ಬುಧವಾರ, ಆಗಸ್ಟ್ 29, 2012

“…ಮಾಧ್ಯಮವನ್ನು ಕಾರ್ಪೊರೇಟ್ ಕ್ಷೇತ್ರ ಇನ್ನೊ೦ದು ಬಗೆಯಲ್ಲಿ ನಿಯ೦ತ್ರಿಸುತ್ತಿದೆ”


ಡಾ ಎಚ್ ಎಸ್ ರಾಘವೇ೦ದ್ರ ರಾವ್ ಅವರೊ೦ದಿಗೆ
 ಹರ್ಷ ಕುಮಾರ್ ಕುಗ್ವೆ ನಡೆಸಿದ ಸಂದರ್ಶನ



ಕೃಪೆ: ದಿ ಸಂಡೆ ಇಂಡಿಯನ್


ನಮ್ಮಲ್ಲಿ ಹಿಂದೆಂದಿಗಿಂತ ಅಪಾರ ಪ್ರಮಾಣದ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಇದರಲ್ಲಿ ಮೌಲ್ಯಯುತ ಸಾಹಿತ್ಯ ಎಷ್ಟರ ಮಟ್ಟಿಗೆ ಬರುತ್ತಿದೆ?
ಇದಕ್ಕೆ ನಾಲ್ಕೇ ಪುಸ್ತಕಗಳು ಪ್ರಕಟವಾಗುತ್ತಿದ್ದಾಗ ಸುಲಭವಾಗಿ ಹೇಳಬಹುದಿತ್ತು. ಆದರೆ ನಾನ್ನೂರು ಪುಸ್ತಕಗಳು ಬರುತ್ತಿರುವಾಗ ಕಷ್ಟ. ಅನೇಕ ಸಲ ಓದದೆಯೇ ತೀರ್ಮಾನ ಕೊಡುತ್ತೇವೆ. ವಯಸ್ಸಾಗುತ್ತಾ ಹೋದ ಹಾಗೆ ಇತ್ತೀಚಿನ ಬರೆಹಗಳ ಬಗ್ಗೆ ಒಂದು ಬಗೆಯ ಅಸಹನೆಯನ್ನು ಕೆಲವರು ವ್ಯಕ್ತಪಡಿಸುತ್ತಾರೆ. 70ರ ದಶಕದಲ್ಲಿ ವಿಮರ್ಶೆ ಬರೆಯಲು ಆರಂಭಿಸಿದ್ದವರಿಗೆ ೨೦೧೦ರಲ್ಲಿ ಬಂದ ಸಾಹಿತ್ಯವೂ ಅಷ್ಟೇ ಮುಖ್ಯ ಎಂಬ ಮುಕ್ತ ಮನಸ್ಸು ಇರದಿದ್ದರೆ ಈಗಿನದೇನನ್ನೂ ಓದದೇ ಆದೇ ಕುವೆಂಪು ಅದೇ ಬೆಂದ್ರೆ ಎಂದುಕೊಂಡು ಕೂತಿರಬೇಕಾಗುತ್ತದೆ. ಬದಲಿಗೆ ನಮ್ಮ ಕಾಲದಲ್ಲಿ ಬರುತ್ತಿರುವುದರಲ್ಲಿಯೂ ಒಳ್ಳೆಯದಿರುತ್ತದೆ ಎಂಬ ತಿಳುವಳಿಕೆ ಬೇಕು. ಕಸಕಡ್ಡಿ ಎನ್ನುವುದು ಎಲ್ಲಾ ಕಾಲದಲ್ಲಿಯೂ ಇದ್ದೇ ಇರುತ್ತದೆ. ಹಿಂದೆಯೂ ಇತ್ತು. ನಾಗವೇಣಿಯವರ ’ಗಾಂಧಿ ಬಂದ’, ಮೊಗಳ್ಳಿಯವರ ಬುಗುರಿ ಇಂತವೆಲ್ಲ ಎಷ್ಟೊಂದು ಶ್ರೇಷ್ಟವಾದವುಗಳಿವೆಯಲ್ಲ. ಅಮರೇಶ ನುಗಡೋಣಿ, ಎಚ್.ಎಸ್.ಶಿವಪ್ರಕಾಶ್, ನಾರಾಯಣಸ್ವಾಮಿ ಮುಂತಾದವರು ಅದ್ಭುತವಾಗಿ ಬರೆಯುತ್ತಿದ್ದಾರೆ. ಇದೇ ಹೊತ್ತಿಗೆ ಬರೆದಿದ್ದೆಲ್ಲವೂ ಸಾಹಿತ್ಯ ಎಂದು ಹೇಳಲೂ ಬರುವುದಿಲ್ಲ. ಇಂದು ಇರುವ ಒಂದು ದೊಡ್ಡ ಅಪಾಯ ಎಂದರೆ ಕೀರ್ತಿ ಅಥವಾ ಗುರುತಿಸುವಿಕೆ ಬಹಳ ಬೇಗ ಸಿಗುತ್ತಿರುವುದು. ಇದಕ್ಕೆ ಸಮಾಜದ ಯುವಕರಿಗೆ ಪ್ರೋತ್ಸಾಹ ನೀಡಬೇಕೆನ್ನುವ ಮಾದ್ಯಮಗಳ ಪ್ರವೃತ್ತಿ ಕಾರನವಿರಬಹುದು. ಆದರೆ ಇದು ಅವರ ಬರವಣಿಗೆಯನ್ನು ನೋಡಬಹುದಾದಷ್ಟು ದೂರದಿಂದ ನೋಡುವ ಅವಕಾಶ ಅವರಿಗೇ ತಪ್ಪಿಸುತ್ತಿದೆ. ಬರೆವಣಿಗೆಯಲ್ಲಿ ತೊಡಗುವವರ ಬೆಳವಣಿಗೆಯನ್ನು ಮೊಟಕು ಮಾಡಿಬಿಡಬಲ್ಲ ಅಪಾಯ ಇಲ್ಲಿದೆ ಎಂಬುದು ನನ್ನ ಭಾವನೆ.
ಇಂದಿನ ಪ್ರಮುಖ ಸಾಹಿತ್ಯಕ ನೆಲೆ ಯಾವುದೆಂದು ಗುರುತಿಸಬಹುದೆನ್ನಿಸುತ್ತದೆ?
ಇಂದಿನ ಆಲೋಚನಾ ಕ್ರಮವನ್ನು ನೋಡುವುದಾದರೆ ನನಗನ್ನಿಸುವಂತೆ ಮಹಿಳೆಯರ ದೃಷ್ಟಿಯಿಂದ ಎಲ್ಲವನ್ನೂ ನೋಡುವ ಪ್ರಯತ್ನಗಳಾಗಿವೆ. ಹಿಂದೆ ವರ್ಣ ವರ್ಗಕ್ಕೆ ಕೊಡುವ ಪ್ರಾಮುಖ್ಯತೆಯನ್ನು ಲಿಂಗಕ್ಕೆ ಕೊಡುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಬೇರೆ ಚಳವಳಿಗಳು ಸ್ಥಗಿತಗೊಂಡಿದ್ದರೂ ಸಹ ಹೆಣ್ಣುಗಳ ಬೆಳವಣಿಗೆಯ ಹುಡುಕಾಟ ಹಿಂದೆಂದಿಗಿಂತ ಹೆಚ್ಚು. ಇದಕ್ಕೆ ಕಾರಣ ಮಹಿಳೆಯರು ಹೆಚ್ಚು ಬರೆಯುವುದು ಒಂದಾದರೆ ಇತರರು ಬರೆದಾಗಲೂ ಸ್ತ್ರೀಕೇಂದ್ರಿತವಾಗಿ ಬರೆಯುತ್ತಿರುವುದು ಇನ್ನೊಂದು. ಕೆಲವೊಮ್ಮೆ ಸ್ರೀವಾದಿ ಚಿಂತನೆಗಳ ನೆರಳೂ ಇರುತ್ತದೆ.
ಕನ್ನಡದಲ್ಲಿ ಸ್ತ್ರೀವಾದಿ ಚಿಂತನೆಗಳ ಸ್ವರೂಪವೇನು?
ಸ್ತ್ರೀವಾದ ಎನ್ನುವುದು ಎಲ್ಲೆಡೆ ಒಂದೇ ತರ ಅಲ್ಲ. ಬಹಳಷ್ಟು ಕವಲುಗಳಿವೆ. ಉದಾಹರಣೆಗೆ ಸ್ತ್ರೀತ್ವ ಎಂದರೆ ಏನು ಎಂಬುದರ ಬಗ್ಗಯೇ ಬಹಳ ವ್ಯಾಖ್ಯಾನಗಳಿವೆ. ಅದೊಂದು ಬಿಡಿಸಿಕೊಳ್ಳಲಾಗದ ಬಂಧನ ಎನ್ನುವಂತೆಯೇ ಅದು ಹೊರಗಿನಿಂದ ಹೇರಿರುವ ರಚನೆ ಎಂಬಂತಹ; ಹುಟ್ಟಿನಿಂದ ಮಹಿಳೆಯಾಗಿರುವುದಿಲ್ಲ, ಬದಲಾಗಿ ಆಕೆಯನ್ನು ಮಾಡಲಾಗುತ್ತದೆ ಎಂಬ ವಾದವಿರುವಂತೆಯೇ ’ಹುಟ್ಟಿನಿಂದಲೇ ಆಕೆ ಮಹಿಳೆ’ ಎಂಬ ವಾದವೂ ಇದೆ. ನಮ್ಮಲ್ಲಿ ನೋಡಿದರೆ ಹಳ್ಳಿಯ ಹೆಣ್ಣುಮಕ್ಕಳು ರೂಪಿಸಿಕೊಳ್ಳುವ ಸ್ತ್ರೀವಾದಕ್ಕೂ ನಗರ ಮಧ್ಯಮ ವರ್ಗದ ಹೆಣ್ಣುಮಕ್ಕಳು ರೂಪಿಸಿಕೊಳ್ಳುವ ಸ್ತ್ರೀವಾದಕ್ಕೂ ವ್ಯತ್ಯಾಸಗಳಿರುತ್ತವೆ. ಹಳ್ಳಿಯೊಳಗೆಯೇ ಇರುವ ಜಮೀನ್ದಾರರ ಮನೆಯ ಹೆಣ್ಣುಮಕ್ಕಳು ರೂಪಿಸಿಕೊಳ್ಳುವ ಸ್ತ್ರೀವಾದಕ್ಕೂ ದಲಿತ ಭೂರಹಿತ ಕೂಲಿಕಾರ್ಮಿಕರ ಹೆಣ್ಣು ಮಕ್ಕಳು ರೂಪಿಸಿಕೊಳ್ಳುವ ಸ್ತ್ರೀವಾದಕ್ಕೂ ಭಿನ್ನತೆಗಳಿವೆ. ಲಿಂಗದ ಪ್ರಶ್ನೆ ತೆಗೆದುಕೊಂಡಾಗ ವರ್ಗ ವರ್ಣಗಳಿಗನುಸಾರವಾಗಿ ಭಿನ್ನತೆಯೆದುರಾಗುತ್ತದೆ. ಜಾತಿ ಕುರಿತು ಮಾತನಾಡುವಾಗ ವರ್ಗ, ಲಿಂಗಗಳನ್ನು ಮರೆಯಲಾಗುವುದಿಲ್ಲ. ಹಾಗೆಯೇ ವರ್ಗದ ಪ್ರಶ್ನೆ ತೆಗೆದುಕೊಂಡಾಗ ಜಾತಿ, ಲಿಂಗಗಳನ್ನು ಮರೆಯುವಂತಿಲ್ಲ. ಈ ಎಲ್ಲವನ್ನೂ ಸೇರಿಕೊಂಡೇ ಇರುತ್ತದೆ.
ಸಾಹಿತ್ಯದಲ್ಲಿ ಇಂದು ಭಿನ್ನ ಬಗೆಯ ತಾತ್ವಿಕತೆಗಳು ಕೆಲಸ ಮಾಡುತ್ತಿರುವ ಸ್ವರೂಪವೇನು?
ನಮ್ಮ ಚಿಂತನೆಗಳಲ್ಲಿ ಹಳ್ಳಿಗಳಿಂದ ಬಂದವರು ಮತ್ತು ಹಳ್ಳಿಗಳಲ್ಲೇ ಇರುವವರು ನೋಡುವುದಕ್ಕೂ ಪಟ್ಟಣಗಳಲ್ಲೇ ಇರುವವರು ನೊಡುವುದಕ್ಕೂ ವ್ಯತ್ಯಾಸಗಳಿರುವುದನ್ನು ಕಾಣಬಹುದು. ಅದನ್ನು ಯಥಾಸ್ಥಿತಿವಾದ ಮತ್ತು ಸುಧಾರಣಾವಾದ ಎನ್ನಬಹುದು. ಪರಿಭಾಷೆಯಲ್ಲಿ ಪೋಸ್ಟ್ ಮಾಡರ್ನಿಸಂ ಅಥವಾ ನವ್ಯೋತ್ತರವಾದ ಎನ್ನುತ್ತೇವಲ್ಲ. ’ಶೋಷಣೆ ಎಂಬುದೇ ಇಲ್ಲ. ಶೋಷಣೆ ಅದನ್ನು ನೋಡುವುದರ ಮೇಲೆ ನಿಂತಿರುತ್ತದೆ’; ಒಂದು ಕಡೆಯಿಂದ ಶೋಷಣೆ ಎಂದು ಕಾಣುತ್ತದೆ, ಮತ್ತೊಂದು ಕಡೆ ಶೋಷಣೆ ಎಂದು ಕಾಣುವುದಿಲ್ಲ’, ಇತ್ಯಾದಿ ವಾದಗಳು ಮೊದಲು ಹುಟ್ಟಿಕೊಂಡಿದ್ದು ಅಮೆರಿಕದಲ್ಲಿ. ಯಾಕಂದರೆ ಅಮೆರಿಕದವರಿಗೆ ತಾವು ಬದುಕುತ್ತಿರುವ ಬಂಡವಾಳಶಾಹಿ ಕ್ರಮವನ್ನು ನಾಚಿಕೆಯಿಲ್ಲದೆ ಸಮರ್ಥಿಸಿಕೊಳ್ಳಲು ಒಂದು ಥಿಯರಿ ಬೇಕಾಗಿತ್ತು. ಅವರು ಆ ಥಿಯರಿಯನ್ನು ಹುಟ್ಟಿಸಿಕೊಂಡೊಡನೇ ಇಲ್ಲಿನವರೂ ಅದೇ ಬಗೆಯ ವಾದಗಳನ್ನು ಅನುಕರಿಸಲು ಶುರುಮಾಡಿದರು. ಈ ನವ್ಯೋತ್ತರವಾದದ ತಾತ್ವಿಕತೆಯೇ ಯಥಾಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗುವುದು ಎಂದು ನನ್ನ ಅಭಿಪ್ರಾಯ. ವ್ಯವಸ್ಥೆಯಿಂದ ಯಾರು ಪ್ರಯೋಜನ ಪಡೆಯುತ್ತಿರುತ್ತಾರೆ ಅಂತವರು ವ್ಯವಸ್ಥೆಯ ಸಮರ್ಥನೆಯ ಪರವಾಗಿಯೇ ಇರುತ್ತಾರೆ. ಅನ್ಯಾಯಕ್ಕೊಳಗಾದವರು ವ್ಯವಸ್ಥೆಯನ್ನು ವಿರೋಧಿಸುತ್ತಾರೆ. ”ನಾವೆಲ್ಲರೂ ಶೋಷಕರೇ, ನಾವೆಲ್ಲರೂ ಶೋಷಿತರೇ” ಎಂಬ ಮಾತು ಮೇಲ್ನೋಟಕ್ಕೆ ಸಮಂಜಸ ಎನಿಸಿದರೂ ನಮಗಿಂತ ಹೆಚ್ಚಿನ ಶೋಷಣೆಗೊಳಗಾದ ಹೆಚ್ಚಿನ ಜನರಿರುತ್ತಾರೆ ಎಂಬ ತಿಳುವಳಿಕೆ ನಮಗಿರಬೇಕಾಗುತ್ತದೆ. ಹಾಗಿಲ್ಲದಿದ್ದಾಗ ”ನಾನೂ ಶೋಷಿತನೇ, ಭಿಕ್ಷೆ ಬೇಡುವವನೂ ಶೋಷಿತನೇ” ಎಂದುಕೊಳ್ಳಬೇಕಾಗುತ್ತದೆ. ಮಡೆಸ್ನಾನ, ಬೆತ್ತಲೆ ಪೂಜೆಯಂತವನ್ನು ಮಾನವೀಯ ನೆಲೆಯಲ್ಲಿ ತಪ್ಪು ಎಂದು ಹೇಳಲು ಸಾಧ್ಯವಾಗುವುದಿಲ್ಲವಾದರೆ ಅತ್ಯಂತ ಕ್ರೂರ ಮನಸ್ಥಿತಿ ಅದು. ಅದಕ್ಕೆ ಸೈದ್ಧಾಂತಿಕ ವಾಗ್ವಾದಗಳೇನೂ ಬೇಕಿಲ್ಲ.
ವಿಮರ್ಶಾ ಸಾಹಿತ್ಯದ ಪ್ರ್ರಾಮುಖ್ಯತೆ, ಪ್ರಯೋಜನ ಮತ್ತದು ಇಂದು ಪಡೆದಿರುವ ಸ್ವರೂಪದ ಕುರಿತು ಹೇಳಿ. ವಿಮರ್ಶಾ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಇಂದು ಹಿಂದಿಗಿಂತ ಕಡಿಮೆಯಾಗಿದೆ ಯಾಕೆ?
ವಿಮರ್ಶೆಯಿಂದ ಯಾವ ರೀತಿಯ ಪ್ರಯೋಜನ ಎನ್ನುವುದು ಅನೇಕ ಸಲ ಓದುವವರ ಪೂರ್ವಸಿದ್ಧತೆಯನ್ನೂ ಅವಲಂಬಿಸಿರುತ್ತದೆ. ಅನೇಕ ಸಲ ನಾವು ಸಾಹಿತ್ಯ ಓದಿದರೆ ಸಾಕು ಎನ್ನುವ ಅಭಿಪ್ರ್ರಾಯ ಓದುಗರಲ್ಲಿರುತ್ತದೆ. ಮತ್ತದು ತನ್ನಷ್ಟಕ್ಕೆ ತಾನು ತಪ್ಪಲ್ಲ. ವಿಮರ್ಶೆ ಓದಿಯೇ ಎಲ್ಲರೂ ತಯಾರಾಗಬೇಕೆಂದಲ್ಲ. ನಾವು ಸಾಹಿತ್ಯ ವಿದ್ಯಾರ್ಥಿಗಳಾದದ್ದು ಸಾಹಿತ್ಯ ಅಧ್ಯಾಪನದಿಂದಲೇ ಹೊರತು ವಿಮರ್ಶೆಯ ಓದಿನಿಂದಲ್ಲ. ತರಗತಿಯ ಪಾಠದ ಒಂದು ವಿಸ್ತರಣೆಯಾಗಿ ಸಹ ನಾನು ಬರೆಯುವ ವಿಮರ್ಶೆ ಇರುತ್ತದೆ ಎಂದು ಭಾವಿಸುತ್ತೇನೆ. ಅಂದರೆ ತರಗತಿಯ ವಿದ್ಯಾರ್ಥಿಗಳಿಗೆ ಅರ್ಥವಾಗದಿರುವುದನ್ನು ಬರೆಯುವುದು ತಪ್ಪು. ವಿಮರ್ಶೆಯ ಓದುಗ ಮತ್ತು ಬರೆಯುವವನಿಗೆ ಪರಿಭಾಷೆಯ ಗೋಡೆಯುಂಟಾಗಿದೆ. ವಿಮರ್ಷೆ ಜನಕ್ಕೆ ತಲುಪಬೇಕು ಎಂಬ ಉದ್ದೇಶವಿಲ್ಲದಿದ್ದರೆ ಅದು ಸೀಮಿತ ಮಟ್ಟದಲ್ಲಿ ತನ್ನ ಕೆಲಸ ಮಾಡುತ್ತದೆ. ಹಿಂದೆಲ್ಲಾ ವಿಮರ್ಶೆ ಎಂದರೆ ಸಾಹಿತಿ ಬರೆದ ಸಾಹಿತ್ಯದ ಕುರಿತು ಬರೆದದ್ದು ಎಂದು ಪರಿಭಾವಿಸಲಾಗುತ್ತಿತ್ತು. ಆದರೆ ಈಗ ವಿಮರ್ಷೆ ಕೂಡ ಸಂಸ್ಕೃತಿ ಸಮಾಜಗಳನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಒಂದು ಉಪಕರಣ ಎಂದು ಅರ್ಥ ಪಡೆದುಕೊಂಡಿದೆ. ಹಿಂದೆ ಯಾವುದೋ ಒಬ್ಬ ಸಾಹಿತಿಯ ಕೃತಿಯನ್ನು ಒಬ್ಬರು ಶ್ರೇಷ್ಠವಾದದ್ದು ಎಂದು ಕರೆದರೆ ಇಡೀ ಸಾಹಿತ್ಯಕ ಸಮುದಾಯ ಅದನ್ನು ಒಪ್ಪಿಕೊಂಡು ಬಿಡುತ್ತಿತ್ತು. ಯಾಕೆಂದರೆ ಎಲ್ಲಾ ಒಂದೇ ಹಿನ್ನೆಲೆಯಿಂದ ಬಂದವರಾಗಿರುತ್ತಿದ್ದರು. ಇಂದು ಬಹುಮುಖಿ ಹಿನ್ನೆಲೆಯ ಓದುಗರು, ವಿಮರ್ಶಕರಿರುವಾಗ ಒಂದೇ ಕೃತಿಯ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಬಹುದು. ಈ ಭಿನ್ನಮತ ಎನ್ನುವುದು ಸಂಸ್ಕೃತಿ-ಸಮಾಜಗಳಲ್ಲಿ ಈಗಾಗಲೇ ಇರುವ ಭಿನ್ನಮತಕ್ಕೆ ಹಿಡಿದ ಕನ್ನಡಿಯೇ ಹೊರತು ವಿಮರ್ಶಕನಾದವನು ಹೊಸದಾಗಿ ಸೃಷ್ಟಿಸುವಂತದ್ದಲ್ಲ. ಹೀಗಾಗಿ ಸಾಹಿತ್ಯ ಕೃತಿಯ ಯೋಗ್ಯತೆಯ ಬಗ್ಗೆ ಸರ್ವಾನುಮತವಿರಬೇಕೆಂಬ ತಿಳುವಳಿಕೆ ಕಡಿಮೆಯಾಗಿದೆ. ಓದುಗರಾದವರು ತಮ್ಮ ಹಿನ್ನೆಲೆ ಅಭಿಪ್ರಾಯಗಳಿಗೆ ಅನುಗುಣವಾದ ವಿಮರ್ಶೆಯನ್ನೇ ಓದುತ್ತಾ ಹೋದಾಗ ವಿಮರ್ಶೆಗಳ ನಡುವೆಯೇ ಗೋಡೆ ಸೃಷ್ಟಿಯಾಗುತ್ತದೆ. ವಿಮರ್ಶಕನಾದವನೂ ತಾನೂ ವರ್ಣ ವರ್ಗದ ಲಿಂಗದ ಹಿನ್ನೆಲೆಯಿಂದ ಬಂದವನಾದ್ದರಿಂದ ಅದರಿಂದ ಬಿಡಿಸಿಕೊಳ್ಳುವುದು ಕಷ್ಟ. ಆದರೆ ಅವನ್ನು ಮೀರುವ ಪ್ರಯತ್ನ ಆತನಿಂದ ನಡೆದರೆ ಆತನಿಂದ ಆರೋಗ್ಯಕರವಾದ ಬರವಣಿಗೆ ಸಾಧ್ಯ. ಆದರೆ ಸಾಹಿತ್ಯದ ಬಗೆಗಿನ ತಿಳುವಳಿಕೆಯನ್ನು ಪರಿಭಾಷೆಯ ಆಚೆಗೆ ಓದುತ್ತಿರುವವರು ಬರೆಯುತ್ತಿರುವವರು ಬಹಳಷ್ಟು ಜನ ಇದ್ದಾರೆ. ಇಂದು ಬೌದ್ಧಿಕತೆಯ ಬಗ್ಗೆಯೇ ಒಂದು ವಿಚಿತ್ರವಾದ ವಿರೋಧವಿದೆ. ನನಗೆ ಭಾವನೆ, ಅನುಭವ ಮತ್ತು ಸ್ವಂತ ವಿಚಾರಗಳಲ್ಲಿ ಆಸಕ್ತಿ ಇದೆಯೇ ಹೊರತು ಹೊರಗೆ ಇರಬಹುದಾದ ತಿಳಿವಳಿಕೆಯಿಂದ ಬೆಳಕನ್ನು ಪಡೆಯಲು ತಯಾರಾಗಿಲ್ಲ ಎನ್ನುವ ಪ್ರವೃತ್ತಿ ಇದು. ಇಷ್ಟರ ನಡುವೆಯೂ ನಮ್ಮ ಕಾಲದ ಸಮಾಜ ಚಿಂತನೆ, ಸಂಸ್ಕೃತಿ ಚಿಂತನೆ ಹಿಂದೆಂದಿಗಿಂತ ಹೆಚ್ಚು ಆರೋಗ್ಯಕರವಾಗಿ ಇದೆ ಎಂದು ಖಂಡಿತಾ ಹೇಳಬಹದು. ಹಿಂದಿನಂತೆ ಏಕಮುಖಿ ಚಿಂತನೆಯ ಬದಲಾಗಿ ಇಂದು ಬಹುಮುಖಿ ಚಿಂತನೆ ಇದೆ.
ನಮ್ಮಲ್ಲಿರುವ ವಿಭಿನ್ನ ಸಾಂಸ್ಕೃತಿಕ ಚಿಂತನೆಗಳ ಕುರಿತು ಏನು ಹೇಳುತ್ತೀರಿ?
ಸಂಸ್ಕೃತಿ ಕುರಿತ ಚರ್ಚೆಗಳು ನಿರ್ವಾತದಲ್ಲಿ ಹುಟ್ಟುವುದಿಲ್ಲ. ಪ್ರತಿಯೊಂದು ಚಿಂತನೆಗೂ ವರ್ಗ ವರ್ಣ ಲಿಂಗಗಳ ಹಿನ್ನಲೆ ಇದ್ದೇ ಇರುತ್ತದೆ. ಸಂಸ್ಕೃತಿಯ ಬಗ್ಗೆ ಸರ್ವಾನುಮತ ಸಹಮತ ಇರುವ ಕಾಲ ಇದಲ್ಲ. ಇರಬೇಕಾಗಿಯೂ ಇಲ್ಲ. ಹಿಂದೆಲ್ಲ ಎಲ್ಲರೂ ಒಂದೇ ಹಿನ್ನೆಲೆಯಿಂದ ಬಂದವರಾಗಿರುತ್ತಿದ್ದರಿಂದ ಒಬ್ಬರ ಚಿಂತನೆಗಳೇ ಮತ್ತೊಬ್ಬರದಾಗಿರುತ್ತಿತ್ತು. ಮಂಟೇಸ್ವಾಮಿ ಕಾವ್ಯ, ಮಲೆಮಹದೇಶ್ವರ ಕಾವ್ಯವನ್ನು ನಮ್ಮ ಸಂಸ್ಕೃತಿ ಚಿಂತನೆ ಯಾವತ್ತೂ ಒಳಗಿಟ್ಟಿರಲಿಲ್ಲ. ಜಾನಪದ ಸಾಹಿತ್ಯ ಊರಿಗೆ ಬಂದರೂ ಕೇರಿಗೆ ಬಂದಿರಲಿಲ್ಲ. ಮೌಖಿಕ ಸಾಹಿತ್ಯ ಎಂದೊಡನೆ ಕೆರೆಗೆ ಹಾರ, ಗೋವಿನ ಹಾಡು ಇಂತಹ ನಿರಪಾಯಕಾರಿಯಾದವನ್ನು ಇಟ್ಟುಕೊಂಡು ಮಾತನಾಡುತ್ತಿದ್ದರು. ದೊಡ್ಡ ಸಂಸ್ಕೃತಿಯ ಭಾಗವನ್ನೇ ಹೊರಗಿಟ್ಟು ಇದೇ ಸಂಸ್ಕೃತಿಯ ಸಾರ ಎಂದು ಮಂಡಿಸಲಾಗುತ್ತಿತ್ತು. ಇದನ್ನು ಸುಳ್ಳುಮಾಡುವ ನಿಟ್ಟಿನಲ್ಲಿ ಪ್ರಯತ್ನಗಳಾಗಿದ್ದು ಇತ್ತೀಚೆಗೆ ಎನ್ನಬಹುದು.
ಈ ಪರಿವರ್ತನೆ ಉಂಟಾದದ್ದು ಹೇಗೆನ್ನುತ್ತೀರಿ?
ಸಮಾಜದ ವಿಷಮತೆಗಳನ್ನು ಪ್ರಶ್ನಿಸಿದಾಗಷ್ಟೇ ಸಾಹಿತ್ಯ-ಸಂಸ್ಕೃತಿ ಚಿಂತನೆಗಳು ಶಕ್ತಿ ಪಡೆದುಕೊಂಡಿದ್ದು ಎಂಬುದನ್ನು ನೋಡಬಹುದು. ಸಿದ್ದಲಿಂಗಯ್ಯ ಅವರ ‘ಇಕ್ರಲಾ ವದೀರ್ಲಾ’ದಂತಹ ಸಾಹಿತ್ಯ ಬಂದಾಗ, ಮತ್ತೊಬ್ಬ ಲೇಖಕಿ ‘ನಿಮ್ಮ ಚರಿತ್ರೆಯಲ್ಲಿ ನಮಗೆ ಸ್ಥಾನವಿಲ್ಲ’ ಎಂದಾಗ, ‘ಒಲೆ ಬದಲಾದರೂ ಉರಿ ಬದಲಾಗಲಿಲ್ಲ’ ಎಂದಾಗ ಸಮಾಜ ಆಘಾತಕ್ಕೊಳಗಾಗುತ್ತದೆ. ಬಹುದೀರ್ಘ ಕಾಲದಿಂದ ಕುವೆಂಪು ಬರೆದಿದ್ದರೂ ಅವರ ಸಾಹಿತ್ಯ ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳಲ್ಲೇ ಯಾಕೆ ಹೆಚ್ಚು ಮುನ್ನೆಲೆಗೆ ಬಂದಿತೆಂದರೆ ಸಮಾಜ ಬದಲಾಯಿತೆಂಬ ಕಾರಣಕ್ಕೆ. ಅವರ ಶೂದ್ರತಪಸ್ವಿ, ಬೆರಳ್‌ಗೆ ಕೊರಳ್, ಜಲಗಾರದಂತಹ ಕೃತಿಗಳು ಈ ದಿನಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವುದನ್ನು ಈ ಹಿನ್ನೆಲೆಯಲ್ಲಿ ನೋಡಬಹುದು. ವಚನಕಾರರ ವಚನಗಳನ್ನು ನವ್ಯರು, ನವೋದಯದವರು, ಬಂಡಾಯದವರು ನೋಡಿದ ರೀತಿಗಳಲ್ಲಿ ಭಿನ್ನತೆಯಿದೆ. ಇಂದಿನವರು ನೋಡುತ್ತಿರುವ ರೀತಿಯೂ ಭಿನ್ನ. ಒಂದು ಸಾಹಿತ್ಯಕೃತಿಯನ್ನು ಸ್ವೀಕರಿಸುವ ಸಮಾಜದ ಒಳಗಡೆ ಆಗುವ ಬದಲಾವಣೆಗಳೂ ಸಹ ಆ ಕೃತಿಯನ್ನು ನೋಡುವ ನೋಟದಲ್ಲಿ ಬದಲಾವಣೆಯುಂಟು ಮಾಡುತ್ತವೆ ಎಂಬುದು ಮುಖ್ಯ. ಅಂಬೇಡ್ಕರ್ ಅವರಿಗೆ ಇಂದು ಇರುವ ಪ್ರಾಮುಖ್ಯತೆಯೇ ಬೇರೆ. ಮಹಾತ್ಮಾ ಗಾಂಧಿಯ ನಂತರ ಅತ್ಯಂತ ಮುಖ್ಯರಾದ ಅಥವಾ ಅಷ್ಟೇ ಮುಖ್ಯರಾದ ಚಿಂತಕರು ಎಂದು ಅವರನ್ನು ಗುರುತಿಸುವ ಈ ಬದಲಾವಣೆಯನ್ನು ನೋಡಿ. ಅದೇ ರೀತಿ ಆಕೃತಿ-ಆಶಯಗಳೊಂದಿಗೆ ಅದರ ಭಾಷೆಯೂ ಮುಖ್ಯವಾಗುತ್ತದೆ. ಸಂಸ್ಕೃತಿ ಚಿಂತನೆ ಕಲಾತ್ಮಕ ಆಕೃತಿಗಳೆಡೆಯೂ ಗಮನ ನೀಡಬೇಕು.
ಸಾಹಿತಿಗಳಿಗಳಾದವರು ಯಾವುದಕ್ಕೆ ನಿಷ್ಟರಾಗಿರಬೇಕು? ಸಮಾಜಕ್ಕೋ, ಅನುಭವಕ್ಕೋ?
ಸಮಾಜಕ್ಕೆ ಬದ್ಧವಾಗಿ ಬರೆಯುವುದು ಮತ್ತು ಅನುಭವಕ್ಕೆ ಅನುಭವಕ್ಕೆ ಬರೆಯುವುದು ಪರಸ್ಪರ ವಿರೋಧವಾಗಬೇಕಿಲ್ಲ. ಎಲ್ಲ ಅನುಭವಗಳಿಗೂ ಸಾಮಾಜಿಕ ನೆಲೆಗಟ್ಟಿರರುತ್ತದೆ. ಅನುಭವ ಎನ್ನುವುದು ಸಮಾಜದ ತಿಳಿವಳಿಕೆ ಎಷ್ಟೆಷ್ಟು ವಿಸ್ತಾರವಾಗಿರುತ್ತದೆ ಅದನ್ನು ಅವಲಂಬಿಸಿರುತ್ತದೆ. ಅನುಭವ ಎನ್ನುವುದು ನಮ್ಮ ಹಿಂದಿನ ಮುಖ್ಯಮಂತ್ರಿಗಳ ಗ್ರಾಮವಾಸದ ತರದ್ದಲ್ಲ. ಅದು ನಮ್ಮ ಸಂವೇದನೆಯ ಕ್ರಮದ ಪ್ರಶ್ನೆ. ಸಾಹಿತ್ಯ ರಚನೆಯ ಕಾಲದಲ್ಲಿರಬಹುದಾದ ತಿಳಿವಳಿಕೆಗೂ ಸಾಹಿತಿಯಾದವನು ಹೊರಗಡೆ ನಡೆಸುವ ಜೀವನಕ್ಕೂ ಡಿಕ್ಕಿಯಾಗದಂತೆ ನಡೆಯಬೇಕಾದ ಎಚ್ಚರ ಇರುತ್ತದೆ. ಪಾಬ್ಲೋ ನೆರೂಡ ದೊಡ್ಡ ಹೋರಾಟಗಾರ ಮತ್ತು ದೊಡ್ಡ ಸಾಹಿತಿ. ಇಲ್ಲೂ ಬುದ್ಧಿಪೂರ್ವಕವಾಗಿ ಆ ಬಗೆಯ ಬದ್ಧತೆಯನ್ನು ಹುಡುಕಿಕೊಂಡು ಹೋದ ಲಂಕೇಶ್‌ರಂತವರಿದ್ದಾರೆ. ಅವರು ಹಾಗೆ ಹೋಗದಿದ್ದರೆ ಉಲ್ಲಂಘನೆಯಂತಹ ಕೃತಿ ಬರುತ್ತಿತ್ತೇ? ಅದೇ ರೀತಿ ಕೆಲವು ನಮ್ಮಲ್ಲಿರುವ ಸಂವೇದನೆಯೇ ಅದ್ಭುತವಾದುದನ್ನು ಸೃಷ್ಟಿಸಬಹುದು. ಕುವೆಂಪು ಅವರಲ್ಲಿರುವ ಸಂವೇದನೆಯೇ ಗುತ್ತಿ, ಐತ, ತಿಮ್ಮಿಯನ್ನೂ ಬಾಡುಗಳ್ಳ ಸೋಮನನ್ನು ಸೃಷ್ಟಿಸಿತ್ತಲ್ಲವೇ?
ನಮ್ಮ ಸಾಹಿತಿ ಬುದ್ಧಿಜೀವಿಗಳಿಗೆ ಇಂದಿರುವ ರಾಜಕೀಯ ಆಯ್ಕೆಗಳೇನು?
ಇಂದು ಖಚಿತವಾದ ಸಾಮಾಜಿಕ ನಿಲುವುಗಳಿರುವಂತೆಯೇ ಖಚಿತವಾದ ರಾಜಕೀಯ ನಿಲುವುಗಳಿವೆಯೇ ಎಂದು ಒಂದು ಪ್ರಶ್ನೆ. ರಾಜಕೀಯ ಆಯ್ಕೆಗಳಲ್ಲಿ ಗೊಂದಲವಿರುವ ಹಾಗೆ ಕಾಣುತ್ತಿದೆ. ನಮ್ಮ ಕಾಲದ ಬುದ್ಧಿಜೀವಿ ಕಲಾವಿದರಿಗೆ ಇರುವ ದೊಡ್ಡ ಗೊಂದಲವೇನೆಂದರೆ ಸಾಮಾಜಿಕ ನಿಲುವುಗಳಿಗೆ ಸರಿಸಮಾನದ ರಾಜಕೀಯ ನಿಲುವುಗಳನ್ನು ರೂಪಿಸಿಕೊಳ್ಳುವಲ್ಲಿನ ಅಸಹಾಯಕತೆ. ಜನಪರ ಎಂದು ಸಾಮಾನ್ಯವಾಗಿ ಹೇಳುತ್ತೇವೆ. ಜನಪರ ಮತ್ತು ಜನವಿರೋಧಿಯಾದದ್ದನ್ನು ಗುರುತಿಸುವುದು ಸುಲಭ. ಆದರೆ ಆ ಸನ್ನಿವೇಶವನ್ನು ಸರಿಪಡಿಸಬೇಕಾದ ದಾರಿಗಳ ಪ್ರಶ್ನೆ ಬಂದಾಗ ಯಾವಾಗಲೂ ರಾಜಕೀಯ ಆಯ್ಕೆಯೇ ಮುಖ್ಯವಾಗಿರುತ್ತದೆ. ಈ ರಾಜಕೀಯ ಆಯ್ಕೆಗಳ ಬಗ್ಗೆ ಗೊಂದಲ ನಮ್ಮ ಕಾಲದ ಅನೇಕ ಬುದ್ಧಿಜೀವಿಗಳಲ್ಲಿ ಕಾಣುತ್ತಿದೆ. ಗೊಂದಲ ಎನ್ನುವುದಕ್ಕಿಂತ ಎಷ್ಟೋ ಸಲ ಅಸಹನೆ. ಸಮಾಜವಾದದ ಬಗ್ಗೆ ಪದೇ ಪದೇ ಮಾತನಾಡುವವರಿಗೆ ಕಮ್ಯುನಿಸಂ ಬಗ್ಗೆ ಅನಾಸಕ್ತಿ, ಕೋಪ. ಹಾಗೆಯೇ ಕಮ್ಯುನಿಷ್ಟರಲ್ಲಿ ಸಿಪಿಐನವರಿಗೆ ಸಿಪಿಎಂನವರ ಮೇಲಿರುವ ಕೋಪ ಕಾಂಗ್ರೆಸ್‌ನವರ ಮೇಲಿರುವುದಿಲ್ಲ. ಈಗ ತಾನೇ ಸಾಮಾಜಿಕ ಚಿಂತನೆಯಲ್ಲಿ ತೊಡಗಿರುವ ಯುವಕನೊಬ್ಬನಿಗೆ ತನ್ನ ರಾಜಕೀಯ ಆಯ್ಕೆಯ ಬಗ್ಗೆ ದೊಡ್ಡ ಗೊಂದಲ ಎದುರಾಗುತ್ತದೆ.
ಹಲವಾರು ಜನಪರ ಚಳವಳಿಗಳಿವೆಯಲ್ಲ?
ಹೌದು ಬಹಳ ಚಳವಳಿಗಳಿವೆ. ಯಾವ ಚಳವಳಿಯಲ್ಲಿ ಆತ ಗುರುತಿಸಿಕೊಳ್ಳಬೇಕು ಎಂಬ ಬಗ್ಗೆಯೂ ಗೊಂದಲವಾಗುತ್ತದೆ. ಇಂದಿನ ಸಾಮಾನ್ಯ ಯುವಕರಿಗೆ ಚಳವಳಿಗಳ ಬಗ್ಗೆ ಸಹಮತವೂ ಇರುತ್ತದೆ ಭಿನ್ನಮತವೂ ಇರುತ್ತದೆ. ಆದರೆ ಚಳವಳಿಗಳಲ್ಲಿರುವವರು ಮಾತ್ರ ತಮ್ಮ ಕುರಿತ ಸಣ್ಣ ಭಿನ್ನಮತವನ್ನೂ ಸಹಿಸಲು ಸಿದ್ಧರಿರುವುದಿಲ್ಲ. ಭಿನ್ನಮತದ ಬಗ್ಗೆ ಆರೋಗ್ಯಕರವಾದ ಗೌರವ ಇಲ್ಲದಿದ್ದಾಗ ಪಕ್ಷವಾಗಲೀ ಚಳವಳಿಯಾಲೀ ಸೆರೆಮನೆಯಗುತ್ತದೆ. ನಮ್ಮ ಹಳ್ಳಿಗಳ ವಾಸ್ತವತೆಯಲ್ಲಿ ರೈತಚಳವಳಿ ಮತ್ತು ದಲಿತ ಚಳವಳಿಗಳ ನಡುವೆ ಸಂಘರ್ಷ ಸಾಧ್ಯವೇ ಹೊರತು ಸಮಾನತೆ ಸಾಧ್ಯವಿಲ್ಲ. ರೈತ ಚಳವಳಿ ಈ ಪ್ರಶ್ನೆಯನ್ನು ಸರಿಯಾದ ರೀತಿಯಲ್ಲಿ ಎದುರುಗೊಳ್ಳಲಿಲ್ಲ. ದಲಿತ ರೈತಚಳವಳಿಗಳನ್ನು ಒಟ್ಟಿಗೆ ತರುವ ಪ್ರಯತ್ನ ಮೂರ್ಖತನದ್ದಾಗಿತ್ತೆನಿಸುತ್ತದೆ. ಶೋಷಿತರು ಶೋಷಕರ ನಡುವೆ ಅದು ಸಾಧ್ಯವಾಗುವುದಾದರೂ ಹೇಗೆ? ಇತ್ತೀಚಿನ ವರ್ಷಗಳ ಮತ್ತೊಂದು ಚರ್ಚೆ ಗಮನಿಸಿ. ದೊಡ್ಡ ದೊಡ್ಡ ಬುದ್ಧಿಜೀವಿಗಳು ’ಹಿಂಸೆ ಬೇಡ’ ಎಂದು ಹೇಳುತ್ತಿದ್ದಾರೆ. ಹಿಂಸೆ ಎಂದಾಕ್ಷಣ ಅವರ ಮನಸ್ಸಿನಲ್ಲಿರುವುದು ಯಾವ ಹಿಂಸೆ? ಅದು ನಕ್ಸಲೀಯರ ಹಿಂಸೆ ಅಥವಾ ಟೆರರಿಸ್ಟ್‌ಗಳ ಹಿಂಸೆ. ಪ್ರಭುತ್ವ ನಡೆಸುವ ಹಿಂಸೆಯನ್ನು ಹಿಂಸೆ ಎಂದು ನೋಡುತ್ತೇವಾ? ಹಿಂಸೆ ಎಂದಾಕ್ಷಣ ರಕ್ತಪಾತವೇ ಆಗಬೇಕಾ? ರಕ್ತಪಾತವಾಗದಿರುವ ಹಿಂಸೆ ಹಿಂಸೆಯಲ್ಲವೋ? ಕಾನೂನುಗಳಿಂದಲೇ ಮಾಡಲಾಗಿರುವ ಹಿಂಸೆಯ ಕುರಿತು ಯಾವಾಗ ಎಲ್ಲಿ ಮಾತನಾಡಿದ್ದೇವೆ? ಕಾನೂನುಗಳನ್ನು ಮುರಿಯುವುದಕ್ಕೆ ಅವಕಾಶಮಾಡಿಕೊಡುವ ಒಂದು ವ್ಯವಸ್ಥೆಯೇ ಕಾನೂನು ಭಂಗ ಮಾಡುವವರನ್ನು ರಕ್ಷಿಸುವ ಮೂಲಕ ಹಿಂಸೆಗೆ ಅವಕಾಶ ಮಾಡುತ್ತದೆ. ಹೀಗಿರುವಾಗ ಹಿಂಸೆ ಎಂದರೆ ಯಾವುದು ಎಂಬುದೇ ನಿಜವಾದ ಪ್ರಶ್ನೆ. ಇನ್ನೂರು ರೂಪಾಯಿ ಕೊಡಲಾಗಲಿಲ್ಲವೆಂದು ತಂದೆಯೊಬ್ಬ ಮಗುವನ್ನು ಐಸಿಯುನಲ್ಲೇ ಬಿಟ್ಟು ಅದು ಪ್ರಾಣ ಕಳೆದುಕೊಂಡಿತು. ಒಬ್ಬ ವ್ಯಕ್ತಿ ಇನ್ನೂರು ರೂಪಾಯಿ ಹೊಂದಿಸಲಾರದ ಸ್ಥಿತಿಯನ್ನು ವ್ಯವಸ್ಥೆ ನಿರ್ಮಿಸಿದೆ ಎಂದರೆ ಅದು ಹಿಂಸೆಯಲ್ಲವೇ? ಹೀಗಾಗಿ ಹಿಂಸೆಯ ಕುರಿತ ತಾತ್ವಿಕತೆಯಲ್ಲೇ ಭಿನ್ನಾಭಿಪ್ರಾಯಗಳಿವೆ.
ಪಶ್ಚಿಮದ ತಾತ್ವಿಕತೆ, ಚಿಂತನೆಗಳೊಂದಿಗೆ ನಮ್ಮ ಮುಖಾಮುಖಿ ಹೇಗಿದೆ ಎನ್ನುತ್ತೀರಿ?
ಇದು ಅರಗಿಸಿಕೊಳ್ಳುವಿಕೆ ಹಾಗೂ ಅನುಕರಣೆ ಎಂಬ ಎರಡು ಬಗೆಯಲ್ಲಿದೆ. ಅನುಕರಣೆ ಕುರುಡಾಗಿರುತ್ತದೆ. ಅರಗಿಸಿಕೊಳ್ಳುವುದು ಎಂದರೆ ಹೊರಗಿನ ಸರಿಯಾದುದನ್ನು ನಮ್ಮದಾಗಿಸಿಕೊಳ್ಳುವುದು. ಹಾಗೆಯೇ ಪಾಶ್ಚಾತ್ಯ ಚಿಂತನೆ ಕೇವಲ ಸಾಹಿತ್ಯ ಕೃತಿಯಲ್ಲಿರುವುದಿಲ್ಲ. ಪಾಶ್ಚಾತ್ಯ ಎನ್ನುವುದು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಮೊಬೈಲು, ವಾಚು, ಹೊಟೆಲ್, ಆಸ್ಪತ್ರೆ, ಔಷಧಿ ಎಲ್ಲವೂ ಪಶ್ಚಿಮದ್ದೇ ಅಲ್ಲವೇ? ಆಲೋಚನೆಯಲ್ಲಿ ನಮ್ಮ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಚಿಂತನೆಯಿರಬೇಕೆನ್ನುವುದು ನಿಜ. ಹಾಗೆಂದು ಪಾಶ್ಚಾತ್ಯವನ್ನು ಕಣ್ಣುಮುಚ್ಚಿಕೊಂಡು ಹೊರಗಿಡುವುದಾಗಲೀ ಹಾಗೇಯೇ ಕುರುಡಾಗಿ ಅನುಕರಣೆ ಮಾಡುವುದಾಗಲೀ ತಪ್ಪು. ಇಂದು ತಂತ್ರಜ್ಞಾನ ಮತ್ತು ವೈಜ್ಞಾನಿಕತೆಗಳು ಓದು ಬರಹದಾಚೆಗೂ ನಮ್ಮನ್ನು ಆವರಿಸಿರುವಂತವು. ಮೊಬೈಲ್ ಇಂಟರ್‌ನೆಟ್‌ಗಳು ನಮ್ಮ ಸ್ವಭಾವವನ್ನು ಬದಲಾವಣೆ ಮಾಡುತ್ತಿಲ್ಲವೇ. ಇಂದು ವ್ಯಾಪಾರವು ನಮ್ಮ ಬಹಿರಂಗವನ್ನು ಮಾತ್ರವಲ್ಲದೇ ಅಂತರಂಗವನ್ನೂ ಸಹ ’ಕರಪ್ಟ್’ ಮಾಡುತ್ತಿದೆ.
ಒಂದೆಡೆ ಪ್ರಭುತ್ವದ ನೀತಿಗಳು ಆಕ್ರಮಣಕಾರಿಯಾಗುತ್ತಿರುವ ಹೊತ್ತಿಗೆ ಅದಕ್ಕೆ ಸರಿಸಮನಾದ ಪ್ರತಿಕ್ರಿಯೆ ಬರುತ್ತಿಲ್ಲವಲ್ಲ?
ನಿಸ್ಸಂದೇಹವಾಗಿ ಇಂದು ಪ್ರಭುತ್ವದ ಸ್ವರೂಪ ಆಕ್ರಮಣಕಾರಿಯಾಗಿದೆ. ತಂತ್ರಜ್ಞಾನ ಹಣದ ಮೂಲಕ ಮತ್ತು ಇಡೀ ದೇಶವನ್ನು ನಿಯಂತ್ರಿಸಬಲ್ಲ ಶಕ್ತಿ ಅದರ ಬಳಿ ಇದೆ. ಇಂದು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಯಾರು ಯಾವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ? ಸರ್ಕಾರ ಎಂದರೆ ಅದೇ ಹುಲಿಯಲ್ಲ. ನಿಜವಾದ ಹುಲಿ ಸರ್ಕಾರದ ಹಿಂದಿನ ಬಂಡವಾಳಶಾಹಿಗಳು. ಸರ್ಕಾರವನ್ನು ಉಗುರಿನಂತೆ ಬಳಸಿಕೊಳ್ಳುತ್ತಿದದಾರಷ್ಟೆ. ಹೀಗಾಗಿಯೇ ಎಲ್ಲಾ ಚಳವಳಿಗಳನ್ನು ಬಗ್ಗುಬಡಿಯಲು ಇಂದು ಪ್ರಭುತ್ವಕ್ಕೆ ಸಾದ್ಯವಾಗಿದೆ. ವಿಚಿತ್ರವೆಂದರೆ ಇಂದು ಪ್ರಭುತ್ವದ ವಿರುದ್ಧ ಪ್ರತಿಭಟನೆ ಮಾಡಬೇಕಾದವರೂ ಅದರ ಕೈಯಲ್ಲೇ ಇರುವುದನ್ನು ನೊಡುತಿದ್ದೇವೆ. ಇಂದಿಗೂ ಅಂದಿಗೂ ನೂರಕ್ಕೆ ೯೦ಜನ ಪ್ರಭುತ್ವ ಸಾಕಿದ ಸಾಕುನಾಯಿಗಳಾಗಿಯೇ ಇರುತ್ತಾರೆ. ಇಂದು ಹೋರಾಟದ ಹಾಡುಗಳಿವೆ. ಅವನ್ನು ಸಾಹಿತ್ಯ ಎಂದು ಯಾರಾದರೂ ಪರಿಗಣಿಸಿದ್ದಾರಾ? ಲಕ್ಷಾಂತರ ಜನರನ್ನು ಮುಟ್ಟಿರುವ ಗದ್ದರ್ ಹಾಡುಗಳಿವೆ. ಅದನ್ನು ಸಾಹಿತ್ಯ ಎಂದು ಏಕೆ ಪರಿಗಣಿಸಲಾಗುವುದಿಲ್ಲ?
ಹಿಂದೆಲ್ಲಾ ಚಳವಳಿಗಳಿಗೆ ತಾತ್ವಿಕ ಶಕ್ತಿಯನ್ನು ನೀಡುತ್ತಿದ್ದ ವಿಶ್ವವಿದ್ಯಾನಿಲಯಗಳು ಇಂದು ಭ್ರಷ್ಟತೆಯ ಕೂಪಗಳಾಗಿವೆ. ಕಾರಣಗಳೇನಿರಬಹುದು?
ಇದಕ್ಕೆ ಸಾಮಾಜಿಕ ನ್ಯಾಯದ ಕಾರಣದಿಂದ ಹೀಗಾಗುತ್ತಿದೆ ಎಂಬ ಪ್ರತಿಗಾಮಿ ಉತ್ತರವೊಂದಿದೆ. ಮೀಸಲಾತಿಯಿಂದ ಎಲ್ಲರೂ ಬಂದು ಹೀಗಾಗಿದೆ ಎಂಬ ವಾದ. ಇದು ಖಂಡಿತ ಸರಿಯಲ್ಲ. ಸಾಮಾಜಿಕ ನ್ಯಾಯ ಮತ್ತು ಸ್ವಜನ ಪಕ್ಷಪಾತ ಎರಡೂ ಬೇರೆ ಬೇರೆ. ಒಂದು ಪ್ರಾಧ್ಯಾಪಕ ಸ್ಥಾನ ದಲಿತನಿಗೆ ಕೊಡಬೇಕೆನ್ನುವಾಗ ಅತ್ಯುತ್ತಮ ದಲಿತನಿಗೆ ಸಿಗುತ್ತದೆಯೋ ಬಾಲಬಡುಕ ದಲಿತನಿಗೆ ಸಿಗುತ್ತದೆಯೋ ಎಂಬ ಪ್ರಶ್ನೆಯಿದೆ. ಸಾಮಾಜಿಕ ನ್ಯಾಯದ ನೀತಿಯ ಪರವಾಗಿ ನೂರಕ್ಕೆ ಇನ್ನೂರು ನಾವಿರಬೇಕು. ಸಾಮಾಜಿಕ ನ್ಯಾಯವನ್ನು ಪರಿಪಾಲಿಸುವ ಹೊತ್ತಿನಲ್ಲಿಯೇ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತಗಳನ್ನು ತಪ್ಪಿಸಬೇಕಾಗಿದೆ. ಒಬ್ಬ ಪ್ರೊಫೆಸರ್ ಆಯ್ಕೆ ಮಾಡುವಾಗ ಕೇವಲ ಮೂರು ನಿಮಿಷ ಸಮಯಾವಕಾಶ ಇರುತ್ತದೆ. ಹೀಗಾಗಿ ಸಮಸ್ಯೆ ಮೀಸಲಾತಿಯದಲ್ಲ. ಇಂದು ಸಾಮಾಜಿಕ ನ್ಯಾಯವನ್ನು ಬಲಿಪಶು ಮಾಡುವ ಕೆಲಸ ನಡೆಯುತ್ತಿರುವುದು ಸರಿಯಲ್ಲ.
ಒಟ್ಟಾರೆ ಸಮಾಜದಲ್ಲಿ ಒಂದು ಬಗೆಯ ಸಂವೇನೆದನಾರಾಹಿತ್ಯತೆ ಎದುರಾಗಿದೆಯಲ್ಲ. ಇದಕ್ಕೆ ಕಾರಣಗಳೇನಿರಬಹುದು?
ಕಳೆದ ಮೂವತ್ತು ನಲವತ್ತು ವರ್ಷಗಳಲ್ಲಿ ಆದ ಜೀವನ ಕ್ರಮದಲ್ಲಿನ ಬದಲಾವಣೆಗಳು ಇದಕ್ಕೆ ಕಾರಣ ಇರಬಹುದು. ಇಂದು ವ್ಯಕ್ತಿವಾದ ಬಲವಾಗಿದೆ. ವ್ಯಕ್ತಿವಾದ ಅಂದರೆ ಕುಟುಂಬದಲ್ಲಿ ನಾನು ಮುಖ್ಯ. ಊರಿನಲ್ಲಿ ನನ್ನ ಕುಟುಂಬ ಮುಖ್ಯ. ಸಮಾಜದಲ್ಲಿ ನನ್ನ ಜಾತಿ ಮುಖ್ಯ ಎಂಬಂತಹ ರೀತಿಯಲ್ಲಿ ಇದು ಪ್ರತಿಫಲನವಾಗುತ್ತಿದೆ. ನೀವು ಹೇಳುತ್ತಿರುವ ಪ್ರಕ್ರಿಯೆ ನಿಜವಾದರೂ ಅದಕ್ಕೆ ಕಾರಣ ಪರಿಹಾರಗಳನ್ನು ಸುಲಭವಾಗಿ ಹೇಳಲು ಕಷ್ಟ. ನಮ್ಮ ಶಿಕ್ಷಣವೂ ಹಾಗೇ ಇದೆ. ನಮ್ಮ ಪಕ್ಕದಲ್ಲೇ ನಡೆಯುತ್ತಿರುವುದಕ್ಕೂ ಕುರುಡಾಗಿದ್ದೇವೆ. ನಾನು ಮಾಡುವ ಅನ್ಯಾಯಕ್ಕಿಂತ ನನಗೆ ಆಗುವ ಅನ್ಯಾಯ ಮುಖ್ಯ ಎಂದು ಯೋಚಿಸುತ್ತೇವೆ. ಯಾವಾಗ ’ನಾವು ಮಾಡುವ ಅನ್ಯಾಯವೇ ಮುಖ್ಯ’ ಎಂದು ಯೋಚಿಸಲು ತೊಡಗುತ್ತೇವೆಯೇ ಆಗ ಮಾತ್ರ ನಾವು ಇಂತಹ ಮಾನಸಿಕ ಜಾಡ್ಯತೆಯಿಂದ ಹೊರಬರಬಹುದೆನ್ನಿಸುತ್ತದೆ.
ಆಧುನಿಕತೆ ಜಾತಿಯನ್ನು ಹೋಗಲಾಡಿಸುತ್ತದೆ ಎಂಬ ತಿಳುವಳಿಕೆಯಿತ್ತು. ಆದರೆ ಇದಕ್ಕೆ ವ್ಯತಿರಿಕ್ತ ಬೆಳವಣಿಗೆಗಳೂ ಆಗುತ್ತಿವೆಯಲ್ಲ?
ಇದು ತುಂಬ ಸೂಕ್ಷ್ಮದ ಪ್ರಶ್ನೆ. ಜಾತ್ಯತೀತವಾಗಿ ಇರಬೇಕು ಎನ್ನುವ ದೃಷ್ಟಿಕೋನ ಜಾತಿಯ ಏಣಿಯಲ್ಲಿ ಮೇಲಿರುವವರಿಗೆ ಮಾತ್ರ ಅನುಕೂಲವಾಗಿ ಕೆಳಗಿರುವವರಿಗೆ ಆಗುವ ಅನ್ಯಾಯವನ್ನು ಸರಿಪಡಿಸಲಾಗದಿದ್ದರೆ ಆ ಜಾತ್ಯತೀತತೆ ಅಪಾಯಕಾರಿಯೇ. ಜಾತಿಗಳಿರುವವರೆಗೆ ಜಾತಿಯ ಆಧಾರದಲ್ಲಿ ಗುರುತಿಸುವಿಕೆ ಆಗಲೇಬೇಕಾಗುತ್ತದೆ. ಜಾತ್ಯತೀತ ಸಮಾಜ ಕಟ್ಟುತ್ತೇವೆಂದು ಹೇಳುತ್ತಾ ಜಾತಿ ಹೆಸರಿನಲ್ಲಿ ನಡೆಯುವ ಅನ್ಯಾಯಗಳನ್ನು ಮುಚ್ಚಿಡುವುದೂ ತಪ್ಪು. ಕಾನೂನಿನ ಮೂಲಕ ಜಾತಿಯನ್ನು ನಿಯಂತ್ರಿಸಲು ಸಾಧ್ಯ. ಆದರೆ ಅದಕ್ಕೆ ಮನಸ್ಸು ಮಾಡುವುದಿಲ್ಲ. ಜಾತಿ ಹೋಗಲಾಡಿಸುವುದಕ್ಕೆ ಅಂತರ್ಜಾತಿ ಒಂದು ಉಪಕರಣವಾಗುವುದಾದರೆ ಅದನ್ನು ಪ್ರೋತ್ಸಾಹಿಸಲು ಕಾನೂನಿನಲ್ಲಿ ಏಕೆ ಕ್ರಮ ಕೈಗೊಂಡಿಲ್ಲ? ಇಂದು ವಿಜ್ಞಾನ ಎಂದರೆ ಇ = ಒಅ೨ ಎಂಬ ಸೂತ್ರ ಮಾತ್ರವಾಗಿಬಿಟ್ಟರೆ ಅದು ಜಾತಿ ಧರ್ಮ ಏನನ್ನೂ ಮುಟ್ಟುವುದಿಲ್ಲ. ಆದರೆ ಅದು ವೈಜ್ಞಾನಿಕ ಚಿಂತನೆಯ ಮಟ್ಟಕ್ಕೇರಿದರೆ ಮಾತ್ರ ಪರಿಣಾಮಕಾರಿಯಾದೀತು. ವಾಸ್ತವದಲ್ಲಿ ಇಂದು ಜಾತಿವಾದ ಸೂಕ್ಷವಾಗುತ್ತಿದೆ ಎಂಬುದನ್ನು ನೋಡಬೇಕು.
ಮಾಧ್ಯಮ ಕ್ಷೇತ್ರ ಇಂದಿನ ಪಲ್ಲಟದ ಕುರಿತು ನಿಮ್ಮ ಅವಗಾಹನೆ ಏನು?
ಕಳೆದ ೨೦-೨೫ ವರ್ಷಗಳಲ್ಲಿ ದೃಶ್ಯ ಮಾಧ್ಯಮ ಮತ್ತು ಪ್ರಿಂಟ್ ಮಾದ್ಯಮದ ನಡುವೆ ಬಂದ ವಿಭಜನೆ ಮುಖ್ಯವಾದುದು. ದೃಶ್ಯ ಮಾಧ್ಯಮ ಬಹಳ ಪ್ರಭಾವಶಾಲಿಯಾಗಿದೆ. ಇಂದು ಪ್ರಭುತ್ವ ಮಾಧ್ಯಮವನ್ನು ಒಂದು ರೀತಿ ನಿಯಂತ್ರಿಸಿದರೆ ಕಾರ್ಪೊರೇಟ್ ಕ್ಷೇತ್ರ ಇನ್ನೊಂದು ಬಗೆಯಲ್ಲಿ ನಿಯಂತ್ರಿಸುತ್ತವೆ. ದಿನಪತ್ರಿಕೆಗಳು ಎದುರಿಸಿದ ಸಮಸ್ಯೆ ಏನೆಂದರೆ ಸುದ್ದಿ ಕೊಡಬೇಕೇ ವಿಶ್ಲೇಷಣೆ ನೀಡಬೇಕೇ ಎನ್ನುವುದು. ಇಂಗ್ಲಿಷ್ ಪತ್ರಿಕೆಗಳು ಈ ಸಮಸ್ಯೆಯನ್ನು ಒಂದು ಮಟ್ಟಿಗೆ ಇದನ್ನು ನಿಭಾಯಿಸಿವೆ. ಸುದ್ದಿ ಈಗಾಗಲೇ ದೃಶ್ಯ ಮಾದ್ಯಮಗಳಲ್ಲಿ ಬರುವುದರಿಂದ ಇಂದು ಪತ್ರಿಕೆಗಳು ಸುದ್ದಿಯನ್ನೂ ರೋಚಕವಾಗಿ ಹೇಳುವ ಧಾವಂತಕ್ಕೆ ಬಿದ್ದು ತಮ್ಮ ಭಾಷೆಯನ್ನೇ ಬದಲಿಸಿಕೊಂಡಿರುವುದನ್ನು ನೋಡುತ್ತೇವೆ. ನಮ್ಮಲ್ಲಿ ಪ್ರಾಯಶಃ ಲಂಕೇಶ್ ಮಾಡಿದ ಕೆಲಸವನ್ನು ಬೇರೆ ಯಾರೂ ಮಾಡಲು ಸಾಧ್ಯ ಇಲ್ಲ ಎನ್ನಿಸುತ್ತದೆ. ಜನರನ್ನು ತಲುಪಲು ಅವರು ಮಾಡಿರುವ ಪ್ರಯೋಗ ಅದ್ಭುತವಾದುದು. ಲಂಕೇಶ್ ಪತ್ರಿಕೆ ಇರುವಷ್ಟು ದಿನ ಅದು ನಾಡಿನ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡಿದ್ದರು. ಇಂದು ’ಸಂವಾದ’ ಪತ್ರಿಕೆಯೂ ಉತ್ತಮ ರೀತಿಯಲ್ಲಿ ಕೆಲಸಮಾಡುತ್ತಿದೆ. ಇಂದಿನ ಮಾಧ್ಯಮಗಳಿಗೆ ಸಾಕಷ್ಟು ಮಿತಿಗಳಿದ್ದರೂ ಮಾಧ್ಯಮಗಳಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೂ ಕಷ್ಟ. ಖಾಯಿಲೆ ಇಡೀ ಸಮಾಜಕ್ಕೆ ಬಂದಿರುವಾಗ ಮಾಧ್ಯಮಗಳನ್ನು ಮಾತ್ರ ಹೊರಗಿಡಲು ಸಾಧ್ಯವಿಲ್ಲವಲ್ಲ?

ಶುಕ್ರವಾರ, ಆಗಸ್ಟ್ 10, 2012

ಜಾನಪದ ಮುಂದುವರಿಕೆಗೆ ಹೊಸ ತಳಹದಿ?


ಡಾ ಹಿ ಶಿ ರಾಮಚಂದ್ರೇಗೌಡ 
(ಹಿ.ಶಿ ರಾಮಚಂದ್ರೇಗೌಡರು ಮೈಸೂರು ಭಾದಲ್ಲಿ  ಜಾನಪದದ ತಿಳುವಳಿಕೆಯನ್ನು ಭಿನ್ನವಾಗಿ ಕಟ್ಟಲು ಶ್ರಮಿಸಿದವರು. ಅವರ ಜಾನಪದ ವಿಶ್ಲೇಷಣೆ ಕೂಡ  ಅವರದೇ ಆದ ವಿಶಿಷ್ಟತೆಯ ನ್ನು ಹೊಂದಿದೆ. ನಮ್ಮ ಹಣತೆಗಳೇಕೆ ಉರಿಯುತ್ತಿಲ್ಲ ?  ಎಂದು ಪ್ರಶ್ನಿಸುವ ಮೂಲಕ ಕನ್ನಡಕ್ಕೇ ಬೇಕು ಕನ್ನಡದ್ದೇ ಜಾನಪದ ಅಧ್ಯಯನ ವಿಧಾನ ಎಂಬ ಹುಡುಕಾಟ ಮಾಡಿದವರು. ಅವರು ಈಗ ಮಗಳಮನೆ ಅಮೇರಿಕಾದಲ್ಲಿದ್ದಾರೆ. ಅಲ್ಲಿದ್ದುಕೊಂಡೇ  ಈ ಕಾಲದ ವೈರುಧ್ಯಗಳ ನೆಲೆಯಲ್ಲಿ ಜಾನಪದವನ್ನು ಅರ್ಥೈಸಲು ಪ್ರಯತ್ನಿಸಿದ್ದಾರೆ.ಇದು ಮೊದಲ ಕಂತು. ಮುಂದುವರಿದ ಭಾಗ ನಂತರ ಪ್ರಕಟವಾಗುವುದು.
-ಅರುಣ್)

ಜ್ನಾನದ ಸ್ಪೋಟವೊಂದು ಆಗಿ ವಿಜ್ನಾನದ ಭವಿಷ್ಯ ಕಂಡುಕೊಂಡೆವಲ್ಲ ಅಲ್ಲಿಂದ ಇಲ್ಲಿವರೆಗಿನ ಪರಿಕ್ರಮವನ್ನು ಅವಲೋಕಿಸಿದರೆ ನಾವು ಯಾವ ಭವಿಷ್ಯವನ್ನು ಅನುಭವಿಸುತ್ತಿದ್ದೇವೆ ಮತ್ತು ಮುಂದಿನ ಯಾವ ಬಗೆಯ ಭವಿಷ್ಯಕ್ಕೆ ದಾರಿಮಾಡಿಕೊಟ್ಟಿದ್ದೇವೆ ಎಂಬುದು ಒಂದು ಬಿಗ್ ಬ್ಯಾಂಗ್ ಪ್ರಶ್ನೆಯಾಗಿಯೆ ಉಳಿಯುತ್ತದೆ. ಹೌದಾ, ನಾವು ಭವಿಷ್ಯವನ್ನು ದೂರಗಾಮಿಯಾಗಿ ಉಳಿಸಿದ್ದೇವಾ, ಅಥವಾ ಮೊಟಕುಗೊಳಿಸಿದ್ದೇವಾ, ಆ ಭವಿಷ್ಯ ಜನರ ಹಸ್ತದಲ್ಲಿದೆಯೆ ಅಥವಾ ಅದನ್ನು ಪ್ರಕೄತಿಗೆ ಬಿಟ್ಟುಕೊಟ್ಟಿದ್ದೇವಾ?

ವಿಜ್ನಾನ ಮಾನವನ ಬದುಕಿನ ಸಾಧ್ಯತೆಗಳನ್ನು ಗುಣಾತ್ಮಕವಾಗಿ ಸಾಧಿಸಿಕೊಟ್ಟಿತೆ ಅಥವಾ ಅವನನ್ನು ಆಸೆಗಳ ಅಮಲಿನಲ್ಲಿ ಕೂರಿಸಿದೆಯೆ, ಆ ಎಲ್ಲ ಸಾಧ್ಯತೆಗಳು ಮನುಷ್ಯನಿಗಾಗಿಯೆ ಆದವು ಎಂದು ನಂಬಬಹುದೆ? ವಿಜ್ನಾನ ಈಗ ಮನುಷ್ಯನ ಹತ್ತಿರ ಇಲ್ಲ, ಅದು ಅವನಿಂದ ಜಾರಿಕೊಂಡು ಹೋಗಿದೆ ಏನ್ನಬಹುದೆ? ನನಗೆ ಈ ಕೊನೆಯ ಮಾತೇ ಸತ್ಯವಾಗಿ ವಿಜ್ನಾನದ ಬಹುದೊಡ್ಡ ಸಾಧ್ಯತೆ ಇನ್ನೂ ಸಿಗದೆ ಉಳಿದಿದೆ ಎನಿಸುತ್ತಿದೆ. ಅದು ಚಂದ್ರ, ಸೂರ್ಯ, ಮಂಗಳ ಅಥವ ಮತ್ತೊಂದು ಗ್ರಹಕ್ಕೆ ಹಾರುವ ವಿಷಯ ಎಂದು ನಾನು ಹೇಳಲಾರೆ. ಖಂಡಿತ ಆ ಒಂದು ಆಸೆ ಪ್ರತಿಯೊಬ್ಬ ಮನಷ್ಯನಲ್ಲಿಯೂ ಇದೆ. ಹಿಂದೊಮ್ಮೆ ಕನಸು, ಕಥೆ, ಪುರಾಣಗಳಲ್ಲಿ ಕಂಡುದು ವಾಸ್ತವವೇ ಆಗುವುದಾದರೆ ಮನುಷ್ಯ ಭಾವಪರವಶನಾಗುತ್ತಾನೆ. ಕಳೆದುಕೊಂಡ ಕನಸು, ಕಥೆ, ಪುರಾಣಗಳನ್ನು ಬೇರೆಲ್ಲಿ ಕಟ್ಟಿಕೊಳ್ಳುತ್ತಾನೆ ಎಂಬ ಪ್ರಶ್ನೆ ಭಯಂಕರವಾದುದೆ. ಅವನ್ನೆಲ್ಲ ಕಳೆದುಕೊಡ ಮನುಷ್ಯ ಪೂರಾ ಬರಡನಾದರೆ, ವಿಜ್ನಾನದ ಕಡೆಗೆ ಧಾಳಿ ಇಟ್ಟರೆ, ಆ ಲೋಡಿನ ಶಕ್ತಿಯನ್ನು ವಿಜ್ನಾನ ತಡೆದುಕೊಳ್ಳಬಲ್ಲುದೆ ಎಂದುನೋಡಬೇಕು. ಆಗ ನಿಜವಾದ ವಿಜ್ನಾನದ ಶಕ್ತಿ ಅರ್ಥವಾಗುತ್ತದೆ.
ಈಗ ವಿಜ್ನಾನವನ್ನು ಹುಡುಕುತ್ತಿರುವವರೆಲ್ಲ ಇದೇ ರಭಸದಲ್ಲಿದ್ದಾರೆ. ಅದು ಎಷ್ಟು ಸರಳ ಆಗಿದೆ ಅಂದರೆ ಅದೊಂದು ಹೊರಗಿನ ಸೌಲಭ್ಯ ಎನ್ನುವಂತಾಗಿದೆ. ವಿಜ್ನಾನ ಬಹುಜನರಿಗೆ ಅಂತರಂಗದ ವಿಷಯವಾಗಿ ಉಳಿದಿಲ್ಲ. ಅದು ಅದರ ಪ್ರಾರಬ್ದವನ್ನು ತೀರ್ಮಾನಿಸುವ ಸಂಗತಿಯೂ ಹೌದು. ಯಾವಾಗ ವಿಜ್ನಾನ ಸೀಮಿತ ವಸ್ತು ವಿನ್ಯಾಸಕ್ಕೆ ಒಳಗಾಯಿತೊ ಆಗ ಅದರ ಭವಿಷ್ಯ ಬಹಳ ಮಿತವಾಯಿತು. ಆ ಕಷ್ಟವನ್ನು ಈಗ ವಿಜ್ನಾನ ಅನುಭವಿಸುತ್ತಿರಬಹುದೆ?

ಹಾಗಿದ್ದಲ್ಲಿ ವಿಜ್ನಾನ ಅಂತರಂಗದ ವಿಷಯವಾಗುವುದು ಸಾಧ್ಯವೆ? ಹೇಗೆ? ಹದಿನೆಂಟನೆಯ ಶತಮಾನದ ವಿಜ್ನಾನವಿಕಾಸ ಈ ಅಂತರಂಗವನ್ನು ಕಂಡುಕೊಳ್ಳಲಾಗದ ಒಂದು ಮಿತವಾದ ಶೋಧ ಎನ್ನಬಹುದೆ? ಇದೊಂದು ಕೇವಲ ಸ್ಪೋಟಮಾತ್ರ ಎನ್ನಬಹುದೆ? ಬಹುತೇಕ ವಿಶ್ಲೇಷಣೆ ಹಾಗೆಯೆ ಹೇಳುತ್ತಿದೆ. ಅದರ ಹುಟ್ಟು ಚಾರಿತ್ರಿಕವಾಗದೆ ಕೆಲವು ಬಂಡವಾಳಿಗರ ಅತ್ಯಪೇಕ್ಷೆಯಾಗಿ ಹೊರಬಂದುದೂ ಇದಕ್ಕೆ ಕಾರಣ ಇರಬಹುದು. ಅದು ಹುಟ್ಟಿದ ಭೌಗೋಳಿಕ/ಸಾಮಾಜಿಕ ಪರಿಸರ ಮತ್ತು ಪರಿಸ್ಥಿತಿ ಕೂಡ ಅದು ಅಲ್ಪಾಯುಷಿಯಾಗಲು ಕಾರಣವಿರಬಹುದು. ಯೂರೋಕೇಂದ್ರಿತ ಸಮುದಾಯಗಳ ದುರಪೇಕ್ಷೆಯನ್ನು ತುಂಬಿಕೊಡಲಷ್ಟೆ ಅದಕ್ಕೆ ಸಾಧ್ಯವಾದುದು ಇದೇ ಕಾರಣಕ್ಕೆ ಇರಬಹುದು. ಏಷ್ಯಾಖಂಡದ ಕೆಲವು ದೇಶಗಳು ಈ ಅಪೇಕ್ಷೆಯ ಪಾಲುದಾರರಾಗಿರುವುದು ನಿಜವಾದರೂ ಅವುಗಳದು ಕಡ ಪಡೆದ ವಿಜ್ನಾನಸೌಲಭ್ಯ ಎಂದೆನಿಸುತ್ತದೆ.

ಈಗ ವಿಜ್ನಾನ ಎಂಬುದು ಸಾಮಗ್ರಿಯಾಗಿರುವುದು ನಿಜ. ವಿಜ್ನಾನದ ಉದ್ದೇಶ ಸಮಾಜೋದ್ಧಾರವಾದರೂ ಅದು ಆ ಕೆಲಸವನ್ನು ಮಾಡಲಾಗಿಲ್ಲ. ಅದರ ಭಾವನೆಗಳನ್ನು, ಬದುಕನ್ನು ಹಂಚಿಕೊಳ್ಳಲು ಬಹುಜನರಿಗೆ ಸಾಧ್ಯವಾಗಿಲ್ಲ. ವಿಜ್ನಾನ ಜನರಿಂದ ಜನರಿಗಾಗಿ ಹುಟ್ಟುವ ಸಾಮಾಜಿಕ ಪ್ರಕ್ರಿಯೆ. ಅದನ್ನು ಪ್ರತಿನಿಧಿಸುವ, ಪ್ರತಿಪಾದಿಸುವ ಅಥವಾ ಕಾರಣೀಭೂತನಾದ ಒಬ್ಬ ವ್ಯಕ್ತಿ ಇರುತ್ತಾನೆ. ಇದ್ದೇ ಇರುತ್ತಾನೆ ಎಂಬುದು ಸತ್ಯವಾದರೂ ಅವನು ಏಕ ಅಥವ ಏಕೈಕ ವ್ಯಕ್ತಿ ಅಲ್ಲ. ನಿಜವಾದ ವಿಜ್ನಾನ ಯಾವೊಬ್ಬ ವ್ಯಕ್ತಿಯನ್ನೂ, ದೇಶವನ್ನೂ ಉದ್ದೇಶಿಸಿರುವುದಿಲ್ಲ. ಅದು ಜನರನ್ನಷ್ಟೇ ಉದ್ದೇಶಿರುತ್ತದೆ. ಹದಿನೆಂಟನೆಯ ಶತಮಾನದ ಹಿಂದಕ್ಕೆ ನೋಡಿದರೆ ಅಥವ ಅನಭಿವೃದ್ದಿ ದೇಶಗಳೆಂದು ಕರೆಸಿಕೊಳ್ಳುತ್ತಿರುವ ದೇಶಗಳ ಪರಿಸ್ಥಿತಿಯನ್ನು ನೋಡಿದರೆ ಇದು ಅರ್ಥವಾಗುತ್ತದೆ. ಅಲ್ಲಿ ವಿಜ್ನಾನವೆ ಇರಲಿಲ್ಲ ಅಥವ ಇಲ್ಲ ಎಂದು ಹೇಳುವುದು ಹುಚ್ಚುತನವಾಗುತ್ತದೆ. ಅಂಥ ಮಾತುಗಳು ಯಾರಿಂದ ಮತ್ತು ಯಾವಕಡೆಯಿಂದ ಉಗಮವಾಗುತ್ತವೆ ಎಂಬುದನ್ನೂ ನೋಡಬೇಕಾಗುತ್ತದೆ.

ಹುಟ್ಟುತ್ತಲೆ ವಿಜ್ನಾನ ಅಪಹರಣಕ್ಕೆ ಒಳಗಾಯಿತು. ಅದು ಬಂಡವಾಳದ ಬಂಧಿಯಾಯಿತು. ವಿಜ್ನಾನಶೋಧ ಅಪಾರ ಮಾನಸಿಕಶ್ರಮ, ಶ್ರದ್ಧೆ, ತ್ಯಾಗ ಮತ್ತು ಮೂಲಧನದ ಅಪೇಕ್ಷೆಯನ್ನು ಬಯಸುತ್ತದೆ. ಅದು ಕೇವಲ ಹಣಬಂಡವಾಳವಲ್ಲ. ವ್ಯಕ್ತಿಯ ಶ್ರಮ ಮತ್ತು ಶ್ರದ್ಧೆಯಾಗಿರುತ್ತದೆ. ವಿಜ್ನಾನ ಬಂಡವಾಳ ಅಪೇಕ್ಷಿಯಲ್ಲ, ಅದು ಬಂಡವಾಳಿಗನ ಕೈಸೇರಿದಾಗ ಬಂಧಿಯಾಗುತ್ತದೆ. ಅವನ ವೈಯಕ್ತಿಕ ಅಪೇಕ್ಷೆ ಮತ್ತು ದುರಾಸೆಗೆ ತನ್ನನ್ನು ಮಾರಿಕೊಳ್ಳಬೇಕಾಗಿ ಬರುತ್ತದೆ. ಹಾಗೆ ಅದು ಕೈಗಾರಿಕಾ ಬಂಡವಾಳಿಗರಿಗೆ ಮಾರಾಟವಾಯಿತು. ಆದರೆ ಕೈಗಾರಿಕಾಕರಣವೆ ಬಂಡವಾಳವಾದ ಆಗಬೇಕಿಲ್ಲ. ಜನತಾಸಮಾಜ, ಜನತಾಸರಕಾರಗಳ ಸಂದರ್ಭದಲ್ಲಿ ಅದು ಜನಪರವೆ ಆಗಿರುತ್ತದೆ. ಅಂತ ಜನಪರವಾಗುವ ಯೋಗ ಸ್ಪೋಟಕ ವಿಜ್ನಾನಕ್ಕೆ ಸಾಧ್ಯವಾಗಲಿಲ್ಲ. ಅದು ಬಂಡವಾಳಿಗನ ಮೂಲಕ ಜನತೆಯ ಕಡೆಗೆ ಚಲಿಸಬೇಕಾಯಿತು. ಪರಿಸ್ಥಿತಿ: ಲಾಭ, ವಾಂಛೆ, ಪ್ರತಿಷ್ಠೆ, ಮೂಲಭೂತವಾದಗಳು ಒಂದು ಕಡೆಗೆ ಘೇರಾಯಿಸಿ ಜನತೆಯನ್ನು ಕಟ್ಟುಬದ್ಧವಾಗಿ ನಿಯಂತ್ರಿಸುವ ಹೊಸಪ್ರಭುತ್ವ ಸೃಷ್ಟಿಯಾಯಿತು. ಇದು ಅಪ್ರಜ್ನಾಪೂರ್ವಕವಾಗಿ, ಅಜ್ನಾನದಿಂದ, ಆಕಸ್ಮಿಕತೆಯಿಂದ ಜನತೆಯನ್ನು ನಿಯಂತ್ರಿಸುವ ಪುರಾತನ ಕ್ರೌರ್ಯಕಿಂತ ಹೊಸರೂಪದ ಪ್ರಜ್ನಾಪೂರ್ವಕ ಹಾಗೂ ಉದ್ದೇಶಪೂರ್ವಕ ಜನ ಶೋಷಣೆಗೆ ದಾರಿಮಾಡಿಕೊಟ್ಟಿತು.

ಕೈಗಾರಿಕಾಕರಣದ ಜೊತೆಗೆ ಕಾರ್ಮಿಕಸಂಘಟನೆಗಳು, ಆಧುನಿಕತೆಯ ಜೊತೆಗೆ ದೇಶೀಪ್ರವೃತ್ತಿಗಳು ಈ ವಿದ್ಯಮಾನಕ್ಕೆ ಪ್ರತಿಕ್ರಿಯೆಯಾದವು. ಕಾರ್ಮಿಕಸಿದ್ಧಾಂತ ಈ ಯುಗದ ಒಂದು ಯುಗಧರ್ಮವೆ ಆಯಿತು. ಅದು ಒಂದು ಪ್ರಜ್ನಾಪೂರ್ವಕ ಪ್ರತಿಭಟನೆ ಮತ್ತು ಪ್ರಜ್ನಾಪೂರ್ವಕ ರಾಜಕೀಯಸಿದ್ಧಾಂತವಾಯಿತು. ಜೊತೆಜೊತೆಗೆ ಸಾಮಾಜಿಕ ಅಭಿವೃದ್ಧಿಯ ಒಂದು ತತ್ವಪ್ರಣಾಳಿಕೆಯೂ ಆಯಿತು. ನಿಜವಾಗಿ ಮತ್ತು ನೇರವಾಗಿ ವಿಜ್ನಾನಶೋಧದಿಂದ ಆಗಬೇಕಾದ ಈ ಬದಲಾವಣೆ ವಿಜ್ನಾನ ಬಂಡವಾಳಿಗನ ಸೆರೆಸಿಕ್ಕು ಸಂಕುಚಿತಗೊಂಡುದರಿಂದ ಅದರ ಫಸಲನ್ನು ಬೇರೊಂದು ಕಡೆಯಿಂದ ಶೋಧಿಸಲು ನಡೆದ ಪ್ರಯತ್ನವಿದು. ಈ ಸಿದ್ದಾಂತ ಎಷ್ಟು ಕರು ಮರಿಗಳನ್ನು ಹಾಕಿತೆಂದರೆ ಜಗತ್ತಿನ ಬಹುತೇಕ ಬಡವರು ತಮ್ಮೊಳಗೊಂದು ಚಿಮ್ಮುವ ಶಕ್ತಿ ಇದೆ ಎಂಬ ಅಂತರಂಗ ಶೋಧ ಮಾಡಿಕೊಂಡರು. ಮನುಷ್ಯನನ್ನು ಸಾಂಘಿಕ ಜೀವನಕ್ಕೆ ಒಗ್ಗೂಡಿಸಿದ್ದ ಧರ್ಮಸಿದ್ದಾಂತಗಳಿಂದ ಅದು ಸಾಧ್ಯವಾಗಿರಲಿಲ್ಲ. ವ್ಯಕ್ತಿತ್ವವನ್ನು ಕಡೆಗಣಿಸಿದ, ವ್ಯಕ್ತಿತ್ವನಿರಸನ ಮಾಡಿಕೊಳುವ ಅವಿಕಾಸ ಚಿಂತನೆಯಿಂದಾಗಿ ಅವು ಮನುಷ್ಯನನ್ನು ಸೊರಗಿಸಿದ್ದವು. 
ಬಂಡವಾಳಿಕೈಗಾರಿಕೀಕರಣದಿಂದಾಗಿ ಮಾನವ ಇತಿಹಾಸದಲ್ಲಿ ಪ್ರಥಮಬಾರಿಗೆ ಮನುಷ್ಯ ತಾನೊಬ್ಬನಿದ್ದೇನೆ, ತನಗೊಂದು ಅಸ್ತಿತ್ವವಿದೆ ಮತ್ತು ತನಗೊಂದು ಬೆಳವಣಿಗೆ ಇದೆ ಎಂಬುದನ್ನು ಸಮಾಜದ ಒಟ್ಟಿಗೇ ಕಂಡುಕೊಳ್ಳುವಂತಾಯಿತು.

ಸೈದ್ಧಾಂತಿಕ ನೆಲೆಯೂ ಅಲ್ಲದ, ಪ್ರಭುತ್ವವನ್ನು ನೇರವಾಗಿ ವಿರೋಧಿಸುವುದರ ಅಗತ್ಯತೆಯನ್ನೂ ಅರಿಯದ ಆದರೆ ವಿಜ್ನಾನ ಮತ್ತು ಆಧುನಿಕತೆಗಳು ಬಹಳ ಹೊರೆಯಾಗುತ್ತಿವೆ ಎಂದು ಸ್ವಂತದಲ್ಲಿ ಮಿಡುಕಿದ ಮನೋಧರ್ಮವೆ ದೇಸಿ ಪ್ರವೃತ್ತಿ. ಇದೊಂದು ವ್ಯಕ್ತಿಸ್ವಾತಂತ್ರಕ್ಕಾಗಿ ತೆವಳುವ ಕೂಸು, ಹೋರಾಡುವ ಯುವತ್ವ ಅಲ್ಲ. ಆದ್ದರಿಂದಲೆ ಆ ಘಟ್ಟದಲ್ಲಿ ಕಾರ್ಮಿಕಚಳುವಳಿಗೆ ಬಂದ ಯೌವನ ಇದಕ್ಕೆ ಬರಲೇ ಇಲ್ಲ. ಎಲ್ಲೋ ಇದು ಪ್ರಭುತ್ವ ಮತ್ತು ಬಂಡವಾಳಿಯ ಮನಸ್ಸಿನಿಂದ ತಪ್ಪಿಸಿಕೊಂಡು ಹೊರಗೆ ಚಿಮ್ಮಲು ಪ್ರಯತ್ನಿಸಲೆ ಇಲ್ಲ ಅನಿಸುತ್ತದೆ. ಈಗ ಕೂಡ ಇದು ಶತಮಾನದ ಕೂಸು. ಆದರೆ ಇದರೊಳಗೆ ಸಹಜವಿಜ್ನಾನದ ಮನಸ್ಸು ಮಿಡಿಯುತ್ತಿದೆ. ಅದು ಬಂಡವಾಳವಾದ ಅಥವ ಕಾರ್ಮಿಕವಾದ ಸ್ವರೂಪಿಯೂ ಅಲ್ಲ. ಅಭಿವೃದ್ಧಿ ಸಿದ್ಧಾಂತದ ಬೆನ್ನು ಹತ್ತದೆ ಜೀವವಿಕಾಸದ ಪ್ರಗತಿಯ ಹಾದಿಯನ್ನು ಮೂಸುತ್ತಾ, ಮೆಲುಕುಹಾಕುತ್ತಾ ಬಂದ, ಎಲ್ಲ ಅಭಿವೃದ್ಧಿವಾದ, ವಾದಿಗಳ ನಿರಾಸೆಗೆ ಸಮಾಧಾನಕರವಾದ ಬದುಕುವ ನೆಲೆಯೊಂದು ನಮ್ಮ ಮಧ್ಯೆಯೆ ಇದೆ ಎಂದು ಕಾಣಿಸಿದ್ದು ಈ ಚಿಂತನೆ. ವಿಜ್ನಾನ ಮತ್ತು ಆಧುನಿಕತೆಗಳು ನಮ್ಮ ಮೇಲೆ ಉರುಳಿಸಿದ ಬಂಡೆಗಳು. ಅವುಗಳನ್ನು ಹತ್ತಿಹೋದವರು ಒಂದು ದಡ ಕಂಡರು, ಅವುಗಳ ಅಡಿಗೆ ಸಿಕ್ಕು ನರಳಿದವರು ಮತ್ತೊಂದು ದಡ ಕಂಡರು. ಮಗ್ಗುಲಾದವರು ಬದುಕುಳಿದಿದ್ದಾರಲ್ಲ ಅಲ್ಲಿ ಸಹಜ ಜೀವನಶೋಧ ಇದೆ ಎಂದು ಕಂಡುಕೊಳ್ಳುವ ಮರುಚಿಂತನೆ ಇದು. ಯಾವುದನ್ನೂ ಹೊರೆಮಾಡಿಕೊಳ್ಳದ ಜೀವನಕ್ರಮವಿದು. ಅಲ್ಪಾಯುಷಿಗಳಾದ ಬಂಡವಾಳವಾದ, ಸಮತಾವಾದ ಅಥವ ಸಮಾಜವಾದದ ಹೊರಗೆ ನಿರಂತರ ನೆಮ್ಮದಿಯನ್ನು ಕಾಣುವ ಜೀವವಿಕಾಸವಿದು. 

ವಿಜ್ನಾನದ ಪ್ರವೇಶದೊಂದಿಗೆ ವಸ್ತು, ವಿಷಯಗಳನ್ನು ವಿಭಜಿಸಿನೋಡುವ, ಅದರ ಘಟಕಗಳನ್ನು ವಿಶ್ಲೇಷಿಸುವ ಮತ್ತು ಅವು ಕೂಡಿದರೆ ಆಗುವ ಪರಿಣಾಮಗಳ ಬಗ್ಗೆ ತಿಳಿಯುವ ಮನೋಧರ್ಮ ಉಂಟಾಯಿತು. ಈಗಾಗಲೆ ಈ ಮನೋಧರ್ಮ ವಿವಕ್ಷೆಯಲ್ಲಿ ಇತ್ತಾದರೂ ಅದರ ಪ್ರಯೋಗವೇನಿದ್ದರೂ ಕಲ್ಪಿತವಸ್ತು, ವಿಷಯಗಳಿಗೆ ಸೀಮಿತವಾಗಿತ್ತು. 
ಅದು ಭೌತಿಕ ಜಗತ್ತಿಗೆ ಏನನೂ ಕೊಡಲು ಆಗದ ಭಾವಿಸಿಕೊಂಡ ಬಸಿರು. ವಿಜ್ನಾನದ ವಿಷಯವಾದರೂ ವಸ್ತು, ವಿಷಯಗಳ ಮರುಜೊಡಣೆ ಮತ್ತು ಮರುಚಿಂತನೆಗೆ ಕಾರಣವಾಗಿ ಹೊಸ ಹೊಸ ವಸ್ತು ವಿಷಯಗಳ ರೂಪೀಕರಣಕ್ಕೆ ಕಾರಣವಾಯಿತು. ಇದರಿಂದ  ಅಖಂಡತೆಯ ಬಗ್ಗೆ ಇಟ್ಟುಕೊಂಡಿದ್ದ ಪುರಾತನ ಚಿಂತನೆ ಪ್ರಶ್ನಿತವಾಯಿತು. ಧಾರ್ಮಿಕರಿಗಂತೂ
ಇದರ ಪ್ರವೇಶ ಕಷ್ಟವಾಗತೊಡಗಿತು. ಸೃಷ್ಟಿ, ಸ್ಥಿತಿ, ಲಯಗಳ ಬಗ್ಗೆ ತಮ್ಮದೆ ಗಟ್ಟಿಯಾದ ನಂಬುಗೆ ಇಟ್ಟುಕೊಂಡಿದ್ದ ಅವರಿಗೆ ವಿಜ್ನಾನದ ಪ್ರವೇಶ ಅವರ ಅಸ್ಥಿತ್ವವನ್ನು ಪ್ರಶ್ನಿಸುವಂತಾಯಿತು. ಅವರು ಅಖಂಡವನ್ನು ಊಹಿಸಿಕೊಂಡಿದ್ದರು, ವಿಶ್ಲೇಷಿಸಿಕೊಂಡಿರಲಿಲ್ಲ. ಕಾರಣವಾಗಿ ಭೌತಿಕ ವಿಷಯ ಚಿಂತನೆಯಲ್ಲಾದ ವಿಘಟನ, ವಿಶ್ಲೇಷಣ, ಮರುಜೋಡಣಾ ಚಿಂತನೆ ಅವರನ್ನು ಚಿಂತೆಗೀಡುಮಾಡಿತು. ಅವರು ವಿಜ್ನಾನವನ್ನು ದೇವರು, ಧರ್ಮ ಮತ್ತು ಅಖಂಡ ಪ್ರಕೃತಿಯ ಮೇಲಿನ ಹಾವಳಿ ಎಂದು ಘೊಷಿಸಿದರು. ಇವರೂ ಕೈಗಾರಿಕಾ ಸಂಸ್ಕೃತಿಯಿಂದ ಹತಾಶೆಗೊಂಡವರ ಜೊತೆಗೆ ಸೇರಿಕೊಡರು. ಆದರೆ ಇಂಥವರು ದೇಸಿ ಬಗ್ಗೆ ಮಾತನಾಡತೊಡಗಿದ್ದು ಅಪಾಯಕಾರಿಯಾಯಿತು.

ವಿಜ್ನಾನ ಮತ್ತು ಅದರ ಪ್ರತಿಫಲನವಾದ ಆಧುನಿಕತೆಗಳು ಬರುಬರುತ್ತ ತಳಬಿಟ್ಟದ್ದು ಜನರಲ್ಲಿ ನಿರಾಸೆಯನ್ನು ಮೂಡಿಸಿತು. ಅದರೊಳಗೆ ಜನ ಉಳಿಯದೆ ಹೊಸಬಗೆಯ ಪ್ರಭುತ್ವ ಸ್ಥಾಪಿತವಾದುದು ಆತಂಕಕಾರಿ ಅನಿಸಿತು. ಇದು ಪ್ರಗತಿ ಅಲ್ಲ, ನೆಗೆತ. ಅದರ ಎತ್ತರಕ್ಕೆ ನೆಗೆದವನು ಅನುಕೂಲಿಯಾಗುತ್ತನೆ, ಹಾಗಲ್ಲದವನು ಅದರ ಆಸೆಯ ಬೆನ್ನುಹತ್ತಿ ನಿರಂತರಫಲಾಪೇಕ್ಷಿಯಾಗಿ ಹಪಹಪಿಸುತ್ತಾನೆ. ಅಭಿವೃಧಿ ಹೊಂದಿದ ದೇಶಗಳು, ಅಭಿವೃದ್ಧಿಶೀಲ ದೇಶಗಳು ಮತ್ತು ಹಿಂದುಳಿದ ದೇಶಗಳು ಎಂಬ ಬೆಳವಣಿಗೆಯ ವಿಭಜನಾ ಕ್ರಮವೆ ತಾರತಮ್ಯ ರೀತಿಯದು. ಈ ತಾರತಮ್ಯ ಹೋಗಿ ಎಲ್ಲ ದೇಶಗಳೂ ಅಭಿವೃಧಿ ದೇಶಗಳಾಗುವುದು ಸಾಧ್ಯವೆ ಇಲ್ಲ. ಯಾಕಂದರೆ ಈ ಅಭಿವೃದ್ಧಿ ಇನ್ನೊಂದು ದೇಶದ ಶೋಷಣೆಯ ಮೂಲಕವೆ ಆಗುವ ಪ್ರಕ್ರಿಯೆ. ಕೊಳ್ಳುವವನನ್ನು ಹುಡುಕುವ ಅಭಿವೃದ್ಧಿ ಎಲ್ಲ ದೇಶಗಳ ಸೃಜನಶೀಲತೆಯನ್ನು ಪ್ರೋತ್ಸಾಹಿಸುವುದಿಲ್ಲ. ಬದಲಾಗಿ ಹತ್ತಿಕ್ಕುತ್ತದೆ. ಎಲ್ಲ ದೇಶಗಳಲ್ಲಿಯೂ ಸಮಾನ ಸೃಜನೆ ಮತ್ತು ಸಮಾನ ಉತ್ಪಾದನೆ ಸಾಧ್ಯವಾದರೆ ಕೊಳ್ಳುವವನು ಹೊರದೇಶದ ಮಾಲುಗಳ ಕಡೆ ಯಾಕೆ ನೋಡುತ್ತಾನೆ?

ಇಂಥ ಫಿನಿಷ್ ಗೂಡ್ಸ್ ಆಧಾರಿತ ಅಭಿವೃದ್ಧಿ ಪರಿಕಲ್ಪನೆ ಸಮಾನತೆಯನ್ನು ನಿರಾಕರಿಸುತ್ತದೆ. ಅದೊಂದು ದೊಡ್ಡ ಸುಳ್ಳು ಎನ್ನುತ್ತದೆ. ಆಗ ಬಡವ, ಬಡತನ ವೈಯಕ್ತಿಕ ಅಪರಾಧ ಅಥವ ಧಾರ್ಮಿಕ ಭಾಷೆಯಲ್ಲಿ ಹೇಳುವುದಾದರೆ ಅದು ಅವರವರ ಕರ್ಮ ಎಂದೆ ಘೋಷಿಸುತ್ತದೆ. ಯಾರ ಸಂಪಾದನೆಯಿಂದ ಬಡತನ ನಿವಾರಣೆ ಮಾಡುತ್ತೀರಿ? ಓಡುವವನ ಮೇಲೆ ಹೆಳವನನ್ನು ಕೂರಿಸುತ್ತಿದ್ದೀರಿ ಎನ್ನುತ್ತದೆ. ಆಗ ಸಮತಾವಾದ ಅನ್ ಸೈನ್ಟಿಫಿಕ್ ಮತ್ತು ಪ್ರಕೃತಿ ವಿರೋಧವಾಗಿ ಕಾಣುತ್ತದೆ. ಸಮತಾವಾದ ಇಲ್ಲ, ನೀವು ಹುಟ್ಟಿಸಿಕೊಂಡಿದ್ದೀರಿ. ಅದು ಇಲ್ಲ ನೀವು ಕಟ್ಟಿಕೊಂಡಿದ್ದೀರಿ. ಅದು ನೆಲೆ ಇಲ್ಲದ ಅಸ್ಮಿತೆ. ಉಳ್ಳವರನ್ನು, ಪ್ರತಿಭಾವಂತರನ್ನು, ದುಡಿಯುವವರನ್ನು ಹತ್ತಿಕ್ಕಲು ನೀವು ಬಳಸುತ್ತಿರುವ ಅಸ್ತ್ರಗಳು. ನಿಮ್ಮ ದುಡಿಮೆಯ ಪರಿಕಲ್ಪನೆ ಬರಡಾಗಿದೆ. ಅದು ದೈಹಿಕ ದುಡಿಮೆಯನ್ನು ಮಾತ್ರ ಕುರಿತಿದೆ. ಅದರಲ್ಲೂ ಮೇಲುಸ್ಥರದ ದುಡಿಮೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೀರಿ. ಅದು ಕ್ರಿಯೆಯಾಗುವ 
ಬಹುತೇಕ ಸಾಧ್ಯತೆಗಳು ನಿಮ್ಮ ಗಮನಕ್ಕೆ ಬಂದಿಲ್ಲ. ಬಡವನನ್ನು ಬಡವನನ್ನಾಗಿಯೆ ಉಳಿಸುವ, ಅವನ ಚೈತನ್ಯವನ್ನು ಪ್ರಚೋದಿಸದ ಕೇವಲ ಕೂಲಿಸಿದ್ಧಾಂತ ನಿಮ್ಮದು ಎಂದು 
ಈ ಅತ್ಯಾಧುನಿಕ, ಇಪ್ಪತ್ತೊಂದನೆಯ ಶತಮಾನ ಹೇಳುತ್ತಿದೆ. 

ಇನ್ನು ಬಡವ ಬದುಕಿರುವುದಿಲ್ಲ . ಅವನು ಇರುತ್ತಾನೆ ಎಂದರೆ ಬಡವನಾಗಿರುವುದಿಲ್ಲ, ಇನ್ನೇನೊ ಆಗಿರುತ್ತಾನೆ. ಆ ಇನ್ನೇನೊ ಎಂಬುದು ನಿಧಾನವಾಗಿ ಸ್ಪಷ್ಟವಾಗುತ್ತಾ ಹೋಗುತ್ತದೆ. ಅಂಥ ಪ್ರಕ್ರಿಯೆ ಈ ಹೊತ್ತು ಜಗತ್ತಿನಾದ್ಯಂತ ನಡೆಯುತ್ತಿದೆ. ಆದ್ದರಿಂದಲೆ ಬಡವ ಶ್ರೀಮಂತರ ಜೊತೆಗೆ ಗೆಲ್ಲಲಾರದ ಪೈಪೋಟಿಗೆ ತೊಡಗಿದ್ದಾನೆ. ಅದು ಕನಸನ್ನು ಹಿಡಿಯುವ ಕೆಲಸವೊ ಅಥವ ಭ್ರಮೆಯನ್ನು ಬೆನ್ನಟ್ಟುವ ಶ್ರಮವೊ ಹೇಳಲಾಗದು. ಇಪ್ಪತ್ತನೆಯೆ ಶತಮಾನವಷ್ಟೆ ಅವನನ್ನು ಉದ್ದೇಶಿಸಿತ್ತು. ಅದು ಅವನ ಪರವಾದ ರಾಜಕಾರಣವೂ ಆಗಿತ್ತು. ಇನ್ನು ಅಂಥ ರಾಜಕಾರಣ ಬರುವ ಸಾಧ್ಯತೆಗಳು ಕಡಿಮೆ. ಈ ಹೊತ್ತಿನ ರಾಜಕಾರಣಿಗಳ ಕೈಯಲ್ಲಿ ರಾಜಕಾರಣ ಇಲ್ಲ. ಅವರು ರಾಜಕಾರಣಕ್ಕೆ ಬಳಸಿಕೊಳುತ್ತಿರುವ ದಾಳಗಳಷ್ಟೆ. ಜನ ಓಟು ಹಾಕುತ್ತಾರೆ, ರಾಜಕಾರಣಿಗಳು ರಾಜಕಾರಣ ನಡಸುತ್ತಾರೆ ಎಂಬುದೆಲ್ಲ ನಮ್ಮ ಅನಿಸಿಕೆ ಮಾತ್ರ. ನಮಗೆ ಹತ್ತಿರದಿಂದ ಗೊತ್ತಿರುವಂತೆ ಮತದಾನ ಎನ್ನುವುದು ಅಸಲಿ ಚಟುವಟಿಕೆಯೆ ಅಲ್ಲ. ಅದನ್ನು ಹಲವು ಶಕ್ತಿಗಳು ನಡೆಸಿಕೊಡುತ್ತವೆ. ನೀವು ರಾಜಕಾರಣದ ಆಟ ಆಡಿಕೊಳ್ಳಿ ನಾವು ದೇಶದ ವ್ಯಾಪಾರ, ವ್ಯವಹಾರ ನೋಡಿಕೊಳ್ಳುತ್ತೇವೆ. ಅದರಲ್ಲಿ ನಿಮ್ಮ ಹಸ್ತಕ್ಷೇಪ ಬೇಡ ಎಂದು ಕಾರ್ಪೊರೇಟ್ ಸಂಸ್ಥೆಗಳು ಹೇಳಿದರೆ ಅಲ್ಲಿ ನಿಜವಾದ ರಾಜಕಾರಣ ಇಲ್ಲ ಎಂದೆ ಅರ್ಥ. ನಿಜದಲ್ಲಿ, ಬಡತನವನ್ನು ಉದ್ದೇಶಿಸಿದ ರಾಜಕಾರಣವಷ್ಟೆ ಅಸಲಿ ರಾಜಕಾರಣ. ಉಳಿದಂತೆ ಅದು ಯಾವುದಾದರೊಂದು ಬಗೆಯ ಪ್ರಭುತ್ವ ಆಗಿರುತ್ತದೆ. 

ಹೀಗೆ ಜನೋದ್ದೇಶಿತ ರಾಜಕಾರಣವೂ ಅಡ್ಡದಾರಿ ಹಿಡಿದು ಪ್ರಭುತ್ವದ ತೆಕ್ಕೆಗೆ ಜಾರುತ್ತಿದೆ. ಅದೇ ಹಾದಿಹಿಡಿದ ವಿಜ್ನಾನ ಮತ್ತು ಅದರ ಫಲಶೃತಿಯಾದ ಆಧುನಿಕತೆಯು ನವಒಡೆಯರ ಹಸ್ತಕ್ಕೆ ಬಿದ್ದಿವೆ. ಈಗ ಕುಮಾರವ್ಯಾಸನ ಪದ್ಯವೊಂದು ನೆನಪಿಗೆ ಬರುತ್ತಿದೆ 
ಅರಸು ರಾಕ್ಷಸ ಮಂತ್ರಿ ಮೊರೆವ ಹುಲಿ ಅಧಿಕಾರಿಗಳು ಹದ್ದಿನ ನೆರವಿ ................ಈಗ ಜನಗಳ ಕೈಲಿ ಏನು ಉಳಿದಿದೆ?

ಯಾಹೊತ್ತೂ ಹಲಾಹಲದ ಜೊತೆಗೆ ಅಮೃತವೂ ಹುಟ್ಟುವುದು ಪ್ರಕೃತಿನಿಯಮ. ಹಾಗೆಯೆ ಸೃಷ್ಟಿ ಲಯ ಒಟ್ಟೊಟ್ಟಿಗೆ ಜನ್ಮ ತಳೆಯುತ್ತವಂತೆ. ಅವುಗಳ ಕಾಲ ಬಂದಾಗ ಪ್ರವೃತ್ತವಾಗುತ್ತವೆಯಂತೆ. ಪ್ರಕೃತಿ ನಿಯಮದಲ್ಲಿಯೆ ಸೃಷ್ಟಿ ಮತ್ತು ನಿಯಂತ್ರಣ ಶಕ್ತಿಗಳಿರುತ್ತವೆ ಎಂಬುದು ಸಾಬಿತಾಗಿ ಹೋಗಿದೆ. ಮನುಷ್ಯನ ಸಂಧರ್ಭವನ್ನೆ ತೆಗೆದುಕೊಂಡರೆ ಅವನಿಗೆ ಕಾಯಿಲೆಗಳೂ ಇವೆ. ಜೊತೆಯಲ್ಲಿ ಅದರ ನಿಯಂತ್ರಣ ಶಕ್ತಿಗಳಾದ ಔಷಧಗಳೂ ಇವೆ. ನಾವು ಈಗ ಪ್ರಸ್ತಾಪಿಸಿದ ಸ್ಪೋಟ ವಿಜ್ನಾನದ ಉದಯದ ಜೊತೆಗೆ ಅದನ್ನು ನಿಯಂತ್ರಿಸುವ ಶಕ್ತಿಗಳ ಉದಯವೂ ಆಗಿದೆ. ಸರಳಾರ್ಥದಲ್ಲಿ ಅವುಗಳನ್ನು ಪರ್ಯಾಯಗಳೆಂದು ಕರೆಯಲಾಗಿದೆ. ವೈರುಧ್ಯ ಚಿಂತನೆಯ ಭಾಷೆಯಲ್ಲಿ ಸೃಷ್ಟಿ/ಪ್ರತಿಸೃಷ್ಟಿ ಎನ್ನಬಹುದು. ಸಾಮಾನ್ಯರ ಭಾಷೆಯಲ್ಲಿ ದಾರಿಬದಲಿಸುವುದು ಎನ್ನುತ್ತಾರೆ. ಪ್ರಪಂಚ ನಡೆಯುವುದೇ ಹಾಗೆ.

ಸ್ಪೋಟ ವಿಜ್ನಾನಕ್ಕೊಂದು ಸಾವಧಾನವಿಜ್ನಾನ, ಅರಾಜಕರಾಜಕೀಯಕ್ಕೊಂದು ಸೃಜನಶೀಲರಾಜಕೀಯ ಇವತ್ತಿನ ಅವಶ್ಯಕತೆಯಾಗಿದೆ. ಸ್ಪೋಟವಿಜ್ನಾನಕ್ಕೆ ಮೊದಲು ಅಂತರ್ ಸಂಭಂದಿಯಾದ ಅಖಂಡಜ್ನಾನ ಪದ್ಧತಿಯೊಂದಿತ್ತು. ಸ್ಪೋಟವಿಜ್ನಾನ ಅದರ ಮಗ್ಗುಲು ಮುರಿಯಲು ಎಲ್ಲ ಪ್ರಯತ್ನ ಮಾಡಿತು. ಆದರೆ ಅದು ಸಾವಧಾನವಿಜ್ನಾನದ ಪರಿಕಲ್ಪನೆಯ ಸ್ವರೂಪದಲ್ಲಿ ಚಿಗುರೊಡೆಯಿತು. ಸ್ಪೋಟವಿಜ್ನಾನದ ಹುಟ್ಟು, ಅಬ್ಬರ ಮತ್ತು ಅವಾಂತರದ ಸಂದರ್ಭದಲ್ಲಿ ಅದು ಎರಡು ಪ್ರವೃತ್ತಿಗಳಲ್ಲಿ ಕಾಣಿಸಿಕೊಡಿದೆ. ಒಂದು, ಸ್ಪೋಟವಿಜ್ನಾನದ ಅವಾಂತರಕ್ಕೆ ಪ್ರತಿಭಟನೆ. ಎರಡು, ಜನರ ಮಧ್ಯೆಯೆ ಇದ್ದ ತಳ/ಕೆಳ ಜ್ನಾನಪದ್ಧತಿಗಳ ಹುಡುಕಾಟ ಮತ್ತು ಅವುಗಳ ಬಗ್ಗೆ ಮರುಚಿಂತನೆ. ಮೊದಲ ಹಂತದ ಪ್ರತಿಭಟನೆ ಆಧುನಿಕ ಎನ್ನುವ ಸೌಲಭ್ಯಗಳ ಬಗ್ಗೆ ತಿರಸ್ಕಾರ, ಅನಾದರ, ಮೂದಲಿಕೆ. ಇದರ ಪ್ರತಿಫಲ ಮಾತ್ರ ಫಲಪ್ರದವಾದುದಲ್ಲ. ಇದು ಒಂದುರೀತಿಯ ಪಲಾಯನ ಮತ್ತು ಸೋಲಿನಲ್ಲಿ ಅಂತ್ಯವಾಗುತ್ತದೆ. ದ್ಯೆತ್ಯ ಸ್ಪೋಟವಿಜ್ನಾನದ ಹೊರಗೆ ಮನರಂಜನೆ, ನೋವುಪರಿಹಾರಕ ಚಟುವಟಿಕೆ, ಅಲಮಾರಿತನ ಅನುಭವಿಸುವಿಕೆ ಹಾಗೂ ಹತಾಶರಾಗುವ ಮಾರ್ಗ ಕಂಡುಕೊಳ್ಳಲಾಯಿತು. ಎರಡನೆಯ ಹಂತದ ಪ್ರತಿಭಟನೆ ದುಡಿಯುವವರಿಗೆ ಸರಿಯಾದ ಅನುಕೂಲಗಳನ್ನು ಕಲ್ಪಿಸಲು ಹೋರಾಡುವುದು. ಅತಿದುಡಿಮೆ, ಮಾನಸಿಕಒತ್ತಡ, ದುಡಿಮೆಯ ದುರ್ಬಳಕೆ ಮತ್ತು ಹಿಂಸೆಯ ಬಗ್ಗೆ ಅಸಮಧಾನ, ಅಸಹನೆ ಮತ್ತು ಕ್ರೋಧವನ್ನು ವ್ಯಕ್ತಪಡಿಸುವುದು. ನಿಜವಾದ ಗುಣಾತ್ಮಕ ಪ್ರತಿಭಟನೆ ಎಂದರೆ ಕೈಗಾರಿಕೆಯ ಉತ್ಪಾದನೆ ಕಾರ್ಮಿಕರಿಗೆ ಮತ್ತು ಕಾರ್ಮಿಕರಾಜ್ಯಕ್ಕೆ ಸೇರಿದ್ದು ಎನ್ನುವುದು. ಮಾರ್ಕ್ಸ್ ಸಿಧಾಂತದ ಮೊದಲೂ ಇಂಥ ಪ್ರವೃತ್ತಿ ಇಂಗ್ಲೆಂಡ್ ನಲ್ಲಿ ಕಾಣಿಸಿಕೊಂಡಿದೆ. ಇದಕ್ಕೆ ಎಷ್ಟರ ಮಟ್ಟಿನ ತಾತ್ವಿಕತೆ ಇತ್ತು ಎನ್ನುವುದು ಬೇರೆಮಾತು. ಇದೊಂದು ಪ್ರತಿಸೃಷ್ಟಿಗೆ ಕಾರಣವಾದ ನಡೆವಳಿಕೆ. ಖಾಸಗಿಬಂಡವಾಳ ಒಡೆತನ ವಿರೋಧಿಯಾದ ಈ ಪ್ರವೃತ್ತಿ ಕಾರ್ಮಿಕ ಬಂಡವಾಳವಾದವನ್ನೆ ಸೃಷ್ಟಿಸಿತು ಒಂದು ಸಮತಲದ, ಸಮಾಧಾನದ ಹಾಗೂ ಸರ್ವರ ಹಿತದ ಪ್ರಗತಿಯ ಚಿಂತನೆ ಇದರಿಂದ ದೂರವೆ ಉಳಿಯಿತು.

ಸಾವಧಾನ ವಿಜ್ನಾನವೆ ಈ ಹೊತ್ತಿನ ಎಲ್ಲರ ಸದಾವಕಾಶದ ಸ್ಥಿತಿ ಎಂದು ನನಗೆ ಅನಿಸಿದೆ. ಇದನ್ನು ಸಮುದಾಯ ಅಂತರ್ಗತ ವಿಜ್ನಾನ ಎಂದು ಕರೆಯುವುದುಂಟು. ಅಗತ್ಯತೆ ಸೃಷ್ಟಿಯ ತಾಯಿ ಎಂಬ ಸಾರ್ವತ್ರಿಕ ನಿಯಮದಂತೆ ಮನುಷ್ಯ ತನ್ನ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಾ ಹೋಗುತ್ತಾನೆ. ಅದು ಹಂಚಿಕೆಯ ವಿಜ್ನಾನ. ಆಧುನಿಕ ವಿಜ್ನಾನದಂತೆ ಶೇಖರಣೆ ಮತ್ತು ಧೂರ್ತತನ ಪ್ರಚೋದಕ ಜ್ನಾನವಲ್ಲ/ಅದು ಪ್ರಚೋದನ ರಹಿತ ಎಂದೇನೂ ಅಲ್ಲ. ಅದರೆ ಅದು ಏಕಮುಖ ಹಾಗೂ ಏಕಪಕ್ಷೀಯವಾಗಿರುವುದಿಲ್ಲ. ಒಂದು ಸಮುದಾಯಕ್ಕೆ ಕತ್ತಿ ಗುರಾಣಿಗಳು ಇದ್ದಲ್ಲಿ, ಅಂಥವನ್ನು ಹೊಂದುವ ಅವಕಾಶ ಮತ್ತೊಂದು ಗುಂಪಿಗೂ ಇರುತ್ತದೆ. ತೀರ್ಮಾನ ಎರಡು ಕಡೆಯವರ ಭಾಗವಹಿಸುವಿಕೆಯಿಂದಲೆ ನಡೆಯಬೇಕಾಗುತ್ತದೆ. ಅಮೆರಿಕದ ಹಸ್ತದಲ್ಲಿ ಮಾನವ ಚಾಲನೆರಹಿತ ದ್ರೋಣ್ ಯುದ್ದವಿಮಾನವಿದ್ದು ವಿರೋಧಿಗಳ ಕೈಯಲ್ಲಿ ಅಂಥದೇನೂ ಇಲ್ಲದ ಪರಿಸ್ಥಿತಿ ಇರುವುದಿಲ್ಲ. ರಿಲಯನ್ಸ್ ಒಡೆಯನ ಹತ್ತಿರ ಇಪ್ಪತ್ತೇಳು ಅಂತಸ್ತಿನ ಮನೆ ಇದ್ದು ಇನ್ನೊಂದು ಕಡೆ ಗುಡಿಸಿಲಿನವನಸ್ಥಿತಿ ಇರುವುದಿಲ್ಲ. ಸಹಜ ಸೃಷ್ಟಿ ಮತ್ತು ಪೈಪೋಟಿಗೆ ಅವಕಾಶವನ್ನೆ ಕೊಡದೆ ಶೋಷಣೆ
ಆಧಾರಿತ ಬೆಳವಣಿಗೆಯನ್ನು ಅಭಿವೃದ್ಧಿ ಎಂದು ಕರೆಯುವುದು ಅವೈಜ್ನಾನಿಕವಾಗುತ್ತದೆಯೆ ಕೊರತು ಪ್ರಗತಿ ಎನಿಸಿಕೊಳ್ಳುವುದಿಲ್ಲ. ನಮಗೆ ಎಲ್ಲರೊಳಗೆ ಇರುವ ಪ್ರಗತಿ ಪ್ರಚೋದಿತವಾಗಬೇಕೆ ವಿನಹ ಕೆಲವರ ನೆಗೆತ ಅಲ್ಲ. 

ಈ ಸಾವಧಾನವಿಜ್ನಾನ ಹಿಂದೆ ಎಲ್ಲ ಜನರ ಜೀವನ ಪದ್ಧತಿಯಾಗಿತ್ತು. ಆಧುನಿಕ ವಿಜ್ನಾನದ ಸಂದರ್ಭದಲ್ಲಿ ಅದು ಹಿಂದೆಬಿದ್ದು ಪಾರಂಪರಿಕವಿಜ್ನಾನ, ಜನಪದ ವಿಜ್ನಾನ, ಅಥವ ಜನಸಾಮಾನ್ಯರವಿಜ್ನಾನ ಎಂದು ಕರೆಸಿಕೊಂಡಿತು. ಇದು ಓಡುವವನ ಎದುರು ನಡೆಯುವವನು ಅಸಹಜ ಎನ್ನುವಂತಾಯಿತು. ಸಾವಧಾನ ಅಥವ ಜನಪದಜ್ನಾನ-ವಿಜ್ನಾನ ಅಖಂಡ ವಿಜ್ನಾನ. ಇದನ್ನು ಅವಿಭಜಿತ ವಿಜ್ನಾನ ಎಂದೂ ಕರೆಯಲಾಗಿದೆ. ಆಧುನಿಕವಿಜ್ನಾನ ಖಂಡವಿಜ್ನಾನ. ಅದು ಜ್ನಾನವನ್ನೂ, ಮನುಷ್ಯನನ್ನೂ ಬೇರೆಬೇರೆಯಾಗಿಯೆ ನೋಡುತ್ತದೆ. ಅದರ ವಿಶಿಷ್ಟ ಸಾಧನೆ ಲಾಭವನ್ನು ಕುರಿತದ್ದಾಗಿದೆ. ಲಾಭದ ಮೂಲಕ ಅಭಿವೃದ್ದಿ ಎಂದರೆ ನಷ್ಟಕ್ಕೊಳಗಾದವನೂ ಇರಲೆಬೇಕಲ್ಲವೆ? ಅವನು ಯಾರ ಮನುಷ್ಯ? ಅಂದರೆ ಆಧುನಿಕವಿಜ್ನಾನ ಅಖಂಡ ಸ್ವರೂಪಿಯಲ್ಲ. ಅದು ಅಖಂಡ ಜನತೆಯನ್ನು ಉದ್ದೇಶಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದುದರಿಂದ ಈಗ ನಾವು ಸಾವಧಾನ ವಿಜ್ನಾನ ಅಥವ ಜಾನಪದವನ್ನು ಕೈಗೆತ್ತಿಕೊಳ್ಳಬೇಕಾಗಿದೆ. ವಿಘಟನಪೂರ್ವ ಸಮಾಜವೆ ಜನಪದಸಮಾಜ. ಅಲ್ಲಿ ಸಮಾಜವಿಜ್ನಾನ ಮತ್ತು ನೈಸರ್ಗಿಕವಿಜ್ನಾನ ಬೇರೆಬೇರೆಯಾಗಿರಲಿಲ್ಲ. ಒಬ್ಬ ರೈತನೊಳಗೆ ರೈತಸಮಾಜವೂ ರೈತವಿಜ್ನಾನಿಯೂ ಅಡಕವಾಗಿದ್ದರು. ಒಬ್ಬ ಕುಶಲಕರ್ಮಿಯಲ್ಲಿ ಒಬ್ಬ ತಂತ್ರಜ್ನಾನಿ ಮತ್ತು ಒಬ್ಬ ತಂತ್ರಸಾಮಾಜಿಕ ಕೂಡಿಯೆ ಇದ್ದರು. ಇಂಥ ಜಾನಪದದ ಮೂಲಸೆಲೆ ಮತ್ತು ನೆಲೆ ಸಾವಧಾನವಿಜ್ನಾನದ ಹುಡುಕಾಟವೆ ಆಗಿತ್ತು. ಸ್ಪೋಟವಿಜ್ನಾನದ ಸಂದರ್ಬದಲ್ಲಿ ಹಿಂದೆ ಸರಿದಂತೆ ಕಂಡರೂ ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಅವತಾರಗಳಲ್ಲಿ ಜಾನಪದ ಹೆಸರಿನಲ್ಲಿ ಅದು ಹುಟ್ಟಿಕೊಂಡಿದೆ. ಎಲ್ಲಿ ಸ್ಪೋಟವಿಜ್ನಾನ ಹುಟ್ಟಿತೊ ಅದೇ ಇಂಗ್ಲೆಂಡಿನಲ್ಲಿ ’ಫೋಕ್ ಲೋರ್’ ಎಂಬ ಹೆಸರಿನಲ್ಲಿ ಕಾಣಿಸಿಕೊಂಡರೆ, ಜರ್ಮನಿಯಲ್ಲಿ ’ವಾಲ್ಕ್ಸುಂಡೆ’ ಎಂಬ ಹೆಸರಿನಿಂದ ಜನ್ಮತಳೆಯಿತು. ಇದನ್ನು ಜನಪದವಿಜ್ನಾನ, ಪಾರಂಪರಿಕವಿಜ್ನಾನ ಎಂದು ಆಗ ಗುರುತಿಸಲಾಯಿತು. ನಿಸರ್ಗ ಮತ್ತು ಸಮಾಜ ಎರಡನ್ನೂ ಒಳಗೊಂಡ ಅಖಂಡಜ್ನಾನ ಎಂದು ಅದನ್ನು ಸ್ಪಷ್ಟಮಾಡಿಕೊಳ್ಳಲಾಯಿತು. ಜಗತ್ತಿನ ತಜ್ನರು ಇದನ್ನು ಗಮನಿಸಿದರು. ಯೂರೊಕೇಂದ್ರ ಚಿಂತನೆಯನ್ನು ಅನುಸರಿಸಿದವರು ಇದನ್ನು ಪಾರಂಪರಿಕವಿಜ್ನಾನ ಎಂದು ಕರೆದರೆ ಹಿಂದುಳಿದ ದೇಶಗಳವರು ಇದು ದೇಶಬದ್ಧಜ್ನಾನವಾದುದರಿಂದ ದೇಸಿ ಎಂದು ಕರೆದುಕೊಂಡರು. ಅಂಥ ನಮ್ಮೆಲ್ಲರನ್ನು ಕೂಡಿಸಿಕೊಳ್ಳುವ ಸಾವಧಾನವಿಜ್ನಾನವನ್ನು ಅರ್ಥಾತ್ ಜಾನಪದವನ್ನು ಕೈಗೆತ್ತಿಕೊಳ್ಳಬಹುದೆ ?

ಗುರುವಾರ, ಆಗಸ್ಟ್ 2, 2012

ಪೂಜಾ ಕುಣಿತದ ಸವಿತಾ ಚಿರುಕುನ್ನಯ್ಯ

ಉ.ಮ.ಮಹೇಶ್ 

ಕೃಪೆ: ಪ್ರಜಾವಾಣಿ


ಕರ್ನಾಟಕದ ಜನಪದ ಕಲೆಗಳಿಗೆ ಮಹಿಳೆಯರ ಪ್ರವೇಶವಾಗುತ್ತಿದೆ. ಹಾಗಾಗಿ ಕರ್ನಾಟಕದ ಜನಪದ ಕಲೆಗಳನ್ನು ಈತನಕ ವಿವರಿಸಿದ ಮಾದರಿಗಳನ್ನು ಬದಲು ಮಾಡಿಕೊಳ್ಳಬೇಕಿದೆ. ಪೂಜಾ ಕುಣಿತ ಪುರುಷರಿಗೆ ಸೀಮಿತವಾದ ಕಲೆ ಎಂದಿದ್ದರೂ ಅದರಲ್ಲಿ ಸವಿತಾ ಚಿರುಕುನ್ನಯ್ಯ ಸಾಧನೆ ಮಾಡಿದ್ದಾರೆ. ಉ.ಮ.ಮಹೇಶ್ ಬರಹ ಕನ್ನಡ ಜಾನಪದ ಬ್ಲಾಗ್ ಓದುಗರಿಗಾಗಿ.
-ಅರುಣ್



14 ವರ್ಷದಿಂದ ಪೂಜಾಕುಣಿತದ ಸೇವೆಯಲ್ಲಿ ತೊಡಗಿರುವ ಕಲಾವಿದೆ ಸವಿತಾ ಚಿರುಕುನ್ನಯ್ಯ, ಬಹುಶಃ ರಾಜ್ಯದಲ್ಲಿ ಪೂಜಾಕುಣಿತ ಕಲೆಯಲ್ಲಿ ತೊಡಗಿಸಿ ಕೊಂಡಿರುವ ಏಕೈಕ ಮಹಿಳೆ. ಜನಪದ ಕಲೆಯಲ್ಲಿನ ಒಂದು ಪ್ರಕಾರವಾದ ಪೂಜಾ ಕುಣಿತ ನೃತ್ಯ ಮತ್ತು ವೇಷಭೂಷಣಗಳಿಂದ ಸಭಿಕರ ಮನ ಗೆಲ್ಲುವ ದೇಸೀ ಕಲಾ ಪ್ರಕಾರ. ಪುಷ್ಪಾಲಂಕೃತ ಸುಮಾರು 30-40 ಕೆ.ಜಿ. ತೂಕದ ದೇವರ ಉತ್ಸವವನ್ನು ತಲೆಯಲ್ಲಿ ಹೊತ್ತು ಸಮತೋಲನದಿಂದ ಕಲಾವಿದರು ಕುಣಿಯಬೇಕು.

  ಸುತ್ತಲೂ ಡೊಳ್ಳು, ತಮಟೆಯ ಸದ್ದು. ಎದುರಿಗೆ ಪ್ರೇಕ್ಷಕರ ಮೆಚ್ಚುಗೆಯ ಚಪ್ಪಾಳೆ. ಇದರ ನಡುವೆಯೇ ದೇವರನ್ನು ಹೊತ್ತು ಬೀಳದಂತೆ ಸಮತೋಲನ ಕಾಯ್ದು ಕೊಳ್ಳುತ್ತಾ ಲೋಟ, ಮಡಿಕೆಯ ಮೇಲೇ ಹೆಜ್ಜೆ ಹಾಕುವುದು ಸರಾಗವಾದ ಕಾರ್ಯವೇನೂ ಅಲ್ಲ.ಸಾಮಾನ್ಯವಾಗಿ ಇದು ಪುರುಷರಿಗೆ ಮೀಸಲಾದ ಕಲೆ. ತೂಕವನ್ನು ಹೊತ್ತು ಗಂಟೆ ಕಾಲ ಪೂಜಾ ಕುಣಿತ ಮಾಡುವುದು ಮಹಿಳೆಯರಿಗೆ ಕಷ್ಟಕರ ಎಂಬುದು ಇದಕ್ಕೆ ಕಾರಣ. ಹಾಗೇನೂ ಇಲ್ಲ ಎಂಬುದನ್ನು ಇಲ್ಲೊಬ್ಬ ಮಹಿಳೆ ಸಾಧಿಸಿ ತೋರಿಸಿದ್ದಾರೆ.

   ಇವರು ಸವಿತಾ ಚಿರುಕುನ್ನಯ್ಯ. ಮಂಡ್ಯ ಜಿಲ್ಲೆಯ ತಳಗವಾದಿ ಗ್ರಾಮದ ನಿವಾಸಿ. ಪೂಜಾ ಕುಣಿತದ ಕಲೆ ಜನ್ಮತಃ ಬಂದ ಬಳುವಳಿ. ಕಳೆದ 14 ವರ್ಷದಿಂದ ಪೂಜಾಕುಣಿತದ ಸೇವೆಯಲ್ಲಿ ತೊಡಗಿರುವ ಕಲಾವಿದೆ. ಬಹುಶಃ ರಾಜ್ಯದಲ್ಲಿ ಪೂಜಾಕುಣಿತ ಕಲೆಯಲ್ಲಿ ತೊಡಗಿರುವ ಏಕೈಕ ಮಹಿಳೆ.

      ಪಿಯುಸಿವರೆಗೂ ಓದಿರುವ ಸವಿತಾ ಪೂಜಾ ಕುಣಿತದ ಅ, ಆ, ಇ, ಈ ಅನ್ನು ಕರಗತ ಮಾಡಿಕೊಂಡಿರುವ ಸುಶಿಕ್ಷಿತೆ. ಇತ್ತೀಚೆಗಷ್ಟೇ ರಾಜಸ್ತಾನದಲ್ಲಿ ನಡೆದ 16ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಜನಪದ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ 19 ಜನರ ತಂಡದ ಮಂಡ್ಯ ತಾಲ್ಲೂಕು ಕೆ.ವಿ.ಎಸ್.ಎಸ್. ಕಲಾ ಬಳಗದ ಏಕೈಕ ಸದಸ್ಯೆ.

   ‘ಹೆಚ್ಚು ಓದಿಲ್ಲ ಎಂಬ ಬೇಸರವೇನೂ ನನಗೆ ಕಾಡಿಲ್ಲ. ಪೂಜಾ ಕುಣಿತ ನನಗೆ ಸಂತೋಷ, ಗೌರವ, ಹೆಸರು ಎಲ್ಲವನ್ನು ಕೊಟ್ಟಿದೆ’ ಎನ್ನುವ ಸವಿತಾ, ಕಲಾ ಮತ್ತು ಸಂಸಾರದ ನೊಗ ಎರಡನ್ನೂ ಒಟ್ಟಿಗೆ ಹೊರುವ ಮೂಲಕ ಸಮತೋಲನ ಕಾಯ್ದುಕೊಳ್ಳುತ್ತಿದ್ದಾರೆ. ಕಲೆಗೆ ಇನ್ನಿಲ್ಲದ ಪ್ರೋತ್ಸಾಹ ಕೊಡುತ್ತಿರುವ ಪತಿ, ಕೆ.ಎಂ.ದೊಡ್ಡಿಯಲ್ಲಿ ವ್ಯಾಪಾರ ನಡೆಸುವ ಪತಿ ರಾಜು ಅವರ ಬಗೆಗೆ ವಿಶೇಷ ಪ್ರೀತಿ.


ಏನಪ್ಪಾ ಈ ಹುಡುಗಿ...!
    ‘ಚಿಕ್ಕಂದಿನಿಂದಲೇ ಪೂಜಾ ಕುಣಿತದತ್ತ ಆಕರ್ಷಿತಳಾಗಿದ್ದು, 10 ವರ್ಷ ಇದ್ದಾಗಲೇ ಕಲಾ ಪ್ರದರ್ಶನ ನೀಡಲು ಆರಂಭಿಸಿದೆ. ತಂದೆಯೂ ಪೂಜಾ ಕುಣಿತದ ಕಲಾವಿದರು. ಅಣ್ಣಂದಿರಿಗೆ ಮನೆಯ ಬಳಿ ಹೇಳಿ ಕೊಡುತ್ತಿದ್ದರು. ಜೊತೆಗೇ ನಾನು ಸೇರಿಕೊಂಡೆ. ಬಹುಬೇಗನೆ ಕಲಿತೂಕೊಂಡೆ. ಅದು, ಹೆಣ್ಣು ಮಕ್ಕಳನ್ನು ಮನೆಯ ಹೊರಗೇ ಕಳುಹಿಸಲಾಗದ ದಿನಗಳು. ನೋಡಿದವರೂ ಏನಪ್ಪಾ ಈ ಹುಡುಗಿ ಎಂದು ಮಾತನಾಡುತ್ತಿದ್ದರು. ಈಗ ಕಾಲ ಬದಲಾಗಿದೆ. ವಿವಿಧೆಡೆ ನನ್ನ ಪ್ರದರ್ಶನಗಳು ನೀಡಿದ ಬಳಿಕ ಅದೇ ಜನರು ‘ಏನಪ್ಪಾ ಈ ಹೆಣ್ಣು’ ಎಂದು ಮೆಚ್ಚುಗೆಯ ಮಾತನಾಡುತ್ತಿದ್ದಾರೆ’ ಎಂದು ಸ್ಮರಿಸುತ್ತಾರೆ.

ಈವರೆಗೂ ಚೀನಾ, ಮುಂಬೈ, ದೆಹಲಿ, ಗೋವಾ, ಹೈದರಾಬಾದ್, ಚೆನ್ನೈ, ಗುಜರಾತ್, ಹರಿಯಾಣ ಅಲ್ಲದೇ ನಾಡಿನ ಪ್ರಸಿದ್ದ ಉತ್ಸವಗಳಾದ ಮೈಸೂರು ದಸರಾ, ಹಂಪಿ ಉತ್ಸವಗಳಲ್ಲೂ ಪ್ರದರ್ಶನ ನೀಡಿ ಭೇಷ್ ಎನಿಸಿಕೊಂಡಿದ್ದಾರೆ. ಸದ್ಯ, 15-20 ಯುವತಿಯರಿಗೆ ಪೂಜಾಕುಣಿತ ಕಲಿಸುತ್ತಿದ್ದಾರೆ. ತಂದೆ ಪೂಜಾ ಕುಣಿತದ ಕಲಾವಿದರೇ ಆಗಿದ್ದು, ಅಣ್ಣಂದಿರು ಮಾಡುತ್ತಿದ್ದುದು ಆ ಕಲೆಯತ್ತ ಆಕರ್ಷಿತಳಾಗಲು ಕಾರಣ. ‘ನಾನು ಗಂಡಸಿಗೆ ಸರಿಸಮವಾಗಿ ಈ ಕಲೆಯನ್ನು ನಿಭಾಯಿಸಬಲ್ಲೆ ಎಂಬುದು ನನಗೆ ಸಮಾಧಾನ ತರುವ ಸಂಗತಿ. 

ಕೆವಿಎಸ್‌ಎಸ್ ಕಲಾಬಳಗದಲ್ಲಿ ನಾನು ಏಕೈಕ ಮಹಿಳಾ ಸದಸ್ಯೆಯಾದರೂ ಉಳಿದ ಕಲಾವಿದರ ಪ್ರೋತ್ಸಾಹ ನಿರೀಕ್ಷೆಗೂ ಮೀರಿ ಚೆನ್ನಾಗಿದೆ. ಇನ್ನಷ್ಟು ಯಶಸ್ಸು ಸಾಧಿಸುವ ಉತ್ಸಾಹವೂ ಇದೆ’ ಎನ್ನುತ್ತಾರೆ.ಇದೆಲ್ಲದರ ನಡುವೆಯೂ ಇರುವ ಒಂದೇ ಬೇಸರದ ಸಂಗತಿ ಎಂದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಕಚೇರಿಯು ಯಾವುದೇ ಕಾರ್ಯಕ್ರಮಕ್ಕೂ ಆಹ್ವಾನ ನೀಡುವುದಿಲ್ಲ. ವಿವಿಧ ರಾಜ್ಯಗಳಲ್ಲಿ ಕಾರ್ಯಕ್ರಮ ನೀಡಿದ್ದೇನೆ. 

ಇಲಾಖೆಯ ಬೆಂಗಳೂರು ಕಚೇರಿಯವರೂ ಅವಕಾಶ ನೀಡುತ್ತಾರೆ. ಜಿಲ್ಲೆಯ ಅಧಿಕಾರಿಗಳು ಏಕೆ ನಿರ್ಲಕ್ಷಿಸುತ್ತಾರೆ ಎಂಬುದು ಅವರ ಪ್ರಶ್ನೆ. ಆದರೆ, ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸುವ ಗುರಿ ಇದೆ. ಆ ನಿಟ್ಟಿನತ್ತ ಈಗ ಗಮನಹರಿಸಿ ತೊಡಗಿಸಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಸವಿತಾ. ಪುರುಷರಿಗೆ ಮೀಸಲು ಎನ್ನುವ ಪೂಜಾ ಕುಣಿತ ಕಲೆಗೂ ಸವಿತಾ ಅವರ ಪೂಜೆ ನಿರಂತರವಾಗಿ ಸಾಗಲಿ ಎಂದು ಆಶಿಸೋಣ.