ಮಂಗಳವಾರ, ಮೇ 24, 2016

ದೇವರ ಮರಗಳಲ್ಲಿ ಅರಣ್ಯ ಸಂಸ್ಕೃತಿಯ ಬೇರು

-ಶಿವಾನಂದ ಕಳವೆ



  ತಾಳಗುಪ್ಪಾ ರೈಲ್ವೆ ಹಳಿ ನಿರ್ಮಾಣ ಕಾಲ. ಸರಕಾರಕ್ಕೆ ಮಾರ್ಗದ ಮರ ಕಟಾವು ಮಾಡಿಸಬೇಕಿತ್ತು. ಮರ ಕಡಿಯುವ ಕೂಲಿಗಳು ಅಬ್ಬರದ ಕೆಲಸ ನಡೆಸಿದ್ದರು. ಆದರೆ  ಅಲ್ಲಿನ ತಾರಿ ಮರಗಳಿಗೆ ಕೊಡಲಿ ಹಚ್ಚಲು ಹಿಂದೇಟು ಹಾಕಿದರು. ಈ  ಮರ ಕಡಿಯಲು ತಮ್ಮಿಂದ ಸುತಾರಾಂ ಸಾಧ್ಯವಿಲ್ಲ ಎಂದು ಸಬೂಬು  ತೆಗೆದರು. ಜೀವನ ಪರ್ಯಂತ ಮರ ಕಡಿಯುವದೇ ಕಾಯಕವಾದವರಿಗೆ  ಇದೆಂತಹ ನೆಪ ಎಂದು ಗುತ್ತಿಗೆದಾರರಿಗೆ  ಅಂತುಪಾರು ಹತ್ತಲಿಲ್ಲ. ವಿಷಯ ಕೆದಕಿದರೆ ಸ್ವಾರಸ್ಯಕರ ಕತೆ ಹೊರಬಿತ್ತು.  ಅಲ್ಲಿ ಮರ ಕಡಿಯಲು ಬಂದ ಕೂಲಿಗಳು ತಾರಿ ಮರದಲ್ಲಿ  ಶನಿ ದೇವರು ವಾಸವಾಗಿದ್ದಾನೆಂದು  ಲಾಗಾಯ್ತಿನಿಂದ ನಂಬಿದವರು.  ಇದನ್ನು  ಪಾಲಿಸಿಕೊಂಡು ಬಂದವರಿಗೆ  ಈಗ ಶನಿ ದೇವರಿರುವ ಮರ ಕಡಿಯಲು  ಮನಸ್ಸಾದರೂ ಹೇಗೆ ಬಂದೀತು?  “ಮರದಲ್ಲಿ ದೇವರಿರ್ತಾನೆ ಎಂಬುದೆಲ್ಲ ಸುಳ್ಳು, ಇದು ಮೂಢ ನಂಬಿಕೆ ‘ ಎಂದು ಅಧಿಕಾರಿಗಳು ಕೂಲಿಕಾರಿಗೆ ಪದೇ ಪದೇ  ಪಾಠ ಹೇಳಬೇಕಾಯಿತು.

  ನಮ್ಮ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಜಗಳಗಂಟಿ ಎಂಬ ಮರವಿದೆ. ಈ ಮರ ಕಡಿದರೆ ಇಲ್ಲಸಲ್ಲದ ತರಲೆ ತಾಪತ್ರಯ ಗಂಟು ಬೀಳುತ್ತದೆಂಬ ನಂಬಿಕೆಯಿದೆ. ಇದನ್ನು ಕಡಿಯಲು ಯಾರೂ ಮುಂದೆ ಬರುವದಿಲ್ಲ. ಚಂಡೆ ಮರ ಎಂಬ ಮರದ ಕತೆ ಇದಕ್ಕಿಂತ ಕೊಂಚ ಭಿನ್ನ. ಈ ಮರ ಕಡಿದರೆ, ಮರದ ನೆರಳಲ್ಲಿ ತುಸು ಹೊತ್ತು ಕೂತರೆ ಮುಂದಿನ ವರ್ಷ ಕಾಲ ದೇಹ ಅಲರ್ಜಿ ಸಮಸ್ಯೆಯಿಂದ ಬಳಲುತ್ತದೆ!. ಕೇರಳದಲ್ಲಿ ಈ ಮರ ಬೆಳೆದಿರುವ ಕೃಷಿಕರೊಬ್ಬರ ಮನೆಗೆ  ಭಯದಿಂದ ಕೂಲಿಗಳೂ ಬರುತ್ತಿರಲಿಲ್ಲ ಎಂಬ ಮಾತು ಕೇಳಿದ್ದೇನೆ !. ನಮ್ಮ ಬಯಲು ಸೀಮೆಯಲ್ಲಿ  ಬನ್ನಿ ಮರ ಯಾರೂ ಕಡಿಯುವದಿಲ್ಲ. ಇದನ್ನು ಮೇಟಿ ಕಂಬಕ್ಕೆ ಮಾತ್ರ ಬಳಸುವ ಪರಿಪಾಠ ಕೆಲವೆಡೆ ಇದೆ. ಎಕ್ಕೆ ಗಿಡವನ್ನು ಗುಡ್ಡದಯ್ಯನ ಬಿಲ್ಲು  ಎಂದು ರಾಣಿಬೆನ್ನೂರಿನ ಕೃಷಿಕರು ಭಾವಿಸುತ್ತಾರೆ. ಬಿಲ್ವ ಪತ್ರೆ ಶಿವನ ಅರ್ಚನೆಗೆ ಬಳಕೆಯಾಗುತ್ತದೆ, ಇದನ್ನು ಯಾರೂ ಕಡಿಯುವದಿಲ್ಲ. ಕೂಡ್ಲಿಗಿ ತಾಲೂಕು ಅಮಲಾಪುರ, ಸಕ್ಕರೆ ಪಟ್ಟಣ ಹೀಗೆ ಹಲವೆಡೆ ಬಿಲ್ವವನಗಳು ಸಂರಕ್ಷಿತವಾಗಿವೆ. ಅಶ್ವತ್ಥ, ಆಲ, ಅತ್ತಿ,  ವಾಟೆ, ಬಸರಿ,  ರಂಜಲು, ಆರಿಗಿಡ( ಆಸಿನ), ಗೋಳಿ, ಬಸರಿ, ಸಪ್ತಪರ್ಣಿ, ಜರ್ಬಂಧಿ (ಟೆಟ್ರಾಮೆಲಸ್ ನ್ಯೂಡಿಪ್ಲೋರಾ), ದೇವಕಣಗಿಲು ಮುಂತಾದ ಮರ ಕಡಿಯಲು ಜನ ಭಯ ಪಡುತ್ತಾರೆ.  ಉರುವಲು, ನಾಟಾ ಉದ್ದೇಶಗಳಿಗೆ ಕಡಿಯುವ ಸಂದರ್ಭ  ಬಂದರೆ ಇವನ್ನು ಕಣ್ಣೆತ್ತಿಯೂ  ನೋಡುವದಿಲ್ಲ.

ನಮ್ಮಲ್ಲಿ ದೇವರ ಕಾಡು, ನಾಗಬನ, ಭೂತನಕಾನುಗಳಲ್ಲಿನ ಗಿಡ ಮರ ನಂಬಿಕೆಯ ಕಾರಣ ಇಂದಿಗೂ ಉಳಿದಿದೆ. ಶಿರಸಿಯ ಹಿಯಿಸಗುಂದ್ಲಿಯ ಸನಿಹದ ದೇವಸ್ಥಾನದ ಪಕ್ಕ ಒಂದು ಬೆತ್ತದ ಬಳ್ಳಿ ಬೆಳೆದಿದೆ. ಅಲ್ಲಿನ ನೈಸರ್ಗಿಕ ಕಾಡಿನಲ್ಲಿ ಈಗ ಬೆತ್ತ ಇಲ್ಲ. ಆದರೆ ದೇವಾಲಯ ಸನಿಹದ ಮರಕ್ಕೆ ಹಬ್ಬಿದ ಬೆತ್ತದ ಬಳ್ಳಿ ಮಾತ್ರ ಇದೆ. “ಇದು ಹುಲಿ ದೇವರ ಬೆತ್ತ, ಕಡಿಯಬಾರದು” ಎಂಬ ನಂಬಿಕೆ ಸಂರಕ್ಷಣೆಗೆ ಕಾರಣವಾಗಿದೆ. ಭಟ್ಕಳದಿಂದ ಕಾರವಾರದವರೆಗಿನ ಕರಾವಳಿಯಂಚಿನಲ್ಲಿ  ವನದೇವಿ ದೇಗುಲಗಳಿವೆ. ಅಲ್ಲಿನ ಮರ ವನದೇವಿಯ ಭಯದಿಂದ ಉಳಿದಿದೆ. ಒಂದು ಪುಟ್ಟ ಟೊಂಗೆ ಕಡಿಯುವಾಗಲೂ ಅಷ್ಟಮಂಗಲ ಪ್ರಶ್ನೆ ಕೇಳಿ ನಿರ್ಧರಿಸಲಾಗುತ್ತದೆ.
ಒಮ್ಮೆ  ಆಲದ ಮರಕ್ಕೆ ಕಟ್ಟೆ ನಿರ್ಮಾಣ ನಡೆಸುತ್ತಿದ್ದೆವು. “ಇದಕ್ಕೆ  ಏಕೆ ಕಟ್ಟೆ ಕಟ್ಟೀಸ್ತೀರಿ?”  ಕೆಲಸಗಾರರು ಕೇಳಿದರು. ಕಾಡಿನಲ್ಲಿ ದೈತ್ಯಾಕಾರವಾಗಿ ಬೆಳೆದ ಮರಕ್ಕೆ ಕಟ್ಟೆ ಕಟ್ಟಿದರೆ ಆರಾಮಾಗಿ ಕೂಡ್ರಲು ನೆಲೆಯಾಗುತ್ತದೆ ಎಂಬ ಉದ್ದೇಶ ನನಗಿತ್ತು, ಆದರೆ ಅದನ್ನು ತಟ್ಟನೆ ಹೇಳಲಿಲ್ಲ.  ” ಈ ಮರದಲ್ಲಿ ದೇವರು ಇದೆ, ಅದಕ್ಕೆ ಕಟ್ಟೆ ಕಟ್ಟಿಸೋಣ ” ಎಂದು ನಿರ್ಧರಿಸಿದೆವು  ಎಂದು ಉತ್ತರಿಸಿದೆ!. ಮಣ್ಣಿನಕಟ್ಟೆ ಕಟ್ಟುವ ಕೆಲಸ ಒಂದೆರಡು ದಿನ ನಡೆಯಿತು. ಮರದ ಒಂದು ಟೊಂಗೆ ತೀರ ನೆಲಕ್ಕೆ ಬಾಗಿತ್ತು, ಅದನ್ನು ಕಟಾವು ಮಾಡಿದರೆ ಇಡೀ ಕಟ್ಟೆಗೆ ಒಂದು ವಿಶಿಷ್ಟ  ಶೋಭೆ ಬರುತ್ತಿತ್ತು, ಅಲ್ಲಿ ಆರಾಮ ಅಡ್ಡಾಡಬಹುದಿತ್ತು.  ಕೆಲಸ ಮುಗಿಯುತ್ತಿದ್ದಂತೆ  ಆ ಟೊಂಗೆ ಕತ್ತರಿಸಿ ಬಿಡಿ ಎಂದು ಕೆಲಸಗಾರರಿಗೆ ಆರ್ಡರ್ ಮಾಡಿದೆ. ಕೆಲಸಗಾರರು ಪರಸ್ಪರ ತಮ್ಮ ತಮ್ಮಲ್ಲೆ ಏನೋ ಗುಸುಗುಸು ಮಾತಾಡಿಕೊಂಡರು. “ಇದು ದೇವರ ಮರ, ಮರಕ್ಕೆ ಕಟ್ಟೆ ಕಟ್ಟೋದಷ್ಟೇ ನಮ್ಮ ಕೆಲಸ, ಟೊಂಗೆ ಕಡಿಯಲು ಮನಸ್ಸು ಬರೋದಿಲ್ಲ, ಕಡಿದು ಗಾಯ ಮಾಡಿ ನಾಳೆ ಇಲ್ಲದ ತೊಂದರೆ ನಮಗೆ ಬರಬಹುದು”  ಎಂದರು! ಆಲದ ಮರ, ಮಣ್ಣಿನ ಕಟ್ಟೆ, ಸುತ್ತಲಿನ ಸ್ವರೂಪಗಳು ಅವರೊಳಗಿನ ದೈವೀ ಭಾವನೆಗೆ ಉತ್ತೇಜನ ನೀಡಿದವು.  ಅವರ ನಂಬಿಕೆ ಬದಲಿಸುವ ಮನಸ್ಸು ನನಗಿರಲಿಲ್ಲ, ಹೀಗಾಗಿ ಇಂದಿಗೂ ಮರದ ಟೊಂಗೆ ಕಡಿಯದೇ  ಹಾಗೇ ಇದೆ. ಮರದಲ್ಲಿ ದೇವರಿದೆ ಎಂದು ತಮಾಷೆಗೆ ಹೇಳಿದ್ದ ನನಗೆ  ಆ ಮರದ ಕುರಿತ ಭಾವನೆಗಳು ಬದಲಾಗಿವೆ.

ನಮ್ಮ ನೆಲದ ಅರಣ್ಯ ಸಂಸ್ಕೃತಿ ಮಹತ್ವ ಇದು. ಗಿಡ ಮರಗಳಲ್ಲಿ ದೈವ, ಭೂತಗಳ ನಂಬಿಕೆಯೊಂದಿಗೆ ನಮ್ಮ ಅಡವಿ ಒಡನಾಟ ಬೆಳೆದಿದೆ. ನಾಗರಿಕತೆಯ ಜತೆಜತೆಗೆ ನಂಬಿಕೆಗಳು ಬೆಳೆದು ನಿಂತಿವೆ. ಇದಕ್ಕೆ ಕಾರಣಗಳು ಹತ್ತಾರು. ನಮ್ಮ ಪುರಾಣ ಕತೆಗಳಂತೂ  ಮರದ ಪರಿಚಯವನ್ನು  ದೇವ ದೇವತೆಗಳ ಆವಾಸದ ಮುಖೇನ ಪರಿಚಯಿಸಿವೆ,  ಮರ ಪೂಜಿಸುವ ಪರಿಪಾಠಕ್ಕೆ ಪ್ರೇರಣೆಯಾಗಿದೆ. ಮರವನ್ನು ವರ ಕೊಡುವ ದೇವರು ಎಂದು ನಂಬಲು  ಇದು ಕಾರಣವಾಗಿದೆ. ಆಲ, ಅಶ್ವತ್ಥ, ಅತ್ತಿ ಸೇರಿದಂತೆ ದೈವ ನಂಬಿಕೆಯ  ಇವುಗಳ ಎಳೆ ಸಸಿ ಕಡಿಯಲೂ ಬಹುತೇಕ ಜನರಿಗೆ ಇಂದಿಗೂ ಧೈರ್ಯವಿಲ್ಲ. ಇದನ್ನೇ ಆಧಾರವಾಗಿಸಕೊಂಡು  ಕಡಿಯದ ಮರಗಳನ್ನು ಬೆಳೆಸುವ ಪರಿಪಾಠ ಬೆಳೆಸುವದು ಇಂದಿನ ತುರ್ತು ಅಗತ್ಯವಾಗಿದೆ. ಮನೆ ನಿರ್ಮಾಣ, ಉರುವಲು ಬಳಕೆಗೆ ವಿಪರೀತ ಪ್ರಮಾಣದ ಅರಣ್ಯನಾಶ ನಡೆದಿದೆ. ನೆಡುವದು, ಕಡಿಯುವದು  ಕಳೆದ ೪೦ ವರ್ಷಗಳ ಪರಿಪಾಠವಾಗಿದೆ. ನಾವು ನೆಡುವ ಸಸಿಗಳಲ್ಲಿ ನಮ್ಮ ದೈವ ನಂಬಿಕೆಯ ಮರಗಳನ್ನು ನೆಡುವ ಕೆಲಸ  ನಡೆಯಬೇಕಾಗಿದೆ. ಇದರ ಜತೆಗೆ  ಹಲಸು, ಅಂಟವಾಳ, ಮಾವು ಮುಂತಾದ ಹಣ್ಣು ಹಂಪಲಿನ ಸಸಿ ಬೆಳೆಸಿದರೆ ನಮಗೆ ಕಡಿಯಲು ಮನಸ್ಸು ಬರುವದಿಲ್ಲ. ಫಲ ರುಚಿ ಅರಿವಿರುವದು ಸಂರಕ್ಷಣೆಯ ಜಾಗೃತಿಯಾಗುತ್ತದೆ.


ಹತ್ತಾರು ವರ್ಷಕ್ಕೆ ಕಡಿಯಲೆಂದೇ ಬೆಳೆಸಿದ ಅಕೇಸಿಯಾ, ನೀಲಗಿರಿ, ಸಿಲ್ವರ್ ಓಕ್ ಮರಗಳನ್ನು ಒಮ್ಮೆ ಗಮನಿಸಿ ನೋಡಿ. ಈ ವಿದೇಶಿ ಸಸ್ಯಗಳು ನಮ್ಮ ಅರಣ್ಯ ಸಂಸ್ಕೃತಿಯನ್ನು ಪಕ್ಕಾ ಅನುಮಾನದಿಂದಲೇ ನೋಡುತ್ತದೆ. ಆದರೆ ನಮ್ಮ ನೆಲದ ಮರದಲ್ಲಿ ಸಂಸ್ಕೃತಿಯ ಬೇರುಗಳು ಶತಮಾನಗಳ ನಂಬಿಗೆ ನೆಲೆಗಟ್ಟಿನಲ್ಲಿ  ನಮ್ಮೆದೆಯಲ್ಲಿ   ಊರಿರುವದೇ ಇದಕ್ಕೆ ಮುಖ್ಯ ಕಾರಣ. ಹೊಸ ಸಸ್ಯಗಳ ಬಗೆಗೆ ಇಂತಹ ಗಾಢ ನಂಬಿಕೆ ಬೆಳೆಸಲು ಅಷ್ಟು ಬೇಗ ಸಾಧ್ಯವಿಲ್ಲ. ಅಕೇಸಿಯಾ ಸಸ್ಯಗಳನ್ನು ನಮ್ಮ ದೇವರ ಕಾಡಿನಲ್ಲಿ ಕಲ್ಪಿಸಿ ಕೈಮುಗಿಯುವದು ಸಾಧ್ಯವಿಲ್ಲ! ಪರಿಸರದ ಬಿಕ್ಕಟ್ಟಿನ ಮಧ್ಯೆ ನಾವಿದ್ದೇವೆ.  ಮಳೆ ಹನಿ ಸುರಿಯುವ  ಈ ಘಳಿಗೆಯಲ್ಲಿ ನೆಲದ  ಸಸಿ ಬೆಳೆಸುವ ಆಸೆ  ಎಲ್ಲರಾದಬೇಕು. ನಮ್ಮ  ಗಿಡ ಗೆಳೆತನಕ್ಕೆ ಸಂಸ್ಕೃತಿಯ ಲೇಪ ಪರಿಣಾಮಕಾರಿಯಾಗಬಹುದು.

ಕಾಮೆಂಟ್‌ಗಳಿಲ್ಲ: