ಮಂಗಳವಾರ, ನವೆಂಬರ್ 22, 2016

ಅಪರಾಧಿ ಗುರುತಿನ ಪೊರೆ ಕಳಚುತ್ತಿರುವ ಗಂಟಿಚೋರರು.


--ಅರುಣ್ ಜೋಳದಕೂಡ್ಲಿಗಿ

ಸ್ವತಂತ್ರ್ಯ ಬಂದು 69 ವರ್ಷವಾದರೂ ಕೆಲವು ಚಿಕ್ಕಪುಟ್ಟ ಸಮುದಾಯಗಳ ಸಮಗ್ರ ಮಾಹಿತಿ ಅಲಭ್ಯವಾಗಿದೆ. ಹೀಗೆ ಸಮುದಾಯಗಳ ಸರಿಯಾದ ಮಾಹಿತಿಗಳೇ ಅಲಭ್ಯವಾದಾಗ ಸರಕಾರ ಅಥವಾ ಪ್ರಭುತ್ವಗಳು ಕೈಗೊಳ್ಳುವ ಜನಕಲ್ಯಾಣದ ಯೋಜನೆಗಳು ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ. ಇಂದು ಬದಲಾದ ಕಾಲಘಟ್ಟದ ಸೆಳೆತಕ್ಕೆ ಸಿಕ್ಕಿ ಅಲ್ಪಸಂಖ್ಯಾತ ಸಮುದಾಯಗಳು ತಬ್ಬಲಿತನವನ್ನು ಅನುಭವಿಸುತ್ತಾ ಅನಾಥ ಪ್ರಜ್ಞೆಯಲ್ಲಿ ಬದುಕುತ್ತಿವೆ. ಇಂತಹ ಸಂದರ್ಭದಲ್ಲಿ ಸಮುದಾಯಗಳು ಪ್ರಜಾಪ್ರಭುತ್ವದ ಬಗೆಗೆ ಭರವಸೆ ಇಲ್ಲದೆ ತಮ್ಮ ಪಾಡಿನ ಬದುಕೇ ನಿಜವೇನೋ ಎನ್ನುವ ಸ್ಥಿತಿಗೂ ಬಂದಿವೆ. ಹಾಗಾಗಿ ಸಮುದಾಯಗಳ ಅಧ್ಯಯನ ಪರೋಕ್ಷವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗೆ ಜನರಲ್ಲಿ ಹೊಸ ಭರವಸೆ ಮೂಡಿಸುವ ಭಾಗವೂ ಆಗಿದೆ.
ಸಿರಿವಂತರ ಉಡುಪಿನಲ್ಲಿ ಭಾಮ್ಟಾ(ಗಂಟಿಚೋರ್) ಸಮುದಾಯದ ಸದಸ್ಯರು. 1908 ರಲ್ಲಿ ಎಂ.ಕೆನಡಿಯವರು ತಮ್ಮ ಪುಸ್ತಕದಲ್ಲಿ ಪ್ರಕಟಿಸಿದ ಚಿತ್ರ

ಸಿರಿವಂತರ ಉಡುಪಿನಲ್ಲಿ ಭಾಮ್ಟಾ(ಗಂಟಿಚೋರ್) ಸಮುದಾಯದ ಸದಸ್ಯರು. 1908 ರಲ್ಲಿ ಎಂ.ಕೆನಡಿಯವರು ತಮ್ಮ ಪುಸ್ತಕದಲ್ಲಿ ಪ್ರಕಟಿಸಿದ ಚಿತ್ರ


ಈ ಹಿನ್ನೆಲೆಯಲ್ಲಿ ಇಂತಹ ತಬ್ಬಲಿ ಸಮುದಾಯಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ಅವರಲ್ಲಿ ಹೊಸ ಚೈತನ್ಯವನ್ನು ತುಂಬುವಂತೆ ಸಮುದಾಯ ಅಧ್ಯಯನಗಳು ನಡೆಯಬೇಕಾಗಿದೆ. ಅಂತೆಯೇ ನಾವು ಸಮುದಾಯಗಳನ್ನು ಎದುರಾಗುವಾಗ ಹುಟ್ಟುವ ಪ್ರಶ್ನೆಗಳೂ ಬದಲಾಗಿದೆ. ಆಧುನಿಕ ಶ್ರೇಣೀಕರಣದ ತರತಮದ ವ್ಯವಸ್ಥೆಗಳಿಗೆ ಪೂರಕವಾಗಿ ಸಮುದಾಯಗಳಲ್ಲೂ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸ್ಥಿತಿಗತಿಗಳಲ್ಲಿ ಹಲಬಗೆಯ ಏರಿಳಿತಗಳು ಸಂಭವಿಸಿದೆ. ಹಾಗಾಗಿ ಇಂದು ಸಮುದಾಯಗಳನ್ನು ಅಧ್ಯಯನ ಮಾಡುವವರು ಅವನ್ನು ಏಕರೂಪಿ ಆಕೃತಿಯನ್ನಾಗಿ ನೋಡುವಂತಿಲ್ಲ. ಯಾವೊಂದು ಸಂಗತಿಯನ್ನು ಇಡೀ ಸಮುದಾಯಕ್ಕೆ ಅನ್ವಯಿಸಿ ದುಂಡಾಗಿ ಗ್ರಹಿಸುವಂತಿಲ್ಲ.

ಕರ್ನಾಟಕದ ಸಂದರ್ಭದಲ್ಲಿನ ಸಮುದಾಯಗಳ ಅಧ್ಯಯನ ವಸಾಹತುಶಾಹಿ ರೂಪಿಸಿದ ಮಾದರಿಯ ಪ್ರಭಾವದಿಂದ ಸಂಪೂರ್ಣ ಬಿಡಿಸಿಕೊಂಡಿಲ್ಲ. ಹಾಗಾಗಿ ಸಮುದಾಯ ಅಧ್ಯಯನಗಳನ್ನು ಮಾಹಿತಿಗಳ ಆಕರವೆಂಬಂತೆ ಬಡಕಲಾಗಿಯೂ, ಕೃತಕವಾಗಿಯೂ ನಿರ್ಜೀವ ವಸ್ತುಸಂಗತಿಗಳಂತೆ ಮಂಡಿಸಲಾಗುತ್ತಿದೆ. ಈ ಬಗೆಯ ಅಧ್ಯಯನಗಳಲ್ಲಿ ಸಮುದಾಯದ ಜೀವಂತಿಕೆ ಗೈರುಹಾಜರಾಗಿರುತ್ತದೆ. ಇಂತಹ ಮಿತಿಯನ್ನು ಮೀರುವ ಸಣ್ಣ ಪ್ರಯತ್ನವನ್ನು ಈ ಸಂಶೋಧನೆಯಲ್ಲಿ ಮಾಡಲಾಗಿದೆ.
**
ಉತ್ತರ ಕರ್ನಾಟಕದ ಬೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿರುವ ಗಂಟಿಚೋರ್ಸ್ ಸಮುದಾಯ ದೇಶವ್ಯಾಪಿ ಹರಡಿಕೊಂಡಿದೆ. ಉಚಲ್ಯಾ, ಭಾಮ್ಟಾ, ಠಕಾರಿ ಭಾಮ್ಟಾ, ಠಕಾರಿ, ಗುನ್ಹೆಗಾರ, ವಡ್ಡರ್, ಗಿರಣಿ ವಡ್ಡರ್, ಕಿಸೆ ಕತ್ರಾಸ್, ಕಳ್ಳವಡ್ಡರ್, ತುಡುಗುವಡ್ಡರ್, ಪಾತ್ರೂಟ್ ಹೀಗೆ ಬಹುರೂಪದಲ್ಲಿ ಸಮಾನಾಂತರ ಹೆರರುಗಳೊಂದಿಗೆ ಈ ಸಮುದಾಯ ನೆಲೆಸಿದೆ. ಈ ಎಲ್ಲಾ ಹೆಸರುಗಳ ಒಳಗಿರುವ ಎಳೆ `ತುಡುಗು’ ಅಥವಾ `ಕಳ್ಳತನ’ `ಲೂಟಿ’ಯಾಗಿದೆ. ಇದು ಸಂಪತ್ತಿನ ಅಸಮಾನ ಹಂಚಿಕೆಯ ಕೊರತೆಯ ಬಿಂದುವಿನಲ್ಲಿ ಸಮುದಾಯಗಳ ಒಳಗಿಂದ ಹುಟ್ಟಿದ `ಪ್ರತಿರೋಧ’ದ ಒಂದು ಮಾದರಿ.

ಬ್ರಿಟಿಷ್ ಆಡಳಿತದಿಂದಾಗಿ ಸ್ಥಳೀಯ ಸಂಸ್ಥಾನಿಕ ರಾಜರುಗಳ ಸೈನ್ಯದಿಂದ ವಿಸರ್ಜಿತಗೊಂಡ ಸೈನಿಕ ಸಮುದಾಯಗಳು ಬದುಕಲು ಹಲವು ಮಾರ್ಗಗಳನ್ನು ಅನುಸರಿಸಿದವು. ಹಾಗಾಗಿ ಸೈನ್ಯದಲ್ಲಿ ಸಂಪತ್ತನ್ನು ಲೂಟಿ ಮಾಡುತ್ತಿದ್ದ ಸೈನಿಕರು ಈ ಲೂಟಿಯನ್ನು ಹೊಟ್ಟೆಪಾಡಿಗಾಗಿ ತಮ್ಮೆದುರಿಗಿದ್ದ ಶ್ರೀಮಂತ ಜಮೀನ್ದಾರರ ಮೇಲೆ ಪ್ರಯೋಗಿಸಿದರು. ಇದು ಕಾಲಾನಂತರ `ತುಡುಗು’ `ಕಳ್ಳತನ’ `ಲೂಟಿ’ಯಾಗಿ ಬದಲಾಯಿತು. ಇವರು ಉತ್ತರಭಾರತದಲ್ಲಿ ಹಲವು ಹೆಸರುಗಳುಳ್ಳ ಠಕ್ಕರಾದರೆ, ದಕ್ಷಿಣ ಭಾರತದಲ್ಲಿ ಭಾಮ್ಟಾ, ಠಕಾರಿ ಭಾಮ್ಟಾ, ಉಚಲ್ಯಾ, ಗಂಟಿಚೋರ್ ಆಗಿ ಗುರುತಿಸಿಕೊಂಡರು. ಈ ಎಲ್ಲರನ್ನೂ ದೇಶವ್ಯಾಪಿ ಬೆಸೆಯುವ ಎಳೆಯೆಂದರೆ ಇವರೆಲ್ಲಾ `ಶಾಕ್ತಪಂಥ’ದ ಆರಾಧಕರಾಗಿದ್ದು `ಶಾಕ್ತೇಯ’ ಸಮುದಾಯವಾಗಿರುವುದು.
ಭಾರತದ ಚರಿತ್ರೆಯಲ್ಲಿ 18 ನೇ ಶತಮಾನ ಠಕ್ಕರ ಲೂಟಿ ಕೊಲೆ ಸುಲಿಗೆ ಮುಂತಾದವುಗಳ ಭಯಭೀತ ಅಧ್ಯಾಯವಾಗಿದೆ. ಈ ಹಿನ್ನೆಲೆಯ ಒಂದೆಳೆ ಕರ್ನಾಟಕದಲ್ಲಿ ನೆಲೆಸಿದ ಗಂಟಿಚೋರರ ಜತೆ ತಳಕು ಹಾಕಿಕೊಂಡಿದೆ. ಆದರೆ ಗಂಟಿಚೋರರ ಹೆಸರಲ್ಲೇ `ಗಂಟುಕಳ್ಳರು’ ಎಂದಿರುವುದು ಇವರ ಕಳ್ಳತನದ ಸ್ವರೂಪವನ್ನು ಕಾಣಿಸುತ್ತದೆ. ಹೀಗಾಗಿಯೇ ಇವರನ್ನು ಸಂತೆಕಳ್ಳರೂ ಎಂದೂ ಕರೆಯುತ್ತಿದ್ದರು. ಇವರದು ಉತ್ತರಭಾರತದ ಠಕ್ಕರಂತೆ ಬೃಹತ್ ಜಾಲವಾಗಿರದೆ ಸಣ್ಣಪುಟ್ಟ ಕಳ್ಳತನದಲ್ಲಿ ತೊಡಗಿಕೊಂಡ ಹೊಟ್ಟೆಪಾಡಿನ ಕಳ್ಳರಾಗಿದ್ದರು. ಸಂತಕವಿ ಕನಕರು `ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎನ್ನುವಂತೆ ಗಂಟಿಚೋರರು ಕಳ್ಳತನ ಮಾಡಿ ಹೊಟ್ಟೆತುಂಬಿಸಿಕೊಂಡವರು. ಚಾರಿತ್ರಿಕವಾಗಿ ಗಂಟಿಚೋರರು ಸೈನಿಕ ಸಮುದಾಯವಾಗಿದ್ದರು ಎನ್ನುವ ಬಗ್ಗೆ ಪುರಾವೆಗಳೊಂದಿಗೆ ಸಂಶೋಧನೆಯಲ್ಲಿ ಚರ್ಚಿಸಲಾಗಿದೆ.

ಗಂಟಿಚೋರ್ ಇದು ಕರ್ನಾಟಕದಲ್ಲಿ ಮಾತ್ರ ವಿಶೇಷವಾಗಿ ಕಂಡುಬರುವ ಹೆಸರು. ಈ ಹೆಸರಿನಿಂದ ಗುರುತಿಸಲ್ಪಟ್ಟ ಸಮುದಾಯವೊಂದು (ಮುಂಬೈಕರ್ನಾಟಕ ಪ್ರದೇಶದಲಿ)್ಲ ಉತ್ತರ ಕರ್ನಾಟಕದ ಬೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿದೆ. ಅಂತೆಯೇ ಈ ಸಮುದಾಯದಲ್ಲಿನ `ಪಾಪನೋರು’ ಎನ್ನುವ ಕುಲದ ಹಿನ್ನೆಲೆಯ ಬೆನ್ನತ್ತಿದರೆ, ಈ ಭೌಗೋಳಿಕ ಪರಿಸರದಲ್ಲಿ ಕನಿಷ್ಠ 9-10 ನೇ ಶತಮಾನದಿಂದಲೂ ಈ ಸಮುದಾಯದ `ಪಾಪನೋರು’ ಕುಲದವರು ನೆಲೆಸಿರಬೇಕು ಅನ್ನಿಸುತ್ತದೆ. ಇದಕ್ಕೆ ವಡ್ಡಾರಾಧನೆ, ಧರ್ಮಾಮೃತ ಕೃತಿಗಳಲ್ಲಿ ಬರುವ ಕಳ್ಳರ ಕಥೆಗಳು ಸಾಕ್ಷಿಯಂತಿವೆ. ಈ ಸಂಶೋಧನೆಯಲ್ಲಿ ಸಮುದಾಯದ ಶೇ 90 ರಷ್ಟು ಮನೆಗಣತಿ ಮಾಡಿ ಖಚಿತ ಅಂಕೆಸಂಖ್ಯೆಗಳನ್ನು ದಾಖಲಿಸಲಾಗಿದೆ. ಸಧ್ಯಕ್ಕೆ ಕರ್ನಾಟಕದ 7 ಜಿಲ್ಲೆಯ 19 ತಾಲೂಕಿನ 36 ನೆಲೆಗಳಲ್ಲಿ ನೆಲೆಸಿದ ಗಂಟಿಚೋರ್ಸ್ ಸಮುದಾಯದ ಒಟ್ಟು ಜನಸಂಖ್ಯೆ 5826 (ಗಂ-2892, ಹೆ-2934) ರಷ್ಟಿದೆ. ಗಂಟಿಚೋರರ ಗಂಡಸರಿಗಿಂತ 42 ಮಹಿಳೆಯರು ಹೆಚ್ಚಿರುವುದು ವಿಶೇಷವಾಗಿದೆ.

**
ಮುಖ್ಯವಾಗಿ ಗಂಟಿಚೋರ್ಸ್ ಸಮುದಾಯ ಐಡೆಂಟಿಟಿ ಪ್ರಶ್ನೆಯನ್ನು ಎದುರಿಸುತ್ತಿದೆ. 1950ರ ಬಾಂಬೆ ಸರಕಾರದ ಸಮುದಾಯಗಳ ಪಟ್ಟಿಯಲ್ಲಿ ಗಂಟಿಚೋರ್ಸ್ ಮತ್ತು ಅದರ ಸಮನಾಂತರ ಪದಗಳಾದ ಭಾಮ್ಟಾ, ಟಕಾರಿ, ಉಚಲ್ಯಾ, ಗಿರಣಿವಡ್ಡರ್, ತುಡುಗು ವಡ್ಡರ್, ಪಾತ್ರೂಟ್‍ನ್ನು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರಿಸಿತು. 1975 ರಲ್ಲಿ ಕರ್ನಾಟಕ ಸರಕಾರವು ಹಿಂದುಳಿದ ಬುಡಕಟ್ಟುಗಳ ಪಟ್ಟಿಯಲ್ಲಿ ಗಂಟಿಚೋರ್, ಉಚಲ್ಯಾ, ಭಾಮ್ಟಾ, ಟಕಾರಿ, ಗಿರಣಿವಡ್ಡರ್, ತುಡುಗುವಡ್ಡರ್ ಪದಗಳನ್ನು ಒಂದೇ ಗುಂಪಿಗೆ ಸೇರಿಸಿ, ಆಗ ಪಾತ್ರೂಟ್ ಒಂದನ್ನು ಕೈಬಿಡಲಾಯಿತು.

ಹೀಗಿರುವಾಗ ಕರ್ನಾಟಕ ಸರಕಾರವು 1976 ರಲ್ಲಿ ಮಾಡಿದ ಪರಿಶಿಷ್ಠ ಜಾತಿ, ಪಂಗಡದ ಪಟ್ಟಿಯಲ್ಲಿ `ಗಂಟಿಚೋರ್ಸ್’ನ್ನು ಪರಿಶಿಷ್ಟಜಾತಿಗೆ ಸೇರಿಸಿ ಅದರ ಸಮಾನಂತರ ಪದಗಳನ್ನು ಕೈಬಿಡಲಾಯಿತು. ಕಾರಣ ಒಂದೇ ಸಮುದಾಯಕ್ಕೆ ಸೇರಿದ ಭಾಮ್ಟಾ, ಉಚಲ್ಯ, ವಡ್ಡರ್, ತುಡುಗ ವಡ್ಡರ್, ಗಿರಣಿ ವಡ್ಡರ್, ಟಕಾರಿ, ಪಾತ್ರೂಟ್ ಹೊರಗುಳಿದು ತಬ್ಬಲಿಗಳಾದವು. ಮುಂದೆ ಕರ್ನಾಟಕ ಸರಕಾರವು 1986 ರಲ್ಲಿ ಇಂದುಳಿದ ವರ್ಗಗಳನ್ನು ಎ.ಬಿ.ಸಿ.ಡಿ.ಇ ಎಂದು ವಿಭಾಗಿಸಿ, `ಎ’ ಗುಂಪಿನಲ್ಲಿ ಭಾಮ್ಟಾ, ಟಕಾರಿ, ಉಚಲ್ಯಾ ಒಂದು ಗುಂಪಾಗಿಯೂ, ವಡ್ಡರ್, ಬೋವಿ ಜಾತಿಯ ಸಮಾನಾಂತರ ಪದಗಳಾಗಿ ಗಿರಣಿ ವಡ್ಡರ್, ತುಡುಗು ವಡ್ಡರ್ ಪದಗಳನ್ನು ಸೇರಿಸಿತು. ಇಲ್ಲಿ ಸ್ಪಷ್ಟವಾಗಿ `ಗಂಟಿಚೋರ್ಸ್’ನ್ನು ಪ್ರತ್ಯೇಕವಾಗಿಸಿತು. ಆಗ ಪಾತ್ರೂಟ್ ದಾಖಲೆಯೂ ಆಗದೆ ಇಲ್ಲವಾಯಿತು.

1994 ರಲ್ಲಿ ಕರ್ನಾಟಕ ಸರಕಾರದ ಹಿಂದುಳಿದ ವರ್ಗದ ಸುಧಾರಿತ ಪಟ್ಟಿಯಲ್ಲಿ ಭಾಮ್ಟಾ, ಟಕಾರಿ, ಉಚಲ್ಯಗಳನ್ನು ಒಂದು ಗುಂಪಾಗಿಯೂ, ಬೋವಿ ಅಥವಾ ಬೋಯಿಯ ಸಮನಾಂತರ ಗುಂಪಾಗಿ ಗಿರಣಿವಡ್ಡರ್, ತುಡುಗು ವಡ್ಡರ್ ಪದವನ್ನಾಗಿಯೂ ಸೂಚಿಸಲಾಗಿದೆ. ಈ ಎಲ್ಲಾ ಕಾರಣದಿಂದ ಆರಂಭದಲ್ಲಿ ಗಂಟಿಚೋರ್ ಸಮುದಾಯದ ಸಮನಾಂತರ ಪದಗಳಾಗಿದ್ದ ಭಾಮ್ಟಾ, ಟಕಾರಿ, ಉಚಲ್ಯಾ, ಗಿರಣಿವಡ್ಡರ್, ತುಡುಗು ವಡ್ಡರ್, ಪಾತ್ರೂಟ್ ಇವುಗಳನ್ನು ಹಿಂದುಳಿದ ವರ್ಗಗಳಿಂದ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕಾದ ಬಿಕ್ಕಟ್ಟು ಗಂಭೀರವಾಗಿದೆ. ಈ ಬಿಕ್ಕಟ್ಟನ್ನು ಸಂಶೋಧನೆಯಲ್ಲಿ ವಿಸ್ತಾರವಾಗಿ ಚರ್ಚಿಸಲಾಗಿದೆ.

ಮುಖ್ಯವಾಗಿ `ಗಂಟಿಚೋರ್ಸ್’ ಎಂಬ `ಕಳ್ಳತನದ’ ಸಾಮಾಜಿಕ ಅಪಮಾನದಿಂದ ಬಿಡುಗಡೆ ಹೊಂದಲು ಈ ಸಮುದಾಯ ಹಿಂದೆ ನಾನಾ ಹೆಸರುಗಳಲ್ಲಿ ಗುರುತಿಸಿಕೊಂಡು ರೂಪಾಂತರ ಹೊಂದಿದೆ. ಇಂದು ಇವರೆಲ್ಲಾ ಪರಿಶಿಷ್ಠ ಜಾತಿಯ ಸೌಲಭ್ಯದ ಕಾರಣಕ್ಕೆ ಯಾವ ಹೆಸರನ್ನು ಕಳಚಿಕೊಂಡು ನಿರಾಳವಾಗಿದ್ದರೋ, ಅದೇ ಸಮುದಾಯ ಮತ್ತೆ ಮರಳಿ ಮನೆಗೆ ಎನ್ನುವಂತೆ `ಗಂಟಿಚೋರ್ಸ್’ ಎಂದು ಗುರುತಿಸಿಕೊಳ್ಳುತ್ತಿದ್ದಾರೆ.

ಗಂಟಿಚೋರ್ಸ್ ಸಮುದಾಯದಲ್ಲಿ ಯುವಜನತೆಯಲ್ಲಿ ನಿರುದ್ಯೋಗ ಸಮಸ್ಯೆಯಿದೆ. ಸಮೀಕ್ಷೆಯಲ್ಲಿ ಒಟ್ಟು 861 ಜನರು ನಿರುದ್ಯೋಗಿಗಳಿದ್ದಾರೆ. ಮಹಿಳಾ ನಿರುದ್ಯೋಗಿಗಳ ಸಂಖ್ಯೆ ಶೇ 17 ರಷ್ಟಿದೆ. ಉಳಿದಂತೆ ಶೇ 6.4 ರಷ್ಟು ಗಂಡಸರು ನಿರುದ್ಯೋಗಿಗಳಿದ್ದಾರೆ. ಪ್ರಾದೇಶಿಕವಾಗಿ ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಈ ಸಂಖ್ಯೆ ಹೆಚ್ಚಿದೆ. ಪರಿಶಿಷ್ಟಜಾತಿಯ ಅಭಿವೃದ್ಧಿ ಯೋಜನೆಗಳಲ್ಲಿ ನಿರುದ್ಯೋಗವನ್ನು ಕೊನೆಗಾಣಿಸುವ ಪ್ರಯತ್ನಗಳು ನಡೆಯಬೇಕಿದೆ.


ಬಾಗಲಕೋಟೆ  ಜಿಲ್ಲೆಯ ಮಹಾಲಿಂಗಪುರದ ಬಳಿ ಹೊಲದಲ್ಲಿ ವಾಸವಾಗಿರುವ ಗಂಟಿಚೋರ ಸಮುದಾಯದ ಕುಟುಂಬದ ಚಿತ್ರ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಳಿ ಹೊಲದಲ್ಲಿ ವಾಸವಾಗಿರುವ ಗಂಟಿಚೋರ ಸಮುದಾಯದ ಕುಟುಂಬದ ಚಿತ್ರ.

ಈ ಸಮುದಾಯದಲ್ಲಿ ವಸತಿ ಸಮಸ್ಯೆ ದೊಡ್ಡದಿದೆ, ಸಮೀಕ್ಷೆಯ ಒಟ್ಟು 1549 ಕುಟುಂಬಗಳಲ್ಲಿ ಶೇ 0.2 ನಷ್ಟು ಟೆಂಟುಗಳಲ್ಲಿಯೂ, ಶೇ 17.5 ರಷ್ಟು ಗುಡಿಸಲುಗಳಲ್ಲಿಯೂ, ಶೇ 23 ರಷ್ಟು ಬಾಡಿಗೆ ಮನೆಯಲ್ಲಿಯೂ ವಾಸಿಸುತ್ತಿದ್ದಾರೆ. ಶೇ 9.9 ರಷ್ಟು ಮಾತ್ರ ಸರಕಾರಿ ಆಶ್ರಯ ಮನೆಗಳಿವೆ. ಸರಕಾರವು ಗುಡಿಸಲು ಮುಕ್ತ ಕರ್ನಾಟಕವನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಹೀಗಾಗಿ ಈ ಯೋಜನೆಗಳಲ್ಲಿ ಗಂಟಿಚೋರರ ವಸತಿ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಸಮೀಕ್ಷೆಯಲ್ಲಿ ಸಮುದಾಯದ 1201 ರಷ್ಟು ಭೂರಹಿತ ಕುಟುಂಬಗಳು ದಾಖಲಾಗಿದೆ. ಸದ್ಯಕ್ಕೆ 1982 ಜನರು ಕೃಷಿ ಕೂಲಿಗಳಿದ್ದಾರೆ. ಈ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ 50 ರಷ್ಟಿದೆ. ಹಾಗಾಗಿ ಭೂರಹಿತರಿಗೆ ಭೂಮಿಯನ್ನು ಕೊಡುವ ಅಗತ್ಯವಿದೆ. ಶೇ 22 ರಷ್ಟು ಈ ಸಮುದಾಯದ ಕುಟುಂಬಗಳ ಬಡವರಿಗೆ ಪಡಿತರ ಚೀಟಿ ಸೌಲಭ್ಯವನ್ನು ಒದಗಿಸಬೇಕಾಗಿದೆ.

ಗಂಟಿಚೋರರು ಇದೀಗ ಸಂಘಟಿತರಾಗುತ್ತಿದ್ದಾರೆ. ಸರಕಾರ ಸಂಘಟನೆಗಳ ಸಹಭಾಗಿತ್ವದ ಮೂಲಕ ಸಮುದಾಯದ ಅಭಿವೃದ್ಧಿಗೆ ನೆರವಾಗಬೇಕಿದೆ. ಇವರಲ್ಲಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯ ಕ್ರೀಡಾಪಟುಗಳಿದ್ದರು, ಈ ಹಿನ್ನೆಲೆಯಲ್ಲಿ ಸಮುದಾಯದ ಮಕ್ಕಳಿಗೆ ಕ್ರೀಡೆಯಲ್ಲಿ ಹೆಚ್ಚು ಪ್ರೋತ್ಸಾಹ ಸಿಗಬೇಕಿದೆ. ಸಮುದಾಯವು ಗೋಕಾಕಪಾಲ್ಸ್, ಹುಬ್ಬಳ್ಳಿ, ಗದಗ-ಬೆಟಗೇರಿ, ಬಿಜಾಪುರ, ನರಗುಂದದಲ್ಲಿ ಸೆಟ್ಲಮೆಂಟ್ ವಸತಿಗಳ ತೆರವಿನಿಂದ ಆತಂಕದಲ್ಲಿದೆ. ಈ ವಸತಿಯನ್ನು ಸಮುದಾಯದ ಮೂಲ ನೆಲೆಸಿಗರಿಗೆ ಖಾಯಂ ನೊಂದಾಯಿಸಬೇಕಿದೆ. ಬೆಳಗಾಂ ಜಿಲ್ಲೆಯ ರಾಯಭಾಗ ತಾಲೂಕಿನ ಶಾಹುಪಾರ್ಕ ಎಂಬ ಹಳ್ಳಿಯಲ್ಲಿ 1955 ರಲ್ಲಿ ಸಮುದಾಯದ ಮಕ್ಕಳಿಗೆ ಆಶ್ರಮ ಶಾಲೆ ಆರಂಭವಾಗಿತ್ತು. ಅದೀಗ ಏಳೆಂಟು ವರ್ಷದಿಂದ ನಿಲುಗಡೆಯಾಗಿ ಈ ಭಾಗದ ಗಂಟಿಚೋರ ಮಕ್ಕಳ ಶಿಕ್ಷಣಕ್ಕೆ ತಡೆಯಾಗಿದೆ. ಇದನ್ನು ಸರಕಾರ ಕೂಡಲೆ ಆರಂಭಿಸಬೇಕಿದೆ. ಹೀಗೆ ಇಂತಹ ಹತ್ತಾರು ಫಲಿತಗಳನ್ನು ಸಮುದಾಯವನ್ನು ಸಬಲಗೊಳಿಸುವ ನೆಲೆಯಲ್ಲಿ ಗುರುತಿಸಲಾಗಿದೆ.

ವಯಕ್ತಿಕವಾಗಿ ಸಮುದಾಯ ಅಧ್ಯಯನದ ಮೊದಲ ಪ್ರಯತ್ನವಿದು. ಈ ಅಧ್ಯಯನವೇ ಸಮುದಾಯವನ್ನು ನೋಡುವ ಕಣ್ಣುಗಳನ್ನು ಒದಗಿಸಿದೆ. ಇಲ್ಲಿ ಒಂದು ಸಮುದಾಯದ ನಾಡಿಮಿಡಿತವನ್ನು ಕೇಳಿಸುವಂತಹ ಸಂರಚನೆಯ ವಿಧಾನವನ್ನು ಬಳಸಾಗಿದೆ. ಸಮುದಾಯವೊಂದರ ಚಾರಿತ್ರಿಕ ಪಲ್ಲಟಗಳು ಹೇಗೆ ನಿರಂತರ ರೂಪಾಂತರಕ್ಕೆ ಒಳಗಾಗುತ್ತವೆ, ಈ ಪಯಣದಲ್ಲಿ ಸಮುದಾಯವೊಂದು ಹೇಗೆ ಸಂಘರ್ಷಕ್ಕೆ ಒಡ್ಡಿಕೊಳ್ಳುತ್ತದೆ ಎನ್ನುವುದನ್ನು ಅರಿಯಲು ಪ್ರಯತ್ನಿಸಲಾಗಿದೆ. ಗಂಟಿಚೋರ ಸಮುದಾಯ ಒಂದು ಕಾಲಕ್ಕೆ ಅಪರಾಧಿ ಬುಡಕಟ್ಟೆಂದು ಗುರುತಿಸಿಕೊಂಡು ನಂತರದಲ್ಲಿ ಈ ಗುರುತಿನ ಪೊರೆಯನ್ನು ಕಾಲಕಾಲಕ್ಕೆ ಕಳಚುತ್ತಾ ಬಂದಿರುವ ಪಯಣವೇ ಕುತೂಹಲಕಾರಿಯಾಗಿದೆ.

ಕಾಮೆಂಟ್‌ಗಳಿಲ್ಲ: