ಶುಕ್ರವಾರ, ಸೆಪ್ಟೆಂಬರ್ 14, 2012

ಮನೆ ಮನೆಗೆ ಬರುವ ರಾಮಾಯಣ ಪಾತ್ರಗಳು


 
-ಸಿದ್ಧರಾಮ ಹಿರೇಮಠ.


ಕೂಡ್ಲಿಗಿ ಪಟ್ಟಣದ ತುಂಬೆಲ್ಲ ಮನೆ ಮನೆಗಳಿಗೆ ಈಗ ರಾಮಾಯಣದ ಪಾತ್ರಗಳು ಸಂಚರಿಸುತ್ತಿವೆ. ಹನುಮಂತ, ರಾಕ್ಷಸಿ, ಜಾಂಬವಂತ, ರಾಮ, ಸೀತೆ ಮುಂತಾದ ಪಾತ್ರಗಳು ಸಜೀವವಾಗಿ ಮನೆಗಳ ಮುಂದೆ ಪ್ರತ್ಯಕ್ಷಗೊಂಡು ಪ್ರೇಕ್ಷಕರ ಮನ ತಣಿಸುತ್ತಿವೆ. ಇವರೇ ಹಗಲು ವೇಷಗಾರರು.

ಮನೆಗಳಲ್ಲಿ ಟಿವಿ ಬಂದು ಮಕ್ಕಳೆಲ್ಲ ಸುಪರ್‌ಮ್ಯಾನ್, ಸ್ಪೈಡರ್‌ಮ್ಯಾನ್‌ಗಳ ಮುಂದೆ ಕುಳಿತಿರುವಾಗ, ನಮ್ಮದೇ ನೆಲದ ರಾಮಾಯಣದ ಕತೆಗಳನ್ನು ಕಿರಿಯರಿಂದ ಹಿರಿಯರವರೆಗೆ ಪರಿಚಯಿಸುತ್ತಿರುವ ಹಗಲು ವೇಷಗಾರರು ಸದ್ದಿಲ್ಲದೇ ನಮ್ಮ ಸಂಸ್ಕೃತಿಯ ಕುರುಹನ್ನು ಉಳಿಸುತ್ತ ಸಾಗಿದ್ದಾರೆ. ತಲೆತಲಾಂತರದಿಂದ ಒಂದೇ ವೃತ್ತಿಯನ್ನು ಅವಲಂಬಿಸಿ ಬಂದಂತಹ ವೃತ್ತಿಗಳಲ್ಲಿ ಹಗಲುವೇಷವೂ ಒಂದಾಗಿದೆ. ಹಗಲು ಹೊತ್ತಿನಲ್ಲಿ ವಿವಿಧ ವೇಷಗಳನ್ನು ಧರಿಸಿ, ಮನೆಮನೆಗಳಿಗೆ ತೆರಳಿ ರಂಜನೆಯನ್ನೊದಗಿಸಿ ಹೊಟ್ಟೆ ಹೊರೆಯುವ ಕಾಯಕ ಹಗಲು ವೇಷಗಾರರದು.
 
 
   ತಾಲೂಕಿನಾದ್ಯಂತ ವರ್ಷವಿಡೀ ಹಗಲುವೇಷ ಹಾಕಿ ಪೌರಾಣಿಕ ನಾಟಕಗಳ ತುಣುಕುಗಳನ್ನು ತೋರಿಸುತ್ತ ತಮ್ಮ ಹೊಟ್ಟೆ ಹೊರೆಯುತ್ತಾರೆ. ಇವರಿಗೆ ಯಾವುದೇ ರೀತಿಯ ವೇದಿಕೆ, ವಿದ್ಯುತ್, ಧ್ವನಿವರ್ಧಕದ ವ್ಯವಸ್ಥೆ ಬೇಕಾಗಿಲ್ಲ. ಬೀದಿಯಲ್ಲಿ, ಮನೆಗಳ ಮುಂದೆ ತಮ್ಮ ಕಲಾಪ್ರದರ್ಶನ ಮಾಡುವುದಷ್ಟೇ ಇವರಿಗೆ ಗೊತ್ತಿರುವುದು. ಇದು ಇವರಲ್ಲಿ ವಂಶಪಾರಂಪರ್ಯವಾಗಿ ಬಂದಿದ್ದು. ಮೂಲತ: ಇವರದು ತಾಲೂಕಿನ ನಾಣ್ಯಾಪುರವಾದರೂ ಅದನ್ನು ಬಿಟ್ಟು ಕೂಡ್ಲಿಗಿ ಸೇರಿ ೨೦ ವರ್ಷಗಳೇ ಕಳೆದಿವೆ. ತಮ್ಮ ಜನಾಂಗದ ಹಲವಾರು ಜನ ಬೇರೆ, ಬೇರೆಕಡೆ ಹೊರಟುಹೋಗಿದ್ದು, ತಾವು ಮಾತ್ರ ಕೂಡ್ಲಿಗಿಯಲ್ಲೇ ನೆಲೆಸಿರುವುದಾಗಿ ಜಂಬಣ್ಣ ಹೇಳುತ್ತಾನೆ.
 
 
   ಪ್ರತಿ ಗ್ರಾಮದಲ್ಲೂ ಇವರು ೬ ದಿನ ನೆಲೆ ನಿಲ್ಲುತ್ತಾರೆ. ೬ ದಿನ ಇವರು ವಿವಿಧ ವೇಷಗಳನ್ನು ಧರಿಸಿ ಪೌರಾಣಿಕ ಪಾತ್ರಗಳನ್ನು ಮನಮುಟ್ಟುವಂತೆ ಅಭಿನಯಿಸುತ್ತಾರೆ. ೬ನೇ ದಿನ ಮುಸ್ಲಿಂ ಜನಾಂಗದ ಪಾತ್ರವನ್ನು ಧರಿಸಿ, ಒಂದು ಚಲನಚಿತ್ರ ಗೀತೆಯನ್ನು ಅಳವಡಿಸಿರುತ್ತಾರೆ. ಪಾತ್ರಕ್ಕೆ ತಕ್ಕಂತೆ ವೇಷಭೂಷಣ, ಬಣ್ಣವನ್ನು ಹಚ್ಚಿಕೊಂಡು, ಅದಕ್ಕೆ ತಕ್ಕಂತೆ ನೃತ್ಯ, ಸಂಭಾಷಣೆಗಳನ್ನು ಹೇಳುವುದೂ ಇವರಿಗೆ ಕರಗತವಾಗಿರುತ್ತದೆ. ಸಂಭಾಷಣೆಗಳನ್ನು ತಮ್ಮ ಅಜ್ಜಂದಿರ ಕಾಲದಿಂದಲೂ ಬಂದ ಪುಸ್ತಕಗಳಿಂದ ಕಲಿಯುತ್ತೇವೆ ಎಂದು ತಿಳಿಸುತ್ತಾರೆ. ಕೂಡ್ಲಿಗಿ ಪಟ್ಟಣದ ಗುಡೇಕೋಟೆ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಟೆಂಟ್‌ನಲ್ಲಿ ವಾಸವಾಗಿರುವ ಇವರಿಗೆ ಶಾಶ್ವತವಾದ ನೆಲೆ ದೊರೆತಿಲ್ಲ. ಇವರ ಮಕ್ಕಳಿಗಾಗಿಯೇ ಆಶ್ರಯ ಕಾಲೊನಿಯಲ್ಲಿ ಪ್ರಾಥಮಿಕ ಶಾಲೆಯೊಂದನ್ನು ತೆರೆಯಲಾಗಿದೆ. ಮಕ್ಕಳು ಶಾಲೆಗೆ ಹೋಗುತ್ತವೆ. ಇವರಿಗೆ ಇದೇ ಕಾಯಕ.
 
   ಪ್ರತಿ ಮನೆಯವರು ಎಷ್ಟು ಕೊಡುವರೋ ಅದನ್ನೇ ಸಂತೋಷದಿಂದ ಪಡೆದು ಮುಂದಿನ ಗ್ರಾಮಕ್ಕೆ ತೆರಳುತ್ತಾರೆ. ತಬಲ, ಹಾರ್ಮೋನಿಯಂ ಇವರ ಪಕ್ಕವಾದ್ಯಗಳು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿಯವರ ವಚನಗಳು, ಶಿಶುನಾಳ ಶರೀಫರ ತತ್ವಪದಗಳು, ದಾಸರ ಕೀರ್ತನೆಗಳನ್ನೂ ಸುಮಧುರವಾಗಿ ಹಾಡುತ್ತಾರೆ. ಬೇರೆ ಯಾವ ಕಾಯಕವೂ ಗೊತ್ತಿರದ ಇವರು ಮನೆ ಮುಂದೆ ಬಂದಾಗ ಸಂತೋಷದಿಂದ ಕಾಣಿಕೆ ನೀಡಿ, ಅಷ್ಟನ್ನು ಮಾತ್ರ ಇವರು ಬಯಸುವುದು.

ಈ ಬಾರಿ ಇವರು ಅಭಿನಯಿಸುತ್ತಿರುವುದು ಶೂರ್ಪನಖಿ ಗರ್ವಭಂಗ. ಗಜಲಂಕಿಣಿಯಾಗಿ ಕೆ.ವೀರೇಶ, ಆಂಜನೇಯನಾಗಿ ಡಿ.ಕೃಷ್ಣ, ರಾವಣನಾಗಿ ಜಂಬಣ್ಣ, ಜಾಂಬವಂತನಾಗಿ ದುರುಗಪ್ಪ ಅಭಿನಯಿಸುತ್ತಿದ್ದಾರೆ. ಇವರಿಗೆ ಪಕ್ಕವಾದ್ಯದವರಾದ ಹಾರ್ಮೋನಿಯಂನ್ನು ಕೆ.ಸೀತಾರಾಂ, ತಬಲ ಡಿ.ಜಂಬಣ್ಣ ನುಡಿಸುತ್ತಾರೆ. ನಾಯಕನಾಗಿ ಡಿ.ಈರಣ್ಣ ಇದ್ದಾರೆ. ಗ್ರಾಫಿಕ್‌ನಲ್ಲಿ ಸುಪರ್‌ಮ್ಯಾನ್, ಸ್ಪೈಡರ್‌ಮ್ಯಾನ್‌ಗಳನ್ನು ಮಕ್ಕಳಿಗೆ ತೋರಿಸುವುದಕ್ಕಿಂತಲೂ ಜೀವಂತ ಪಾತ್ರಗಳೇ ಕಣ್ಣೆದುರಿನಲ್ಲಿರುವುದನ್ನು ಮಕ್ಕಳಿಗೆ ತೋರಿದರೆ ಇನ್ನೂ ಒಳ್ಳೆಯದಲ್ಲವೇ?

                                                                               

ಕಾಮೆಂಟ್‌ಗಳಿಲ್ಲ: