ಸೋಮವಾರ, ಮೇ 5, 2014

ತೊಗಲುಬೊಂಬೆಗೆ ಜೀವಡಾ.ರಹಮತ್ ತರೀಕೆರೆ

                                                                             ೧
   ಬಹಳ ಹಿಂದೆ, ನಾಡೋಜರಾದ ಬೆಳಗಲ್ ವೀರಣ್ಣನವರ ತೊಗಲುಬೊಂಬೆ ಆಟದ ಪ್ರದರ್ಶನವನ್ನು ನೋಡಿದ್ದೆ. ಆದರೆ ಅವರನ್ನು ನೋಡಲು ಸಾಧ್ಯವಾಗಿರಲಿಲ್ಲ. ಸಾಮಾನ್ಯವಾಗಿ ಬೊಂಬೆಯಾಟದ ಕಲಾವಿದರು ಅದೃಶ್ಯರು. ಯಕ್ಷಗಾನ ಬಯಲಾಟ ಕಂಪನಿ ನಾಟಕಗಳಲ್ಲಿ ನಟರು ತೆರೆಯ ಮುಂದಿದ್ದರೆ, ಇಲ್ಲಿ ಬೆಂಬೆಗಳೇ ಮುಂದಿದ್ದು, ಅವನ್ನು ಆಡಿಸುವ ಕಲಾವಿದರು ಹಾಡುತ್ತ ಮಾತಾಡುತ್ತ ತೆರೆಮರೆಯಲ್ಲಿ ಅಡಗಿರುತ್ತಾರೆ. ಹೀಗೆ ಸದಾ ತೆರೆಮರೆಯಲ್ಲೇ ಇರುವ ವೀರಣ್ಣನವರ ಜತೆ ಈಚೆಗೆ ಅರ್ಧದಿನ ಕಳೆಯುವ ಅವಕಾಶ ಒದಗಿತು. ಅದೊಂದು ಅಪೂರ್ವ ಅನುಭವ. 

  ಉದ್ದನೆಯ ಬಿಳಿಯ ಜುಬ್ಬ ಮತ್ತು ಕಚ್ಚೆಪಂಚೆ ಧರಿಸಿದ್ದ ಆರಡಿ ಆಳು; ಎಂಬತ್ತಕ್ಕೆ ಅಡರುತ್ತಿರುವ ಮುಪ್ಪಿನಿಂದ ತುಸು ದಣಿದಂತೆ ಕಾಣುವ ಕಾಯ; ಗುಂಗುರು ಕೂದಲನ್ನು ಹಿಂದಕ್ಕೆ ಬಾಚಿದ ತಲೆ; ಅಗಲವಾದ ಹಣೆಯಲ್ಲಿ ಮಂಕಾಗಿರುವ ವಿಭೂತಿ; ಕೊಂಚ ಉಬ್ಬಿದ ಹಲ್ಲುಗಳ ನಗುಮುಖ; ಮಾತಾಡಿದರೆ ಮುಚ್ಚಿದ ಕೊಣೆಯಲ್ಲಿ ಶಂಖಊದಿದಂತೆ ಹೊರಡುವ ಗಂಭೀರ ಸ್ವರ; ಕುಳಿತಲ್ಲೇ ರಂಗಭೂಮಿ ನಿರ್ಮಿಸಿಬಿಡುವ ಕುಶಲತೆ; ಇರುವ ಸೌಲಭ್ಯಗಳಲ್ಲೇ ನೆಮ್ಮದಿಸುವ ಸರಳತೆ- ಮೊದಲ ಭೇಟಿಯಲ್ಲಿಯೇ ಒಡನಾಟಕ್ಕೆ ಸಿಲುಕಿದವರನ್ನು ಸೆಳೆದುಕೊಳ್ಳುವ ಚಹರೆ ವೀರಣ್ಣನವರದು.

   ಮರಾಠಿ ಮನೆಮಾತಿನ ‘ಬೊಂಬೆರಾಮ’ ‘ಕಿಳ್ಳೇಕ್ಯಾತ’ ಎಂದು ಕರೆಯಲಾಗುವ ಸಮುದಾಯಕ್ಕೆ ಸೇರಿದ ಶ್ರೀ ವೀರಣ್ಣನವರು, ಕುಲಕಸುಬಾಗಿ ಬಂದಿದ್ದ ತೊಗಲುಬೊಂಬೆ ಆಟವನ್ನು ತ್ಯಜಿಸಿ, ಕಂಪನಿ ರಂಗಭೂಮಿಗೆ ತಮ್ಮ ಪ್ರಾಯದ ದಿನಗಳಲ್ಲೇ ವಲಸೆ ಹೋಗಿದ್ದವರು. ಆದರೆ ಅವರು ಆಕಸ್ಮಿಕವಾಗಿ ಮತ್ತು ನಾಟಕೀಯವಾಗಿ ವೃತ್ತಿರಂಗಭೂಮಿಯಿಂದ ತೊಗಲುಬೊಂಬೆಗೆ ಮರಳಿ ಬರಬೇಕಾಯಿತು. ಇದು ಅವರ ಬಾಳಿನಲ್ಲಿ ಘಟಿಸಿದ ನಿರ್ಣಾಯಕ ತಿರುವಾಗಿತ್ತು. ಈ ತಿರುವಿಗೆ ಕಾರಣರಾದವರು, ಆಗಿನ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಜಯ ಸಾಸನೂರರು. ದಿ.ಸಾಸನೂರರ ಪ್ರೇರಣೆಯಿಂದ ವೀರಣ್ಣನವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ  ‘ಪಂಚವಟಿ ಪ್ರಸಂಗದ ಪ್ರಯೋಗ (೧೯೮೦) ಮಾಡಿದರು. ಇದು ತೊಗಲುಬೊಂಬೆ ಕಲೆಯಲ್ಲಿ ಹೊಸಹಾದಿಯನ್ನೇ ತೆರೆಯಿತು; ಅವರನ್ನೂ ತೊಗಲುಬೊಂಬೆಯನ್ನೂ ಶಾಪದಿಂದ ಬಿಡುಗಡೆ ಮಾಡಿತು. (ರಾಮಾಯಣ ಕಾಲದ ಗುಹನ ವಂಶಜರಾದ ಬೊಂಬೆರಾಮರು ರಾಮನ ಶಾಪದಿಂದ ಈ ಆಟವನ್ನು ಆಡಬೇಕಾಯಿತು ಎಂಬ ಮಿತ್ ಕೂಡ ಇದೆ.) ಮುಂದೆ ಅವರ ತೊಗಲುಬೊಂಬೆಗಳು ದೇಶ ವಿದೇಶಗಳ ಸುತ್ತಾಟವನ್ನು ಆರಂಭಿಸಿದವು. ಈ ಎಲ್ಲದರ ಯಶೋಕಳೆ ವೀರಣ್ಣನವರ ಮೊಗದಲ್ಲಿ ಢಾಳಾಗಿ ಬೆಳಗುತ್ತಲಿತ್ತು.

  ಆದರೆ ಈ ಯಶಸ್ಸು ವೀರಣ್ಣನವರಿಗೆ ಸುಲಭದಲ್ಲಿ ದಕ್ಕಲಿಲ್ಲ. ಇದಕ್ಕಾಗಿ ಅವರು ದೊಡ್ಡ ಹೋರಾಟವನ್ನೇ ಮಾಡಬೇಕಾಯಿತು. ವೀರಣ್ಣನವರು ತಮ್ಮ ಪ್ರಾಯದಲ್ಲಿ ತೊಗಲುಬೊಂಬೆಗಳಿಂದ ತಪ್ಪಿಸಿಕೊಂಡು ವೃತ್ತಿರಂಗಭೂಮಿಗೆ ವಲಸೆಹೋಗಿದ್ದು, ಮರಳಿ ತೊಗಲುಬೊಂಬೆಗೆ ಆಗಮಿಸಿದ್ದು, ಸರ್ಕಾರಿ ಸಂಸ್ಥೆಯೊಂದರ ಪ್ರೇರಣೆಯಿಂದ ಗೊಂಬೆಯಾಟಕ್ಕೆ ಹೊಸ ರೂಪಾಂತರ ಕೊಟ್ಟಿದ್ದು ಮತ್ತು ದೇಶಾಂತರ ತಿರುಗಿದ್ದು- ಈ ನಾಲ್ಕು ವಿದ್ಯಮಾನಗಳು, ಸಾಂಪ್ರದಾಯಿಕ ಸಮಾಜ ಮತ್ತು ಕೆಳಜಾತಿಯ ಕಲಾವಿದರ, ಸಂಪ್ರದಾಯ ಮತ್ತು ಆಧುನಿಕತೆಗಳ, ಪರಂಪರೆ ಮತ್ತು ಹೊಸಪ್ರಯೋಗಗಳ ನಡುವಣ ಸಂಘರ್ಷ ಮತ್ತು ಹೊಂದಾಣಿಕೆಗಳ ಹಲವು ಗುಟ್ಟುಗಳನ್ನು ಒಳಗೊಂಡಂತಿವೆ. 

  ಮೊದಲಿಗೇ ಹುಟ್ಟುವ ಮೂಲಭೂತ ಪ್ರಶ್ನೆಗಳೆಂದರೆ, ಜನರಾಗಲಿ ಕಲಾವಿದರಾಗಲಿ ಕುಲಕಸುಬು ಇಲ್ಲವೇ ಕುಲಕಲೆಗಳಿಗೆ ಯಾಕೆ ಬೆಂಗೊಡುತ್ತಾರೆ? ಅವರನ್ನು ತಾಯಂತೆ ಕೈಹಿಡಿದ ಕಲೆ ಅಥವಾ ಕಸುಬು ಒಂದು ಹಂತದಲ್ಲಿ ಯಾಕೆ ಉಸಿರುಗಟ್ಟಿಸಿ ಕೊಲ್ಲುವ ರಕ್ಕಸಿಯಾಗುತ್ತದೆ? ಅವರ ಒಂದೊಮ್ಮೆ ತಮ್ಮ ಕುಲಕಸುಬಿಗೆ ಇಲ್ಲವೆ ಕುಲಕಲೆಗೆ ಮರಳಿ ಅದಕ್ಕೊಂದು ಹೊಸ ರೂಪಧಾರಣೆ ಮಾಡುವುದಾದರೆ, ಆಧುನಿಕತೆ ಹೇಗೆ ನೆರವಾಗುತ್ತದೆ? ಕಲೆಯನ್ನು ಅದರ ಚಾರಿತ್ರಿಕ ಮತ್ತು ಕಲಾತ್ಮಕ ಬಿಕ್ಕಟ್ಟುಗಳಿಂದ ಪಾರುಗಾಣಿಸುವ ತ್ರಾಣ ಆಧುನಿಕತೆಯೊಂದಕ್ಕೇ ಇದೆಯೊ ಅಥವಾ ಅದರಲ್ಲಿ ಮಧ್ಯಪ್ರವೇಶಿಸುವ ವ್ಯಕ್ತಿಪ್ರತಿಭೆಗಿದೆಯೊ? ಸಮುದಾಯದ ಕಲೆಯೊಂದು ನಾಗರಿಕ ಸಮಾಜದಲ್ಲಿ ಹೊಸಸ್ವೀಕಾರ ಪಡೆಯಲು ಕಾರಣ, ಪ್ರೇಕ್ಷಕರ ಮನೋಭಾವದಲ್ಲಿ ಉಂಟಾದ ಪಲ್ಲಟಗಳೊ ಅಥವಾ ಕಲೆಯಲ್ಲಿ ಸಂಭವಿಸಿದ ಹೊಸ ರೂಪಾಂತರವೊ? ಕಲೆಯೊಂದರ ನವರೂಪಾಂತರದಲ್ಲಿ ಪ್ರಭುತ್ವ ಮತ್ತು ಅದರ ಅಂಗಸಂಸ್ಥೆಗಳು ವಹಿಸುವ ಪಾತ್ರವೇನು? ವಿದೇಶಿಗರು ನಮ್ಮ ಸಾಂಪ್ರದಾಯಿಕ ಕಲೆಯನ್ನು ಮೆಚ್ಚಿದರೆಂದು ನಾವೂ ಮೆಚ್ಚುತ್ತಿದ್ದೇವೆಯೇ? ನಮ್ಮ ಪರಿಸರದಲ್ಲಿರುವ ಈ ಕಲೆಗಳ ಬಗ್ಗೆ ನಮ್ಮ ಕಣ್ಣನ್ನು ತೆರೆಸುವ ಸಂಗತಿ ಯಾವುದು? ಈ ಕೆಲವು ಪ್ರಶ್ನೆಗಳ ಮೂಲಕ ವೀರಣ್ಣನವರ ಕಲಾಯಾನದ ಚರಿತ್ರೆಯನ್ನು ಪರಿಶೀಲಿಸಬಹುದು. 

                                                                      ೨

ಯಾವುದೇ ಕೆಳಸ್ತರದ ಸಮುದಾಯಗಳು ತಮ್ಮನ್ನು ಪೋಷಿಸಿದ ವೃತ್ತಿ ಅಥವಾ ಕಲೆಗೆ ಬೆಂಗೆಟ್ಟು ಹೋಗಲು ಎರಡು ಮುಖ್ಯ ಕಾರಣಗಳಿರುತ್ತವೆ. 

ಮೊದಲನೆಯದಾಗಿ- ಕಲೆಯನ್ನು ತನ್ನ ಭಾಗವಾಗಿಸಿಕೊಂಡಿದ್ದ ಸಾಂಪ್ರದಾಯಿಕ ಸಮಾಜವು ಸ್ವತಃ ಶಿಥಿಲಗೊಂಡು ಆ ಕಲೆಯನ್ನು ತಬ್ಬಲಿಗೊಳಿಸುವುದು. ತೊಗಲುಬೊಂಬೆ ವಿಷಯದಲ್ಲಿ ಹೇಳುವುದಾದರೆ, ಅದು ಮೂಲತಃ ಬಿಸಿಲು ಪ್ರದೇಶದ ಕಲೆ. (ತೊಗಲು ತೇವಾಂಶದಿಂದ ಹಾಳಾಗುವುದರಿಂದಲೇ ಈ ಆಟ ಮಲೆನಾಡು ಕರಾವಳಿಗಳಲ್ಲಿಲ್ಲ. ಜನಪದ ಕಲೆಗಳಿಗೂ ಭೌಗೋಳಿಕ ಪರಿಸರಕ್ಕೂ ಕರುಳಬಳ್ಳಿಯ ಹೀಗೆ ನಂಟಿದೆ.) ತೊಗಲುಬೊಂಬೆ ಆಡಿಸಿದರೆ ಮಳೆಬರುತ್ತದೆ ಅಥವಾ ಸಮೃದ್ಧ ಫಸಲು ಬರುತ್ತದೆ ಎಂಬ ನಂಬಿಕೆಗೂ, ಕಡಿಮೆ ಮಳೆಬೀಳುವ ಕಡಪ ಅನಂತಪುರ ಬಳ್ಳಾರಿ ಚಿತ್ರದುರ್ಗ ನಾಗಮಂಗಲದಂತಹ ಪ್ರದೇಶಗಳಲ್ಲಿ ಈ ಕಲೆಯಿರುವುದಕ್ಕೂ ಸಂಬಂಧವಿದ್ದಂತಿದೆ. ಇಂತಹ ನಂಬಿಕೆ ಮತ್ತು ಸಂಬಂಧಗಳಿದ್ದ ಗ್ರಾಮೀಣ ರೈತಾಪಿ ವರ್ಗದ ಬದುಕು, ಬಹುಶಃ ೧೯೫೦ ಬಳಿಕ ಬದಲಾಗತೊಡಗಿತು. ಅದರಲ್ಲೂ ಬಳ್ಳಾರಿ ಸೀಮೆಯ  ಪ್ರದೇಶವು ತುಂಗಭದ್ರಾ ನೀರಾವರಿಗೆ ಒಳಪಟ್ಟ ಬಳಿಕ ರೈತರು ಹೊಸ ಬೆಳೆಪದ್ಧತಿಗಳಿಗೆ ಹೋದರು. ಬೇಸಾಯ ಪದ್ಧತಿಯಲ್ಲಿ ಉಂಟಾದ ಈ ಪಲ್ಲಟ ಮತ್ತು ಕೃಷಿಯ ಬಿಕ್ಕಟ್ಟುಗಳು ಇಂತಹ ಕಲೆಗಳ ಮೇಲೂ ಪ್ರಭಾವ ಬೀರಿದಂತೆ ಕಾಣುತ್ತದೆ. ಹೀಗಾಗಿ ತೊಗಲುಬೊಂಬೆ ಕಲಾವಿದರು ಹೊಸ ಆಶ್ರಯತಾಣವನ್ನು ಹುಡುಕಿಕೊಳ್ಳುವ ಇಲ್ಲವೇ ಕಸುಬನ್ನೇ ಕೈಬಿಡುವ ಒತ್ತಡಕ್ಕೆ ಒಳಗಾಗಿರಬಹುದು. ಕಲಾವಿದರು-ಕಲೆ-ಸಮಾಜಗಳ ನಡುವಣ ಪೋಷಕ-ಪೋಷಿತ ಸಂಬಂಧ ಶಿಥಿಲಗೊಂಡ ಇಂತಹ ಚಾರಿತ್ರಿಕ ಕಾಲಘಟ್ಟದಲ್ಲಿ, ವೀರಣ್ಣನವರು ತೊಗಲುಬೊಂಬೆ ಆಟವನ್ನು ತ್ಯಜಿಸಿ, ಜಾತಿ ಚಹರೆಗಳಿಲ್ಲದ ವೃತ್ತಿರಂಗಭೂಮಿಯ ಲೋಕಕ್ಕೆ ಪ್ರವೇಶಿಸಿದ್ದು ಸಹಜವಾಗಿದೆ.

ಎರಡನೆಯದಾಗಿ-ಕಲಾವಿದ ಸಮುದಾಯವು ತನ್ನ ಸ್ವಾಭಿಮಾನಕ್ಕೆ ಧಕ್ಕೆ ತರುವ ಕಲೆಗಳನ್ನು ನಿಷ್ಠುರವಾಗಿ ತ್ಯಜಿಸುವುದು. ಸಾಮಾಜಿಕ ಮತ್ತು ಆರ್ಥಿಕವಾಗಿ ತಳಸ್ತರದಿಂದ ಬಂದ ಕಲಾವಿದರ ಪಾಲಿಗೆ, ಕಲೆಗಳ ಮೂಲಕ ಸಾಮಾಜಿಕವಾದ ಮನ್ನಣೆ ಮತ್ತು ಮುಜುಗರಗಳು ಒಟ್ಟಿಗೆ ಬರುತ್ತವೆ. ಕಲಾವಿದರು, ಊರಗೌಡನ ಅನುಮತಿ ಪಡೆದು ಆಟವಾಡಿಸಿ ದವಸ ಪಡೆಯುವ, ಮದುವೆ ಮನೆ ಅಥವಾ ಜಾತ್ರೆಗಳಲ್ಲಿ ಆಡಿಸಿ ಜನರನ್ನು ರಂಜಿಸುವ ಕಾಯಕದಲ್ಲಿ ತಿರುಗಾಟ ಮಾಡುತ್ತ ಬದುಕುವ  ವರ್ತುಲದಿಂದ ಹೊರಬರುವುದು ಎಂದರೆ, ಅಭದ್ರತೆಗೆ ಕಾಲಿಡುವುದು ಮತ್ತು ಬಿಡುಗಡೆಯ ಹೋರಾಟಕ್ಕೆ ಒಡ್ಡಿಕೊಳ್ಳುವುದು. ಕುಲಕಲೆಗಳಿಗೆ ಪರಂಪರೆಯಿಂದ ಬಂದ ಜ್ಞಾನ ಮತ್ತು ಕುಶಲತೆಗಳು ಒಳಕಸುವನ್ನೇನೊ ಕೊಡುತ್ತವೆ. ಆದರೆ ಈ ಒಳಕಸುವು ಆಯಾ ಸಮುದಾಯದ ವ್ಯಕ್ತಿಪ್ರತಿಭೆಗಳನ್ನು ಸಾಮಾಜಿಕ ಕೀಳರಿಮೆಯಲ್ಲಿ ಉಳಿಸಿಬಿಡುತ್ತದೆ. ಅರ್ಧಶತಮಾನದ ಹಿಂದೆ, ಆರ್ಥಿಕವಾಗಿ ಸಾಮಾಜಿಕವಾಗಿ ಮೇಲ್‌ಸ್ತರದಿಂದ ಬಂದವರಿಗೆ ರಂಗಭೂಮಿಯಂತಹ ‘ಕೆಳ’ಸ್ತರದ ಪ್ರವೇಶಿಸುವುದು ಕಲಾಸಾಹಸ ಎನಿಸಿರಬಹುದು. (ವೀರಣ್ಣನವರ ಗುರುಗಳಾದ ಸಿಡಗಿನಮೆಳೆ ಚಂದ್ರಯ್ಯ ಹಾಗೂ ಜೋಳದರಾಶಿಯವರ ಜೀವನವೇ ಇದಕ್ಕೆ ಸಾಕ್ಷಿ.) ಆದರೆ ಕಲಾವಂತ ಸಮುದಾಯದಲ್ಲಿ ಹುಟ್ಟಿ ಹೊಸಬದುಕಿಗೆ ಹಾತೊರೆಯುವ ತುರಿಸುಳ್ಳವರಿಗೆ ಅವರ ಕುಲಕಲೆಗಳು ಕೈಕೋಳವಾಗಿ ತೋರುವುವು. ಸಾಂಪ್ರದಾಯಿಕ ಸಮಾಜದಿಂದ ಕಲೆಯ ಮೂಲಕ ಸಿಗುತ್ತಿದ್ದ ಭದ್ರತೆಯೂ ಬಂಧನವೆನಿಸತೊಡಗುತ್ತದೆ. ಆಧುನಿಕ ಬದುಕಿಗೆ ತೆರೆದುಕೊಂಡ ಹೊಸತಲೆಮಾರು, ತಮ್ಮ ಚಲನೆಗೆ ಕುಲಕಲೆಗಳೇ ತೊಡಕಾಗಿವೆಯೆಂದು ಪರಿಭಾವಿಸಿ, ಅವುಗಳಿಂದ ದೂರವಾಗಲು ಯತ್ನಿಸುತ್ತದೆ. ಕಲೆಗೆ ಕರ್ಣಕವಚದಂತೆ ಅಂಟಿರುವ ಸಾಮಾಜಿಕ ಹೊರೆಯನ್ನು ಕಳಚಿ ಎಸೆಯಲು ವ್ಯಕ್ತಿವಿಶಿಷ್ಟತೆಯುಳ್ಳ ಜೀವ ತವಕಿಸುತ್ತದೆ. ಹೆಚ್ಚಿನ ಆದಾಯ ಕೊಡದಿದ್ದರೂ ಸ್ವಾಭಿಮಾನಕ್ಕೆ ಧಕ್ಕೆತಾರದ ಉದ್ಯೋಗಗಳತ್ತ ಚಲಿಸುತ್ತದೆ. ‘ಸನಾದಿ ಅಪ್ಪಣ್ಣ’ ಚಿತ್ರದಲ್ಲಿ ಅಪ್ಪಣ್ಣನ ಮಗನ ಸನಾದಿ ದ್ವೇಷವನ್ನು ಅರ್ಥಮಾಡಿಕೊಳ್ಳಬೇಕಾದ್ದು ಹೀಗೆಯೇ. ಬಹುಶಃ ವೀರಣ್ಣನವರಿಗೆ ತೊಗಲುಬೊಂಬೆಯಿಂದ ದೂರವಾಗಲು ಮೇಲ್ಕಾಣಿಸಿದ ಕಾರಣದ ಜತೆಗೆ, ಅವರ ಕಾಲದಲ್ಲಿ ಬಳ್ಳಾರಿ ರಾಘವ, ಜೋಳದರಾಶಿ ದೊಡ್ಡನಗೌಡ, ಸಿಡಗಿನಮೆಳೆ ಚಂದ್ರಯ್ಯ ಮುಂತಾದ ತಾರಾಮೌಲ್ಯದ ರಂಗನಟರಿಂದಲೂ ಕವಿಗಳಿಂದಲೂ ಕೂಡಿದ್ದ ವೃತ್ತಿರಂಗಭೂಮಿ  ಆಕರ್ಷಣೆಯೂ ಕೆಲಸ ಮಾಡಿರಬಹುದು.

೨೦ನೇ ಶತಮಾನದ ಮೊದಲಾರ್ಧಲ್ಲಿ ವೃತ್ತಿ ರಂಗಭೂಮಿಗೂ ‘ಅದು ಸಭ್ಯರು ಪ್ರವೇಶಿಸುವ ಕಲೆಯಲ್ಲ’ ಎಂಬ ಅಘೋಚಿತ ಸಾಮಾಜಿಕ ಮನೋಭಾವವಿತ್ತು.  ಆದರೂ ಅದು ಎಲ್ಲ ಸಮುದಾಯಗಳು ತೊಡಗಿಕೊಳ್ಳುವ ಕಲೆಯಾಗಿ ಬದಲಾಯಿತು. ವೃತ್ತಿ ರಂಗಭೂಮಿಯು ಸಿನಿಮಾ ಉದ್ಯಮವಾಗಿ ರೂಪಾಂತರಗೊಳ್ಳತೊಡಗಿದ ಬಳಿಕ ಅದರ ಸಾಮಾಜಿಕ ಶಾಪವಿಮೋಚನೆಯ ಕಾರ್ಯವೂ ಆಯಿತು. ಆದರೆ ವೃತ್ತಿರಂಗಭೂಮಿಗೆ ಸಿಕ್ಕ ಈ ಚಲನೆ, ಅನೇಕ ಕುಲಕಲೆಗಳಿಗೆ ಅಥವಾ ಸಮುದಾಯ ರಂಗಭೂಮಿಗಳಿಗೆ ಸಿಗಲಿಲ್ಲ. ತೊಗಲುಬೊಂಬೆಯು ರಾಮಾಯಣ ಮಹಾಭಾರತದ ಪ್ರಸಂಗಗಳ ಕಾರಣದಿಂದ ಧಾರ್ಮಿಕವಾಗಿದ್ದರೂ, ಅದು ಪ್ರಾಣಿಚರ್ಮದ ಜತೆ ಸಂಬಂಧವಿದ್ದ ಕಾರಣದಿಂದಲೊ ಏನೊ, ಅಸ್ಪೃಶ್ಯತೆಯಿಂದ  ಮುಕ್ತವಾಗಲಿಲ್ಲ.  ಸಾಮಾಜಿಕವಾಗಿ ದ್ವೀಪವಾಗಿಯೇ ಮುಂದುವರೆಯುವ ಈ ಇಕ್ಕಟ್ಟನ್ನು ಗೊಂದಲಿಗರು, ಕಿನ್ನರಿಜೋಗಿಗಳು, ವೇಷಗಾರರರು, ಬುರ್ರಕಥೆಯವರು, ಜಾತಿಗಾರರು ಈಗಲೂ ಎದುರಿಸುತ್ತಿದ್ದಾರೆ. ಅಲ್ಲಿ ಹೊಸತಲೆಮಾರು ಕುಲಕಲೆಯನ್ನು ನಿಷ್ಠುರವಾಗಿ ಬಿಟ್ಟುಕೊಡುತ್ತಿದೆ. 
ಆದರೆ ಈ ಕುಲಕಲೆಗಳಿಗೆ ಅದೇ ಸಮುದಾಯದ ಪ್ರತಿಭಾವಂತರು, ಹೊಸ ವೈಚಾರಿಕತೆ, ಆಧುನಿಕ ಪ್ರಜ್ಞೆ ಮತ್ತು ಪ್ರಯೋಗಶೀಲ ತುಡಿತದೊಂದಿಗೆ ಮರುಪ್ರವೇಶ ಮಾಡಿದರೆ, ಅವಕ್ಕೆ ಮರುಹುಟ್ಟು ಸಂಭವಿಸಬಲ್ಲದು; ಆಗ ಅದು ಕಲಾವಿದರು ಸ್ವತಃ ಸೃಜನಶೀಲಗೊಳ್ಳುವ ಮತ್ತು ತಮ್ಮ ಕುಲಕಲೆಯನ್ನು ಸಾಮಾಜಿಕ ಒಂಟಿತನದಿಂದ ಬಿಡುಗಡೆಗೊಳಿಸುವ ಯತ್ನವಾಗಬಲ್ಲದು. ತೊಗಲುಬೊಂಬೆಗೆ ವೀರಣ್ಣನವರು ಮಾಡಿದ ಪ್ರಯೋಗಗಳಲ್ಲಿ ಇಂತಹ ಮರುಹುಟ್ಟು ಸಂಭವಿಸಿತು. ಇದಕ್ಕಾಗಿ ಅವರು ಮಾಡಿದ ಕಾಯಕಲ್ಪದಲ್ಲಿ ಕೆಲವು ಕ್ರಾಂತಿಕಾರಿ ಅಂಶಗಳಿದ್ದವು. ಅವೆಂದರೆ-

೧. ಅವರು ಹಳ್ಳಿಯ ಗುಡಿಕಟ್ಟೆಗಳಲ್ಲಿ, ಗೌಡರ ಮನೆಯಂಗಳದಲ್ಲಿ ಹಳ್ಳಿಯ ಜನರ ಮುಂದೆ ಆಡುತ್ತಿದ್ದ ಆಟವನ್ನು ಮಹಾನಗರದ ರಂಗಮಂದಿರವೊಂದಕ್ಕೆ ತೆಗೆದುಕೊಂಡು ಹೋಗಿದ್ದು ಹಾಗೂ ಅದನ್ನು ನಗರದ ಆಧುನಿಕ ಪ್ರೇಕ್ಷಕರಿಗೆ ತೋರಿಸಿದ್ದು. ವೀರಣ್ಣನವರು ನಗರ ಪ್ರೇಕ್ಷಕರಿಗಾಗಿ ಮಾಡಿದ ಈ ಪ್ರಯೋಗವು ರವೀಂದ್ರನಾಥ ಟಾಗೂರರ ಹೆಸರಲ್ಲಿರುವ ‘ರವೀಂದ್ರ ಕಲಾಕ್ಷೇತ್ರ’ದಲ್ಲಿ ಜರುಗಿದ್ದು ಅರ್ಥಪೂರ್ಣವಾಗಿದೆ. ಕಾರಣ, ಟಾಗೂರರು ಸ್ವತಃ ಬಂಗಾಳದ ಜನಪದ ಸಂಗೀತದಿಂದ ತಮ್ಮ ಆಧುನಿಕ ಕಾವ್ಯಕ್ಕೆ ರಾಗವನ್ನು, ಬಂಗಾಳದ ಬಾವುಲರಿಂದ ತಮ್ಮ ಚಿಂತನೆಗೆ ದರ್ಶನವನ್ನು ಪಡೆದು ಪ್ರಯೋಗ ಮಾಡಿದವರು. ಈಗಲೂ ಶಾಂತಿನಿಕೇತನದಲ್ಲಿ ಬಂಗಾಳದ ಜನಪದ ಕಲೆಗಳು ಆಧುನಿಕ ಪ್ರೇಕ್ಷಕರ ಮುಂದೆ ಪ್ರದರ್ಶನವಾಗುವ ಒಂದು ಉತ್ಸವ ನಡೆಯುತ್ತದೆ. 

೨. ಪರಂಪರಾಗತ ಕಲೆಯೊಂದರ ಮರುಹುಟ್ಟಿಗೆ ಕಲಾವಿದನಿಗೆ ಸರ್ಕಾರದ ಸಾಂಸ್ಕೃತಿಕ ಸಂಘಟನೆಗಳು ನೆರವಾಗುವುದು. ಸಾಸನೂರರಂತೆ ವೀರಣ್ಣನವರು ಮಾಡಿದ ಪ್ರಯೋಗಗಳಲ್ಲಿ ಸಾಂಸ್ಥಿಕ ನೆರವು ಬೆಂಬಲ ಕೊಟ್ಟವರು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಹಾಗೂ ಕರ್ನಾಟಕದ ಜಾನಪದ ಅಕಾಡೆಮಿಯ ಎಚ್.ಎಲ್. ನಾಗೇಗೌಡರು. ಇದು ಗ್ರಾಮೀಣ ಸಮಾಜದ ಅವಲಂಬನೆಯಿಂದ ಕಲೆಯನ್ನು ಬಿಡಿಸಿ ಸರ್ಕಾರ ಮತ್ತು ಅದರ ಸಾಂಸ್ಕೃತಿಕ ಅಂಗಸಂಸ್ಥೆಗಳ ಪೋಷಣೆಯನ್ನು ಒದಗಿಸಿದ್ದನ್ನು ಸೂಚಿಸುತ್ತದೆ. ಇದು ಕಲೆಯನ್ನು ಸೀಮಿತ ನೆಲೆಯಿಂದ ವಿಶಾಲ ನೆಲೆಗೆ ಜಾಗಾಂತರ ಮಾಡುವ ಪ್ರಕ್ರಿಯೆಯೂ ಆಗಿತ್ತು. 

೩. ಇಡೀ ರಾತ್ರಿ ಜರುಗುತ್ತಿದ್ದ ಗೊಂಬೆಯಾಟವನ್ನು ಎರಡು ಗಂಟೆಗೆ ಇಳಿಸಿದ್ದು. ಇದು ನಗರದ ಮಧ್ಯಮವರ್ಗವು ತನ್ನನ್ನು ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮತ್ತು ಕಛೇರಿಯ ದಣಿವನ್ನು ಕಳೆದುಕೊಳ್ಳುವ ಸಮಯ ಎಂಬುದು ಗಮನಾರ್ಹ. 

೪.ಗಾತ್ರದಲ್ಲಿ ಚಿಕ್ಕದಾಗಿದ್ದ ಗೊಂಬೆಗಳು ಆಳೆತ್ತರಕ್ಕೆ ಬದಲಾಗಿದ್ದು. ಗೊಂಬೆಗಳ ನೆರಳಿಗೆ ಕಟ್ಟಲಾಗುತ್ತಿದ್ದ ಚಿಕ್ಕತೆರೆ ಹದಿನಾರು ಎಂಟು ಅಗಲಕ್ಕೆ ವಿಸ್ತರಣೆಗೊಂಡಿದ್ದು; ಇಬ್ಬರು ಮೂವರು ಇರುತ್ತಿದ್ದ ತಂಡ ಎಂಟಕ್ಕೆ ಹಿಗ್ಗಿದ್ದು.

೫. ರಾಮಾಯಣ- ಮಹಾಭಾರತಕ್ಕೆ ಸೀಮಿತವಾಗಿದ್ದ ಪ್ರಸಂಗಗಳು ವಸಾಹತುಶಾಹಿ ವಿರೋಧಿ ಹೋರಾಟಕ್ಕೆ, ಸಮಾಜಸುಧಾರಕ ಬಸವಣ್ಣನವರ ಬದುಕಿಗೆ ವಿಸ್ತರಿಸಿಕೊಂಡಿದ್ದು. ಈ ಪ್ರಕ್ರಿಯೆ ಇನ್ನೂ ಮುಂದೆ ಹೋಗಿ ಡೆಂಗಿಸೊಳ್ಳೆ, ಏಡ್ಸ್ ನಿವಾರಣೆಯಂತಹ ಪ್ರಸಂಗಗಳನ್ನು ಅಳವಡಿಸಿಕೊಳ್ಳಲು ಕಾರಣವಾಯಿತು.
  
ರಂಗಪ್ರದರ್ಶನದ ಸ್ಥಳ, ಕಾಲ, ಪೋಷಕತ್ವ, ಪ್ರಸಂಗಗಳ ವಸ್ತು ಮತ್ತು ಗೊಂಬೆಗಳ ಗಾತ್ರಗಳಲ್ಲಿ ಸಂಭವಿಸಿದ ಈ ಪಲ್ಲಟಗಳು ಕ್ರಾಂತಿಕಾರಕವಾಗಿದ್ದವು. ಇವು ತೊಗಲುಬೊಂಬೆಯಾಟಕ್ಕೆ ಹೊಸ ಜೀವದಾನ ಮಾಡಿದವಲ್ಲದೆ, ಅವುಗಳ ಚಲನೆಗೆ ಹೊಸ ರೋಡ್‌ಮ್ಯಾಪನ್ನೂ ಒದಗಿಸಿದವು. ಇದರಿಂದ ತೊಗಲುಬೊಂಬೆಗಳು ಜಗತ್ತಿನ ಬೇರೆಬೇರೆ ದೇಶಗಳಿಗೆ ತಿರುಗಾಟ ಮಾಡಲು ಸಾಧ್ಯವಾಯಿತು. ವೀರಣ್ಣನವರು ಜನಪದ ರಂಗಭೂಮಿಗಳಲ್ಲಿ ಮಾಡಿದ್ದ ವಲಸೆಯನ್ನು ಈಗ ಅವರ ತೊಗಲುಬೊಂಬೆಗಳು ಬೇರೊಂದು ಬಗೆಯಲ್ಲಿ ಮುಂದುವರೆಸಿದವು. ಕಂಪನಿ ರಂಗಭೂಮಿಯಲ್ಲಿ ತೆರೆಯಮುಂದೆ ಅಭಿನಯಿಸುವ ನಟರಾಗಿದ್ದ ವೀರಣ್ಣನವರು ಈಗ ಗೊಂಬೆಗಳನ್ನು ಮುಂದೆಬಿಟ್ಟು ತಾವು ತೆರೆಯ ಹಿಂದೆ ಸರಿದಿದ್ದರೇನೋ ಖರೆ. ಆದರೆ ಈ ಹಿಂಜರಿತವು ಅವರನ್ನೂ ಅವರ ಕಲೆಯನ್ನೂ ನಾಗರಿಕ ಪ್ರೇಕ್ಷಕರ ಮುಂದೆ ತಂದು ನಿಲ್ಲಿಸಿತು. ವಿಶ್ವದ ತಿರುಗಾಟಕ್ಕೆ ಅಣಿಗೊಳಿಸಿತು. ರಾಯಲಸೀಮೆಯಲ್ಲಿ ಹುಟ್ಟಿದ ತೊಗಲುಬೊಂಬೆ ರಂಗಭೂಮಿಗೆ ಕ್ರಿಸ್ತಪೂರ್ವ ೩ನೇ ಶತಮಾನದಷ್ಟು ಪ್ರಾಚೀನತೆಯಿದೆಯೆಂದೂ, ಅದು ಶಾತವಾಹನ, ಪಲ್ಲವ, ಚಾಲುಕ್ಯ, ಕಾಕತೀಯ, ವಿಜಯನಗರ, ತಂಜಾವೂರು ರಾಜ್ಯಗಳಿಗೆ ಬರುತ್ತಿದ್ದ ವಿದೇಶಿ ವರ್ತಕರ ಜತೆ, ಸಮುದ್ರಯಾನದ ಮೂಲಕ ಹೊರಟು, ಆಗ್ನೇಯ ಏಶ್ಯಾ ದೇಶಗಳಿಗೂ, ಅಲ್ಲಿಂದ ಟರ್ಕಿ ಪರ್ಶಿಯಾಗಳಿಂದ, ಅಲ್ಲಿಂದ ಯಯೂರೋಪಿನ ದೇಶಗಳಿಗೂ ವಲಸೆ ಮಾಡಿತೆಂದೂ ಒಂದು ಅಭಿಪ್ರಾಯವಿದೆ. ಇದು ನಿಜವಿದ್ದರೆ, ಅದರ ಮಹಾವಲಸೆಯ ಎರಡನೆಯ ಘಟ್ಟವು ವೀರಣ್ಣನವರ ಮೂಲಕ ಸಂಪನ್ನಗೊಂಡಿತು ಎನ್ನಬಹುದು. 

                                                                                        ೩

ವೀರಣ್ಣನವರ ಕಲಾಪ್ರಯೋಗಗಳ ಯಶಸ್ಸಿನ ಅಥವಾ ತೊಗಲುಬೊಂಬೆಯ ರೂಪಾಂತರಗಳ ಹಿಂದೆ ಮೂರು ಸಂಗತಿಗಳಿವೆ. ೧. ವೀರಣ್ಣನವರ ವ್ಯಕ್ತಿಪ್ರತಿಭೆ. ೨. ಪರಂಪರೆಯ ಭದ್ರಬುನಾದಿ. ೩. ಬಹುಮೂಲದಿಂದ ಬಂದ ಕಸುವಿನ ಧಾರೆಗಳು ಏಕೀಭವಿಸಿದ್ದು. ಪರಂಪರೆಯ ಕಸುವೆಷ್ಟೇ ಇದ್ದರೂ ಸೃಜನಶೀಲವಾದ ವ್ಯಕ್ತಿಪ್ರತಿಭೆಯೊಂದರ ಮಧ್ಯಪ್ರವೇಶವಿಲ್ಲದೆ ಕಲಾಲೋಕದಲ್ಲಿ ದೊಡ್ಡ ಪಲ್ಲಟಗಳು ಸಂಭವಿಸುವುದಿಲ್ಲ; ಹಾಗೆಯೇ ಎಂತಹ ವ್ಯಕ್ತಿಪ್ರತಿಭೆಯಿದ್ದರೂ ಪರಂಪರೆಯಲ್ಲಿ ಆಳವಾಗಿ ಬೇರುಗಳಿಲ್ಲದೆ ಮಾಡುವ ಪ್ರಯೋಗಗಳು ದೊಡ್ಡ ಗೆಲುವನ್ನು ಗಳಿಸುವುದಿಲ್ಲ. ಸಂಪ್ರದಾಯದ ಕಾಂಡವು ಆಧುನಿಕತೆ ಸಹವಾಸದಿಂದಲೂ  ಚಾರಿತ್ರಿಕ ಒತ್ತಡದಿಂದಲೂ ಹೊಸ ಚಿಗುರನ್ನು ಕೊನರಿಸತೊಡಗುತ್ತದೆ. ತೊಗಲುಬೊಂಬೆ ವಿಷಯದಲ್ಲಿ ವೀರಣ್ಣನವರ ವ್ಯಕ್ತಿಪ್ರತಿಭೆ, ಪ್ರಯೋಗಶೀಲತೆ ಮತ್ತು ಪರಂಪರೆಯ ಕಸುವುಗಳು ಹೊಸಹದದಲ್ಲಿ ಸಮನ್ವಯಗೊಂಡವು. ಅವರಲ್ಲಿ ಬಹುಮೂಲದ ಧಾರೆಗಳಾದ ಭಜನೆ, ಗಮಕ, ಶಾಸ್ತ್ರೀಯ ಸಂಗೀತ, ಕನ್ನಡ ಸಾಹಿತ್ಯದ ಓದು, ವೃತ್ತಿರಂಗಭೂಮಿ ಹಾಗೂ ಜನಪದ ರಂಗಭೂಮಿಗಳು ಸಹ ಸಂಗಮಿಸಿದವು;  ಅವರ ಹಾಡಿಕೆಯಲ್ಲಿ ಜನಪದ ಮಟ್ಟುಗಳ ಜತೆಗೆ ಶಾಸ್ತ್ರೀಯ ಮಟ್ಟುಗಳ ಹದವಾಗಿ ಸಂಗಮಿಸುವುದನ್ನು ಸಹ ಗಮನಿಸಬೇಕು. ಇದಕ್ಕೆಲ್ಲ ಕಾರಣ, ವೃತ್ತಿರಂಗಭೂಮಿಯನ್ನೂ ಜನಪದ ಬಯಲಾಟಗಳನ್ನೂ ಹಾದು ಅವರು ತೊಗಲುಬೊಂಬೆಗೆ ಮರಳಿ ಬಂದಿದ್ದು. ವೀರಣ್ಣನವರಂತೆ ಈ ಮೂರು ರಂಗಭೂಮಿಗಳೊಳಗೆ ಹೊಕ್ಕಾಡಿ ಬಂದ ಇನ್ನೊಂದು ಪ್ರತಿಭೆ ಬಹುಶಃ ಕರ್ನಾಟಕದಲ್ಲಿ ಮತ್ತೊಂದು ಇಲ್ಲ. ಬಹುಮೂಲದಿಂದ ಶಕ್ತಿಸಂಚಯ ಮಾಡಿಕೊಳ್ಳುವ ಈ ಗುಣವು ಅವರ ಭಾಷಾಸಿದ್ಧಿಯಲ್ಲೂ ಕಾಣುತ್ತದೆ. ಅವರದು ಸಂಸ್ಕೃತ ಮತ್ತು ಬಳ್ಳಾರಿಯ ಆಡುನುಡಿಯ ಹದವಾದ ಮಿಶ್ರಣದಿಂದ ಕೂಡಿದ ಭಾಷೆ. ಅವರಿಗೆ ಈ ಶಿಷ್ಟಕನ್ನಡವು ಅವರು ಬಹುಕಾಲ ಕೆಲಸ ಮಾಡಿದ ವೃತ್ತಿರಂಗಭೂಮಿಯ ನಾಟಕಗಳಿಂದಲೊ, ನಡುಗನ್ನಡ ಶೈಲಿಯನ್ನು ಬಳಸುವ ಜನಪದ ಬಯಲಾಟಗಳಿಂದಲೊ, ಪ್ರಾಯದಲ್ಲಿ ಓದಿದ್ದ ಅನಕೃ ಕಾದಂಬರಿಗಳಿಂದಲೊ, ಸಿಡಗಿನಮೆಳೆ ಚಂದ್ರಯ್ಯ ಅಥವಾ ಜೋಳದರಾಶಿ ದೊಡ್ಡನಗೌಡರಂತಹ ನಟ-ಲೇಖಕರ ಸಹವಾಸದಲ್ಲಿದ್ದುದರಿಂದಲೊ ಬಂದಿರಬಹುದು. ಕಂದಗಲ್ ಹಣಮಂತರಾಯರ ‘ರಕ್ತರಾತ್ರಿ’ಯಂತಹ ನಾಟಕಗಳಲ್ಲಿ ಪಾತ್ರವಹಿಸಿದ ಯಾರಿಗೂ ಶಿಷ್ಟವಾದ ಕನ್ನಡ ಕರಗತವಾಗಿಬಿಡುತ್ತದೆ. ಬಹುಶಃ ರಂಗಭೂಮಿಯ ಈ ಬಹುಮುಖತೆಯೇ ಅದನ್ನು ಬೇರೆಲ್ಲಾ ಕಲೆಗಳಿಗಿಂತ ಜಾತ್ಯತೀತವಾಗಿಸಿತು ಎಂದು ಕಾಣುತ್ತದೆ. ಕರ್ನಾಟಕದ ವೃತ್ತಿರಂಗಭೂಮಿಯ ನಟನಟಿಯರ ಯಾದಿ ನೋಡಿದರೂ ಜಾತ್ಯತೀತತೆಯ ಈ ಅಂಶ ಮನದಟ್ಟಾಗುತ್ತದೆ. 
 
ವೀರಣ್ಣನವರು ಮಾತುಕತೆಯ ನಡುವೆ ಹೇಳಿದರು: ‘ಸಾರೂ, ಬಡತನ ಬಹಳ ಕೆಟ್ಟದ್ದು. ಅದರಿಂದ ಅನೇಕ ಸಲ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಅನಿಸಿರೋದುಂಟು. ಆದರೆ ಕಲಾಜಗತ್ತಿನಲ್ಲಿ ಸಿಕ್ಕ ಬೆಲೆಬಾಳುವ ಅನುಭವ ನನ್ನನ್ನು ಉಳಿಸಿತು. ಶಾರದಾತಾಯಿ ನನಗೆ ಕಲಾವಿದ್ಯೆ ಕೊಟ್ಟಿದಾಳೆ. ನನಗೆ ವ್ಯವಹಾರ ಗೊತ್ತಿಲ್ಲ. ಕಲೆ ಗೊತ್ತಿದೆ. ಕಲೆ ನನ್ನ ಕೈಹಿಡಿದಿದೆ.’ ವೀರಣ್ಣನವರ ಜತೆಯಿದ್ದಾಗ ಅವರ ವ್ಯಕ್ತಿತ್ವದಲ್ಲಿರುವ ಮಾಗುವಿಕೆ, ತಾಳ್ಮೆ ಪ್ರಸನ್ನತೆಯ ಗುಣಗಳು ಅನುಭವಕ್ಕೆ ಬರುತ್ತವೆ. ದೇಶ ವಿದೇಶಗಳನ್ನು ತಿರುಗಿ, ಕೀರ್ತಿಯನ್ನೂ ಜನಪ್ರೀತಿಯನ್ನೂ ಗಳಿಸಿದ್ದರೂ, ಅವರಲ್ಲಿ ಗ್ರಾಮೀಣವಾದ ಸರಳತೆ ಮತ್ತು ಮುಗ್ಧತೆ ಕಳೆದುಹೋಗಿಲ್ಲ. ವ್ಯವಹಾರ ಜ್ಞಾನವಿಲ್ಲದ ಕಾರಣದಿಂದಲೊ ತನ್ನ ಮಿತಿಯ ಅರಿವಿನಿಂದ ಒದಗಿರುವ ನಮ್ರತೆಯ ದೆಸೆಯಿಂದಲೊ ಅವರು ಮತ್ತಷ್ಟು ಎತ್ತರದವರಾಗಿ ಕಾಣುವರು. ಅವರಿಗೆ ತಮಗೂ ತಮ್ಮ ಕಲೆಗೂ ಜನ ಮತ್ತು ಸರ್ಕಾರ ಕೊಟ್ಟಿರುವ ನೈತಿಕ ಬೆಂಬಲದ ಬಗ್ಗೆ ಅಪಾರ ಕೃತಜ್ಞತೆಯಿದೆ. ಬಾಲ್ಯದಲ್ಲಿ ಪಟ್ಟಿರುವ ಕಷ್ಟ ಅನುಭವಿಸಿದ ಅಪಮಾನಗಳು ಅವರ ಮನಸ್ಸನ್ನು ಕಹಿ ಮಾಡಿದಂತಿಲ್ಲ. ಜಾತಿ ಮತ್ತು ಬಡತನದಿಂದ ಮುಖಾಮುಖಿ ಮಾಡಿದ ಅಪಮಾನವನ್ನು ಕಲಾತ್ಮಕ ಪ್ರಜ್ಞೆಯ ಮೂಲಕ ಗೆಲ್ಲುವುದರಿಂದ ಬರುವ ಆತ್ಮವಿಶ್ವಾಸವಿದು ಎಂದು ತೋರುತ್ತದೆ. ವೀರಣ್ಣನವರ ಬದುಕು ಕಲೆಯಿಂದ ಅಪಮಾನವನ್ನು ಗೆದ್ದ ಕಲಾವಿದನ ಕಥೆ ಮಾತ್ರವಲ್ಲ, ಅಳಿವಿನಂಚಿಗೆ ಸರಿಯುತ್ತಿದ್ದ ಕಲೆಯನ್ನು ತನ್ನ ಪ್ರತಿಭೆ ಶ್ರದ್ಧೆ ಶ್ರಮದಿಂದ ಬದುಕಿಸಿದ ಗಾಥೆ ಕೂಡ. ಆದರೆ ಆಧುನಿಕ ಸಮಾಜದ ಅಪೇಕ್ಷೆ ಮತ್ತು ಸರ್ಕಾರದ ನೆರವುಗಳು, ಕಲೆಯನ್ನು ಸರಕೀಕರಣ ಮಾಡಬಲ್ಲವು. ಇದಕ್ಕೆ ಸಾಕ್ಷಿ ವೀರಣ್ಣನವರ ತಂಡವು ಡೆಂಗಿಸೊಳ್ಳೆಗಳನ್ನು ಮತ್ತು ಏಡ್ಸನ್ನು ಕುರಿತ ಪ್ರಸಂಗಗಳ ಪ್ರದರ್ಶನ ಮಾಡುತ್ತಿರುವುದು. ಈಗ ಪೌರಾಣಿಕ ಧಾರ್ಮಿಕ ಪ್ರಸಂಗಗಳು ದೊರಕಿಸಿಕೊಡಲಾಗದ ಆದಾಯಗಳನ್ನು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಈ ಪ್ರಸಂಗಗಳು ದೊರಕಿಸಿಕೊಡುತ್ತಿವೆ. ಕಲೆ ಮತ್ತು ಆಧುನಿಕತೆಯ ಸಂಬಂಧದ ಒಂದು ವೈರುಧ್ಯವಿದು.  
  
                                                                                       ೪

ಮಾತುಕತೆಯ ಕೊನೆಗೆ ವೀರಣ್ಣನವರಿಗೆ ಕೆಲವು ರಂಗಗೀತೆಗಳನ್ನು ಹಾಡಬೇಕೆಂದು ವಿನಂತಿಸಿದೆ. ಅವರು ಕುಮಾರವ್ಯಾಸ ಭಾರತದಿಂದ ಕೆಲವು ಷಟ್ಪದಿಗಳನ್ನು ಅಭಿನಯಪೂರ್ವಕವಾಗಿ ಉಚ್ಚಸ್ವರದಲ್ಲಿ ಹಾಡಿದರು. ನಮ್ಮ ಮನೆ ನಾದದಿಂದ ತುಂಬಿಹೋಯಿತು. ವೀರಣ್ಣನವರು ಆರಿಸಿಕೊಂಡ ಹೊಸ ಪ್ರಸಂಗಗಳ ನಾಯಕರಾದ ಬಸವಣ್ಣ ಮತ್ತು ಗಾಂಧಿ, ಸಮಾಜ ಮತ್ತು ದೇಶವನ್ನು ತಮ್ಮದೇ ಆದ ರೀತಿಯಲ್ಲಿ ಬಿಡುಗಡೆ ಮಾಡಲು ಯತ್ನಿಸಿದವರು ಎಂಬುದು ಮಾರ್ಮಿಕವಾಗಿದೆ. ವೀರಣ್ಣನವರಿಗೆ ಗಾಂಧಿಯನ್ನು ಕುರಿತ ಆಟದ ಹಾಡನ್ನು ಹಾಡಲು ವಿನಂತಿಸಿದೆ. ಅವರು -ತಮ್ಮ ಹೆಸರಲ್ಲೂ ಇರುವ- ‘ವೀರ’ರಸದ ದನಿಯಲ್ಲಿ ಒಂದು ಪದ್ಯವನ್ನು ಹಾಡಿದರು:

ಮಂಗಳಮಯ ಉತ್ತುಂಗ ಹಿಮಾಲಯ ನೋಡಿ ಹೇಳಿದಂಥ ಕಥೆಯಾ
ಭಾರತಮಾತೆಯು ಶತಶತಮಾನದಲ್ಲಿ ನರಳಿದ ವ್ಯಥೆಯಾ
ತಾಯಿ ಬಂಧನವ ಬಿಡಿಸಲು ಸಿಡಿಯಿತು ಕೋಟಿಕಂಠದಲ್ಲಿ ಜಯಕಾರಾ
ಕೇಳುತಮ್ಮ ಕೇಳುತಂಗಿ ನಮ್ಮ ಸ್ವಾತಂತ್ರ್ಯ ಸಮರದಾ ಶ್ರೀಕಾರಾ

ಕಂಪನಿ ರಂಗಭೂಮಿ ಹಾಗೂ ಜನಪದ ರಂಗಭೂಮಿಗಳಲ್ಲಿ ಪಳಗಿರುವ ವೀರಣ್ಣನವರ ಕಂಠದಲ್ಲಿ ಈ ರಂಗಗೀತೆ ಕಹಳೆಯಂತೆ ಮೊಳಗಿತು. ಈ ಗೀತೆಯಲ್ಲಿರುವ ಬಂಧನ-ವ್ಯಥೆ ಸಿಡಿಯುವುದು-ಸ್ವಾತಂತ್ರ್ಯ ಎಂಬ ಪದಗಳು ಪ್ರಸಂಗದ ಸನ್ನಿವೇಶಕ್ಕಾಗಿ ಹುಟ್ಟಿದ್ದರೂ, ವೈಯಕ್ತಿಕವಾಗಿ ವೀರಣ್ಣನವರ ಹಾಗೂ ಅವರ ಕುಲಕಲೆಯ ಜೀವನಚರಿತ್ರೆಗೂ ಸಂಬಂಧಿಸಿವೆ ಅನಿಸಿತು. ಈ ರಂಗಗೀತೆ ಲಾವಣಿ ಮಟ್ಟಿನಲ್ಲಿರುವುದು ಮಾರ್ಮಿಕವಾಗಿದೆ. ಯಾಕೆಂದರೆ ಲಾವಣಿಗಳಿಗೂ ವಸಾಹತುಶಾಹಿಗೆ ಜನಪದರಿಂದ ಬಂದ ಪ್ರತಿರೋಧಕ್ಕೆ ತಳುಕಿದೆ. ಬಹಳಷ್ಟು ಲಾವಣಿಕಾರರು ರಾಷ್ಟ್ರೀಯ ಹೋರಾಟಗಾರರೂ ಆಗಿದ್ದವರು. 

ವೀರಣ್ಣನವರು ಮಾತಾಡಲಿ ಹಾಡಲಿ ಅಲ್ಲಿ ನಾಟಕೀಯತೆ ತುಂಬಿರುತ್ತದೆ. “ಮಾತನಾಡಿದರೆ ಹಾಡಿದಂತಿರಬೇಕು. ಹಾಡಿದರೆ ಮಾತನಾಡಿದಂತಿರಬೇಕು. ಇದೇ ರಂಗಭೂಮಿಯ ಗುಟ್ಟು” ಎಂದು ಅವರು ಹಲವು ಸಲ ಹೇಳಿದರು. ಹಾಡುವಾಗ ಇಲ್ಲವೇ ಅಭಿನಯದ ತುಣುಕನ್ನು ತೋರಿಸುವಾಗ ಅವರ ಮುಖ ಅಪೂರ್ವ ಕಳೆಯಿಂದ ಪ್ರಜ್ವಲಿಸುತ್ತಿತ್ತು. ಮುಖದ ಈ ನಾಟಕೀಯ ಬದಲಾವಣೆಯನ್ನು ಲಾಡ್‌ಸಾಬ್ ಅಮೀನಗಡ, ಫ್ಲೋರಿನಾ, ಸುಭದ್ರಮ್ಮ ಮನ್ಸೂರ್ ಮುಂತಾದ ರಂಗಭೂಮಿ ಜನರ ಜತೆ ಮಾತುಕತೆ ಮಾಡುವಾಗಲೂ ನಾನು ಕಂಡಿರುವೆ. ರಂಗಭೂಮಿಯ ನೆನಪುಗಳು ದೈಹಿಕ ವಯಸ್ಸನ್ನು ಕಳೆದು ಕಲಾತ್ಮಕ ಯೌವನವನ್ನು ತುಂಬಿಕೊಡುತ್ತವೆ. ವೃದ್ಧ ಯಯಾತಿ ತನ್ನ ಮಗನ ಯೌವನವನ್ನು ಕಡವಾಗಿ ಪಡೆದುಕೊಂಡು ಹೊಸಬಾಳು ಬದುಕಿದ ಪುರಾಣದ ಕತೆಯಿದೆಯಷ್ಟೆ. ಆದರೆ ವೀರಣ್ಣನವರು ತಮ್ಮ ಅನುಭವ ಪ್ರತಿಭೆ ಪ್ರಯೋಗಶೀಲತೆಗಳ ತೇಜಸ್ಸನ್ನು ಅಕಾಲ ಮುಪ್ಪಿಗೆ ಸಂದಿದ್ದ ತೊಗಲುಬೊಂಬೆಗಳಿಗೆ ಧಾರೆಯೆರೆದು ಅವಕ್ಕೆ ಹೊಸಜೀವ ತುಂಬಿದವರು.  
 ತೊಗಲುಬೊಂಬೆಯ ಕಲಾಲೋಕಕ್ಕೆ ವೀರಣ್ಣನವರು ಮಾಡಿದ ಈ ನಿರ್ಗಮನ ಮತ್ತು ಪುನರಾಗಮನ, ತೊಗಲುಬೊಂಬೆಗೆ ಕೊಟ್ಟ ರೂಪಾಂತರ ಮತ್ತು ಬಿಡುಗಡೆಗಳು, ಶಿವರಾಮ ಕಾರಂತರು ಯಕ್ಷಗಾನಕ್ಕೆ ಕೊಟ್ಟ ಕಾಯಕಲ್ಪವನ್ನು ನೆನಪಿಸುತ್ತವೆ. ಈ ಬಗೆಯ ಬಿಡುಗಡೆ ಮತ್ತು ರೂಪಾಂತರಗಳು ಬಳ್ಳಾರಿ ಜಿಲ್ಲೆಯಲ್ಲಿ ಸಮೃದ್ಧವಾಗಿದ್ದೂ ಕೊನೆ ಉಸಿರೆಳೆಯುತ್ತಿರುವಂತೆ ತೋರುವ ಬಯಲಾಟಗಳಿಗೆ ಸಿಗಲಿಲ್ಲವೆನ್ನುವುದು ದುರ್ದೈವದ ಸಂಗತಿ. ಈ ಬಯಲಾಟಗಳು ಈಗಲೂ ಒಬ್ಬ ಕಾರಂತರ ಇಲ್ಲವೇ ವೀರಣ್ಣವರಂತಹ ವ್ಯಕ್ತಿಪ್ರತಿಭೆಯ ಸಾಂಸ್ಥಿಕ ಮಧ್ಯಪ್ರವೇಶಕ್ಕೆ ಕಾಯುತ್ತಿವೆ. ವೀರಣ್ಣನವರಿಗೂ ಅವರ ‘ಶ್ರೀರಾಮಾಂಜನೇಯ ತೊಗಲಬೊಂಬೆ ಮೇಳ’ಕ್ಕೂ ಸಿಕ್ಕ ಯಶಸ್ಸು ಮತ್ತು ಮಾನ್ಯತೆ, ಕರ್ನಾಟಕದ ಅನೇಕ ತೊಗಲುಗೆಂಬೆ ಕಲಾವಿದರಿಗೂ ಅವರ ತಂಡಗಳಿಗೂ ಸಿಕ್ಕಿದಂತಿಲ್ಲ. ಜನಪದ ಕಲೆಗಳನ್ನು ಎರಡನೇ ದರ್ಜೆಯಲ್ಲಿ ನಡೆಸಿಕೊಳ್ಳುತ್ತಿರುವ ಸಮಾಜದ ಮನೋಭಾವದ ಬಗ್ಗೆ ವೀರಣ್ಣನವರಲ್ಲಿ ವಿಷಾದ ಮಡುಗಟ್ಟಿತ್ತು. ಜನಪದ ಕಲೆಗಳು ಮತ್ತು ಕಲಾವಿದ ಸಮುದಾಯಗಳು ತಮ್ಮ ಶಾಪಗ್ರಸ್ತ ಸ್ಥಿತಿಯಿಂದ ಹೊರಬರಲು ಜನಪದ ರಂಗಭೂಮಿಯಲ್ಲೇ ಆಧುನಿಕವಾದ ಪಲ್ಲಟಗಳು ಸಂಭವಿಸಬೇಕೊ ಅಥವಾ ಇಂತಹ ಜನಪದ ರಂಗಭೂಮಿಯನ್ನು ನೋಡುವ ಸಮಾಜದ ದೃಷ್ಟಿಕೋನ ಬದಲಾಗಬೇಕೊ ಎಂಬುದು ಮಾತ್ರ ಒಂದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Tarikereyavara matu satya. Belagallu veeranna namma nadu belagalu banda deevige.
Ivara kuritu lekhana bareyalu avakasha sikkiddu manna adrusta.
Shivalingappa k

shivalingappa k ಹೇಳಿದರು...

Tarikereyavara matu satya. Belagallu veeranna namma nadu belagalu banda deevige.
Ivara kuritu lekhana bareyalu avakasha sikkiddu manna adrusta.
Shivalingappa k