ಬುಧವಾರ, ಜುಲೈ 15, 2015

ರೈತರ ಸಾವಿನ ಕೊಯ್ಲು ಮತ್ತು ಸ್ಫೂರ್ತಿಯ ಕಥನಸುದೇಶ ದೊಡ್ಡಪಾಳ್ಯ

ಸೌಜನ್ಯ: ಪ್ರಜಾವಾಣಿ‘ನರಳುವದನಿ’ ವಿಶ್ವಾಮಿತ್ರನನ್ನು ಬಹುದಿನಗಳಿಂದಲೂ ಹಿಂಬಾಲಿಸುತ್ತಿರುತ್ತದೆ. ವಿಶ್ವಾಮಿತ್ರ ಅದರ ಮೂಲವನ್ನು ಅರಿಯುವ ಪ್ರಯತ್ನ ಮಾಡಿದರೂ ಫಲಕಾರಿಯಾಗುವುದಿಲ್ಲ. 
ವಿಶ್ವಾಮಿತ್ರನನ್ನು ಪರಶುರಾಮ ಭೇಟಿಯಾಗುತ್ತಾನೆ. ಆತನನ್ನು ವಿಶ್ವಾಮಿತ್ರ, ‘ನಿನಗೊಂದು ನರಳುವದನಿ ಕೇಳಿಸಿತೆ?’ ಎಂದು ವಿಚಾರಿಸುತ್ತಾನೆ. ‘ಹೌದು’ ಎನ್ನುತ್ತಾನೆ ಪರಶುರಾಮ. ಇಷ್ಟರಲ್ಲಿ ಇವರಿಗೆ ನಾರದ ಸಿಗುತ್ತಾನೆ. ಆತನ ಬಳಿ ‘ನರಳುವದನಿ’ ಕುರಿತು ಪ್ರಸ್ತಾಪಿಸುತ್ತಾರೆ. ಅದು ಭೂಲೋಕದಿಂದ ಬರುತ್ತಿದೆ ಎಂದು ತಿಳಿಸುತ್ತಾನೆ. ವಿಶ್ವಾಮಿತ್ರ ಮತ್ತು ಪರಶುರಾಮ ಅತ್ತ ಕಡೆ ಸಾಗುತ್ತಾರೆ.
ಕುವೆಂಪು ಅವರ ‘ಧನ್ವಂತರಿ ಚಿಕಿತ್ಸೆ’ ಎಂಬ ಈ ಕಥೆಯನ್ನು ಸದ್ಯಕ್ಕೆ ಇಲ್ಲಿಗೆ ನಿಲ್ಲಿಸುತ್ತೇನೆ.
ಈಗ ಕಲಬುರ್ಗಿ ಸಮೀಪದ ಅಷ್ಟಗಿ ಗ್ರಾಮದ ಮಹದೇವಪ್ಪ ಅಲಿಯಾಸ್‌ ಬೋರ್‌ವೆಲ್‌ ಮಹದೇವಪ್ಪನವರ  ಕಥೆ ಹೇಳುತ್ತೇನೆ.ಇವರ ಬಳಿ 5 ಎಕರೆ ಜಮೀನಿದೆ. ಮಳೆ ನಂಬಿ ಬೇಸಾಯ ಮಾಡುವುದು ಕಷ್ಟವೆನಿಸಿತು. ಎಂಟು ವರ್ಷಗಳ ಹಿಂದೆ ಬೋರ್‌ವೆಲ್‌ ಹಾಕಿಸಿದರು. ಅದರಲ್ಲಿ ನೀರು ಉಕ್ಕಲಿಲ್ಲ. ಇನ್ನೊಂದು ಕೊರೆಸಿದರು. ಬರೀ ಧೂಳು ಬಂತು. ಮಹದೇವಪ್ಪ ಜೂಜಿಗೆ ಕುಳಿತವರಂತೆ ಇದು ನೀರು ಕೊಡಬಹುದು, ಅದು ಕೊಡಬಹುದು ಎನ್ನುವ ಆಸೆಯಿಂದ ಹದಿನೇಳು ಕೊಳವೆಬಾವಿಗಳನ್ನು ಕೊರೆಸಿದರು! ಅಷ್ಟೂ ವಿಫಲವಾದವು! ಕಾಕತಾಳೀಯ ಎನ್ನುವಂತೆ ಮಹದೇವಪ್ಪನವರ ಒಂದು ಕಿಡ್ನಿ ಕೂಡ ವಿಫಲವಾಯಿತು. ಅತ್ತ ಹೊಲದಲ್ಲಿ ಕೊಳವೆಬಾವಿಗಳು, ಇತ್ತ ಮಗನ ಕಿಡ್ನಿ ವಿಫಲವಾದದ್ದು ತಾಯಿಯನ್ನು ಚಿಂತೆಗೀಡು ಮಾಡಿತು. ಮಗನನ್ನು ಉಳಿಸಿಕೊಳ್ಳಲು ತಾಯಿಯೇ ಕಿಡ್ನಿ ಕೊಟ್ಟಳು.
ಹೊಲದಲ್ಲಿ ಬೆಳೆಯ ಬದಲು ಸಾಲ ಸಮೃದ್ಧವಾಗಿ ಬೆಳೆಯಿತು. ಇನ್ನು ಮಹದೇವಪ್ಪನವರ ಕಥೆ ಮುಗಿಯಿತು ಎಂದುಕೊಂಡವರೇ ಹೆಚ್ಚು. ಇಷ್ಟರಲ್ಲಿ ಕೊನೆ ಯತ್ನ ಎನ್ನುವಂತೆ ಹದಿನೆಂಟನೆ ಕೊಳವೆಬಾವಿ ಕೊರೆಸಿ ಅದೃಷ್ಟ ಪರೀಕ್ಷೆಗೆ ನಿಂತರು ಮಹದೇವಪ್ಪ. ಕಾಯಂ ಆಗಿ ಕೊಳವೆಬಾವಿ ಕೊರೆಯುವ ವ್ಯಕ್ತಿಗೆ ಬುಲಾವ್‌ ಹೋಯಿತು. ಅವರು ಮಹದೇವಪ್ಪನವರ ಕಷ್ಟ ಮತ್ತು ಕೃಷಿ ಮೇಲಿನ ಹಂಬಲವನ್ನು ಕಂಡವರು ‘ಇದೇ ಕೊನೆ. ಇನ್ನು ಮುಂದೆ ನಿಮ್ಮ ಹೊಲದಲ್ಲಿ ಬಾವಿ ಕೊರೆಯಲು ಬರುವುದಿಲ್ಲ. ಈಗ ನಾವೇ ನಿಮಗೆ ಉಚಿತವಾಗಿ ಬಾವಿ ಕೊರೆಯುತ್ತೇವೆ’ ಎಂದು ಸದಾಶಯದಿಂದಲೇ ಹೇಳಿದರು. ಅದರಲ್ಲಿ ನೀರು ಉಕ್ಕಿತು. ಹೋದ ಜೀವ ಮರಳಿ ಬಂದಂತಾಯಿತು. ತಾಯಿ, ಮಗ ಕಾಲದ ಪರಿವೇ ಇಲ್ಲದೆ ಹೊಲದಲ್ಲಿ ದುಡಿದರು. ಹೊಲ ಹಸಿರು ಹೊದ್ದಿತು. ಅಮ್ಮ, ಮಗನ ಕಣ್ಣಗಳು ತುಂಬಿ ಬಂದವು.
ಇತ್ತೀಚಿಗೆ ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆಗಳು ವರದಿಯಾಗುತ್ತಿವೆ. ಇದರಿಂದ ಮನಸ್ಸು ಕಸಿವಿಸಿ, ತಳಮಳಗೊಳ್ಳುತ್ತದೆ. ಹೀಗಾಗಿ ನನಗೆ ಈ ಯಶೋಗಾಥೆ ನೆನಪಿಗಾಗಿ ಸ್ವಲ್ಪ ಸಮಾಧಾನವಾಯಿತು.
ರೈತರ ಪಾಲಿಗೆ ಬೆಳೆ ಕೇವಲ ಬೆಳೆಯಲ್ಲ; ಅದು ಆತ ಮತ್ತು ಕುಟುಂಬದವರ ಕನಸು!
ಮಗಳ ಮದುವೆ, ಮಗನ ಓದು, ಮಡದಿಯ ಕಾಯಿಲೆ, ಮನೆ ದುರಸ್ತಿ ...ಹೀಗೆ ಹತ್ತಾರು ಕನಸುಗಳನ್ನು ಬೆವರ ಹನಿಗಳನ್ನು ಒಟ್ಟುಗೂಡಿಸಿ ಬೆಳೆದಿರುತ್ತಾರೆ. ಅತಿವೃಷ್ಟಿ, ಅನಾವೃಷ್ಟಿ ಇಲ್ಲವೇ ಬೆಲೆ ಕುಸಿತದ ಕಾರಣದಿಂದ ಕನಸುಗಳು ಕಮರಿಹೋಗುತ್ತವೆ. ಕೈ ಖಾಲಿಯಾಗುತ್ತದೆ. ಸಾಲ ಎದೆಯುದ್ದ ಬೆಳೆಯುತ್ತದೆ.
‘ನಿಜಕ್ಕೂ ರೈತರಿಗೆ ಕೃಷಿ ಮತ್ತು ಸಾಲ ಜೀವ ಕಳೆದುಕೊಳ್ಳುವಷ್ಟು ದುಬಾರಿಯಾಗಿಯೇ?’ ರೈತ ಮುಖಂಡರೊಬ್ಬರನ್ನು ಕೇಳಿದೆ.  ‘ರೈತರ ಸಾಲದ ಹೊರೆ ಹೆಚ್ಚಲು ಸಾಂಪ್ರದಾಯಿಕ ಕೃಷಿ ಪದ್ಧತಿ, ಅವೈಜ್ಞಾನಿಕ ಬೆಲೆ ನೀತಿ, ಅಶಿಸ್ತು, ಅದ್ಧೂರಿ ಮದುವೆ ಹಾಗೂ ಹಬ್ಬ, ಜಾತ್ರೆಗಳು, ದುಶ್ಚಟಗಳ ಖರ್ಚೂ ಸೇರಿಕೊಂಡಿವೆ. ಎಷ್ಟೋ ರೈತರು ತಂದೆ, ತಾಯಿಯ ತಿಥಿ ಮಾಡಲು ಸಾಲ ಮಾಡುತ್ತಿರುವುದು ಸುಳ್ಳಲ್ಲ’ ಎಂದು ಹೇಳಿದರು.
ನನ್ನ ಪ್ರಕಾರ ದಿವಂಗತ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು ಈ ದೇಶ ಕಂಡ ದಾರ್ಶನಿಕ ರೈತ ನಾಯಕ. ಅವರು ಗ್ಯಾಟ್‌ ಒಪ್ಪಂದ ಸಂದರ್ಭದಲ್ಲಿ ತುಂಬಾ ಸ್ಪಷ್ಟವಾಗಿ ಹೀಗೆ ಹೇಳಿದ್ದರು: ‘ರೈತರು ಸಾಲು, ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುವ ದಿನಗಳು ದೂರವಿಲ್ಲ’.
‘ರೈತರ ಸರಣಿ ಆತ್ಮಹತ್ಯೆ ದೇಶದ ಆಹಾರ ಭದ್ರತೆಗೆ ಪೆಟ್ಟು ಬೀಳುವ ಮುನ್ಸೂಚನೆ. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಣಿಸಬೇಕು. ರೈತರ ಉತ್ಪನ್ನಗಳಿಗೆ ಬೆಲೆ ನೀತಿ ರೂಪಿಸಬೇಕು. ಇಲ್ಲದೇ ಹೋದರೆ ರೈತರು ಭರವಸೆ ಕಳೆದುಕೊಳ್ಳುತ್ತಾರೆ’ ಎಂದು ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಹೇಳುತ್ತಾರೆ.

ಇದೇ ವಿಚಾರವನ್ನು ಕರ್ನಾಟಕ ರಾಜ್ಯ ರೈತಸಂಘ ಆರಂಭದಿಂದಲೂ ಬಲವಾಗಿ ಪ್ರತಿಪಾದಿಸುತ್ತಲೇ ಬರುತ್ತಿದೆ.
ಇಲ್ಲಿ ರೈತರ ಆತ್ಮಹತ್ಯೆ ಕುರಿತು ವಿರೋಧ ಪಕ್ಷದವರು ಹಾಗೂ ಆಡಳಿತ ಪಕ್ಷದವರು ಆಡುತ್ತಿರುವ ಮಾತುಗಳನ್ನು ಗಮನಿಸಿ. ಇವರು ತಮ್ಮ ತಮ್ಮ ‘ನೆಲೆ’ಯಲ್ಲಿ ನಿಂತು ಅದಕ್ಕೆ ಅನುಗುಣವಾದ ಮಾತುಗಳನ್ನೆ ಆಡುತ್ತಿದ್ದಾರೆ. ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಆದರೆ, ಆಡಳಿತ ಮತ್ತು ವಿರೋಧ ಪಕ್ಷದವರು ವಿವೇಚನೆಯಿಂದ ವರ್ತಿಸುವುದು ಮೌಲ್ಯಯುತ ರಾಜಕಾರಣ ಮತ್ತು ರೈತರ ದೃಷ್ಟಿಯಿಂದ ಒಳ್ಳೆಯದು.
ಏಕೆಂದರೆ ಇದು ಆರೋಪ ಮತ್ತು ಸಮರ್ಥನೆ ಕಾಲವಲ್ಲ. ಇಬ್ಬರೂ ರಾಜಕೀಯ ಬಿಟ್ಟು ರೈತರ ಆತ್ಮಹತ್ಯೆಗೆ ಇರುವ ನಿಜವಾದ ಕಾರಣಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಇಲ್ಲಿ ಸರ್ಕಾರ,  ವಿರೋಧ ಪಕ್ಷಗಳು, ರೈತ ಸಂಘಟನೆಗಳು, ಕೃಷಿ ತಜ್ಞರು ಜೊತೆಯಾಗಿ ಕುಳಿತು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕು.
ಮತ್ತೆ ‘ಧನ್ವಂತರಿ ಕಥೆ’ಯನ್ನು ಮುಂದುವರೆಸುತ್ತೇನೆ.
ಆ ಋಷಿಗಳಿಬ್ಬರೂ ಭೂಲೋಕದಲ್ಲಿ ‘ನರಳುವದನಿ’ಯನ್ನು ಹುಡುಕುತ್ತಾ ಕಣಿವೆಯಲ್ಲಿರುವ ಜೋಪಡಿಗೆ ಬರುತ್ತಾರೆ. ಅಲ್ಲಿ ರೈತನೊಬ್ಬ ಎದೆಯನ್ನು ಎರಡೂ ಕೈಗಳಿಂದ ಒತ್ತಿಕೊಳ್ಳುತ್ತಾ ಘೋರವಾಗಿ ನರಳುತ್ತಿರುತ್ತಾನೆ. ಮುದ್ದೆ ಮುದ್ದೆಯಾಗಿ ನೆತ್ತರು ಅವನ ಬಾಯಿಯಿಂದ ಬರುತ್ತಿರುತ್ತದೆ. ಕಾಯಿಲೆ ಗುಣಪಡಿಸಲು ಎಲ್ಲ ಪ್ರಯತ್ನ ಮಾಡಿದ ಸೋತ ಋಷಿಗಳು ‘ಧನ್ವಂತರಿ’ಯನ್ನು ಕರೆಸುತ್ತಾರೆ. ಎಲ್ಲ ತಪಾಸಣೆ ಮಾಡಿ ಸೋತ ಧನ್ವಂತರಿ ‘ದಿವ್ಯಯಂತ್ರ’ದ ಮುಖಾಂತರ ನೋಡುತ್ತಾನೆ. ರೈತನ ಎದೆಯ ಮೇಲೆ ರಾಜ್ಯ ಭಾರ ಬಿದ್ದಿದೆ! ಇದನ್ನು ತೆಗೆದು ಹಾಕಿದರೆ ರೈತನ ಕಾಯಿಲೆ ಸರಿ ಹೋಗುತ್ತದೆ ಎನ್ನುತ್ತಾನೆ. ವಿಶ್ವಾಮಿತ್ರನ ಆಜ್ಞೆಯಂತೆ ಕ್ರಾಂತಿಭೂತಗಳು ರೈತನ ಎದೆ ಭಾರವನ್ನು ನೆಲಕ್ಕೆ ಉರುಳಿಸುತ್ತವೆ. ರೈತನ ‘ನರಳುವಿಕೆ’ ಕ್ರಮೇಣ ಕಡಿಮೆಯಾಗಿ ಕಾಯಿಲೆ ವಾಸಿ ಆಗುತ್ತದೆ.
ಈಗಲೂ ರೈತರ ಸ್ಥಿತಿ ಕುವೆಂಪು ಸೃಷ್ಟಿಸಿದ ‘ರೈತ’ನ ಸ್ಥಿತಿಗಿಂತ ಭಿನ್ನವಾಗಿಲ್ಲ. ಆದರೆ, ಆತನ ‘ನರಳುವದನಿ’ ಯಾರಿಗೂ ಕೇಳಿಸುತ್ತಿಲ್ಲ. ರೈತರ ದನಿಯಾಗಿದ್ದ ರೈತಸಂಘ ಸ್ವಾರ್ಥ ಮತ್ತು ನಾಯಕತ್ವಕ್ಕಾಗಿ ಹಲವು ಹೋಳುಗಳಾಗಿ ನಿಶಕ್ತಗೊಂಡಿದೆ.
ರೈತ ಸಂಘಟನೆಗಳು, ವಿರೋಧ ಪಕ್ಷಗಳು ವಿಶ್ವಾಮಿತ್ರ ಮತ್ತು ಪರಶುರಾಮನಂತೆ ನಮ್ಮ ನಡುವೆ ಕಾಣಿಸಿಕೊಳ್ಳಬೇಕು. ಸರ್ಕಾರವೆಂಬ ‘ಧನ್ವಂತರಿ’ಯನ್ನು ಕರೆಸಿ ರೈತರ ಎದೆ ಮೇಲೆ ಇರುವ ಬಂಡೆಯಂಥ ಭಾರವನ್ನು ಇಳಿಸುವ ಚಿಕಿತ್ಸೆ ಕೊಡಿಸಬೇಕಿದೆ. ಇಲ್ಲದೇ ಹೋದರೆ ರೈತರ ಆರ್ತನಾದ ಸೂಕ್ಷ್ಮ ಕಿವಿ ಇರುವವರಿಗೆ ಮಾತ್ರ ಕೇಳಿಸುತ್ತದೆ. ಹೃದಯವಂತರ ಕಣ್ಣಲ್ಲಿ ಹನಿ ನೀರು ಜಿನುಗಿಸುತ್ತದೆ. ಉಳಿದವರಿಗೆ ದಿನ ಸಾಯುವವರಿಗೆ ಅಳುವವರು ಯಾರು ಎಂದೆನಿಸಬಹುದು.
ಈ ನಡುವೆಯೂ ಬೋರ್‌ವೆಲ್‌ ಮಹದೇವಪ್ಪನವರ ಈ ಮಾತು ನನಗೆ ಹಿಡಿಸಿತು: ‘ನನಗೆ ಈಗಲೂ ಒಂಬತ್ತು ಲಕ್ಷ ಸಾಲವಿದೆ. ನಾನು ಸಾಲಕ್ಕೆ ಅಂಜಿದ್ದರೆ ಇಷ್ಟರಲ್ಲಿ ಸತ್ತು ವರ್ಷಗಳೇ ಆಗುತ್ತಿದ್ದವು. ಇದ್ದು ಗೆದ್ದು ತೋರಿಸಬೇಕು. ಇಲ್ಲದೇ ಹೋದರೆ ಜನರು ನಮ್ಮನ್ನು ಹೇಡಿಗಳು ಎಂದು ಕರೆಯುತ್ತಾರೆ. ಅವರಿಗೆ ಅಂಥ ಅವಕಾಶವನ್ನೇ ಕೊಡಬಾರದು’.
ದುರ್ಬಲ ಗಳಿಗೆಯಲ್ಲಿ ಆತ್ಮಹತ್ಯೆ ಬಗ್ಗೆ ಯೋಚಿಸುವ ರೈತರು ನಮ್ಮ ನಡುವೆಯೇ ಇರುವ ಬೋರ್‌ವೆಲ್‌ ಮಹದೇವಪ್ಪನಂಥ ದಿಟ್ಟರನ್ನು ನೆನಪು ಮಾಡಿಕೊಳ್ಳುವುದು ಒಳ್ಳೆಯದು.

ಕಾಮೆಂಟ್‌ಗಳಿಲ್ಲ: