ವರ್ಷಾ ರಮೇಶ
ಸೌಜನ್ಯ: ಪ್ರಜಾವಾಣಿ
ಮಧ್ಯದಸ್ತರದಲ್ಲಿರುವ ಜಾತಿಗಳೂ ತಮ್ಮ ಶ್ರೇಷ್ಠತೆ ಮೆರೆಯಲು ದಲಿತರನ್ನು ತುಳಿಯುವುದನ್ನು ಬಿಟ್ಟಿಲ್ಲ. ಜನ್ಮತಃ ಮನುವಾದಿಗಳಿಗಿಂತ ಮಧ್ಯಸ್ತರದವರು ಒಂದು ಹೆಜ್ಜೆ ಮುಂದೆಯೇ ಇದ್ದು; ಅವರದು ಹಿಂಸಾಚಾರವೇ ಮೂಲಮಂತ್ರವಾಗಿದೆ!
ತಮಟೆ ಒಂದು ವಾದ್ಯ. ತಬಲಾ, ಮೃದಂಗದಂತೆ ಇದು ಕೂಡ ಚರ್ಮವಾದ್ಯ. ವ್ಯತ್ಯಾಸವೆಂದರೆ ತಮಟೆ ಮಂಗಳ ವಾದ್ಯಗಳ ಗುಂಪಿನಲ್ಲಿ ಪರಿಗಣಿತವಾಗಿಲ್ಲ. ಈ ದೇಶದ ಉದ್ದಗಲಕ್ಕೂ ತಮಟೆ ಬಾರಿಸುವ ಕಲೆ ತಲೆತಲಾಂತರದಿಂದ ಒಂದೇ ಜಾತಿಗೆ ಬಳುವಳಿಯಾಗಿ ಬಂದುದು ವಿಶೇಷವೂ ಹೌದು ಮತ್ತು ಅವರಿಗಷ್ಟೇ ಸೀಮಿತವಾಗಿ ಉಳಿದುದು ದುರದೃಷ್ಟವೂ ಹೌದು!
ಶತಶತಮಾನಗಳಿಂದ ಸಕ್ರಿಯ ಸಾಮುದಾಯಿಕ ಜೀವನ ಅರ್ಥಾತ್ ಸಾಮಾಜಿಕ, ಧಾರ್ಮಿಕ, ಆರ್ಥಿಕ ಕೊಡು-ಕೊಳ್ಳುವಿಕೆಯಿಂದ ದೂರವಿರಿಸಲ್ಪಟ್ಟ ದಲಿತರ ಜೀವನದಲ್ಲಿ ತಮಟೆ ಹದವಾಗಿ ಬೆರೆತಿದೆ.
ಓದು-ಬರಹ, ಮನಸ್ಸಿನ ಸಂತೋಷಕ್ಕಾಗಿ ಸಂಗೀತ-, ನಾಟ್ಯ, ಆರ್ಥಿಕವಾಗಿ ಲಾಭದಾಯಕವಾದ ಕಸುಬುಗಳಿಂದ ದಲಿತರು ವಂಚಿಸಲ್ಪಟ್ಟವರು. ಅನರ್ಹತೆಗಳ ಹಣೆ ಪಟ್ಟಿಯನ್ನು ಹೊತ್ತುಕೊಂಡೇ ಹುಟ್ಟಿದವರು. ಜೀವನದ ಪ್ರತಿ ಹೆಜ್ಜೆ-ಹೆಜ್ಜೆಗೂ ಸಾಲು-ಸಾಲು ಕಟ್ಟುಪಾಡುಗಳಿಂದ ಬಿಗಿಯಲ್ಪಟ್ಟವರು. ಇಂತಹ ಉಸಿರುಗಟ್ಟಿಸುವ ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಬ್ರಾಹ್ಮಣ ಸಂಸ್ಕೃತಿಗೆ ಹೊರತಾಗಿ ದಲಿತರದು ವಿಶೇಷವಾದ ಸಂಸ್ಕೃತಿ, ಜೀವನಶೈಲಿ ಮೈದಳೆದಿದೆ.
ತಮಟೆ ವಾದನ ಗಂಧರ್ವ ವಿದ್ಯೆಯಲ್ಲ ! ವಿದ್ಯೆಯ ಗೌಪ್ಯತೆಯ ಹೆಸರಿನಲ್ಲಿ, ಗುರು-ಶಿಷ್ಯ ಪರಂಪರೆಯ ಹೆಸರಿನಲ್ಲಿ ಪುರೋಹಿತ ವರ್ಗದವರು ಮಾಡಿರುವ ಅನಾಚಾರಕ್ಕೆ ಲೆಕ್ಕವಿಲ್ಲ! ಈ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದಾದರೆ ತಮಟೆ ಹಿಂದೂಧರ್ಮದ ಮಂಗಳಕರ ವಾದ್ಯಗಳಲ್ಲಿ ಪರಿಗಣಿತವಾಗದೇ ಇರುವುದಕ್ಕೆ ದಲಿತರು ವ್ಯಥೆ ಪಡಬೇಕಾದ ಅಗತ್ಯವೂ ಇಲ್ಲ! ಕಲೆಯೊಂದು ಮನಸ್ಸಿಗೆ ಮುದ ನೀಡುವ ಕಲೆಯಾಗಿ ಬೆಳೆದುಬರಲು ಈ ದೇಶದ ಸಾಮಾಜಿಕ ವ್ಯವಸ್ಥೆ ಅವಕಾಶ ಕೊಡಲಿಲ್ಲವೆನ್ನುವ ಖೇದವಿದೆ.
ದಲಿತ ಮಕ್ಕಳು ತಮಟೆ ಸದ್ದು ಕೇಳುತ್ತಾ ಹಿರಿಯರ ಜೊತೆ ಹಾಡುತ್ತಾ-ಕುಣಿಯುತ್ತಾ ಸರಳವಾಗಿ ಮೈಗೂಡಿಸಿಕೊಳ್ಳುತ್ತಾರೆ. ತಮಟೆಯನ್ನು ತಾಳಬದ್ಧವಾಗಿ ಬಾರಿಸುತ್ತಾ ಅದರ ಧ್ವನಿಗೆ ಸ್ಪಂದಿಸುತ್ತಾ ಹಾಡಿ ನಲಿಯುತ್ತಾರೆ. ತಮಟೆ ದಲಿತರ ಪಾಲಿಗೆ ಕೇವಲ ಒಂದು ಕಲೆಯಲ್ಲ; ಅವರ ಜೀವನದ ಅವಿಭಾಜ್ಯ ಅಂಗವೇ ಆಗಿದೆ.
ತಮ್ಮ ಖುಷಿಗಾಗಿ ಹಾಡಿಕೊಳ್ಳುವುದು ಅವರ ಹವ್ಯಾಸ. ತಮ್ಮ ನೋವು-ನಗುವನ್ನು ವ್ಯಕ್ತಪಡಿಸುವ ಮಾಧ್ಯಮ ಮಾತ್ರ ತಮ್ಮಟೆ! ಅಂದು ದಲಿತರು ಜೀತಕ್ಕಿದ್ದು, ಬಾಡಿ ಬಸವಳಿದು ಬಂದಾಗ ಅವರನ್ನು ಆಸರಿಸುವ, ದಣಿವಾರಿಸುವ ಸಾಧನವಾದದ್ದು ಈ ತಮಟೆ! ತಮಟೆ ಬಾರಿಸುವುದು ದಲಿತರ ಮುಖ್ಯ ವೃತ್ತಿಯೇನಲ್ಲ; ಇದರಿಂದ ಅಂತಹ ಆದಾಯವೂ ಇಲ್ಲ.
ಮುಂಚೆ ತಮಟೆಗೆ ಮೇಕೆಯ ಚರ್ಮವನ್ನು ಬಳಸಲಾಗುತ್ತಿತ್ತು. ಇದನ್ನು ತಯಾರಿಸುವವರೂ ತಾವೇ; ಅದರ ಖರ್ಚು-ವೆಚ್ಚ ಭರಿಸಬೇಕಾದವರೂ ತಾವೇ ಆದುದರಿಂದ ಚರ್ಮಕ್ಕೆ ಬದಲಾಗಿ ಈಗ ಪ್ಲಾಸ್ಟಿಕ್‌ನ ಮೊರೆ ಹೋಗಿದ್ದಾರೆ. ಇದರ ಎರಡು ಅನುಕೂಲಗಳೆಂದರೆ ತಮಟೆ ತಯಾರಿಕೆ ಮತ್ತು ನಿರ್ವಹಣೆಗೆ ತಗಲುವ ಖರ್ಚು ಕಡಿಮೆ. ಅಲ್ಲದೇ ಚರ್ಮದ ತಮಟೆಯನ್ನು ಮೇಲಿಂದ ಮೇಲೆ ಬಿಸಿ ಮಾಡಿ ಚರ್ಮದ ಬಿಗಿ ಕಾಯ್ದು ಕೊಳ್ಳದೆ ಹೋದರೆ ಜೋರಾಗಿ ಸದ್ದು ಹೊರಡುವುದಿಲ್ಲ. ಚರ್ಮದ ತಮಟೆಯಿಂದ ಹೊರಡುವ ಧ್ವನಿ ಪ್ಲಾಸ್ಟಿಕ್ ತಮಟೆಯಲ್ಲಿ ಹೊರಡುವುದಿಲ್ಲವೆನ್ನುತ್ತಾರೆ ಪರಿಣಿತರು.
ಹಳ್ಳಿಗಳಲ್ಲಿ ಮಾತ್ರವಲ್ಲ; ಪಟ್ಟಣಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾ, ಖಾಸಗಿ ಯಾ ಸರ್ಕಾರಿ ಕಚೇರಿಗಳಲ್ಲಿ ದುಡಿಯುತ್ತ ಸಮಯ ಸಿಕ್ಕಾಗಲೆಲ್ಲ ಬೇಸರ ಕಳೆಯಲು ಇಂದಿಗೂ ತಮಟೆ ಬಾರಿಸುವುದಿದೆ. ದಲಿತರ ಸಂತೋಷ, -ಶೋಕದ ಎರಡೂ ಸಂದರ್ಭಗಳಲ್ಲಿ ತಮಟೆ ಬಳಕೆಯಾಗುತ್ತದೆ. ವ್ಯತ್ಯಾಸವಿಷ್ಟೇ, ಶೋಕದ ತೀವ್ರತೆ ಹೆಚ್ಚಿಸಲು ಪೀಪಿಯ ಬಳಕೆಯಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ ಪೀಪಿ ವಾದ್ಯ ಅಥವಾ ನಾದಸ್ವರ ಹಿಂದೂ ಸಮಾಜದ ಮಂಗಳಕರ ವಾದ್ಯಗಳಲ್ಲೊಂದು!
ಊರ ಜಾತ್ರೆ, ಪಲ್ಲಕ್ಕಿ, ಮೆರವಣಿಗೆಗೆ ಇಂದಿಗೂ ತಮಟೆ ಕಡ್ಡಾಯವಾಗಿ ಬೇಕು! ಒಂದು ಪೆಟ್ಟು ದೇವಿಯ ಪ್ರಸನ್ನತೆಗೆ ಮತ್ತು ಆಕೆಯನ್ನು ಉಡಿಕೆ ಅಥವಾ ವಾಗ್ದಾನ ಕೊಡಲು ಆಹ್ವಾನಿಸುವ ರೀತಿಯಾದರೆ, ಎರಡು ಪೆಟ್ಟನ್ನು ಪಲ್ಲಕ್ಕಿ ಉತ್ಸವಕ್ಕೆ ಹಾಗೂ ಮೂರು ಪೆಟ್ಟನ್ನು ಮೆರವಣಿಗೆಯಲ್ಲಿ ಕುಣಿಯಲು ಹಾಕುತ್ತಾರೆ.
ಐತಿಹಾಸಿಕ ಪುರಾವೆಗಳ ಪ್ರಕಾರ ಚಾಲುಕ್ಯರು, ಚೋಳ ರಾಜಮನೆತನದ ಆಳ್ವಿಕೆಯಲ್ಲಿ ತಮಟೆ ಜನನದಿಂದ ಮರಣದವರೆಗೂ ಬಹುಮುಖ್ಯ ಪಾತ್ರ ವಹಿಸಿತ್ತು. ಮಹಾರಾಜನಿಗೆ ಮಗುವಿನ ಜನನ, ಅತಿಥಿಯ ಆಗಮನ, ವೈರಿಯ ಆಕ್ರಮಣ, ನಿರ್ದಿಷ್ಟ ಅಪರಾಧ ಹೇಳುವ, ಪ್ರತಿಯೊಂದು ಸಂದೇಶವನ್ನು ಊರಿಗೆ ಸೂಚ್ಯವಾಗಿ ಸಾರಲು ನಿರ್ದಿಷ್ಟವಾದ ತಮಟೆ ಸದ್ದನ್ನು ಹೊರಡಿಸಲಾಗುತ್ತಿತ್ತು. ರಣರಂಗದಲ್ಲಿ ವೀರರಿಗೆ ತಮಟೆ ಬಾರಿಸುವುದರ ಮೂಲಕ ಹುರಿದುಂಬಿಸುವ ಜವಾಬ್ದಾರಿ ಇವರಿಗಿದ್ದಿತು. ಈ ತೆರನಾದ ವೈವಿಧ್ಯಮಯ ಧ್ವನಿ ಹೊರಡಿಸಲು ಕಲಾತ್ಮಕತೆ ಜೊತೆಗೆ ಎಂಟೆದೆ ಬೇಕು! ಆದರೆ ಇಂದು ಇದು ಮನುವಾದಿಗಳ ಕುತಂತ್ರದ ಪರಿಣಾಮ ‘ಅಂತ್ಯಸಂಸ್ಕಾರಕ್ಕೆ ಸೀಮಿತವಾದ ಕಲೆ’ ಎಂಬ ಮಟ್ಟಕ್ಕೆ ಕುಗ್ಗಿದೆ.
‘ಮೇಲ್ಜಾತಿ’ ಜನರ ಶವಯಾತ್ರೆ ದಲಿತರ ತಮಟೆ ಬಾರಿಸುವಿಕೆ ಇಲ್ಲದೆ ಮುಂದೆ ಸಾಗುವುದಿಲ್ಲ! ಇದರಲ್ಲಿ ಅಚ್ಚರಿ ಏನೂ ಇಲ್ಲ. ಊರಿನ ಚಾಕರಿ ಮಾಡಲು ದಲಿತರು ಬೇಕು, ಹೊಲದಲ್ಲಿ ಕೂಲಿ ಮಾಡಲು ಬೇಕು, ಸಗಣಿ ಎತ್ತಲು ಬೇಕು! ಆದರೆ ದಲಿತರು ಬೇಡ, ದಲಿತರ ಕಲೆ ಬೇಡ, ದಲಿತರು ಸರಿಸಾಟಿಯಾಗುವುದು ಬೇಕಿಲ್ಲ!
ಊರಿನ ದಲಿತರು ತಮಟೆ ಬಾರಿಸಲು ನಿರಾಕರಿಸಿದರೆ, ಅವರಿಗೆ ದುಪ್ಪಟ್ಟು ಹಣ ನಿಗದಿ ಮಾಡಿ ಕರೆತರುತ್ತಾರೆ. ಅವರ ಬಡತನ, ಅಸಹಾಯಕತೆ ದುರುಪಯೋಗಪಡಿಸಿಕೊಂಡು. ವಿಷಾದನೀಯವೆಂದರೆ ‘ಅಸಮ್ಮತಿಯ ಆಲಿಂಗನ ಮತ್ತು ಪೂರ್ವ ಯೋಜಿತ ರಚನಾತ್ಮಕ ಬಹಿಷ್ಕಾರ’ ಮುಂದುವರಿದೇ ಇದೆ.
ತಮಟೆ ಬಾರಿಸುವಿಕೆಯನ್ನು ತುಚ್ಛವಾಗಿ ಕಾಣುವುದನ್ನಾಗಲಿ, ಸಮಯ ಕಾದು ದಲಿತರನ್ನು ಜರೆಯುವುದನ್ನಾಗಲಿ ನಿಲ್ಲಿಸಿಲ್ಲ. ಉದಾಹರಣೆಗೆ ಹಾಸನ ತಾಲ್ಲೂಕಿನ ಕುದುರು ಗುಂಡಿಯಲ್ಲಿ ರಂಗನಾಥಸ್ವಾಮಿ ಜಾತ್ರೆಯಲ್ಲಿ ಐವತ್ತೆರಡು ವರ್ಷದ ದಲಿತ ಕೋಡುಗಯ್ಯನನ್ನು ಅದೇ ಊರಿನ ಕೆಲ ‘ಮೇಲ್ಜಾತಿ’ ಜನ ತಮಟೆ ಜೋರಾಗಿ ಬಾರಿಸುವಂತೆ ಹೇಳಿದ ತಮ್ಮ ಆಜ್ಞೆ ಪಾಲಿಸಲಿಲ್ಲವೆಂಬ ಕಾರಣ ಮುಂದೆ ಮಾಡಿ ಮನಬಂದಂತೆ ಥಳಿಸಿ ಆತ ಆಸ್ಪತ್ರೆ ಸೇರುವಂತೆ ಮಾಡಿರುವ ಕೃತ್ಯ ಪಶುಸದೃಶ್ಯವೂ ಹಾಗೂ ಅಸ್ತಿತ್ವದಲ್ಲಿರುವ ಕಾನೂನು ಮತ್ತು ಸಂವಿಧಾನ ವನ್ನು ಅಣಕಿಸುವಂತಿದೆ!
ತಮಟೆ, ಡೊಳ್ಳು ‘ನೆಲದ ಒಡಲ ಮಕ್ಕಳ’ ಸ್ವತ್ತು. ಇದು ಒಂದು ಜನಪದ ಕಲೆ. ಕಲೆ ಬೆಳೆಯಬೇಕಾದರೆ ಸಹೃದಯತೆ ಬೇಕು. ಎಲ್ಲಿಯವರೆಗೂ ವರ್ಣಾಶ್ರಮಧರ್ಮ ಹಿಂದೂ ಸಮಾಜದ ಮೂಲ ಸೆಲೆಯಾಗಿರುತ್ತದೆಯೋ ಅಲ್ಲಿಯವರೆಗೂ ಮಾನವೀಯತೆ, ಸಹೃದಯತೆ, ಸಮಾನತೆ ಕೈಗೆಟುಕದು! ಎಲ್ಲಿಯವರೆಗೂ ಭಾರತೀಯ ಸಮಾಜ ಬ್ರಾಹ್ಮಣತ್ವದ ಅಧೀನದಲ್ಲಿದೆಯೋ ಅಲ್ಲಿಯವರೆಗೂ ದೀನ-ದಲಿತರ ದಾಸ್ಯತ್ವಕ್ಕೆ ಕೊನೆಯಿಲ್ಲ. ದಿನಂಪ್ರತಿ ರಾಷ್ಟ್ರೀಯ ಮುಖ್ಯವಾಹಿನಿಗಳಲ್ಲಿ ದೇಶದಾದ್ಯಂತ ದಲಿತರ ಮೇಲೆ ದೈಹಿಕ ಹಲ್ಲೆ, ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ದಲಿತರ ಗುಡಿಸಲುಗಳಿಗೆ ಬೆಂಕಿ ಇತ್ಯಾದಿಯಾಗಿ ಒಂದಿಲ್ಲೊಂದು ರೀತಿಯಲ್ಲಿ ನಿರಂತರ ನಡೆಯುತ್ತಿರುವ ದೌರ್ಜನ್ಯ ವರದಿಯಾಗುತ್ತಲೇ ಇದೆ. ದಲಿತ ಹೆಣ್ಣುಮಕ್ಕಳ ರಕ್ಷಣೆಗೆ ಯಾವುದೇ ಆಯೋಗ ರಚನೆಯಾಗದಿರುವುದು ಆಘಾತಕಾರಿ!
ಅಂತರರಾಷ್ಟ್ರೀಯಮಟ್ಟದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರತವನ್ನೊಳಗೊಂಡು ಇತರ ಪ್ರಗತಿಶೀಲ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಪ್ರತಿಯೊಂದು ಆಗು-ಹೋಗುಗಳನ್ನು ತದೇಕ ಚಿತ್ತದಿಂದ ಗಮನಿಸುತ್ತಿವೆ. ರಾಷ್ಟ್ರದ ನೀತಿ ನಿರೂಪಣಾ ಅಂಗ ಸಂಸ್ಥೆ ಎಡೆಬಿಡದೆ ಹೆಚ್ಚುತ್ತಿರುವ ಹಿಂಸಾಚಾರವನ್ನು ಹದ್ದುಬಸ್ತಿನಲ್ಲಿಡಬೇಕಾದ ಅಗತ್ಯವನ್ನು ಅರಿತು ಎಚ್ಚೆತ್ತುಕ್ಕೊಳ್ಳದಿರುವುದು ಅಪಾಯಕಾರಿಯೂ ಹೌದು!
ವರ್ಣಾಶ್ರಮದ ಹರಿಕಾರ ಮನು ಹಾಕಿಕೊಟ್ಟ ಹಾದಿಯಲ್ಲಿ ನಡೆದು ಶತಕಗಳ ಕಾಲ ದೇಶದ ಸಂಪತ್ತನ್ನು ಕೊಳ್ಳೆಹೊಡೆದು, ನಿಮ್ನ ವರ್ಗದ ರಕ್ತ ಹೀರಿ ದೇಶದ ಚುಕ್ಕಾಣಿ ಹಿಡಿದವರು ಆರ್ಯರು! ಆರ್ಯರ ದೃಷ್ಟಿಯಲ್ಲಿ ತಮ್ಮನ್ನು ಹೊರತುಪಡಿಸಿ ಕೆಳಸ್ತರದವರೆಲ್ಲ ಶೂದ್ರರೇ. ಜಾತಿ ಏಣಿಶ್ರೇಣಿಯ ಮಧ್ಯಂತರದ ವರ್ಗಗಳು ಶೂದ್ರರೆಂದು ಪರಿಗಣಿತರಾದರೂ ‘ಅಸ್ಪೃಶ್ಯ’ರಲ್ಲ. ಕಾಲಕ್ರಮೇಣ ಮೀಸಲಾತಿಯ ಲಾಭ ಪಡೆದು, ಆರ್ಥಿಕವಾಗಿ, ರಾಜಕೀಯವಾಗಿ ಬಲಾಢ್ಯರಾಗುವುದರ ಜೊತೆಗೆ ‘ಮಲಿನತೆಯ ಮೇರೆ ಮೀರಿದ’ ಜಾತಿಯಲ್ಲಿ ಗುರುತಿಸಿಕೊಂಡು ತಮ್ಮ ‘ಶೂದ್ರತ್ವ’ವನ್ನು ಅಲ್ಲಗಳೆಯುವಲ್ಲಿ ಯಶಸ್ವಿಯಾದವರು.
ಇನ್ನು ‘ಮಲಿನತೆಯ ಪರಿಮಿತಿ’ಯಲ್ಲಿಯೇ ಉಳಿದವರು ಅಸ್ಪೃಶ್ಯರು ಅಥವಾ ದಲಿತರು. ಮಧ್ಯದ ಸ್ತರದಲ್ಲಿರುವ ಜಾತಿಗಳೂ ತಮ್ಮ ಶ್ರೇಷ್ಠತೆ ಮೆರೆಯಲು ದಲಿತರನ್ನು ತುಳಿಯುವುದನ್ನು ಬಿಟ್ಟಿಲ್ಲ. ಜನ್ಮತಃ ಮನುವಾದಿಗಳಿಗಿಂತ ಮಧ್ಯಸ್ತರದಲ್ಲಿರುವವರು ಒಂದು ಹೆಜ್ಜೆ ಮುಂದೆಯೇ ಇದ್ದು; ಅವರದು ಹಿಂಸಾಚಾರವೇ ಮೂಲಮಂತ್ರವಾಗಿದೆ! ಇದೇ ಆರ್ಯರ ಗುರು ಮನು ಹಾಕಿಕೊಟ್ಟ ಧರ್ಮಪಾಠ ಅಥವಾ ನೀತಿಪಾಠ! ಬಾಬಾಸಾಹೇಬರ ಬರವಣಿಗೆಯ ಹಿನ್ನೆಲೆಯಲ್ಲಿ ಪರಾಮರ್ಶಿಸುವುದಾದರೆ ಇದು,‘ಅನುಕರಣೆಯಿಂದ ಹರಡಿದ ಅಂಟುಜಾಡ್ಯ’.
ದಲಿತರಿಗೆ ತಮ್ಮ ಮಲಿನತೆಯನ್ನು ತೊಳೆದುಕೊಳ್ಳಲು ಮನು ಹಾಕಿಕೊಟ್ಟ ನೀತಿಪಾಠವಾಗಲಿ, ಮಧ್ಯಂತರ ಜಾತಿಗಳ ಹಿಂಸೆಯಾಗಲಿ ಮಾದರಿಯಾಗಬೇಕಿಲ್ಲ! ದಲಿತರು ಅಗಣಿತ ವರ್ಷಗಳ ಕಾಲ ದೌರ್ಜನ್ಯವನ್ನು ಮೂಕರಾಗಿ ಅನುಭವಿಸಿದವರು. ದೈಹಿಕವಾಗಿ, ಮಾನಸಿಕವಾಗಿ ನೋವು ಎಂದರೇನು? ಎನ್ನುವುದನ್ನು ಅವರಷ್ಟು ಚೆನ್ನಾಗಿ ಬಲ್ಲವರು ಈ ನೆಲದ ಮೇಲೆ ಮತ್ತೊಂದು ಜನ-ಜಾತಿ ಇದ್ದೀತೇ? ಮಾನವೀಯತೆಯೇ ದಲಿತರ ಧರ್ಮ; ಸಹೋದರತೆಯೇ ಜೀವಾಳ. ಜಗತ್ತಿಗೇ ಆದರ್ಶವೆನಿಸಿದ ಬುದ್ಧ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವವರಾದ ಇವರಿಗಿಂತ ಅರ್ಹರು ಬೇಕೇ ಈ ದೇಶವನ್ನಾಳಲು? ಅಸಮಾನತೆಯೇ ತಳಹದಿಯಾದ ರಾಮರಾಜ್ಯದ ಬದಲು ಸಮಾನತೆಯನ್ನೇ ಸಾರುವ ಬಲಿ ರಾಜ್ಯದ ಸ್ಥಾಪನೆ -ಫುಲೆಯವರ ಕನಸು ನನಸಾಗುವ ದಿನ ದೂರವಿಲ್ಲ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ