ಗುರುವಾರ, ಜೂನ್ 9, 2011

ಹಾಡು ಪಠ್ಯದಲ್ಲಿ ಓದು ಪಠ್ಯದ ನೆನಪು


ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಅವರು ಸಂಪಾದಿಸಿದ ‘ಬಂಡಿ ಬಂದಾವು ಬಾಳೆ ವನದಾಗೆ’ ಜನಪದ ಗೀತೆ ಸಂಗ್ರಹದ ಪುಸ್ತಕ. ಈ ಕೃತಿಗೆ ೨೦೧೦ ರ ಜಾನಪದ ಅಕಾಡೆಮಿ ಪ್ರಶಸ್ತಿ ಬಂದಿದೆ. ೧೬೩ ಪುಟದ ಈ ಪುಸ್ತಕದಲ್ಲಿ ೩೧ ಜನ ಜನಪದ ಗಾಯಕ, ಗಾಯಕಿಯರು ಹಾಡಿದ ೭೨ ಜನಪದ ಗೀತೆಗಳು, ೨೨ ಪುಟದ ದೀರ್ಘ ಪ್ರಸ್ತಾವನೆಯೂ, ಗೊರುಚ ಅವರ ಮುನ್ನುಡಿಯೂ ಇದೆ. ಈ ಕೃತಿಯನ್ನು ಸಿರಾದ ಗಡಿನಾಡ ಜಾನಪದ ಸಂಪರ್ಕಾಭಿವೃಧ್ಧಿ ಕೇಂದ್ರ ಪ್ರತಿಷ್ಠಾನ ಪ್ರಕಟಿಸಿದೆ.

ಚಿಕ್ಕಣ್ಣ ಅವರು ಹದಿನೈದಕ್ಕೂ ಹೆಚ್ಚಿನ ಜಾನಪದ ಕುರಿತಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಸಂಪಾದನೆ ಮತ್ತು ಜಾನಪದ ಸಂಶೋಧನೆಗೆ ಸಂಬಂಧಿಸಿದವು. ಇದು ಚಿಕ್ಕಣ್ಣ ಅವರ ಜಾನಪದ ಕ್ಷೇತ್ರದ ದುಡಿಮೆ. ಜಾನಪದದಲ್ಲಿ ಕತೆ, ಗೀತೆ ಮುಂತಾದವುಗಳನ್ನು ಸಂಗ್ರಹಿಸಿ ಆ ಸಂಗ್ರಹದ ಸಾರವನ್ನು ಆಧರಿಸಿ ಚರ್ಚೆ ಮಾಡುವ ಸಾಂಪ್ರಾದಾಯಿಕ ಜಾನಪದ ವಿದ್ವತ್ತು ಕನ್ನಡದಲ್ಲಿದೆ. ಇಂತಹ ವಿದ್ವತ್ತಿನ ಮುಂದುವರಿದ ಭಾಗವಾಗಿ ಚಿಕ್ಕಣ್ಣ ಅವರ ಜಾನಪದ ಕೆಲಸಗಳು ನಡೆದಿವೆ. ಇಂತಹದ್ದೆ ವಿದ್ವತ್ತಿನ ಸಾರವನ್ನು ಹೀರಿ ಬಂದ ಪುಸ್ತಕ ‘ಬಂಡಿ ಬಂದಾವು ಬಾಳೆ ವನದಾಗೆ’.

ಇಲ್ಲಿನ ಸಂಗ್ರಹದ ಗೀತೆಗಳು ಲೇಖಕರು ಹೇಳುವಂತೆ ಎಂಟತ್ತು ವರ್ಷದ ಹಿಂದಿನವು, ಹಾಗಾಗಿ ಈ ಹಾಡುಗಳಲ್ಲಿ ಆಧುನಿಕ ಕಾಲದ ಚಲನೆ ಮಾಯವಾಗಿದೆ. ಚಿಕ್ಕಣ್ಣ ಅವರು ಜಾನಪದ ಕ್ಷೇತ್ರಕಾರ್ಯ ಮಾಡಿ ಇಂತಹ ಸಂಗ್ರಹದ ಕೆಲಸ ಮಾಡುವ ಅವರ ಶ್ರಮವನ್ನು ಗೌರವಿಸಬೇಕು. ತುಮಕೂರು ಜಿಲ್ಲೆಯನ್ನು ಆಧರಿಸಿದ ಅವರ ಜಾನಪದ ಬರಹಗಳು, ಇಲ್ಲಿನ ಸಾಂಸ್ಕೃತಿಕ ಪರಿಸರವನ್ನು ತಿಳಿಯಲು ನೆರವಾಗುತ್ತವೆ. ಈಗಾಗಲೆ ಇರುವ ಜಾನಪದ ತಿಳುವಳಿಕೆಗೆ ಚಿಕ್ಕಣ್ಣ ಅವರು (ಹತ್ರಲ್ಲಿ ಹನ್ನೊಂದ್ನೇದು ಎಂಬ ಗಾದೆಯಂತೆ)ಮತ್ತಷ್ಟು ಪರಿಕರಗಳನ್ನು ಸೇರಿಸುತ್ತಿದ್ದಾರೆ. ಇಂತಹ ಸಂಗ್ರಹದ ಕೆಲಸಕ್ಕೂ ವಿಮುಖರಾದ ಜಾನಪದ ವಿದ್ವಾಂಸರ ನಡುವೆ, ಚಿಕ್ಕಣ್ಣ ಈ ಕಾರಣಕ್ಕೆ ಮುಖ್ಯರಾಗುತ್ತಾರೆ. ಇದಕ್ಕಾಗಿ ಅವರು ಅಭಿನಂದನಾರ್ಹರು.

ಈ ಕೃತಿಗೆ ಸುದೀರ್ಘ ಪ್ರಸ್ತಾವನೆ ಇದೆ. ಇದು ಈತನಕದ ಜಾನಪದ ಗೀತೆಗಳ ಅದ್ಯಯನದ ತುಣುಕುಗಳನ್ನು ಉಲ್ಲೇಖಿಸಿ ಅದರ ಮುಂದುವರಿಕೆಯಂತಿದೆ. ಗೀತೆಗಳಲ್ಲಿರುವ ವಿಷಯಗಳನ್ನು ವಿಷಯವಾರು ವಿಂಗಡಿಸಿ ಚರ್ಚಿಸಿದ್ದಾರೆ. ಈ ಪ್ರಸ್ತಾವನೆ ಜಾನಪದ ಗೀತೆಗಳ ತಿಳುವಳಿಕೆಯನ್ನೇನು ವಿಸ್ತರಿಸುವುದಿಲ್ಲ, ಬದಲಾಗಿ ಹಳೆ ನಂಬಿಕೆಗಳಿಗೆ ಬಲ ಕೊಡುತ್ತದೆ. ಈ ಪುಸ್ತಕದ ನೆಪದಲ್ಲಿ ಕೆಲವು ಪ್ರಶ್ನೆಗಳನ್ನು ಚರ್ಚಿಸಲು ಸಾದ್ಯವಿದೆ. ಜನಪದ ಹಾಡು ಪರಂಪರೆಯ ಮೇಲೆ ಹಲವು ಜನಪ್ರಿಯ ಹಾಡು ಪರಂಪರೆಗಳು ಪ್ರಭಾವ ಬೀರಿವೆ. ಆಧುನಿಕ ಕಾಲದ ಸಂಗತಿಗಳು ಗೀತೆಯ ಒಳಹೊಕ್ಕು ಮನೆಮಾಡಿವೆ. ಅದು ಸಹಜ ಪ್ರಕ್ರಿಯೆ. ಇಂತಹ ಪ್ರಭಾವದ ಹಾಡುಗಳನ್ನು ಶುದ್ಧ ಜನಪದ ಗೀತೆಗಳಲ್ಲ ಎಂದು ತಿರಸ್ಕರಿಸಲಾಗುತ್ತದೆ. ಹಾಗದರೆ ಜಾನಪದ ನಿರಂತರ ಕ್ರಿಯಾಶೀಲವಾದುದು ಎಂಬ ನಂಬಿಕೆ ಸುಳ್ಳೆ? ಅದು ಸುಳ್ಳು ಎನ್ನುವುದಾದರೆ ಶುದ್ದ ಜನಪದ ಗೀತೆಗಳ ಕಲ್ಪನೆ ಬರುತ್ತದೆ. ಚಿಕ್ಕಣ್ಣ ಸಂಗ್ರಹಿಸಿದ ಹಾಡುಗಳನ್ನು ನೋಡಿದರೆ ಜಾನಪದ ಎನ್ನುವುದು ಜಡವಾದುದು ಎಂದು ಹೇಳಬಹುದು. ಹೀಗೆ ತಾತ್ವಿಕವಾಗಿ ಜಾನಪದದ ಜಡತೆಯ ಆಶಯವನ್ನು ದ್ವನಿಸುವ ಪುಸ್ತಕಕ್ಕೆ ಜಾನಪದ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಕೊಡುವುದನ್ನು ನೋಡಿದರೆ ಅಕಾಡೆಮಿಯ ಆಲೋಚನ ಕ್ರಮವೂ ಇದಕ್ಕಿಂತ ಭಿನ್ನವಾಗಿಲ್ಲ ಅನ್ನಿಸುತ್ತದೆ.

ಇಲ್ಲಿನ ಗೀತೆಗಳಲ್ಲಿ ಪ್ರಾದೇಶಿಕ ವಿವರಗಳು ಹೆಚ್ಚಿವೆ. ಆದರೆ ಜನಪದ ಗಾಯಕರ ವಯಕ್ತಿಕ ಬದುಕಿನ ನೋವು ನಲಿವು ಮಾಯವಾಗಿದೆ. ಈ ಕೃತಿಯ ಪ್ರಸ್ತಾವನೆಯಲ್ಲೂ ಕ್ಷೇತ್ರಕಾರ್ಯದ ಅನುಭವವಾಗಲಿ, ಹಾಡು ಪರಂಪರೆಗೆ ಜನಪದರು ಪ್ರತಿಕ್ರಿಯಿಸಿದ ಬಗೆಯಾಗಲಿ, ಬದಲಾದ ಕಾಲದಲ್ಲಿ ಜನಸಂಸ್ಕೃತಿಯಲ್ಲಿ ನಡೆದ ಪಲ್ಲಟಗಳ ಕುರಿತಾಗಲಿ ಇಲ್ಲಿ ಚರ್ಚಿಸಿಲ್ಲ. ಹಾಗಾಗಿ ಇಡೀ ಕೃತಿಯಲ್ಲಿ ವರ್ತಮಾನವೆ ಕಾಣೆಯಾದಂತಿದೆ. ಹಳೆಯ ಜನಪದ ಗೀತೆಗಳ ಸಂಗ್ರಹ ಓದಿದವರಿಗೆ ಇಲ್ಲಿನ ಗೀತೆಗಳು ಹೊಸತೆನ್ನಿಸದೆ, ಕೆಲವು ಭಿನ್ನ ಪಾಠಾಂತರಗಳಿವೆ ಅನ್ನಿಸುತ್ತದೆ.

ಈ ಕೃತಿಯಲ್ಲಿ ಓದು ಪಠ್ಯಗಳ ನೆನಪುಗಳಿವೆ. ವಿದ್ವಾಂಸರು ಶಿಷ್ಟ ಜಾನಪದವನ್ನು ಬೇರೆಬೇರೆಯಾಗಿ ನೋಡುವ ಪರಿಪಾಟವಿದೆ. ಆದರೆ ಮೌಖಿಕ ಪಠ್ಯದಲ್ಲಿಯೆ, ಓದು ಪರಂಪರೆಯನ್ನು ನೆನಪಿಸುವ ಸಂಗತಿಗಳು ಗಮನ ಸೆಳೆಯುತ್ತವೆ. ಈ ಬಗೆಯ ಓದು ಪಠ್ಯಗಳನ್ನು ನೆನಪಿಸುವ ಜನಪದ ಗೀತೆಗಳು ಇಲ್ಲವೆಂತಲ್ಲ, ಆದರೆ ಅದನ್ನು ಆಧರಿಸಿದ ಚಿಂತನೆ ಇಲ್ಲ. ಇದು ಹಾಡು ಪರಂಪರೆ ಮತ್ತು ಓದು ಪರಂಪರೆಯ ನಡುವಣ ಒಂದು ವಿಚಿತ್ರವಾದ ಕೊಡುಕೊಳೆ ನಡೆದಿರುವುದಕ್ಕೆ ಸಾಕ್ಷಿಯಂತಿದೆ. ಶಿಷ್ಟ ಕಾವ್ಯ ಬರೆದ ಕುಮಾರ ವ್ಯಾಸನನ್ನು ಪರಿಚಯಿಸುವ ಕಾವ್ಯವೆ ‘ಕುಮಾರವ್ಯಾಸನು ಹಾಡಿದನೆಂದರೆ..ಎಂದು ಆರಂಭವಾಗುವುದನ್ನು ಗಮನಿಸಬೇಕು. ಇಲ್ಲಿನ ಕೆಲವು ಗೀತೆಯ ತುಣುಕುಗಳನ್ನು ಗಮನಿಸಿ:

ಅಂಗಂದ ಮಾತ ಕೇಳೋಳೆ ಬೊಮ್ಮವ್ವ/ ಮಾರಪ್ಪಗೌಡನ ಕರಿಸೋಳೆ/ಹೆಣ್ಣು ಕೆಟ್ಟರೆ ತೌರುಮನೆಗೆ/ ಹೊನ್ನು ಕೆಟ್ಟರೆ ಅಕ್ಕಸಾಲಿಗನ ಮನೆಗೆ/ತೌರಿಗೊಂದು ಓಲೆಯನೆ ಬರೆಸ್ಯಾನೆ/ ಕಾಲಬೇಗ ತಳವಾರ ಹೋದಾನು/ ಏರಿಯ ಹಿಂದಿನ ಗರಿಯ ಓಲೆಯ ತರುತಾನೆ/ಮಾರಪ್ಪನ ಕೈಲಿ ಕೊಡುತಾನೆ/ಗರಿಯಲ್ಲಿ ಅಕ್ಷರವ ಬರೆದೋರೆ/ ಗರಿಯಲ್ಲಿ ಅಕ್ಷರವ ಏನೆಂದು ಬರೆದೋರೆ/ನಿಮ್ಮ ಮನೆಯ ಮಗಳು ಒಡವಿಗೆ ಹೋಗುತಾಳೆ/ಮಾರಪ್ಪಗೌಡ ತಳವಾರನ ಕೈಗೆ ಓಲೆಯ ಕೊಡುತಾನೆ(ಪುಟ-೧೩೪)

ನಿಮ್ಮ ಪುಸ್ತಕವ ತೆಗಿರಯ್ಯ ಜೋಯಿಸರೆ/ಕಂದಮ್ಮನಿಗೆ ಶಕುನಾವ ಕೇಳಬೇಕು/ಶುಕ್ರವಾರ ನಿಸ್ತ್ರಿ ಮೈನೆರೆದವಳೆ/ತಂದೋರ ಮನೆಗೆ ಜಯಜಯಾ/ಒಂದೆ ಕಂದಮ್ಮನ ಫಲವೈತೆ ಒಡವೀಗೆ/ ಹೋಗುತ್ತಾಳೆ ಹೋಗಿ ಬರೆದವಳೇ ಹಣೆಯಾಗೆ/ನನ್ನ ಬಾಳ ಹೆಣ್ಣಿಗೆ ಏನು ಕುಂದಾ ನುಡಿದಯ್ಯಾ/ ನಿಮ್ಮ ಪುಸ್ತಕವ ಬೆಂಕಿಗೆ ಹಾಕಿ ಚೆಂದ ಚೆಂದ ಉರುವಯ್ಯಾ/ಜೋಯಿಸರೇ ಮುಂದ ಬರುವುದ ಒಬ್ಬರೂ ಅರಿಯಾರು (ಪುಟ-೧೨೬)

ಇಲ್ಲಿನ ಉಲ್ಲೇಖಗಳನ್ನು ನೋಡಿದರೆ, ಬರಹ ಸಂವಹನ ಮಾದ್ಯಮವಾದ ಪಲ್ಲಟವನ್ನು ಮೌಖಿಕ ಪರಂಪರೆಯೆ ಹೇಳುತ್ತಿದೆ. ಅದೇ ಬರಹ ಜೋಯಿಸರ ಬಂಡವಾಳವಾದದ್ದನ್ನು ಗುರುತಿಸಲಾಗಿದೆ. ‘ಮುಂದ ಬರುವುದ ಒಬ್ಬರೂ ಅರಿಯಾರು’ ಎಂದು ಜೋಯಿಸರ ಜ್ಯೋತಿಷ್ಯವನ್ನೇ ಲೇವಡಿ ಮಾಡಿ ‘ಪುಸ್ತಕವ ಬೆಂಕಿಗೆ ಹಾಕಿ ಚೆಂದ ಚೆಂದ ಉರುವಯ್ಯಾ’ ಎನ್ನುವ ಪ್ರತಿರೋದ ಇಲ್ಲಿ ವ್ಯಕ್ತವಾಗಿದೆ. ಹೀಗೆ ಮಾತು ಮತ್ತು ಬರಹದ ಪಲ್ಲಟಗಳನ್ನು ಜನಪದ ಗೀತೆಗಳಲ್ಲಿ ಗುರುತಿಸಲು ಸಾದ್ಯವಿದೆ. ಚಿಕ್ಕಣ್ಣ ಅವರು ಜಾನಪದದ ಸಾಂಪ್ರದಾಯಿಕ ಅಧ್ಯಯನ ವಿಧಾನಗಳಿಂದ ಹೊರ ಬರದೆ, ಸಂಗ್ರಹದಂತಹ ಕೆಲಸಕ್ಕಿಂತ ಹೆಚ್ಚಿನದೇನನ್ನೂ ಅವರಿಂದ ನಿರೀಕ್ಷಿಸಲು ಸಾದ್ಯವಿಲ್ಲ.

ಮಂಗಳವಾರ, ಜೂನ್ 7, 2011

ಆಫ್ರಿಕಾ ಆಫ್ರಿಕಾ -ಹಾಡು ಕುಣಿತ ನಾಡು ಕಲಿತ ಜಾತ್ರೆ

-ಬಿ ಎ ವಿವೇಕ ರೈ



ವ್ಯೂತ್ಸ್ ಬುರ್ಗ್ ನಗರದಲ್ಲಿ ಪ್ರತೀವರ್ಷ ‘ಆಫ್ರಿಕಾ ಫೆಸ್ಟಿವಲ್’ ದೊಡ್ಡ ಪ್ರಮಾಣದಲ್ಲಿ ವರ್ಣರಂಜಿತವಾಗಿ ಕಲಾತ್ಮಕವಾಗಿ ನಡೆಯುತ್ತದೆ.ಜಗತ್ತಿನಾದ್ಯಂತ ಹರಡಿಕೊಂಡಿರುವ ಆಫ್ರಿಕಾದ ಸಣ್ಣ ಪುಟ್ಟ ಕಪ್ಪು ದೇಶಗಳೆಲ್ಲ ಇಲ್ಲಿ ಒಟ್ಟಾಗುತ್ತವೆ.ತಮ್ಮ ವಿಶಿಷ್ಟ ಸಂಗೀತ ,ಹಾಡು,ವಾದ್ಯಗಳು,ಕುಣಿತ,ಬಹುಬಗೆಯ ಕಲಾವಸ್ತುಗಳು,ಅಪೂರ್ವ ಸೃಜನಶೀಲ ಕಲೆಗಳು,ದೇಸಿ ತಿಂಡಿತಿನಿಸುಗಳು,ಉಡುಗೆ ತೊಡುಗೆಗಳು ,ಸಾಹಿತ್ಯ ಇತ್ಯಾದಿ ಇತ್ಯಾದಿ ಎಲ್ಲ ಇಲ್ಲಿ ಜಾತ್ರೆಯ ಸಂಭ್ರಮದಲ್ಲಿ ಸೇರಿಹೋಗುತ್ತವೆ.



ಈವರ್ಷ ಇಲ್ಲಿ ‘ಆಫ್ರಿಕಾ ಜಾತ್ರೆ’ಜೂನ್ ಎರಡರಿಂದ ಐದರ ವರೆಗೆ ನಡೆಯುತ್ತಿದೆ.ನಗರದ ಮಾಯಿನ್ ನದಿಯ ದಂಡೆಯಲ್ಲಿ ವಿಶಾಲ ಮೈದಾನದಲ್ಲಿ ನೂರಾರು ಮಳಿಗೆಗಳ ಅನೇಕ ಆಫ್ರಿಕಾ ದೇಶಗಳ ಬಾವುಟಗಳ ರಾರಾಜಿಸುವಿಕೆಯಲ್ಲಿ ಸಾವಿರಾರು ಜನಸಾಗರದ ಜಾತ್ರೆ ನೋಡಿದಷ್ಟೂ ಮುಗಿಯುವುದಿಲ್ಲ.ನಿನ್ನೆ ಸಂಜೆ ಸುಮಾರು ಮೂರು ಗಂಟೆಯಷ್ಟು ಕಾಲ ,ನಾನು ಸುತ್ತಾಡಿ ,ಸಾಧ್ಯವಾದಷ್ಟು ಸಂಗತಿಗಳನ್ನು ಕ್ಯಾಮರದಲ್ಲಿ ಸೆರೆಹಿಡಿದು ,ಕೆಲವು ಫೋಟೋಗಳನ್ನು ಇಲ್ಲಿ ಪ್ರದರ್ಶಿಸಿದ್ದೇನೆ.



ಈ ವರ್ಷ ,ವ್ಯೂತ್ಸ್ ಬುರ್ಗ್ ‘ಆಫ್ರಿಕಾ ಜಾತ್ರೆ’ಯ ಕೇಂದ್ರ- ಕರೀಬಿಯನ್ ದ್ವೀಪಗಳು.ಅವುಗಳ ಸಾಂಸ್ಕೃತಿಕ ಚರಿತ್ರೆ,೧೬ನೆ ಶತಮಾನದಲ್ಲಿ ಗುಲಾಮರಾಗಿ ಅವರನ್ನು ವೆಸ್ಟ್ ಇಂಡೀಸಿಗೆ ತಂದ ಬಳಿಕದ ಬೆಳವಣಿಗೆ -ಎಲ್ಲ ಬಹುರೂಪಗಳಲ್ಲಿ ಈ ಜಾತ್ರೆಯಲ್ಲಿ ಕಾಣಿಸಿಕೊಂಡವು.ಕ್ಯೂಬಾ ಮತ್ತು ಜಮೈಕಾ ಗಳ ಅಪೂರ್ವ ಆಹಾರ ವಿಶೇಷವಾಗಿತ್ತು.ವೆಸ್ಟ್ ಇಂಡೀಸಿನ ಅತಿ ದಕ್ಷಿಣದ ದ್ವೀಪಗಳಾದ ಟ್ರಿನಿಡಾಡ್ ಮತ್ತು ತೊಬಾಗೊ ಗಳ ಸಂಗೀತ ತಂಡಗಳು ಆಫ್ರಿಕಾ ಜಾತ್ರೆಗೆ ರಂಗು ತಂದುವು.ಈ ಎರಡು ದ್ವೀಪಗಳ ಎಲ್ಲ ಮಾಹಿತಿ ,’ಬಿದಿರಿನ ಸಭಾಂಗಣ’ದಲ್ಲಿ ತುಂಬಾ ಅಚ್ಚುಕಟ್ಟಾಗಿತ್ತು. ಆಫ್ರಿಕಾ ಎಂದರೆ ಸಂಗೀತ.ಹಾಗಾಗಿ ಸಂಗೀತದ ಹೆಸರಾಂತ ತಂಡಗಳು ಈ ಜಾತ್ರೆಯ ದೊಡ್ಡ ಆಕರ್ಷಣೆ.ಈಬಾರಿ ಕೆನ್ಯಾ,ಘಾನ ಮತ್ತು ಹೈತಿ ಗಳಿಂದ ಸಂಗೀತ ತಂಡಗಳು ಬಂದಿದ್ದವು. ‘ಕಾರ್ನಿವಾಲ್ ‘ ಎಂಬ ಸಾಂಸ್ಕೃತಿಕ ಸಂಗತಿ -ಕೆರಿಬಿಯನ್ ನ ಅನನ್ಯತೆ.ಅರುಬ ಮತ್ತು ಇತರ ದ್ವೀಪಗಳಿಂದ ಬಂದಿದ್ದ ಇಪ್ಪತೈದು ಸಂಗೀತಗಾರರು ಮತ್ತು ಕುಣಿಯುವವರ ತಂಡದ ಪ್ರದರ್ಶನಕ್ಕೆ ಕಾಲಿಡಲು ತೆರಪಿಲ್ಲ.ತುದಿಗಾಲಲ್ಲಿ ನಿಂತುಕೊಂಡು ನಾನು ನೋಡಬೇಕಾಯಿತು.



‘ಆಫ್ರಿಕಾ ಜಾತ್ರೆ’ಯಲ್ಲಿ ಆಫ್ರೋ-ಕೊಲೊಂಬಿಯದ ಮಹಿಳೆಯರ ಅನನ್ಯ ಚಿತ್ರಗಳನ್ನು ಫೋಟೋ ಪ್ರದರ್ಶನದಲ್ಲಿ ಇಡಲಾಗಿತ್ತು.ಅಂಗೆಲೇ ಎತೌಂಡಿ ಎಸ್ಸಂಬ -ಇಂತಹ ಫೋಟೋ ಪುಸ್ತಕ ಮಾಡಿದ ಮೊದಲ ಆಫ್ರಿಕನ್ ಮಹಿಳೆ.ಅವಳ ಪ್ರದರ್ಶನದ ಹೆಸರು -’I-DENTITY/EYE-DENTITY’. ಹೆಣ್ಣಿನ ಕಣ್ಣು ಮತ್ತು ಕೆಮರ ಕಣ್ಣು ಜೊತೆಯಾಗಿ, ಕಪ್ಪು ಮಹಿಳಾಲೋಕದ ಕತ್ತಲೆಯ ಮೇಲೆ ಬೆಳಕು ಚೆಲ್ಲಿತ್ತು.’ಮಾಲಿ’ದ್ವೀಪದ ಮಹಿಳೆಯರ ಕೇಶ ಶೃಂಗಾರ ,ಅಪೂರ್ವ ಮತ್ತು ಆಕರ್ಷಕ.ಮಾಲಿಯ ಕಪ್ಪು ಹೆಂಗುಸರು ಜರ್ಮನಿಯ ಬಿಳಿಯ ಹೆಂಗುಸರಿಗೆ ಜಡೆಹಾಕಿ ಹೆಣೆಯುತ್ತಿದ್ದ ದೃಶ್ಯ ಮೋಜು ಮತ್ತು ಜನಾಕರ್ಷಣೆಯದ್ದು ಆಗಿತ್ತು.ಹೆಂಗುಸರ ತಲೆಕೂದಲನ್ನು ಬೇರೆ ಬೇರೆ ವಿನ್ಯಾಸಗಳಲ್ಲಿ ಜಡೆ ನೇಯ್ದು ಕಟ್ಟುವ ಮಾದರಿಗಳು ಆ ಮಳಿಗೆಗಳಲ್ಲಿ ಇದ್ದುವು. ನಿಸರ್ಗದ ‘ಮಾವಿನ ಮಿಡಿ’ ಮಾದರಿಯಿಂದ ತೊಡಗಿ ,ಪಾಪ್ ಸಂಸ್ಕೃತಿಯ ‘ಶಕೀರ’ ವಿನ್ಯಾಸದ ವರೆಗೆ ಜಡೆ ಹೆಣಿಗೆಯ ಪ್ರದರ್ಶಿಕೆಗಳು ಅಲ್ಲಿ ಇದ್ದುವು.



ಮಕ್ಕಳ ಮೇಳದಲ್ಲಿ ಪುಟಾಣಿ ಗಳದ್ದೇ ಸ್ವಚ್ಚಂದ ಕಿನ್ನರ ಲೋಕ.ಸರ್ಕಸ್ ಟೆಂಟಿನಲ್ಲಿ ಮಕ್ಕಳಿಗೆ ಕತೆ ಹೇಳುವುದು,ಹಾಡು,ಕುಣಿತ,ಅಭಿನಯ ,ಆಟ -ಎಲ್ಲ ನಡೆದಿತ್ತು.ಸೆನಗಲ್ ನ ಲೇಖಕ ಹಾಗು ಸಂಗೀತಗಾರ ಇಬ್ರಾಹಿಮ ನ್ದಿಯಯೇ -ಮಕ್ಕಳನ್ನು ಸೆಳೆಯುವ ಕಿಂದರಿಜೋಗಿ ಆಗಿ ಅಲ್ಲಿದ್ದರು.



ಆಫ್ರಿಕಾದ ಕರೆಕುಶಲ ಕಲೆಗಳ ಮಳಿಗೆಗಳು ಎಲ್ಲಿ ನೋಡಿದರೂ ಎದುರಾಗುತ್ತಿದ್ದುವು.ಚರ್ಮ ವಾದ್ಯಗಳ ಬಹುರೂಪ ಬೆರಗು ಹುಟ್ಟಿಸುತ್ತಿತ್ತು.ಮರದ ಕೆತ್ತನೆಗಳು ಇನ್ನೊಂದು ಆಕರ್ಷಣೆ.ಪೈಂಟಿಂಗ್ ಚಿತ್ರಗಳ ಮಳಿಗೆಯಿಂದ ಹೊರಬರಲು ಮನಸ್ಸಾಗಲಿಲ್ಲ.ಒಂದು ಸುಂದರ ಸೃಜನಶೀಲ ಪೈಂಟಿಂಗ್ ನ ಫೋಟೋ ಇಲ್ಲಿ ಕೊಟ್ಟಿದ್ದೇನೆ.ಬಟ್ಟೆಯ ಚಿತ್ತಾರ ಕಲೆಯ ವಸ್ತುಗಳು ಮಳಿಗೆಗಳ ತುಂಬೆಲ್ಲ ಕಣ್ಣಿಗೆ ರಾಚುತ್ತಿದ್ದವು.’ಆಫ್ರಿಕಾದಲ್ಲಿ ಮಾಡಿದ ಹತ್ತಿ’ ಎನ್ನುವುದು ಒಂದು ಸ್ವಯಂ ಸೇವಾ ಸಂಸ್ಥೆಯ ಹೆಸರು.ಸ್ವದೇಶಿ ಹತ್ತಿಯಿಂದ ಬಟ್ಟೆಗಳನ್ನು ದೇಸಿ ಮಾದರಿಯಲ್ಲಿ ತಯಾರಿಸಿ ,ಅದನ್ನು ಬಳಸಲು ಉತ್ತೇಜಿಸುವ ಕಾರ್ಯಕ್ರಮ ಇದು.’ಆಫ್ರಿಕಾ ಸಂತೆ’ ಯೊಳಗೆ ಹೊಕ್ಕರೆ ,ಚಕ್ರವ್ಯೂಹವನ್ನು ಹೊಕ್ಕ ಅಭಿಮನ್ಯವಿನಂತೆ ಹೊರಬರಲು ಸಾಧ್ಯ ಆಗುವುದಿಲ್ಲ.’ಬಜಾರ್’ ನಲ್ಲಿ ಆಫ್ರಿಕಾದ ಚರ್ಮ ವಾದ್ಯಗಳು,ಸಂಗೀತದ ಬಹುಬಗೆಯ ಸಾಧನಗಳು,ಬಟ್ಟೆಯನಾನಾನಮೂನೆಗಳು,ಆಭರಣಗಳು,ಶಿಲ್ಪಗಳು,ಮುಖವಾಡಗಳು,ಚಿತ್ರಗಳು,ಚಿತ್ತಾರಗಳು,ಮಣಿಸರಕುಗಳು,ಪುಸ್ತಕಗಳು,ಸಿಡಿಗಳು,ಆಟಿಕೆಗಳು ಇನ್ನೂ ಇನ್ನೂ ಏನೇನೂ -ಎಲ್ಲ ಆಫ್ರಿಕಾದ ದೂರ ದೂರದ ದ್ವೀಪಗಳು,ದ್ವೀಪದಂತಹ ದೇಶಗಳವು.ಟ್ರಿನಿಡಾಡ್ ನಲ್ಲಿ ೧೯೩೦ರಲ್ಲಿ ಹುಡುಕಿ ತೆಗೆದ ಸ್ಟೀಲ್ ಡ್ರಮ್ , ಆ ದೇಶದ ರಾಷ್ಟ್ರೀಯ ವಾದ್ಯವಾಗಿ ಜನಪ್ರಿಯ.ಅಂತಹ ಸ್ಟೀಲ್ ಡ್ರಮ್ ನ ಮರ್ಮರ ಇಡೀ ಜಾತ್ರೆಯಲ್ಲಿ ಅನುರಣಿಸುತ್ತಿತ್ತು.ಹವಾನಾ ಕ್ಲಬ್ ನಲ್ಲಿ ಕ್ಯೂಬಾ ದ ಸಂಗೀತ ಅಲ್ಲಿನ ಸಂಗೀತಗಾರ ಮಿರೆಯ ಕೋಬ ಕಂತೆರೋ ಸಹಿತ ಅನೇಕ ಯುವ ಗಾಯಕ ಗಾಯಕಿಯರ ಜೊತೆಗೆ ,ರಸಸಂಜೆಯ ಮೆರಗು ತಂದಿತ್ತು.



ತಿಂಡಿತಿನಿಸುಗಳ ಮಳೆಗೆಗಳಲ್ಲಿ ಆಫ್ರಿಕಾದ ಅನೇಕ ದೇಶಗಳ ಆಹಾರ ಮಳಿಗೆಗಳು ಘಮ ಘಮಿಸುತ್ತಿದ್ದುವು.ಹೆಸರು ಬಣ್ಣ ಪರಿಮಳ ರುಚಿ ಗೊತ್ತಿಲ್ಲದಿದ್ದರೂ ಬಿಳಿಯ ಜನರು ಕಪ್ಪು ತಿನಿಸುಗಳಿಗೆ ಮಾರುಹೋಗಿ ,ಪಂಚೇಂದ್ರಿಯಗಳ ಸುಖ ಅನುಭವಿಸುತ್ತಿದ್ದರು.ಇವುಗಳ ನಡುವೆಯೇ ಗಣೇಶನ ಬ್ಯಾನರಿನ ‘ಇಂಡಿಯನ್ ‘ ರೆಸ್ಟೋರೆಂಟ್ ಒಂದು ,ಕಪ್ಪು ಬಿಳಿಯವರನ್ನು ಒಟ್ಟಾಗಿ ಭೋಜನಕ್ಕೆ ಆಹ್ವಾನಿಸುತಿತ್ತು.



ಆಫ್ರಿಕನ್ ಸಾಹಿತ್ಯದ ಮೇರು ಲೇಖಕ ,ವೋಲೆ ಸೋಯಿಂಕಾ ಒಂದೆಡೆ ಹೀಗೆ ಹೇಳುತ್ತಾರೆ :” ಮನುಷ್ಯರ ಚೇತನವು ತನ್ನ ಋಣಾತ್ಮಕ ಹಂತಗಳನ್ನು ದಾಟಿಕೊಂಡು ಮುಂದೆ ಹೋಗುತ್ತದೆ.ನಮಗೆ ಸ್ಫೂರ್ತಿ ಕೊಡುವ ಚೇತನಗಳು ಎಲ್ಲಾ ತಮ್ಮ ಬದುಕಿನಲ್ಲಿ ಭಯಾನಕ ನಿರಾಶೆಯ ಕ್ಷಣಗಳನ್ನು ಗೆದ್ದವರು.ತಮ್ಮ ಅಹಂಕಾರದ ಚೂರುಗಳನ್ನು ಒಟ್ಟುಮಾಡಿ ,ಅದರ ಮೂಲಕದ ಬದುಕಿನಿಂದ ನಮಗೆ ಮಾದರಿಯಾಗಿ ಇರುವವರು.”

ಶನಿವಾರ, ಜೂನ್ 4, 2011

ಜನಪದ ವೈದ್ಯಕ್ಕೆ ಹೊಸ ಆಯಾಮ ನೀಡಿದ ಲಕ್ಷ್ಮಣ್


(ಜನಪದ ವೈದ್ಯ ಲಕ್ಷ್ಮಣ್ )

ಜನಪದ ವೈದ್ಯವನ್ನು ಅವಲಂಬಿಸುವವರ ಸಂಖ್ಯೆ ಇಂದು ಇಳಿಮುಖವಾಗುತ್ತಿದೆ. ಕಾರಣ ನಾಟಿ ವೈದ್ಯರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆಧುನಿಕ ವೈದ್ಯ ನಾಟಿ ವೈದ್ಯಕ್ಕಿಂತ ನಂಬಿಕೆಯನ್ನು ಇಮ್ಮಡಿಗೊಳಿಸಿಕೊಂಡಿದೆ. ಕಾರಣ ನಾಟಿ ವೈದ್ಯದ ನೆರವು ಪಡೆಯುವವರು ಅನಕ್ಷರಸ್ತರು, ಹಳ್ಳಿಗರು ಆಧುನಿಕತೆಗೆ ತೆರೆದುಕೊಂಡಿಲ್ಲದವರು ಎಂಬ ಗುಮಾನಿಗಳು ಹುಟ್ಟಿಕೊಂಡಿವೆ. ಹಾಗಾಗಿ ನಾಟಿ ವೈದ್ಯ ನಂಬಿಕೆಗೆ ಅರ್ಹವಲ್ಲವೆಂಬ ನಂಬಿಕೆ ನಗರಿಗರಲ್ಲಿ, ಮತ್ತು ಹಳ್ಳಿಗಳ ಅಕ್ಷರಸ್ತ ಸಮುದಾಯಗಳಲ್ಲಿ ಬಲವಾಗುತ್ತಿದೆ.

ಈಗ ನಾಟಿ ವೈದ್ಯ ಸಂಪೂರ್ಣ ನಾಶವಾಗಿದೆ ಅಂತಲ್ಲ. ಕಾಮಲೆ, ಜಾಂಡಿಸ್, ಸರ್ಪಹುಣ್ಣು, ಮೂಲವ್ಯಾಧಿ ಮುಂತಾದ ರೋಗಗಳಿಗೆ ನಾಟಿ ವೈದ್ಯ ಆಧುನಿಕ ವೈದ್ಯಕ್ಕೆ ಸವಾಲಾಗಿದೆ. ಹಾಗಾಗಿ ಇಂದು ನಾಟಿ ವೈದ್ಯ ಎಲ್ಲ ರೋಗಕ್ಕೂ ಮದ್ದಾಗದೆ, ಕೆಲವೇ ಕೆಲವು ರೋಗಗಳಿಗೆ ಮದ್ದಾಗಿ ಪ್ರಚಲಿತ ಕಾಲದಲ್ಲಿ ಮುಂದುವರಿಯುತ್ತಿದೆ. ಇಂದು ವ್ಯಾಪಕ ಕ್ಷೇತ್ರ ಕಾರ್ಯ ಮಾಡಿದರೆ, ಜನಪದ ವೈದ್ಯದ ಹೊಸ ಮುಂದುವರಿಕೆ ಹೇಗೆಂಬುದನ್ನು ತಿಳಿಯಬಹುದಾಗಿದೆ.

(ಶ್ರೀದೇವಿ ಮೂಳೆ ಚಿಕಿತ್ಸಾಲಯ)

ಈಚೆಗೆ ಚಳ್ಳಕೆರೆಯಲ್ಲಿರುವ ಒಬ್ಬ ಜನಪದ ಮೂಳೆ ವೈದ್ಯನನ್ನು ಬೇಟಿಯಾದೆ. ಆತ ಮುರಿದ, ಒಳಕಿದ ಮೂಳೆಯನ್ನು ಸರಿಪಡಿಸುವ, ನರಸಮಸ್ಯೆಯನ್ನು ವಾಸಿ ಮಾಡುವಂತಹ ಒಬ್ಬ ಯುವ ಜನಪದ ವೈದ್ಯ ಲಕ್ಷ್ಮಣ್ ಅವರಿಗೆ ಈಗ ಮುವತ್ನಾಲ್ಕು ವರ್ಷ. ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಪರುಷರಾಂಪುರ ಓಬಳಿಯ ಪಿ. ಮಹಾದೇವಪುರದ ನಾಟಿ ವೈದ್ಯ ನರಸಿಂಹಪ್ಪ ಅವರ ಮಗ. ಈತ ಜನಪದ ವೈದ್ಯದ ಹಿಂದೆ ಬಿದ್ದ ಕತೆ ಕುತೂಹಲಕಾರಿಯಾಗಿದೆ. ಲಕ್ಷ್ಮಣವರು ಪಿಯುಸಿ ಪೇಲಾಗಿ ನಗರಕ್ಕೆ ಹೋಗಿ ಏನಾದರೂ ಸಾದಿಸಿಬಿಡುತ್ತೇನೆ ಎಂಬ ಉತ್ಸಾಹದಲ್ಲಿ ಎಲ್ಲಾ ಹಳ್ಳಿ ಹುಡುಗರಂತೆ ಉದ್ಯೋಗ ಅರಸಿ ಬೆಂಗಳೂರಿಗೆ ಹೋದರು. ಅಲ್ಲಿ ತರಾವರಿ ಕೆಲಸ ಮಾಡಿಕೊಂಡು ಅಲೆದರು. ಒಂದು ದಿನ ಆಕಸ್ಮಿಕವಾಗಿ ಅಪಘಾತದಲ್ಲಿ ಕಾಲು ಮುರಿದುಕೊಂಡು ಮನೆಗೆ ಬಂದರು. ಆಗ ಲಕ್ಷ್ಮಣ್ ತಂದೆ ತನ್ನ ಮಗನ ಮುರಿದ ಕಾಲನ್ನು ನೀವಿ ಮೊದಲಿನ ಸ್ಥಿತಿಗೆ ತಂದರು. ಕಾಲು ಸರಿಯಾಗುವ ಹೊತ್ತಿಗೆ ಲಕ್ಷ್ಮಣ್ ನಾನೆ ಯಾಕೆ ಅಪ್ಪ ಮಾಡುವ ಮೂಳೆ ವೈದ್ಯವನ್ನು ಕಲಿಯಬಾರದು ಅನ್ನಿಸಿದೆ, ಅದನ್ನು ಮನಸ್ಸಿಗೆ ತಂದುಕೊಂಡು ಶ್ರದ್ಧೆಯಿಂದ ಕಲಿಯತೊಡಗಿದ್ದಾನೆ. ನಂತರ ಲಕ್ಷ್ಮಣ್ ಸ್ವತಃ ಮೂಳೆ ಸಂಬಂಧಿ ರೋಗಗಳಿಗೆ ಚಿಕಿತ್ಸೆ ನೀಡಲು ಶುರುಮಾಡಿಕೊಂಡಿದ್ದಾನೆ.



ಆಗ ಲಕ್ಷ್ಮಣ್‌ಗೆ ತನ್ನ ಓದು ಸಹಾಯಕ್ಕೆ ಬಂದಿದೆ. ತಾನು ಅಪ್ಪ ಕಲಿತದ್ದಷ್ಟೆ ಅಲ್ಲದೆ, ಮೂಳೆ ನರಕ್ಕೆ ಸಂಬಂದಿಸಿದ ಪುಸ್ತಕಗಳನ್ನು ಓದಿ ಹೆಚ್ಚಿನ ತಿಳುವಳಿಕೆಯನ್ನು ಪಡೆದಿದ್ದಾನೆ. ಅಂತೆಯೇ ಆರ್ಥೋಪೆಡಿಕ್ಸ ವೈದ್ಯರುಗಳನ್ನು ಭೇಟಿ ಮಾಡಿ ಮೂಳೆ ನರದ ಬಗ್ಗೆ ತನ್ನ ಸಮಸ್ಯೆಗಳನ್ನು ಚರ್ಚಿಸಿ ತಿಳಿದುಕೊಂಡಿದ್ದಾನೆ. ಆಯುರ್ವೇದದಲ್ಲಿ ಮೂಳೆ ಮತ್ತು ನರ ಸಮಸ್ಯೆಗೆ ನೀಡುವ ಚಿಕಿತ್ಸೆ ಬಗ್ಗೆ ಅರಿತಿದ್ದಾರೆ. ಹೀಗೆ ಹಲವು ನೆಲೆಗಳಿಂದ ಪಡೆದ ಜ್ಞಾನ ಅವರನ್ನು ಒಬ್ಬ ಪರಿಪಕ್ವ ನಾಟಿ ವೈದ್ಯರನ್ನಾಗಿ ರೂಪಿಸಿದೆ.

ಚಳ್ಳಕೆರೆಯ ವೀರಭದ್ರೇಶ್ವರ ದೇವಸ್ಥಾನದ ಪಕ್ಕ ಪುಟ್ಟದೊಂದು ರೂಮಿನಲ್ಲಿ ಶ್ರೀದೇವಿ ಮೂಳೆ ಚಿಕಿತ್ಸಾಲಯವನ್ನು ಆರಂಭಿಸಿ ಇಲ್ಲಿಗೆ ಹದಿಮೂರು ವರ್ಷಗಳೆ ಕಳೆದಿವೆ. ಈತನಕ ಲಕ್ಷ್ಮಣ್ ಕನಿಷ್ಠ ಇಪ್ಪತ್ತೈದು ಸಾವಿರಕ್ಕೂ ಹೆಚ್ಚಿನ ರೋಗಿಗಳನ್ನು ತನ್ನ ಚಿಕಿತ್ಸೆಯಿಂದ ವಾಸಿ ಮಾಡಿದ್ದಾರೆ. ತಾತ ಈರಜ್ಜನಿಂದ ಮಗ ನರಸಿಂಹಪ್ಪ ಮೂಳೆ ವೈದ್ಯವನ್ನು ಕಲಿತಿದ್ದಾರೆ, ನಂತರ ಇವರ ಮಗ ಲಕ್ಷ್ಮಣ್ ವಂಶಪಾರಂಪರಿಕವಾಗಿ ಬಂದ ನಾಟಿ ವೈದ್ಯವನ್ನು ಈಗ ಮುಂದುವರಿಸಿದ್ದಾರೆ. ನಾಟಿ ವೈದ್ಯದಲ್ಲಿ ಕಾಲಕ್ಕೆ ತಕ್ಕ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಹಾಗಾಗಿ ಚಳ್ಳಕೆರೆಯ ಆರ್ಥೋಪೆಡಿಕ್ಸ ಡಾಕ್ಟರುಗಳಿಗಿಂತ ಲಕ್ಷ್ಮಣ್ ಬಿಡುವಿಲ್ಲದೆ ಮೂಳೆ ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ನಿರತರಾಗಿರುತ್ತಾರೆ. ಮುಖ್ಯವಾಗಿ ಇಲ್ಲಿಗೆ ಚಿಕಿತ್ಸೆಗೆ ಬರುವುದು ಹಳ್ಳಿಗರು, ಕೃಷಿಕರು, ಆರ್ಥಿಕವಾಗಿ ಇಂದುಳಿದ ಬಡವರು. ಲಕ್ಷಣ್ ಚಿಕಿತ್ಸೆಗಾಗಿ ವಿಧಿಸುವ ಮೊತ್ತ ಕೂಡ ಜನಸಾಮಾನ್ಯರಿಗೆ ನಿಲುಕುವಂತದ್ದು. ಹಾಗಾಗಿ ಈ ವೈದ್ಯಕೀಯ ಸೇವೆಗೆ ಒಂದು ಮಾನವೀಯ ಆಯಾಮವೂ ಇದೆ. ಇದು ಜನಪದ ವೈದ್ಯದ ಬಗ್ಗೆಯ ಜತೆ ಹೊಸ ನಂಬಿಕೆಯನ್ನು ಹುಟ್ಟಿಸಿದ್ದರ ಫಲ.

ಇಂದು ಜನಪದ ವೈದ್ಯಕ್ಕೆ ಮರುಜೀವ ನೀಡುವ ಅಗತ್ಯವಿದೆ. ಹಾಗಾಗಿ ಲಕ್ಷ್ಮಣ್ ಅಂತವರು ಜನಪದ ವೈದ್ಯದ ಮುಂದುವರಿಕೆಗೆ ಮಾದರಿಯಾಗಿದ್ದಾರೆ. ಇಂತವರನ್ನು ಹುಡುಕಿ ಅವರ ಅನುಭವವನ್ನು ಆಧರಿಸಿ ಜನಪದ ವೈದ್ಯವನ್ನು ಸುಧಾರಿಸಬೇಕಿದೆ. ಈ ಕೆಲಸವನ್ನು ಜಾನಪದ ಅಕಾಡೆಮಿ ಮತ್ತು ಜಾನಪದ ವಿಶ್ವವಿದ್ಯಾಲಯ ಕೈಗೆತ್ತಿಕೊಳ್ಳಬೇಕಿದೆ.