ಬುಧವಾರ, ಫೆಬ್ರವರಿ 11, 2015

ಅಂಗನವಾಡಿ ಸ್ಟ್ರೈಕುಗಳ ಪ್ರವಾಸ ಕಥನ

-ಅರುಣ್ ಜೋಳದಕೂಡ್ಲಿಗಿ

  ಸಹಜವಾಗಿ ಅಂಗನವಾಡಿ ಕಾರ್ಯಕರ್ತೆಯರು ವರ್ಷಕ್ಕೆ ನಾಲ್ಕೈದು ಬಾರಿ ಸ್ಟ್ರೈಕ್ ಮಾಡುತ್ತಾರೆ. ಇದು ತಮ್ಮ ಬೇಡಿಕೆಗಳನ್ನು ಈಡೇರಿಸುವ ಹಕ್ಕೊತ್ತಾಯದ ಚಳವಳಿ. ಹೀಗೆ ನಿರಂತರ ಹೋರಾಟ ಮಾಡಿದ ಫಲ ಈಗ ಹುಸಿರಾಡುವಷ್ಟು ಸಂಬಳ ಸಿಗುತ್ತಿದೆ. ಇಂತಹ ಚಳವಳಿಗೆ ಬಾಲ್ಯದಲ್ಲಿ ಅವ್ವನ ಜತೆ ಹತ್ತಾರು ಬಾರಿ ಹೋಗಿದ್ದೇನೆ. ಇವುಗಳನ್ನು ನೆನಪಿಸಿಕೊಂಡರೆ ಅವು  ಹೋರಾಟದ ಕಥನದಂತಿರದೆ, ಪ್ರವಾಸ ಕಥನದಂತಿರುವುದು ಸೋಜಿಗ.

   ಸಾಮಾನ್ಯವಾಗಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ರಾಜ್ಯಮಟ್ಟದ  ಸಂಘಟನೆಗಳಿವೆ. ಅವುಗಳು ಕಾಲ ಕಾಲಕ್ಕೆ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಸ್ಟ್ರೈಕ್‌ಗಳನ್ನು ನಡೆಸುತ್ತಾ ಬಂದಿವೆ. ಅದಕ್ಕೆ ಸಹಾಯಕವಾಗಿ ಯೂನಿಯನ್‌ಗಳು, ಸಿಪಿಐ ತರಹದ ಸಂಘಟನೆಗಳು ಅಂಗನವಾಡಿ ಕಾರ್ಯಕರ್ತೆಯರ ಪರವಾದ ದ್ವನಿ ಎತ್ತುತ್ತಾ ಬಂದಿವೆ. ಈ ಬಗೆಯ ಚಳವಳಿಯ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಜವಾಗಿ ತಿಳುವಳಿಕೆ ಕಡಿಮೆ. ಅವರು ನಮ್ಮ ಬಗ್ಗೆ ಏನೋ ಒಳ್ಳೆ ಕೆಲಸ ಮಾಡುತ್ತಾರೆ ಎಂದಷ್ಟೆ ಭಾವಿಸಿರುತ್ತಾರೆ. ಕಾರಣ ಅಂಗನವಾಡಿ ನೌಕರರು ಸಾಮಾನ್ಯವಾಗಿ ಎಸ್. ಎಸ್. ಎಲ್.ಸಿ ಓದಿದವರು. ಬಹುಪಾಲು ಹೆಚ್ಚು ಓದದವರು. 

  ಕೆಲವರಿಗೆ ನಾವು ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದೇವೆ ಎನ್ನುವುದೂ ತಿಳಿದಿರುವುದಿಲ್ಲ. ನಾವು ಮಾಡುವ ಕೆಲಸಕ್ಕೆ ಇಷ್ಟು ಸಂಬಳ ಕೊಡುವುದೇ ಸರಿ ಇರಬಹುದು ಎಂದು ಭಾವಿಸಿರುತ್ತಾರೆ. ಕಾರಣ ಇವರಿಗೆ ತಾವು ಮಾಡುವ ಕೆಲಸದ ಮಹತ್ವ, ಅದಕ್ಕೆ ಸಿಗಬಹುದಾದ ನ್ಯಾಯಯುತ ಸಂಬಳ ಮುಂತಾದ ಬಗ್ಗೆ ಜಾಗೃತಿ ಇರುವುದಿಲ್ಲ. ಚಳವಳಿಗಾರರು ಅವರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು  ಕಡಿಮೆ. ಹೋರಾಟದ ಖರ್ಚಿಗೆಂದು ಸಂಬಳದಲ್ಲಿ ಇಂತಿಷ್ಟು ಹಣವನ್ನು ಕೇಳುವಲ್ಲಿ, ವಸೂಲಿ ಮಾಡುವಲ್ಲಿ ಇದ್ದ ಜಾಗರೂಕತೆ ಅವರೊಳಗೆ ಒಂದು ಜಾಗೃತಿಯನ್ನು ಉಂಟು ಮಾಡುವುದರ ಕಡೆ ಸಂಘಟನೆಗಳು ಗಮನ ಕೊಟ್ಟಂತೆ ಕಾಣುವುದಿಲ್ಲ.
 ಕಡಿಮೆ ಸಂಬಳ, ಕಾಯಂ ಅಲ್ಲದ ವೃತ್ತಿ ಕೆಲವೊಮ್ಮೆ ಅಂಗನವಾಡಿ ನೌಕರರ ಬಾಯಿ ಮುಚ್ಚಿಸುತ್ತದೆ. ಅದರಲ್ಲೂ ಜಾಗೃತಿ ಇರುವ ಕೆಲವಾದರೂ ಅಂಗನವಾಡಿ ನೌಕರರು ತಮ್ಮ ಮೇಲಿನ ಸೂಪರ್ ವೈಜರ್ ಮೇಲಾಗಲಿ, ಸಿಡಿಪಿಓ ಮೇಲಾಗಲಿ ದೌರ್ಜನ್ಯದ ವಿರುದ್ಧ ದ್ವನಿ ಎತ್ತದಷ್ಟು ಭಯಗ್ರಸ್ತರೂ ಇದ್ದಾರೆ. ಹಾಗಾಗಿ ಎಷ್ಟೋ ಬಾರಿ ಸೂಪರ್ ವೈಜರ್‌ಗಳೇ ಅಂಗನವಾಡಿ ಕಾರ್ಯಕರ್ತೆಯರ ಶೋಷಕರಾಗಿರುತ್ತಾರೆ. ಇನ್ನು ಕೆಲವು ಕಡೆ ಸಿಡಿಪಿಓ ಶೋಷಕರಾಗಿರುತ್ತಾರೆ. ಇಂತಹ ಅಸಹಾಯಕತೆಯ ಕಾರಣಕ್ಕೆ ಕೆಲವು ಅಂಗನವಾಡಿ ಕಾರ್ಯಕರ್ತೆಯರೂ ಸಹ ತಮ್ಮ ಸಹಾಯಕಿಯ ಪಾಲಿಗೆ ಶೋಷಕಿಯಾಗುವ ಸಾದ್ಯತೆಯೂ ಇರುತ್ತದೆ. ಕೆಲವು ಹಳ್ಳಿಗಳಲ್ಲಿ ಸಹಾಯಕಿ ಸ್ವಂತ ಹಳ್ಳಿಯವಳಾಗಿದ್ದು, ಕಾರ್ಯಕರ್ತೆ ಬೇರೆ ಊರಿನವಳಾಗಿದ್ದರೆ, ಅಲ್ಲಿ ಸಹಾಯಕಿಯೇ ಊರವರ ಜತೆ ಸೇರಿಕೊಂಡು ಕಾರ್ಯಕರ್ತೆಯನ್ನು ಶೋಷಿಸುವ ಘಟನೆಗಳೂ ಇಲ್ಲದಿಲ್ಲ. 


  ಸಂಬಳ ಆರು ತಿಂಗಳಿಗೊಮ್ಮೆಯಾದರೂ ಅವರು ಚಕಾರ ಎತ್ತದೆ ಮೌನವಾಗಿರುವುದನ್ನು ನೋಡಿದ್ದೇನೆ. ಅವು ಸ್ಥಳೀಯ ಕಾರಣಗಳೇ ಆಗಿರುತ್ತವೆ. ಹೀಗೆ ಅಂಗನವಾಡಿ ನೌಕರರ ಶೋಷಣೆಯ ನೆಲೆಗಳು ಹಲವಿವೆ. ಆದರೆ ಅವರು ಸರಕಾರದ ವಿರುದ್ಧ ಮಾತ್ರ ದ್ವನಿ ಎತ್ತಿ, ಆಂತರಿಕವಾಗಿ ತಮ್ಮದೇ ಮೇಲಾಧಿಕಾರಿಗಳ ಅನ್ಯಾಯದ ವಿರುದ್ಧ ದ್ವನಿ ಎತ್ತದಷ್ಟು ಈಗಲೂ ಅಸಬಲರು. ಹೀಗೆ ಕಡಿಮೆ ಸಂಬಳಕ್ಕೆ ದುಡಿವ ದಿನಗೂಲಿಯ ಎಲ್ಲಾ ನೌಕರರ ಪಾಡು ಇದೇ ಆಗಿದೆ. ಕಾರಣ ಪ್ರತಿಭಟಿಸಿದರೆ, ಎಲ್ಲಿ ನಮ್ಮನ್ನು ಕೆಲಸದಿಂದ ಕಿತ್ತು ಹಾಕುತ್ತಾರೋ ಎನ್ನುವ ಭೂತ ಯಾವಾಗಲೂ ಬೆನ್ನ ಹಿಂದೆಯೇ ಹೊಂಚು ಹಾಕಿರುತ್ತದೆ.

 ಅಂಗನವಾಡಿ ನೌಕರರ ಪರವಾದ ತಾಲೂಕು, ಜಿಲ್ಲಾ, ರಾಜ್ಯ, ದೇಶ ಮಟ್ಟದ ಚಳವಳಿಯನ್ನು ಹಮ್ಮಿಕೊಳ್ಳುತ್ತಾರೆ. ಇದರಲ್ಲಿ ತಾಲೂಕು, ಜಿಲ್ಲಾ ಮಟ್ಟದ ಚಳವಳಿಗೆ ಅಷ್ಟು ಉತ್ಸಾಹದಿಂದ ಪಾಲ್ಗೊಳ್ಳದ ನೌಕರರು ರಾಜ್ಯ, ದೇಶ ಮಟ್ಟದ ಸ್ಟ್ರೈಕುಗಳಿಗೆ ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಕಾರಣ ಬೆಂಗಳೂರು ದೆಹಲಿಗೆ ಹೋಗಲು ಉಚಿತ ರೈಲು ಟಿಕೇಟನ್ನು ನೀಡುತ್ತಾರೆ. ಹಾಗಾಗಿ ಇದನ್ನವರು ಪ್ರವಾಸ ಎಂದೇ ತಿಳಿಯುತ್ತಾರೆ. ಇಂತಹ ಮುಷ್ಕರಗಳಿಗೆ ತಮ್ಮ ಮಕ್ಕಳನ್ನು ತಾಯಿ ಅಕ್ಕ ತಂಗಿಯರನ್ನು, ಕೆಲವರು ಗಂಡನನ್ನೂ ಕರೆದೊಯ್ಯುತ್ತಾರೆ. ಕಾರಣ ಬೆಂಗಳೂರು ನೋಡುವುದೇ ಆಗಿರುತ್ತದೆ. ಹಾಗೆ ಹೋದಾಗ ಮುಷ್ಕರದಲ್ಲಿ ಸ್ವಲ್ಪಹೊತ್ತು ಕೂಗಿದಂತೆ ಮಾಡಿ ತಪ್ಪಿಸಿಕೊಂಡು ಪ್ರವಾಸ ಶುರು ಮಾಡುತ್ತಾರೆ. ಅನೇಕ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರು ಮೈಸೂರು ನೋಡಲು ಸಹಾಯಕವಾದದ್ದೇ ಇಂಥಹ ಸ್ಟ್ರೈಕುಗಳು. ಮುಖ್ಯವಾಗಿ ಅಂಗನವಾಡಿ ನೌಕರರಿಗೆ ಕಡಿಮೆ ಸಂಬಳವಾದ ಕಾರಣ ಅವರಿಗೆ ಬೆಂಗಳೂರಿನಂತಹ ನಗರಗಳನ್ನು ನೋಡುವುದು ಕೂಡ ದೂರದ ಕನಸು. ಇನ್ನು ಹಾಗೆ ದೊಡ್ಡ ನಗರಗಳಿಗೆ ಹೋಗುವ ಕಾರಣಗಳೂ ಇರುವುದಿಲ್ಲ.

  ಹಾಗಾಗಿ ಮುಷ್ಕರ ಇದೆ ಎನ್ನುವ ವಾರದ ಮುಂಚೆ ರೊಟ್ಟಿ, ತರತರದ ಚಟ್ನಿಗಳು, ಶೇಂಗ ಪುಡಿ, ತರತರದ ಸಿಹಿ ತಿನಿಸುಗಳನ್ನು ಮಾಡುತ್ತಾರೆ. ಹೊರಡುವ ದಿನ ಮೊಸರನ್ನದ ಬುತ್ತಿ ಅನ್ನವನ್ನು ಸಿದ್ದಪಡಿಸಿಕೊಳ್ಳುತ್ತಾರೆ. ಹಾಗಾಗಿ ಪ್ರತಿ ಅಂಗನವಾಡಿ ಕಾರ್ಯಕರ್ತೆಯರ ತರಾವರಿ ಅಡುಗೆಗಳು ಬಾಯಲ್ಲಿ ನೀರೂರಿಸುವಂತಿರುತ್ತವೆ. ಎಲ್ಲರೂ ತಮ್ಮದನ್ನು ಮತ್ತೊಬ್ಬರಿಗೆ ಹಂಚುತ್ತಾರೆ ಆಗ ತರಾವರಿ ತಿಂಡಿಗಳು ಹಂಚಲ್ಪಡುತ್ತವೆ. ಇದು ಅಕ್ಷರಶಃ ಪ್ರವಾಸದ ಸಿದ್ದತೆಯಂತೆಯೇ ಇರುತ್ತದೆ. 
 ಈ ಪ್ರವಾಸ ಶುರುವಾಗುವುದು ತಾಲೂಕು ಕೇಂದ್ರದಿಂದ. ಇಡೀ ತಾಲೂಕಿನ ಅಂಗನವಾಡಿ ನೌಕರರು ಒಂದೆಡೆ ಸೇರುತ್ತಾರೆ. ಅಲ್ಲಿನ ತಾಲೂಕು ಅಧ್ಯಕ್ಷೆ ತಾವು ಏನಕ್ಕಾಗಿ ಹೋಗುತ್ತಿದ್ದೇವೆ ಎಂದು ಭಾಷಣ ಮಾಡಿ ರೈಲು ಟಿಕೇಟನ್ನು ಹಂಚುತ್ತಾರೆ. ಹೀಗೆ ಹಂಚುವ ರೈಲು ಟಿಕೇಟಿಗೆ ತಾ ಮುಂದು ನಾ ಮುಂದು ಎಂದು ನೂಕು ನುಗ್ಗಲು ಮಾಡುತ್ತಾರೆ. ಕಾರಣ ಟೋಕನ್ ಕಾಲಿಯಾಗಿಬಿಟ್ಟರೆ ? ಎನ್ನುವ ಭಯ ಇವರನ್ನು ಕಾಡುತ್ತಿರುತ್ತದೆ. ನಂತರ ಹತ್ತಿರದ ರೈಲು ಸ್ಟೇಷನ್ನಿನಿಂದ ತಮ್ಮ ಪ್ರಯಾಣ ಶುರುಮಾಡುತ್ತಾರೆ. ಸಾವಿರಾರು ಜನರು ಇರುವ ಕಾರಣಕ್ಕೆ ರೈಲಿನಲ್ಲಿ ಕುರಿಗಳನ್ನು ತುಂಬಿದ ಅನುಭವವಾಗುತ್ತದೆ. ಎಲ್ಲೆಂದರಲ್ಲಿ ಇಡೀ ರೈಲಿನ ತುಂಬಾ ಅಂಗನವಾಡಿ ನೌಕರರ ಸದ್ದೇ ತುಂಬಿರುತ್ತದೆ.

  ಮರುದಿನ ನಿರ್ದಿಷ್ಠಪಡಿಸಿದ ಸ್ಥಳದಿಂದ ಸ್ಟ್ರೈಕ್ ಆರಂಭವಾಗುತ್ತದೆ. ಕೂಗು ಘೋಷಣೆಗಳೊಂದಿಗೆ ಸಾಲು ಸಿದ್ದವಾಗುತ್ತದೆ. ಆಗ ನೌಕರರು ಒಬ್ಬರ ಸೀರೆಯನ್ನು ಒಬ್ಬರು ಹಿಡಿದುಕೊಂಡಿರುತ್ತಾರೆ. ಕಾರಣ ತಾವು ಎಲ್ಲಾದರೂ ತಪ್ಪಿಸಿಕೊಂಡು ಬಿಟ್ಟೇವು ಎಂಬ ಭಯವಿರುತ್ತದೆ. ಆಗ ಆಯಾ ತಾಲೂಕಿನ ನೌಕರರು ಒಂದೇ ಕಡೆ ಇರುತ್ತಾರೆ. ಇವರುಗಳೆಲ್ಲಾ ತಮ್ಮದೇ ಗುಂಪನ್ನು ಕಟ್ಟಿಕೊಂಡು ಒಂದೆಡೆ ಸೇರಿರುತ್ತಾರೆ. ಇದು ಅವರ ನಗರದ ಬಗೆಗಿನ ಭಯವನ್ನೂ, ನಗರವನ್ನು ಸಂಭಾಳಿಸುವ ಜ್ಞಾನದ ಕೊರತೆಯನ್ನೂ ತೋರಿಸುತ್ತದೆ.

 ಕೂಡ್ಲಿಗಿ ತಾಲೂಕಿನ ಬಹುಪಾಲು ಅಂಗನವಾಡಿ ಕಾರ್ಯಕರ್ತೆಯರಿಗೆ ರೈಲು ಪ್ರಯಾಣ ಕೂಡ ಹೊಸದೆ. ಸ್ಟ್ರೈಕ್ ಮುಗಿಸಿಕೊಂಡು ಬಂದಾಗ ಊರಲ್ಲಿ ರೈಲು ಪ್ರಯಾಣ ಮಾಡಿದ್ದನ್ನು ವಿಮಾನ ಪ್ರಯಾಣ ಮಾಡಿದ್ದಕ್ಕಿಂದ ಮಜವಾಗಿ ವರ್ಣಿಸುವುದನ್ನು ನೋಡಬಹುದು. ಕೆಲವೊಮ್ಮೆ ಅಂಗನವಾಡಿ ಕಾರ್ಯಕರ್ತೆಯರ ಗಂಡಂದಿರೂ ಅಪರೂಪಕ್ಕೆ ಬೆಂಗಳೂರು ನೋಡಲು ಬರುತ್ತಾರೆ. ಅವರದಂತೂ ನಾಯಿ ಪಾಡು. ಕಾರಣ ಹೆಣ್ಣಮಕ್ಕಳ ಹಿಂಡಿನಲ್ಲಿ ಬೆರಳೆಣಿಕೆಯ ಗಂಡಂದಿರ ಪಾಡು ಹೇಳತೀರದು.

 ನಾನು ಮೊದಲ ಬಾರಿಗೆ ಬೆಂಗಳೂರು ನೋಡಿದ್ದು ಸಹ ಅವ್ವನ ಜತೆ ಸ್ಟ್ರೈಕ್‌ಗೆ ಹೋದಾಗಲೆ. ಆಗ ಬೆಂಗಳೂರಿನ ಬಗ್ಗೆ ನಮ್ಮೂರಿನಲ್ಲಿ ಹುಟ್ಟಿಸಿದ್ದ ಭಯದ ಕಥೆಗಳೂ ಕೂಡ ನನ್ನನ್ನು ದಿಗಿಲುಗೊಳಿಸುವಂತೆ ಮಾಡಿದ್ದವು. ಬೆಂಗಳೂರಿನ ಮೋಸದ ಕಥೆಗಳು ನನಗೆ ನೆನಪಾದವು. ಹಳ್ಳಿಗರು ಎಂದು ಗೊತ್ತಾದರೆ, ಯಾರಾದರೂ ಯಾಮಾರಿಸುವವರು ಇದ್ದೇ ಇರುತ್ತಾರೆ ಎನ್ನುವುದು ನನ್ನೊಳಗೆ ಭಯ ಹುಟ್ಟಿಸಿತ್ತು. ಹಾಗಾಗಿ ಕಾಣುವ ಬೆಂಗಳೂರಿಗರಲ್ಲಿ ಆ ಮೋಸಗಾರ ಯಾರಿರಬಹುದು ಎಂದು ಎಲ್ಲರ ಮುಖಗಳನ್ನು ನೋಡುತ್ತಿದ್ದೆ. ಹಾಗಾಗಿ ಅವ್ವ ಮತ್ತೊಬ್ಬ ಅಂಗನವಾಡಿ ಟೀಚರ್ ಸೀರೆ ಸೆರಗಿಡಿದು ನಡೆಯುತ್ತಿದ್ದರೆ, ನಾನು ಅವ್ವನ ಸೀರೆ ಸೆರಗನ್ನು ಗಟ್ಟಿಯಾಗಿ ಹಿಡಿದು ನಡೆಯುತ್ತಿದ್ದೆ. ಹೀಗೆ ನಮ್ಮ ಸಾಲು ರೈಲು ನಡೆಯುತ್ತಿದ್ದರೆ, ಬೆಂಗಳೂರಿಗರಿಗೆ ಟ್ರಾಫಿಕ್ ಜಾಮ್ ಮಾಡಿದ ಕಾರಣಕ್ಕೆ ಸಂಕಟ. ಹಾಗಾಗಿ ಸಾಲಲ್ಲಿರುವ ನೌಕರರನ್ನು ಸಿಟ್ಟಿನಿಂದಲೂ, ತಿರಸ್ಕಾರದಿಂದಲೂ ನೋಡುತ್ತಿದ್ದುದು ನನ್ನ ಗಮನಕ್ಕೆ ಬರುತ್ತಿತ್ತು.

 ಒಮ್ಮೆ ಮೈಸೂರಿನಲ್ಲಿ ಅಂಗನವಾಡಿ ಕಾರ್ಯಕರ್ತರ ದುಂಡುಮೇಜಿನ ಸಭೆಯನ್ನು ಏರ್ಪಡಿಸಿದ್ದರು. ಆಗ ಬಹುತೇಕ ಅಂಗನವಾಡಿ ನೌಕರರು ಮೈಸೂರನ್ನು ನೋಡುವ ಆಸೆಯಿಂದಲೇ ಈ ಸಭೆಗೆ ಬಂದಿದ್ದರು. ಆಗಲೂ ನಾನು ಅವ್ವನ ಜತೆ ಮೈಸೂರಿಗೆ ಹೋಗಿದ್ದೆ. ಅದೇ ಸಮಯಕ್ಕೆ ಮುಖ್ಯಮಂತ್ರಿ ಗುಂಡುರಾವ್ ತೀರಿಕೊಂಡರು. ಆಗ ವ್ಯವಸ್ಥೆ ಅಸ್ತವ್ಯಸ್ಥವಾಗಿ ಎರಡು ದಿನ ರೈಲು ಸಂಚಾರ ಸ್ಥಗಿತವಾಗಿತ್ತು. ಆಗ ಅಂಗನವಾಡಿ ನೌಕರರಿಗೆ ಖುಷಿಯೋ ಖುಷಿ. ಕಾರಣ ದಿನಕ್ಕೊಂದರಂತೆ ಅರಮನೆ, ಜೂ, ಕೆ.ಆರ್.ಎಸ್, ಚಾಮುಂಡಿಬೆಟ್ಟ, ರಂಗನತಿಟ್ಟು, ಮುಂತಾದ ಭಾಗಗಳಿಗೆ ಹೋಗಿ ತಮ್ಮ ಮೈಸೂರು ನೋಡುವ ಆಸೆಯನ್ನು ತೀರಿಸಿಕೊಂಡರು. ಆಗ ಅವರುಗಳೆಲ್ಲಾ ತೀರಿಹೋದ ಗುಂಡುರಾವ್ ಅವರಿಗೆ ಮನಸ್ಸಿನಲ್ಲಿಯೇ ಥ್ಯಾಂಕ್ಸ ಹೇಳಿದ್ದಿರಬೇಕು. ಗುಂಡುರಾವ್ ಅವರ ಸಾವು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಪಾಲಿಗೆ ಸಾರ್ಥಕವಾಗಿತ್ತು.


  ಒಮ್ಮೆ ಅಂಗನವಾಡಿ ನೌಕರರ ಪರವಾಗಿ ಹೋರಾಟ ಮಾಡುತ್ತಿದ್ದ ಕಾಮ್ರೇಡ್ ಸುಂದರೇಶ್ ರೈಲು ಅಪಘಾತದಲ್ಲಿ ತೀರಿಹೋದರು. ಆಗ ಅವ್ವ ಎರಡು ಮೂರು ದಿನ ದುಖಃಪಟ್ಟಿದ್ದಳು. ಕಾರಣ ಸುಂದರೇಶ್ ಅಂಗನವಾಡಿ ನೌಕರಿಯನ್ನು ಖಾಯಂ ಮಾಡುತ್ತಾರೆ, ಅವರು ಮಾತ್ರ ಅಂಗನವಾಡಿ ತಾಯಂದಿರ ಕಣ್ಣೀರನ್ನು ಒರೆಸಬಲ್ಲರು ಎಂದು ಯಾರೋ ಅವ್ವನ ಬಳಿ ಹೇಳಿದ್ದರಂತೆ. ಹಾಗಾಗಿ ಸುಂದರೇಶ್ ಅಂದರೆ ಅವರು ನಮ್ಮ ಪಾಲಿನ ದೇವರು ಎಂದೆಲ್ಲಾ ತಿಳಿದಿದ್ದರು. ಹೋರಾಟಕ್ಕಾಗಿ ನಮ್ಮನ್ನೆಲ್ಲಾ ಕರೆದೊಯ್ಯುವ ಈ ರೈಲು, ನಮ್ಮ ಪರವಾಗಿ ದುಡಿವ ಜೀವ ಸುಂದರೇಶ್ ಅವರನ್ನೇ ಬಲಿತೆಗೆದುಕೊಂಡಿತು ಎನ್ನುವ ಸಿಟ್ಟು ಅವ್ವನಿಗಿತ್ತು. ಇದನ್ನು ರೈಲು ಕಂಡಾಗಲೆಲ್ಲಾ ಹೇಳುತ್ತಿದ್ದಳು.
  ಹೀಗೆ ತಮ್ಮ ಹಕ್ಕೊತ್ತಾಯದ ಕಾರಣಕ್ಕೆ ಮಾಡುವ ಸ್ಟ್ರೈಕುಗಳನ್ನು ಸಹ ಪ್ರವಾಸದಂತೆ ಬಳಸಿಕೊಳ್ಳುತ್ತಿದ್ದುದು, ಅಂಗನವಾಡಿ ನೌಕರರ ಕಡಿಮೆ ವೇತನದಿಂದಾಗಿ ಅದುಮಿಟ್ಟ ಆಸೆಗೆ ಜೀವ ಬಂದಂತಾಗುತ್ತಿತ್ತು. ಹಾಗಾಗಿ ನಮಗೆ ಸಂಬಳ ಹೆಚ್ಚಾಗುತ್ತೋ, ಇಲ್ಲವೋ ಆದರೆ ನಾವು ಜೀವನದಲ್ಲಿ ಒಮ್ಮೆಯಾದರೂ ಬೆಂಗಳೂರು, ಮೈಸೂರನ್ನು ನೋಡಿಂದಂತಾಯಿತು ಎಂದು ಅವರು ಮುದಗೊಳ್ಳುತ್ತಾರೆ. ಹೀಗೆ ಮುಷ್ಕರ ಮುಗಿಸಿ ಮನೆಗೆ ಮರಳುವಾಗ ಮಕ್ಕಳಿಗೆ ಚಿಕ್ಕಪುಟ್ಟ ಸಾಮಾನುಗಳು,  ಆಟಿಗೆಗಳು, ವ್ಯಾನಿಟಿ ಬ್ಯಾಗು ಒಂದಷ್ಟು ಕುರುಕಲು ತಿಂಡಿಯನ್ನು ತರುತ್ತಾರೆ. ಅದರ ಜತೆ ಕಾಲಿಯಾದ ನೀರಿನ ಬಾಟಲಿಗಳ ಸಂಖ್ಯೆ ದೊಡ್ಡದಿರುತ್ತದೆ. 

    ಒಮ್ಮೆ ದೆಹಲಿಯಲ್ಲಿ ಸ್ಟ್ರೈಕ್ ಇದ್ದಾಗ ಅವ್ವ ದೆಹಲಿಗೆ ಹೋಗಲು ಹೆದರಿದಳು. ಕಾರಣ ಅಲ್ಲಿ ವಿಪರೀತ ಚಳಿಯಂತೆ, ಆ ಚಳಿಯಲ್ಲಿ ಮನುಷ್ಯರು ಮಂಜುಗಡ್ಡೆಯಂತೆ ಗಟ್ಟಿಯಾಗುತ್ತಾರಂತೆ, ಅಲ್ಲಿ ಕಳೆದು ಹೋದರೆ ವಾಪಸ್ಸು ಬರಲು ಆಗುವುದಿಲ್ಲವಂತೆ, ಅಲ್ಲಿ ನಮ್ಮ ಭಾಷೆ ಇಲ್ಲವಂತೆ ಇಂತದ್ದೇ ತರಾವರಿ ಭಯಗಳು ಅವ್ವನಂಥವರನ್ನು ದೆಹಲಿಗೆ ಹೋಗುವ ಆಸೆಯನ್ನು ಕಮರಿಸಿದವು. ಈಗ ಅವ್ವನಿಗೆ ಅಂತಹ ಭಯ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ, ದೆಹಲಿ ನೋಡುವ ಆಸೆ ಇನ್ನೂ ಜೀವಂತವಾಗಿದೆ.ಕಾಮೆಂಟ್‌ಗಳಿಲ್ಲ: