ಬುಧವಾರ, ಡಿಸೆಂಬರ್ 22, 2010
ರಹಮತ್ ತರೀಕೆರೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂಸ್ಕೃತಿ ಚಿಂತನೆಗೆ ಸಂದ ಗೌರವ
ರಹಮತ್ ತರೀಕೆರೆ ಅವರು ಕನ್ನಡದ ಆಲೋಚನ ಕ್ರಮವನ್ನು ಭಿನ್ನವಾಗಿ ಕಟ್ಟುತ್ತಿರುವವರಲ್ಲಿ ಪ್ರಮುಖರು. ಅವರ ಒಟ್ಟೂ ಆಲೋಚನೆಯೊಳಗೆ ಪ್ರತಿಸಂಸ್ಕೃತಿಯ ಹುಡುಕಾಟದ ಎಳೆ ತುಂಬಾ ಸೂಕ್ಷ್ಮವಾಗಿ ಬೆರೆತಿದೆ. ಹಾಗೆಯೇ ಸಂಸ್ಕೃತಿಯ ಸಂಕರಶೀಲತೆಯನ್ನು ತುಂಬಾ ಆಸ್ಥೆಯಿಂದ ಸೂಕ್ಷ್ಮವಾಗಿ ಗಮನಿಸಿ, ಅದರೆಲ್ಲಾ ಆಯಾಮಗಳ ಮೂಲಕ ಸಾಂಸ್ಕೃತಿಕ ಅಧ್ಯಯನವನ್ನು ರೂಪಿಸುತ್ತಿರುವವರು. ಕರ್ನಾಟಕದಲ್ಲಿ ಸಮಾಜ ವಿಜ್ಞಾನದ ಹಲವು ಜ್ಞಾನಶಾಖೆಗಳು ಬೇರೆ ಬೇರೆ ಕವಲುಗಳಲ್ಲಿ ನಡೆಯುತ್ತಿರುವಾಗ, ಈ ಎಲ್ಲವುಗಳ ಕೊಡು ಕೊಳ್ಳುವಿಕೆಯ ಎಳೆಗಳನ್ನು ಹಿಡಿದು, ಅವುಗಳ ನಡುವೆ ಸಂಬಂಧವನ್ನು ಬೆಸೆದು ಬಹುಶಿಸ್ತೀಯ ಅಧ್ಯಯನದ ತಾತ್ವಿಕತೆಯನ್ನು ತುಂಬಾ ಜತನದಿಂದ ರೂಪಿಸುತ್ತಿರುವ ಕನ್ನಡದ ಮಹತ್ವದ ಲೇಖಕರು.
ಕನ್ನಡದ್ದೇ ಆದ ಚಿಂತನಾ ಮಾದರಿಯನ್ನು ವರ್ತಮಾನದ ಎಚ್ಚರದ ಮೂಲಕ ಕಟ್ಟುತ್ತಿರುವ ಕಾರಣಕ್ಕೆ ತರಿಕೆರೆ ಅವರು ನಮ್ಮ ಕಾಲದಲ್ಲಿ ಮುಖ್ಯರಾಗುತ್ತಾರೆ. ಇವರ ಈ ಆಲೋಚನ ವಿನ್ಯಾಸ ದೇಸಿ ಚಿಂತನೆಗೆ ಹೊಸ ಹೊಳಹುಗಳನ್ನು ನೀಡುತ್ತಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಈ ನಾಡಿನ ತಳಸಮುದಾಯಗಳ, ನೊಂದವರ, ಅಶಕ್ತರ ದ್ವನಿ ಅವರ ಬರಹ ಮತ್ತು ಬದುಕಿನ ಕ್ರಮದಲ್ಲಿ ಬೆರೆತಿದೆ. ಹಾಗಾಗಿ ಈ ಕಾಲದಲ್ಲಿ ತಮ್ಮ ಬರಹದೊಳಗೆ ನಿರಂತರವಾಗಿ ಚಳುವಳಿಯ ತಾತ್ವಿಕತೆಯ ಬೀಜಗಳನ್ನು ಬಿತ್ತುತ್ತಿದ್ದಾರೆ. ಕರ್ನಾಟಕದಾದ್ಯಾಂತ ತಿರುಗಾಡಿ, ಜನಬದುಕಿನ ತಳಮಳಗಳನ್ನೂ, ಚೈತನ್ಯವನ್ನೂ ಗುರುತಿಸುತ್ತಾ ಬರಹ ಮಾಡುತ್ತಿರುವವರಲ್ಲಿ ಇವರು ಪ್ರಮುಖರು. ತರಿಕೆರೆ ಅವರು ಶಂಬಾ ನಂತರದ ಸಾಂಸ್ಕೃತಿಕ ಅಧ್ಯಯನದ ಮಾದರಿಯನ್ನು ತುಂಬಾ ಅರ್ಥಪೂರ್ಣವಾಗಿ ಮುಂದುವರೆಸುತ್ತಿದ್ದಾರೆ ಮತ್ತು ಹೊಸ ಅರ್ಥಗಳನ್ನು ಹುಟ್ಟಿಸುತ್ತಿದ್ದಾರೆ. ಅಂತೆಯೇ ಕರ್ನಾಟಕದ ತುಂಬಾ ಅಪಾರ ಶಿಷ್ಯಬಳಗವನ್ನು ಹೊಂದಿದ ಇವರು, ಅವರೆಲ್ಲರೊಳಗೂ ಆರೋಗ್ಯಕರ ಓದುಗ, ಲೇಖಕ, ಚಿಂತಕರ ಹೊಸ ತಲೆಮಾರು ಹುಟ್ಟಲು ತುಂಬಾ ಪ್ರೇರಕ ಶಕ್ತಿಯಾಗಿದ್ದಾರೆ.
ತರಿಕೆರೆ ಅವರ ಸಂಸ್ಕೃತಿ ಚಿಂತನೆಯ ದೊಡ್ಡ ಶಕ್ತಿ ಎಂದರೆ, ಜನಸಾಮಾನ್ಯರ ಜ್ಞಾನಲೋಕವನ್ನು ತಮ್ಮ ಆಲೋಚನೆಯಲ್ಲಿ ಒಳಗು ಮಾಡಿಕೊಂಡು ಆ ಮೂಲಕ ಸಂಸ್ಕೃತಿಯನ್ನು ವಿಶ್ಲೇಷಣೆಗೆ ಒಡ್ಡುತ್ತಿರುವುದು. ಕುವೆಂಪು ಅವರ ‘ಇಲ್ಲಿ ಯಾರೂ ಮುಖ್ಯರಲ್ಲ’ ಎನ್ನುವ ತಾತ್ವಿಕತೆ ತರೀಕೆರೆ ಅವರ ಚಿಂತನೆಯ ಆಳದ ಭಿತ್ತಿಯಾಗಿರುವುದು ಮುಖ್ಯವಾಗಿದೆ. ಅಂತೆಯೇ ಒಟ್ಟು ಆಲೋಚನೆಯಲ್ಲಿ ಅಧಿಕಾರದ ಬೇರೆ ಬೇರೆ ಬಗೆಯ ಚಲನೆಗಳನ್ನು ಗುರುತಿಸಿ ಅವುಗಳ ಅಪಾಯಗಳನ್ನು, ಮತ್ತು ಅವುಗಳನ್ನು ಮೀರಲು ಸಾದ್ಯವಾಗುವ ಪರ್ಯಾಯ ಆಲೋಚನೆಗಳನ್ನು ಮಂಡಿಸುತ್ತಿದ್ದಾರೆ. ಹಾಗಾಗಿ ಅವರ ಚಿಂತನೆಗಳಲ್ಲಿ ಸಾಂಸ್ಕೃತಿಕ ಪಲ್ಲಟಗಳ ಸೂಕ್ಷ್ಮಗಳನ್ನು ಹಿಡಿದಿಡಲು ಸಾದ್ಯವಾಗಿದೆ. ತರೀಕೆರೆ ಅವರ ‘ಕರ್ನಾಟಕದ ಸೂಫಿಗಳು’ ಮತ್ತು ‘ಕರ್ನಾಟಕದ ನಾಥಪಂಥ’ ದಂತಹ ಕೃತಿಗಳು ಕರ್ನಾಟಕವನ್ನು ಬೇರೆ ಬೇರೆ ದಿಕ್ಕಿನಿಂದ ನೋಡಲು ಒತ್ತಾಯಿಸುವಂತಹ ತುಂಬಾ ಸೂಕ್ಷ್ಮ ಅಧ್ಯಯನಗಳು.
ಈಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನವಾಗಿರುವ ‘ಕತ್ತಿಯಂಚಿನ ದಾರಿ’ ಕನ್ನಡದ ವಿಮರ್ಶೆ ಮತ್ತು ಕನ್ನಡ ಪ್ರಜ್ಞೆಯು ಮೈಪಡೆದ ಹಲವು ದಾರಿಗಳನ್ನು ಅದರೆಲ್ಲಾ ಸೂಕ್ಷ್ಮಗಳೊಂದಿಗೆ ವಿಶ್ಲೇಷಣೆಗೆ ಒಡ್ಡುತ್ತದೆ. ಇಲ್ಲಿ ಸಾಂಸ್ಕೃತಿಕ ವಿಮರ್ಶೆಯೊಂದು ರೂಪುಗೊಳ್ಳುತ್ತಿರುವ ಗಟ್ಟಿ ನೆಲೆಗಳು ಗೋಚರಿಸುತ್ತಿವೆ. ಅದು ಅವರ ‘ಧರ್ಮ ಪರೀಕ್ಷೆ’ ಮತ್ತು ಇತ್ತೀಚಿನ ಅವರ ಕೃತಿ ‘ಚಿಂತನೆಯ ಪಾಡು’ ಗಳಲ್ಲಿ ಇನ್ನಷ್ಟು ಸ್ಪಷ್ಟತೆಯನ್ನು ಮತ್ತು ಪಕ್ವತೆಯನ್ನೂ ಕಂಡಿದೆ. ಈ ಪ್ರಶಸ್ತಿಯನ್ನು ಸಂಸ್ಕೃತಿ ಚಿಂತನೆ ಸಂದ ಗೌರವ ಎಂದು ಭಾವಿಸಬಹುದು. ಹಾಗೆಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಗೌರವ ಹೆಚ್ಚಿದಂತಾಗಿದೆ. ಈ ಹೊತ್ತಲ್ಲಿ ಕನ್ನಡದ ಮನಸ್ಸುಗಳು ತರೀಕೆರೆ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸೋಣ.
ಗುರುವಾರ, ಡಿಸೆಂಬರ್ 9, 2010
ಮೊಹರಂ ಹಬ್ಬದ ಅಲೆಕುಣಿಗೆ ಗುದ್ದಲಿ ಬಿದ್ದಿದೆ..ಮಕ್ಕಳಾಟ ಶುರುವಾಗಿದೆ
ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಮೊಹರಂ ಹಬ್ಬ ತುಂಬಾ ವಿಜೃಂಬಣೆಯಿಂದ ಜರುಗುತ್ತದೆ. ಇಡೀ ಊರವರು ಜಾತಿ ಧರ್ಮ ಮರೆತು ಎಲ್ಲರೊಳಗೊಂದಾಗಿ ಬೆರೆಯುತ್ತಾರೆ. ಸಾಮಾಜಿಕವಾಗಿ ಜನರು ತಮ್ಮ ಜಾತಿ ಧರ್ಮ ಮರೆತು ಒಂದು ಹಬ್ಬದಲ್ಲಿ ಭಾಗಿಯಾಗುವ ಕೆಲವೇ ಕೆಲವು ಆಚರಣೆಗಳಲ್ಲಿ ಮೊಹರಂ ಕೂಡ ಒಂದು. ಮಕ್ಕಳು ಜಾನಪದದಲ್ಲಿ ಹೇಗೆ ಭಾಗಿಗಳಾಗುತ್ತಾರೆ, ಜನಪದದ ಹೊಸ ತಲೆಮಾರು ಮಕ್ಕಳ ಆಟಗಳ ಮೂಲಕ ಹೇಗೆ ಸೃಷ್ಟಿಯಾಗುತ್ತದೆ ಎನ್ನುವುದಕ್ಕೆ ಮೊಹರಂ ನ ಅಲೆಕುಣಿಯೇ ಸಾಕ್ಷಿ. ಅಂತಹ ಒಂದು ವೀಡಿಯೋ ಕ್ಲಿಪಿಂಗ್ ಇಲ್ಲಿ ಕೊಡಲಾಗಿದೆ. ಇದರ ಬಗ್ಗೆ ಇನ್ನಷ್ಟು ವಿಸ್ತಾರವಾದ ಬರಹವನ್ನು ಈ ಸಲದ ಮೊಹರಂ ನಲ್ಲಿ ಭಾಗವಹಿಸಿ ಆ ಅನುಭವವನ್ನು ದಾಖಲಿಸುತ್ತೇನೆ.
ಮಂಗಳವಾರ, ಡಿಸೆಂಬರ್ 7, 2010
ಹಗಲು ವೇಷಗಾರರು: ಕಲೆ, ಬದುಕು ಮತ್ತು ವಾಸ್ತವ
ಕುತೂಹಲಕ್ಕೆ ಹಗಲುವೇಷಗಾರರು ಎನ್ನುವ ಪದವನ್ನು ಕೊಟ್ಟು ಗೂಗಲ್ನಲ್ಲಿ ಹುಡುಕಲು ಹೇಳಿದೆ. ಅಲ್ಲಿ ಬಂದ ನಾಲ್ಕೈದು ಪುಟಗಳ ಬಹುಪಾಲು ದಾಖಲುಗಳಲ್ಲಿ ರಾಜಕಾರಣಿಗಳನ್ನು ಹಗಲುವೇಷಗಾರರು ಎಂದು ಟೀಕಿಸಿದ ಉಲ್ಲೇಖಗಳೇ ಹೆಚ್ಚಾಗಿದ್ದವು. ಉಳಿದಂತೆ ಒಂದೆರಡು ಉಲ್ಲೇಖಗಳು ವೃತ್ತಿ ಕಲಾವಿದರಾದ ಹಗಲುವೇಷಗಾರರ ಬಗ್ಗೆ ಇದ್ದವು. ಇದು ಬಹುಶಃ ಹಗಲುವೇಷಗಾರರ ಸದ್ಯದ ಸ್ಥಿತಿಯನ್ನು ವಿವರಿಸಲು ಒಳ್ಳೆಯ ರೂಪಕ ಎಂದು ಭಾವಿಸುವೆ. ಕಾರಣ ಇಂದು ಜನಪದ ಕಲಾವಿದರಾದ ಹಗಲುವೇಷಗಾರರನ್ನು ಮೀರಿಸುವಂತಹ ಹಗಲುವೇಷಗಳ ಮುಖವಾಡಗಳನ್ನು ರಾಜಕಾರಣಿಗಳು, ಅಧಿಕಾರಿಗಳು ಹಾಕಿ ಸಾಮಾನ್ಯ ಜನರನ್ನು ಮರುಳುಗೊಳಿಸುತ್ತಿದ್ದಾರೆ, ಹಗಲು ದರೋಡೆ ಮಾಡುತ್ತಿದ್ದಾರೆ. ಹಾಗಾಗಿ ಹಗಲುವೇಷ ಎನ್ನುವ ಪದವೇ ನಕಾರಾತ್ಮಕ ಅರ್ಥವನ್ನು ಪಡೆದುಕೊಂಡುಬಿಟ್ಟಿದೆ. ಆದರೆ ನಿಜಕ್ಕೂ ಹಗಲುವೇಷವನ್ನು ವೃತ್ತಿಯನ್ನಾಗಿಸಿಕೊಂಡ ಒಂದು ಜನಸಮುದಾಯದ ಗುಂಪೇ ಕರ್ನಾಟಕದಲ್ಲಿದೆ. ಆದರೆ ಇವರ ವೇಷ ಮೋಸಗೊಳಿಸಲಿಕ್ಕಲ್ಲ, ಬದಲಾಗಿ ಜನರನ್ನು ರಂಜಿಸಿಲು ಮತ್ತು ಸಾಂಸ್ಕೃತಿಕ ಪರಂಪರೆಯ ಕುರುಹುಗಳನ್ನು ಕಾಪಾಡಲು. ಹಾಗಾಗಿ ನಾಟಕ ಕಲೆಯನ್ನು ಮನೆ ಮುಂದೆ ಕೊಂಡೊಯ್ದಿರುವುದು ಈ ಅಲೆಮಾರಿ ಸಮುದಾಯದ ಹೆಗ್ಗಳಿಕೆ.
ಈ ಸಮುದಾಯ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ನಾಣ್ಯಾಪುರ, ಹೊಸಪೇಟೆ ತಾಲೂಕಿನ ರಾಮಸಾಗರ, ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುದರಮೋತಿ, ವಟಪರವಿ ಮುಂತಾದ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಮೂಲತಃ ಅಲೆಮಾರಿ ಸಮುದಾಯ. ಇವರ ಒಂದೊಂದು ಕುಟುಂಬಗಳು ಇಂತಿಷ್ಟು ಹಳ್ಳಿಗಳನ್ನು ಹಂಚಿಕೊಂಡಿರುತ್ತಾರೆ. ಆ ಹಳ್ಳಿಗಳಲ್ಲಿ ಏಳು ದಿನಗಳ ಕಾಲ ಬೇರೆ ಬೇರೆ ವೇಷ ಧರಿಸಿ, ಕೊನೆಯ ದಿನ ಇಂತಿಷ್ಟು ಎಂದು ವಂತಿಗೆಯನ್ನು ಧಾನ್ಯ, ಹಣ, ಬಟ್ಟೆ, ಜಾನುವಾರುಗಳ ರೂಪದಲ್ಲಿ ಪಡೆಯುತ್ತಾರೆ. ಇವರ ವೇಷಗಾರಿಕೆ ಮುಖ್ಯವಾಗಿ ರಾಮಾಯಣ, ಮಹಾಭಾರತದ ಉಪಕಥೆಗಳನ್ನು ಆಧರಿಸಿರುತ್ತವೆ. ಈ ಕಥನದ ನಿರೂಪಣೆಗಳಲ್ಲಿ ಇವರದೇ ಆದ ಸ್ಥಳೀಯ ಪಠ್ಯಗಳು ಸೇರಿರುತ್ತವೆ. ಇದು ರಾಮಾಯಣ, ಮಹಾಭಾರತದ ಅಧ್ಯಯನಕಾರರಿಗೆ ಒಂದು ಹೂಸ ಆಯಾಮವನ್ನು ಒದಗಿಸಬಲ್ಲದು. ಆಧುನಿಕ ಸಿನಿಮಾದ ಹಾಡುಗಳನ್ನು ಅವರದೇ ದಾಟಿಯಲ್ಲಿ ಹಾಡುತ್ತಾ ಈ ಕಾಲದವರೂ ಆಗುತ್ತಾರೆ. ಇವರು ವಾರದ ಕೊನೆಯ ದಿನ ವಂತಿಗೆಯನ್ನು ಎತ್ತುವಾಗ ಇಡೀ ಊರಿನ ಪ್ರತಿ ಮನೆಯವರಿಗೂ ‘ಗೌಡ್ರೆ ನಿಮ್ಮಾವ ನಾಲ್ಕು ಮನೆ ಕೈ ಎತ್ತಿ ಕೋಡೋ ಮನೆತನಗಳು..ನೀವಾ ಇಂಗಂದ್ರ ಹ್ಯಾಂಗ..’ಎನ್ನುತ್ತಿದ್ದರು. ಇದು ಊರಲ್ಲಿ ಗೌಡರ ಮನೆತನಕ್ಕೆ ಮಾತ್ರ ಸಲ್ಲುವ ಗೌರವ ನಮಗೂ ಸಲ್ಲಿತೆಂದು ಹಲವರು ತಮ್ಮ ತಮ್ಮ ಕೀಳಿರಿಮೆಯನ್ನು ಬಿಟ್ಟು ಬದುಕಿಗೆ ಹೊಸ ಉತ್ಸಾಹವನ್ನು ಪಡೆಯುತ್ತಿದ್ದರು. ಹೀಗೆ ಹಗಲುವೇಷಗಾರರ ಬದುಕು ಮತ್ತು ಕಲೆ ಈಗಲೂ ಚೂರೂ ಬದಲಾವಣೆ ಇಲ್ಲದೆ ಮುಂದುವರಿಯುತ್ತಿದೆ.
ಇವರು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುದರಮೋತಿ ಎನ್ನುವ ಗ್ರಾಮದಲ್ಲಿ ಎರಡು ವರ್ಷಕ್ಕೊಮ್ಮೆ ಮೊಹರಂ ಹಬ್ಬಕ್ಕೆ ಇಡೀ ಕರ್ನಾಟಕದ ಹಗಲುವೇಷಗಾರರು ಒಂದೆಡೆ ಸೇರುತ್ತಾರೆ. ಇಲ್ಲಿಯೇ ಅವರ ನ್ಯಾಯಪಂಚಾಯ್ತಿ, ವಧು ವರರ ಅನ್ವೇಷಣೆ, ಮದುವೆ, ಮುಂತಾದ ಆಚರಣೆಗಳು ನಡೆಯುತ್ತವೆ. ಅವರ ವೇಷಗಾರಿಕೆಗೆ ಬೇಕಾಗುವ ಬಣ್ಣ, ಸಂಗೀತದ ಪರಿಕರಗಳನ್ನೂ ಕೊಳ್ಳಲಾಗುತ್ತದೆ. ಈ ವರ್ಷ ಅಂದರೆ ಇದೇ ತಿಂಗಳ ಮೊಹರಂ ಕಡೇ ದಿನ ಡಿಸೆಂಬರ್ ೧೭ ರಂದು ಕುದರಮೋತಿಗೆ ಬೇಟಿ ನೀಡಿದರೆ ಇಡೀ ಕರ್ನಾಟಕದ ಹಗಲುವೇಷಗಾರರನ್ನು ಒಂದೆಡೆ ನೋಡಬಹುದಾಗಿದೆ.
ಹಗಲುವೇಷಗಾರರು ಮೂಲತಃ ಅಲೆಮಾರಿ ಸಮುದಾಯ. ಇವರು ಒಂದೆಡೆ ನೆಲೆನಿಲ್ಲುವುದಿಲ್ಲ. ಈ ಕಾರಣವೇ ಬಹುತೇಕ ಹಗಲುವೇಷಗಾರರ ಹೊಸ ತಲೆಮಾರು ಶಿಕ್ಷಣಕ್ಕೆ ತೆರೆದುಕೊಳ್ಳುವುದಕ್ಕೆ ಕಡಿವಾಣ ಹಾಕಿದೆ. ಕರ್ನಾಟಕದಲ್ಲಿ ವೃತ್ತಿಕಲೆಯನ್ನು ಉಳಿಸಿಕೊಂಡು ಬರುತ್ತಿರುವವರಲ್ಲಿ ಇವರು ಪ್ರಮುಖರು. ಜನಪದ ಕಲೆಗಳು ನಶಿಸುತ್ತಿವೆ ಎಂದು ಹಲಬುವ ಜನಪದ ವಿದ್ವಾಂಸರಿಗೆ ಈ ಸಮುದಾಯ ಹೆಚ್ಚು ಸಂತೋಷವನ್ನು ಕೊಡಬಲ್ಲದು. ಆದರೆ ಈ ಸಮುದಾಯ ಶಿಕ್ಷಣಕ್ಕೆ ತೆರೆದುಕೊಂಡು ಆಧುನಿಕವಾಗಬೇಕೆಂಬ ಅಭಿವೃದ್ಧಿಪರ ಆಲೋಚನೆ ಮಾಡಿದಾಗ ಇದರ ಹಿಂದುಳಿಯುವಿಕೆಯ ಬಗ್ಗೆ ಆತಂಕವಾಗುತ್ತದೆ. ಯಾಕೆ ಹೀಗಾಗುತ್ತಿದೆ. ಇದು ಕೇವಲ ಹಗಲುವೇಷಗಾರರ ಸಮಸ್ಯೆಯಲ್ಲ, ಬಹುಪಾಲು ಅಲೆಮಾರಿ ಸಮುದಾಯಗಳ ಸಮಸ್ಯೆಯಾಗಿದೆ. ಈ ಎಲ್ಲಾ ಅಲೆಮಾರಿ ಸಮುದಾಯಗಳಿಗೆ ಅವರದೇ ನೆಲೆಯಲ್ಲಿ ಜಾಗ್ರತಗೊಳಿಸುವ ಅಗತ್ಯವಿದೆ. ಅವರ ಮಕ್ಕಳಾದರೂ ಶಿಕ್ಷಣಕ್ಕೆ ತೆರೆದುಕೊಳ್ಳುವಂತಹ ವಾತಾವರಣವನ್ನು ಸೃಷ್ಠಿಸಬೇಕಿದೆ. ಅಲೆಮಾರಿ ಸಮುದಾಯಗಳ ಅಭಿವೃದ್ಧಿಯ ಹೆಸರಲ್ಲಿ ಸರಕಾರದ ಹಣ ಅವ್ಯಯವಾಗುವುದೇನೂ ತಪ್ಪಿಲ್ಲ, ಆದರೆ ಅದು ಎಲ್ಲಿ ವ್ಯಯವಾಗುತ್ತಿದೆ? ಅದರ ಲಾಭಗಳನ್ನು ಪಡೆದುಕೊಂಡವರಾರು? ಇಂತಹ ಪ್ರಶ್ನೆಗಳನ್ನು ಕೇಳಿಕೊಂಡರೆ ಸಿಗುವ ಉತ್ತರ ಬ್ರಷ್ಟ ಸರಕಾರದತ್ತ ಕೈತೋರಿಸುತ್ತದೆ. ಇಂತಹ ಯೋಜನೆಗಳ ಹಣವನ್ನು ನಿಜವಾಗಿ ತಲುಪಬೇಕಾದವರಿಗೆ ತಲುಪಿಸುವಂತಹ ಕರ್ತವ್ಯ ಕೂಡ ಜಾನಪದ ವಿದ್ವಾಂಸರ ಜವಾಬ್ದಾರಿ ಎಂದು ಅರಿಯಬೇಕಿದೆ.
ಈ ಹೊತ್ತು ಜನಪದ ಅಧ್ಯಯನಕಾರರು ಕೇವಲ ಜನಪದ ಕಲೆಯನ್ನು ಕಲೆ ಎನ್ನುವ ಚೌಕಟ್ಟಿನಲ್ಲಿ ಅಭ್ಯಸಿಸಬೇಕಿಲ್ಲ. ಬದಲಾಗಿ ಜನಪದ ಕಲಾವಿದರ ಬದುಕಿನ ನೆಲೆಯಲ್ಲಿ, ಮತ್ತವರು ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡು ಬದಲಾಗಬೇಕಾದ ಆಶಯಗಳಲ್ಲಿ ಅಧ್ಯನಗಳ ತಾತ್ವಿಕತೆಯನ್ನು ಬದಲಾಯಿಸಿಕೊಳ್ಳಬೇಕಿದೆ.
-ಡಾ. ಅರುಣ್ ಜೋಳದಕೂಡ್ಲಿಗಿ
ಗುರುವಾರ, ಡಿಸೆಂಬರ್ 2, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
-
- ಡಾ. ಎಚ್.ಜೆ. ಲಕ್ಕಪ್ಪಗೌಡ ನಾಡು-ಮೊದಲ ನೋಟ ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬ...
-
ಎ ಸಿಂಹದಂಥಾ ಸಂಗೊಳ್ಳಿ ರಾಯಾ ಭೂಮಿಗಿ ಬಿದ್ದಂಗ ಸೂರ್ಯನ ಛಾಯಾ ನೆತ್ತರ ಕಾವಲಿ ಹರಿಸಿದಾನೊ ಕಿತ್ತೂರ ನಾಡಾಗ ಭಾಳ ಬಂಟಸ್ತಾನ ಪದವಿ ಇತ್ತ ಅವನ ಹೊಟ್ಟೆಯೊಳಗ ಸೃ...
-
ಶಿಕ್ಷಣ! ಸಂಘಟನೆ!! ಹೋರಾಟ!!! ಎಂದು ಡಾ.ಅಂಬೇಡ್ಕರರು ಹೇಳಿದ್ದಾರೆಯೇ ??? -ಡಾ.ಶಿವಕುಮಾರ್ ಇಂದು ಬಹುತೇಕ ದಲಿತರು ತಾವು ಮಾಡುವ ಕಾರ್ಯಕ್ರಮಗಳಲ್ಲಿ ಶಿಕ್ಷಣ...