ಗುರುವಾರ, ಡಿಸೆಂಬರ್ 5, 2013

ಕಥೆಗಳ ಅಜ್ಜಿ ಎಲ್ಲಿರುವಿ ?

ನಾ.ಡಿಸೋಜ

   ನಾ.ಡಿಸೋಜ ಅವರು 80 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಿಸೋಜ ಅವರ ಆಯ್ಕೆ ಪ್ರಗತಿಪರ ಚಿಂತಕರಿಗೆ ಖುಷಿ ಕೊಟ್ಟಿದೆ. ಕಾರಣ ನಾ.ಡಿ ಅವರು ರಾಜಕಾರಣ, ಲಾಭಿ ಮಾಡದೆ ತಮ್ಮಷ್ಟಕ್ಕೆ ತಾವು ಬರೆದುಕೊಂಡಿರುವ ಸಾಹಿತಿ. ಮಕ್ಕಳ ಸಾಹಿತ್ಯ, ಕಥೆ, ಕಾದಂಬರಿ, ವೈಚಾರಿಕ ಬರಹ ಹೀಗೆ ಬರಹದ ಹಲವು ಮಗ್ಗಲುಗಳಲ್ಲಿ ಲೀಲಾಜಾಲ ನಡೆದವರು. ಇಂತಹ ಡಿಸೋಜ ಅವರಿಗೆ ಕನ್ನಡ ಜಾನಪದ ಬ್ಲಾಗ್ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಕಥೆ ಹೇಳುವ ಅಜ್ಜಿಯ  ಈ ಬರಹ ಡಿಸೋಜರ ಜಾನಪದ ಗ್ರಹಿಕೆಯ ಸೂಕ್ಷ್ಮತೆಯನ್ನು ತೋರುತ್ತಿದೆ.


(ರೈಲು ಪಯಣಕ್ಕೆ ಬಂದಿದ್ದ ಅಜ್ಜಿ)

ಮೊನ್ನೆ ಸಾಗರದ ರೈಲು ನಿಲ್ದಾಣದಲ್ಲಿ ಒಂದು ಘಟನೆ ನಡೆಯಿತು. ಸುಮಾರು ೧೯೩೮ರಿಂದ ಸತತವಾಗಿ ೧೯೮೪ರ ವರೆಗೆ ತಿರುಗಾಡುತ್ತಿದ್ದ ತಾಳಗುಪ್ಪ ಬೆಂಗಳೂರು ರೈಲು ನಡುವೆ ಇಪ್ಪತ್ತು ವರ್ಷ ತನ್ನ ಓಡಾಟವನ್ನ ನಿಲ್ಲಿಸಿದ್ದು ಸೆಪ್ಟೆಂಬರ್ ೮ ರಂದು ಮತ್ತೆ ಓಡಾಟವನ್ನ ಆರಂಭಿಸಿತು. ಸಾಗರದ ಒಂದು ಸಂಸ್ಥೆ ಈ ಹೋರಾಟದ ನೇತ್ರತ್ವವನ್ನ ವಹಿಸಿ ರೈಲನ್ನ ಮತ್ತೆ ಊರ ಜನರಿಗೆ ದೊರಕಿಸಿ ಕೊಟ್ಟಿತು. ಈ ಸಂಭ್ರಮವನ್ನ ಆಚರಿಸಲು ಸಹಸ್ರ ಸಹಸ್ರ ಸಂಖ್ಯೆಯ ಜನ ನಿಲ್ದಾಣದಲ್ಲಿ ಸೇರಿದ್ದರು. ಈ ಜನರ ನಡುವೆ ಓರ್ವ ಅಜ್ಜಿ ತನ್ನ ಮೊಮ್ಮಗನನ್ನ ಕರೆದು ಕೊಂಡು ಬಂದವಳು ಅಲ್ಲಿ ಎಲ್ಲರ ಗಮನ ಸೆಳೆದಳು. ಟಿಕೇಟು ಕೊಳ್ಳಲು ಪರದಾಡುತ್ತಿದ್ದ ಅವಳನ್ನ ಗಮನಿಸಿದ ಪತ್ರಕರ್ತರು ಮಾತನಾಡಿಸಿದಾಗ ಕೆಲ ಕುತೂಹಲದ ವಿಚಾರಗಳು ಹೊರಬಿದ್ದವು.

ಆಕೆ ಹತ್ತಿರದ ಕುಗ್ವೆ ಗ್ರಾಮದ ಓರ್ವ ಸ್ವಾತಂತ್ರ್ಯ ಹೋರಾಟಗಾರನ ಹೆಂಡತಿ ಗುತ್ಯಮ್ಮ. ಅವಳ ಮೊಮ್ಮಗ ಇಂದೂಧರ ಅವಳ ಜೊತೆಯಲ್ಲಿ ಇದ್ದ. ಮೊಮ್ಮಗನನ್ನ ಸಾಗರದಿಂದ ತಾಳಗುಪ್ಪದವರೆಗೆ ರೈಲಿನಲ್ಲಿ ಕರೆದೊಯ್ಯಬೇಕೆಂದು ಆಕೆ ಬಂದಿದ್ದಳು. ಈ ವಿಚಾರ ನಿನಗೇಕೆ ಬಂತು ಎಂದು ಕೇಳಿದಾಗ ಆಕೆ "ನಾನು ನನ್ನ ಮೊಮ್ಮಗನಿಗೆ ಬಂಗಾರ, ವಜ್ರ ವೈಢೂರ್ಯ ಕೊಡಿಸಲಾರೆ. ಆದರೆ ಸಾಗರಕ್ಕೆ ರೈಲು ಬಂದ ಮೊದಲ ದಿನ ಅವನನ್ನ ಇಲ್ಲಿಂದ ತಾಳಗುಪ್ಪಕ್ಕೆ ಕರೆದೊಯ್ಯುವುದರ ಮೂಲಕ ಅವನ ಮನಸ್ಸಿನಲ್ಲಿ ತಾನು ಇಂತಹಾ ಒಂದು ದಿನ ರೈಲಿನಲ್ಲಿ ಪ್ರಯಾಣ ಮಾಡಿದೆ ಅನ್ನುವ ನೆನಪನ್ನ ಹಸಿರಾಗಿ ಇರಿಸ ಬಲ್ಲೆ, ಅವನಿಗೆ ಈ ಪ್ರಯಾಣದ ಅನುಭವವನ್ನ ನೀಡ ಬಲ್ಲೆ" ಎಂದಳು ಅಜ್ಜಿ. ರೈಲು ಬಂದು ನಿಂತಾಗ ನೆರೆದ ಜನ ಪಟಾಕಿ ಹಚ್ಚುವುದರಲ್ಲಿ, ರೈಲಿಗೆ ಪೂಜೆ ಮಾಡುವುದರಲ್ಲಿ, ಸಿಹಿ ಹಂಚುವಲ್ಲಿ, ಜಯಘೋಷ ಮಾಡುವುದರಲ್ಲಿ ನಿರತರಾಗದ್ದರೆ ಈ ಅಜ್ಜಿ ಕೆನ್ನೆಟೋಪಿ ಹಾಕಿ ಕೊಂಡ ಮೊಮ್ಮಗನ ಜೊತೆಯಲ್ಲಿ ರೈಲನ್ನ ಏರಿ ಕುಳಿತಿದ್ದಳು. ಸುಮಾರು ಆರುವರ್ಷದ ಅವಳ ಮೊಮ್ಮಗ ಮುಖದ ಮೇಲೆ ಮುಗುಳು ನಗೆ ಧರಿಸಿ, ಅಚ್ಚರಿಯಿಂದ ರೈಲು ಮುಂದೆ ಸಾಗುವುದನ್ನ ನೋಡುತ್ತಲಿದ್ದ.

ಈ ಅಜ್ಜಿಯ ಮನೋಭಾವ ಹಲವರಲ್ಲಿ ಹಲವು ಭಾವನೆಗಳಿಗೆ ಅನುವು ಮಾಡಿ ಕೊಟ್ಟಿತು. ನಿಂತೇ ಹೋದ ರೈಲು ಸಾಗರಕ್ಕೆ ಬಂದಿದೆ. ಅದನ್ನ ನೋಡಲು ಸಾವಿರ ಜನ ನೆರೆದಿದ್ದಾರೆ. ಇದೊಂದು ಐತಿಹಾಸಿಕ ವಿಷಯ ಕೂಡ. ಇಂದು ಬಂದ ರೈಲು ನಾಳೆಗೆ ಹಳತಾಗುತ್ತದೆ. ಇದು ಸಾಗರದ ಚರಿತ್ರೆಯಲ್ಲಿ ಒಂದು ಸಾಮಾನ್ಯ ವಿಷಯವಾಗಿ ಬಿಡುತ್ತದೆ. ಆದರೆ ಇಂದಿನ ಮಹತ್ವವನ್ನ ಸವಿಯ ಬೇಕಲ್ಲ. ಈ ಅವಕಾಶ ತನ್ನ ಮೊಮ್ಮಗನಿಗೆ ಸಿಗಬೇಕು, ಆತ ನಾಳೆ ಬೆಳೆದು ದೊಡ್ಡವನಾದ ಮೇಲೆ ಈ ಅನುಭವವನ್ನ ಆತ ಮೆಲಕು ಹಾಕಬೇಕು, ಇದರ ರೋಮಾಂಚನವನ್ನ ಆತ ಇತರರ ಜೊತೆಯಲ್ಲಿ ಹಂಚಿ ಕೊಳ್ಳಬೇಕು. ಹೀಗೆಂದೇ ಆ ಹಿರಿಯ ಜೀವ ಸುಮಾರು ಮೂರು ಮೈಲಿ ದೂರದಿಂದ ಬಸ್ಸು ಹತ್ತಿ ಸಾಗರಕ್ಕೆ ಬಂದಿತ್ತು. ಮೊಮ್ಮಗನನ್ನ ಕರೆತಂದಿತ್ತು. ಇದು ಅಜ್ಜಿಗೆ ಮಾತ್ರ ಹೊಳೆಯುವ ವಿಷಯ. ಅಜ್ಜಿ ಮಾತ್ರ ಈ ಕೆಲಸ ಮಾಡಬಲ್ಲಳು.

ಒಂದು ಕಾಲದಲ್ಲಿ ನಮ್ಮೆಲ್ಲರ ಮನೆಗಳಲ್ಲಿ ಇಂತಹಾ ಓರ್ವ ಅಜ್ಜಿ ಇರುತ್ತಿದ್ದಳು. ಮನೆಯಲ್ಲಿಯ ಮೊಮ್ಮಕ್ಕಳ ಬೇಕು ಬೇಡಗಳನ್ನ ಗಮನಿಸಿ ಅವುಗಳನ್ನ ನೆರವೇರಿಸುವಲ್ಲಿ ಈ ಅಜ್ಜಿ ಸದಾ ನಿರತಳಾಗಿರುತ್ತಿದ್ದಳು. ಇಂದು ಮಾತ್ರ ಇಂತಹಾ ಅಜ್ಜಿಯನ್ನ ನಾವು ಹುಡುಕ ಬೇಕಿದೆ. ನಾವೆಲ್ಲ ಬೆಳೆದದ್ದು ಇಂತಹಾ ಅಜ್ಜಿಯ ಕೈಯಲ್ಲಿಯೇ. ಆದರೆ ಇಂದು ನಮ್ಮ ಮೊಮ್ಮಕ್ಕಳ ಪಾಲಿಗೆ ಇಂತಹಾ ಅಜ್ಜಿ ಇದ್ದಾಳೆಯೇ ? ಎಲ್ಲಿ ಹೋದಳು ಈ ಅಜ್ಜಿ ?

"ಹೊಲಕ್ಕೊಬ್ಬ ಅಜ್ಜ ಮನೆಗೊಂದು ಅಜ್ಜಿ" ಇರಬೇಕು ಅನ್ನುವುದು ಒಂದು ಹಳೆಯ ಗಾದೆ ಮಾತು. ಹೊಲದ ದೇಖಬಾಲಿಗೆ ಅಜ್ಜ ಬೇಕು. ಬೇಲಿ ಮುರಿದಿದ್ದರೆ ಬೇಲಿ ಹಾಕಲು, ದನ, ಹಕ್ಕಿಪಕ್ಕಿ ಹೊಲಕ್ಕೆ ದಾಳಿಮಾಡದ ಹಾಗೆ ನೊಡಿಕೊಳ್ಳಲು ಅಜ್ಜ ಬೇಕು. ಹಾಗೆಯೇ ಮನೆಯಲ್ಲಿ ಏನೇ ಹೆಚ್ಚು ಕಡಿಮೆ ಆದಾಗ, ಮಗುವಿಗೆ ನೆಗಡಿ ಆದಾಗ, ಹಬ್ಬ ಮದುವೆಯ ಸಂದರ್ಭದಲ್ಲಿ ಹೀಗಲ್ಲ ಹಾಗೆ ಎಂದು ಹೇಳಲು, ಮನೆಯ ಜನರ ನಡುವೆ ಒಂದು ಮನಸ್ತಾಪ ಬಂದಾಗ ಅದನ್ನ ಪರಿಹರಿಸಲು ಅಜ್ಜಿ ಬೇಕು. ಮುಖ್ಯವಾಗಿ ಮನೆಯ ಮಕ್ಕಳನ್ನ ನೋಡಿ ಕೊಳ್ಳಲು ಅಜ್ಜಿ ಬೇಕು. ಈ ಅಜ್ಜಿ ಮಗುವಾಗಿದ್ದವಳೇ, ನಂತರ ಹುಡುಗಿಯಾಗಿ ತರುಣಿಯಾಗಿ, ಹೆಂಗಸಾಗಿ,  ಹೆಂಡತಿಯಾಗಿ ತಾಯಿಯಾಗಿ, ಅತ್ತೆಯಾಗಿ ಇದೀಗ ತನ್ನ ವಯಸ್ಸಿನ ಕಾರಣದಿಂದಾಗಿ, ಮನೆಯಲ್ಲಿ ದೊರೆತ ಸ್ಥಾನ ಮಾನಗಳಿಂದಾಗಿ ಅಜ್ಜಿಯಾಗಿದ್ದಾಳೆ. ಅವಳಿಗೆ ಈ ವಯಸ್ಸು, ಸ್ಥಾನ ಮಾನ, ಅನುಭವ. ಹಲವು ವಿಷಯಗಳನ್ನ ಕಲಿಸಿದೆ. ಹಲವು ಜವಾಬ್ದಾರಿಗಳನ್ನ ನೀಡಿದೆ. ಹೀಗೆ ನೀಡಿದ ಹಲವು ಜವಾಬ್ದಾರಿಗಳಲ್ಲಿ ಒಂದು ಈ "ಅಜ್ಜಿತನ".

ಈ ಅಜ್ಜಿಯದು ವಿಚಿತ್ರವಾದ ವ್ಯಕ್ತಿತ್ವ. ಅವಳು ತನ್ನ ಮಕ್ಕಳಿಗಾಗಿ ಮಿಡುಕಾಡುವುದು ಕಡಿಮೆ ಆದರೆ ಅದೇ ಮೊಮ್ಮಕ್ಕಳೆಂದರೆ ಇವಳಿಗೆ ಹೃದಯ ಬಾಯಿಗೆ ಬರುತ್ತದೆ. ಮಕ್ಕಳನ್ನ ಇವಳು ಅಪ್ಪಿ ಕೊಳ್ಳಲಾರಳು. ಎತ್ತಿ ಮುದ್ದು ಮಾಡಲಾರಳು, ತಿದ್ದಿ ಬುಧ್ದಿ ಹೇಳಲಾರಳು ಆದರೆ ಅದೇ ಮೊಮ್ಮಕ್ಕಳೆಂದರೆ ಆಕೆ ಎತ್ತಿ ಆಡಿಸಿ, ಊಟ ಮಾಡಿಸಿ, ಬೈಯ್ದು ಹೊಡೆದು ಬುಧ್ದಿ ಕಲಿಸುತ್ತಾಳೆ. ಇದೇ ಕಾರಣದಿಂದಾಗಿ ಅಜ್ಜಿಗೆ ಮಕ್ಕಳಿಗಿಂತ ಮೊಮ್ಮಕ್ಕಳ ಮೇಲೆ ಹೆಚ್ಚು ಪ್ರಾಣ. ಅಜ್ಜಿಗೆ ಮಕ್ಕಳು ಮತ್ತು ಮೊಮ್ಮಕ್ಕಳ ನಡುವಿನ ವಯಸ್ಸಿನ ಅಂತರ ಇಂತಹಾ ಕ್ರಿಯೆಗೆ ಕಾರಣವಾಗುತ್ತದೆ.

ಮನೆಯಲ್ಲಿ ತಾಯಿಗೆ ಬಿಡುವಿಲ್ಲದಷ್ಟು ಕೆಲಸ. ತಂದೆಗಂತೂ ಮನೆಯ ಕಡೆ ಗಮನಹರಿಸಲು ಬಿಡುವಿಲ್ಲ. ಇನ್ನು ಮೊಮ್ಮಕ್ಕಳ ಎಲ್ಲ ಬೇಡಿಕೆಗಳನ್ನ ನೆರವೇರಿಸುವವಳು ಅಜ್ಜಿಯೇ. ಮೊಮ್ಮಕ್ಕಳನ್ನ ಮಲಗಿಸಲು ಅಜ್ಜಿಯ ಬೆಚ್ಚನೆಯ ಮಡಿಲು ಬೇಕು, ಊಟ ಮಾಡಿಸಲು ಅಜ್ಜಿಯ ಮುದ್ದು ಮಾತು ಬೇಕು, ಅಪ್ಪ ಅಮ್ಮ ಹೊಡೆದಾಗ ಸಾಂತ್ವನ ಹೇಳಲು ಅಜ್ಜಿ ಬೇಕು, ಸ್ನಾನ ಮಾಡಿಸಲು, ಕುಂಡೆ ತೊಳೆಸಲು, ಕೊನೆಗೆ ನಿದ್ದೆ ಬರುವ ತನಕ ಕತೆ ಹೇಳಲು ಅಜ್ಜಿ ಬೇಕು. ಅಜ್ಜಿ ಅಜ್ಜಿ ಅಜ್ಜಿ . ಮಗುವಿನ ಈ ಕರೆಗೆ ಸದಾ ಕಿವಿಗೊಟ್ಟು ಓಡಿ ಬರುವವಳು ಅಜ್ಜಿ.ಈ ಅಜ್ಜಿ ಮೊಮ್ಮಗನನ್ನ ಅರ್ಥ ಮಾಡಿ ಕೊಂಡಂತೆ ಅದರ ತಾಯಿ ತಂದೆ ಅರ್ಥ ಮಾಡಿ ಕೊಂಡಿರುವುದಿಲ್ಲ. ಸ್ಪಷ್ಟವಾಗಿ ಮಾತನಾಡಲು ಬಾರದ ಮೊಮ್ಮಗುವಿಗೆ ಹೊಟ್ಟೆ ನೋವೇ, ಕಿವಿ ನೋವೇ, ಎಲ್ಲಿಯಾದರೂ ಇರುವೆ ಕಡಿದಿದೆಯೇ ಇದೆಲ್ಲವನ್ನ ಅರ್ಥ ಮಾಡಿ ಕೊಳ್ಳುವವಳು ಅಜ್ಜಿ. ಅರ್ಥ ಮಾಡಿ ಕೊಂಡು ತಕ್ಷಣ ಔಷಧಿ ಮಾಡುವವಳು ಅಜ್ಜಿ. ಮೊಮ್ಮಗನ ಬಾಯಿ ರುಚಿಯನ್ನ ಇವಳು ಬಲ್ಲಳು. ಯಾವುದಾದರೂ ಮದುವೆಗೆ ಇನ್ನೊಂದು ಸಮಾರಂಭಕ್ಕೆ ಒಂಟಿಯಾಗಿ ಹೋದ ಅಜ್ಜಿ ಮೈಸೂರು ಪಾಕು, ಜಿಲೇಬಿ ಬಡಿಸಿದಾಗ ಮೊದಲು ನೆನಸಿ 
ಕೊಳ್ಳುವುದು ತನ್ನ ಮೊಮ್ಮಗನನ್ನ. ಅಕ್ಕಪಕ್ಕದವರು ನೋಡುತ್ತಿದ್ದರೂ ಎಲೆಯ ಮೇಲಿನ ಸಿಹಿ ತಿಂಡಿಯನ್ನ ಮುಚ್ಚಿ ಇರಿಸಿ ಕೊಂಡು ಇವಳು ಮನೆಗೆ ತರುತ್ತಾಳೆ. ಇದರಲ್ಲಿ ಅವಳಿಗೆ ನಾಚಿಕೆ ಇಲ್ಲ.

ಜಾತ್ರೆಗೆ ಹೋದಾಗ ಮೊದಲ ಗಮನ ಈ ಮೊಮ್ಮಗನ ಮೇಲೆ. ಆತ ಆ ಜನ ಜಂಗುಳಿಯ ನಡುವೆ  ಎಲ್ಲಿಯಾದರೂ ತಪ್ಪಿಸಿ ಕೊಂಡರೆ ? ಇದಕ್ಕೆಂದೇ ಆಕೆ ಕೈಲಿ ಆಗದಿದ್ದರೂ ಮೊಮ್ಮಗನನ್ನ ಎತ್ತಿ ಕೊಂಡೇ ಜಾತ್ರೆಯಲ್ಲಿ ತಿರುಗಾಡುತ್ತಾಳೆ. ಅಜ್ಜಿ ಕತೆಗಳು ಅನ್ನುವ ಸಾಹಿತ್ಯ ಪ್ರಕಾರ ವೈವಿಧ್ಯಮಯವಾಗಿ ಬೆಳೆದಿದ್ದರೆ ಅದಕ್ಕೆ ಕಾರಣ ಅಜ್ಜಿ. ಹೇಳಿದ ಕತೆಗಳನ್ನ ಮತ್ತೆ ಮತ್ತೆ ಕೇಳಲು ಮೊಮ್ಮಕ್ಕಳು ಬಯಸುವುದಿಲ್ಲ ಅನ್ನುವ ಕಾರಣಕ್ಕೇನೆ ಅಜ್ಜಿ ಹೊಸ ಹೊಸ ಕತೆಗಳನ್ನ ಸೃಷ್ಟಿ ಮಾಡುತ್ತ ಹೋಗುತ್ತಾಳೆ. ಅವಳ ಅನುಭವ, ಕಲ್ಪನೆ, ಅವಳಿಂದ ಈ ಕೆಲಸವನ್ನ ಮಾಡಿಸುತ್ತದೆ. ಮೊಮ್ಮಕ್ಕಳು ಕಿವಿತೆರೆದು ಮನಸ್ಸು ತೆರೆದು ಕತೆಗಳನ್ನ ಕೇಳಿದಾಗ ಅವಳ ಬದುಕಿಗೊಂದು ಸಾರ್ಥಕತೆ ಬರುತ್ತದೆ.

ಅಲ್ಲದೆ ತನ್ನ ಬದುಕಿನ ನೂರು ಘಟನೆಗಳನ್ನ ಕತೆಗಳಂತೆ ನಿರೂಪಿಸಿ ಮೊಮ್ಮಕ್ಕಳ ಎದಿರು ಹೇಳುವುದು ಅವಳ ಪಾಲಿನ ಒಂದು ಅಮೂಲ್ಯ ಕಾರ್ಯ ಕೂಡ ಹೌದು. ಈ ಕೆಲಸ ಮಾಡುತ್ತ ಮಾಡುತ್ತ ಅವಳು ತನ್ನ ಹೃದಯದ ನೋವನ್ನ ಕಡಿಮೆ ಮಾಡಿ ಕೊಳ್ಳುವುದು ಮಾತ್ರವಲ್ಲ ಮೊಮ್ಮಗುವಿಗೆ ಅದರಲ್ಲಿ ಆಸಕ್ತಿ ಹುಟ್ಟುವಂತೆ ಮಾಡುತ್ತಾಳೆ. ತಾನು ಅನುಭವಿಸಿದ ಎಲ್ಲವನ್ನ ನೆನಪಿಗೆ ತಂದು ಕೊಂಡು ಮೊಮ್ಮಗುವಿನ ಎದಿರು ಅದನ್ನ ಹೇಳುವಾಗ ಆಕೆಗೆ ಏನೋ ಒಂದು ಸಂತಸ ಆಗುತ್ತದೆ. ಯಾವತ್ತೋ ನಡೆದ ಅದು ಸಂತಸದ ಕ್ಷಣ ಇರಲಿ, ನೋವಿನ ಸಂದರ್ಭವಿರಲಿ ಈಗ ದೂರನಿಂತು ಮೊಮ್ಮಗುವಿನ ಸಮ್ಮುಖದಲ್ಲಿ ಹೇಳುವಾಗ ಅವಳ ನೋವು ಕಡಿಮೆಯಾಗುತ್ತದೆ. ಎದೆ ಹಗುರವಾಗುತ್ತದೆ.
ದಿನಗಳು ಉರುಳಿದ ಹಾಗೆ ಅಜ್ಜಿಗೆ ತನ್ನ ಸ್ಥಾನ ಮಾನದ ಅರಿವಾಗುತ್ತದೆ. ರಾಣಿಯಾಗಿ ಯಾವ ಮನೆಯಲ್ಲಿ ಅವಳು ಮೆರೆದಿದ್ದಳೋ ಅದೇ ಮನೆಯಲ್ಲಿ ಅವಳೀಗ ಎರಡೋ ಮೂರನೆಯದೋ ಸ್ಥಾನಕ್ಕೆ ಬಂದಿದ್ದಾಳೆ. ಅವಳನ್ನ ಕೇಳಿ ಯಾರೂ ಏನನ್ನೂ ಮಾಡುವುದಿಲ್ಲ. ಅವಳ ಮಾತಿಗೆ ಬೆಲೆ ಕೊಡುವುದಿಲ್ಲ. ಹಿರಿಯರು ಅವಳನ್ನ ಗೌರವಿಸುತ್ತಾರೆ ನಿಜ. ಆದರೆ ಅವಳನ್ನ ಇರಿಸಿರುವ ಜಾಗ ಬೇರೆಯೇ. ಇಂತಹಾ ಸಂದರ್ಭದಲ್ಲಿ ಅದೇ ಮನೆಯಲ್ಲಿ ಅವಳಿಗೊಂದು ಸ್ಥಾನ ದೊರೆಯುತ್ತದೆ.   ಅದು ಅಜ್ಜಿಯಸ್ಥಾನ. ಬೇರೆ ಯಾರೂ ಕಸಿದು ಕೊಳ್ಳದ ಸ್ಥಾನ.


ಇದೀಗ ಅವಳದ್ದೇ ಒಂದು ಪ್ರಪಂಚ ಇಲ್ಲಿ ತೆರೆದು ಕೊಂಡಿದೆ. ಅಲ್ಲಿ ಅವಳೇ ಯಜಮಾನಿ. ಅವಳ ಈ ಸುಂದರ ಪ್ರಪಂಚದ ಮಹಾನ್ ಪ್ರಜೆಗಳೆಂದರೆ ಅವಳ ಮೊಮ್ಮಕ್ಕಳು. ಮೊಮ್ಮಕ್ಕಳಿಗೆ ಕಾಲ ಕಾಲಕ್ಕೆ ಊಟ ಮಾಡಿಸುವ, ಮೊಮ್ಮಕ್ಕಳ ಬಟ್ಟೆ, ಆಟದ ಸಾಮಾನು, ಓದುವ ಪುಸ್ತಕ ತೆಗೆದಿರಿಸುವ ಕೆಲಸ ಇವಳ ಪಾಲಿಗೆ ಬರುತ್ತದೆ. ಮಗುವಿನ ಕಾಲು ಚೀಲ ಹುಡುಕಿ ಒಗೆದು ಇರಿಸುತ್ತಾಳೆ. ಅದರ ಟಾನಿಕ, ಔಷಧಿ ಕುಡಿಸುವ ಸಮಯ ಜ್ಞಾಪಿಸುತ್ತಾಳೆ ಅಜ್ಜಿ. ಮಗು ಶಾಲೆಗೆ ಹೋಗಲು ನೆನಪು ಮಾಡುತ್ತಾಳೆ. ಶಾಲೆಯಲ್ಲಿ ಮಕ್ಕಳ ಕಾರ್ಯಕ್ರಮ ಇದ್ದ ದಿನ ತಪ್ಪದೆ ಶಾಲೆಗೆ ಹೋಗಿ ಮೊದಲ ಸಾಲನಲ್ಲಿ ಕುಳಿತು ಮೊಮ್ಮಗನ ನೃತ್ಯ ನೋಡಿ ಸಂತಸ ಪಟ್ಟು ಬರುತ್ತಾಳೆ. ಮನೆಗೆ ಬಂದವಳೇ ಮೊದಲು ಮೊಮ್ಮಗನನ್ನ ಬಾಗಿಲಲ್ಲಿ ನಿಲ್ಲಿಸಿಕೊಂಡು ದೃಷ್ಟಿ ತೆಗೆಯುತ್ತಾಳೆ. ಮೊಮ್ಮಗ ಶಾಲೆಯಿಂದ ಬರಲು ತುಸು ತಡವಾದರೂ ಹತ್ತು ಬಾರಿ ಮನೆಯಿಂದ ಹೊರಬಂದು ಮೊಮ್ಮಗನ ದಾರಿ ಕಾಯುವವಳು ಕೂಡ ಈ ಅಜ್ಜಿಯೇ.

ಇಂತಹಾ ಅಜ್ಜಿಯಂದಿರ ಸಂಖ್ಯೆ ಇಂದು ಕಡಿಮೆ ಆಗುತ್ತಿದೆಯೇ ? ಎಲ್ಲಿ ಹೋದರು ಈ ಅಜ್ಜಿಯರು ? ಮಕ್ಕಳಿಗೆ ಮನರಂಜನೆ ನೀಡುವ ಕತೆ ಹೇಳುವ ಅಜ್ಜಿಗಳು ಇಲ್ಲ. ಸಣ್ಣ ಪುಟ್ಟ ಕಾಯಿಲೆಗಳಿಗೆ ಮದ್ದುಮಾಡುವ ಅಜ್ಜಿಗಳಿಲ್ಲ. ಅಮ್ಮ ಹೊಡೆದಾಗ ಅಪ್ಪ ಜೋರು ಮಾಡಿದಾಗ ಮಗುವನ್ನ ತಬ್ಬಿ ಕೊಂಡು ಸಾಂತ್ವನ ಹೇಳುವ ಅಜ್ಜಿಗಳಿಲ್ಲ. ಹೂದೋಟದ ಹೂವನ್ನ, ಮೊದಲ ಮಳೆಯನ್ನ, ಬೆಳದಿಂಗಳ ಸೊಬಗನ್ನ, ಹೊಸ ತಿಂಡಿಯ ರುಚಿಯನ್ನ, ಊರಿಗೆ ಬಂದ ಹೊಸ ರೈಲನ್ನ ಮೊಮ್ಮಕ್ಕಳಿಗೆ ತೋರಿಸುವ ಅಜ್ಜಿಯರು ಇಲ್ಲ.

ಹೀಗೆಂದು ಇವತ್ತು ಅಜ್ಜಿಯರೇ ಇಲ್ಲ ಎಂದು ಇದರ ಅರ್ಥವಲ್ಲ. ಅಜ್ಜಿ ವಯಸ್ಸಿನ ಬಹಳ ಹೆಂಗಸರು ನಮ್ಮ ನಡುವೆ ಇದ್ದಾರೆ. ಆದರೆ ಇವರಿಗೆ ಅಜ್ಜಿ ಎದು ಕರೆಸಿ ಕೊಳ್ಳುವ ಮನಸ್ಸಿಲ್ಲ. ಅಜ್ಜಿಯ ಆ ಮನೋಭಾವ ಇಲ್ಲ. ಮಗುವಾಗಿ ಮೊಮ್ಮಕ್ಕಳ ಜೊತೆ ಬೆರೆಯುವ ವ್ಯಕ್ತಿತ್ವ ಇಲ್ಲ. ಇವಳ ಸಮಯವನ್ನ ಟಿ. ವಿ. ಕಿತ್ತು ಕೊಂಡಿದೆ. ಸಮಾಜ ಸೇವೆ ಅನ್ನುವ "ಸೋಗು" ಹಾರಿಸಿ ಕೊಂಡು ಹೋಗಿದೆ. ತನ್ನ "ಅಜ್ಜಿ"ತನವನ್ನ ವಿವಿಧ ಬಗೆಯ ಮುಖ ವರ್ಣಿಕೆಗಳ ಅಡಿಯಲ್ಲಿ 

ಮುಚ್ಚಿ ಇರಿಸಿ ಕೊಂಡ ಇವಳು ಮೊಮ್ಮಕ್ಕಳಿಂದ ದೂರವಾಗಿದ್ದಾಳೆ. ಇವಳಿಗೆ ಕತೆ ಕಟ್ಟಲು ಬರುವುದಿಲ್ಲ, ಕತೆ ಹೇಳುವ ಕಲೆ ಗೊತ್ತಿಲ್ಲ. ಅಂತು ಅಜ್ಜಿ ಇಲ್ಲದೆ ನಮ್ಮ ಮಕ್ಕಳ ಬದುಕು  ಬರಿದಾಗುತ್ತಿದೆ. ಹಿಂದಿನ ನಮ್ಮ ಅಜ್ಜಿ ಅನುಭವಿಸಿದ ಬದುಕಿನ ನೂರಾರು ಸಂದರ್ಭಗಳನ್ನ ಇಂದಿನ ಅಜ್ಜಿಯರು ಅನುಭವಿಸದೇನೆ ಮರೆಯಾಗುತ್ತಿದ್ದಾರೆ.


ಎಷ್ಟೋ ಜನ ಅಜ್ಜಿಯರು ತಮ್ಮ ಕೊನೆಯ ದಿನಗಳನ್ನ ವೃದ್ಧಾಶ್ರಮಗಳಲ್ಲಿ ಕಳೆಯುವ ಸ್ಥಿತಿ ಬಂದಿದೆ. ಆಧುನಿಕತೆ ಅನ್ನುವುದು ನಮ್ಮ ಬದುಕನ್ನ ಮಾತ್ರವಲ್ಲ ನಮ್ಮ ಮಕ್ಕಳ ಬದುಕನ್ನ ಕೂಡ ನಾಶ ಮಾಡುತ್ತಿದೆ. ಆದರೆ ಇದೊಂದು ಸಮಸ್ಯೆ ಎಂದು ಕೂಡ ನಾವು ತಿಳಿಯುತ್ತಿಲ್ಲ. ಇದೇ ಒಂದು ದುರಂತ.

ಕಾಮೆಂಟ್‌ಗಳಿಲ್ಲ: