ಸೋಮವಾರ, ಜೂನ್ 1, 2015

ಜಾನಪದ ಸಂಗತಿಗಳು ಮತ್ತು ಮಾಸ್ತಿ

ಸೌಜನ್ಯ:ಪ್ರಜಾವಾಣಿ

ನವೋದಯದ ಬಹುತೇಕ ಲೇಖಕರ ಗಮನವೆಲ್ಲ ಗ್ರಾಮೀಣ ವಿದ್ಯಮಾನಗಳ ಕಡೆಗೇ ಇದ್ದಿತು. ಆ ಕಾಲದ ಎಲ್ಲ ಲೇಖಕರೂ ಗ್ರಾಮ ಬದುಕಿನ ವಿವರಗಳ ಮುಖಾಂತರವೇ ವಿಶ್ವ ತತ್ವದ ಕಡೆಗೆ ಚಲಿಸಲು ಪ್ರಯತ್ನಿಸಿದರು. ‘ನಮ್ಮ ಊರಿನ ರಸಿಕರು’ ಕೃತಿ ಬರೆದ ಗೊರೂರು ರಾಮಸ್ವಾಮಿ ಅಯ್ಯಂಗಾರರು ಅವರು ವಾಸಿಸಿದ ಗ್ರಾಮದಲ್ಲೇ ಗಾಂಧೀ ತತ್ವದ ಸಾಂಘಿಕ ಜೀವನ, ಅದರ ಸರಳ ಸಮೃದ್ಧಿಯ ಮತ್ತು ಮುಗ್ಧತೆಯನ್ನು ಕಾಣಬಯಸುತ್ತಾರೆ. ಅಂತೆಯೇ ಕುವೆಂಪು ಅವರ ಎರಡು ಶ್ರೇಷ್ಠ ಕಾದಂಬರಿಗಳ ಮೂಲ ಪರಿಸರ ಕುಪ್ಪಳಿ. ಕಾರಂತರದು ಕೋಟಾ ಆದರೆ, ಬೇಂದ್ರೆಯವರದು ಸಾಧನಕೇರಿ. ಇಂತಿರುವಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಬರವಣಿಗೆಯ ಲೋಕ ವಿಸ್ತರಣಗೊಳ್ಳುವುದು ಕೋಲಾರ ಜಿಲ್ಲೆಯ ಮಾಸ್ತಿಯಿಂದಲೇ! ಮಾಸ್ತಿಯವರು ಜನಪದ ಮೂಲ ಪಾತ್ರಗಳಿಂದಲೇ ಎಲ್ಲ ಮಾನವೀಯ ಮೌಲ್ಯ ಮತ್ತು ಜೀವನ ತತ್ವಗಳನ್ನು ಕಂಡುಕೊಳ್ಳುತ್ತಾರೆ.
ಗಾಂಧೀಜಿ ನೇರ ಇಲ್ಲವೇ ಪರೋಕ್ಷ ಪ್ರಭಾವಕ್ಕೆ ಒಳಗಾದ ಕನ್ನಡದ ಲೇಖಕರನೇಕರು ಗ್ರಾಮೀಣ ಸಂಗತಿ ಕುರಿತಾದ ಆಸಕ್ತಿಯನ್ನು ಸರ್ವೋದಯದ ಒಂದು ಭಾಗವಾಗಿಯೇ ಸ್ವೀಕರಿಸಿದ್ದರು. ‘ಚೋಮನದುಡಿ’ ಕಾದಂಬರಿ ರಚನೆಯ ಹಿನ್ನೆಲೆಯಲ್ಲಿ ಶಿವರಾಮ ಕಾರಂತರು, ತಾವು ಮೂವತ್ತಕ್ಕೂ ಹೆಚ್ಚು ಹಳ್ಳಿಗಳನ್ನು ಸುತ್ತಿ ಅವರ ಬವಣೆಗಳನ್ನು ಕಂಡು ಕೃತಿ ರಚನೆಗೆ ತೊಡಗಿದ್ದಾಗಿ ಹೇಳಿದ್ದಾರೆ.
‘ಚೋಮನದುಡಿ’, ಕುವೆಂಪು ಅವರ ‘ನೇಗಿಲಯೋಗಿ’, ಬೇಂದ್ರೆಯವರ ‘ಭೂಮಿತಾಯಿಯ ಚೊಚ್ಚಿಲ ಮಗ’ ಇವೆಲ್ಲ ಪ್ರಕಟವಾದದ್ದು ಒಂದೇ ಕಾಲದಲ್ಲಿ. ಗ್ರಾಮ ಸಮಸ್ಯೆಗಳನ್ನು ಅರಿಯಲು ಹೋದ ಮಾಸ್ತಿ, ಕಾರಂತರು, ಎಚ್.ಎಲ್. ನಾಗೇಗೌಡರಂಥವರು ಗ್ರಾಮಸ್ಥರ ಸೃಜನಶೀಲ ಅಭಿವ್ಯಕ್ತಿಯ ಬಗೆಗೂ ಕುತೂಹಲ ತಾಳಿದರು.
1931ರಲ್ಲಿ ಹಲಸಂಗಿ ಗೆಳೆಯರು ಪ್ರಕಟಿಸಿದ ‘ಗರತಿಯ ಹಾಡು’ ಎಂಬ ಉತ್ತರ ಕರ್ನಾಟಕದ ಮೊದಲ ಜನಪದ ಸಂಕಲನಕ್ಕೆ ಬರೆದ ‘ಆಶೀರ್ವಾದ’ ಎಂಬ ಮುನ್ನುಡಿ ರೂಪದ ಬರವಣಿಗೆಯನ್ನು ಗಮನಿಸಿದರೆ ಇಂಗ್ಲಿಷ್ ವಿದ್ಯಾಭ್ಯಾಸದ ಮಾಸ್ತಿಯವರಿಗೆ ಲೋಕಜೀವನ ಮತ್ತು ಅಲ್ಲಿಯ ಸಾಹಿತ್ಯದ ಬಗ್ಗೆ ಇದ್ದ ಆಸಕ್ತಿ, ಕಳಕಳಿ ಎಷ್ಟೆಂಬುದು ಅರಿವಾಗುತ್ತದೆ. ಇದರಿಂದಲೇ ಈ ಹೊತ್ತು ಕನ್ನಡ ಸಾಹಿತ್ಯ ಪರಂಪರೆಗೆ ಸಮದಂಡಿಯಾಗಿಯೇ ಕನ್ನಡ ಜಾನಪದ ಸಾಹಿತ್ಯದ ಸಂಗ್ರಹ, ಅಧ್ಯಯನ, ಪ್ರಕಟಣೆ ಬೆಳೆದುಕೊಂಡು ಬಂದಿದೆ.
ಮಾಸ್ತಿಯವರು ‘ಗರತಿಯ ಹಾಡು’ ಕೃತಿಗೆ ಮುನ್ನುಡಿ ನೀಡಿದ್ದಲ್ಲದೆ ಆ ಸಂದರ್ಭಕ್ಕೆ ಜನತೆಗೆ ಮತ್ತು ಸಾಹಿತ್ಯಾಸಕ್ತರಿಗೆ ಜಾನಪದದ ಬಗ್ಗೆ ಇರಬೇಕಾದ ಆಸಕ್ತಿ, ಅಭಿರುಚಿಯನ್ನು ಕುರಿತು ತಮ್ಮ ವಿಮರ್ಶಾ ಕೃತಿಗಳಲ್ಲಿ 20ನೇ ಶತಮಾನದ ಪೂರ್ವಾರ್ಧದಲ್ಲೇ ಲೇಖನಗಳನ್ನು ಬರೆದಿರುತ್ತಾರೆ. 1955ರ ಸುಮಾರಿಗೆ ‘ಜಯಕರ್ನಾಟಕ’ ಪತ್ರಿಕೆಯಲ್ಲಿ ಜನಪದ ತ್ರಿಪದಿಗಳ ಬಗ್ಗೆ ಮಾಸ್ತಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ಹೇಳಿದ ಮಾತು ಹೀಗಿದೆ: ‘... ಈ ತ್ರಿಪದಿಗಳಲ್ಲಿ ನಮ್ಮ ಜನತೆಯ ಮನಸ್ಸು ಸಹಜ ಸುಂದರವಾಗಿ ಚಿತ್ರಿತವಾಗಿದೆ.
ಇವರು ಉಪಯೋಗಿಸುವ ಮಾತು ಸುಲಭವಾದದ್ದು, ದಿನ ಬಳಕೆಯದು; ಆದರೂ ಅದು ಹೃದಯದ ನೂರು ಭಾವಗಳನ್ನು ನಿರಾಯಾಸವಾಗಿ ವರ್ಣಿಸುತ್ತದೆ. ಓದುವವರ ಮನಸ್ಸನ್ನು ಅರ್ಥಕ್ಕೆ ನೇರವಾಗಿ ಒಯ್ಯುತ್ತದೆ. ಕಾವ್ಯದ ವಸ್ತು ಕೇವಲ ಐಶ್ವರ್ಯವಂತರ ಬಾಳು ಮಾತ್ರವಲ್ಲ, ಶೃಂಗಾರ ಲೀಲೆ ಮಾತ್ರವಲ್ಲ ಎನ್ನುವುದೂ ಸಾಮಾನ್ಯ ಜನಪದ ಬದುಕಿನ ಬೇನೆ ಬೇಗೆಗಳೂ, ನಲುಮೆ, ನಗೆಯಾಟಗಳೂ ಕಾವ್ಯದಲ್ಲಿ ಸುಂದರವಾಗಿ ರೂಪುಗೊಳ್ಳಬಹುದು. ಸುಸಂಸ್ಕೃತರಾದ ಜನರ ಮನಸ್ಸನ್ನು ಮುಟ್ಟಬಹುದು ಎನ್ನುವುದೂ ಈ ಪದಗಳಿಂದ ಕಾಣುತ್ತದೆ...’ ಮಾಸ್ತಿಯವರು ಈ ಬಗೆಯ ನುಡಿಗಳ ಕಡೆಗೆ ‘ಇದು ಕನ್ನಡ ಹೊಸ ಕವಿತೆಯ ಪೈರಿಗೆ ರಸ...’ ಎಂಬ ಮಾತಾಡಿದ್ದಾರೆ. ಇದರ ಅರ್ಥವ್ಯಾಪ್ತಿಯನ್ನು ಊಹಿಸುವುದೇ ಆದಲ್ಲಿ ಜಗತ್ತಿನ ಲೇಖಕರನೇಕರು ಮತ್ತು ಕನ್ನಡದ ದಲಿತ ಬಂಡಾಯ ಲೇಖಕರು ತಮ್ಮ ಕೃತಿನಿರ್ವಹಣೆಯ ವಸ್ತು ಮತ್ತು ಸೃಜನಶೀಲ ಅಭಿವ್ಯಕ್ತಿಗೆ ಜನಪದ ಮೂಲ ಸಂಗತಿಗಳನ್ನೇ ಆಯ್ಕೆ ಮಾಡಿಕೊಂಡದ್ದು ಕಂಡುಬರುತ್ತದೆ. ಇದೀಗ ಕನ್ನಡ ಕಥಾ ಪ್ರಕಾರವಂತೂ ಆಯಾ ಪ್ರಾಂತೀಯ ಭಾಷೆ ಮತ್ತು ವಸ್ತು ಪ್ರಭೇದದಲ್ಲಿ ತನ್ನ ಅತ್ಯುತ್ತಮ ಕಲಾ ನೈಪುಣ್ಯತೆಯನ್ನು ಸಾಧಿಸಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ.

ಮಾಸ್ತಿಯವರು ‘ಭಾವ’ ಎಂಬ ತಮ್ಮ ಜೀವನ ವಿವರಗಳುಳ್ಳ ಗ್ರಂಥದಲ್ಲಿ ತಮಗಿದ್ದ ಜಾನಪದ ಆಸಕ್ತಿಯನ್ನು ಕುರಿತು ಹೇಳಿಕೊಳ್ಳುವುದನ್ನು ಇಲ್ಲಿ ಕಾಣಿಸಬಹುದೆನಿಸುತ್ತದೆ. ಅವರು ರೆವಿನ್ಯೂ ಅಧಿಕಾರಿಯಾಗಿ ಕರ್ನಾಟಕದ ಬೇರೆ ಬೇರೆ ವಲಯಗಳಲ್ಲಿ ಉದ್ಯೋಗ ನಿರ್ವಹಿಸಿದ ಹಾಗೆಯೇ ಒಮ್ಮೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪ್ರವಾಸಿನಿಲಯದಲ್ಲಿ ತಂಗಿದ್ದರು. ರಾತ್ರಿ ಕಳೆದಂತೆ ಬೆಳದಿಂಗಳು ದಟ್ಟವಾಗಿ ಬಂಗಲೆಯ ಸುತ್ತ ಪಸರಿಸಿದ್ದಿತಂತೆ. ಆ ನಡುವೆ ಅವರಿದ್ದ ಬಂಗಲೆಯಿಂದ ಸ್ವಲ್ಪ ದೂರದಲ್ಲಿ ಕೋಲಾಟವೂ ಅದಕ್ಕೆ ತಕ್ಕಂಥ ಹಾಡುಗಳೂ ಕೇಳಿಸಿತು. ಅದನ್ನು ಕಿವಿಗೊಟ್ಟು ಆಲಿಸಿದ ಮಾಸ್ತಿ ಆ ಗುಂಪನ್ನು ಇತ್ತ ಬರಮಾಡಿ ಕೋಲು, ಕುಣಿತ, ಪದ ಕೇಳಿ ಅವರನ್ನು ಗೌರವಿಸಿ ಕಳಿಸಿದೆ ಎಂದು ಬರೆಯುತ್ತಾರೆ.
ಮಾಸ್ತಿಯವರಿಗೆ ಅಧಿಕಾರದಲ್ಲಿದ್ದಾಗ ಗ್ರಾಮಕಲೆ-ಸಾಹಿತ್ಯದ ಆಸಕ್ತಿ ಹುಟ್ಟಿದ್ದನ್ನು ಈ ಹಿಂದಿನ ಘಟನೆ ಹೇಳಿದರೆ, ಅವರು ‘ವಿಮರ್ಶೆ’ ಎಂಬ ಕೃತಿಯಲ್ಲಿಯೇ ಬರೆದ ‘ಕನ್ನಡನಾಡಿನ ಲಾವಣಿ ಸಾಂಗತ್ಯಗಳು’ ಎಂಬ ಲೇಖನ ವಿದ್ಯಾರ್ಥಿ ದಿಸೆಯಲ್ಲೇ ಅವರಿಗೆ ಜಾನಪದ ಕುರಿತಾದ ತೀವ್ರ ಕಳಕಳಿ ಹೇಗೆ ಚಿಗುರೊಡೆಯಿತೆಂಬುದನ್ನು ಹೇಳುತ್ತದೆ. ಇದು ಬಹುಶಃ ಜಾನಪದದಲ್ಲಿ ಯಾವುದೇ ಗ್ರಂಥ ಪ್ರಕಟವಾಗುವುದಕ್ಕೆ ಪೂರ್ವದಲ್ಲೇ ಬರೆದ ಲೇಖನ. 1926ರಲ್ಲಿ ಪ್ರಕಟವಾದ ಈ ಲೇಖನದ ಆರಂಭಕ್ಕೆ ಮಾಸ್ತಿಯವರು ಕೆಲವು ಸಂಗತಿಯನ್ನು ಹೀಗೆ ಉಲ್ಲೇಖಿಸುತ್ತಾರೆ. ‘...ಹದಿನಾಲ್ಕು ವರ್ಷಗಳ ಹಿಂದೆ ನಾನು ಕಾಲೇಜಿನಲ್ಲಿ ಓದುತ್ತಿದ್ದ ಕಾಲ. ಒಂದು ದಿನ ನಾನೂ ನನ್ನ ಸ್ನೇಹಿತರೂ ಊರ ಕೊಳದ ಬಳಿ ಸ್ನಾನಕ್ಕೆ ಹೋಗಿದ್ದೆವು. ಆಗ ದಾರಿಯಲ್ಲಿ ಗಂಡಸೊಬ್ಬ ಹೆಂಗಸೊಬ್ಬಳು ಇಬ್ಬರು ಜೋಗಿಗಳು ಬಂದರು. ಗಂಡಸು ಒಂದು ಚೀನಿ ಬುರುಡೆಯನ್ನು ಹಿಡಿದುಕೊಂಡಿದ್ದನು. ಇಂಗ್ಲಿಷರ ಬ್ಯಾಲೆಡ್‌ಗಳನ್ನು ಓದಿ ಅವರ ಸಾಹಿತ್ಯದಲ್ಲಿ ಅದಕ್ಕೆ ಇರುವ ಪ್ರಾಶಸ್ತ್ಯವನ್ನು ಆಂಗ್ಲೇಯ ಸಾಹಿತ್ಯ ಚರಿತ್ರೆಯಲ್ಲಿ ಆಗ ತಾನೇ ಓದಿ ತಿಳಿದಿದ್ದುದರಿಂದ ನನಗೆ ನಮ್ಮ ಸೀಮೆಯ ಗೀತೆಗಳನ್ನು ಸಂಗ್ರಹಿಸಬೇಕೆಂದು ಒಂದು ಆಸೆ ಆ ಕಾಲದಲ್ಲಿ ತಲೆದೋರಿತ್ತು. ನವೀನವಾದ ಆ ಉತ್ಸಾಹದಿಂದ ನಾನು ಜೋಗಿಯನ್ನು ಕರೆದು ‘ಹಾಡುತ್ತೀಯಾ..’ ಎಂದು ಕೇಳಿದೆನು. ಅವನು ಹಾಡುವವನಲ್ಲ, ಹಾಡುವವಳು ಆ ಹೆಂಗಸು ಎಂದು ಗೊತ್ತಾಯಿತು...’ ಎನ್ನುವ ಮಾಸ್ತಿ ಲೇಖನದ ನಡುವೆ ಆ ಪದ್ಯ ಭಾಗಗಳನ್ನು ಉದ್ಧರಿಸುತ್ತಾರೆ. ಹಾಡಿನ ಲಯ ಮತ್ತು ತಾಳದ ಸ್ವರೂಪವನ್ನೂ ಗುರುತಿಸುತ್ತಾರೆ. ಹಾಡಿನಲ್ಲಿ ಬರುವ ‘ಬ್ಯಾಟರಾಯಸ್ವಾಮಿ ದೇವುಡಾ’ ಎಂಬುದನ್ನು ಶಿವಸ್ವರೂಪಿ ದೈವವೆನ್ನುತ್ತಾರೆ. ಜನಪದರ ಶಿವ ಕೈಲಾಸವಾಸಿ ಎಂಬುದಕ್ಕಿಂತ ಮುಖ್ಯ ಒಬ್ಬ ಬೇಟೆಗಾರನೇ! ಅವನು ಬೇಟೆಮಾರ್ಗದಲ್ಲಿರುವಾಗ ಭಿಕ್ಷಕ್ಕೆ ಹೋಗಿ ಗಿರಿಜೆಯನ್ನು ಕಂಡು ಮೋಹಿಸುತ್ತಾನೆ.
1920ರ ಸುಮಾರಿನಲ್ಲಿಯೇ ಮಾಸ್ತಿಯವರು ತಾವು ಹೋದೆಡೆಯಲ್ಲೆಲ್ಲ ಜನಪದ ಕಲಾವಿದರನ್ನು ಕರೆಸಿ ಹಾಡು ಕೇಳುತ್ತ ಅವುಗಳ ವೈವಿಧ್ಯತೆಯನ್ನೆಲ್ಲ ವಿಶ್ಲೇಷಿಸುತ್ತಾರೆ. ಮಹಾಭಾರತ, ರಾಮಾಯಣವಲ್ಲದೆ ಇನ್ನಿತರ ಪೌರಾಣಿಕ ಕಥನಗಳೂ ಜನಪದ ಜಗತ್ತಿನಲ್ಲಿ ಹೇಗೆ ತಮ್ಮ ಅಸ್ತಿತ್ವ ಕಂಡುಕೊಂಡಿವೆ ಎಂಬುದರ ಚರ್ಚೆ ಲೇಖನದಲ್ಲಿ ದೀರ್ಘವಾಗಿಯೇ ಇದೆ. ‘ಅರ್ಜುನ ಜೋಗಿ’  ಎಂಬ ಜನಪದ ಗೀತೆಯ ನೆನಪಿನಲ್ಲೇ ಮಾಸ್ತಿಯವರು ‘ಜ್ಯೋಗ್ಯೋರ ಅಂಜನಪ್ಪನ ಕೋಳಿ ಕಥೆ’ ಬರೆದಿರುತ್ತಾರೆ.
ಬಂಡಿಹೊಳೆಯ ಅರ್ಚಕ ರಂಗಸ್ವಾಮಿಯವರು ದಕ್ಷಿಣ ಕರ್ನಾಟಕದ ಮೊದಲ ಜಾನಪದ ಕೃತಿಯಾಗಿ ‘ಹುಟ್ಟಿದಹಳ್ಳಿ ಹಳ್ಳಿಯ ಹಾಡು’ ಕೃತಿಯನ್ನು 1933ರ ಸುಮಾರಿನಲ್ಲಿ ಪ್ರಕಟಿಸಿದರು. ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕಿನ ದಕ್ಷಿಣ ಭಾಗಕ್ಕೆ ಹೇಮಾವತಿ ನದಿಯ ತೀರದ ಸುಂದರ ಪರಿಸರದಲ್ಲಿರುವ ಬಂಡಿಹೊಳೆಯಲ್ಲಿ ಈಚೆಗೆ ಅರ್ಚಕ ರಂಗಸ್ವಾಮಿಯವರ ಹಿರಿಯ ಪುತ್ರರನ್ನು ಕಂಡು ಅಂಥದೊಂದು ಪುಸ್ತಕ ಬರೆಯಲು ಪ್ರೇರಣೆ ದೊರೆತದ್ದು ಎಲ್ಲಿಂದ ಎಂಬ ಪ್ರಶ್ನೆಗೆ ಅವರ ಉತ್ತರ ಕುತೂಹಲಕರವಾಗಿದ್ದಿತು- ಮಾಸ್ತಿಯವರು ನಂಜನಗೂಡು ಸುತ್ತಿನಲ್ಲಿ ಉಪವಿಭಾಗಾಧಿಕಾರಿಯಾಗಿದ್ದರಂತೆ. ಒಮ್ಮೆ ಮೈಸೂರಿನಲ್ಲಿ ಸಿಕ್ಕಿದ ಮಾಸ್ತಿ ಸಾಹೇಬರನ್ನು ರಂಗಸ್ವಾಮಿಯವರು ಭೇಟಿಮಾಡಿದರು. ಊರು, ಕೇರಿ, ಪ್ರದೇಶಗಳನ್ನೆಲ್ಲ ವಿಚಾರಿಸಿದ ಮಾಸ್ತಿಯವರು ರಂಗಸ್ವಾಮಿಯವರಿಗೆ ಗ್ರಾಮದಲ್ಲಿರುವ ನುಡಿಗಟ್ಟು, ಗಾದೆ, ಒಗಟು, ಬೈಗುಳ, ಹಾಡು ಇದನ್ನೆಲ್ಲ ಸಂಗ್ರಹಿಸಿ ಪ್ರಕಟಿಸಲು ಸೂಚಿಸಿದರಂತೆ. ಈ ಸಲಹೆಯನ್ನು ರಂಗಸ್ವಾಮಿಯವರಿಂದ ತಿರಸ್ಕರಿಸಲಾಗಲಿಲ್ಲ. ನಾಲ್ಕನೇ ತರಗತಿಯಷ್ಟು ಓದಿದ್ದ ರಂಗಸ್ವಾಮಿಯವರು ತಮ್ಮ ಪರಿಸರದ ಸಕಲ ಶಾಬ್ದಿಕ ಸಂಗತಿಗಳನ್ನು ಸಂಗ್ರಹಿಸಿ ಹಣ ಹಾಕಿ ಪ್ರಕಟಿಸಿದರು. ಹೀಗೆ ‘ತಮ್ಮ ತಂದೆಯವರು ಹುಟ್ಟಿದಹಳ್ಳಿ ಕೃತಿ ಪ್ರಕಟಿಸಲು ಬೀಜ ಪ್ರೇರಣೆಯಾದುದು ಮಾಸ್ತಿಯವರ ನುಡಿಮಾತಿನಿಂದ’ ಎಂದರು.
ಜಾನಪದದ ವೈವಿಧ್ಯತೆ, ಸಂಗ್ರಹ, ಚಿಂತನೆ, ಕಲಾವಿದರನ್ನು ಕುರಿತಾಗಿ ತಮ್ಮ ಜೀವನದುದ್ದಕ್ಕೂ ಆಸಕ್ತಿ ತೋರಿಸಿದ ಮಾಸ್ತಿಯವರು ಕಥೆಗಳನ್ನು ಸಹ ಆ ಹಿನ್ನೆಲೆಯಲ್ಲೇ ಬರೆದರು. ಮಾಸ್ತಿಯವರು ಐತಿಹಾಸಿಕ, ಪೌರಾಣಿಕ, ಸಾಮಾಜಿಕವಲ್ಲದೆ ವ್ಯಕ್ತಿಸಂಬಂಧಿತವೆನಿಸುವ ಸುಮಾರು ನೂರು ಕಥೆಗಳನ್ನು ಬರೆದಿರುತ್ತಾರೆ. ಮಾಸ್ತಿಯವರ ಆರಂಭಿಕ ಬರಹಗಳಾದ ರಂಗಪ್ಪನ ದೀಪಾವಳಿ, ರಂಗನ ಮದುವೆ, ಕಾಮನಹಬ್ಬದ ಒಂದು ಕಥೆ, ವೆಂಕಟಶಾಮಿ ಪ್ರಣಯ, ಇವೆಲ್ಲ ಜನಪದ ಜಗತ್ತಿನಿಂದ ಆಯ್ದ ಅನುಭವಗಳೇ! ಈ ಬಗೆಯ ಜನಪದ ಮೂಲದ ಬರಹಗಳಿಗೆ ತೊಡಗುವಲ್ಲಿ ಮಾಸ್ತಿ ಕೊಂಚ ಸಂಕೋಚ ಭಾವದಿಂದಲೇ ‘... ಇದೇನು ರಂಗನ ಮದುವೆ, ರಂಗಪ್ಪನ ದೀಪಾವಳಿ ಎಂದು ಯಾರೂ ಮೂಗು ಮುರಿಯಬಾರದು, ಮನಸ್ಸು ಕೊಟ್ಟೇ ನಾನು ಹೇಳುವ ಕಥೆಗಳನ್ನು ಸ್ವಲ್ಪ ಹೊತ್ತು ಕೇಳಿಸಿಕೊಳ್ಳಬೇಕು...’ ಎಂದೇ ಕಥೆಗಳನ್ನು ಆರಂಭಿಸುತ್ತಾರೆ. ಅಷ್ಟೇ ಅಲ್ಲ ಮಾಸ್ತಿಯವರ ಕಥನ ಶೈಲಿಯೂ ಕೂಡ ಜನಪದ ಮಾದರಿಯದೇ. ಯಾರು ಯಾರಿಗೋ ಹೇಳಿದ ಕಥೆಯನ್ನು ತಾವೂ ಕೇಳಿಸಿಕೊಂಡಂತೆ ಬರೆಯುತ್ತಾರೆ. ಅಥವಾ ಎಲ್ಲಿಯೋ ಕೇಳಿದ, ನಡೆದ ಐತಿಹಾಸಿಕ ಘಟನೆಯನ್ನು ನೆನಪಿಸಿಕೊಳ್ಳುವವರಂತೆ, ಇಲ್ಲವೇ ಕಥೆಯೊಳಗೆ ಒಂದು ಪಾತ್ರ ತನ್ನ ಬದುಕಿನ ಘಟನೆಯನ್ನು ಇತರ ಪಾತ್ರಗಳ ಮುಂದೆ ಹಂಚಿಕೊಳ್ಳುತ್ತದೆ. ‘ಗೌತಮಿ ಹೇಳಿದ ಕಥೆ’ಯು ಇದಕ್ಕೆ ಅತ್ಯುತ್ತಮ ಉದಾಹರಣೆ! ಜನಪದರಂತೆಯೇ ಮಾಸ್ತಿಯವರು ಬದುಕಿನ ತಾಳುವಿಕೆಯನ್ನು, ವಿಧಿ ವಾದವನ್ನು ಒಪ್ಪಿಕೊಳ್ಳುತ್ತಾರೆ. ಆದರೆ ತಮ್ಮ ಕಥೆಗಳ ಪಾತ್ರಗಳು ಅವರದೇ ಬದುಕಿನಲ್ಲಿಯ ದಾಟುವಿಕೆಯನ್ನು ಹೇಳುವುದಿಲ್ಲ. ಹೆಚ್ಚಾಗಿ ಪಾತ್ರಗಳು ಇರುವ ಬದುಕನ್ನು ಇರುವಂತೆಯೇ ಒಪ್ಪಿಕೊಳ್ಳುತ್ತವೆ. ಇದೇನೇ ಇರಲಿ ಮಾಸ್ತಿಯವರ ಕಥೆ, ಕಾವ್ಯ, ಕಾದಂಬರಿ, ನಾಟಕ, ಭಾಷಾಂತರ ಚರ್ಚೆಗಿಂತ ಅವರಿಗೆ ವಿದ್ಯಾಭ್ಯಾಸ ಕಾಲದಿಂದ ಕೊನೆಯವರೆಗೂ ಇದ್ದ ಜಾನಪದ ಸಂಬಂಧದ ಕುತೂಹಲ, ಆಸಕ್ತಿಯನ್ನಷ್ಟೇ ಇಲ್ಲಿ ಪ್ರಸ್ತಾಪಿಸಲಾಗಿದೆಯಷ್ಟೆ.
ಮಾಸ್ತಿಯವರಿಗೆ ಜ್ಞಾನಪೀಠ ಪ್ರಶಸ್ತಿ ಕೊಡ ಮಾಡಿದ್ದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ. ಆ ಹೊತ್ತು ಮಾಸ್ತಿಯವರು ಬರುವುದನ್ನು ಮುಖ್ಯಮಂತ್ರಿ ಯಾಗಿದ್ದ ರಾಮಕೃಷ್ಣ ಹೆಗಡೆಯವರು ಹೊರಗೆ ನಿಂತು ನಿರೀಕ್ಷಿಸುತ್ತಿದ್ದರು. ಬಂದ ಮಾಸ್ತಿಯವರು ‘ನನಗಾಗಿ ನೀವು ಇಲ್ಲಿ ನಿಲ್ಲುವುದೇ’ ಎಂದರು. ಪ್ರಶಸ್ತಿ ವಿತರಣೆಗೆ ರಾಷ್ಟ್ರಪತಿಗಳೇ ಬರುತ್ತಿರುವಾಗ ನಾನು ನಿಮಗಾಗಿ ಕಾಯವುದು ‘ಕನ್ನಡಿಗನಾದ’ ನನಗೆ ಸಂತೋಷದ ಸಂಗತಿ ಎಂದರು.
1969ರ ಸಮಾರಂಭವೊಂದರಲ್ಲಿ ಮಾಸ್ತಿಯವರೇ ಹೇಳಿದ ಮಾತು: ಒಂದು ದಿನ ಮಾಸ್ತಿಯವರು ಕಚೇರಿಯಿಂದ ಮನೆಗೆ ಹೋಗುವುದು ತಡರಾತ್ರಿಯಾಗಬಹುದೆಂದು ಮನಗಂಡು, ಸಂಜೆ ಹೊತ್ತಿಗೆ ತಾಯಿ ಕಾಯುತ್ತಿರಬಹುದೆಂದು ಡ್ರೈವರ್ ಕೂಡೆ ತಾವು ಮನೆಗೆ ಬರುವುದು ವಿಳಂಬವಾಗುವುದೆಂದು ಹೇಳಿ ಬರಲು ಕಳಿಸಿದರಂತೆ. ಡ್ರೈವರ್ ಮನೆಯತ್ತ ಬಂದು ಹೊರಗೆ ನಿಂತಿದ್ದ ತಾಯಿಯವರಿಗೆ ‘ಸಾಹೇಬರು’ ಬರುವುದು ತಡವಾಗುತ್ತದೆಂದ. ತಾಯಿ, ‘ನಾನು ಸಾಹೇಬರಿಗಾಗಿ ಕಾಯುತ್ತಿಲ್ಲ, ‘ವೆಂಕ್ಟೇಶೂ’ ಬರಲಿಲ್ಲವೇ’ ಎಂದು ಕೇಳಿದರು. ತಾಯಿಯವರಿಗೂ, ಡ್ರೈವರ್‌ಗೂ ಸಾಹೇಬರು ಯಾರು, ವೆಂಕ್ಟೇಶೂ ಯಾರು ಎಂದು ಬೇಗ ಅರ್ಥವೇ ಆಗಲಿಲ್ಲವಂತೆ !
ಇದೇ ಜೂನ್ 6, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನ.

ಕಾಮೆಂಟ್‌ಗಳಿಲ್ಲ: