ಶನಿವಾರ, ಅಕ್ಟೋಬರ್ 15, 2016

ವಾಲ್ಮೀಕಿ ಜಯಂತಿಯ ಏಕರೂಪಿ ಆಚರಣೆಯ ಮೀರಬೇಕಿದೆ-ಡಾ. ಅರುಣ್ ಜೋಳದಕೂಡ್ಲಿಗಿ
ಕರ್ನಾಟಕ ಸರಕಾರವು ಮಾನ್ಯ ಮಾಡಿದ ಆಚರಣೆಯಾಗಿ ವಾಲ್ಮೀಕಿ ಜಯಂತಿ ನಾಡಿನಾದ್ಯಾಂತ ನಡೆಯುತ್ತದೆ. ಕನಿಷ್ಠ ಒಂದು ತಿಂಗಳ ಕಾಲ ಈ ಜಯಂತಿಯನ್ನು ವಾಲ್ಮೀಕಿ ಸಮುದಾಯ ತಮ್ಮ ಹಳ್ಳಿ, ಗ್ರಾಮ, ಕಾಲನಿ, ನಗರಗಳಲ್ಲಿ ಆಚರಿಸುತ್ತಾರೆ. ಹಾಗಾಗಿ ಇದು ಸರಕಾರಿ ಆಚರಣೆಯಂತೆಯೇ, ಸಮುದಾಯದ ಹಬ್ಬವಾಗಿಯೂ ನಡೆಯುತ್ತದೆ.. ವಾಲ್ಮೀಕಿ ಜಯಂತಿಯನ್ನು ಬಿಜೆಪಿ ಸರಕಾರವು ಆರಂಭಿಸಿದ್ದಕ್ಕೆ ಕೆಲವು ಮುಖ್ಯ ಕಾರಣಗಳಿದ್ದವು. ವಾಲ್ಮೀಕಿ, ರಾಮಾಯಣ, ರಾಮನನ್ನು ಜೋಡಿಸುವ ಮೂಲಕ ಕರ್ನಾಟಕದ ಬೇಡನಾಯಕ ಸಮುದಾಯವನ್ನು ಹಿಂದುತ್ವದ ಮೂಲಭೂತವಾದಿ ವಕ್ತರರನ್ನಾಗಿ ಮಾಡುವ ಉದ್ದೇಶವೊಂದು ಗುಪ್ತವಾಗಿತ್ತು. ಆರಂಬಿಕ ಆಚರಣೆಗಳಲ್ಲಿ ಇದಕ್ಕೆ ಪೂರಕವಾದ ಪ್ರಕ್ರಿಯೆಗಳೂ ನಡೆದವು. ಆದರೆ ಇದೀಗ ಈ ಅಪಾಯಕಾರಿ ಆಯಾಮ ಬದಲಾಗಿದೆ.

  ಕರ್ನಾಟಕದಲ್ಲಿ ನಡೆಯುವ ವಾಲ್ಮೀಕಿ ಜಯಂತಿಗಳಲ್ಲಿ ಒಂದು ಬಗೆಯ ಏಕರೂಪಿ ಆಚರಣೆಯ ಮಾದರಿ ಇದೆ. ಜಯಂತಿಯ ಪ್ಲೆಕ್ಸ್ ಹೋರ್ಡಿಂಗ್ಸ್‍ಗಳನ್ನು ಗಮನಿಸಿದರೆ ಇದು ಅರಿವಿಗೆ ಬರುತ್ತದೆ. ವಾಲ್ಮೀಕಿ ಋಷಿ, ಮದಕರಿ ನಾಯಕ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಸ್ವಾಮಿಜಿ, ಕೆಲವೆಡೆ ಯುವ ಸಮುದಾಯದ ಆಕರ್ಷಣೆಯಾದ ಚಿತ್ರನಟ ಸುದೀಪ್, ಆಯಾ ಭಾಗದ ವಾಲ್ಮೀಕಿ ಸಮುದಾಯದ ರಾಜಕಾರಿಣಿಗಳ ಚಿತ್ರಗಳನ್ನು ಹಾಕಲಾಗುತ್ತದೆ. ಆಚರಣೆಯ ಮೊದಲಿಗೆ ವಾಲ್ಮೀಕಿ ಋಷಿಯ ಭಾವಚಿತ್ರದ ಮೆರವಣಿಗೆ ಊರಿನ ಬೀದಿ ಬೀದಿಗಳಲ್ಲಿ ಸಾಗುತ್ತದೆ. ವಾಲ್ಮೀಕಿ ಸಮುದಾಯದ ಪುರಾಣ ಚರಿತ್ರೆಯ ನಾಯಕರ ಸ್ಥಬ್ದ ಚಿತ್ರಗಳ ವೇಷದಾರಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ವೇದಿಕೆಯೊಂದರಲ್ಲಿ ಆಚರಣೆ ಶುರುವಾಗಿ ವಾಲ್ಮೀಕಿ ಋಷಿಯ ಮತ್ತು ಸಮುದಾಯದ ಬಗೆಗೆ ಭಾಷಣಗಳು ನಡೆಯುತ್ತವೆ. ಈ ಮಾತುಗಳು ಬಹುಪಾಲು ಬೇಡ ಸಮುದಾಯದ ಅತಿರಂಜಿತ ವರ್ಣನೆಗೆ ಸೀಮಿತವಾಗುತ್ತವೆ. ಈ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಉದ್ಯೋಗದಾತರಿಗೆ, ಹಿರಿಯ ನಾಯಕರುಗಳಿಗೆ ಸನ್ಮಾನಗಳು ನಡೆಯುತ್ತವೆ. ಕೆಲವೆಡೆ ಒಂದಷ್ಟು ಬದಲಾವಣೆಯನ್ನು ಹೊರತು ಪಡಿಸಿದರೆ ಕರ್ನಾಟಕದಾದ್ಯಂತ ಈ ಬಗೆಯ ಏಕರೂಪಿ ಆಚರಣೆ ನಡೆಯುತ್ತದೆ.

ರಾಷ್ಟ್ರೀಯ ಆಚರಣೆಗಳಲ್ಲಿ ಒಂದು ಬಗೆಯ ಏಕರೂಪಿತನವಿರುತ್ತದೆ. `ದೇಶ’ `ರಾಷ್ಟ್ರ’ `ರಾಜ್ಯ’ ಎನ್ನುವ ಒಟ್ಟಾದ ದುಂಡು ಗ್ರಹಿಕೆಯನ್ನು ಬಲಪಡಿಸುವ ಅಭಿಮಾನ ಹುಟ್ಟಿಸುವ ಪ್ರಕ್ರಿಯೆಗಳು ನಡೆಯುತ್ತವೆ. ಈ ಮಾದರಿಯನ್ನೆ ಜಾತಿ, ಸಮುದಾಯಗಳ ಸಾಂಕೇತಿಕ ಆಚರಣೆಗಳೂ ಪಾಲಿಸುತ್ತಿರುವಂತೆ ಕಾಣುತ್ತಿದೆ. ಇದು ಒಂದು ಹಂತದಲ್ಲಿ ಸರಿಯಾದರೂ, ಇದೇ ಮುಂದುವರಿದಲ್ಲಿ ಅಪಾಯಕರ. ಕಾರಣ ಒಂದು ಸಮುದಾಯದ ಪ್ರಾತಿನಿಧಿಕ ಆಚರಣೆಯಲ್ಲಿನ ಏಕರೂಪತೆ ಬಹು ಬೇಗ ಜಡತೆಯನ್ನು ತರುತ್ತದೆ. ಒಂದು ಸಮುದಾಯವೂ `ಮೂರ್ತಿರೂಪ’ ತಾಳುವ ಅಪಾಯದೆಡೆಗೆ ಸಾಗುತ್ತದೆ. ಜೀವಂತ ಸಮುದಾಯದ ವರ್ತಮಾನದ ಸಂಕಟ, ನೋವು, ನಲಿವು, ಸಂಘರ್ಷಗಳನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆಯನ್ನೆ ಕಳೆದುಕೊಳ್ಳುತ್ತದೆ. ತನ್ನ ಸಮುದಾಯದ ನೋವುಗಳಿಗೆ ಈ ಬಗೆಯ ಆಚರಣೆಗಳು ಕಿವುಡಾಗುತ್ತದೆ. ಎಲ್ಲವೂ ಮೆರವಣಿಗೆಯ ಗದ್ದಲದಲ್ಲಿ ಕಳೆದು ಹೋಗುತ್ತವೆ.

ಇಂದು ಎಲ್ಲಾ ಸಮುದಾಯಗಳಲ್ಲಿ ವರ್ಗದ ಬೆಳವಣಿಗೆಯಾದಂತೆ, ಬೇಡನಾಯಕ ಸಮುದಾಯದಲ್ಲಿಯೂ ವರ್ಗದ ನೆಲೆ ರೂಪುಗೊಂಡಿದೆ. ಶ್ರೀಮಂತ ವರ್ಗ, ರಾಜಕಾರಿಣಿ ವರ್ಗ, ನೌಕರಶಾಹಿ ಅಥವಾ ಮಧ್ಯಮ ವರ್ಗ, ಅಂಚಿನ ಬಡವರ ವರ್ಗವೆಂದು ವಿಭಾಗಿಸಬಹುದು. ಈ ನಾಲ್ಕು ವರ್ಗಗಳ ಜನಸಂಖ್ಯೆಯು ಮಾತ್ರ ಕೆಳಗಿನಿಂದ ಏರುಮುಖವಾಗಿ ಇಳಿಯುತ್ತದೆ. ಈ ಪ್ರಕಾರ ಸಮುದಾಯದ ಅಂಚಿನ ಬಡವರು ಹೆಚ್ಚಾಗಿದ್ದಾರೆ. ಇವರು ವಾಲ್ಮೀಕಿ ಜಯಂತಿಯ ಬೀದಿ ಮೆರವಣಿಗೆಯಲ್ಲಿ ಸಕ್ರಿಯವಾಗಿರುತ್ತಾರೆ. ಮೇಲಿನ ಮೂರು ವರ್ಗಗಳ ಜನರು ವೇದಿಕೆಯ ಮೇಲೇರುತ್ತವೆ. ಸನ್ಮಾನ ಸ್ವೀಕರಿಸುತ್ತಾರೆ, ಭಾಷಣ ಬಿಗಿಯುತ್ತಾರೆ, ಈ ವರ್ಗಗಳಿಗೆ ಬರಬಹುದಾದ ಲಾಭಗಳ ಬಗ್ಗೆ ಮಾತನಾಡುತ್ತಾರೆ. ಈ ಇಡೀ ಆಚರಣೆಯಲ್ಲಿ ಸೇರಿದ ಸಮುದಾಯದ ಸದಸ್ಯರನ್ನು ಮತದಾರರನ್ನಾಗಿಸಿಕೊಳ್ಳುವ ಯತ್ನಗಳೂ ನಡೆಯುತ್ತವೆ. ಇದೇ ಸಮುದಾಯದ ಅಂಚಿನ ಬಡವರ ಸಮಸ್ಯೆಗಳು ಈ ವೇದಿಕೆಯಲ್ಲಿ ಚರ್ಚೆಯಾಗುವುದಿಲ್ಲ. ಅಂತೆಯೇ ಈ ಮೂರು ವರ್ಗದಲ್ಲಿಯೂ ಮಹಿಳೆಯ ಪ್ರಾತಿನಿಧ್ಯ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಅಷ್ಟರಮಟ್ಟಿಗೆ ಪುರುಷವಾದಿ ಆಚರಣೆ ನಡೆಯುತ್ತದೆ.

ಕರ್ನಾಟಕ ಸಂದರ್ಭದಲ್ಲಿ ಯಾವುದೇ ಜಾತಿ ಸಂಕೇತಗಳ ಆಚರಣೆಯಲ್ಲಿ ಎತ್ತಬೇಕಾದ ಕೆಲವು ಮುಖ್ಯ ಪ್ರಶ್ನೆಗಳಿವೆ. ಕೆಳಜಾತಿಗಳು ಒಗ್ಗಟ್ಟಾಗುತ್ತಿರುವುದು, ರಾಜಕೀಯ ಪ್ರಾತಿನಿಧ್ಯ ಕೇಳುತ್ತಿರುವುದು, ತಮ್ಮ ಚರಿತ್ರೆ, ಪುರಾಣ, ವರ್ತಮಾನದ ಸಂಕೇತಗಳನ್ನು ಗುರುತಿಸಿಕೊಳ್ಳುತ್ತಿರುವುದು ಒಳ್ಳೆಯ ಪರಿಣಾಮಕಾರಿ ನಡೆ. ಹೀಗೆ ಗುರುತಿಸಿಕೊಳ್ಳುವ ನಡೆಗಳಲ್ಲಿ ಗಂಭೀರ ತೊಡಕುಗಳಿವೆ. ಇವುಗಳು ಜಾತಿಯೊಂದರ ಎಚ್ಚತ್ತ ಪ್ರಜ್ಞೆಯಾದಲ್ಲಿ, ಸಮುದಾಯಗಳ ಆಂತರಿಕ ಬಲಪಡಿಸುವಿಕೆಯ ಶಕ್ತಿಯಾದಲ್ಲಿ, ಜಾತಿಯೊಳಗಿನ ಬಡತನ, ಶಿಕ್ಷಣದ ಕೊರತೆಯನ್ನು ನೀಗುವ ದಾರಿಯಾದಲ್ಲಿ, ಆಯಾ ಜಾತಿಯೊಳಗಿನ ಹೆಣ್ಣನ್ನು ಬಲಗೊಳಿಸುವಂತಾದಲ್ಲಿ ಇದು ಶ್ಲಾಘನೀಯ. ಆದರೆ ಈ ನಡೆ ಜಾತಿಯ ಕುರುಡು ಅಭಿಮಾನ ಬೆಳೆಸುವಲ್ಲಿ, ಇತರೆ ಜಾತಿಗಳನ್ನು ಅಸಹನೆಯಿಂದ ಕಾಣುವಲ್ಲಿ, ಕಡೆಗೆ ಜಾತಿ ಮೂಲಭೂತವಾದ ಸೃಷ್ಟಿಯಾಗುವಲ್ಲಿ, ಪುರುಷಾಧಿಕಾರವನ್ನು ವಿಜೃಂಬಿಸುವಲ್ಲಿ ಜಾತಿ ಸಂಕೇತಗಳ ಆಚರಣೆ ಉತ್ಸವಗಳು ಚಲಿಸುತ್ತಿವೆ. ಈ ಚಹರೆ ವಾಲ್ಮೀಕಿ ಜಯಂತಿ ಆಚರಣೆಯ ಸ್ವರೂಪದಲ್ಲೂ ಢಾಳಾಗಿ ಕಾಣುತ್ತಿದೆ. ಈ ಮಿತಿಗಳನ್ನು ಮೀರುವ ನಿಟ್ಟಿನಲ್ಲಿ ಆಚರಣೆಯ ಏಕರೂಪಿ ಮಾದರಿ ಬದಲಾಗಬೇಕಿದೆ.
ಯಾವುದೇ ಜಾತಿಗಳು ತಮ್ಮ ಸಮುದಾಯದ ಪುರಾಣ ಮತ್ತು ಚರಿತ್ರೆಯ ಜತೆ ಹೊಂದಬಹುದಾದ ಸಂಬಧವನ್ನು ಖಚಿತಪಡಿಸಿಕೊಳ್ಳಬೇಕು. ಸದ್ಯ ಇದರ ಸ್ವರೂಪ ಬಹುಪಾಲು ವೈಭವೀಕರಣದ ತುದಿಯಲ್ಲಿದೆ.

ಜಾತಿ ಸಂಕೇತಗಳಿಗೆ ಮೂರ್ತಿಪೂಜೆಯ ಆಯಾಮವಿದೆಯೆ ಹೊರತು ವೈಚಾರಿಕ ಮುಖವಿಲ್ಲ. ಲಿಂಗಾಯತ ಸಮುದಾಯ ಬಸವಣ್ಣನ ಜತೆ, ದಲಿತರು ಅಂಬೇಡ್ಕರ್ ಜತೆ, ಕುರುಬ ಸಮುದಾಯ ಕನಕನ ಜತೆ ಮಾಡಿದ ವೈಚಾರಿಕ ಮುಖಾಮುಖಿ ಕೂಡ ಬಡವಾಗಿದೆ. ಪೆರಿಯಾರ ರಾಮಸ್ವಾಮಿಯನ್ನು ನಾಯಕ/ಬೇಡ ಸಮುದಾಯದ ಸಂಕೇತವೆಂಬಂತ್ತೆ ಗುರುತಿಸಿಕೊಳ್ಳಲಾಗುತ್ತದೆ. ಪೆರಿಯಾರರ ಚಿಂತನೆಗಳ ಜತೆ ಈ ಸಮುದಾಯದ ಅನುಸಂಧಾನ ಶೂನ್ಯವಾಗಿದೆ. ಹೀಗೆ ಜಾತಿ ಸಂಕೇತಗಳ ಮೂರ್ತಿ ಆರಾಧನೆ ಇರುವ ತನಕ ಸಮುದಾಯ ಎಚ್ಚರಗೊಳ್ಳುವುದಿಲ್ಲ. ಬದಲಾಗಿ ಆಯಾ ಜಾತಿ ಸಂಕೇತಿಕ ಸುಧಾರಕರ ವೈಚಾರಿಕ ಎಚ್ಚರದ ತಿಳಿವಿನಿಂದ ಮಾತ್ರ ಸಮುದಾಯದೊಳಗೆ ಅರಿವಿನ ದೀಪವನ್ನು ಬೆಳಗಿಸಲು ಸಾಧ್ಯ.

ವಾಲ್ಮೀಕಿ ಸಮುದಾಯದ ಮದುವೆ ಬ್ಯೂರೋಗಳು ಕ್ರಿಯಾಶೀಲವಾಗಿದ್ದಷ್ಟು, ಈ ಜಾತಿಯೊಳಗಿನ ಬಡತನ ಕಳೆಯಲು ಸಮುದಾಯದ ಉದ್ಯೋಗಸ್ಥರು, ಶಿಕ್ಷಿತರು, ರಾಜಕಾರಣಿಗಳು ಕ್ರಿಯಾಶೀಲರಾಗಿಲ್ಲ ಎನ್ನುವುದು ಸತ್ಯ. ಯಾವ ಕಾರಣಗಳಿಗೆ ಈ ಸಮುದಾಯ ಕ್ರಿಯಾಶೀಲವಾಗಿರಬೇಕೋ ಅದು ಜಡವಾಗಿದೆ, ಬದಲಿಗೆ ಜಾತೀಯ ಕುರುಡು ಅಭಿಮಾನವನ್ನು ಬೆಳೆಸುವ ಸಂಗತಿಗಳು ಹೆಚ್ಚು ಕ್ರಿಯಾಶೀಲವಾಗಿವೆ. ಈ ಸಮುದಾಯವನ್ನು ಆಧರಿಸಿ ಪ್ರಕಟವಾಗುತ್ತಿರುವ ಪತ್ರಿಕೆಗಳು ಬಹುಪಾಲು ಜಾತಿಯ ವೈಭವೀಕರಣವನ್ನೇ ಧ್ಯೇಯವನ್ನಾಗಿಸಿಕೊಂಡಿವೆ. ಸಮುದಾಯದ ರಾಜಕಾರಿಣಿಗಳು, ಶ್ರೀಮಂತರು, ಮಧ್ಯಮ ವರ್ಗವನ್ನು ಈ ಪತ್ರಿಕೆಗಳು ಕೇಂದ್ರೀಕರಿಸಿವೆ. ಅಂತೆಯೇ ಜಾತಿಯ ಅಭಿಮಾನವನ್ನು ಚಂದಾದಾರಿಕೆಯನ್ನಾಗಿ ಪರಿವರ್ತಿಸಿವೆ. ಇವುಗಳು ಸಮುದಾಯದ ಸಮಸ್ಯೆಗಳ ಚರ್ಚೆಯ ತಾಣಗಳಾಗಬೇಕಿದೆ. ಸಮುದಾಯದಲ್ಲಿ ವೈಚಾರಿಕ ಎಚ್ಚರ ಮೂಡಿಸುವತ್ತ ಚಲಿಸಬೇಕಿದೆ.

   ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಅಂಬೇಡ್ಕರ್ ಸಂಘಗಳನ್ನು ಹೊರತು ಪಡಿಸಿದರೆ ವಾಲ್ಮೀಕಿ ಯುವಕ ಸಂಘಗಳ ಸಂಖ್ಯೆ ಹೆಚ್ಚಿದ್ದಂತಿದೆ. ಈ ಸಂಘಟನೆಗಳು ವರ್ಷಕ್ಕೊಮ್ಮೆ ವಾಲ್ಮೀಕಿ ಜಯಂತಿಗೆ ಎಚ್ಚರವಾಗಿ ವರ್ಷಪೂರ್ತಿ ನಿದ್ದೆಯಲ್ಲಿದ್ದಂತಿರುತ್ತವೆ. ಈ ಯುವಕ ಸಂಘಗಳನ್ನು ವೈಚಾರಿಕವಾಗಿ ಜಾಗೃತಗೊಳಿಸಿವ ಕಾರ್ಯವಾದರೆ ಅದು ಹೆಚ್ಚು ಮಹತ್ವದ ನಡೆಯಾಗಿದೆ. ಈ ಬಗೆಯ ವೈಚಾರಿಕ ಜಾಗೃತಿ ಮೂಡಿಸಲು ವಾಲ್ಮೀಕಿ ಜಯಂತಿಯನ್ನೂ ಕೂಡ ಒಂದು ವೇದಿಕೆಯನ್ನಾಗಿ ರೂಪಿಸಲು ಪ್ರಯತ್ನಿಸಬಹುದಾಗಿದೆ. ಯುವಕರ ಸಂಘಟನೆಗಳಂತೆ ಯುವತಿಯರ ಸಂಘಗಳ ಸ್ಥಾಪನೆಗೂ ಪ್ರೇರಣೆ ನೀಡಬೇಕಿದೆ. ಸರಕಾರವು ಈ ಸಂಘಗಳ ನೊಂದಾವಣೆಗೆ ವ್ಯವಸ್ಥೆ ಮಾಡಿ, ಈ ಯುವಕ/ತಿ ಸಂಘಗಳನ್ನು ಆಧರಿಸಿದ ಯೋಜನೆಗಳಿಗೆ ಚಾಲನೆ ನೀಡಬೇಕಿದೆ. ಈ ಸಂಘಟನೆಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳುವ ಸಾಧ್ಯತೆಗಳಿವೆ. ಈ ಮಾದರಿಯನ್ನು ಎಲ್ಲಾ ಜಾತಿ ಸಮುದಾಯಗಳ ಸಂಘಗಳಿಗೂ ಅನ್ವಯಿಸಬಹುದಾಗಿದೆ.

ವಾಲ್ಮೀಕಿ ಸಮುದಾಯದ ಸಾಹಿತಿಗಳು ತನ್ನ ಸಮುದಾಯದ ಜತೆ ಯಾವ ಬಗೆಯ ಸಂಬಂಧವನ್ನು ಹೊಂದಬೇಕು, ಈ ಸಮುದಾಯದ ವಿದ್ಯಾವಂತರು ಮಾಡಬಹುದಾದ ಕೆಲಸಗಳೇನು? ಯುವ ಸಮುದಾಯ ಎತ್ತ ಸಾಗಿದೆ ? ಶೈಕ್ಷಣಿಕವಾಗಿ ಯುವ ಸಮುದಾಯ ಯಾವ ದಾರಿಯಲ್ಲಿದೆ? ಉದ್ಯೋಗವಕಾಶಗಳಿಗೆ ತೆರೆದುಕೊಳ್ಳುತ್ತಿರುವ ನೆಲೆ ಯಾವುದು ? ಪರಿಶಿಷ್ಟ ಪಂಗಡಗಳಿಗಿರುವ ಸೌಲಭ್ಯಗಳೇನು? ಅವುಗಳ ಬಳಕೆ ಮಾಡಿಕೊಳ್ಳುವಲ್ಲಿ ಸಕ್ರಿಯವಾಗುವ ಬಗೆ ಯಾವುದು? ಸಹಜೀವನ ನಡೆಸುವ ಇತರೆ ಜಾತಿ ಸಮುದಾಯಗಳ ಜತೆ ಬ್ರಾತುತ್ವವನ್ನು ಬೆಳೆಸಿಕೊಳ್ಳುವ ಬಗೆ ಯಾವುದು? ಇತರೆ ಸಮುದಾಯಗಳ ಜತೆ ಸಾಮರಸ್ಯದಿಂದ ಬದುಕುವ ದಾರಿಗಳಾವುವು? ಅಸ್ಪøಷ್ಯ ದಲಿತ ಸಮುದಾಯಗಳನ್ನು ಮಾನವೀಯ ನೆಲೆಯಿಂದ ಕಾಣುವ ಬಗೆ ಯಾವುದು? ಮಹಿಳೆಯರನ್ನು ದಮನವಿಲ್ಲದೆ ನಡೆಸಿಕೊಳ್ಳುವ ನಡೆ ಯಾವುದು? ಮುಂತಾದ ಪ್ರಶ್ನೆಗಳನ್ನು ಎಚ್ಚರದಿಂದ ಪರಿಶೀಲಿಸಬೇಕಾಗಿದೆ. ಇಂತಹ ಚರ್ಚೆಗಳು ವಾಲ್ಮೀಕಿ ಜಯಂತಿಯ ಆಚರಣೆಯ ವೇದಿಕೆಗಳಲ್ಲಿ ಜೀವತಳೆಯಬೇಕಾಗಿದೆ. ಹೀಗೆ ವಾಲ್ಮೀಕಿ ಜಯಂತಿಯ ಏಕರೂಪಿ ಆಚರಣೆಯ ಮಿತಿಗಳನ್ನು ಮೀರುವ ಮತ್ತು ಅರ್ಥಪೂರ್ಣಗೊಳಿಸುವ ಚರ್ಚೆಗಳು ಇಂದು ಅಗತ್ಯವಾಗಿ ನಡೆಯಬೇಕಾಗಿದೆ.

ಕಾಮೆಂಟ್‌ಗಳಿಲ್ಲ: