ಗುರುವಾರ, ಫೆಬ್ರವರಿ 28, 2013

ದೇವನೂರು ಅವರಿಗೆ ಕನ್ನಡ ವಿವಿ ನಾಡೋಜ ಪ್ರಧಾನ


-ಅರುಣ್ ಜೋಳದಕೂಡ್ಲಿಗಿ
 

ಕನ್ನಡದ ಅಃತಸಾಕ್ಷಿಯಂತಿರುವ ದೇವನೂರು ಮಹದೇವ ಅವರಿಗೆ ಇಂದು ಕನ್ನಡ ವಿವಿ `ನಾಡೋಜ’ ಪದವಿಯನ್ನು ನೀಡಿ ಗೌರವಿಸಿತು.

ದೇವನೂರು ಮಾತು: ಇಲ್ಲಿ ಎಳೆಮನಸುಗಳು ಕಾಣುತ್ತಿವೆ. ಹಾಗಾಗಿ ಮಾತನಾಡಲು ಒಪ್ಪಿದೆ. ಇಂದು ಪ್ರಾರ್ಥನೆಯಾಗಿ `ಮಾತೆಂಬುದು ಜೋತಿರ್ಲಿಂಗ’ ಎಂಗ ಅಲ್ಲಮ ವಾಕ್ಯವನ್ನು ಹಾಡಿದಿರಿ, ಆದರೆ ಇಂದು ಮಾತು ಲಜ್ಜೆಗೆಟ್ಟಿದೆ. ಇದಕ್ಕೆ ಎರಡು ಘಟನೆಗಳನ್ನು ಹೇಳುವೆ ಒಂದು: ಉಪಮುಖ್ಯಮಂತ್ರಿ ಈಶ್ವರಪ್ಪ ಅವರ ಮನೆಗೆ ಸಿಬಿಐ ರೈಡ್ ಆದಾಗ ನೋಟು ಎಣಿಸುವ ಯಂತ್ರ ಸಿಕ್ಕಿತಂತೆ, ಅದಕ್ಕೆ ಪತ್ರಕರ್ತರು ಇದ್ಯಾಕೆ ಎಂದು ಕೇಳಿದರಂತೆ, ಆಗ ಈಶ್ವರಪ್ಪ ಅವರು `ಮಕ್ಕಳು ಆಟ ಆಡೋಕೆ’ ಎಂದು ಯಾವ ಮುಜುಗರವೂ ಇಲ್ಲದಂತೆ, ನಕ್ಕರಂತೆ. ಮತ್ತೊಂದು ಪತ್ರಿಕಾಗೋಷ್ಠಿಯೊಂದರಲ್ಲಿ ಯಡಿಯೂರಪ್ಪ ಅವರು ``ಆ ಶೆಟ್ಟರ್ ಗೆ ಏನು ಅಧಿಕಾರದ ಆಸೆ ಇದೆಯೋ,ಇಷ್ಟು ಆಸೆ ಇರಬಾರದು ಅಂದರಂತೆ. ಈ ಮಾತುಗಳು ನಿಜವೆ ಆಗಿದ್ದರೆ, ಮಾತು ಲಜ್ಜೆಗೆಟ್ಟ ಗತಿ ಇಲ್ಲಿಗೆ ಮುಟ್ಟಿದೆ ಅಂದಂತಾಯ್ತು.
 

ಇನ್ನು ಇಂದು ವಿಧ್ಯಾರ್ಥಿಗಳ ಎದುರು ಸಂಘಟನೆಯೊಂದರ ಕನಸನ್ನು ಮುಂದಿಡುವೆ. `ವಿಶ್ವಮಾನವ ಯುವಜನ ವೇದಿಕೆ’ ಕಟ್ಟಿ ವಿದ್ಯಾರ್ಥಿಗಳು ಇಂದು ಸಂಘಟನೆ ಮಾಡಬೇಕಿದೆ. ಇಲ್ಲವಾದರೆ ಕರ್ನಾಟಕಕ್ಕೆ ಉಳಿಗಾಲವಿಲ್ಲ. ನೀವು ಸಂಘಟನೆ ಮಾಡಿದ್ದಾದರೆ ನಾನು ನಿಮ್ಮನ್ನು ಹಿಂಬಾಲಿಸುವೆ. ಇದರ ತತ್ವ ಮಾನವ ತಾನೊಂದೇ ಒಲಂ ಆಗಿರಬೇಕು. ಕ್ರಿಯೆ: ನಿರಂಕುಶಮತಿಗಳಾಗುವ ಕಾರ್ಯಚಟುವಟಿಕೆಗಳನ್ನು ರೂಪಿಸಬೇಕು. ಎಂದರು.
 

ಕುಲಪತಿಗಳಾದ ಹಿ.ಚಿ.ಬೋರಲಿಂಗಯ್ಯ ಅವರ ಮಾತು: `ಕನ್ನಡ ವಿಶ್ವವಿದ್ಯಾಲಯ ಆತಂಕದಲ್ಲಿದೆ, ದೇವನೂರು ಅಂತವರು ಕನ್ನಡ ವಿಶ್ವವಿದ್ಯಾಲಯದಲ್ಲಿದ್ದರೆ, ನಮಗೆ ಆನೆ ಬಲ ಬಂದಂತಾಗುತ್ತದೆ. ನಮ್ಮ ಚೈತನ್ಯ ಹೆಚ್ಚುತ್ತದೆ. ಕರ್ನಾಟಕದ ಆತ್ಮ ಸಾಕ್ಷಿಯಂತಿರುವ ದೇವನೂರು ಅವರಿಗೆ ಕನ್ನಡ ವಿಶ್ವವಿದ್ಯಾಲಯ ನಾಡೋಜ ಕೊಡುವ ಮೂಲಕ ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ. ದೇವನೂರು ಕನ್ನಡ ವಿವಿಗೆ ಬಂದು ನಾಡೋಜ ಸ್ವೀಕರಿಸುವ ಮೂಲಕ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ ಮುಂತಾಗಿ ಮಾತಾಡಿದರು.

ರಹಮತ್ ತರೀಕೆರೆ ಅವರು ದೇವನೂರು ಕುರಿತ ನಾಡೋಜ ಪುರಸ್ಕೃತ ಮಾತುಗಳನ್ನು ಹೇಳಿದರು. ಕಥೆಗಾರ ಕರೀಗೌಡ ಬೀಚನಹಳ್ಳಿ ಅವರು ದೇವನೂರು ಅವರ ಕಥನ ಬದುಕು ಕುರಿತು ಮಾತನಾಡಿದರು. ಕ್ಯಾಂಪಸ್ಸಿನ ಭುವನ ವಿಜಯದಲ್ಲಿ ಕನ್ನಡ ವಿವಿಯ ಸಕಲರೂ ನೆರೆದು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಸೋಮವಾರ, ಫೆಬ್ರವರಿ 18, 2013

ನೆಟ್ಟಲ್ಲಿ ಬಂತಪ್ಪ ನವ್ವಾಲೆ


ಡಿ.ಕೆ.ರಮೇಶ್
ಕೃಪೆ: ಪ್ರಜಾವಾಣಿ,17.02.2013
ಇ ಮೇಲ್‌ನ ಕದ ತೆಗೆಯುತ್ತಿದ್ದಂತೆ ಕತೆಯೊಂದು ಕಣ್ಣು ಮಿಟುಕಿಸುತ್ತಿದೆ. ಯಾವ ಊರಿನ ಕತೆ, ಯಾವ ದೇಶದ ಕತೆ ಎಂಬ ಸುಳಿವಿಲ್ಲ. ಬರೆದವರು ಯಾರು ಎಂಬುದು ಕೂಡ ಗೊತ್ತಿಲ್ಲ. ಅದಕ್ಕೊಂದು ತಲೆಬರಹವೂ ಇಲ್ಲ. ಕತೆ ಮಾತ್ರ ಸೊಗಸಾಗಿದೆ. ಇಂಗ್ಲಿಷಿನಲ್ಲಿದ್ದರೂ ಪಕ್ಕದ ಮನೆಯ ಅಜ್ಜಿ ಹೇಳಿದಂತಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಮಹೇಶ್‌ಕೃಷ್ಣ ಬಟ್ಟೆ ಅಂಗಡಿಯ ಜಾಲತಾಣವೊಂದನ್ನು ಕ್ಲಿಕ್ ಮಾಡಿದರು. ಅಲ್ಲಿದ್ದ ನಾನಾ ನಮೂನೆಯ ಅಂಗಿಗಳಲ್ಲಿ ಒಂದನ್ನು ಆಯ್ದುಕೊಂಡರು. ತಮ್ಮ ಅಳತೆಗೆ ಸರಿಹೊಂದುತ್ತದೆಯೇ ಎಂಬುದನ್ನು ದೃಢಪಡಿಸಿಕೊಂಡರು. ರಿಯಾಯ್ತಿ ಇತ್ಯಾದಿ ವಿವರಗಳನ್ನು ಪಡೆದುಕೊಂಡ ಮೇಲೆ ಅಂತರಜಾಲ ಬ್ಯಾಂಕಿಂಗ್ ಮುಖಾಂತರವೇ ನಗದು ಪಾವತಿಸಿದರು. ಹಬ್ಬದ ಹಿಂದಿನ ದಿನ ಅವರ ಮನೆಗೆ ಹೊಸ ಬಟ್ಟೆ ಬಂದಿತ್ತು.
ಅಧ್ಯಯನಕ್ಕೆಂದು ವಿದೇಶಕ್ಕೆ ಹೋದ ಪ್ರೊಫೆಸರ್ ಒಬ್ಬರು ಅಲ್ಲಿಂದಲೇ `ಮೇಲಾಯಿಸುತ್ತಿದ್ದಾರೆ': ಇಲ್ಲಿ ಬಹಳ ಚಳಿ. ಜನವೇ ಕಾಣಲ್ಲ. ಮೊನ್ನೆ ಇಂಡಿಯನ್ ಹೋಟೆಲ್‌ಗೆ ಹೋಗಿದ್ದೆ. ನಿಮ್ಮನ್ನೆಲ್ಲಾ ನೋಡೋ ಹಾಗಾಗಿದೆ. ವೆಬ್‌ಕ್ಯಾಮ್ ಆನ್ ಮಾಡಿಕೊಳ್ಳಿ...
ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕನ್ನಡ ಸುದ್ದಿ ಚಾನೆಲ್ ಒಂದು ತಾನು ಪ್ರಸಾರ ಮಾಡಿದ ಉದ್ಯೋಗ ಆಧರಿತ ಕಾರ್ಯಕ್ರಮವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದೆ. ಕಾರ್ಯಕ್ರಮವಾದರೆ ಒಂದು ದಿನ ಪ್ರಸಾರವಾಗಿ ಮರೆಯಾಗುತ್ತದೆ. ಅದನ್ನೇ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದರೆ ಶಾಶ್ವತವಾಗಿ ಉಳಿಯುತ್ತದೆ. ಯಾವಾಗ ಬೇಕಾದರೂ ಜನರ ಕೈಗೆ ಸಿಗುತ್ತದೆ ಎಂಬುದು ಅದರ ಲೆಕ್ಕಾಚಾರ.
`ಕೊಲವೆರಿ ಡಿ', `ಪ್ಯಾರ್‌ಗೆ ಆಗ್ಬುಟ್ಟೈತೆ', ಅಷ್ಟೇ ಏಕೆ ಇತ್ತೀಚೆಗೆ ಹುಚ್ಚೆಬ್ಬಿಸಿದ `ಗಂಗ್ನಂ ಸ್ಟೈಲ್' ಹಾಡಿನ ಲಿಂಕುಗಳು ನೆಟ್‌ಲೋಕದ ತುಂಬ ಹರಿದಾಡುತ್ತಿವೆ. ಕನ್ನಡ ಸಿನಿಮಾದ ಹೊಸ ಹಾಡೊಂದು ಸಾವಿರಾರು ಹಿಟ್ ಗಳಿಸಿದ ಸುದ್ದಿ ಹರಿದಾಡುತ್ತಿದೆ. ಸಿನಿಮಾದ ಕೆಲ ಉತ್ಸಾಹಿಗಳು ತಮ್ಮ ಪ್ರಯೋಗದ ತುಣುಕುಗಳನ್ನು ಅಂತರಜಾಲದಲ್ಲಿ ಹರಿಬಿಟ್ಟು ಸತ್ವ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.
ಗಂಡ ಕಚೇರಿಗೆ ಹೋಗುತ್ತಿದ್ದಂತೆ ಕರಾವಳಿ ಸೀಮೆಯ ಹೆಣ್ಣುಮಗಳೊಬ್ಬರು ಬ್ಲಾಗ್ ತೆರೆಯುತ್ತಾರೆ. ತಮ್ಮ ಸುತ್ತಮುತ್ತ ನಡೆಯುವ ಪ್ರತಿದಿನದ ಘಟನೆಗಳನ್ನು ಬರೆದುಕೊಳ್ಳುತ್ತಾರೆ. ಮಕ್ಕಳ ಆಟ ಪಾಠ, ಮಳೆಗಾಲದ ದಿನ ಕಾಣಿಸಿಕೊಂಡ ಹಳದಿ ಏಡಿ, ಹೊಸರುಚಿಯ ಪ್ರಯೋಗ, ಬರುವ ವಾರ ನಡೆಯಲಿರುವ ಜಾತ್ರೆಯ ವಿವರ ಅಲ್ಲುಂಟು. ವಿಶ್ವದ ನೂರಾರು ಜನರಿಗೆ ಆಕೆ ಮನೆಯಲ್ಲಿ ಕುಳಿತೇ ತನ್ನ ಅನುದಿನದ ಅಂತರಗಂಗೆಯ ದರ್ಶನ ಮಾಡಿಸುತ್ತಾರೆ.
***
ಹಳೆಕಾಲದ ಪ್ರೇಮಗೀತೆ, ಹೊಸ ಕವಿತೆ, ಮುಂಬೈನ ಷೇರುಪೇಟೆ, ಹಾಸ್ಯದ ಒರತೆ, ಯಾರದೋ ಕಣ್ಣೀರ ಕತೆ- ಏನುಂಟು ಏನಿಲ್ಲ ಅಲ್ಲಿ. `ನೆಟ್ ಜಾನಪದ' ಎಂದರೆ ಇದೇ ಏನು? ಈ ಪ್ರಶ್ನೆಗೂ ಉತ್ತರ ನೀಡುವಷ್ಟು ಶಕ್ತಿಶಾಲಿ, ಸರ್ವಾಂತರ್ಯಾಮಿ ಅಂತರಜಾಲ. ಮುಂದೊಂದು ದಿನ ಪ್ರಪಂಚದ ಯಾವುದೋ ಮೂಲೆಯಲ್ಲಿ ಕುಳಿತು ಜನರನ್ನು ಸಂಪರ್ಕಿಸಬಹುದು ಎಂದು ಕೆಲವೇ ವರ್ಷಗಳ ಹಿಂದೆ ಆಡುತ್ತಿದ್ದ ಮಾತು ಈಗ ಎಷ್ಟು ಹಳತಾಗಿದೆ.
ಆನ್‌ಲೈನ್ ಮೂಲಕವೇ ಶಸ್ತ್ರಚಿಕಿತ್ಸೆ ನಡೆಸುವ ಕಾಲ ಬಂದುಬಿಟ್ಟಿದೆ!
ಯಾವುದೇ ಜನಸಮುದಾಯ ಪರಸ್ಪರ ಒಡನಾಡುವುದರೊಂದಿಗೆ ಜಾನಪದ ಹುಟ್ಟುತ್ತದೆ ಎಂಬುದು ಜಾನಪದ ಕುರಿತ ಪ್ರಸಿದ್ಧ ವ್ಯಾಖ್ಯಾನ. ಇದನ್ನು ನೆಟ್‌ಲೋಕಕ್ಕೂ ಅನ್ವಯಿಸುವುದಾದರೆ, `ಆನ್‌ಲೈನ್ ಜಾನಪದ' ಹುಟ್ಟಿ ಸಾಕಷ್ಟು ವರ್ಷಗಳೇ ಸಂದಿವೆ ಎಂದಂತಾಯಿತು. ಆನ್‌ಲೈನ್ ಜಾನಪದಕ್ಕೆ ಇಂಗ್ಲಿಷ್‌ನಲ್ಲಿಟ್ಟಿರುವ ಹೆಸರು `ನೆಟ್‌ಲೋರ್' ಎಂದು. ಇಂಗ್ಲಿಷ್‌ನಲ್ಲಿ ಜಾನಪದಕ್ಕೆ ಫೋಕ್‌ಲೋರ್ ಎನ್ನುವಂತೆ ನೆಟ್- ಜಾನಪದಕ್ಕೆ ನೆಟ್‌ಲೋರ್ ಎಂಬ ಹೆಸರು ಜನಪ್ರಿಯ. ಇ-ಮೇಲ್, ಬ್ಲಾಗ್, ಜಾಲತಾಣ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಹರಡುವ ವದಂತಿ, ಕತೆ, ವಿನೋದ, ಸುಳ್ಳುಸುದ್ದಿಗಳು, ಜನಪ್ರಿಯ ನಂಬಿಕೆಗಳ ಒಟ್ಟು ಮೊತ್ತವೇ ನೆಟ್‌ಲೋರ್ ಅಥವಾ ನೆಟ್‌ಪದ. ಸಂಗೀತ, ಮೌಖಿಕ, ಒಗಟು, ನಾಣ್ಣುಡಿ, ಕತೆ, ದಂತಕತೆ, ಇನ್ನೂ ಯತ್ನಿಸಿದರೆ ಮಹಾಕಾವ್ಯವನ್ನು ಒದಗಿಸುವ ಶಕ್ತಿ ಅಂತರಜಾಲಕ್ಕಿದೆ. ಈ ಪ್ರಕಾರಗಳು ಜಾನಪದದ ಅಂಗಗಳು ಎನ್ನುವುದು ತಿಳಿದಾಗ ಆನ್‌ಲೈನ್‌ನಲ್ಲಿ ಜಾನಪದದ ವಿಶ್ವರೂಪ ಅರಿವಾಗುತ್ತದೆ.
ಜಾನಪದ ಎಂಬುದು ಅಕ್ಷರ ವಿರೋಧಿ, ನಗರ ವಿರೋಧಿ ಹಾಗೂ ಆಧುನಿಕತೆಯ ವಿರೋಧಿ ಎಂಬ ಸಿದ್ಧಮಾದರಿಗೆ `ನೆಟ್‌ಪದ' ಪೆಟ್ಟುಕೊಟ್ಟಿದೆ. ಅಂತರಜಾಲ ಬಲ್ಲವರೆಲ್ಲರೂ ಅಕ್ಷರ ಬಲ್ಲವರು. ಅವರಲ್ಲಿ ಬಹುಪಾಲು ಮಂದಿ ನಗರದಲ್ಲಿ ಅಥವಾ ನಗರದ ಸ್ಪರ್ಶದಲ್ಲಿ ಜೀವಿಸುತ್ತಿರುವವರು, ಆ ಮೂಲಕ ಸಹಜವಾಗಿಯೇ ಆಧುನಿಕತೆಗೆ ತೆರೆದುಕೊಂಡವರು.
ಜಾನಪದ ನಿಂತ ನೀರಲ್ಲ ಎಂಬ ಮಾತನ್ನು ನೆಟ್‌ಪದ ನಿಜ ಮಾಡಲು ಹೊರಟಂತಿದೆ. ಅದರ ಆಶಯ, ಆಕಾರ, ಎಲ್ಲವೂ ಜಾನಪದ ಪರಿಕಲ್ಪನೆಗೆ ಹತ್ತಿರವಾಗಿಯೇ ಇದೆ. ಆದರೆ ಮಾಧ್ಯಮ ಮಾತ್ರ ಬೇರೆ. ಮೊದಲು ಬಾಯಿಂದ ಬಾಯಿಗೆ ಹರಡುತ್ತಿದ್ದ ಜನಪದ ಈಗ ಕೈಯಿಂದ ಕೈಗೆ ಹರಡುತ್ತಿದೆ. ಅರ್ಥಾತ್ ನಾವು ಬೆರಳಾಡಿಸುವ ಕಂಪ್ಯೂಟರ್‌ನ ಕೀಲಿಮಣಿಯ ಮೂಲಕ ಜಾನಪದ ಹರಡುತ್ತಿದೆ. ಇಲ್ಲಿ ಮೂಡುವ ಸುದ್ದಿ, ವದಂತಿಗಳು ನಿಜವೋ ಸುಳ್ಳೋ ಎಂಬುದು ಗೊತ್ತಿರುವುದಿಲ್ಲ. 
***
ಹಿಂದೆ ಕತೆ ಹುಟ್ಟಿಕೊಳ್ಳುತ್ತಿದ್ದುದೇ ಜನ ಸೇರುವೆಡೆಗಳಲ್ಲಿ. ಈಗ ಆ ಪ್ರಕ್ರಿಯೆ ಕಂಪ್ಯೂಟರ್‌ಗೆ ವರ್ಗವಾಗಿದೆ. ಜನಾಭಿಪ್ರಾಯ ರೂಪಿಸುವ ಜಾನಪದವಾಗಿ ಅಂತರಜಾಲ ಬಳಕೆಯಾಗುತ್ತಿದೆ. ಆನ್‌ಲೈನ್‌ನಲ್ಲಿ ಜನ ಹೆಚ್ಚಾಗಿ ಸುದ್ದಿಗಳಿಗೆ ಸ್ಪಂದಿಸುತ್ತಾರೆ. ಈಜಿಪ್ಟ್‌ನಲ್ಲಿ ನಡೆದ ರಕ್ತರಹಿತ ಕ್ರಾಂತಿಗೆ ಟ್ವಿಟರ್, ಫೇಸ್‌ಬುಕ್, ಮೊಬೈಲ್, ಯೂಟ್ಯೂಬ್ ಇತ್ಯಾದಿ ಸಾಮಾಜಿಕ ಮಾಧ್ಯಮಗಳು ಕಾರಣ ಎಂದು ಮಾಧ್ಯಮ ತಜ್ಞರು, ಸಮಾಜ ವಿಜ್ಞಾನಿಗಳು ಹೇಳಿದರು.
ರಾಜಕೀಯ ವಿಶ್ಲೇಷಕರು ಅದನ್ನು ಅಲ್ಲಗಳೆದರೂ ಆಡಳಿತ ನಡೆಸುವವರಿಗೆ ಸಾಮಾಜಿಕ ಜಾಲತಾಣಗಳ ಬಗ್ಗೆ ಒಂದು ಬಗೆಯ ಭೀತಿ ಇದ್ದೇ ಇದೆ. ಹಾಗಾಗಿಯೇ ಕೆಲವು ಸರ್ಕಾರಗಳು ಜಾಲತಾಣಗಳ ಮೇಲೆ ಕಣ್ಣಿಟ್ಟಿರುವುದು ಆಗಾಗ ವರದಿಯಾಗುತ್ತಲೇ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಹೋರಾಟಗಾರರ ಮೇಲ್‌ಗಳನ್ನು ಹ್ಯಾಕ್‌ಮಾಡುವ ಸ್ಥಿತಿಗೂ ಅಧಿಕಾರದಲ್ಲಿರುವವರು ತಲುಪಿದ್ದಿದೆ.
ಘಟನೆ ಕಾಳ್ಗಿಚ್ಚಿನಂತೆ ಹರಡಲು ಅಂತರಜಾಲ ಸಾಕು. ಭ್ರಷ್ಟಾಚಾರದ ವಿರುದ್ಧದ ಆಂದೋಲನದಿಂದ ಹಿಡಿದು ಇತ್ತೀಚೆಗೆ ಅತ್ಯಾಚಾರ ಪ್ರಕರಣ ವಿರೋಧಿಸಿ ದೆಹಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆವರೆಗೆ ಜನಾಭಿಪ್ರಾಯ ರೂಪಿಸುವಲ್ಲಿ ಅಂತರಜಾಲ ಶ್ರಮಿಸಿದೆ. ಚುನಾವಣೆ ಕಾಲದಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ಪರವಾಗಿ ಪ್ರಚಾರ ನಡೆಸಲು, ಎದುರಾಳಿಗಳ ವಿರುದ್ಧ ಕತ್ತಿ ಮಸೆಯಲು ಅಂತರಜಾಲ ಬಳಕೆಯಾದದ್ದುಂಟು.
ಸಾಂಪ್ರದಾಯಿಕವಾಗಿ ನಮಗೆಲ್ಲಾ ತಿಳಿದಿರುವ ಜಾನಪದಕ್ಕೂ ನೆಟ್‌ಪದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಮೊದಲನೆಯದಾಗಿ ಇದು ಅಕ್ಷರಸ್ಥರ ಜಾನಪದ. ಅದರಲ್ಲಿಯೂ ಕಂಪ್ಯೂಟರ್ ಅಕ್ಷರಸ್ಥರಿಗಷ್ಟೇ ಸೀಮಿತವಾದ ಜಾನಪದ ಎನ್ನುತ್ತಾರೆ ಕೆಲವು ವಿದ್ವಾಂಸರು. ಅವರ ಪ್ರಕಾರ ಅಕ್ಷರ ಗೊತ್ತಿದ್ದರಷ್ಟೇ ಸಾಲದು. `ಕಂಪ್ಯೂಟರ್ ವರ್ಣಮಾಲೆ'ಯೂ ಬಲ್ಲವರಾಗಿದ್ದರೆ ಮಾತ್ರ ನೆಟ್‌ಪದ ಹೆಚ್ಚು ಪರಿಣಾಮಕಾರಿ.
`ಟೆಕ್ಸ್ಟ್' ಟೈಪಿಸದೇ ಇಲ್ಲಿ ಯಾವ ಆಟವೂ ನಡೆಯದು. ಉದಾಹರಣೆಗೆ, ಹಾಯ್ ಹೇಳುವುದರಿಂದ ಹಿಡಿದು ದೊಡ್ಡ ಪ್ರಾಜೆಕ್ಟ್‌ಗಳನ್ನು ರೂಪಿಸುವವರೆಗೆ, ಮೇಲ್‌ನ ಖಾತೆ ತೆರೆಯುವುದರಿಂದ ಹಿಡಿದು ಕಾರ್ಖಾನೆಗಳ ಉಸ್ತುವಾರಿ ನಡೆಸುವವರೆಗೆ ಟೈಪಿಂಗ್ ಇಲ್ಲದೆ ಏನೂ ಸಾಗದು.
ಹಳೆಯ ತಲೆಮಾರಿನ ಬಹುತೇಕ ಮಂದಿಗೆ ಅಕ್ಷರ ಗೊತ್ತಿದ್ದರೂ ಅವರು ಇ-ಸಾಕ್ಷರರಲ್ಲ. ಈ ದೃಷ್ಟಿಯಲ್ಲಿ ನೋಡುವುದಾದರೆ ಇದು ಯುವ ಜನರಿಗೆ ಮಾತ್ರ ಮೀಸಲಾದ ಜಾನಪದವೇ ಎಂಬ ಸಂಶಯ ಹುಟ್ಟುತ್ತದೆ. ಎಂಬತ್ತರ ದಶಕದಲ್ಲಿ ಡ್ಯುಂಡೆ ಮತ್ತು ಪೆಗ್ಟರ್ ಎಂಬ ಸಂಶೋಧಕರು ಕೆಲವು ಅಧ್ಯಯನಗಳ ಬಳಿಕ `ದೊಡ್ಡಮಟ್ಟದಲ್ಲಿ ಅಲ್ಲದೇ ಹೋದರೂ ತಂತ್ರಜ್ಞಾನ ತನ್ನದೇ ಆದ ಜಾನಪದವನ್ನು ಸೃಷ್ಟಿಸಿಕೊಳ್ಳಬಲ್ಲದು' ಎಂದಿದ್ದರು.
ಇನ್ನೂ ಕೆಲವು ತಜ್ಞರ ಪ್ರಕಾರ ದೃಶ್ಯ ಹಾಗೂ ಶ್ರವ್ಯವೂ ಸೇರಿರುವುದರಿಂದ ನೆಟ್‌ಪದ ಅನಕ್ಷರಸ್ಥರನ್ನೂ ತಲುಪುತ್ತದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಈಗಾಗಲೇ ಪುಟಾಣಿ ಕಂಪ್ಯೂಟರ್ ಎಂದು ಜನಮೆಚ್ಚುಗೆ ಗಳಿಸಿರುವ ಮೊಬೈಲ್ ಸರ್ವಾಂತರ್ಯಾಮಿಯಾಗಿದೆ.
ಅಕ್ಷರ ಬಾರದವರು ಕೂಡ ಡೌನ್‌ಲೋಡ್ ಮಾಡಿಕೊಳ್ಳುವ, ಬ್ರೌಸ್ ಮಾಡುವ ಹಂತ ತಲುಪಿದ್ದಾರೆ. ಹೀಗಾಗಿ ಕೆಲವೇ ವರ್ಷಗಳಲ್ಲಿ ಕಂಪ್ಯೂಟರ್ ಜನನಾಡಿಯಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುವ ವಾದವಿದೆ.
***
ಹಿಂದೆಲ್ಲಾ ಜಾನಪದ ಹೆಚ್ಚಾಗಿ ಮೌಖಿಕ ಅಥವಾ ಚಿತ್ರದ ರೂಪದಲ್ಲಿತ್ತು. ಶಾಸ್ತ್ರೀಯ ಅಧ್ಯಯನ ಆರಂಭವಾಗುತ್ತಿದ್ದಂತೆ ಅದು ಅಕ್ಷರರೂಪಕ್ಕಿಳಿಯಿತು. ಜನಪದರೊಳಗೆ ಹರಿದಾಡುತ್ತಿದ್ದ ಮಂಟೆಸ್ವಾಮಿ ಕಾವ್ಯ ಪುಸ್ತಕರೂಪಕ್ಕೆ ಬಂದದ್ದು, ಕಾಡುಗೊಲ್ಲರ ಹಾಡು ಅಕ್ಷರಕ್ಕಿಳಿದದ್ದು ಇದಕ್ಕೆ ಉದಾಹರಣೆ. ಆದರೆ ಈಗ ಜಾನಪದ ಕ್ಯಾಮೆರಾ ರೂಪದಲ್ಲೂ ಇದೆ. ಅದು ಚಿತ್ರೀಕರಿಸುವ ದೃಶ್ಯಗಳಲ್ಲಿ ಅಡಗಿದೆ.
ಉದಾಹರಣೆಗೆ ಜುಂಜಪ್ಪನ ಕಾವ್ಯವನ್ನು ಇಡೀ ವಿಶ್ವಕ್ಕೆ ಪ್ರಸಾರ ಮಾಡಬಹುದು. ಛಾಯಾಚಿತ್ರವನ್ನೇ ಕಾರ್ಟೂನ್‌ಗಳಾಗಿ ಮಾರ್ಪಡಿಸಿ ರಾಜಕೀಯ ವಿಡಂಬನೆ, ಹಾಸ್ಯಕ್ಕೆ ಬಳಸುತ್ತಿರುವುದು ನೆಟ್‌ಪದದ ವೈಶಿಷ್ಟ್ಯ. ವಿಶ್ವದ ಬೇರೊಂದು ಮೂಲೆಯಲ್ಲಿ ನಡೆಯುವ ವಿದ್ಯಮಾನವನ್ನು ಅದು ನಡೆಯುತ್ತಿರುವಂತೆಯೇ ಜಗತ್ತಿಗೆ ತೋರಿಸುವ ಅವಕಾಶವಿದೆ. ನೆಟ್‌ಪದದ ದೊಡ್ಡ ಅಭಿವ್ಯಕ್ತಿ ಸಾಧನವಾಗಿ ಕ್ಯಾಮೆರಾ ಹೊರಹೊಮ್ಮುತ್ತಿದೆ.
ದಾಖಲೆಯ ವಿಚಾರದಲ್ಲಿಯೂ ನೆಟ್‌ಪದಕ್ಕೆ ಒಳ್ಳೆಯ ಅವಕಾಶವೇ ದಕ್ಕಿದೆ. ಚಿತ್ರ, ವೀಡಿಯೊ ದೃಶ್ಯಾವಳಿ, ಬರಹ ಇತ್ಯಾದಿಗಳನ್ನು ಸಂಗ್ರಹಿಸಲು ಅಂತರಜಾಲ ವೇದಿಕೆ ಒದಗಿಸಿದೆ. ಯಾವುದೇ ವಿಷಯಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ಇಡಲೂಬಹುದು, ಖಾಸಗಿಯಾಗಿ ಸಂಗ್ರಹಿಸಿಡಲೂಬಹುದು. ಇದು ಜಾನಪದ ತಜ್ಞರ ಸಂಗ್ರಹದ ಹೊಣೆಯನ್ನು ದೊಡ್ಡಮಟ್ಟಿಗೆ ಕಡಿಮೆ ಮಾಡಿದೆ ಎನ್ನುತ್ತಾರೆ ಯುವ ಸಂಶೋಧಕ ಡಾ. ಅರುಣ್ ಜೋಳದಕೂಡ್ಲಿಗಿ. ಮೊದಲೆಲ್ಲಾ ಸಂಗ್ರಹಕಾರ್ಯವೇ ಪಾಂಡಿತ್ಯ ಎಂಬಂತಾಗಿತ್ತು. |
ಸಂಗ್ರಹವೇ ದೊಡ್ಡ ಸಾಹಸವಾಗಿ ಪರಿಣಮಿಸಿ ಜಾನಪದದ ವಿಶ್ಲೇಷಣೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಹಳೆಯದನ್ನು ಸಂಗ್ರಹಿಸಿಡುವ ಜತೆಗೆ ವರ್ತಮಾನ ತಾನೇತಾನಾಗಿ ದಾಖಲಾಗುತ್ತಿದೆ. ಅಲ್ಲದೆ ಬಯಸಿದಾಗ ಓದಿಕೊಳ್ಳಬಹುದಾದ, ನೋಡಿಕೊಳ್ಳಬಹುದಾದ, ಕೇಳಿಕೊಳ್ಳಬಹುದಾದ ಅವಕಾಶ ಅಂತರಜಾಲದಲ್ಲಿದೆ. ಈ ನಿರಂತರತೆ ನೆಟ್‌ಪದದ ಜನಪ್ರಿಯತೆಯನ್ನು, ಅದರ ವಿಸ್ತಾರವನ್ನು ಹೆಚ್ಚಿಸಿದೆ.
ಕುತೂಹಲದ ಸಂಗತಿ ಎಂದರೆ ಜಾನಪದದಂತೆಯೇ ನೆಟ್‌ಪದವೂ ಬಹುತೇಕ ಅನಾಮಿಕರ ಸಾಮ್ರಾಜ್ಯ. ಯಾವುದೋ ಘಟನೆಯ ಪ್ರೇರಣೆಯೊಂದು ಅವರೊಳಗೆ ಪ್ರತಿಕ್ರಿಯೆಯಾಗಿ ಮೂಡುತ್ತದೆ. ಹೀಗಾಗಿ ಅಂತರಜಾಲದಲ್ಲಿ ಬರುವ ಅನೇಕ ವಿಷಯಗಳಿಗೆ ಒಡೆಯರು ಇರುವುದಿಲ್ಲ. ಇದ್ದರೂ ತಮ್ಮ ಕೃತಿಯನ್ನು ಬೌದ್ಧಿಕ ಹಕ್ಕಿನ ಮೂಲಕ ಪ್ರತಿಪಾದಿಸುವುದು ಅಪರೂಪ. ಕಾರಣ ಎಷ್ಟೋ ಬಾರಿ ಅದು ತಮ್ಮ ಸೃಷ್ಟಿಯಾಗಿರುವುದಿಲ್ಲ. ಎಲ್ಲಿಂದಲೋ ಎರವಲು ಪಡೆದದ್ದು, `ಫಾರ್ವರ್ಡ್' ಅಸ್ತ್ರದಿಂದ ದೊರೆತದ್ದು.
ಬೆಂಗಳೂರಿನ ಪರ್ಯಾಯ ಕಾನೂನು ವೇದಿಕೆಯ ಕಾನೂನು ಸಂಶೋಧಕ ಲಾರೆನ್ಸ್ ಲಿಯಾಂಗ್ ಅವರು ಹೇಳುವಂತೆ, ನೆಟ್‌ಪದ ಬೌದ್ಧಿಕ ಹಕ್ಕುಸ್ವಾಮ್ಯವನ್ನು ಅಷ್ಟಾಗಿ ನೆಚ್ಚಿಕೊಂಡಿಲ್ಲ. ಹಾಗೆಂದು ಹಕ್ಕುಸ್ವಾಮ್ಯ ಬಯಸುವವರಿಗೆ ಇದರಿಂದೇನೂ ತೊಂದರೆ ಇಲ್ಲ. ಜಾನಪದದಂತೆ ನೆಟ್‌ಪದವನ್ನೂ ಅನೇಕ ಅನಾಮಿಕರು ಕಟ್ಟುತ್ತಿದ್ದಾರೆ.
ಜಾಲತಾಣವೊಂದರಲ್ಲಿ ಕಾಣಿಸಿಕೊಂಡ ಪದ್ಯದಲ್ಲಿ ಮೂಲಕವಿಯ ಹೆಸರಿದ್ದರೂ ಅನುವಾದಕನ ಹೆಸರು ಇರಲಿಲ್ಲ. ಹಕ್ಕುಸ್ವಾಮ್ಯಕ್ಕೆ ವಿರುದ್ಧವಾಗಿ ಮುಕ್ತ ಸಾಫ್ಟ್‌ವೇರ್ ಒಂದು ಆಂದೋಲನವಾಗಿ ಬೆಳೆದದ್ದನ್ನು ಸ್ಮರಿಸಬಹುದು. ಅಂತರಜಾಲದ ಸಾಮಾಜಿಕ ಆಂದೋಲನವು `ಮುಕ್ತ ಸಂಪನ್ಮೂಲ ಸಂಸ್ಕೃತಿ'ಯನ್ನು ಪ್ರತಿಪಾದಿಸುತ್ತಿರುವುದು ಕೂಡ ಜಾನಪದದ ಒಂದು ಅಂಗದಂತೆ ತೋರುತ್ತಿದೆ.
ಇಲ್ಲಿ ಇನ್ನೊಂದು ಸ್ವಾರಸ್ಯಕರ ಸಂಗತಿ ಇದೆ. ನಗೆ ಚಟಾಕಿ ಸೃಷ್ಟಿಸಿದ ವ್ಯಕ್ತಿಯೊಬ್ಬ ಅದನ್ನು ತನ್ನ ಗೆಳೆಯರಿಗೆ ಫಾರ್ವರ್ಡ್ ಮಾಡುತ್ತಾನೆ. ಅದು ಅಲ್ಲಿಂದ ಮತ್ತೊಬ್ಬರಿಗೆ ಮತ್ತೊಬ್ಬರಿಂದ ಮಗದೊಬ್ಬರಿಗೆ ಹರಡುತ್ತದೆ ಎಂದಿಟ್ಟುಕೊಳ್ಳೋಣ. ಅದರ ಸೃಷ್ಟಿಕರ್ತ ತಾನೇ ಸೃಷ್ಟಿಸಿದ ನಗೆಚಟಾಕಿ ತನ್ನದೆಂದು ಪ್ರತಿಪಾದಿಸುವುದು ಸಾಧ್ಯವಿಲ್ಲ. ಕಾನೂನು ಹೋರಾಟ ನಡೆಸಿದರೂ ಫಲ ಸಿಗುವುದಿಲ್ಲ. ಫಾರ್ವರ್ಡ್ ಮಾಡಿದ, ರೀಫಾರ್ವಡ್ ಮಾಡಿದ ಕತೆ, ಹಾಸ್ಯ ಮುಂತಾದವೆಲ್ಲಾ ಜಾನಪದ ಎಂಬ ವಿಶೇಷಣ ಪಡೆದು ಲೋಕದ ಕೂಸುಗಳಾಗುವುದು ವಿಶೇಷ.
ಅಂತರಜಾಲದಲ್ಲಿ ದೀರ್ಘಬರಹಗಳಿಗೆ ಅವಕಾಶವಿಲ್ಲ. ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್ ಮತ್ತಿತರ ಸಾಧನಗಳು ಪುಸ್ತಕ ಅಥವಾ ಪತ್ರಿಕೆಯಂತಲ್ಲ. ಇಲ್ಲಿ ಹೆಚ್ಚೆಂದರೆ ಎರಡು ಮೂರು ಪುಟಗಳಲ್ಲಿ ಲೇಖನ ಮುಗಿಯುತ್ತದೆ. ಸುದೀರ್ಘ ಲೇಖನಗಳಿಗಿಂತಲೂ ಮೈಕ್ರೊ  ಬರವಣಿಗೆಗಳು ಸ್ಥಾನ ಪಡೆಯುತ್ತವೆ.
ಕನ್ನಡದಲ್ಲಿ ಇಂಥ ಪುಟ್ಟ ಬರಹಗಳು ಇತ್ತೀಚೆಗೆ ಹೆಚ್ಚುತ್ತಿರುವುದನ್ನು ಕೆಲವು ವಿದ್ವಾಂಸರು ಅಂತರಜಾಲದ ಫಲ ಎಂದು ಗುರುತಿಸುತ್ತಾರೆ. ಅಷ್ಟೇ ಅಲ್ಲ, ಭಾಷೆಯ ಸಾಧ್ಯತೆಯನ್ನು ನೆಟ್‌ಪದ ವಿಸ್ತರಿಸಿದೆ. ಹವ್ಯಕ ಕನ್ನಡ, ಕುಂದಗನ್ನಡ, ಚಾಮರಾಜನಗರ ಕನ್ನಡ, ಬೀದರ್ ಕನ್ನಡದ ಸೊಗಡನ್ನು ನೆಟ್‌ನಲ್ಲಿ ಓದಿ, ಕೇಳಿ ತಿಳಿಯಲು ಸಾಧ್ಯ. ಸ್ವತಃ ಇಂಗ್ಲಿಷ್ ಭಾಷೆಯನ್ನೂ ಕಂಪ್ಯೂಟರ್ ಬದಲಿಸುತ್ತಿದೆ. ಟಿ9 ಭಾಷೆ ಇಂಗ್ಲಿಷನ್ನು ಸಂಗ್ರಹ ರೂಪದಲ್ಲಿ ಹೇಳುವಂತೆ ಮಾಡಿದೆ. ಇಂತಹ ಬದಲಾವಣೆಗಳೆಲ್ಲ ಜಾನಪದದ ಅಂತಃಸತ್ವ ಎಂಬುದು ಗಮನಾರ್ಹ.
***
ಪಶ್ಚಿಮದ ಕೆಲವು ದೇಶಗಳಲ್ಲಿ ಆನ್‌ಲೈನ್ ಮೂಲಕ ಅರ್ಬನ್ ಲೆಜೆಂಡ್‌ಗಳು (ನಗರ ದಂತಕತೆಗಳು) ಹರಡುತ್ತಿವೆ. ಉದಾಹರಣೆಗೆ  ವೈ2ಕೆ ಬಗ್ ಬಗ್ಗೆ ಹರಡಿದ್ದ ಭೀತಿ. ಈ ಶತಮಾನದ ಆರಂಭದ ಹೊತ್ತಿಗೆ ಎದ್ದ ವೈ2ಕೆ ವದಂತಿ ಇಡೀ ಕಂಪ್ಯೂಟರ್ ಸಂಕುಲವನ್ನು ಮಾತ್ರ ಅಲುಗಾಡಿಸಲಿಲ್ಲ. ವೀಡಿಯೊ ಕ್ಯಾಸೆಟ್‌ರೆಕಾರ್ಡರ್‌ಗಳು ಕೂಡ ಹಾಳಾಗುತ್ತವೆ ಎಂಬ ದಂತಕತೆಯೊಂದನ್ನು ಹುಟ್ಟುಹಾಕಿತು. ಆದರೆ ಕೆಲದಿನಗಳಲ್ಲಿಯೇ ಇದೊಂದು ವದಂತಿ ಎಂಬುದು ತಿಳಿಯಿತು. ಇಂಟರ್‌ನೆಟ್‌ನಲ್ಲಿ ಹುಟ್ಟಿಕೊಂಡ ಮತ್ತೊಂದು ಕತೆ ಹೀಗಿದೆ: ಹಸಿ ಈರುಳ್ಳಿಯನ್ನು ಮನೆಯ ಸುತ್ತ ಹರಡುವುದರಿಂದ ಜ್ವರ ತಡೆಗಟ್ಟಬಹುದು.
ಅದಕ್ಕೆ ರೋಗಾಣುಗಳನ್ನು ಹೀರಿಕೊಳ್ಳುವ ಶಕ್ತಿ ಇದೆ ಎಂಬ ನಂಬಿಕೆ. ಉಗ್ರ ಒಸಾಮ ಬಿನ್‌ಲಾಡೆನ್ ಹತ್ಯೆಯಾದಾಗಲೂ ಒಂದು ಚಿತ್ರ ಮಿಂಚಿನಂತೆ ಕಂಪ್ಯೂಟರ್‌ನಲ್ಲಿ ಹರಿದಾಡಿತು. ರಕ್ತಸಿಕ್ತ ಸ್ಥಿತಿಯಲ್ಲಿ ಆತ ಬಿದ್ದಿರುವ ಚಿತ್ರವನ್ನು ಅದು ಬಿಂಬಿಸುತ್ತಿತ್ತು. ಸ್ವಲ್ಪಹೊತ್ತಿನ ನಂತರ ಅದು ಹುಸಿ ಚಿತ್ರ ಎಂಬುದು ತಿಳಿದುಬಂತು. ಕೆಲವು ಪತ್ರಿಕೆಗಳು ಆ ಚಿತ್ರ ಪ್ರಕಟಿಸದಿರಲು ನಿರ್ಧರಿಸಿದವು.
ಒಂದೆರಡು ದಶಕಗಳ ಹಿಂದಕ್ಕೆ ಹೋಗೋಣ. ಪ್ರತಿ ಊರಿನ ಮನೆಬಾಗಿಲ ಮೇಲೂ `ನಾಳೆ ಬಾ' ಎಂಬ ಪದ. ಅದರ ಕುರಿತು ಕೇಳಿದರೆ ಒಂದೊಂದು ಊರಿನಲ್ಲಿ ಒಂದೊಂದು ಕತೆಗಳು. ದೇವರ ಹೆಸರಿನಲ್ಲಿ ಸಾವಿರದೊಂದು ಪತ್ರಗಳನ್ನು ಮುದ್ರಿಸಿ ಹಂಚಿ. ಇದರಿಂದ ಒಳ್ಳೆಯದಾಗುತ್ತದೆ, ಪತ್ರ ಓದಿಯೂ ಹಂಚದಿದ್ದರೆ ನಾಶ ಕಟ್ಟಿಟ್ಟಬುತ್ತಿ ಎಂಬರ್ಥದ ಕಾಗದಗಳನ್ನು ಎಲ್ಲಾದರೂ ನೋಡಿರುತ್ತೀರಿ. ಇಂಥ ಪ್ರಚಾರಗಳು ಇ-ಮೇಲ್ ಮೂಲಕವೂ ನಡೆಯುವುದುಂಟು.
ಒಂದೂರಿನಲ್ಲಿ ಐದು ಹೆಡೆಯ ಕಾಳಿಂಗ ಸರ್ಪ ಇತ್ತಂತೆ. ಅದು ಬುಸುಗುಟ್ಟಿದರೆ ಊರಿನ ತುಂಬ ವಿಷಗಾಳಿ ಹರಡುತ್ತಿತ್ತಂತೆ ಎಂಬ ಕಾಗಕ್ಕ ಗೂಬಕ್ಕನ ಕತೆಗಳನ್ನು ನೀವು ಕೇಳಿರುತ್ತೀರಿ. ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಅಂಥದ್ದೇ ಚಿತ್ರವೊಂದು ಹರಿದಾಡಿತು. ಕಾಡಿನಂಥ ಪ್ರದೇಶ. ರಸ್ತೆಯ ಬದಿಯಲ್ಲಿ ಐದು ಹೆಡೆಯ ಕಾಳಿಂಗ ಸರ್ಪ ಹೂಂಕರಿಸುತ್ತಿದೆ.
ದೂರದಲ್ಲಿ ಜನ ನಿಬ್ಬೆರಗಾಗಿ ನೋಡುತ್ತಿದ್ದಾರೆ. ಅದು ಕಂಪ್ಯೂಟರ್ ಸೃಷ್ಟಿ ಎಂದು ಯಾರು ಬೇಕಾದರೂ ಊಹಿಸುವುದು ಸಾಧ್ಯ. ಹೀಗೆ ಅಂತರಜಾಲದಲ್ಲಿ ಹರಡುವ ವದಂತಿಗಳನ್ನು ವೈರಲ್ ಸಂದೇಶ, ವೈರಲ್ ಟೆಕ್ಸ್ಟ್, ವೈರಲ್ ಅಲರ್ಟ್ಸ್ ಎಂದು ಸಂದರ್ಭಕ್ಕನುಸಾರ ಕರೆಯಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಇವುಗಳ ಆರ್ಭಟ ಹೆಚ್ಚು.
ಸಾರ್ವಜನಿಕ ಸ್ಥಳಗಳಲ್ಲಿರುವ ಬಹುತೇಕ ಮಂದಿ ತಮ್ಮ ಪಕ್ಕದವರೊಡನೆ ಮಾತನಾಡುವುದಕ್ಕಿಂತ ಇಂಟರ್‌ನೆಟ್‌ನಲ್ಲೋ, ಗೇಮ್‌ಗಳಲ್ಲೋ, ಇಯರ್‌ಫೋನ್ ಹಾಕಿಕೊಂಡೋ ತಲ್ಲೆನರಾಗಿರುತ್ತಾರೆ. ತನ್ನ ಪಕ್ಕದಲ್ಲಿರುವ ವಾಸ್ತವ ವ್ಯಕ್ತಿ ಇದ್ದೂ ಇಲ್ಲದಂತಾಗುತ್ತಾರೆ. ಆದರೆ ದೂರದಲ್ಲೆಲ್ಲೋ ಇರುವ ತೆರೆಯ ಮೇಲೆ, ಶಬ್ದಗಳ ರೂಪದಲ್ಲಿ ಬರುವ ವ್ಯಕ್ತಿಗಳು ವಾಸ್ತವವೆಂಬಂತೆ ತೋರುತ್ತಾರೆ. `ನೆಟ್‌ಪದ'ದ ಮತ್ತೊಂದು ಲಕ್ಷಣ `ಭ್ರಮಾತ್ಮಕ ವಾಸ್ತವ' ಎನ್ನುತ್ತಾರೆ ಹಿರಿಯ ವಿದ್ವಾಂಸ ಡಾ. ಓ.ಎಲ್. ನಾಗಭೂಷಣ ಸ್ವಾಮಿ. ದೃಶ್ಯವೊಂದು ಅನುಭವದ ರೂಪದಲ್ಲಿ ದಕ್ಕುತ್ತದೆ, ಆದರೆ ಅದೇ ನಿಜವಲ್ಲ. ಇದನ್ನು ಕೃತಕ ವಾಸ್ತವ ಎಂದೂ ಕರೆಯುವುದುಂಟು.
ಹೀಗೆ ಏಕಾಕಿತನ ಸೃಷ್ಟಿಸುವುದು ಬಂಡವಾಳಶಾಹಿ ಜಗತ್ತಿನ ಉದ್ದೇಶ ಎನ್ನುವ ವಿಶ್ಲೇಷಣೆ ಅವರದು. ವ್ಯಕ್ತಿಗಳನ್ನು ಏಕಾಂಗಿಯಾಗಿಸುವುದರಿಂದ ಅವರ ಕೊಳ್ಳುಬಾಕತನ ವೃದ್ಧಿಸುತ್ತದೆ. ನೆಟ್‌ಪದ ಮಾರುಕಟ್ಟೆ ಆಧಾರಿತ ಎಂಬ ಮಾತು ಇದಕ್ಕೆ ಪುಷ್ಟಿ ನೀಡುತ್ತದೆ. ನಿಮ್ಮದೇ ಫೇಸ್‌ಬುಕ್ ಅಕೌಂಟ್‌ನಲ್ಲಿ ಹತ್ತಾರು ಜಾಹೀರಾತುಗಳು, ನಿಮ್ಮದೇ ಮೊಬೈಲ್‌ನಲ್ಲಿ ಬೇಕಿದ್ದರೂ ಬೇಡದಿದ್ದರೂ ಮೂಡುವ ಜಾಹೀರಾತುಗಳು ಇದಕ್ಕೆ ಸಾಕ್ಷಿ.
ಕನ್ನಡದ ಸಂದರ್ಭದಲ್ಲಿ ಈ ಬಗೆಯ ಆಧುನಿಕ ಜಾನಪದವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಬೆರಳೆಣಿಕೆಯ ಹಾಗೂ ಹೊಸ ತಲೆಮಾರಿನ ವಿದ್ವಾಂಸರು, ಸಂಶೋಧಕರು ಮಾತ್ರ ಇದರತ್ತ ಆಸಕ್ತಿ ತಳೆದಿದ್ದಾರೆ. ಆದರೆ ಪಶ್ಚಿಮದಲ್ಲಿ ಅಂತರಜಾಲ ಮತ್ತು ಜಾನಪದ, ನೆಟ್‌ಪದ ಕುರಿತಂತೆ ಉತ್ತಮ ಅಧ್ಯಯನಗಳು ನಡೆದಿವೆ. ಶಂಖದಿಂದ ಬಂದದ್ದು ತೀರ್ಥ ಎಂದು ಭಾವಿಸದೆ ದೇಸಿನೆಲೆಯಲ್ಲಿಯೇ ಹೊಸ ಬಗೆಯ ಜಾನಪದದ ಅಧ್ಯಯನ ನಡೆಯಬೇಕು ಎಂಬ ಒತ್ತಾಯ ಜಾನಪದ ಅಧ್ಯಯನ ವಲಯದಲ್ಲಿ ಕೇಳಿಬರುತ್ತಿದೆ.
***
ಹಿಂದೆ ಚೌಕಾಬಾರ ಆಡಲು ಗೆಳೆಯರಿರುತ್ತಿದ್ದರು. ಜಗಲಿ ಮೇಲೆ ಕುಳಿತು ಗಂಟೆಗಟ್ಟಲೆ ಹರಟಬಹುದಿತ್ತು. ಅಂಚೆಯಣ್ಣ ತರುವ ಕಾಗದ ತುದಿಗಾಲಲ್ಲಿ ನಿಲ್ಲಿಸುವಂತಿತ್ತು ಎಂದು ಹಳೆಯ ಕಾಲವನ್ನು ನೆನೆಯುವವರಿದ್ದಾರೆ. ಕಾಲ ಹಾಗೆಯೇ ಇರಲೆಂಬ ಹಟ ಏಕೆ? ನೆಟ್‌ನಲ್ಲಿಯೂ `ನಿಂಬೀಯ ಬನ'ದ ಸೊಬಗಿದೆ. `ಮಾಯದಂಥ ಮಳೆ' ಬರುತ್ತದೆ. `ಭಾಗ್ಯದ ಬಳೆಗಾರ' ಹಾಡುತ್ತಾನೆ!
ಅಪ್ಪ ಅಮ್ಮನನ್ನು ಪ್ರದಕ್ಷಿಣೆ ಹಾಕಿದ ಗಣೇಶ ಮೂಲೋಕ ಸುತ್ತಿದೆ ಎಂದನಂತೆ. ಈ ಮಾತು ಕೋಣೆಯೊಳಗೆ ಕೂತು ಅಂತರಜಾಲ ಜಾಲಾಡುವವರಿಗೂ ಅನ್ವಯಿಸುತ್ತದೆ.

ಶನಿವಾರ, ಫೆಬ್ರವರಿ 9, 2013

ಕೇರಳದ ದೇಸಿ ಸೆಮಿನಾರಿನಲ್ಲಿ ಕನ್ನಡದ ಕಲರವ


-ಅರುಣ್ ಜೋಳದಕೂಡ್ಲಿಗಿ
 

    ಇದೇ 9,10 ರಂದು ಕೇರಳ ಫೋಕ್ ಲೋರ್ ಅಕಾಡೆಮಿ ಮತ್ತು ಫೋಕ್ ಲೋರ್ ಫೆಲೋಸ್ ಸಂಯುಕ್ತವಾಗಿ `ಜಾನಪದದ ನೆಲೆಯಲ್ಲಿ ಜಾತ್ಯಾತೀತತೆಯ ಸ್ವರೂಪಎಂಬ ವಿಷಯದಲ್ಲಿ ಎರಡನೇ ದೇಸಿ ಸೆಮಿನಾರನ್ನು ಆಯೋಜಿಸಿತ್ತು. ಇದರ ಮೊದಲ ದಿನದ ರಾಷ್ಟ್ರೀಯ ಸೆಮಿನಾರಿನಲ್ಲಿ ಆಂದ್ರ, ಕೇರಳ, ತಮಿಳುನಾಡು, ಕರ್ನಾಟಕದ ನಾಲ್ಕು ರಾಜ್ಯಗಳಲ್ಲಿ ಜಾನದದ ನೆಲೆಯ ಜಾತ್ಯಾತೀತತೆಯ ಸ್ವರೂಪವನ್ನು ಹಂಚಿಕೊಂಡರು.
 

  ವಿಷೇಶವೆಂದರೆ ಈ ಗೋಷ್ಠಿಯ ಕೀನೋಟ್ ಅಡ್ರಸ್ ಮಾಡಿದ್ದು ಕನ್ನಡದ ಮುಖ್ಯ ಜಾನಪದ ವಿದ್ವಾಂಸರಾದ ಪ್ರೊ.ಬಿ..ವಿವೇಕ ರೈ ಅವರು. ರೈ ಅವರು ಕನ್ನಡದ ಮಲೆ ಮದೇಶ್ವರ, ಮಂಟೇಸ್ವಾಮಿ, ಸಿರಿ ಮುಂತಾದ ಮಹಾಕಾವ್ಯಗಳನ್ನು, ಇಲ್ಲಿನ ಆಚರಣ ಲೋಕವನ್ನೂ, ತುಳು ನಾಡಿದ ಬಬ್ಬರ್ಯ ಆರಾಧನೆಯನ್ನೂ ಒಳಗೊಂಡಂತೆ ಜಾನಪದದ ಜಾತ್ಯಾತೀತತೆಯ ನೆಲೆಯನ್ನು ತುಂಬಾ ಸೂಕ್ಷ್ಮವಾಗಿ ಕಟ್ಟಿಕೊಟ್ಟರು. ಇದು ಕರ್ನಾಟಕದ ಸಾಂಸ್ಕೃತಿಕ ಲೋಕಗಳನ್ನು ವಿವರಿಸುತ್ತಲೇ ಭಾರತದ,ಅದರಲ್ಲೂ ದಕ್ಷಿಣ ಭಾರತದ ಜಾನಪದದ ಜಾತ್ಯಾತೀತ ನೆಲೆಗಳನ್ನು ಸೂಕ್ಷ್ಮವಾಗಿ ರೈ ವಿವರಿಸಿದರು.
 

   ನಂತರ ನಾನು ಕರ್ನಾಟಕದ ಜಾನಪದದಲ್ಲಿ ಜಾತ್ಯಾತೀತತೆಯನ್ನು ಕರ್ನಾಟಕದ ಮೊಹರಂ ಆಚರಣೆಯನ್ನೂ, ಗ್ರಾಮದೇವತೆಗಳ ಜಾತ್ರೆಗಳನ್ನು, ಕರ್ನಾಟಕದ ಜನಪದ ಕಲೆಗಳು ಸೆಕ್ಯುಲರ್ ಆಗುತ್ತಿರುವುದನ್ನು ಬಹಳ ಮುಖ್ಯ ಸಂಗತಿಗಳ ಟಿಪ್ಪಣಿ ಮಂಡಿಸಿದೆ.
 

ಸಾಹಿತ್ಯ ಸಮ್ಮೇಳನ ನಡೆಯುವ ಇದೇ ದಿನ ಕೇರಳದಲ್ಲಿ ದೇಸಿ ಸೆಮಿನಾರಿನಲ್ಲಿ ಕನ್ನಡದ ಸಾಂಸ್ಕೃತಿಕ ಲೋಕದ ವಿಶಿಷ್ಟತೆಗಳನ್ನು ಅನಾವರಣ ಮಾಡುತ್ತಾ ಕನ್ನಡದ ಕಂಪನ್ನು ಕೇರಳದ ನೆಲದಲ್ಲಿ ಬಿಂಬಿಸಿದಂತಿತ್ತು. ಆ ಕಾರಣಕ್ಕೆ ಖುಷಿಯೂ ಆಯಿತು.