಲಿ. ಅಕ್ಕಪಕ್ಕ ಕೂರಲಿ. ಇಬ್ಬರೂ ಮಾತಾಡಲಿ. ನಾಗಾರ್ಜುನನ ವಾಗ್ಝರಿ ಮುಂದೆ ಬುದ್ಧ ಪೆದ್ದು ಅನ್ನಿಸುವುದಿಲ್ಲವಾ? ಆದರೆ ಸಭೆ ಮುಗಿದ ಮೇಲೆ ನಾವು ಎಲ್ಲೇ ಹೋದರೂ ನಮ್ಮನ್ನು ಹಿಂಬಾಲಿಸುವುದು ಬುದ್ಧನ ಮಾತುಗಳಲ್ಲವೆ? ಹಾಗಾದರೆ ಇದರ ಲಯ ಯಾವುದು? ಇದರ ಮಾಟ ಏನು?

ಹೀಗಿರಬಹುದೆ? ಬುದ್ಧನು ಜೀವನಕ್ಕೆ ಸ್ಪಂದಿಸಿ ತಾನು ಗ್ರಹಿಸಿದ್ದಕ್ಕೆ ನುಡಿಕೊಟ್ಟನೆ? ನಾಗರ್ಜುನ ಆಲೋಚನೆಯಲ್ಲಿ ಗ್ರಹಿಸಿದ್ದನ್ನು ಸೂತ್ರೀಕರಿಸಿ ಜೀವನ ನೋಡಿದನೆ? ಅವನಿಗೆ ಅವನ ಆಲೋಚನೆಗಳಿಗೆ ತಕ್ಕಂತೆ ಜೀವನ ಕಂಡಿತೆ? ಇದು ಹೌದಾದರೆ ನಾವೇನು ಮಾಡುತ್ತಿದ್ದೇವೆ?

ಗೊತ್ತಿದೆ ನನಗೆ, ನಾನು ಕೊಂಕಣ ಸುತ್ತಿ ಮೈಲಾರಕ್ಕೆ ಬರುತ್ತಿದ್ದೇನೆ. ಕಷ್ಟ ಪಡುತ್ತಿದ್ದೇನೆ. ಗಾಂಧಿ, ಅಂಬೇಡ್ಕರ್, ಕಾರ್ಲ್ಮಾಕ್ರ್ಸ್, ಲೋಹಿಯಾ ಹೀಗೆ ಇವರ ಒಬ್ಬೊಬ್ಬರ ಹೆಸರಲ್ಲೆ ಹತ್ತಾರು ನೂರಾರು ಭಿನ್ನ ಭಿನ್ನ ಸಂತಾನ ಪಂಥಗಳು, ಸಿದ್ಧಾಂತಗಳೂ ಹುಟ್ಟಿಕೊಂಡಿವೆ. ಕೆಲವು ಕಡೆ ಕೈ ಕೈ ಮಿಲಾಯಿಸಿವೆ. ಇಂಥದರಲ್ಲಿ ನಾಲ್ವರನ್ನು ಒಟ್ಟಿಗೆ ಸೇರಿಸಿದರೆ ಇನ್ನು ಏನಪ್ಪ ಹೇಗಪ್ಪ ನಿಭಾಯಿಸುವುದು? ಸುಳಿವುಗಳನ್ನು ಹುಡುಕುತ್ತಿದ್ದೇನೆ-ನಿಮ್ಮೊಡನೆ.

ನಾವು, ಮನುಷ್ಯರ ಮೈಮೇಲೆ ಬರುವ ದೆವ್ವ, ದೇವರು ಅಂತ ಗಮನಿಸಿದರೂ ಒಂದಿಷ್ಟು ಸುಳಿವು ಸಿಗಬಹುದೇನೊ. ದೆವ್ವ ದೇವರುಗಳು ಮನುಷ್ಯರನ್ನು ತಾವೇ ಹಿಡ್ಕಂಡು ಬಿಟ್ಟರೆ ಆಗ ಅವು ಹೇಳ್ದಂಗೆ ಹೇಳಬೇಕಾಗುತ್ತಂತೆ, ಅವು ಕುಣಿಸಿದಂಗೆ ಕುಣಿಬೇಕಂತೆ. ಆದರೆ ಮನುಷ್ಯರೇ ಅವುಗಳನ್ನು ವಶಪಡಿಸಿಕೊಂಡು ಬಿಟ್ಟರೆ ಅದೇ ಅವು- ನಾವು ಹೇಳ್ದಂಗೆ ಕೇಳ್ತವಂತೆ, ನಾವು ಮಾಡು ಅಂದುದನ್ನು ಮಾಡ್ತವಂತೆ- ಇದು ಇಲ್ಲಿಗೆ ಸಾಕು.

ಈಗ ನಾವು ಹೆಸರೇಳುತ್ತಿರುವ ಗಾಂಧಿ, ಅಂಬೇಡ್ಕರ್, ಕಾರ್ಲ್ಮಾಕ್ರ್ಸ್, ಲೋಹಿಯಾ ಇವರನ್ನು ನಾವು ಹೀಗೆ ವಶಪಡಿಸಿಕೊಳ್ಳಬಲ್ಲವೆ? ನಾಡಿ ಹಿಡಿಯಬಲ್ಲವೆ? ಇಲ್ಲದಿದ್ದರೆ ಇವರೇನು ಕಮ್ಮಿ ಅಲ್ಲ! ನಮ್ಮಲ್ಲಿ ಒಡಕು ತಂದಿಡುತ್ತಾರೆ. ದೊಡ್ಡ ಹೆಸರುಗಳೇ ಪರಸ್ಪರ ಹೊಡೆದಾಡಿ ಅಂತ ನಮಗೆ ಹೇಳಿಕೊಡುತ್ತಾರೆ. ಆದರೂ ಇವರ ಜೊತೆಗೇ ನಾವು ಗುದ್ದಾಡುತ್ತಾ ದಿಕ್ಕು ದೆಸೆ ಕಾಣಬೇಕಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಶೋಷಣೆಯ ತಾರತಮ್ಯ ಅಸಮಾನತೆಗಳು ನೇರವಾಗಿದ್ದವು, ಕಪ್ಪು ಬಿಳುಪಿನಂತೆ. ಆಗ ನಮ್ಮ ಹೀರೋಗಳು ಒಬ್ಬೊಬ್ಬರೇ ಫೈಟ್ ಮಾಡಬಹುದಿತ್ತೇನೋ. ಆದರಿಂದು ಶೋಷಣೆ ತಾರತಮ್ಯ ಅಸಮಾನತೆಗಳ ಬಣ್ಣಗಳು ಕಲಸಿಕೊಂಡು ಥರಾವರಿ ನೂರೆಂಟು ಬಣ್ಣ ಆಗಿಬಿಟ್ಟಿವೆ. ಜೊತೆಗೆ ತೆರಣಿಯ ಹುಳು ತನ್ನ ಸ್ನೇಹಕ್ಕೆ ತಾನೇ ಮನೆಯ ಮಾಡಿ ಸಾವ ತೆರನಂತೆ ಸಮಾಜದ ಆಕಾಂಕ್ಷೆಗಳೂ ಇವೆ. ಹಾಗಾಗಿಯೇ ಮೇಲ್ಕಂಡ ನಾಲ್ವರ ಜೊತೆಗೆ ಇನ್ನೂ ಭೂಮಿಯ ಮೇಲೆ ಇರಬಹುದಾದ ಪ್ರೀತಿ ಸಹನೆ ಸಮಾನತೆಯ ಎಳೆಗಳನ್ನು ಎಸಳುಗಳನ್ನು ತಂದೂ ತಂದೂ ಗೂಡುಕಟ್ಟಬೇಕಾಗಿದೆ. ಹಾಗೂ ನಾವು ದೊಡ್ಡದು ಮಾಡುತ್ತೇವೆ, ಅಧಿಕಾರಕ್ಕೆ ಬಂದಮೇಲೆ ಮಾಡುತ್ತೇವೆ ಇತ್ಯಾದಿ ಬದಲು ದಿನನಿತ್ಯದಲ್ಲೇ ಪ್ರೀತಿ ಸಮಾನತೆಯ ಸಣ್ಣಸಣ್ಣದು ಕೂಡಿಸುವ ಜೀವನ ನಡಿಗೆ ನಮ್ಮದಾಗಬೇಕಾಗಿದೆ. ಯಾಕೆಂದರೆ ದೊಡ್ಡದು ಬಲೆಗೆ ಬೀಳುತ್ತದೆ, ಸಣ್ಣದು ಬಲೆಗೆ ಬೀಳದೆ ನುಸುಳಿಕೊಂಡು ಬದುಕುಳಿಯುತ್ತದೆ.

ಇಂಥದರಲ್ಲಿ ಹೇಗೆ? ಸದ್ಯಕ್ಕೆ ನನಗೆ ಕಾಣುತ್ತಿರುವ ದಾರಿ ಹೀಗಿದೆ: ನಾಲ್ವರನ್ನೂ ಒಟ್ಟಿಗೆ ಕೂರಿಸಿ ನಮ್ಮ ಇಂದಿನ ಬದುಕಿನ ಪ್ರೀತಿ ಸಹನೆ ಸ್ವಾವಲಂಬನೆ ಸಮಾನತೆ ಘನತೆಗಾಗಿ ಏನು ಮಾಡುವುದು ಎಂದು ಮಾತಾಡೋಣ. ಹೀಗೆ ಮಾತಾಡ್ತ, ಅಮೆರಿಕಾದ ಸಕ್ಕರೆಯನ್ನು ನಾವು ಭಾರತಕ್ಕೆ ತರಿಸಿಕೊಳ್ಳಬೇಕಾದರೆ ನಾವು ಕೊಡಬೇಕಾದ ಆಮದು ಸುಂಕ ಶೇ.224, ಆದರೆ ನಮ್ಮ ದೇಶದ ಸಕ್ಕರೆಯನ್ನು ಅಮೆರಿಕದವರು ತರಿಸಿಕೊಂಡರೆ ಅವರಿಗೆ ತಗಲುವÀ ಆಮದು ಸುಂಕ ಶೇ.40 ಮಾತ್ರ! ಭಾರತದ ಸಕ್ಕರೆಯೇನು ಕಹಿಯೇ? ಬಲಾಢ್ಯರನ್ನು ಮೆಚ್ಚಿಸಲು ಬಡ ದೇಶಗಳ ಸ್ವಯಂ ಬಲಿಯಾಟ ಇದೇನು ಅನ್ಯಾಯ ಅಂತ ನಾಲ್ವರೂ ನೊಂದುಕೊಳ್ಳಬಹುದು. ಹಾಗೆಯೇ ಭಾರತದ ಪ್ರಧಾನಿಯವರು ಚೈನಾಕ್ಕೆ ಭೇಟಿ ನೀಡುವ ಮೊದಲು- ರೇಷ್ಮೆ ಆಮದು ಸುಂಕವನ್ನು 10%ಗೆ ಇಳಿಸಿಬಿಡುತ್ತಾರೆ. ಪರಿಣಾಮವಾಗಿ ಭಾರತದಲ್ಲಿ ರೇಷ್ಮೆ ಗೂಡಿನ ದರ ನೆಲ ಕಚ್ಚುತ್ತದೆ. ಪರಿಣಾಮವಾಗಿ ರೈತ ತಾನು ಬೆಳೆದ ರೇಷ್ಮೆ ಬೆಳೆಗಳನ್ನು ತಾನೆ ತನ್ನ ಕೈಯಾರ ಧ್ವಂಸ ಮಾಡಿದ್ದೂ ಆಯ್ತು. ಆತ್ಮಹತ್ಯೆಗಳೂ ಆಯ್ತು. ಇದು ಚರ್ಚೆಗೆ ಬಂದರೆ ನಾಲ್ವರು ಏನು ಹೇಳಬಹುದು? ಹೀಗಿರಬಹುದಾ- ‘ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಒಂದು ದೇಶದ ದೊರೆ ಇನ್ನೊಂದು ದೇಶದ ದೊರೆ ಆಸ್ಥಾನಕ್ಕೆ ಹೋಗುವಾಗ ನೆನಪಿನ ಕೊಡುಗೆಯಾಗಿ ರೇಷ್ಮೆ ಬಟ್ಟೆ ವಸ್ತ್ರ ಕೊಂಡೊಯ್ಯುತ್ತಿದ್ದರುಅನ್ನಬಹುದು. ಆದರೆ ಇಂದಿನ ದೊರೆ ಅಂದರೆ ಭಾರತದ ಪ್ರಧಾನಿ ಏನು ಮಾಡಿಬಿಟ್ಟರು? ಅವರು ಭಾರತದ ರೇಷ್ಮೆ ಆಮದು ಸುಂಕ ಇಳಿಸಿಬಿಟ್ಟದ್ದರಿಂದ ಇಲ್ಲಿನ ರೇಷ್ಮೆ ಧಾರಣೆ ನೆಲಕಚ್ಚಿ ರೇಷ್ಮೆ ಬೆಳೆಗಾರರು ತಮ್ಮ ಕಸುಬನ್ನೇ ಕೈಬಿಟ್ಟು ನೆಲಕಚ್ಚಿ ಕೂರುವಂತಾಯ್ತು, ಜೊತೆಗೆ ಒಂದಿಷ್ಟು ಆತ್ಮಹತ್ಯೆಗಳೂ ಆದವು. ಇದು ಹೇಗೆ ಕಾಣುತ್ತದೆ? ಇದು ರೇಷ್ಮೆ ಬೆಳೆಯುವ ರೈತರ ಕತ್ತನ್ನೆ ಕುಯ್ದು ಚೈನಾ ದೊರೆಗೆ ಅಂದರೆ ಅಲ್ಲಿನ ಪ್ರಧಾನಿ ಮೆಚ್ಚಿಸಲು ಕಾಣಿಕೆ ಕೊಟ್ಟಂತೆ ಅಲ್ಲವೆ? ಇಲ್ಲಿ ನಾವು ಇದನ್ನು ಆತ್ಮಹತ್ಯೆ ಅನ್ನುತ್ತಿದ್ದೇವೆ! ಡಬ್ಲ್ಯೂಟಿಓ (WTO), ಗ್ಯಾಟ್ ಒಪ್ಪಂದ, ಸಬ್ಸಿಡಿ ನೀತಿ, ರಫ್ತು ಆಮದು ಇಂತಹವುಗಳನ್ನು ನಾವು ಅರಳಿಕಟ್ಟೆ ಚರ್ಚೆಯನ್ನಾಗಿಸಿ ನಾಲ್ವರಿಗೂ ಈಗ ಮಾತಾಡ್ರಪ್ಪ ಎಂದು ಕೇಳಬೇಕಾಗಿದೆ.

ಅರಳಿಕಟ್ಟೆ ಚರ್ಚೆಯಲ್ಲಿ ಗಾಂಧಿಅಯ್ಯೋ ನಾನೇನು ಮಾತಾಡ್ಲಪ್ಪಾ, ಗೋಡ್ಸೆ ಅನ್ನೋ ಪುಣ್ಯಾತ್ಮ ಗುಂಡು ಹೊಡೆದು ನನಗೆ ರಾಮ ಅನ್ನಿಸಿಬಿಟ್ಟ. ಇಲ್ಲದಿದ್ರೆ ನೋಡಕ್ಕಾಗದೆ ಇನ್ನಾರು ತಿಂಗಳೊಳಗೆ ನಾನೇ ಆತ್ಮಹತ್ಯೆ ಮಾಡ್ಕತಿದ್ದೆನೇನೊಅನ್ನಬಹುದು. ಗಾಂಧಿ ಎಂಬಾತ ಗುಂಡಾಕಿಸಿಕೊಂಡು ಸತ್ತರೂ ಸ್ವಕೇಂದ್ರೀತ (Self centered) ಅಂದ್ಕಂಡು ಕಾರ್ಲ್ಮಾಕ್ರ್ಸ್ಕ್ಯೂಬಾದಲ್ಲಿ ಕೃಷಿಯು ನೈಸರ್ಗಿಕವಾದ ಕಾರಣ ಕೃಷಿಗಾಗಿ ಖರ್ಚು ವೆಚ್ಚ ಗೌಣವಾಗಿ ನೈಸರ್ಗಿಕ ಆಹಾರ ಸೇವನೆಯಿಂದ ಜನರ ಆರೋಗ್ಯವೂ ಉತ್ತಮವಾಗಿರುವುದರ ಬಗ್ಗೆ ಪ್ರಸ್ತಾಪಿಸಬಹುದು. ಆದರೆ ಕ್ಯೂಬಾದ ಮೇಲಾದ ದಿಗ್ಭಂದನದ ಸಂದರ್ಭವೇ ನೈಸರ್ಗಿಕ ಕೃಷಿಯನ್ನು ಅಲ್ಲಿ ಅನಿವಾರ್ಯ ಮಾಡಿತು. ಆದರೆ ನೈಸರ್ಗಿಕ ಕೃಷಿಗೆ ಭಾರತದಲ್ಲಿ ಸಮರ ಮಾಡಬೇಕಾಗಿದೆ. ಇದೇ ಸಂದರ್ಭ ನೋಡಿಕೊಂಡು ಗಾಂಧಿ- ‘ರಾಳೆಗಾಂವ್ ಸಿದ್ಧಿಯಲ್ಲಿ ಅಣ್ಣಾ ಹಜಾರೆ ಅಂತ ಒಬ್ಬ ನನ್ನ ಹೆಸರೇಳ್ಕಂಡು ಭೂಮಿಗೆ ನೀರು ತಂದವನೆ, ಅಂತರ್ಜಲ ಹೆಚ್ಚಿಸಿದ್ದಾನೆ, ಅದನ್ನೂ ನೋಡಿ, ಹಾಗೆ ಇಳಂಗೊ ರಂಗಸ್ವಾಮಿ ಅಂತ ತಮಿಳ್ನಾಡಿನ ಕೂತ್ತಮ್ಬಾಕ್ಕಂ ಎಂಬ ಊರವನು ಗ್ರಾಮ ಪಂಚಾಯ್ತಿ ಅಧ್ಯಕ್ಷನಾಗಿ ಇಡೀ ಊರನ್ನೇ ಸ್ವಾವಲಂಬಿ ಮಾಡವನೆ, ಬೇರೆ ಬೇರೆ ಜಾತಿಯವರಿಗೆ ಅಕ್ಕಪಕ್ಕದಲ್ಲೆ ಮನೆ ಕಟ್ಟವ್ನೆ! ಅವನನ್ನೂ ನೋಡಿ, ಜೊತೆಗೆ ಮೈಸೂರಿನ ಹತ್ತಿರದ ಬನ್ನೂರಿನಲ್ಲಿ ಕೃಷ್ಣಪ್ಪ ಎಂಬಾತ ನೈಸರ್ಗಿಕ ಕೃಷಿ ಮಾಡುತ್ತಾ ನೆಮ್ಮದಿ ಕಂಡವನೆ, ನೋಡಲು ಮರೆಯಬೇಡಿಅನ್ನಬಹುದು. ಬೇಡ ಅನ್ನುವವರು ಯಾರು? ನಾವು ಅಲ್ಲಿಗೆ ಈಗಾಗಲೇ ಹೋಗಿಬರಬೇಕಾಗಿತ್ತು.

ಹಾಗೇ ನಾಲ್ವರ ನಡುವೆ ಭಾರತದಲ್ಲಿ ಈಗ ಹೆಚ್ಚುತ್ತಿರುವ ಜಾತಿ ಟೌನ್ಶಿಪ್ ಬಗ್ಗೆ ಪ್ರಸ್ತಾಪವಾದರೆ ಎಲ್ಲರೂ ವಿಷಣ್ಣರಾಗಬಹುದು. ಕಾರ್ಲ್ ಮಾಕ್ರ್ಸ್ – ‘ಏನ್ರೀ ಇದು? ಬಾಂಬ್ ಹಾಕಬೇಕು ಅಷ್ಟೆಅಂದರೆ ಅದಕ್ಕೆ ಗಾಂಧಿಜೀವಪಾಯವಾಗದಂತೆಎಂದು ತಿದ್ದುಪಡಿ ಮಾಡಬಹುದು. ಗಾಂಧಿ ಮಾತಿಗೆ ಕಾರ್ಲ್ಮಾಕ್ರ್ಸ್ ಒಂದು ಸ್ಮೈಲ್ ಕೊಡಬಹುದು. ಇವರ ಮಾತು ಮುಗಿಯುವುದರೊಳಗೆ ಅಂಬೇಡ್ಕರ್ ಲೋಹಿಯಾ ಜಂಟಿಯಾಗಿ ಕಾರ್ಯಾಚರಣೆ ಜರುಗಿಸಲೂಬಹುದು. ಹಾಗೇ ಅಂತರ್ಜಾತಿ-ಧರ್ಮ ಮದುವೆಗೆ ಬೇಡ ಅನ್ನುವವರು ಯಾರು? ಕಾರ್ಲ್ಮಾಕ್ರ್ಸ್ಸ್ವಲ್ಪ ಅಂತರಾಷ್ಟ್ರೀಯ ಮದುವೆಗಳು ಇರಲಿಅನ್ನಬಹುದಷ್ಟೆ. ಅಷ್ಟೇಕೆ, ಕಾಮ-ಪ್ರೇಮದ ವಿಚಾರದಲ್ಲಿ ಲೋಹಿಯಾ ಜೊತೆ ನಾವು ಗುಪ್ತ ಸಮಾಲೋಚನೆಯನ್ನೂ ಮಾಡಬಹುದು. ಇದನ್ನು ಮಾಕ್ರ್ಸ್ ಅರ್ಥ ಮಾಡಿಕೊಳ್ಳಬಹುದು. ಆದರೆ, ಗಾಂಧಿ ಅಂಬೇಡ್ಕರ್ರವರ ಕಣ್ತಪ್ಪಿಸಬೇಕಷ್ಟೇ.

ಆಮೇಲೆ ಕಾರ್ಲ್ಮಾಕ್ರ್ಸ್ ಹೇಳಬಹುದು- ‘ಗ್ರೀಸ್ ದೇಶಕ್ಕೂ ಹಾಗೂ ಬಂಡವಾಳದ ಜಾಗತೀಕರಣಕ್ಕೂ ಯುದ್ಧವಾಗಿ ಗ್ರೀಸ್ ಸೋತು ನೆಲ ಕಚ್ಚಿದ ಮೇಲೆ, ಗ್ರೀಸ್ ದೇಶವನ್ನು ಲೂಟಿ ಮಾಡಿದ್ದ ಅಲ್ಲಿನ ಬಂಡವಾಳಿಗರು ಶತಕೋಟಿಗಟ್ಟಲೆ ತಮ್ಮ ಲೂಟಿ ಸಂಪತ್ತನ್ನು ಗ್ರೀಸ್ ದೇಶದಿಂದ ಹೊರ ದೇಶಗಳಿಗೆ ಸುರಕ್ಷಿತವಾಗಿ ಸಾಗಿಸಿಬಿಟ್ಟಂತೆ ಭಾರತದಲ್ಲೂ ನಾಳೆ ಆಗಬಹುದು. ಭಾರತದಲ್ಲಿ ಬಕಾಸುರರಂತಹÀ ಬಂಡವಾಳಗಾರರಿದ್ದಾರೆ, ಈಗಲಿಂದಲೇ ಅವರ ಮೇಲೆ ಒಂದು ಕಣ್ಣಿಡಿಎನ್ನಬಹುದು. ಇಲ್ಲಿ ಭಾರತದಲ್ಲಿ ಸಾರ್ವಜನಿಕ ನೈಸರ್ಗಿಕ ಸಂಪತ್ತಿನ ಲೂಟಿ, ಕೆಲವರದು ಲಕ್ಷ ಲಕ್ಷ ಕೋಟಿಯಂತೆ. ಖಾಸಗೀ ಸಂಪತ್ತನ್ನು ಹೆಚ್ಚೆಂದರೆ ಒಂದು ಸಾವಿರ ಕೋಟಿಗೆ ಮಿತಗೊಳಿಸಿ, ಅದಾದ ಮೇಲಿನ ನೈಸರ್ಗಿಕ ಲೂಟಿಯ ಹೆಚ್ಚುವರಿ ಸಂಪತ್ತನ್ನು ಸಾರ್ವಜನಿಕ ಉಪಯೋಗಕ್ಕೆ ಅಂದರೆ ಅದು -ಸಮಾನ ಉಚಿತ ಶಿಕ್ಷಣ, ಆರೋಗ್ಯ, ಅಂತರ್ಜಲ ಹೆಚ್ಚಿಸುವಿಕೆ- ಇತ್ಯಾದಿ, ಇತ್ಯಾದಿ ಸಾರ್ವಜನಿಕ ಕಾರ್ಯಕ್ಕೆ ಬಳಕೆಯಾಗಲಿ ಎಂದು ಮೊದಲ ಹಂತದ ಹೆಜ್ಜೆಯಿಡಲು, ಅದಕ್ಕಾಗಿ ಹೋರಾಡಲು ತಡೆದವರು ಯಾರು? ಗಾಂಧಿ, ಅಂಬೇಡ್ಕರ್, ಲೋಹಿಯಾ, ಕಾರ್ಲ್ಮಾಕ್ರ್ಸ್ ಒಟ್ಟಾಗಿ ನಮಗೆ ಪ್ರಶ್ನೆ ಕೇಳಿಬಿಟ್ಟರೆ ಎಂದು ಭಯವಾಗುತ್ತಿದ್ದು, ಒಂದು ಗಾಂಧಿ ನುಡಿಯಿಂದಲೇ ಮಾತು ಮುಗಿಸಿಬಿಡುತ್ತೇನೆ: “ಮನುಷ್ಯ ತನ್ನನ್ನು ವಂಚಿಸಿಕೊಂಡಷ್ಟು ಬೇರೆ ಯಾರನ್ನೂ ವಂಚಿಸಿರಲಾರ”- ವಾಕ್ಯದಲ್ಲಿ ಆರು ಪದಗಳಿವೆ. ಒಂದರ ಕೆಳಗೊಂದು ಪದಗಳನ್ನು ಇಟ್ಟರೆ ಅದು ನಮ್ಮ ಲಂಕೇಶರ ನೀಲು ಪದ್ಯ ಆಗಿಬಿಡುತ್ತದೆ. ನಾವು ಪದಗಳ ಒಳಗನ್ನು ಅದರೊಳಗಿರುವ ನಮ್ಮನ್ನು ಕಂಡರೆ ಹೆಚ್ಚು ಲೋಕ ಬಿಚ್ಚಿಕೊಳ್ಳುತ್ತಾ ಸಮಷ್ಟಿ ಪ್ರಜ್ಞೆಗೂ ನಮಗೂ ಹೊಕ್ಕುಳಬಳ್ಳಿ ನಂಟು ಉಂಟಾಗಿ ನಮಗೂ ನಡೆನುಡಿ ಸಿಗಬಹುದು. ಆಗ ನಾವು ಮೊಳಕೆಯೊಡೆಯಲೂಬಹುದು. ಯಾಕೆಂದರೆ, ಕರ್ನಾಟಕದ ಮಣ್ಣಲ್ಲಿ ಮೇಲ್ಕಂಡ ನಾಲ್ವರಂತೆಯೇ ಇದ್ದಿರಬಹುದಾದ ನೂರಾರು ವಚನಕಾರರು ಒಂದೇ ಕಾಲಮಾನದಲ್ಲಿ ತಾವೆಲ್ಲರೂ ಒಬ್ಬ ಎಂಬಂತೆ ವಿಮೋಚನೆಗಾಗಿ ಕೈ ಕೈ ಹಿಡಿದು ಒಟ್ಟಾಗಿ ನಡೆದಾಡಿದ ನೆಲ ಇದು. ಅವರ ಉಸಿರಾಟಗಳು ಇಲ್ಲಿ ಇನ್ನೂ ಉಸಿರಾಡುತ್ತಿರಲೂಬಹುದು

1 ಕಾಮೆಂಟ್‌:

ಮೂರ್ತಿ ದೇರಾಜೆ ಹೇಳಿದರು...

ಸ್ವತಂತ್ರ ಚಿಂತನೆ ಎನ್ನುವುದೇ ನಮ್ಮ ಯಾಕೋ ರಕ್ತದಲ್ಲಿ ಇಲ್ಲವಲ್ಲ ....ಮಥಾಂದತೆ ಒಂದೇ ಕಾಣ್ತಾ ಇರುವುದು ....!!!