ಗುರುವಾರ, ಡಿಸೆಂಬರ್ 8, 2011

ಬಳ್ಳಾರಿ ಜಿಲ್ಲೆಯ ಜಾನಪದ: ಹೊಸ ನಡಿಗೆ

ಡಾ. ಅರುಣ್ ಜೋಳದಕೂಡ್ಲಿಗಿ.

ಒಂದು ಜಿಲ್ಲೆಯ ಜಾನಪದ ಎಂದು ಕತ್ತರಿಸಿದಂತೆ ನೋಡುವ ಕ್ರಮ ಕನ್ನಡದಲ್ಲಿದೆ. ಅದು ಸರಿ ತಪ್ಪು ಎಂದು ನೋಡುವುದಕ್ಕಿಂತ, ಹಾಗೆ ನೋಡುವಾಗ ಇರಬೇಕಾದ ಎಚ್ಚರಗಳ ಅರಿವಿರಬೇಕಷ್ಟೆ. ಜಿಲ್ಲೆಯೊಂದರ ಸರಕಾರಿ ಗಡಿ ವ್ಯಾಪ್ತಿಯಲ್ಲಿ, ಜಾನಪದ ಎಂದು ಯಾವುದನ್ನು ಕರೆಯಲಾಗುತ್ತದೆಯೋ ಅದನ್ನು ಸೇರಿಸುವ ಮಾದರಿಯೊಂದು ಬಳಕೆಯಲ್ಲಿದೆ. ಹಾಗೆಂದ ತಕ್ಷಣ ಬೇರೆ ಜಿಲ್ಲೆಯಲ್ಲಿ ಈ ಬಗೆಯ ಜಾನಪದ ಇಲ್ಲವೆಂದಲ್ಲ. ಹೀಗೆ ಗುರುತಿಸುವಾಗ, ಜಾನಪದ ಎನ್ನುವ ಸಿದ್ದಗೊಂಡ ವ್ಯಾಖ್ಯಾನವನ್ನು ಬಳಸಿಯೂ, ಆ ಜಿಲ್ಲೆಗೆ ವಿಶೇಷವಾದ ಜಾನಪದದ ಲಕ್ಷಣಗಳನ್ನು ಹೇಳಲು ಸಾದ್ಯವಿದೆ. ಎರಡನೆಯದಾಗಿ ಜಾನಪದದ ಹೊಸ ನಡಿಗೆ ಯಾವ ದಾರಿಯಲ್ಲಿ ನಡೆಯುತ್ತಿದೆ, ಎಂದು ಗುರುತಿಸಿ ಅದು ಈ ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವ ಬಗೆಯ ಚಲನೆಯನ್ನು ಮಾಡುತ್ತಿದೆ, ಅದು ಬೇರೆ ಜಿಲ್ಲೆಗಳಿಗಿಂತ ಯಾವ ಬಗೆಯ ವಿಶಿಷ್ಠತೆಯನ್ನು ಹೊಂದಿದೆ , ಅದಕ್ಕೆ ಕಾರಣವಾದ ಸಾಂಸ್ಕೃತಿಕ ಹಿನ್ನೆಲೆ ಯಾವುದು ಎಂದು ನೋಡುವ ಸಾದ್ಯತೆಯೂ ಇದೆ.

ಈ ಬರಹದಲ್ಲಿ ಬಳ್ಳಾರಿ ಜಿಲ್ಲೆಯ ಸಮಗ್ರ ಜಾನಪದ ಸಂಗತಿಗಳ ಬಗ್ಗೆ ಗಮನಹರಿಸಿಲ್ಲ. ಬದಲಾಗಿ ಕೆಲವು ಬದಲಾದ ಸಂಗತಿಗಳನ್ನು ಆಧರಿಸಿ ಈ ಜಿಲ್ಲೆಯ ಜಾನಪದದ ಹೊಸ ನಡಿಗೆಯ ಬಗ್ಗೆ ಟಿಪ್ಪಣಿ ರೂಪದ ಬರಹವಿದು. ಇದು ಒಂದು ಜಿಲ್ಲೆಯ ಜಾನಪದ ಎಂದಾಗ ನೋಡಬಹುದಾದ ಒಂದು ಮಾದರಿ.
ನಾವು ಸಾಮಾನ್ಯವಾಗಿ ಜಾನಪದವನ್ನು ಸಾಹಿತ್ಯದ ಹಿನ್ನೆಲೆಯಲ್ಲಿ, ಜನಪದ ಕಲಾವಿದರ ಹಿನ್ನೆಲೆಯಲ್ಲಿ ನೋಡುತ್ತೇವೆ. ಇವು ಕೇವಲ ಜಾನಪದದ ಎರಡು ಸಂಗತಿಗಳು ಮಾತ್ರ. ಹಾಗೆ ನೋಡುವುದಾದರೆ, ಜನಪದ ಸಾಹಿತ್ಯದಲ್ಲಿಯೂ ಬದಲಾವಣೆಗಳಾಗಿವೆ. ಜನಪದ ಕಲಾವಿದರಲ್ಲಿಯೂ ಹೊಸ ಬದಲಾವಣೆಗಳನ್ನು ಗಮನಿಸಬಹುದು. ಜನಪದ ವೃತ್ತಿ ಕಸಬುಗಳಲ್ಲಿಯೂ, ಜನಪದ ವೈದ್ಯದಲ್ಲಿಯೂ, ಜನಪದ ಕ್ರೀಡೆಗಳಲ್ಲಿಯೂ ಒಂದು ಬಗೆಯ ಹೊಸ ಚಲನೆಯನ್ನು ಸೂಕ್ಷ್ಮವಾಗಿ ಗುರುತಿಸಬಹುದು.
ಜನಪದ ಸಾಹಿತ್ಯದ ಪಲ್ಲಟ
ಕಾಳಮ್ಮ ಜೋಗತಿಯು ಕರ್ನಾಟಕದ ಜೋಗತಿ ಪರಂಪರೆಗೆ ಹೊಸ ಆಯಾಮ ನೀಡಿದಾಕೆ. ಕಾಳಮ್ಮನ ನಂತರ ಮಂಜಮ್ಮ ಜೋಗತಿ ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇಬ್ಬರೂ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದವರು. ಇವರು ತಮ್ಮ ಜೋಗತಿ ಹಾಡುಗಳ ಜತೆ ಕುಟುಂಬ ಕಲ್ಯಾಣ, ಆರೋಗ್ಯ ಇಲಾಖೆಯ ಹಾಡುಗಳನ್ನು ಹಾಡುವ ಮೂಲಕ ತಮ್ಮ ಕಾಲದ ಸಂಗತಿಗಳನ್ನು ಜನಪದ ಸಾಹಿತ್ಯದಲ್ಲಿ ತಂದರು. ಇಲ್ಲಿ ಈ ಹಾಡಿನ ಸಾಹಿತ್ಯವನ್ನು ಇಟಿಗಿ ಈರಣ್ಣ ಬರೆದಿದ್ದಾರೆ, ಅದೇ ಹಾಡುಗಳನ್ನು ಜೋಗತಿ ಲಯಕ್ಕೆ ಸೇರಿಸಿಕೊಂಡು ಕೆಲ ಬದಲಾವಣೆಗಳನ್ನು ಮಾಡಿಕೊಂಡು ಜನಪದ ಗೀತೆಯನ್ನಾಗಿಸಿದ್ದಾರೆ. ಕೆಲ ಪದಗಳು ಹೀಗಿವೆ:

ಹೆರಗೆಯ ಮಾಡ್ಸಾಣು ಬಾರೆ ಸಖಿ| ನಾವು
ಹೆರಗೆಯ ಮಾಡ್ಸಾಣು ಬಾರೆ ಸಖಿ|| ಪಲ್ಲವಿ||
ಪರಿಣಿತಳಾದ ದಾದಿಯ ಕೈಯಿಂದ|
ಪರಿ ಪರಿಯಾದ ಸಡಗರದಿಂದ|| ಅನುಪಲ್ಲವಿ||

ಪರಿಶುದ್ಧ ಗಾಳಿ ಪರಿಶುದ್ಧ ಬೆಳಕು|
ಪರಿಶುದ್ಧ ಪರಿಸರ ನೋಡುವಳು;
ಪರಿಶುದ್ಧ ಕೈಯಲ್ಲಿ ಪರಿಶುದ್ಧ
ಹೆರಿಗೇಯ ಪರಿಶುದ್ಧವಾಗೇ ಮಾಡುವಳು||

ಹೊಸ ಬ್ಲೇಡಿನಿಂದ ಹೊಕ್ಕಳ ಉರಿಯನ್ನು
ವಿಷವಾಗದಂತೆ ಕತ್ತರಿಸುವಳು ದಾದಿ|
ಹೊಸ ದಾರವನ್ನು ಮೂರಿಂಚು ದೂರ ಕಟ್ಟಿ |
ಹೊಸ ನಂಜು ಬರದಂತೆ ತಡೆಯುವಳು ದಾದಿ||

ಚಿಕ್ಕ ಸಂಸಾರದ ಬಗೆಗಿನ ಹಾಡೊಂದು ಹೀಗಿದೆ:

ಸಕ್ಕರೆಯ ರುಚಿಗಿಂತ| ಅಕ್ಕರೆಯ ದನಿಗಿಂತ||
ನಕ್ಕು ನಗಿಸುವ ನುಡಿಗಿಂತ|| ತಂಗೆಮ್ಮಾ
ಚಿಕ್ಕ ಸಂಸಾರ ಬಲು ಚೆಂದ ||
ಚಂದ್ರ ಸೂರ್ಯ ರಂಗ ಮಕ್ಕಳೆರಡು ಇರಲವ್ವಾ..

ಬಾಳಿನ ತುಂಬಾ ಬೆಳಕಮ್ಮ ತಂಗೆಮ್ಮಾ..
ಬಾಳು ಬಂಗಾರದ ಹೂವಮ್ಮ ತಂಗೆಮ್ಮಾ..
ರವಿಯಂತೆ ಮಗನಿರಲಿ..ಶಶಿಯಂತೆ ಮಗಳಿರಲಿ
ಮಗನಿಂದ ಮನೆಗೆ ಬೆಳಕಾಗ್ಲಿ|| ತಂಗೆಮ್ಮಾ
ಮಗಳಿಂದ ಮನೆಗೆ ತಂಪಾಗ್ಲಿ|| ತಂಗೆಮ್ಮಾ..

ಈ ಬಗೆಯ ಹಾಡುಗಳು ಜನಪದ ಸಾಹಿತ್ಯದ ಬದಲಾವಣೆಯನ್ನು ತೋರುತ್ತವೆ. ಇದೇ ರೀತಿಯಲ್ಲಿ ಜನಪದ ಹಾಡುಗಾರರ ಸಾಹಿತ್ಯದಲ್ಲಾದ ಬದಲಾವಣೆಯನ್ನು ಗುರುತಿಸುವ ಸಾದ್ಯತೆ ಇದೆ. ಈಚೆಗೆ ಕೊಟ್ಟೂರಿನ ಜನಪದ ಹಾಡುಗಾರ ಸುಣ್ಣಗಾರ ಹನುಮಂತಪ್ಪನಲ್ಲಿಗೆ ಹೋಗಿದ್ದೆ. ಆತ ಸದ್ಯದ ಕಾಲದ ಸಂಗತಿಗಳನ್ನು ಅದ್ಭುತವಾಗಿ ಹಾಡು ಕಟ್ಟಿ ಹಾಡುತ್ತಾನೆ. ಈ ಕಂಚಿನ ಕಂಟದ ಹಾಡುಗಾರ ಹಾಡುತ್ತಾ ಹಾಡುತ್ತಾ ಓಸಿ ಆಟದ ಬಗ್ಗೆ ಕಟ್ಟಿದ ಹಾಡನ್ನೂ ಹಾಡಿದ. ಈ ಲಾವಣಿ ಪದ ಹೀಗಿದೆ:

ಓಸಿ ಬಂದಿತವ್ವ | ಓಸಿ ಆಟ ಬಂತವ್ವಾ..
ಚೀಟಿಯ ಬರೆಸಿ ಜೇಬಿನ ಒಳಗೆ ಇಟ್ಟರು ನೋಡವ್ವಾ..
ದೇಶದೇಶಕೆ ಮೋಸ ಮಾಡಿತು ಎಂಥ ಓಸೆವ್ವಾ..
ರಾಶಿಗಟ್ಟಲೆ ಹಣವ ಕಟ್ಟಿ ಪಾಸಿ ಬಿದ್ದರವ್ವಾ.||ಓಸಿ ಬಂದಿತವ್ವ||

ಬಾಂಬೆಲಿಂದ ಸಾಹುಕಾರ ಫೋನು ಹಚ್ಯಾನವ್ವಾ..
ಹಳ್ಳಿಡಿಲ್ಲೀಗೆಲ್ಲಾ ಫೋನು ನಂಬರು ಕೈಗೆ ಕೊಟ್ಟನವ್ವಾ..
ಒಂಬಂತ್ತುವರಿಗೆ ಓಪನ್ ಕೇಳಾಕಉಪವಾಸ ಹೊಂಟನವ್ವಾ..
ಓಪನ್ ಕೇಳಿ ಟೋಪಿಗಿ ಎಳಿಯುತಾ.. ಮನೆಗೆ ಬಂದನವ್ವಾ..
ಕ್ಲೋಜಿನ ಸುದ್ದಿ ಕೇಳಿ ಉದಯಕೆ ಸಾಕಾಯಿತವ್ವಾ..
ಕೈಯೊಳು ಚೀಟಿ ಹರಿದು ಬಿಸಾಕಿ ಊಟಬಿಟ್ಟನವ್ವಾ||ಓಸಿ ಬಂದಿತವ್ವ||

ಒಂದು ಊರಲ್ಲಿ ಗಂಡ ಹೆಂಡರು ಇದ್ದರು ಕೇಳವ್ವಾ..
ಗಂಡಗೆ ಕಾಣದೆ ಓಸಿ ಕಟ್ಟೆಳು ನೋಡು ಕೆಟ್ಟ ದೈವ..
ಖರ್ಚಿಯ ತುಂಬಾ ಜ್ವಾಳ ಇದ್ದವು ದಿವಸ ಮಾರೆಳವ್ವಾ..
ಓಸಿಗೆ ಕಟ್ಟಿ ಖರ್ಚಿ ಬರಿದಾಯಿತು ಕೇಳರೀ ದೈವಾ..
ಬಂಗಾರ ಬೆಳ್ಳಿ ಒಳಗೆ ಮಾರೇಳು ಕೇಳೇ ಹಡೆದವ್ವಾ..
ಕೊರಳ ತಾಳಿ ಮಾರಿ ಕಟ್ಟೇಳು ಕಡೆಯದಾಯಿತ್ವಾ..
ಗಂಡಗೆ ಉತ್ತರ ಹೇಳಲಾರದೇ ತೂಗಿ ಕೆಟ್ಟ ಭಾವಾ..
ಚೀಟಿಗೆ ಬರೆದು ಕೊರಳಿಗೆ ಹೊರಳು ಹಾಕಿ ಸತ್ತಳವ್ವಾ..
ಗಂಡನು ಓದಿ ಕಂಡನು ವಾದಿ ಮಣ್ಣಗಿಟ್ಟನವ್ವಾ
ತನ್ನ ಕರ್ಮಕೆ ತಾನೇ ಸತ್ತಳು ವಿಧಿಎಳೆದಿತವ್ವಾ..
ಸತ್ತ ದಿನವೆ ತನ್ನ ಓಸಿ ಎದ್ದಿತು ಕೇಳೀರಿ ದೈವಾ.. ||ಓಸಿ ಬಂದಿತವ್ವ||

ಓಸಿಯೆಂಬುದು ಬಿಟ್ಟ ಇದನಾ ಬೇಸಾಯ ಮಾಡವ್ವಾ..
ರೈತನಿಂದಲೇ ಸಕಲ ಜೀವಕೆ ಅನ್ನವು ನೋಡವ್ವಾ..
ಓಸಿಯೆಂಬುದನು ಬಿಟ್ಟು ಇದನ ಬೇಸಾಯ ಮಾಡವ್ವಾ..
ಭೂಮಿ ಮನೆಗಳನು ಮಾರಿ ಕಟ್ಟಿದರೂ ಎಂಥಾ ಓಸೆವ್ವಾ..
ಹಂಡೇವು ಗಂಗಾಳ ಚರಿಗಿ ಗಂಗಾಳ ಮಾರಿ ಕಟ್ಟೆರವ್ವಾ..
ಎಲ್ಲದು ಮಾರಿ ನಿಲ್ಲದೆ ಹೊರಟನು ಮನೆ ಮನೆ ತಿರುಗುವಾ..
ಬೀಡಿ ಚಾವ ಮಂದಿ ಕೇಳತಾವ ನಾಚಿಕಿಲ್ಲದಾವಾ..
ಹೆಂಡರು ಮಕ್ಕಳು ಮರೆತರು ಇವರು ಕಾಟ ತಡೆಯರವ್ವಾ..
ಊರ ಹೊರಗಿನ ಗುಡಿಯ ನೋಡಿ ಹೋಗಿ ಮಲಗೆರವ್ವಾ..
ಬಳ್ಳಿಗನೂರು ಬಲ್ಲವನೆ ಬಲ್ಲ ಬಾರಿ ಹೇಳುವರವ್ವಾ..
ಕೊಟ್ಟೂರು ಹನುಮಣ್ಣನಲ್ಲಿ ಕಲಿಯಿರಿ ವಿದ್ಯಾದಾನವಾ.. ||ಓಸಿ ಬಂದಿತವ್ವ||

ಇದು ಜನಪದ ಕಲಾವಿದನೊಬ್ಬ ತನ್ನ ಕಾಲದ ಸಂಗತಿಗಳಿಗೆ ಪ್ರತಿಕ್ರಿಯಿಸಿದ ಬಗೆಯನ್ನು ಹೇಳುತ್ತಿದೆ. ಹಾಗೆ ನೋಡುವಾಗ ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಓಸಿ ಆಟವೇ ಒಂದು ಬಗೆಯ ಜಾನಪದವನ್ನು ಹುಟ್ಟಿಸಿದ್ದನ್ನು ಗುರುತಿಸಲು ಸಾದ್ಯವಿದೆ. ನಾನು ಆ ಬಗ್ಗೆ ಕೆಂಡಸಂಪಿಗೆ ವೆಬ್ ಸೈಟ್‌ಗೆ ಸರಣಿ ಬರಹವನ್ನೇ ಬರೆದೆ, ಅದು ಪುಸ್ತಕವೂ ಆಗುತ್ತಿದೆ. ಇದನ್ನು ನೋಡಿದರೆ, ಓಸಿ ಇಲ್ಲಿಯ ಜನರ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ, ಇಂತಹ ಕೆಟ್ಟ ಪರಿಣಾಮವನ್ನು ನೋಡಿಯೇ ಅದರಿಂದ ದೂರವಿರಿ ಎನ್ನುವಂತೆ ಜನಪದ ಹಾಡುಗಾರನೊಬ್ಬ ಹಾಡು ಕಟ್ಟಿ ಹಾಡುತ್ತಾನೆ. ಇದು ಒಂದು ಉದಾಹರಣೆಯಷ್ಟೆ. ಹೀಗೆ ಇದೇ ಜಿಲ್ಲೆಯ ಜಾನಪದ ಗಾಯಕರ ಸಾಹಿತ್ಯವನ್ನು ನೋಡುತ್ತಾ ಹೋದರೆ ಅಲ್ಲಾಗಿರುವ ಬದಲಾವಣೆಯನ್ನು ಗಮನಿಸಲು ಸಾದ್ಯವಿದೆ.

ಜನಪದ ಕಲೆಗೆ ಮಹಿಳೆಯರ ಪ್ರವೇಶ

ಇಂದು ಕರ್ನಾಟಕದ ಜನಪದ ಕಲೆಯಲ್ಲಿ ಒಂದು ಮುಖ್ಯ ಪಲ್ಲಟ ಸಂಭವಿಸಿದೆ. ಅದೇನೆಂದರೆ ಜನಪದ ಕಲೆಗಳಿಗೆ ಮಹಿಳೆಯರ ಪ್ರವೇಶ ಆಗುತ್ತಿರುವುದು. ಈ ಬಗೆಯ ಬದಲಾವಣೆಯು ಜನಪದ ಕಲೆಗಳನ್ನು ಹೊಸ ರೀತಿಯಿಂದ ನೋಡುವ ಒತ್ತಾಯವನ್ನು ತಂದಿವೆ. ಈ ಪ್ರಭಾವ ಬಳ್ಳಾರಿ ಜಿಲ್ಲೆಯಲ್ಲಿಯೂ ಆಗುತ್ತಿದೆ. ಬಳ್ಳಾರಿ ಭಾಗದಲ್ಲಿ ಬಯಲಾಟ ಪರಂಪರೆ ಈಗಲೂ ಇದೆ. ಬಯಲಾಟವೆಂದರೆ ಪುರುಷರದ್ದು ಎನ್ನುವ ವಾಡಿಕೆ ಬಲವಾಗಿದೆ. ಈ ನಂಬಿಕೆಯನ್ನು ಹುಸಿಗೊಳಿಸುವ ಹಾಗೆ ಕೂಡ್ಲಿಗಿ ಮತ್ತು ವಿರುಪಾಪುರದ ಮಹಿಳಾ ಕಲಾವಿದರು ಬಯಲಾಟವನ್ನು ಆಡುತ್ತಿದ್ದಾರೆ.

೫.೦೧.೨೦೧೧ ರಂದು ಬಳ್ಳಾರಿಯಲ್ಲಿ ಪರಿಶಿಷ್ಟ ಪಂಗಡ ಜಿಲ್ಲಾ ಜಾನಪದ ಕಲಾಮೇಳವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಏರ್ಪಡಿಸಿತ್ತು. ಇದಕ್ಕಾಗಿ ಬಳ್ಳಾರಿ ಜಿಲ್ಲೆಯ ಬೇರೆ ಬೇರೆ ಭಾಗದ ಕಲಾವಿದರು ಬಂದಿದ್ದರು. ಈ ಮೇಳದಲ್ಲಿ ವಿರುಪಾಪುರದ ಮಹಿಳೆಯರ ಬಯಲಾಟ ವಿಶೇಷವಾಗಿ ಗಮನ ಸೆಳೆಯಿತು. ಕೂಡ್ಲಿಗಿಯಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ವಿರುಪಾಪುರ ಮೂಲತಃ ರಂಗ ಕಲಾವಿದರ ತವರು. ಇಲ್ಲಿನ ಬಯಲಾಟದ ಮಟ್ಟುಗಳು ಪ್ರಸಿದ್ದಿಯೂ ಕೂಡ. ಈ ರೀತಿಯ ಬಯಲಾಟದ ಪರಂಪರೆ ಇರುವ ಈ ಊರು ಮಹಿಳೆಯರು ಬಯಲಾಟವನ್ನು ಕಲಿಯಲು ಪ್ರೇರಣೆಯಾಯಿತು ಎನ್ನುತ್ತಾರೆ ತಂಡದ ನಾಯಕಿ ಅಂಜಿನಮ್ಮ. ಈ ತಂಡದಲ್ಲಿ ಹನ್ನೊಂದು ಜನ ಕಲಾವಿದರಿದ್ದಾರೆ. ಅಂಜಿನಮ್ಮ, ಗಂಗಮ್ಮ, ಕೆ.ನಾಗರತ್ನಮ್ಮ, ಯು.ಶಾರದ, ಕೆ.ದುರುಗಮ್ಮ, ಹೆಚ್. ನಾಗವೇಣಿ, ಡಿ.ಹಂಪಮ್ಮ, ರಂಗವೇಣಿ, ವಿಜಯಲಕ್ಷ್ಮಿ, ಬಿ. ಭಾಗ್ಯಮ್ಮ, ಬಿ.ನಾಗಮ್ಮ ಈ ತಂಡದ ಬಯಲಾಟದ ಕಲಾವಿದರು. ಹೀಗೆ ಬಯಲಾಟವನ್ನು ಮಹಿಳೆಯರು ಕಲಿತು ಪ್ರದರ್ಶಿಸುವುದು ಇದು ಮೊದಲ ಪ್ರಯತ್ನ.

ಹೀಗೆ ಕೂಡ್ಲಿಗಿಯ ಕೆಲವು ರಂಗನಟಿಯರು ಬಯಲಾಟದ ಪ್ರಯೋಗವನ್ನು ಮಾಡುತ್ತಿದ್ದಾರೆ, ವಿರುಪಾಪುರದ ಹೆಣ್ಣುಮಕ್ಕಳು ಬಯಲಾಟದ ಜತೆ ಡೊಳ್ಳು ಕಲೆಯನ್ನೂ ಕಲಿಯುತ್ತಿದ್ದಾರೆ. ಹೊಸಪೇಟೆಯ ಭಾಗ್ಯಲಕ್ಷ್ಮಿಯವರು ಸಖಿ ಎನ್ನುವ ಎನ್.ಜಿ.ಒ ದ ಮೂಲಕ ಕೆಲ ಹುಡುಗಿಯರಿಗೆ ಡೊಳ್ಳು ಬಾರಿಸುವುದನ್ನು ಕಲಿಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸುವ ಮಹಿಳಾ ಡೊಳ್ಳು ಕಲಾತಂಡಗಳು ರೂಪುಗೊಳ್ಳುತ್ತಿರುವುದನ್ನು ನೋಡಬಹುದು.
ತೊಗಲು ಗೊಂಬೆಗೆ ಹೊಸ ಮೆರಗು
ಬಳ್ಳಾರಿ ಜಿಲ್ಲೆಯು ತೊಗಲು ಗೊಂಬೆ ಕಲಾವಿದರಿಗೆ ಹೆಸರಾದುದು. ಹಗರಿ ಬೊಮ್ಮನಹಳ್ಳಿಯ ಹತ್ತಿರದ ಯಡ್ರಾಮನಹಳ್ಳಿಯ ದೊಡ್ಡ ಬರಮಪ್ಪ ತೊಗಲು ಗೊಂಬೆ ಕಲೆಯನ್ನು ವಿದೇಶಗಳಿಗೂ ಹಬ್ಬಿಸಿದವರು. ಅವರ ಗರಡಿಯಲ್ಲಿ ಕಲಿತ ಬೆಳಗಲ್ಲು ವೀರಣ್ಣ ಈ ತೊಗಲುಗೊಂಬೆ ಕಲೆಯ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.
ಬೆಳಗಲ್ಲು ವೀರಣ್ಣ ಅವರ ನಾಯಕತ್ವದ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳವು ೨೦೧೦ ರ ನವೆಂಬರ್ ನಲ್ಲಿ ಅಂತರ ರಾಜ್ಯ ತೊಗಲುಗೊಂಬೆ ಉತ್ಸವವನ್ನು ನಡೆಸಿತು. ಈ ಉತ್ಸವದಲ್ಲಿ ಆಂದ್ರಪ್ರದೇಶದ ಶ್ರೀ ಛತ್ರಪತಿ ಶಿವಾಜಿ ತೊಗಲುಗೊಂಬೆ ಕಲಾತಂಡವು ರಾಮಾಯಣದ ಕಿಷ್ಕಿಂದಾಖಾಂಡ ಕಥಾ ಪ್ರಸಂಗವನ್ನು ಪ್ರದರ್ಶಿಸಿ ಗಮನಸೆಳೆದರು. ಈಚೆಗೆ ಬೆಳಗಲ್ಲು ವೀರಣ್ಣನ ತೊಗಲು ಗೊಂಬೆ ಆಟವನ್ನು ಜರ್ಮನಿಯಲ್ಲಿ ಪ್ರದರ್ಶನ ನೀಡಿ ಬಂದಿದ್ದಾರೆ. ಹೀಗೆ ಬಳ್ಳಾರಿ ಜಿಲ್ಲೆಯ ಜನಪದ ಕಲೆಯೊಂದು ದೂರದ ಜರ್ಮನಿಯಲ್ಲಿ ಪ್ರದರ್ಶಿಸುವುದು ಕೂಡ ಈ ನೆಲದ ಸಂಸ್ಕೃತಿಯನ್ನು ಸಾಗರದಾಚೆಗೆ ಒಯ್ಯುವ ಒಂದು ಮಹತ್ವದ ನಡಿಗೆ ಎಂದೇ ಬಾವಿಸಬಹುದು.
ಸಿಳ್ಳೇಕ್ಯಾತ, ಕಿಳ್ಳೇಕ್ಯಾತ, ಗೊಂಬೆರಾಮರು, ಕಟುಬರು, ಬುಂಡೆ ಬೆಸ್ತರು ಎಂದು ಈ ಸಮುದಾಯವನ್ನು ಕರ್ನಾಟಕದಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಾರೆ. ಈ ಅಲೆಮಾರಿ ಸಮುದಾಯ ಗೊಂಬೆಯಾಟದ ಜತೆ ಮೀನು ಹಿಡಿಯುವುದು, ಕೃಷಿಗೆ ತೊಡಗುವುದು, ಸಣ್ಣ ಪುಟ್ಟ ವ್ಯಾಪಾರವನ್ನೂ ಮಾಡುತ್ತಾರೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವೈಷ್ಣವ ಸಂಪ್ರದಾಯವು ಪ್ರವರ್ಧಮಾನಕ್ಕೆ ಬಂದಂತಹ ಸಂಧರ್ಭದಲ್ಲಿ ಆರ್ಯ ಮೂಲದ ಶ್ರೀರಾಮನನ್ನು, ದ್ರಾವಿಡ ಮೂಲದ ಹನುಮಂತನನ್ನು ಬಳಸಿಕೊಂಡು ಈ ವರ್ಗದವರು ಬದುಕಿದ ಚಾರಿತ್ರಿಕ ಪುರಾವೆಗಳಿವೆ.
ಹೀಗೆ ಬದುಕಿದವರು ಗೊಂಬೆರಾಮರು. ಈ ಸಮುದಾಯ ಇಂದು ಅತ್ಯಂತ ವೈವಿದ್ಯ ಹಾಗೂ ಸಂಕೀರ್ಣ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇಂದಿನ ಮೀಸಲಾತಿಯ ಸೌಲಭ್ಯದಲ್ಲಿ ಹರಿದು ಹಂಚಿ ಹೋಗಿರುವ ಈ ಸಮುದಾಯ ತಮ್ಮ ನಿಜವಾದ ಹಕ್ಕನ್ನು ಕಳೆದು ಕೊಂಡಿದ್ದಾರೆ. ಇಂದು ಆ ನಿಟ್ಟಿನಲ್ಲಿ ಸರಿಪಡಿಸುವ ಕೆಲಸ ಆಗಬೇಕಾಗಿದೆ. ಅವರಿಗೆ ಸಾಮಾಜಿಕ ನ್ಯಾಯ ಸಿಗಬೇಕಾಗಿದೆ.

ಹಗಲು ವೇಷಗಾರರ ‘ಹನುಮಾಯಣ’

‘ಹನುಮಾಯಣ’ ಇದು ಹಗಲು ವೇಷಗಾರರೇ ತಮ್ಮ ಕಲೆಯನ್ನು ಉಳಿಸಿಕೊಳ್ಳುವ ಶೋಧದಲ್ಲಿ ತೊಡಗಿಕೊಂಡಾಗ ಕಂಡುಕೊಂಡ ಪರ್ಯಾಯ. ಇಂದು ಭಜರಂಗದಳ, ಆರ್.ಎಸ್.ಎಸ್ ಗಳು ಹನುಮನನ್ನು ದೊಡ್ಡ ಐಕಾನ್ ಆಗಿ ಬಳಸಿಕೊಂಡು, ಹನುಮನನ್ನು ಆರಾಧಿಸುವ ದೊಡ್ಡ ಸಮುದಾಯವನ್ನು ತನ್ನೆಡೆಗೆ ಸೆಳೆಯುವ ಹುನ್ನಾರ ಮಾಡುತ್ತಿದೆ. ಆದರೆ ನಿಜಾರ್ಥದಲ್ಲಿ ಜನಪದರಲ್ಲಿ ಇರುವ ಹನುಮನೇ ಬೇರೆ. ರಾಮಾಯಣದಿಂದ ಎದ್ದು ಬಂದವನಲ್ಲ. ಅಲ್ಲಿಯದೇ ಸ್ಥಳೀಯ ಚರಿತ್ರೆಯಲ್ಲಿ ಹನುಮನ ಜೀವಂತಿಕೆ ಬೇರೆಯೇ ಇದೆ.
ಅಲ್ಪ ಸಂಖ್ಯಾತ ವೈದಿಕ ಸಮುದಾಯ ಕಟ್ಟಿದ ಹನುಮನ ಚಿತ್ರವನ್ನು ಬಹುಸಂಖ್ಯಾತ ತಳ ಸಮುದಾಯಗಳ ಹನುಮನ ನಂಬಿಕೆಯ ಲೋಕದ ಮೇಲೆ ಪ್ರಹಾರ ಮಾಡುತ್ತಿವೆ. ಜನಪದರು ಕಟ್ಟಿಕೊಂಡ ಹನುಮನ ನಂಬಿಕೆಯ ಜಗತ್ತನ್ನು ಇಂದು ವಿಶೇಷವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಈ ಹುಡುಕಾಟದ ಸಂದರ್ಬದಲ್ಲಿ ಸಿಕ್ಕ ಹನುಮಾಯಣ ಹಗಲುವೇಷಗಾರರ ಆಟ ಗಮನಸೆಳೆಯಿತು. ಇಲ್ಲಿ ಹನುಮ ರಾಮನ ಸೇವಕನಲ್ಲ ಅವನದೇ ಆದ ಸ್ವಂತ ಶಕ್ತಿಯನ್ನು ಉಳ್ಳ ವೀರ ಧೀರ.

ಇಲ್ಲಿ ರಾಮ ನೆಪ ಮಾತ್ರ. ಹನುಮನ ವ್ಯಕ್ತಿತ್ವದ ಮೂಲಕ ರಾಮನನ್ನು ನೋಡುವ ವಿಶಿಷ್ಟ ಪ್ರಯತ್ನ ಇಲ್ಲಿದೆ. ಈ ತಂಡದ ರಾಮುವನ್ನು ಮಾತನಾಡಿಸಿದಾಗ “ಹನುಮನನ್ನು ನಾವು ಕಂಡದ್ದು ಬೇರೇನೆ ಸಾರ್, ಆಗಾಗಿ ಹನುಮನನ್ನೇ ನಾಯಕನನ್ನಾಗಿಸಿ ನಾವೇ ಈ ನಾಟಕ ತಯಾರಿಸಿದ್ವಿ” ಎನ್ನುತ್ತಾರೆ. ಕಡ್ಡಿರಾಂಪುರದ ಕೆ.ರಾಮು ನೇತೃತ್ವದ ಶ್ರೀ ಹಂಪಿ ವಿರುಪಾಕ್ಷೇಶ್ವರ ಬುಡ್ಗಜಂಗಮ ಸಾಂಸ್ಕೃತಿಕ ಹಗಲು ವೇಷ ಕಲಾವಿದರ ಸಂಘ ಇಂದು ಹನುಮಾಯಣ ಮಾಡುತ್ತಾರೆ.

ಈ ತಂಡ ರಾಮಾಯಣದ ಕಿಷ್ಕಿಂದಾ ಕಾಂಡದ ಅವಶೇಷಗಳನ್ನು ಹೊಂದಿರುವ ಹಂಪಿ ಪ್ರದೇಶದಲ್ಲಿ ನೆಲೆಸಿದೆ. ಇದೂ ಸಹ ಹನುಮಾಯಣ ಹುಟ್ಟಲು ಕಾರಣವಾಗಿರಬೇಕು. ಇಲ್ಲಿಯ ವಾಲಿಕಾಷ್ಠ, ಸುಗ್ರಿವ ಗುಹೆ, ಸೀತಾ ಸೆರಗು, ರಾಮ ಲಕ್ಷ್ಮಣರ ಮಂದಿರಗಳು, ರಿಷಿಮುಖ, ವಾಲಿ, ತಾರ ಬೆಟ್ಟಗಳು ರಾಮಾಯಣದ ಚಿತ್ರಣಕ್ಕೆ ಸದ್ಯದ ಸಾಕ್ಷಿಗಳಂತೆ ಕಾಣುತ್ತವೆ. ಹನುಮಾಯಣದಲ್ಲಿ ಹನುಮನೇ ಹಿರೋ. ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಕಿಷ್ಕಿಂದೆಗೆ ಬಂದಿದ್ದು, ರಾಮ ಮತ್ತು ಹನುಮನ ಭೇಟಿ, ವಾಲಿ-ಸುಗ್ರೀವರ ಕಾಳಗ, ಈ ಕಾಳಗದಲ್ಲಿ ರಾಮನ ಪಾತ್ರ, ಮುಂತಾದ ಪ್ರಸಂಗಗಳಿಂದ ಹಿಡಿದು ಹನುಮಂತ ಸೇತುವೆ ನಿರ್ಮಿಸುವವರೆಗೂ ಈ ನಾಟಕ ವಿಸ್ತರಿಸಿಕೊಂಡಿದೆ.

ಬ್ರಷ್ಟಾಚಾರ ವಿರೋಧಿ ಜನಪದ ನಾಯಕರು

ಹಣ್ಣಾ ಹಜಾರೆಯವರು ಬ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಿದ್ದು, ಹಜಾರೆಯವರ ಹೋರಾಟದ ಹಿಂದಣ ಅಪಾಯಗಳನ್ನು ವಿದ್ವತ್ ಲೋಕ ವಿಮರ್ಶೆಗೆ ಒಡ್ಡಿದ್ದು, ಅಣ್ಣಾ ಅವರ ತಂಡವೇ ಒಡೆದ ಮನೆಯಾಗಿರುವುದೂ, ಸರಕಾರ ಅವರ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿ ಈಗ ಕಾರ್ಯಪ್ರವೃತ್ತವಾಗಿರುವುದೂ, ಎಲ್ಲವೂ ನಿಧಾನಕ್ಕೆ ನೆನಪಿನ ಪುಟ ಸೇರುತ್ತಿವೆ.
ನನಗೀಗ ಜನಪದ ಲೋಕದ ಹಣ್ಣಾ ಹಜಾರೆಗಳು ನೆನಪಾಗತೊಡಗಿದ್ದಾರೆ.ಅಂದರೆ ನಮ್ಮ ನಮ್ಮ ಹಳ್ಳಿಗಳಲ್ಲಿ, ನಮ್ಮ ನಡುವೆಯೇ ಇರುವ ಗ್ರಾಮೀಣ ಪ್ರದೇಶದ ಸಮಾನ್ಯ ಜನರು ಕೂಡ ಬ್ರಷ್ಟಾಚಾರವನ್ನು ವಿರೋಧಿಸಿ ತುಂಬಾ ಹಿಂದಿನಿಂದಲೂ ಹೋರಾಡುತ್ತಾ ಬಂದಿದ್ದಾರೆ. ಅವರುಗಳು ಬ್ರಷ್ಟಾಚಾರ ಎನ್ನುವ ದೊಡ್ಡ ಬ್ಯಾನರಿನಡಿ ಹೋರಾಡದಿದ್ದರೂ, ಲಂಚ ವಿರೋಧಿ ವ್ಯಕ್ತಿತ್ವವನ್ನಂತೂ ರೂಪಿಸಿಕೊಂಡವರು. ಆದರೆ ಅಂತವರನ್ನು ಬೆಂಬಲಿಸಿ ಎಷ್ಟು ಜನ ಹಿಂದೆ ನಿಲ್ಲುತ್ತಾರೆ ಎಂದು ಕೇಳಿಕೊಂಡರೆ ಅದು ಮಾತ್ರ ಶೂನ್ಯ.
ಹಳ್ಳಿ ಜನ ಅದೇನು ಬ್ರಷ್ಟಾಚಾರವನ್ನು ವಿರೋಧಿಸಿಯಾರು? ಎಂದು ಕೆಲವರು ಮೂಗಿಮುರಿಯುವ ಸಾಧ್ಯತೆಯಿದೆ. ಅಥವಾ ಜಾನಪದ ಮತ್ತು ಬ್ರಷ್ಟಾಚಾರ ಎಂಬ ವಿಷಯವೊಂದನ್ನು ಕುರಿತು ಮಾತನಾಡಲು ಹೊರಟರೆ ಸಾಂಪ್ರದಾಯಿಕ ಜಾನಪದ ವಿದ್ವಾಂಸರು ಇದೇನು ತಲೆ ಕೆಟ್ಟ ಯೋಚನೆ ಎಂದು ತಳ್ಳಿ ಹಾಕುವ ಸಾಧ್ಯತೆಯೂ ಇದೆ. ಇವೆರಡನ್ನೂ ಗಮನದಲ್ಲಿಟ್ಟುಕೊಂಡು ನನ್ನ ಕೆಲವು ಯೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಹಳ್ಳಿ ಜನರ ಸಂಪರ್ಕಕ್ಕೆ ಬರುವ ಅಧಿಕಾರಿಗಳ ಸಮೂಹ ತೀರಾ ಚಿಕ್ಕದೇನಲ್ಲ. ವೃದ್ಧಾಪ್ಯ, ವಿಧವಾ ವೇತನ ಕೊಡುವ ಪೋಷ್ಟಮ್ಯಾನ್ ನಿಂದ ಇದು ಆರಂಭವಾಗುತ್ತದೆ. ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ ಕಛೇರಿ, ನೋಂದಣಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಬ್ಯಾಂಕ್‌ಗಳು, ನೀರಾವರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಮಾರುಕಟ್ಟೆ, ಪೋಲಿಸ್ ಇಲಾಖೆ ಇನ್ನು ಮುಂತಾದ ಇಲಾಖೆಯ ಅಧಿಕಾರಿಗಳ ಜತೆ ಜನರು ಒಡನಾಡುವ ಪ್ರಸಂಗ ಬರುತ್ತದೆ.
ನಾನಾ ಕಾರಣಗಳಿಗಾಗಿ ಈ ಇಲಾಖೆಯ ಅಧಿಕಾರಿಗಳು ರೈತರಲ್ಲಿ ಲಂಚ ಪಡೆದು ಅವರ ಕೆಲಸಗಳನ್ನು ಮಾಡಿಕೊಡುತ್ತಾರೆ. ಇದು ಈಚೆಗೆ ತೀರಾ ಸಾಮಾನ್ಯ ಸಂಗತಿ. ಕೆಲವರು ಈ ಅಧಿಕಾರಿಗಳನ್ನು ಎದುರು ಹಾಕಿಕೊಂಡರೆ ನಮ್ಮ ಕೆಲಸಗಳು ಆಗುವುದಿಲ್ಲ ಎಂದು ಹೆದರಿ ಸಾಲ ಮಾಡಿಯಾದರೂ ಲಂಚ ಕೊಟ್ಟು ಕೆಲಸಗಳನ್ನು ಮಾಡಿಸಿಕೊಳ್ಳುವ ಒಂದು ವರ್ಗವಿದೆ. ಇಂತಹ ವರ್ಗದಿಂದಾಗಿಯೇ ಬ್ರಷ್ಟಾಚಾರ ತನ್ನ ಬಾಹುಗಳನ್ನು ಚಾಚಿಕೊಳ್ಳಲು ಅನುವಾಗುತ್ತದೆ.

ಇದಕ್ಕಿಂತ ಭಿನ್ನವಾದ ಇನ್ನೊಂದು ವರ್ಗವಿದೆ. ಅದು ಇಂತಹ ಅಧಿಕಾರಿಗಳ ಜತೆ ಲಂಚಕೊಡದಿರುವ ಬಗ್ಗೆ ಸೆಣಸಾಡುವ ವರ್ಗ. ಅವರ ಸಾಮಾನ್ಯ ತಿಳುವಳಿಕೆಯೆಂದರೆ ಸರಕಾರ ಸಂಬಳ ಕೊಡುವಾಗ ನಾವೇಕೆ ಅವರಿಗೆ ಹಣಕೊಡಬೇಕು ಎನ್ನುವುದು ಅವರ ವಾದ. ಅದೇನೆ ಆಗಲಿ ಒಂದು ಪೈಸೆಯನ್ನೂ ಲಂಚ ಕೊಡದೆ ಕೆಲಸ ಮಾಡಿಕೊಳ್ಳುವೆ ಎಂದು ಅಲೆದಲೆದು ಕೆಲಸ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕೂ ಜಗ್ಗದಿದ್ದಾಗ ಭಿನ್ನರೀತಿಯಲ್ಲಿ ಪ್ರತಿರೋಧ ಒಡ್ಡಿ ಅಧಿಕಾರಿಗಳಲ್ಲಿ ಭಯ ಹುಟ್ಟಿಸಿ ಕೆಲಸ ಮಾಡಿಸಿಕೊಳ್ಳುವುದೂ ಉಂಟು. ಇನ್ನೂ ಮುಂದುವರೆದು ಅವರದೇ ರೀತಿಯ ಹೋರಾಟವನ್ನೂ ಸಹ ಮಾಡುತ್ತಾರೆ. ಇಂತಹ ಹೋರಾಟಗಳು ಎಲ್ಲೂ ದಾಖಲಾಗುವುದಿಲ್ಲವಷ್ಟೆ. ಇವರುಗಳೆಲ್ಲಾ ನಮ್ಮ ನಮ್ಮ ಹಳ್ಳಿಗಳಲ್ಲೇ ನೆಲೆಸಿರುವ ಹಣ್ಣಾ ಹಜಾರೆಗಳು ಎಂದು ನನಗೀಗ ಅನ್ನಿಸತೊಡಗಿದೆ. ಹೀಗೆ ಸೆಣಸಾಡಿದ ಕೆಲವು ಕಥನಗಳು ಹೀಗಿವೆ.

ಕಥನ: ಒಂದು
ಕೂಡ್ಲಿಗಿ ತಾಲೂಕಿನ ಹಳ್ಳಿಯೊಂದರಲ್ಲಿ ಬರಮಜ್ಜಿ ಎನ್ನುವ ಅಜ್ಜಿ ಇದ್ದಳು. ಅವಳು ವೃದ್ಧಾಪ್ಯ ವೇತನ ಪಡೆಯುವಾಗ ಪೋಷ್ಟಮ್ಯಾನ್‌ಗೆ ಕಮಿಷನ್ ಕೊಡುತ್ತಿರಲಿಲ್ಲ. ಅಜ್ಜಿ ಕೇಳುವ ಪ್ರಶ್ನೆ ನಿನಗೆ ಸರಕಾರ ಸಂಬಳ ಕೊಡಲ್ಲೇನು, ಮತ್ಯಾಕ ನಾ ಕೊಡ್ಲಿ ಎನ್ನುವುದು. ಈ ಜಿದ್ದಿಗಾಗಿ ಪೋಷ್ಟಮ್ಯಾನ್ ನಾಲ್ಕು ತಿಂಗಳಾದರೂ ಸಂಬಳ ಕೊಡದಿದ್ದಾಗ ಅಜ್ಜಿ ಅಂಚೆ ಕಚೇರಿಗೆ ಹೋಗಿ ಕೇಳಿದ್ದಾಳೆ. ಆಗ ಪೋಷ್ಟಮಾಷ್ಟರ್ ನೀನು ಹಣ ಕೊಡಲು ಬಂದಾಗ ಇರಲಿಲ್ಲ ಎಂದು ಹಣ ವಾಪಸ್ ಕಳಿಸಲಾಗಿದೆ, ನೀನು ತಾಲೂಕು ಕಚೇರಿಗೆ ಹೋಗಿ ಮತ್ತೆ ಬಿಲ್ ಹಾಕಿಸಿಕೊಂಡು ಬಾ ಎಂದು ಹೇಳಿದ್ದಾರೆ.
ಆಗ ಅಜ್ಜಿಗೆ ದಿಕ್ಕುತೋಚದೆ, ತಾಲೂಕು ಕಛೇರಿಗೆ ಅಲೆದಾಗ ಅಲ್ಲಿನ ಅಧಿಕಾರಿಗಳು ಅಜ್ಜಿಯನ್ನು ಲಂಚ ಕೇಳಿದ್ದಾರೆ. ಅಜ್ಜಿ ಅಲ್ಲಿಯೂ ಪೆಡಸಾಗಿಯೇ ಉತ್ತರಿಸಿದೆ. ಹೀಗಾಗಿ ಒಂದು ವಾರ ಅಜ್ಜಿಯನ್ನು ಅಲೆದಾಡಿಸಿದ್ದಾರೆ. ಅಜ್ಜಿಕೊನೆಗೆ ನಾನು ಸಾಯೋತನಕ ಈ ಕಚೇರಿ ಬಿಟ್ಟು ಹೋಗಲ್ಲ ಎಂದು ತಾಲೂಕು ಕಛೇರಿಯ ಮುಂದೆ ಕೂತಿದೆ. ಈ ಸುದ್ದಿ ಹೇಗೋ ತಹಶೀಲ್ದಾರರ ಕಿವಿಗೆ ಬಿದ್ದು, ಅವರೇ ಅಜ್ಜಿಯನ್ನು ಕುದ್ದಾಗಿ ವಿಚಾರಿಸಿ ಲಂಚ ಕೇಳಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಅಜ್ಜಿಯ ವೇತನವನ್ನು ಬಿಡುಗಡೆಗೊಳಿಸಿದರು. ಆಗ ಪೋಷ್ಟಮ್ಯಾನ್ ಉದ್ದೇಶಪೂರ್ವಕವಾಗಿ ಅಜ್ಜಿಯ ವೇತನವನ್ನು ವಾಪಸ್ ಮರಳಿಸಿದ್ದಾನೆ ಎಂದು ತಿಳಿದು ತಹಶೀಲ್ದಾರ್ ಸಂಬಂದಿಸಿದ ಅಧಿಕಾರಿಗಳಿಂದ ಪೋಷ್ಟಮ್ಯಾನ್‌ನನ್ನು ತರಾಟೆಗೆ ತೆಗೆದುಕೊಳ್ಳುವಂತೆ ನೋಡಿಕೊಂಡರು. ಇದು ಮತ್ತೆ ಪುನರಾವರ್ತನೆ ಆಗಲಿಲ್ಲ.
ಕಥನ: ಎರಡು
ನಮ್ಮ ಭಾಗದಲ್ಲಿ ಬಿ.ಡಿ. ಗೌಡ ಎಂಬ ಗ್ರಾಮ ಲೆಕ್ಕಾಧಿಕಾರಿ ಇದ್ದ. ಈತನು ಹಣದಾಹಿ. ಜಾತಿ ಪ್ರಮಾಣ ಪತ್ರಕ್ಕೆ ಸಹಿ ಹಾಕಲು ಸಹಾ ಹಣ ಕೀಳುತ್ತಿದ್ದ. ಇದರಿಂದ ಜನ ಬೇಸತ್ತಿದ್ದರು. ಹಣಕ್ಕಾಗಿ ಅವರ ಹೊಲ ಇವರಿಗೆ, ಇವರ ಹೊಲ ಅವರಿಗೆ ಬದಲಾಯಿಸಿಬಿಡುವ ಮಟ್ಟಕ್ಕೂ ಇಳಿದಿದ್ದ. ಕರೆಮೂಗಜ್ಜ ಎಂಬ ಅಜ್ಜನಿದ್ದ. ಆತ ಕಡುಕೋಪಿಷ್ಟ. ತನ್ನ ಹೊಲದ ಪಹಣಿ ಕೊಡುವುದಾಗಿ ಬಿ.ಡಿ. ಗೌಡ ಅವರಲ್ಲಿ ಕೇಳಿದ. ಆತ ಎರಡು ಸಾವಿರ ಕೊಡುವುದಾಗಿ ಕೇಳಿದ್ದ. ಇದರಿಂದ ಕೆಂಡಾಮಂಡಲವಾದ ಮೂಗಜ್ಜ ನಾಳೆ ನಮ್ಮೂರಿಗೆ ಬನ್ನಿ ಕೊಡುತ್ತೇನೆಂದು ಹೇಳಿದನು.
ಮರುದಿನ ಗೌಡರು ಹಳ್ಳಿಗೆ ಬಂದರು. ಊರ ಮುಂದೆ ನೆರೆದ ಜನರ ಎದುರು ಮೂಗಜ್ಜ ಗೌಡರ ಬಳಿ ಬಂದು, ಗೌಡ್ರೆ ನನ್ನತ್ರ ಅಷ್ಟು ಹಣ ಇಲ್ಲ, ಮುಂದಿನ ತಿಂಗಳು ಕೊಡ್ತಿನಿ ಈಗ ಪಹಣಿ ಕೊಡ್ರಿ ಎಂದ. ಅದಕ್ಕೆ ಗೌಡ ಮುಂದಿನ ತಿಂಗಳೇ ಪಹಣಿ ಕೊಡುವೆ ಬಿಡು ಎಂದನು. ಇದರಿಂದ ಕೋಪಗೊಂಡ ಮೂಗಜ್ಜ ಕಾಲಲ್ಲಿ ಇರುವ ಚಪ್ಪಲಿಯನ್ನು ಕಿತ್ತು ಮುಖ ಮೋರೆ ನೋಡದಂತೆ ಹೊಡೆದೇ ಬಿಟ್ಟ. ಜನ ಮೂಗಜ್ಜನನ್ನು ಬಿಡಿಸುವ ಹೊತ್ತಿಗೆ ಗೌಡರು ಹಣ್ಣುಗಾಯಿ ನೀರುಗಾಯಿ ಆಗಿ ಮೂಗು ಬಾಯಿಯಲ್ಲಿ ರಕ್ತ ಸೋರುತ್ತಿತ್ತು. ಆತ ಪಟ್ಟಣಕ್ಕೆ ಹೋಗಿ ಮೂಗಜ್ಜನ ಮೇಲೆ ಪೋಲಿಸ್ ಕಂಪ್ಲೇಟ್ ಕೊಟ್ಟನು. ಇದನ್ನು ಇಡೀ ಊರಿಗೆ ಊರೇ ಪೋಲಿಸ್ ಠಾಣೆ ಎದುರು ಧರಣಿ ಕೂತು, ಗೌಡರ ಬ್ರಷ್ಟಾಚಾರದ ವಿರುದ್ಧ ದ್ವನಿ ಎತ್ತಿದರು. ಇದರ ಪರಿಣಾಮ ಗೌಡರನ್ನು ಅಮಾನತ್ತಿನಲ್ಲಿಡಲಾಯಿತು. ಈ ಘಟನೆಯಿಂದಾಗಿ ಆ ಭಾಗದ ಗ್ರಾಮಲೆಕ್ಕಾಧಿಕಾರಿಗಳಿಗೆ ಒಂದು ಬಗೆಯ ಬಿಸಿ ತಟ್ಟಿದಂತಾಯಿತು.
ಇಂತಹ ಇನ್ನು ಇನೇಕ ಘಟನೆಗಳನ್ನು ಸೇರಿಸಬಹುದು. ಈ ಘಟನೆಗಳು ನಡೆದದ್ದು ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ. ಅಂದರೆ ಜನಪದ ಕಲೆಯನ್ನೋ, ಜನಪದ ಗೀತೆ, ಕಥೆಯನ್ನಷ್ಟೇ ಜಾನಪದ ಎಂದು ನೋಡದೆ ಹೀಗೆ ಹೊಸ ನೆಲೆಯಲ್ಲಿಯೂ ಆಯಾ ಜಿಲ್ಲಾ ಗಡಿಯ ಒಳಗೇ ನಡೆದ ಪಲ್ಲಟಗಳನ್ನು ನೋಡಬಹುದಾಗಿದೆ.
ಗುರುಶಿಷ್ಯ ಪರಂಪರೆ :
ಜಾನಪದ ಕಲೆ ಕಲಿಸುವಿಕೆಗಾಗಿ ‘ಗುರು ಶಿಷ್ಯ ಪರಂಪರೆ’ಎನ್ನುವ ಯೋಜನೆಯಿದೆ. ಇದು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮ. ಆಯಾ ಜನಪದ ಕಲೆಯ ಹಿರೀಕರನ್ನು ಗುರುತಿಸಿ, ಅವರನ್ನು ಗುರುವನ್ನಾಗಿಯೂ ಆಯಾ ಕಲೆಯನ್ನು ಆಸಕ್ತಿ ಇರುವ ಶಿಷ್ಯರನ್ನು ಒಳಗೊಂಡಂತೆ, ಆರು ತಿಂಗಳು ಕಾಲ ಕಲೆ ಕಲಿಯಲು ಗುರುಶಿಷ್ಯರಿಗೆ ಸಹಾಯಧನ ಇರುತ್ತದೆ. ಇದು ಜನಪದ ಕಲೆ ಉಳಿಸುವ ಮತ್ತು ಅದನ್ನು ಆಸಕ್ತಿ ಇರುವವರ ಮೂಲಕ ಮುಂದುವರೆಸುವ ಒಂದು ಯೋಜನೆ. ಆದರೆ ಈ ಯೋಜನೆ ಆಯಾ ಜನಪದ ಕಲೆಯನ್ನು ಆಯಾ ಸಮುದಾಯದಲ್ಲಿ ಮಾತ್ರ ಮುಂದುವರಿಯುವಂತೆ ಮಾಡಿ, ಒಂದು ಜಾತಿ ಸಮುದಾಯಕ್ಕೆ ಆಯಾ ಕಲೆಯನ್ನು ಗಂಟು ಹಾಕುತ್ತದೆಯೇ ಎನ್ನುವ ಭಯ ನನಗಿದೆ. ಈ ಯೋಜನೆ ಆಯಾ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಆಸಕ್ತಿ ಮತ್ತು ಕ್ರಿಯಾಶೀಲತೆಯನ್ನು ಆಧರಿಸಿ ಅದು ಅನುಷ್ಠಾನಕ್ಕೆ ಬಂದಂತೆ ಕಾಣುತ್ತದೆ. ಬಳ್ಳಾರಿ ಜಿಲ್ಲೆಯ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚೋರನೂರು ಕೊಟ್ರಪ್ಪ ಈ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಹಾಗಾಗಿ ಬಳ್ಳಾರಿ ಭಾಗದ ಜನಪದ ಕಲಾವಿದರಲ್ಲಿ ಕೊಟ್ರಪ್ಪ ಇವರ ಬಗ್ಗೆ ಒಳ್ಳೆಯ ಗೌರವವಿದೆ.
ಈ ಬಾರಿ ಮಂಜಮ್ಮನಿಗೆ ಮಹಾರಾಷ್ಟ್ರದ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ, ನಾಗಪುರ ಇವರು ಗುರುಶಿಷ್ಯ ಪರಂಪರೆಯ ಯೋಜನೆಯಡಿ ಜೋಗತಿ ಕಲೆ ಕಲಿಸಲು ಅನುವುಮಾಡಿಕೊಟ್ಟಿದ್ದರು. ಹಾಗಾಗಿ ಮಂಜಮ್ಮ ನಾಲ್ಕು ಜನ ಶಿಷ್ಯರನ್ನು , ಒಬ್ಬ ಸಹಾಯಕರನ್ನು ತೆಗೆದುಕೊಂಡು ಜೋಗತಿ ಕಲೆಯನ್ನು ಮರಿಯಮ್ಮನಹಳ್ಳಿಯ ತಮ್ಮ ಮನೆ ಆವರಣದಲ್ಲಿ ಕಲಿಸಿದರು. ಈ ಆರು ತಿಂಗಳ ತರಬೇತಿ ಮುಗಿದು ಮೊನ್ನೆಯಷ್ಟೆ ಸಮಾರೋಪ ನಡೆಯಿತು. ಹಾಗೆ ಜೋಗತಿ ಕಲೆ ಕಲಿತ ಶಿಷ್ಯೆಯರು ದುರುಗಮ್ಮ, ಕೆ. ಮಂಜಮ್ಮ, ಎಲ್ಲಮ್ಮ, ಗೌರಮ್ಮ. ಸಹಾಯಕರಾಗಿ ಹಿರಿಯ ಜೋಗತಿ ರಾಮವ್ವ ಕಲೆ ಕಲಿಸಲು ನೆರವಾಗಿದ್ದಾರೆ.
ಗುರುಶಿಷ್ಯ ಪರಂಪರೆಯಲ್ಲಿ ದರೋಜಿ ಈರಮ್ಮನ ಮೂಲಕ ಬುರ್ರಕಥಾವನ್ನು ಕಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಂತೆಯೇ ಇಮಡಾಪುರದಲ್ಲಿ ಉರುಮೆ ವಾದನ ತರಬೇತಿ, ಹಂಪಾಪಟ್ಟಣದಲ್ಲಿ ಕುದುರೆ ಕುಣಿತ, ಬಡಲಡುಕಿನಲ್ಲಿ ತಗಲುಗೊಂಬೆಯಾಟ, ಕೂಡ್ಲಿಗಿ ಮತ್ತು ವಿರುಪಾಪುರದಲ್ಲಿ ಮಹಿಳೆಯರ ಡೊಳ್ಳುಕುಣಿತ ಕಲೆಗಳು ಗುರುಶಿಷ್ಯ ಪರಂಪರೆಯಲ್ಲಿ ಕಲೆಯನ್ನು ಕಲಿಸುವುದು ಮತ್ತು ಕಲಿಯುವುದು ನಡೆಯುತ್ತಿದೆ. ಇದರಿಂದಾಗಿ ಬಳ್ಳಾರಿ ಜಿಲ್ಲೆಯಲ್ಲಿ ಜಾನಪದದ ಹೊಸ ತಲೆಮಾರೊಂದು ಹುಟ್ಟಿಕೊಳ್ಳಲು ಕಾರಣವಾಗುತ್ತಿದೆ.

ಅಂತರ್ಜಾಲದಲ್ಲಿ ಜಾನಪದ
ಕನ್ನಡದಲ್ಲಿ ಜಾನಪದಕ್ಕೆಂದೇ ಇರುವ ಬ್ಲಾಗ್ ಕನ್ನಡ ಜಾನಪದ. ಈ ಬ್ಲಾಗ್ ಆರಂಭಿಸಿ ಒಂದು ವರ್ಷವಾಗಿದೆ. ಈತನಕ ಅಂತರ್ಜಾಲ ವೀಕ್ಷಕ ಸಂಖ್ಯೆ ಹತ್ತು ಸಾವಿರ ದಾಟಿದೆ. ಇಲ್ಲಿಯತನಕ ಸುಮಾರು ನೂರಕ್ಕಿಂತ ಹೆಚ್ಚಿನ ಲೇಖನಗಳನ್ನು ಈ ಬ್ಲಾಗ್‌ನಲ್ಲಿ ಪ್ರಕಟಿಸಲಾಗಿದೆ. ಅಂತರ್ಜಾಲದಲ್ಲಿ ಕನ್ನಡ ಜಾನಪದದ ಬಗ್ಗೆ ಇಲ್ಲವೆ, ಇಲ್ಲವೆನ್ನುವಷ್ಟು ಮಾಹಿತಿಯ ಕೊರತೆ ಇದೆ. ಈಚೆಗಷ್ಟೆ ಜಾನಪದ ಅಕಾಡೆಮಿ, ಜಾನಪದ ವಿಶ್ವವಿದ್ಯಾಲಯ ತನ್ನದೇ ಆದ ವೆಬ್ ಸೈಟ್‌ನ್ನು ಹೊಂದಿವೆ. ಈ ಹಿಂದೆ ಅನ್ಯ ಭಾಷಿಗರು, ಹೊರಗಿನ ಕನ್ನಡಿಗರು, ಮಾದ್ಯಮದವರು ಗೂಗಲ್ ನಲ್ಲಿ ಕನ್ನಡ ಜಾನಪದದ ಬಗ್ಗೆ ಏನಾದರೂ ಹುಡುಕಿದರೆ ಬರುವ ಪಲಿತಾಂಶ ನಿರಾಸೆ ಹುಟ್ಟಿಸುತ್ತಿತ್ತು.

ಈಗ ಗೂಗಲ್ ಹುಡುಕಾಟದಾರರಿಗೆ ಕನ್ನಡ ಜಾನಪದ ಬ್ಲಾಗ್‌ನ ಎಲ್ಲಾ ಬರಹಗಳ ಲಿಂಕ್ ಸಿಕ್ಕುತ್ತವೆ. ಜಾನಪದ ಕ್ಷೇತ್ರದಲ್ಲಿ ಆಸಕ್ತಿ ಇರುವವರು ಈ ಬ್ಲಾಗ್‌ಗೆ ಬೇಟಿ ಕೊಡಬಹುದಾಗಿದೆ. ರಿoಟಚಿಜಚಿಡಿuಟಿ@gmಚಿiಟ.ಛಿom ಈ ಈಮೇಲ್ ವಿಳಾಸಕ್ಕೆ ಬರಹಗಳನ್ನೂ ಕಳಿಸಬಹುದಾಗಿದೆ.
ಬ್ಲಾಗ್‌ವಿಳಾಸ: ಇದಾಗಿದೆ. ಈ ಬ್ಲಾಗನ್ನು ಬಳ್ಳಾರಿ ಜಿಲ್ಲೆಯವರೆ ನಿರ್ವಹಿಸುವುದರಿಂದಾಗಿ, ಇದನ್ನು ಕೂಡ ಬಳ್ಳಾರಿ ಜಿಲ್ಲೆಯ ಹೊಸ ನಡಿಗೆಯಲ್ಲಿ ಗುರುತಿಸಬಹುದಾಗಿದೆ.

ವೃತ್ತಿ ಕಸಬುಗಳ ನಡಿಗೆ

ಬಳ್ಳಾರಿ ಜಿಲ್ಲೆಯ ಜನಪದ ವೃತ್ತಿ ಕಸಬುಗಳಲ್ಲಿಯೂ ಹೊಸ ಬಗೆಯ ಚಲನೆಗಳನ್ನು ಕಾಣಬಹುದಾಗಿದೆ. ಜೋಳದ ಕೂಡ್ಲಿಗಿ ಕಮ್ಮಾರ ಚಂದ್ರಪ್ಪನ ಮಾತುಗಳ ಮೂಲಕ ಆ ಚಲನೆಯನ್ನು ಗುರುತಿಸಬಹುದಾಗಿದೆ.
ಚಂದ್ರಪ್ಪ ಕಮ್ಮಾರಿಕೆ ಮತ್ತು ಬಡಿಗಿತನ ಎರಡನ್ನು ಮೂವತ್ತು ವರ್ಷಗಳಿಂದ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜೋಳದ ಕೂಡ್ಲಿಗಿಯಲ್ಲಿ ಮಾಡುತ್ತಾ ಬಂದಿದ್ದಾನೆ. ಈಗ ಆತನೊಂದಿಗೆ ಆತನ ಇಬ್ಬರು ಮಕ್ಕಳು ಅದೇ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ಕಮ್ಮಾರಿಕೆಗೆ ಒಂದೇ ಜಾತಿಗೆ ಸೀಮಿತವಾದ ಉದ್ಯೋಗವಲ್ಲ. ಅದು ಹಲವಾರು ಜಾತಿ ಧರ್ಮದವರನ್ನು ಒಳಗೊಂಡಿದೆ. ಹಾಗಾಗಿ ಒಂದೊಂದು ಊರಲ್ಲಿ ಬೇರೆ ಬೇರೆಯ ಜಾತಿಯವರು ಕಮ್ಮಾರಿಕೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಕಮ್ಮಾರಿಕೆಯನ್ನು ಆಧರಿಸಿದ ರೈತಾಪಿ ಕೆಲಸಗಳಲ್ಲಿ ಕಮ್ಮಾರಿಕೆಯನ್ನು ನಿಲ್ಲಿಸುವಂತಹ ತೀವ್ರ ಬದಲಾವಣೆಗಳೇನು ಸಂಭವಿಸಿಲ್ಲ. ಹಾಗಾಗಿ ಜಾನಪದ ವಿದ್ವಾಂಸರು ವೃತ್ತಿ ಕಸಬುಗಳು ಅವನತಿಯ ಹಾದಿ ತಲುಪಿವೆ ಎನ್ನುವ ಮಾತು ಸ್ವಲ್ಪ ಮಟ್ಟಿಗೆ ಹುಸಿ ಎನ್ನಿಸಿತು.
ಬಹುತೇಕ ವೃತ್ತಿ ಕಸಬಿನಿಂದ ಸಂಕಷ್ಟ ಅನುಭವಿಸಿದವರು ಸಹಜವಾಗಿ ತಮ್ಮ ಮಕ್ಕಳು ಅದೇ ವೃತ್ತಿಯಲ್ಲಿ ಮುಂದುವರೆಯಲು ಇಷ್ಟಪಡುವುದಿಲ್ಲ. ಆದರೆ ಕಮ್ಮಾರ ಚಂದ್ರಪ್ಪ ಹೆಚ್ಚು ಓದದ ತನ್ನ ಮಕ್ಕಳನ್ನೂ ಕಮ್ಮಾರಿಕೆಯಲ್ಲಿಯೇ ಮುಂದುವರಿಯುವಂತೆ ತರಬೇತಿ ನೀಡುತ್ತಿದ್ದಾರೆ. ಚಂದ್ರಪ್ಪನದೇ ಮಾತಿನಲ್ಲಿ ಹೇಳುವುದಾದರೆ, ‘ಹಿಂದಿನ ಕಾಲ್ದಾಗ ಹಗ್ಲು ರಾತ್ರಿ ಕತ್ತಿ ಮಾಡಿದಂಗ ಮಾಡಿದ್ರು..ಹೊಟ್ಟಿಗೆ ಬಟ್ಟಿಗೆ ಸಾಕಾಗ್ತಿರ್ಲಿ್ಲ್ಲ..ಈಗ್ಲೇ ವಾಸಿ ದಿನ ಪೂರ್ತಿ ದುಡಿದ್ರೆ ಕಡಿಮೆ ಅಂದ್ರೂ ಆರುನೂರಾದ್ರೂ ಆಗ್ತಾತಿ..ಈಗಿನ ದುಬಾರಿ ಕಾಲ್ದಾಗೂ ನಾವು ಅರಾಮಾಗಿದಿವಿ’ ಎಂದರು. ಇದು ಹೇಗೆಂದು ಕೇಳುತ್ತಾ ಹೋದಂತೆ ಕಮ್ಮಾರಿಕೆಯ ಹೊಸ ಚಲನೆಗಳು ಕಾಣತೊಡಗಿದವು.
ಇಂದು ಗ್ರಾಮೀಣ ಭಾಗದಲ್ಲಿ ಕೃಷಿ ಕೆಲಸಕ್ಕೆ ಟ್ರಾಕ್ಟರ್ ಮೇಲಿನ ಅವಲಂಬನೆ ಹೆಚ್ಚಾಗುತ್ತಿದೆ. ಟ್ರಾಕ್ಟರ್ ಮಡಕೆ ಹೊಡೆಯಲು, ಹರಗಲು ಬಳಸುವ ಕುಳಗಳು ಮೊಂಡಾದಾಗ ಅವುಗಳನ್ನು ಅಣಿದು ಚೂಪು ಮಾಡಲು ಕಮ್ಮಾರರ ಹತ್ತಿರವೆ ಬರಬೇಕು. ಒಂದು ಟ್ರಾಕ್ಟರ್ ಕುಳವನ್ನು ಅಣಿಯಲು ಕಮ್ಮಾರರು ಇನ್ನೂರ ಐವತ್ತು ರೂಪಾಯಿಯ ಚಾರ್ಜಮಾಡುತ್ತಾರೆ. ಅಂದರೆ ಹತ್ತಾರು ಎತ್ತಿನ ಮಡಕೆ ಕುಳ ಅಣಿಯುವುದರಿಂದ ಬರುವ ಹಣ ಒಂದು ಟ್ರಾಕ್ಟರ್ ಮಡಕೆ ಅಣಿಯುವುದರಿಂದ ಬರುತ್ತದೆ. ಅಂದರೆ ಅತ್ಯಾಧುನಿಕ ಯಂತ್ರವಾದ ಟ್ರಾಕ್ಟರ್ ಕೂಡ ಕಮ್ಮಾರನ ಕುಲುಮೆಯನ್ನು ಆಶ್ರಯಿಸಿರುವುದು ಇದರಿಂದ ತಿಳಿಯುತ್ತದೆ.
ಹೀಗೆ ಅಧುನಿಕ ಎನ್ನುವ ಪರಿಕರಗಳು ಕುಲುಮೆಗೆ ಬರತೊಡಗಿರಿವುದರಿಂದ ಅದರ ಆದಾಯವೂ ಹೆಚ್ಚಿದೆ. ಹೀಗೆ ಸಾಂಪ್ರದಾಯಿಕ ವೃತ್ತಿ ಕಸಬುಗಳ ಹೊಸ ಚಲನೆಯನ್ನು ನೋಡುತ್ತಾ ಹೋದರೆ, ಅದರ ಆದಾಯದ ಹೊಸ ಮೂಲಗಳು ಹುಟ್ಟಿಕೊಂಡಿರುವುದು ಗೋಚರಿಸುತ್ತದೆ. ಇದೊಂದು ಘಟನೆಯಿಂದಾಗಿ ಎಲ್ಲಾ ವೃತ್ತಿಕಸಬುಗಳು ಲಾಭದಾಯಕವಾಗಿವೆ ಎಂದು ಹೇಳುತ್ತಿಲ್ಲ, ಅವರುಗಳು ಸಂಕಷ್ಟದಲ್ಲಿದ್ದಾರೆ. ಆದರೆ ಅವರೇ ಕಂಡುಕೊಂಡ ಹೊಸ ದಾರಿಗಳನ್ನು ಹುಡುಕುತ್ತಾ ಹೋದರೆ, ವೃತ್ತಿ ಕಸಬುಗಳಲ್ಲಾದ ಬದಲಾವಣೆ ಮತ್ತು ಹೊಸ ಚಲನೆಯ ಬಗ್ಗೆ ತಿಳಿಯಬಹುದು.
ಹೀಗೆ ಸ್ಥೂಲವಾಗಿ ಬಳ್ಳಾರಿ ಜಿಲ್ಲೆಯ ಜಾನಪದದ ಹೊಸ ನಡಿಗೆಯನ್ನು ಗುರುತಿಸಬಹುದಾಗಿದೆ. ಇನ್ನು ಇದನ್ನು ಬೇರೆ ಬೇರೆ ಸಂಗತಿಗಳ ಮೂಲಕವೂ ವಿಸ್ತರಿಸಲು ಅವಕಾಶವಿದೆ. ಈ ಬರಹದ ಮೊದಲಿಗೇ ಹೇಳಿದೆ ಇದೊಂದು ಟಿಪ್ಪಣಿ ರೂಪದ ಬರಹವೆಂದು. ಹಾಗಾಗಿ ಇಲ್ಲಿನ ಟಿಪ್ಪಣಿಗಳು ಜಿಲ್ಲೆಯೊಂದರ ಜಾನಪದ ಕುರಿತಂತೆ ಹೊಸ ಚಲನೆಯನ್ನು ಗುರುತಿಸಲು ಸಹಕಾರಿಯಾಗುತ್ತವೆ.

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

nimma e lekhana thumba chennagi mudi badide.ee lekhanadalli eegagale samajadalli guruthisikondiruva kalavidaru aadunikaranakke hondikondanthe thamma kaleyalli badalavanegalannu madikondiruvudannu kanutheve,jothege mahileyaru kuda kalegala bagge asakthi vahisiddare. aadare illi mukhyavagi yava mahileyarannu ee kalegalannu rudisikolluthiddare mathu yava karanakkagi ee kalegalige baruthiddare yembudannu heliddare chennagiruthithu..becz..aadunikaranada indina sandarbadalli janapada kalegalannu labada uddeshakkagi rudisikolluthiddare......e thichege rayachuru jilleyalli nerehavali sambavisidaga allina janaru uuta,aashrayakkagi tholaladuthiruva sanarbadalli allina mahileyaru nerege samandisidanthe hadugalannu katti hadiddare..ee tharada gatanegalu ballari jilleyalliyu sambaviside.....Bujji...kvv.hampi

ಅನಾಮಧೇಯ ಹೇಳಿದರು...

nimma lekhanavu vivaraneyannu koduvudara jothege vimarshathmakavagi mudi barabeku yembude namma aashaya.........................................Bujji..kvv,hampi