ಗುರುವಾರ, ಡಿಸೆಂಬರ್ 13, 2018

ಬರದಿಂದ ತತ್ತರಿಸುತ್ತಿರುವ ಮಹಾರಾಷ್ಟ್ರ



ಬರಗಾಲವನ್ನು ನಿಭಾಯಿಸಲಾಗದ ಸರ್ಕಾರ ಗ್ರಾಮೀಣ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸುತ್ತಿದೆ.

Image result for maharashtra drought 2018


ಅನುಶಿವಸುಂದರ್ 

ಬರಗಾಲವನ್ನು ಹೇಗೆ ನಿರ್ವಚನ ಮಾಡಬೇಕೆಂಬ ಜಿಜ್ನಾಸೆಯಲ್ಲಿ ಸಾಕಷ್ಟು ಕಾಲ ಕಳೆದ ನಂತರ ಬರಪೀಡಿತ ಪ್ರದೇಶಗಳ ಜನರ ನಿರಂತರ ಒತ್ತಡಕ್ಕೆ ಮಣಿದು ಮಹಾರಾಷ್ಟ್ರ ಸರ್ಕಾರ ಕೊನೆಗೂ ಕಳೆದ ಅಕ್ಟೋಬರ್ ೩೧ರಂದು ೨೬ ಜಿಲ್ಲೆಗಳ ೧೫೧ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಿದೆ. ಆದರೆ ಗ್ರಾಮೀಣಮಟ್ಟದಿಂದ ಬರುತ್ತಿರುವ ವರದಿಗಳು ಮಾತ್ರ ಸರ್ಕಾರವು ಬರಪೀಡಿತ ಪ್ರದೇಶದ ಬಗ್ಗೆ ಸಾಕಷ್ಟು ಕೆಳ ಅಂದಾಜು ಮಾqದೆಯೆಂದು ಹೇಳುತ್ತಿವೆ. ೨೦೧೬ರಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕಠಿಣ ಮತ್ತು ಬೇಕಾಬಿಟ್ಟಿ ನಿಯಮಾವಳಿಗಳನ್ನು ಹೊಂದಿರುವ ಬರ ಕೈಪಿಡಿಯೇ ಸರ್ಕಾರದ ಆವಾಸ್ತವಿಕ ಅಂದಾಜಿಗೆ ಕಾರಣ.

ಮಹಾರಾಷ್ಟ್ರವು ಹಿಂದೆಂದೂ ಇಲ್ಲದಂಥ ಭೀಕರ ಬರಗಾಲವನ್ನು ಎದುರಿಸುತ್ತಿದೆ. ವರ್ಷದ ಬರಗಾಲವನ್ನು ೧೯೭೨ರ ಬರಗಾಲಕ್ಕಿಂತ ತೀವ್ರವಾದದ್ದೆಂದು ಪರಿಗಣಿಸಲಾಗಿದೆ. ಇದಕ್ಕೆ ಮೂಲ ಕಾರಣ ಪ್ರಪ್ರಥi ಬಾರಿಗೆ ಮಹಾರಾಷ್ಟ್ರವು ಖಾರಿಫ್ ಮತ್ತು ರಾಬಿ ಎರಡೂ ಬೆಳೆಗಳ ಬರಗಾಲವನ್ನು ಎದುರಿಸುತ್ತಿರುವುದು. ೨೦೧೭ರಲ್ಲಿ ಇದೇ ಋತುವಿನಲ್ಲಿ ೨೮.೩೫ ಲಕ್ಷ ಹೆಕ್ಟೇರಿನಲ್ಲಿ ರಾಬಿ ಬೆಳೆಗಳ ಬಿತ್ತನೆ ಮಾಡಲಾಗಿದ್ದರೆ ವರ್ಷ ನವಂಬರ್ ೧೫ರ ವೇಳೆಗೆ ಕೇವಲ ೧೩.೦೫ ಲಕ್ಷ ಹೆಕ್ಟೇರಿನಲ್ಲಿ ಮಾತ್ರ ರಾಬಿ ಬಿತ್ತನೆಯನ್ನು ಮಾಡಲಾಗಿದೆ. ಮಣ್ಣಿನಲ್ಲಿ ತೇವಾಂಶವಿಲ್ಲದಿರುವುದು ಮತ್ತು ಜಲಾಶಯಗಳಲ್ಲಿರುವ ನೀರನ್ನು ಬೇಸಿಗೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಮೀಸಲುಗೊಳಿಸಿರುವುದು ಬಾರಿ ರಾಬಿ ಬೆಳೆಯ ಮೇಲೆ ಪರಿಣಾಮ ಬೀರಲಿದೆ. ವಾಡಿಕೆಗಿಂತ ಶೇ.೩೦ರಷ್ಟು ಕಡಿಮೆ ಮಳೆಯಾಗಿರುವುದರಿಂದ ಈಗಾಗಲೇ ತೀವ್ರದ ನೀರಿನ ಕೊರತೆಯುಂಟಾಗಿದೆ. 

ಮಹಾರಾಷ್ಟ್ರದ ಉತ್ತರ ಭಾಗದ ನಾಸಿಕ್ ಮತ್ತು iರಾಠವಾಡ ಪ್ರದೇಶದಲ್ಲಿರುವ ಜಲಾಶಯಗಳಲ್ಲಿ ಅನುಕ್ರಮವಾಗಿ ಶೇ.೬೭ರಷ್ಟು ಮತ್ತು ಶೇ.೨೭ರಷ್ಟು ನೀರಿನ ಸಂಗ್ರಹ ಮಾತ್ರವಿರುವುದರಿಂದ ಪ್ರದೇಶಗಳು ತೀವ್ರವಾದ ನೀರಿನ ಕೊರತೆಯನ್ನು ಅನುಭವಿಸಲಿವೆ. ನವಂಬರ್ ಪ್ರಾರಂಭದ ವೇಳೆಗಾಗಲೇ ೫೭೫ ನೀರಿನ ಟ್ಯಾಂಕರ್ಗಳು ೪೯೮ ಹಳ್ಳಿಗಳಿಗೆ ಮತ್ತು ೯೫೯ ಹಾಡಿಗಳಿಗೆ ನೀರು ಸರಬರಾಜು ಮಾಡುತ್ತಿದವು. ತಿಂಗಳ ಕೊನೆಯ ವೇಳೆಗೆ ಸಂಖ್ಯೆಯು ಇನ್ನಷ್ಟು ಹೆಚ್ಚಿದ್ದು ೮೧೬ ಟ್ಯಾಂಕರ್ಗಳು ೬೯೮ ಹಳ್ಳಿಗಳಿಗೆ ಮತ್ತು ೧೫೧೧ ಹಾಡಿಗಳಿಗೆ ನೀರು ಸರಬರಾಜು ಮಾಡುತ್ತಿವೆ. ಕಳೆದ ವರ್ಷ ಪ್ರದೇಶದಲ್ಲಿ ೯೩ ಟ್ಯಾಂಕರ್ಗಳು ೧೨೨ ಹಳ್ಳಿಗಳಿಗೆ ಮಾತ್ರ ನೀರು ಸರಬರಾಜು ಮಾಡುತ್ತಿದ್ದವು ಎಂಬುದಕ್ಕೆ ಹೋಲಿಸಿದಲ್ಲಿ ಸಮಸ್ಯೆಯ ಗಂಭೀರತೆ ಅರಿವಾಗುತ್ತದೆ. ಇದಕ್ಕೆ ಮಳೆಯ ಕೊರತೆಯೊಂದೇ ಕಾರಣವೆಂದು ಸಾರಾಸಗಟಾಗಿ ಹೇಳಲು ಸಾಧ್ಯವಿಲ್ಲ. ಇದು ಸರ್ಕಾರದ ನೀತಿಗಳಿಂದುಂಟಾದ ಮಾನವ ನಿರ್ಮಿತ ಸಮಸ್ಯೆಯಾಗಿದೆ. ಆದರೂ ಸರ್ಕಾರವು ಕೊಚ್ಚಿಕೊಳ್ಳುತ್ತಿರುವ ಹೆಗ್ಗಳಿಕೆಗಳಿಗೂ ಮತ್ತು ವಾಸ್ತವ ಪರಿಸ್ಥಿತಿಗೂ ಇರುವ ವ್ಯತ್ಯಾಸವನ್ನು ಎತ್ತಿ ತೋರಿಸಲು ಅಂಕಿಅಂಶಗಳನ್ನು ಪುನರುಚ್ಚರಿಸುವ ಅಗತ್ಯ ಉಂಟಾಗಿದೆ. ಜಲ ಸಂಪನ್ನ ಜಮೀನುಗಳು ಯೋಜನೆಯ ಮೂಲಕ ಜಲ ಸಂರಕ್ಷಣೆಯಲ್ಲಿ ಪಥಪ್ರವರ್ತಕ ಬದಲಾವಣೆಂiiನ್ನು ತರಲಾಗಿದೆಯೆಂಬ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಹೆಗ್ಗಳಿಕೆಗಳ ಬಗ್ಗೆ ಬರಗಾಲವು ಮೂಲಭೂತ ಪ್ರಶ್ನೆಗಳನ್ನೇ ಎತ್ತುವಂತೆ ಮಾಡಿದೆ. ಯೋಜನೆಯಿಂದ ಮಹಾರಾಷ್ಟ್ರದ ೧೬,೦೦೦ ಹಳ್ಳಿಗಳು ಬರಮುಕ್ತಗೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶಿರಡಿಯಲ್ಲಿ ಘೊಷಿಸಿದ ಕೆಲ ದಿನಗಳಲ್ಲೇ ಮಹಾರಾಷ್ಟ್ರ ಸರ್ಕಾರವು ೧೫೧ ತಾಲ್ಲೂಕುಗಳ ೨೦,೦೦೦ ಹಳ್ಳಿಗಳನ್ನು ಬರಪೀಡಿತ ಎಂದು ಘೋಷಿಸಬೇಕಾಗಿ ಬಂದದ್ದು ಒಂದು ದೊಡ್ಡ ವ್ಯಂಗ್ಯವೇ ಸರಿ. ಆದರೆ ಪ್ರಧಾನಿಯವರು ಬರಮುಕ್ತವೆಂದು ಘೋಷಿಸಿದ ಎಷ್ಟು ಹಳ್ಳಿಗಳು ಈಗ ಬರಪೀಡಿತವಾಗಿವೆ ಎಂಬ ಅಂಕಿಅಂಶವನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಯೋಜನೆಯಿಂದಾಗಿ ಅಂತರ್ಜಲಮಟ್ಟವು ಹೆಚ್ಚಾಗಿದೆಯೆಂದು ಸರ್ಕಾರ ಮತ್ತು ಕೆಲವು ಪರಿಣಿತರು ಕೊಚ್ಚಿಕೊಳ್ಳುತ್ತಿದ್ದರೂ ಅಂತರ್ಜಲ ಸರ್ವೆ ಮತ್ತು ಅಭಿವೃದ್ಧಿ ಏಜೆನ್ಸಿ (ಜಿಎಸ್ಡಿಎ) ಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಮಹಾರಾಷ್ಟ್ರದ ೧೧,೪೮೭ ಹಳ್ಳಿಗಳಲ್ಲಿ ಅಂತರ್ಜಲವು ಇನ್ನೂ ಒಂದು ಮೀಟರಿನಷ್ಟು ಕೆಳಗಿಳಿದಿದ್ದರೆ ೫೫೬೬ ಹಳ್ಳಿಗಳಲ್ಲಿ ಒಂದರಿಂದ ಎರಡು ಮೀಟರಿನಷ್ಟು ಕೆಳಗಿಳಿದಿದೆ. ೨೯೯೦ ಹಳ್ಳಿಗಳಲ್ಲಿ ಅಂತರ್ಜಲವು ಎರಡರಿಂದ ಮೂರು ಮೀಟರಿನಷ್ಟು ಕೆಳಗಿಳಿದಿದ್ದರೆ ೨೯೪೧ ಹಳ್ಳಿಗಳಲ್ಲಿ ಮೂರು ಮೀಟರಿಗೂ ಹೆಚ್ಚು ಆಳಕ್ಕೆ ಅಂತರ್ಜಲವು ಕುಸಿದಿದೆ. ಇದಕ್ಕೆ ಕೇವಲ ಮಳೆಯ ಕೊರತೆಯೊಂದೇ ಕಾರಣವೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ೨೦೧೪ ಮತ್ತು ೨೦೧೫ರ ಸಾಲಿನಲ್ಲಿ ವರ್ಷಕ್ಕಿಂತ ಕಡಿಮೆ ಮಳೆಯಾಗಿದ್ದರೂ ಅಂತರ್ಜಲವು ಒಂದು ಮೀಟರಿಗಿಂತ ಹೆಚ್ಚು ಆಳಕ್ಕೆ ಕುಸಿತಗೊಂಡ ಹಳ್ಳಿಗಳ ಸಂಖ್ಯೆ ಸಾಲಿಗಿಂತ ಕಡಿಮೆಯೇ ಇತ್ತು.

ಹೀಗಾಗಿ ನಕಾರಾತ್ಮಕ ಪರಿಣಾಮವನ್ನೇ ಬೀರಿರುವ ಅಥವಾ ಹೆಚ್ಚೆಂದರೆ ಯಾವುದೇ ಸಕಾರಾತ್ಮಕ ಫಲಿತಾಂಶವನ್ನೂ ತರದಿರುವ ಹಾಗೂ ೮೦೦೦ ಕೋಟಿ ರೂ.ಗಳಷ್ಟು ವ್ಯಯವಾಗಿರುವ   ಜಲ ಸಂಪನ್ನ ಜಮೀನು ಯೋಜನೆಯ ಬಗ್ಗೆ ಸಕಾರಣವಾಗಿಯೇ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಯೋಜನೆಯನ್ನು ಸಾರಾಂಶದಲ್ಲಿ ಜೆಸಿಬಿ-ಕಾಂಟ್ರಾಕ್ಟರುಗಳ ಲಾಬಿಯಿಂದ ಪ್ರೇರಿತವಾಗಿ ಮಾಡಲ್ಪಟ್ಟ ನಾಲೆಗಳನ್ನು ಅಗಲ-ಆಳಗೊಳಿಸುವ ಕಾಮಗಾರಿಯಷ್ಟೇ ಎಂದು ಕಂಡುಬಂದಿದ್ದು, ಯೋಜನೆಗೆ ತೆರಲಾಗಿರುವ ಪರಿಸರ, ಜಲಶಾಸ್ತ್ರೀಯ ಮತ್ತು ಸಾಮಾಜಿಕ ಬೆಲೆಯೇನೆಂದು ಹಲವಾರು ಪರಿಣಿತರು ಮತ್ತು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ತನ್ನಬೆನ್ನನ್ನು ತಾನೇ ತಟ್ಟಿಕೊಳ್ಳುವ ಸರ್ಕಾರದ ಮುಠಾಳತನಕ್ಕೆ ಈಗ ಎದುರಾಗಿರುವ ಬರಗಾಲವಾದರೂ ಕಡಿವಾಣ ಹಾಕಬೇಕು ಮತ್ತು ಇದರ ಸುತ್ತ ಎತ್ತಲಾಗುತ್ತಿರುವ ಪ್ರಶ್ನೆಗಳನ್ನು ಕೇಳಿಸಿಕೊಳ್ಳುವಂತೆ ಮಾಡಬೇಕು.


ಮಹಾರಾಷ್ಟ್ರ ಸರ್ಕಾರವು ಗಂಭೀರತೆಯ ಮುಖವಾಡ ತೊಟ್ಟು ಜಲ ಸಂಪನ್ನ ಜಮೀನುಗಳಂಥ ಚಿತ್ರ ವಿಚಿತ್ರ ಯೋಜನೆಗಳನ್ನೆಲ್ಲಾ ನವ ಸಂಶೋಧನೆಗಳೆಂಬ ಹೆಸರಿನಲ್ಲಿ ಜಾರಿಗೆ ತರ್ರುತ್ತಿರುವುದರಿಂದ ರಾಜ್ಯದಲ್ಲಿ ಜಾನುವಾರುಗಳ ಮೇವಿಗೇ ಕೊರತೆಯಾಗುವಂಥಾ ಗಂಡಾಂತರವನ್ನು ಉಂಟುಮಾಡುತ್ತಿದೆ. ತಮ್ಮ ರಾಸುಗಳಿಗೆ ಮೇವುಗಳನ್ನು ಒದಗಿಸಲು ಹೆಚ್ಚೆಚ್ಚು ಮೇವು ತಾಣಗಳನ್ನು ನಿರ್ಮಿಸಬೇಕೆಂದು ರೈತರು ಒತ್ತಡ ಹಾಕುತ್ತಿರುವುದರಿಂದ ರೈತರೇ ಸ್ವಯಂ ಹೆಚ್ಚೆಚ್ಚು ಮೇವನ್ನು ಉತ್ಪಾದಿಸುವಂತೆ ಉತ್ತೇಜನ ನೀಡಲು ರೈತರಿಗೆ ನೇರ ನಗದು ಹಸ್ತಾಂತರ ಯೋಜನೆಯನ್ನು ಜಾರಿ ಮಾಡುವ ಪ್ರಸ್ತಾಪವನ್ನು ಪಶುಸಂಗೋಪನಾ ಇಲಾಖೆಯು  ಸರ್ಕಾರದ ಮುಂದಿರಿಸಿದೆ. ರಾಜ್ಯವು ಯಾವ ಬೆಳೆಯನ್ನು ಬೆಳೆಯಲಾಗದಂಥ ಭೀಕರ ಬರಗಾಲವನ್ನು ಎದುರಿಸುತ್ತಿರುವಾಗ ಮಾಡಿರುವ ಪ್ರಸ್ತಾಪವನ್ನು ರೈತರ ಬವಣೆಯ ಬಗ್ಗೆ ಮಾಡಲಾಗಿರುವ ಕ್ರೂರ ಅಪಹಾಸ್ಯವೆಂದೇ ಪರಿಗಣಿಸಲಾಗುತ್ತಿದೆ. ಅಷ್ಟು ಮಾತ್ರವಲ್ಲದೇ ಉಳುಮಗಾಗಿ ಮೇವನ್ನು ಸಂಗ್ರಹಿಸಲು ಪ್ರತಿ ಮನೆಯಿಂದ ಒಬ್ಬೊಬ್ಬರು ಮೇವುತಾಣದಲ್ಲೇ ಕಾದುಕುಳಿತುಕೊಳ್ಳುವುದನ್ನು ತಪ್ಪಿಸಲು ಮೇವನ್ನು ಮನೆ ಬಾಗಿಲಿಗೇ ತಲುಪಿಸುವಂತಾಗಬೇಕೆಂಬ ಆಗ್ರಹವೂ ಇತ್ತೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಬರಗಾಲವು ಮತ್ತೊಂಡು ಮಹತ್ವದ ಕಾರಣದಿಂದಾಗಿಯೂ ೧೯೭೨ರ ಬರಗಾಲಕ್ಕಿಂತ ಭಿನ್ನವಾಗಿದೆ. ಆಗ ಪರಿಣಾಮಕಾರಿ ಬರಗಾಲ ನಿವಾರಣೆ ಮತ್ತು ನಿರ್ಮೂಲನಾ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ದುಡಿಯುವ ಜನತೆಯ ಹಲವಾರು ನಾಯಕರನ್ನೂ ಮತ್ತು ಜನಪರ ಬುದ್ಧಿಜೀವಿಗಳನ್ನೂ ಒಳಗೊಂಡ ದುಷ್ಕಾಲ್ ನಿವಾರಣ್ ಆಣಿ ನಿರ್ಮೂಲನ್ ಮಂಡಲ್ ನೇತೃತ್ವದಲ್ಲಿ ರಾಜ್ಯಾದ್ಯಂತ ಬೃಹತ್ ಚಳವಳಿಯೇ ನಡೆಯಿತು. ಹೋರಾಟದ ಕಾರಣದಿಂದಾಗಿಯೇ ಸಮಗ್ರ ಜಲಮೂಲ ಅಭಿವೃದ್ಧಿ ಯೋಜನೆಗಳು ಅಸ್ಥಿತ್ವಕ್ಕೆ ಬಂದವಲ್ಲದೆ ಬರಗಾಲವು ಮಾನವ ನಿರ್ಮಿತವೇ ಹೊರತು ಪ್ರಕೃತಿ ಸಹಜವಲ್ಲವೆಂಬ ಪ್ರತಿಪಾದನೆಗಳು ಸಾರ್ವಜನಿಕ ಚರ್ಚೆಗಳ ಕೇಂದ್ರ ಸ್ಥಾನಕ್ಕೆ ಬರುವಂತಾಯಿತು. ಆದರೆ ಅಂದಿಗಿಂತ ಇಂದಿನ ಪರಿಸ್ಥಿತಿಯು ಹೆಚ್ಚು ವಿನಾಶಕಾರಿಯಾಗಿದ್ದರೂ ಸರ್ಕಾರವು ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳುವ ರೀತಿ ಒತ್ತಡವನ್ನು ಹಾಕಬಲ್ಲ, ೧೯೭೨ರ ರೀತಿಯ,  ಸಾರ್ವಜನಿಕ ಪ್ರತಿಸ್ಪಂದನೆಯನ್ನು ಮಾತ್ರ ಅದು ಇನ್ನೂ ಹುಟ್ಟುಹಾಕಿಲ್ಲ. ಇತ್ತೀಚಿನ ದಿನಗಳಲ್ಲಿ ದುಷ್ಕಾಲ್ ನಿವಾರಣ ಆಣಿ ನಿರ್ಮೂಲನ್ ಮಂಡಲ್ ರೀತಿಯ ನಾಗರಿಕ ಮುಂದೊಡಗನ್ನು ಹುಟ್ಟಿಹಾಕುವ ಕೆಲವು ಪ್ರಯತ್ನಗಳು ನಡೆದಿವೆ. ಇಂದು ತುರ್ತು ಪರಿಹಾರದ ದೃಷ್ಟಿಯಿಂದ ಬರಗಾಲನಿವಾರಣೆಕಾರ್ಯಕ್ರಮದ ಮೇಲೆ ಸಂಪೂರ್ಣ ಗಮನವನ್ನು ಹಾಕಬೇಕಿದೆ. ಆದರೆ ಅದು ಬರಗಾಲನಿರ್ಮೂಲನೆ ದೀರ್ಘಕಾಲೀನ ಅಗತ್ಯವನ್ನೇನೂ ಮರೆಸಬೇಕಿಲ್ಲ.  ಹಾಲೀ ಇಂಥಾ ಒಂದು ನಾಗರಿಕ ಮುಂದೊಡಗಿನಲ್ಲಿ ತೊಡಗಿಕೊಂಡಿರುವ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳು ಒತ್ತಿ ಒತ್ತಿ ಹೇಳುತ್ತಿರುವುದು ಇದನ್ನೇ. ಪರ್ಯಾಯ ದೃಷ್ಟಿಕೋನವನ್ನು ಜನಪ್ರಿಯಗೊಳಿಸಿ ಜನರನ್ನು ಅದರ ಸುತಾ ಅಣಿನೆರೆಸುವ ಮೂಲಕಮಾತ್ರ ಬರಪರಿಹಾರ ಮತ್ತು ಬರ ನಿವಾರಣಾ ಕಾರ್ಯಕ್ರಮಗಳ ಸುತ್ತಾ ಬಲಿತುಕೊಂಡಿರುವ ಪಟ್ಟಭದ್ರ ಹಿತಾಸಕ್ತಿಗಳ ಮತ್ತು ಲಾಬಿಗಳ ಪ್ರಭಾವವನ್ನು ಮೀರಲು ಸಾಧ್ಯ.

 ಕೃಪೆ: Economic and Political WeeklyDec 8,  2018. Vol. 53. No.48
                                                              
(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )







ಕಾಮೆಂಟ್‌ಗಳಿಲ್ಲ: