ಗುರುವಾರ, ಜುಲೈ 30, 2015

ರೈತರ ಆತ್ಮಹತ್ಯೆ ಮತ್ತು ಜನಪದ

-ಸುರೇಂದ್ರ ಕೌಲಗಿ
ಸೌಜನ್ಯ: ಪ್ರಜಾವಾಣಿ
ರೈತರ ಆತ್ಮಹತ್ಯೆಗೆ ಸರ್ಕಾರದ ನೀತಿಯಲ್ಲಿನ ಲೋಪದೋಷಗಳು ಕಾರಣವೆಂದು ಹೇಳಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ಹಾಗೂ ಖಾಸಗಿ ಲೇವಾದೇವಿಗಾರರು ನೀಡುವ ಸಾಲ, ಬೆಳೆಗಳಿಗೆ ಮತ್ತು ತರಕಾರಿಗೆ ವೈಜ್ಞಾನಿಕ ಬೆಲೆ ಸಿಗದಿರುವುದು, ವಿದ್ಯುತ್‌ ಪೂರೈಕೆಯಲ್ಲಿಯ ವ್ಯತ್ಯಯ, ಕಳಪೆ ಬೀಜ ಪೂರೈಕೆ, ರೈತರು ಉಪಯೋಗಿಸುವ ವಿವಿಧ ಪ್ರಕಾರದ ಯಂತ್ರೋಪಕರಣಗಳು ಆಗಾಗ್ಗೆ ಕೆಟ್ಟು ಅವುಗಳನ್ನು ಸುಸ್ಥಿತಿಗೆ ತರುವುದಕ್ಕೆ ಆಗುವ ಖರ್ಚು, ಸಮಯ ನಷ್ಟ ಕೂಡ ಬಹುಮಟ್ಟಿಗೆ ಕಾರಣ ಎನ್ನಲಾಗುತ್ತಿದೆ. ಇಂತಹ ವಿವಿಧ ಕಾರಣಗಳನ್ನು ಗಮನಿಸಿದಾಗ ರೈತರ ಆತ್ಮಹತ್ಯೆಗೆ ಸಾಂಘಿಕ ಸಂಸ್ಥೆಗಳೇ ಹೆಚ್ಚಾಗಿ ಕಾರಣವಾಗಿರುವುದು  ತಿಳಿದುಬರುತ್ತದೆ.
ಗ್ರಾಮಗಳು ವ್ಯವಸಾಯದ ಕೇಂದ್ರ ಬಿಂದು ಮತ್ತು ರೈತರೇ ಪ್ರಧಾನ ಪಾತ್ರಧಾರಿಗಳು. ವ್ಯವಸಾಯ, ರೈತರು ಹಾಗೂ ಅವರ ಜೀವನದೊಂದಿಗೆ ಬೆಳೆದುಕೊಂಡು ಬಂದಿರುವ ದೀರ್ಘ ಕಾಲದ ಸಂಸ್ಕೃತಿ ಎಲ್ಲವೂ ಸೇರಿ ಜನಪದವಾಗುತ್ತದೆ. ಕೂಡಿ ಇರುವಿಕೆ, ಸಹಕಾರ ಮತ್ತು ಪರಸ್ಪರರ ಸುಖ ದುಃಖಗಳಲ್ಲಿ ಪಾಲ್ಗೊಳ್ಳುವಿಕೆ ಜನಪದದ ಮುಖ್ಯ ಲಕ್ಷಣ. ಜೀವನಾವಶ್ಯಕವಾದ ಎಲ್ಲ ವಸ್ತುಗಳಲ್ಲಿ ಸ್ವಾವಲಂಬನೆ ಹೊಂದುವುದು ಜನಪದದ ಬೆನ್ನೆಲುಬು. ತನ್ನ ಮಕ್ಕಳಿಗೆ ತನ್ನ ಜೀವನಶೈಲಿಗೆ ಅನುರೂಪವಾದ ಶಿಕ್ಷಣ ಕೊಡುವುದು ಜೀವಂತ ಜನಪದದ ಲಕ್ಷಣ.
ಜಾಗತೀಕರಣ ಮತ್ತು ಕೈಗಾರಿಕೀಕರಣವು ಜೀವನದ ಎಲ್ಲ ಚಟುವಟಿಕೆಗಳನ್ನೂ ವಾಣಿಜ್ಯೀಕರಣಗೊಳಿಸಿದೆ. ಇದರಲ್ಲಿ ಅನ್ನ ಮತ್ತು ಶಿಕ್ಷಣ ಮುಖ್ಯವಾಗಿವೆ. ಆದ್ದರಿಂದ ಮಣ್ಣಿನ ಮಕ್ಕಳ ಗ್ರಾಮಗಳು ಒಟ್ಟು ಒಂದು ಜನಪದವಾಗದೆ ಪರಸ್ಪರ ವಿರೋಧಾಸಕ್ತಿ ಹೊಂದಿರುವ ಮತ್ತು ವಾಣಿಜ್ಯ ವ್ಯವಹಾರದ ಮುಖ್ಯ ಧಾತುವಾದ ಹಣದ ಮೋಹಕ್ಕೆ ಸಿಕ್ಕ ಜನ ವಾಸಿಸುವ ಸಮೂಹಗಳಾಗಿವೆ. ಪರಿಣಾಮವಾಗಿ ಗ್ರಾಮಗಳಲ್ಲಿರುವ ಜನರಲ್ಲಿ ಪರಸ್ಪರ ಸಹಕಾರ, ಸುಖ ದುಃಖ ಹಂಚಿಕೊಳ್ಳುವ ಮನೋಭಾವ ಕಡಿಮೆಯಾಗಿದೆ.
ಎಲ್ಲರನ್ನೂ ಕೂಡಿಡುವ ಸಾಂಸ್ಕೃತಿಕ ಬೇರುಗಳು ಒಣಗುತ್ತಿವೆ. ಸಂಸ್ಕೃತಿಯ ಸ್ಥಾನವನ್ನು ಮೂಢನಂಬಿಕೆಗಳು ಆವರಿಸಿಕೊಳ್ಳುತ್ತಿವೆ. ಕೃಷಿಗೆ ಪೂರಕವಾಗಿದ್ದ ಗೋವುಗಳ ತಾಣದಲ್ಲಿ ಟಿ.ವಿ. ಮತ್ತು ಡೈನಿಂಗ್ ಟೇಬಲ್‌ಗಳು ಬಂದಿವೆ. ಮಳೆ ನೀರು ಸಂಗ್ರಹಕ್ಕೆ ಸಹಕಾರಿಯಾಗಿದ್ದ ತೊಟ್ಟಿ ಮನೆಗಳು ಸಿಮೆಂಟ್, ಕಬ್ಬಿಣದ ಕಟ್ಟಡಗಳಾಗಿ ಪರಿವರ್ತಿತಗೊಂಡಿವೆ. ದೇಸಿ ಭಾಷೆ ಮತ್ತು ವ್ಯವಹಾರ ಕಲಿಸುತ್ತಿದ್ದ ಜಗುಲಿ ಶಾಲೆಗಳು ವಿದೇಶಿ ಭಾಷೆ ಕಲಿಸುವ, ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಚಿಂತನೆ ಬಿತ್ತರಿಸುವ ಕಾನ್ವೆಂಟ್ ಶಾಲೆಗಳಾಗಿ ಅವತಾರತಾಳಿವೆ.
ಸಮೂಹ ಭಾವನೆ ಅಥವಾ ಕೌಟುಂಬಿಕ ಭಾವನೆ ಇಲ್ಲದ ಸ್ಥಳಗಳು ಆತ್ಮಹತ್ಯೆಗೆ ಕಾರಣವಾಗುತ್ತವೆ. ವ್ಯಕ್ತಿಯ ಕಷ್ಟ ಸುಖ  ಕೇಳಿಕೊಳ್ಳಲು, ಆಪ್ತ ಸಲಹೆ, ಧೈರ್ಯ ತುಂಬಲು ಯಾರೂ ಇಲ್ಲದಾದಾಗ ಕಷ್ಟಕ್ಕೆ ಸಿಲುಕಿದ ವ್ಯಕ್ತಿ ಹತಾಶನಾಗಿ ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಾನೆ.
ಭಾರತದ ಕೃಷಿಯು ಮಳೆಯೊಂದಿಗಿನ ಜೂಜಾಟ ಎಂಬುದು ಎಲ್ಲರಿಗೂ ಗೊತ್ತಿದೆ. ಜೂಜಾಟದಲ್ಲಿ ಸಾಲವಾಗುತ್ತದೆ, ಮಾನ-ಮರ್ಯಾದೆ ಹರಾಜಾಗುತ್ತದೆ. ಕುಟುಂಬ ಜೀವನವೇ ಅಸ್ತವ್ಯಸ್ತಗೊಳ್ಳುತ್ತದೆ. ಜೂಜಾಟದಂತಿರುವ ಕೃಷಿಯನ್ನೇ ನಂಬಿರುವ ರೈತರಲ್ಲೇ ಆತ್ಮಹತ್ಯೆಗಳು ಹೆಚ್ಚಾಗಿ ಆಗುತ್ತಿರುವುದು. ಸಾಲ ಮಾಡಿ ಕೃಷಿ ಮಾಡಿದ ರೈತನ ಸಾಲದ ತೀರುವಳಿಗಾಗಿ ಅವನ ಕುಟುಂಬ ಪೂರ್ಣ ಪ್ರಮಾಣದಲ್ಲಿ ಸಹಕರಿಸಿದರೆ ಅವನು ಆತ್ಮಹತ್ಯೆ ನಿರ್ಧಾರ ಮಾಡುವುದಿಲ್ಲ. ಒಂದು ವೇಳೆ ಆತ ಕೃಷಿಯೇತರ ಕಾರಣಗಳಿಗಾಗಿ ಸಾಲ ಮಾಡಿದ್ದರೆ ಅವನ ಕುಟುಂಬ ಅವನನ್ನು ಸರಿದಾರಿಗೆ ತರಲು ಪ್ರಯತ್ನಿಸುತ್ತದೆ.
ಇದೇ ಸೂತ್ರ ಜನಪದಕ್ಕೂ ಅನ್ವಯಿಸುತ್ತದೆ. ಜನಪದದಲ್ಲಿರುವ ಪ್ರತಿ ರೈತನ ಕಷ್ಟ ಸುಖಗಳನ್ನು ಎಲ್ಲರೂ ಆಲಿಸುತ್ತಾರೆ. ಅವರೆಲ್ಲರೂ ಮೂಲತಃ ವ್ಯವಸಾಯಗಾರರೇ ಆಗಿರುವುದರಿಂದ ವ್ಯವಸಾಯಕ್ಕಾಗುವ ಖರ್ಚು ವೆಚ್ಚ, ಆದಾಯ-ನಷ್ಟಗಳನ್ನು ಚೆನ್ನಾಗಿ ಬಲ್ಲವರಾಗಿರುತ್ತಾರೆ. ಆಗಾಗ್ಗೆ ನಡೆಯುವ ಜನಪದದ ಸಮೂಹ ಸಭೆಯಲ್ಲಿ ರೈತರ ಸಾಲ ಮತ್ತು ಇತರ ಕಷ್ಟ ಕಾರ್ಪಣ್ಯಗಳು ಮುನ್ನೆಲೆಗೆ ಬರುತ್ತವೆ. ಖಾಸಗಿಯಾಗಿ ಯಾವ ಮಹತ್ವದ ವಿಷಯವೂ ಗೋಪ್ಯವಾಗಿ ಉಳಿಯುವುದಿಲ್ಲ. ಆಗ ಎಲ್ಲರೂ ಸೇರಿ ರೈತರ ಸಾಲ ಇಡೀ ಸಮುದಾಯದ ಸಾಲವೆಂದೂ, ಅವನ ಕಷ್ಟಕಾರ್ಪಣ್ಯಗಳು ಸಮುದಾಯದ ಕಷ್ಟಕಾರ್ಪಣ್ಯಗಳೆಂದೂ ಅಂಗೀಕರಿಸುತ್ತಾರೆ.  ಸಾಲಗಾರರನ್ನು ಸಭೆಗೆ ಕರೆಸಿ ಪ್ರತಿಯೊಬ್ಬ ರೈತನ ಸಾಲದ ತೀರುವಳಿಗೆ ಜನಪದ ಆಧಾರವಾಗಿ ನಿಲ್ಲುತ್ತದೆ.
ಸಕಲ ಉತ್ಪಾದನೆಗಳಿಗೆ ಮೂಲ ಸಾಧನವಾದ ಭೂಮಿ ತಮ್ಮ ಬಳಿ ಇರುವುದರಿಂದ ಅದರ ಮೇಲೆ ದುಡಿದು ಸಾಲವನ್ನು ತೀರಿಸುವುದು ಅಸಾಧ್ಯವಲ್ಲವೆಂಬ ಮಾತನ್ನು ಸಾಲಗಾರರಿಗೆ ಮನದಟ್ಟು ಮಾಡಿಕೊಟ್ಟು, ತಮ್ಮ ಗ್ರಾಮದ ಎಲ್ಲ ರೈತರನ್ನು ಎಲ್ಲ ಬಗೆಯ ಸಾಲದಿಂದ ಒಂದೇ ನಿಮಿಷದಲ್ಲಿ ಜನಪದ ಸಾಲಮುಕ್ತ ಮಾಡುತ್ತದೆ!
ಇಂಥ ಸಶಕ್ತ ಜನಪದವನ್ನು ಗ್ರಾಮಗಳಲ್ಲಿ ತುರ್ತಾಗಿ  ಸೃಷ್ಟಿಸಿ ರೈತರ ಆತ್ಮಹತ್ಯೆ ತಡೆಯುವ ಪ್ರಬುದ್ಧ ಉಪಕ್ರಮ ಕೈಗೊಳ್ಳಬೇಕಿದೆ. ಸರ್ಕಾರಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಅವು ಇಲ್ಲಸಲ್ಲದ ಅಭಿವೃದ್ಧಿಯ ನೆಪದಿಂದ ಗ್ರಾಮಗಳನ್ನು ಕುರುಕ್ಷೇತ್ರವನ್ನಾಗಿಸಿವೆ. ಗ್ರಾಮ ಪಂಚಾಯಿತಿಗಳು ಗ್ರಾಮ ಸಮುದಾಯ ಒಡೆಯಲು ಕಾರಣವಾಗಿವೆ. ಗ್ರಾಮ ಸ್ವರಾಜ್ಯದ ಮೂಲಕ ರಾಮರಾಜ್ಯ ಕಟ್ಟಬೇಕೆಂದಿದ್ದ ಗಾಂಧೀಜಿ ಕನಸನ್ನು ನುಚ್ಚುನೂರಾಗಿಸಿವೆ. ರೈತ ಸಾಲದಿಂದ ಪಾರಾಗಲು ಸಮಗ್ರ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಇತ್ಯಾದಿ ಅಳವಡಿಸಿಕೊಳ್ಳಬೇಕೆಂದು ರೈತರಿಗೆ ಹೇಳಲಾಗುತ್ತಿದೆ.
ಆದರೆ ಕೃಷಿ ಆದಾಯದೊಂದಿಗೆ ಬಿಡುವಿನ ಕಾಲದಲ್ಲಿ ಆದಾಯ ತಂದುಕೊಡುವ ಗ್ರಾಮೋದ್ಯೋಗಗಳಲ್ಲಿ ತೊಡಗುವಂತೆ ಯಾವ ಮಾರ್ಗದರ್ಶನವನ್ನೂ ಕೊಡಲಾಗುತ್ತಿಲ್ಲ. ಕೃಷಿಕರ ಬಹಳಷ್ಟು ಸಮಯ ವ್ಯರ್ಥವಾಗಿ ಕಳೆದುಹೋಗುತ್ತದೆ. ದುಶ್ಚಟಗಳ ಅಭ್ಯಾಸಕ್ಕೆ ಕಾರಣವಾಗುತ್ತಿದೆ. ಗ್ರಾಮಸ್ಥರಿಗೆ ಬೇಕಾಗುವ ಅನೇಕ ಜೀವನಾವಶ್ಯಕ ವಸ್ತುಗಳನ್ನು ಗ್ರಾಮಗಳಲ್ಲೇ ವಿವಿಧ ಉದ್ಯೋಗಗಳ ಮೂಲಕ ತಯಾರಿಸಬಹುದಾಗಿದೆ. ತನ್ಮೂಲಕ ಗ್ರಾಮದ ಯುವಕರಿಗೆ ಉದ್ಯೋಗ ಕೊಡಬಹುದಾಗಿದೆ. ಜನಪದದಲ್ಲಿಯ ಇಡೀ ಮಾನವಶಕ್ತಿ, ಬುದ್ಧಿಶಕ್ತಿ ಉಪಯೋಗವಾಗುವಂತೆ ಮಾಡಬಹುದಾಗಿದೆ.
ಸೋಪು, ಎಣ್ಣೆ, ಪಾತ್ರೆ, ಕಂಬಳಿ, ಬಟ್ಟೆ, ಉಪ್ಪಿನಕಾಯಿ, ಹಪ್ಪಳ-ಸಂಡಿಗೆಯಂಥ ಅನೇಕ ಜೀವನಾವಶ್ಯಕ ಪದಾರ್ಥಗಳಿಗಾಗಿ ಗ್ರಾಮಗಳು ಪರಾವಲಂಬಿಯಾಗಿವೆ. ಗ್ರಾಮದ ಹಣ ಬಹುರಾಷ್ಟ್ರೀಯ ಕಂಪೆನಿಗಳನ್ನು ಸೇರುತ್ತಿದೆ. ಇಂತಹ ದುರ್ದೆಸೆ ಎಲ್ಲ ರಾಜಕಾರಣಿಗಳ, ಮಂತ್ರಿಗಳ ಊರುಗಳಲ್ಲಿಯೂ ಇದೆ. ಇತ್ತೀಚೆಗೆ ಮುಖ್ಯಮಂತ್ರಿಯವರ ಗ್ರಾಮವಾದ ಸಿದ್ಧರಾಮನ ಹುಂಡಿಗೆ ಹೋಗಿದ್ದೆ.
ಸುಮಾರು ಐದಾರು ಸಾವಿರ ಜನಸಂಖ್ಯೆಯುಳ್ಳ ಆ ಗ್ರಾಮದಲ್ಲಿ ಒಂದೇ ಒಂದು ಗ್ರಾಮೋದ್ಯೋಗ ಇಲ್ಲವೆಂದು ಗೊತ್ತಾಯಿತು. ಕುರಿ ಸಾಕಣೆ ಪ್ರದೇಶವಾಗಿದ್ದರೂ ಕಂಬಳಿ ತಯಾರಿಕೆಯ ಉದ್ಯೋಗವೂ ಇಲ್ಲ. ಈ ರೀತಿ ಎಲ್ಲ ರೀತಿಯಲ್ಲೂ ಶುಷ್ಕವಾದ ಗ್ರಾಮಗಳಲ್ಲಿಯ ರೈತರು ಆತ್ಮಹತ್ಯೆಗೆ ಶರಣಾಗುವುದಕ್ಕೆ ಕೇವಲ ಸರ್ಕಾರಗಳಷ್ಟೇ ಕಾರಣವಲ್ಲ, ಗ್ರಾಮಗಳಲ್ಲಿರುವ ಜನಸಮುದಾಯವೂ ಕಾರಣವಾಗಿದೆ.

ಕಾಮೆಂಟ್‌ಗಳಿಲ್ಲ: