ಮಂಗಳವಾರ, ನವೆಂಬರ್ 29, 2011

ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಲಾಂಛನ ಮತ್ತು ವೆಬ್ ಸೈಟ್ ಬಿಡುಗಡೆ



ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಲಾಂಛನ ಮತ್ತು ವೆಬ್ ಸೈಟ್ ಬಿಡುಗಡೆಯಾದುದು ಸಂತಸದ ಸಂಗತಿ. ಕರ್ನಾಟಕ ಜಾನಪದ ಚರಿತ್ರೆಯಲ್ಲಿ ಇದೊಂದು ಚಾರಿತ್ರಿಕವಾದ ಘಟನೆ . ವೆಬ್ ಸೈಟ್ ಕಾಲ ಕಾಲಕ್ಕೆ ಅಪ್ ಡೇಟ್ ಆಗುವ ಮೂಲಕ ಜಾನಪದ ಜಗತ್ತಿನ ಸಂಗತಿಗಳನ್ನು ನಿರಂತರವಾಗಿ
ವೆಬ್ ಹುಡುಕಾಟಗಾರರಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ.


ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಆಗಿ ಇಷ್ಟು ಕಡಿಮೆ ಅವಧಿಯಲ್ಲಿ ಇಂತಹ ಬೆಳವಣಿಗೆಗೆ ಕಾರಣರಾದ ಕುಲಪತಿಗಳಾದ ಪ್ರೊ. ಅಂಬಳಿಕೆ ಹಿರಿಯಣ್ಣ ಅವರ ಕ್ರಿಯಾಶೀಲತೆಯನ್ನು ಮೆಚ್ಚಬೇಕು. ಕನ್ನಡ ಜಾನಪದ ಬ್ಲಾಗ್ ನಲ್ಲಿ ವೆಬ್ ಸೈಟ್ ಲಿಂಕನ್ನು ಕೊಡಲಾಗಿದೆ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಲಾಂಛನ ಮತ್ತು ವೆಬ್ ಸೈಟ್ ಬಿಡುಗಡೆಗೆಯಾದ
ಈ ಸಂದರ್ಭದಲ್ಲಿ ಮಾನ್ಯ ಕುಲಪತಿಗಳಿಗೂ ಮತ್ತು ಅದಕ್ಕೆ ಕಾರಣರಾದ ತಾಂತ್ರಿಕ ವರ್ಗಕ್ಕೂ ಕನ್ನಡ ಜಾನಪದ ಬ್ಲಾಗ್ ಅಭಿನಂದನೆಗಳನ್ನು ತಿಳಿಸುತ್ತದೆ.

ಹಲಗೆ ವಾದ್ಯಕ್ಕೆ ಗತ್ತು ನೀಡುವ ತಳವಾರ ಹನುಮಂತಪ್ಪ




-ಸಿದ್ಧರಾಮ ಹಿರೇಮಠ.


ಕುಣಿಯುವ ಹುಮ್ಮಸ್ಸು ನೀಡು ಸಾಂಪ್ರದಾಯಿಕ ವಾದ್ಯಗಳಲ್ಲಿ ಹಲಗೆ ವಾದ್ಯವೂ ಒಂದು. ಚರ್ಮದಿಂದ ಸಿದ್ಧಪಡಿಸಿ, ಎರಡು ತೆಳು ಬಿದಿರಿನೊಂದಿಗೆ ಹಲಗೆಯನ್ನು ಬಾರಿಸತೊಡಗಿದರೆ ಎಂತಹವರಿಗೂ ಕುಣಿಯುವ ಹುಮ್ಮಸ್ಸು ಮೂಡಿಬಿಡುತ್ತದೆ. ಅದನ್ನೇ ತಂಡ ಕಟ್ಟಿಕೊಂಡು, ಅದಕ್ಕೊಂದು ಗತ್ತು ಮೂಡಿಸುತ್ತಿರುವವರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯಲ್ಲಿರುವ ಹನುಮಂತಪ್ಪ ಒಬ್ಬರಾಗಿದ್ದಾರೆ. ಇವರಿಗೆ ಪ್ರೋತ್ಸಾಹ ನೀಡಿ ಮಾರ್ಗದರ್ಶನ ನೀಡುತ್ತಿರುವವರು ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬ್ಯಾಳಿ ವಿಜಯಕುಮಾರಗೌಡ.


ವಂಶಪಾರಂಪರ್ಯವಾಗಿ ಹಲಗೆ ವಾದ್ಯವನ್ನು ನುಡಿಸುತ್ತಿರುವ ತಳವಾರ ಹನುಮಂತಪ್ಪನವರಿಗೆ ಗುರುಗಳೆಂದರೆ ಸಾರೆಪ್ಪರ ತಿಂದಪ್ಪ, ದುರುಗಪ್ಪ, ಸಾಲುಮನಿ ಮೂಗಪ್ಪ, ಬಿ.ಮರಿಯಪ್ಪ, ಉಚ್ಚಂಗಪ್ಪನವರಂತಹ ಹಿರಿಯರು ಹಲಗೆ ವಾದ್ಯವನ್ನು ನುಡಿಸುವುದನ್ನು ಕಲಿಸಿದರು. ದೇಸಿ ವಾದ್ಯವಾಗಿರುವ ಹಲಗೆ ಎಲ್ಲ ಕಾಲಕ್ಕೂ ಸೈ ಎನಿಸಿಕೊಂಡಿರುವಂತಹದು. ಮೊಹರಂ ಕುಣಿತದಿಂದ ಹೋಳಿ ಹುಣ್ಣಿಮೆಯ ಮೆರವಣಿಗೆಯವರೆಗೂ ಪಡ್ಡೆಗಳಿಗೆ ಥಟ್ಟನೆ ನೆನಪಾಗುವುದೇ ಹಲಗೆ ವಾದ್ಯ. ಹಲಗೆ ಒಂದೇ ಇರಲಿ, ಹತ್ತೇ ಇರಲಿ ಕುಣಿತ ಆರಂಭಗೊಂಡುಬಿಡುತ್ತದೆ.

ಇಂತಹ ವಾದ್ಯಕ್ಕೆ ಜಾನಪದ ಕಲೆಯ ರೀತಿಯಲ್ಲಿಯೇ ಅದಕ್ಕೊಂದು ಸ್ಥಾನ ದೊರಕಿಸಿಕೊಡಬೇಕೆಂದು ಹನುಮಂತಪ್ಪ ೨೦ ವರ್ಷಗಳ ಹಿಂದೆಯೇ ತನ್ನಂತಯೇ ಇತರ ೮ ಜನರ ತಂಡವನ್ನು ಕಟ್ಟಿದರು. ಹೀಗೆ ಕಟ್ಟಿದ ತಂಡಕ್ಕೆ ಶ್ರೀ ಮದಗಾಂಬಿಕಾ ಜಾನಪದ ಹಲಗೆ ವಾದ್ಯ ತಂಡವೆಂಬ ಹೆಸರು ಕೊಟ್ಟು, ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ೨೦೦೬ರಲ್ಲಿ ಬಳ್ಳಾರಿಯಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಸುವರ್ಣ ಸಾಂಸ್ಕೃತಿಕ ದಿಬ್ಬಣ, ಕನಕ ಜಯಂತಿ, ಹೊಸಪೇಟೆ, ಗಡಿಭಾಗವಾದ ಡಿ.ಹಿರೇಹಾಳ, ಚಿತ್ರದುರ್ಗದ ಶರಣರ ಮೇಳ, ಉಜ್ಜಯಿನಿ ರಥೋತ್ಸವ, ಕೊಟ್ಟೂರಿನ ರಥೋತ್ಸವ ಹೀಗೆ ಹಲವಾರು ರಥೋತ್ಸವ, ಕಾರ್ಯಕ್ರಮಗಳಲ್ಲಿ ತಮ್ಮ ತಂಡದ ಮೂಲಕ ಕೌಶಲ್ಯ ಮೆರೆದಿದ್ದಾರೆ. ಜಾನಪದ ಗಾಯಕ ಬಾನಂದೂರು ಕೆಂಪಯ್ಯನವರಿಂದಲೂ ಸೈ ಎನಿಸಿಕೊಂಡ ತಂಡ ಇವರದು.

೨೦೦೫ರಲ್ಲಿ ಹೊಸಪೇಟೆ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಗುರುವಂದನಾ ಮಹೋತ್ಸವದಲ್ಲಿ ಸೇವಾ ಪ್ರಶಸ್ತಿಯನ್ನು ತಂಡ ಪಡೆದುಕೊಂಡಿದೆ. ವಿವಿಧ ಸಂದರ್ಭಗಳಲ್ಲಿ ಪ್ರಶಂಸಾ ಪತ್ರಗಳನ್ನೂ ತಂಡ ಪಡೆದಿದೆ. ಹನುಮಂತಪ್ಪನವರ ತಂಡದಲ್ಲಿ ಪೂಜಾರ ಗಂಗಪ್ಪ, ಹನುಮಂತಪ್ಪ, ದುರುಗಪ್ಪ, ಮದರಾಸ ಬಸಪ್ಪ, ಮೈಲಪ್ಪರ ದುರುಗಪ್ಪ, ಜೆ.ಹುಚ್ಚಂಗಪ್ಪ, ದಂಡೆಪ್ಪರ ಅಂಜಿನಪ್ಪ, ಬೇವಿನಮರದ ಬಸಪ್ಪ ಇದ್ದಾರೆ. ಈ ತಂಡದಲ್ಲಿ ತರುಣರೂ ಇದ್ದಾರೆ.

ತಂಡದ ನಾಯಕತ್ವವನ್ನು ವಹಿಸಿರುವ ಹನುಮಂತಪ್ಪನವರಿಗೆ ಇದೀಗ ೬೫ರ ಹರೆಯ. ಏಕೆಂದರೆ ಯಾವುದೇ ಯುವಕನಿಗೂ ಕಡಿಮೆ ಇಲ್ಲದಂತೆ ಹನುಮಂತಪ್ಪ ಬಿಡುವಿಲ್ಲದಂತೆ ಹಲಗೆಯನ್ನು ನುಡಿಸುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ತಂಡಕ್ಕೆ ಮಾನ್ಯತೆ ನೀಡಿ ಕಾರ್ಯಕ್ರಮಗಳಿಗೆ ಅವಕಾಶ ನೀಡಿದೆ. ಈ ತಂಡಕ್ಕೆ ವಸ್ತ್ರಭೂಷಣ, ವಾದ್ಯ ಪರಿಕರಗಳ ಅವಶ್ಯಕತೆಯಿದೆ. ಅವೆಲ್ಲವೂ ದೊರೆತಲ್ಲಿ ತಂಡ ಮತ್ತಷ್ಟು ಉತ್ಸಾಹದಿಂದ ಕಾರ್ಯಕ್ರಮಗಳನ್ನು ಒದಗಿಸುತ್ತದೆ. ಹನುಮಂತಪ್ಪನವರ ಹಲಗೆ ವಾದ್ಯ ತಂಡವನ್ನು ಸಂಪರ್ಕಿಸಲು ಬ್ಯಾಳಿ ವಿಜಯಕುಮಾರಗೌಡರ ಮೊಬೈಲ್ ಸಂ.೯೪೪೯೬೨೨೭೦೭ಗೆ ಸಂಪರ್ಕಿಸಬಹುದಾಗಿದೆ.

ಭಾನುವಾರ, ನವೆಂಬರ್ 27, 2011

ಶಿಯಾ ಮೊಹರಂ: ರಕ್ತಪಾತ ಮತ್ತು ಕಾವ್ಯ




ಮೊಹರಂ ಆಚರಣೆಗೆ ಇಂದಿನಿಂದ (ನ.27) ಚಾಲನೆ. ಡಿಸೆಂಬರ್ 6 ಮೊಹರಂ ಕಡೇ ದಿನ. ಅಂದಹಾಗೆ, ಈ ಮೊಹರಂ ಎನ್ನುವುದು ಒಂದು ಹಬ್ಬವಷ್ಟೇ ಅಲ್ಲ. ಅದು ರಕ್ತಪಾತ ಮತ್ತು ಕಾವ್ಯ ಎರಡನ್ನೂ ಒಳಗೊಂಡ ಒಂದು ವಿಶಿಷ್ಟ ಆಚರಣೆ.

ಶಿಯಾ-ಸುನ್ನಿ: ಇವು ಮುಸ್ಲಿಮರಲ್ಲಿರುವ ಎರಡು ಪಂಗಡಗಳ ಹೆಸರು. ಇವುಗಳ ನಡುವೆ ನಿಡುಗಾಲದ ಸಂಘರ್ಷವಿದೆ. ಇದೊಂದು ದಾಯಾದಿ ಕಲಹದ ಚರಿತ್ರೆ. ವಿಶೇಷವೆಂದರೆ, ಈ ಚರಿತ್ರೆಗೆ ರಕ್ತಪಾತದ ಮುಖವಿರುವಂತೆ ಕಾವ್ಯದ ಮುಖವೂ ಇದೆ ಮಹಾಭಾರತಕ್ಕಿರುವಂತೆ.

ಇದರ ಹಿನ್ನೆಲೆ ಹೀಗಿದೆ: ಮಹಮ್ಮದ್ ಪೈಗಂಬರರ ನಿಧನದ ಬಳಿಕ, ಅರಬ್ಬರು ಪೈಗಂಬರರ ಪಥದಲ್ಲೇ ನಡೆಯಬಲ್ಲ ಒಬ್ಬರನ್ನು ತಮ್ಮ ಖಲೀಫನಾಗಿ ಆಯ್ಕೆ ಮಾಡಿಕೊಳ್ಳಲಾರಂಭಿಸಿದರು.

ಇವರೇ ಸುನ್ನಿ (=ಪಥಿಕರು) ಎನಿಸಿಕೊಂಡರು. ಆದರೆ ಈ ವ್ಯವಸ್ಥೆ ಇನ್ನೊಂದು ಬಣಕ್ಕೆ ಸಮ್ಮತವಾಗಲಿಲ್ಲ. ಪೈಗಂಬರರ ಬಳಿಕ ಅರಬ್ಬರ ಆಧ್ಯಾತ್ಮಿಕ ನಾಯಕ ಹಾಗೂ ಖಲೀಫ ಆಗಬೇಕಿದ್ದುದು, ಅವರ ಅಳಿಯ ಅಲಿ ಎಂದು ಅವರ ಅಭಿಮತ.

ತಮ್ಮನ್ನು ಅಲಿಯವರ ಅನುಯಾಯಿಗಳೆಂದು ಘೋಷಿಸಿಕೊಂಡ ಅವರು ಜನರೇ ಆರಿಸಿದ ಖಲೀಫರನ್ನು ಒಪ್ಪಿಕೊಳ್ಳಲಿಲ್ಲ.

ಬದಲಿಗೆ ಅಲಿ ಹಾಗೂ ಅವರ ಮಕ್ಕಳಾದ ಹಸನ್-ಹುಸೇನರನ್ನೂ ಒಳಗೊಂಡಂತೆ 12 ಜನ ಇಮಾಮರನ್ನು ತಮ್ಮ ಆಧ್ಯಾತ್ಮಿಕ ನಾಯಕರೆಂದು ಸ್ವೀಕರಿಸಿದರು. ಅವರೇ ಶಿಯಾ (=ಅನುಯಾಯಿ)ಗಳು.

ಈ ತಾತ್ವಿಕ ಭಿನ್ನಮತವು ಪಂಗಡ ಭೇದಕ್ಕೆ ಕಾರಣವಾಗಿದ್ದರೆ ಸಮಸ್ಯೆಯಿರಲಿಲ್ಲ. ಶತಮಾನಗಳ ಕಾಲ ನಾಗರಿಕ ಕದನಗಳಿಗೂ ಕಾರಣವಾಯಿತು.

ಚರಿತ್ರೆಯಲ್ಲಿ ಅತಿ ಹಿಂಸಾತ್ಮಕ ತಿಕ್ಕಾಟಗಳು ನಡೆದಿರುವುದು, ದಾಯಾದಿಗಳ ನಡುವೆಯೇ ಎಂದು ತೋರುತ್ತದೆ. ಶೈವ-ವೈಷ್ಣವ ಸಂಘರ್ಷಗಳನ್ನು ನೆನಪಿಸುವ ಈ ಯಾದವಿ ಕಲಹಗಳು ಈಗಲೂ ನಿಂತಿಲ್ಲ.

ಶಿಯಾಗಳನ್ನು ಕೊಂದ ವರದಿಗಳು ಪಾಕಿಸ್ತಾನದಿಂದ ಈಗಲೂ ಬರುತ್ತಿರುತ್ತವೆ. ಇರಾನ್-ಇರಾಕ್ ಯುದ್ಧಗಳ ಕೆಲಸ ಮಾಡಿದ ಅಂಶಗಳಲ್ಲಿ ಈ ಬಣಭೇದವೂ ಒಂದಾಗಿತ್ತು. ಹೆಚ್ಚಿನ ಸಂಘರ್ಷಗಳಲ್ಲಿ ಹಲ್ಲೆಗೊಳಗಾಗಿದ್ದು ಶಿಯಾಗಳೇ. ಮಧ್ಯಕಾಲದ ಕರ್ನಾಟಕವೂ ಶಿಯಾ-ಸಂಘರ್ಷಗಳಿಗೆ ಸಾಕ್ಷಿಯಾಯಿತು.

ಕರ್ನಾಟಕಕ್ಕೆ ಶಿಯಾ ಪಂಥೀಯರ ಆಗಮನವು ಪ್ರಾಯಶಃ 14ನೇ ಶತಮಾನದಲ್ಲಿ ಶುರುವಾಯಿತು.

ಮಹಮದ್ ಬಿನ್ ತುಘಲಕನು ದಖನ್ನಿಗೆಂದು ನೇಮಿಸಿದ್ದ ರಾಜ್ಯಪಾಲ ಹಸನ ಗಂಗೂ ಒಬ್ಬ ಶಿಯಾ ಆಗಿದ್ದ. (ಇವನ ಹೆಸರಲ್ಲಿರುವ ಗಂಗೂ ಬಹಮನಿ ಎಂಬುದು ಗಂಗೂ ಬ್ರಾಹ್ಮಣ ಎಂಬ ಅವನ ನೆರವಿಗೆ ಬಂದ ಗೆಳೆಯನ ಹೆಸರೆಂದು ಹೇಳಲಾಗುತ್ತದೆ).
ಮುಂದೆ ಹಸನನು ದೆಹಲಿ ಆಳಿಕೆ ವಿರುದ್ಧ ಬಂಡೆದ್ದು, ಸ್ವಾತಂತ್ರ್ಯ ಘೋಷಿಸಿಕೊಂಡು, ಬಹಮನಿ ರಾಜ್ಯ ಸ್ಥಾಪನೆಗೈದನು.

ಬಹಮನಿ ರಾಜ್ಯವು ಪತನಗೊಂಡ ಬಳಿಕ ಅದರ ಹೊಟ್ಟೆಯೊಳಗಿಂದ ಬಿಜಾಪುರದ ಆದಿಲಶಾಹಿ, ಬೀದರಿನ ಬರೀದಶಾಹಿ, ಗೋಲ್ಕೊಂಡದ ಕುತುಬುಶಾಹಿ ಸುಲ್ತಾನರಲ್ಲಿ ಬಹುತೇಕ ಸುಲ್ತಾನರು ಶಿಯಾಗಳಾಗಿದ್ದರು.

ಶಿಯಾ-ಸುನ್ನಿ ಎನ್ನುವುದು ಜನ್ಮಜಾತವಾದ ಕುರುಹೇನಲ್ಲ. ಅದು ವೈಯಕ್ತಿಕ ನಿಷ್ಠೆಗೆ ಅನುಗುಣವಾಗಿ ಬದಲಾಗಬಲ್ಲದು. ಆದಿಲಶಾಹಿ ರಾಜ್ಯದ ಸ್ಥಾಪಕ ಯೂಸೂಫ್‌ಖಾನನು ಶಿಯಾ ಆಗಿದ್ದರೆ, ಅವನ ಮೊಮ್ಮಗ ಒಂದನೇ ಇಬ್ರಾಹಿಂ ಕಟ್ಟಾ ಸುನ್ನಿ.

ಇದೇ ಇಬ್ರಾಹೀಮನ ಮಗ 1ನೇ ಅಲಿ ಆದಿಲಶಹ ಅಪ್ಪನಿಷ್ಟಕ್ಕೆ ವಿರುದ್ಧವಾಗಿ ಶಿಯಾ ಆದನು. ಹೈದರಾಲಿ ಶಿಯಾ ಒಲವಿನವನಾದರೆ, ಅವನ ಮಗ ಫತೇಹ್ ಅಲಿಖಾನ್ ಟಿಪ್ಪು ಸುನ್ನಿ. ಶಿಯಾ ಹೆಸರುಗಳಲ್ಲಿ ಅಲಿ ಹಸನ್ ಹುಸೇನ್ ಎಂಬ ಹೆಸರುಗಳು ಸಾಮಾನ್ಯ.

ಟಿಪ್ಪು ಸುನ್ನಿಯಾದರೂ, ಅವನಿಗೆ ತನ್ನ ಹೆಸರಲ್ಲಿದ್ದ `ಅಲಿ` ಎಂಬ ಶಿಯಾ ಕುರುಹಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಗೋಲ್ಕೊಂಡದ ಕುತುಬಶಾಹಿ, ಹೈದರಾಬಾದಿನ ಆಸಫಜಾ ಸುಲ್ತಾನರ ಹಾಗೂ ಅವಧದ (ಲಖನೊ) ನವಾಬರ ಹೆಸರುಗಳಲ್ಲಿ ಕಡ್ಡಾಯವಾಗಿ `ಅಲಿ` ಶಬ್ದವಿದೆ.

ಈ ಮೂರೂ ರಾಜವಂಶಗಳ ಬಳ್ಳಿ ಹುಡುಕುತ್ತಾ ಹೋದರೆ, ಅದು ಶಿಯಾಗಳ ದೇಶವಾದ ಇರಾನನ್ನು ಮುಟ್ಟುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ ಸಹಪಾಠಿಯೂ ದಿವಾನರೂ ಆಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಕೂಡ ಶಿಯಾ ಆಗಿದ್ದರು.

ಅವರ ಅಜ್ಜ ಅಲಿ ಅಸಘರ್ ಇರಾನಿನಿಂದ ಬಂದವರಾಗಿದ್ದು, ಮೈಸೂರು ಒಡೆಯರಿಗೆ ಕುದುರೆ ಸರಬರಾಜು ಮಾಡುತ್ತ ಅಶ್ವದಳದ ತರಬೇತಿದಾರರಾಗಿದ್ದವರು. ಬೆಂಗಳೂರಿನಲ್ಲಿರುವ ಅಲಿಅಸ್ಕರ್ ರಸ್ತೆ ಅವರ ನೆನಪಿಗಾಗಿ ಇಟ್ಟಿದ್ದು.

ಸಮಸ್ಯೆ ಎಂದರೆ, ಶಿಯಾ ಸುನ್ನಿಗಳ ಮಧ್ಯ ಭುಗಿಲೇಳುತ್ತಿದ್ದ ಪಂಥೀಯ ಕದನಗಳು. ಬಹಮನಿ-ಆದಿಲಶಾಹಿ ಆಳ್ವಿಕೆಗಳಲ್ಲಿ ಮತೀಯ ಗಲಭೆಗಳೇನಾದರೂ ನಡೆದಿದ್ದರೆ, ಅವು ಹಿಂದೂ ಮುಸ್ಲಿಮರ ನಡುವೆ ಅಲ್ಲ; ಬದಲಿಗೆ ವಿದೇಶಿಯರ-ಸ್ಥಳೀಯರ ನಡುವೆ ಅಥವಾ ಶಿಯಾ-ಸುನ್ನಿಗಳ ನಡುವೆ. ಅವುಗಳ ಸ್ವರೂಪವೂ ವೈವಿಧ್ಯಮಯವಾಗಿರುತ್ತಿತ್ತು.

ಉದಾಹರಣೆಗೆ, ಶಿಯಾ ಒಲವಿನ ಸುಲ್ತಾನರು ನಮಾಜಿನ ಕರೆಯಲ್ಲಿ ಅಲಿಯವರ ಹೆಸರನ್ನು ಸೇರಿಸಲು ಕ್ರಮ ಕೈಗೊಳ್ಳುತ್ತಿದ್ದರು ಅಥವಾ ಮಸೀದಿಯಲ್ಲಿ ನಮಾಜು ನಂತರದ ಪ್ರವಚನವನ್ನು ಪೈಗಂಬರರ ಅನುಯಾಯಿಗಳ ಹೆಸರ ಬದಲಾಗಿ, ಶಿಯಾಗಳ 12 ಇಮಾಮರ ಹೆಸರಲ್ಲಿ ಏರ್ಪಡಿಸುತ್ತಿದ್ದರು.

ಆಗ ಸುನ್ನಿಗಳಿಂದ ಪ್ರತಿರೋಧ ಭುಗಿಲೇಳುತ್ತಿತ್ತು. ನಿರ್ದಿಷ್ಟ ಪಂಥದ ಅಧಿಕಾರಿ ಅಥವಾ ಧಾರ್ಮಿಕ ಗುರು ದೊಡ್ಡ ಸ್ಥಾನ ಪಡೆದಾಗ, ಅವರ ಅನುಯಾಯಿಗಳ ದಬ್ಬಾಳಿಕೆ ಶುರುವಾಗಿ, ಆಡಳಿತದಲ್ಲಿ ಅರಾಜಕತೆ ಮೈದೋರುತ್ತಿತ್ತು.

ಆಗ ಸರ್ವ ಪಂಥಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಮತ್ತು ಆಡಳಿತದಲ್ಲಿ ಸಮಾನತೆಯನ್ನು ಉಳಿಸಲು ಸುಲ್ತಾನರು ಹೆಣಗಾಡುತ್ತಿದ್ದರು.

2ನೇ ಇಬ್ರಾಹಿಮನ ಕಾಲದಲ್ಲಿ, ಸುನ್ನಿ ಧಾರ್ಮಿಕ ನಾಯಕರೊಬ್ಬರು, ಆಡಳಿತದ ಉನ್ನತ ಸ್ಥಾನಗಳಲ್ಲಿ ಶಿಯಾಗಳಿರಬಾರದು ಎಂದು ಅಪ್ಪಣೆ ಮಾಡಿದರು; ಆಗ ಸುಲ್ತಾನನು ಅವರನ್ನು ಕೂಡಲೇ ಮದೀನಾಕ್ಕೆ ತೆರಳುವ ವ್ಯವಸ್ಥೆ ಮಾಡುವ ಮೂಲಕ, ಬಿಜಾಪುರ ಬಿಟ್ಟುಹೋಗುವಂತೆ ನಿರೂಪ ಕೊಟ್ಟ ಪ್ರಸಂಗವು ನಡೆಯಿತು.

ಶಿಯಾ-ಸುನ್ನಿ ಘರ್ಷಣೆಗಳಲ್ಲೆಲ್ಲ ಭೀಷಣವಾದುದು, ಬಹಮನಿ ಮಹಮ್ಮದ್ ಗವಾನನ ಕೊಲೆ. ಪ್ರತಿಭಾವಂತನೂ ವಿದ್ವಾಂಸನೂ ಆಗಿದ್ದ ಗವಾನನು ಇರಾನಿನಿಂದ ಭಾರತಕ್ಕೆ ಪ್ರವಾಸ ಬಂದವನು. ಅವನ ಪ್ರತಿಭೆಗೆ ಬೆರಗಾಗಿ ಬಹಮನಿ ಸುಲ್ತಾನರು ಅವನನ್ನು ಪ್ರಧಾನಿಯಾಗಿಸಿದರು.

ಗವಾನ್ ನಿಜಕ್ಕೂ ದಕ್ಷ ಆಡಳಿತಗಾರನಾಗಿದ್ದ. ಆದರೆ ಅವನಲ್ಲಿ ತುಸು ಶಿಯಾ ಅಭಿಮಾನ ಹೆಚ್ಚಿತ್ತು. ಅವನ ಜನಪ್ರಿಯತೆ ಸಹಿಸದ ಸ್ಥಳೀಯ ಮುಸ್ಲಿಮರು, ಅವನ ವಿರುದ್ಧ ಪಿತೂರಿ ಮಾಡಿದರು. ರಾಜದ್ರೋಹ ಮಾಡುತ್ತಿದ್ದಾನೆ ಎಂದು ಶಂಕೆಪಟ್ಟ ಸುಲ್ತಾನನು ಗವಾನನ ಶಿರಚ್ಛೇದ ಮಾಡಿಸಿದನು.

ಬಳಿಕ ತನ್ನ ತಪ್ಪನ್ನರಿತು ಪರಿತಾಪದಿಂದ ತಾನೂ ನರಳಿ ಸತ್ತನು. ಆದರೆ ಗವಾನನ ಕೊಲೆ ಸೃಷ್ಟಿಸಿದ ರಾಜಕೀಯ ಅರಾಜಕತೆಯ ಸುನಾಮಿಯಲ್ಲಿ ಬಹಮನಿ ರಾಜ್ಯವು ಸಂಪೂರ್ಣ ಪತನಗೊಂಡಿತು.

ಸ್ವಾರಸ್ಯಕರವೆಂದರೆ, ಟಿಪ್ಪು ಸುನ್ನಿಯಾದರೂ ಶಿಯಾ ದ್ವೇಷಿಯಾಗಿರಲಿಲ್ಲ. ಅಲಿ ಕುರಿತು ಅವನಿಗೆ ಬಲುಭಕ್ತಿ. ಅವನು ಅಲಿಯವರ ಶೌರ್ಯಸೂಚಕ ಬಿರುದುಗಳನ್ನು ಶಸ್ತ್ರಗಳ ಮೇಲೆ ಕೆತ್ತಿಸಿದ್ದನು; ಪುಸ್ತಕ ಭಂಡಾರಗಳಿಗೆ ಹಸನ್ ಹುಸೇನರ ಹೆಸರನ್ನಿಟ್ಟಿದ್ದನು; 12 ಇಮಾಮರ ಹೆಸರಲ್ಲಿ ನಾಣ್ಯಗಳನ್ನು ಹೊರಡಿಸಿದನು;

ಇರಾನಿನ ರಾಜಕುಮಾರ ಶ್ರೀರಂಗಪಟ್ಟಣದಲ್ಲಿ ತನ್ನ ಅತಿಥಿಯಾಗಿರುವ ಹೊತ್ತಲ್ಲಿ ಇರಾನಿನ ಜತೆ ವಾಣಿಜ್ಯ ಸಂಬಂಧಗಳನ್ನು ಬಲಗೊಳಿಸುವ ಯೋಜನೆ ರೂಪಿಸಿದನು; ಇರಾನಿನ ದೊರೆ ಶಹಾನ ಬಳಿಗೆ ತನ್ನ ದೂತನನ್ನು ಅಟ್ಟಿದನು.

ಆದರೆ ಬ್ರಿಟಿಷರು ಜಾಣ್ಮೆಯಿಂದ ಈ ಹೊಸ ರಾಜತಾಂತ್ರಿಕ ಸಂಬಂಧದ ಕುಡಿಯನ್ನು ಶಿಯಾ ಸುನ್ನಿ ಭೇದ ಬಳಸಿ ಚಿವುಟಿ ಹಾಕಿದರು.

ತನ್ನ ವಿರುದ್ಧ ಬ್ರಿಟಿಷರ ಜತೆಗೆ ಕೈಜೋಡಿಸಿದ್ದ ಹೈದರಾಬಾದ್ ನಿಜಾಮರ ಜತೆ ರಕ್ತ ಸಂಬಂಧ ಬೆಳೆಸಲು ಟಿಪ್ಪು ಯತ್ನಿಸಿದಾಗಲೂ, ಇದೇ ಪಂಥೀಯ ತರತಮದ ನೆಲೆಯಲ್ಲಿ ಆಂಗ್ಲರು ಗೈದ ತಂತ್ರಗಾರಿಕೆ, ಅದನ್ನು ವಿಫಲಗೊಳಿಸಿತು.

ನಿಜಾಮರು ತನ್ನ ಹಗೆಗಳ ಬೆನ್ನು ಕಟ್ಟಿದ್ದುದರಿಂದ ಟಿಪ್ಪು ಶಿಯಾಗಳ ಮೇಲೆ ಕೊನೆಯ ದಿನಗಳಲ್ಲಿ ನಂಬಿಕೆ ಕಳೆದುಕೊಂಡನೇ? ತಿಳಿಯದು. ಈ ಸನ್ನಿವೇಶದಲ್ಲಿ ಕೆಲವು ಚಾರಿತ್ರಿಕ ವ್ಯಂಗ್ಯಗಳು ಎದ್ದು ಗೋಚರಿಸುತ್ತಿವೆ:

1. ತಮ್ಮ ಮತಭೇದಕ್ಕಾಗಿ ಚರಿತ್ರೆಯುದ್ದಕ್ಕೂ ಹಿಂಸೆ ಅನುಭವಿಸಿದ ಶಿಯಾಗಳ ಆಧ್ಯಾತ್ಮಿಕ ನಾಯಕರ ಚರಿತ್ರೆ ಕೂಡ ರಕ್ತಪಾತ ಮತ್ತು ಹಿಂಸೆಯ ಮೂಲಕವೇ ಆರಂಭವಾಗುತ್ತದೆ. ಅಲಿ, ಹಸನ್, ಹುಸೇನ್ ಮೂವರೂ ಹಗೆಗಳ ಪಿತೂರಿಯಿಂದ ಕೊಲ್ಲಲ್ಪಟ್ಟವರು.

ಅದರಲ್ಲೂ ಹುಸೇನ್ ಮತ್ತು ಅವರ ಕುಟುಂಬದವರು ಕೊಲೆಯಾದ ಕರ್ಬಲಾ ಯುದ್ಧವು, ಎಳೆಯ ಕೂಸುಗಳನ್ನೂ ಒಳಗೊಂಡಂತೆ ಭೀಕರ ನರಹತ್ಯೆಯಲ್ಲಿ ಮುಗಿಯಿತು. ಈ ಹುತಾತ್ಮರ ಸಾವಿನಾಚರಣೆಯನ್ನು ಶಿಯಾಗಳು ಆರಂಭಿಸಿದರು. ಅದುವೇ ಮೊಹರಂ.

2. ಟಿಪ್ಪು ಸುನ್ನಿಯಾಗಿದ್ದರೂ ಶಿಯಾಗಳ ನಾಯಕರಂತೆ ರಣರಂಗದಲ್ಲೇ ಕೊಲ್ಲಲ್ಪಟ್ಟನು.

3. ಅವನಿಗೆ ವಿಶ್ವಾಸಘಾತ ಮಾಡಿದ ಮಂತ್ರಿ ಮೀರಸಾದಿಕ್ ಶಿಯಾ ಪಂಥೀಯನಾಗಿದ್ದನು.

ಹಾಗೆ ಕಂಡರೆ, ಕರ್ನಾಟಕದಲ್ಲಿ ಶಿಯಾಗಳ ಸಂಖ್ಯೆ ತೀರಾ ಕಡಿಮೆ. ಧಾರ್ಮಿಕ - ಸಾಂಸ್ಕೃತಿಕ ಆಕ್ರಮಣಕ್ಕೆ ಒಳಗಾಗುವ ಅಭದ್ರತೆ ಅನುಭವಿಸುವ ಸಮುದಾಯಗಳಲ್ಲಿ ಸಹಜವಾಗಿರುವ ಪಂಥೀಯ ಒಗ್ಗಟ್ಟು ಶಿಯಾಗಳಲ್ಲೂ ಇದೆ.

ಅವರು ಕರ್ನಾಟಕದ ಅನೇಕ ಊರುಗಳಲ್ಲಿ ಗುಂಪಾಗಿ ನೆಲೆಸಿದ್ದಾರೆ. ಅವುಗಳಲ್ಲಿ ಗೌರಿಬಿದನೂರು ತಾಲೂಕಿನ ಅಲಿಪುರ, ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಮುಖ್ಯ ನೆಲೆಗಳು.

ಕಟು ಸುನ್ನಿಯಾಗಿದ್ದ ಔರಂಗಜೇಬನು ಬಿಜಾಪುರವನ್ನು ಆಕ್ರಮಿಸಿಕೊಂಡಾಗ, ಕೆಲವು ಶಿಯಾಗಳು ದಕ್ಷಿಣದತ್ತ ಬಂದು ಈಗಿರುವ ಅಲ್ಲೆಪುರದಲ್ಲಿ ನೆಲೆನಿಂತರು. ಅಲ್ಲೆಪುರವು ಇರಾನಿನ ನೆರಳಚ್ಚಿನಂತಿಹ ಹಳ್ಳಿ.

ಅಲ್ಲಿ ಮೊಹರಮ್ಮಿನಲ್ಲಿ ಕರ್ಬಲಾ ಯುದ್ಧದ ಪ್ರತಿಕೃತಿಯನ್ನೇ ನಿರ್ಮಿಸಲಾಗುತ್ತದೆ. ದೊಡ್ಡಬಳ್ಳಾಪುರದಲ್ಲೂ ಹೈದರಾಲಿ ಕಟ್ಟಿಸಿಕೊಟ್ಟ ಶಿಯಾಗಳ ದೊಡ್ಡ ಸಂಕೀರ್ಣವಿದೆ.

ಅದರ ಎತ್ತರದ ಪೌಳಿಯೊಳಗಿರುವ ಮಸೀದಿ ಮತ್ತು ಆಶೂರಖಾನೆಗಳು, ಶಿಯಾಗಳು ತಮ್ಮ ಸಾಂಸ್ಕೃತಿಕ ವಿಶಿಷ್ಟತೆ ಉಳಿಸಿಕೊಂಡಿರುವ ಸಂಕೇತದಂತೆಯೇ, ಅಳಿವಿನಂಚಿನಲ್ಲಿರುವ ಜೀವಿಗಳಂತೆ ಬದುಕುತ್ತಿರುವ ದಾರುಣ ಗುರುತಿನಂತಿದೆ.

ಯಾಕೆಂದರೆ, ಅವರ ಆಚರಣೆಗಳಲ್ಲಿ ಬಹುಸಂಖ್ಯಾತ ಸುನ್ನಿಗಳು ಭಾಗವಹಿಸುವುದಿಲ್ಲ. ಮಾತ್ರವಲ್ಲ ಅವರನ್ನು ಧಾರ್ಮಿಕವಾಗಿ ಪರಕೀಯರಂತೆಯೂ ಸಾಂಸ್ಕೃತಿಕವಾಗಿ ಅಸ್ಪೃಶ್ಯರಂತೆಯೂ ಕಾಣುತ್ತಾರೆ. ನಿರ್ದಿಷ್ಟ ಧರ್ಮಕ್ಕೆ ಸೇರಿದವರೆಲ್ಲ ಒಂದಾಗಿರುತ್ತಾರೆ ಎಂಬುದು ಯಾವತ್ತೂ ದೊಡ್ಡ ಹುಸಿ.

`ಮೊಹರಂ` ಎಂದರೆ ನಿಷೇಧಿತ, ಅಶುಭ ಎಂದರ್ಥ. ಈ ಮಾಸದಲ್ಲಿ ಶಿಯಾಗಳು ಶುಭಕಾರ್ಯ ಮಾಡುವುದಿಲ್ಲ. ಕಪ್ಪು ಬಟ್ಟೆ ಧರಿಸಿ, ಮನೆಯ ಮೇಲೆ ಕಪ್ಪು ನಿಶಾನೆ ಹಾರಿಸುತ್ತಾರೆ.

ಎದೆ ಬಡಿದುಕೊಳ್ಳುತ್ತ ಶೋಕ ಆಚರಿಸುತ್ತಾರೆ; ಹುತಾತ್ಮರ ಹೆಸರಿನಲ್ಲಿ ಪಂಜಾ (ಹಸ್ತ) ಮತ್ತು ಆಲಂ (ಮೆರೆಸುವ ಚಿಹ್ನೆ)ಗಳಿಗೆ ಕಪ್ಪುಬಟ್ಟೆ ಉಡಿಸಿ ಆರಾಧಿಸುತ್ತಾರೆ; ಹುತಾತ್ಮರ ಶವಪೆಟ್ಟಿಗೆಯ (ಡೋಲಿ) ಮೆರವಣಿಗೆ ಮಾಡುತ್ತಾರೆ.

ಹೈದರಾಬಾದಿನ ಚಾರ್‌ಮಿನಾರ್ ಮೂಲತಃ ಮೊಹರಂ ಡೋಲಿಯ ಪ್ರತೀಕ. ಅದರ ಗೋಡೆಗಳ ಮೇಲೆ ಮೊಹರಂ ಚಿಹ್ನೆಗಳ ಶಿಲ್ಪವಿದೆ. ಗೋಲ್ಕೊಂಡ, ಹೈದರಾಬಾದುಗಳ ನಿಜಾಮರ ಹಾಗೂ ಲಖನೋದ ನವಾಬರ ಕಾಲಗಳಲ್ಲಿ ಶಿಯಾ ರಾಜಧರ್ಮವಾಗಿತ್ತು.

ಹೀಗಾಗಿ ಇಲ್ಲಿನ ಮೊಹರಂ ಆಚರಣೆಗಳಿಗೆ ರಾಗವೈಭವದ ಪರಂಪರೆಯಿದೆ. ಅವನ್ನು ನೋಡಲು ನಾನು ಹೈದರಾಬಾದ್ ಹಾಗೂ ಲಖನೋಗಳಿಗೆ ಹೋಗಿದ್ದುಂಟು.

ಅಲ್ಲಿನ ಮೆರವಣಿಗೆಗಳಲ್ಲಿ ಗಂಡಸರು, ಅದರಲ್ಲೂ ತರುಣರು ಆಯುಧಗಳಿಂದ ತಮ್ಮನ್ನು ಹೊಡೆದುಕೊಳ್ಳುವರು. ಅವರ ಮೈಯಿಂದ ಸುರಿವ ನೆತ್ತರಿಂದ ರಸ್ತೆಯೇ ಕೆಂಪಾಗುತ್ತದೆ. ಲಖನೋದಲ್ಲಿ ಮೆರವಣಿಗೆ ನಡೆದ ಬಳಿಕ ಇಡೀ ರಸ್ತೆಯನ್ನು ನೀರು ಹಾಕಿ ತೊಳೆಯಲಾಗುತ್ತದೆ.

ಹುತಾತ್ಮರ ನೆನಪಿನಲ್ಲಿ ದೇಹದಂಡನೆ ಮಾಡಿಕೊಳ್ಳುವವರನ್ನು ಕಂಡು ಮಹಿಳೆಯರು ಮೊಹರಂ ವೀರರನ್ನು ನೆನೆದು ಶೋಕಿಸುವರು. ಹಾದಿಬದಿಯಲ್ಲಿ ನಿಂತವರು ಈ ದೇಹದಂಡಕರನ್ನು ನಾನಾಬಗೆಯಲ್ಲಿ ಉಪಚರಿಸುವರು.

ಹೊಳವನಹಳ್ಳಿಯಲ್ಲಿ (2009) ಸುಮಾರು 500 ಜನ ಗಂಡಸರು-ಮಕ್ಕಳು, ತಮ್ಮ ಬೆನ್ನು ತಲೆ ಎದೆಗಳಿಗೆ ಹರಿತವಾದ ಆಯುಧಗಳಿಂದ ಹೊಡೆದುಕೊಂಡು `ಮಾತಂ` (ದುಃಖ) ಆಚರಿಸಿದರು.

ಮೆರವಣಿಗೆಯ ಬೀದಿಯೇ ರಕ್ತದ ಹಸಿವಾಸನೆಯಿಂದ ಉಸಿರುಕಟ್ಟಿಹೋಯಿತು. ಕರ್ನಾಟಕದ ಅನೇಕ ಕಡೆಯ ಮೊಹರಮ್ಮಿನಲ್ಲಿ ಶಿಯಾಗಳಲ್ಲದವರೂ ದೇಹದಂಡಿಸಿಕೊಳ್ಳುವ ಆಚರಣೆಗಳಿವೆ.

ಗೋಕಾಕ ಮತ್ತು ರಾಮದುರ್ಗ ತಾಲೂಕುಗಳಲ್ಲಿ ಮೈಗೆ ಚಾಬಕದಿಂದ ರಕ್ತಬರುವಂತೆ ಬಡಿದುಕೊಳ್ಳುವರು. ಅದನ್ನು `ಲಡ್ಡಾಡುವುದು` ಎನ್ನುವರು. ಧಾರ್ಮಿಕ ಆಚರಣೆಗಳಲ್ಲಿ ರಕ್ತಸುರಿಸುವ ಪ್ರಸಂಗಗಳು ಮೂರು ಬಗೆಯಲ್ಲಿವೆ.

1. ತಮ್ಮ ಪ್ರಿಯ ದೈವಕ್ಕೆ ತಮ್ಮನ್ನು ಬಲಿಪಶುವನ್ನಾಗಿ ಮಾಡಿ ಅರ್ಪಿಸಿಕೊಳ್ಳುವುದು. ಉದಾಹರಣೆಗೆ, ತಮ್ಮ ಶಿರವನ್ನು ಹರಿದು ಅರ್ಪಿಸುವ, ಅಂಗಾಂಗ ಕತ್ತರಿಸಿ ಸಮರ್ಪಿಸುವ ಆಚರಣೆಗಳು. ಮೈಲಾರಲಿಂಗನಿಗೂ ವೀರಭದ್ರನಿಗೂ ದೇಹದಂಡನೆ ಮಾಡಿಕೊಳ್ಳುವ ಭಕ್ತರೂ ಈ ನೆಲೆಯವರು.

2. ಪ್ರಿಯ ದೈವಕ್ಕೆ ಪ್ರಾಣಿಗಳನ್ನು ಬಲಿಗೊಡುವ ಆಚರಣೆಗಳು.

3. ತಮ್ಮ ಧಾರ್ಮಿಕ ನಾಯಕರು ಪಟ್ಟ ಹಿಂಸೆಯನ್ನು ತಾವೂ ಅನುಭವಿಸುವ ಮೂಲಕ ಅವರ ದುಃಖಕ್ಕೆ ಮಿಡಿಯುವ ಆಚರಣೆಗಳು. ಮೊಹರಂ ಮೂರನೆಯ ಮಾದರಿಯ ಆಚರಣೆ. ವಿಶೇಷವೆಂದರೆ, ಈ ದೇಹದಂಡನೆ ಮತ್ತು ರಕ್ತಪಾತದ ಆಚರಣೆಯ ಭಾಗವಾಗಿಯೇ ಕಾವ್ಯದ ಪರಂಪರೆಯೊಂದು ಸೃಷ್ಟಿಯಾಗಿರುವುದು.

ಮೊಹರಂ ತಿಂಗಳಲ್ಲಿ ಕೆಲವರು ಹುತಾತ್ಮರ ನೆನಪಿನಲ್ಲಿ ಕಾವ್ಯ ರಚಿಸುವರು. ಇಲ್ಲವೇ ಇತರರು ರಚಿಸಿದ ಕಾವ್ಯವನ್ನು ಹಾಡುವರು. ಈ ಶೋಕಕಾವ್ಯಕ್ಕೆ `ಮರ್ಸಿಯಾ` ಎನ್ನಲಾಗುತ್ತದೆ.

ಕೆಲವು ಕವಿಗಳು ತಾವು ಬರೆದ ಶೋಕಗೀತೆಗಳನ್ನು ಕಪ್ಪು ಪರದೆಯ ಮೇಲೆ ಬರೆಸಿ, ಬೀದಿಗಳಲ್ಲಿ ಕಟ್ಟುವ ಪದ್ಧತಿಯಿದೆ. ಲಖನೋ-ಹೈದರಾಬಾದುಗಳಲ್ಲಿ ಇಡೀ ತಿಂಗಳು ಇಂತಹ ಕಪ್ಪುಕಾವ್ಯದ ಪರದೆಗಳು ಇಳಿಬಿದ್ದಿರುತ್ತವೆ.

ಕರ್ನಾಟಕದ ಅನೇಕ ಉರ್ದು ಕವಿಗಳು ಮರ್ಸಿಯಾ ಬರೆದರು. ಈ ಮರ್ಸಿಯಾಗಳ ಪ್ರಭಾವ ಕನ್ನಡದಲ್ಲಿ ದುಃಖಗೀತೆಗಳ ಮೇಲಾಯಿತೋ, ಕನ್ನಡ ದುಃಖಗೀತೆಗಳ ಪ್ರಭಾವ ಮರ್ಸಿಯಾದ ಮೇಲಾಯಿತೋ, ತಿಳಿಯದು.

ಆದರೆ ಕನ್ನಡದ ಮೊಹರಂ ಹಾಡುಗಳಲ್ಲಿ, ಹುಸೇನ್ ಕಾಸಿಂ ಮುಂತಾದ ಕರ್ಬಲಾ ವೀರರ ಜತೆ, ಬಲಾಢ್ಯ ಹಗೆಯೆದುರು ಸೋತು ಜೀವ ಕಳೆದುಕೊಂಡ ಟಿಪ್ಪು, ಕಿತ್ತೂರ ಚನ್ನಮ್ಮ, ಸಂಗೊಳ್ಳಿರಾಯಣ್ಣ ಸಮೀಕರಣಗೊಂಡರು;

ಹಸನ ಹುಸೇನರನ್ನು ಕಳೆದುಕೊಂಡ ಬೀಬಿ ಫಾತಿಮಾರ ಜತೆ, ತಮ್ಮ ಮಕ್ಕಳನ್ನು ಕಳೆದುಕೊಂಡ `ಕಡ್ಲಿಮಟ್ಟಿ ಸ್ಟೇಶನ್ ಮಾಸ್ತರ` ಡಪ್ಪಿನಾಟದ ತಾಯಂದಿರು ಲಗತ್ತುಗೊಂಡರು; ಗಂಡನನ್ನು ಕಳೆದುಕೊಂಡ ಅಳುವ ಎಳೆಯ ವಿಧವೆ ಸಕೀನಾಳ ಜತೆ, ಅಭಿಮನ್ಯು ಮನ್ಮಥರನ್ನು ಕಳೆದುಕೊಂಡ ಉತ್ತರೆ ಮತ್ತು ರತಿಯರು ಏಕೀಭವಿಸಿದರು.

ಹಲಸಂಗಿಯ ಮಧುರಚೆನ್ನರ ಗೆಳೆಯರಾದ ಪಿ.ಧೂಲಾ, ಕಾಸಿಮನನ್ನು ಕುರಿತು ಬರೆದ `ಅರೇಬಿಯಾದ ಅಭಿಮನ್ಯು` ಗೀತೆ ಇಲ್ಲಿ ನೆನಪಾಗುತ್ತದೆ. ಉತ್ತರ ಕರ್ನಾಟಕದ ಸಾವಿರಾರು ಹಳ್ಳಿಗಳಲ್ಲಿ ಆಚರಿಸುವ ಮೊಹರಮ್ಮಿಗೆ ಅರಬಸ್ಥಾನದ ಚರಿತ್ರೆ ಪುರಾಣಗಳ ಸ್ಮೃತಿಗಳಿವೆ, ನಿಜ.

ಆದರೆ ಇಲ್ಲಿ ಶಿಯಾ-ಸುನ್ನಿ ಎಂಬ ಭೇದವಿಲ್ಲ; ಬದಲಿಗೆ ಶೋಕಪ್ರಧಾನ ಕಾವ್ಯವಿದೆ. ಆದರೆ ಅದು ಸಂಭ್ರಮವನ್ನು ಸೇರಿಸಿಕೊಂಡು ಸಂಪೂರ್ಣವಾಗಿ ಸ್ಥಳೀಕರಣಗೊಂಡಿದೆ; ಟಿಪ್ಪು, ಸುನ್ನಿಯಾಗಿ ಮೊಹರಂ ಆಚರಣೆಗಳನ್ನು ಉತ್ತೇಜಿಸಲಿರಲಿಕ್ಕಿಲ್ಲ; ಆದರೆ ಅವನ ಸಾವಿನ ದುರಂತವನ್ನು ವಸ್ತು ಮಾಡಿಕೊಂಡು ಕನ್ನಡದ ಮೊಹರಂ ಕವಿಗಳು ಹಾಡುಕಟ್ಟಿ ಹಾಡಿದರು;
ಮೊಹರಮ್ಮಿನ ಮೂಲ ಒಂದೇ ಧರ್ಮದೊಳಗಿನ ಎರಡು ಪಂಗಡಗಳ ನಡುವಣ ಮತಭೇದ; ಆದರೆ ಕನ್ನಡ ಮತ್ತು ಉರ್ದುಗಳಲ್ಲಿ ಏಕಕಾಲಕ್ಕೆ ಹಾಡು ಕಟ್ಟಿ ಹಾಡುವ ಮೊಹರಂ, ಹಿಂದೂ-ಮುಸ್ಲಿಮರ ಮಿಲನದ ಅಪೂರ್ವ ಸನ್ನಿವೇಶವಾಯಿತು.

ಅದರಲ್ಲೂ ರಾಯಚೂರು ಜಿಲ್ಲೆಯ ಅರವಲಿಯ ಬಿಜಲಿಯು ಮರ್ಸಿಯಾಗಳನ್ನು ಹಾಡುತ್ತಾ ಒಂದು ತಂಡವನ್ನು ಕರೆದುಕೊಂಡು ಮಟಮಾರಿಯ ದೈವವಾದ ವೀರಭದ್ರನ ಜಾತ್ರೆಗೆ ಹೋಗುತ್ತಿದ್ದನು. ವೀರಭದ್ರನ ಪುರಾಣದಲ್ಲಿಯೂ ಇರುವುದು ಶೈವ-ವೈಷ್ಣವ ಸಂಘರ್ಷ ತಾನೇ?

ಈ ರೂಪಾಂತರ ಮತ್ತು ವೈರುಧ್ಯಗಳನ್ನೆಲ್ಲ ಹೇಗೆ ಅರ್ಥಮಾಡಿಕೊಳ್ಳುವುದು? ಚರಿತ್ರೆಯ ಮೇಲೆ ವರ್ತಮಾನವು, ಮಾಡುವ ಸವಾರಿಯೆಂದೇ? ಸಂಘರ್ಷ ರಕ್ತಪಾತಗಳ ಮೇಲೆ ಕಾವ್ಯವು ತೀರಿಸಿಕೊಳ್ಳುತ್ತಿರುವ ಮುಯ್ಯಿ ಎಂದೇ? ಪುರಾಣವಾಗಲಿ ಚರಿತ್ರೆಯಾಗಲಿ ದೇಶಾಂತರಗೊಂಡರೆ ಅಥವಾ ಕಾಲಾಂತರಗೊಂಡರೆ, ಹೊಸ ಸಮಾಜದ ಬದುಕಿನಲ್ಲಿ ಅದು ಹಾದು ಅದು ಕಾವ್ಯವಾದರೆ, ಕಂಬಳಿಹುಳು ಚಿಟ್ಟೆಯಾದಂತೆ ಸಾಂಸ್ಕೃತಿಕ ಮರುಹುಟ್ಟನ್ನೇ ಪಡೆದುಬಿಡುತ್ತದೆ.

ಅದರ ಮೂಲಕ ಮೂಲವನು ಶೋಧಿಸುವುದೇ ವ್ಯರ್ಥ ಎನಿಸುವಷ್ಟು ಅದು ಸ್ವಾಯತ್ತತೆಯನ್ನು ಪಡೆದುಬಿಡುತ್ತದೆ.

ಕೊನೆಗೂ ಕಾವ್ಯವು ತನ್ನದೇ ಆದ `ಸತ್ಯ`ವನ್ನು ಹೇಳುವ ಹಕ್ಕನ್ನು ಚಲಾಯಿಸಿಬಿಡುತ್ತದೆ. ಜನರ ಮಾನಸದಲ್ಲಿ ಕೊನೆಗೂ ಉಳಿಯುವುದು ಕಾವ್ಯಸತ್ಯವೇ!

ಸೋಮವಾರ, ನವೆಂಬರ್ 21, 2011

ವರ್ಷ ತುಂಬಿದ ಕನ್ನಡ ಜಾನಪದ ಬ್ಲಾಗ್

ಕನ್ನಡ ಜಾನಪದ ಬ್ಲಾಗ್ ಜತೆಗಿನ ಪಯಣದ ಕಥೆ..

2010 ಸೆಪ್ಟಂಬರ್ 7 ಕ್ಕೆ ಬ್ಲಾಗ್ ಆರಂಭಿಸಿದ್ದೆ. ನವಂಬರ್ 7 ಕ್ಕೆ ಹದಿನಾಲ್ಕು ತಿಂಗಳು ತುಂಬಿದೆ. ಒಂದು ವರ್ಷ ಪೂರೈಸಿದ ಈ ಹೊತ್ತಲ್ಲಿ ನಿಮ್ಮೊಂದಿಗೆ ನಾಲ್ಕು ಮಾತು. ಬ್ಲಾಗ್ ಆರಂಬಿಸಿ ಮೊದಲಿಗೆ ಉತ್ಸಾಹದಿಂದ ಬರೆದು ನಂತರ ಅಪ್ ಡೇಟ್ ಮಾಡುವುದನ್ನು ಮರೆಯುತ್ತಾರೆ. ಆ ಉತ್ಸಾಹವನ್ನು ನಿರಂತವಾಗಿಟ್ಟುಕೊಂಡು, ಬ್ಲಾಗ್ ಗೆ ಬರೆಯುವುದೂ ಕೂಡ ಒಂದು ಸವಾಲು. ಹಾಗಾಗಿ ಕನ್ನಡದಲ್ಲಿ ಸಾವಿರಾರು ಬ್ಲಾಗ್ ಗಳಿದ್ದರೂ ನಿರಂತರವಾಗಿ ಅಪ್ ಡೇಟ್ ಆಗುವ ಬ್ಲಾಗ್ ಗಳ ಸಂಖ್ಯೆ ಕಡಿಮೆ. ಅಂತಹ ಕಡಿಮೆ ಸಂಖ್ಯೆಯಲ್ಲಿ ಕನ್ನಡ ಜಾನಪದವೂ ಒಂದು.

ಕಂಪ್ಯೂಟರ್ ಮುಟ್ಟಿದರೆ ಚೇಳು ಕಡಿದಂತಹ ಭಯವಾಗಿ, ಅದರಿಂದ ದೂರವೆ ಉಳಿದಿದ್ದ ನನಗೆ ಕಂಪ್ಯೂಟರ್ ಸಹವಾಸ ದೊರಕಿದ್ದು ಆಕಸ್ಮಿಕ. ವರ್ಡನೆಟ್ ಪ್ರಾಜೆಕ್ಟ(ಅಮೃತ ವಿವಿ ಕೊಯಮತ್ತೂರು) ನಲ್ಲಿ ಕೆಲಸ ಮಾಡಲು ಭಾರತಿದೇವಿಯ ಸಹಾಯ ಸಿಗದಿದ್ದರೆ, ಕಂಪ್ಯೂಟರ್ ಮತ್ತು ಅಂತರ್ಜಾಲದ ಸಹವಾಸ ಇನ್ನಷ್ಟು ದಿನ ಮುಂದೆ ಹೋಗುತ್ತಿತ್ತೋ ಏನೊ. ಹಾಗಾಗಿ ಭಾರತಿದೇವಿಯನ್ನು ಈ ಹೊತ್ತು ನೆನೆವೆ.

ಅಂತರ್ಜಾಲದಲ್ಲಿ ಕನ್ನಡ ಜಾನಪದ, ಕರ್ನಾಟಕ ಫೋಕ್ಲೋರ್ ಎಂದು ಹುಡುಕಿದರೆ ಬರುವ ಫಲಿತಾಂಶ ನಿರಾಸೆ ಹುಟ್ಟಿಸುತ್ತಿತ್ತು. ಹಾಗಾಗಿ ಜಾನಪದಕ್ಕೆಂದೇ ಬ್ಲಾಗ್ ಒಂದನ್ನು ಆರಂಭಿಸಿದರೆ ಹೇಗೆಂಬ ಯೋಚನೆ ಹೊಳೆದು ಅದು ಕಾರ್ಯರೂಪಕ್ಕೆ ಬಂತು. ನಂತರ ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿತು. ಈಗ ಕನ್ನಡ ಜಾನಪದ ಓದುವಿಕೆಯ ಸಂಖ್ಯೆ ಹತ್ತು ಸಾವಿರದ ಹತ್ತಿರ ಇದೆ. ಬ್ಲಾಗ್ ನಲ್ಲಿ ಪ್ರಕಟವಾದ ಬರಹಗಳ ಸಂಖ್ಯೆ ನೂರನ್ನು ದಾಟಿದೆ. ಇನ್ನು ಕನ್ನಡ ಜಾನಪದ ಪೇಸ್ ಬುಕ್ ನಲ್ಲಿ ಸಾವಿರಕ್ಕಿಂತ ಹೆಚ್ಚಿನ ಸ್ನೇಹ ಬಳಗವಿದೆ. ಈಗ ಗೂಗಲ್ ನಲ್ಲಿ ಕನ್ನಡ ಜಾನಪದ, ಕರ್ನಾಟಕ ಫೋಕ್ ಲೋರ್ ಎಂದು ಹುಡುಕಿದರೆ ಕನ್ನಡ ಜಾನಪದ ಬ್ಲಾಗ್ ನ ಅಷ್ಟೂ ಬರಹಗಳ ಲಿಂಕ್ ಸಿಕ್ಕುತ್ತದೆ, ಅದು ಸಮಾಧಾನಕರ ಸಂಗತಿ. ಹಾಗಾಗಿ ಈ ಹೊತ್ತು ಬ್ಲಾಗ್ ಪಯಣದಲ್ಲಿ ಸಿಕ್ಕವರನ್ನು ನೆನೆಯಬೇಕು.

ಬ್ಲಾಗ್ ಆರಂಭಿಸಿ ಸ್ವಲ್ಪ ದಿನಕ್ಕೆ ದೆಹಲಿಯಿಂದ ಪುರುಷೋತ್ತಮ ಬಿಳಿಮಲೆಯವರು ಪೋನ್ ಮಾಡಿ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು, ಜರ್ಮನಿಯಲ್ಲಿದ್ದ ಪ್ರೊ.ಬಿ.ಎ ವಿವೇಕ ರೈ ಅವರು ತಮ್ಮ ಬ್ಲಾಗ್ ನಲ್ಲಿ ಕನ್ನಡ ಜಾನಪದ ಬ್ಲಾಗ್ ಬಗ್ಗೆ ಟಿಪ್ಪಣಿ ಬರೆದು ಗಮನ ಸೆಳೆದರು. ಜಿ.ಎನ್.ಮೋಹನ್ ಅವರು ಜಾನಪದಕ್ಕೇ ಬ್ಲಾಗ್ ಆರಂಭಿಸಿದ್ದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚಿ ಮಾತನಾಡಿದರು, ನಂತರ ಅವಧಿಯಲ್ಲಿ ಕನ್ನಡ ಜಾನಪದದಲ್ಲಿ ಪ್ರಕಟವಾದ ಬರಹಗಳನ್ನು ಪ್ರಕಟಿಸಿ ಲಿಂಕ್ ತೋರಿಸಿದರು, ಅಂತೆಯೇ ಅವಧಿಯ ದಿನದ ಬ್ಲಾಗ್ ನಲ್ಲಿ ಟೀನಾ ಶಶಿಕಾಂತ ಅವರು ಜಾನಪದ ಬ್ಲಾಗ್ ಬಗ್ಗೆ ಉತ್ತಮ ಮಾತುಗಳನ್ನು ಬರೆದರು, ಹಾಗೆಯೇ ಅನೇಕ ಸ್ನೇಹಿತ/ತೆ ಬ್ಲಾಗಿಗರು ತಮ್ಮ ಬ್ಲಾಗ್ ಪಟ್ಟಿಯಲ್ಲಿ ಕನ್ನಡ ಜಾನಪದವನ್ನು ಸೇರಿಸಿ ಸಹಕರಿಸಿದ್ದಾರೆ, ಅವರೆಲ್ಲರನ್ನೂ ನೆನೆವೆ.

ಅರಣ್ಯ ಜಾನಪದ ಸೆಮಿನಾರ್ ಬಗ್ಗೆ ವಿಮರ್ಶಾತ್ಮಕ ಟಿಪ್ಪಣಿ ಬರೆದಾಗ ಯು.ಆರ್. ಅನಂತಮೂರ್ತಿ,ರಹಮತ್ ತರೀಕೆರೆ, ಬಿಳಿಮಲೆ , ಅಂಬಳಿಕೆ ಹಿರಿಯಣ್ಣ, ಬಂಜಗೆರೆ ಜಯಪ್ರಕಾಶ್ ಮುಂತಾದವರೆಲ್ಲಾ ಪ್ರತಿಕ್ರಿಯಿಸಿದರು. ಇದು ನನಗೆ ಬರೆಯಲು ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸಿತು. ಇಲ್ಲಿನ ಎಲ್ಲಾ ಬರಹಗಳು ನನ್ನವಲ್ಲ, ಬದಲಾಗಿ ಹಲವರ ಬರಹಗಳು ಇಲ್ಲಿವೆ. ಕೂಡ್ಲಿಗಿಯ ಸಿದ್ದರಾಮ ಹಿರೇಮಠ, ಭೀಮಣ್ಣ ಗಜಾಪುರ, ಸ್ವರೂಪಾನಂದ, ಬಾಗಲಕೋಟೆಯ ಪ್ರಕಾಶ್ ಖಾಡೆ, ಪ್ರೊ.ವೀರಣ್ಣ ದಂಡೆ, ಬಸವರಾಜ ಮಲಶೆಟ್ಟರು, ಪ್ರೊ. ರಾಜೇಂದ್ರ ಚೆನ್ನಿ, ಹೆಚ್,ಎಸ್.ರೋಹಿಣಿ, ಮುಂತಾದವರ ಬರಹಗಳು ಇಲ್ಲಿ ಪ್ರಕಟವಾಗಿವೆ, ಅವರೆಲ್ಲರಿಗೂ ಧನ್ಯವಾದಗಳು.

ಇಲ್ಲಿನ ಕೆಲವು ಬರಹಗಳನ್ನು ಎರವಲು ಪಡೆದೂ ಪ್ರಕಟಿಸಲಾಗಿದೆ ತರೀಕೆರೆ ಸಾರ್ ಪ್ರಜಾವಾಣಿ ಅಂಕಣದ ಕೆಲವು ಬರಹಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಸಿರಾಜ್ ಅಹಮದ್, ಮೇಟಿ ಮಲ್ಲಿಕಾರ್ಜುನ ಅವರ ಡಿ.ಎನ್. ಶಂಕರಭಟ್ಟರ ಧೀರ್ಘ ಸಂದರ್ಶನವನ್ನು ಪ್ರಕಟಿಸಲಾಗಿದೆ. ಅಂತೆಯೇ ಜಾನಪದದ ಬಗ್ಗೆ ಪತ್ರಿಕೆಗಳಲ್ಲಿ ಬಂದ, ಬೇರೆ ಬೇರೆ ಬ್ಲಾಗ್ ಗಳಲ್ಲಿ ಪ್ರಕಟವಾದ ಕೆಲವಾದರೂ ಒಳ್ಳೆಯ ಬರಹಗಳನ್ನು ಇಲ್ಲಿ ಪ್ರಕಟಿಸಲು ಪ್ರಯತ್ನಿಸಲಾಗಿದೆ. ಅಂತಹ ಬರಹಗಳ ಎಲ್ಲಾ ಬರಹಗಾರರಿಗೂ ಧನ್ಯವಾದಗಳು. ಕನ್ನಡ ಜಾನಪದದಲ್ಲಿ ಪ್ರಕಟವಾದ ಕೆಲವು ಬರಹಗಳನ್ನು ಪ್ರಕಟಿಸಿದ ಅವಧಿ, ಲಡಾಯಿ ಪ್ರಕಾಶನ , ಕನ್ನಡ ನೆಟ್ ಮುಂತಾದ ತಾಣದ ಹಿಂದಿರುವವರನ್ನೂ ನೆನೆವೆ.

ಈ ಬ್ಲಾಗ್ ಗಾಗಿ ಗೊ.ರು.ಚನ್ನಬಸಪ್ಪ, ಪ್ರೊ.ಹಿರಿಯಣ್ಣ, ಡಾ.ಟಿ.ಆರ್. ಚಂದ್ರಶೇಖರ್, ಡಾ. ರಹಮತ್ ತರೀಕೆರೆ, ಕಿಕ್ಕೇರಿ ನಾರಾಯಣ ಮೊದಲಾದವರೊಂದಿಗೆ ಪ್ರಶ್ನೆಕಳುಹಿಸಿ ಉತ್ತರ ಪಡೆದ ಸಂದರ್ಶನ ಪ್ರಕಟಿಸಿದ್ದೇನೆ, ಆ ಎಲ್ಲಾ ಹಿರಿಯರನ್ನು ನೆನೆವೆ.

ಕೆಲ ದಿನಗಳ ಹಿಂದೆ ಕನ್ನಡ ಜಾನಪದದ ಜತೆ ಕರ್ನಾಟಕ ಪೋಕ್ ಲೋರ್ ಎಂದು ಇಂಗ್ಲೀಷ್ ನಲ್ಲಿ ಸೇರಿಸಿದೆ, ಈ ಸಲಹೆಯನ್ನು ನೀಡಿದವರು ನಟರಾಜ ಹುಳಿಯಾರ ಅವರು. ಕಾರಣ ಹೊರಗಿನವರು ಸಾಮಾನ್ಯವಾಗಿ ಕರ್ನಾಟಕ ಪೋಕ್ ಲೋರ್ ಎಂದು ಹುಡುಕುತ್ತಾರೆ, ಅಂತವರಿಗೂ ಈ ಬರಹದ ಲಿಂಕ್ ಗಳು ಸಿಗಲೆಂದು ಹೀಗೆ ಬದಲಾಯಿಸಲಾಯಿತು.

ಈ ಬ್ಲಾಗ್ ನಲ್ಲಿ ಬರೆದ ಬರಹಗಳು ಮಹತ್ವದ ಸಂಶೋಧನೆಗಳೇನೂ ಅಲ್ಲ, ಬದಲಾಗಿ ಜಾನಪದವನ್ನು ಹೊಸದಾಗಿ ವಿಶ್ಲೇಷಿಸಬಹುದಾದ ಕೆಲವು ಟಿಪ್ಪಣಿ ತರಹದ, ಪ್ರವೇಶಿಕೆಯ ರೂಪದ ಬರಹಗಳು. ಅಂತಹ ಬರಹಗಳ ವಿಸ್ತರಣಾ ರೂಪಗಳು ಜಾನಪದ ಹೊಸ ನಡಿಗೆ ಎನ್ನುವ ನನ್ನ ಹೊಸ ಪುಸ್ತಕದಲ್ಲಿ ಪ್ರಕಟವಾಗಲಿವೆ. ಜಾನಪದ ಕುರಿತ ಸೆಮಿನಾರು, ಚರ್ಚೆ ಸಂವಾದಗಳು ನಡೆವ ಬಗ್ಗೆ ನನಗೆ ದೊರಕಿದ ಕೆಲವಾದರೂ ಮಾಹಿತಿಗಳನ್ನು ಪ್ರಕಟಿಸಲಾಗಿದೆ.

ಬೀದರ್ ನಲ್ಲಿ ನಡೆದ ಅಖಿಲ ಭಾರತೀಯ ಜಾನಪದ ಸಮ್ಮೇಳನಕ್ಕೆ ಆಹ್ವಾನವಿಲ್ಲದೆ ಸ್ವ ಇಚ್ಚೆಯಿಂದ ತೆರಳಿ ನಾಲ್ಕು ದಿನ ಇದ್ದು ವರದಿ ಮಾಡಿದ್ದೇನೆ. ಕನ್ನಡ ಜಾನಪದ ಬ್ಲಾಗ್ ಕರ್ನಾಟಕ ಜಾನಪದ ಕ್ಷೇತ್ರಕ್ಕೆ ಸಣ್ಣ ಸೇರ್ಪಡೆಯಷ್ಟೆ. ಬ್ಲಾಗ್ ನ್ನು ವೆಬ್ ಸೈಟ್ ಮಾಡುವ ಆಲೋಚನೆಯೂ ಇತ್ತು. ಅದಕ್ಕೆ ತಗಲುವ ಹಣಕಾಸನ್ನು ಭರಿಸುವ ಶಕ್ತಿ ಸದ್ಯಕ್ಕೆ ಇಲ್ಲವಾದ್ದರಿಂದ ವೆಬ್ ಸೈಟ್ ಮಾಡುವ ಯೋಚನೆಯನ್ನು ಸ್ವಲ್ಪ ಮುಂದೂಡಿದ್ದೇನೆ. ಅಲ್ಲಿಯವರೆಗೂ ನಿರಂತರವಾಗಿ ಬ್ಲಾಗ್ ನಲ್ಲಿ ಬರವಣಿಗೆ ಮಾಡುತ್ತೇನೆ.

ಬ್ಲಾಗ್ ರೂಪಿಸುವಲ್ಲಿ ಜತೆಗಾತಿ ಕಾವ್ಯಳ ಸಹಕಾರ ದೊಡ್ಡದು. ವರ್ಷ ತುಂಬಿದ ಈ ಹೊತ್ತಿನಲ್ಲಿ ತಕ್ಷಣಕ್ಕೆ ನೆನಪಾಗದ ಹಲವಾರು ಗೆಳೆಯ ಗೆಳತಿಯರು ಸಹಕರಿಸಿದ್ದಾರೆ ಅವರೆಲ್ಲರನ್ನೂ ನೆನೆವೆ.

-ಅರುಣ್ ಜೋಳದಕೂಡ್ಲಿಗಿ, ಕನ್ನಡ ಜಾನಪದ ಬ್ಲಾಗಿಗ.

ಶನಿವಾರ, ನವೆಂಬರ್ 19, 2011

ಕರ್ನಾಟಕ ಜಾನಪದ ಅಕಾಡೆಮಿ ವೆಬ್‌ಸೈಟ್‌ಗೆ ಚಾಲನೆ



ಕರ್ನಾಟಕ ಜಾನಪದ ಅಕಾಡೆಮಿಗೆ ತನ್ನದೇ ಆದ ವೆಬ್ ಸೈಟ್ ಮಾಡುವುದು ಬಹು ಜನರ ನಿರೀಕ್ಷೆಯಾಗಿತ್ತು. ಅದೀಗ ಸಾದ್ಯವಾಗಿದೆ. ಇದೇ ನವಂಬರ್ 18 ರಂದು ಅಕಾಡೆಮಿಯ ವೆಬ್ ಸೈಟ್ ನ್ನು ಬಿಡುಗಡೆ ಮಾಡಲಾಗಿದೆ.
ಕೆಲವೇ ದಿನಗಳಲ್ಲಿ ಇದು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದರು. ವೆಬ್‌ಸೈಟ್ ವಿಳಾಸ ಹೀಗಿದೆ: http://karnatakajanapadaacademy.org/



ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು ಅವರು ಇಲಾಖೆಯ ಆಯುಕ್ತ ಮನು ಬಳಿಗಾರ್, ಅಕಾಡೆಮಿಯ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ರಿಜಿಸ್ಟ್ರಾರ್ ಬಿ.ಎನ್. ಪರಡ್ಡಿ ಅವರ ಉಪಸ್ಥಿತಿಯಲ್ಲಿ ವೆಬ್‌ಸೈಟ್ ಅನ್ನು ಸಾಂಕೇತಿಕವಾಗಿ ಈಚೆಗೆ ಉದ್ಘಾಟನೆ ಮಾಡಲಾಯಿತು. ವೆಬ್ ಸೈಟ್ ಚಾಲನೆಯು ಗೊ.ರು. ಚನ್ನಬಸಪ್ಪ ಅವರಿಗೆ ಸಲ್ಲಬೇಕಾದ ಗೌರವ. ಕಾರಣ ಇಂಥದ್ದೊಂದು ಬಹುದಿನದ ಕನಸನ್ನು ಅವರು ಈಡೇರಿಸಿದ್ದಾರೆ.ಈಗ ಮಾಡಬೇಕಾದ ಕೆಲಸವೆಂದರೆ ಕಾಲ ಕಾಲಕ್ಕೆ ವೆಬ್ ಸೈಟ್ ನ್ನು ಅಪ್ ಡೇಟ್ ಮಾಡುವುದು, ಮತ್ತು ಸಾದ್ಯವಾದಷ್ಟು ಜಾನಪದದ ಕುರಿತಂತೆ ಸಮಗ್ರ ಮಾಹಿತಿ ಸಿಗುವಂತೆ ಜಾಗರೂಕತೆಯಿಂದ ರೂಪಿಸಬೇಕಾಗಿದೆ.

ಇದನ್ನು ಅಭಿವೃದ್ಧಿಪಡಿಸಲು ಕನ್ನಡ ಗಣಕ ಪರಿಷತ್ತಿನ (ಕಗಪ) ತಂತ್ರಜ್ಞರಿಂದ ನೆರವು ಪಡೆಯಲಾಗಿದೆ. ವೆಬ್‌ಸೈಟ್‌ನ ನಿರ್ವಹಣೆ, ಕಾಲಕಾಲಕ್ಕೆ ಹೊಸ ಮಾಹಿತಿ ನೀಡುವ ಜವಾಬ್ದಾರಿಯನ್ನೂ ಕಗಪ ತಂತ್ರಜ್ಞರೇ ನಿರ್ವಹಿಸಲಿದ್ದಾರೆ. ಆರಂಭಿಕ ಹಂತದಲ್ಲಿ ಒಂದು ಲಕ್ಷ ರೂಪಾಯಿ ಖರ್ಚಾಗಿದೆ, ವೆಬ್‌ಸೈಟ್ ನಿರ್ವಹಣೆಗೆ ಪ್ರತಿ ತಿಂಗಳು 10-15 ಸಾವಿರ ರೂಪಾಯಿ ಖರ್ಚಾಗುವ ಅಂದಾಜು ಇದೆ ಎಂದು ಪರಡ್ಡಿ ತಿಳಿಸಿದ್ದಾರೆ.

ಕನ್ನಡ ಜಾನಪದ ಬ್ಲಾಗ್ ಜಾನಪದ ಅಕಾಡೆಮಿಯ ವೆಬ್ ಸೈಟ್ ನ್ನು ತುಂಬು ಪ್ರೀತಿಯಿಂದ ಅಂತರ್ಜಾಲ ಲೋಕಕ್ಕೆ ಸ್ವಾಗತಿಸುತ್ತದೆ. ನಮ್ಮ ಬ್ಲಾಗ್ ಪಟ್ಟಿಯಲ್ಲಿ ಅಕಾಡೆಮಿ ವೆಬ್ ಸೈಟ್ ಲಿಂಕನ್ನು ಕೊಡಲಾಗಿದೆ, ಅವಶ್ಯವಿದ್ದವರು ಕನ್ನಡ ಜಾನಪದ ಬ್ಲಾಗ್ ಮೂಲಕವೂ ವೆಬ್ ಸೈಟ್ ನ್ನು ಪ್ರವೇಶಿಸಬಹುದು.

ಬುಧವಾರ, ನವೆಂಬರ್ 16, 2011

ಹೆಣ್ಣಿನ ಶೋಷಣೆ ವೈಭವೀಕರಿಸುವ ಅಗತ್ಯ ಇದೆಯೇ?

November 15, 2011 ರ ಪ್ರಜಾವಾಣಿ ಸಂಗತದಲ್ಲಿ ಪ್ರಕಟವಾದ ಬರಹ

ರೋಹಿಣಿ ಎಚ್.ಎಸ್.



`ಕೆರೆಗೆ ಹಾರ` ಒಂದು ಜನಪ್ರಿಯ ಜನಪದ ಕಥನಗೀತೆ. ಕಲ್ಲನಕೇರಿ ಮಲ್ಲನಗೌಡ ಕಟ್ಟಿಸಿದ ಕೆರೆಗೆ ನೀರು ಬರುವುದಿಲ್ಲ. ಜ್ಯೋತಿಷಿಗಳು ಹಿರಿಯ ಸೊಸೆಯನ್ನು ಕೆರೆಗೆ ಬಲಿ ಕೊಡಬೇಕು ಎಂದಾಗ `ಹಿರಿತನಕ್ಕೆ ಯಾರಿಲ್ಲ` ಎಂದುಕೊಂಡು, ಕಿರಿಯ ಸೊಸೆಯನ್ನು ಬಲಿಕೊಡಲು ಮುಂದಾಗುತ್ತದೆ ಕುಟುಂಬ.

ಅದನ್ನು ತಿಳಿದು ನೊಂದುಕೊಳ್ಳುವ ಕಿರಿ ಸೊಸೆ ಭಾಗೀರಥಿ ದಂಡಿಗೆ ಹೋದ ಪತಿ ಮಾದೇವರಾಯನನ್ನು ನೆನೆದು ಕಣ್ಣೀರು ಇಡುತ್ತಾಳೆ. `ಇಟ್ಟಂಗೆ ಇರಬೇಕು` ಎಂಬ ಗೆಳತಿಯ ಮಾತಿಗೆ ತಲೆದೂಗಿ ಕೆರೆಗೆ ಹಾರ (ಆಹಾರ) ವಾಗಲು ಮಾನಸಿಕವಾಗಿ ಸಿದ್ಧವಾಗುತ್ತಾಳೆ.

ದಂಡಿನಿಂದ ಮನೆಗೆ ಹಿಂತಿರುಗಿದ ಮಾದೇವರಾಯ ವಿಷಯ ತಿಳಿದು ಅದೇ ಕೆರೆಯಲ್ಲಿ ಬಿದ್ದು ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈ ಘಟನೆಯನ್ನು ವೈಭವೀಕರಿಸುವಂತೆ `ಕೆರೆಗೆ ಹಾರ` ಜನಪದ ಕಥನಗೀತೆ ಇದೆ.

ಮಲ್ಲನಗೌಡ `ಊರ ಕೆರೆಗೆ ನೀರು ಬರಲಿ` ಎಂದು ತನ್ನ ಸೊಸೆಯನ್ನೇ ಬಲಿಕೊಟ್ಟಿದ್ದು ಮತ್ತು ಭಾಗೀರಥಿ ತನ್ನ ಬದುಕನ್ನು ಲೆಕ್ಕಿಸದೇ ಊರ ಕೆರೆಗೆ ನೀರು ಬರಲಿ ಎಂದು ಕೆರೆಗೆ ಹಾರವಾಗಿ ಊರವರ ಕಣ್ಣಲ್ಲಿ ದೊಡ್ಡವಳು ಎನಿಸಿಕೊಂಡಿದ್ದು ಈ ಕಥನದಿಂದ ಹೊಮ್ಮುವ ಸಾರಾಂಶ.

ಕೆಲವು ವರ್ಷಗಳ ಹಿಂದೆ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಪಠ್ಯದಲ್ಲಿ ಈ ಕಥನಗೀತೆ ಇತ್ತು. ಇದೀಗ ಮೈಸೂರು ವಿಶ್ವವಿದ್ಯಾಲಯದ ಎರಡನೇ ಪದವಿ ತರಗತಿಗಳಿಗೆ ಇದು ಪಠ್ಯವಾಗಿದೆ. ಅದಕ್ಕೆ ಬರೆದಿರುವ ಟಿಪ್ಪಣಿಯಲ್ಲಿ `ಇದು ಭಾಗೀರಥಿಯ ತ್ಯಾಗ, ಬಲಿದಾನದ ಕತೆ` ಮತ್ತು `ಭಾಗೀರಥಿಯ ಪತಿ ಮಾದೇವರಾಯನ ಪತ್ನಿ ಮೇಲಿನ ಪ್ರೀತಿ ಬಿಂಬಿಸುವ ಕತೆ` ಎಂದು ಬಣ್ಣಿಸಲಾಗಿದೆ.

ಅದರಲ್ಲಿ ಎಲ್ಲಿಯೂ ಭಾಗೀರಥಿ ಕೆರೆಗೆ ಬಿದ್ದು ಹಾರವಾದ ತಕ್ಷಣ ನೀರು ಬರುವುದು ಮೂಢನಂಬಿಕೆ ಎಂಬುದರ ಬಗ್ಗೆ ಸೊಲ್ಲಿಲ್ಲ. ಕೆರೆಯಲ್ಲಿ ನೀರು ಬರಲಿಲ್ಲ ಎಂದು ಹೆಣ್ಣನ್ನು ಬಲಿಕೊಡುವ ಸಂಪ್ರದಾಯದ ಬಗ್ಗೆ ವಿರೋಧವಿಲ್ಲ.

ಈ ಜನಪದ ಕಥನಗೀತೆಯನ್ನು ಪಠ್ಯವಾಗಿ ಅಳವಡಿಸಿರುವುದು ತಪ್ಪಲ್ಲ. ಆದರೆ ತ್ಯಾಗ, ಬಲಿದಾನ ಎಂಬ ಪದಗಳನ್ನು ಬಳಸಿರುವುದು ಸರಿಯೇ? ಅದಕ್ಕೆ ಬದಲು ಒಂದು ಘಟನೆಯನ್ನು ಆಧಾರವಾಗಿಟ್ಟುಕೊಂಡು ಪದಕ್ಕೆ ಪದ ಜೋಡಿಸಿ ಎಷ್ಟು ಚೆಂದದ ಕಥನವನ್ನು ಜನಪದರು ಕಟ್ಟಿದ್ದಾರೆ ಎಂದು ಟಿಪ್ಪಣಿಯನ್ನು ಬರೆದಿದ್ದರೆ ಅದು ತಪ್ಪಾಗುತ್ತಿರಲಿಲ್ಲ.

ಈ ಘಟನೆ ತ್ಯಾಗ, ಬಲಿದಾನದ ಹೆಸರಲ್ಲಿ ನಡೆದಿರುವ ಹೆಣ್ಣಿನ ಶೋಷಣೆ ಎಂಬುದು ನೇರವಾಗಿಯೇ ಗೋಚರವಾಗುವ ಸತ್ಯ. ತ್ಯಾಗವನ್ನು ವೈಭವೀಕರಿಸಿ ಕೆರೆಗೆ ಹಾರ ನೀಡುವುದನ್ನು ಸಮರ್ಥಿಸಿಕೊಂಡಿರುವಂತೆ ಇರುವ ಈ ಟಿಪ್ಪಣಿ ವಿದ್ಯಾರ್ಥಿಗಳಲ್ಲಿ, ಹಿಂದೆ ಕೆರೆಗೆ ಆಹಾರವಾದ ತಕ್ಷಣ ನೀರು ಬರುವಂಥ ಪವಾಡಗಳು ನಡೆಯುತ್ತಿದ್ದವು ಮತ್ತು ಭಾಗೀರಥಿಯಂಥ ತ್ಯಾಗ ಜೀವಿಗಳ ಬದುಕು ಅನುಕರಣೀಯ ಎಂಬ ಭಾವ ಹುಟ್ಟಿಸಬಹುದು. ವಿದ್ಯಾರ್ಥಿಗಳಿಗೆ ಈಗ ಇಂಥವನ್ನು ಬೋಧಿಸಬೇಕೇ?

ಭಾಗೀರಥಿ ಕೆರೆಗೆ (ಕಾಲು ಜಾರಿ?) ಬಿದ್ದ ತಕ್ಷಣ ನೀರು ಬರಲು ಸಾಧ್ಯವೇ? ಕಾಕತಾಳೀಯವಾಗಿ ಅಂದು ನೀರು ಬಂದಿರಬಹುದು ಅಥವಾ ಆ ಘಟನೆ ನಡೆದ ನಂತರ ನಿಧಾನವಾಗಿ ಕೆರೆ ತುಂಬಿರಬಹುದು.

ಮಲ್ಲನಗೌಡ ಜಮೀನ್ದಾರನಾದ ಕಾರಣ ಅವನ ಸುತ್ತ ಇದ್ದ ಭಟ್ಟಂಗಿಗಳು (ಅವರಲ್ಲೊಬ್ಬ ಕೇಡಿಗ ಬುದ್ಧಿಯ ಕವಿ ಇದ್ದನೆಂದುಕೊಳ್ಳಬಹುದು) ಈ ಕಥನದ ಹುಟ್ಟಿಗೆ ಕಾರಣವಾಗಿರಬಹುದು. ಅದರಿಂದ ಭಾಗೀರಥಿಯ ಸಾವನ್ನು ಸಮರ್ಥಿಸಿಕೊಂಡಿರಬಹುದು.

ಇದಲ್ಲದೆ, ಹಿರಿಯ ಸೊಸೆಯನ್ನು ಜ್ಯೋತಿಷಿಗಳು ಆಹಾರವಾಗಿ ಕೊಡಿ ಎಂದು ಮೊದಲು ಸಲಹೆ ಇತ್ತಾಗ ಕುಟುಂಬ ಹಿಂಜರಿಯುತ್ತದೆ. ಯಾಕೆ? ಆಕೆ ಶ್ರೀಮಂತರ ಮನೆಯ ಹೆಣ್ಣುಮಗಳಿರಬಹುದೇನೋ? ಭಾಗೀರಥಿಯ ಪತಿ, `ಹೆಂಡತಿ ಸತ್ತಳು` ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ಹೇಳಲಾಗಿದ್ದರೂ, ಅದರ ಹಿಂದೆ ಸೋದರರ ಆಸ್ತಿ ಕಲಹದಂಥ ವಿಚಾರಗಳು ಇದ್ದು ಅವನನ್ನು ದಾಯಾದಿಗಳು ಅದೇ ಕೆರೆಗೆ ತಳ್ಳಿದ್ದರೂ ಇರಬಹುದು.

ಜಮೀನ್ದಾರರ ಮನೆಯ ವಿಚಾರವಾದ ಕಾರಣ ಅದು ಬೇರೆ ರೀತಿಯ ತಿರುವು ಪಡೆದುಕೊಂಡಿರುವ ಸಾಧ್ಯತೆ ಇರುತ್ತದೆ. ಈ ಜನಪದ ಕಥನ ಹುಟ್ಟಲು ಇಂಥ ಹಲವು ಕಾರಣಗಳಿರಬಹುದು. ಹಾಡು ಕಟ್ಟಿದ ಜನಪದರ ಪ್ರತಿಭೆಯನ್ನು ಹೊಗಳುವುದು ಸರಿ. ಆದರೆ, ಘಟನೆಯ ಸಮರ್ಥನೆ ತಪ್ಪು.

ಈ ಸುಂದರ ಜನಪದ ಕಥನಗೀತೆಯ ಲಾಲಿತ್ಯದ ವರ್ಣನೆ ಬೇಕು. ಆದರೆ ಅದರ ಆಶಯದ, ಮೌಢ್ಯ ಪ್ರತಿಪಾದನೆಯ ವಿಚಾರ ಮಾಡದೆಯೇ ವಿದ್ಯಾರ್ಥಿಗಳಿಗೆ ಪಠ್ಯವಾಗಿ ನೀಡಿ ಸೂಕ್ತ ಟಿಪ್ಪಣಿ ಒದಗಿಸದೇ ಇರುವುದು ಬೇಜವಾಬ್ದಾರಿಯುತ ನಡವಳಿಕೆ ಅನಿಸುತ್ತದೆ.

ಇಂಥ ಮೂಢನಂಬಿಕೆಯನ್ನು ವೈಭವಿಸಿ ಸಿನಿಮಾ ಮಾಡುವ ಮಂದಿಯೂ ಹೆಣ್ಣಿನ ಮೇಲಿನ ದೌರ್ಜನ್ಯದ ಹುನ್ನಾರವನ್ನು ಮರೆ ಮಾಚುತ್ತಿದ್ದಾರೆ (ಭಾಗೀರಥಿಯ ಸ್ಥಾನದಲ್ಲಿ ತಮ್ಮ ಸ್ವಂತ ಮಗಳಿದ್ದಳೆಂದು ಕಲ್ಪಿಸಿಕೊಂಡರೆ ಹಾಗೆ ವೈಭವೀಕರಿಸಬಲ್ಲರೇ?).

ಅದು ಅವರಿಗೆ ಅಮರ ಪ್ರೇಮದ ಕಥೆಯಾಗಿ ಬಿಂಬಿತವಾಗುತ್ತದೆ. ಕೆರೆಗೆ ಬಲಿ ಕೊಟ್ಟರೆ ನೀರು ಬರುತ್ತದೆ ಎಂಬ ಮೂಢವಾದವನ್ನು ಇವರು ಈಗಲೂ ಒಪ್ಪುತ್ತಾರೆ ಎಂದರೆ ಇವರ ಬೌದ್ಧಿಕ ಮಟ್ಟ ಎಂಥದ್ದಿರಬೇಕು? ಕೆಲವು ವರ್ಷಗಳ ಹಿಂದೆ ಎಸ್. ಮಹೇಂದರ್ ನಿರ್ದೇಶನದ `ಗೌಡ್ರು` ಸಿನಿಮಾದಲ್ಲಿ ಕೂಡ ಗೌಡನ ಹೆಂಡತಿ ಕೆರೆಗೆ ಹಾರವಾಗುವ ಘಟನೆ ಇದೆ.

ನಂತರ ಎಸ್.ಮಹೇಂದರ್ ತಾವೇ `ಕೆರೆಗೆ ಹಾರ` ಹೆಸರನ್ನು ನೋಂದಾಯಿಸಿ ಸಿನಿಮಾ ಮಾಡಬೇಕೆಂದು ಹಂಬಲಿಸಿದ್ದರು. ಅದು ಈಡೇರಲಿಲ್ಲ. ಇಂಥ ಮೂಢನಂಬಿಕೆಗಳ ಕತೆಯನ್ನು ಮಹಿಳೆಯರ ತ್ಯಾಗದ ಹೆಸರಿನಲ್ಲಿ ವೈಭವಿಸಿ ಹೇಳುವ ಅಗತ್ಯ ಇಂದು ಇದೆಯೇ?

ಶನಿವಾರ, ನವೆಂಬರ್ 5, 2011

ಜಾನಪದ ವಿಶ್ವವಿದ್ಯಾಲಯ ದೃಢವಾದ ಹೆಜ್ಜೆಗಳನ್ನಿಡಬೇಕಿದೆ



ಈ ಬರಹ ಅಕ್ಟೋಬರ್ ತಿಂಗಳ ಮಯೂರದ-ವೇದಿಕೆ ವಿಭಾಗದಲ್ಲಿ ಪ್ರಕಟವಾಗಿದೆ. ಪ್ರಕಟವಾದ ನಂತರ ಒಳ್ಳೆಯ ಪ್ರತಿಕ್ರಿಯೆಯೂ ಬಂತು. ಬರಹ ಪ್ರಕಟಿಸಿದ ಸಂಪಾದಕರಿಗೆ ದನ್ಯವಾದಗಳು. ಬ್ಲಾಗ್ ನ ಓದಿಗಾಗಿ ಈ ಬರಹವನ್ನು ಇಲ್ಲಿ ಪ್ರಕಟಿಸುತ್ತಿರುವೆ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸ್ಥಾಪನೆ ಚಾರಿತ್ರಿಕವಾಗಿ ಮುಖ್ಯ ಘಟನೆ. ಕಾರಣ ಅದು ಇತರ ವಿವಿಗಳಿಗಿಂತಲೂ ಭಿನ್ನ. ಬೇರೆ ವಿವಿಗಳಲ್ಲಿ ಎದುರಿಗೆ ವಿದ್ಯಾರ್ಥಿಗಳಿರುತ್ತಾರೆ, ಅವರು ಆಧುನಿಕ ಕಾಲದ ಚೌಕಟ್ಟಿನಲ್ಲಿ ಕೂರುವುದು ಹೇಗೆಂದು ಕಲಿಯುತ್ತಿರುತ್ತಾರೆ. ಈ ವಿವಿಯ ಎದುರಿಗೆ ಜನಸಾಮಾನ್ಯರಿರುತ್ತಾರೆ, ಅವರ ತಿಳುವಳಿಕೆಯ ಮೂಲಕವೆ, ಅವರ ಬದುಕನ್ನು ಹಸನು ಮಾಡುವುದು ಹೇಗೆಂದು ಹುಡುಕಬೇಕಾಗುತ್ತದೆ, ಅಂತೆಯೇ ಅವರ ತಿಳುವಳಿಕೆಯ ಚೌಕಟ್ಟಿಗೆ ಆಧುನಿಕತೆಯನ್ನು, ಸರಕಾರಿ ಯೋಜನೆಗಳನ್ನು ಎಡಮುರಿಗೆ ಕಟ್ಟಿ ಹೇಗೆ ಒಗ್ಗಿಸಬೇಕೆನ್ನುವುದನ್ನು ಶೋಧಿಸಬೇಕಾಗುತ್ತದೆ.

ಭಾರತದಲ್ಲಿ ಇದು ಮೊದಲ ವಿಶ್ವವಿದ್ಯಾಲಯ. ಹಾಗಾಗಿ ಅನುಕರಣೆಗೆ ಸಿದ್ಧ ಮಾದರಿಗಳಿಲ್ಲ. ಸ್ವತಃ ಈ ವಿವಿ ಹೊಸ ಮಾದರಿಗಳನ್ನು ಹುಟ್ಟಿಸಬೇಕಾಗಿದೆ. ಇದೊಂದು ದೊಡ್ಡ ಸವಾಲು. ಹಾಗಾಗಿ ಈ ವಿವಿ ರೂಪುಗೊಳ್ಳುವ ಬಗೆಗೆ ವಿಪರೀತ ಕುತೂಹಲಗಳೂ, ನಿರೀಕ್ಷೆಗಳು ಇವೆ. ಇಂತಹ ಒತ್ತಡವೇ ಜಾನಪದ ವಿವಿಯನ್ನು ದೃಢವಾದ ಹೆಜ್ಜೆಗಳನ್ನಿಡುವಂತೆ ಒತ್ತಾಯಿಸುತ್ತಿದೆ.


ಈ ಬರಹ ಬರೆವ ಹೊತ್ತಿಗೆ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಅಂಬಳಿಕೆ ಹಿರಿಯಣ್ಣ ಅವರನ್ನು ಮಾತಾಡಿಸಬೇಕಾಯಿತು. ಈಗ ವಿಶ್ವವಿದ್ಯಾಲಯ ಉದ್ಘಾಟನೆಗಾಗಿ ಕಾಯುತ್ತಿದೆ. ಬೇಕಾದ ತಯಾರಿಯೂ ನಡೆಯುತ್ತಿದೆ. ಜಾನಪದದ ಸಮಗ್ರ ಸರ್ವೇಕ್ಷಣೆಯ ಭಾಗವಾಗಿ ತಲಾ ಹತ್ತು ಸಂಪುಟಗಳಲ್ಲಿ ಜಾನಪದ ವಿಶ್ವಕೋಶ, ಜಾನಪದ ನಿಘಂಟು, ಗ್ರಾಮ ಮಾಹಿತಿಕೋಶ ಮತ್ತು ಭಾಷಾಂತರ ಯೋಜನೆಗಳನ್ನು ರೂಪಿಸುತ್ತಿರುವುದಾಗಿ ಅವರು ಹೇಳಿದರು.

ಬಹುಶಃ ಜಾನಪದ ವಿವಿಯ ಮೊದಲ ಹಂತದ ಮಹತ್ವಾಕಾಂಕ್ಷೆಯ ಯೋಜನೆಗಳು ಇವೆಂದು ತಿಳಿಯೋಣ. ಇದರಲ್ಲಿ ಕೆಲಮಟ್ಟಿನ ಪುನರಾವರ್ತನೆಯ ಸಂಭವವಿದೆಯಾದರೂ, ಆಗಬೇಕಾದ ಕೆಲಸವೂ ಹೌದು. ಈ ಯೋಜನೆಗಳೇ ವಿಶ್ವವಿದ್ಯಾಲಯದ ತೋರುಬೆರಳುಗಳು ಅಂದುಕೊಳ್ಳುವುದಾದರೆ, ಜಾನಪದ ವಿವಿ ಮಾಹಿತಿಗಳನ್ನು ಕಲೆಹಾಕುವಲ್ಲಿ, ಮತ್ತು ಅವುಗಳನ್ನು ಪುಸ್ತಕಗಳಾಗಿ ಅಚ್ಚು ಹಾಕಿಸುವಲ್ಲಿ, ಹೆಚ್ಚು ಉತ್ಸುಕವಾಗಿದೆ ಎಂದಂತಾಯಿತು.

ಈ ಹಿಂದೆ ಜಾನಪದ ವಿವಿಯನ್ನು ಕಟ್ಟುವ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಜಾನಪದ ವಿವಿ ಮಂಗಳೂರು, ದಾವಣಗೆರೆ, ದಾರವಾಡ, ಗುಲ್ಬರ್ಗಾಗಳಲ್ಲಿ ಆಯಾ ಭಾಗದ ಎಲ್ಲಾ ವಯೋಮಾನದ ವಿದ್ವಾಂಸರನ್ನು ಕರೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಮುಂದುವರೆದು ವಿವಿ ಆರಂಭಿಕ ಕೆಲಸಗಳನ್ನೂ ನಡೆಸಿದೆ. ಈ ಹೊತ್ತಲ್ಲಿ ಜಾನಪದ ವಿವಿಯನ್ನು ಮುಂದೆ ಹೇಗೆ ರೂಪಿಸಬಹುದು ಎನ್ನುವ ಸಾಧ್ಯತೆಗಳ ಬಗ್ಗೆ ಯೋಚಿಸಬಹುದು.

ಜಾನಪದ ವಿವಿ ಮುಖ್ಯವಾಗಿ ಎರಡು ನೆಲೆಗಳಲ್ಲಿ ರೂಪುಗೊಳ್ಳಬೇಕಿದೆ. ಅವುಗಳೆಂದರೆ ಸೈದ್ಧಾಂತಿಕ ನೆಲೆ ಮತ್ತು ಪ್ರಾಯೋಗಿಕ ನೆಲೆ. ಒಂದು: ವಿವಿ ತನ್ನದೇ ಆದ ಆಲೋಚನ ವಿನ್ಯಾಸವನ್ನು, ಸೈದ್ಧಾಂತಿಕ ಖಚಿತತೆಯನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಅದು ಬುಡಮಟ್ಟದ ಜನಸಮುದಾಯಗಳ ತಿಳುವಳಿಕೆಯ ಪಕ್ಷಪಾತಿಯಾಗಿರಬೇಕು. ಜನ ಸಾಮಾನ್ಯರ ಲೋಕದೃಷ್ಠಿಯನ್ನು ಆಧರಿಸಿ, ಗ್ರಾಮ ಜಗತ್ತಿನ ನಿಜದ ಬದುಕಿನ ನೆಲೆಯಲ್ಲಿ ಈ ಲೋಕದ ತಿಳಿವನ್ನು ಭಿನ್ನನೆಲೆಯಲ್ಲಿ ಅರ್ಥಮಾಡಿಸಬೇಕು. ಇದಕ್ಕಾಗಿ ಸಂಗ್ರಹಿತ ಜಾನಪದವನ್ನು ಮತ್ತೆ ಎದುರುಗೊಂಡು ಹೊಸದಾಗಿ ವಿಶ್ಲೇಷಿಸುವುದು, ಮುಖ್ಯವೆನಿಸುವ ಜಾನಪದವನ್ನು ಸಂಗ್ರಹಿಸುವುದು ಅಗತ್ಯವಿದೆ.

ಮೊದಲು ಜಾನಪದ ಕುರಿತ ವ್ಯಾಖ್ಯಾನಗಳನ್ನು ಈ ಕಾಲಕ್ಕೆ ಹಿಗ್ಗಿಸಬೇಕಿದೆ. ಹಳೆ ವ್ಯಾಖ್ಯಾನಗಳಿಗೆ ವಿವಿ ತನ್ನ ಕಾರ್ಯಸೂಚಿಯನ್ನು ರೂಪಿಸಿಕೊಂಡರೆ ಹೊಸತನ್ನು ನಿರೀಕ್ಷಿಸಲಾಗದು. ಜಾನಪದವೆಂದರೆ ಕಥೆ, ಗೀತೆ, ಗಾದೆ, ಒಗಟು, ಪ್ರದರ್ಶಕ ಕಲೆಗಳು ಎಂಬ ನಂಬಿಕೆ ಬಲವಾಗಿದೆ. ಅದು ಅನಕ್ಷರಸ್ತರದ್ದು, ಹಳ್ಳಿಗರದ್ದು, ಕೆಳಸಮುದಾಯಗಳದ್ದು, ಮೌಖಿಕವಾದದ್ದು ಮುಂತಾದ ಲಕ್ಷಣಗಳನ್ನು ಅದರ ಬೆನ್ನಿಗೆ ಬಿಗಿಯಾಗಿ ಕಟ್ಟಲಾಗಿದೆ. ಇವೆಲ್ಲಾ ಜಾನಪದದ ವ್ಯಾಪ್ತಿಗೆ ಬರುತ್ತವಾದರೂ ಇದಷ್ಟೆ ಅಲ್ಲ. ಇವುಗಳಾಚೆಗೆ ಬಹು ದೂರವನ್ನು ಜಾನಪದ ಕ್ರಮಿಸಿದೆ. ಈಗ ಗುರುತಿಸುವ ಜನಪದ ಪ್ರಾಕಾರಗಳಲ್ಲಿಯೂ ಹೊಸ ಚಲನೆ ಇದೆ.

ಈ ಹಿಂದೆ ಡೊಳ್ಳು ಕಲೆಯನ್ನು ಕುರುಬ ಸಮುದಾಯದ ಕಲೆಯೆಂದೂ, ಗಂಡು ಕಲೆಯೆಂದೂ ವಿಶ್ಲೇಷಿಸಲಾಗಿದೆ. ಈಗ ಬಹುಸಮುದಾಯಗಳಲ್ಲಿ ಆ ಕಲೆ ವಿಸ್ತರಿಸಿಕೊಂಡಿದೆ, ಹತ್ತಾರು ಮಹಿಳಾ ಡೊಳ್ಳು ತಂಡಗಳು ಹುಟ್ಟಿಕೊಂಡಿವೆ. ಹಾಗಾಗಿ ಅದರ ಹಿಂದಿನ ವಿಶ್ಲೇಷಣೆ ಈಗ ಬದಲಾಗಬೇಕಾಗುತ್ತದೆ. ಪುರುಷರ ಜನಪದ ಕಲೆಗಳನ್ನು ಇಂದು ಮಹಿಳೆಯರು ಪ್ರವೇಶಿಸುತ್ತಿದ್ದಾರೆ. ಹೀಗೆ ಆಯಾ ಜನಪದ ಪ್ರಕಾರಗಳು ವಿಸ್ತರಿಕೊಂಡ ನೆಲೆಗಳನ್ನು ಆಧರಿಸಿ ಹೊಸ ಬಗೆಯ ಆಲೋಚನಾ ಕ್ರಮವನ್ನು ರೂಪಿಸಿಕೊಳ್ಳಬೇಕಾದೆ.
ಇಂದು ಕರ್ನಾಟಕದಲ್ಲಿ ಸಾಂಸ್ಕೃತಿಕ ಅಧ್ಯಯನ ಮಾದರಿ ರೂಪುಗೊಳ್ಳುತ್ತಿದೆ. ಜಾನಪದ ವಿವಿಯೂ ಈ ಮಾದರಿಯನ್ನು ಗಟ್ಟಿಗೊಳಿಸುವ ಅಗತ್ಯವಿದೆ. ಅದಕ್ಕಾಗಿ ಬಹುಶಿಸ್ತೀಯ ನೆಲೆಯಲ್ಲಿ ವಿವಿಯನ್ನು ರೂಪಿಸಬೇಕು. ಅಲ್ಲಿ ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಅಭಿವೃದ್ಧಿ ಅಧ್ಯಯನ, ಮಹಿಳಾ ಅಧ್ಯಯನ, ಸಾಹಿತ್ಯ ಅಧ್ಯಯನ, ಭಾಷಾದ್ಯಯನ, ತಂತ್ರಜ್ಞಾನ, ವಿಜ್ಞಾನದಂತಹ ಅನ್ಯಜ್ಞಾನ ಶಿಸ್ತುಗಳ ಮೂಲಕ ಜಾನಪದವನ್ನು ಆನ್ವಯಿಕವಾಗಿ ನೋಡುವಂತಾದಲ್ಲಿ ಅದರ ವಿಸ್ತರಣೆಯಾಗುತ್ತದೆ.

ಅಂತೆಯೆ ಜಾನಪದದಲ್ಲಿ ಜಾತಿ ಶ್ರೇಣೀಕರಣದ ಬಿಗಿಯಾದ ಕಟ್ಟುಗಳಿವೆ, ಕೆಳಜಾತಿ ಕೆಳವರ್ಗಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಮೇಲ್ಜಾತಿ ಮೇಲ್ವರ್ಗಗಳು ಕಟ್ಟಿದ ಆಚರಣೆ ನಂಬಿಕೆಯ ಲೋಕಗಳಿವೆ. ಮಹಿಳೆಯನ್ನು ದಮನಗೊಳಿಸುವ ಮಾದರಿಗಳಿವೆ, ಪ್ರಭುತ್ವವನ್ನು ಕೊಂಡಾಡುವಿಕೆ, ಮೌಢ್ಯವನ್ನು ಮುಂದುವರೆಸುವಿಕೆ , ಗುಲಾಮಿ ಪ್ರವೃತ್ತಿಯನ್ನು ಬೆಳೆಸುವಿಕೆ ಮುಂತಾದ ಕೇಡುಗಳನ್ನು ಬಿಡಿಸಿಕೊಂಡು ವಿಶ್ಲೇಷಣೆ ಮಾಡುವ ಸವಾಲು ಜಾನಪದ ವಿವಿಯ ಮುಂದಿದೆ. ಅದನ್ನು ಅದು ಹೇಗೆ ನಿರ್ವಹಿಸುತ್ತದೆ ಎನ್ನುವುದನ್ನು ಕಾಯ್ದು ನೋಡಬೇಕು. ಇದಕ್ಕೆ ಪ್ರತಿಯಾಗಿ ಜಾನಪದದಲ್ಲಿಯೇ ಪ್ರತಿರೋಧಕ ಅಂಶಗಲೂ ಇವೆ. ಜನಸಮುದಾಯಗಳು ಪ್ರತಿಸಂಸ್ಕೃತಿಯನ್ನು ಕಟ್ಟಿಕೊಂಡ ಮಾದರಿಗಳೂ ಇವೆ, ಬಹುಶಃ ಇಂತಹ ಮಾದರಿಗಳನ್ನು ಆಧರಿಸಿದ ವಿಶ್ಲೇಷಣೆಯ ಅಗತ್ಯ ಹೆಚ್ಚಿದೆ. ಜಾನಪದದಲ್ಲಿ ಬಹು ಸಂಸ್ಕೃತಿ, ಬಹುಪರಂಪರೆಗಳ ಆಶಯವಿರುವ ಕಾರಣ ಧಾರ್ಮಿಕ ಮೂಲಭೂತವಾದಿ ಚಿಂತನೆಗಳಿಗೆ ಯಾವತ್ತೂ ಪ್ರತಿರೋಧಕ ಶಕ್ತಿಯಾಗಿಯೇ ಜಾನಪದ ವಿವಿ ಕೆಲಸಮಾಡಬೇಕು.

ಹೊಸ ಕಾಲದ ಹೊಸ ಜಾನಪದ ಹುಟ್ಟುತ್ತಿದೆ, ಆದರೆ ಅದನ್ನು ಗುರುತಿಸುವಿಕೆ ಕನ್ನಡದಲ್ಲಿ ಅಷ್ಟು ಕ್ರಿಯಾಶೀಲವಾಗಿಲ್ಲ. ಜನರ ಒಡನಾಟಕ್ಕೆ ಬರುವ ಯಾವುದೇ ವಸ್ತು ಅಥವಾ ಸಂಗತಿ ಕೂಡ ಜಾನಪದವನ್ನು ಹುಟ್ಟಿಸುತ್ತದೆ. ಉದಾ: ಗ್ರಾಮೀಣ ಭಾಗದಲ್ಲಿರುವ ಓಸಿ ಅಥವ ಮಟ್ಕಾ ಎಂಬ ಜೂಜಾಟ ಹುಟ್ಟಿಸಿದ ಜಾನಪದ ಅಚ್ಚರಿಹುಟ್ಟಿಸುವಂತಿದೆ. ಮೊಬೈಲ್ ಕೂಡ ವಿಚಿತ್ರ ರೀತಿಯಲ್ಲಿ ಜಾನಪದವನ್ನು ಹುಟ್ಟಿಸುತ್ತಿದೆ. ಸಮೂಹ ಮಾದ್ಯಮಗಳಿಂದಾಗಿ ನವಮೌಖಿಕತೆ ಹುಟ್ಟುತ್ತಿದೆ. ಹೀಗೆ ಹೊಸಕಾಲ ಮತ್ತು ಹೊಸ ಸಂಗತಿಗಳ ಕಾರಣಕ್ಕೆ ಹುಟ್ಟಿದ ಜಾನಪದವನ್ನು ಈ ವಿವಿ ಗುರುತಿಸುವಂತಾಗಬೇಕು. ಅಮೇರಿಕ, ಜರ್ಮನ್, ಫಿನ್ಲೆಂಡ್ ಮುಂತಾದ ಕಡೆ ಜಾನಪದವನ್ನು ಈ ನೆಲೆಯಲ್ಲಿ ವಿಸ್ತರಿಸಲಾಗುತ್ತಿದೆ. ‘ಫೋಕ್‌ಲೋರ್ ಅಂಡ್ ದ ಇಂಟರ್‌ನೆಟ್ : ವರ್ನಾಕುಲರ್ ಎಕ್ಸಪ್ರೆಷನ್ ಇನ್ ಎ ಡಿಜಿಟಲ್ ವರ್ಲ್ಡ’ ‘ನಿವ್ಸ್‌ಲೋರ್: ಕಂಟೆಂಪರರಿ ಫೋಕ್ ಲೋರ್ ಆನ್ ದ ಇಂಟರ್‌ನೆಟ್’ ಮುಂತಾದ ಕೃತಿಗಳಲ್ಲಿ ಇಂತಹ ಪ್ರಯತ್ನವನ್ನು ಕಾಣಬಹುದು.

ಎರಡನೆಯದಾಗಿ ಜಾನಪದ ವಿವಿ ಪ್ರಾಯೋಗಿಕ ನೆಲೆಯಲ್ಲಿ ರೂಪುಗೊಳ್ಳುವ ಅಗತ್ಯವಿದೆ. ಅದು ಹೆಚ್ಚು ಪ್ರಸ್ತುತ ಕೂಡ. ಸೌಥ್ ಈಸ್ಟರ್ನ ಯುನಿಟೆಡ್ ಸ್ಟೇಟ್ಸನ ಫ್ಲೊರಿಡಾದ ಲರ್ಗೋದಲ್ಲಿ ೧೯೯೮ ರಲ್ಲಿ ಸ್ಥಾಪನೆಯಾದ ಫೋಕ್ ಯುನಿವರ್ಸಿಟಿ ಕೂಡ ಪ್ರಾಯೋಗಿಕ ನೆಲೆಯಲ್ಲಿ ಅಭಿವೃದ್ಧಿಯಾದದ್ದು. ಹಾಗಾಗಿ ಜನಸಮುದಾಯದ ಜ್ಞಾನವನ್ನು ಆಧರಿಸಿ ಆಧುನಿಕ ಮಾದರಿಗಳಿಗೆ ಪರ್ಯಾಯ ದೇಸಿ ಮಾದರಿಗಳನ್ನು ಸೃಷ್ಟಿಸುವ ಸಾದ್ಯತೆಗಳಿವೆ. ಏಕ ವಸ್ತುಗಳನ್ನು ಜಾಗತಿಕವಾಗಿ ಮಾರುವ ಮಾರುಕಟ್ಟೆಗೆ ಪರ್ಯಾಯವಾಗಿ ಬಹು ವೈವಿದ್ಯದ ಜನಪದ ಗ್ರಾಮೀಣ ಉತ್ಪನ್ನಗಳನ್ನು ಒಳಗೊಂಡ ದೇಸಿ ಮಾರುಕಟ್ಟೆಯನ್ನು ಅಭಿವೃದ್ದಿಪಡಿಸಬೇಕಿದೆ. ಈ ನೆಲೆಯಲ್ಲಿ ವೃತ್ತಿ ಕಸಬುಗಳು ಮತ್ತು ಗುಡಿ ಕೈಗಾರಿಕೆಗಳ ಚೇತರಿಕೆಗಾಗಿ ಶ್ರಮಿಸಬೇಕಿದೆ. ಜನಪದ ವೈದ್ಯವನ್ನು ಆಧುನಿಕ ಅಗತ್ಯಗಳಿಗೆ ಬದಲಿಸಿ ಪೋಕ್ ಡಾಕ್ಟರುಗಳನ್ನೂ, ಜನಪದರ ಮನೆಕಟ್ಟುವ ಮಾದರಿ, ಕೃಷಿ ಮುಂತಾದ ಮಾದರಿಗಳನ್ನಾಧರಿಸಿ ಎಂಜಿನಿಯರುಗಳನ್ನು ರೂಪಿಸಬೇಕಿದೆ.

ಸ್ಕ್ಯಾಂಡಿನೇವಿಯಾ ಮುಂತಾದ ದೇಶಗಳಲ್ಲಿ ಫೋಕ್ ಹೈಸ್ಕೂಲ್ ಕುರಿತಂತೆ ದೊಡ್ಡ ಚಳವಳಿ ನಡೆದಿದೆ. ನೂರಾರು ಪೋಕ್ ಹೈಸ್ಕೂಲುಗಳು ಆರಂಭವಾಗಿ ವಯಸ್ಕರ ಶಿಕ್ಷಣಕ್ಕೆ ಹೊಸ ದಿಕ್ಕು ದೆಸೆ ಸಿಕ್ಕಿದೆ. ಫೋಕ್ ಮೀಡಿಯಂ ಸ್ಕೂಲುಗಳು ಆರಂಭವಾಗಿವೆ. ಪೋಕ್ ಎಂಜಿನಿಯರಿಂಗ್, ಪೋಕ್ ಮೆಡಿಸನ್, ಪೋಕ್ ಪ್ಯಾಷನ್ ಡಿಸೈನಿಂಗ್, ಪೋಕ್ ಅಪ್ಲೈಡ್ ಸೈನ್ಸ್, ಪೋಕ್ ಹೋಟೆಲ್ ಮೇನೇಜ್‌ಮೆಂಟ್ ಮುಂತಾದ ಜಾನಪದವನ್ನು ಆಧರಿಸಿದ ಆಧುನಿಕ ಶೈಕ್ಷಣಿಕ ಕೋರ್ಸುಗಳು ಆರಂಭವಾಗಿವೆ. ಹೊಸ ಕಾಲದ ವಿದ್ಯಾರ್ಥಿಗಳು ಇದನ್ನು ಕಲಿಯುತ್ತಿದ್ದಾರೆ. ಅದಕ್ಕೆ ಪೂರಕವಾದ ಉದ್ಯೋಗಗಳು ಸೃಷ್ಟಿಯಾಗಿವೆ. ಹಾಗಾಗಿ ಬಹಳ ಮುಖ್ಯವಾಗಿ ಶೈಕ್ಷಣಿಕವಾಗಿಯೂ ಜಾನಪದವನ್ನು ಅಳವಡಿಸುವ ಅಗತ್ಯವಿದೆ. ಅದಕ್ಕೆ ಪೂರಕವಾದ ಉದ್ಯೋಗವಕಾಶಗಳನ್ನು ಸೃಷ್ಟಿಸುವಂತಹ ಹೊರ ಆವರಣವನ್ನು ರೂಪಿಸಬೇಕಿದೆ.


ಜಾನಪದ ವಿಶ್ವವಿದ್ಯಾಲಯ ಗ್ರಾಮೀಣ ಅಭಿವೃದ್ಧಿಯನ್ನು ಪ್ರಧಾನ ಆಶಯವನ್ನಾಗಿಸಿಕೊಳ್ಳುವ ಅಗತ್ಯವಿದೆ. ಹಾಗಾದಲ್ಲಿ ನಗರಗಳತ್ತ ಮುಖಮಾಡಿ ವಲಸೆಹೋಗುತ್ತಿರುವ ಜನತೆಯನ್ನು ಹಳ್ಳಿಗಳಲ್ಲಿ ಹಿಡಿದಿಟ್ಟುಕೊಳ್ಳುವ ಆಕರ್ಷಕಣೆಯನ್ನು ಹೆಚ್ಚಿಸಬಹುದಾಗಿದೆ. ಸರಕಾರಿ ಉತ್ಸವ ಮುಂತಾದ ಕಡೆ ಜನಪದರು ಕಲಾಪ್ರದರ್ಶನ ನೀಡಿ ಹಲ್ಲು ಕಿರಿದು ಕೊಡುವ ಸಂಭಾವನೆಗಾಗಿ ಕಾಯುವ ಗುಲಾಮರನ್ನಾಗಿ ಮಾಡುವುದಕ್ಕಿಂತ, ಅವರನ್ನು ಸ್ವಾವಲಂಬಿಗಳಾಗಿ ಬದುಕ ಕಟ್ಟಿಕೊಳ್ಳಲು ಅನುವಾಗುವಂತೆ ಪ್ರಾಯೋಗಿಕ ನೆಲೆಗಳನ್ನು ಜಾನಪದ ವಿಶ್ವವಿದ್ಯಾಲಯವನ್ನು ವಿಸ್ತರಿಸಬೇಕಿದೆ

ಈಗ ನಾವು ಕೇಳಿಕೊಳ್ಳುವ ಪ್ರಶ್ನೆ, ಜಾನಪದವನ್ನು ಈ ಕಾಲಕ್ಕೆ ಮರು ಜೋಡಣೆ ಮಾಡಬಲ್ಲ ಕ್ರಿಯಾಶೀಲ ವಿದ್ವಾಂಸರು ವಿವಿಗೆ ಬರುತ್ತಾರೆಯೆ ಎನ್ನುವುದು. ಕುಲಪತಿಗಳಾದ ಪ್ರೊ. ಹಿರಿಯಣ್ಣನವರು ಜಾನಪದ ವಿವಿಯನ್ನು ಈ ಮೇಲಿನ ಆಶಯಗಳಿಗೆ ಪೂರಕವಾಗಿ ಕಟ್ಟುವ ಸಾಮರ್ಥ್ಯವಿರುವ ಯುವ ವಿದ್ವಾಂಸರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಹೆಚ್ಚು ಸ್ವಾತಂತ್ರ್ಯವನ್ನು ವಹಿಸಬೇಕಿದೆ. ಪ್ರತಿಭೆಯಿಲ್ಲದೆ ಕೇವಲ ಅನ್ಯಪ್ರಭಾವ ಬಳಸಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವವರನ್ನು ದೈರ್ಯದಿಂದ ಹೊರಗಿಡುವ ಛಾತಿಯನ್ನೂ ತೋರಬೇಕಿದೆ. ಇದರಾಚೆಗೂ ಈಗಾಗಲೇ ಜಾನಪದದ ಹಳೆ ಮಾದರಿಗಳಿಂದ ಹೊರಬರದ ಅಧ್ಯಾಪಕರು ವಿವಿಗೆ ಬಂದರೆ, ಹಾಡು ಕತೆ ಸಂಗ್ರಹಿಸಿಕೊಂಡು ಹೆಚ್ಚೆಂದರೆ ವಿವಿಯನ್ನು ದೊಡ್ಡ ಮ್ಯೂಜಿಯಂ ಮಾಡುವ ಅಪಾಯವಿದೆ. ಇಂತಹ ಮಿತಿಗಳನ್ನು ಮೀರುವ ಹಾಗೆ ಜಾನಪದ ವಿವಿ ರೂಪಗೊಳ್ಳಬೇಕಾದ ಅಗತ್ಯವಿದೆ.
.