ಬುಧವಾರ, ಸೆಪ್ಟೆಂಬರ್ 9, 2015

ಎಂ.ಎಂ.ಕಲ್ಬುರ್ಗಿ ಅವರ ಹತ್ಯೆ ಮತ್ತು ಪ್ರಶಸ್ತಿ ಹಿಂತಿರುಗಿಸುವಿಕೆಯ ಪ್ರಶ್ನೆ

    
-ಕೆ. ಪುಟ್ಟಸ್ವಾಮಿ.



  ಸರ್ಕಾರ ಕೊಟ್ಟ ಪ್ರಸಸ್ತಿ, ಬಿರುದು, ಗೌರವ ಇತ್ಯಾದಿಗಳನ್ನು ಪ್ರತಿಭಟನೆಯಾಗಿ ಹಿಂದಿರುಗಿಸುವ ಪರಂಪೆರೆಯೊಂದಿದೆ. ಅದೂ ಕೂಡ ಎರವಲು ಅನುಕರಣೆ. (ಕೊಡುವುದಕ್ಕೆ ಮುನ್ನ ತಿರಸ್ಕರಿಸುವುದು ಬೇರೆ. ಪ್ರಶಸ್ತಿಗಾಗಿಯೇ ಲಾಬಿ ಮಾಡುವ ಜನರೇ ಹೆಚ್ಚಿರುವಾಗ ತಿರಸ್ಕರಿಸುವುದು ಇನ್ನೆಲ್ಲಿ? ಸಾಹಿತ್ಯಕ್ಕಾಗಿ 1964ರಲ್ಲಿ ನೀಡಿದ ನೊಬೆಲ್ ಪ್ರಶಸ್ತಿಯನ್ನು ಚಿಂತಕ ಜಾನ್ ಪಾಲ್ ಸಾರ್ತ್ರೆ ಅವರು 'ಒಂದು ಗೌರವ ರೂಪವಾದರೂ ಸಹ ಲೇಖಕ ಒಂದು ಸಂಸ್ಥೆಯಾಗಿ ಮಾರ್ಪಾಡಾಗಲು ಅವಕಾಶಕೊಡಬಾರದು' ಎಂದು ತಿರಸ್ಕರಿಸಿದರು. 1973ರಲ್ಲಿ ಶಾಂತಿಗಾಗಿ ನೀಡುವ ನೊಬೆಲ್ ಪಾರಿತೋಷಕವನ್ನು ವಿಯಟ್ನಾಮಿನಲ್ಲಿ ಶಾಂತಿ ನೆಲೆಸಲು ಹೆಣಗಿದ ವಿಯೆಟ್ನಾಮಿನ ಕ್ರಾಂತಿಕಾರಿ ಜನರಲ್ ಲಿ ಡಕ್ ಥೊ ಮತ್ತು ಅಮೆರಿಕದ ಸೆಕ್ರೆಟರಿ ಜನರಲ್ ಹೆನ್ರಿ ಕಿಸಿಂಜರ್ ರವರಿಗೆ ಹಂಚಲಾಯಿತು. ಆದರೆ ಶಾಂತಿ ಒಪ್ಪಂದದ ನಂತರವೂ ವಿಯೆಟ್ನಾಮಿನಲ್ಲಿ ಶಾಂತಿ ನೆಲಸಲಿಲ್ಲ ೆಂಬ ಕಾರಣಕ್ಕೆ ಲೇ ಡಕ್ ಥೋ ಪ್ರಶಸ್ತಿ ನಿರಾಕರಿಸಿದರು). 

   ಪ್ರಶಸ್ತಿ ಕೊಟ್ಟ ಒಂದು ಸರ್ಕಾರವು ಜನವಿರೋಧಿ ನೀತಿಗಳನ್ನು ಜಾರಿಮಾಡಿದಾಗ, ಅಸಮಾನತೆಯನ್ನು ವೃದ್ಧಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಿದಾಗ, ಅಮಾನವೀಯ ಕಾರ್ಯದ ಮೂಲಕ ಜನತೆಯನ್ನು ಮಾರಣಹೋಮಮಾಡಿದಾಗ, ಪ್ರಜಾತಂತ್ರದ ಧವನಿಯನ್ನು ಅಡಗಿಸಿದಾಗ ಹಿಂದೆ ಸರ್ಕಾರ ಕೊಟ್ಟ ಪ್ರಶಸ್ತಿಯನ್ನು ಅದರ ನೀತಿಯ ವಿರುದ್ಧ ಪ್ರತಿಭಟನೆಯಾಗಿ ಹಿಂದಿರುಗಿಸಿದರೆ ಅದಕ್ಕೊಂದು ಅರ್ಥ ಮತ್ತು ಸಮರ್ಥನೆ ಇದೆ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಡಾ. ಕೆ. ಶಿವರಾಮ ಕಾರಂತ ಮತ್ತು ಆಪರೇಷನ್ ಬ್ಲೂಸ್ಟಾರ್ ವಿರೋಧಿಸಿ ಖುಶ್ವಂತ್‍ ಸಿಂಗ್ ತಮ್ಮ ಪದ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದು ಇಂತಹ ಕಾರಣಗಳಿಂದ. 

    ಪ್ರೊ. ಕಲ್ಬುರ್ಗಿ ಹತ್ಯೆಯ ಹಿಂದೆ ಮತ್ತು ಮುಂದಿನ ದಿನಗಳಲ್ಲಿ ಸರ್ಕಾರ ಬಹಳ ಜವಾಬ್ಧಾರಿಯಿಂದಲೇ ವರ್ತಿಸಿದೆ. ಸರ್ಕಾರ ಕೊಟ್ಟ ಪೊಲೀಸ್ ರಕ್ಷಣೆಯನ್ನುಪ್ರೊಫೆಸರ್ರವರ ಸೂಚನೆಯಂತೆ ಹಿಂಪಡೆಯಲಾಗಿತ್ತು. ಹತ್ಯೆಯ ನಂತರ ಪ್ರಕರಣವನ್ನು ಸರ್ಕಾರ ಗಂಭೀರವಾಗಿಯೇ ಪರಿಗಣಿಸಿದೆ. ಸರ್ಕಾರದ ಪ್ರಚೋದನೆ ಅಥವಾ ನೀತಿಗಳಿಂದೆನೂ ಹತ್ಯೆ ಸಂಭವಿಸಿಲ್ಲ. ಆದರೂ ಪ್ರೊ. ಚಂಪಾ ಅವರು ಪಂಪ ಪ್ರಶಸ್ತಿಯನ್ನು ಹಿಂದಿರುಗಿಸಿದ ಕಾರಣ ಮೇಲಿನ ಎರಡೂ ಪರಂಪರೆಗಳಿಗೆ ಸೇರುವುದಿಲ್ಲ. ಸರ್ಕಾರ ತನಿಖೆ ಚುರುಕು ಮಾಡಿ ಆಪಾದಿತರನ್ನು ಹಿಡಿಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವ ಹೊತ್ತಿನಲ್ಲಿ ಈ ಹಿಂದಿರುಗಿಸುವ ಕ್ರಿಯೆಯಿಂದ ಯಾವ ಪ್ರಯೋಜನವೂ ಇಲ್ಲ. ಇವರನ್ನು ಅನುಕರಿಸಿ ಅನೇಕ ಯುವ ಸಾಹಿತಿಗಳು ಕ.ಸಾ.ಪ ನೀಡಿದ 'ಅರಳು' ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದಾರೆ. (ಪಟ್ಟಿಯಲ್ಲಿ ಗೆಳೆಯ ಸತೀಶ ಜವರೇಗೌಡ ಕೂಡ ಇದ್ದಾರೆ).ಚಂಪಾರವರಿಗಾದರೋ ಅರವತ್ತು ದಾಟಿದೆ,ಈ ಯುವಕರಿಗೆ ಇಷ್ಟು ಬೇಗ ಅರಳು ಮರಳು ಬಂತೇ?

ಮಂಗಳವಾರ, ಸೆಪ್ಟೆಂಬರ್ 8, 2015

ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ.ಮಲ್ಲಿಕಾ ಘಂಟಿ ಮೇಡಂ

ಸಮಸಮಾಜದ ಕನಸಿನ ಪ್ರೊ.ಮಲ್ಲಿಕಾ ಘಂಟಿ ಮೇಡಂ ಅವರು ಇಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡರು. 22 ವರ್ಷ ಪೂರೈಸಿದ ಕನ್ನಡ ವಿಶ್ವವಿದ್ಯಾಲಯದ ಮೊದಲ ಮಹಿಳಾ ಕುಲಪತಿ ಎನ್ನುವ ಚಾರಿತ್ರಿಕ ದಾಖಲೆಯನ್ನೂ ಬರೆದರು. ಚಳವಳಿಯ ಹಿನ್ನೆಲೆಯಿಂದ ಬಂದ, ನಿರಂತರ ಕ್ರಿಯಾಶೀಲವಾಗಿರುವ ಪ್ರೊ.ಮಲ್ಲಿಕಾ ಘಂಟಿ ಮೇಡಂ ಆಗಮನದಿಂದ ಕನ್ನಡ ವಿಶ್ವವಿದ್ಯಾಲಯದ ಬೆಳವಣಿಗೆಯ ಬಗೆಗೆ ಹೊಸ ಕನಸುಗಳು ಗರಿಗೆದರಿವೆ. ಕುಲಪತಿಯಾಗಿ ಅಧಿಕಾರವಹಿಸಿಕೊಂಡ ಸಂದರ್ಭದ ಕೆಲವು ಸಂತಸದ ಕ್ಷಣಗಳಿವು..








ಸೋಮವಾರ, ಸೆಪ್ಟೆಂಬರ್ 7, 2015

ರೊಟ್ಟಿ ಮತ್ತು ಹುಡುಗಿ -ಮಲ್ಲಿಕಾ ಘಂಟಿ ಅವರ ಕಾವ್ಯ ವಿಶ್ಲೇಷಣೆ


ರೊಟ್ಟಿ ಮತ್ತು ಹುಡುಗಿ



ಈ ಪದ್ಯದ ವಾಚನ ಕೇಳಲು ಈ ಲಿಂಕ್  ಒತ್ತಿ:

http://www.karnatakasahithyaacademy.org/drMallikaGhanti4.html

ಹೆಪ್ಪುಗಟ್ಟಿದ ಕತ್ತಲ ರಾತ್ರಿಯ
ಮಾಗಿ ಚಳಿ ತಬ್ಬಿ. ಬಯಲ
ಬಾಗಿಲಿನಿಂದ ಸರಿದು ಬರುವ
ಸಿಳ್ ಗಾಳಿ ಕಂಪನ ಹುಟ್ಟಿಸಿತು
ಹರಿದ ಸೀರೆಯಲಿ ಹುಡುಗಿಗೆ.
ಕಳೆದುಕೊಂಡ ವಸಂತಗಳ
ಮಿಣಿಕು ದೀಪದಲಿ ಕನವರಿಸಿ
ಬಾಚಿ ಹಿಡಿದ ಹುಡುಗಿಯ ಕೈಗೆ ಸಿಕ್ಕಿದ್ದು
ಬಡಮನೆಯ ಚೆಕ್ಕಳು.
ಸಾವಿನ ಕುಣಿಕೆಯ ಹಿಡಿದು ಬರುವ
ಸರದಾರನ ಹೆಜ್ಜೆ ಭಾರ, ಬೆಸೆದ ಎವೆಗಳ ಮಧ್ಯ ಕನಸುಬಾರ
ತೆರೆದ ಕಣ್ಣುಗಳಲಿ ಸಾಲುಗಟ್ಟಿನಿಂತ ಸಾವಿನ ಸರದಾರರ ಚಿತ್ರ
ದನಿಬಿದ್ದವಳ ಕೊರಳಲ್ಲಿ ಕರಗಲಾರದ ಹೆಪ್ಪಿಟ್ಟ ನೋವು
ನಡುಗಿದಳು ಹುಡುಗಿ ರೊಟ್ಟಿ ಕಾಣದ ಮುದಿ
ತಂದೆ-ತಾಯಿಗಳ ನೆನೆನೆನೆದು. ಸಾವಿನ
ಸಂಕಟದಲ್ಲಿಯೂ ಶ್ರವಣಕುಮಾರನ ನೆನಪು
ರೆಕ್ಕೆ ಬಡಿದು ಹಲಬುವ ಪ್ರಾಣ ಪಕ್ಷಿಯ ಒತ್ತಿ
ಹರಿದ ಕುಪ್ಪಸದಲ್ಲಿಕ್ಕಿ ಹೊತ್ತಿಸಿದಳು ಬದುಕ ಕುಲುಮೆ.
ಬಂದವರು ಹೋದವರು ತಿಂದವ
ರು; ಸರಿದು ಹೋಗುವಾಗ ಕೇಳುವುದು
ಹುಡುಗಿಯ ಜೀವ `ನನ್ನ ಕಿಚ್ಚಿಗೆ ಮೈಕಾಯಿಸಿ'
ಕೊಂಡ; ನೀವು ಆರಿ ತಣ್ಣಗಾಗುವುದೆಂದು.
ಕಗ್ಗತ್ತಲ ಬಂಡೆಯ ಕೆಳಗೆ
ಇಳಿದೊಗಲ ತಂದೆ ತಾಯಿಗಳ ಕಂಡು ಹುಡುಗಿ
ಕಣ್ಣ ಬತ್ತಿಯ ಮೈಯ ಪಣತೆಯಲ್ಲಿಟ್ಟು
ಹಚ್ಚಿದಳು ಛಲದ ಬಿಸಿಯುಸಿರ ದೀಪ.
ಭರವಸೆಯ ಬೆಳಕಲಿ ಕೇಳಿದಳು ಜಗಕೆ
ಬಾಗಿದ ಬೆನ್ನಿಗೆ ಊರುಗೋಲು ಗಂಡು ಮಾತ್ರ ಎಂದಿರಲ್ಲ
ಹೇಳಿ ಈಗ ಸಾಲುಸಾಲಾಗಿ ಹುಟ್ಟಿದ
ಗಂಡುಗಳೆಲ್ಲ ಊರುಗೋಲಾಗದೆ ಉರಿವ ಕೊಳ್ಳಿಯಾದವೇಕೆ?
ಹೆಪ್ಪಿಟ್ಟ ಇರುಳ ಸೂರ್ಯನ ಕಡೆದು
ಬೆಳಕ ಮಜ್ಜಿಗೆಯಲಿ ತೇಲಿಬಿಟ್ಟ
ಹುಡುಗಿಯ ಕನಸಿನ ಚಿಕ್ಕಚಂದ್ರಾಮರು
ಕತ್ತಲಾಗದೆ ಮಿನಿಗಲಾರೆವೆಂದು ಹೊಸೆದ ಕಾಲುಗಳ
ಮುರಿದು, ಅಲ್ಲಾಡಿಸಿದ ಕತ್ತು ಹಿಚುಕಿ
ಹುಡುಕುತ್ತಿರುವಳು ಹುಡುಗಿ ಕತ್ತಲೆ ಹೊತ್ತು
ಬೆಳಕಿನಲಿ ರೊಟ್ಟಿ ತರುವ ಕೈಗಳಿಗಾಗಿ.
-ಮಲ್ಲಿಕಾ ಘಂಟಿ
ಸ್ವಂತದ ಹುಡುಕಾಟ; ಬದುಕಿನ ಹೋರಾಟ
ರೊಟ್ಟಿ ಮತ್ತು ಹುಡುಗಿ ಎರಡೂ ಸಂಧಿಸದ ಸಮಾಂತರ ರೇಖೆಗಳಾಗಿ ಲಂಬವಾಗಿ ನಿಂತ ಧ್ರುವಗಳು. ರೊಟ್ಟಿ ಹುಡುಗಿಗೆ ದಕ್ಕದಂತೆ ಮಾಡಲಾಗಿದೆ. ಕೃಷಿಗೆ ಮೂಲ ಹೇಗೋ ಹಾಗೆ ಹುಡುಗಿಯಿಂದಲೇ ರೊಟ್ಟಿಯ ಸೃಷ್ಟಿ. ಭೂಮಿ / ಆಸ್ತಿಗೆ ಅವಳು ಒಡೆಯಳಲ್ಲ; ದುಡಿಮೆಗೆ ಸೀಮಿತಗೊಂಡವಳು. ಹೀಗಾಗಿ ಅವಳು ಭೂಮಿ. ಇಲ್ಲಿ ಭೂಮಿಗೂ, ಹುಡುಗಿಗೂ, ರೊಟ್ಟಿಗೂ ಅವಿನಾಭಾವ ಸಂಬಂಧ.
ಭೂಹಂಚಿಕೆಯಿಂದ ವಂಚಿತಳಾದರೂ ಬದುಕಿನ ಬಿಕ್ಕಟ್ಟಿಗೆ ದೇಹವನ್ನೇ ಕ್ಷೇತ್ರವಾಗಿಸಿ ರೊಟ್ಟಿಗೆ ಕಾರಣಳು. ಹೆತ್ತವರ ಹಸಿವನ್ನು ಹಿಂಗಿಸಿದವಳು. ಹಾಗಾಗಿ ಇಲ್ಲಿ ಹುಡುಗಿ ಪರಂಪರೆಯ ಪ್ರಜ್ಞೆ ಮತ್ತು ವಂಶೋದ್ಧಾರದ ಜಿಜ್ಞಾಸೆಯೂ ಹೌದು. ಸಮಾಂತರ ರೇಖೆಗಳನ್ನು ಕೂಡಿಸದ ಹಾಗೂ ಲಂಬವನ್ನು ಲಂಘಿಸದಂತೆ ಮಾಡಿದ ವ್ಯವಸ್ಥೆಯನ್ನು ಪಲ್ಲಟಿಸುವ, ಪರಂಪರಾಗತ ನಂಬಿಕೆಯ ಬೇರುಗಳನ್ನು ಅಲ್ಲಾಡಿಸುವುದು ಬದುಕಿಗೆ ಊರುಗೋಲಾಗಿರುವ ಹುಡುಗಿ. ಪಿತೃಪ್ರಾಧಾನ್ಯತೆಯಲ್ಲಿಯ ಲಿಂಗಾಧಾರಿತ ದುಡಿಮೆ ಮತ್ತು ಲೈಂಗಿಕ ದುಡಿಮೆ ಇವುಗಳ ವಿಭಜನೆಯಲ್ಲಿನ ರಾಜಕೀಯ ಪ್ರಶ್ನೆಯೇ ಕಾವ್ಯಕಾರಣ.
ಹರಿದ ಸೀರೆಗೆ ಬಯಲ ಬಾಗಿಲಿನಿಂದ ಸರಿದು ಬಂದ ಚಳಿ ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ. ಮಾಗಿ ಚಳಿ ತಬ್ಬಿದ್ದು ಸಖನ ಸಾಂಗತ್ಯದ ಸವಿನೆನಕೆಗಲ್ಲ. ಹಸಿದ ಹೊಟ್ಟೆಯಲ್ಲಿ ಕೊರೆಯುವ ಚಳಿ ವಸಂತಾಗಮನವನ್ನು ಸಂಭ್ರಮಿಸದ ಮನಸ್ಥಿತಿಯಲ್ಲಿ ಅವಳಿಗೆ ಸಿಕ್ಕಿದ್ದು ಮಾತ್ರ ತನ್ನನ್ನು ತಾನು ಸುಧಾರಿಸಿಕೊಳ್ಳಲಾಗದ ಬಡಮನೆಯ ಚಕ್ಕಳು. ಬಯಲಬಡತನ ಮತ್ತು ಹರಿದ ಸೀರೆ. ವ್ಯವಸ್ಥೆಯ ನಿಯಂತ್ರಣದಲ್ಲಿ ಚಲನರಹಿತತೆಯಿಂದಾಗಿ ಹುಟ್ಟಿದ ಹುಡುಗಿಯ ತಲ್ಲಣ-ಆತಂಕ-ಪ್ರಶ್ನೆಗಳು ಅಸ್ಮಿತೆಯ ಹುಡುಕಾಟವಾಗಿ `ಭಿನ್ನತೆ'ಯ ಇತಿಹಾಸವನ್ನು ಮರುಸ್ಥಾಪಿಸಬಯಸುತ್ತದೆ.
ಸಾವು ಬದುಕುಗಳ ಸಂಘರ್ಷದಲ್ಲಿ ಸಾಲುಗಟ್ಟಿನಿಂತ ಸಾವಿನ ಸರದಾರರ ಚಿತ್ರ ಹುಡುಗಿಯ ಜೀವ ರಕ್ಷಕಗಳಾಗದೆ ಸಾವಿನ ಸರದಾರರ ವ್ಯಂಗ್ಯ ಅಸಮ ಸಮಾಜದ ಅನಾವರಣವಾಗಿದೆ. ಹೆಣ್ಣು ಎಂದೂ ಧ್ವನಿ ಎತ್ತದಂತೆ ಮಾಡಿದ ವ್ಯವಸ್ಥೆ ಅವಳು ಚಲನಶೀಲಳಾಗುವುದನ್ನು ನಿರಾಕರಿಸುತ್ತದೆಂಬುವುದನ್ನು ಕರಗಲಾರದ ಹೆಪ್ಪಿಟ್ಟ ನೋವು ಧ್ವನಿಪೂರ್ಣವಾಗಿ ಹಿಡಿದಿಟ್ಟಿದೆ.  ಅದನ್ನು ಕಡೆದು ಮಜ್ಜಿಗೆ, ಬೆಣ್ಣೆ, ತುಪ್ಪದಂತೆ ರೂಪಾಂತರ ಮಾಡಲಾಗುವುದಿಲ್ಲ. ಅದು ಕಾಲಾನುಕಾಲದಿಂದ ಒಂದೇ ತೆರನಾದುದು. ಅದಕ್ಕೆ ಅದು ಹೆಪ್ಪಿಟ್ಟ ನೋವು. ಶೋಷಕ ವ್ಯವಸ್ಥೆ ಯಾವತ್ತೂ ಯಥಾಸ್ಥಿತಿಯನ್ನು ವ್ಯವಸ್ಥಿತವಾಗಿ ಕಾಪಾಡುತ್ತದೆ.
ರೆಕ್ಕೆ ಬಡಿವ ಹಕ್ಕಿ ಹುಡುಗಿಯ ಜೀವನೋತ್ಸಾಹ ಹಾಗೂ ಚಲನೆಯ ಸಂಕೇತ. ಈ ಚಲನಶೀಲತೆಯನ್ನು ಹತ್ತಿಕ್ಕಿಕೊಳ್ಳುವುದು ಹರಿದ ಕುಪ್ಪಸದಲ್ಲಿ. ಅದು ರೊಟ್ಟಿಗಾಗಿ. ಈ ರೊಟ್ಟಿ ತನಗಾಗಿ ಮಾತ್ರ ಅಲ್ಲ; ಹೆತ್ತವರಿಗಾಗಿಯೂ. ಆದರೆ ಹೆತ್ತವರಿಗೆ ವಂಶೋದ್ಧಾರಕನ ನೆನಪು. ಶ್ರವಣಕುಮಾರ ಒಂದು ಅನ್ವರ್ಥಕ ಮತ್ತು ಪ್ರಶ್ನೆ ಕೂಡ. ಗಂಡನ್ನು ಮಾತ್ರ ವಾರಸುದಾರನನ್ನಾಗಿ ನಂಬಿಸಲು ಯಾಜಮಾನ್ಯ ರೂಪಿಸಿದ ಸಾಮಾಜಿಕ ನೀತಿ, ನಿರೂಪಣೆಗಳು `ಶ್ರವಣಕುಮಾರ' ರೂಪಕದ ಸಾಂಸ್ಕೃತಿಕ ಲಿಂಗರಾಜಕಾರಣವನ್ನು `ಹುಡುಗಿ ತನ್ನ ಪ್ರಾಣ ಪಕ್ಷಿಯ ಒತ್ತಿ ಹರಿದ ಕುಪ್ಪಸದಲ್ಲಿ ಹೊತ್ತಿಸಿದಳು ಬದುಕ ಕುಲುಮೆ' ಒಡೆಯುವ ಮೂಲಕ ಪ್ರತಿರೋಧ ಒಡ್ಡುತ್ತದೆ. ತನ್ನ ದೇಹದ ಮೇಲೆ ಸಾಧಿಸುವ ಪುರುಷಾಧಿಪತ್ಯವನ್ನು ಪ್ರಶ್ನಿಸುತ್ತದೆ. `ನನ್ನ ಕಿಚ್ಚಿಗೆ ಮೈಕಾಯಿಸಿಕೊಂಡ; ನೀವು ಆರಿ ತಣ್ಣಗಾಗುವುದೆಂದು' ಉರಿವ ಸೂರ‌್ಯನನ್ನು ಕೆಣಕುತ್ತಲೇ ಚಂದ್ರನಂತ ಪ್ರಿಯತಮನ ಸ್ನೇಹ-ಸಾಂಗತ್ಯದ ಹಂಬಲದ ಬಯಕೆ ನಿರಂತರವಾಗುತ್ತದೆ.
ಇಲ್ಲಿ ಮೈಮಾರಿ ತಂದೆ-ತಾಯಿಯನ್ನು ಬದುಕಿಸಿದ ಹುಡುಗಿ ನೈತಿಕತೆಯ ನಿಷ್ಕರ್ಷೆ ಮಾಡುವ ಸಮಾಜದಲ್ಲಿ ಅಧೀರಳಲ್ಲ. ಅವಳು ಛಲದ ಬಿಸಿಯುಸಿರ ದೀಪ ಹಚ್ಚಿದವಳು. ಅದಕ್ಕೆಂದೇ `ಬಾಗಿದ ಬೆನ್ನಿಗೆ ಊರುಗೊಲು ಗಂಡು' ಮಾತ್ರ ಎನ್ನುವ ಲಿಂಗತ್ವಕ್ಕೆ ಸವಾಲಾಗುತ್ತಾಳೆ. ಪಿತೃಶಾಹಿಯ `ವಂಶೋದ್ದಾರಕ' ಪರಿಕಲ್ಪನೆ ಹೇಗೆ ನಿರಾಧಾರವಾದುದು, ನಯವಂಚಕತೆಯಿಂದ ಕೂಡಿದೆ ಎಂಬುದನ್ನು ಹುಡುಗಿ ಬದುಕ ಕುಲುಮೆ ಹೊತ್ತಿಸುವ ಮೂಲಕ ನಿರೂಪಿಸುತ್ತಾಳೆ.
ಅದು ಪುರುಷದ್ವೇಷವಲ್ಲ. ಅವನು ಅವಳ ಸಹಜೀವಿ; ಸಖ. `ಹುಡುಗಿಯ ಕನಸಿನ ಚಿಕ್ಕಿಚಂದ್ರಾಮರು... ಕತ್ತಲೆ ಹೊತ್ತು ಬೆಳಕಿನಲಿ ರೊಟ್ಟಿ ತರುವ ಕೈಗಳಿಗಾಗಿ'- ರೊಟ್ಟಿಯ ಸಮಹಂಚಿಕೆಯ ಪ್ರತಿಪಾದನೆ ಪಿತೃಪ್ರಧಾನತೆಗೆ ಪರ್ಯಾಯವಾಗಿ ಮಹಿಳಾ ಇತಿಹಾಸಕ್ಕೆ ವಿಮೋಚನೆ ನೀಡುವ ದಿಸೆಯಲ್ಲಿ `ಲಿಂಗತ್ವ' ಸಂಬಂಧವನ್ನು ಪ್ರಜಾಸತ್ತಾತ್ಮಕಗೊಳಿಸುವತ್ತ ವೈಚಾರಿಕ ಸ್ಫೋಟವನ್ನುಂಟು ಮಾಡಿದೆ.               
-ಡಾ. ಅನಸೂಯಾ ಕಾಂಬಳೆ