ಭಾನುವಾರ, ಜನವರಿ 13, 2013

ಚಿಣ್ಣರ ಲೋಕಕ್ಕೆ ಅನಿಮೇಷನ್ ಕಿನ್ನರಜೋಗಿ...

ಮಕ್ಕಳು ಟಿವಿ ಮುಂದೆ ಕೂತರೆ ಸಾಕು, ಕಾರ್ಟೂನ್ ನೆಟ್‌ವರ್ಕ್, ಪೋಗೊ, ಡಿಸ್ನಿ, ಹಂಗಾಮ, ನಿಕ್, ಚಿಂಟು ಮುಂತಾದ ಚಾನಲ್ಲುಗಳಿಗೆ ಅಂಟಿಕೊಳ್ಳುತ್ತಾರೆ. ಈ ಯಾವ ಚಾನಲ್ಲಿನಲ್ಲಿ ಹುಡುಕಿದರೂ ಕನ್ನಡದ ಜನಪದ ಕಥನಲೋಕದ ಅನಿಮೇಷನ್ ಚಿತ್ರಗಳಂತೂ ಸಿಗುವುದಿಲ್ಲ. ಈಚೆಗೆ ಇನ್ಫೋಬೆಲ್ ಕಂಪನಿ ರೂಪಿಸಿದ ನಮ್ಮೂರ ಕಿನ್ನರಜೋಗಿ ಜನಪದ ಹಾಡುಗಳು ಮತ್ತು ಕಥೆಗಳ ಅನಿಮೇಷನ್ ಪ್ರಯೋಗವನ್ನು ನೋಡಿದೆ. ಕನ್ನಡದ್ದೇ ಜಾನಪದ ಕಥೆ ಗೀತೆಗಳನ್ನು ಬಳಸಿಕೊಂಡು ಅನಿಮೇಷನ್ ಮಾಡಿರುವ ಈ ಪ್ರಯೋಗ ನಿಜಕ್ಕೂ ಮೆಚ್ಚುವಂತದ್ದು.

         ಆಧುನಿಕ ಜೀವನ ವಿಧಾನವನ್ನು ಮೈಗೂಡಿಸಿಕೊಂಡ ನಗರದ ಮಧ್ಯಮವರ್ಗದ ಮನೆಯೊಂದಿದೆ. ಆ ಮನೆಯಲ್ಲಿ ಚಿನ್ನು ಚಿಂಟು ತನ್ನ ತಾಯಿಯನ್ನು ಜನಪದ ಅಂದರೇನು? ನಾವು ಜನಪದ ಹಾಡು ಕಲಿಯಬೇಕು ಮುಂತಾದ ಮುಗ್ಧ ಪ್ರಶ್ನೆಗಳನ್ನು ಕೇಳುತ್ತಾರೆ. ಆಗ ಅಮ್ಮ `ನನಗೆ ಕಥೆಗಿತೆ ಬರುವುದಿಲ್ಲ, ಕಿನ್ನರಿ ಜೋಗಿ ನಿಮಗೆ ಹಾಡು ಕಥೆ ಹೇಳುತ್ತಾ, ಹಳ್ಳಿ ಜಾತ್ರೆ ಎಲ್ಲವನ್ನು ತೋರಿಸುತ್ತಾನೆ. ರಾತ್ರಿ ದೇವರನ್ನು ನೆನಪಿಸಿಕೊಂಡು ಮಲಗಿರಿ, ಕಿನ್ನರಿ ಜೋಗಯ್ಯ ಬರುತ್ತಾನೆ' ಎಂದು ಹೇಳುತ್ತಾಳೆ. ಮಕ್ಕಳ ಕನಸಲ್ಲಿ ಕಿನ್ನರಿ ಜೋಗಯ್ಯ ಬರುತ್ತಾನೆ. ಚಿನ್ನು ಚಿಂಟುಗೆ ಹಳ್ಳಿಗೆ ಕರೆದುಕೊಂಡು ಹೋಗುತ್ತಾ ಹಾಡು ಕಥೆ ಹೇಳುತ್ತಾ ಜಾತ್ರೆಯನ್ನು ತೋರಿಸುತ್ತಾನೆ. ಹೀಗೆ ಸಾಗುವಾಗ ಮಕ್ಕಳೊಂದಿಗೆ ಮಾತನಾಡುತ್ತಾ, ಕಥೆ ಹೇಳುತ್ತಾ, ನಕ್ಕು ನಗಿಸುತ್ತಾ ಮಕ್ಕಳಲ್ಲಿ ಅಚ್ಚರಿ ಹುಟ್ಟಿಸುವುದು, ಕುತೂಹಲ ಮೂಡಿಸುವುದು, ಬೆರಗುಗೊಳಿಸುವುದು ಮಾಡುತ್ತಾನೆ. ಹೀಗೆ ಚಿನ್ನು ಚಿಂಟು ಕಿನ್ನರಿ ಜೋಗಯ್ಯ ತೋರುವ ಜಾನಪದ ಲೋಕದಲ್ಲಿ ಮಿಂದೇಳುತ್ತಾರೆ.

      ಶರಣು ಶರಣಯ್ಯ ಗಣನಾಯಕ, ಎಲ್ಲೋ ಜೋಗಪ್ಪ ನಿನ್ನರಮನೆ, ನವ್ವಾಲೆ ಬಂತಪ್ಪ ನವ್ವಾಲೆ, ಭಾಗ್ಯದ ಬಳೆಗಾರ, ಮೂಡಲ್ ಕುಣಿಗಲ್ ಕೆರೆ, ಮುಂಜಾನೆದ್ದು ಕುಂಬಾರಣ್ಣ, ಕೋಲು ಮಾತಾಡುತಾವೆ ಈ ಜನಪದ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಇದರ ಜತೆ ಸೋಮಾರಿ ಕುಂಬಾರ, ಸಾಧಕ ರಾಮು, ದಡ್ಡ ತಾತ ಕತೆಗಳನ್ನು ಬಳಸಿಕೊಂಡಿದ್ದಾರೆ. ಈ ಹಾಡುಕಥೆಗಳಿಗೆ ಹಿನ್ನೆಲೆ ಸಂಗೀತ, ಚಿತ್ರರೂಪಕ ಎಲ್ಲವೂ ಹಳ್ಳೀತನವನ್ನು ನೆನಪಿಸುವಂತಿದೆ. ಮಕ್ಕಳಿಗಂತೂ ತುಂಬಾ ಇಷ್ಟವಾಗುವಂತಿದೆ.

     ಇಂದು ಆಧುನಿಕ ಜೀವನ ವಿಧಾನದಿಂದಾಗಿ ಮಕ್ಕಳು ಜಾನಪದ ಸಂಗೀತ, ಕಥೆ, ಗೀತೆಯ ಸೊಗಡಿನಿಂದ ವಂಚಿತರಾಗುತ್ತಿದ್ದಾರೆ. ಇಂತಹ ಮಕ್ಕಳಿಗೆ ಈ ಕೊರತೆಯನ್ನು ತುಂಬಲು ಈಗಿರುವ ಆಧುನಿಕ ಮಾಧ್ಯಮಗಳನ್ನೆ ಉಪಯೋಗಿಸಿಕೊಂಡು ಜಾನಪದದೆಡೆಗೆ ಸೆಳೆಯಬೇಕಾಗಿದೆ. ಹಾಗಾಗಿ ಇಂದಿನ ಮಕ್ಕಳು ಇಷ್ಟಪಡುವ ಅನಿಮೇಷನ್ ಕ್ರಿಯೇಷನ್ನನ್ನು ಬಳಸಿಕೊಂಡು ಜನಪದ ಕಥೆಗೀತೆಗಳನ್ನು ಹೇಳಿಕೊಟ್ಟರೆ ಅದು ಪರಿಣಾಮಕಾರಿಯಾಗಿರುತ್ತದೆ. ಬಹುಶಃ ಈ ಅಂಶವನ್ನು ಅರಿತುಕೊಂಡೆ ಈ ಪ್ರಯೋಗ ಮಾಡಿದಂತಿದೆ. ಕನ್ನಡದ ಜನಪದ ಕಥೆ ಗೀತೆಗಳ ಬಳಸಿಕೊಂಡು ಅನಿಮೇಷನ್‌ನ ಚಿತ್ರವನ್ನು ರಚಿಸಿದ್ದು ಇದು ಮೊದಲ ಪ್ರಯೋಗವಿರಬೇಕು. ಇಂತಹ ಪ್ರಯತ್ನವನ್ನು ಇನ್ನು ಹೆಚ್ಚು ಹೆಚ್ಚು ಮಾಡಬಹುದಾಗಿದೆ. ಈ ಕಾರಣಕ್ಕಾಗಿ ಇನ್ಫೋಬೆಲ್ಸ್ ತಂಡದ ಒಳ್ಳೆಯ ಪ್ರಯತ್ನವನ್ನು ಮೆಚ್ಚಬೇಕು. ಬೆಲೆ: ರೂ 99. ದೂರವಾಣಿ : 080 2571 4565/75.

ಕಾಮೆಂಟ್‌ಗಳಿಲ್ಲ: