ಗುರುವಾರ, ಸೆಪ್ಟೆಂಬರ್ 25, 2014

ಶಿವಮೊಗ್ಗ ಜಿಲ್ಲೆಯ ಜಾನಪದ

   


ಸೌಜನ್ಯ:http://kn.wikipedia.org
   ಒಂದು ಪ್ರದೇಶದ ಜಾನಪದ ಆ ಪ್ರದೇಶದ ಜನಜೀವನದ ಸಾರ. ಆಚರಣೆಯ ಮೂಲ ಬೇರು ಆಯಾ ಪ್ರದೇಶದ ಜಾನಪದದಲ್ಲಿ ಅಡಗಿರುತ್ತದೆ. ಶಿವಮೊಗ್ಗ ಜಿಲ್ಲೆಯ ಆಚರಣೆಗಳನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಆ ಜಿಲ್ಲೆಯ ಜಾನಪದ ಅರಿವು ಅತ್ಯಂತ ಮಹತ್ವದಾಗುತ್ತದೆ. ಯಾವುದೇ ಜನಪದ ಸಮುದಾಯದ ಆಯ ಕಾಲದ ನೋವು, ನಲಿವು ,ಏಳು ,ಬೀಳುಗಳನ್ನು ಕಥೆ ,ಗೀತೆ ,ಗಾದೆ ,ಐತಿಹ್ಯ ,ಒಗಟು ,ನುಡಿಗಟ್ಟು ,ನಂಬಿಕೆ ,ಸಂಪ್ರದಾಯ ,ಕಲೆಗಳ ಮೂಲಕ ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ವರ್ಗಾಯಿಸಿರುತ್ತದೆ. ಆದ್ದರಿಂದ ಜಾನಪದವು ಜಾನಪದ ಅಧ್ಯ ಯನವಾಗಿ ಮಹತ್ವ ಭೂಮಿಕೆಯನ್ನು ನಿಭಾಯಿಸುತ್ತದೆ. ಜನಪದ ಸಾಹಿತ್ಯ ಜನಪದರ ಅಭಿವ್ಯಕ್ತಿಯ ಸಾಧನ ,ಜನಪದರ ಅನುಭವದ ಸಂಪತ್ತಿನಿಂದ ರೂಪು ಪಡೆದ ಜನಪದ ಸಾಹಿತ್ಯದಲ್ಲಿ ಆ ಸಮುದಾಯದ ,ಮೌಲ್ಯ ,ನೀತಿ, ವಿವೀಕ , ಆದರ್ಶಗಳು ಅಡಗಿರುತ್ತದೆ. ಜನಪದರ ಮಾತುಗಳು ಕಾವ್ಯವಲ್ಲದ ಕಾವ್ಯ ,ಮೌನವೇ ಧ್ವನಿ , ಧ್ವನಿಯೇ ಅರ್ಥ ,ಪಿಸುಗುಡುವಿಕೆಯೇ ಮಾತು ,ಅವರ ಬದುಕೇ ಮೌಲ್ಯದ ಗಣಿ , ಹೀಗಾಗಿ ಜನಪದ ಸಾಹಿತ್ಯವೆಂದರೇ ಪರಂಪರೆಯ ಬೇರುಗಳ ಅರಿವಿನ ಆಗರವೇ ಆಗಿರುತ್ತದೆ. ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆ ಪ್ರಾಕೃತಿಕವಾಗಿ ,ಸಾಂಸ್ಕ್ರುತಿಕವಾಗಿ ಅತ್ಯಂತ ವೈವಿಧ್ಯಮಯ ಜಿಲ್ಲೆಯಾಗಿದೆ.ಸಾಂಸ್ಕ್ರುತಿಕ ವೈವಿಧ್ಯದಂತೆ ಜನಪದ ಸಾಹಿತ್ಯ ಸಮೃದ್ದವಾಗಿದೆ. ತೀರ್ಥಹಳ್ಳಿಯ ಅಂಟಿಕೆ ಪಂಟಕೆ ಪದಗಳು ,ಶಿಕಾರಿಪುರದ ತ್ಯಾಗ ಬಲಿದಾನದ ಕಥನಗೀತೆಗಳು ,ಸೊರಬದ ಜೋಗಿಯ ಹಾಡುಗಳು ,ಸಾಗರದ ಚೌಡಿಕೆ ಪದಗಳು ಶಿವಮೊಗ್ಗ ಜಿಲ್ಲೆಯ ವಿಶೇಷತೆಯಾಗಿವೆ. ಇದರೊಂದಿಗೆ ಒಸಗೆಯ ಹಾಡುಗಳು, ಕಥೆಗಳು, ಪುರಾಣಗಳು, ಐತಿಹ್ಯಗಳು, ನುಡಿಗಟ್ಟು ,ಗಾದೆ ಒಗಟುಗಳು, ಶಿವಮೊಗ್ಗ ಜಿಲ್ಲೆಯಲ್ಲಿ ಹೇರಳವಾಗಿದೆ. ಅದು ಎಂದು ಬತ್ತದಿರುವ, ಮೊಗೆದಂತೆ ತುಂಬಿಕೊಳ್ಳುವ ಚಿರಂತನ ಚಿಲುಮೆ.
  ಶಿವಮೊಗ್ಗ ಜಿಲ್ಲೆಯಲ್ಲಿ ಲಂಬಾಣಿ ಬುಡಕಟ್ಟು ಜನರು ಸಾಕಷ್ಟು ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ತಂಡಗಳನ್ನು ಕಟ್ಟಿ ಕೊಂಡು ವಾಸಿಸುವ ಈ ಜನರಲ್ಲಿ ಜಾನಪದ ಸಮೃದ್ದವಾಗಿದೆ. ಇವರ ಮಧುವೆಯ ಸಮಾರಂಭಗಳು ಜನಪದ ಗೀತೆಗಳ ವರ್ಷಧಾರೆ. ಅಪಾರ ಶಾಸ್ತ್ರಗಳ ಆಚರಣೆ ,ಶಾಸ್ತ್ರಗಳಿಗನುಸಾರವಾಗಿ ಗೀತೆಗಳನ್ನು ಹಾಡುವ ಪದ್ದತಿ ಇವರಲ್ಲಿದೆ. ಹಾಸ್ಯ ,ವಿಡಂಬನೆ ,ಹಾರೈಕೆ ,ಪ್ರಾರ್ಥನೆ ಹೀಗೆ ಅನೇಕ ಬಗೆಯ ಗೀತೆಗಳನ್ನು ಮದುವೆಯ ಸಮಾರಂಭದಲ್ಲಿ ಹಾಡುತ್ತಾರೆ. ಮದುಮಗಳನ್ನು ಬೀಳ್ಕೊಡುವ ಸಂದರ್ಭದಲ್ಲಿ ಮದುಮಗಳು ಹವೇಲಿ ಗೀತೆಯನ್ನು ಹಾಡುತ್ತಾಳೆ. ಹವೇಲಿ ಎಂದರೆ ಮನೆ. ಸೂರ್ಯೋದಯಕ್ಕೆ ಅಭಿಮುಖವಾಗಿ ನಿಂತು ಸಾಕಿ ಸಲುಹಿದ ತಾಯಿ ತಂದೆಯವರನ್ನು ಮತ್ತು ತಂದೆಯ ವಂಶವನ್ನು ಕಾಪಾಡುವಂತೆ ದೈವವನ್ನು ಕುರಿತು ಪ್ರಾರ್ಥಿಸುವ ಗೀತೆ
ಹವೇಲಿಯೆ ಅಹಹ
ನನ್ನ ನಾಯಕ ತಂದೆಯ ಹವೇಲಿ
ನನ್ನಿಂದ ಎಂದೂ ಮರೆಯಾಗದಿರು ಹವೇಲಿ
ಆಲದ ಹಾಗೆ ಹಬ್ಬಲಿ ಹವೇಲಿ
ಕುಮಾರಿಯಾದ ನನ್ನ ಮಡಿಲು ತುಂಬಲಿ ಹವೇಲಿ
ನನ್ನ ನಾಯಕ ತಂದೆಯೇ ಕೋಳಿಯೇ
ನೀನು ಕೂಗಿದರೆ ನನ್ನ ಗಾಯಕ ತಂದೆಯ ನಿದ್ರೆ ಎಚ್ಚರವಾದೀತು
ಘಳಿಗೆಯೊಂದು ಕೂಗದಿರು
ಹಸಿರು ತೋಟದ ಇನಿ ಸ್ವರದ ಕೋಗಿಲೆ
ನೀನು ಕೂಗಿದರೆ ನನ್ನ ನಾಯಕ ತಂದೆಯ ನಿದ್ರೆ ಎಚ್ಚರವಾದೀತು.......
 ಮದುವೆಯಾಗಿ ಗಂಡನ ಮನೆಗೆ ಹೊರಟು ನಿಂತ ಮದುಮಗಳು, ತಾನು ಹುಟ್ಟಿ ಬೆಳೆದ ಮನೆಯನ್ನು ಬಿಡುವ ಸಂದರ್ಭದಲ್ಲಿ ಹಾಡುವ ಈ ಗೀತೆ ಕರುಣರಸಾರ್ದ್ರವಾಗಿದೆ. ತಂದೆಯ ಮನೆಯನ್ನು ಅಂದರೆ ವಂಶವನ್ನು ಕುರಿತು ಆಲದ ಹಾಗೆ ಹಬ್ಬಲಿ, ಹೂವಿನಂತೆ ಫಲಿಸಲಿ ಎಂದು ಹಾರೈಸುವುದು. ಬಳ್ಳಿ ಬಿಟ್ಟ ಹೂವುಗಳು ಫಲಿಸುವಂತೆ ತಂದೆಯ ಹವೇಲಿ(ಮನೆ) ಬಿಟ್ಟ ಹೂವುಗಳು ಫಲ ತುಂಬಲಿ ಎಂಬ ಹಾರೈಕೆ ಅದ್ಭುತ ಭಾವನಾ ಶಕ್ತಿಯಿಂದ ಕೂಡಿದೆ.
  ದೀಪಾವಳಿ ಹಬ್ಬದಲ್ಲಿ ಮಲೆನಾಡಿನ ತೀರ್ಥಹಳ್ಳಿಯ ತಾಲ್ಲೂಕಿನ ಸುತ್ತಮುತ್ತ ಮನೆಮನೆಗಳಿಗೆ ಜ್ಯೋತಿ ಮುಟ್ಟಿಸುವ ಸಂಪ್ರದಾಯವಿದೆ. ಆ ಸಂದರ್ಭದಲ್ಲಿ ಹಾಡುವ ಹಾಡುಗಳು 'ಅಂಟಿಗೆ ಪಂಟಿಗೆ ' ಎಂದೇ ಪ್ರಸಿದ್ಧವಾಗಿದೆ. ದೀಪಾವಳಿಯಲ್ಲಿ ಗಂಡಸರು ಯಾವುದೇ ವಾದ್ಯ ವಿಶೇಷಗಳಿಲ್ಲದೆ ಅಂಟಿಗೆ ಪಂಟಿಗೆ ಪದಗಳನ್ನು ಹಾಡುವುದು ಒಂದು ವಿಶೇಷ. ಈ ಹಾಡುಗಳಲ್ಲಿ ಬರುವ ಸಾಹಿತ್ಯಕ ಅಂಶಗಳ ಸೊಗಸು ಅಪಾರ. ಬಲಿಪಾಡ್ಯಮಿಯ ಸಂಜೆ ಅಂಟಿಗೆ ಪಂಟಿಗೆ ತಂಡ ಊರ ಹೊರಗಿನ ಆಲದ ಮರದ ಕೆಳಗೆ ಜ್ಯೋತಿಯನ್ನು ಬೆಳಗಿಕೊಳ್ಳುತ್ತಾರೆ. ಆಗ ಹಾಡುವ ಹಾಡು.
ಕತ್ತಲೆ ಸಮಯಕ್ಕೆ ಸತ್ತ್ಯುಳ್ಳ ಜೋತಮ್ಮಾ
ಮತ್ತೇಳು ಲೋಕೇ ಬೆಳಕಾದೂ
ಮತ್ತೇಳು ಲೋಕೇ ಬೆಳಕಾದೂ ಮಾನವರಿಗೆ
ಅಡಿಗೆ ಊಟಗಳೆ ಹಸನಾದೂ
ಅಡಿಗೆ ಊಟಗಳೆ ಹಸನಾದೂ ಜೋತಮ್ಮಾ
ಕೊಡುನುಡಿಯ ನಮಗೆ ಪದನಾಮ
ಗುಡು ಗುಡು ಗುಟ್ಟುವೋ ಸಿಡಿಲೇಳು ಹೊಡೆದಾವೊ
ಒಡನೆ ಕುಡಿ ಮಿಂಚೂ ಹೊಳೆದಾವೋ ಜೋತಮ್ಮಾ
ಮಿಂಚಿನಲಿ ಜೋತಮ್ಮಾ ಉದಯಾಗಿ ಜೋತಮ್ಮಾ
ಕೊಡ ನುಡಿಯ ನಮಗೆ ಙ್ಞಾ ನವಾ
 ಹೀಗೆ ಅಂಟಿಗೆ ಪಂಟಿಗೆ ತಂಡದವರು ಜೋತಿಯ ಉಗಮ ಮತ್ತು ಅದರ ಅಗತ್ಯ ಮತ್ತು ಮಹತ್ವ ವನ್ನು ಗುಣಗಾನ ಮಡುತ್ತಾ ದೀಪವನ್ನು ಹೊತ್ತಿಸಿಕೊಳುತ್ತಾರೆ. ಮೆರವಣಿಗೆಯಲ್ಲಿ ಹೊರಡುತ್ತಾರೆ. ಗ್ರಾಮದ ಮನೆಮನೆಗೂ ಭೇಟಿ ಕೊಡುತ್ತಾ ಬೆಳಗಿನ ಜಾವದ ವೇಳೆಗೆ ಮತ್ತೆ ಜ್ಯೋತಿ ಬೆಳಗಿಸಿಕೊಂಡು ಮರದ ಬಳಿಗೆ ಬಂದು ಜ್ಯೋತಿಯನ್ನು ಕಳಿಸುತ್ತಾರೆ.ಜನಪದ ಗೀತೆಗಳು ಜನಪದ ಸಮುದಾಯಗಳಲ್ಲಿ ಸಮೃದ್ದ ವಾಗಿವೆ. ಕೃಷಿಯನ್ನು ಕುರಿತು ಗೀತೆಗಳು, ಒಸಗೆಯ ಹಾಡುಗಳು, ಬೀಸುವ ಕಲ್ಲಿನ ಪದ, ಮಳೆರಾಯನ ಹಾಡು,ಲಾವಣಿ ಗೀಗೀ ಪದ, ಹೀಗೆ ನಾನಾ ಬಗೆಯ ಹಾಡುಗಳು ಜನಪದರಲ್ಲಿ ಇಂದಿಗೂ ಪ್ರಚಲಿತದಲ್ಲಿವೆ.ಅವುಗಳನ್ನು ಪ್ರತ್ಯೇಕವಾಗಿಯೇ ದಾಖಲಿಸಬೇಕಗುತ್ತದೆ. ಕನ್ನಡ ಜನಪದ ಸಾಹಿತ್ಯದಲ್ಲಿ ಲಾವಣಿ ಪ್ರಕಾರ ವಿಶಿಷ್ಟವಾದುದಾಗಿದೆ. ಲಾವಣಿ ಸಾಹಿತ್ಯಕ ,,ಪೌರಾಣಿಕ ಮೌಲ್ಯಗಳನ್ನು ಒಳಗೊಂಡಿರುವಂತೆ ಸಂಗೀತವನ್ನು ಒಳಗೊಂಡಿರುತ್ತದೆ. ಲಾವಣಿಗಳನ್ನು ಹೆಣ್ಣು ಮಕ್ಕಳು ಕಳೆ ಕೀಳುವಾಗ, ನಾಟಿ ಮಾಡುವಾಗ,ಅಡಿಕೆ ಸುಲಿಯುವಾಗ ಹಾಡುತ್ತರೆ. ವೃತ್ತಿಗಾಯಕರು ದಮ್ಮಡಿಯನ್ನು ಬಾರಿಸುತ್ತ, ಕಿನ್ನರಿ ಜೋಗಿಗಳು ಕಿನ್ನರಿಯನ್ನು ನುಡಿಸುತ್ತಾ ಲಾವಣಿಯನ್ನು ಹಾಡುವುದೂ ಉಂಟು. ಲಾವಣಿಗಳಲ್ಲಿ ಬರುವ ವರ್ಣನಾ ವೈಖರಿ ಅಪ್ರತಿಮವಾದುದು. ಕೇಳುಹರು ಬೆರಗಾಗುವಂತೆ ಊಹಾತೀತ ಮತ್ತು ವಿಸ್ಮ್ಯಯಕರವಾದ ಸಂಗತಿಗಳನ್ನು ಲಾವಣಿಯಲ್ಲಿ ತಂದಿರುತ್ತಾನೆ.

ಶಿವಮೊಗ್ಗ ಜಿಲ್ಲೆಯ ಭೌಗೋಳಿಕ ಪರಿಸರ ವೈವಿಧ್ಯಮಯವಾಗಿದೆ. ಭೌಗೋಳಿಕ ವೈವಿಧ್ಯತೆಗನುಗುಣವಾಗಿ ಇಲ್ಲಿನ ಸಾಹಿತ್ಯ ಸಂಪತ್ತು ವೈವಿಧ್ಯಮಯವಾಗಿದೆ.ಮೌಲ್ಯ ಪರಿಪಾಲನೆಯಲ್ಲಿ ಶಿವಮೊಗ್ಗ ಜಿಲ್ಲೆಯ ಜನಸಮುದಾಯ ಎಂದೂ ಮುಂದೆ ; ತ್ಯಾಗ ಬಲಿದಾನ ,ಶೌರ್ಯ ,ನ್ಯಾಯ ಧರ್ಮ ಇಲ್ಲಿಯ ಜನರ ಆದರ್ಶಗಳಾಗಿವೆ.ಈ ಜಿಲ್ಲೆಯ ಜಾನಪದವನ್ನು ಹಲವಾರು ವಿದ್ವಾಂಸರು ಸಂಗ್ರಹ ಮಾಡಿದ್ದಾರೆ. ಸಂಗ್ರಹಿಸಬೇಕಾದ ಸಂಪತ್ತು ಹೇರಳವಾಗಿದೆ. ಆ ನಿಟ್ಟಿನಲ್ಲಿ ಮೊಗೆದಷ್ಟು ಮುಗಿಯದಷ್ಟು ಸಮೃದ್ದವಾಗಿದೆ.

ಸೋಮವಾರ, ಸೆಪ್ಟೆಂಬರ್ 22, 2014

ಉತ್ತರ ಕರ್ನಾಟಕ ಅಭಿವೃದ್ಧಿ ಸಾಧಿಸಿತೆ?

ಸೌಜನ್ಯ: ವರ್ತಮಾನ ಡಾಟ್ ಕಮ್
- ಡಾ. ಅಮರೇಶ ನುಗಡೋಣಿ
ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಯ ಜನರಿಗೆ, ಅದರಲ್ಲೂ ಮಂಗಳೂರು, ಕೊಡಗು, ಬೆಂಗಳೂರು ಮತ್ತು ಮೈಸೂರು ಜಿಲ್ಲಾ ವಾಸಿಗಳು ಕರ್ನಾಟಕ ಉತ್ತರ ಭಾಗದ ಬೀದರ್, ಗುಲಬರ್ಗಾ, ವಿಜಾಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಹೆಸರುಗಳನ್ನು ಕೇಳಿರಬಹುದೇ? ಕೇಳಿದರೂ ಯಾವ ಯಾವ ಕಾರಣಗಳಿಗಾಗಿ ಕೇಳಿರಬಹುದು? ಸರ್ಕಾರಿ ನೌಕರರಾದರೆ ಬಳ್ಳಾರಿ, ವಿಜಾಪುರಗಳನ್ನು ಭಯದಿಂದ ನೆನಪಿಟ್ಟುಕೊಂಡಿರುತ್ತಾರೆ. ಒಂದು ವೇಳೆ ತಮ್ಮ ಉದ್ಯೋಗದಲ್ಲಿ ತಪ್ಪುಗಳು ಘಟಿಸಿದರೆ ವರ್ಗಾವಣೆ ಎಂಬ ಶಿಕ್ಷೆ ಅನುಭವಿಸಲು ಈ ಜಿಲ್ಲೆಗೆ ಎಸೆದರೇನು ಮಾಡಬೇಕೆಂಬ ಭಯ. ಇಪ್ಪತ್ತು ವರ್ಷಗಳ ಹಿಂದೆ ಬಳ್ಳಾರಿ ಜೈಲಿಗೆ, ಗುಲಬರ್ಗಾ ಬಿಸಿಲಿಗೆ ಹೆಸರಾಗಿದ್ದವು. ಈಗ ಬಳ್ಳಾರಿ ಎಂದರೆ ಗಣಿಗಾರಿಕೆ. ಬಳ್ಳಾರಿ ಬಿಸಿಲಿಗೆ, ಜೈಲಿಗೆ ನೆನಪಾಗುತ್ತಿದ್ದುದು ಈಗ ಸರ್ಕಾರವನ್ನೇ ನಡುಗಿಸುವ ಜಿಲ್ಲೆಯಾಗಿ ನಿಂತಿದೆ. ಉದ್ದಿಮೆದಾರರಿಗೆ ಬರೀ ಕಬ್ಬಿಣದ ಅದಿರು ತುಂಬಿರುವ ಬಳ್ಳಾರಿಯ ನೆಲ ಗುಡ್ಡ ಬೆಟ್ಟಗಳು ಹಣದ ರಾಶಿಯಂತೆ ಕನಸಿನಲ್ಲಿ ಕಾಣುತ್ತಿರಬಹುದು. ಶಾಲಾ-ಕಾಲೇಜು ಮಕ್ಕಳು ಈ ಭಾಗದ ಕೆಲವು ಜಿಲ್ಲೆಗಳ ಹೆಸರನ್ನು ಪ್ರತಿವರ್ಷ ಕೇಳುತ್ತಿರುತ್ತವೆ. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪದವಿ ಪರೀಕ್ಷೆಗಳ ಫಲಿತಾಂಶ ಪತ್ರಿಕೆಯಲ್ಲಿ ಪ್ರಕಟವಾದಾಗ ಪ್ರತಿವರ್ಷವೂ ಬೀದರ್, ವಿಜಾಪುರ, ರಾಯಚೂರು ಜಿಲ್ಲೆಗಳು ಫಲಿತಾಂಶದಲ್ಲಿ ಕೊನಯ ಜಿಲ್ಲೆಗಳಾಗಿ ಕಾಣಿಸಿಕೊಂಡಿರುತ್ತವೆ. ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್ ಪ್ರತಿನಿಧಿಸುತ್ತಿದ್ದ ಚಿಂಚೋಳಿ ತಾಲೂಕಿನ ಶಾಲಾ-ಕಾಲೇಜಿನ ಮಕ್ಕಳು, ಸ್ವಾತಂತ್ರ್ಯಾ ನಂತರ ಸತತವಾಗಿ ಚುನಾವಣೆಯಲ್ಲಿ ನಿಂತು ಗೆಲ್ಲುತ್ತಿರುವ ಮಲ್ಲಿ ಕಾರ್ಜುನ ಖರ್ಗೆ ಪ್ರತಿನಿಧಿಸುತ್ತಿರುವ ಯಾದಗಿರಿ ತಾಲೂಕು (ಈಗ ಜಿಲ್ಲೆ) ಅದರಲ್ಲೂ ಗುರುಮಿಠಕಲ್‍ನ ಶಾಲಾ-ಕಾಲೇಜಿನ ಮಕ್ಕಳು ರಾಜ್ಯದಲ್ಲೇ ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಕಾಣುತ್ತಾರೆ.
ಕರ್ನಾಟಕದ ದಕ್ಷಿಣ ಭಾಗದ ಜನರು ಅಲ್ಪಸ್ವಲ್ಪ ರಾಜಕೀಯ ಪ್ರಜ್ಞೆ ಇರುವವರೂ ಕೂಡ, ಉತ್ತರ ಕರ್ನಾಟಕದಿಂದ ಅದರಲ್ಲೂ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಂದ ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಕೇಳಿ ಬೆರಗಾಗುತ್ತಿರಬಹುದು. ಕೊಪ್ಪಳ, ರಾಯಚೂರು, , ಗುಲಬರ್ಗಾ, ಯಾದಗಿರಿ, ಬೀದರ್ ಜಿಲ್ಲೆಯ ಪ್ರಜೆಗಳು ಆಗಸ್ಟ್-15ರ ಬದಲು, ಸೆಪ್ಟಂಬರ್-17ರಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂಗತಿ; ಸ್ವಾತಂತ್ರ್ಯ ಬಂದು 60 ವರ್ಷಗಳಾದರೂ ಈ ಭಾಗದ ಜಿಲ್ಲೆಗಳಲ್ಲಿ ದಲಿತರಿಗೆ ಬಹಿಷ್ಕಾರ ಹಾಕುವಂತಹ ಸುದ್ದಿ; ಬೀದರಿನಲ್ಲಿ ಭಾನಾಮತಿಯಿಂದ ಘಟಿಸುವ ವಿಚಿತ್ರ ಘಟನೆಗಳ ಸುದ್ದಿ; ವೀರೇಂದ್ರ ಪಾಟೀಲರ ತಾಲೂಕು ಚಿಂಚೋಳಿಯಲ್ಲಿ ಬಡ, ದಲಿತ ಹೆಂಗಸರು ತಮ್ಮ ಮಕ್ಕಳನ್ನು ಮಾರಿಕೊಳ್ಳುತ್ತಿರುವ ಸುದ್ದಿ; ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್‍ರ ಜೇವರ್ಗಿ ತಾಲೂಕು ಕರ್ನಾಟಕದ ಅಭಿವೃದ್ಧಿಶೀಲ ತಾಲೂಕುಗಳಲ್ಲಿ 174ನೇ (Last but one) ಸ್ಥಾನದಲ್ಲಿರುವ ಸುದ್ದಿ; ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಕಟ್ಟಕಡೆಯ 175ನೇ ಸ್ಥಾನದಲ್ಲಿರುವುದೇ ಅಲ್ಲದೇ ಈ ತಾಲೂಕು ಏಷಿಯಾದಲ್ಲಿ ಅತಿ ಹಿಂದುಳಿದ ತಾಲೂಕು ಎಂಬ ಸುದ್ದಿ; ಹಿಂದುಳಿದ ಜಿಲ್ಲೆಗಳಲ್ಲಿ ಗುಲಬರ್ಗಾ ಜಿಲ್ಲೆ ಒಂದಾಗಿದ್ದರೂ ಎಸ್.ಎಂ.ಕೃಷ್ಣ ಅವರ ಮಂತ್ರಿಮಂಡಲದಲ್ಲಿ ಈ ಜಿಲ್ಲೆಯ 13 ಶಾಸಕರಲ್ಲಿ 6 ಶಾಸಕರು ಸಚಿವರಾಗಿದ್ದ ಸುದ್ದಿ; ಈಗೀಗ ಹೈದರಾಬಾದ್ ಕರ್ನಾಟಕ  ‘ಪ್ರತ್ಯೇಕ ರಾಜ್ಯ’ ವಾಗಬೇಕೆಂಬ ಕೂಗಿನ ಸುದ್ದಿ; ಬಳ್ಳಾರಿಯ ಗಣಿಧಣಿಗಳು ತಿರುಪತಿ ತಿಮ್ಮಪ್ಪನಿಗೆ 50 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಕಿರೀಟ ಮಾಡಿಸಿ, ತೊಡಿಸಿದ ಸುದ್ದಿ; ಪ್ರಜೆಗಳಿಗೆ ಕಿಂಚತ್ತೂ ಬೇಕಿಲ್ಲಿದ ಶ್ರೀ ಕೃಷ್ಣದೇವರಾಯನ 500ನೇ ಪಟ್ಟಾಭಿಷೇಕದ ಉತ್ಸವವನ್ನು ರೆಡ್ಡಿಗಳು ಅದೇ ಪ್ರಜೆಗಳ ದುಡ್ಡಿನಿಂದ ಆಚರಿಸಿದ ಸುದ್ದಿ; ರಾಜ್ಯದಲ್ಲೇ ಈ ಭಾಗದ ಜಿಲ್ಲೆಗಳಿಂದ ಗುಳೆ (ವಲಸೆ) ಹೋಗುವವರ ಪ್ರಮಾಣ ಅಪಾರವಾಗಿದ್ದು, ಬೆಂಗಳೂರಿನಲ್ಲಿ ನಿರ್ಮಾಣ  ಹಂತದ ಕಟ್ಟಡವೊಂದು ಕುಸಿದು ಬಿದ್ದು, ಅಲ್ಲಿ ದುಡಿವ ಜನರು ಸತ್ತರೆ ಅವರು ರಾಯಚೂರು, ಬಾಗಲಕೋಟೆ, ಕೊಪ್ಪಳ ಜಿಲ್ಲೆಯಿಂದ ಗುಳೆ ಹೋಗಿರುವ ಜನರಾಗಿರುತ್ತಾರೆ ಎಂಬ ಸುದ್ದಿ – ಇಂತಹ ನೂರಾರು ಸುದ್ದಿಗಳಿಂದ ಉತ್ತರ ಕರ್ನಾಟಕವು ದಕ್ಷಿಣ ಕರ್ನಾಟಕದವರಿಗೆ ಪರಿಚಯವಾಗುತ್ತದೇನೋ.
ಕರ್ನಾಟಕದ ಉತ್ತರ ಭಾಗದ ಬೆಳಗಾವಿ, ಧಾರವಾಡ, ಉ.ಕ.ಜಿಲ್ಲೆಗಳು ಸ್ವಾತಂತ್ರ್ಯ ಪೂರ್ವದಲ್ಲಿ ಮುಂಬೈ ಪ್ರೆಸಿಡೆನ್ಸಿಗೆ ಸೇರಿ, ನೇರ ಬ್ರಿಟಿಷರ ಆಡಳಿತಕ್ಕೆ ಒಳಗಾಗಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಬೆಳೆದವು. ಮರಾಠಿ ಸಂಸ್ಕೃತಿಯ ಪ್ರಭಾವವಿದ್ದರೂ ಸ್ವಾತಂತ್ರ್ಯ ನಂತರ ಕನ್ನಡ ಭಾಷೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳಿಂದ ಶ್ರೀಮಂತವಾಯ್ತು. ಲಿಂಗಾಯತರ ಪ್ರಭಾವ ಹೆಚ್ಚಾಗಿತ್ತು. ಲಿಂಗಾಯತ ಮಠಗಳು, ಅವುಗಳ ಶಿಕ್ಷಣ ಸಂಸ್ಥೆಗಳು ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಿದವು. ಹಿಂದೂಸ್ತಾನಿ ಸಂಗೀತಗಾರರಾದ ಮಲ್ಲಿ ಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಮುಂತಾದವರು ಪ್ರಸಿದ್ಧರಾದರೆ, ಮಧುರ ಚೆನ್ನ, ಬೇಂದ್ರೆ, ಡಿ.ಎಸ್. ಕರ್ಕಿ, ವಿನಾಯಕ, ಬಸವರಾಜ ಕಟ್ಟಿಮನಿ, ಆನಂದಕಂದ ಮುಂತಾದ ಸಾಹಿತಿಗಳು ಪ್ರಸಿದ್ಧರಾಗಿದ್ದಾರೆ.
ಉತ್ತರ ಕರ್ನಾಟಕದ ಒಳಗೇ ಇರುವ ಹೈದರಾಬಾದ್ ಕರ್ನಾಟಕದ ಬೀದರ್, ಗುಲಬರ್ಗಾ, ರಾಯಚೂರು, ಕೊಪ್ಪಳ ಮತ್ತು ಈಗಿನ ಯಾದಗಿರಿ ಜಿಲ್ಲೆಗಳು ಹಾಗೂ ವಿಜಾಪುರ, ಬಾಗಲಕೋಟೆ, ಗದಗ ಮುಂತಾದ 7 ಜಿಲ್ಲೆಗಳ ಈ ಪ್ರದೇಶಗಳ ಸಾಂಸ್ಕೃತಿಕ ಚರಿತ್ರೆ ಭಿನ್ನವಾಗಿದೆ. ಭಾಷಿಕವಾಗಿ ಈಗಲೂ ಉತ್ತರ ಭಾಗದ ಎಲ್ಲ ಜಿಲ್ಲೆಗಳು ಭಿನ್ನತೆಯಿಂದ ಕೂಡಿವೆ. ನಿಜವಾದ ಭಾಷಾ ವೈವಿಧ್ಯ ಈ ಜಿಲ್ಲೆಗಳಲ್ಲಿದೆ. ಆಡು ನುಡಿಯ ಸೊಗಡು ಭಿನ್ನ ಭಿನ್ನವಾಗಿದ್ದು ತನ್ನ ಚಹರೆಗಳನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡಿವೆ. ಪಂಪನ ಕಾಲದ, ರನ್ನನ ಕಾಲದ `ತಿರುಳ್ಗನ್ನಡ ನಾಡು’ ಈ ಭಾಗದಲ್ಲಿದೆ. ಈ ಪ್ರದೇಶಕ್ಕೆ ತನ್ನದೇ ಆದ ಪರಂಪರೆ, ಸಂಸ್ಕೃತಿಯಿದೆ. ಈ ಪರಂಪರೆ, ಸಂಸ್ಕೃತಿ ಎಂದು ಹೇಳುವುದೆಲ್ಲ ಶ್ರೇಷ್ಠವಾದದ್ದು ಅಂತಲ್ಲ. ಕಾಲದ ಸ್ಥಿತ್ಯಂತರಗಳನ್ನು ಅನುಭವಿಸುತ್ತ, ಹೊಸದನ್ನು ದಕ್ಕಿಸಿಕೊಳ್ಳುತ್ತ, ಹಳೆಯದನ್ನೂ ಉಳಿಸಿಕೊಳ್ಳುತ್ತ, ಸಂಕರವಾಗಿ ನಿಂತ ಪರಂಪರೆ, ಸಂಸ್ಕೃತಿ ಈ ಪ್ರದೇಶದಲ್ಲಿದೆ. ಹಾಗೆ ನೋಡಿದರೆ ಸಾಹಿತ್ಯ, ಸಂಗೀತ, ಕಲೆ, ಜಾನಪದ ಎಲ್ಲವೂ ಈ ಪ್ರದೇಶದಲ್ಲಿ ಹುಟ್ಟಿ ಬೆಳೆದದ್ದೇ ಹೆಚ್ಚು. ಜೈನ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ವಚನ ಸಂಕಲನ-ಸಂಗೋಪನ ಸಾಹಿತ್ಯ, ಪುರಾಣ ಸಾಹಿತ್ಯ, ತತ್ವಪದ  ಸಾಹಿತ್ಯ, ಮೊಹರಂ ಸಾಹಿತ್ಯ, ಜನಪದದ ದೊಡ್ಡಾಟ, ಸಣ್ಣಾಟ, ಗೊಂದಲಿಗರ ಕಥೆಗಳು, ಲಾವಣಿ ಸಾಹಿತ್ಯ ಮುಂತಾದವು ಈ ಪ್ರದೇಶದ್ದೇ ಆಗಿವೆ. ಆಧುನಿಕ ಪೂರ್ವದಲ್ಲಿ ಇದೆಲ್ಲವನ್ನೂ ಕಾಣಬಹುದು.
ರಾಜಕೀಯ ಸ್ಥಿತ್ಯಂತರಗಳಿಂದ ಈ ಪ್ರದೇಶದಲ್ಲಿ ‘ಅನ್ಯ ಭಾಷೆ, ಅನ್ಯ ಸಂಸ್ಕೃತಿ’ ಪ್ರಭುತ್ವಗಳು ನೆಲೆಗೊಂಡ ಪರಿಣಾಮದಿಂದ ಭಾಷೆ, ಧರ್ಮ ಸಂಕರಗೊಂಡವು. ಸಂಕರ ಸಂಸ್ಕೃತಿಯೇ ಜನಸಮುದಾಯಗಳಲ್ಲಿ ನೆಲೆ ನಿಂತಿತು. ಜನಸಮುದಾಯಗಳ ಮೇಲೆ ರಾಜಕೀಯ ಪ್ರಭುತ್ವಕ್ಕಿಂತ, ಧಾರ್ಮಿಕ ಪ್ರಭುತ್ವದ ಪ್ರಭಾವವೇ ಹೆಚ್ಚು. ರಾಜನನ್ನು ಪ್ರಶ್ನಾತೀತನನ್ನಾಗಿ ಕಾಣುವ ಗುಣವನ್ನು ವಚನಕಾರರು ಕಳೆದು ಹಾಕಿದ್ದರು. ಬದಲಿಗೆ ಸಾಧಕರನ್ನು ಗೌರವಿಸುವ ಗುಣವು ಜನಸಮುದಾಯಗಳಲ್ಲಿ ಬೆಳೆದಿತ್ತು. ರಾಜ ಸತ್ತರೆ ಆತನ ಸ್ಮಾರಕವನ್ನು ನಿರ್ಮಿಸಲು  ಯಾರೂ ಮುಂದಾಗುತ್ತಿರಲಿಲ್ಲ. ಅದೇ ಶರಣರು, ದಾಸರು, ಅನುಭಾವಿಗಳು, ಸಿದ್ಧರು, ಆರೂಢರು, ಸೂಫಿಗಳು, ಫಕೀರರು, ದರ್ವೇಶಿಗಳು ಸತ್ತರೆ ಅವರ ಸ್ಮಾರಕಗಳನ್ನು ಜನರೇ ನಿರ್ಮಿಸುವಂತಾಯಿತು. ಈ ಸಂಸ್ಕೃತಿ ಈ ಪ್ರದೇಶದ ಜನಸಮುದಾಯಗಳಲ್ಲಿ ಎದ್ದು ಕಾಣುತ್ತದೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಮುಖ್ಯವಾಗಿ ಪ್ರಧಾನ ಧರ್ಮಗಳು ಸಮಾಜದ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಆಗಿದೆ. ವೈದಿಕ, ಜೈನ, ಶೈವ ಧರ್ಮಗಳು ಸಂಕುಚಿತವಾಗಿದ್ದವು. 12ನೇ ಶತಮಾನದ ಶರಣರ ಸಾಂಸ್ಕೃತಿಕ ಚಳವಳಿ ಅನೇಕ ಬದಲಾವಣೆಗಳನ್ನು ತಂದರೂ, ಅದು ನಂತರದಲ್ಲಿ ಸಾಂಸ್ಥಿಕವಾಗಿ ಬಲಗೊಂಡು ‘ಲಿಂಗಾಯತ , ವೀರಶೈವ’  ಧರ್ಮವಾಗಿ ಸಂಕುಚಿತಗೊಂಡಿತು. ಅಸಂಖ್ಯಾತ ಕೆಳ ಸಮುದಾಯಗಳು ‘ದೇವರು-ಧರ್ಮದ’ ಪರಿಕಲ್ಪನೆಯನ್ನು ಭಿನ್ನವಾಗಿ ಗ್ರಹಿಸಿದವು. ಈ ಜನಸಮುದಾಯಗಳಿಗೆ ಅವರುಗಳದ್ದೇ ಆದ ದೇವರು, ಧರ್ಮವನ್ನು ನಿದಿರ್ಷ್ಟವಾಗಿ ರೂಪಿಸಿಕೊಳ್ಳದೆ ತಬ್ಬಲಿಗಳಾದವು. ಆದರೂ ಈ ಜನಸಮುದಾಯಗಳು ತಬ್ಬಲಿಗಳಾಗದೇ ತಮ್ಮ ತಮ್ಮ ನೆಲೆಯಲ್ಲಿ ಆಧ್ಯಾತ್ಮಿಕವಾದ ಗುಂಪು, ಪಂಥಗಳಲ್ಲಿ ಒಗ್ಗೂಡಿಕೊಂಡವು. ಸ್ಥಳೀಯ ಸಾಧಕರೇ ಪೂಜ್ಯರಾದರು. ಅನುಭಾವಿಗಳು, ಆರೂಢರು, ಸೂಫಿಗಳು, ಫಕೀರರು ತಮ್ಮ ತಮ್ಮ ಅನುಭಾವ ಶಕ್ತಿಯಿಂದ ಜನಸಮುದಾಯಗಳ ಮೇಲೆ ಅಪಾರ ಪ್ರಮಾಣದಲ್ಲಿ ಪ್ರಭಾವ ಬೀರಿದರು. ಈ ಅನುಭಾವಿಗಳು ತೀರಿಕೊಂಡರೆ ಅವರ ಗದ್ದಿಗೆಗಳೇ ಆರಾಧನ ಕೇಂದ್ರವಾದವು. ದರ್ಗಗಾಗಳೂ ಇದನ್ನೇ ಸೂಚಿಸುತ್ತವೆ. ಧಾರ್ಮಿಕವಾಗಿ ಒಗ್ಗೂಡುವಿಕೆಯಿಂದ ಈ ಪ್ರದೇಶದಲ್ಲಿ ಸಮಾಧಿ ಸ್ಥಾನಗಳು ಆರಾಧನಾ ಕೇಂದ್ರಗಳಾಗಿ ಬೆಳೆದವು. ತತ್ವಪದಗಳು ಭಜನಾ ಮೇಳಗಳ ಮೂಲಕ ಸಾಮೂಹಿಕವಾಗಿ ಹೊರಹೊಮ್ಮಿದವು. ಈ ಸಮುದಾಯಗಳೇ ಮೊಹರಂ ಹಬ್ಬದಲ್ಲಿ ಹಾಡುತ್ತ ಕುಣಿದು ಸಂತೋಷ  ಪಡುತ್ತಿವೆ. ಹಿಂದು-ಮುಸ್ಲಿಂ ಸೌಹಾರ್ದತೆ ಈ ಪ್ರದೇಶದಲ್ಲಿ ತಾನೇ ತಾನಾಗಿ ಜೀವಂತವಾಗಿದೆ. ತಿಂತಿಣ ಮೌನೇಶ್ವರನ ದೇವಸ್ಥಾನದಲ್ಲಿ ‘ಏಕ್ ಲಾಕ್ ಐಂಸಿ ಹಜಾರ್ ಪಾಂಚೋ ಪೀರ್ ಪೈಗಂಬರ್ ಮೌನೋದ್ದೀನ್ ಕಾಸಿಪತಿ ಗಂಗಾಧರ ಹರಹರ ಮಾಹಾದೇವ’ ಎಂಬ ಮಂತ್ರ ಪಠಿಸಲಾಗುತ್ತದೆ.
ಪ್ರಧಾನ ಧರ್ಮಗಳು ಈ ಪ್ರದೇಶದಲ್ಲಿ ಅವುಗಳ ಪಾಡಿಗೆ ಅವು ಸಂಕುಚಿತವಾಗಿ ದೇವಸ್ಥಾನ, ಮಠಮಾನ್ಯಗಳ ಜೊತೆಗೆ ಇದ್ದವು. ಅಪಾರ ಸಂಖ್ಯೆಯ ಕೆಳವರ್ಗಗಳು, ಬಡವರು, ರಾಜಪ್ರಭುತ್ವವನ್ನು, ಧರ್ಮಪ್ರಭುತ್ವವನ್ನು ಹೆಚ್ಚು ನಂಬಿಕೊಳ್ಳಲಿಲ್ಲ. ಕಷ್ಟ-ಸುಖಗಳನ್ನು ಆಧ್ಯಾತ್ಮ ಸಾಧಕರ ಸಮಾಧಿ, ದರಗಾಗಳಿಗೆ ಹೋಗಿ ಹಂಚಿಕೊಳ್ಳುತ್ತಿದ್ದರು. ಹೀಗಾಗಿ ತಮ್ಮ ಹಕ್ಕುಗಳು ಯಾವುವು? ಅವುಗಳನ್ನು ಯಾರಿಂದ ದಕ್ಕಿಸಿಕೊಳ್ಳಬೇಕು ಎಂಬ ರಾಜಕೀಯ ಪ್ರಜ್ಞೆ ಈ ಪ್ರದೇಶದ ಜನಸಮುದಾಯಗಳಲ್ಲಿ ಬೆಳೆಯಲಿಲ್ಲ. ಈ ಹೊತ್ತಿಗೂ ಈ ಭಾಗದ ಜಿಲ್ಲೆಗಳು-ತಾಲೂಕುಗಳು ಹಿಂದುಳಿದಿವೆ. ತಾರತಮ್ಯ ನೀತಿಗೆ ಒಳಗಾಗುತ್ತಿವೆ ಎಂಬುದನ್ನು ಅಂಕಿ ಅಂಶಗಳು ಕಣ್ಣಿಗೆ ಹೊಡೆದು ಹೇಳುತ್ತಿವೆ. ಆದರೂ  ಸರ್ಕಾರದ ಮೇಲೆ ಒತ್ತಡ ತರುವ ಹೋರಾಟಗಳು ನಡೆಯುತ್ತಿಲ್ಲ. ಈ ಭಾಗದ ರಾಜಕಾರಣಿಗಳಿಗೆ ಅಸ್ತಿತ್ವವೇ ಇಲ್ಲ ಅನಿಸುತ್ತಿದೆ. ಹೋರಾಟದ ಬದಲು ‘ಪ್ರತ್ಯೇಕ ರಾಜ್ಯ’ ದ ಬೇಡಿಕೆ ಇಟ್ಟು ಹೋರಾಡಲು ತೊಡಗಿಕೊಂಡು ಹಾಸ್ಯಾಸ್ಪದವಾಗುತ್ತಿದ್ದಾರೆ. ಅಪಾರ ಪ್ರಮಾಣದ ಭೂಮಿ ಮೇಲ್ವರ್ಗಗಳ ಕೈಯಲ್ಲಿಯೇ ಇತ್ತು. ಭೂ ಸೂಧಾರಣಾ ಕಾಯ್ದೆ ಪರಿಣಾಮಕಾರಿಯಾಗಿ ಈ ಭಾಗದಲ್ಲಿ ಆಗಲಿಲ್ಲ. 100 ರಿಂದ 500 ಎಕರೆ ಭೂಮಿ ಇರುವವರೇ ಸಣ್ಣ ರೈತರಾಗಿದ್ದರು. 1000-2000 ಎಕರೆ ಭೂಮಿಯನ್ನು ಹೊಂದಿದ ಭೂಮಾಲೀಕರಲ್ಲಿ ಬ್ರಾಹ್ಮಣ, ಲಿಂಗಾಯತರೂ ಇದ್ದರೂ. ಕೆಳವರ್ಗಗಳಿಗೆ ಭೂಮಿ ಇರಲಿಲ್ಲ. ಹೀಗಾಗಿ ಅತಿ  ಶ್ರೀಮಂತಿಕೆ ಮತ್ತು ಅತಿ ಬಡತನ ಈ ಪ್ರದೇಶದಲ್ಲಿ ಕಾಣುವ ಮುಖ್ಯ ಲಕ್ಷಣವಾಗಿದೆ. ಬಡತನ ಇರುವಲ್ಲಿ ಬರೀ ಗೋಳಾಟ, ನರಳಾಟ ಮಾತ್ರ ಇರುತ್ತದೆಂದು ತಿಳಿಯಬೇಕಾಗಿಲ್ಲ. ನಿತ್ಯದ ಹೊಟ್ಟೆ ಪಾಡನ್ನು ದುಡಿದು ನಿಭಾಯಿಸಿಕೊಳ್ಳುತ್ತಾರೆ. 1980 ರ ವರೆಗೆ ಈ ದುಡಿವ ವರ್ಗ ವಲಸೆ ಹೋಗುತ್ತಿರಲಿಲ್ಲ. ಈ ಪ್ರಾಂತ್ಯದಲ್ಲಿ ಭೂಮಾಲೀಕರ ಕೆಳಗೆ ಬಡವರು ದುಡಿದು ಜೀವನ ಮಾಡುತ್ತಿದ್ದರು. 1980 ರ ನಂತರ ಜೀವನ ನಿರ್ವಹಣೆ ಕಷ್ಟವಾಯಿತು. ಆಗ ಗದಗ, ಕೊಪ್ಪಳ, ಬಳ್ಳಾರಿ, ವಿಜಾಪುರ, ಬಾಗಲಕೋಟೆ, ಗುಲಬರ್ಗಾ, ರಾಯಚೂರು, ಬೀದರ್ ಜಿಲ್ಲೆಗಳ ಜನರು ಮುಂಬಯಿ, ಪುಣೆ, ಕೊಲ್ಹಾಪುರ, ಸೊಲ್ಲಾಪುರ, ಹೈದರಾಬಾದ್, ಬೆಂಗಳೂರು, ಮಂಗಳೂರು, ಮಡಿಕೇರಿ ನಗರಗಳಿಗೆ ವಲಸೆ ಹೋಗುವುದಕ್ಕೆ ಆರಂಭಿಸಿದರು. ಈಗ ಅತಿಯಾಗಿ ಕೆಲವು ತಾಲೂಕುಗಳ ಹಳ್ಳಿಗಳಲ್ಲಿ ಜನರೇ ಇಲ್ಲದ ಸ್ಥಿತಿ ಒದಗಿದೆ. ವಲಸೆ ಹೋಗುವ ಕುಟುಂಬಗಳ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತವೆ. ಈ ಪ್ರದೇಶದಲ್ಲಿ 67.21% ಮಕ್ಕಳು ಶಾಲೆಗೆ ಹೋಗುತ್ತಿಲ್ಲ.
ಬಡತನ ಇರುವಲ್ಲಿ ಸಂಸ್ಕೃತಿ ಶ್ರೀಮಂತವಾಗಿರುತ್ತದೆ ಎಂಬುದಕ್ಕೆ ಉತ್ತರ ಕರ್ನಾಟಕ  ಸಾಕ್ಷಿಯಾಗಿದೆ. ಎಷ್ಟು ಬಗೆಯ ಕಲೆಗಳು ಈ ಪ್ರದೇಶದಲ್ಲಿದ್ದವು ಎಂಬುದನ್ನು ಶೋಧನೆಯಿಂದ ಅರಿಯಬೇಕು. ಗೊಂದಲಿಗರ ಆಟ, ಹಗಲುವೇಷಗಾರರ ಆಟ, ಜಾತಿಗೇರರ ಆಟ, ಬುಡುಬುಡಿಕೆಯವರ ಆಟ, ತತ್ವಪದ ಹಾಡುವವರು, ದಾಸರ ಹಾಡುಗಳು ನೂರಾರು ಬಗೆಯ ಇಂಥ ಕಲಾವಿದರೆಲ್ಲರೂ ಹಳ್ಳಿಹಳ್ಳಿಗಳಲ್ಲಿ ನಿತ್ಯವೂ ಪ್ರದರ್ಶನಗಳನ್ನು ನೀಡುತ್ತಲೇ ಇರುತ್ತಿದ್ದರು. ನಿತ್ಯ ಬೆಳಗಾದರೆ ಸಾಕು ಹೊತ್ತು ಮುಳುಗುವವರೆಗೆ ಈ ಎಲ್ಲ ಕಲಾವಿದರು ಮನೆಮನೆ ಬಾಗಿಲಿಗೆ ಬಂದು ತಮ್ಮ ಕಲೆ ಪ್ರದರ್ಶಿಸಿ ಹೋಗುವುದನ್ನು ಕಾಣಬಹುದಾಗಿತ್ತು. ತಂಬೂರಿ ನಾದವು ಮೂಡಲು ಮೂಡುವಾಗ ಕೇಳುತ್ತಿದ್ದುದು, ಸೂರ್ಯ ಮುಳುಗಿದಾಗ ನಿಲ್ಲುತ್ತಿತ್ತು. ಬ್ರಿಟಿಷರು ಬಂದು ಇವರನ್ನು ಭಿಕ್ಷುಕರು ಎಂದು ಪೀಡಿಸಿದ್ದು ನಮಗೆ ಗೊತ್ತಿದೆ. ಸ್ವಾತಂತ್ರ್ಯದ ನಂತರ ಕಾಲು ಶತಮಾನದವರೆಗೆ ಈ ಕಲಾವಿದರು ಚಟುವಟಿಕೆಯಿಂದ ಕಾರ್ಯಶೀಲರಾಗಿದ್ದರು. ನಗರಗಳು, ಆಧುನಿಕತೆ ಬೆಳೆಯಲಾರಂಭಿಸಿ ಇವರು ಮೂಲೆಗುಂಪಾಗುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ ಈ ಕಲಾವಿದರು ಪ್ಲಾಸ್ಟಿಕ್ ವಸ್ತುಗಳನ್ನು ಮಾರುತ್ತಿದ್ದಾರೆ. ಕಲೆ ಮರೆತು ತಮಗೆ ಅನುಕೂಲವಾದ ಪುಡಿ ವ್ಯಾಪಾರಗಳಲ್ಲಿ ತೊಡಗಿದ್ದಾರೆ.
ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಾದ್ಯಂತ ಈಗಲೂ ಜೀವಂತವಾಗಿರುವ ಜಾತ್ರೆಗಳು ಸಂಭ್ರಮದಿಂದ ನಡೆಯುತ್ತವೆ.  20 ವರ್ಷಗಳ ಹಿಂದೆ ಒಂದೊಂದು ಜಾತ್ರೆಗಳು ತಿಂಗಳ ಕಾಲ ನಡೆಯುತ್ತಿದ್ದವು. ಈಚಿನ ವರ್ಷಗಳಲ್ಲಿ ದೊಡ್ಡ ಜಾತ್ರೆಗಳು ಕೂಡ ವಾರ ಹತ್ತು ದಿನಗಳ ಒಳಗೆ ಮುಗಿದು ಜನ ಖಾಲಿಯಾಗುತ್ತಾರೆ. ಮೈಲಾರ, ಹಂಪೆ, ಹುಲಗಿ, ಕೊಪ್ಪಳ, ಕುಕನೂರು, ಕನಕಗಿರಿ, ನೀರಮಾನ್ವಿ, ಕಲಮಾಲಿ, ಕವಿತಾಳ, ಅಮರೇಶ್ವರ, ಕೊಡೇಕಲ್ಲು, ತಿಂತಿಣಿ, ಹುಮನಾಬಾದ ಮುಂತಾದ ನೂರಾರು ಸ್ಥಳಗಳಲ್ಲಿ ನಡೆಯುವ ಜಾತ್ರೆಗಳಿಗೆ ಲಕ್ಷಾಂತರ ಜನ ಸೇರುತ್ತಾರೆ. ಸರ್ಕಾರಕ್ಕೆ ಜಾತ್ರೆಯ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಾಧ್ಯವಾಗುವುದಿಲ್ಲ. ಜನರು ನಿಯಂತ್ರಣ ಮೀರುತ್ತಾರೆ. ಪ್ರಸ್ತುತ ಕಾಲದಲ್ಲಿ ತಾಲೂಕು, ಹೋಬಳಿಗಳೂ ಕೂಡ ವ್ಯಾಪಾರ ಕೇಂದ್ರಗಳಾಗಿವೆ. ಆದರೂ ಈ ಜಾತ್ರೆಗಳು ವ್ಯಾಪಾರ ಕೇಂದ್ರಗಳಾಗಿ ಜನರನ್ನು ಸೆಳೆಯುತ್ತವೆ. ಎಲ್ಲ ಬಗೆಯ ವಸ್ತುಗಳು ಮಾರಾಟಕ್ಕೆ ಸಿಗುತ್ತವೆ. ಎತ್ತುಗಳಿಂದ ಹಿಡಿದು ಹೇರ್‌ಪಿನ್ನುಗಳವರೆಗೆ  ವ್ಯಾಪಾರವಾಗುತ್ತದೆ. ಈ ಪ್ರದೇಶದ ಹಳ್ಳಿಗರು ತಮ್ಮ ಮೆಚ್ಚಿನ ಜಾತ್ರೆಗಳಿಗೆ ಪರಿವಾರ ಸಹಿತ ಹೋಗಿ ತಮಗೆ ಬೇಕಾದ ಸಾಮಾನುಗಳನ್ನು ಕಂಡು ಖುಷಿ ಪಡುತ್ತಾರೆ. ಕೆಲವು ಜಾತ್ರೆಗಳು ಕೆಲವು ವಸ್ತುಗಳ ಮಾರಾಟಕ್ಕೇ ಪ್ರಸಿದ್ಧವಾಗಿರುತ್ತವೆ.
ಜಾತ್ರೆಗಳ ಇನ್ನೊಂದು ವಿಶೇಷವೆಂದರೆ, ಹೇಳಿಕೆ ಅಥವಾ ಕಾರಣಿಕಗಳು. ಅನೇಕ ಜಿಲ್ಲಾ ಪ್ರದೇಶಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಹೇಳಿಕೆ-ಕಾರಣಿಕಗಳನ್ನು ಜನರು ಶ್ರದ್ಧೆಯಿಂದ ಕೇಳುತ್ತಾರೆ, ನಂಬುತ್ತಾರೆ. ಮೈಲಾರ ಜಾತ್ರೆ ಈ ಕಾರಣದಿಂದ ಪ್ರಸಿದ್ಧಿ ಪಡೆದಿದೆ. ಜಾತ್ರೆಯಲ್ಲಿ ದೇವರ ಪ್ರತಿನಿಧಿ ಎಂಬಂತಿರುವ ಪೂಜಾರಿ ನಿಗದಿತ ಕಾರ್ಯಗಳ ನಂತರ, ನಿಗದಿತ ಸಮಯಕ್ಕೆ ಹೇಳುವ ‘ಕಾರಣಿಕ’ವನ್ನು ನೆರೆದ ಜನಸಮುದಾಯ ಕೇಳಿ, ಅದನ್ನು ವರ್ಷದ ಉದ್ದಕ್ಕೂ ಅರ್ಥೈಸುತ್ತಲೇ ಇರುತ್ತಾರೆ. ಈ ‘ಕಾರಣಿಕ’ದ ನುಡಿಯ ಅರ್ಥವನ್ನು ವ್ಯಾಪಾರಿಗಳು, ವ್ಯವಸಾಯಗಾರರು, ಕಸುಬುದಾರರು, ಹೆಂಗಸರು, ಗಂಡಸರು ಆ ವರ್ಷದಲ್ಲಿ ತಮ್ಮ ಬದುಕಿನ ಉದ್ದಕ್ಕೂ ಸಮಯ-ಸಂದರ್ಭಕ್ಕೆ ಅನುಸಾರವಾಗಿ, ನಡೆದ, ಘಟಸಿದ ಘಟನೆಗಳೊಂದಿಗೆ ಅರ್ಥಮಾಡಿಕೊಳ್ಳುತ್ತಾರೆ. ಮಳೆ-ಬೆಳೆ, ವ್ಯಾಪಾರ, ಮದುವೆ ಮುಂತಾದ ಸಂಗತಿಗಳ ಭವಿಷ್ಯವನ್ನು ನಿರ್ಧರಿಸಿಕೊಳ್ಳುತ್ತಾರೆ. ಆಧುನಿಕತೆ ಬೆಳೆದರೂ ಈ ಸಂಪ್ರದಾಯಗಳು ಇನ್ನೂ ಜೀವಂತಿಕೆಯಿಂದ ಕೂಡಿವೆ. ಜಾತ್ರೆಗಳು ಈ ಜನಸಮುದಾಯಗಳ ಸೃಜನಶೀಲತೆಗೆ ಸಂಕೇತವಾಗಿವೆ. ಉರುಸುಗಳನ್ನೂ ಇಲ್ಲಿ ನೆನೆಯಬಹುದು.
ಮೊಹರಂ ಹಬ್ಬವೂ ಅಷ್ಟೆ. ಈ ಪ್ರದೇಶದಲ್ಲಿ ನಡೆಯುವ ಮೊಹರಂಗಳು ಅನನ್ಯವಾಗಿವೆ. ಮುಸ್ಲಿಮ್ ಹಬ್ಬವಾದರೂ ಪಾಲ್ಗೊಳ್ಳುವವರಲ್ಲಿ ಮುಕ್ಕಾಲು ಭಾಗ ಮುಸ್ಲಿಮೇತರರಿದ್ದಾರೆ. ಅನೇಕ ಹಳ್ಳಿಗಳಲ್ಲಿ ಮುಸ್ಲಿಮ್ ಕುಟುಂಬಗಳು ಇರುವುದಿಲ್ಲ. ಆದರೂ ಮೊಹರಂ ಹಬ್ಬವು ಸಂಭ್ರಮದಿಂದ ನಡೆಯುತ್ತವೆ. ಕೊಪ್ಪಳದ ಕುದುರೆಮೋತಿ, ರಾಯಚೂರಿನ ಮುದಗಲ್ಲು, ಬೀದರ್, ಗುಲಬರ್ಗಾ, ಬಾಗಲಕೋಟೆ, ಗದಗ ಈ ಎಲ್ಲ ಜಿಲ್ಲೆಗಳಲ್ಲಿ ಈ ಹಬ್ಬಗಳು ಮುಸ್ಲಿಮೇತರರ ಪಾಲ್ಗೊಳ್ಳುವಿಕೆಯಿಂದಲೇ ಬೃಹತ್ ಪ್ರಮಾಣದಲ್ಲಿ ನಡೆಯುತ್ತವೆ. ಕುದುರೆಮೋತಿ ಊರಿನಲ್ಲಿ ಮೊಹರಂ ನಡೆಯುವ ಸಂದರ್ಭದಲ್ಲಿ ಊರಿನ ಯಾರ ಮನೆಯಲ್ಲಿ ಯಾವ ಊರಿನ ಅತಿಥಿಗಳೂ ಹೋಗಿ ಆಶ್ರಯ ಪಡೆದು ಮೊಹರಂನಲ್ಲಿ ಪಾಲ್ಗೊಳ್ಳಬಹುದೆಂಬ ಸಂಪ್ರದಾಯವಿದೆ. ಅನೇಕ ಬುಡಕಟ್ಟಿನ ಜನ ಈ ಊರಿನ ಮೊಹರಂಗೆ ತಪ್ಪದೇ ಬರುತ್ತಾರೆ. ಮೊಹರಂ ಮುಗಿಸಿಕೊಂಡು ಈ ಬುಡಕಟ್ಟಿನವರೆಲ್ಲ ಒಂದೆಡೆ ಸೇರಿ ತಮ್ಮ ನಡುವಿನ ಜಗಳಗಳನ್ನು ‘ನ್ಯಾಯಕಟ್ಟೆ’ಯಲ್ಲಿ ಬಗೆ ಹರಿಸಿಕೊಂಡು ಹೋಗುತ್ತಾರೆ. ಈ ಸಂಸ್ಕೃತಿ ಇನ್ನೂ ಜೀವಂತವಾಗಿದೆ.
ಈ ಭಾಗದ ಜನರಲ್ಲಿ ರಾಜಕೀಯ ಪ್ರಜ್ಞೆ ಕಮ್ಮಿ. ಇಲ್ಲೇ ವಚನಕಾರರ ಚಳವಳಿ ನಡೆದಿದೆ. ರಾಜ ಪ್ರಭುತ್ವವನ್ನೂ, ಧರ್ಮದ ಪ್ರಭುತ್ವವನ್ನು ಪ್ರಶ್ನಿಸಿದ ವಚನಕಾರರು ಪರ್ಯಾಯ ಬದುಕನ್ನು ರಚಿಸಿಕೊಳ್ಳಲು ಚಳವಳಿಯನ್ನೇ ನಡೆಸಿದರು. ‘ಪ್ರತಿಭಾವಂತ’ ರಿಗೆ ಮಾತ್ರ ಸಾಹಿತ್ಯ ರಚನೆ ಸಾಧ್ಯವೆಂದು ನಂಬಿಕೆಯಿದ್ದ ಕಾಲದಲ್ಲಿ, ಸಮಾಜದ ಕಟ್ಟಕಡೆಯ ಕುಟುಂಬಗಳೂ ವಚನ ರಚಿಸಿ ಬೆರಗನ್ನುಂಟುಮಾಡಿದರು. ಈ ಕಾಲದಲ್ಲಿ ಯಜಮಾನಿಕೆಯನ್ನು ಪ್ರಶ್ನಿಸುವುದು, ಅದನ್ನು ಬದಿಗೊತ್ತಿ ಪರ್ಯಾಯ ದಾರಿಗಳನ್ನು ಸಮರ್ಥವಾಗಿ ಹುಟ್ಟು ಹಾಕುವುದು ನಡೆಯಿತು. ಇಂಥ ಪರಂಪರೆ ಮುಂದುವರಿದು ಬಲಗೊಳ್ಳಲಿಲ್ಲ. ರಾಜಕೀಯ ಸ್ಥಿತ್ಯಂತರಗಳು ನಡೆದವು. ಈ ಪ್ರಾಂತದಲ್ಲಿ ಮರಾಠಿ ಪೇಶ್ವೆ, ಇಸ್ಲಾಮ್ ಪ್ರಭುತ್ವಗಳು ನೆಲೆಗೊಂಡವು. ಶರಣರ ವಿಚಾರಗಳನ್ನು ಕೇವಲ ಧರ್ಮದ ನೆಲೆಗೆ ಸೀಮಿತಗೊಳಿಸಲಾಯಿತು. ವಚನ ಚಳವಳಿಯ ಫಲವಾದ ಸಾಹಿತ್ಯವನ್ನೇ ಸಾಂಸ್ಥಿಕಗೊಳಿಸಿ `ವೀರಶೈವೀಕರ’ಣಗೊಳಿಸಲಾಯಿತು. ಜಾತ್ಯತೀತ ಸಮಾಜದ ಕನಸು ಮುರಿದು ಬಿತ್ತು. ಶರಣ-ವಚನಕಾರರ ಸಮಾಜ ಸೇರಬಯಸಿದ ಅನೇಕ ಕೆಳಜಾತಿ ಸಮುದಾಯಗಳು ತಬ್ಬಲಿಗಳಾದವು. ರಾಜ ಪ್ರಭುತ್ವವನ್ನು, ಅದರ ಕಾರ್ಯವನ್ನು, ಅದರಲ್ಲಿ ಪ್ರಜೆಗಳಾದ ತಮ್ಮ ಪಾಲ್ಗೊಳ್ಳುವಿಕೆಯನ್ನು ಕುರಿತು ಯೋಚಿಸಲಿಲ್ಲ. ಈ ಪ್ರಜ್ಞೆಯೇ ಬೆಳೆಯಲಿಲ್ಲ. ಮೇಲಿಂದ ಮೇಲೆ ಪ್ರಭುತ್ವಗಳು ಬಂದು ಹೋದವು. ವಿಜಯನಗರ ಮತ್ತು ಆದಿಲ್ ಶಾಹಿ ಎರಡೂ ಪತನಗೊಂಡ ಮೇಲೆ ಈ ಪ್ರಾಂತ್ಯದಲ್ಲಿ ಅರಾಜಕತೆಯೇ ಹೆಚ್ಚಾಯಿತು. ವಿಜಯನಗರ, ಬಹಮನಿ-ಆದಿಲ್ ಶಾಹಿಗಳ ನಡುವೆ ನಡೆದ ಯುದ್ಧಗಳಿಗೆ ಲೆಕ್ಕವಿಲ್ಲ. ಈ ಎರಡು ರಾಜ್ಯಗಳ ನಡುವಿನ ಯುದ್ಧದ ಭೂಮಿಯೇ ಈ ಪ್ರಾಂತ್ಯವಾಗಿತ್ತು. 17 ರಿಂದ 20ನೇ ಶತಮಾನದ ಅರ್ಧಭಾಗದವರೆಗೆ ಕರ್ನಾಟಕದ ಉತ್ತರ ಭಾಗವು ಯಾವ ಸ್ಥಿತಿ ತಲುಪಿತ್ತು ಎಂಬುದನ್ನು ಇತಿಹಾಸಕಾರ ಬಿ. ಶೇಕ್ಅಲಿ ಹೀಗೆ ಬರೆಯುತ್ತಾರೆ: “ನಿರಂತರವಾಗಿ ರಾಜಕೀಯ ತಂತ್ರಗಳು ಮತ್ತು ದೈವಿಕ ಬಲ ಇವುಗಳನ್ನು ಎಲ್ಲ ಪಕ್ಷಗಳೂ ತಮ್ಮ ವಿರೋಧಿಗಳನ್ನು ಅಡಗಿಸಲು ಬಳಸುತ್ತಿದ್ದವು. ಪರಿಣಾಮವಾಗಿ ಇಡೀ ದೇಶವೇ ಕುದಿಯುವ ಕುಲುಮೆಯಾಗಿತ್ತು. ದೇಶವಿಡೀ ರಣಭೂಮಿಯಾಗಿ ಪರಿವರ್ತನೆಗೊಂಡು ಒಂದಿಷ್ಟು ಸ್ಥಳವೂ ಶಾಂತಿ ನೆಮ್ಮದಿಗಾಗಿ ಉಳಿಯದಂತಾಗಿತ್ತು. ಈ ಜನರಿಗೆ ಆಳುವವರು ಮರಾಠರಾಗಲೀ, ನಿಜಾಮರಾಗಲೀ, ಫ್ರೆಂಚರಾಗಲೀ, ಇಂಗ್ಲಿಷರಾಗಲೀ, ಅಥವಾ ಹೈದರಾಲಿ ಆಗಲೀ ಮುಖ್ಯ ವರಮಾನ ಮೂಲವೆಂದರೆ ಯುದ್ಧ ವಿಜಯಗಳಿಂದ ದೊರಕುವ ಫಲ. ಯಾರಾದರೊಬ್ಬರು ಶಾಂತಿಯಿಂದ ಇರಬಯಸಿದರೂ, ಮಿಕ್ಕವರು ಆ ಸುಖವನ್ನು ಸವಿಯಲು ಬಿಡುತ್ತಿರಲಿಲ್ಲ. ಎಲ್ಲರಲ್ಲೂ ಒಂದು ಹುಚ್ಚು, ಆವೇಶ, ಸಾಧ್ಯವಾದಷ್ಟು ಭೂಮಿಯನ್ನು ಕಸಿದುಕೊಳ್ಳಬೇಕು, ಕೊಳ್ಳೆಹೊಡೆಯಬೇಕು, ಸಾಧ್ಯವಾದಷ್ಟು ಸಂಪಾದಿಸಬೇಕು. ಅಧಿಕಾರ ಕಿತ್ತಾಟದ ಈ ಹಂತದಲ್ಲಿ ಯಾವುದೇ ಬಗೆಯ ರಚನಶೀಲ ಅಥವಾ ಸಾಂಸ್ಕೃತಿಕ ಬೆಳವಣಿಗೆ ಎನ್ನುವುದು ಸಾಧ್ಯವೇ ಇಲ್ಲದ ವಿಚಾರ. ಇಡೀ ಶತಮಾನವೇ ಒಂದು ಬೇಗುದಿಯ ಸುದೀರ್ಘ ಅವಧಿ. ದಂಗೆ-ಕ್ರಾಂತಿ ಇವು ದಿನದ ಮಾತಾಗಿದ್ದವು. ಯುದ್ಧವೆನ್ನುವುದು ಈ ಕಾಲದ ಸಾಮಾನ್ಯ ಚಟುವಟಿಕೆಯೇ ಆಗಿಹೋಯಿತು.” ಈ ಇತಿಹಾಸಕಾರರ ದೀರ್ಘ ಮಾತನ್ನು ಬಳಸಲು ಕಾರಣವಿದೆ. ಸ್ಥಿರವಾದ ರಾಜ-ಪ್ರಭುತ್ವವೇ ಇಲ್ಲ.  ಪ್ರಜೆಗಳು ತಮ್ಮ ಕಷ್ಟಗಳನ್ನು ಯಾರ ಮುಂದೆ ಹೇಳಿಕೊಳ್ಳಬೇಕು? ಬಡತನ, ಯುದ್ಧ, ದೋಚುವಿಕೆ, ಶಾಂತಿ, ನೆಮ್ಮದಿ ಇಲ್ಲದ ದೀರ್ಘ ಬೇಗುದಿಯ ಪರಿಸ್ಥಿತಿಯಲ್ಲಿ ಸಾಮಾನ್ಯರು ವೈರಾಗ್ಯದಿಂದ ಆಧ್ಯಾತ್ಮದ ಕಡೆಗೆ, ಧಾರ್ಮಿಕ ಗುಂಪುಗಳ ಕಡೆ ಒಲಿದು ಸೋಮಾರಿಗಳಾದರು ಎಂದರೆ ತಪ್ಪಾಗುವುದಿಲ್ಲ. ವಚನಕಾರರ ಚಳವಳಿಯಲ್ಲಿ ಮಹಿಳೆಗೆ ಒಳ್ಳೆಯ ಸ್ಥಾನ-ಮಾನಗಳು ದಕ್ಕಿದವು. ಮುನ್ನೆಲೆಗೆ ಬರಲು ಅವಕಾಶಗಳು ಸಿಕ್ಕವು. ತಮ್ಮ ಶಕ್ತಿಯನ್ನು, ಬಲವನ್ನು ತೋರಿಸಿದರು. ವಚನೋತ್ತರ ಕಾಲದಿಂದ ಮಹಿಳೆ ಸಾಂಸ್ಕೃತಿಕವಾಗಿ ನಾಪತ್ತೆಯಾದಳು. ದಾಸರಲ್ಲಿ ಮಹಿಳೆಯಿಲ್ಲ. ತತ್ವಪದಕಾರರಲ್ಲಿ ಮಹಿಳೆಯಿಲ್ಲ. 12ನೇ ಶತಮಾನದಲ್ಲಿ ಸಾಂಸ್ಕೃತಿಕವಾಗಿ ಮುಂಚೂಣಿಗೆ ಬಂದ ಮಹಿಳೆ ನಂತರ 20ನೇ ಶತಮಾನ ಬಂದರೂ ನಾಪತ್ತೆಯೇ. ಆದರೆ ಈ ಪ್ರದೇಶದಲ್ಲಿ ಅದರಲ್ಲೂ ದುಡಿದ ವರ್ಗದಲ್ಲಿ ಮಹಿಳೆಯೇ ಬದುಕನ್ನು ನಿರ್ವಹಿಸುತ್ತಿರುವುದು ಎಂಬುದನ್ನು ಮರೆಯುವಂತಿಲ್ಲ. ಪುರುಷ ಸೋಮಾರಿ, ಮೈಗಳ್ಳ ಎಂಬುದನ್ನು ಅನೇಕ ಸಮೀಕ್ಷೆಗಳು ಹೇಳುತ್ತವೆ. ದುಡಿವ ಮಹಿಳೆಯೇ ಪುರುಷನಿಗಿಂತ ಹೆಚ್ಚು ಸೃಜನಶೀಲಳಾಗಿ ನಿಂತಿದ್ದಾಳೆ. ಜಮೀನ್ದಾರ-ಪ್ಯೂಡಲ್ ವ್ಯವಸ್ಥೆಯಲ್ಲಿ ಬಡತನದ ದುಡಿವ ಮಹಿಳೆ ಮಾನಸಿಕವಾಗಿ, ದೈಹಿಕವಾಗಿ ಶೋಷಿತಳೇ ಆಗಿದ್ದಾಳೆ. ಆದರೂ ಬದುಕುವ ಕುಟುಂಬವನ್ನು ಸಲಹುವ ಛಲ ಮಹಿಳೆಯಲ್ಲಿದೆ. ಈ ಪ್ರಾಂತ್ಯದ ಸಾಹಿತ್ಯದಲ್ಲಿ ಈ ಅಂಶ ಪ್ರಧಾನವಾಗಿ ಕಾಣುತ್ತದೆ.
ಆಳುವ ಸರ್ಕಾರಗಳನ್ನು ತಮ್ಮ ಬೇಕು-ಬೇಡಗಳನ್ನು ನಿಲ್ಲಿಸಿ ಕೇಳುವ ರಾಜಕೀಯ ಪ್ರಜ್ಞೆ ಈ ಭಾಗದ ಜನರಲ್ಲಿ ಬೆಳೆಯಲಿಲ್ಲ. ರೈತರು ಸಾಲು ಸಾಲಾಗಿ ಸತ್ತರು. ದುಡಿವ ಸಮುದಾಯಗಳು ಲಕ್ಷಾಂತರ ಜನ ಗುಳೆ ಹೋಗುತ್ತಿದ್ದಾರೆ. ಅಕಾಲಿಕ ನೆರೆ ಬಂದು ಇದ್ದವರು ಸಂತ್ರಸ್ತರಾದರೂ ಅವರಿಗೆ ಸೂರು ಒದಗಿಸುವ ಸರ್ಕಾರ ಇಲ್ಲ. ಇದ್ದರೂ ನಿರ್ಲಕ್ಷ್ಯವೇ ತುಂಬಿದೆ. ಜನರಲ್ಲಿ ಕೇಳುವ ಗುಣ ಇಲ್ಲದ ಕಾರಣ ಅಭಿವೃದ್ಧಿ ಕನಸಾಗಿದೆ. ತಾರತಮ್ಯ ಹೆಚ್ಚಾಗಿದೆ. ಈ ಭಾಗದ ಜನರು ತಮ್ಮ ಭಾಗದ ಅಭಿವೃದ್ಧಿಯ ಬಗ್ಗೆ, ತಾರತಮ್ಯದ ಬಗ್ಗೆ ಒಟ್ಟುಗೂಡಿ ಚರ್ಚಿಸಿದ್ದಾಗಲೀ, ವಿಚಾರ ಸಂಕಿರಣವಾಗಲೀ, ವರ್ಕಶಾಪ್ ಮಾಡಿದ್ದಾಗಲೀ ಕಂಡು ಬರುವುದಿಲ್ಲ. ಬುದ್ದಿಜೀವಿಗಳು ತಮ್ಮ ಪಾಡಿಗೆ ತಾವಿದ್ದಾರೆ. ಕುತೂಹಲದ ಸಂಗತಿಯೆಂದರೆ, ಹೈದರಾಬಾದ್ ಕರ್ನಾಟಕ ಪ್ರಾಂತ್ಯದಿಂದ ರಾಜಕೀಯದಲ್ಲಿ ವೀರೇಂದ್ರ ಪಾಟೀಲ್, ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಬಿಟ್ಟರೆ ನಾಲ್ಕನೇ ಹೆಸರಿಲ್ಲ. ಸ್ವಾತಂತ್ರ್ಯ ಬಂದು 60 ವರ್ಷಗಳಾದರೂ ರಾಜಕೀಯ ನಾಯಕರು ಹೆಚ್ಚಾಗಿ ಯಾಕೆ ಕಾಣಿಸಿಕೊಂಡಿಲ್ಲ? ಕಾಣಿಸಿಕೊಂಡರೂ ಹೆಸರಿಗೆ ರಾಜಕಾರಣಿಗಳಾಗಿ, ಒಂದೋ, ಎರಡೋ ಅವಧಿಗೆ ಶಾಸಕರಾಗಿ, ಸಚಿವರಾಗಿ ಮಾಯವಾದವರೇ ಹೆಚ್ಚು. ಜನರ ಆಶೋತ್ತರಗಳಿಗೆ ಸ್ಪಂದಿಸುವ ನಾಯಕರೇ ಹುಟ್ಟಿಕೊಳ್ಳುತ್ತಿಲ್ಲ. ಈಗ ಅತಿಯಾಗಿ ಸುದ್ದಿಯಲ್ಲಿರುವ ಬಳ್ಳಾರಿಯ ಗಣಿಧಣಿಗಳು ರಾಜಕಾರಣಿಗಳಾಗಿ, ಮಂತ್ರಿಗಳಾಗಿದ್ದಾರೆ. ನಿಜವಾದ ಅರ್ಥದಲ್ಲಿ ಅವರನ್ನು ರಾಜಕಾರಣಿಗಳು ಅನ್ನಲು ಸಾಧ್ಯವೇ? ಪ್ರಜಾಶಕ್ತಿಯನ್ನು ಮಾರಾಟದ ಸರಕನ್ನಾಗಿ ಮಾಡಿ ಅದನ್ನು ಕೊಂಡುಕೊಂಡಿದ್ದಾರೆ. ಅವರಲ್ಲಿರುವ ದುಡ್ಡಿನಿಂದ ಬಳ್ಳಾರಿ ಜಿಲ್ಲೆಯನ್ನು ಇಂಡಿಯಾದ ಮಾದರಿ ಜಿಲ್ಲೆಯನ್ನಾಗಿ ಮಾಡಬಹುದು. ಆದರೆ ಬಳ್ಳಾರಿಯ ರಸ್ತೆಗಳಲ್ಲಿ ಅರ್ಧಗಂಟೆ ತಿರುಗಾಡಲು ಸಾಧ್ಯವಿಲ್ಲ. ಅಷ್ಟು ಗಣಿ ಧೂಳು ತುಂಬಿದೆ.
ಗುಲಬರ್ಗಾ ಜಿಲ್ಲೆಯ ನೆಲದಲ್ಲಿ ಸಿಗುವ ‘ಪರಸೆ’ ಕಲ್ಲು (ಸಿಮೆಂಟ್), ಇಳಕಲ್ಲನಲ್ಲಿ ಸಿಗುವ ಗ್ರ್ಯಾನೆಟ್ ಕಲ್ಲು, ಬಳ್ಳಾರಿಯ ಕಬ್ಬಿಣದ ಅದಿರು ಹೀಗೆ ಈ ಭಾಗದಲ್ಲಿ ಪ್ರಾಕೃತಿಕ ಸಂಪತ್ತು ಬೇಕಾದಷ್ಟಿದೆ. ಉದ್ದಿಮೆ ಸ್ಥಾಪಿಸುವವರು ಯಾರು? ಹೊರಗಿನವರು. ಗುಲಬರ್ಗಾದ ತೊಗರಿ, ರಾಯಚೂರಿನ ಭತ್ತ, ಬಾಗಲಕೋಟೆಯ ಹತ್ತಿ, ಗದಗಿನ ಮೆಣಸಿನಕಾಯಿ, ಸಂಡೂರಿನ, ಹುಬ್ಬಳ್ಳಿಯ ಉಳ್ಳಾಗಡ್ಡೆ, ಬೆಳಗಾವಿಯ ಕಬ್ಬು ಹೀಗೆ ಭೂಮಿಯ ವ್ಯವಸಾಯದಿಂದ ಬೇಕಾದಷ್ಟು ಉತ್ಪನ್ನವಿದೆ. ಆದರೆ ಅದನ್ನು ನಿರ್ವಹಿಸುವ ದಲ್ಲಾಳಿಗಳು ಶ್ರೀಮಂತರಾಗುತ್ತಾರೆ. ಭೂಮಿ ಇರುವ ರೈತರು ಸಾಯುತ್ತಾರೆ. ದುಡಿದವರು ನಗರಗಳಿಗೆ ವಲಸೆ ಹೋಗುತ್ತಾರೆ. ಆಯಾ ಜಿಲ್ಲೆಗಳಲ್ಲಿರುವ ನೈರ್ಸಗಿಕ ಸಂಪತ್ತನ್ನು ಉದ್ಯಮಿಗಳು ಅಕ್ಷರಶಃ ಕೊಳ್ಳೆ ಹೊಡೆಯುತ್ತಿದ್ದಾರೆ. ಗಣಿಗಾರಿಕೆ ರಾಷ್ಟ್ರೀಕರಣವಾಗಬೇಕು ಎಂಬ ಹೋರಾಟ ಯಾರಿಂದಲೂ ಹುಟ್ಟಿ ನಡೆಯಲಾರದಂಥ ಸ್ಥಿತಿಯಿದೆ. ಸ್ಥಳೀಯವಾಗಿದ್ದ ಗುಡಿ ಕೈಗಾರಿಕೆಗಳು ನಾಶವಾಗಿ ಹೋಗಿವೆ. ಕಸುಬುದಾರರು ತಮ್ಮ ಮೂಲ ಕಸುಬನ್ನು ಮರೆಯುವಂತೆ ಜಾಗತೀಕರಣ ಬೆಳೆದಿದೆ.
ಉತ್ತರ ಕರ್ನಾಟಕದ ಅನೇಕ ಜಿಲ್ಲೆ, ತಾಲೂಕುಗಳು ಸಾಂಸ್ಕೃತಿವಾಗಿ ಮಹತ್ವ ಪಡೆದಿವೆ. ತುಂಬ ಜನಪ್ರಿಯವಾಗಿರುವ ಹಂಪೆ, ಬದಾಮಿ, ಪಟ್ಟದಕಲ್ಲು, ಐಹೊಳೆ, ವಿಜಾಪುರ, ಬೀದರ್ ಸ್ಥಳಗಳು ಪ್ರವಾಸೋದ್ಯಮ ನಕ್ಷೆಗಳಲ್ಲಿ ಕಾಣುತ್ತವೆ. ರಾಜರ ಆಳ್ವಿಕೆಯಿಂದ ದೇವಾಲಯಗಳು, ಗುಹೆಗಳು ವಾಸ್ತುಶಿಲ್ಪ, ಕಲ್ಲಿನ ಕಟ್ಟಡಗಳು ನಿರ್ಮಾಣವಾಗಿವೆ. ಆದರೆ ನಿಸರ್ಗ ನಿರ್ಮಿತ ಸ್ಥಳಗಳ ಪರಿಚಯ ಹೊರಗಿನವರಿಗಿಲ್ಲ. ಬಹಳ ಮುಖ್ಯ ಎಂದು ಕರೆಯುವ ಸ್ಥಳಗಳಲ್ಲಿ ಪ್ರವಾಸಿಗರಿಗೆ ಅನುಕೂಲಗಳನ್ನು ಪ್ರವಾಸೋದ್ಯಮ ಇಲಾಖೆ ಮಾಡಿಲ್ಲ. ವಸತಿ ಸೌಕರ್ಯ ಇದ್ದರೂ ಬಿಳಿ ಆನೆಯಾಗಿವೆ. ಮೇಲ್ಮಧ್ಯಮ ವರ್ಗದವರಿಗೂ ಕೈಗೆ ನಿಲುಕದ ಹಾಗೆ ಬೆಲೆಗಳನ್ನಿಟ್ಟಿರುತ್ತಾರೆ. `ಮಯೂರ’ಎಂದು ಕರೆಯುವ ಪ್ರವಾಸೋದ್ಯಮ ಹೋಟೆಲುಗಳಲ್ಲಿ ಎಲ್ಲವೂ ದುಬಾರಿ. ಆದರೆ ವ್ಯವಸ್ಥೆ ಮಾತ್ರ ಅತಿ ಸಾಧಾರಣ. ಬಳ್ಳಾರಿ ಬಿಸಿಲಿಗೆ, ಜೈಲಿಗೆ, ಸರ್ಕಾರಿ ನೌಕರರ ಶಿಕ್ಷೆಗೆ ಗುರಿಮಾಡಲು ವರ್ಗಾವಣೆಗೆ ಇಂಥದಕ್ಕೆ ಹೆಸರುವಾಸಿಯಾಗಿದೆಯಷ್ಟೆ. ಆದರೆ ಹೊಸಪೇಟೆ, ಸಂಡೂರು, ಹಡಗಲಿ, ಹರಪನಹಳ್ಳಿ, ಮುಂಡರಗಿ, ಮೊಳಕಾಲ್ಮೂರು, ಆನೆಗುಂದಿ ಮುಂತಾದ ಊರುಗಳ ಸರಹದ್ದುಗಳಲ್ಲಿ ಮನತಣಿಯುವ ನಿಸರ್ಗ ತಾಣಗಳಿವೆ. ಸಂಡೂರು ತಾಲೂಕಿನಲ್ಲಿರುವ ನರಸಿಂಗಾಪುರ, ತಾರಾನಗರ, ನವಲಟ್ಟಿ, ಉಬ್ಬಲಗುಂಡಿ, ನಾರಾಯಣಪುರ, ರಾಜಾಪುರ, ದೇವಗಿರಿ, ನಂದಿಹಳ್ಳಿ, ಯಶವಂತನಗರ, ಬಂಡ್ರಿ ಮುಂತಾದ ಗ್ರಾಮಗಳು ಕಣಿವೆ, ಬೆಟ್ಟಗಳಿಂದ, ನೀರಿನ ಝರಿಗಳಿಂದ ಮನಸೆಳೆಯುತ್ತವೆ. ನಾರಿಹಳ್ಳಿ, ನಂದಿಹಳ್ಳಿ (ಕುಮಾರಸ್ವಾಮಿ ದೇವಸ್ಥಾನ) ಸುಂದರ ತಾಣಗಳಾಗಿದ್ದವು. ಆದರೆ ಗಣಿಗಾರಿಕೆಯಿಂದ ಈ ಸುಂದರ ನಿಸರ್ಗ, ಊರು, ಹೊಲಗಳಲ್ಲಿನ ವ್ಯವಸಾಯ ಹದಗೆಟ್ಟು ಹೋಗಿದೆ. ಯಾವ ಬೆಳೆಯೇ ಆಗಲಿ, ಬೆಳೆಯುತ್ತಿದ್ದಂತೆ ಧೂಳು ಅಡರಿ ಮುಚ್ಚಿ ಹೋಗುತ್ತವೆ. ಊರಿನ ರಸ್ತೆಗಳಲ್ಲಿ ಧೂಳು ಅಡರಬಾರದೆಂದು ಹಗಲು ನೀರು ಹಾಕುತ್ತಾರೆ. ಯಾವಾಗಲೂ ರೊಚ್ಚೆಯಲ್ಲಿ ತಿರುಗಾಡಬೇಕು. ಹಳ್ಳಿಗಳಲ್ಲಿ ಗಿಡಮರಗಳ ಮರ್ಮರ, ನೀರಿನ ಜುಳುಜುಳು ಶಬ್ದ ಕೇಳಿದ್ದ ಜನ ಈಗ ಸ್ಫೋಟಕಗಳ ಸಿಡಿಯುವ ಶಬ್ದ, ಲಾರಿಗಳ ನಿರಂತರ ಶಬ್ದ ಕೇಳಬೇಕು. ಪಶು, ಪಕ್ಷಿ, ಪ್ರಾಣಿ, ವನ್ಯಜೀವಿಗಳು ಅಲೆದಾಡುವಂತೆ ಈಗ ಗುಡ್ಡಗಳಲ್ಲಿ ಲಾರಿ, ಜೀಪುಗಳು ತಿರುಗಾಡುತ್ತವೆ. ಬಳ್ಳಾರಿ, ಹೊಸಪೇಟೆಗಳೂ ಧೂಳಿನಿಂದ ವಿಕಾರಗೊಂಡಿವೆ. ಜನರ ಬದುಕನ್ನು ಕೆಡಿಸಿರುವ ಈ ಗಣಿಗಾರಿಕೆಯು, ಪುನಃ ಸ್ಥಾಪಿಸಲಾರದ ಸ್ಥಿತಿಗೆ ಊರು, ನಿಸರ್ಗ, ಜನರನ್ನು ಪ್ರಾಣಿಸಂಕುಲ, ಪಕ್ಷಿ ಸಂಕುಲವನ್ನು ನಾಶಮಾಡುತ್ತಿದೆ. ಗಣಿಮಾಲೀಕರು ಚುನಾವಣೆಗೆ ನಿಂತು, ಪ್ರಜಾಶಕ್ತಿಯನ್ನು ನೋಟಿನಿಂದ ಕೊಂಡು, ರಾಜ್ಯದ ರಾಜಕೀಯ ಪಾವಿತ್ರ್ಯವನ್ನೇ ನಾಶಮಾಡಿದ್ದಾರೆ. ಗುಲಬರ್ಗಾ ಜಿಲ್ಲೆಯ ಒಣ ಬೇಸಾಯದಿಂದ ಜನ ಹೇಗೋ ಬದುಕುತ್ತಿದ್ದರು. ನೆಲದಲ್ಲಿ ಸಿಗುವ ಸಿಮೆಂಟಿನ ಕಚ್ಚಾವಸ್ತು ಶಾಬಾದಿ ಪರಸೆ ಕಲ್ಲುಗಳ ಗಣಿಯಿಂದ ಶಹಾಬಾದ್, ಸೇಡಂ, ತಾಂಡೂರು ತಾಲೂಕುಗಳೂ ಸಿಮೆಂಟಿನ ಧೂಳಿನಿಂದ ಮುಳುಗಿವೆ. ಇಲ್ಲಿನ ಉದ್ದಿಮೆದಾರರು ತಮ್ಮ ಬಂಡವಾಳ ಹೆಚ್ಚಿಸಿಕೊಂಡಿದ್ದಾರೆ. ಆದರೆ ಜನರ ಜೀವನಮಟ್ಟ ಕುಸಿದು ಹೋಗುವಂತೆ ಮಾಡಿದ್ದಾರೆ. ಇಲ್ಲಿನ ಉದ್ದಿಮೆದಾರರು ಬಳ್ಳಾರಿ ಗಣಿಧಣಿಗಳ ಹಾಗೆ ರಾಜಕೀಯವನ್ನು ಪ್ರವೇಶಿಸಿ ರಾಜ್ಯವನ್ನು ಹದಗೆಡಿಸಿಲ್ಲ ಅಷ್ಟೇ. ಬೀದರಿನ ಕೋಟೆ, ಕೋಟೆಯ ಕೆಳಗಿರುವ ಅಷ್ಟೂರಿನ ಗೋರಿಗಳನ್ನು ನೋಡಿದರೆ ಖುಷಿಯಾಗುತ್ತದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಜಲದುರ್ಗವು ಕೃಷ್ಣಾನದಿ ಎರಡಾಗುವ ಸ್ಥಳ. ನಡುಗಡ್ಡೆಯಾಗಿ ಭೀಕರವಾಗಿ, ರಮ್ಯವಾಗಿ ಮನಸೆಳೆಯುತ್ತದೆ. ಕೃಷ್ಣಾನದಿ ಹಾಗೇ ಮುಂದೆ ಹರಿಯುತ್ತ ಬರೀ ಗುಡ್ಡಬೆಟ್ಟಗಳಲ್ಲಿ, ಕಣಿವೆಯಾಗಿ ಹರಿದು ತಿಂತಿಣಿ, ದೇವದುರ್ಗ, ದೇವಸೂಗೂರು, ಅಲ್ಲಿಂದ ಕೆಳಗೆ ನಾರದದಗಡ್ಡೆ ಮುಂತಾದ ಮೂರು ನಾಲ್ಕು ನಡುಗಡ್ಡೆಗಳನ್ನು  ನಿರ್ಮಿಸಿದೆ. ಜಲದುರ್ಗಾದ ಸಮೀಪ ಛಾಯಾಭಗವತಿಯಿದೆ. ಬಸವಸಾಗರ ಅಣೆಕಟ್ಟು ಇದೆ. ಮುದಗಲ್ಲಿನ ಕೋಟೆಯಿದೆ. ಕೊಡೇಕಲ್ಲು ಇದೆ. ಮೊಗಲರ ಸಮಾಧಿಗಳಿರುವ ದಿಗ್ಗಿ ಗ್ರಾಮ ಇದೆ. ಇವು ಐತಿಹಾಸಿಕ ಕುರುಹುಗಳಾಗಿ ನಿಂತಿವೆ. ಆದರೆ ಸರ್ಕಾರ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗಾಗಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಹುಬ್ಬಳ್ಳಿಯಿಂದ ಬೆಳಗಾವಿಗೆ ರೈಲಿನಲ್ಲಿ ಪ್ರಯಾಣಿಸಿದರೆ ಸುಖಕರ ಅನುಭವ ಆಗುತ್ತದೆ. ಎಡ-ಬಲ ಕಾಡು, ನಡುವೆ ಅಲ್ಲಲ್ಲಿ ಊರು, ವ್ಯವಸಾಯದ ಹೊಲಗಳು ಕಣ್ಣಿಗೆ ಹಬ್ಬ ನೀಡುತ್ತದೆ.
ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಲ್ಲಿ ಉ.ಕ. ಬೆಳಗಾವಿ, ಧಾರವಾಡ, ಬಿಟ್ಟರೆ, ಬಾಗಲಕೋಟೆ, ವಿಜಾಪುರ, ಗದಗ, ಕೊಪ್ಪಳ, ರಾಯಚೂರು, ಗುಲಬರ್ಗಾ ಮತ್ತು ಬೀದರ್ , ಈ ಏಳು ಜಿಲ್ಲೆಗಳು ಸಾಂಸ್ಕೃತಿಕವಾಗಿ ಶ್ರೀಮಂತವಾಗಿವೆ. ಆರ್ಥಿಕವಾಗಿ ಹಿಂದುಳಿದಿವೆ. ನೈರ್ಸಗಿಕ ಸಂಪತ್ತಿದೆ. ಅದು ಬಂಡವಾಳ ಹೂಡುವವರಿಂದ ಲೂಟಿಯಾಗುತ್ತಿದೆ. ಜನರಿಗೆ ವಿದ್ಯಾವಂತರಾಗಿ, ರಾಜಕೀಯ ಪ್ರಜ್ಞೆ ಪಡೆಯಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಯಾಗದೇ ಇರುವುದು. ತಾಂತ್ರಿಕ ಶಿಕ್ಷಣ ಕಲಿಯಲು ದಾರಿಯಾಗುವ ಪಿ.ಯು.ಸಿ. ಪದವಿಯನ್ನು ವಿಜ್ಞಾನದಲ್ಲಿ ಕಲಿಯಲು ಕಾಲೇಜುಗಳ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ಸರ್ಕಾರಿ ಪದವಿಪೂರ್ವ ವಿಜ್ಞಾನ ಕಾಲೇಜುಗಳ ಸಂಖ್ಯೆ ತೀರಾ ಕಮ್ಮಿಯಿದೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಾಗುವ ಸೂಚನೆಗಳೂ ಕೂಡ ಕಾಣಿಸುತ್ತಿಲ್ಲ.

ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.
(ಚಿತ್ರಕೃಪೆ: ವಿಕಿಪೀಡಿಯ ಮತ್ತು ಇತರೆ ಅಂತರ್ಜಾಲ ಮೂಲಗಳು.)

ಮಂಗಳವಾರ, ಸೆಪ್ಟೆಂಬರ್ 9, 2014

U R Ananthamurthy: Writer, Iconoclast, Public Intellectual

-M S Prabhakara

Courtesy:EPW


U R Ananthamurthy (1932-2014) was the quintessential public intellectual, combative on matters of public interest and unafraid to run counter to popular opinion and prejudices. He won the admiration of many and the hatred of regressive forces and one suspects the latter would have pleased him. His most lasting legacy was in focusing public attention on the perils of political Hindutva.
M S Prabhakara (kamaroopi@gmail.com), a long-time contributor to EPW, was a member of the editorial staff of the journal from the mid-1970s to the early-1980s and later with The Hindu. He now lives in Kolara, Karnataka.
Udupi Rajagopalacharya Ananthamurthy (1932-2014), URA for short, died in the fullness of his years on 22 August, bearing with fortitude and quiet stoicism the severe pain and discomfort of several chronic illnesses during the last few years of his life. He also remained intellectually alive and active till almost the very end.
Born in a village near Tirthahalli in Shimoga district on 21 December 1932, URA had his initial education in a village school nearby, and later in Tirthahalli and Mysore. He got his BA (Honours) degree (1955 and 1956) and MA degree (1957) in English language and literature from Maharaja’s College, Mysore. Later, while working as a college teacher, he secured a PhD from Birmingham University (1966) where he studied under a Commonwealth grant. He followed the usual career trajectory of many English teachers of his generation in the old Mysore state starting as a lecturer in English in an undergraduate college in (if I am not mistaken) Hasana and in due course, after working in one or two other colleges, returned to his alma mater, Maharaja’s College, as an English teacher. Later, he joined the postgraduate department of English, which for long had been located along with other postgraduate humanities faculties in Maharaja’s College, to Manasagangotri, the centre for all postgraduate teaching and research of Mysore University.
Literary Ambitions
This is only my surmise, but probably URA had from a very early age set his heart on becoming a writer, a published author, an aspiration and ambition nursed by many young persons of that generation belonging to a certain class and caste and exposed to reading and literature. This goal became more firmly set as he became an English teacher, a profession and a calling that many other English teachers/Kannada writers of earlier generations had followed. Modern Kannada has a thriving and lively tradition of creative writing, though there was (and is) little money in being a full-time writer. For many writers of that generation, barring perhaps Shivarama Karantha, though he too ran a printing press to earn some money (and print his books), writing was more a “secondary vocation”, if one is permitted that unusual expression, vocation being closer to an almost mystical calling requiring from a person who receives such a call, total and undivided commitment, not something that could be combined with a full-time or part-time job. Many of these young would-be writers merely nursed dreams of writing and getting published. The more productive and successful ones were often (though not always) teachers of literature, English or Kannada, hoping to combine writing with teaching, though in that process the semi-creative grind and routine of teaching, especially teaching literature, exhausted and finally destroyed their creative energies and they ended up being poor teachers and worse writers. The exceptions were the fortunate few who one can count on one’s fingers.
Like so many other young persons of his generation, and indeed of every earlier and subsequent generation, URA had literary ambitions and, as he has recorded, began to write even while at school. It was however only after he became a full-time student of English literature that these impulses took a clearer shape and direction. Unlike some students of English literature who want to write in English, URA chose to write in Kannada, though I remember to have read or heard somewhere that he too tried to write stories in English. In the event, he became one of the most popular and successful Kannada writers of this generation, in addition to becoming one of the most controversial polemicists and public intellectuals of the state.
Indeed, URA combined many careers and callings in his long life: a student and a teacher, a distinguished academic retiring as professor of English at Mysore University who served as the vice chancellor of the Mahatma Gandhi University in Kottayam, Kerala, head of many cultural institutions like the Sahitya Akademi, the Film and Television Institute of India, Pune, the National Book Trust, recipient of several national and state honours and awards: Padmabhushan, president of the Sahitya Akademi, fellowship of the Sahitya Akademi, Jnanapeetha award, the Karnataka Rajyotsava award, Basaveshwara Prashasti. He was a visiting professor at many Indian and foreign universities, travelling and lecturing widely inside the country and abroad.
URA was a succesful and popular creative writer who never stopped writing, his main calling, though much of what he published in his later years comprised transcriptions by his admirers of what he spoke in meetings – a book release function, Kannada translations of his polemical intervention published in an English newspaper as part of his attempt to reach a larger readership. His writings covered many genres: short story, novel, poems, literary and social criticism. He was a regular columnist, maintained a blog and edited a journal.
Combative Public Intellectual
Above all, he became the quintessential public intellectual, indefatigable and combative in his interventions on what he thought were matters of public interest, unafraid, indeed eager and ready, to run counter to popular opinion and prejudices, indifferent to the hostility he provoked in certain quarters, indifferent even to the inconsistencies in his own opinions for nothing was static in public discourse, always ready to fight the battle for what he thought was the good cause, unafraid to be alone, believing in the dictum: Thou shalt not follow a multitude to do evil.
Hated by the Regressive
When he died, he was accorded a state funeral, recognition of his achievement in several spheres of intellectual activity. The funeral rituals, interestingly, were performed in full accordance with the prescribed traditional practices of the Madhwa brahmans, the community into which URA was born. Following his own preference expressed to his son, the body was cremated in a funeral pyre instead of being taken to an electric crematorium. Fifteen Madhwa brahmans conducted the ceremonies. Some of the minutiae of these rites broadcast live by the 24×7 TV channels were extravagantly macabre, almost gothic, though in his public persona URA had repudiated all symbols of brahmanism of every kind and denomination.
Being a state funeral, the ceremonies were attended by the top political leadership of the state across the other divides, with the chief minister, a great admirer of URA, present with several of his cabinet colleagues. Reading these reports in the newspapers the following morning (I do not have a TV set), one could not but see the ironies of the funeral, a version of the moral and ethical questions raised by URA in his first and in many ways his most well-known novel, Samskara, that deals with the “problem” of how the body of a “lapsed” brahmana who defied and broke every code of brahmanical practices should be disposed, and since he had no family or heirs, who should do this job. This situation became the focal point to question and challenge traditional brahmana and brahmanical values and practices; and the novel was the beginning of URA’s reputation/notoriety as anti-brahmana and indeed anti-Hindu. The funeral rites – followed as part of his own final samskara, apparently observed to the letter under his specific instructions – are unlikely to put paid to this undeserved and unearned reputation/notoriety.
Notwithstanding these inconsistencies which he sometimes made a virtue of, URA received abundantly of the love and admiration of his readers, his students and, rather hard to secure, the admiration and affection of even many of his peers. Writers and intellectuals, it is needless to add, are usually not very generous towards their peers. He also received, and I would like to believe that this would have pleased him, though by then he was beyond praise or blame, the renewed animosity and hatred of the regressive forces and individuals in Karnataka who burst crackers and danced in joy when news came that URA had died.
Political Hindutva
As in his life, in his death and its aftermath, URA was not free from controversies. His creative work, especially novels beginning with Samskara, was controversial, provocative. It is true, issues of caste prejudice and untouchability have been dealt with great sensitivity and passion by other Kannada writers before him; but he brought an element of contemporaneity, direct engagement and confrontation to them in some of his novels.
Beyond his literary attainments and honours, for me, one of the most enduring of URA’s legacies is his bringing to the foreground in public discourse the perils posed by the dominant and presently triumphalist ideology of political Hindutva. For long, the general political consensus in the state was that because of the unique and peculiar caste/class mix, political Hindutva will always remain merely a fringe force. The political and social forces released during and after the Emergency of 1975-77 and the formation of the Janata Party government in which leading lights of the Rashtriya Swayamsevak Sangh (RSS) became leading members of the union government holding office and power in Delhi and several states put paid to this comforting illusion. The Hindutva forces, never mind under what name they masquerade in parliamentary politics, have over the years built and consolidated a vastly expanded and diversified social base, and are entrenched, as at the national level, as either the natural party of government or the natural party of opposition.
URA, despite all his inconstancies and political vacillations, recognised the nub of the political and social crisis in Karnataka, the consolidation of the Hindutva forces. One is not sure how well he succeeded in driving home the dangers beyond those who were already opponents of the Hindutva ideology. And yet, one is grateful for the role he has played in highlighting the perils of such divisive ideologies.

ಜಗತ್ತಿನ ಕಲ್ಯಾಣಕ್ಕಾಗಿ ಪತ್ರಿಕೋದ್ಯಮ ಬಳಸಬೇಕು




-ಸುಗತ ಶ್ರೀನಿವಾಸರಾಜು



ಪತ್ರಕರ್ತರಾದವರಿಗೆ ಸಾಮಾಜಿಕ ಜವಾಬ್ದಾರಿ ಇದೆಯೇ? ಇರಬೇಕೇ?  ಎನ್ನುವ ಪ್ರಶ್ನೆ ಇಂದಿನ ದಿನಗಳಲ್ಲಿ ಪ್ರಸ್ತುತ ಎನಿಸುತ್ತದೆ. ಹೀಗಾದಾಗ ಪತ್ರಕರ್ತರು ಯಾವ ಸಮಾಜದ ಬಗ್ಗೆ ಜವಾಬ್ದಾರಿ ಹೊಂದಿರಬೇಕು ಎನ್ನುವ ಪ್ರಶ್ನೆ ಬರುತ್ತದೆ. ಜಾತಿ ಧರ್ಮ ತಿಳಿಹೇಳುವ ಸಮಾಜದ ಜವಾಬ್ದಾರಿ ಮುಖ್ಯವಾ? ಆದರ್ಶದ ಸಮಾಜ ಮುಖ್ಯವಾ? ವ್ಯಕ್ತಿಯೇ ಸಮಾಜವಾಗುವ ಒಂದು ಸಮಾಜದ ಕಲ್ಪನೆ ಮುಖ್ಯವೋ? ಮಾರುಕಟ್ಟೆ ಕಲಿಸುವ ವ್ಯಕ್ತಿ ಕೇಂದ್ರಿತ ಸಮಾಜದ ರಕ್ಷಣೆಗೆ ಬದ್ಧರಾಗಿರಬೇಕಾ? ಎನ್ನುವುದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ.

  ಜಗತ್ತಿನ ಕಲ್ಯಾಣಕ್ಕಾಗಿ ಪತ್ರಿಕೋದ್ಯಮ ಬಳಸಬೇಕು ಎಂದು ಎಚ್.ವೈ. ಶಾರದಾಪ್ರಸಾದ್ ಹೇಳುತ್ತಿದ್ದರು. ಜಗತ್ತಿನ ಕಲ್ಯಾಣದ ಎಚ್ಚರ ವಹಿಸದೇ ಹೋದಲ್ಲಿ ದೊಡ್ಡ ಅಪಾಯ ಉಂಟಾಗುತ್ತದೆ. ಪತ್ರಿಕೋದ್ಯೋಗದ ಸಂಸ್ಥೆಗೇ ಧಕ್ಕೆಯಾಗುತ್ತದೆ. ಹೀಗಾಗಿ, ವಿಶ್ವಾಸಾರ್ಹತೆಯ ಸುತ್ತ ಕ್ಷೇತ್ರವನ್ನು ಉಳಿಸಿಕೊಳ್ಳುವ ಯೋಚನೆಯನ್ನು ಪತ್ರಕರ್ತರು ಸದಾ ಮಾಡುತ್ತಿರಬೇಕು. ಈ ನಿಟ್ಟಿಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ದಿನವನ್ನಾಗಿ ಪತ್ರಿಕಾ ದಿನವನ್ನು ಅಚರಿಸಬೇಕು.

  ‘ಜರ್ನಲಿಸಂ ಎನ್ನುವುದನ್ನು ಹಿಂದಿನಿಂದಲೂ ಪತ್ರಿಕೋದ್ಯಮ ಎಂದು ಕರೆಯಲಾಗಿದೆ. ಇದು ಅಚ್ಚರಿಯ ಸಂಗತಿ. ಪತ್ರಿಕಾ ಉದ್ಯೋಗ ಎಂದು ನಾನು ಕರೆಯುತ್ತೇನೆ. ಉದ್ಯೋಗವಾಗಿ ಉಳಿಯಬೇಕಾದದ್ದು ತುಂಬಾ ಜನಕ್ಕೆ ಉದ್ಯಮವಾಗಿ ಹೋಗಿದೆ. ನಾವು ಮಾಡುತ್ತಿರುವುದು ಉದ್ಯೋಗವೋ, ಉದ್ಯಮವೋ ಎನ್ನುವ ಪ್ರಶ್ನೆಯನ್ನು ಪತ್ರಕರ್ತರು ಕೇಳಿಕೊಳ್ಳಬೇಕು. ಸಮಾಜವನ್ನು ವಿಶಾಲವಾದ ತಳಹದಿಯಲ್ಲಿ ವ್ಯಾಖ್ಯಾನ ಮಾಡಿಕೊಳ್ಳಬೇಕು. ಬಹುಜನರ ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಎಚ್ಚರದಲ್ಲಿರಬೇಕು. ಒಂದು ಜಾತಿ, ಧರ್ಮ, ಸಮಾಜಕ್ಕಾಗಿ ಕೆಲಸ ಮಾಡುವ ಚಟ ಬೆಳೆಸಿಕೊಂಡರೆ ಜನರ ವಿಶ್ವಾಸ ಉಳಿಸಿಕೊಳ್ಳಲಾಗದು. ಉದ್ಯೋಗದ ಪಾವಿತ್ರ್ಯತೆ ಉಳಿಸಿಕೊಳ್ಳದಿದ್ದಲ್ಲಿ ಜನರ ವಿಶ್ವಾಸ ಕಳೆದುಕೊಳ್ಳುತ್ತೇವೆ. ಜನರ ವಿಶ್ವಾಸ ಕಳೆದುಕೊಂಡರೆ ಆ ಉದ್ಯೋಗ ನಮಗೆ ನಾಳೆ ಅನ್ನ ಕೊಡುವುದಿಲ್ಲ ಎನ್ನುವ ಎಚ್ಚರಿಕೆ ಪತ್ರಕರ್ತರಿಗೆ ಸದಾ ಇರಬೇಕು.

  ಯಾವುದೇ ವಿಷಯ ಸಂಕುಚಿತ ಮನೋಭಾವದಲ್ಲಿ ನೋಡುವ ಬದಲಿಗೆ ವಿಶಾಲತೆ ಎತ್ತಿಹಿಡಿಯಲು ಪ್ರಯತ್ನಿಸಿದಾಗ ವೈವಿಧ್ಯತೆಯುಳ್ಳ ದೇಶದ ಬಹುಜನರ ಸಮಾಜಕ್ಕೆ ಅರ್ಥ ಬರುತ್ತದೆ. ಅದ್ಭುತ ಪಠ್ಯವಾದ ಸಂವಿಧಾನ ಪಾಲನೆಯಷ್ಟೇ ಮುಖ್ಯವಾಗಬೇಕು. ರಾಷ್ಟ್ರೀಯ ಹಿತಾಸಕ್ತಿ ಹೆಸರಿನಲ್ಲಿಯೂ ಬಂಧಿಸಿಡುವ ಕೆಲಸಗಳು ನಡೆಯುತ್ತಿರುತ್ತವೆ. ಇದರ ಬಗ್ಗೆಯೂ ಪತ್ರಕರ್ತರು ಎಚ್ಚರಿಕೆ ವಹಿಸಬೇಕು.


ಕೊರಗ ಸಮುದಾಯದ ಚಿತ್ರಗಳು -ಭಾಗ 8

ಆಮೆ ಸಿಕ್ಕಿತೆಂದರೆ ಆ ದಿನ ಹಬ್ಬದೂಟ!
ಕೊರಗರು ಆಮೆ ಬೇಟೆಯಲ್ಲಿಯೂ ಭಾರೀ ಪರಿಣತರು. ಆಮೆಯ ಹೆಜ್ಜೆ ಜಾಡು ಹಿಡಿದು, ಸಣ್ಣ ಸಣ್ಣ ಗುಹೆಯನ್ನು ತೆವಲಿಕೊಂಡು ಹೊಕ್ಕು ಬೇಟೆಯಾಡುವವರಿದ್ದಾರೆ. ಆಳ ನೀರಿನಲ್ಲಿ ಮುಳುಗಿ ಆಮೆ ಹಿಡಿಯುವವರು ಇದ್ದಾರೆ.
ಆಮೆ ಸಿಕ್ಕಿತೆಂದರೆ ಆ ದಿನ ಕೊರ್ರೆ ಕೊಟ್ಟ (ಕೊರಗರ ಮನೆ)ಯಲ್ಲಿ ಹಬ್ಬದ ಸಂಭ್ರಮ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ಅಜ್ಜನವರೆಗೂ ಪ್ರತಿಯೊಬ್ಬರೂ ಆಮೆಯನ್ನು ಮುಟ್ಟಿನೋಡಿ ಸಂಭ್ರಮಿಸುತ್ತಾರೆ. ಅದರ ತಲೆ ತುಂಡರಿಸಿ, ಹಸಿಬಿಸಿ ರಕ್ತ ಹೀರುತ್ತಾರೆ. ಚಿಪ್ಪುತೆಗೆದು ಮಾಂಸವನ್ನು ಹಸಿಹಸಿಯಾಗಿ ತಿನ್ನುವುದೂ ಇದೆ! ಅದರ ಪದಾರ್ಥ ಮಾಡಿ ಹಬ್ಬದೂಟ ಮಾಡುತ್ತಾರೆ. ಆ ದಿನದ ಖುಷಿಗೆ ಪಾರವೇ ಇಲ್ಲ.
ಆಮೆ ಪದಾರ್ಥ ಮಾಡಿದ ನಂತರ, ಅದರ ಗಟ್ಟಿಯಾದ ಬೆನ್ನಚಿಪ್ಪನ್ನು ತಮ್ಮ ಕೊಟ್ಟ(ಅಂದರೆ ಮನೆ ಎಂದು ಅರ್ಥ)ದ ಮಾಡಿಗೆ ಕಟ್ಟಿ ಜೋಪಾನವಾಗಿಡುತ್ತಾರೆ. ಜೋರು ಗುಡುಗು ಶುರುವಾಯಿತೆಂದರೆ ಆ ಚಿಪ್ಪನ್ನು ಬೆಂಕಿಯ ಒಲೆಗೆ ಹಾಕಿ ಕಾಯಿಸುತ್ತಾರೆ! ಅದರ ಕಟು ವಾಸನೆಗೆ ಗುಡುಗುರಾಯ ಬೆದರಿ ಓಡುತ್ತಾನೆಂಬ ಧೃಡ ನಂಬಿಕೆ ಕೊರಗರದ್ದು! ಆಗಲೂ ಈಗಲೂ!
- ಹೃದಯ
ಚಿತ್ರ ಕೃಪೆ : ಹರೀಶ. ಎಸ್. ಶಿರ್ವ
( ಕ್ಷಮೆ ಇರಲಿ...
ಈಗ ಕೊರಗರು ಆಮೆ ಬೇಟೆಯಾಡುವುದಿಲ್ಲ ಮತ್ತು ಆಮೆ ಬೇಟೆ ಕಾನೂನು ರೀತಿಯ ಅಪರಾಧವಾಗುತ್ತದೆ.)


ಚಿನ್ನವನ್ನೇ ಆಭರಣವನ್ನಾಗಿ ಧರಿಸುವವರು ಆದಿವಾಸಿಗಳಿವರು!

(ಆದಿವಾಸಿಗಳ ವೈವಿಧ್ಯ: ಭಾಗ 3)
ಈಶಾನ್ಯ ಭಾರತದ 'ಸಿಕ್ಕಿಂ' ಎಂಬ ಸಂಪೂರ್ಣ ಆದಿವಾಸಿಗಳಿಂದ ಆವೃತ್ತವಾಗಿರವ 'ಹಸನ್ಮುಖಿಗಳ ರಾಜ್ಯ'ದಲ್ಲಿ (ಸದಾ ನಗುಮುಖವನ್ನೇ ಹೊತ್ತಿರುವವರೇ ಇಲ್ಲಿರುವುದು ಹೆಚ್ಚು) ವಿಶಿಷ್ಠ ಪರಂಪರೆ, ನಂಬಿಕೆ, ಆಚಾರ ವಿಚಾರಗಳನ್ನು ಹೊಂದಿರುವ ಬುಡಕಟ್ಟು ಪಂಗಡವೇ - 'ಭುಟಿಯಾ ಬುಡಕಟ್ಟು ಪಂಗಡ'.
ಬೌಧ ಮತಾವಲಂಬಿಯಾಗಿರುವ ಇವರು, ತಮ್ಮದೇ ಆದ 'ಭುಟಿಯಾ ಭಾಷೆ'ಯ ಜೊತೆಗೆ ಸಿಕ್ಕಿಂನ ಮತ್ತೊಂದು ಬುಡಕಟ್ಟು ಪಂಗಡವಾದ 'ಲೆಪ್ಚ ಆದಿವಾಸಿ'ಗಳ 'ಲೆಪ್ಚ ಭಾಷೆ'ಯನ್ನು ಕೂಡ ಮನೆ ಭಾಷೆಯಾಗಿ ಮಾತನಾಡುತ್ತಾರೆ. ವ್ಯವಹಾರಿಕವಾಗಿ ಹಿಂದಿ ಮತ್ತು ನೇಪಾಳಿ ಭಾಷೆಗಳನ್ನು ಮಾತನಾಡುತ್ತಾರೆ.
ಟಿಬೇಟಿಯನ್ನರಂತೆ ಕಾಣುವ ಇವರು ವಿಶಿಷ್ಠ ವೇಷಭೂಷಣದಿಂದ ಗಮನ ಸೆಳೆಯುತ್ತಾರೆ. ಸದಾ ಚಿನ್ನದ ಆಭರಣ ತೊಡುವ ಭಾರತದ ಕೆಲವೇ ಕೆಲವು ಬಡಕಟ್ಟು ಪಂಗಡಗಳಲ್ಲಿ ಇವರು ಕೂಡ ಒಬ್ಬರು. ಇಡೀ ಭಾರತದಲ್ಲಿ ಮಿಕ್ಕೆಲ್ಲಾ ಬುಡಕಟ್ಟು ಪಂಗಡಗಳು ಬಣ್ಣ ಬಣ್ಣದ ಮಣಿಸರಗಳನ್ನೇ ಆಭರಣವಾಗಿ ಧರಿಸಿದರೆ, ಭುಟಿಯಾ ಬುಡಕಟ್ಟು ಪಂಗಡದವರು ಮಾತ್ರ ತಮ್ಮ ಪರಂಪರಾಗತವಾಗಿ ಬಂದ ಚಿನ್ನವನ್ನೇ ಧರಿಸುತ್ತಾರೆ. ಹಲವು ತಲೆಮಾರುಗಳನ್ನು ಕಂಡ ಆ ಚಿನ್ನದ ಸರಗಳಲ್ಲಿ ಪ್ರಾಣಿಗಳ ಚಿತ್ರಗಳನ್ನು, ಮುದ್ರೆಗಳನ್ನು ಕಾಣಬಹುದು. ಇವರು ಯಾವುದೇ ಕಾರಣಕ್ಕೂ ಪರಂಪರಾಗತೆಯ ಧ್ಯೋತಕವಾಗಿರುವ ಚಿನ್ನವನ್ನು ಮಾರಾಟ ಮಾಡುವುದಿಲ್ಲ! ಮಹಿಳೆಯರು ಸಂಪ್ರದಾಯಕ ಕೈರಹಿತ ಉದ್ದನೆಯ ಬಟ್ಟೆಯನ್ನು ಧರಿಸಿದರೆ, ಪುರುಷರು ಉದ್ದ ತೋಲಿನ ನಿಲುವಂಗಿಯ ಜೊತೆಗೆ ಉದ್ದನೆಯ ಟೊಪ್ಪಿ ಧರಿಸುತ್ತಾರೆ. ಆ ರೀತಿಯ ಬಟ್ಟೆಗಳಿಗೆ 'ಬಕು' ಎನ್ನುತ್ತಾರೆ. ಇವರು ವಾಸಿಸುವ ತಗ್ಗು ಆಕಾರದ ಮನೆಗಳಿಗೆ 'ಕಿನ್' ಎನ್ನುತ್ತಾರೆ. ಇವರು ಯಾಕ್ ಮತ್ತು ಗೋಮಾಂಸ ಪ್ರೀಯರು. ಹೆಚ್ಚಿನ ಎಲ್ಲಾ ರೀತಿಯ ಕಾಡು ಹಣ್ಣುಗಳನ್ನೂ ಉಪ್ಪಿನಕಾಯಿಯಂತೆ ಉಪಯೋಗಿಸುತ್ತಾರೆ. ಕಾಡಿನಲ್ಲಿಯೇ 'ಚಾಂಗ್' ಎನ್ನುವ ಮಾದಕ ಪೇಯ (millet beer) ಉತ್ಪಾದಿಸುತ್ತಾರೆ. ಮೂಲತಃ ಇವರು ಕೃಷಿಕರು.
ಟಿಬೆಟಿಯನ್ನರು ಪೆಬ್ರವರಿ ಪ್ರಥಮವಾರದಲ್ಲಿ ಹೊಸ ವರ್ಷ ಆಚರಿಸುತ್ತಾರೆ. ಅದಕ್ಕೆ 'ಲೋಸರ್' ಹಬ್ಬ ಎನ್ನುತ್ತಾರೆ. ಆ ಹಬ್ಬವನ್ನು ಭುಟಿಯಾ ಬುಡಕಟ್ಟು ಪಂಗಡವೂ ಅದೇ ಹೆಸರಿನೊಂದಿಗೆ ಆಚರಿಸುತ್ತದೆ. 'ಲೂಸುಂಗ್' ಎಂಬ ಹಬ್ಬದ ಆಚರಣೆಯೂ ಇವರಲ್ಲಿದೆ.
ಭಾರತದ ಖ್ಯಾತ ಪುಟ್ ಬಾಲ್ ಆಟಗಾರ 'ಬೈಚುಂಗ್ ಭುಟಿಯಾ', ಭುಟಿಯಾ ಬುಡಕಟ್ಟು ಪಂಗಡದ ಮೇರು ಕ್ರೀಡಾ ಪ್ರತಿಭೆಯಾಗಿದ್ದಾರೆ.
- ಹೃದಯ

ಕೊರಗರ ಮನೆಯ ಬಾಗಿಲು ದಕ್ಷಿಣ ದಿಕ್ಕಿಗೆ ಯಾಕೆ?
ಕೊರಗರು ತಮ್ಮ ಕೊಟ್ಟ/ ಮನೆಯ ಬಾಗಿಲನ್ನು ದಕ್ಷಿಣ ದಿಕ್ಕಿನ ಕಡೆಗೆ ಇಡುತ್ತಾರೆ. ಕಾರಣ, ಕೊರಗರ ಕುಲದೈವ 'ತನಿಯ' (ಕೊರಗಜ್ಜ) ಹುಟ್ಟಿದ್ದು ದಕ್ಷಿಣದ 'ಬಾರ್ಕೂರು' ಎಂಬ ಊರಿನಲ್ಲಿ. ಅದು ಗುಡಿಸಲೇ ಆಗಿರಲಿ 'ತಟ್ಟಿ ಬಡಕಾಯಿಗ್ ದೀವೊಡು..' (ಬಾಗಿಲು ದಕ್ಷಿಣಕ್ಕೆ ಇಡಬೇಕು) ಎನ್ನುತ್ತಾರೆ ಹಿರಿಯರು. ಮಾತು, ಕೃತಿ ಮತ್ತು ಗೌರವದಲ್ಲಿಯೂ 'ಬಡಕಯಿ ಬಾರ್ಕೂರು'ಗೆ ಮೊದಲ ಪ್ರಾಸಸ್ತ್ಯ.
ಕೊರಗರಿಗೆ 'ವಾಸ್ತವ'ದ ಅರಿವಿದೆ. 'ವಾಸ್ತು'ವಿನದ್ದಲ್ಲ!
- ಹೃದಯ


ಅಪ್ರತಿಮ ಕೊಳಲು ವಾದಕ- ಬಡ್ಡ ಹರೀಶ ಕೊರಗ.
ಕೊರಗ ಸಮುದಾಯದ ಸಾಂಸ್ಕೃತಿಕ ಮತ್ತು ಮನೊರಂಜನಾತ್ಮಕ ಬದುಕಿನ ಅವಿಭಾಜ್ಯ ಅಂಗವಾಗಿರುವ 'ಕೊರಲ್' (ಕೊಳಲು)ಗೆ ಧ್ವನಿ ನೀಡುತ್ತಿರುವ ಅಪ್ರತಿಮ ಕೊಳಲು ವಾದಕ - ಬಡ್ಡ ಹರೀಶ ಕೊರಗ. ಮೂಲತಃ ಕಾರ್ಕಳ ತಾಲೂಕಿನ ಅತ್ತೂರಿನವರು. ಕೊರಗರ ಪಾರಂಪರಿಕ ಶೈಲಿಯ ಕೊರಲ್ ವಾದನದಲ್ಲಿ ಪಳಗಿದವರು. ಪ್ರಸ್ತುತ 'ಕೊರಲ್ ಕಲಾತಂಡ ಮಂಗಳೂರು' ಇದರ ಕೊಳಲು ಕಲಾವಿದರಾಗಿದ್ದು, ರಾಜ್ಯಾದ್ಯಂತ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ .
- ಹೃದಯ

ಕೊರಗ ಭಾಷೆ
ಕೊರಗರನ್ನು ಭಾಷೆಯ ಬಗ್ಗೆ ವಿಚಾರಿಸಿದರೆ ಅವರಿಗೆ ಕೋಪ ಬರುವುದು!!
ಕೊರಗ ಜನಾಂಗದವರು ತಮ್ಮ ತಮ್ಮ ಮನೆಗಳಲ್ಲಿ ಮಾತನಾಡುವ ಭಾಷೆಯನ್ನು ಆ ಜನಾಂಗದ ಹೆಸರಿನಿಂದಲೇ 'ಕೊರಗ ಭಾಷೆ' ಎಂದು ಕರೆಯಲಾಗುತ್ತದೆ. ಕೊರಗ ಭಾಷೆಯು ಡ್ರಾವಿಡ ಭಾಷಾ ವರ್ಗಕ್ಕೆ ಸೇರಿದುದಾಗಿದೆ. ಸರ್ವೇ ಸಾಮಾನ್ಯವಾಗಿ ಕೊರಗರು ದ್ವಿಭಾಷಿಗಳು ಹಾಗೂ ಮೂಡಣದ ಕೊರಗರು ಮಾತ್ರ ಬಹು ಭಾಷಿಗಳಾಗಿದ್ದಾರೆ. ಅಂದರೆ ಕೊರಗರು ವ್ಯವಹಾರಿಕ ಜೀವನದಲ್ಲಿ ತುಳು, ಕನ್ನಡವನ್ನು ಬಳಸುವರು. ಮನೆಯಲ್ಲಿ ತಮ್ಮದೇ ಆದ ಕೊರಗ ಭಾಷೆಯನ್ನು ಮಾತನಾಡುವವರು.
ಕೊರಗರು ತಮ್ಮ ಭಾಷೆಯನ್ನು ಇತರರಿಗೆ ಕಲಿಸುವುದಿಲ್ಲ. ಇತರರು ಕೊರಗರೊಂದಿಗೆ ಬೆರೆಯುವುದಿಲ್ಲ. ಹೀಗಾಗಿ ಕೊರಗರು ಬೇರೆ ಜನಾಂಗದವರೆದುರಿಗೆ ತಮ್ಮ ಭಾಷೆಯನ್ನಾಡುವುದಿಲ್ಲ. ಈ ವಿಷಯದಲ್ಲಿ ಕೊರಗರು ಸಂಕೋಚ ಸ್ವಭಾವದವರು. ಕೊರಗರನ್ನು ಅವರ ಭಾಷೆಯ ಬಗೆಗೆ ವಿಚಾರಿಸಿದರೆ ಅವರಿಗೆ ಬಹಳ ಕೋಪ ಬರುವುದೆಂದು ವಾಲೆ ಹೌಸ್ ಒಂದು ಶತಮಾನದ ಹಿಂದೆಯೇ ಬರೆದಿದ್ದಾರೆ. ಅಂಥ ಸಂದರ್ಭದಲ್ಲಿ ಕೊರಗನೊಬ್ಬನು ಬಹಳ ವಿಚಿತ್ರವಾಗಿ ವರ್ತಿಸುವನು ಎನ್ನುವುದು ವಾಲೆಹೌಸ್ ರವರ ಅನುಭವ. ಹೀಗಾಗಿ ತೀರಾ ಇತ್ತೀಚಿನವರೆಗೆ ಕೊರಗ ಭಾಷೆಯ ವೈಜ್ಞಾನಿಕ ಅಧ್ಯಯನ ಸಾಧ್ಯವಾಗಿರಲಿಲ್ಲ.
ಕೊರಗ ಭಾಷೆಯು ಭಾಷಾ ಪಂಡಿತರಿಗೆ ಸಂಶೋಧನೆಗೆ ಒಳ್ಳೆಯ ವಸ್ತುವಾಗಬಲ್ಲದು
ಕೊರಗರ ಭಾಷೆಯನ್ನು ಅನೇಕ ಉಪಭಾಷೆಗಳಾಗಿ ವರ್ಗೀಕರಿಸುವ ಪ್ರಯತ್ನವನ್ನು ಭೌಗೋಳಿಕ ಮತ್ತು ಸಾಮಾಜಿಕ ಅಂಶಗಳ ಆಧಾರದಲ್ಲಿ ನಡೆಸಲಾಗಿದೆ. ಡಾ. ಡಿ ಎಸ್ ಎನ್ ಭಟ್ರವರು ಪ್ರಕಟಿಸಿರುವ ಕೃತಿಯಲ್ಲಿ 'The Koraga Language' (1971) ಕೊರಗ ಭಾಷೆ ಮೂರು ಬಗೆಯ ಪ್ರಕಾರಗಳನ್ನು ಗುರುತಿಸಿ ಭಾಷಾಶಾಸ್ತ್ರದ ವೈಜ್ಙಾನಿಕ ನೆಲೆಯಲ್ಲಿ ಅಭ್ಯಸಿಸುವ ಪ್ರಯತ್ನ ನಡೆಸಿದ್ದಾರೆ. ಇದೊಂದೇ ಇದುವರೆಗೆ ನಡೆದಿರುವ ಕೊರಗ ಭಾಷೆ ಕುರಿತ ವೈಜ್ಙಾನಿಕ ಅಧ್ಯಯನ ಪ್ರಯತ್ನವಾಗಿದೆ.
ಕುಂದಾಪುರ ತಾಲ್ಲೂಕಿನ ಉತ್ತರ ಭಾಗದ ಕಾಡುಗಳಲ್ಲಿ ಮತ್ತು ಕಣಿವೆಯಂಥ ಪ್ರದೇಶ ಬೆಟ್ಟಗುಡ್ಡಗಳ ಇಳಿಜಾರು ಪ್ರದೇಶಗಳಲ್ಲಿ ವಾಸಿಸುವ ಕೊರಗರನ್ನು ಸಂಪರ್ಕಿಸಿ ಕ್ಷೇತ್ರ ಕಾರ್ಯ ನಡೆಸಿದರೆ, ಕೊರಗ ಭಾಷೆಯ ಇನ್ನೂ ಬೇರೆ ಬೇರೆ ಬಗೆಗಳು ಕಂಡು ಬರಬಹುದಾಗಿದೆ.
ಕೊರಗರು ದ್ವಿಭಾಷಿಗಳಾಗಿ ಸಾವಿರಾರು ವರ್ಷಗಳಿಂದಲೇ ಉಳಿದು ಬೆಳೆದು ಬಂದಿದ್ದಾರೆ. ಆದ್ದರಿಂದ ಕೊರಗ ಭಾಷೆಯ ಉಪ ಬಗೆಗಳ ಮೇಲೆ ದ್ರಾವಿಡ ಭಾಷೆಗಳಾದ ಕನ್ನಡ ಮತ್ತು ತುಳುವಿನ ಪ್ರಭಾವ ಗಾಢವಾದುದಾಗಿದೆ. ಪರಿಣಾಮವಾಗಿ ಕೊರಗ ಭಾಷೆಯ ಪದಸಂಪತ್ತಿನಲ್ಲಿ ಕೊರಗ, ಯಾವುದು ಕನ್ನಡ, ಯಾವುದು ತುಳು ಎಂದು ಗುರುತಿಸುವ ಕಾರ್ಯ ಬಹಳ ಸಂಕೀರ್ಣವಾದುದಾಗುವುದು. ಈ ಹಿನ್ನಲೆಯಲ್ಲಿ ಕೊರಗ ಭಾಷೆಯು ಪಂಡಿತರಿಗೆ, ಸಂಶೋಧನೆಗೆ ಒಳ್ಳೆಯ ವಸ್ತುವಾಗಬಲ್ಲುದಾಗಿದೆ.
ಕೊರಗ ಭಾಷೆಯು ಪದಸಂಪತ್ತಿನ ದೃಷ್ಠಿಯಿಂದ ದಕ್ಷಿಣ ಭಾರತದ ದ್ರಾವಿಡ ಭಾಷೆಗಳೊಂದಿಗೆ ಹೆಣೆದುಕೊಂಡಿದ್ದರೂ, ವ್ಯಾಕರಣದ ದೃಷ್ಠಿಯಿಂದ ಉತ್ತರ ದ್ರಾವಿಡ ಭಾಷಾ ವರ್ಗದೊಂದಿಗೆ (ಕುಡು, ಮಾಲ್ಟೋ, ಬ್ರಾಹುಯಿ) ಹೆಣೆದುಕೊಂಡಿದೆ. ಈ ಅಂಶವು ವಿಲಕ್ಷಣವಾಗಿ ಎದ್ದು ತೋರುವುದು.

ಕೊರಗ ಭಾಷೆಯು ತುಳುವಿನೊಂದಿಗೆ ಹೊಂದಿರುವ ಸಂಬಂಧ ಅಲ್ಪ
ಕೊರಗ ಭಾಷೆಯನ್ನು ಮೊತ್ತ ಮೊದಲಿಗೆ ಗುರುತಿಸಿ ಅಧ್ಯಯನ ಮಾಡಲೆತ್ನಿಸಿದವರು ಬ್ರಿಟಿಷ್ ಅಧಿಕಾರಿಗಳು. 19ನೇ ಶತಮಾನದ ಕೊನೆಯ ಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ಸಾವಿರದಷ್ಟು ಕೊರಗರು ಕೊರಗ ಭಾಷೆಯನ್ನಾಡುತ್ತಿದ್ದರು. ಜನಗಣತಿ ಅಧಿಕಾರಿಗಳು ಕ್ರಿ ಶ 1881ರಿಂದಲೂ ಕೊರಗ ಭಾಷೆಯನ್ನು ತುಳು ಭಾಷೆಯ ಉಪಭಾಷೆಯ ರೂಪವೆಂದೇ ಪರಿಗಣಿಸುತ್ತಿದ್ದಾರೆ. ಆದರೆ, ತೀರಾ ಇತ್ತೀಚೆಗೆ ಡಾ ಡಿ.ಎಸ್.ಎನ್ ಭಟ್ (1971ರಲ್ಲಿ) ಎಂಬವರು ನಡೆಸಿದ ಕ್ಷೇತ್ರಕಾರ್ಯ ಆಧರಿಸಿದ ಅಧ್ಯಯನದಿಂದ ಮೇಲ್ಕಂಡ ಅಭಿಪ್ರಾಯವನ್ನು ಬದಲಾಯಿಸಬೇಕಾಗುವುದು. ಡಾ. ಭಟ್ ರವರ ಅಧ್ಯಯನವು ಕೊರಗ ಭಾಷೆಯು ಸ್ವತಂತ್ರವಾದ ದ್ರಾವಿಡ ವರ್ಗದ ವಿಶಿಷ್ಟ ಭಾಷೆಯಾಗಿದ್ದು ಅದು ಮೂರು ಉಪಭಾಷಾ ಸ್ವರೂಪಗಳನ್ನು ತನ್ನ ಗರ್ಭದಲ್ಲಡಗಿಸಿಕೊಂಡಿದೆ. ಹಾಗು ಕೊರಗ ಭಾಷೆಯು ತುಳುವಿನೊಂದಿಗೆ ಹೊಂದಿರುವ ಸಂಬಂಧವು ಅಲ್ಪವೂ ಮತ್ತು ದೂರ ಸ್ವರೂಪದ್ದೂ ಆಗಿದೆ ಎನ್ನುವುದನ್ನು ಪ್ರತಿಪಾದಿಸಿದೆ.
ಕೊರಗ ಭಾಷೆಗೆ ಸ್ವತಂತ್ರ ಅಸ್ಥಿತ್ವವಿದೆ. ಅದು ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಪ್ರತ್ಯೇಕ ಲಿಪಿ ಇಲ್ಲದ ಭಾಷೆ. ಕೊರಗ ಭಾಷೆಯನ್ನು ಬರೆಯಲು ಬಳಸಲಾಗುತ್ತಿಲ್ಲ.

ಕೊರಗ ಭಾಷೆಯನ್ನು ಒಂದು ಸ್ವತಂತ್ರ ಡ್ರಾವಿಡ ಭಾಷೆಯಾಗಿಯೇ ಗುರುತಿಸುವುದು ಸೂಕ್ತ
" ಕೊರಗ ಭಾಷೆ ಮತ್ತು ತುಳು ಭಾಷೆ ನಡುವಣ ಸಂಬಂಧವು ಬಹಳ ಕ್ಷೀಣವಾದದು. ಕೊರಗ ಭಾಷೆ ಮತ್ತು ಇತರೆ ದ್ರಾವಿಡ ಭಾಷೆಗಳ ನಡುವಣ ಸಂಬಂಧವು ತುಳು ಕನ್ನಡದೊಂದಿಗೆ ಅಥವಾ ಮಲಯಾಳ ಮತ್ತು ತಮಿಳು ನಡುವಿಣ ಸಂಬಂಧಗಳಿಗಿಂತ ಮಿಗಿಲಾದುದೇನಲ್ಲ. ಆದ್ದರಿಂದ ಕೊರಗ ಭಾಷೆಯನ್ನು ಒಂದು ಸ್ವತಂತ್ರ ದ್ರಾವಿಡ ಭಾಷೆಯಾಗಿಯೇ ಗುರುತಿಸುವುದು ಸೂಕ್ತ. ಅದನ್ನು ತುಳುವಿನ ಅಥವಾ ಇತರೆ ಯಾವುದೇ ಭಾಷೆಯ ಉಪಭಾಷೆಯಾಗಿ ಪರಿಗಣಿಸಬಾರದು..." ಹೀಗೆ ಕ್ರಿ.ಶ 1881ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯೂ ಮತ್ತು ಜನಗಣತಿ ಮುಖ್ಯಸ್ಥನೂ ಆಗಿದ್ದ 'ಬ್ರೂಡಿ'ಯು ತನ್ನ ಮೇಲಾಧಿಕಾರಿ - ಮದ್ರಾಸಿನಲ್ಲಿದ್ದ ಸ್ಟೂವರ್ಟ್ ರವರಿಗೆ ಬರೆದು ತಿಳಿಸಿದ್ದಾನೆ.
ಕೊರಗ ಭಾಷೆಯ ಬಗೆಗೆ ಆಸಕ್ತಿ ತಳೆದ ಸ್ಟುವರ್ಟ್ ದಕ್ಷಿಣ ಕನ್ನಡದಿಂದ ಕೊರಗ ಭಾಷೆ ಕುರಿತು ಹೆಚ್ಚು ಹೆಚ್ಚು ವಿವರಗಳನ್ನು ತರಿಸಿಕೊಂಡು, ಮುಂದೆ ಅವುಗಳನ್ನು ತಾನೇ ಸಂಪಾದಿಸಿ - 'ಮ್ಯಾನ್ಯುಯಲ್ ಆಫ್ ದಿ ಸೌತ್ ಕೆನರಾ ಡಿಸ್ಟ್ರಿಕ್ಟ್'ನಲ್ಲಿ ದಾಖಲಿಸಿದ್ದಾನೆ. ಸ್ಟುವರ್ಟ್ ಗೆ ಕಳುಹಿಸಲಾದ ಕೊರಗ ಭಾಷಾ ಸಂಪತ್ತು ಅಪಾರವಾಗಿ ತುಳು ಪದ ಸಂಪತ್ತಿನಿಂದಲೇ ಕೂಡಿತ್ತು. ಹೀಗಾಗಿ ಸ್ಟುವರ್ಟ್ ಕೊರಗ ಭಾಷೆಯು ತುಳುವಿನ ಉಪಭಾಷಾ ರೂಪವಾಗಿದ್ದು, ಆಡು ಭಾಷೆಯ ಸ್ತರದಲ್ಲೇ ಉಳಿದುಬಿಟ್ಟಿದೆ ಎಂದು ತಿಳಿಸಿದನು. ತಾನು ಈ ನಿರ್ಣಯಕ್ಕೆ ಬಹಳ ಅನುಮಾನದಿಂದಲೇ ಬಂದಿದ್ದೇನೆ. ಆದರೆ, ದ್ರಾವಿಡ ಭಾಷಾ ವರ್ಗಕ್ಕೆ ಇನ್ನೊಂದು ಹೊಸ ಭಾಷೆಯನ್ನು (ಕೊರಗ) ಸೇರ್ಪಡೆಗೊಳಿಸಲು ಇನ್ನೂ ಹೆಚ್ಚಿನ ಅಧ್ಯಯನ ಮತ್ತು ಕ್ಷೇತ್ರ ಅಗತ್ಯವಾಗಿದೆ ಎಂದೂ ಅಂದು ಸ್ಟವರ್ಟೆ ಬರೆದನು.
- ಡಾ. ಅರವಿಂದ ಮಾಲಗತ್ತಿ


ಗುರುವಾರ, ಸೆಪ್ಟೆಂಬರ್ 4, 2014

ಸಾಂಸ್ಕೃತಿಕ ಚಳುವಳಿ ರೂಪಿಸುವ ಅಗತ್ಯ

ಆಗಸ್ಟ್ 30-31ರಂದು ಕೊಟ್ಟೂರಿನಲ್ಲಿ ‘ನಾವು-ನಮ್ಮಲ್ಲಿ-2014’ ಆಯೋಜಿತವಾಗಿತ್ತು. ‘ಹೊಸ ತಲೆಮಾರು-ಸೃಜನಶೀಲ ಸ್ಪಂದನ’ ಎಂಬ ಹೆಸರಿನಡಿಯಲ್ಲಿ ನಾಡಿನ ಹಲವು ಚಿಂತಕರು ಭಾಗವಹಿಸಿ ಮಾತನಾಡಿದರು. ಅರ್ಥಪೂರ್ಣ ಸಂವಾದವೂ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಅನುರಣಿತವಾದ ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ಸ್ವರೂಪದ ಬರಹ ಇಲ್ಲಿದೆ.
ಸೌಜನ್ಯ: ವರ್ತಮಾನ
- ಭಾರತೀದೇವಿ ಪಿ.
ನಮ್ಮ ಬದುಕಿನ ಭಾಗವಾದ ಹಲವು ಆಚರಣೆಗಳು, ಕಲೆಗಳು ಜನವಿರೋಧಿ ಮೌಲ್ಯಗಳನ್ನು ಸಂಸ್ಕೃತಿಯ ಹೆಸರಿನಲ್ಲಿ, ಸಮುದಾಯದ ವೈಶಿಷ್ಟ್ಯವನ್ನು ಕಾಪಿಟ್ಟುಕೊಳ್ಳುವ ಹೆಸರಿನಲ್ಲಿ ಮುನ್ನಡೆಸುತ್ತಾ ಬಂದಿರುವುದನ್ನು ಎದುರಾಗುವುದು ಹೇಗೆ ಎಂಬುದು ನಮ್ಮ ಮುಂದಿರುವ ಬಹುದೊಡ್ಡ ಪ್ರಶ್ನೆ. ಏಕೆಂದರೆ ಪರೋಕ್ಷವಾಗಿ ಜನರ ಅಧೀನ ಸ್ಥಿತಿಯನ್ನು ಬಲಪಡಿಸುವ ಇವನ್ನು ನೇರವಾಗಿ ಎದುರಿಸುವ ಪ್ರಯತ್ನ ಕ್ಷುಲ್ಲಕವಾಗಿಯೋ, ಆವೇಶಭರಿತವಾಗಿಯೋ ತೋರಬಹುದು. ಸರಳ, ಸುಂದರವಾದ ಸಂಗತಿಯಲ್ಲಿ ಇವರು ತಪ್ಪು ಹುಡುಕಿ ತೋರುತ್ತಿದ್ದಾರಲ್ಲ ಎನಿಸಬಹುದು. ಆದರೆ ಇವನ್ನು ಅಡ್ರೆಸ್ ಮಾಡುವುದೇ ನಮ್ಮ ದೊಡ್ಡ ಸವಾಲು.
ಯಾರ ಮನೆಗೇ ಹೋಗಲಿ, ಹೆಣ್ಣುಮಕ್ಕಳಿಗೆ ಕುಂಕುಮ ಕೊಡುವುದು ಸಂಪ್ರದಾಯ. ಕಾಲೇಜು ದಿನಗಳಲ್ಲಿದ್ದಾಗ ತಂದೆಯನ್ನು ಕಳೆದುಕೊಂಡ ಗೆಳತಿ ಕುಂಕುಮ ಕೊಡುವ ಪದ್ಧತಿ ಬಗ್ಗೆ ನನಗೆ ವಿರೋಧವಿದೆ ಎಂದಾಗ ನನಗೆ ಅಚ್ಚರಿಯಾಗಿತ್ತು. ಯಾವುದೇ ತಪ್ಪಿಲ್ಲದೆ ವೈಧವ್ಯದ ಪಟ್ಟ ಪಡೆದ ತಾಯಿ ಮುತ್ತೈದೆಯರ ನಡುವೆ ಮೂಲೆಗುಂಪಾಗುವುದನ್ನು ಕಂಡಾಗ ಹೆಂಗಸರಲ್ಲೇ ಭೇದಭಾವ ತಂದಿಡುವ, ಗಂಡನ ಮೂಲಕವೇ ಹೆಣ್ಣಿನ ಇರುವಿಕೆಯನ್ನು ಮಾನ್ಯಮಾಡುವ ಈ ಬಾಗಿನ, ಅರಶಿನ-ಕುಂಕುಮ ನೀಡುವುದು ಇವೆಲ್ಲ ‘ಮುತ್ತೈದೆಯರ ಪೊಲಿಟಿಕ್ಸ್’ ಎಂದು ಅವಳು ರೋಷದಿಂದ ಹೇಳಿದ್ದಳು. ಆ ದಿನದಿಂದ ನನಗೆ ಯಾರು ಕುಂಕುಮ ಕೊಟ್ಟರೂ ಇರಿಸುಮುರುಸಾಗುತ್ತಿದೆ. ಇದೇ ರೀತಿಯಲ್ಲಿ ನಮ್ಮ ದೈನಿಕದಲ್ಲಿ ಸೇರಿಹೋಗಿರುವ ಅನೇಕ ಸಹಜಸಂಗತಿಗಳು ಒಳಗೊಳಗೇ ವ್ಯವಸ್ಥೆಯ ಹಿಡಿತವನ್ನು ಬಿಗಿಗೊಳಿಸುತ್ತಾ ನಮ್ಮ ಪ್ರಜ್ಞಾಪೂರ್ವಕ ಪ್ರಯತ್ನಗಳಿಗೆ ಮಂಕುಬೂದಿ ಎರಚುತ್ತಿರುತ್ತವೆ.
ಮದುವೆ ಇರಬಹುದು, ನಾಮಕರಣ ಇರಬಹುದು, ಊರಿನ ಜಾತ್ರೆ ಇರಬಹುದು ಹೀಗೆ ನಮ್ಮ ಸಂಸ್ಕೃತಿಯ ಸಂಕೇತಗಳಾಗಿರುವ ಆಚರಣೆಗಳ ಒಳಗೆ ಗುಪ್ತಗಾಮಿನಿಯಾಗಿರುವ ಪಾಳೆಗಾರಿಕೆ, ಜಾತೀಯತೆ ಮತ್ತು ಪಿತೃಪ್ರಧಾನ ಮೌಲ್ಯಗಳನ್ನು ಎದುರಿಸುವುದು ಹೇಗೆ? ನಮ್ಮ ಸಮುದಾಯದ ಆಚರಣೆಗಳು ಎಂಬ ನೆಲೆಯಲ್ಲಿ ನಮ್ಮ ಅಸ್ಮಿತೆಯ ಗುರುತುಗಳಾಗಿರುವ ಇವನ್ನು ನಿರಾಕರಿಸುವುದು ಹೇಗೆ? ರಾಜಕೀಯವಾಗಿ, ಸಾಮಾಜಿಕವಾಗಿ ಖಚಿತ ನಿಲುವು ತಳೆದು ಮಾತಾಡುವ ನಮಗೆ ಬದುಕಿನಲ್ಲಿ ಎದುರಾಗುವ ಇಂಥ ಸವಾಲುಗಳನ್ನೆಲ್ಲ ಎದುರಿಸುವ ಸಿದ್ಧತೆ ಇದೆಯೇ? ಮಡೆಸ್ನಾನ, ಸಹಪಂಕ್ತಿ ಭೋಜನ, ಗಂಡು ಪ್ರಧಾನವಾಗಿರುವ ನಮ್ಮ ಕುಟುಂಬ ಪದ್ಧತಿ ಇವೆಲ್ಲವನ್ನೂ ಸಂಸ್ಕೃತಿಯನ್ನು ಕಾಯ್ದುಕೊಳ್ಳುವ ಹೆಸರಿನಲ್ಲಿ ಪ್ರತಿಪಾದಿಸುತ್ತಾ ಬಂದಿದ್ದಾರಲ್ಲ ಇವನ್ನು ಎದುರಾಗುವುದು ಹೇಗೆ?
ನಮ್ಮ ನಡುವೆ ಇರುವ ಶಾಸ್ತ್ರೀಯ ಮತ್ತು ಜನಪ್ರಿಯ ಮಾಧ್ಯಮಗಳೂ ಇವೇ ಮೌಲ್ಯಗಳನ್ನು ಬಿತ್ತುವುದು ಮಾತ್ರವಲ್ಲ, ವಿಜೃಂಭಿಸುತ್ತಾ ಬರುತ್ತಿರುವುದನ್ನು ನೋಡಿದಾಗ ಇವುಗಳಿಗೆ ಪ್ರತಿಯಾಗಿ ಜನಪರವಾದ ವಿಚಾರಗಳನ್ನು ಸ್ಥಾಪಿಸುವುದಕ್ಕೆ ನಮ್ಮ ಬಳಿ ಸಾಕಷ್ಟು ಹತಾರಗಳಿಲ್ಲ ಎಂದು ಅನಿಸುತ್ತದೆ. ಇಂತಹ ವ್ಯವಸ್ಥೆಯನ್ನು ಕೇವಲ ರಾಜಕೀಯ ಚಳುವಳಿಗಳಿಂದ ಮಾತ್ರ ಎದುರಿಸಲು ಹೊರಡುವುದು ಸಾಧ್ಯವೇ? ಈ ಪ್ರಶ್ನೆಯನ್ನು ಆಗಸ್ಟ್ 30,31ರಂದು ಕೊಟ್ಟೂರಿನಲ್ಲಿ ನಡೆದ ನಾವು-ನಮ್ಮಲ್ಲಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಎತ್ತಿದರು. ಅದು ಪ್ರಗತಿಪರರೆನಿಸಿಕೊಂಡವರು ಎದುರುಮಾಡಿಕೊಳ್ಳಬೇಕಾದ ದೊಡ್ಡ ಪ್ರಶ್ನೆ ಎನಿಸುತ್ತದೆ.DSC01285
ಇಂತಹುದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಅವಕಾಶವಂಚಿತರ ಮನೆಬಾಗಿಲಿಗೇ ಹೋಗಿ ಕಲಾಮಾಧ್ಯಮದ ಮೂಲಕ ಜಾತಿ, ವರ್ಗ, ಲಿಂಗ ತಾರತಮ್ಯಗಳ ವಿರುದ್ಧ ಎಚ್ಚರ ಮೂಡಿಸುವ ದಿಸೆಯಲ್ಲಿ ಹುಟ್ಟಿಕೊಂಡದ್ದು ಮಹಾರಾಷ್ಟ್ರದ ‘ಕಬೀರ್ ಕಲಾಮಂಚ್’. ನಮ್ಮ ಶಾಸ್ತ್ರೀಯ ಮತ್ತು ಜನಪ್ರಿಯ ಕಲೆಗಳು ಒಂದೆಡೆ ಉಳ್ಳವರ ಅಹಂಕಾರವನ್ನು ಪೋಷಿಸುವ ಸೊತ್ತಾಗಿವೆ, ಇನ್ನೊಂದೆಡೆ ಯಾವುದನ್ನೂ ಆಳಕ್ಕೆ ಹೋಗಿ ನೋಡದೆ ಥಳುಕುಬಳುಕಿನ ಆವರಣದಲ್ಲಿ ಮತ್ತದೇ ಮೌಲ್ಯಗಳನ್ನು ಚಾಲ್ತಿಗೆ ತರುತ್ತಾ ಸಾಮಾಜಿಕ ಜವಾಬ್ದಾರಿಯನ್ನು ಸಂಪೂರ್ಣ ಮರೆತಿವೆ. ಹೀಗಿರುವಾಗ ಕಲೆಗೆ ಇರುವ ಸಾಮಾಜಿಕ ಆಯಾಮವನ್ನು ಎತ್ತಿತೋರಿಸುವ ಕೆಲಸವನ್ನು ಕಬೀರ್ ಕಲಾಮಂಚ್ ನ ಕಲಾವಿದರು ಮಾಡುತ್ತಿದ್ದಾರೆ.
ಇಂತಹ ಪ್ರಯತ್ನವೊಂದು ಪ್ರಭುತ್ವವನ್ನು ಎಷ್ಟು ಅಲ್ಲಾಡಿಸಿದೆ ಎಂದರೆ ಈ ತಂಡದ ಹಲವು ಸದಸ್ಯರನ್ನು ಬಗೆಬಗೆಯ ಕೇಸು ಜಡಿದು ಜೈಲಿಗೆ ತಳ್ಳಲಾಗಿದೆ. ಇವರ ತಂಡ ಎಷ್ಟು ಪರಿಣಾಮಕಾರಿಯಾಗಿ ವ್ಯವಸ್ಥೆಯನ್ನು ಅಲ್ಲಾಡಿಸಿದೆ ಎಂಬುದಕ್ಕೆ ಇದು ನಿದರ್ಶನ. ಈ ಎಲ್ಲ ಆತಂಕಗಳ ನಡುವೆಯೂ ಅವರ ಪ್ರಯತ್ನ ಮುಂದುವರೆದಿದೆ. ಈ ಹೋರಾಟದ ಹೆಜ್ಜೆಯನ್ನೇ ಪುಣೆಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಕಬೀರ್ ಕಲಾಮಂಚ್ ನ ಜ್ಯೋತಿ ಜಗತಾಪ್ ಬಿಚ್ಚಿಟ್ಟು ಸಾಂಸ್ಕೃತಿಕ ಚಳುವಳಿಯನ್ನು ರೂಪಿಸುವ ಅಗತ್ಯದ ಕುರಿತು ಮಾತಾಡಿದರು. (ಜಗತಾಪ್ ಗಂಡ ಕೂಡ ಒಂದೂವರೆ ವರ್ಷದಿಂದ ಜೈಲಿನಲ್ಲಿದ್ದಾರೆ).
ಹೀಗಾಗಿ ನಮ್ಮನ್ನು ಆವರಿಸಿರುವ ಸಂಸ್ಕೃತಿಯ ಅದೃಶ್ಯಜಾಲದಿಂದ ಹೊರಬರುವುದಕ್ಕೆ ಬರಹಗಾರರ ಜೊತೆಗೆ, ಹೋರಾಟಗಾರರು, ಎಲ್ಲ ಬಗೆಯ ಕಲಾವಿದರು, ಸಮಾಜವಿಜ್ಞಾನಿಗಳು ಒಂದಾಗಿ ಜನರ ಬಳಿಗೆ ಹೋಗುವ ಅಗತ್ಯವಿದೆ. ನಮ್ಮ ಸಮಾಜದ ಕಟ್ಟೋಣವನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡುವ ಅಗತ್ಯವಿದೆ. ಇಲ್ಲದಿದ್ದಲ್ಲಿ ನಮ್ಮೆಲ್ಲ ಪ್ರಯತ್ನಗಳು ಆಕ್ಷಣದ ನಮ್ಮ ಅಸಹಾಯಕತೆಯಿಂದ ಹೊರಬರುವ ದಾರಿಯಷ್ಟೆ ಆಗಿಬಿಡುವ ಆತಂಕವಿದೆ. ಇದನ್ನು ಮೀರುವ ದಾರಿಯಾಗಿ ಒಂದು ಸಾಂಸ್ಕೃತಿಕ ಎಚ್ಚರವನ್ನು ಮೂಡಿಸಿಕೊಳ್ಳುವ ಮೂಲಕ ಮುಂದಿನ ಹೆಜ್ಜೆಯಿಡಬೇಕಾಗಿದೆ.

ನಾವು-ನಮ್ಮಲ್ಲಿ 2014 ದೃಶ್ಯಾವಳಿ