ಮಂಗಳವಾರ, ಮೇ 31, 2016

ಕನ್ನಡತ್ವದ ಸಾಮಾಜಿಕ ವಾಸ್ತವ

-ಮೊಗಳ್ಳಿ ಗಣೇಶ್

ಒಂದು ಭಾಷೆ ಎಂದರೆ ಹಲವು ಸಮುದಾಯಗಳ ಸಂಯುಕ್ತ ಅಭಿವ್ಯಕ್ತಿ. ಒಂದು ನಾಡಿನ ಅಖಂಡತೆಯನ್ನು ಭಾಷೆಯು ಪ್ರತಿನಿಧಿಸುತ್ತದೆ. ಯಾವುದೇ ನಾಗರೀಕತೆ ನಾಡು ನುಡಿ ನಿರ್ಧಾರವಾಗುವುದು ಭಾಷೆಯ ಬೇರುಗಳಿಂದಲೇ. ಸಮಾಜ ಮತ್ತು ಸಂಸ್ಕೃತಿಗಳು ಕೂಡ ಭಾಷೆಯ ಅವಿನಾಭಾವ ಸಂಬಂಧಗಳಿಂದ ಬೆಳೆದು ಬಂದಿರುತ್ತವೆ. ಸಮುದಾಯದ ವಿಕಾಸದಲ್ಲಿ ಭವಿಷ್ಯದಲ್ಲಿ ಭಾಷೆಗಿರುವ ಸ್ಥಾನ ಅನನ್ಯವಾದುದು. ಸಮಾಜದ ವರ್ತಮಾನ ಹಾಗೂ ಗತಕಾಲಗಳು ಭಾಷೆಯಲ್ಲಿಯೇ ಇರುತ್ತವೆ. ಸಮಕಾಲೀನ ಪಲ್ಲಟಗಳೆಲ್ಲವಕ್ಕೂ ಆ ನಾಡು ನುಡಿಯ ಇತಿಹಾಸದ ಸಂಬಂಧ ಇರುವಂತೆಯೆ ಸಮಕಾಲೀನ ಸಮಾಜದ ಒತ್ತಡಗಳೂ ಅಪೇಕ್ಷೆಗಳು ಬೆರೆತಿರುತ್ತವೆ. ಭಾಷೆಯ ಅಳಿವು ಉಳಿವು ಇದರಿಂದಲೇ ನಿರ್ಣಾಯಕವಾಗುವುದು. ಭಾಷೆಯು ಬೆಳೆದಂತೆಲ್ಲ ಆ ನಾಡಿನ ಅಭಿವೃದ್ಧಿಯೂ ಸಾಗತೊಡಗುತ್ತದೆ. ಭಾಷೆಯು ಸಮುದಾಯದ ಅಸ್ತಿತ್ವ. ಅದರ ಗತಿಶೀಲತೆಯು ಕುಂಠಿತವಾದಂತೆಲ್ಲ ನಾಡಿನ ಸಾಮಾಜಿಕ ರಚನೆಯೂ ತನ್ನ ಸಹಜ ಭಾಷಿಕ ಗುಣವನ್ನು ಕಳೆದುಕೊಂಡು ಪರಾವಲಂಬಿ ಭಾಷಿಕ ಸಮಾಜವಾಗಿ ಹಿಂದುಳಿಯಬೇಕಾಗುತ್ತದೆ. ಒಂದು ನಾಡಿನ ಆಲೋಚನೆಗೂ ಅದರ ಭಾಷೆಯ ವಿಕಾಸಕ್ಕೂ ಅಲ್ಲಿನ ಸಾಮಾಜಿಕ ರಚನೆಗೂ ವಾಸ್ತವ ಸ್ಥಿತಿಗೂ ಸಾವಯವ ಸಂಬಂಧಗಳಿರುತ್ತವೆ. ಭಾಷೆಯು ಸ್ವತಃ ಸಮಾಜಕ್ಕೆ ವ್ಯಕ್ತಿತ್ವವನ್ನು ರೂಪಿಸಿರುತ್ತದೆ. ಭಾಷೆಗೆ ತಕ್ಕಂತೆ ಸಮಾಜ ಇರುವ ಕಾರಣದಿಂದಲೇ ಕನ್ನಡಿಗರಿಗೂ ಅದರಂತದೇ ವ್ಯಕ್ತಿತ್ವ ಕಾಣುವುದು. ಹೀಗಿರುವಲ್ಲಿ ಆ ಭಾಷೆಯ ನಾಡಿಗೂ ಅಂತದೇ ವ್ಯಕ್ತಿತ್ವ ಬಂದಿರುತ್ತದೆ.

ಇದು ಕನ್ನಡ, ಕನ್ನಡಿಗ, ಕರ್ನಾಟಕ ಅಖಂಡತೆಯನ್ನು ವ್ಯಕ್ತಪಡಿಸುವ ಭಾಷೆಯ ಸಾವಯವ ಸಂಬಂಧ. ಭಾಷೆಯ ಮೂಲಕವೇ ನಮ್ಮ ನಮ್ಮ ನಡತೆಗಳನ್ನು ಅಳೆಯುವುದಿದೆ. ಮನುಷ್ಯ ವಿಕಾಸ ಪಥದಲ್ಲಿ ಯಾವ ಬಗೆಯ ಆಹಾರವನ್ನು ರೂಢಿಸಿಕೊಂಡನೊ ಅದರಂತೆಯೇ ಅವನ ವಿಕಾಸ ಸಾಧ್ಯವಾಯಿತು. ಹಾಗೆಯೇ ಆತ ರೂಪಿಸಿಕೊಂಡ ಭಾಷಿಕ ನಡತೆಯಿಂದಲೇ ಆಯಾ ಭಾಷಿಕರ ಆಲೋಚನೆಯು ವ್ಯಕ್ತಿತ್ವವೂ ಅಸ್ತಿತ್ವವೂ ವಿಕಾಸವಾದದ್ದು. ಇದು ಭಾಷೆಯ ಜೈವಿಕತೆ ಹೇಗೋ ಹಾಗೆಯೇ ಮನುಷ್ಯನ ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ ಕಾಣ್ಕೆಯೂ ಆಗಿದ್ದು, ವರ್ತಮಾನದ ಸಮಾಜವು ಕೂಡ ಆ ಬಗೆಯ ಚಾರಿತ್ರಿಕ ನೆಲೆಗಳಿಂದ ನಿರ್ಧಾರಿತವಾಗುತ್ತಿರುತ್ತದೆ. ಈ ಬಗೆಯ ಸಂಬಂಧದಿಂದಲೇ ನಾಡಿನ ಉದಯವಾಗುವುದು. ತನಗೇ ವಿಶಿಷ್ಟವಾಗುವ ನಾಡನ್ನು ಕಟ್ಟಿಕೊಳ್ಳುವ ಸ್ವಭಾವವು ಮೂಲತಃ ಕುಟುಂಬ ಸ್ವಭಾವದ್ದು. ಆಮೇಲೆ ಈ ಕುಟುಂಬ ವ್ಯಾಪ್ತಿಯು ಸಮುದಾಯದ ಗಾತ್ರಕ್ಕೆ ವಿಸ್ತರಿಸಿ ಅಂತಿಮವಾಗಿ ನಾಡಾಗಿ ಪರಿವರ್ತನೆಗೊಳ್ಳುವುದು. ಈ ಪ್ರಕ್ರಿಯೆಯು ಅವರವರ ಭಾಷೆಯ ಮೂಲಕವೇ ಸಾಮಾಜಿಕವಾಗಿ ವ್ಯಾಪಿಸುತ್ತದೆ ಎಂಬುದು ಗಮನಾರ್ಹ. ಇಂತಹ ಸಂಗತಿಗಳನ್ನು ತಾತ್ವಿಕವಾಗಿ ಸಂರಚಿಸಿಕೊಳ್ಳುವುದು ಕೂಡ ಮುಖ್ಯ. ಭಾಷೆಯ ಉಗಮ ವಿಕಾಸ ಎಂದರೆ ಮನುಷ್ಯ ಉಗಮ ವಿಕಾಸವೇ ಆಗಿರುತ್ತದೆ. ಆದರೆ ಇಂತಹ ಮನುಷ್ಯರ ವಿಕಾಸ ಪ್ರಕ್ರಿಯೆಯು ಅನಿವಾರ್ಯವಾಗಿ ವಿಭಿನ್ನ ಪ್ರಾದೇಶಿಕ ಪ್ರಭೇದಗಳ ಹಾಗೆ ಅನನ್ಯತೆಯನ್ನು ಸಾಧಿಸಿಕೊಂಡೇ ಸಾಗುವುದು ನಿಸರ್ಗ ನಿರ್ಮಿತ ಸಾಮಾಜಿಕ ಪರಿಸರದ ವಿಶಿಷ್ಠ ಒತ್ತಡವಾಗಿದೆ.

ಈ ಕಾರಣದಿಂದಲೇ ಮಾತೃ ಭಾಷೆಯ ಪ್ರಜ್ಞೆ ಬೆಳೆದುಬಂದು ಸ್ಥಳೀಯ ಸ್ವಭಾವಗಳು ಆ ಭಾಷೆಯಲ್ಲಿ ಆಕಾರಗೊಂಡಿರುವುದು. ಮಾನವ ನಿರ್ಮಿತ ಪರಿಸರವು ಕೂಡ ಭಾಷೆಯ ಪ್ರತಿಬಿಂಬ. ಹೀಗೆ ಒಂದು ನಾಡಿನ ನಿರ್ಮಾಣದಲ್ಲಿ ಭಾಷೆಯ ಪಾತ್ರ ನಿರಂತರವಾಗಿರುತ್ತದೆ. ಅದು ಯಾವ ಸ್ವರೂಪದಲ್ಲಿ ಬೆಳೆಯುತ್ತಾ ಹೋಗುವುದೊ ಅದರಂತೆಯೇ ನಾಡಿನ ನಡಿಗೆಯೂ ಇರುತ್ತದೆ. ಕನ್ನಡ ನಾಡಿನ ಬುನಾದಿಯಲ್ಲಿ ಭಾಷೆಯು ಬೇರುಬಿಟ್ಟಿದೆ. ಈ ಭಾಷೆಯ ವಿಶಾಲ ಬಯಲಿನಲ್ಲಿ ಅನೇಕ ಸಮುದಾಯಗಳು ತಮ್ಮ ಚಹರೆಗಳನ್ನು ರೂಪಿಸಿಕೊಂಡಿವೆ. ಒಂದೊಂದು ಭಾಷಿಕ ಸಮುದಾಯವೂ ತನ್ನೊಳಗೇ ಹಲವಾರು ರೆಂಬೆಕೊಂಬೆಗಳನ್ನು ಸಾಧಿಸಿಕೊಳ್ಳುವ ಮುಲಕ ಅಖಂಡವಾದ ಭಾಷಿಕ ಸಂವಹನ ಮತ್ತು ಸಂಬಂಧಗಳನ್ನು ರೂಢಿಸಿಕೊಂಡಿರುತ್ತವೆ. ಕನ್ನಡ ನಾಡಿನ ಚರಿತ್ರೆಯು ಇಂತಹ ನೆಲೆಗಳಿಂದಲೂ ಬೆಳೆದಿದೆ. ಏಕೀಕರಣ ಚಳುವಳಿಯಲ್ಲಿ ಪ್ರತಿಧ್ವನಿಸಲ್ಪಟ್ಟ ಎಲ್ಲ ಅಭಿವ್ಯಕ್ತಿಗಳಲ್ಲೂ ಈ ಬಗೆಯ ಸಂಬಂಧಗಳಿವೆ. ಕರ್ನಾಟಕವು ಏಕೀಕರಣಗೊಂಡು ಅರ್ಧಶತಮಾನ ತುಂಬುತ್ತಿರುವ ಸಂದರ್ಭದಲ್ಲಿ ಭಾಷೆಯ ವಿಷಯವು ಬೇರೆ ಬೇರೆ ಸ್ವರೂಪ ಧರಿಸಿ ರಾಜಕೀಯವಾದ ಆಯಾಮ ಪಡೆದುಕೊಂಡಿದೆ.

ಭಾಷೆ ಎಂದರೆ ಮನುಷ್ಯ ಎಂತಲೂ ಭಾವಿಸಬಹುದು. ಆದರೆ ಈ ಅರ್ಥವೀಗ ಭಾಷೆ ಎಂದರೆ ರಾಜಕೀಯ ಎಂಬಂತೆಯೂ ಆಗುತ್ತಿದ್ದು ಮನುಷ್ಯನು ರಾಜಕೀಯ ಜೀವಿಯಾಗಿ ಪರಿಗಣಿಸಲ್ಪಡುತ್ತಿದ್ದಾನೆ. ಪ್ರಭುತ್ವದ ನಿರ್ಣಾಯಕ ತೀರ್ಮಾನಗಳಲ್ಲೆಲ್ಲ ಭಾಷೆಯ ಪ್ರಶ್ನೆಯು ಜಟಿಲವಾಗುತ್ತಲೇ ಬರುತ್ತಿದೆ. ಇಪ್ಪತ್ತೊಂದನೇ ಶತಮಾನದಲ್ಲಿ ಭಾಷೆಗಳಿರುವ ಅಪಾಯಗಳಲ್ಲಿ ಭಾಷೆಯ ಮೇಲಿನ ರಾಜಕೀಯ ಒಂದು. ಏಕೀಕರಣೋತ್ತರ ಕನ್ನಡ ನಾಡಿನಲ್ಲಿ ಭಾಷೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ನಡೆದುಕೊಳ್ಳುತ್ತಿರುವ ರೀತಿಯು ಅಧಿಕಾರದಾಹದ ರಾಜಕೀಯ ನೆಲೆಯದೇ ಹೊರತು ಭಾಷೆ ಎಂದರೆ ಒಂದು ಸಮುದಾಯ ಒಂದು ನಾಡು ಒಂದು ಅಖಂಡ ಮಾನವ ಸಂಬಂಧ ಎಂಬ ಬಗೆಯದಾಗಿಲ್ಲ. ಯಾವ ರಾಜಕೀಯ ಪ್ರಭುತ್ವ ತನ್ನ ನಾಡಿನ ಭಾಷೆಯನ್ನು ಕಾಯಲಾರದೊ ಅದು ಸ್ವತಃ ತನ್ನನ್ನು ತಾನು ರಕ್ಷಿಸಿಕೊಳ್ಳಲಾರದು. ಏಕೀಕರಣೋತ್ತರ ಕನ್ನಡ ಕನ್ನಡಿಗ ಕರ್ನಾಟಕದ ಸ್ಥಿತಿಯನ್ನು ಚಾರಿತ್ರಿಕವಾಗಿ ಈಗಿಲ್ಲಿ ವಿಶ್ಲೇಷಿಸೋಣ.

ಯಾವುದೇ ನಾಡಿನ ಅರ್ಧ ಶತಮಾನವು ಚರಿತ್ರೆಯ ದೃಷ್ಟಿಯಲ್ಲಿ ಸಾಕಷ್ಟು ದೀರ್ಘವಾದದ್ದೇ ಆಗಿದೆ. ಕರ್ನಾಟಕವನ್ನು ಮುನ್ನಡೆಸಿದ ಸಾಮ್ರಾಜ್ಯಗಳು ತಮ್ಮ ಅವಧಿಗಳಲ್ಲಿ ನಾಡು ನುಡಿಯ ಕಾಯಕವನ್ನು ಆ ಕಾಲದಲ್ಲಿದ್ದ ಮೌಲ್ಯಗಳಿಗೆ ಪೂರಕವಾಗಿ ನಿರ್ವಹಿಸಿವೆ. ರಾಜಶಾಹಿಯಿಂದ ದಾಟಿದ ಕನ್ನಡ ಸಮಾಜವು ವಸಾಹತುಶಾಹಿಯಿಂದ ಮುಕ್ತಿ ಪಡೆದು ಮತ್ತೆ ಏಕೀಕರಣಗೊಂಡು ಐವತ್ತು ವರ್ಷಗಳನ್ನು ಕಳೆದಿದೆ ಎಂದರೆ ಸಾಮಾನ್ಯ ಸಂಗತಿ ಅಲ್ಲ. ಈ ಅವಧಿಯ ಒಳಗೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಮಾಜ ಹಾಗೂ ರಾಜಕಾರಣದ ಬೆಳವಣಿಗೆಗಳು ಮುಂದಿನ ಐವತ್ತು ವರ್ಷಗಳನ್ನು ನಿರ್ಧರಿಸುವಲ್ಲಿ ಪ್ರಮಖ ಪಾತ್ರವನ್ನು ವಹಿಸಿರುತ್ತವೆ. ಹಾಗೆಯೇ ವರ್ತಮಾನ ಮತ್ತು ಭವಿಷ್ಯದ ಮೇಲೆ ಗತಿಸಿರುವ ಸಮೀಪದ ಈ ಕಾಲವು ತನ್ನ ಪ್ರಭಾವವನ್ನು ಉಳಿಸಿಕೊಂಡೇ ಇರುತ್ತದೆ. ಏಕೀಕರಣೋತ್ತರ ಕನ್ನಡ ಪ್ರಭುತ್ವವು ಇದರಿಂದಾಗಿಯೆ ಪೂರ್ಣ ಇತಿಹಾಸವೂ ಅಲ್ಲ ಹಾಗೆಯೇ ಪರಿಪೂರ್ಣ ವರ್ತಮಾನವೂ ಅಲ್ಲ. ಹಾಗೆ ನೋಡಿದರೆ ಚರಿತ್ರೆಯು ಯಾವ ಕಾಲದಲ್ಲೂ ಕೇವಲ ಗತವೇ ಆಗಿರುವುದಿಲ್ಲ. ವರ್ತಮಾನ ಮತ್ತು ಗತಕಾಲ ಎರಡೂ ಚರಿತ್ರೆಯಲ್ಲಿ ಲೀನವಾಗಿದ್ದು ಪ್ರಸ್ತುತದಲ್ಲಿ ಅಗತ್ಯಕ್ಕೆ ತಕ್ಕಂತೆ ಸಮಾಜವು ಬೆಳೆಯುತ್ತಿರುತ್ತದೆ. ಕನ್ನಡ ಪ್ರಭುತ್ವವನ್ನು ಈ ಅರ್ಥದಲ್ಲಿಯೇ ಪರಿಭಾವಿಸಬೇಕಾಗುತ್ತದೆ.

ಕನ್ನಡ ಪ್ರಭುತ್ವ ಅಖಂಡವಾದ ಭಾಷಿಕ ಪ್ರಜ್ಞೆ. ಈ ಪ್ರಜ್ಞೆಯು ಪ್ರಾರಂಭದಲ್ಲೆ ತಿಳಿಸಿದಂತೆ ಸಮುದಾಯದ ಮತ್ತು ನಾಡಿನ ಸಂವೇದನೆ. ಕನ್ನಡ ಎಂದರೆ ಕೇವಲ ಭಾಷೆಗಷ್ಟೆ ಸೀಮಿತವಾದ ಅರ್ಥವಲ್ಲ. ಕನ್ನಡ ನಾಡಿನ ಕವಿಗಳು ಕನ್ನಡ ಎಂದರೆ ಏನೆಂದು ರೂಪಕಗಳಲ್ಲಿ ಗಾಢವಾಗಿ ಭಾವನಾತ್ಮಕವಾಗಿ ತಿಳಿಸಿಕೊಟ್ಟಿದ್ದಾರೆ. ಹೋರಾಟಗಾರರಂತು ಕನ್ನಡವನ್ನು ಜೀವ ಉಸಿರು ಎಂದು ಸಾರಿದ್ದಾರೆ. ಕನ್ನಡ ಎನ್ನುವುದ ಲೌಕಿಕವನ್ನು ಮೀರಿದ್ದೆಂದು ಅನೇಕರು ಹೇಳಿದ್ದಾರೆ. ಕನ್ನಡ ಎಂದರೆ ಅದು ದೈವ ಎಂದು ಕೊಂಡಾಡುವ ಭಕ್ತರೂ ಇದ್ದಾರೆ. ಭಾಷೆಯನ್ನು ಅದರಲ್ಲೂ ಮಾತೃ ಭಾಷೆಯನ್ನು ಹುಟ್ಟಿ ಕಾರಣವೆಂತಲೂ ತಿಳಿಯುವವರಿದ್ದಾರೆ. ತನ್ನ ಅಸ್ತಿತ್ವು ಭಾಷೆಯಿಂದಲೇ ಎಂದು ನಂಬುವ ಭಾವವು ಜೈವಿಕವಾದುದು. ಈ ಬಗೆಯ ಕನ್ನಡವು ತನಗೇ ವಿಶಿಷ್ಠವಾಗುವ ಭೌಗೋಳಿಕ ನೆಲೆಯನ್ನು ಕಂಡುಕೊಂಡಿರುತ್ತದೆ. ಭಾಷೆ ಮತ್ತು ಪ್ರದೇಶಗಳನ್ನು ಪ್ರತ್ಯೇಕಿಸಲು ಬರುವುದೇ ಇಲ್ಲ. ಆದ್ದರಿಂದಲೇ ಪ್ರತಿಯೊಂದು ಭಾಷೆಯು ತನ್ನದೇ ನಾಡನ್ನು ಪಡೆದು ಅದರ ಪ್ರತೀಕವಾದ ಪ್ರಭುತ್ವವನ್ನು ಸ್ಥಾಪಿಸಿಕೊಳ್ಳುವುದು. ಗಣರಾಜ್ಯಗಳ ಹುಟ್ಟಿನ ಹಿಂದೆ ಈ ಅಂಶವು ಪ್ರಧಾನವಾಗಿತ್ತೆಂಬುದನ್ನು ಚರಿತ್ರೆಯ ಮೂಲಕ ಪರಿಭಾವಿಸಬಹುದಾಗಿದೆ.

ಭಾಷೆ ಮತ್ತು ಪ್ರಭುತ್ವಗಳೆರಡೂ ಸದಾ ಒಂದನ್ನೊಂದು ಆಕರ್ಷಿಸುವ ಸಂಘರ್ಷಿಸುವ ಮತ್ತೆ ಒಂದನ್ನೊಂದು ಆಶ್ರಯಿಸುವ ಸಂಗತಿಗಳು. ಕನ್ನಡ ಸಾಮ್ರಾಜ್ಯಗಳು ತಲೆ ಎತ್ತಿದ್ದಕ್ಕೆ ಚರಿತ್ರೆಯ ಬೇರೆ ಕಾರಣಗಳು ಎಷ್ಟು ಮುಖ್ಯವಿದ್ದವೊ ಅಷ್ಟೇ ಪ್ರಮುಖವಾಗಿ ಭಾಷೆಯೂ ಪ್ರಧಾನವಾಗಿತ್ತು. ಏಕೀಕರಣ ಹೋರಾಟವು ಕನ್ನಡ ಪ್ರಭುತ್ವವನ್ನು ಸ್ಥಾಪಿಸಿತು. ಗತಕಾಲದ ಕನ್ನಡ ವೈಭವವನ್ನು ವರ್ತಮಾನಕ್ಕೆ ತಂದುಕೊಳ್ಳುವ ಮೂಲಕ ಭಾಷೆಯನ್ನು ಪ್ರಭುತ್ವದ ರೀತಿಗೆ ಅಳವಡಿಸಲಾಯಿತು. ಚರಿತ್ರೆಯು ಹೀಗೆಯೇ ಗತದಿಂದ ವರ್ತಮಾನಕ್ಕೆ ಹಾಗೂ ವರ್ತಮಾನದಿಂದ ಗತಕ್ಕೆ ಸಲೀಸಾಗಿ ಚಲಿಸಲು ಸಾಧ್ಯವಾಗುವುದು. ಇದರಲ್ಲಿ ಗಮನಿಸಬೇಕಾದುದೇನೆಂದರೆ; ಕನ್ನಡ ಪ್ರಭುತ್ವವು ರಾಜಕೀಯ ಪ್ರಭುತ್ವವಾಗಿ ಮಾರ್ಪಟ್ಟ ರೀತಿಯು ಕುತೂಹಲಕಾರಿಯಾಗಿದೆ. ಭಾಷಾವಾರು ಪ್ರಾಂತಗಳ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸುವಾಗ ಕಾಂಗ್ರೆಸ್ ಪಕ್ಷವು ಪರೋಕ್ಷವಾಗಿ ಭಾಷೆಯನ್ನು ಪ್ರಭುತ್ವದ ರೀತಿಗೆ ತಕ್ಕಂತೆ ಅಳವಡಿಸಿದೆ. ಇದರಿಂದ ಒಳ್ಳೆಯ ಹಾಗು ಕೆಟ್ಟ ಪರಿಣಾಮಗಳೆಲ್ಲ ಒಟ್ಟಿಗೇ ಘಟಿಸುತ್ತಿವೆ. ಏಕೀಕರಣ ವಿರೋಧಿ ದನಿಯು ಸೌಮ್ಯವಾಗಿ ರಾಜಕೀಯ ಪಾತ್ರವನ್ನು ನಿರ್ವಹಿಸಿದ್ದನ್ನು ಹಳೆ ಮೈಸೂರಿನ ಪ್ರಮುಖ ಕೋಮಿನ ನಡತೆಯಲ್ಲಿ ಕಂಡುಕೊಳ್ಳಬಹುದಾಗಿದೆ. ಏಕೀಕರಣದ ಭಿನ್ನಾಭಿಪ್ರಾಯವು ಜಾತಿ ನೆಲೆಯಿಂದ ಬಂದುದನ್ನು ಅಲ್ಲಗಳೆಯಲಾಗದು. ಕನ್ನಡ ಪ್ರಭುತ್ವವು ಒಂದು ರಾಜಕೀಯ ಪ್ರಭುತ್ವವಾಗಿ ರೂಪಾಂತರಗೊಳ್ಳುತ್ತಿದ್ದ ಹೊತ್ತಿನಲ್ಲೂ ಅದರಲ್ಲಿ ಜಾತಿಯ ಅಂಶವೂ ಸೇರಿಕೊಂಡಿದ್ದನ್ನು ಗುರುತಿಟ್ಟುಕೊಳ್ಳಲೇ ಬೇಕಾಗುತ್ತದೆ. ಅಂದರೆ ರಾಜ್ಯ ಮತ್ತು ಭಾಷೆಯ ಸ್ವರೂಪಗಳಲ್ಲೂ ಜಾತಿ ವ್ಯವಸ್ಥೆ ಕೂಡ ಒಂದು ಪ್ರಮುಖ ಮಾನದಂಡ ಎಂಬುದನ್ನು ಸೂಕ್ಷ್ಮವಾಗಿ ಪರಿಗಣಿಸಬೇಕಾಗುತ್ತದೆ.

ಹೀಗಾಗಿ ಕನ್ನಡ ಕನ್ನಡಿಗ ಕರ್ನಾಟಕ ಎಂಬ ಅಖಂಡ ರೂಪಕವು ತನ್ನೊಳಗೇ ಭಿನ್ನತೆಗಳನ್ನೂ ಅಧಿಕಾರದ ಕಾರಣಕ್ಕೆ ಉಳಿಸಿಕೊಂಡಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಇದರಿಂದಲೇ ಏಕೀಕರಣೋತ್ತರ ಕರ್ನಾಟಕದ ಚರಿತ್ರೆಯನ್ನು ಸಂಕೀರ್ಣ ನೆಲೆಗಳಿಂದಲೇ ನಿರ್ವಚಿಸಬೇಕಾದ ಇಕ್ಕಟ್ಟು ಉಂಟಾಗಿರುವುದು. ಚರಿತ್ರೆಯು ಕೇವಲ ವರದಿ ಅಲ್ಲ. ಆ ಕಾಲದ ಸಾಕ್ಷಿ ಪ್ರಜ್ಞೆಯನ್ನು ನಾಡು ಮತ್ತು ಸಮಾಜದ ಜೊತೆಯಲ್ಲೆ ಪರಿಶೀಲಿಸಬೇಕಾಗುತ್ತದೆ. ಚರಿತ್ರೆಯ ವಿವರಗಳಿಗಿಂತ ಆ ವಿವರಗಳ ಘಟನೆಗಳು ಮಾಡಿದ ಪರಿಣಾಮ ಮುಖ್ಯ. ಈ ಬಗೆಯ ಪರಿಣಾಮಗಳನ್ನು ಅರಿತು ವರ್ತಮಾನಕ್ಕೆ ಬೇಕಾದ ಪರಿಹಾರಗಳನ್ನು ಸೂಚಿಸಿ ಅನ್ವಯಿಸಬೇಕಾದದ್ದು ನಾಡಿನ ಭವಿಷ್ಯದಿಂದ ಬಹಳ ಮುಖ್ಯ. ಇದು ಅನ್ವಯಿಕ ಚರಿತ್ರೆ. ಗತಕಾಲದ ಅನುಭವಗಳನ್ನು ವರ್ತಮಾನದಲ್ಲಿ ಅನ್ವಯ ಮಾಡಿದರಷ್ಟೇ ಚರಿತ್ರೆಕಾರನ ಜವಾಬ್ದಾರಿ ಮುಗಿಯುವುದಿಲ್ಲ. ತರ್ಕ ವಿಶ್ಲೇಷಣೆಯ ಮೂಲಕ ಚರಿತ್ರೆಯ ವಿಮರ್ಶೆಯನ್ನು ಮಾಡಿ ಸೂಕ್ತ ಸಾಧ್ಯತೆಗಳನ್ನು ಧ್ವನಿಸುವುದು ಅನ್ವಯಿಕ ಚರಿತ್ರೆ. ಈ ಹಿಂದೆ ಪ್ರಸ್ತಾಪಿಸಿದ ಗತಕಾಲವು ವರ್ತಮಾನಕ್ಕೆ ಸದಾ ಪ್ರವಹಿಸುತ್ತಲೇ ಇರುತ್ತದೆ ಎಂಬ ವಿಚಾರವು ಕೇವಲ ತಾತ್ವಿಕ ನಂಬಿಕೆ ಅಲ್ಲ; ಅದು ವರ್ತಮಾನದ ಅನಿವಾರ್ಯ ಆನ್ವಯಿಕ ಒಪ್ಪಂದ. ಪರಂಪರೆಯು ಇದರಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಚರಿತ್ರೆಯಲ್ಲಿ ಕನ್ನಡ ಪರಂಪರೆಗಳು ಇದರಿಂದಲೇ ನಿರ್ಣಾಯಕವಾದ ಕೊಂಡಿಗಳಾಗಿ ವರ್ತಮಾನಕ್ಕೆ ಬೇಕಾದ ಸೂಚನೆಗಳನ್ನು ನೀಡುವುದು. ಈ ಬಗೆಯ ಕಾಲಸಂಬಂಧದಲ್ಲಿ ಪರಿಣಾಮ ಮುಖ್ಯವೇ ವಿನಃ ವಿವರಗಳ ವರದಿಯ ಪ್ರಮಾಣ ಪ್ರಮುಖವಲ್ಲ. ಕನ್ನಡ ಪ್ರಭುತ್ವದ ಕನ್ನಡ ಸಮಾಜವು ರೂಪಿಸಿಕೊಳ್ಳುತ್ತ ಸವೆಸಿದ ಅರ್ಧಶತಮಾನದ ಕಾಲವು ಆತ್ಯಂತಿಕವಾದ ಕನ್ನಡತನವನ್ನೇನು ರೂಪಿಸಿಲ್ಲ. ಹಾಗಿದ್ದಾಗ್ಯೂ ಸಹ ಕನ್ನಡ ಪ್ರಭುತ್ವವು ರಾಜಕೀಯ ಪ್ರಭುತ್ವವಾಗಿ ರೂಪಾಂತರಗೊಂಡದ್ದು ಮುಖ್ಯ. ಕನ್ನಡ ಭಾಷೆಯು ಅರ್ಥಾತ್ ಕನ್ನಡ ನಾಡು ರಾಜಕೀಯ ಶಕ್ತಿಯಾಗಿ ಬೆಳೆದದ್ದು ರಾಷ್ಟ್ರೀಯತೆಗೆ ಹೆಚ್ಚಿನ ಲಾಭ ತಂದಿತೇ ಹೊರತು ಸ್ಥಳೀಯ ಸಮುದಾಯಗಳ ಹಲವು ಭಾಷಿಕ ರಚನೆಗಳಿಗೆ ದೊಡ್ಡ ಶಕ್ತಿಯನ್ನೇನು ತಂದುಕೊಡಲಿಲ್ಲ. ಅಂದರೆ ಭಾಷೆಯ ಮೂಲಕ ಕೆಲವು ಪ್ರಧಾನ ವರ್ಗ, ಜಾತಿ, ಪ್ರದೇಶಗಳು ಮೂಂದೆ ಬಂದವೆ ಹೊರತು ಕನ್ನಡ ನಾಡು ಪ್ರವರ್ಧಮಾನಕ್ಕೆ ಬರಲಿಲ್ಲ. 

  ಕನ್ನಡ ನಾಡಿನ ಒಳಗಿನ ಅಲಕ್ಷಿತ ಸಮುದಾಯಗಳ ಭಾಷೆಗಳು ಕೂಡ ಮುಖ್ಯ. ಆದಿವಾಸಿ, ಅಲೆಮಾರಿಗಳ ನೂರಾರು ಅಲಕ್ಷಿತ ಭಾಷೆಗಳು ಮಾನ್ಯವಾಗದಿದ್ದರೆ ಅಂತಹ ಸಮುದಾಯಗಳು ಕೂಡ ಲೆಕ್ಕಕ್ಕೆ ಇಲ್ಲದಂತಾಗುತ್ತವೆ. ಇನ್ನು ಅಲ್ಪ ಸಂಖ್ಯಾತ ಸಮಾಜಗಳ ಭಾಷೆಗಳು ಕೂಡ ಕನ್ನಡ ನಾಡಿನ ಅಸ್ತಿತ್ವಕ್ಕೆ ಅನಿವಾರ್ಯ. ಕನ್ನಡ ಯಜಮಾನಿಕೆಯಲ್ಲಿ ಅಂಚಿನ ಭಾಷೆಗಳು ನಾಶವಾಗಬಾರದು. ಭಾಷೆಯ ತಾರತಮ್ಯವು ಬೆಳೆಯಲು ಕನ್ನಡ ಪ್ರಭುತ್ವವು ಯಾಜಮಾನ್ಯ ಜಾತಿಗಳ ಹಿತಾಸಕ್ತಿಗಳನ್ನು ಕಾಯಲು ತೊಡಗಿದ್ದುದೇ ಕಾರಣವಾಯಿತು. ಈ ಅಭಿಪ್ರಾಯಕ್ಕೆ ತಕ್ಕ ಭೌತಿಕ ಸಾಕ್ಷಿಗಳು ದೊರೆಯದಿದ್ದರೂ ಮನಸಾಕ್ಷಿಗಳು ದೊರೆಯುತ್ತವೆ. ಏಕೀಕರಣೋತ್ತರ ಕರ್ನಾಟಕದ ರಾಜಕೀಯ ಪ್ರಭುತ್ವ ಪ್ರಜಾಪ್ರಭುತ್ವದ ಮುಖವಾಡದಲ್ಲೆ ಕನ್ನಡ ಪ್ರಧಾನ ಜಾತಿಗಳ ಹಿತಾಸಕ್ತಿಗೆ ತಕ್ಕಂತೆ ರಾಜಕಾರಣವನ್ನು ಮಾಡಿರುವುದರಿಂದ ಬಹು ಭಾಷಿಕ ಸಮಾಜಗಳ ಅಖಂಡ ಮಾನವ ಸಂಬಂಧಗಳು ಸಾಧ್ಯವಾಗಿಲ್ಲ. ಕನ್ನಡನಾಡು ಎಂದರೆ ಎಂದೇ ಭಾಷೆಯ ಸಮುದಾಯಗಳ ನೆಲೆ ಅಲ್ಲ. ಭಾಷೆಯ ಜೊತೆಯಲ್ಲೆ ಉಳಿದ ಬಹುರೂಪಿ ಸಮಾಜಗಳ ಒಪ್ಪಂದಗಳೂ ಕೂಡ ಭವಿಷ್ಯದ ಕಾರಣಕ್ಕಾಗಿ ಅನಿವಾರ್ಯ. ಈ ನೆಲೆಯಲ್ಲಿ ಸುವರ್ಣ ಕನ್ನಡ ನಾಡನ್ನು ಕಾಣಬೇಕು.

ರಾಜಕೀಯಗೊಂಡ ಇಪ್ಪತ್ತನೆ ಶತಮಾನವು ಚರಿತ್ರೆಯಲ್ಲಿ ಸಾಕ್ಷ್ಯವನ್ನು ರೂಪಿಸಿಕೊಳ್ಳುವ ಬಗೆಯು ಅಪರಾಧಗಳನ್ನು ಮುಚ್ಚಿಟ್ಟುಕೊಂಡು ತನ್ನ ಘನತೆಯನ್ನು ಸ್ಥಾಪಿಸಿಕೊಳ್ಳುವಂತದಾಗಿದೆ. ಆದ್ದರಿಂದಲೇ ಸಾಕ್ಷ್ಯದ ಪ್ರಜಾಪ್ರಭುತ್ವವಾದಿ ಗರ್ವವು ಯಾವ ಶಾಸನಗಳಿಗಿಂತಲೂ ಮಿಗಿಲಾದುದಾಗಿದೆ. ಗತಕಾಲದ ಶಾಸನಗಳನ್ನು ಧಿಕ್ಕರಿಸುವುದು ಸುಲಭವಾದರೂ ಸಂವಿಧಾನ ಬದ್ಧವೆಂದು ಮಾಡುವ ರಾಜಕೀಯ ಅನುಶಾಸನಗಳು ನಾಡನ್ನೂ ಅದರ ಭಾಷೆಯನ್ನೂ ಸಮಾಜವನ್ನೂ ಖಾಸಗಿಯಾಗಿ ತನ್ನದಾಗಿಸಿಕೊಳ್ಳುವಂತದ್ದು. ಪ್ರಭುತ್ವವು ತನಗೆ ಸಮ್ಮತವಲ್ಲದ ಯಾವುದೇ ವಿಮರ್ಶಾತ್ಮಕ ಸಾಕ್ಷ್ಯವನ್ನು ಮಾನ್ಯ ಮಾಡುವುದಿಲ್ಲ. ಬೌದ್ಧಿಕ ವಲಯ ಕೂಡ ಅನೇಕ ಸಂದರ್ಭಗಳಲ್ಲಿ ವ್ಯವಸ್ಥೆಯ ಭಾಗವಾಗುವ ಅವಕಾಶಗಳಿದ್ದಾಗ ಪ್ರತಿರೋಧ ಸಾಕ್ಷ್ಯಗಳನ್ನು ಕೈಬಿಡುತ್ತದೆ. ಏಕೀಕರಣೋತ್ತರ ಕನ್ನಡ ನಾಡಿನ ಸಮಾಜವು ಬಹುಪಾಲು ಪ್ರತಿರೋಧ ಸಾಕ್ಷ್ಯಗಳನ್ನೇ ಧ್ವನಿಸಿರುವುದರಿಂದ ಸಮುದಾಯಗಳ ಅಂತಹ ಧ್ವನಿ ಪ್ರಜ್ಞೆಯ ಪ್ರತಿರೋಧವನ್ನೆ ಚರಿತ್ರೆಯ ರಚನೆಗೆ ಅಡಿಪಾಯವಾಗಿ ತೆಗೆದುಕೊಳ್ಳಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಕನ್ನಡ ಪ್ರಭುತ್ವದ ಜನವಾದಿ ಅರ್ಥವೇ ಬೇರೆ ರಾಜಕೀಯ ಪ್ರಭುತ್ವದ ಅಧಿಕಾರವೇ ಬೇರೆ. ಕವಿರಾಜ ಮಾರ್ಗಕಾರ ಕನ್ನಡಿಗರ ಘನತೆ ಔದಾರ್ಯ ಶಕ್ತಿ ಸಾಮರ್ಥ್ಯಗಳನ್ನು ಕೊಂಡಾಡುವ ನೆನ್ನೆಯ ಚರಿತ್ರೆಯ ಸಂಭ್ರಮವೇ ಬೇರೆ; ಈ ಕಾಲದಲ್ಲಿ ಭಾಷೆಯ ಮೂಲಕ ಪ್ರಭುತ್ವವು ಮಲಿನ ರಾಜಕಾರಣವನ್ನು ಪ್ರಚುರಪಡಿಸುವುದೇ ಬೇರೆ. ಈ ವ್ಯತ್ಯಾಸಗಳು ಕೇವಲ ಸಾಹಿತ್ಯಿಕವಾದವಲ್ಲ. ನಾಡಿನ ನಡತೆಯ ವಿಪರ್ಯಾಸಕರ ಪರಿಸ್ಥಿತಿಯನ್ನು ಬಿಂಬಿಸುವ ವಾಸ್ತವವೇ ಆಗಿವೆ. ‘ನಾಡೇ ನುಡಿಯು; ನುಡಿಯೆ ನಾಡು’ ಎಂಬ ನುಡಿಯಾಗಲೀ; ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಅನ್ಯವಲ್ಲದೆ ಮಿಥ್ಯಾ’ ಎಂಬ ವಾಣಿಯಾಗಲಿ; ‘ಹೆಸರಾಯಿತು ಕನ್ನಡ; ಉಸಿರಾಗಲಿ ಕನ್ನಡ’ ಎಂಬ ಕರೆಯಾಗಲಿ; ‘ಹಚ್ಚೇವು ಕನ್ನಡದ ದೀಪ: ಎಂಬ ಹಾಡಾಗಲಿ; ‘ನಮ್ಮ ಉಸುರು, ತಮ್ಮ ಕಸುವು ಕನ್ನಡ; ನಮ್ಮ ಹಎಸರು ನಮ್ಮ ಕಸುಬು ಕನ್ನಡ’ ಎಂಬ ಧ್ಯೇಯವಾಗಲಿ ‘ಜೋಗದ ಸಿರಿ ಬೆಳಗಿನಲ್ಲಿ ನಿತ್ಯೋತ್ಸವ ತಾಯೆ ನಿನಗೆ ನಿತ್ಯೋತ್ಸವ’ ಎಂದು ಮೈದುಂಬಿದ ಭಾವ ದೀಪ್ತಿಯಲ್ಲಿ ಚರಿತ್ರೆಯು ಭಾವನಾತ್ಮಕವಾಗಿ ಪ್ರತಿಫಲಿಸುತ್ತಿದೆ. ಇದು ಕವಿ ಧರ್ಮ. ಇದರಲ್ಲಿ ಅಖಂಡವಾದ ನಾಡಿನ ‘ರಾಷ್ಟ್ರೀಯತೆ’ ಇದೆ. ಕವಿಗಳು ಕಂಡ ಕನ್ನಡ ಪ್ರಭುತ್ವದಲ್ಲಿ ಪಂಪನ ಪ್ರಜ್ಞೆಯು ವಿಕಾಸವಾಗುತ್ತಲೇ ಇದೆ. ಆದ್ದರಿಂದಲೇ ಕುವೆಂಪು ಭಾವಿಸುವ ಕನ್ನಡ ಪ್ರಭುತ್ವವು ರಾಜಕೀಯ ಪ್ರಭುತ್ವದ ಚೌಕಟ್ಟನ್ನು ಮೀರುವಂತದ್ದು ‘ಪಂಪನಿಲ್ಲಿ ಮುಖ್ಯಮಂತ್ರಿ’ ಎಂದು ಭಾವಿಸುವುದಕ್ಕೂ ರಾಜ್ಯಾಧಿಕಾರವನ್ನು ಜಾತಿಸೂತ್ರದಲ್ಲಿ ವಿಂಗಡಿಸಿ ಹಂಚಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಏಕೀಕರಣೋತ್ತರ ಕರ್ನಾಟಕದಲ್ಲಿ ಈ ಜಾತಿ ಪ್ರಣೀತ ರಾಜಕೀಯವೇ ನಿರ್ಣಾಯಕವಾಗಿದ್ದು ಇಲ್ಲೆಲ್ಲ ಪ್ರಭುತ್ವವೇ ಆವರಿಸಿಕೊಂಡಿದೆಯೇ ಹೊರತು ಕನ್ನಡ ನಾಡಿನ ಒಳಗಿನ ಬಹುಭಾಷಿಕ ಸಮಾಜವು ಮುಖ್ಯವಾಗಿಲ್ಲ.

ಕನ್ನಡ ಪ್ರಭುತ್ವದಲ್ಲೆ ಆಡಳಿತ ಭಾಷೆಯಾಗಿ ಕನ್ನಡವು ಪೂರ್ಣವಾಗಿ ಜಾರಿಯಾಗಿಲ್ಲ ಎಂಬ ವಾಸ್ತವವು ಏಕೀಕರಣದ ವೈರುಧ್ಯದಂತಿದೆ. ಕನ್ನಡಿಗರ ಹಿತಕಾಯುವುದಕ್ಕೆಂದೇ ಅಸ್ತಿತ್ವಕ್ಕೆ ಬಂದ ಕನ್ನಡ ಪ್ರಭುತ್ವ ಕಣ್ಮರೆಯಾಗಿದ್ದು ಅದು ಸ್ವಾರ್ಥಪರ ರಾಜಕಾರಣಿಗಳ ಅಧಿಕಾರದ ಭಾಗವಾಗಿ ಬಳಕೆಯಾಗುತ್ತಿದೆ. ಹೀಗಾಗಿಯೇ ‘ಬಾರಿಸು ಕನ್ನಡ ಡಿಂಡಿಂವ’ ಎಂಬ ಕವಿ ನುಡಿಯು ಈ ಕಾಲದಲ್ಲಿ ವ್ಯಂಗ್ಯವಾಗಿ ಭಾಸವಾಗುತ್ತಿರುವುದು. ರಾಜ ಮಹಾರಾಜರು ಕನ್ನಡವನ್ನು ಕನ್ನಡಿಗರನ್ನು ನಾಡನ್ನು ಬಳಸಿಕೊಂಡಂತೆಯೇ ಪ್ರಜಾ ‘ಪ್ರಭುಗಳು’ ಕೂಡ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ಹೀಗಾಗಿ ಕನ್ನಡ ಪ್ರಭುತ್ವ ಮತ್ತು ಕನ್ನಡ ಸಮಾಜ ಎಂಬ ಈ ಪರಿಕಲ್ಪನೆಗಳು ಆದರ್ಶವಾಗಿ ಕಂಡರೂ ವಾಸ್ತವದಲ್ಲಿ ಅವು ಕಲ್ಪಿತ ನಂಬಿಕೆಗಳಾಗಿ ಅಂತೆಯೇ ಕೆಟ್ಟ ನಂಬಿಕೆಗಳಾಗಿ ಮಾರ್ಪಟ್ಟಿರುವುದು. ಅಪ್ಪಟ ಕನ್ನಡಿಗನೇ ತನ್ನ ಕನ್ನಡವನ್ನು ಕಳೆದುಕೊಳ್ಳಬೇಕೆಂದು ಬಯಸುವ ಮಟ್ಟಿಗೆ ಭಾಷೆಯ ಪರಿಸರವು ಬದಲಾಗುತ್ತಿದೆ. ಏಕೀಕರಣೋತ್ತರ ಕನ್ನಡ ಸಮಾಜದಲ್ಲಿ ಕನ್ನಡಿಗನಿಗೆ ನಿಜವಾದ ಆಯ್ಕೆಗಳೇ ಇಲ್ಲವಾಗುತ್ತಿವೆ. ಸಮಾಜಕ್ಕೆ ತಕ್ಕ ಆಯ್ಕೆಗಳಿರುವುದಿಲ್ಲ ಎಂದರೆ ಅಂತಹ ಸಮಾಜಕ್ಕೆ ಭವಿಷ್ಯವೇ ಇರುವುದಿಲ್ಲ. ಭಾಷೆಯು ರಾಜಕೀಯವಾಗಿ ಬಲಗೊಂಡು ಎಲ್ಲ ನೆಲೆಗಳಲ್ಲೂ ಅಸ್ತಿತ್ವವನ್ನು ರೂಪಿಸಿಕೊಳ್ಳುವುದು ಸರಿ. ಆದರೆ ಸ್ವತಃ ಭಾಷೆ ಮತ್ತು ಅದರ ಸಮಾಜವನ್ನೆ ದುಷ್ಠ ರಾಜಕಾರಣವು ಆಕ್ರಮಿಸಿಕೊಂಡಾಗ ಭಾಷೆ ಮತ್ತು ಸಮಾಜ ಎರಡೂ ತಮ್ಮ ಮೂಲ ಗುಣಗಳನ್ನು ಕಳೆದುಕೊಳ್ಳುತ್ತವೆ. ವಸಾಹತುಶಾಹಿ ಸಾಮ್ರಾಜ್ಯವು ತನ್ನ ಇಂಗ್ಲೀಷ್ ಭಾಷೆಯ ಯಜಮಾನಿಕೆಯನ್ನು ಹೇರಿದ್ದು ಇನ್ನೊಂದು ಬಗೆ. ಸ್ಥಳೀಯ ಭಾಷೆಗಳ ಮೇಲಿನ ಹಿಡಿತಕ್ಕಿಂತ ಆ ಭಾಷೆಯನ್ನಾಡುವ ಸಮಾಜದ ಆಲೋಚನೆಯ ಮೇಲೆಯೇ ಪ್ರಭಾವ ಬೀರಿದರೆ ಆಗ ಅಲ್ಲಿನ ಪ್ರಭುತ್ವವನ್ನೆ ನಿರ್ವಹಿಸುವುದು ಸುಲಭ. ಜಾಗತೀಕರಣದ ಈ ಕಾಲಘಟ್ಟದಲ್ಲಿ ಭಾಷೆಯ ಅಂತಹ ಪ್ರಭುತ್ವವು ಕನ್ನಡದ ಮೇಲೆಯೂ ಪರಿಣಾಮ ಉಂಟು ಮಾಡುತ್ತಿರುವುದನ್ನು ಗಮನಿಸಬಹುದು. ಹೀಗಾಗಿ ಏಕ ಕಾಲಕ್ಕೆ ಕನ್ನಡ ಸಮಾಜವು ಆರ್ಥಿಕವಾದ ಸವಾಲುಗಳನ್ನು ಕೂಡ ನಿಭಾಯಿಸಬೇಕಾಗಿದ್ದು ಜಾಗತಿಕವಾದ ವಿದ್ಯಮಾನಗಳು ಕನ್ನಡ ಕನ್ನಡಿಗ ಕರ್ನಾಟಕದ ಅಂತರಂಗದಲ್ಲಿ ಬಂದು ಸೇರಿಕೊಳ್ಳುತ್ತವೆ. ಇವುಗಳ ನಡುವೆಯೇ ಈಗ ತಾನೆ ಬಾಯಿ ತೆರೆಯುತ್ತಿರುವ ಹಲವಾರು ತಳಸಮುದಾಯಗಳು ತಮ್ಮ ಅಂತರಂಗದ ಭಾಷೆಯ ಒಳ ನುಡಿಗಳನ್ನು ಆಡಲು ಆರಂಭಿಸಿದ್ದು ಕನ್ನಡ ಭಾಷೆಯ ನಡುವೆಯೇ ತಮ್ಮ ಭಾಷಿಕ ನೆಲೆಗಳನ್ನು ಒತ್ತಾಯಿಸುತ್ತಿವೆ. ಇವೆಲ್ಲವೂ ಒಟ್ಟಾಗಿ ಸಾಗುವಾಗ ಅನೇಕ ಅಪಾಯಗಳು ಹಿಡಿಯಾಗಿಯೆ ಎಲ್ಲ ಭಾಷೆ ಮತ್ತು ಸಂಸ್ಕೃತಿಗಳ ಮೇಲೂ ಆಗುತ್ತವೆ.

ಯಾವುದೇ ಒಂದು ಭಾಷೆಯ ಸಮಾಜವು ಕೇವಲ ಪ್ರಭುತ್ವ ಒಂದರಿಂದಲೇ ಅಳಿವು ಉಳಿವು ಸ್ಥಿತಿಯನ್ನು ತಲುಪಲಾರದು. ಬೇರೆಯಾದ ಅನೇಕ ಸಂಗತಿಗಳು ಒಂದು ನಾಡಿನ ಅಸ್ತಿತ್ವವನ್ನು ನಿರ್ಧರಿಸುತ್ತವೆ ಎಂಬುದು ವರ್ತಮಾನದಲ್ಲಿ ನಿಚ್ಚಳವಾಗಿ ತಿಳಿಯುತ್ತಿದೆ. ಭಾಷೆಯು ಕೇವಲ ಮೂಲ ಸಂಗತಿ ಮಾತ್ರ. ಅದರ ಮೇಲೆ ವರ್ತಮಾನದ ಮಾನವ ಸಂಬಂಧಗಳು ಹೇಗೆ ಜಾಗತಿಕವಾದ ಸಂವಹನ ಮತ್ತು ಅರ್ಥಸಂಬಂಧಗಳನ್ನು ಬೆಳೆಸುತ್ತವೆ ಎಂಬ ಅಂಶಗಳು ಈ ಕಾಲದಲ್ಲಿ ಪ್ರಧಾನವಾಗುತ್ತಿವೆ. ತಾತ್ವಿಕವಾಗಿ ಭಾಷೆ ಒಂದು ಮೂಲ ಅಸ್ತಿತ್ವವಾದರೂ ವಾಸ್ತವದಲ್ಲಿ ಮಾಹಿತಿ ತಂತ್ರಜ್ಞಾನ, ಸಂಪರ್ಕ ಜಾಲ, ಮಾರುಕಟ್ಟೆ, ಸಮೂಹ ಮಾಧ್ಯಮ, ಅನುಭೋಗಿ ಸಂಬಂಧ, ಉತ್ಪಾದನಾ ವ್ಯವಸ್ಥೆ, ಖಾಸಗೀಕರಣ, ಜಾಗತೀಕರಣದಂತಹ ಕ್ಷೇತ್ರಗಳಲ್ಲಿ ಮಾತ್ರ ಭಾಷೆಯು ವಿಶೇಷವಾಗಿ ಬಳಸಲ್ಪಡುತ್ತಿದೆ. ಹೀಗೆ ಬಳಸಲ್ಪಡುತ್ತಿರುವ ಭಾಷೆಯ ಸಂದರ್ಭವು ಕೃತಕವಾದದ್ದು ಎಂಬುದನ್ನು ಗಮನಿಸಬೇಕು. ಇಪ್ಪತ್ತೊಂದನೆ ಶತಮಾನದ ಕನ್ನಡ ಭಾಷೆಯು ಸ್ಥಿತಿಯೆ ಈ ನೆಲೆಗಳಿಂದ ನಿರ್ಧರಿಸಲ್ಪಡುತ್ತಿದೆ. ಭಾಷೆಯೆ ಇಲ್ಲಿ ಮಾರುಕಟ್ಟೆಯ ಸಂವಹನ ಜಾಲವಾಗುತ್ತಿದೆ. ಸೃಷ್ಟಿಶೀಲ ಗುಣವಿಲ್ಲದೆ ಬಳಸಲ್ಪಡುವ ಭಾಷೆಯು ವಿಕಾಸವಾಗದು ಏಕೀಕರಣೋತ್ತರ ಕರ್ನಾಟಕದಲ್ಲಿ ಕನ್ನಡ ಭಾಷೆಯು ರಾಜಕೀಯ ಪ್ರಭುತ್ವದ ಭಾಗವಾಗಿದ್ದರೂ ಈಗದು ಮೇಲೆ ಉಲ್ಲೇಖಿಸಿದ ನೆಲೆಗಳ ಹಿಡಿತದಲ್ಲಿ ಸಿಲುಕಿದೆ. ಈ ಅಂಶಗಳಲ್ಲಿ ಯಾವ ಕನ್ನಡಿಗ ನಡೆಯುವುದನ್ನು ಕಲಿಯಬಲ್ಲರೊ ಅಂತವರು ಮಾತ್ರವೇ ಅಭಿವೃದ್ಧಿ ಹೊಂದುವರು ಎಂಬ ಭಾವನೆ ಬಲವಾಗುತ್ತಿದೆ. ಇದು ನಿಜವಾದ ಏಕೀಕರಣದ ಕನಸಾಗಿರಲಿಲ್ಲ. ಕನ್ನಡದ್ದೇ ರಾಜಕೀಯ ಪ್ರಭುತ್ವ ಇದೆ ಎಂದು ಭಾವಿಸಿದ್ದರೂ ಆ ಭಾಷೆಯ ಸ್ಥಿತಿಯು ಏಕೀಕರಣ ಪೂರ್ವದಲ್ಲಿದ್ದ ಸ್ಥಿತಿಗಿಂತಲೂ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದೆ.

ಈ ಹಿನ್ನೆಲೆಯಿಂದ ಗಮನಿಸಿದರೆ ಕನ್ನಡ ಭಾಷೆ ಮತ್ತು ಸಮಾಜವು ಆತ್ಯಂತಿಕವಾದ ಸೃಜನಶೀಲ ಶೋಧದಲ್ಲಿ ಪರಿಣಾಮಕಾರಿಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಸಂಸ್ಕೃತಿಗೆ ಸಂಬಂಧಿಸಿದಂತೆ ಕನ್ನಡ ಭಾಷೆಯು ಬೆಳೆಯುತ್ತಿದೆಯೇ ಎಂದರೆ ಅಲ್ಲೂ ನಿರಾಶೆಯೆ ಎದುರಾಗುತ್ತದೆ. ಕನ್ನಡ ಸಂಸ್ಕೃತಿಯು ಕಾಲ ಸಾಗಿದಂತೆಲ್ಲ ತುಂಬ ತೆಳುವಾಗುತ್ತಿದೆ. ಸಾಂಸ್ಕೃತಿಕ ಸ್ಮೃತಿಗಳನ್ನು ಕನ್ನಡ ಸಮಾಜವೇ ಕೈಬಿಡುತ್ತಿದೆ. ಹೊರಗಿನ ನಾಗರೀಕತೆಯ ಭೌತಿಕ ಲೋಕವನ್ನೆ  ಮತ್ತು ಅದರ ಉಪಯೋಗವನ್ನೆ ತಮ್ಮ ಸಂಸ್ಕೃತ ಎಂದು ಸ್ವೀಕರಿಸುವುದು ನಡೆದಿದೆ. ಸ್ವೀಕರಣೆ ಅನುಕರಣೆ ತಪ್ಪಲ್ಲ. ಆದರೆ ತನ್ನ ಸೃಜನಶೀಲ ಸಾಂಸ್ಕೃತಿಕ ಸ್ವಭಾವವನ್ನೆ ಕಳೆದುಕೊಳ್ಳುವುದು ಭಾಷೆಯ ವಿಕಾಸದಲ್ಲಿ ತುಂಬಾ ಅಪಾಯಕಾರಿಯಾದುದು. ಹೀಗಾಗಿಯೇ ಇಂದಿನ ಕನ್ನಡ ಭಾಷೆಯು ವರ್ತಮಾನದ ಒತ್ತಡದಲ್ಲಿ ಕೃತಕವಾದ ಭಾಷೆಯನ್ನು ಬಳಸುತ್ತಿರುವುದು. ಈ ಮೇಲೆ ಉಲ್ಲೇಖಿಸಿದ ಅಂಶ ಅಂದರೆ; ಯಾವ ಯಾವ ನೆಲೆಗಳಲ್ಲಿ ಮಾತ್ರ ಕನ್ನಡವು ಬಳಕೆಯಾಗುತ್ತಿದೆ ಎಂಬ ಮಾತನ್ನು ನೆನಪಿಸಿಕೊಳ್ಳಿ. ಸಮೂಹ ಮಾಧ್ಯಮಗಳು ಬಳಸುವ ಕನ್ನಡ ಸೃಷ್ಟಿಶೀಲವಾದದ್ದಲ್ಲ. ಯಾವ ವರ್ತಮಾನವು ಹೆಚ್ಚು ಸುಳ್ಳನ್ನು ಹೇಳುತ್ತದೊ ಅದರಿಂದ ಭಾಷೆಯು ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಮಾಹಿತಿ ಸಂಪರ್ಕ ಜಾಲದಿಂದ ಸಂವಹನಕ್ಕೆ ವೇಗ ಬಂದಿರಬಹುದೇ ಹೊರತು ಆ ಮಾತಿಗೆ ಗಾಢವಾದ ನೀತಿ ಇಲ್ಲವಾಗಿದೆ.

ಒಂದು ಭಾಷೆಯನ್ನು ಕೊಲ್ಲಲು ಕೇವಲ ಸುಳ್ಳುಗಳು ಸಾಕು. ಭಾಷೆಯಲ್ಲಿ ಸುಳ್ಳು ಹೆಚ್ಚಾದಂತೆಲ್ಲ ಅದರ ಸಂವಹನವು ಆ ಭಾಷೆಯನ್ನು ಆಡುವ ಸಮಾಜವನ್ನು ಕೊಲ್ಲಬಲ್ಲದು. ಸಮೂಹ ಮಾಧ್ಯಮಗಳ ಸುಳ್ಳು ಭಾಷೆಯನ್ನು ಸುಳ್ಳಿನ ನೇಯ್ಗೆಗೆ ಮಾತ್ರ ಜಾಣರಾಗುವಂತೆ ಮಾಡುತ್ತದೆ. ಇದು ಇಪ್ಪತ್ತೊಂದನೆ ಶತಮಾನದ ಗುಣವಾಗಿದ್ದು ಹದಿನೆಂಟನೆ ಶತಮಾನದ ಕೈಗಾರಿಕಾ ಕ್ರಾಂತಿಯ ಕಾಲದಲ್ಲೆ ಪಶ್ಚಿಮವು ಭಾಷೆಗಳಿಗೆ ಸುಳ್ಳು ಹೇಳುವುದನ್ನು ಚೆನ್ನಾಗಿ ಕಲಿಸುತ್ತ ಬಂದಿದೆ. ಈಗಲೂ ಮಾಹಿತಿ ತಂತ್ರಜ್ಞಾನದಲ್ಲಾಗಲಿ, ಐ.ಟಿ.ಬಿ.ಟಿ.ಗಳಲ್ಲಿ ತಾಂತ್ರಿಕ ಕೂಲಿ ಮಾಡುವ ಯುವ ಪೀಳಿಗೆಗಾಗಲಿ ಸುಳ್ಳನ್ನೆ ಹೇಳಿ ಕೊಡಲಾಗುತ್ತಿದೆ. ಭಾಷೆಗಳು ಬೆಳೆದಿರುವುದೇ ಸಂಸ್ಕೃತಿಯ ಸ್ವಭಾವದಿಂದ. ನಾಗರೀಕತೆಗಳು ಜಾಣತವನ್ನು ಮೆರೆದು ಆಳುವ ಶಕ್ತಿಯನ್ನು ಪಡೆದು ಭಾಷೆ ಮತ್ತು ಸಂಸ್ಕೃತಿಗಳ ಮೇಲೆ ದಿಗ್ವಿಜಯ ಸಾಧಿಸುತ್ತಿರುತ್ತವೆ. ಹೀಗಾಗಿಯೆ ಭಾಷೆಯ ಆರ್ಥಿಕ ಸುಳ್ಳು, ರಾಜಕೀಯ ಸುಳ್ಳು, ಸಾಮಾಜಿಕ ಸುಳ್ಳು ಒಂದು ನಾಡಿನ, ಪ್ರಗತಿಯನ್ನು ಕುರೂಪಗೊಳಿಸಿ ತನಗೆ ಹೊಂದುವ ಸಾಮ್ರಾಜ್ಯಶಾಹಿ ನೀತಿಯನ್ನು ಭಾಷೆಯಲ್ಲಿ ಉಳಿಸಿಕೊಳ್ಳುತ್ತದೆ. ಕನ್ನಡ ಪ್ರಭುತ್ವವು ಇದರಿಂದಾಗಿಯೇ ಕನ್ನಡಿಗರ ಆಶೋತ್ತರಗಳಿಗೆ ಪೂರಕವಾಗಿರದೆ ಸುಳ್ಳುಗಳ ಮೂಲಕ ಆಡಳಿತ ನಡೆಸುವಂತಾಗಿರುವುದು. ಈ ಸ್ಥಿತಿಯಲ್ಲಿ ಸಮಾಜಗಳು ಸುಳ್ಳನ್ನೆ ಸತ್ಯ ಎಂದು ಭ್ರಮಿಸುತ್ತವೆ ಜೊತೆಗೆ ಆ ಬಗೆಯ ಭ್ರಮೆಯಲ್ಲಿ ತನಗೆ ಬೇಕಾದಂತೆ ಸುಳ್ಳನ್ನು ವಿಸ್ತರಿಸಿಕೊಳ್ಳುತ್ತವೆ. ಇಂತಲ್ಲಿ ಭಾಷೆಯು “ಕೊಟ್ಟಮಾತಿಗೆ ತಪ್ಪಲಾರೆನು ಕೆಟ್ಟಯೋಚನೆ ಮಾಡಲಾರೆನು” ಎಂಬ ನೀತಿಯನ್ನು ಹಾಡಲಾರದು. ನ್ಯಾಯನಿಷ್ಠೆಯ ಹೊಣೆಗಾರಿಕೆಯನ್ನು ನಿರ್ವಹಿಸದ ಕನ್ನಡ ಪ್ರಭುತ್ವವು ಅಖಂಡತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದು.

ಏಕೀಕರಣೋತ್ತರ ಕರ್ನಾಟಕದ ರಾಜಕೀಯವು ಜನತೆಯನ್ನೆ ತನ್ನ ಬಂಡವಳವನ್ನಾಗಿಸಿ ಕೊಂಡಿದೆ. ಸೂಕ್ಷ್ಮವಾಗಿ ಪ್ರಧಾನ ಜಾತಿಗಳು ರಾಜಕೀಯ ಬಣಗಳಾಗಿ ಬೆಳೆಯುತ್ತಿವೆ. ಜಾತಿ ವ್ಯವಸ್ಥೆಯು ರೂಪಾಂತರಗೊಂಡು ರಾಜಕೀಯ ಜಾಲದಲ್ಲಿ ಕ್ರೂರವಾಗುತ್ತಿದೆ. ಮತೀಯ ಮೌಡ್ಯಗಳು ಹೆಚ್ಚುತ್ತಿವೆ. ಮತಧರ್ಮಗಳ ಹೆಸರಲ್ಲಿ ಕನ್ನಡ ಪ್ರಜ್ಞೆಯು ಸಂಕುಚಿತವಾಗುತ್ತಿದೆ. ತಾರತಮ್ಯಗಳು ಬಡವ ಶ್ರೀಮಂತರ ನಡುವೆ ವಿಸ್ತರಿಸುತ್ತಿದ್ದು ಬಡವರು ಮತ್ತಷ್ಟು ಕೆಳಗಿಳಿಯುತ್ತಿದ್ದಾರೆ. ಪ್ರಾದೇಶಿಕ ಅಸಮಾನತೆಗಳು ಮುಂದುವರೆದಿವೆ. ಬಡ ಕನ್ನಡದ ಮಕ್ಕಳಿಗೆ ಉದ್ಯೋಗ ಗಗನ ಕುಸುಮವಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಕನ್ನಡ ನಾಡೇ ಖಾಸಗೀಕರಣಗೊಳ್ಳುತ್ತಿದ್ದು ಸಾರ್ವಜನಿಕ ವಲಯವು ಮರೆಯಾಗುತ್ತಿದೆ. ಹಿಡಿಯಾಗಿ ನೋಡಿದರೆ ಜನತೆಯ ಪರವಾಗಿದ್ದ ಸಾರ್ವಜನಿಕ ಕ್ಷೇತ್ರಗಳು ಸರ್ಕಾರದ ಮೂಲಕವೇ ಪರಭಾರೆಯಾಗುತ್ತಿವೆ. ಇದರಿಂದ ಕನ್ನಡ ಪ್ರಭುತ್ವದ ಅಸ್ತಿತ್ವವೇ ಖಾಸಗೀಕರಣಗೊಂಡಿದೆ. ಬಲಿಷ್ಠ ಜಾತಿಗಳ ಬಲಿಷ್ಠ ರಾಜಕಾರಣಿಗಳ ಪಾಲಾಗಿ ಪ್ರಭುತ್ವ ಜನರಿಂದ ದೂರವಾಗಿದೆ. ಕನ್ನಡಿಗ ತನ್ನ ನಾಡಿನ ಭಾವನಾತ್ಮಕ ಸಂಬಂಧವನ್ನು ಕಳೆದುಕೊಳ್ಳಬೇಕಾದ ವಿಪರ್ಯಾಸ ಎದುರಾಗಿದೆ. ನಾಡು ನುಡಿಯ ಘನತೆಯು ಕೇವಲ ರಾಜಕೀಯ ಉತ್ಸವವಾಗಿ ಸೀಮಿತಗೊಂಡಿದೆ. ಇದರಿಂದಲೇ ಭಾಷೆಗೆ ಇದ್ದ ಸಂಸ್ಕೃತಿಯ ಗುಣಗಳು ಕಳೆದು ಹೋಗಿರುವುದು. ಭಾಷೆ ಮತ್ತು ಸಮಾಜಗಳು ಬೆಳೆಯುವುದು ಅಲ್ಲಿನ ಸೃಷ್ಟಿಶೀಲ ಕಾರ್ಯಗಳಿಂದ. ಏಕೀಕರಣೋತ್ತರ ಕನ್ನಡ ಸಾಹಿತ್ಯ ಪಂಥಗಳು ತಮ್ಮ ವ್ಯಾಪ್ತಿಯಲ್ಲಿ ಮಾಡಿದ ಸಾಧನೆಗಳನ್ನು ಘನತೆಯಿಂದ ತೋರಿಸಿಕೊಳ್ಳಬಹುದಾದರೂ ವರ್ತಮಾನದ ಬೆಳವಣಿಗೆಗಳನ್ನು ನೋಡಿದರೆ ನಮ್ಮ ನಾಡಿನಲ್ಲಿ ಎದುರಾಗಿರುವ ಸೃಷ್ಟಿಶೀಲತೆಯ ಬಡತನವು ಹಿಂದೆಂದೂ ಈ ಪ್ರಮಾಣದಲ್ಲಿ ಇರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಜನತೆಯ ಆಯ್ಕೆ ಮಾಡಿದ ಕನ್ನಡ ಪ್ರಭುತ್ವವು ಹೀಗೆ ಜನರನ್ನೆ ರಾಜಕೀಯವಾಗಿ ವಂಚಿಸಿದರೆ ಸುವರ್ಣ ಕರ್ನಾಟಕದ ಆಚರಣೆಯು ಅರ್ಥಹೀನ ಎನಿಸುತ್ತದೆ.

ಹೀಗಾಗಿ ಕನ್ನಡ ಭಾಷೆಯ ಭವಿಷ್ಯವು ಕನ್ನಡಿಗರ ಭವಿಷ್ಯವೂ ಆಗುತ್ತದೆ. ಅಳಿವಿನ ಅಂಚಿನಲ್ಲಿರುವ ಭಾಷೆಗಳ ಪೈಕಿ ಕನ್ನಡವೂ ಒಂದೆಂಬ ಅಭಿಪ್ರಾಯವಿದೆ. ಸದ್ಯದಲ್ಲಿ ಕನ್ನಡ ಭಾಷೆಯು ಸೃಷ್ಟಿಶೀಲತೆಯಲ್ಲಿ ಹಿಂದೆ ಬಿದ್ದಿದೆ. ಭೌತಿಕ ಲೋಕದ ಕುರಿತಂತೆ ಭಾಷೆ ಬೆಳೆದಿದೆಯಾದರೂ ಭಾವನಾತ್ಮಕವಾದ ಜ್ಞಾನ ಪರಂಪರೆಗಳ ವಿಚಾರದಲ್ಲಿ ಕನ್ನಡವು ತನ್ನ ಸಾಮರ್ಥ್ಯವನ್ನು ಕುಗ್ಗಿಸಿಕೊಳ್ಳಬೇಕಾದ ಇಕ್ಕಟ್ಟಿನಲ್ಲಿದೆ. ಭಾಷೆಯು ಸೃಜನಶೀಲ ಮನಸ್ಸಿನಿಂದಲೇ ಗಾಢವಾಗಿ ವಿಸ್ತರಿಸಿಕೊಳ್ಳುವುದು. ವಸ್ತುವಿನ ಹೊರಮೈಯನ್ನು ವಿವರಿಸುವ ಭಾಷೆಯು ವ್ಯವಹಾರಿಕವಾದುದು. ವ್ಯವಹಾರದ ತುರ್ತನ್ನು ದಾಟಿದ್ದು ವಸ್ತು ವಿಷಯದ ಅಂತರಂಗವನ್ನು ಕುರಿತದ್ದಾಗಿರುತ್ತದೆ. ಈ ಕಾಲದಲ್ಲಿ ಕನ್ನಡ ಸಮಾಜ ವಿಶೇಷವಾಗಿ ತಲೆ ಕೆಡಿಸಿಕೊಂಡಿರುವುದು ಹೊರ ರೂಪದ ಬಗೆಗೆ ಮಾತ್ರ. ನಾಡಿನ ಅಂತರಂಗದ ಕಾಳಜಿ ತುಂಬ ಕಡಿಮೆಯಾಗಿದೆ. ಬೃಹತ್ ಉದ್ದಿಮೆ, ಬೃಹತ್ ನಗರ ನಿರ್ಮಾಣ, ಬೃಹತ್ ಆರ್ಥಿಕ ವಲಯ, ಬೃಹತ್ ನೀರಾವರಿ ಯೋಜನೆಗಳು, ಬೃಹತ್ ಮಾರಾಟ ಜಾಲ, ಬೃಹತ್ ಸಾರಿಗೆ ಸಂಚಾರ ಇವು ಮಾತ್ರವೇ ಅಂತಿಮ ಎಂಬಂತೆ ಅಭಿವೃದ್ಧಿಯ ಹೆಸರಲ್ಲಿ ನಾಡಿನ ನಿರ್ಮಾಣವಾದರೆ ಅದು ವಿಕಾಸವಾಗದು. ಭಾಷೆ ಮತ್ತು ಮನುಷ್ಯ ಅವನ ಸಂಸ್ಕೃತಿ ಸಮಾಜಗಳು ವಿಕಾಸದ ಭಾಗವಾಗಿ ಬಂದಿವೆಯೇ ಹೊರತು ಆಳಿದವರ ಹುಸಿಯಾದ ಸುವರ್ಣ ಯುಗಗಳಿಂದಲ್ಲ.

ಕನ್ನಡಕ್ಕೇ ಹೊಂದುವಂತಹ ಸ್ಥಳೀಯ ಆಡಳಿತ, ಅಭಿವೃದ್ಧಿಯ ಯೋಜನೆಗಳು, ರಾಜಕೀಯ ಕ್ರಮಗಳು, ತಂತ್ರಜ್ಞಾನದ ಆವಿಷ್ಕಾರಗಳು, ಸಾಮಾಜಿಕ ಮೌಲ್ಯಗಳು, ಸಾಂಸ್ಕೃತಿಕವಾದ ನೀತಿ ಸಂಹಿತೆಗಳು, ಆಧುನಿಕತೆಯ ಮಾದರಿಗಳು, ಪನರುಜ್ಜೀವನದ ಒತ್ತಡಗಳು ಇಲ್ಲದಿರುವುದರಿಂದ ಕನ್ನಡ ಭಾಷೆ ಮತ್ತು ಸಮಾಜಕ್ಕೆ ಭವಿಷ್ಯವು ತೀವ್ರವಾದ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಏಕೀಕರಣದ ಅಂತರಂಗದಲ್ಲಿ ಇಂತಹ ಭಾವನೆಗಳಿಗೆ ಅವಕಾಶವಿತ್ತು. ಇಂದಿನ ಕರ್ನಾಟಕದಲ್ಲಿ ಈ ಬಗೆಯ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತಿವೆ. ಎಲ್ಲವೂ ಪಶ್ಚಿಮದ ಬೆಳಗಿನಿಂದಲೇ ಆರಂಭವಾಗುವಂತಹ ವಾತಾವರಣವಿದೆ. ಈ ಸ್ಥಿತಿಯಲ್ಲಿ ಕನ್ನಡನಾಡಿನ ಸ್ವಂತದ ಮೌಲ್ಯಗಳ ಹುಡುಕಾಟವು ಕೇವಲ ಆದರ್ಶದ ಮಾತಿನಂತಿವೆ.

ನಾವೇ ಕಂಡುಕೊಂಡ ಮೌಲ್ಯಗಳು ಸಮಾಜವನ್ನು ತಿದ್ದುತ್ತವೆ. ಸಮಾಜದ ನೀತಿಯೇ ಮೌಲ್ಯಗಳು. ಭಾಷೆ ಇದರಿಂದಲೇ ಅರ್ಥ ಪಡೆಯುವುದು. ಸಮಾಜ ಮತ್ತು ನೀರಿ ಬೇರೆ ಸಂಗತಿಗಳಲ್ಲ. ಅವು ಒಂದನ್ನೊಂದು ಅನುಸರಿಸಿದ ಸಂಬಂಧಗಳು. ಕನ್ನಡ ಪ್ರಭುತ್ವದಲ್ಲಿ ಕನ್ನಡಿಗನೆ ಅನಾಥನಾಗಿದ್ದಾನೆ. ಕನ್ನಡನಾಡೇ ಖಾಸಗೀ ಕ್ಷೇತ್ರಗಳ ನಿಯಂತ್ರಣಕ್ಕೆ ಒಳಪಟ್ಟಿದೆ. ಇದು ಏಕೀಕರಣೋತ್ತರ ಕನಸಿನ ಪ್ರತಿಬಿಂಬವಲ್ಲ. ಇಪ್ಪತ್ತೊಂದನೆ ಶತಮಾನದ ಬಹುಪಾಲು ಎಲ್ಲ ಪ್ರಭುತ್ವಶಕ್ತಿಗಳು ಖಾಸಗೀಕರಣಗೊಳ್ಳುತ್ತಿವೆ. ಕನ್ನಡ ರಾಷ್ಟ್ರೀಯತೆಯು ಇಲ್ಲಿ ಕೇವಲ ಕಲ್ಪಿತ ಸಂಗತಿಯಾಗಿ ಬಳಕೆಯಾಗುತ್ತಿದೆ. ಕನ್ನಡದ ಸಾರ್ವಭೌಮ ಸಾಮ್ರಾಜ್ಯಗಳು ಕನ್ನಡವನ್ನು ನಂಬಿದ್ದವು. ಅದರಿಂದಲೇ ಸಂಸ್ಕೃತಿಯ ಭಾವನಾತ್ಮಕ ಸಂಗತಿಗಳು ಅರಳಿದವು. ಆದರೆ ಇಪ್ಪತ್ತೊಂದನೆಯ ಶತಮಾನದ ಕನ್ನಡ ಪ್ರಭುತ್ವವು ಕನ್ನಡಿಗರ ನೆಲೆಯಿಂದ ಆಳ್ವಿಕೆಯನ್ನು ನಿರ್ವಹಿಸುತ್ತಿಲ್ಲ.

ವರ್ತಮಾನದ ಸಾಮಾಜಿಕ ವಾಸ್ತವಕ್ಕೂ ರಾಜಕೀಯ ಪ್ರಭುತ್ವಕ್ಕೂ ಗತವಾಗುವ ಕಾಲದ ಬಗ್ಗೆ ಸಾಕಷ್ಟು ನೆನಪಾಗಲಿ ಸಿದ್ಧತೆಗಳಾಗಲಿ ಇಲ್ಲ. ಸಾಮ್ರಾಜ್ಯಶಾಹಿ ದೊರೆಗಳಿಗೆ ಆ ನೆನಪು ಗಾಢವಾಗಿತ್ತು. ಚರಿತ್ರೆಯನ್ನು ಉಳಿಸಲೆಂದೇ ಅವರು ವ್ಯಕ್ತಿ ಪ್ರತಿಷ್ಟೆಯ ಮೂಲಕ ಸ್ವಹಿತ ಕಥನವನ್ನು ದಾಖಲಿಸುತ್ತಿದ್ದರು. ಆಧುನಿಕ ಪ್ರಭುತ್ವ ಲಾಭದ ನಿರೀಕ್ಷೆಯಲ್ಲಿ ವ್ಯಕ್ತಿ ಕೇಂದ್ರಿತ ದಿಗ್ವಿಜಯಗಳ ಆಡಳಿತದ ಮೂಲಕವೇ ತಮ್ಮನ್ನು ಪ್ರತಿಷ್ಠಾಪಿಸಿಕೊಳ್ಳಲು ಆಕರಗಳನ್ನು ರೂಪಿಸುತ್ತಿರುತ್ತದೆ. ಏಕೀಕರಣೋತ್ತರ ಕನ್ನಡದ ರಾಜಕೀಯ ಪ್ರಭುತ್ವವು ಅಪ್ಪಟ ಕನ್ನಡದ ಆದರ್ಶವನ್ನು ಪಾಲಿಸಲಿಲ್ಲ. ಏಕೀಕರಣದ ಚಳುವಳಿಯಿಂದ ಸಾಧ್ಯವಾದ ರಾಜ್ಯಾಧಿಕಾರವು ಕನ್ನಡದ ಅಸ್ಮಿತೆಯಿಂದ ಸಮಾಜಗಳನ್ನು ಪರಿಭಾವಿಸಲಿಲ್ಲ. ಭಾಷೆಯಿಂದಲೇ ಕರ್ನಾಟಕವನ್ನು ನಿರ್ಧರಿಸಬೇಕಿತ್ತು ಎಂದು ಇದರರ್ಥವಲ್ಲ. ಭಾಷೆಯ ಆಚೆಗಿನ ಸಾಮಾಜಿಕ ಆದರ್ಶಗಳು ವ್ಯಕ್ತಗೊಂಡರೂ ಅವುಗಳ ಆಳದಲ್ಲಿ ಜಾತ್ಯಾತೀತವಾದ ಮಾನಸಿಕ ಒಪ್ಪಂದಗಳು ಇರಲಿಲ್ಲ. ಆದರ್ಶ ಯಾವತ್ತೂ ಪ್ರಭುತ್ವಕ್ಕೆ ಹೊಂದಿಕೊಳ್ಳುವ ಸ್ವಭಾವದ್ದಲ್ಲ. ಆದರ್ಶದಿಂದಲೇ ರಾಜ್ಯದ ಕುರುಹು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಕಾರಗೊಳ್ಳಬೇಕಾದುದು. 

ಸಾಮಾಜಿಕ ನ್ಯಾಯದ ಆದರ್ಶವು ರಾಜಕೀಯ ಪ್ರಭುತ್ವದ ಕನಸೇ ಆಗಿತ್ತೆಂದರೆ ಸಮಾಜದ ಅಸಮಾನತೆಗಳು ಪರಿಹಾರವಾಗಲು ಅರ್ಧ ಶತಮಾನದ ಅವಧಿಯ ಅಗತ್ಯವಿರಲಿಲ್ಲ; ಬಹಳ ಬೇಗನೆ ಕನ್ನಡದ ಅನೇಕ ಸಮಸ್ಯೆಗಳು ಬಗೆಹರಿಯಬಹುದಾಗಿತ್ತು. ಗಾಂಧಿಯ ಆದರ್ಶವೂ ಇಲ್ಲಿ ಸಾಧ್ಯವಾಗಲಿಲ್ಲ. ಅಂಬೇಡ್ಕರ್ ನ್ಯಾಯವೂ ಇಲ್ಲಿ ಜಾರಿಯಾಗಲಿಲ್ಲ. ಸಮಾಜವಾದಿ ಅಥವಾ ಮಾರ್ಕ್ಸ್‌ವಾದಿ ತತ್ವಗಳೂ ಇಲ್ಲಿ ಸಾಧಿತವಾಗಲಿಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಏಕೀಕರಣೋತ್ತರ ಕನ್ನಡ ಸಮಾಜದ ನಾಡಿನಲ್ಲಿ ಸಾಧ್ಯವಾದದ್ದು ಆಳುವ ಜಾತಿ ರಾಜಕಾರಣ ಮತ್ತು ಕನ್ನಡ ಸಂಪತ್ತನ್ನು ಖಾಸಗೀಕರಿಸಿಕೊಳ್ಳುವ ಮತೀಯ ಜಾಣ್ಮೆ. ಇದರಿಂದಲೇ ಭಾಷೆಗಿಂತಲೂ, ಕನ್ನಡ ಸಮೂಹದ ಭಾವನಾತ್ಮಕತೆಗಿಂತಲೂ ಮುಖ್ಯವಾದದ್ದು ನಾಡನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುವ ತಂತ್ರವು ಚಾಲ್ತಿಗೆ ಬಂದದ್ದು. ಇದು ಒಂದು ನಾಡು ಹೇಗೆ ವ್ಯಕ್ತಿ ಕೇಂದ್ರಿತ ಲಾಭಗಳಿಗೆ ತುತ್ತಾಗುತ್ತದೆ ಎಂಬುದಕ್ಕೆ ಸಂಕೇತವಾಗುವ ಸಂಗತಿ.

ಆದರ್ಶ ರಾಜ್ಯದಿಂದ ಕವಿಗಳನ್ನು ಹೊರ ಹಾಕಿ ಎಂದದ್ದು ರಾಜ್ಯಾದರ್ಶದ ಜನತೆಯ ಕಾರಣದಿಂದಲೇ. ಇಪ್ಪತ್ತೊಂದನೆ ಶತಮಾನದಲ್ಲಿ ಹೊರಹಾಕಬೇಕಾದದ್ದು ಕವಿಗಳಿಗಿಂತಲೂ ಮಿಗಿಲಾಗಿ ರಾಜಕಾರಣಿಗಳನ್ನು ಹಾಗೂ ಜಾತಿ ವ್ಯವಸ್ಥೆಯನ್ನು. ರಾಜಕೀಯ ಗುಂಪುಗಳು ಎಸಗುವ ರಾಜ್ಯದ್ರೋಹದ ಕೃತ್ಯಗಳು ಕನ್ನಡ ಸಮಾಜವನ್ನೆ ಮಾರಾಟಕ್ಕೆ ಒಳಪಡಿಸುವಂತಿರುತ್ತವೆ. ಬಡ ಕನ್ನಡಿಗರ  ದಲಿತರ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಿರಂತರವಾಗಿ ಘಟಿಸುತ್ತಲೇ ಇದ್ದರೂ ಅಧಿಕಾರ ದಾಹದ ರಾಜಕಾರಣಕ್ಕೆ ಆ ಬಗೆಯ ಹಿಂಸೆಯು ತಟ್ಟುವುದೇ ಇಲ್ಲ. ಮಣ್ಣಿಗೆ ಜೀವ ತೆತ್ತು ದುಡಿವ ರೈತರ ಆತ್ಮ ಹತ್ಯೆಗಳು ಭಾದಿಸುವುದೇ ಇಲ್ಲ. ಈ ಬಗೆಯ ದುರಂತಗಳು ಕೂಡ ಚುನಾವಣೆಯ ಮಾರಾಟದ ಸರಕಾಗಿರುತ್ತವೆ. ರಾಜಕೀಯ ಪ್ರಣಾಳಿಕೆಗಳು ವ್ಯಾಪಾರದ ಜಾಹಿರಾತಿನಂತೆ ಇರುತ್ತವೆ. ಅನೇಕ ರಾಜಕಾರಣಿಗಳು ಆಶ್ವಾಸನೆಯ ಭಾಷಣಗಳಿಂದ ಮತ ವ್ಯಾಪಾರದ ಗುಪ್ತ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಆದರ್ಶವು ಶೂನ್ಯ ಬಂಡವಾಳದಂತಿದೆ. ಆದರ್ಶದ ಮಾತನಾಡುವುದಕ್ಕೆ ಕಷ್ಟಪಡಬೇಕಾದ್ದಿಲ್ಲ. ಇದೊಂದು ಹುಸಿ ಭಾಷಣದ ಭಾಷಿಕ ಉದ್ಧಿಮೆ ಅಷ್ಟೆ. ಜತೆಗೆ ಇಂತಿಂತಹ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ ಎಂದು ಸಾರ್ವಜನಿಕವಾಗಿ ಘೋಷಿಸಿ ಜನರ ಮತದಾನದಿಂದ ಅಧಿಕಾರ ಹಿಡಿಯುವುದು ಭಾಷಿಕ ಉದ್ಧಿಮೆಗೆ ತಕ್ಕ ಜಾಹಿರಾತು ಪ್ರಸಂಗವಾಗಿದೆ. ಪ್ರಣಾಳಿಕೆಗೂ ಮತಯಾಚನೆಗೂ ‘ಭಾಷೆ’ ಪ್ರಮಾಣವಾಗುವ ರೀತಿಯು ವಿಚಿತ್ರವಾಗಿದೆ.

ಮತ ವ್ಯಾಪಾರ ಘಟಿಸಿ ಗೆಲುವು ಪಡೆದ ಮೇಲೆ ಆದರ್ಶವು ಅರ್ಥ ಕಳೆದುಕೊಳ್ಳುತ್ತದೆ. ಅನಂತರದ್ದು ಬಂಡವಾಳಶಾಹಿ ವರ್ತನೆಯೆ ಮುಂದುವರಿಯುವುದು. ಹೀಗಾಗಿಯೇ ಭಾಷೆಯು ರಾಜಕಾರಣಿಗಳಿಗೆ ಉದ್ದಿಮೆಯಾಗಿ ಪರಿವರ್ತನೆಯಾಗಿರುವುದು. ಸಮೂಹ ಮಾಧ್ಯಮಗಳಲ್ಲಿ ಪ್ರತಿಧ್ವನಿಸುವ ರಾಜಕೀಯವಾದ ಮಾತುಗಳೆಲ್ಲವೂ ಖಾಸಗೀ ವ್ಯಾಪಾರದ ಭಾಷಿಕ ಉದ್ದಿಮೆಯೆ ಆಗಿರುತ್ತವೆ. ಭಾರತದಲ್ಲಿ ಸ್ವಾತಂತ್ರ್ಯಾ ನಂತರ ರಾಜಕೀಯ ಪರಿಭಾಷೆಗಳೆಲ್ಲವೂ ಭಾಷಿಕ ಉಧ್ಯಮವಾಗಿ ನಿತ್ಯವೂ ಮಾಧ್ಯಗಳಲ್ಲಿ ಪ್ರತಿಫಲಿಸುತ್ತಿರುತ್ತವೆ. ರಾಜಕಾರಣಿಗಳು ಬಳಸುವ ಮಾತುಗಳೆಲ್ಲವೂ ಸಮಾಜದ ವ್ಯಾಪಾರವೇ ಆಗಿದ್ದು ಅಧಿಕಾರ ಗುರಿಯೆ ಮುಖ್ಯವಾಗಿರುತ್ತದೆ. ಆದ್ದರಿಂದಲೇ ರಾಜಕಾರಣಿಗಳು ಭೂವ್ಯಾಪಾರದಲ್ಲಿ ಉದ್ಧಿಮೆಗಳ ಒಡೆತನದಲ್ಲಿ ಹಣಕಾಸಿನ ವ್ಯವಹಾರಗಳಲ್ಲಿ ತೀವ್ರವಾಗಿ ಮುಳುಗುವುದು. ಇದರಿಂದ ಸಾರ್ವಜನಿಕ ವಲಯವನ್ನು ಹೇಗೆ ಬೇಕಾದರೂ ಖಾಸಗೀಕರಿಸಿಕೊಳ್ಳುವ ಅಧಿಕಾರ ದಕ್ಕಿರುತ್ತದೆ. ರಾಜ್ಯಾಧಿಕಾರವನ್ನೆ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಏಕೀಕರಣೋತ್ತರ ಕರ್ನಾಟಕದ ಕಾಲದಿಂದಲೂ ಸಾಂಗವಾಗಿ ಸಾಗುತ್ತಿದ್ದು ಇದರಲ್ಲಿ ಊಳಿಗಮಾನ್ಯ ಜಾತಿ ಸ್ವಭಾವವು ಪೂರಕವಾಗಿ ಕೆಲಸ ಮಾಡುತ್ತಿದೆ.

ಹೀಗಾಗಿ ರಾಜಕಾರಣವು ಏಕೀಕರಣವನ್ನು ಯಾವ ನೆಲೆಯಲ್ಲಿ ಬಳಸಿಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆ ಅಂಶಗಳನ್ನಿಲ್ಲಿ ಪಟ್ಟಿ ಮಾಡುವ.
1.ರಾಜ್ಯಾಧಿಕಾರವು ದಶಕದಿಂದ ದಶಕಕ್ಕೆ ತೀವ್ರವಾಗಿ ಖಾಸಗೀಕರಣಗೊಳ್ಳುತ್ತಿದ್ದು ಸಾರ್ವಜನಿಕ ವಲಯಗಳು ಕರಗಿ ಹೋಗುತ್ತಿವೆ.

2.ಭ್ರಷ್ಟಾಚಾರಕ್ಕೆ ಪೂರಕವಾಗುವಂತೆ ರಾಜಕೀಯ ನಡತೆಯು ಸಂವಿಧಾನದ ನಿಯಂತ್ರಣವನ್ನು ಮೀರಿ ವರ್ತಿಸುತ್ತಿದೆ. ರಾಜಕೀಯ ಅಕ್ರಮಗಳು ರಾಜ್ಯವನ್ನೆ ಲೂಟಿ ಮಾಡುತ್ತಿವೆ. ರಾಜಕಾರಣಿಗಳ ಆಸ್ತಿ ಪಾಸ್ತಿಗಳಿಗೆ ಯಾವ ಮಿತಿಯೂ ಇಲ್ಲವಾಗಿದೆ.
ಅಧಿಕಾರಶಾಹಿಯು ಜನತೆಯ ಮೇಲೆ ಭ್ರಷ್ಟಾಚಾರದ ಯುದ್ಧ ಸಾರಿದ್ದು ಆಡಳಿತದ ಪ್ರತಿಹಂತದಲ್ಲೂ ಬಡ ಜನತೆಯು ವಂಚನೆಗೆ ಈಡಾಗುತ್ತಿದೆ. ಲೂಟಿ ಸ್ವಭಾವವೂ ಸುಶಿಕ್ಷಿತವಾಗಿ ನಿರಂತರವಾಗಿ ಸಾಗುತ್ತಿದ್ದು ಇದಕ್ಕೆ ತಡೆಯೇ ಇಲ್ಲವಾಗಿದೆ.

3.ಇಡೀ ವ್ಯವಸ್ಥೆಯೆ ಖಾಸಗೀ ವಲಯದಂತೆ ರೂಪಾಂತರಗೊಂಡು ಸರ್ಕಾರವು ರಾಜಕಾರಣಿಗಳ ಅವರವರ ಪಕ್ಷಗಳ ಹಾಗು ಅವರ ನಾಯಕರ ಸ್ವತ್ತಾಗಿ ಬಳಕೆಯಾಗುತ್ತಿದೆ.

4.ಜನತೆಯ ಮತಾಧಿಕಾರವನ್ನೆ ಖರೀದಿಸುವ ಪ್ರಕ್ರಿಯೆಯು ಏಕೀಕರಣೋತ್ತರ ಸಮಾಜದಲ್ಲಿ ಆಕ್ರಮಿಸಿಕೊಂಡಿದ್ದು ಪ್ರತಿನಿಧಿಗಳಾಗಬೇಕಿದ್ದ ರಾಜಕಾರಣಿಗಳೇ ಮತದಾರರ ಅಧಿಪತಿಗಳಾಗಿದ್ದಾರೆ.

5.ಪ್ರಭುತ್ವ ಎಂಬ ನಿರ್ಣಾಯಕ ಶಕ್ತಿಯು ಜನರ ರಕ್ಷಣೆಗೆ ಬರುವ ಬದಲು ಅದು ಜಾತಿ, ಧರ್ಮ, ಲಿಂಗತಾರತಮ್ಯಗಳನ್ನು ಹಾಗೂ ಬಂಡವಾಳಶಾಹಿ ರಾಜಕಾರಣಿಗಳನ್ನು ಕಾಯುವ ಅಸ್ತ್ರವಾಗಿದೆ.

6.ಖಾಸಗೀ ವಲಯವು ತೀವ್ರವಾಗಿ ಬಲಿಯುತ್ತಿದ್ದು ಅದು ಸರ್ಕಾರವನ್ನೆ ನಿಯಂತ್ರಿಸಿ ತನಗೆ ಬೇಕಾದಂತೆ ರಾಜ್ಯಾಧಿಕಾರವನ್ನೆ ಬಳಸಿಕೊಳ್ಳಬಲ್ಲಷ್ಟು ಬಲಿಷ್ಠವಾಗುತ್ತಿದೆ. ಖಾಸಗೀಕರಣ, ಉದಾರೀಕರಣ, ಜಾಗತೀಕರಣಗಳು ಜನತೆಯ ನಡುವಿನ ಪೂರ್ವಾಗ್ರಹ, ಬಿರುಕು, ಅಂತರ, ತಾರತಮ್ಯಗಳನ್ನು ಹೆಚ್ಚಿಸುತ್ತಿವೆ. ಸರ್ಕಾರಗಳು ಈ ಪ್ರಕ್ರಿಯೆಗಳಲ್ಲಿ ಪಾಲು ಪಡೆಯುತ್ತಿವೆ.

7.ಆರ್ಥಿಕ ಪ್ರಗತಿಯ ಹೆಸರಿನಲ್ಲಿ ರಾಜಕಾರಣವು ಕೋಟಿಗಟ್ಟಲೇ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದ್ದು ಸ್ವತಃ ರಾಜಕಾರಣಿಗಳೇ ಈ ಪೈಪೋಟಿಯಲ್ಲಿ ಮುಂದಾಗಿ ಒಬ್ಬರ ಮೇಲೊಬ್ಬರು ಲೂಟಿ ಆರೋಪವನ್ನು ಮಾಡುತ್ತಿದ್ದ ಕನ್ನಡ ನಾಡು ಯಾರು ಯಾರದೊ ಪಾಲಾಗುತ್ತಿದೆ.

8.ಸಮಾಜದ ಬಹುಜನ ಜಾತಿಗಳನ್ನು ಒಡೆದು ಆಳುವ ನೀತಿಯಲ್ಲಿ ಸದ್ಯದ ರಾಜಕಾರಣವು ತಂತ್ರಗಳನ್ನು ಯಶಸ್ವಿಯಾಗಿ ಚಲಾಯಿಸುತ್ತಿದೆ. ಜಾತಿಗಳಿಗಿರುವ ವೈರುಧ್ಯಗಳನ್ನೆ ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಬಳಸಿಕೊಳ್ಳುತ್ತಿವೆ. ಜಾತಿಗಳ ಒಳಮೀಸಲಾತಿಯ ವರ್ಗೀಕರಣದಿಂದ ಸಾಮಾಜಿಕ ಸಂಬಂಧ ಮತ್ತು ಸಂಘಟಿತ ಭಾವನೆಗಳನ್ನು ಛಿದ್ರಗೊಳಿಸಲಾಗುತ್ತಿದೆ.

9.ಮತೀಯ ಮೂಲಭೂತವಾದಿ ಚಿಂತನೆಗಳಿಗೆ ರಾಜ್ಯಾಧಿಕಾರವನ್ನು ಒಳಪಡಿಸಲಾಗುತ್ತಿದ್ದು ಹಿಂದೂ ಧರ್ಮದ ಮತೀಯ ವಾದ, ಮೂಲಭೂತ ವಾದಗಳ ಜೊತೆಗೆ ಹಿಂಸೆಯನ್ನು ನವೀಕರಿಸುವಲ್ಲಿ ರಾಜಕೀಯ ಪಕ್ಷಗಳೂ ಸರ್ಕಾರಗಳೂ ಮಠಮಾನ್ಯಗಳೂ ಒಂದಾಗಿ ಕಾರ್ಯ ನಿರ್ವಹಿಸುತ್ತಿವೆ.

10.ವಸ್ತುಸ್ಥಿತಿ ಹೀಗಿರುವಾಗ ಏಕೀಕರಣೋತ್ತರ ಕರ್ನಾಟಕದ ರಾಜಕೀಯ ಪ್ರಭುತ್ವದಿಂದ ಭವಿಷ್ಯವನ್ನು ನಿರೀಕ್ಷಿಸುವುದು ‘ಹೆಳವನ ಹೆಗಲ ಮೇಲೆ ಕುರುಡ ಕುಳಿತಿದ್ದಾನೆ’ ಎಂಬಂತೆ ತೋರುತ್ತದೆ. ಈ ಐವತ್ತು ವರ್ಷಗಳ ಕನ್ನಡ ಸಮಾಜದ ಒಳಗೆ ಒಳಿತು ಕೆಡುಕು ಜೊತೆಯಲ್ಲೆ ಘಟಿಸುತ್ತಿದ್ದು ಎಂಭತ್ತರ ದಶಕದಿಂದ ಕರ್ನಾಟಕದ ರಾಜಕೀಯ ನೆಲೆಯಲ್ಲಿ ವಿಪರೀತಗಳು ಆಕ್ರಮಿಸಿ ಕನ್ನಡ ಪ್ರಭುತ್ವವು ತನ್ನ ಮೂಲ ಭಾಷಿಕ ಗುಣವನ್ನೂ ಕನ್ನಡ ಸಮಾಜದ ಚಹರೆಯನ್ನೂ ಕಳೆದುಕೊಂಡಿದೆ. ಇಂತಹ ಸ್ಥಿತಿಯಲ್ಲಿ ಚರಿತ್ರೆಯ ಆದರ್ಶವೇ ಕಣ್ಮರೆಯಾಗಿರುವುದನ್ನು ಭವಿಷ್ಯದ ಹಿನ್ನೆಲೆಯಲ್ಲಿ ವಿಶೇಷವಾಗಿ ಪರಿಭಾವಿಸಬೇಕಾಗುತ್ತದೆ. ಕನ್ನಡ ಸಾಹಿತ್ಯದ ಮುಖೇನ ಕಾಣುವ ಏಕೀಕರಣೋತ್ತರ ಕರ್ನಾಟಕದ ನಿರೂಪಣೆಗಳು ಸಮಾಜ ಕೇಂದ್ರಿತವಾಗಿಯೆ ತಮ್ಮ ಸಮುದಾಯ ಪ್ರಜ್ಞೆಗಳಲ್ಲಿಯೇ ವಿಶಿಷ್ಟವಾಗಿ ಧ್ವನಿತವಾಗಿವೆ. ಕನ್ನಡ ಸಂಸ್ಕೃತಿಯ ಶೋಧಗಳಲ್ಲಿ ಅಖಂಡವಾದ ಕನ್ನಡ ಚರಿತ್ರೆಯ ಆದರ್ಶವನ್ನು ತುಂಬಿಕೊಳ್ಳುವಂತಹ ಬರಹಗಳು ಉಂಟಾಗಿವೆ. ತಕ್ಕುದಾದ ಭಾಷಿಕ ಚಳುವಳಿಗಳು ನಡೆದಿವೆ. ಚರಿತ್ರೆಯ ಆದರ್ಶವನ್ನು ಪುನರ್ರಚಿಸಿಕೊಳ್ಳುವುದೇ ಏಕೀಕರಣದ ಆಶಯವಾಗಿತ್ತು. ಆನಂತರದ ಕಾಲದಲ್ಲೂ ಅಖಂಡ ಮಾನವ ಸಮಾಜದ ಆಶಯದಲ್ಲಿ ಕನ್ನಡ ಸಮಾಜವನ್ನು ಕಟ್ಟಿಕೊಳ್ಳುವ ಯತ್ನಗಳು ತೀವ್ರವಾಗಿ ಆಗಿವೆ. ಸ್ವಾತಂತ್ರ್ಯಾ ನಂತರದ ಭಾರತದ ಏನೆಲ್ಲ ನಿರಾಶೆಗಳು ಎದುರಾಗುತ್ತಿವೆಯೊ ಅಂತವೇ ಹತಾಶೆಗಳು ಏಕೀಕರಣೋತ್ತರ ಕರ್ನಾಟಕದ ಸಮಾಜಕ್ಕೂ ಬಂದೊದಗಿವೆ. ಯಾವುದೇ ಒಂದು ನಾಡು ಉನ್ನತ ಹಂತ ತಲುಪಿದಾಗಲೂ ಅದು ಪತನವಾಗಬಲ್ಲದು. ಹೆಚ್ಚು ಕಡಿಮೆ ಸಾಮ್ರಾಜ್ಯಗಳು ಹೀಗೆಯೇ ಅವನತಿ ಕಂಡಿರುವುದು. ಹಾಗೆಯೇ ಯಾವುದೇ ಒಂದು ನಾಡು ತನ್ನೊಳಗನ ಪ್ರಭುತ್ವದ ದುಷ್ಟತೆಯಿಂದಲೇ ತನ್ನ ಕಾಲದ ಸಮಾಜದ ವಿಪರ್ಯಾಸಗಳಿಂದಲೇ ಅಧೋಗತಿಯಿಂದ ಮೇಲೆದ್ದು ವೈಭವವನ್ನು ಕಾಣುವುದು ಕೂಡ ಸಾಧ್ಯ. ಸಾಮಾಜಿಕ ಕ್ರಾಂತಿ, ಚಳುವಳಿ, ಆಂದೋಲನ ಹಾಗೂ ಪುನರುತ್ಥಾನಗಳು ಹೀಗೆಯೇ ತಮಗೆ ಬೇಕಾದ ಆದರ್ಶಗಳನ್ನು ಮರು ಸೃಷ್ಟಿಸಿಕೊಳ್ಳುವುದು.

ಏಕೀಕರಣೋತ್ತರ ಕರ್ನಾಟಕದಲ್ಲಿ ವಿಶೇಷವಾಗಿ ಎಪ್ಪತ್ತರ ದಶಕವು ಗಾಢವಾದ ಸಮುದಾಯ ಆದರ್ಶಗಳಿಂದ ನಾಡನ್ನು ಪುನರ್ರಚಿಸಲು ತೊಡಗಿದ್ದುದು ಚರಿತ್ರಾರ್ಹವಾದುದು. ಇದನ್ನೆ ಚರಿತ್ರೆಯಿಂದ ಕಲಿವ ಪಾಠ ಎನ್ನುವುದು ಹಾಗು ಸರ್ವೋದಯದ ಸಮಷ್ಠಿ ಆದರ್ಶವೆನ್ನುವುದು. ಅಖಂಡ ಬೃಹತ್ ಭಾರತದಲ್ಲಿ ಕರ್ನಾಟಕವೆನ್ನುವುದು ಒಂದು ಪುಟ್ಟ ನೆಲೆ. ಇದರೊಳಗಿನ ಸಾಮಾಜಿಕತೆಯು ಜಾಗತಿಕವಾದದ್ದೂ ಹೌದು. ಕನ್ನಡನಾಡು ಇದರಿಂದಲೇ ಜಗತ್ತಿನ ಎಲ್ಲ ದಿಕ್ಕುಗಳಿಗೂ ತೆರೆದು ನೋಡಿದ್ದುದು. ಪೂರ್ವ ಪಶ್ಚಿಮಗಳನ್ನು ಸಂಗಮಿಸಿಕೊಂಡ ಕರ್ನಾಟಕವು ಏಕೀಕರಣಾನಂತರದಲ್ಲಿ ಸಂಪೂರ್ಣ ಮಲಗಿಯೂ ಇಲ್ಲ ಹಾಗೆಯೇ ತಕ್ಕಮಟ್ಟಿನ ಎಚ್ಚರವನ್ನೂ ಪಡೆದಿಲ್ಲ. ನಾಡಿನ ಭವಿಷ್ಯದ ನಡೆಯು ಇನ್ನೂ ಬಹಳ ದೂರ ಇರುವಾಗಲೇ ಅದರ ನಡಿಗೆಯು ವಕ್ರವಾಗಿರುವುದೇ ಆತಂಕಕ್ಕೆ ಕಾರಣ. ಪ್ರಭುತ್ವವು ತಮ್ಮದೇ ಆಗಿರುವುದು ಖಾಸಗೀಕರಣಗೊಳ್ಳುತ್ತಿರುವುದು ಇಲ್ಲಿನ ಮತ್ತೊಂದು ವಿಪರ್ಯಾಸ. ನಾವೇ ಕಟ್ಟಿದ ನಾಡು, ನಾವೇ ಒಪ್ಪಿದ ಪ್ರಭುತ್ವ, ನಾವೇ ನಡೆಸುವ ಸಮಾಜ, ನಾವೇ ತೀರ್ಮಾನಿಸುವ ವ್ಯವಸ್ಥೆಗಳಲ್ಲಿ ತಮ್ಮ ಕುರುಹುಗಳೇ ಕಳೆದು ಹೋಗುತ್ತಿರುವುದರಲ್ಲಿ ಸಮುದಾಯಗಳ ಪಾತ್ರವೂ ಇದೆ. ಕೇವಲ ಹೋರಾಟಗಾರರು, ಸಾಹಿತಿಗಳು, ಚಿಂತಕರು, ಸಜ್ಜನ ರಾಜಕಾರಣಿಗಳು ಮಾತ್ರವೇ ಒಂದು ನಾಡುನುಡಿಯ ಅಸ್ತಿತ್ವಕ್ಕೆ ಸಾಕಾಗುವುದಿಲ್ಲ. ಅಖಂಡವಾಗಿ ಭಾಗವಹಿಸುವ ಸಂದರ್ಭ ಮಾತ್ರವೇ ನಾಡಿನ ನಿರ್ಣಾಯಕ ಅವಸ್ಥೆಯಾಗಬಲ್ಲದು. ಅಂತಹ ಯತ್ನಗಳು ಸಾಹಿತ್ಯ ಮತ್ತು ಸಮಾಜದ ಚೌಕಟ್ಟಿನಲ್ಲಿ ಈ ಐವತ್ತು ವರ್ಷಗಳ ವ್ಯಾಪ್ತಿಯಲ್ಲಿ ಹೇಗೆ ಆಗಿದೆ ಎಂಬ ಯತ್ನಗಳನ್ನು ಈ ಮುಂದೆ ಪರಿಶೀಲಿಸುವ.

ಬುಧವಾರ, ಮೇ 25, 2016

ಪ್ರಭುತ್ವ, ಸಮುದಾಯ ಮತ್ತು ಸಹಭಾಗಿತ್ವ – ಎರಡು ಹಳ್ಳಿಗಳ ಕತೆ


-ಪ್ರೊ.ಎಂ. ಚಂದ್ರ ಪೂಜಾರಿ

ಪಾಪಿನಾಯಕನಹಳ್ಳಿ (ಪಿ.ಕೆ.ಹಳ್ಳಿ) ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿದೆ. ಹೊಸಪೇಟೆಯಿಂದ ಬಳ್ಳಾರಿಗೆ ಹೋಗುವ ಹೆದ್ದಾರಿಯಲ್ಲಿ ಹೊಸಪೇಟೆಯಿಂದ ಸುಮಾರು ೧೨ಕಿ.ಮೀ.ದೂರದಲ್ಲಿ ಈ ಹಳ್ಳಿ ಸಿಗುತ್ತವೆ. ಒಂದು ಲೆಕ್ಕಾಚಾರ ಪ್ರಕಾರ ಇಲ್ಲಿನ ಜನ ಸಂಖ್ಯೆ ಐದು ಸಾವಿರ ಹತ್ತಿರವಿದೆ. ಹಳ್ಳಿಯಲ್ಲಿರುವ ಒಟ್ಟು ಕುಟುಂಬಗಳು ೮೫೫. ಅವುಗಳ ಜಾತಿವಾರು ವಿಂಗಡನೆ ಇಂತಿದೆ. ೧೦೬ ನಾಯಕ, ೧೧೦ ಹರಿಜನ, ೧೫೩ ಲಿಂಗಾಯತ, ೮೮ ವಡ್ಡ, ೮೦ ಕುರುಬ, ೬೯ ಮುಸ್ಲಿಂ, ೩೨ ಕ್ರಿಶ್ಚಿಯನ್ ಮತ್ತು ಇತರ ಜಾತಿಗೆ ಸೇರಿದ ೨೧೭ ಕುಟುಂಬಳಿಗೆ (ಮನೆ ತೆರಿಗೆ ರಿಜಿಸ್ಟರ್, ೧೯೯೯). ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಇಂತಿದೆ. ಕೃಷಿಕರು ೪೭೧, ಕೃಷಿ ಕಾರ್ಮಿಕರು ೪೫೮, ಪಶು ಸಂಗೋಪನೆ, ಮೀನುಗಾರಿಕೆ ಇತ್ಯಾದಿ ೧೧, ಗಣಿಗಾರಿಕೆ ಇತ್ಯಾದಿ ೧೧, ಗಣಿಗಾರಿಕೆ ೩೧೪, ಗುಡಿ ಕೈಗಾರಿಕೆ ೩, ಆಧುನಿಕ ಕೈಗಾರಿಕೆ ೧೭ ಕಟ್ಟೋಣ ಕೆಲಸ ೩೪, ವಾಣಿಜ್ಯ/ವ್ಯಾಪಾರ ೪೨ ಮತ್ತು ಸಾರಿಗೆ ಸಂಪರ್ಕ ೧೫೭ (ಸೆನ್ಸಸ್, ೧೯೯೧). ಹಳ್ಳಿಯ ಒಟ್ಟು ಕೃಷಿ ಭೂಮಿಯಲ್ಲಿ ಬಹು ಪಾಲು ಇಲ್ಲಿನ ಲಿಂಗಾಯತರ ಒಡೆತನದಲ್ಲಿದೆ. ಉಳಿದ ಜಾತಿಯವರಲ್ಲೂ ಜಮೀನು ಇದೆ. ಆದರೆ ಅದರ ಪ್ರಮಾಣ ಕಡಿಮೆ(ಅರುಣೋದಯ,೧೯೯೯). ಐವತ್ತರ ದಶಕದಲ್ಲೇ ಡಾಲ್ಮಿಯಾ ಕಂಪೆನಿಯವರು ಹಳ್ಳಿಯ ಸರಹದ್ದಿಯಲ್ಲಿ ಗಣಿಗಾರಿಕೆ ಶುರುಮಾಡಿದ್ದರು. ಹಲವಾರು ಕಾರಣಗಳಿಂದ ಹಳ್ಳಿಯ ಕೆಳ ವರ್ಗ ಆರಂಭದ ದಿನಗಳಲ್ಲಿ ಗಣಿ ಕೆಲಸಕ್ಕೆ ಹೋಗಿರಲಿಲ್ಲ. ಆದರೆ ೧೯೭೦ರ ನಂತರ ಕೃಷಿ ಕಾರ್ಮಿಕರು ಮತ್ತು ಸಣ್ಣ ರೈತರು ಗಣಿ ಕೆಲಸಕ್ಕೆ ಹೋಗಲು ಆರಂಭಿಸಿದರು. ಇಂದು ಅಲ್ಲಿ ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಶೇಕಡಾ ೬೦ ದಾಟಿದೆ. ಅದರಲ್ಲಿ ಶೇಕಡಾ ತೊಂಬತ್ತರಷ್ಟು ಗಣಿ ಕೆಲಸ. ಇದು ಉತ್ತರ ಕರ್ನಾಟಕದ ಇತರ ಹಳ್ಳಿಗಳಿಗೆ ಹೋಲಿಸಿದರೆ ತುಂಬ ಭಿನ್ನವಾದ ಚಿತ್ರಣ. ಅದಕ್ಕೆ ಗಣಿ ಕೆಲಸ ಕೊಡುವ ಸ್ವಲ್ಪ ಹೆಚ್ಚಿನ ಸಂಬಳ ಒಂದು ಕಾರಣವಾದರೆ ಕೃಷಿಗೆ ಅಗತ್ಯವಿರುವ ನೀರಾವರಿ ಕೊರತೆ ಮತ್ತೊಂದು ಕಾರಣ. ಹೊಸಪೇಟೆಯಲ್ಲಿ ತುಂಗಭದ್ರಾ ಆಣೆಕಟ್ಟು ಆದಾಗ ಊರಿನ ನೀರಿನ ಸಮಸ್ಯೆ ಪರಿಹಾರವಾದೀತೆಂಬ ದೂರದ ಕನಸು ಊರವರಿಗಿತ್ತು. ಆಣೆಕಟ್ಟಿನ ಕೆಲಸ ನಡಿಯುತ್ತಿದ್ದಾಗ ಊರೆಲ್ಲಾ ಅದೇ ಸುದ್ಧಿಯಂತೆ. ತುಂಗಭದ್ರಾ ಅಣೆಕಟ್ಟೆಯ ಮೇಲ್ದಂಡೆ ಕಾಲುವೆ (ಆಂಧ್ರಕ್ಕೆ ಹೋಗುವ ಕಾಲುವೆ) ಕಾರಿಗನೂರು, ವಡ್ಡರಹಳ್ಳಿ, ಪಾಪಿನಾಯಕನ ಹಳ್ಳಿಗಾಗಿ ಹೋಗುವ ಸಾಧ್ಯತೆ ಇತ್ತೆಂದು ಊರವರ ಅಭಿಪ್ರಾಯ. ಆದರೆ ಆ ರೀತಿ ಆಗಲಿಲ್ಲ. ಆಂಧ್ರಕ್ಕೆ ಹೋಗುವ ಕಾಲುವೆ ಇವರ ಊರ ಸಮೀಪನೂ ಬರಲಿಲ್ಲ.

ಊರ ಕೆರೆಗಳು

ಇತರ ಊರುಗಳಂತೆ ಇಲ್ಲಿ ಕೂಡಾ ಕೆರೆಗಳಿವೆ. ಒಂದು ಆಂಜನೇಯ ಗುಡಿ ಹಿಂದಿರುವ ಈಶ್ವರನ ಕೆರೆ ಮತ್ತೊಂದು ಡಾಲ್ಮಿಯಾ ಗಣಿಗೆ ಹೋಗುವ ದಾರಿಯಲ್ಲಿರುವ ಸೆಟ್ಟಿ ಕೆರೆ. ಈಶ್ವರನ ಕೆರೆ ಮಳೆಗಾಲದಲ್ಲಿ ತುಂಬುತ್ತದೆ. ಅದರ ಪಾತ್ರ ಚಿಕ್ಕದು. ಕೆರೆಗೆ ನೀರುಣಿಸುವ ಮೂಲಗಳು ಕಡಿಮೆ. ಜನರ, ದನಕರುಗಳ ಸ್ನಾನಕ್ಕೆ ಮತ್ತು ಊರವರ ಬಟ್ಟೆ ಒಗೆತಕ್ಕೆ ಈ ಕೆರೆ ಸೀಮಿತ. ಈ ಕೆರೆಯ ಕೆಳಭಾಗದಲ್ಲಿ ಕೆಲವು ಹೊಳಗಳಿವೆ. ಮುಸ್ಲಿಮರಿಗೆ ಸೇರಿದ್ದು. ಆದಾಗ್ಯೂ ಈ ಕೆರೆಯ ನೀರು ಕೃಷಿಗೆ ಬಳಕೆಯಾಗುತ್ತಿಲ್ಲ. ಜನವರಿ-ಫೆಬ್ರವರಿ ತಿಂಗಳಿಗಾಗುವ ನೀರು ಖಾಲಿಯಾಗಿ ಕೆರೆ ಬತ್ತಿರುತ್ತದೆ. ಮತ್ತೊಂದು ಸೆಟ್ಟಿಕೆರೆ. ಇದು ಡಾಲ್ಮಿಯಾ ಗಣಿಗೆ ಹೋಗುವ ರಸ್ತೆಯಲ್ಲಿದೆ. ಜಿಜಿ.ಬ್ರದರ್ಸ್‌ ಫ್ಯಾಕ್ಟರಿಯ ಎದುರು ಭಾಗದ ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ.ಸಾಗಿದರೆ ಗುಡ್ಡಗಳ ಸಾಲುಗಳು ಆರಂಭವಾಗುತ್ತದೆ. ಅಲ್ಲೆ ಎರಡು ಗುಡ್ಡಗಳು ಪರಸ್ಪರ ಮುಖ ಮಾಡಿ ನಿಂತಿವೆ. ಆ ಗುಡ್ಡಗಳ ನಡುವೆ ಒಳ ಹೋಗಲು ಕಣಿವೆಯಿದೆ. ಆ ಕಣಿವೆಯ ಮೂಲಕ ಒಳ ಹೊಕ್ಕರೆ ಹಲವಾರು ಎಕ್ರೆಗಳಷ್ಟು ಸಮತಟ್ಟಾದ ಭೂಮಿ ನಂತರ ಪುನಃ ಗುಡ್ಡಗಳ ಸಾಲುಗಳು. ಪರಸ್ಪರ ಮುಖ ಮಾಡಿ ನಿಂತಿರುವ ಎರಡು ಗುಡ್ಡಗಳನ್ನು -ಸ್ವಲ್ಪ ಒಳ ಭಾಗದಲ್ಲಿ -ಸೇರಿಸಿ ವಿಜಯನಗರ ಕಾಲದಲ್ಲೆ ಸೆಟ್ಟಿಕೆರೆ ನಿರ್ಮಾಣವಾಗಿತ್ತು. ಸುಮಾರು ಐವತ್ತು ಎಕ್ರೆಗಳಷ್ಟು ಸಮತಟ್ಟಾದ ಭೂಮಿ ಕೆರೆಯ ಪಾತ್ರವಾಗಿದೆ. ಮಳೆಗಾಲದಲ್ಲಿ ಗುಡ್ಡಗಳ ಮೇಲೆ ಸುರಿಯುವ ನೀರು ಹರಿದು ಈ ಕೆರೆ ಸೇರುತ್ತದೆ. ಹಿಂದಿನ ಕಾಲದಲ್ಲಿ ಈ ಕೆರೆ ಒಂದು ತಡೆ ಕೆರೆ (ಚೆಕ್ ಡ್ಯಾಮ್) ಇದ್ದಂತೆ. ಇದರ ಕೆಳಭಾಗದಲ್ಲಿ ವಡ್ಡರ ಹಳ್ಳಿ ಕೆರೆ ನಂತರ ಕಮಲಾಪುರ ಕೆರೆಗಳಿವೆ. ಮಳೆಗಾಲದಲ್ಲಿ ಸುರಿಯುವ ನೀರನ್ನು ಹಲವಾರು ಹಂತಗಳಲ್ಲಿ ತಡೆ ಹಿಡಿದು ಆಯಾಯ ಪ್ರದೇಶದ ಜನರ ಉಪಯೋಗಕ್ಕೆ ಬಳಸುವ ಕಲೆ ಹಿಂದಿನಿಂದಲೇ ಕರಗತವಾಗಿತ್ತು.
ಆದರೆ ಈಗ ಸ್ಥಿತಿ ತೀರಾ ಭಿನ್ನವಾಗಿದೆ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಈ ಕೆರೆಯ ಕಟ್ಟೆ ಹರಿಯಿತು. ಆರಂಭದಲ್ಲಿ ತುಂಬಾ ಚಿಕ್ಕ ಪ್ರಮಾಣದ ಬಿರುಕಿತ್ತಂತೆ, ನಂತರ ಅದು ಬೆಳೆಯಿತು. ಈಗ ಅದು ಚಿಕ್ಕ ಪ್ರಮಾಣದ ನದಿಯಷ್ಟು ವಿಶಾಲವಾಗಿದೆ. ಇದೆಲ್ಲಾ ಊರವರ ಕಣ್ಣ ಮುಂದೆಯೇ ಆಗಿದೆ. ಜಾಸ್ತಿ ಮಳೆಯಾದಾಗ ಈ ನದಿ ತುಂಬಿ ಹರಿಯುತ್ತದೆ. ಗಣಿ ಪ್ರದೇಶದ ಕಲ್ಲು, ಬಿಡಿ ಮಣ್ಣುಗಳನ್ನು ಕೆಳಭಾಗದ ಹೊಲಗಳಲ್ಲಿ ಇದು ತುಂಬುತ್ತದೆ. ವಿಚಿತ್ರವೆಂದರೆ ಕೋಡಿ ಹರಿದು ಕಲ್ಲು ಮಣ್ಣಿಂದ ತುಂಬಿರುವ ಹೊಲಗಳಲ್ಲಿ ಬಹುತೇಕ ಹೊಲಗಳು ಹಿಂದೆ ಸ್ಥಳೀಯ ರಾಜಕೀಯದಲ್ಲಿ ಪ್ರಬಲರಾಗಿದ್ದ ಮೇಟಿ ಲಿಂಗಾಯತ ಕುಟುಂಬಳಿಗೆ ಸೇರಿದ್ದು. ಊರ ಪ್ರಮುಖರು ಈ ಕೆರೆಯ ರಿಪೇರಿಗೆ ಪ್ರಯತ್ನಿಸಿಲ್ಲ. ಕೆಲವು ಬಾರಿ ಕೆರೆ ರಿಪೇರಿಗಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ. ಹಿಂದೊಂದು ಬಾರಿ ಘೋರ್ಪಡೆಯವರು ಗ್ರಾಮೀಣ ಅಭಿವೃದ್ಧಿ ಮಂತ್ರಿಯಾಗಿದ್ದಾಗ ಕೆರೆ ರಿಪೇರಿ ಮಾಡಿಸುವ ಭರವಸೆ ಇತ್ತಿದ್ದಾರಂತೆ. ಆದರೆ ಡಾಲ್ಮಿಯ ಗಣಿ ಮಾಲಿಕರು ಅಡ್ಡಗಾಲು ಹಾಕಿದುದರಿಂದ ಕೆಲಸ ಮುಂದುವರಿಯಲಿಲ್ಲ ಎಂದು ಸ್ಥಳೀಯರ ಅಭಿಪ್ರಾಯ. ಘೋರ್ಪಡೆಯವರು ಪುನಃ ಗ್ರಾಮೀಣ ಅಭಿವೃದ್ಧಿ ಮಂತ್ರಿಗಳಾಗಿದ್ದಾರೆ. ೧೯೯೯ರಲ್ಲಿ ಪುನಃ ಈ ಕೆರೆಗೆ ಪುನರ್ ಜೀವ ಕೊಡುವ ಮಾತುಕತೆ ಕೇಳಿಬಂತು. ಈ ಕೆರೆಗೆ ಮತ್ತು ಇದರ ಕೆಳಭಾಗದಲ್ಲಿ ಬರುವ ವಡ್ಡರ ಹಳ್ಳಿ ಕೆರೆಗೆ ಚೆಕ್ ಡ್ಯಾಮ್ ಕಟ್ಟಿಸಲು ಒಂದೊಂದು ಕೋಟಿ ರೂಪಾಯಿ ಮಂಜೂರು ಮಾಡಿದ್ದಾರೆ ಎಂಬ ಸುದ್ಧಿಯಾಯಿತು. ಆದರೆ ಯಾವುದು ಕಾರ್ಯರೂಪಕ್ಕೆ ಬರಲಿಲ್ಲ. ಈ ಕೆರೆಗೆ ಪುನರ್ ಜೀವ ಬಂದರೆ ಎರಡು ಅನುಕೂಲಗಳಿವೆ. ಒಂದು, ೨೦೦ ರಿಂದ ೩೦೦ ಎಕ್ರೆ ಭೂಮಿಗೆ ನೀರಾವರಿ ಸಾಧ್ಯತೆ ಇದೆ. ಭೂಗರ್ಭದಲ್ಲಿ ನೀರಿನ ಮಟ್ಟ ಏರುವುದರಿಂದ ಬೋರ್‌ವೆಲ್ ಹಾಕಿ ಕೃತಕ ನೀರಾವರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ಸಂಘಟಿತ ಪ್ರಯತ್ನ
ಊರಿನ ಹಿರಿಯರು, ಸ್ಥಳೀಯ ರಾಜಕಾರಣಿಗಳು, ಮಂತ್ರಿಗಳು ಇವರೆಲ್ಲ ಕೆರೆ ನಿರ್ಮಾಣದ ಮಾತುಗಳನ್ನು ಹಲವಾರು ವರ್ಷಗಳಿಂದ ಆಡುತ್ತಲೇ ಬಂದಿದ್ದಾರೆ. ಆದರೆ ವಾಸ್ತವದಲ್ಲಿ ಕೆರೆ ನಿರ್ಮಾಣದ ಒಂದಿಂಚು ಕೆಲಸ ಕೂಡ ನಡೆದಿಲ್ಲ. ಅರ್ಜಿ ಕೊಡುವುದರಿಂದ ಅಥವಾ ಮಂತ್ರಿಗಳು ಬಂದಾಗ ಅವರ ಗಮನಕ್ಕೆ ತರುವುದರಿಂದ ಈ ಕೆಲಸ ಆಗುವುದಿಲ್ಲ ಎಂಬ ಸತ್ಯ ಹಳ್ಳಿಯ ಯುವಕರ ಗಮನಕ್ಕೆ ಬಂತು. ಆದುದರಿಂದ ತಾವೇ ಮುಂಚೂಣಿಗೆ ಬಂದು ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಕೆರೆ ನಿರ್ಮಾಣವಾಗಲಿ ರಿಪೇರಿ ಆಗಲಿ ಆಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಈ ಯುವಕರ ಬಗ್ಗೆ ಸ್ವಲ್ಪ ಹೇಳಬೇಕು. ಸುಮಾರು ಐದು ಮಂದಿ ಯುವಕರು ತಮ್ಮ ಕಾಲೇಜು ಓದಿನ ಸಂದರ್ಭದಲ್ಲಿ ಊರಲ್ಲೊಂದು ಯುವಕ ಮಂಡಲ ಆರಂಭಿಸಿದ್ದರು. ಅದು ತುಂಬ ಸಕ್ರಿಯವಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಿತ್ತು. ಓದು ಮುಗಿಸಿ ಕೆಲವರು ಕೆಲಸ ಸೇರಿಕೊಂಡರು. ಇನ್ನು ಕೆಲವರು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಬೇರೆ ಕಡೆ ಹೋದರು. ಹೀಗೆ ಆ ಯುವಕ ಮಂಡಲ ನಿಂತು ಹೋಯಿತು. ಸ್ನಾತಕೋತ್ತರ ಪದವಿ ಮುಗಿಸಿ ಒಬ್ಬರು ಸರಕಾರಿ ಕಾಲೇಜಲ್ಲಿ ತಾತ್ಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತೊಬ್ಬರು ಕೆಲಸ ಸಿಗದೆ ಊರಲ್ಲಿ ತಮ್ಮ ಕೃಷಿ ನೋಡುತ್ತಿದ್ದಾರೆ. ಎಲ್ಲರಿಗೂ ಮದುವೆ ಆಗಿ ಎರಡು ಮೂರು ಮಕ್ಕಳು ಇವೆ. ಹಲವಾರು ವರ್ಷಗಳ ನಂತರ ಹಿಂದೆ ಯುವಕ ಮಂಡಲದಲ್ಲಿ ಸಕ್ರಿಯರಾಗಿದ್ದ ಹೆಚ್ಚಿನ ಯುವಕರು ಪುನಃ ಊರಿಗೆ ಬಂದಿದ್ದಾರೆ. ಊರಲ್ಲಿ ನೀರಾವರಿ ಸಮಸ್ಯೆ ಬಿಗಡಾಯಿಸಿದೆ. ಪರಿಹಾರ ಸಿಗುವ ಲಕ್ಷಣವೇ ಕಾಣುತ್ತಿಲ್ಲ. ಯುವಕರಿಗೆ ಊರಿನ ಸ್ಥಿತಿಯಲ್ಲಿ ಸುಧಾರಣೆ ತರಬೇಕೆಂಬ ಇಚ್ಚೆ. ಅದಕ್ಕಾಗಿ ಗ್ರಾಮಪಂಚಾಯತ್ ಚುನಾವಣೆಗೂ ನಿಲ್ಲುವ ಆಲೋಚನೆ ಮಾಡಿದ್ದರು. ಆದರ ಹಲವಾರು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಊರವರನ್ನೆಲ್ಲ ಒಟ್ಟು ಮಾಡಿಯಾದರೂ ಕೆರೆ ನೀರಾವರಿ ಸಮಸ್ಯೆ ಪರಿಹರಿಸಬೇಕೆಂಬ ಬಯಕೆ ಅವರದ್ದು. ಇದಕ್ಕಾಗಿ ಹಳ್ಳಿಯವರು ಅದರಲ್ಲೂ ಮುಖ್ಯವಾಗಿ ಕೆರೆ ನೀರು ಬಳಕೆದಾರರು ಸಂಘಟಿತ ಪ್ರಯತ್ನ ಮಾಡಬೇಕೆಂಬ ತೀರ್ಮಾನಕ್ಕೆ ಬಂದರು.

ಸಂಘಟಿತ ಪ್ರಯತ್ನಕ್ಕೊಂದು ಸಮಿತಿ ರಚಿಸುವ ಉದ್ದೇಶದಿಂದ ನೀರು ಬಳಕೆದಾರರ ಸಭೆಯೊಂದನ್ನು ಕಳೆದ ವರ್ಷ ಜೂನ್ ತಿಂಗಳಲ್ಲಿ ಪಂಚಾಯತ್ ಆವರಣದಲ್ಲಿ ಕರೆದರು. ಸಭೆಗೆ ಎಲ್ಲ ಜಾತಿಯಿಂದಲೂ ಪ್ರತಿನಿಧಿಗಳು ಬರುವಂತೆ ನೋಡಿಕೊಂಡರು. ಐದು ಗಂಟೆಗೆ ಆರಂಭವಾಗಬೇಕಾದರೆ ಸಭೆ ಸುಮಾರು ಆರು ಗಂಟೆಗೆ ಆರಂಭವಾಯಿತು. ಬಂದವರಲ್ಲಿ ಯುವಕರ ಸಂಖ್ಯೆಯೇ ಹೆಚ್ಚಿತ್ತು. ಊರಿನ ಪ್ರಮುಖರೆಂದು ಗುರುತಿಸಬಹುದಾದ ಕೆಲವು ಹಿರಿಯರು ಬಂದಿದ್ದರು. ಹಲವಾರು ವರ್ಷಗಳಿಂದ ಊರವರ ಕೆರೆ ಆದೀತೆಂಬ ನಂಬಿಕೆಯಿಂದ ಕಾದಿರುವುದು, ಆದರೆ ಆ ನಂಬಿಕೆ ಸುಳ್ಳಾಗುತ್ತಾ ಬಂದಿರುವುದು, ಈ ನಿಟ್ಟಿನಲ್ಲಿ ಊರವರೆಲ್ಲ ಒಟ್ಟು ಸೇರಿ ಸಂಘಟಿತವಾಗಿ ಸೆಟ್ಟಿಕೆರೆ ನಿರ್ಮಾಣ ಮತ್ತು ಈಶ್ವರನ ಕೆರೆ ರಿಪೇರಿಗೆ ಪ್ರಯತ್ನಿಸಬೇಕಾದ ಅನಿವಾರ್ಯತೆ ಬಂದಿರುವುದು ಮತ್ತು ಅದಕ್ಕಾಗಿ ಒಂದು ಸಮಿತಿ ರಚಿಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ ಎಂದು ಸಭೆಯ ಉದ್ದೇಶವನ್ನು ಯುವಕರಲ್ಲೊಬ್ಬರು ವಿವರಿಸಿದರು. ಉದ್ದೇಶ ವಿವರಣೆಯನ್ನು ಕೇಳಿದ ಸಭೆ ಸ್ವಲ್ಪ ಹೊತ್ತು ಮೌನ ಇತ್ತು. ಯಾರು ಏನೂ ಮಾತಾಡಿಲ್ಲ. ಏನಾದರೂ ಹೇಳಿ ಎಂದು ಯುವಕರು ಹಿರಿಯರ ಮುಖ ನೋಡಿದರು. ಸಭೆಗೆ ಬಂದಿದ್ದ ಮಾಜಿ ಮಂಡಲ ಅಧ್ಯಕ್ಷರು, ‘ಕೆರೆ ಕುರಿತು ಜಿಲ್ಲಾ ಪಂಚಾಯತ್ ಸದಸ್ಯರಲ್ಲಿ ನಾವು ಕೇಳಿದ್ದೇವೆ. ಅವರು ಈ ವರ್ಷದ ಯೋಜನೆಯಲ್ಲಿ ಸೇರಿಸುತ್ತೇವೆ ಎಂದು ಭರವಸೆ ಇತ್ತಿದ್ದಾರೆ. ಸೇರಿಸದಿದ್ದರೆ ನಾವು ಪ್ರತಿಭಟಿಸುವ ಅದಕ್ಕೆ ಮುನ್ನವೇ ನಾವು ಸಂಘ, ಪ್ರತಿಭಟನೆ ಎಂದು ಮಾತಾಡಿದರೆ ಸರಿಯಾಗುವುದಿಲ್ಲ,’ ಎಂದರು. ಅದಕ್ಕೆ ಹಾಲಿ ಪಂಚಾಯತ್ ಅಧ್ಯಕ್ಷರು ಧ್ವನಿ ಸೇರಿಸಿದರು. ‘ನಾವು ಎಷ್ಟು ಸಮಯ ಇದೇ ರೀತಿ ಕಾಯವುದು. ಒಂದು ವೇಳೆ ಹಿರಿಯರು ಹೇಳಿದಂತೆ ಈ ಬಾರಿಯ ಜಿಲ್ಲಾ ಪಂಚಾಯತ್ ಯೋಜನೆಯಲ್ಲಿ ಸೇರಿದರೆ ಒಳ್ಳೆಯದೆ ಆಯಿತು. ನಾವು ಸಂಘ ರಚಿಸಿಕೊಂಡರೆ ವೇಸ್ಟ್ ಆಗುವುದಿಲ್ಲ. ಈಶ್ವರನ ಕೆರೆ ರಿಪೇರಿ ಮಾಡಲು ಒಟ್ಟು ಸೇರಬಹುದು ಅಥವಾ ಹಳ್ಳಿಯಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು,’ ಎಂದು ಮತ್ತೊಬ್ಬ ಯುವಕರು ವಾದಿಸಿದರು.

ಇದರಿಂದ ಪ್ರೇರಿತವಾದ ಮತ್ತೊಬ್ಬರು ಹಾಲಿ ಪಂಚಾಯತ್ ಅಧ್ಯಕ್ಷರನ್ನು ಉದ್ಧೇಶಿಸಿ, ‘ನೀವು ಅಧಿಕಾರಕ್ಕೆ ಬಂದು ಒಂದು ವರ್ಷ ಆಗುತ್ತಾ ಬಂತು. ಕೆರೆ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಕೇಳಿದರೆ ಬಳ್ಳಾರಿಗೆ ಹೋದೆ, ಹೊಸಪೇಟೆಗೆ ಹೋದೆ, ಅವರನ್ನು ಕಂಡೆ, ಇವರನ್ನು ಕಂಡೆ ಎಂದು ಹೇಳುವುದು ಬಿಟ್ಟರೆ ನೀವು ಏನನ್ನಾದರು ಸಾಧಿಸಿದ್ದೀರಾ?,’ ಎಂದು ಸ್ವಲ್ಪ ಕಟುವಾಗಿಯೇ ಟೀಕಿಸಿದರು. ಇದು ಸ್ವಲ್ಪ ವಿಕೋಪಕ್ಕೆ ಹೋಗುವ ಲಕ್ಷಣ ನೋಡಿ ಸಭೆ ಸಂಯೋಜಿಸಿದ ಯುವ ನಾಯಕರಲ್ಲೊಬ್ಬರು, ‘ನಾವು ಸಭೆ ಸೇರಿದ ಮುಖ್ಯ ಉದ್ದೇಶ ಬಗ್ಗೆ ಸಂಯೋಜಿಸಿದ ಯುವ ನಾಯಕರಲ್ಲೊಬ್ಬರು, ‘ನಾವು ಸಭೆ ಸೇರಿದ ಮುಖ್ಯ ಉದ್ದೇಶ ಬಗ್ಗೆ ಆಲೋಚಿಸುವ. ನಾವು ಸಂಘಟಿತರಾಗಿ ಪ್ರಯತ್ನಿಸುವ ಅಗತ್ಯ ಇದೆಯೇ? ಇದ್ದರೆ ಒಂದು ಸಮಿತಿ ರಚಿಸುವ ಬಗ್ಗೆ ಚರ್ಚಿಸುವ,’ ಎಂದರು. ಅದಕ್ಕೆ ಸೇರಿದ ಹಿರಿಯರು ಮತ್ತು ಯುವಕರು ಸಮಿತಿ ರಚಿಸಬಹುದು ಎಂದು ಒಪ್ಪಿಗೆ ಇತ್ತರು. ಸಮಿತಿಯ ಸದಸ್ಯರಾಗಲು ಆಸಕ್ತಿ ಇರುವವರು ಕೈ ಎತ್ತಿ ತಮ್ಮ ಒಪ್ಪಿಗೆ ನೀಡಿ ಎಂದರು ಸಂಯೋಜಕರು. ಯಾರು ಕೈ ಎತ್ತಲಿಲ್ಲ. ಯಾರ್ಯಾರು ಸಮಿತಿಯ ಸದಸ್ಯರು ಆಗಬಹುದೆಂದು ಹೆಸರು ಸೂಚಿಸಲು ಸಭಿಕರಿಗೆ ಕೇಳಲಾಯಿತು. ಆಗ ಸಭಿಕರು ಅಲ್ಲಿ ಸೇರಿದವರ ಕೆಲವರ ಹೆಸರನ್ನು ಹೇಳಲು ಆರಂಭಿಸಿದರು. ಆರಂಭದಲ್ಲಿ ನಿಧಾನವಾಗಿ ಒಂದೊಂದು ಹೆಸರು ಬಂದವು. ನಂತರ ಅಲ್ಲಿದ್ದವರು ಯಾವುದೋ ಅಧಿಕಾರ ಹಂಚಿಕೆಯಲ್ಲಿ ತಮ್ಮ ಅವಕಾಶ ಎಲ್ಲಿ ತಪ್ಪಿ ಹೋಗುತ್ತದೋ ಎನ್ನುವ ರೀತಿಯಲ್ಲಿ ಅಥವಾ ತಮ್ಮ ಪೈಕಿ ಯಾರದರೊಬ್ಬರು ಸಮಿತಿಯಲ್ಲಿರಬೇಕು ಎನ್ನುವ ರೀತಿಯಲ್ಲಿ ಹೆಸರನ್ನು ಸೂಚಿಸಲು ಆರಂಭಿಸಿದರು. ಸಂಯೋಜಕರು ಪುನಃ ತಡೆದು, ‘ನೋಡಿ ಈ ಸಮಿತಿ ಮಾಡುವುದು ಯಾವುದೇ ಅಧಿಕಾರ ಹಂಚಿಕೊಳ್ಳಲು ಅಲ್ಲ; ಜವಾಬ್ದಾರಿ ಹೊರಲು, ಕೆಲಸ ಮಾಡಲು ಆಸಕ್ತಿ ಇದ್ದವರ ಹೆಸರು ಮಾತ್ರ ಸೂಚಿಸಿ,’ ಎಂದರು ಆದರೂ ಸದಸ್ಯರ ಸಂಖ್ಯೆ ಮೂವತ್ತು ದಾಟಿತು. ಹೇಳಿದವರಿಗೆ ಬೇಸರ ಮಾಡುವುದು ಬೇಡ ಎಂದು ಹೆಸರುಗಳನ್ನು ಪಟ್ಟಿ ಮಾಡಿಕೊಂಡರು. ಇನ್ನು ಪದಾಧಿಕಾರಿಗಳ ಆಯ್ಕೆ ಆಗಬೇಕೆಂದಾಯಿತು. ಅದನ್ನು ಮುಂದಿನ ಮೀಟಿಂಗ್‌ನಲ್ಲಿ ಮಾಡುವ ಅದರ ದಿನ ನಿರ್ಧರಿಸುವ ಎಂದು ಮತ್ತೊಬ್ಬರು ಸಲಹೆ ಇತ್ತರು. ಅದರಂತೆ ಮೂರು ದಿನ ಬಿಟ್ಟು ಮುಂದಿನ ಸಭೆ ಇದೆ ಎಲ್ಲರು ತಮ್ಮ ಜತೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರನ್ನು ಕರೆದುಕೊಂಡು ಬರಬೇಕೆಂದು ತಿಳಿಸಿ ಅಂದಿನ ಸಭೆಯನ್ನು ಬರ್ಕಾಸ್ತುಗೊಳಿಸಿದರು.

ಮೂರು ದಿನ ಬಿಟ್ಟು ಸಭೆಯ ಸಂಯೋಜಕರು ಐದು ಗಂಟೆಗೆ ಪಂಚಾಯತ್ ಆವರಣದಲ್ಲಿ ಬಂದು ಕಾದರು. ಗಂಟೆ ಐದೂವರೆ ಆದರು ಒಂದು ನರಪಿಳ್ಳೆಯೂ ಪಂಚಾಯತ್ ಕಟ್ಟಡದತ್ತ ಬರುವುದು ಕಾಣಲಿಲ್ಲ. ಎಲ್ಲರು ಸಭೆಯ ಬಗ್ಗೆ ಮರೆತಿರಬಹುದೋ ಏನೋ ಎಂದು ಸಂಯೋಜಕರು ಊರಿನ ಮಧ್ಯ ಇರುವ ಲಿಂಗಾಯತರ ಹೊಟೇಲ ಹತ್ತಿರ ಬಂದರು. ಊರ ಪ್ರಮುಖರು ಸಂಜೆ ಹೊತ್ತು ಸೇರುವ ಜಾಗ ಅದು. ನೋಡಿದರೆ ಹಿಂದಿನ ಸಭೆಗೆ ಹಾಜರಾದ ಬಹುತೇಕ ಹಿರಿಯರು ಅಲ್ಲಿದ್ದರು. ಅವರನ್ನು ಕಂಡು ಬನ್ನಿ ಸಭೆ ಶುರು ಮಾಡುವ ಎಂದರು ಸಂಯೋಜಕರು. ಅಲ್ಲಿ ಸೇರಿದವರಲ್ಲಿ ಒಂದು ಗುಂಪು, ‘ನೀವು ಸಭೆ ಶುರು ಮಾಡಿ ನಾವು ಅರ್ಜೆಂಟಾಗಿ ಅಂಗಡಿಯವರು ಬಾಳೆ ತೋಟ ನೋಡಿ ಬರುತ್ತೇವೆ,’ ಎಂದು ಮಾಜಿ ಮಂಡಲ ಅಧ್ಯಕ್ಷೆ ನೇತೃತ್ವದಲ್ಲಿ ಹೊಲದ ಕಡೆಗೆ ಹೊರಟೇ ಬಿಟ್ಟಿತು. ಸಂಯೋಜಕರಲ್ಲಿ ಒಬ್ಬರು ಅವರನ್ನು ತಡೆದು ಸಭೆ ಮುಗಿಸಿಕೊಂಡು ಹೋಗಿ ಎಂದು ಕೇಳಿಕೊಂಡರೂ ಅವರು ಕೇಳಲಿಲ್ಲ. ಸುಮಾರು ಹತ್ತು ಮಂದಿಯ ಗುಂಪು ಹೊಲದ ಕಡೆಗೆ ಹೋಗಿಯೇ ಬಿಟ್ಟಿತು. ಹಾಲಿ ತಾಲ್ಲೂಕು ಪಂಚಾಯತ್ ಸದಸ್ಯರು ಮತ್ತು ಅವರ ಸಂಗಡಿಗರನ್ನು ಕರೆದುಕೊಂಡು ಸಂಯೋಜಕರು ಪಂಚಾಯತ್ ಆವರಣಕ್ಕೆ ಬಂದರು. ಅಲ್ಲಿ ಸೇರಿದರು. ಏಳೆಂಟು ಜನ ಆಗಲಿಲ್ಲ. ಅಷ್ಟು ಜನ ಸೇರಿಸಿಕೊಂಡು ಮೀಟಿಂಗ್ ಮಾಡುವುದು ಸರಿಯಲ್ಲ ಎಂದು ಹೊಲಕ್ಕೆ ಹೋದ ಸದಸ್ಯರಿಗಾಗಿ ಕಾದರು.

ಅದೇನು ಅವರು ಈಗ ಹೊಲಕ್ಕೆ ಹೋಗುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ ಎಂದು ಸಂಯೋಜಕರಲ್ಲೊಬ್ಬರು ತಾ.ಪ.ಸದಸ್ಯರ ಗುಂಪಿನವರಲ್ಲಿ ಕೇಳಿದರು. ‘ಅಂಗಡಿಯವರು ಬಾಳೆ ಗಿಡ ಹಾಕಲು ತುಂಗಭದ್ರಾ ಸಹಕಾರಿ ಬ್ಯಾಂಕಿನಿಂದ ಸಾಲ ಮಾಡಿದ್ದಾನೆ. ಬ್ಯಾಂಕ್ ಮೇನೇಜರ್ ನಮ್ಮ ವೀರಭದ್ರಪ್ಪನವರ (ಹಳ್ಳಿಯ ಶ್ರೀಮಂತ ಕುಳಗಳಲ್ಲಿ ಒಬ್ಬರು) ಅಳಿಯ ಸಾಲ ಕೊಟ್ಟ ಬ್ಯಾಂಕಿನವರು ತೋಟ ನೋಡುವ ಕ್ರಮ ಇದೆಯಂತೆ. ಬ್ಯಾಂಕ್ ಮೆನೇಜರ್, ‘ನನ್ನ ಪರವಾಗಿ ನೀವೆ ತೋಟ ನೋಡಿ ಎಂದು ಮಾವ ವೀರಭದ್ರಪ್ಪನವರಿಗೆ ಹೇಳಿದ್ದಾರೆ.’ ಹಾಗೆ ಅವರೆಲ್ಲ ಹೋಗಿದ್ದಾರೆ’, ಎಂದರು. ಅದಕ್ಕೆ ಅವರ ಪಕ್ಕದಲ್ಲಿ ಇದ್ದ ಮತ್ತೊಬ್ಬರು, ‘ಅದು ಹಾಗಲ್ಲ. ಅವರು ಹೋದುದರ ಹಿಂದೆ ಬೇರೆಯೇ ಕತೆ ಇದೆ, ಎಂದು ಹೇಳಲು ಆರಂಭಿಸಿದರು. ನಿನ್ನೆ ಸಂಜೆ ಹೊಟೇಲ್ ಬಳಿ ಮಾಜಿ ಮಂಡಲ ಅಧ್ಯಕ್ಷರಿಗೂ ಹಾಲಿ ಪಂಚಾಯತ್ ಅಧ್ಯಕ್ಷರಿಗೂ ಯಾವುದೇ ಕಾಮಗಾರಿಯಲ್ಲಿ ದುಡ್ಡು ದುರುಪಯೋಗ ಆದ ಬಗ್ಗೆ ಜಗಳ ಆಯಿತು. ಮಾತಿಗೆ ಮಾತು ಬೆಳೆದು ಹಾಲಿ ಅಧ್ಯಕ್ಷರೇ ಪಂಚಾಯತ್ ಹಣ ತಿಂದಿದ್ದಾರೆಂದು ಮಾಜಿ ಅಧ್ಯಕ್ಷರು ಆರೋಪಿಸಿದರು. ಅವರ ಜತೆ ಇದ್ದ ತಾ.ಪ. ಸದಸ್ಯರು ಹಾಲಿ ಅಧ್ಯಕ್ಷರ ಪರ ವಹಿಸಿ ಮಾತಾಡಲು ಆರಂಭಿಸಿದರು. ಮಂಡಲ ಪಂಚಾಯತ್ ಇರುವಾಗಲೂ ಬೇಕಾದಷ್ಟು ಹಣ ದುರುಪಯೋಗ ಆಗಿದೆ. ಅದನ್ನು ನೀವೇ ಮಾಡಿರಬಹುದ್ದಲ್ಲ ಎಂದು ಮಾಜಿ ಅಧ್ಯಕ್ಷರನ್ನು ತಾ.ಪ.ಸದಸ್ಯರು ಪ್ರಶ್ನಿಸಿದರು. ಅದನ್ನು ಮಾಜಿ ಅಧ್ಯಕ್ಷರಿಗೆ ಸಹಿಸಲಾಗಲಿಲ್ಲ. ಇತ್ತೀಚಿನವರೆಗೂ ಸ್ನೇಹಿತರಾಗಿದ್ದ ತಾ.ಪ.ಸದಸ್ಯರು ಈ ರೀತಿ ತಿರುಗಿ ಬಿದ್ದದ್ದು ಮಾಜಿ ಅಧ್ಯಕ್ಷರಿಗೆ ನುಂಗಲಾರದ ತುತ್ತಾಯಿತು. ಹೆಚ್ಚು ಮಾತು ಬೆಳಸದೆ ಅವರು ಅಲ್ಲಿಂದ ಜಾಗ ಖಾಲಿ ಮಾಡಿದರು. ಹೀಗೆ ಅವರ ಸ್ನೇಹ ಹಿಂದಿನ ದಿನ ಕೆಟ್ಟು ಅಂದು ನಡೆಯಬೇಕಾದ ನೀರಿನ ಸಭೆಗೆ ತ್ರಿಶಂಕು ಸ್ಥಿತಿ ಬಂತು.

ಹಲವಾರು ವರ್ಷಗಳಿಂದ ಸ್ನೇಹಿತರಾಗಿದ್ದ ಮಾಜಿ ಅಧ್ಯಕ್ಷರು ಮತ್ತು ತಾ.ಪ.ಸದಸ್ಯರು ಅದ್ಯಾಕೆ ಒಮ್ಮೊಂದೊಮ್ಮೆಲೆ ವೈರಿಗಳಾಗಿ ಬಿಟ್ಟರು ಎಂದು ಅಲ್ಲೇ ಇದ್ದ ಇನ್ನೊಬ್ಬರು ಪ್ರಶ್ನಿಸಿದರು. ಅವರ ಸ್ನೇಹಕ್ಕೆ ತಿಲಾಂಜಲಿ ಇತ್ತ ಕಾರಣವನ್ನು ಮತ್ತೊಬ್ಬರು ವಿವರಿಸಿದರು. ಮಾಜಿ ಅಧ್ಯಕ್ಷರು ತಮ್ಮ ಅಧಿಕಾರ ಅವಧಿಯಲ್ಲಿ ಈಗಿನ ತಾ.ಪ.ಸದಸ್ಯರ ಮಗನಿಗೆ ಹಳ್ಳಿಯ ಸರಹದ್ದಿನಲ್ಲೇ ಬಂದಿದ ಆರ್ಯುವೇದಿಕ್ ಮೆಡಿಕಲ್ ಕಾಲೇಜಲ್ಲಿ ಗುಮಾಸ್ತನ ಕೆಲಸ ಕೊಡಿಸುತ್ತೇನೆಂದು ಸ್ವಲ್ಪ ಹಣ ಪಡಕೊಂಡಿದ್ದರು. ಮಾಜಿ ಅಧ್ಯಕ್ಷರು ತಮ್ಮ ಅಧಿಕಾರ ಅವಧಿಯಲ್ಲಿ ಮಂಡಲದ ವ್ಯಾಪ್ತಿಯಲ್ಲಿ ಇದ್ದ ಐದು ಎಕರೆ ಭೂಮಿಯನ್ನು ಮೆಡಿಕಲ್ ಕಾಲೇಜಿಗೆ ಕೊಡಿಸಿದ್ದರು. ಆ ವ್ಯವಹಾರದಿಂದ ಅವರ ಮತ್ತು ಕಾಲೇಜು ಆಡಳಿತ ಮಂಡಳಿ ಮಧ್ಯೆ ಪರಿಚಯ ಉಂಟಾಯಿತು. ಆ ಪರಿಚಯದ ಆಧಾರದಲ್ಲಿ ಅವರು ತಾ.ಪ.ಸದಸ್ಯರ ಮಗನಿಗೆ ಕಾಲೇಜಲ್ಲಿ ಗುಮಾಸ್ತನ ಹುದ್ದೆ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಆ ಭರವಸೆಯನ್ನು ಅವರಿಗೆ ಈಡೇರಿಸಲಾಗಲಿಲ್ಲ. ಇದರಿಂದ ಬೇಸತ್ತ ತಾ.ಪ. ಸದಸ್ಯರು ಮಾಜಿ ಅಧ್ಯಕ್ಷರಿಂದ ಸ್ವಲ್ಪ ದೂರವೇ ಇದ್ದರು. ಹಾಲಿ ಪಂಚಾಯತ್ ಅಧ್ಯಕ್ಷರಿಗಂತೂ ತಾ.ಪ.ಸದಸ್ಯರ ಕೆಲಸ ಮಾಡಿ ಸ್ನೇಹ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಇವೆಲ್ಲದರ ಪರಿಣಾಮವಾಗಿ ತಾ.ಪ.ಸದಸ್ಯರು ಸಾರ್ವಜನಿಕವಾಗಿ ಹಾಲಿ ಅಧ್ಯಕ್ಷರ ಪರ ನಿಲ್ಲುವಂತಾಯಿತು. ಹೀಗೆ ಊರ ಪ್ರಮುಖರ ಸಂಬಂಧಗಳ ವಿಶ್ಲೇಷಣೆ ಮಾಡುತ್ತಾ ಒಂದೂವರೆ ಗಂಟೆ ಕಳೆಯಿತು. ಅಷ್ಟೊತ್ತಿಗೆ ಬಾಳೆ ತೋಟ ನೋಡಲು ಹೋಗಿದ್ದ ಮಾಜಿ ಅಧ್ಯಕ್ಷರ ಗುಂಪು ಪಂಚಾಯತ್ ಆವರಣಕ್ಕೆ ಬಂತು. ಅವರನ್ನು ಕಂಡು ಸಂಯೋಜಕರು ಸಭೆ ಆರಂಭಿಸಿದರು. ಅಂದಿನ ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಆಗಬೇಕಿತ್ತು. ಆ ವಿಚಾರವನ್ನು ಸಭೆಯ ಮುಂದಿಟ್ಟಾಗ ಮಾಜಿ ಅಧ್ಯಕ್ಷರು, ಬಳ್ಳಾರಿಗೆ ಹೋಗಿ ನಮ್ಮ ಕೆರೆ ಯೋಜನೆಯಲ್ಲಿ ಸೇರಿದೆಯೇ ಇಲ್ಲವೇ ಎಂದು ನೋಡಿ ಬರುವುದು ಒಳ್ಳೆಯದೆಂದು, ಪುನಃ ತಮ್ಮ ಹಳೇ ರಾಗ ತೆಗೆದರು. ಅದಕ್ಕೆ ಸಭೆ ಒಪ್ಪಿ ಯಾರು ಹೋಗುವುದೆಂದು ತೀರ್ಮಾನಿಸಲು ಸೂಚಿಸಿತು. ಪಂಚಾಯತ್ ಅಧ್ಯಕ್ಷರು ಹೋಗಿ ಬರಲಿ ಎಂದು ಮಾಜಿ ಅಧ್ಯಕ್ಷರು ಹೇಳಿದರು. ಕೆಲವರು ಮಾಜಿ ಅಧ್ಯಕ್ಷರು ಹಾಗೂ ತಾ.ಪ.ಸದಸ್ಯರು ಜತೆಗೆ ಹೋಗಲಿ ಎಂದರು. ತಾ.ಪ.ಸದಸ್ಯರು ತನಗೆ ಆಗುವುದಿಲ್ಲ. ತನ್ನ ಬದಲಿಗೆ ತಮ್ಮ ಸಂಬಂಧಿ ಯುವಕನ ಹೆಸರನ್ನು ಸೂಚಿಸಿ ಆತ ಬರುತ್ತಾನೆ ಎಂದು ಹೇಳಿ ಜಾರಿಕೊಂಡರು. ಸಭೆ ಅದಕ್ಕೆ ಒಪ್ಪಿಗೆ ನೀಡಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಕೆಲಸವನ್ನು ಪುನಃ ಮುಂದೂಡಿತು.

ಅರಿವು ಮೂಡಿಸುವುದು
ಒಂದು ತಿಂಗಳ ನಂತರ ಸಭೆ ಸೇರಿ ಪದಾಧಿಕಾರಿಗಳ ಆಯ್ಕೆ ಆಯಿತು. ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹ ಕಾರ್ಯದರ್ಶಿ ಮತ್ತು ಖಜಾಂಚಿ ಸೇರಿ ಒಟ್ಟು ಐದು ಪದಾಧಿಕಾರಿಗಳನ್ನು ಆರಿಸಲಾಯಿತು. ಅಲ್ಲೂ ಪದಾಧಿಕಾರಿಗಳಾಗಲು ಯಾರು ಮುಂದೆ ಬಂದಿಲ್ಲ. ಕೆಲವರನ್ನು ಒತ್ತಾಯದಿಂದಲೇ ಒಪ್ಪಿಸಬೇಕಾಯಿತು. ಸಂಘಕ್ಕೆ ಜನ ಜಾಗೃತಿ ಸಮಿತಿ-ಪಾಪಿನಾಯಕನ ಹಳ್ಳಿ ಎಂದು ಹೆಸರಿಟ್ಟರು. ಪದಾಧಿಕಾರಿಗಳು ಬೇರ ಸಂಘ ಸಂಸ್ಥೆಗಳ ಬೈಲಾಗಳನ್ನು ನೋಡಿ ಸಂಘಕ್ಕೆ ಒಂದು ಬೈಲಾ ತಯಾರು ಮಾಡಿ ಆದಷ್ಟು ಬೇಗ ಸಂಘವನ್ನು ಸೊಸೈಟಿ ಕಾಯಿದೆ ಪ್ರಕಾರ ನೋಂದಾಯಿಸಬೇಕೆಂದು ತೀರ್ಮಾನಿಸಿದರು. ಹಿಂದೆ ಆಯ್ಕೆ ಆದ ಜಂಬೋ ಸಮಿತಿಯನ್ನು ಕಟ್ ಮಾಡಿ ಒಟ್ಟ ಕಾರ್ಯಕಾರಿ ಸಮಿತಿ ಸದಸ್ಯರ ಸಂಖ್ಯೆಯನ್ನು ಹದಿನೈದಕ್ಕೆ (ಪದಾಧಿಕಾರಿಗಳನ್ನು ಸೇರಿಸಿ) ಮಿತಿಗೊಳಿಸಲಾಯಿತು. ಅದಕ್ಕೆ ಕಾರಣವೂ ಇತ್ತು. ಅಂದು ಪಟ್ಟಿ ಮಾಡುವಾಗ ಆಸಕ್ತಿ ಇದ್ದವರು ಇಲ್ಲದವರು ಎಲ್ಲರ ಹೆಸರುಗಳನ್ನು ಸೇರಿಸಲಾಗಿತ್ತು. ಅವರಲ್ಲಿ ಕೆಲವರಂತು ಹಿಂದೆ ನಡೆದ ಯಾವುದೇ ಸಭೆಗೂ ಹಾಜರಾಗಿಲ್ಲ. ಅಂತವರನ್ನು ಯಾಕೆ ಮುಂದುವರಿಸಬೇಕೆಂದು ಕಾರ್ಯಕಾರಿ ಸಮಿತಿ ಸದಸ್ಯರ ಸಂಖ್ಯೆಯನ್ನು ಹದಿನೈದಕ್ಕೆ ಇಳಿಸಿತು.

ಕಾರ್ಯಕಾರಿ ಸಮಿತಿಯ ಪ್ರಥಮ ಮೀಟಿಂಗ್‌ನಲ್ಲಿ ಸೆಟ್ಟಿಕೆರೆ ನಿರ್ಮಾಣ ಮತ್ತು ಈಶ್ವರನ ಕೆರೆ ರಿಪೇರಿ ಕುರಿತು ಜನರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ಹಾಕಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು. ಅದಕ್ಕೊಂದು ಹೊಸ ಕಾರ್ಯಕ್ರಮ ಹಾಕಿಕೊಳ್ಳುವ ಬದಲು ಈಗಾಗಲೇ ಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲು ಪ್ರಯತ್ನಿಸಬೇಕೆಂದು ತೀರ್ಮಾನವಾಯಿತು. ಅವರ ಆಶಯಕ್ಕೆ ಪೂರಕವೇ ಎಂಬಂತೆ ಕೆಲವೇ ದಿನಗಳಲ್ಲಿ ಊರಲ್ಲಿ ನಡೆಯಲಿರುವ ವಾರ್ಷಿಕ ಸತ್ಯ ನಾರಾಯಣ ಪೂಜೆ ಸುದ್ದಿಯನ್ನು ಸದಸ್ಯರೊಬ್ಬರು ತಿಳಿಸಿದರು. ಅದು ಯಾವಾಗಲೂ ಊರ ಮಧ್ಯ ಇರುವ ಗುಡಿಯಲ್ಲಿ ನಡೆಯುತ್ತದೆ. ಊರ ಪ್ರಮುಖರನ್ನು ಒಪ್ಪಿಸಿ ಈ ಬಾರಿ ಅದನ್ನು ಸೆಟ್ಟಿಕೆರೆ ಪಾತ್ರದಲ್ಲಿ ಏರ್ಪಡಿಸಬೇಕೆಂದು ತೀರ್ಮಾನವಾಯಿತು. ಅದೇ ಸಂದರ್ಭದಲ್ಲಿ ಕೆರೆ ನಿರ್ಮಾಣ ಮತ್ತು ರಿಪೇರಿ ಬಗ್ಗೆ ಊರವರಿಗೆ ಮನವರಿಗೆ ಮಾಡಬಹುದೆಂಬ ಆಲೋಚನೆ ಸಂಘದ್ದು. ಊರಲ್ಲಿ ನಡೆಯುವ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿಯನ್ನು ಊರ ಪ್ರಮುಖರು ವಹಿಸುತ್ತಾರೆ. ಪ್ರಮುಖರ ಪಟ್ಟಿಯಲ್ಲಿ ಊರಿನ ಪ್ರಮುಖ ಜಾತಿಗಳಿಂದ ಪ್ರತಿನಿಧಿಗಳಿದ್ದಾರೆ. ಹಿಂದೆ ಪಂಚಾಯತ್ ಅಧ್ಯಕ್ಷರು ಮೇಲ್ ಜಾತಿಯವರಿದ್ದಾಗ ಅವರು ಪ್ರಮುಖರ ಪಟ್ಟಿಯಲ್ಲಿ ಅನಿವಾರ್ಯವಾಗಿ ಇರುತ್ತಿದ್ದರು. ಯಾವಾಗ ಅಧ್ಯಕ್ಷಗಿರಿ ಕೆಳ ಜಾತಿಗೆ ಬಂತೋ ಅಂದಿನಿಂದ ಅಧ್ಯಕ್ಷರು ಊರ ಪ್ರಮುಖರ ಪಟ್ಟಿಯಲ್ಲಿ ಇರುವುದು ಗ್ಯಾರಂಟಿ ಇಲ್ಲ. ಕೆರೆ ಪಾತ್ರದಲ್ಲಿ ಸತ್ಯ ನಾರಾಯಣ ಪೂಜೆಯನ್ನು ಮಾಡಬೇಕೆಂಬ ಸಂಘದವರ ಸಲಹೆಯನ್ನು ಊರ ಪ್ರಮುಖರಿಗೆ ಜೀರ್ಣಿಸಿಕೊಳ್ಳಲು ಆಗಲಿಲ್ಲ. ಗುಡಿಯಲ್ಲಿ ಮಾಡಬೇಕಾದನ್ನು ಆ ನೀರಿಲ್ಲದ ಕೆರೆ ಪಾತ್ರದಲ್ಲಿ ಮಾಡಬೇಕೆಂದು ಹೇಳುವವರನ್ನು ತಲೆ ಕೆಟ್ಟವರೆಂದು ನೇರ ಹೇಳಲಿಲ್ಲ. ಆದರೆ ಅದೇ ಅರ್ಥ ಬರುವ ರೀತಿಯಲ್ಲಿ ವರ್ತಿಸಿದರು. ಸಂಘದವರ ಸಲಹೆಯನ್ನು ಖಡಾಖಂಡಿತವಾಗಿ ವಿರೋಧಿಸಿದರು. ಪ್ರಮುಖರು ವಿರೋಧಿಸಿದರೆ ಪರವಾಗಿಲ್ಲ. ಊರಿನವರನ್ನು ಒಪ್ಪಿಸಿದರೆ ಆ ಕೆಲಸ ಮಾಡಿಸಬಹುದೆಂದು ಮತ್ತೆ ಕೆಲವರು ಸಲಹೆ ನೀಡಿದರು. ಅದರಂತೆ ಊರಿನವರನ್ನು ವಿಚಾರಿಸಿದರೆ ಕೆಲವರು ನಂಬಿಕೆಯ ದೃಷ್ಟಿಯಿಂದ ವಿರೋಧಿಸಿದರೆ ಮತ್ತೆ ಕೆಲವರು ಅಷ್ಟು ದೂರ (ಕೆರೆ ಊರಿಂದ ಸುಮಾರು ಎರಡು ಕಿ.ಮೀ.ದೂರದಲ್ಲಿದೆ)ಯಾರು ಹೋಗುತ್ತಾರೆ ಎಂದು ಸಂಘದ ಸಲಹೆಯನ್ನು ತಿರಸ್ಕರಿಸಿದರು. ಈ ಜನರಿಗೆ ನೀರು ಮತ್ತು ಕೆರೆಯ ಮಹತ್ವನ್ನು ಅರ್ಥ ಮಾಡಿಸುವುದಾದರೂ ಹೇಗೆ? ವ್ಯಕ್ತಿಗತವಾಗಿ ಮಾತಾಡಿಸಿದರೆ ಪ್ರತಿಯೊಬ್ಬರೂ ಕೆರೆ ರಿಪೇರಿ ಆಗಬೇಕು ಅಥವಾ ನಿರ್ಮಾಣ ಆಗಬೇಕೆಂದು ಹೇಳುತ್ತಾರೆ. ಅದನ್ನು ಯಾರೂ ಮಾಡಬೇಕು? ಊರವರ ಪ್ರಕಾರ ಅದು ನಾಯಕರ ಕರ್ತವ್ಯ. ಊರಿನ ಹಿರಿಯ ನಾಯಕರ ಪ್ರಕಾರ ಅದು ಜಿಲ್ಲಾ ಅಥವಾ ರಾಜ್ಯ ಮಟ್ಟದ ನಾಯಕರ ತೀರ್ಮಾನಕ್ಕೆ ಬಿಟ್ಟ ವಿಚಾರ. ಹೀಗೆ ಇದೊಂದು ರೀತಿ ಕೊನೆಯೇ ಇಲ್ಲದ ಕತೆಯಾಯಿತು.

ಈ ರೀತಿ ಇತರ ಕಾರ್ಯಕ್ರಮಗಳಲ್ಲಿ ತೂರಿಕೊಂಡು ಅರಿವು ಮೂಡಿಸುತ್ತೇವೆ ಎಂದರೆ ನಮ್ಮ ಕೆಲಸ ಆಗಲಿಕ್ಕಿಲ್ಲ; ಇದಕ್ಕಾಗಿ ಪ್ರತ್ಯೇಕ ಕಾರ್ಯಕ್ರಮ ಹಾಕಿಕೊಳ್ಳಬೇಕೆಂದು ಸಂಘದ ಸದಸ್ಯರು ತೀರ್ಮಾನಿಸಿದರು. ಕಾರ್ಯಕಾರಿ ಸಮಿತ ಸಭೆ ಕರೆತು ಪ್ರತಿ ಸದಸ್ಯರೂ ಕನಿಷ್ಠ ಹತ್ತು ನೀರು ಬಳಕೆದಾರರನ್ನು ಒಟ್ಟು ಸೇರಿಸಬೇಕು. ಹಾಗೆ ಸೇರಿಸಿದ ನೀರು ಬಳಕೆದಾರರ ಸಣ್ಣ ಸಣ್ಣ ಗುಂಪು ಮಾಡಿ ಅವರಿಗೆ ಸಹಭಾಗಿತ್ವ ಕುರಿತ ಕಾರ್ಯಗಾರ ಮಾಡುವುದೆಂದು ನಿರ್ಧರಿಸಲಾಯಿತು. ಪ್ರತಿಯೊಬ್ಬರು ಹತ್ತು ನೀರು ಬಳಕೆದಾರರನ್ನು ಒಟ್ಟು ಸೇರಿಸಬೇಕು. ಹಾಗೆ ಸೇರಿಸಿದ ನೀರು ಬಳಕೆದಾರರ ಸಣ್ಣ ಸಣ್ಣ ಗುಂಪು ಮಾಡಿ ಅವರಿಗೆ ಸಹಾಭಾಗಿತ್ವ ಕುರಿತ ಕಾರ್ಯಗಾರ ಮಾಡುವುದೆಂದು ನಿರ್ಧರಿಸಲಾಯಿತು. ಪ್ರತಿಯೊಬ್ಬರು ಹತ್ತು ನೀರು ಬಳಕೆದಾರರನ್ನು (ಸದಸ್ಯತನದ ಜತೆಗೆ) ಗುರುತಿಸಿದರೆ ಕನಿಷ್ಠ ನೂರೈವತ್ತು ಬಳಕೆದಾರರನ್ನು ಸೇರಿಸಬಹುದು. ಆದರೆ ನಿರ್ದಿಷ್ಟ ದಿನದಂದು ನಾಲ್ವತ್ತು ಬಳಕೆದಾರರನ್ನೂ ಸೇರಿಸಲಾಗಲಿಲ್ಲ. ಸದಸ್ಯರಲ್ಲಿ ಕೇಳಿದರೆ ಅವರು ಗುರುತಿಸಿದ ಬಳಕೆದಾರರು ಬರುತ್ತೇವೆ ಎಂದು ಒಪ್ಪಿದ್ದಾರೆ; ಆದರೆ ಬಂದಿಲ್ಲ. ಯಾಕೆ ಬಂದಿಲ್ಲವೆಂದು ಅವರಿಗೂ ಗೊತ್ತಿಲ್ಲ. ಸ್ಥಳೀಯ ಸರಕಾರೇತರ ಸಂಸ್ಥೆಯ ಸಹಕಾರದಿಂದ ಬಂದ ಬಳಕೆದಾರರಿಂದ ಸಹಭಾಗಿತ್ವ ವಿಧಾನದಲ್ಲಿ ಕೆರೆ ನಿರ್ಮಾಣ ಮತ್ತು ರಿಪೇರಿ ಕುರಿತು ಮಾಹಿತಿ ಸಂಗ್ರಹಿಸಲಾಯಿತು. ಎಂಟು ಜನರ ಐದು ಗುಂಪು ಮಾಡಿ ಪ್ರತಿ ಗುಂಪು ಕೂಡ ಮೇಲಿನ ಸಮಸ್ಯೆಯ ಕುರಿತು ಚರ್ಚಿಸಿ ಅದರ ಪರಿಹಾರ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಲು ತಿಳಿಸಲಾಯಿತು. ಮೊದಮೊದಲು ಬಂದ ರೈತರಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಬಂದಿದ್ದ ಪರಿಣಿತರು ರೈತರಿಗೆ ಅವರೇನು ಮಾಡಬೇಕೆಂದು ಮತ್ತೊಂದು ಬಾರಿ ಮನವರಿಕೆ ಮಾಡಿದರು. ನಂತರ ಪ್ರತಿ ಗುಂಪು ಚದರಿ ಬೇರೆ ಬೇರ ಸ್ಥಳದಲ್ಲಿ ಕುಳಿತು ಸುಮಾರು ಅರ್ಧ ಗಂಟೆ ಹೊತ್ತು ಚರ್ಚಿಸಿತು. ಒಂದು ಗುಂಪು ತಮ್ಮ ಅಭಿಪ್ರಾಯಗಳನ್ನು ಮಂಡಿಸುವಾಗ ಉಳಿದ ಗುಂಪುಗಳು ಅದರ ವಿಮರ್ಶೆ ಮಾಡಬೇಕಿತ್ತು. ಮೊದಲ ಗುಂಪು ಕೆರೆ ನಿರ್ಮಾಣವಾಗಬೇಕು, ಅದಕ್ಕಾಗಿ ಜಿಲ್ಲಾ ಪಂಚಾಯತಿನಿಂದ ಹಿಡಿದು ಮಂತ್ರಿಗಳವರೆಗೆ ರೈತರು ಹೋಗಿ ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕೆಂದು ಸೂಚಿಸಿತು. ಸಾಧ್ಯವಾದಷ್ಟು ಧನ ಸಹಾಯ ನೀಡುವುದು ಮತ್ತು ಕೆರೆ ರಿಪೇರಿಗೆ ಶ್ರಮದಾನ ಮಾಡುವುದು ಮಾತ್ರ ತಮ್ಮಿಂದ ಆಗಬಹುದಾದ ನೇರ ಭಾಗವಹಿಸುವಿಕೆ ಎಂದರು. ಉಳಿದ ಒಂದು ಗುಂಪನ್ನು ಹೊರತು ಪಡಿಸಿ ಎಲ್ಲ ಗುಂಪುಗಳು ಹೆಚ್ಚು ಕಡಿಮೆ ಅದೇ ಅಭಿಪ್ರಾಯವನ್ನು ಬೇರೆ ಬೇರೆ ರೂಪದಲ್ಲಿ ತಿಳಿಸಿದವು.

ಸಂಘದ ಅಧ್ಯಕ್ಷರು ಮತ್ತು ಕೆಲವು ಓದಿದ ಸದಸ್ಯರಿದ್ದ ಗುಂಪು ತುಂಬ ಉಪಯುಕ್ತ ಮಾಹಿತಿ ನೀಡಿತು. ಆ ಗುಂಪಿನ ಪ್ರಕಾರ ಕೆರೆ ನಿರ್ಮಾಣ ಅಷ್ಟು ಸುಲಭದ ಕೆಲಸವಲ್ಲ. ಇದಕ್ಕೆ ಒಂದು ಕಾರಣ ಹಳ್ಳಿಯಲ್ಲಿನ ಒಗ್ಗಟಿನ ಕೊರತೆ. ಅವರ ಪ್ರಕಾರ ಆ ಸಮಸ್ಯೆಯನ್ನು ಹೇಗಾದರೂ ಸುಧಾರಿಸಬಹುದು. ಆದರೆ ಅದಕ್ಕಿಂತಲೂ ಗಂಭೀರವಾದ ಸಮಸ್ಯೆ ಗಣಿಮಾಲಿಕರು ಕೆರೆ ನಿರ್ಮಾಣವಾಗದಂತೆ ತಡೆಯುವ ಸಾಧ್ಯತೆ. ಯಾಕೆಂದರೆ ಈಗ ಗಣಿ ಪ್ರದೇಶಕ್ಕೆ ಹೋಗುವ ರಸ್ತೆ ಕೆರೆ ಪಾತ್ರದಲ್ಲಿ ಹೋಗುತ್ತದೆ. ಒಂದು ವೇಳೆ ಕೆರೆ ನಿರ್ಮಾಣವಾದರೆ ಗಣಿ ಮಾಲಿಕರು ಬೇರೆ ರಸ್ತೆ ಮಾಡಿಕೊಳ್ಳಬೇಕು. ಅದು ತುಂಬ ಸುತ್ತು ಬಳಸು ಆಗುತ್ತದೆ. ಅದಕ್ಕೆ ವಿನಿಯೋಜಿಸಬೇಕಾದ ಬಂಡವಾಳ ತುಂಬಾ ಜಾಸ್ತಿ ಆಗಬಹುದು. ಈ ಸಮಸ್ಯೆಯಿಂದ ಹೊರ ಬರಲು ಸಂಬಂಧ ಪಟ್ಟ ಕಡತಗಳನ್ನು ನೋಡುವ ಗುಮಾಸ್ತನಿಗೆ ಕೆಲವು ನೂರು ರೂಪಾಯಿ ಕೊಟ್ಟರೆ ಕೆರೆ ನಿರ್ಮಾಣವನ್ನು ಮುಂದಕ್ಕೆ ಹಾಕುತ್ತಾ ಹೋಗಬಹುದಲ್ಲ. ಎರಡು, ಊರವರು ಕೆರೆ ನಿರ್ಮಾಣ ಮತ್ತು ರಿಪೇರಿಗಳಲ್ಲಿ ತೊಡಗಿಸಿಕೊಳ್ಳಬೇಕಾದರೆ ಅವರಿಗೆ ಸಮಸ್ಯೆಯ ಅರಿವಿರಬೇಕು. ಬಹುತೇಕ ಬಳಕೆದಾರರಿಗೆ ಅದರ ಅರಿವು ಇಲ್ಲ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಇದಕ್ಕಾಗಿ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಒಳಗೊಂಡಂತೆ ಹಲವಾರು ಸಮಿತಿಗಳನ್ನು ಮಾಡಿ ಪ್ರತಿಯೊಂದು ಸಮಿತಿಗೂ ಸತತವಾಗಿ ಕೆಲವು ಚಟುವಟಿಕೆಗಳನ್ನು ಮಾಡಬಹುದೆಂದು ಆ ಗುಂಪು ಸೂಚಿಸಿತು. ಬೀದಿ ನಾಟಕ ಮೂಲಕ ನೀರಿನ ಸಮಸ್ಯೆ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ಸೆಟ್ಟಿಕೆರೆ ಪಾತ್ರದಲ್ಲಿ ಕರ ಸೇವೆ ಮಾಡುವುದು, ಈಶ್ವರನ ಕೆರೆಯ ಹೂಳೆತ್ತಲು ಶ್ರಮದಾನ ಮಾಡುವುದು ಇತ್ಯಾದಿಗಳು ಆ ಗುಂಪು ಸೂಚಿಸಿದೆ ಕಾರ್ಯಕ್ರಮಗಳಲ್ಲಿ ಕೆಲವು.

ಕೋಳಿ ಜಗಳ
ಸಂಘದ ವತಿಯಿಂದ ಕೆರೆ ನೀರಾವರಿ ಬಗ್ಗೆ ಇಷ್ಟೆಲ್ಲ ಯೋಜನೆಗಳು ರೂಪುಗೊಳ್ಳುತ್ತಿರುವಾಗಲೇ ಹಳ್ಳಿಯಲ್ಲಿ ಒಂದು ಘಟನೆ ನಡೆಯಿತು. ಅದು ಸಂಘದ ಚಟುವಟಿಕೆಗೆ ದೊಡ್ಡ ಹೊಡೆತ ನೀಡಿತು. ಅದನ್ನು ಸಂಕ್ಷಿಪ್ತವಾಗಿ ವಿವರಿಸುತ್ತೇನೆ. ಊರಿನ ಕುಟುಂಬವೊಂದರಲ್ಲಿ ಗಂಡ ಹೆಂಡತಿ ನಡುವೆ ಜಗಳ ಆಗಿ ಬೇರ್ಪಟ್ಟಿದ್ದರು. ಹಾಗೆಂದು ಕೋರ್ಟ್‌‌ಗೆ ಹೋಗಿ ಫಾರ್ಮಲ್ ವಿಚ್ಚೇಧನೆ ಪಡೆದಿಲ್ಲ. ಗಂಡ ಹೆಂಡತಿಯಾಗಿ ಮುಂದುವರಿಯುವುದು ಸಾಧ್ಯವಿಲ್ಲ ಎಂದು ಮನವರಿಕೆಯಾದ ನಂತರ ಅವರು ಬೇರೆ ಬೇರೆ ಮನೆ ಮಾಡಿ ವಾಸವಾಗಿದ್ದರು. ಇದ್ದ ಎರಡು ಮಕ್ಕಳು, ಒಂದು ಗಂಡು ಮತ್ತು ಒಂದು ಹೆಣ್ಣು, ತಾಯಿ ಜತೆ ಇದ್ದವು. ಬೇರ್ಪಟ್ಟು ದಂಪತಿಗಳ ಮನೆಗಳು ಅಕ್ಕ ಪಕ್ಕದಲ್ಲೆ ಇದ್ದವು. ಒಂದು ದಿನ ಗಂಡನ ಮನೆಯ ಕೋಳಿಯೊಂದು ಹೆಂಡತಿ ಮನೆಯ ಜಗಳಿಯಲ್ಲಿ ಇಕ್ಕೆ ಹಾಕಿತು. ಅದಕ್ಕೆ ಹಿಡಿ ಶಾಪ ಹಾಕುತ್ತ ಹೆಂಡತಿ ಕಲ್ಲು ಬೀರಿದಳು. ಅದು ನೇರ ಹೋಗಿ ಗಂಡನ ಹಣೆಗೆ ಬಡಿಯಿತು. ಅವಳು ಉದ್ದೇಶ ಪೂರಿತವಾಗಿ ಗಂಡನಿಗೆ ಕಲ್ಲಿನಿಂದ ಬಡಿದಳೋ ಅಥವಾ ಕೋಳಿಗೆಂದು ಬಿಸಾಕಿದ ಕಲ್ಲು ಗಂಡನಿಗೆ ತಗಲಿತೋ. ಹೇಳುವುದು ಕಷ್ಟ. ಗಂಡನಿಗೆ ಕಲ್ಲಿನ ಏಟು ಬಿದ್ದದಂತೂ ನಿಜ. ಆ ಸಿಟ್ಟಿನಿಂದ ಆತ ಹೆಂಡತಿಯನ್ನು ಹಿಗ್ಗಾ ಮುಗ್ಗಾ ಬಡಿದ. ಅಲ್ಲಿಗೆ ಆ ಜಗಳ ನಿಂತ ಹಾಗೆ ಕಂಡಿತು.

ಆದರೆ ಆ ರೀತಿ ಆಗಲಿಲ್ಲ. ಹೆಂಡತಿ ಜತೆಗಿರುವ ಮಕ್ಕಳಿಬ್ಬರು ಹೊಸಪೇಟೆಯ ಹಿಂದುಳಿದ ವರ್ಗಗಳ ಹಾಸ್ಟೇಲ್‌ಲ್ಲಿ ಇದ್ದುಕೊಂಡು ಓದುತ್ತಿದ್ದಾರೆ. ಅವರು ತಮ್ಮ ತಾಯಿಗೆ ವಿಚ್ಚೇದಿತ ತಂದೆ ಬಡಿತ ಘಟನೆಯನ್ನು ತಮ್ಮ ಸ್ನೇಹಿತರಿಗೆ ತಿಳಿಸಿದ್ದಾರೆ. ಅವರ ಸ್ನೇಹಿತರಲ್ಲಿ ಕೆಲವರು ನಾಯಕ ಸಮುದಾಯಕ್ಕೆ ಸೇರಿದವರು. ಹೊಪೇಟೆಯಲ್ಲಿ ನಾಯಕ ಸಮುದಾಯದ ಯುವಕರು ಸಂಘಟಿತರಾಗಿದ್ದಾರೆ. ನಾಯಕ ಸಮುದಾಯದ ಕೆಲವು ಯುವಕರು ಒಂದು ಸಂಜೆ ಹಳ್ಳಿಗೆ ಬಂದು ಹೆಂಡತಿಗೆ ಗಂಡನನ್ನು ಬಾಯಿಗೆ ಬಂದಂತೆ ಬೈಯಲು ಆರಂಭಿಸಿದರು. ಊರಿನ ಕೆಲವು ಹಿರಿಯರು ಅವರಿಗೆ, ‘ನೋಡಿ ಇದು ನಮ್ಮ ಊರಿನ ಸಮಸ್ಯೆ ಇದಕ್ಕೆ ನೀವು ಹೊರಗಿನವರು ತಲೆ ಹಾಕಬೇಡಿ,’ ಎಂದು ಸಮಾಜದಲ್ಲೇ ಹೇಳಿದರು. ಆದರೆ ಯುವ ರಕ್ತ ಸಮದಾನದ ಮಾತಿಗೆ ಸೊಪ್ಪು ಹಾಕಲಿಲ್ಲ. ಸುತ್ತಮುತ್ತ ಜನ ಸೇರಿದರು. ಎರಡು ಪಕ್ಷಗಳಿಂದಲೂ ಬೈಗಳ ಯುದ್ಧ ನಡೆದಿತ್ತು. ಅಷ್ಟು ಹೊತ್ತಿಗೆ ಅಲ್ಲಿಗೆ ಅದೇ ಹಳ್ಳಿಯ ಮಾಜಿ.ತಾ.ಪ.ಅಧ್ಯಕ್ಷರು ಬಂದರು. ಸುತ್ತು ಸೇರಿದವರಲ್ಲಿ ಜಗಳದ ಕಾರಣ ತಿಳಿದುಕೊಂಡ ತಾ.ಪ. ಅಧ್ಯಕ್ಷರು ಯುವಕರನ್ನು ಕರೆದು ನೀವು ಆದಷ್ಟು ಬೇಗ ಜಾಗ ಖಾಲಿ ಮಾಡಿದರೆ ನಿಮಗೆ ಒಳ್ಳೆಯದು ಎಂದು ಗದರಿಸಿದರು. ಆದರೆ ಯುವಕರು ಅದಕ್ಕೂ ಸೊಪ್ಪು ಹಾಕಲಿಲ್ಲ. ಆವಾಗ ಮಾಜಿ ಅಧ್ಯಕ್ಷರು ಒಬ್ಬ ಯುವಕನ ಕೊರಳಪಟ್ಟಿ ಹಿಡಿದು ಬಾರಿಸಿದರು. ಒಬ್ಬನಿಗೆ ಏಟು ಬಿದ್ದರೆ ತಡ ಊರವರು ಉಳಿದ ಯುವಕರನ್ನು ಅಟ್ಟಿಸಿಕೊಂಡು ಹೋಗಿ ಹಿಗ್ಗಾಮುಗ್ಗಾ ಬಾರಿಸಿದರು. ಏಟು ತಿಂದು ಹೋದ ಯುವಕರು ಸುಮ್ಮನಿರಲಿಲ್ಲ. ತಮ್ಮ ಸಮುದಾಯದ ಯುವಕರ ಒಂದು ದೊಡ್ಡ ಗುಂಪು ಮಾಡಿಕೊಂಡು ಬಳ್ಳಾರಿ ಸರ್ಕಲ್ ಬಳಿ ಬಂದರು. ಹೊಸಪೇಟೆ ಬಸ್‌ ನಿಲ್ದಾಣದಿಂದ ಒಂದು ಅಥವಾ ಒಂದೂವರೆ ಕಿ.ಮೀ.ದೂರದಲ್ಲಿ ಬಳ್ಳಾರಿ ಸರ್ಕಲ್ ಇದೆ. ಬಳ್ಳಾರಿ ಕಡೆ ಹೋಗುವ ಎಲ್ಲ ವಾಹನಗಳೂ ಇಲ್ಲಿಂದಲೇ ಹೋಗಬೇಕು. ಏಟು ತಿಂದ ಯುವಕರು ಮತ್ತು ಅವರ ಸಂಗಡಿಗರು ಬಳ್ಳಾರಿ ಕಡೆ ಹೋಗುವ ಆಟೋ, ಮಿನಿ ಬಸ್, ಮೆಟಡೋರ್ ಗಳನ್ನು ನಿಲ್ಲಿಸಿ ನೀವು ಯಾವ ಹಳ್ಳಿಯವರೆಂದು ಕೇಳಿ ಅವರು ಪಿ.ಕೆ.ಹಳ್ಳಿಯವರೆಂದ ಕೂಡಲೇ ವಾಹನಗಳಿಂದ ಇಳಿಸಿ ಹೊಡೆಯಲು ಶುರು ಮಾಡಿದರು.

ಯುವಕರಿಂದ ಏಟು ತಿಂದವರಿಗೂ ಹಿಂದಿನ ದಿನ ಊರಲ್ಲಿ ನಡೆದ ಘಟನೆಗೂ ಏನೇನೂ ಸಂಬಂಧವಿರಲಿಲ್ಲ. ಅವರು ಜಗಳ ಆದಾಗ ಸ್ಥಳಕ್ಕೂ ಬಂದಿರಲಿಲ್ಲ. ಕಾರಣವಿಲ್ಲದೆ ಏಟು ತಿನ್ನುವುದನ್ನು ಸಹಿಸಲಾಗಲಿಲ್ಲ. ಏಟು ತಿಂದವರು ಹಳ್ಳಿಗೆ ಬಂದು ನೇರ ಹೋಗಿ ಹೆಂಗಸನ್ನು ಬೈಯುತ್ತಿದ್ದರು. ಆ ಯುವಕರಿಗೆ ಹೊಡೆಯುವುದನ್ನು ನಿಲ್ಲಿಸಲು ಹೇಳು ಇಲ್ಲದಿದ್ದರೆ ನಿನ್ನನ್ನು ಊರಿಂದ ಬಹಿಷ್ಕಾರ ಹಾಕಿಸುತ್ತೇವೆ ಎಂದು ಗದರಿದರು. ಆದರೆ ಮರು ದಿವಸ ಕೂಡ ಇದೇ ಘಟನೆ ಮರುಕಳುಹಿಸಿತು. ಈ ಬಾರಿ ಏಟು ತಿಂದವರು ಊರಲ್ಲಿ ಯುವಕರಿಗೆ ಮೊದಲು ಬಾರಿಸಿದ ಮಾಜಿ ತಾ.ಪ.ಅಧ್ಯಕ್ಷರ ಹತ್ತಿರ ಹೋಗಿ ‘ಇದೆಲ್ಲ ನಿನ್ನಿಂದಲೇ ಆಗಿರುವುದು, ನೀನು ಹೋಗಿ ಆ ಯುವಕರನ್ನು ಸಮದಾನ ಪಡಿಸಬೇಕೆಂದು,’ ಒತ್ತಾಯ ಮಾಡಿದರು. ಏಟು ತಿಂದವರಲ್ಲಿ ಕೆಲವರು ನೀರಿನ ಸಂಘದ ಸದಸ್ಯರು. ಅವರು ನೇರ ಬಂದು ಸಂಘದ ಅಧ್ಯಕ್ಷರಲ್ಲಿ ಆದ ಘಟನೆಯನ್ನು ವಿವರಿಸಿ ಇದನ್ನು ಹೇಗಾದರೂ ಮಾಡಿ ನೀವು ನಿಲ್ಲಿಸಬೇಕೆಂದು ಹೇಳಿದರು. ‘ಗುಂಪುಗಟ್ಟಿ ಸಾರ್ವಜನಿಕವಾಗಿ ಹೊಡೆಯುವುದೆಂದರೇನು? ಇದೇನು ಗುಂಡಾ ರಾಜವೇ? ನೀವು ಏಟು ತಿಂದುಕೊಂಡು ಇಲ್ಲಿ ತನಕ ಬಂದಿದ್ದೀರಲ್ಲ; ಅಲ್ಲೇ ಪೋಲಿಸ್ ಸ್ಟೇಷನ್ ಇತ್ತಲ್ಲ? ದೂರ ಕೊಡಬೇಕಿತ್ತು. ಈಗಲೂ ಸಮಯ ಮೀರಿಲ್ಲ. ಬನ್ನಿ ನಾನು ಬರುತ್ತೇನೆ ಪೋಲಿಸ್ ಸ್ಟೇಷನ್ ಹೋಗಿ ದೂರು ಕೊಡುವ,’ ಎಂದರು. ಅದಕ್ಕೆ ಏಟು ತಿಂದವರು ರೆಡಿ ಇಲ್ಲ. ಇನ್ನು ಪೋಲಿಸ್ ಠಾಣೆಗೆ ಹೋದರೆ ಅದು ಅಷ್ಟು ಸುಲಭದಲ್ಲಿ ಮುಗಿಯುವುದಿಲ್ಲ. ಅಧ್ಯಕ್ಷರು ಮತ್ತ ಇತರ ಪ್ರಮುಖರು ಮಾತಾಡಿ ಆ ಸಮಸ್ಯೆಯನ್ನು ಪರಿಹರಿಸಬೇಕೆಂದು ಏಟು ತಿಂದವರ ಬಯಕೆ. ಅವರ ಆ ಸಲಹೆಗೆ ಸಂಘದ ಅಧ್ಯಕ್ಷರು ಒಪ್ಪಲಿಲ್ಲ. ಏಟು ತಿಂದವರು ಮಾಜಿ ತಾ.ಪ.ಅಧ್ಯಕ್ಷರನ್ನು ಸಮಸ್ಯೆ ಪರಿಹರಿಸಲು ಒತ್ತಾಯಿಸತೊಡಗಿದರು. ಕಡೆಗೂ ಆ ಸಮಸ್ಯೆ ಪೋಲಿಸ್ ಠಾಣೆಗೆ ಹೋಗದೆ ಮಾತುಕತೆಯಲ್ಲೇ ಪರಿಹಾರವಾಯಿತು. ಇದಿಷ್ಟು ನಡೆದ ಘಟನೆ.

ಈ ಘಟನೆ ನಡೆದ ಕೆಲವು ದಿನಗಳ ನಂತರ ನೀರಿನ ಸಂಘದ ಸಭೆ ಕರೆದರು. ಕಾರ್ಯಕಾರಿ ಸಮಿತಿಯ ಅರ್ಧದಷ್ಟು ಜನ ಬರಲಿಲ್ಲ. ಸಭೆ ಇದೆಯೆಂದು ಬಂದವರಲ್ಲಿ ಕೆಲವರು ಬಾರದವರ ಮನೆಗೆ ಹೋಗಿ ಬಾರದಿರಲು ಕಾರಣ ಏನೆಂದು ವಿಚಾರಿಸಿದರು. ಸ್ವಲ್ಪ ದಿನ ಹಿಂದೆ ನಡೆದ ಘಟನೆಯೇ ಕಾರಣವೆಂದು ಅವರ ಗಮನಕ್ಕೆ ಬಂತು. ತಮಗೆ ಸಮಸ್ಯೆ ಆದಾಗ ಬಾರದ ಸಂಘ ಇದ್ದರೇನು?ಬಿಟ್ಟರೇನು? ಎನ್ನುವುದು ಬಾರದಿರುವವರ ವಾದ. ಸಂಘದ ಉದ್ದೇಶವೇ ಬೇರೆ. ಅದು ಬಿಟ್ಟ ಎಲ್ಲ ವಿಚಾರಗಳಲ್ಲೂ ಸಂಘ ತಮ್ಮ ಹಿಂದೆ ನಿಲ್ಲಬೇಕೆಂದು ಬಯಸುವುದು ಸರಿಯಲ್ಲ ಎಂದು ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಬಾರದಿರುವವರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವರು ಒಪ್ಪಲೇ ಇಲ್ಲ. ಸರಿ ಅರ್ಧಕ್ಕಿಂತಲೂ ಹೆಚ್ಚು ಸದಸ್ಯರು ಬರದಿದ್ದರೆ ಸಭೆ ನಡೆಸುವುದಾದರೂ ಹೇಗೆ? ಇನ್ನು ಹಿಂದಿನ ಬಾರಿ ಯೋಜಿಸಿದಂತೆ ಊರವರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಂತು ದೂರವೇ ಉಳಿಯಿತು. ಹೀಗೆ ಕೆಲವು ತಿಂಗಳು ಕಳೆಯಿತು. ಯಾರು ನೀರಿನ ಸಂಘದ ಬಗ್ಗೆ ಮಾತಾಡಲಿಲ್ಲ. ಸಂಘ ಹೇಗೋ ಜೀವಂತ ಇತ್ತು ಎನ್ನುವುದನ್ನು ಬಿಟ್ಟರೆ ಬೇರೆ ಕಾರ್ಯಕ್ರಮಗಳು ಸಂಘದ ವತಿಯಿಂದ ಇರಲಿಲ್ಲ.

ಹೀಗಿರುವಾಗ ಒಂದು ದಿನ ಜಿಲ್ಲಾ ಪಂಚಾಯತ್‌ನ ಮುಖ್ಯ ಎಂಜಿನೀಯರ್ ಹಳ್ಳಿಗೆ ಬಂದರು. ಅವರು ಸೆಟ್ಟಿಕೆರೆ ಇರುವ ಸ್ಥಳ ನೋಡಿಕೊಂಡು ಹೋಗಲು ಬಂದಿದ್ದರು. ಹಳ್ಳಿಗೆ ಬಂದ ನಂತರ ಬಳ್ಳಾರಿಗೊಂದು ಫೋನ್ ಮಾಡಬೇಕಾಗಿದೆ ಇಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ ಎಂದು ರಸ್ತೆ ಬದಿಯಲ್ಲಿ ಇದ್ದವರೊಬ್ಬರನ್ನು ಕೇಳಿದ್ದಾರೆ. ಅವರು ಹತ್ತಿರದಲ್ಲೇ ಇರುವ ಸ್ಟೇಷನರಿ ಅಂಗಡಿಯನ್ನು ತೋರಿಸಿದ್ದಾರೆ. ಅದು ನೀರಿನ ಸಂಘದ ಅಧ್ಯಕ್ಷರ ಅಂಗಡಿ. ಅಂಗಡಿ ಜತೆಯಲ್ಲಿ ಟೆಲಿಫೋನ್ ಬೂತ್ ಕೂಡ ನಡೆಸುತ್ತಿದ್ದರು ತಮ್ಮಲ್ಲಿಗೆ ಫೋನ್ ಮಾಡಲು ಬಂದವರು ಜಿಲ್ಲಾ ಪಂಚಾಯತ್ ಎಂಜಿನೀಯರ್ ಮತ್ತು ಅವರು ಕೆರೆ ನೋಡಲು ಬಂದಿದ್ದಾರೆ ಎಂದರೆ ಅಧ್ಯಕ್ಷರು ಸುಮ್ಮನಿರುತ್ತಾರೆಯೇ? ಕೆರೆ ಇರುವ ಸ್ಥಳ ತಾನೆ ತೋರಿಸುತ್ತೇನೆ ಎಂದು ಅಧ್ಯಕ್ಷರು ಹೊರಟರು. ಅದೇ ಸುಮಾರಿಗೆ ಮಾಜಿ ಮಂಡಲ ಅಧ್ಯಕ್ಷರು ಕೂಡ ರಸ್ತೆಯಲ್ಲಿ ಸಿಕ್ಕಿದರು. ತಾನು ಬರುತ್ತೇನೆ ಎಂದು ಅವರೂ ಹೊರಟರು. ಅವರೆಲ್ಲ ಇನ್ನೇನು ಕಾರು ಹತ್ತಬೇಕು ಅತ್ತ ಕಡೆಯಿಂದ ಹಾಲಿ ತಾ.ಪ.ಪಂಚಾಯತ್ ಸದಸ್ಯರು ಬರುತ್ತಿದ್ದಾರೆ. ಅವರನ್ನು ಬಿಟ್ಟು ಹೋಗುವುದು ಸರಿಯಲ್ಲ ಎಂದು ನೀರಿನ ಸಂಘದ ಅಧ್ಯಕ್ಷರು ಅವರನ್ನು ಬನ್ನಿ ಎಂದು ಕರೆದಿದ್ದಾರೆ. ಎಂಜಿನೀಯರ್ ಜತೆ ಅವರ ಕಚೇರಿಯ ಮೂರು ಸಿಬ್ಬಂದಿಗಳು, ಮಾಜಿ ಅಧ್ಯಕ್ಷರು, ನೀರಿನ ಸಂಘದ ಅಧ್ಯಕ್ಷರು ಸೇರಿ ಕಾರು ಆಗಲೇ ಭರ್ತಿಯಾಗಿತ್ತು. ತಮ್ಮ ಸಂಘದ ಕಾರ್ಯದರ್ಶಿಯ ಬೈಕ್‌ಲ್ಲಿ ತಾ.ಪ.ಸದಸ್ಯರನ್ನು ಬರಲು ಹೇಳಿ ಅಧ್ಯಕ್ಷರು ಎಂಜಿನೀಯರ್ ಜತೆ ಹೋದರು. ಆ ಸಲಹೆ ತಾ.ಪ. ಸದಸ್ಯರಿಗೆ ಅಷ್ಟೊಂದು ಇಷ್ಟವಾದಂತೆ ಕಾಣಲಿಲ್ಲ. ಕೆರೆ ಇರುವ ಸ್ಥಳಕ್ಕೆ ಹೋಗಿ ನೋಡಿಕೊಂಡು ಬಂದರೂ ಕಾರಲ್ಲಿದ್ದವರಿಗೆ ತಾ.ಪ.ಸದಸ್ಯರ ದರ್ಶನ ಆಗಲಿಲ್ಲ.

ಸಂಘದ ಅಧ್ಯಕ್ಷರು ಊರಿಗೆ ಬಂದ ಎಂಜಿನೀಯರ್‌ನ್ನು ಹಾಗೆ ಕಳುಹಿಸುವುದು ಬೇಡ ಎಂದು ಹತ್ತಿರದ ಲಿಂಗಾಯತರ ಹೊಟೇಲಿಗೆ ಕರೆದುಕೊಂಡು ಹೋದರು. ಅಲ್ಲಿಗೆ ಹೋದರೆ ತಾ.ಪ.ಸದಸ್ಯರು ಹೊಟೇಲಲ್ಲೇ ಇದ್ದರು. ಇವರೆನ್ನೆಲ್ಲ ಕಂಡ ಕೂಡಲೇ ತಾ.ಪ.ಸದಸ್ಯರ ಕೋಪ ಕಟ್ಟೆ ಹೊಡೆದು ಹರಿಯಲು ಶುರುವಾಯಿತು. ‘ನೀವು ನನ್ನನ್ನು ಏನೆಂದು ತಿಳಿದುಕೊಂಡಿದ್ದೀರಿ. ತಾ.ಪ.ಸದಸ್ಯ ಮುಖ್ಯವೋ ಅಥವಾ ಯಾವುದೋ ಕಾಲದ ಮಂಡಲ ಅಧ್ಯಕ್ಷ ಮುಖ್ಯನೋ? ನೀವೆಲ್ಲ ಸೇರಿ ಜಾತಿ ರಾಜಕೀಯ ಮಾಡತ್ತೀರಿ (ಮಾಜಿ ಮಂಡಲ ಅಧ್ಯಕ್ಷ ಮತ್ತು ಸಂಘದ ಅಧ್ಯಕ್ಷರು ಇಬ್ಬರೂ ಒಂದೇ ಜಾತಿಗೆ ಸೇರಿದವರು),’ ಎಂದು ಸಂಘದ ಮತ್ತು ಮಾಜಿ ಮಂಡಲ ಅಧ್ಯಕ್ಷರನ್ನು ಸೇರಿಸಿ ಕೂಗಾಡಿದರು. ಎಂಜಿನಿಯರ್ ಎದುರು ಊರಿನ ಮಾನ ಹರಾಜು ಹಾಕುವುದು ಬೇಡವೆಂದು ತಾ.ಪ.ಸದಸ್ಯರ ಮಾತಿಗೆ ಪ್ರತಿಯಾಡದೆ ಇಬ್ಬರು ಸುಮ್ಮನೆ ಕೂತರು. ಅಷ್ಟು ಸಾಲದೆಂಬಂತೆ ‘ತಾ.ಪ.ಪಂಚಾಯತ್ ಸದಸ್ಯ ನಾನು ಇಲ್ಲಿರುವಾಗ ಇವರನ್ನು ಕರೆದುಕೊಂಡು ನೀವು ಹೇಗೆ ಹೋದಿರಿ?’ ಎಂದು ಎಂಜಿನೀಯರನ್ನೂ ಕೇಳಿದರು. ‘ನೋಡಿ ನಾನು ನನ್ನ ಕರ್ತವ್ಯ ಮಾಡಲು ಬಂದಿದ್ದೇನೆ. ನಿಮ್ಮ ಊರಿನ ರಾಜಕೀಯಕ್ಕೆ ನನ್ನನ್ನು ಎಳೆಯಬೇಡಿ,’ ಎಂದು ಹೇಳಿ ಅವರು ಜಾಗ ಖಾಲಿ ಮಾಡಿದರು. ಸಂಘದ ಅಧ್ಯಕ್ಷ ಮತ್ತು ಮಾಜಿ ಅಧ್ಯಕ್ಷರು ಎಂಜಿನೀಯರನ್ನು ಕಾರಿನ ತನಕ ಬಿಡುವ ನೆಪದಲ್ಲಿ ತಾ.ಪ.ಸದಸ್ಯರಿಂದ ತಪ್ಪಿಸಿಕೊಂಡು ಹೊಟೇಲಿನಿಂದ ಹೊರಬಂದರು. ಈ ಘಟನೆ ನಡೆದ ನಂತರ ಅಪರೂಪಕ್ಕೊಮ್ಮೆ ಆಗುತ್ತಿದ್ದ ಸಂಘದ ಸಭೆಗಳು ನಿಂತೆ ಹೋಗಿವೆ.

ಸೌಜನ್ಯ:
ಪುಸ್ತಕ: ಸಮುದಾಯ ಮತ್ತು ಸಹಭಾಗಿತ್ವ (ಕೆರೆ ನೀರಾವರಿ ನಿರ್ವಹಣೆಯಲ್ಲಿ ಸಹಭಾಗಿತ್ವ)
ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಮಂಗಳವಾರ, ಮೇ 24, 2016

ಊರ ನೆಮ್ಮದಿಗೆ ನೀರ ನಿಲ್ದಾಣಗಳು, ನೀರು ಇಂಗಿಸುವ ದೇಸಿ ಜ್ಞಾನ.

   
-ಪೂರ್ಣಪ್ರಜ್ಞ ಬೇಳೂರು
   ನನ್ನನ್ನು ನೋಡಲು ಬಂದಿರಾ? ಚಾಂದ್ಬೀಬಿಯ ಮುಖದಲ್ಲಿ ಆಶ್ಚರ್ಯ ತುಳುಕುತ್ತಿತ್ತು. ಕಳೆದ ಅನೇಕ ವರ್ಷಗಳಿಂದ ಸಂಪೂರ್ಣ ಬಂಧನದಲ್ಲಿರುವ ನನ್ನನ್ನು ನೋಡಲು ಮೊಟ್ಟಮೊದಲು ಬಂದವರೇ ನೀವು !!  ಹರುಗಟ್ಟಿದ ಆಕೆಯ ನಿಟ್ಟುಸಿರು ಅರೆಕ್ಷಣ ಮಾತ್ರದಲ್ಲಿ ಏದುಸಿರಾಗಿತ್ತು. ಹಸುರು ಪಾಚಿ ಸರಿಸಿ ಕೊಕ್ಕಿನಲ್ಲಿ ನೀರನ್ನು ತುಂಬಿಕೊಂಡ ಪಾರಿವಾಳದ ರೆಕ್ಕೆಯ ಸದ್ದು ಅಲ್ಲಿನ ಮೌನವನ್ನು ಕೆದಕಿತು.  ೪೬೩ವರ್ಷಗಳ ಚಾಂದ್ ಮುಪ್ಪಿನಲ್ಲೂ ಸುಂದರಿ. ವಿಜಾಪುರದ ಶಹರದ ಅಗಸಿಯಿಂದ ಸುಮಾರು ೪೦೦ ಅಡಿಗಳಷ್ಟು ದೂರದಲ್ಲಿರುವ ಈಕೆಗೆ ಈಗ ಗೃಹಬಂಧನ. ಲಕ್ಷಾಂತರ ಜನರ ದಾಹವನ್ನು ತಣಿಸಿದ ಈಕೆ ಅಕೇಲಿ. ೪೦೦ ವರ್ಷಗಳ ಕಾಲ ರಾಣಿಯಂತೆ ಮೆರೆದೆ. ಜನರಿಗೆ ಸ್ವಾತಂತ್ರ್ಯ ಸಿಕ್ಕಿದ್ದೇ ನೆಪ, ನನ್ನನ್ನು ಸೂಳೆಯಾಗಿಸಿಬಿಟ್ಟರು.  ಎಷ್ಟು ಎತ್ತರದ ಕೋಟೆಯೊಳಗಿದ್ದರೇನು, ರೋಗದ ಗೂಡಾದ ಈ ದೇಹವನ್ನು ಸರಿಪಡಿಸಲು ಅಲಿ ಅದಿಲ್ ಷಾ ಮತ್ತೆ ಬರುವನೆಂದು ಕಾದಿದ್ದೇನೆ ಚಾಂದ್ ಇನ್ನೆಷ್ಟು ವರ್ಷ ಕಾಯಬೇಕೇನೊ??

ಚಾಂದ್ಳೇ ತಾಜ್ಳಿಗೂ ಮಾದರಿ. ಮಕ್ಕಾ ಮಹಾದ್ವಾರದ ಪೂರ್ವದಲ್ಲಿ ಬಸ್ಸ್ಟಾಂಡಿನ ಹಿಂಭಾಗದಲ್ಲಿರುವ ಈ ಚಂದದ ಬಾವಡಿಯನ್ನು ಎರಡನೇ ಇಬ್ರಾಹಿಂ ಅದಿಲ್ ಷಾನು ೩೯೨ ವರ್ಷಗಳ ಹಿಂದೆ ಕಟ್ಟಿಸಿದನು. ೩೫ ಅಡಿ ಎತ್ತರದ ಭವ್ಯ ಕಮಾನಿನ ಮಹಾದ್ವಾರ. ಅದರ ಅಕ್ಕಪಕ್ಕ ಅಷ್ಟಕೋನಾಕಾರದ ಗುಮ್ಮಟಗಳು. ಒಳ ಪ್ರವೇಶಿಸುತ್ತಿದ್ದಂತೆ ಒಂದು ನಿಲ್ದಾಣ. ಅಕ್ಕಪಕ್ಕ ಮೆಟ್ಟಿಲುಗಳು.

ಸಾರ್  ಸಾರ್  ನಂದೂಕಿ ಫೋಟೋ ತೆಗಿರಿ ಸಾರ್. . . . .ಬಟ್ಟೆ ತೊಳೆಯುತ್ತಿದ್ದ ಸುಲ್ತಾನಳ ಪಕ್ಕದಿಂದ ದುಡುಮ್ಮನೆ ನೀರಿಗೆ ಹಾರಿದ ಟಿಪ್ಪು ಮೀನಿನಂತೆ ಮೇಲೆ ಬಂದು ಹ¹ರು ಪಾಚಿಯನ್ನು ಸರಿಸುತ್ತಾ ಈಜತೊಡಗಿದ. ದಡದಲ್ಲಿದ್ದ ಆತನ ಗೆಳೆಯ ಸಲೀಂ ಆತನ ಪ್ಲಾಸ್ಟಿಕ್ ಚಪ್ಪಲಿಯನ್ನು ಬಾವಡಿಗೆ ಬಿಸಾಕಿ, ಸಾರ್ ಅಬ್ಬಿ ಕೀಂಚಲೋ, ಸಾಲಾ ಕ ಚಪ್ಪಲ್ ಕ ಫೋಟೋ ಎಂದಾಗ ಟಿಪ್ಪುಗೆ ಪಿಚ್ಚೆನಿಸಿತು.

ಸುತ್ತಲೂ ಚಂದದ ಕುಸುರಿ ಕೆಲಸ ಮಾಡಿದ ಗ್ಯಾಲರಿ. ಸುತ್ತಲೂ ಅಡ್ಡಾಡಲು ಕಾಲುದಾರಿ. ಅಲ್ಲಲ್ಲಿ ವಿಶ್ರಮಿಸಲು ವ್ಯವಸ್ಥೆ. ಅತ್ತರನ್ನು ಪೂಸಿಕೊಂಡು ಸಾರೋಟಿನ ಮೇಲೆ ಬಂದ ತಾಜ್ ಸುಲ್ತಾನ. ಆಕೆಯ ಹಿಂದೆ ಬುಟ್ಟಿಗಳ ತುಂಬಾ ಗುಲಾಬಿ ಪಕಳೆಗಳನ್ನು ಹೊತ್ತು ತಂದ ನೂರಾರು ಸಖಿಯರು. ಬಾವಡಿಯ ಸುತ್ತಲೂ ನಿಂತು ಗುಲಾಬಿಯ ಪಕಳೆಗಳನ್ನೆಲ್ಲಾ ನೀರಿಗೆ ಸುರಿದರು. ಸಖಿಯರೊಂದಿಗೆ ಈಜುತ್ತಾ, ಅದನ್ನೆಲ್ಲಾ ಸರಿಸುತ್ತಾ, ಬೇಸಿಗೆಯ ತಾಪವನ್ನು ಶಮನ ಮಾಡಿಕೊಳ್ಳುತ್ತಾ . . . . . .ಕ್ಯಾಕರಿಸಿದ ಸದ್ದಿಗೆ ತಟ್ಟನೆ ಕಣ್ಣುಬಿಟ್ಟಾಗ ಎದುರಿನಲ್ಲಿ ಐದಾರು ಟೊಣಪರು ನಿಂತಿದ್ದರು. ಬಲಗೈಯಲ್ಲಿ ಇಸ್ಪೀಟ್ ಎಲೆಗಳು. . . ಭಗ್ನ ಕನಸಿನೊಂದಿಗೆ ಹಿಂದಿರುಗಿದೆ. ಸುಲ್ತಾನಳೊಂದಿಗೆ ಇನ್ನಷ್ಟು ಮಹಿಳೆಯರು ಡಿಟರ್ಜಂಟ್ ಹಾಕಿ ಬಟ್ಟೆ ತೊಳೆಯುತ್ತಿದ್ದರು.
ಕ್ರಿಸ್ತಶಕ ೧೮೧೫ರಲ್ಲಿ ಬಿಜಾಪುರಕ್ಕೆ ಭೇಟಿಕೊಟ್ಟಿದ್ದ ಕ್ಯಾಪ್ಟ್ನ್ ಸೈಕ್ ಪ್ರಕಾರ ಕೋಟೆಯೊಳಗೆ ಮೆಟ್ಟಿಲುಗಳಿರುವ ೨೦೦ ಬಾವಡಿಗಳು ಹಾಗೂ ೩೦೦ ನೀರೆಳೆಯುವ ಬಾವಿಗಳು ಇದ್ದವು.  ಇವೆಲ್ಲಾ ಬೇಸಿಗೆಯಲ್ಲೂ ಖಾಲಿಯಾಗದ ನೀರಿನ ತಾಣಗಳು.  ೧೨ ಅಡಿ ಆಳದಿಂದ ೩೫ ಅಡಿ ಆಳದವರೆಗೆ ಇರುವ ಇವುಗಳಿಗೆ ಸುತ್ತಲೂ ಸುಂದರ ವಾಸ್ತು ಕೆತ್ತನೆಗಳಿರುವ ಪ್ರಾಂಗಣವನ್ನು ಕಟ್ಟಲಾಗುತ್ತಿತ್ತು.  ರಾಜರು ಕಟ್ಟಿಸಿದ ಬಾವಡಿಗಳ ಸೌಂದರ್ಯವನ್ನು ನೋಡಿದ ಸಾಮಂತರು, ಇನ್ನಿತರ ಅಧಿಕಾರಿಗಳು ತಮ್ಮ ಮನೆ, ಜಾಗಗಳಲ್ಲಿ ಬಾವಡಿಗಳನ್ನು ಕಟ್ಟಿಸಿರಬಹುದು.  ಅವುಗಳ ಕಾಲಮಾನದ ದಾಖಲೆಗಳು ಸಿಕ್ಕಿಲ್ಲ.

ಇಬ್ರಾಹಿಂಪುರದಲ್ಲಿ ರೈಲ್ವೆ ಗೇಟಿನಾಚೆಯಿರುವ ಇಬ್ರಾಹಿಂ ಬಾವಡಿ, ಇಬ್ರಾಹಿಂ ರೋಜದ ಬಲಭಾಗದ ಹೊಲದಲ್ಲಿರುವ ಲಂಗರ್ ಬಾವಡಿ, ಅಜಗರ್ ಬಾವಡಿಗಳ ನೀರನ್ನು ಕುಡಿಯಲು ಹಾಗೂ ಕೃಷಿಗೆ ಬಳಸುತ್ತಾರೆ.  ಈ ಬಾವಡಿಗಳನ್ನು ನೋಡಲು ಹೋಗುವಾಗ ದಾರಿಯಲ್ಲೊಂದು ತಿಪ್ಪೆ ತುಂಬಿದ ಬಾವಡಿ ಸಿಗುತ್ತದೆ.  ಅದೇ ಅಲಿಖಾನ್ ಬಾವಡಿ. ಇಲ್ಲಿರುವ ಯಾವುದೇ ಬಾವಡಿಗಳ ಹಾಗೂ ಬಾವಿಗಳ ರಕ್ಷಣೆ ನಗರಸಭೆ ಸದಸ್ಯರಿಂದ ಹಿಡಿದು ಉಸ್ತುವಾರಿ ಸಚಿವರವರೆಗೂ ಬೇಕಾಗಿಲ್ಲ ಎಂದು ಅಲ್ಲಿರುವ ರಿಕ್ಷಾ ಚಾಲಕ ಅಸ್ಲಂ ಶಾಬಾದಿ ಹೇಳುತ್ತಾರೆ.  ಮುಬಾರಕ್ ಕಾಲೋನಿಯಲ್ಲಿದ್ದ ಮುಬಾರಕ್ ಬಾವಡಿಯನ್ನು, ಸುತ್ತಲಿನ ಜಾಗವನ್ನೂ ನಗರಸಭೆ ಸದಸ್ಯ ಶಫೀಕ್ ಬೋಗಾದಿ ಕೊಂಡುಕೊಂಡು ಮುಚ್ಚಿದ್ದಾರೆ ಎನ್ನುವುದನ್ನು ತೋರಿಸುತ್ತಾರೆ.  ಇಲ್ಲಿನವರಿಗೆ ನೀರು ಬೇಕು.  ಆದರೆ ನೀರಿನ ಮೂಲಗಳು ಬೇಕಿಲ್ಲ.  ಬಾವಿ-ಬಾವಡಿಗಳಂತೂ ಬೇಡವೇ ಬೇಡ.  ನಳದ ನೀರೇ ಬೇಕಂತಾರ್ರೀ ಸರ್-ಸಂಜೀ ಬರ್ರಿ-ನಳದ ಮುಂದ ನಡೆಯೋ ಜಗಳಾ ನೋಡಬೋದ್ರಿ ಸರ್ರ ಎನ್ನುತಾರೆ ಅಸ್ಲಂ ಅವರೊಂದಿಗಿರುವ ಶಿವಪುತ್ರಪ್ಪ.

ಬಡೇ ಕಮಾನಿನ ಪಕ್ಕದ ನಗರ್ ಬಾವಡಿ, ಪಾತ್ರೆ ಬಟ್ಟೆ ಹಾಗೂ ಕೃಷಿ ಕೆಲಸಕ್ಕೆ ನೀರನ್ನೊದಗಿಸುತ್ತಿದೆ.   ಜುಮ್ಮಾ ಮಸೀದಿಯ ಪ್ರದೇಶದಲ್ಲಿ ಅನೇಕ ಬಾವಡಿಗಳು ಸುಸ್ಥಿತಿಯಲ್ಲಿವೆ.  ಡಾ. ಮುನೀರ್ ಬಾಂಗಿಯವರ ಮನೆಯ ಒಳಗಿನ ಬಾವಡಿಯಲ್ಲಿ ಬೇಸಿಗೆಯಲ್ಲೂ ಸಮೃದ್ಧಿ.  ಉಳಿದಂತೆ ಬಗದಾದಿ ಬಾವಡಿ, ನಾಲಬಂದ ಬಾವಡಿ, ದೌಲತ್ ಕೋಠಿ ಬಾವಡಿ ಇವೆಲ್ಲಾ ಕಸದ ತೊಟ್ಟಿಗಳು.  ಶಾದಿ ಮಹಲ್ ಆವರಣದಲ್ಲಿದ್ದ ಬಾವಡಿಯನ್ನು ಪೂರ್ತಿ ಮುಚ್ಚಲಾಗಿದೆ

ಪೇಠಿ ಬಾವಡಿ, ಬಸ್ತಿ ಬಾವಡಿಗಳು ಸಾಕಷ್ಟು ದೊಡ್ಡದಾಗಿವೆ.  ನೀರೂ ಇದೆ.  ನಗರಸಭೆಯವರು ಅದರಿಂದ ನೀರೆತ್ತುವ ವ್ಯವಸ್ಥೆ ಮಾಡಿದ್ದಾರೆ.  ಸುತ್ತಲಿನ ಜನರಿಗೂ ನೀರನೆಮ್ಮದಿಯಿದೆ.  ತಾಜ್ ಬಾವಡಿಯ ಹಿಂದಿದ್ದ ಸಂದಲ್ ಬಾವಡಿಯನ್ನು ಮುಚ್ಚಲಾಗಿದೆ.  ಕೋಟೆ ಬುರ್ಜಿನ ಬುಡದ ಬಾವಡಿ ಕೊನೆಯ ಉಸಿರನ್ನು ಬಿಡುತ್ತಿದೆ.  ಇನ್ನು ಬರೀದ ಬಾವಡಿ ಬಂದಾಗಿದೆ.  ಅದರ ಪಕ್ಕದ ಸಾತಿ ಬಾವಡಿ ಸಾಯಲು ಸಿದ್ಧವಾಗಿದೆ.  ಸಾಠ್ ಖಬರ್ ಬಳಿಯಿರುವ ಬಾವಡಿ ಸಮಾಧಿಯಾಗಿದೆ.

ಪೋಸ್ಟ್ ಆಫೀಸ್ ಆವರಣದಲ್ಲಿರುವ ಮುಖಾರಿ ಮಸ್ಜಿದ್ ಬಾವಡಿಗೆ ಸೂಕ್ತ ರಕ್ಷಣೆ ನೀಡಿದ್ದಾರೆ.  ಆದರೂ ಪಕ್ಕದ ದೇವಸ್ಥಾನದ ನಿರ್ಮಾಲ್ಯವನ್ನು ಯಾರೂ ಮೆಟ್ಟಬಾರದು ಎಂದು ಬಾವಡಿಗೆ ಎಸೆಯುತ್ತಾರಂತೆ.  ಮಾರ್ಕೆಟ್ ಪ್ರದೇಶದ ಸಂದಲ್ ಮಸ್ಜಿದ್ ಬಾವಡಿ, ಮಂತ್ರಿ ಬಾವಡಿಗಳ ನೀರು ಚೆನ್ನಾಗಿದೆ.  ಜೋಡು ಗುಂಬಜ್ ಬಳಿಯ ಬಾವಡಿ ಪಕ್ಕದ ಹಸಿರು ಹಾಸೂ ಸಹ ಸುಂದರವಾಗಿದೆ.  ಈಗ ಇಲ್ಲೆಲ್ಲಾ ಕೊಳವೆಬಾವಿಗಳನ್ನು ತೆಗೆಯಲಾಗಿದೆ.  ಬಾವಡಿಗಳನ್ನು ಮುಚ್ಚಿದರೆ ಜಾಗ ಸಿಗುತ್ತದೆ.  ಜಾಗದ ಬೆಲೆ ೧೦ ಲಕ್ಷ.  ಕಸಕಡ್ಡಿ ತುಂಬಿದ ಬಾವಡಿಗಳಿಗಿಂತಲೂ ಇದು ಒಳ್ಳೆಯದಲ್ಲವೇ?  ಹಾಳಾದ ಬಾವಡಿಗಳಿಂದ ರೋಗಗಳೂ ಹರಡಬಹುದು ಎನ್ನುವ ಅಭಿಪ್ರಾಯ ಮಾಂಟೆ (ಮಾಲ) ಬಾವಡಿಯನ್ನು ಮುಚ್ಚಿಸಿದ ರಜಾಕ್ ಹೇಳುತ್ತಾರೆ.

ಗೋಲಗುಂಬಜ್ ಹಿಂದಿರುವ ಮಾಸ್ ಬಾವಡಿಯಿಂದ ಗೋಲ್ಗುಂಬಜ್ ಒಳಗಿನ ಗಾರ್ಡನ್ಗೆ ಅದರ ನೀರನ್ನು ಬಳಸುತ್ತಾರೆ.  ಬಿರು ಬೇಸಿಗೆಯಲ್ಲೂ ನೀರಿನ ಕೊರತೆಯಾಗದು ಎನ್ನುತ್ತಾರೆ ಅಲ್ಲಿನ ಕಾವಲುಗಾರ.  ಅದೇ ರಸ್ತೆಯಲ್ಲಿ ಹಾಸಿಮ್ಪೀರ್ ಬಾವಡಿ ಹಾಗೂ ರಿಮ್ಯಾಂಡ್ ಹೋಂ ಒಳಗಿರುವ ಎರಡು ಬಾವಡಿಗಳು ಸುಸ್ಥಿತಿಯಲ್ಲಿವೆಯಂತೆ.   ಜಿಲ್ಲಾಧಿಕಾರಿ ಕಛೇರಿಯೊಳಗಿನ ಬಾವಡಿಯೂ ಚೆನ್ನಾಗಿದೆ.

ಮೀನಾಕ್ಷಿ ಚೌಕ್ನಲ್ಲಿರುವ ಸೋನಾರ್ ಬಾವಡಿ ಹಾಗೂ ಗುಂಡ ಬಾವಡಿಗಳು ವೃತ್ತಾಕಾರದ ಬಾವಡಿಗಳು.  ಉಳಿದ ಎಲ್ಲಾ ಬಾವಡಿಗಳೂ ಆಯತಾಕಾರದಲ್ಲಿವೆ.

ಅವಸಾನ
ಇವುಗಳ ಅವಸಾನಕ್ಕೆ ಮುಖ್ಯ ಕಾರಣಗಳು; ಪಾತ್ರೆ ತೊಳೆಯುವಿಕೆ, ಬಟ್ಟೆ ತೊಳೆಯುವಿಕೆ, ಹೂಳೆತ್ತಿಸದೇ ಇರುವುದು, ಕಸಕಡ್ಡಿಗಳು, ಹೂವು, ಹಾರ, ಗಣಪತಿ ವಿಸರ್ಜನೆ ಇವನ್ನೆಲ್ಲಾ ಬಾವಡಿಗಳಿಗೆ ತುಂಬುವುದು, ಗಟಾರದ ನೀರನ್ನು ಬಾವಡಿಗಳಿಗೆ ಹರಿಸುವುದು, ಖಾಸಗಿ ಆಸ್ತಿಯಾದ ಕೆಲವು ಬಾವಡಿಗಳನ್ನು ಮುಚ್ಚಿ ಸೈಟ್ ಮಾಡಿರುವುದು, ಬಾವಡಿಗಳ ಗೋಡೆಗೆ ಮನೆಗಳ ನಿರ್ಮಾಣ ಹೀಗೆ ವಿಭಿನ್ನ ಕಾರಣಗಳಿವೆ.  ಎಲ್ಲಕ್ಕಿಂತ ಮುಖ್ಯವಾಗಿ ಜನರಿಗೆ, ಜನಪ್ರತಿನಿಧಿಗಳಿಗೆ ಕಳಕಳಿ ಇಲ್ಲದಿರುವುದು.

ಇದೆಲ್ಲದರ ಪರಿಣಾಮ ಬೇಗಂ ತಾಲಾಬ್ ಮೇಲೆ ಒತ್ತಡ ಹೆಚ್ಚಾಗಿದೆ.  ಇದೂ ಸಹ ಕ್ರಿಸ್ತಶಕ ೧೬೫೧ರಲ್ಲಿ ಮಹಮ್ಮದ್ ಅದಿಲ್ಷಾ ಕಟ್ಟಿಸಿದ ಕೆರೆ.  ತೊರವಿಯಿಂದ ತರುತ್ತಿದ್ದ ನೀರು ಸಾಕಾಗದಿದ್ದಾಗ ಈ ತಾಲಾಬನ್ನು ಕಟ್ಟಿಸಬೇಕಾಗಿ ಬಂತು.  ಬಿಜಾಪುರದೊಳಗಿನ ಗಂಜ್ಗಳಲ್ಲಿ ಈಗಲೂ ಬಾಗಲಕೋಟೆ ರಸ್ತೆಯಲ್ಲಿರುವ ಗಂಜ್ ಪಕ್ಕ ನಲ್ಲಿ ಇದೆ.  ಅದರಿಂದ ಹಳೇ ಕೊಳವೆಗಳ ಮೂಲಕ ಬೇಗಂ ತಾಲಾಬ್ ನೀರು ಬರುತ್ತದೆ.

ಅಂದು ೧೦ ಲಕ್ಷ ಜನರಿಗೆ ನೀರಿನ ವ್ಯವಸ್ಥೆಯನ್ನು ಮಾಡಿದ್ದ ಅರಸರ ಮುಂದಾಲೋಚನೆ ಇಂದಿನ ಅರಸರಿಗೂ ಇರಬೇಕೆಂದು ಜನ ಬಯಸುವುದು ಸಹಜ.  ಇಬ್ರಾಹಿಂಪುರದ ಕೆರೆ, ಅಫಜಲಪುರದ ಕೆರೆಗಳು ಫೆಬ್ರವರಿಯಲ್ಲೇ ಬತ್ತಿಹೋಗುತ್ತವೆ.  [ಇದು ಖಾಸಗಿಯವರಿಗೆ ಸೇರಿದ್ದೆಂದು ಅಲ್ಲಿನವರು ಹೇಳಿದರು].  ಕೇವಲ ಬೇಗಂ ತಾಲಾಬ್ ಮೇಲೆ ಎಲ್ಲಾ ಒತ್ತಡ ಹೇರುವುದಕ್ಕಿಂತ ಎತ್ತರದ ಪ್ರದೇಶಗಳಲ್ಲಿ ಇನ್ನಷ್ಟು ಕೆರೆಗಳನ್ನು ಕಟ್ಟಿಸಬೇಕಾದ ಅಗತ್ಯವಿದೆ.

ಎಷ್ಟೆಲ್ಲಾ ಬಾವಡಿಗಳು, ಬಾವಿಗಳಿಂದ ತುಂಬಿದ ಬಿಜಾಪುರ; ನೀರಿಗಾಗಿ ಹಾಹಾಕಾರ ಮಾಡಿದ್ದು; ಬಿಸಿಲಿನ ಬೇಗೆಗೆ ನಲುಗಿದ್ದು; ಜನ ಗುಳೇ ಹೋಗಿದ್ದು; ಕುಡಿಯುವ ನೀರಿನ ಸಮಸ್ಯೆ; ಕೃಷಿ ಸಮಸ್ಯೆ; ಹೀಗೆ ನೀರಿನಿಂದಾದ ಸಮಸ್ಯೆಗಳು ದಾಖಲೆಯಲ್ಲಿ, ಇತಿಹಾಸದಲ್ಲಿ ಕಾಣಸಿಗದು.  ಹಾಗೇ ಕೇವಲ ಬಾವಡಿ-ಬಾವಿಗಳ ಅಧ್ಯಯನ, ಪ್ರವಾಸೋದ್ಯಮ, ಸೌಂದರ್ಯ, ವಿಶೇಷತೆಗಳನ್ನು ನೋಡಲು ಬಂದವರು ಇಲ್ಲವೆಂದೇ ಹೇಳಬೇಕು.  ಇವುಗಳನ್ನು ಇನ್ನಷ್ಟು ಸುಂದರಗೊಳಿಸಿದರೆ, ಪ್ರಚಾರ ಕೈಗೊಂಡರೆ ಅದ್ಭುತ ಪ್ರವಾಸಿತಾಣವಾಗುವುದರಲ್ಲಿ ಸಂಶಯವಿಲ್ಲ.

ಅರೆ ಭೈಯ್ಯಾ, ಇವುಗಳು ಖಂಡಿತಾ ಪ್ರವಾಸಿತಾಣಗಳಾಗುವುದು ಬೇಡ…ಬೇಡ…ಬೇಡ… ಬೇಡ… ಎಂಬ ಪ್ರತಿಧ್ವನಿ ಗೋಲ್ಗುಂಬಜ್ನಿಂದ ಬಂತು.  ಪ್ರವಾಸಿ ತಾಣವಾದ ನಾನು ಶಬ್ದಮಾಲಿನ್ಯದಿಂದ ನಲುಗಿಹೋಗಿದ್ದೇನೆ.  ಅಪಸ್ವರಗಳ ಅಪಸವ್ಯಗಳಿಂದ ಬಳಲಿದ್ದೇನೆ.  ಎಲೆ ಅಡಿಕೆ ತಿಂದು ಉಗುಳುವ ಜನರು, ಹೆಸರು ಕೆತ್ತುವ ಪ್ರೇಮಿಗಳು ಯಾರೆಲ್ಲಾ ನನ್ನ ನೆಮ್ಮದಿಯನ್ನೇ ಹಾಳು ಮಾಡಿದ್ದಾರೆ.  ಈ ಊರಿನ ಜನರಿಗೆ ನನ್ನ ಬಗ್ಗೆ ಕಾಳಜಿಯಿಲ್ಲ.  ಇನ್ನು ಅವುಗಳು ಯಾವ ಲೆಕ್ಕ… ಒಂದು ದನಿ ನಾಲ್ಕಾಯಿತು… ನಾಲ್ಕು ಹದಿನಾರಾಯಿತು… ಬಿಜಾಪುರದ ಸ್ಮಾರಕಗಳೆಲ್ಲಾ ಬೊಬ್ಬಿರಿಯತೊಡಗಿದವು. 

 ಕೆಂಪನೆಯ ಧೂಳು, ಕಪ್ಪನೆಯ ಕೊಳಚೆ, ನೆತ್ತಿಯನ್ನೇ ತಲುಪುವ ದುರ್ಗಂಧ, ಸುಡುಬಿಸಿಲ ತಾಪದೊಳಗೆ ಅವುಗಳ ಆರ್ತನಾದವೂ ಸೇರಿಕೊಂಡಿತು.

ದೇವರ ಮರಗಳಲ್ಲಿ ಅರಣ್ಯ ಸಂಸ್ಕೃತಿಯ ಬೇರು

-ಶಿವಾನಂದ ಕಳವೆ



  ತಾಳಗುಪ್ಪಾ ರೈಲ್ವೆ ಹಳಿ ನಿರ್ಮಾಣ ಕಾಲ. ಸರಕಾರಕ್ಕೆ ಮಾರ್ಗದ ಮರ ಕಟಾವು ಮಾಡಿಸಬೇಕಿತ್ತು. ಮರ ಕಡಿಯುವ ಕೂಲಿಗಳು ಅಬ್ಬರದ ಕೆಲಸ ನಡೆಸಿದ್ದರು. ಆದರೆ  ಅಲ್ಲಿನ ತಾರಿ ಮರಗಳಿಗೆ ಕೊಡಲಿ ಹಚ್ಚಲು ಹಿಂದೇಟು ಹಾಕಿದರು. ಈ  ಮರ ಕಡಿಯಲು ತಮ್ಮಿಂದ ಸುತಾರಾಂ ಸಾಧ್ಯವಿಲ್ಲ ಎಂದು ಸಬೂಬು  ತೆಗೆದರು. ಜೀವನ ಪರ್ಯಂತ ಮರ ಕಡಿಯುವದೇ ಕಾಯಕವಾದವರಿಗೆ  ಇದೆಂತಹ ನೆಪ ಎಂದು ಗುತ್ತಿಗೆದಾರರಿಗೆ  ಅಂತುಪಾರು ಹತ್ತಲಿಲ್ಲ. ವಿಷಯ ಕೆದಕಿದರೆ ಸ್ವಾರಸ್ಯಕರ ಕತೆ ಹೊರಬಿತ್ತು.  ಅಲ್ಲಿ ಮರ ಕಡಿಯಲು ಬಂದ ಕೂಲಿಗಳು ತಾರಿ ಮರದಲ್ಲಿ  ಶನಿ ದೇವರು ವಾಸವಾಗಿದ್ದಾನೆಂದು  ಲಾಗಾಯ್ತಿನಿಂದ ನಂಬಿದವರು.  ಇದನ್ನು  ಪಾಲಿಸಿಕೊಂಡು ಬಂದವರಿಗೆ  ಈಗ ಶನಿ ದೇವರಿರುವ ಮರ ಕಡಿಯಲು  ಮನಸ್ಸಾದರೂ ಹೇಗೆ ಬಂದೀತು?  “ಮರದಲ್ಲಿ ದೇವರಿರ್ತಾನೆ ಎಂಬುದೆಲ್ಲ ಸುಳ್ಳು, ಇದು ಮೂಢ ನಂಬಿಕೆ ‘ ಎಂದು ಅಧಿಕಾರಿಗಳು ಕೂಲಿಕಾರಿಗೆ ಪದೇ ಪದೇ  ಪಾಠ ಹೇಳಬೇಕಾಯಿತು.

  ನಮ್ಮ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಜಗಳಗಂಟಿ ಎಂಬ ಮರವಿದೆ. ಈ ಮರ ಕಡಿದರೆ ಇಲ್ಲಸಲ್ಲದ ತರಲೆ ತಾಪತ್ರಯ ಗಂಟು ಬೀಳುತ್ತದೆಂಬ ನಂಬಿಕೆಯಿದೆ. ಇದನ್ನು ಕಡಿಯಲು ಯಾರೂ ಮುಂದೆ ಬರುವದಿಲ್ಲ. ಚಂಡೆ ಮರ ಎಂಬ ಮರದ ಕತೆ ಇದಕ್ಕಿಂತ ಕೊಂಚ ಭಿನ್ನ. ಈ ಮರ ಕಡಿದರೆ, ಮರದ ನೆರಳಲ್ಲಿ ತುಸು ಹೊತ್ತು ಕೂತರೆ ಮುಂದಿನ ವರ್ಷ ಕಾಲ ದೇಹ ಅಲರ್ಜಿ ಸಮಸ್ಯೆಯಿಂದ ಬಳಲುತ್ತದೆ!. ಕೇರಳದಲ್ಲಿ ಈ ಮರ ಬೆಳೆದಿರುವ ಕೃಷಿಕರೊಬ್ಬರ ಮನೆಗೆ  ಭಯದಿಂದ ಕೂಲಿಗಳೂ ಬರುತ್ತಿರಲಿಲ್ಲ ಎಂಬ ಮಾತು ಕೇಳಿದ್ದೇನೆ !. ನಮ್ಮ ಬಯಲು ಸೀಮೆಯಲ್ಲಿ  ಬನ್ನಿ ಮರ ಯಾರೂ ಕಡಿಯುವದಿಲ್ಲ. ಇದನ್ನು ಮೇಟಿ ಕಂಬಕ್ಕೆ ಮಾತ್ರ ಬಳಸುವ ಪರಿಪಾಠ ಕೆಲವೆಡೆ ಇದೆ. ಎಕ್ಕೆ ಗಿಡವನ್ನು ಗುಡ್ಡದಯ್ಯನ ಬಿಲ್ಲು  ಎಂದು ರಾಣಿಬೆನ್ನೂರಿನ ಕೃಷಿಕರು ಭಾವಿಸುತ್ತಾರೆ. ಬಿಲ್ವ ಪತ್ರೆ ಶಿವನ ಅರ್ಚನೆಗೆ ಬಳಕೆಯಾಗುತ್ತದೆ, ಇದನ್ನು ಯಾರೂ ಕಡಿಯುವದಿಲ್ಲ. ಕೂಡ್ಲಿಗಿ ತಾಲೂಕು ಅಮಲಾಪುರ, ಸಕ್ಕರೆ ಪಟ್ಟಣ ಹೀಗೆ ಹಲವೆಡೆ ಬಿಲ್ವವನಗಳು ಸಂರಕ್ಷಿತವಾಗಿವೆ. ಅಶ್ವತ್ಥ, ಆಲ, ಅತ್ತಿ,  ವಾಟೆ, ಬಸರಿ,  ರಂಜಲು, ಆರಿಗಿಡ( ಆಸಿನ), ಗೋಳಿ, ಬಸರಿ, ಸಪ್ತಪರ್ಣಿ, ಜರ್ಬಂಧಿ (ಟೆಟ್ರಾಮೆಲಸ್ ನ್ಯೂಡಿಪ್ಲೋರಾ), ದೇವಕಣಗಿಲು ಮುಂತಾದ ಮರ ಕಡಿಯಲು ಜನ ಭಯ ಪಡುತ್ತಾರೆ.  ಉರುವಲು, ನಾಟಾ ಉದ್ದೇಶಗಳಿಗೆ ಕಡಿಯುವ ಸಂದರ್ಭ  ಬಂದರೆ ಇವನ್ನು ಕಣ್ಣೆತ್ತಿಯೂ  ನೋಡುವದಿಲ್ಲ.

ನಮ್ಮಲ್ಲಿ ದೇವರ ಕಾಡು, ನಾಗಬನ, ಭೂತನಕಾನುಗಳಲ್ಲಿನ ಗಿಡ ಮರ ನಂಬಿಕೆಯ ಕಾರಣ ಇಂದಿಗೂ ಉಳಿದಿದೆ. ಶಿರಸಿಯ ಹಿಯಿಸಗುಂದ್ಲಿಯ ಸನಿಹದ ದೇವಸ್ಥಾನದ ಪಕ್ಕ ಒಂದು ಬೆತ್ತದ ಬಳ್ಳಿ ಬೆಳೆದಿದೆ. ಅಲ್ಲಿನ ನೈಸರ್ಗಿಕ ಕಾಡಿನಲ್ಲಿ ಈಗ ಬೆತ್ತ ಇಲ್ಲ. ಆದರೆ ದೇವಾಲಯ ಸನಿಹದ ಮರಕ್ಕೆ ಹಬ್ಬಿದ ಬೆತ್ತದ ಬಳ್ಳಿ ಮಾತ್ರ ಇದೆ. “ಇದು ಹುಲಿ ದೇವರ ಬೆತ್ತ, ಕಡಿಯಬಾರದು” ಎಂಬ ನಂಬಿಕೆ ಸಂರಕ್ಷಣೆಗೆ ಕಾರಣವಾಗಿದೆ. ಭಟ್ಕಳದಿಂದ ಕಾರವಾರದವರೆಗಿನ ಕರಾವಳಿಯಂಚಿನಲ್ಲಿ  ವನದೇವಿ ದೇಗುಲಗಳಿವೆ. ಅಲ್ಲಿನ ಮರ ವನದೇವಿಯ ಭಯದಿಂದ ಉಳಿದಿದೆ. ಒಂದು ಪುಟ್ಟ ಟೊಂಗೆ ಕಡಿಯುವಾಗಲೂ ಅಷ್ಟಮಂಗಲ ಪ್ರಶ್ನೆ ಕೇಳಿ ನಿರ್ಧರಿಸಲಾಗುತ್ತದೆ.
ಒಮ್ಮೆ  ಆಲದ ಮರಕ್ಕೆ ಕಟ್ಟೆ ನಿರ್ಮಾಣ ನಡೆಸುತ್ತಿದ್ದೆವು. “ಇದಕ್ಕೆ  ಏಕೆ ಕಟ್ಟೆ ಕಟ್ಟೀಸ್ತೀರಿ?”  ಕೆಲಸಗಾರರು ಕೇಳಿದರು. ಕಾಡಿನಲ್ಲಿ ದೈತ್ಯಾಕಾರವಾಗಿ ಬೆಳೆದ ಮರಕ್ಕೆ ಕಟ್ಟೆ ಕಟ್ಟಿದರೆ ಆರಾಮಾಗಿ ಕೂಡ್ರಲು ನೆಲೆಯಾಗುತ್ತದೆ ಎಂಬ ಉದ್ದೇಶ ನನಗಿತ್ತು, ಆದರೆ ಅದನ್ನು ತಟ್ಟನೆ ಹೇಳಲಿಲ್ಲ.  ” ಈ ಮರದಲ್ಲಿ ದೇವರು ಇದೆ, ಅದಕ್ಕೆ ಕಟ್ಟೆ ಕಟ್ಟಿಸೋಣ ” ಎಂದು ನಿರ್ಧರಿಸಿದೆವು  ಎಂದು ಉತ್ತರಿಸಿದೆ!. ಮಣ್ಣಿನಕಟ್ಟೆ ಕಟ್ಟುವ ಕೆಲಸ ಒಂದೆರಡು ದಿನ ನಡೆಯಿತು. ಮರದ ಒಂದು ಟೊಂಗೆ ತೀರ ನೆಲಕ್ಕೆ ಬಾಗಿತ್ತು, ಅದನ್ನು ಕಟಾವು ಮಾಡಿದರೆ ಇಡೀ ಕಟ್ಟೆಗೆ ಒಂದು ವಿಶಿಷ್ಟ  ಶೋಭೆ ಬರುತ್ತಿತ್ತು, ಅಲ್ಲಿ ಆರಾಮ ಅಡ್ಡಾಡಬಹುದಿತ್ತು.  ಕೆಲಸ ಮುಗಿಯುತ್ತಿದ್ದಂತೆ  ಆ ಟೊಂಗೆ ಕತ್ತರಿಸಿ ಬಿಡಿ ಎಂದು ಕೆಲಸಗಾರರಿಗೆ ಆರ್ಡರ್ ಮಾಡಿದೆ. ಕೆಲಸಗಾರರು ಪರಸ್ಪರ ತಮ್ಮ ತಮ್ಮಲ್ಲೆ ಏನೋ ಗುಸುಗುಸು ಮಾತಾಡಿಕೊಂಡರು. “ಇದು ದೇವರ ಮರ, ಮರಕ್ಕೆ ಕಟ್ಟೆ ಕಟ್ಟೋದಷ್ಟೇ ನಮ್ಮ ಕೆಲಸ, ಟೊಂಗೆ ಕಡಿಯಲು ಮನಸ್ಸು ಬರೋದಿಲ್ಲ, ಕಡಿದು ಗಾಯ ಮಾಡಿ ನಾಳೆ ಇಲ್ಲದ ತೊಂದರೆ ನಮಗೆ ಬರಬಹುದು”  ಎಂದರು! ಆಲದ ಮರ, ಮಣ್ಣಿನ ಕಟ್ಟೆ, ಸುತ್ತಲಿನ ಸ್ವರೂಪಗಳು ಅವರೊಳಗಿನ ದೈವೀ ಭಾವನೆಗೆ ಉತ್ತೇಜನ ನೀಡಿದವು.  ಅವರ ನಂಬಿಕೆ ಬದಲಿಸುವ ಮನಸ್ಸು ನನಗಿರಲಿಲ್ಲ, ಹೀಗಾಗಿ ಇಂದಿಗೂ ಮರದ ಟೊಂಗೆ ಕಡಿಯದೇ  ಹಾಗೇ ಇದೆ. ಮರದಲ್ಲಿ ದೇವರಿದೆ ಎಂದು ತಮಾಷೆಗೆ ಹೇಳಿದ್ದ ನನಗೆ  ಆ ಮರದ ಕುರಿತ ಭಾವನೆಗಳು ಬದಲಾಗಿವೆ.

ನಮ್ಮ ನೆಲದ ಅರಣ್ಯ ಸಂಸ್ಕೃತಿ ಮಹತ್ವ ಇದು. ಗಿಡ ಮರಗಳಲ್ಲಿ ದೈವ, ಭೂತಗಳ ನಂಬಿಕೆಯೊಂದಿಗೆ ನಮ್ಮ ಅಡವಿ ಒಡನಾಟ ಬೆಳೆದಿದೆ. ನಾಗರಿಕತೆಯ ಜತೆಜತೆಗೆ ನಂಬಿಕೆಗಳು ಬೆಳೆದು ನಿಂತಿವೆ. ಇದಕ್ಕೆ ಕಾರಣಗಳು ಹತ್ತಾರು. ನಮ್ಮ ಪುರಾಣ ಕತೆಗಳಂತೂ  ಮರದ ಪರಿಚಯವನ್ನು  ದೇವ ದೇವತೆಗಳ ಆವಾಸದ ಮುಖೇನ ಪರಿಚಯಿಸಿವೆ,  ಮರ ಪೂಜಿಸುವ ಪರಿಪಾಠಕ್ಕೆ ಪ್ರೇರಣೆಯಾಗಿದೆ. ಮರವನ್ನು ವರ ಕೊಡುವ ದೇವರು ಎಂದು ನಂಬಲು  ಇದು ಕಾರಣವಾಗಿದೆ. ಆಲ, ಅಶ್ವತ್ಥ, ಅತ್ತಿ ಸೇರಿದಂತೆ ದೈವ ನಂಬಿಕೆಯ  ಇವುಗಳ ಎಳೆ ಸಸಿ ಕಡಿಯಲೂ ಬಹುತೇಕ ಜನರಿಗೆ ಇಂದಿಗೂ ಧೈರ್ಯವಿಲ್ಲ. ಇದನ್ನೇ ಆಧಾರವಾಗಿಸಕೊಂಡು  ಕಡಿಯದ ಮರಗಳನ್ನು ಬೆಳೆಸುವ ಪರಿಪಾಠ ಬೆಳೆಸುವದು ಇಂದಿನ ತುರ್ತು ಅಗತ್ಯವಾಗಿದೆ. ಮನೆ ನಿರ್ಮಾಣ, ಉರುವಲು ಬಳಕೆಗೆ ವಿಪರೀತ ಪ್ರಮಾಣದ ಅರಣ್ಯನಾಶ ನಡೆದಿದೆ. ನೆಡುವದು, ಕಡಿಯುವದು  ಕಳೆದ ೪೦ ವರ್ಷಗಳ ಪರಿಪಾಠವಾಗಿದೆ. ನಾವು ನೆಡುವ ಸಸಿಗಳಲ್ಲಿ ನಮ್ಮ ದೈವ ನಂಬಿಕೆಯ ಮರಗಳನ್ನು ನೆಡುವ ಕೆಲಸ  ನಡೆಯಬೇಕಾಗಿದೆ. ಇದರ ಜತೆಗೆ  ಹಲಸು, ಅಂಟವಾಳ, ಮಾವು ಮುಂತಾದ ಹಣ್ಣು ಹಂಪಲಿನ ಸಸಿ ಬೆಳೆಸಿದರೆ ನಮಗೆ ಕಡಿಯಲು ಮನಸ್ಸು ಬರುವದಿಲ್ಲ. ಫಲ ರುಚಿ ಅರಿವಿರುವದು ಸಂರಕ್ಷಣೆಯ ಜಾಗೃತಿಯಾಗುತ್ತದೆ.


ಹತ್ತಾರು ವರ್ಷಕ್ಕೆ ಕಡಿಯಲೆಂದೇ ಬೆಳೆಸಿದ ಅಕೇಸಿಯಾ, ನೀಲಗಿರಿ, ಸಿಲ್ವರ್ ಓಕ್ ಮರಗಳನ್ನು ಒಮ್ಮೆ ಗಮನಿಸಿ ನೋಡಿ. ಈ ವಿದೇಶಿ ಸಸ್ಯಗಳು ನಮ್ಮ ಅರಣ್ಯ ಸಂಸ್ಕೃತಿಯನ್ನು ಪಕ್ಕಾ ಅನುಮಾನದಿಂದಲೇ ನೋಡುತ್ತದೆ. ಆದರೆ ನಮ್ಮ ನೆಲದ ಮರದಲ್ಲಿ ಸಂಸ್ಕೃತಿಯ ಬೇರುಗಳು ಶತಮಾನಗಳ ನಂಬಿಗೆ ನೆಲೆಗಟ್ಟಿನಲ್ಲಿ  ನಮ್ಮೆದೆಯಲ್ಲಿ   ಊರಿರುವದೇ ಇದಕ್ಕೆ ಮುಖ್ಯ ಕಾರಣ. ಹೊಸ ಸಸ್ಯಗಳ ಬಗೆಗೆ ಇಂತಹ ಗಾಢ ನಂಬಿಕೆ ಬೆಳೆಸಲು ಅಷ್ಟು ಬೇಗ ಸಾಧ್ಯವಿಲ್ಲ. ಅಕೇಸಿಯಾ ಸಸ್ಯಗಳನ್ನು ನಮ್ಮ ದೇವರ ಕಾಡಿನಲ್ಲಿ ಕಲ್ಪಿಸಿ ಕೈಮುಗಿಯುವದು ಸಾಧ್ಯವಿಲ್ಲ! ಪರಿಸರದ ಬಿಕ್ಕಟ್ಟಿನ ಮಧ್ಯೆ ನಾವಿದ್ದೇವೆ.  ಮಳೆ ಹನಿ ಸುರಿಯುವ  ಈ ಘಳಿಗೆಯಲ್ಲಿ ನೆಲದ  ಸಸಿ ಬೆಳೆಸುವ ಆಸೆ  ಎಲ್ಲರಾದಬೇಕು. ನಮ್ಮ  ಗಿಡ ಗೆಳೆತನಕ್ಕೆ ಸಂಸ್ಕೃತಿಯ ಲೇಪ ಪರಿಣಾಮಕಾರಿಯಾಗಬಹುದು.

ಶುಕ್ರವಾರ, ಮೇ 13, 2016

`ಬಳಿಗಾರರ' ನೆಪದಲ್ಲಿ ಮುನ್ನಲೆಗೆ ಬರಬೇಕಾದ ಸಂಗತಿಗಳು



-ಅರುಣ್ ಜೋಳದಕೂಡ್ಲಿಗಿ
  

   ಅಗ್ನಿ ಸಂಚಿಕೆಯಲ್ಲಿ ಕಸಾಪದ ನೂತನ ರಾಜ್ಯಾಧ್ಯಕ್ಷರಾದ ಮನು ಬಳಿಗಾರ ಅವರು ಹನುಮಂತ ಹಾಲಿಗೇರಿ ಅವರ ಜತೆ ಬೀಡುಬೀಸಾಗಿ ಮಾತನಾಡಿದ ಮಾತುಗಳು ಅವರ ಅಸೂಕ್ಷ್ಮತೆಗೆ ಕನ್ನಡಿ ಹಿಡಿಯುವಂತಿವೆ. ಇದು ಪ್ರಾತಿನಿಧಿಕವಾಗಿ ಎಲ್ಲಾ ಹೊಸ ತಲೆಮಾರಿನ ಲೇಖಕರ ಬಳಿಯೂ ಅವರು ನಡೆದುಕೊಳ್ಳುತ್ತಿದ್ದ ಮಾದರಿಯಂತಿದೆ. ಈ ಬರಹದ `ಸಾಹಿತ್ಯದ ಪುಡಾರಿ' ತಲೆಬರಹವನ್ನು ಹೊರತುಪಡಿಸಿದರೆ, ಟ್ಯಾಬ್ಲೈಡ್ ಭಾಷೆ ಬಳಸದೆ ಹನುಮಂತ ಹಾಲಿಗೇರಿ ತುಂಬಾ ಸಜ್ಜನಿಕೆಯ ಭಾಷೆ ಬಳಸಿ ಆತ್ಮೀಯತೆಯಿಂದ ಪತ್ರರೂಪಿಯಾಗಿ ಬರೆದಿದ್ದಾರೆ. ಹಾಗಾಗಿ ಇದು ಹಿರಿಯರಾದ ಬಳಿಗಾರ ಅವರನ್ನು ಆತ್ಮಾವಲೋಕನಕ್ಕೆ ಸ್ವವಿಮರ್ಶೆಗೆ ಹಚ್ಚಬೇಕಿದೆ. ಹಾಗಾಗಿ ಬಳಿಗಾರ ಅವರು ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದರಿಂದ ಹೆಚ್ಚು ಲಾಭಗಳಿವೆ ಅದುವೆ ಆರೋಗ್ಯಕರವಾದ ನಡೆಯಾಗಿದೆ.

ಈ ಚರ್ಚೆಯ ನೆಪದಲ್ಲಿ ಒಂದಷ್ಟು ಸಂಗತಿಗಳು ಮುನ್ನಲೆಗೆ ಬರಬೇಕಿದೆ. ನೂತನ ರಾಜ್ಯಾಧ್ಯಕ್ಷರಾದ ಬಳಿಗಾರರು ಆರಂಭಿಕ ಹಂತದಲ್ಲಿಯೇ ಇಂಥದ್ದೊಂದು ಚರ್ಚೆಗೆ ಒಳಗಾದ ಕಾರಣ, ಅವರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ನಡೆಗಳ ಬಗ್ಗೆ ಚರ್ಚಿಸಬೇಕಾಗಿದೆ. ಬಳಿಗಾರರು ತಮ್ಮ ಆಡಳಿತದ ಆರಂಭಕ್ಕೆ ಚೂರು ಅವಸರವಾಗಿ ಶ್ರೀವಿಜಯ ಪ್ರಶಸ್ತಿಯನ್ನು ಪ್ರಕಟಿಸಿದರು. ಈ ಆಯ್ಕೆಯಲ್ಲಿ ಇಬ್ಬರ ಆಯ್ಕೆಯ ಬಗ್ಗೆ ನಕಾರಾತ್ಮಕ ಚರ್ಚೆಗಳು ನಡೆದವು. ಅಂತೆಯೇ 40 ವರ್ಷದಿಂದ 45 ವರ್ಷಕ್ಕೆ ಏರಿಸಿದ ದಿಢೀರ್ ಕಾರಣವೂ ಗೌಪ್ಯವಾಗಿದೆ. ಹಾಗಾಗಿ ಮುಂದೆ ಕಸಾಪ  ಪ್ರಶಸ್ತಿಗಳ ಆಯ್ಕೆಯನ್ನು ಅನುಮಾನಿಸದ ಹಾಗೆ  ಪಾರದರ್ಶಕವಾಗಿ ಯೋಗ್ಯರನ್ನು ಆಯ್ಕೆ ಮಾಡುವಂತಾಗಬೇಕಿದೆ. 
 ಹಿಂದೆಯೂ ಕಸಾಪವನ್ನು ಟೀಕಿಸುವ, ಬೆಂಬಲಿಸುವ, ಹೇಗಿರಬೇಕೆಂಬ ಬುದ್ದಿಮಾತು ಹೇಳುವ ಚರ್ಚೆಗಳು ನಡೆದಿವೆ. ಆದರೆ ಇಂತಹ ಚರ್ಚೆಗಳಿಗೆ ಕಸಾಪ ಕಿವಿಕೊಟ್ಟದ್ದಕ್ಕಿಂತ ಕಿವುಡಾದದ್ದೆ ಹೆಚ್ಚು. ಕಸಾಪವನ್ನು ಸಾಹಿತ್ಯ ಕ್ಷೇತ್ರದಲ್ಲಿರುವ ಜಡತೆ ಅಸೂಕ್ಷ್ಮತೆ ಅಸಾಹಿತ್ಯಕತೆಗಳ ಒಂದು ಪ್ರತೀಕವೆಂದು ಭಾವಿಸಿ, ಅದನ್ನು ತಿರಸ್ಕರಿಸಿಕೊಂಡು ಬಂದವರಲ್ಲಿ ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ಲಂಕೇಶ್ ಹಾಗೂ ಕೆ.ವಿ. ಸುಬ್ಬಣ್ಣರಂತಹ ಪ್ರಮುಖರು ಸೇರಿದ್ದರು. ಇದಕ್ಕೆ ಪೂರಕವಾಗಿ ಅಡಿಗರು ಬರೆದ  'ಕನ್ನಡ ಸಾಹಿತ್ಯ ಪರಿಷತ್ತು: ಸಂಪ್ರದಾಯ ಜಡತ್ವದ ಸಂಕೇತ', ಸುಬ್ಬಣ್ಣನವರ 'ಕಸಾಪ: ಲಂಘನ ಮದ್ದು?', ಲಂಕೇಶರ `ಸಾಹಿತ್ಯ ಪರಿಷತ್ತು ಮತ್ತು ಸಾಹಿತಿಗಳು' ಮುಂತಾದ ಬರಹಗಳನ್ನು ನೋಡಬಹುದು. ಕಸಾಪ ಒಂದು ಪ್ರಜಾಸತ್ತಾತ್ಮಕ ಸಂಸ್ಥೆ. ಹಾಗಾಗಿ ಸಾರ್ವಜನಿಕ ಹಣವನ್ನು ಬಳಸಿ, ಸಾಮಾಜಿಕ ನ್ಯಾಯದ ನೆಲೆಯಲ್ಲಿ ಕೆಲಸ ಮಾಡುವ ಬಗ್ಗೆ, ಜನಸಾಮಾನ್ಯರ ಸುಡುವ ಸಮಸ್ಯೆಗಳಿಗೆ ದ್ವನಿಯಾಗದ ಬಗ್ಗೆಯೂ ಸಹಜವಾಗಿ ಟೀಕೆಗಳನ್ನು ಎದುರಿಸಬೇಕಾಗಿದೆ.

 ಕಸಾಪ ಪ್ರತಿ ವರ್ಷ ಆಯೋಜಿಸುವ ಸಾಹಿತ್ಯ ಸಮ್ಮೇಳನಕ್ಕೆ ಸೇರಿದ ಜನರ ಜಾತ್ಯಾತೀತತೆಯ ಪ್ರಮಾಣಕ್ಕೆ ಹೋಲಿಸಿದರೆ, ಕಸಾಪದ ಚಟುವಟಿಕೆಗಳಲ್ಲಿ ಜಾತ್ಯಾತೀತತೆಯ ಪ್ರಮಾಣ ಹೊಂದಿಕೆಯಾಗುವುದಿಲ್ಲ. ಜಾತಿವಾರು, ಪ್ರಾದೇಶಿಕವಾರು ಆಯ್ಕೆಯಿಂದಾಗಿ ಉತ್ತಮ ಸಾಹಿತಿ ಕವಿಗಳನ್ನು ಆಯ್ಕೆಮಾಡಲು ಸಾದ್ಯವಿಲ್ಲ ಎಂಬ ವಾದವೊಂದಿದೆ. ಆದರೆ ಜಾತಿ, ಪ್ರಾದೇಶಿಕತೆಯ ಮಾನದಂಡದಲ್ಲಿಯೂ ಉತ್ತಮ ಸಾಹಿತಿಗಳನ್ನೂ, ಒಳ್ಳೆಯ ಕವಿಗಳನ್ನೂ ಆಯ್ಕೆ ಮಾಡುವ ಸಾದ್ಯತೆ ಇದ್ದೇ ಇದೆ. ಆದರೆ ಅಸಾಹಿತಿಗಳ ಆಯ್ಕೆಗೆ ಈ ಕಾರಣವನ್ನೇ ಮುಂದು ಮಾಡಿ ಜಾತಿ, ಪ್ರಾದೇಶಿಕ ನೆಲೆಯ ಆಯ್ಕೆ ವಿಧಾನವನ್ನು ಗೇಲಿ ಮಾಡುವ ಮೇಲು ವರ್ಗವೊಂದು ಸದಾ ಜಾಗ್ರತವಾಗಿದೆ. ಇನ್ನಾದರೂ ಕಸಾಪ ಅಸಾ"ತಿಗಳಿಗೆ ಮಣೆಹಾಕದಿರುವ ಹೆಜ್ಜೆಯನ್ನು ಇಡಬೇಕಿದೆ.
  ಕನ್ನಡ ಸಾಹಿತ್ಯ ಪರಿಷತ್ತು ಮತ್ತೆ ಮತ್ತೆ ಚರ್ಚೆಗೆ ಒಳಗಾಗುತ್ತಿರುವುದು ಅದರ ಜಡತೆ ಮತ್ತು ಅಸೂಕ್ಷ್ಮತೆಯ ಕಾರಣಕ್ಕೆ. ಅಂದರೆ ಅದು ವರ್ತಮಾನದ ತಲ್ಲಣಗಳಿಗೆ ಎಂದೂ ಮೊದಲ ಆದ್ಯತೆಯನ್ನು ಕೊಡುವುದಿಲ್ಲ. ಅಥವಾ ವರ್ತಮಾನದ ಸಂಗತಿಗಳನ್ನು ಕಸಾಪ ಆಯೋಜಿಸುವ ಸಮ್ಮೇಳನ ಒಳಗೊಂಡಂತೆ ಇತರೆಲ್ಲಾ ಚರ್ಚೆ ಸಂವಾದಗಳಲ್ಲಿ ಮಾತನಾಡುವವರು ನಿಷ್ಠುರಿಗಳಾಗಿರುವುದಿಲ್ಲ, ಸೂಕ್ಷ್ಮಜ್ಞರಾಗಿರುವುದಿಲ್ಲ. ಬದಲಾಗಿ ಎಲ್ಲವನ್ನೂ ಸಪಾಟುಗೊಳಿಸಿ ಆಕರ್ಷಕವಾಗಿ ನಗೆ ಚಟಾಕಿ ಹಾರಿಸಿ ಗಂಭೀರತೆಯನ್ನು ಹಾಳುಗೆಡವುವರಾಗಿರುತ್ತಾರೆ. ಯಾವಾಗಲೂ ಆಯಾ ಕಾಲದ ಸೂಕ್ಷ್ಮ ಯುವ ಬರಹಗಾರರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವುದು ಕಡಿಮೆಯೆ. ಕಾರಣ ಕಸಾಪ ಜಡಗೊಂಡ ಹಿರಿಯ ಸಾಹಿತಿಗಳಿಗೇ ಮಣಿ ಹಾಕುತ್ತಾ ಬಂದಿದೆ ಎನ್ನುವ ಟೀಕೆಯನ್ನು ಮುಂದೆಯಾದರೂ ಎದುರಾಗಬೇಕಿದೆ. ಕಸಾಪ ಚಲನಶೀಲವಾಗಿ ಯೋಚಿಸುತ್ತಾ, ಯುವ ಸಮುದಾಯವನ್ನು ಒಳಗೊಂಡು ಸೂಕ್ಷ್ಮವಾಗಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಂಡರೆ, ಜಡತೆ ಮತ್ತು ಅಸೂಕ್ಷ್ಮತೆಯ ಕಾರಣಕ್ಕೆ ಹುಟ್ಟಬಹುದಾದ ಟೀಕೆಗಳಿಂದ ಹೊರಬರುವ ಸಾದ್ಯತೆಗಳಿವೆ. 

  ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ, ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷ ಸದಸ್ಯರನ್ನು ಗಮನಿಸಿದರೆ ಸಾಹಿತಿಗಳಲ್ಲದವರ ಸಂಖ್ಯೆಯೇ ದೊಡ್ಡದಿದೆ. ಇದು ಕಸಾಪ ಎನ್ನುವುದು ಕೇವಲ ಸಾಹಿತಿಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ ಎಂದು ಪರೋಕ್ಷವಾಗಿ ದ್ವನಿಸುತ್ತಿದೆ. ಇದರಿಂದಾಗಿ ಸಹಜವಾಗಿ ಜಾತೀಯತೆ, ಮತ್ತು ರಾಜಕೀಯ ಸದ್ದಿಲ್ಲದೆ ನುಸುಳುತ್ತವೆ. ಹಾಗಾಗಿ ಅದು ಆಯೋಜಿಸುವ ಸಾಹಿತ್ಯ ಸಮ್ಮೇಳನದಲ್ಲೂ ಸಹಜವಾಗಿ ಅದರ ನೆರಳಿರುತ್ತದೆ. ಕಸಾಪದ ಜಿಲ್ಲಾಧ್ಯಕ್ಷರು ಮತ್ತು ಇವರುಗಳು ಆಯ್ಕೆ ಮಾಡುವ ತಾಲೂಕು ಹೋಬಳಿಯ ಅಧ್ಯಕ್ಷರುಗಳಲ್ಲಿ ಮೇಲುಜಾತಿಗಳ ಪ್ರಾತಿನಿಧ್ಯ ಹೆಚ್ಚಿರುತ್ತದೆ. ಹಾಗಾಗಿ ಪ್ರಜಾಸತ್ತಾತ್ಮಕ ಗಣರಾಜ್ಯವಿರುವ ಈ ದೇಶದಲ್ಲಿ ಸಂವಿಧಾನಬದ್ಧವಾಗಿ ಎಲ್ಲರಿಗೂ ಅವಕಾಶ ಕೊಡಬೇಕಿದೆ. ಕಸಾಪ ಮುಂದೆಯಾದರೂ ಈ ವಿಷಯದಲ್ಲಿ ಎಚ್ಚರದ ಹೆಜ್ಜೆ ಇಡಬೇಕಿದೆ.
  ಕಸಾಪದಲ್ಲಿನ ಬಹುಪಾಲು ಅಸಾಹಿತಿಗಳ ಪ್ರಭಾವದಿಂದಾಗಿಯೇ ಕವಿಗಳಲ್ಲದವರು ಕವಿಗ್ಠೋಯಲ್ಲಿ ಕಿಕ್ಕಿರಿದಿರುತ್ತಾರೆ, ಚಿಂತಕರಲ್ಲದವರು ಚಿಂತಕರ ವೇಷ ಧರಿಸಿರುತ್ತಾರೆ. ಹೀಗಿರುವಾಗ ಜನರನ್ನು ಹಿಡಿದು ನಿಲ್ಲಿಸುವ ಕಾವ್ಯ ಹೊಮ್ಮುವುದಾದರೂ ಹೇಗೆ? ಜನರನ್ನು ಚಿಂತನೆಗೆ ಹಚ್ಚುವ ವೈಚಾರಿಕ ಚಿಂತನೆ ಮೂಡುವುದಾದರೂ ಹೇಗೆ? ಇದರಿಂದಾಗಿ ತನ್ನ ಕಾಲದ ತಲ್ಲಣಗಳಿಗೆ ಗಟ್ಟಿಯಾದ ದ್ವನಿಯಾಗುವುದು ಸಾದ್ಯವೆ? ಹೀಗಿರುವಾಗ ಸಾಹಿತ್ಯದ ಬಗ್ಗೆ ಜನಸಾಮಾನ್ಯರಲ್ಲಿ ಸದಭಿರುಚಿ ಮೂಡಿಸುವ ಬಗೆ ಯಾವುದು? 

  ಕಸಾಪದಲ್ಲಿ ಕನಿಷ್ಟ ಮಟ್ಟದ ಸಾಹಿತಿಗಳ ಪ್ರಾತಿನಿದ್ಯ ಸಾದ್ಯವಾದರೆ, ಅಥವಾ ಯುವ ಸಾಹಿತಿಗಳ ಅಭಿಪ್ರಾಯ, ಸಲಹೆಗಳಿಗೆ ಕನಿಷ್ಠ ಮಟ್ಟದ ಮನ್ನಣೆ ಸಿಕ್ಕರೆ,  ಅಸಾಹಿತಿಗಳೆ ತುಂಬಿ ಜಡವಾಗುವುದನ್ನು ಸ್ವಲ್ಪಮಟ್ಟಿಗಾದರೂ ಸುಧಾರಿಸಲು ಸಾದ್ಯವಿದೆ. ಕಸಾಪ ಪುರುಷಾಧಿಕಾರವನ್ನು ಇಂದಿಗೂ ಬಿಟ್ಟುಕೊಟ್ಟಿಲ್ಲ. ಹಿಂದೆ ಪುಂಡಲೀಕ ಹಾಲಂಬಿ ಅವರು ರಾಜ್ಯ, ಜಿಲ್ಲಾ, ತಾಲೂಕು ಕಸಾಪಗಳ ಉಪಾಧ್ಯಕ್ಷರನ್ನಾಗಿ ಮಹಿಳೆಯರನ್ನು ನೇಮಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಅದು ಚಲಾವಣೆಗೆ ಬರಲೇ ಇಲ್ಲ. ಹೀಗೆ ಮಹಿಳಾ ಪ್ರಾತಿನಿಧ್ಯವನ್ನು ಕಸಾಪ ಹೆಚ್ಚೆಚ್ಚು ಹೊಂದಬೇಕಿದೆ.
  ಪ್ರತಿಬಾರಿಯೂ ಕಸಾಪ ರಾಜ್ಯಾಧ್ಯಕ್ಷರುಗಳ ಬಗ್ಗೆ ಜನರು ಸಾಹಿತಿಗಳು ತಮ್ಮದೇ ಆದ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಇಂತಹ ನಿರೀಕ್ಷೆಗಳು ಹುಸಿಯಾಗದಂತೆ ಮನು ಬಳಿಗಾರ ಅವರು ಸೂಕ್ಷ್ಮವಾಗಿ ಕಸಾಪವನ್ನು ಮರು ರೂಪಿಸುವ ದೊಡ್ಡ ಜವಾಬ್ದಾರಿಯನ್ನು ಹೊತ್ತಿದ್ದಾರೆ.  ಈ ಜವಬ್ದಾರಿಯನ್ನು ಅರ್ಥಪೂರ್ಣವಾಗಿ ನಿಭಾುಸಲಿ ಎನ್ನುವುದು ನಮ್ಮ ಆಶಯ.
***

ಗುರುವಾರ, ಮೇ 5, 2016

ಜನಪರ ವಿಜ್ಞಾನಿ ರಾಗಿ ಲಕ್ಷ್ಮಣಯ್ಯ

-ಎಂ. ನಾರಾಯಣ ಸ್ವಾಮಿ

ಡಾ. ಸಿ. ಎಚ್. ಲಕ್ಷ್ಮಣಯ್ಯನೆಂಬ ರಾಗಿ ವಿಜ್ಞಾನಿ ಇಂಡಾಫ್ ರಾಗಿ ಸೇರಿದಂತೆ ಸುಮಾರು 23 ಅಧಿಕ ಇಳುವರಿಯ ರಾಗಿ ತಳಿಗಳನ್ನು ಕಂಡುಹಿಡಿದ ಜನಪರ ವಿಜ್ಞಾನಿ. ಅವರು ದಲಿತ ಜನಾಂಗಕ್ಕೆ ಸೇರಿದವರು. ರಾಗಿ ವಿಜ್ಞಾನಿ ಲಕ್ಷ್ಮಣಯ್ಯನವರ ಅಮೂಲ್ಯ ಕೊಡುಗೆಗಳನ್ನು ಪ್ರೀತ್ಯಾದರಗಳಿಂದ ನೋಡಬೇಕಿದೆ. ಮೈಸೂರು ತಾಲ್ಲೂಕಿನ ಹಾರೋಹಳ್ಳಿಯಲ್ಲಿ 1921ರಲ್ಲಿ ಜನಿಸಿದ ಲಕ್ಷ್ಮಣಯ್ಯನವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ 1941ರಲ್ಲಿ ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳೊಂದಿಗೆ ಬಿಎಸ್‍ಸಿ ಪದವಿಯನ್ನು ಪಡೆದರು. ರೈಲ್ವೆಯಲ್ಲಿ ಗುಮಾಸ್ತರಾಗಿ ಕೆಲಕಾಲ ಸೇವೆ, ಅಲ್ಲಿಯ ನೌಕರರ ಕಳ್ಳತನ, ಭ್ರಷ್ಟಾಚಾರ ಕಂಡು ಕೆಲಸಕ್ಕೆ ರಾಜೀನಾಮೆ. ಬುದ್ದ, ಅಂಬೇಡ್ಕರ್, ಟಾಲ್‍ಸ್ಟಾಯ್ ಮತ್ತು ಐನ್‍ಸ್ಟೀನ್ ಚಿಂತನೆಗಳು ಇವರಿಗೆ ಮಾರ್ಗದರ್ಶನ.
ಬೀರೂರಿನಲ್ಲಿ ಕೃಷಿ ಇಲಾಖೆಯಲ್ಲಿ ಸೇವೆ, ತದನಂತರ 1949 ರಲ್ಲಿ ಮಂಡ್ಯದ ವಿಸಿ ಫಾರಂನಲ್ಲಿ ‘ಕಿರಿಯ ಸಹಾಯಕ ಸಸ್ಯಶಾಸ್ತ್ರಜ್ಞ’ರಾಗಿ ಸೇರಿಕೊಂಡರು. ರಾಗಿ ಸ್ವಕೀಯ ಪರಾಗಸ್ಪರ್ಶ ಬೆಳೆ. ಅದರಲ್ಲಿ ತಳಿಸಂಕರಣ ಸಾಧ್ಯವಿಲ್ಲ ಎಂದು ಜಗತ್ತಿನ ಎಲ್ಲ ವಿಜ್ಞಾನಿಗಳೂ ಕೈಚೆಲ್ಲಿದ್ದ ಕಾಲವದು. ಆದರೆ, ಲಕ್ಷ್ಮಣಯ್ಯನವರ ಪ್ರಬುದ್ಧ ಆಲೋಚನೆಗಳು ಫಲಕೊಟ್ಟವು. ಬಡವರ ಆಹಾರ ರಾಗಿ. ಬಡವರಿಗೆ ರಾಗಿಮುದ್ದೆ, ರಾಗಿ ರೊಟ್ಟಿಯೇ ನಿತ್ಯದ ಆಹಾರ. ಕಾಯಿಲೆ ಕಸಾಲೆಗೆ ರಾಗಿಯ ಅಂಬಲಿಯೇ ಬಡವರಿಗೆ ಗತಿ. ಅನ್ನ ಕಾಣುವುದು ಹಬ್ಬ ಹರಿದಿನಗಳಿಗೆ ಮಾತ್ರ. ರಾಗಿ ತಳಿಗಳ ಸಂಕರಣದ ವಿಧಾನ ಕುರಿತು ಲಕ್ಷ್ಮಣಯ್ಯನವರು ಬುದ್ದನಂತೆ ಧ್ಯಾನ ಮಾಡಿದರು. ತಾವೇ ಆವಿಷ್ಕರಿಸಿದ ‘ವಿಶೇಷ ಸಂಪರ್ಕ ಪದ್ದತಿ’ಯ ಮೂಲಕ ರಾಗಿಯಲ್ಲಿ ಸಂಕರಣ ತಳಿಗಳನ್ನು ಕಂಡುಹಿಡಿದ ಜಗತ್ತಿನ ಮೊಟ್ಟ ಮೊದಲ ವಿಜ್ಞಾನಿಯಾದರು. 1913 ರಲ್ಲಿ ಮೈಸೂರು ವ್ಯವಸಾಯ ಇಲಾಖೆಯ ಮೊದಲ ನಿರ್ದೇಶಕರಾದ ವಿದೇಶಿ ಅಧಿಕಾರಿ ಲೆಸ್ಲಿ ಕೋಲ್ಮನ್ ಅವರು ರಾಗಿಯನ್ನು ಸಂಕರಣಗೊಳಿಸಲು ಪ್ರಯತ್ನಿಸಿ ಸೋತವರು.
ಲೆಸ್ಲಿ ಕೋಲ್ಮನ್ ಸೇರಿದಂತೆ ಬೇರಾರೂ ಸಾಧಿಸಲಾಗದ್ದನ್ನು ಲಕ್ಷ್ಮಣಯ್ಯನವರು ಸಾಧಿಸಿದರು. ಸರ್ಕಾರದ ದಾಖಲೆಗಳಲ್ಲಿ ಸಿ. ಎಚ್. ಲಕ್ಷ್ಮಣಯ್ಯನವರು ರಾಗಿ ಬ್ರೀಡರ್. ಆದರೆ ಜನಮಾನಸದಲ್ಲಿ ಅವರು ರಾಗಿಬ್ರಹ್ಮ. ದೇಸಿ ರಾಗಿ ತಳಿಗಳ ಹೆಸರುಗಳೆಂದರೆ, ಕರಿಕಡ್ಡಿರಾಗಿ, ಬಿಳಿಕಡ್ಡಿರಾಗಿ, ಗಿಡ್ಡ ರಾಗಿ, ಹಸಿರುಕೊಂಬು ರಾಗಿ, ಮಾದಯ್ಯನಗಿರಿ -1, ಮಾದಯ್ಯನಗಿರಿ-2, ದೊಡ್ಡ ರಾಗಿ, ಗೌಬಿಲ್ಲೆ ರಾಗಿ, ಮಜ್ಜಿಗೆ ರಾಗಿ, ಜೇನುಮುದ್ದೆ ರಾಗಿ, ಬೆಣ್ಣೆಮುದ್ದೆ ರಾಗಿ, ರುದ್ರಜಡೆ ರಾಗಿ, ಜಡೆಸಂಗ ರಾಗಿ ಇತ್ಯಾದಿ. ಇವೆಲ್ಲವೂ ಎಕರೆಗೆ ಸರಾಸರಿ 5 ರಿಂದ 10 ಕ್ವಿಂಟಾಲ್‍ವರೆಗೆ ರಾಗಿ ಇಳುವರಿ ಕೊಡುತ್ತವೆಯೆಂದು 1920 ರ ಹೊತ್ತಿಗೇ ಲೆಸ್ಲೀ ಕೋಲ್‍ಮನ್ ಅವರು ಪುಸ್ತಕವೊಂದರಲ್ಲಿ ದಾಖಲಿಸಿದ್ದಾರೆ. ಲಕ್ಷ್ಮಣಯ್ಯನವರು 1951 ರಿಂದ 1964 ರವರೆಗೆ ಸ್ಥಳೀಯ ರಾಗಿ ತಳಿಗಳೊಂದಿಗೆ ಕೊಯಮತ್ತೂರಿನ ರಾಗಿ ತಳಿಗಳನ್ನು ಸಂಕರಣಗೊಳಿಸಿ ಅನ್ನಪೂರ್ಣ, ಉದಯ, ಪೂರ್ಣ, ಅರುಣ, ಶಕ್ತಿ, ಸಂಪೂರ್ಣ, ಕಾವೇರಿ ರಾಗಿ ತಳಿಗಳನ್ನು ಬಿಡುಗಡೆ ಮಾಡಿದರು.
ಇದರಿಂದ ಶೇ. 50 ರಷ್ಟು ಅಧಿಕ ಇಳುವರಿ ಸಾಧ್ಯವಾಯಿತು. ಇವರ ಸಾಧನೆಯನ್ನು ಮೊಟ್ಟಮೊದಲಿಗೆ ಖೋಡೆ ಕಂಪನಿ ಗುರುತಿಸಿತು. 1968ರಲ್ಲಿ ‘ಕಾವೇರಿ’ ರಾಗಿತಳಿಯಿಂದ ಅಧಿಕ ಇಳುವರಿ ಪಡೆದ ಹರಿಖೋಡೆಯವರು ನಗದು ಬಹುಮಾನದೊಡನೆ ಲಕ್ಷ್ಮಣಯ್ಯನವರನ್ನು ಸನ್ಮಾನಿಸಿದರು. ಮಂಜಪ್ಪನೆಂಬ ಕೃಷಿಕ ಖೋಡೆಯವರ ಜಮೀನಿನಲ್ಲಿ ‘ಕಾವೇರಿ’ ತಳಿಯಿಂದ ಉತ್ತಮ ಫಸಲು ಪಡೆದಿದ್ದರು. ತದನಂತರ, ಕರ್ನಾಟಕ ಸರ್ಕಾರದಿಂದ 1968 ಮತ್ತು 1982 ರಲ್ಲಿ ಎರಡು ಬಾರಿ ರಾಜ್ಯ ಪ್ರಶಸ್ತಿ ದಕ್ಕಿತು. ಕರ್ನಾಟಕ ಕೃಷಿಕ ಸಮಾಜದ ವತಿಯಿಂದ 1975ರಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಂದ ಸನ್ಮಾನವಾಯಿತು. 1964 ರಿಂದ 1984 ರವರೆಗೆ ದೇಸಿ ರಾಗಿತಳಿಗಳನ್ನು ಆಫ್ರಿಕಾದ ರಾಗಿತಳಿಗಳೊಂದಿಗೆ ಸಂಕರಣ ಮಾಡಿ ಇಂಡಾಫ್ 1 ರಿಂದ ಇಂಡಾಫ್ 15 (ಇಂಡಿಯಾ + ಆಫ್ರಿಕಾ = ಇಂಡಾಫ್) ರವರೆಗಿನ ತಳಿಗಳನ್ನು ಬಿಡುಗಡೆ ಮಾಡಿದರು.
ಇದರಿಂದ ಎಕರೆಗೆ ಐದಾರು ಕ್ವಿಂಟಾಲ್ ಬದಲಿಗೆ 15 ರಿಂದ 20 ಕ್ವಿಂಟಾಲ್ ರಾಗಿಯ ಇಳುವರಿ ಬಂತು. ಇದು ಕನಿಷ್ಟ ಶೇ. 250 ರಷ್ಟು ಅಧಿಕ ಉತ್ಪಾದನೆ. ಪರಿಣಾಮವಾಗಿ ಕೋಟ್ಯಾಂತರ ಜನರ ಹಸಿವು ನೀಗಿತು. ಇದನ್ನು “ಕರ್ನಾಟಕದ ಹಸಿರು ಕ್ರಾಂತಿ”ಯೆನ್ನಬಹುದು. ಅವರ ರಾಗಿ ತಳಿಗಳು ರಾಗಿ ಧಾನ್ಯದ ಜತೆಗೆ ಅಧಿಕ ರಾಗಿಹುಲ್ಲನ್ನೂ ಒದಗಿಸಿದವು. ಇದರಿಂದ ಜಾನುವಾರುಗಳಿಗೆ ಮೇವು ಸಿಕ್ಕಿತು. ಬರಗಾಲದಲ್ಲಿ ತತ್ತರಿಸಿಹೋಗಿದ್ದ ಜಾನುವಾರುಗಳು ಬದುಕಿ ಉಳಿಯುವಂತಾಯಿತು. ಜನಮನ್ನಣೆ, ಎರಡು ವರ್ಷಗಳ ಸೇವಾವಧಿ ವಿಸ್ತರಣೆ ಹಾಗೂ ಹಲವು ಪ್ರಶಸ್ತಿ ಪುರಸ್ಕಾರಗಳ ನಂತರ ಲಕ್ಷ್ಮಣಯ್ಯನವರು 1984ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸೇವೆಯಿಂದ ನಿವೃತ್ತಿಯಾದರು. ‘ನಾನು ಆಳವಾಗಿ ಯೋಚಿಸಿದ್ದರ ಒಟ್ಟು ಮೊತ್ತವೇ ನನಗೊದಗಿದ ಉನ್ನತಿಗೆ ಕಾರಣ’ ಎಂದರು ಲಕ್ಷ್ಮಣಯ್ಯನವರು. ಇದನ್ನೇ ಗೌತಮ ಬುದ್ದ ಎರಡು ಸಾವಿರ ವರ್ಷಗಳ ಹಿಂದೆ ಹೇಳಿದ್ದಾರೆ- ‘ನಾವು ಏನು ಯೋಚಿಸುತ್ತೇವೋ ಅದಾಗುತ್ತೇವೆ. ನಮ್ಮ ಯೋಚನೆಗಳಿಂದಲೇ ಜಗತ್ತನ್ನು ಕಟ್ಟುತ್ತೇವೆ’.
ರಾಗಿ ಋಷಿಗೆ ಜನಮನ್ನಣೆ ಕರ್ನಾಟಕ ಸರ್ಕಾರದ ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ  ಎಂ. ಪಿ. ಪ್ರಕಾಶ್‍ರವರ ಆಸ್ತೆಯಿಂದ 1985ರಲ್ಲಿ ರಾಗಿ ಲಕ್ಷ್ಮಣಯ್ಯನವರ ಹೆಸರು ಪದ್ಮ ಪ್ರಶಸ್ತಿಗೆ ಶಿಫಾರಸ್ಸಾಯಿತು. ಅವರ ಹೆಸರಿನ ಜತೆಗೆ ಡಾ. ಎಚ್. ನರಸಿಂಹಯ್ಯನವರ ಹೆಸರೂ ಇತ್ತು. ಅವರಿಗೆ ಆ ಪ್ರಶಸ್ತಿ ಸಂದಿತು. ಲಕ್ಷ್ಮಣಯ್ಯನವರಿಗೆ ಸಿಗಲಿಲ್ಲ. ಈ ಮಧ್ಯೆ, ರೈತಸಂಘದ ವತಿಯಿಂದ ಎಂ. ಡಿ. ನಂಜುಂಡಸ್ವಾಮಿಯವರು ಲಕ್ಷ್ಮಣಯ್ಯನವರನ್ನು ಸನ್ಮಾನಿಸಿದರು. ಎಚ್. ಎಲ್. ಕೇಶವಮೂರ್ತಿ ಮತ್ತು ಕೆ. ಪುಟ್ಟಸ್ವಾಮಿ ಬರೆದ ಲೇಖನಗಳು ಕ್ರಮವಾಗಿ ಲಂಕೇಶ್ ಪತ್ರಿಕೆಯ ದೀಪಾವಳಿ ವಿಶೇಷಾಂಕ (1982) ಮತ್ತು ‘ಸುದ್ದಿ ಸಂಗಾತಿ’ (1987) ಯಲ್ಲಿ ಪ್ರಕಟವಾದವು. 1988ರಲ್ಲಿ ಬೆಂಗಳೂರು ಕೃಷಿವಿಶ್ವವಿದ್ಯಾಲಯದ ಅಂಬೇಡ್ಕರ್ ಸಂಘದ ವಿದ್ಯಾರ್ಥಿಗಳು ಪಿ. ಲಂಕೇಶ್ ಅವರಿಂದ ಲಕ್ಷ್ಮಣಯ್ಯನವರನ್ನು ಸನ್ಮಾನಿಸಿದರು. ಅದೇ ಸಂದರ್ಭಕ್ಕೆ ಅವರಿಗೆ ಗೌರವ ಡಾಕ್ಟ್ಟೊರೇಟ್ ಕೊಡಬೇಕೆಂಬ ಒತ್ತಾಯಗಳು ಕೇಳಿಬಂದವು. 1989ರಲ್ಲಿ ಬೆಂಗಳೂರು ಕೃಷಿವಿವಿಯಿಂದ ಆಗಿನ ಕುಲಪತಿಗಳಾದ ಡಾ. ಕೆ. ಕೃಷ್ಣಮೂರ್ತಿ ಮತ್ತು ಕುಲಸಚಿವರಾದ ಡಾ. ಎಸ್. ಬಿಸಲಯ್ಯನವರ ಸ್ಪಂದನೆಯಿಂದ ಗೌರವ ಡಾಕ್ಟೊರೇಟ್ ಪ್ರಾಪ್ತಿಯಾಯಿತು. ನಿವೃತ್ತಿಯ ನಂತರ 1990 ರಿಂದ 1992 ರವರೆಗೆ ಎರಡು ವರ್ಷಗಳ ಕಾಲ ಬೆಂಗಳೂರು ಕೃಷಿವಿವಿಯಲ್ಲಿ ವಿಸಿಟಿಂಗ್ ಪೆÇ್ರಫೆಸರ್ ಆಗಿ ಸೇವೆ ಸಲ್ಲಿಸಿ ಮತ್ತೊಂದು ಅಧಿಕ ಇಳುವರಿಯ ಎಲ್-5 ರಾಗಿ ತಳಿಯನ್ನು ಕೊಟ್ಟರು. 1993 ರಲ್ಲಿ ಅಪಾರ ಸಾಮಾಜಿಕ ಕಾಳಜಿಯ ಕೃಷಿ ವಿಜ್ಞಾನಿ ಡಾ. ಸಿ. ಎಚ್. ಲಕ್ಷ್ಮಣಯ್ಯ ಇಹಲೋಕ ತ್ಯಜಿಸಿದರು.
ಮಂಡ್ಯದ ಕೃಷಿ ಕಾಲೇಜಿನ ‘ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ’ ಪ್ರತಿ ವರ್ಷ ಅವರ ಹುಟ್ಟು ಹಬ್ಬವಾದ ಮೇ 15 ರಂದು ಕೃಷಿ ವಿಷಯಕ್ಕೆ ಸಂಬಂಧಿಸಿದ ಒಂದು ಉಪನ್ಯಾಸದ ಆಯೋಜನೆ ಮಾಡುತ್ತಿದೆ. ಮೈಸೂರಿನ ಬಳಿಯ ನಾಗೇನಹಳ್ಳಿ ಕೃಷಿ ಸಂಶೋಧನಾ ಕೇಂದ್ರದಲ್ಲಿನ ಸಭಾಂಗಣಕ್ಕೆ ‘ಡಾ. ಸಿ. ಎಚ್. ಲಕ್ಷ್ಮಣಯ್ಯ ಸಭಾಂಗಣ’ ಎಂದು ನಾಮಕರಣ ಮಾಡಲಾಗಿದೆ. ಮಂಡ್ಯ ನಗರದಿಂದ ವಿ.ಸಿ. ಫಾರಂನ ಕೃಷಿ ಸಂಶೋಧನಾ ಕೇಂದ್ರಕ್ಕೆ ಹೋಗುವ ರಸ್ತೆಗೆ ‘ರಾಗಿ ಲಕ್ಷ್ಮಣಯ್ಯ ರಸ್ತೆ’ ಎಂದು ಹೆಸರಿಡಲಾಗಿದೆ. ಅಂದಿನ ಕೃಷಿ ಸಚಿವರಾದ  ಕೆ. ಶ್ರೀನಿವಾಸಗೌಡರ ಪ್ರಯತ್ನದಿಂದಾಗಿ ಭಾರತ ರತ್ನ ಪ್ರಶಸ್ತಿಗೆ ಲಕ್ಷ್ಮಣಯ್ಯನವರ ಹೆಸರನ್ನು 2005-06ರಲ್ಲಿ ಸೂಚಿಸಲಾಗಿತ್ತಂತೆ. ಆದರೆ, ರಾಗಿಯು ಕೆಲವೇ ಕೆಲವು ರಾಜ್ಯಗಳ ಬೆಳೆ ಎಂಬ ತಪ್ಪು ಕಲ್ಪನೆಯಿಂದಾಗಿ ಅವರಿಗೆ ಪ್ರಶಸ್ತಿ ಸಿಗಲಿಲ್ಲ. ಅಮೇರಿಕಾದ ಬೇಸಾಯ ಶಾಸ್ತ್ರದ ವಿಜ್ಞಾನಿಯಾದ ಡಾ. ನಾರ್ಮನ್ ಬೋರ್‍ಲಾಗ್ ಅವರು ಅಧಿಕ ಇಳುವರಿಯ ಗೋದಿ ತಳಿಗಳನ್ನು ಕಂಡುಹಿಡಿದಿದ್ದಕ್ಕಾಗಿ 1970ರಲ್ಲಿ ನೋಬಲ್ ಶಾಂತಿ ಪ್ರಶಸ್ತಿ ಮತ್ತು 2006 ರಲ್ಲಿ ಭಾರತ ಸರ್ಕಾರದ ಪದ್ಮ ವಿಭೂಷಣ ಪ್ರಶಸ್ತಿ ಪಡೆದುಕೊಂಡರು.
ಈ ನೆಲದ ವಿಜ್ಞಾನಿ ರಾಗಿ ಲಕ್ಷ್ಮಣಯ್ಯನವರಿಗೆ ಅಂತಹ ಯಾವ ಭಾಗ್ಯವೂ ಒಲಿದು ಬರಲೇ ಇಲ್ಲ. ಕೃಷಿ ಸಚಿವರಾಗಿದ್ದ ಶ್ರೀನಿವಾಸಗೌಡರ ಒತ್ತಾಯದಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 2005ರಲ್ಲಿ ಅವರ ಪ್ರತಿಮೆಯ ಅನಾವರಣವಾಗಿದೆ. ‘ಅವರ ಪ್ರತಿಮೆ ಸ್ಥಾಪಿಸದಿದ್ದರೆ ಸಹಕುಲಾಧಿಪತಿಯಾಗಿ ತಾವು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಬರುವುದಿಲ್ಲ’ ಎಂಬ ತಾಕೀತನ್ನು ಮಾಡಿದ ಶ್ರೀನಿವಾಸಗೌಡರು ಲಕ್ಷ್ಮಣಯ್ಯನವರ ಪ್ರತಿಮೆ ಸ್ಥಾಪಿಸುವಂತೆ ನೋಡಿಕೊಂಡಿದ್ದಾರೆ. ‘ನಮ್ಮ ಕಣದ ತುಂಬ ರಾಶಿ ರಾಶಿ ರಾಗಿ, ಅಷ್ಟೊಂದು ರಾಗಿಯನ್ನು ಶೇಖರಿಸಿಟ್ಟುಕೊಳ್ಳುವುದು ನಮಗೆ ಕಷ್ಟದ ಕೆಲಸವಾಯಿತು, ಇದಕ್ಕೆ ಕಾರಣರಾದ ಲಕ್ಷ್ಮಣಯ್ಯನವರನ್ನು ನಾವು ಮರೆಯೋದುಂಟೆ? ಅವರು ಬದುಕಿದ್ದಾಗ ನಾನು ಮೈಸೂರಿಗೆ ಹೋಗಿ ಅವರನ್ನು ಆಗಾಗ ಮಾತನಾಡಿಸಿಕೊಂಡು ಬರುತ್ತಿದ್ದೆ’ ಎನ್ನುತ್ತಾರೆ, ಕೋಲಾರದ ಶ್ರೀನಿವಾಸಗೌಡರು, ತುಂಬು ಅಭಿಮಾನದಿಂದ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ 2010 ರಲ್ಲಿ ದೇವನೂರ ಮಹಾದೇವರಿಗೆ ಕೊಡಬೇಕೆಂದಿದ್ದ ಗೌರವ ಡಾಕ್ಟ್ಟೊರೇಟ್ ಪದವಿಯನ್ನು ದೇವನೂರರ ಕೋರಿಕೆಯಂತೆ ರಾಗಿ ಲಕ್ಷ್ಮಣಯ್ಯನವರಿಗೆ ಮರಣೋತ್ತರವಾಗಿ ನೀಡಲಾಗಿದೆ. ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳು ‘ಕೃಷಿ ಪತ್ರಿಕೋದ್ಯಮ’ ಎಂಬ ಕೋರ್ಸಿನಲ್ಲಿ ರಾಗಿ ಲಕ್ಷ್ಮಣಯ್ಯನವರ ಕುರಿತು ತಿಳಿಯಬೇಕಿದೆ. ಅದು ಸಿಲಬಸ್‍ನಲ್ಲಿದೆ. ಆದರೆ, ಸಿಲಬಸ್‍ನಲ್ಲಿ ಸಿ.ಎಚ್. ಲಕ್ಷ್ಮಣಯ್ಯ ಹೆಸರಿನ ಬದಲಿಗೆ ಎಲ್. ಲಕ್ಷ್ಮಣಯ್ಯ ಎಂಬ ಹೆಸರಿದೆ! ಇದು ಅಚಾತುರ್ಯ. ಚೋಟಯ್ಯ ಹಾರೋಹಳ್ಳಿ ಲಕ್ಷ್ಮಣಯ್ಯನವರ ಹೆಸರನ್ನು ಹೀಗೆ ತಪ್ಪಾಗಿ ಮುದ್ರಿಸಿದ ವಿವಿಯು ತನ್ನ ಪ್ರಾಧ್ಯಾಪಕರುಗಳಿಂದ ಲಕ್ಷ್ಮಣಯ್ಯನವರ ಕುರಿತು ಅದಾವ ಮಾಹಿತಿ ಮಾಡಿಕೊಡುತ್ತದೆ ಎಂಬ ಪ್ರಶ್ನೆ ಏಳದಿರದು. ದೇಶದಲ್ಲಿ ರಾಗಿ ಬೆಳೆಯುವ ಪ್ರದೇಶಗಳು ಭಾರತದಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ್ರಪ್ರದೇಶ ರಾಜ್ಯಗಳು ಹೆಚ್ಚು ರಾಗಿ ಬೆಳೆಯುವ ಪ್ರದೇಶಗಳು. ಕರ್ನಾಟಕದಲ್ಲಿ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ರಾಗಿ ಬೆಳೆ ಅಧಿಕ.
ಆಂಧ್ರ್ರಪ್ರದೇಶದ ಚಿತ್ತೂರು, ಅನಂತಪುರ, ನೆಲ್ಲೂರು, ಕರ್ನೂಲು, ಕಡಪ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ರಾಗಿ ಬೆಳೆಯುತ್ತಾರೆ. ತಮಿಳುನಾಡಿನಲ್ಲಿ ಸೇಲಂ, ಕೊಯಮತ್ತೂರು, ಉತ್ತರ ಆರ್ಕಾಟ್, ದಕ್ಷಿಣ ಆರ್ಕಾಟ್, ಚಂಗಲ್‍ಪೇಟೆ ಮತ್ತು ರಾಮನಾಥಪುರಂ ಜಿಲ್ಲೆಗಳು ರಾಗಿ ಬೆಳೆಗೆ ಹೆಸರುವಾಸಿ. ಹಿಮಾಲಯದ ತಪ್ಪಲು, ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ ಮತ್ತು ಕಾಶ್ಮೀರದಲ್ಲೂ ರಾಗಿಯನ್ನು ಅತ್ಯಲ್ಪ ಪ್ರಮಾಣದಲ್ಲಾದರೂ ಬೆಳೆಯುತ್ತಾರೆ. ಭಾರತ ಮತ್ತು ಪೂರ್ವ ಆಫ್ರಿಕಾ ದೇಶಗಳಲ್ಲಿ ರಾಗಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಜತೆಗೆ ಚೀನಾ, ಜಪಾನ್, ನೇಪಾಳ, ಬರ್ಮಾ, ಶ್ರೀಲಂಕಾ, ಥೈಲ್ಯಾಂಡ್, ಮಲೇಶಿಯಾ ದೇಶಗಳಲ್ಲಿ ಕೊಂಚ ಮಟ್ಟಿಗೆ ರಾಗಿಯನ್ನು ಬೆಳೆಯಲಾಗುತ್ತಿದೆ. ಅಮೇರಿಕಾದ ಮಾರುಕಟ್ಟೆಯಲ್ಲಿ ರಾಗಿಯ ಹಸಿಹಿಟ್ಟು ಲಭ್ಯವಿದೆ. ಲಕ್ಷ್ಮಣಯ್ಯನವರ ಇಂಡಾಫ್ ರಾಗಿ ತಳಿಗಳ ಹಿಟ್ಟು ಅಲ್ಲಿರಲೇಬೇಕಲ್ಲ?
ಪಂಚತಾರಾ ಹೋಟೆಲ್ಲುಗಳಲ್ಲೂ ರಾಗಿ ತಿನಿಸುಗಳಿಗೆ ಬೇಡಿಕೆಯಿದೆ. ರಾಗಿ ಜಗದ ಆಹಾರವಾಗುತ್ತಿದೆ. ಲಕ್ಷ್ಮಣಯ್ಯನವರು ಕಂಡುಹಿಡಿದ ಅಧಿಕ ಇಳುವರಿಯ ರಾಗಿ ತಳಿಗಳು ದೇಶದ ಇತರೆ ರಾಜ್ಯಗಳಿಗೂ ಹಾಗೂ ವಿದೇಶಗಳಿಗೂ ಹೋಗಿವೆ, ಅರ್ಥಾತ್ ಖಂಡಾಂತರಗೊಂಡಿವೆ. ಇದರಿಂದ ಮಾನವ ಕುಲಕ್ಕೆ ಬಹುದುಪಕಾರವಾಗಿದೆ. ಇವರು ಎಲೆಮರೆಯ ಕಾಯಿಯ ರೀತಿಯಲ್ಲಿ ತೆನೆಮರೆಯಲ್ಲೇ ಸಂಶೋಧನೆ ಕೈಗೊಂಡವರು.
ರಾಗಿಯ ದಾನ ಬಳ್ಳ ಬಳ್ಳRagi Lakshmanaih 01
ಸ್ಪೋಟಗೊಂಡ ಜನಸಂಖ್ಯೆಯ ತುತ್ತಿನ ಚೀಲ ತುಂಬಿಸುವಲ್ಲಿ ಲಕ್ಷ್ಮಣಯ್ಯನವರ ಕೊಡುಗೆ ಅಪಾರ. ‘ಇಂಡಾಫ್ ತಳಿಗಳು ಬರಲಿಲ್ಲ ಎಂದರೆ ಹೊಟ್ಟೆಗೆ ಹಿಟ್ಟು ಸಿಕ್ತಿರಲಿಲ್ಲ’ ಅಂತ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ, ನಗರ ಜಿಲ್ಲೆಗಳ ಬಹುತೇಕ ರೈತರು ಇಂದಿಗೂ ಹೇಳುತ್ತಾರೆ. ಈಗಲೂ ಅವರು ಹೆಚ್ಚಾಗಿ ಬಿತ್ತುವುದು ಇಂಡಾಫ್ ರಾಗಿ ತಳಿಗಳನ್ನೇ. ಇಂಡಾಫ್ ತಳಿಗಳಿಂದ ರಾಗಿ ಇಳುವರಿ ಜಾಸ್ತಿಯಾದ್ದರಿಂದ ಕಣದಲ್ಲಿನ ರಾಗಿಯ ದೊಡ್ಡ ದೊಡ್ಡ ರಾಶಿಗಳಿಂದ ಪಡಿ, ಅಚ್ಚೇರು, ಸೇರು ರಾಗಿ ದಾನ ಮಾಡುವ ಬದಲು ದೊಡ್ಡರೈತರು ಬಳ್ಳ ಬಳ್ಳ ಮೊಗೆದು ಕೃಷಿಕಾರ್ಮಿಕರಿಗೆ, ಕೂಲಿಯಾಳುಗಳಿಗೆ ಕೊಟ್ಟರು.
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ. ಚೆಂಗಪ್ಪನವರನ್ನು ನಾನೊಮ್ಮೆ ಪ್ರಶ್ನಿಸಿದೆ – ‘ಇಂದು ಕೋಲಾರ, ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರಾಗಿ ಬೆಳೆಯುವ ಹೊಲಗಳು ನೀಲಗಿರಿ ತೋಪುಗಳಾಗಿ ಪರಿವರ್ತನೆಯಾಗಿವೆ. ಕೆಲ ಜಿಲ್ಲೆಗಳಲ್ಲಿ ಶೇ. 32 ರಷ್ಟು ಭೂಪ್ರದೇಶ ನೀಲಗಿರಿ ತೋಪುಗಳಾಗಿವೆಯೆಂಬ ವರದಿಗಳಿವೆ. ಈ ತೋಪುಗಳನ್ನು ಮತ್ತೆ ರಾಗಿ ಹೊಲಗಳನ್ನಾಗಿಸುವಲ್ಲಿ ರೈತರ ಮನವೊಲಿಸಲು ವಿಶ್ವವಿದ್ಯಾಲಯದಲ್ಲಿ ಚಿಂತನೆ ನಡೆದಿದೆಯೇ’ ಎಂದು. ‘ರಾಗಿ ಬೆಳೆಯುವ ಪ್ರದೇಶ ಕಡಿಮೆಯಾಗಿದ್ದರೂ ಉತ್ಪಾದನೆ ಕಡಿಮೆಯಾಗಿಲ್ಲವಲ್ಲ’ ಎನ್ನುವುದು ಅವರ ಸಿದ್ದ ಉತ್ತರವಾಗಿತ್ತು. ಲಕ್ಷ್ಮಣಯ್ಯನವರ ಇಂಡಾಫ್ ತಳಿಗಳನ್ನೇ ರೈತರು ಇಂದಿಗೂ ಬೆಳೆಯುತ್ತಿದ್ದಾರೆ. ಎಲ್ಲ ಋತುಮಾನಗಳಲ್ಲೂ ಬೆಳೆಯಬಹುದಾದ, ಜತೆಗೆ ಮಳೆಯಾಶ್ರಯ ಹಾಗೂ ನೀರಾವರಿಗೂ ಒಗ್ಗುವ ಇಂಡಾಫ್ ತಳಿಗಳಿವೆ. ಕೃಷಿ ವಿವಿಯು ಬಿಡುಗಡೆ ಮಾಡಿರುವ ಜಿಪಿಯು ಎಂಬ ಸಂಕರಣ ಸರಮಾಲೆಯ ಹೊಸ ರಾಗಿ ತಳಿಗಳಿಗೆ ಲಕ್ಷ್ಮಣಯ್ಯನವರ ಇಂಡಾಫ್ ತಳಿಗಳೇ ಮೂಲಾಧಾರ. ಇಂತಹ ಕೊಡುಗೆಗೆ ಕಾರಣವಾದ ಅಪ್ರತಿಮ ವಿಜ್ಞಾನಿಯನ್ನು ನಾವು ಕೊಂಡಾಡಿದ್ದೇವೆಯೇ? ಅವರಿಗೆ ಸಲ್ಲ್ಲಬೇಕಿದ್ದ ಗೌರವ, ಪ್ರಶಸ್ತಿಗಳನ್ನು ಕೊಡಲಾಗಿದೆಯೇ?
ನೆನಪಿನ ಕಾರ್ಯಕ್ರಮಗಳು ಬೇಕು
ರಾಗಿಯನ್ನು ‘ತೃಣಧಾನ್ಯ’ ಎಂದು ಕರೆಯಲಾಗಿದೆ. ಅದರ ಸಂಶೋಧನೆಯ ವಿಜ್ಞಾನಿಗಳನ್ನು ‘ತೃಣ’ವಾಗಿ ಕಾಣಲಾಗುತ್ತಿದೆಯೇ? ಲಕ್ಷ್ಮಣಯ್ಯನವರಿಗೆ ಬಡ್ತಿ ನೀಡಿ ‘ಮೆಣಸು ಅಭಿವೃದ್ಧಿ ಅಧಿಕಾರಿ’ಯಾಗಿ ನೇಮಿಸಿದಾಗ, ಅವರು ಬಡ್ತಿ ತಿರಸ್ಕರಿಸಿ ರಾಗಿ ಬೆಳೆಯ ಸಂಶೋಧನೆಗೆ ಅಂಟಿಕೊಂಡಿದ್ದರ ಹಿಂದೆ ಅಪಾರÀ ಸಾಮಾಜಿಕ ಕಳಕಳಿಯಿದೆ. ಅವರು ಜನಪರ ವಿಜ್ಞಾನಿ. ‘ಹೊಟ್ಟೆ ತುಂಬ ಮುದ್ದೆ ತಿಂದು, ಬಾಯಿ ತುಂಬ ಅನ್ನ ಉಣ್ಣಬೇಕು’ ಎನ್ನುವುದು ಅವರು ಹೇಳುತ್ತಿದ್ದ ಮಾತು. ‘ಸಂಕ್ರಾಂತಿಯ ದಿನ ದನಗಳ ಕೊಂಬಿಗೆ ಬಣ್ಣ ಬಳಿದು, ಬೆಂಕಿಯ ಮೇಲೆ ಹಾರಿಸುತ್ತಾರೆ. ದನಗಳಿಗೆ ಬೇಕಿರುವುದು ಹೊಟ್ಟೆ ತುಂಬಾ ಮೇವು, ಹಿಂಡಿ, ಬೂಸಾ’ ಎಂದಿರುವ ಲಕ್ಷಣಯ್ಯನವರು ತಾವು ಕಂಡುಹಿಡಿದ ರಾಗಿ ತಳಿಗಳಿಂದ ದನಗಳಿಗೆ ಹೆಚ್ಚಿನ ಪ್ರಮಾಣದ ಮೇವೂ ಸಿಗುವಂತೆ ಮಾಡಿದ್ದಾರೆ. ಕನಕದಾಸರ ‘ರಾಮಧಾನ್ಯ ಚರಿತೆ’ಯಲ್ಲಿ ಅಕ್ಕಿ ಮತ್ತು ರಾಗಿಗೆ ನಡೆದ ಸಂವಾದದಲ್ಲಿ ರಾಗಿಗೇ ಗೆಲುವು.
Ragi lakshmanaiah 03ನನ್ನ ಮದುವೆ ರಾಗಿಯೊಂದಿಗೆ ನಡೆದುಹೋಗಿದೆ’ ಎಂದು ತಮ್ಮ ಸೇವಾವಧಿ ಮತ್ತು ತದನಂತರವೂ ಸುಮಾರು ನಾಲ್ಕು ದಶಕಕ್ಕೂ ಹೆಚ್ಚು ಕಾಲ ಹಗಲಿರುಳೆನ್ನದೆ ರಾಗಿ ಹೊಲದಲ್ಲೇ ಕಾಲವ್ಯಯಿಸಿ, ತಮ್ಮ ಕುಟುಂಬ ಸದಸ್ಯರ ಶ್ರಮದಾನವನ್ನು ಸಂಜೆಮುಂಜಾವೆನ್ನದೆ ಸಂಶೋಧನೆಗೆ ಬಳಸಿಕೊಂಡÀ, ಬಡಬೋರೇಗೌಡನ ಹೊಟ್ಟೆ ತುಂಬಲು ಮಹತ್ತರ ಸಂಶೋಧನೆ ನಡೆಸಿದ ಲಕ್ಷ್ಮಣಯ್ಯನವರನ್ನು ಕನ್ನಡಿಗರು ಮರೆಯಕೂಡದು. ‘ನನಗೆ ಎಂತಹ ದೊಡ್ಡ ಹುದ್ದೆ ಕೊಟ್ಟರೂ, ರಾಗಿ ಸಂಶೋಧನೆಯಲ್ಲೇ ನನಗೆ ಅತ್ಯಂತ ಖುಷಿ’ ಎನ್ನುತ್ತಿದ್ದರವರು. ತಮ್ಮ ಅಂತ್ಯ ಸಂಸ್ಕಾರದ ವೇಳೆ ‘ತನ್ನ ದೇಹದ ಮೇಲೆ ಕೇವಲ ಹಿಡಿ ರಾಗಿ ಹಾಕಿ, ಅಷ್ಟೇ ಸಾಕು’ ಎಂದು ಮರಣಕ್ಕೂ ಮೊದಲು ತಮ್ಮ ಶ್ರೀಮತಿಯವರಲ್ಲಿ ನಿವೇದಿಸಿಕೊಂಡರು.
ರಾಗಿ ವಿಜ್ಞಾನಿಗಳು ಅವರ ತನ್ಮಯತೆ ಹಾಗೂ ಬದ್ದತೆಯನ್ನು ಮೈಗೂಡಿಸಿಕೊಳ್ಳಬೇಕು. ಅವರ ಅಸಾಧಾರಣ ಸಾಧನೆಗೆ ಸರ್ಕಾರ ಈಗಲಾದರೂ ಮನ್ನಣೆ ನೀಡಬೇಕು. ರಾಗಿ ವಿಜ್ಞಾನಿಯೊಬ್ಬರಿಗೆ ಪ್ರತಿವರ್ಷ ‘ರಾಗಿ ಲಕ್ಷ್ಮಣಯ್ಯ ಪ್ರಶಸ್ತಿ’ ನೀಡಬೇಕು. ರಾಗಿ ಲಕ್ಷ್ಮಣಯ್ಯನವರ ಹೆಸರಿನಲ್ಲಿ ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಕೇಂದ್ರವೊಂದನ್ನು ತೆರೆಯಲಾಗುವುದು ಎಂಬುದು ಮಂತ್ರಿಗಳ ಭಾಷಣದ ಭರವಸೆಯಾಗಿಯೇ ಉಳಿದಿದೆ. ಅದನ್ನು ಸಾಕಾರಗೊಳಿಸಬೇಕು. ದೇಶದ ಯಾವುದಾದರೊಂದು ಅತ್ಯುನ್ನತ ನಾಗರೀಕ ಪ್ರಶಸ್ತಿಯನ್ನು ಲಕ್ಷ್ಮಣಯ್ಯನವರಿಗೆ ಮರಣೋತ್ತರವಾಗಿ ನೀಡಬೇಕು. ಇವರು ಕರ್ನಾಟಕದ ಹೆಮ್ಮೆಯ ಪುತ್ರರಷ್ಟೇ ಅಲ್ಲ, ಭಾರತ ಮಾತೆಯ ಹೆಮ್ಮೆಯ ಪುತ್ರ ಎಂಬ ಗೌರವಕ್ಕೆ ಭಾಜನರಾಗಬೇಕು.