ಗುರುವಾರ, ಡಿಸೆಂಬರ್ 22, 2011

ಸೊಲಬಕ್ಕನವರ ಜಾನಪದ ಪಾರ್ಕ


ನಾನೊಮ್ಮೆ ದಾರವಾಡದ ವಿಧ್ಯಾವರ್ದಕ ಸಂಘದ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಅಲ್ಲಿ ಕಲಾವಿದರಾದ ಸೊಲಬಕ್ಕನವರ ಮಗಳು ವೇದಾರಾಣಿ ಅವರು ಮಾತಿಗೆ ಸಿಕ್ಕರು. ಅವರು ನನ್ನನ್ನು ಜಾನಪದ ಪಾರ್ಕ ನೋಡಲು ಬರುವಂತೆ ಒತ್ತಾಯಿಸಿದರು. ಅವರು ಹಾಗೆ ಕರೆಯಲು ನಾನು ಜಾನಪದ ಸೆಮಿನಾರೊಂದನ್ನು ತುಂಬಾ ಖಾರವಾಗಿ ವಿಶ್ಲೇಷಿಸಿ ಗೌರಿ ಲಂಕೇಶ ಪತ್ರಿಕೆಗೆ ಬರೆದ ಬರಹವೊಂದರ ಪ್ರಭಾವ ಕಾರಣವಾಗಿತ್ತು. ನಾನು ಜಾನಪದ ವಿಶ್ವವಿದ್ಯಾಲಯದ ಸ್ಥಳ ಶಿಗ್ಗಾಂವ ಪಕ್ಕದ ಕಾಡಗೋಡು ಹತ್ತಿರವೇ ಈ ಫಾರ್ಕು ಇರುವುದರಿಂದ ಎರಡನ್ನೂ ನೋಡಬಹುದೆಂದು ಹೋದೆ. ಪೂನ ಹೈವೆಗೆ ಹೊಂದಿಕೊಂಡಂತಿರುವ ಈ ರಾಕ್ ಗಾರ್ಡನ್ ಜನಾಕರ್ಶಕವಾಗಿದೆ.

ಜಾನಪದ ಕುರಿತು ಓದಿದ, ಜನಪದ ಕಲಾವಿದರೊಂದಿಗೆ ಒಡನಾಡಿದ ನನಗೆ ಜನಪದರ ಬದುಕೆ ಕಲಾಕೃತಿಯಾದದ್ದನ್ನು ನೋಡಿದ್ದು ಇದು ಮೊದಲು. ಈ ಪಾರ್ಕನ್ನು ನೋಡಲು ಜನವೋ ಜನ. ಇಷ್ಟೊಂದು ಜನರನ್ನು ಆಕರ್ಶಿಸಲು ಈ ಪಾರ್ಕಿನಲ್ಲಿರುವ ಶಕ್ತಿಯಾದರೂ ಏನು ಎಂದು ನೋಡಿದರೆ, ಅದು ಜನಬದುಕಿನದೇ ಕಲಾಕೃತಿಗಳು ಇಲ್ಲಿ ಜೀವತಳೆದದ್ದು. ಕಳೆದು ಹೋಗುತ್ತಿರುವ ಬದುಕನ್ನು ಹಿಡಿದು ತೋರಿಸುವಂತಿರುವ ಇಲ್ಲಿನ ಕಲಾಕೃತಿಗಳು ನೋಡುಗರೊಳಗೆ ಹೊಸ ಪುಳಕವೊಂದನ್ನು ಹುಟ್ಟಿಸುತ್ತವೆ. ಈ ಪಾರ್ಕನ ಹೆಸರು ರಾಕ್ ಗಾರ್ಡನ್, ಇದರ ಪ್ರವೇಶದಲ್ಲಿ ಎರಡು ಬಂಡಿ ಗಾಲಿಗಳನ್ನು ಜೋಡಿಸಿಡಲಾಗಿದೆ. ಒಂದು ಗಾಲಿಯನ್ನು ತೆರೆದರೆ ಒಳಗೆ ಪ್ರವೇಶ ತೆರೆದುಕೊಳ್ಳುತ್ತದೆ. ನಾನು ಹೋದಾಗ ಒಬ್ಬರಿಗೆ ಪ್ರವೇಶ ಧನ ಇಪ್ಪತ್ತು ರೂ.

ಇಲ್ಲಿ ಎತ್ತನ್ನು ಹೊಡೆಯುತ್ತಾ ಹೊಲ ಊಳುವ ರೈತರಿದ್ದಾರೆ, ಮನೆಮುಂದೆ ಕೂತು ಬದುಕಿನ ಬಗ್ಗೆ ಚಿಂತಿಸುವ ಹೆಣ್ಮಕ್ಕಳಿದ್ದಾರೆ, ಗುಡಿಯೊಂದರಲ್ಲಿ ಪಾಠ ಮಾಡುವ ಮಾಸ್ತರು ತನ್ಮಯತೆಯಿಂದ ಪಾಠ ಕೇಳುವ ಮಕ್ಕಳಿದ್ದಾರೆ, ಕತ್ತೆಯ ಮೇಲೆ ಬಟ್ಟೆಯ ಗಂಟನ್ನು ಹೇರಿಕೊಂಡು ತಾನೂ ಗಂಟೊಂದನ್ನು ಹೊತ್ತುಕೊಂಡು ನಡೆಯುತ್ತಿರುವ ಅಗಸಗಿತ್ತಿಯೂ, ಇಸ್ತ್ರಿ ಮಾಡುವ ಅಗಸನೂ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ, ಬಳೆತೊಡಿಸುವ ಬಳೆಗಾರ ಬಳೆಗಾರ್ತಿಯೂ ಇದ್ದಾರೆ, ಕೌದಿ ಹೆಣೆವ ಹೆಣ್ಮಕ್ಕಳಿದ್ದಾರೆ, ಕಂಬಳಿ ನೇಯುವ ನೇಕಾರರಿದ್ದಾರೆ, ರಾಗಿ ಬೀಸುತ್ತಿರುವ ಮಹಿಳೆಯರು ಬೀಸುವ ಕಾಯಕದಲ್ಲಿ ಮುಳುಗಿದ್ದಾರೆ, ಕಣದಲ್ಲಿ ಕಾಳು ಹೊಕ್ಕುವ ರೈತರಿದ್ದಾರೆ, ಬುಟ್ಟಿ ಹೆಣೆವವರೂ, ಕಸಬರಿಗೆ ಕಟ್ಟುವವರು, ಬಡಗಿಗಳು, ಕಮ್ಮಾರರು, ದಿನಸಿ ಮಾರುವ ಅಂಗಡಿಯವರು, ಆಡು ಕುರಿ ದನ ಕಾಯುವ ಹುಡುಗರು, ತರಾವರಿ ಆಕಳು ಎಮ್ಮೆಗಳು ಹೀಗೆ ಜನಬದುಕಿನ ಲೋಕವನ್ನೇ ಮರುಸೃಷ್ಟಿ ಮಾಡಿದ ನಿಜ ಬದುಕೊಂದು ನೋಡುಗರನ್ನು ದಿಗ್ಭ್ರಮೆ ಗೊಳಿಸುತ್ತದೆ.


ಈ ಕಲಾಕೃತಿಗಳು ತುಂಬಾ ಸೂಕ್ಷ್ಮವಾಗಿವೆ. ಜನವಸತಿಯಲ್ಲಿ ಸಹಜವಾಗಿರುವ ಪ್ರಾಣಿ ಜಗತ್ತನ್ನು ತರಲಾಗಿದೆ. ಹಾಗಾಗಿಯೇ ಇಲ್ಲಿ ಕೋಳಿ ಹುಂಜಗಳು ಸುತ್ತಾಡುವಂತಿವೆ. ಎಲ್ಲಾ ಜಾತಿಯ ಜನಸಮುದಾಯದ ಕುರುಹುಗಳೂ ಇಲ್ಲಿವೆ. ದನ ಕರುಗಳಂತೂ ಕೊಬ್ಬಿ ತಿವಿಯುತ್ತವೇನೋ ಎಂದು ನೋಡಿದಾಕ್ಷಣ ಹಿಂದಕ್ಕೆ ಸರಿಯುವಂತಹ ಭಾವವನ್ನು ಹೊಮ್ಮಿಸುತ್ತವೆ. ಬಡತನದ ಕುರುಹುಗಳಿವೆ, ಜನರ ಜಿಗುಟುತನದ ಗುರುತುಗಳಿವೆ.ಜನ ಜೀವನ ವಿಧಾನದ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಇಲ್ಲಿನ ಕಲಾಕೃತಿಗಳಲ್ಲಿ ಹಿಡಿಯಲಾಗಿದೆ. ಇದೆಲ್ಲವೂ ನಾವು ಜನಪದರ ಗೀತೆ, ಕಥೆ ಕೇಳಿದ ಅನುಭವಕ್ಕಿಂತ ಬೇರೆಯದೇ ಆದ ಅನುಭವವನ್ನು ಕೊಡುತ್ತದೆ. ಜಾನಪದ ವಸ್ತುಗಳನ್ನಾಧರಿಸಿದ ಮ್ಯೂಜಿಯಂಗಿಂತ ಈ ಜೀವಂತ ಜನರ ಕಲಾಕೃತಿಗಳು ಬೇರೆಯದೇ ಆದ ಲೋಕವೊಂದನ್ನು ತೆರೆದು ತೋರುತ್ತವೆ.

ಇಂದು ಕಲಾಕೃತಿಗಳೆಂದರೆ ರಿಯಲಿಸ್ಟಿಕ್, ಪೋಟ್ರೇಟ್ ಮಾದರಿಗಳು ತೀರಾ ಸವಕಲಾದ ಹಳೆ ಮಾದರಿಗಳು. ಅಂತಹ ಮಾದರಿಗಳನ್ನು ಮಾಡುವ ಕಲಾವಿದರು ತುಂಬಾ ಸಾಂಪ್ರದಾಯಿಕರು, ಅವರಿಗೆ ಮಾಡ್ರನ್ ಆರ್ಟ ಗೊತ್ತಿಲ್ಲದವರು ಎಂದು ಭಾವಿಸುತ್ತಾರೆ. ಹಾಗಾಗಿ ಕಲಾವಿದರು ಅಬ್ ಸ್ಟ್ರಾಕ್ಟ, ಮಾಡ್ರನ್ ಆರ್ಟನ ಮಾದರಿಗಳಿಗೆ ಮಾರು ಹೋಗುತ್ತಾರೆ. ಇಂತಹ ಹೊತ್ತಲ್ಲಿ ಕಲಾಶಾಲೆಯ ಮಾಸ್ತರರಾಗಿದ್ದ ಸೊಲಬಕ್ಕನವರ ಗ್ರಾಮೀಣ ಸೊಗಡಿನ ರಿಯಲಿಸ್ಟಿಕ್ ಪೊಟ್ರೆಟ್ ಮಾದರಿಯ ಕಲಾಕೃತಿಗಳಿಗೆ ಮಾರು ಹೋದದ್ದು ನಿಜಕ್ಕೂ ಅಚ್ಚರಿಯ ಸಂಗತಿ.

ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಹುಲಸೋಗಿಯವರಾದ ತಿ.ಬಾ ಸೊಲಬಕ್ಕನವರ ಅವರದು ಒಂದು ರೀತಿಯ ಸವಾಲಿನ ಬದುಕು. ಕಾರಂತರು ಯಕ್ಷಗಾನವನ್ನು ಬೆಳೆಸಿದಂತೆ ದೊಟ್ಟಾಟ, ಸಣ್ಣಾಟಗಳನ್ನು ಬೆಳೆಸಬೇಕೆಂದು ಸ್ವತಃ ದೊಡ್ಡಾಟದ ವೇಷ ಧರಿಸಿದವರು. ಶ್ರೀಶೈಲ ಹುದ್ದಾರ ಮುಂತಾದ ಸಮಾನಾಸಕ್ತ ಗೆಳೆಯರನ್ನು ಸೇರಿಸಿಕೊಂಡು ಅವರು ದೊಡ್ಡಾಟಗಳನ್ನು ಸ್ವತಃ ಅಭಿನಯಿಸಿ, ಯುವ ತಂಡಗಳನ್ನು ಕಟ್ಟಿ ಬೇರೆ ಬೇರೆ ಕಡೆ ಹೋಗಿ ಪ್ರದರ್ಶನ ಕೊಟ್ಟು ಸಂಭ್ರಮಿಸಿದರು. ಕಾರಂತರಿಗೆ ಸಿಕ್ಕಂತಹ ಮೇಲ್ಜಾಜಿಯ ಬೆಂಬಲ ಸೊಲಬಕ್ಕನವರಿಗೆ ಸಿಕ್ಕಲಿಲ್ಲ. ಕಾರಣ ಇವರು ದೊಡ್ಡಾಟದ ಹುಚ್ಚಿಗಾಗಿ ಸಾಕಷ್ಟನ್ನು ಕಳೆದುಕೊಳ್ಳಬೇಕಾಗಿ ಬಂತು. ಈ ದಾರಿಯು ಅವರಿಗೆ ಹೂವಿನದಾಗದೆ, ಮುಳ್ಳಿನದಾಗಿತ್ತು. ನಾನು ಅವರೊಂದಿಗೆ ಮೂರು ಗಂಟೆಗಳ ಕಾಲ ಮಾತನಾಡಿದಾಗ ಇಂತಹ ಸಾಹಸದ ಕಥೆಗಳನ್ನು ನೋವಿನಿಂದಲೂ, ವಿಷಾದದಿಂದಲೂ, ತಿಳಿಹಾಸ್ಯ ಬೆರೆಸಿಯೂ ಹೇಳಿಕೊಂಡರು.

ಅವರ ಮಾತಿನಲ್ಲಿ ಜಾನಪದವನ್ನು ಉಳಿಸಬೇಕೆಂದು ಪ್ರಾಮಾಣಿಕವಾಗಿ ದುಡಿದು ಹೈರಾಣಾದ ದಣಿವು ಕಾಣುತ್ತಿತ್ತು. ಹಾಗಾಗಿ ಅವರ ಬದುಕಿನ ಕಥೆಯನ್ನು ಸಂಗ್ರಹಿಸಿ ಪುಸ್ತಕ ಮಾಡುವ ಆಸೆಯನ್ನು ಹೇಳಿಕೊಂಡೆ, ಆದರೆ ಅದಕ್ಕವರು ಉತ್ಸಾಹವನ್ನೇನೂ ತೋರಲಿಲ್ಲ. ಅವರು ಕಲಾವಿದರಾಗಿ ಅಮೂರ್ತ ಕಲಾಕೃತಿಗಳನ್ನು ಮಾಡಿದ್ದರೆ ಒಂದೊಂದು ಕಲಾಕೃತಿಗಳು ಲಕ್ಷಾಂತರ ರೂಗಳಿಗೆ ಮಾರಾಟವಾಗುತ್ತಿದ್ದವು. ಇಂದು ಬಾಂಬೆ ಕಲ್ಕತ್ತದಲ್ಲೋ ಅವರು ನೆಲೆಸಬಹುದಾಗಿತ್ತು. ಆದರೆ ಅವರು ಇದ್ದ ಕೆಲಸವನ್ನೂ ಬಿಟ್ಟು ತಮ್ಮ ಸ್ವಂತ ಊರಿಗೆ ಹಿಂತಿರುಗಿದಾಗ ಅವರಿಗೆ ಖಚಿತವಾದ ನಿಲುವುಗಳಿದ್ದವು. ಅವರು ತಮ್ಮ ಕಲಾಕೃತಿಗಳು ಯಾರದೋ ಸಿರಿವಂತಿಕೆಯ ತೋರಿಕೆಯ ಸಂಕೇತಗಳಾಗುವ ಬದಲು ಜನರ ಬದುಕಿನ ಅಂಶಗಳು ಕಾಣಬೇಕು, ಅದನ್ನು ಜನರೇ ನೋಡಿ ಖುಷಿಪಡಬೇಕು ಎಂದು ಕನಸು ಕಂಡರು. ಅದರಂತೆ ಅವರದೇ ಆದ ಕಲಾಕೃತಿಗಳ ಮಾದರಿಯನ್ನು ರೂಪಿಸಿಕೊಂಡರು. ಅದಕ್ಕೆ ಕೆಲ ಆಸಕ್ತ ವಿದ್ಯಾರ್ಥಿಗಳನ್ನು ಸೇರಿಸಿಕೊಂಡರು. ಆ ಕನಸಿನ ಫಲವೇ ಇಂದು ನಾವು ನೋಡುತ್ತಿರುವ ಜಾನಪದ ಜೀವನವನ್ನು ಬಿಂಬಿಸುವ ಪಾರ್ಕ.

ಈಗ ನೂರಾರು ಜನರು ಜಾನಪದ ಪಾರ್ಕನ್ನು ನೋಡಲು ಬರುತ್ತಾರೆ. ಅದರಲ್ಲಿ ಬಹುಪಾಲು ಜನ ಹಳ್ಳಿಗರೇ ಇರುವುದೊಂದು ವಿಶೇಷ. ಹಾಗೆ ಬಂದ ಜನರನ್ನು ಮಾತನಾಡಿಸಿದಾಗ ತರಾವರಿ ಅಭಿಪ್ರಾಯಗಳು ವ್ಯಕ್ತವಾದವು. ಹಾನಗಲ್ ತಾಲೂಕು ಮೂಳೂರಿನ ಮಲ್ಲಮ್ಮ ಹೇಳುವಂತೆ ‘ಇದೆಲ್ಲಾ ಮರ‍್ತೋಗ್ತಿತ್ರಿ. ಇದನ್ನ ಈಗಿನ್ನ ಮಕ್ಳಿಗೆ ತೋರ‍್ಸಾಕ್ರಿ, ಹಿಂದಿನವ್ರು ಎಷ್ಟು ಕಷ್ಟಬಿದ್ದಾರ ಅಂತ ತಿಳಿತಾತ್ರಿ, ಎನ್ನುತ್ತಾರೆ. ಹಾವೇರಿ ತಾಲೂಕಿನ ಮೇವಂಡ್ರಿಯ ಹನುಮಂತಪ್ಪ ‘ದನದ ಕೊಟ್ಟಿಗಿ ಬಾಳ ಇಷ್ಟಾತ್ರಿ, ಇನ್ನು ಇಂಪ್ರ ಆಗ್ಬೇಕ್ರಿ, ಹಳೆ ಕಾಲದ್ದು ನೋಡತಕ್ಕದ್ ಬಿಡ್ರಿ, ರೊಟ್ಟಿ ಸುಡಾಡು ಎಲ್ಲಿ ಕಾಣ್ಳಿಲ್ರಿ..ಎಂದರು.
ಸವಣೂರು ತಾಲೂಕಿನ ಎಲುವಿಗಿ ಗ್ರಾಮದ ಶಾಂತಮ್ಮ ‘ಹಳೆ ಕಾಲದ ರೈತರು ಎಂಥ ದಂದೆ ಮಾಡ್ತುದ್ರು ಅಂಥದ್ನ ಮಾಡ್ಯಾರ, ಶಿಶುನಾಳ ಶರೀಫಜ್ಜನ್ನ, ಗೋವಿಂದಜ್ಜನ್ನ ಯಾಕ ಮಾಡಿಲ್ರಿ? ಗುಡಿಗೇರಿ ದ್ಯಾಮವ್ವನ್ನ ಮಾಡಬೇಕ್ರಿ, ಅಂದ್ರ ಎಲ್ಲಾ ನೋಡಿದಂಗಕ್ಕಾತಿ ಎನ್ನುತ್ತಾರೆ. ಗ್ರಾಮೀಣ ಭಾಗದ ಜನರು ಈ ಕಲಾಕೃತಿಗಳಲ್ಲಿ ತಮ್ಮ ಬದುಕಿನ ಪ್ರತಿಬಿಂಬವನ್ನು ಕಾಣುತ್ತಾರೆ.

ಇದನ್ನು ನೋಡಿದರೆ ಸೊಲಬಕ್ಕನವರ ಅಂದುಕೊಂಡ ಕನಸು ನನಸಾಗುತ್ತಿದೆ ಅನ್ನಿಸಿತು. ಹುಬ್ಬಳ್ಳಿಯ ಇಂಜಿನಿಯರಿಂಗ್ ಓದುವ ಒಂದಷ್ಟು ಹುಡುಗ ಹುಡುಗಿಯರು ಬಂದಿದ್ದರು. ಅವರುಗಳು ಸಾರ್ ಸಿಟಿ ಬೋರ್ ಹೊಡೆದಾಗ ಈ ಪಾರ್ಕಗೆ ಬಂದು ಹೋಗ್ತೀವಿ ಏನೋ ಒಂಥರಾ ಚೇಂಜ್ ಅನ್ಸುತ್ತೆ ಈ ಪಾರ್ಕ ಅಂದರು. ಇದು ಯುವಕ ಯುವತಿಯರನ್ನೂ ಆಕರ್ಶಿಸುತ್ತಿದೆ. ಇಲ್ಲಿನ ಕಲಾಕೃತಿಗಳು ಒಣಗಿಸಿಟ್ಟ ದೇಹಗಳಂತೆ ಒಮ್ಮೊಮ್ಮೆ ಭಯ ಹುಟ್ಟಿಸುತ್ತವೆ. ಈ ಕಾರಣಕ್ಕೆ ಮೃತ ದೇಹಗಳನ್ನು ಒಣಗಿಸಿಟ್ಟು ಜೋಡಿಸಿದ್ದಾರೆಯೇನೋ ಎನ್ನುವ ಭಾವ ಉಂಟಾಗುತ್ತದೆ. ಇದು ರೂಪಕವಾಗಿಯೂ ಮೃತಸ್ಥಿತಿಗೆ ಹೋಗುತ್ತಿರುವ ದೇಸಿ ಬದುಕಿನ ದಾರುಣ ಸ್ಥಿತಿಗೂ ಕನ್ನಡಿ ಹಿಡಿಯುತ್ತದೆ.

ಆಕರ್ಶಕ ಫ್ರೇಮುಗಳಲ್ಲಿ ಕಲಾಕೃತಿಯನ್ನು ರಚಿಸಿ ಬಂಧಿಸಿಡುವ ಮಾದರಿ ವಿರುದ್ಧ ಬಂಡೆದ್ದು ಸೊಲಬಕ್ಕನವರು ಮಾಡಿದ ಪ್ರಯೋಗ ನಿಜಕ್ಕೂ ಚಾರಿತ್ರಿಕವಾಗಿ ಮಹತ್ವದ ಸಂಗತಿ. ಈ ಮಾದರಿಯ ಪ್ರಭಾವವನ್ನು ಇಂದಿನ ಕಲಾ ವಿದ್ಯಾರ್ಥಿಗಳಲ್ಲಿ ಕಾಣುತ್ತಿದ್ದೇವೆ. ಅದೊಂದು ಒಳ್ಳೆಯ ಬೆಳವಣಿಗೆ. ಈ ನಿಟ್ಟಿನಲ್ಲಿ ಸೊಲಬಕ್ಕನವರ ಶ್ರಮವನ್ನು ಎಲ್ಲರೂ ಗೌರಿವಿಸುವಂಥದ್ದು.

1 ಕಾಮೆಂಟ್‌:

swarupananda m kottur ಹೇಳಿದರು...

janapada parknnu jinakku channagi katti kottidhiri danyavadagalu