ಶನಿವಾರ, ಅಕ್ಟೋಬರ್ 29, 2011

ಕೂಡ್ಲಿಗಿ ತಾಲೂಕಿನ ವಿಶಿಷ್ಟ ಗ್ರಾಮ ವಲಸೆ

(ಕೂಡ್ಲಿಗಿ ತಾಲೂಕಿನ ಅಲಕ್ಷಿತ ವಿಶೇಷ ಐತಿಹಾಸಿಕ ಗ್ರಾಮ ವಲಸೆಯ ಆರಾಧ್ಯ ದೈವ ಯರಗಟ್ಟೆನಾಯಕನ ದೇಗುಲ)

-ಸಿದ್ಧರಾಮ ಹಿರೇಮಠ. ಕೂಡ್ಲಿಗಿ

ಕೂಡ್ಲಿಗಿ ತಾಲೂಕು ೧೬ನೇ ಶತಮಾನದ ವಿಜಯನಗರ ಅರಸರ ಕಾಲದಿಂದಲೂ ವಿವಿಧ ಪಾಳೆಗಾರರ ಆಳ್ವಿಕೆಯಲ್ಲಿ ಒಳಪಟ್ಟಿದ್ದ ಪ್ರದೇಶವಾಗಿದೆ. ಹೀಗಾಗಿ ಇಲ್ಲಿನ ಪ್ರತಿಯೊಂದು ಗ್ರಾಮ, ಹಟ್ಟಿಗಳೂ ವಿಶೇಷ ನಾಮಧೇಯವನ್ನು ಹೊಂದಿವೆ. ಇವುಗಳಲ್ಲಿ ವಿಶಿಷ್ಠವಾದ ಐತಿಹಾಸಿಕ ಕುರುಹುಗಳಿರುವ ಅಲಕ್ಷಿತ ಗ್ರಾಮ ವಲಸೆ.

ಹೆಸರೇ ಸೂಚಿಸುವಂತೆ ವಲಸೆ ಬಂದ ಅಥವಾ ಗುಳೆಬಂದ ಜನಾಂಗ ವಾಸವಿರುವ ಗ್ರಾಮವೇ ವಲಸೆಯಾಗಿರಬಹುದೆಂಬುದು ಸ್ಥಳೀಯ ಐತಿಹ್ಯಗಳಿಂದ ತಿಳಿದುಬರುತ್ತದೆ. ಹುರುಳಿಹಾಳು ಗ್ರಾಮ ಪಂಚಾಯ್ತಿಗೆ ಸೇರಿದ ವಲಸೆ ಪುಟ್ಟ ಗ್ರಾಮ. ಗ್ರಾಮದ ಸುತ್ತಲೂ ೪ ಬುರುಜುಗಳಿದ್ದು, ಇವುಗಳ್ಲಲಿ ೩ ನಾಶವಾಗಿದ್ದು, ಒಂದು ಮಾತ್ರ ಸುಸ್ಥಿತಿಯಲ್ಲಿದೆ. ಬುರುಜುಗಳ ಸುತ್ತಲೂ ಕೋಟೆಯ ಕಟ್ಟಡವಿತ್ತೆಂಬುದಕ್ಕೆ ಕಲ್ಲಿನ ಕೋಟೆಯ ಶಿಥಿಲಗೊಂಡ ಕುರುಹುಗಳಿವೆ. ಗ್ರಾಮದಲ್ಲಿ ಹೆಚ್ಚು ವಾಸವಾಗಿರುವವರು ನಾಯಕ ಜನಾಂಗದವರು. ಗ್ರಾಮದ ಮಧ್ಯೆ ವಿಶೇಷವಾದ ದೇವಸ್ಥಾನವಿದ್ದು, ಇಲ್ಲಿ ಎರಡು ದೈವಗಳಿವೆ. ಯರಗಟ್ಟೆನಾಯಕ ಹಾಗೂ ಗಾದ್ರಿಪಾಲನಾಯಕ. ವಿಶೇಷವೆಂದರೆ ಎರಡೂ ದೇವಸ್ಥಾನಗಳೂ ಗುಡಿಸಲಿನ ಮಾದರಿಯಲ್ಲಿದ್ದು, ಒಳಗೆ ದೇವರ ಪೂಜಾಸಾಮಗ್ರಿಗಳನ್ನಿರಿಸಲಾಗಿದೆ. ಬೇಡ ಜನಾಂಗದ ಪ್ರತಿಷ್ಠೆಯ ಸಂಕೇತವಾಗಿರುವ ಬಿಲ್ಲು, ಖಡ್ಗಗಳನ್ನು ಇಲ್ಲಿ ಪೂಜಿಸಲಾಗುವುದು. ದೈವಗಳ ಮೂರ್ತಿಗಳೂ ಇಲ್ಲಿವೆ.

ವರ್ಷಕ್ಕೊಮ್ಮೆ ದಸರೆಯ ನಂತರ ಹುಣ್ಣಿಮೆಯ ಹತ್ತಿರದ ದಿನಗಳಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಗೆ ನಾಡಿನ ವಿವಿಧ ಭಾಗಗಳಾದ ಶಿವಮೊಗ್ಗ, ಅಂಕಮನಾಳ, ಆಂಧ್ರಪ್ರದೇಶದ ಗೊಲ್ಲಹಳ್ಳಿ, ಕೋನಸಾಗರ, ಹಿರೇಹಳ್ಳಿ, ಕರ್ನಾರ ಮನೆತನದ ೬ ಕರ್ನಾರಹಟ್ಟಿ ಗ್ರಾಮಸ್ಥರು ಮೊದಲಾದ ನಾಯಕ ಜನಾಂಗದವರು ಪಾಲ್ಗೊಳ್ಳುವರು. ಯರಗಟ್ಟೆನಾಯಕ, ಗಾದ್ರಿಪಾಲನಾಯಕರನ್ನು ಮ್ಯಾಸ ಮಂಡಲದ ಪ್ರಬುದ್ಧ ದೇವರುಗಳೆಂದು ಪೂಜಿಸಲಾಗುತ್ತದೆ. ದೇವಸ್ಥಾನವನ್ನು ನಿರ್ಮಿಸಿದ ಕಾಲವನ್ನು ಕೇಳಿದರೆ, ತಮ್ಮ ವಂಶಜರಿಂದಲೂ ಇದೇ ರೀತಿ ಉಳಿದುಬಂದಿದೆಯೆಂದು ಗ್ರಾಮಸ್ಥರು ತಿಳಿಸುತ್ತಾರೆ. ನಾಯಕ ಜನಾಂಗ ಅಥವಾ ಬೇಡ ಜನಾಂಗದ ಬೇಟೆಯ ಸಂಕೇತಗಳಾಗಿರುವ ಆಯುಧಗಳನ್ನು ಇಲ್ಲಿ ಪೂಜಿಸುವುದು ವಿಶೇಷವಾಗಿದೆ.
(ಗ್ರಾಮದ ೪ ಬುರುಜುಗಳಲ್ಲಿ ಉಳಿದಿರುವ ಸುಸ್ಥಿತಿಯಲ್ಲಿರುವ ಒಂದು ಬುರುಜಿನ ದೃಶ್ಯ)

ವಲಸೆ ಎಂಬ ಹೆಸರು ಹೇಗೆ ಬಂತೆಂದು ಗ್ರಾಮದ ಹಿರಿಯರನ್ನು ಕೇಳಿದರೆ, ಯರಗಟ್ಟೆನಾಯಕ ಮೂಲತ: ಬೆಳ್ಳಗಟ್ಟೆಯ ಸಮೀಪದ ತಮಟೆಕಲ್‌ನ ನಾಯಕ. ಯುದ್ಧದ ಸಂದರ್ಭದಲ್ಲಿ ತನ್ನ ಹಿಂಬಾಲಕರೊಂದಿಗೆ ಬಂದು ಈ ಪ್ರದೇಶದಲ್ಲಿ ಸಮಾಧಿಸ್ಥನಾದ. ಆತನ ಸಮಾಧಿಯೇ ದೇವಸ್ಥಾನವೆಂದು ಗ್ರಾಮದ ಜಿ.ಬಿ.ಪಾಲಯ್ಯ ಹೇಳುತ್ತಾರೆ. ಯರಗಟ್ಟೆನಾಯಕ ಹಾಗೂ ಗಾದ್ರಿಪಾಲನಾಯಕ ಇಬ್ಬರೂ ಮಹಾನ್ ಶೂರರು. ಅವರ ವಂಶಸ್ಥರೇ ನಮ್ಮ ಜನಾಂಗ ಎಂದೂ ಅವರು ಹೇಳಿದರು. ಯರಗಟ್ಟೆನಾಯಕ ಹಾಗೂ ಆತನ ತಂಡ ಇಲ್ಲಿ ವಲಸೆ ಬಂದು ನೆಲೆಸಿದುದಕ್ಕೆ ವಲಸೆ ಎಂಬ ಹೆಸರು ಬಂದಿರಬಹುದೇನೋ ಎಂದು ಹಿರಿಯರು ಊಹಿಸುತ್ತಾರೆ. ಮತ್ತೊಂದು ವಿಶೇಷವೆಂದರೆ ಯರಗಟ್ಟೆನಾಯಕ ಎತ್ತುಗಳನ್ನು ಪಾಲನೆ ಮಾಡುತ್ತಿದ್ದ. ಹೀಗಾಗಿ ಆತನ ಎತ್ತುಗಳೆಂದೇ ೨೫ ಎತ್ತುಗಳನ್ನು ದೇವರ ಎತ್ತುಗಳೆಂದು ಮೀಸಲಿರಿಸಲಾಗಿದೆ. ಅವುಗಳನ್ನು ಅಪ್ಪೇನಹಳ್ಳಿಯ ಬಳಿ ಡಿ.ಸಿದ್ದಾಪುರದಲ್ಲಿರಿಸಲಾಗಿದ್ದು, ಅವುಗಳನ್ನು ನೋಡಿಕೊಳ್ಳಲೆಂದೇ ಒಬ್ಬ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ. ಆತನಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುವುದೂ ಗ್ರಾಮಸ್ಥರ ಜವಾಬ್ದಾರಿಯಾಗಿದೆ.ಪ್ರತಿವರ್ಷದ ಜಾತ್ರೆಗೆ ದೇವರ ಎತ್ತುಗಳನ್ನು ವಿಧಿವತ್ತಾಗಿ ಕರೆತಂದು ಪೂಜಿಸಲಾಗುತ್ತದೆ.

ಇಷ್ಟೊಂದು ವೈಶಿಷ್ಟ್ಯಗಳಿರುವ ವಲಸೆ ಗ್ರಾಮದಲ್ಲಿ ಯಾರೂ ವಾಹನಗಳನ್ನೇರಿ ಹೋಗುವಂತಿಲ್ಲ. ಸೈಕಲ್, ಬೈಕ್‌ಗಳನ್ನು ಗ್ರಾಮದ ಹೊರಗೆ ತಂದೇ ವಾಹನವೇರಿ ಹೋಗಬೇಕು. ಇದು ಇಲ್ಲಿಯ ಅಲಿಖಿತ ನಿಯಮಗಳಲ್ಲೊಂದು. ಬಂಡಿಗಳನ್ನೂ ಗ್ರಾಮದಲ್ಲಿ ತರುವಂತಿಲ್ಲ. ಇದು ಈ ಗ್ರಾಮದ ಪದ್ಧತಿ. ‘ಹಿಂದಿನೋರು ನಡಸ್ಕೊಂಡು ಬಂದಾರ, ಅದನ್ನ ನಾವು ಮುಂದುವರಿಸೀವಿ’ ಎಂದು ಗ್ರಾಮದ ಚಂದ್ರಪ್ಪ ಹೇಳುತ್ತಾರೆ. ‘ನಮ್ ದೇವರದು ಭಾಳ ಇತಿಹಾಸ ಐತೆ, ೨-೩ ದಿನಾ ಆದ್ರೂ ಮುಗಿಯಂಗಿಲ್ಲ’ ಎಂದು ತಳವಾರ ನಿಂಗಪ್ಪ, ದಡ್ಲ ಮಾರಮ್ಮನ ಪೂಜಾರ ಹೇಳುತ್ತಾರೆ. ‘ನಮ್ ಊರಿನ ಬಗ್ಗೆ ನಮ್ ಹುಡುಗ್ರಿಗೆ ಏನೂ ತಿಳಿದಿಲ್ಲ, ತಿಳಿಸಬೇಕಾದ ಹಿರೇರು ಹುಡುಗರಿಗೆ ಹೇಳಿದ್ರ, ಎಷ್ಟೋ ವಿಷಯಗಳ ಗೊತ್ತಾಗ್ತಾವ’ ಎಂದು ಗ್ರಾಮದ ಯುವಕ ಓಂಕಾರಪ್ಪ ಹೇಳುತ್ತಾರೆ. ಆಸಕ್ತರು ಈ ಗ್ರಾಮವನ್ನು ಸಂದರ್ಶಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಓಂಕಾರಪ್ಪ, ಮೊಬೈಲ್ ಸಂ.೯೯೦೧೮೬೮೬೯೨ಗೆ ಸಂಪರ್ಕಿಸಬಹುದು.

ಶುಕ್ರವಾರ, ಅಕ್ಟೋಬರ್ 28, 2011

ಗುಡಿಸಲಿನಿಂದ ಗುಡಿಯವರೆಗೆ ದೀಪಗಳ ತೋರಣ

ಪ್ರಕಾಶ ಖಾಡೆ, ಬಾಗಲಕೋಟೆ

ನಮ್ಮ ಜನಪದರು ಹಬ್ಬದಾಚರಣೆಗಳನ್ನು ಅತ್ಯಂತ ಸಂಭ್ರಮ ಮತ್ತು ಉಲ್ಲಾಸದಿಂದ ಆಚರಸುತ್ತಾರೆ. ಜನ ಪದ ಕಲೆ ಮತ್ತು ಸಂಸ್ಕೃತಿ ಆರಾಧನಾ ಮನೋಭಾವದ ಪ್ರತೀಕವಾಗಿದೆ. ಪ್ರಕೃತಿಯ ಸೂರ್ಯ, ಚಂದ್ರ, ಭೂಮಿ, ಆಕಾಶ, ಮಣ್ಣು, ಗಿಡಮರ, ಪ್ರಾಣಿಪಕ್ಷಿಗಳು ಮೊದಲಾದವುಗಳಲ್ಲಿ ದೇವರು ದೈವವನ್ನು ಕಾಣುವ ಜನಪದರು ಕಾಲಕ್ಕನುಗುಣವಾಗಿ ಎಲ್ಲ ಆಚರಣೆಗಳನ್ನು ಪರಂಪರೆಯಿಂದಲೂ ವಿಧಿವತ್ತಾಗಿ ಆಚರಿಸಿಕೊಂಡು ಬಂದಿದ್ದಾರೆ.

ದೀಪಾವಳಿ ಹಬ್ಬವು ಜನಪದರ ದೊಡ್ಡ ಹಬ್ಬ, ದೀಪ ಜನಪದರ ತಿಳುವಳಿಕೆಯಲ್ಲಿ ಮಹತ್ವದ್ದಾಗಿದೆ. ಅದು ಸಾರ್ಥಕ ಬದುಕಿನ ಜೀವಂತಿಕೆಯ ಸಂಕೇತ. ಬೆಳಕಿನ ಹಬ್ಬ ದೀಪಾವಳಿಯಲ್ಲಿ ಎಲ್ಲರೂ ಕೂಡಿ ಸಂಭ್ರಮಿಸುವ ಸಂದರ್ಭವಾಗಿದೆ.

ಕಾರ್ತಿಕ ಮಾಸದ ಆಗಮನ, ವಾರ್ಷಿಕ ದುಡಿಮೆಯ ಫಲದಿಂದ ತುಂಬಿನಿಂತ ಹೊಲಗದ್ದೆಗಳು, ಹೊಸ ಉತ್ಸಾ ಹ, ಸಂತೋಷ ನೀಡುತ್ತವೆ. ಗುಡಿಸಿಲಿ ನಿಂದ ಗುಡಿಯ ವರೆಗೆ ದೀಪಾವಳಿಯ ತಳಿರು ತೋರಣ, ಬೆಳಕಿನ ಹಬ್ಬದಲ್ಲಿ ನೂರೊಂದು ಆಚರಣೆಗಳು ಆಶ್ವಯುಜ ಬಹುಳ ದ್ವಾದಶಿಯಿಂದ ಎಂಟು ದಿನಗಳವರೆಗೆ ಅಂದರೆ ದ್ವಾದಶಿ, ಧನತ್ರಯೋದಶಿ, ನರಕ ಚತುರ್ಥಿ, ಅಮ ವಾಸ್ಯೆ, ಬಲಿ ಪಾಡ್ಯಮಿ, ಭಾವನ ಬಿದಿಗೆ, ಅಕ್ಕಮ ತದಿಗೆ, ಅಮ್ಮನ ಚೌತಿ, ಈ ದಿನಗಳನ್ನು ದೀಪಾವಳಿಯ ಪರ್ವದಿನಗಳೆಂದು ಕರೆಯುತ್ತಾರೆ.

ನರಕ ಚತುರ್ದಶಿಯಂದು ಹಬ್ಬದ ಆರಂಭ, ಅಂದೇ ನೀರು ತುಂಬುವ ಹಬ್ಬ, ಜಳಕ ಮಾಡುವ ಹಂಡೆ- ಹರಿವೆಗಳಿಗೆ ಕೆಮ್ಮಣ್ಣು ಬಳಿದು ಪವಿತ್ರಗೊಳಿಸುತ್ತಾರೆ. ಹಬ್ಬದ ಎರಡನೇ ದಿನ ಬಲಿಪಾಡ್ಯಮಿ, ಊರವರಿಗೆ ಅದು ಪಾಡ್ಯದ ದಿನ, ಎಣ್ಣೆ ಉಜ್ಜಿ ಮನೆಮಂದಿಗೆಲ್ಲ ಅಭ್ಯಂಜನ, ಮೈತೊಳೆದ ದನಕರುಗಳಿಗೆ ಜೇಡಿ, ಕೆಮ್ಮಣ್ಣು, ಉಗನೆಸರ, ಗೋಮಾಲೆ, ಚೆಂಡುಹೂವಿನ ಸರಗಳ ಅಲಂಕಾರ. ಅಂದಿನ ವಿಶೇಷ ಆಚರಣೆ ಬಲೀಂದ್ರ ಪೂಜೆ.

ದೀಪಾವಳಿ ಅನ್ನಬ್ರಹ್ಮನ ಆರಾಧನೆ ಯ ಹಬ್ಬವಾಗುವುದರ ಜೊತೆಗೆ ಒಕ್ಕಲು ಮಕ್ಕಳ ಸಂಭ್ರಮದ ಹಬ್ಬವೂ ಆಗಿದೆ. ದೀಪಾವಳಿಯಂದು ಹೊಸ ಬಟ್ಟೆ ಧರಿಸಿ ದೇವಾಲ ಯಗಳಿಗೆ ಹೋಗುತ್ತಾರೆ.

ದೀಪಾವಳಿಯ ಸಂದರ್ಭದಲ್ಲಿ ದೀಪಗಳಿಂದ ಮನೆ ಯನ್ನು ಅಲಂಕರಿಸಿ ಸಂತಸವಾಗಿದ್ದರೆ ವರ್ಷವಡೀ ಆ ಮನೆಯಲ್ಲಿ ಹರ್ಷದ ಹೊನಲು ಹರಿ ಯುವುದು, ದೀಪ ಬೆಳಗಿಸಿದ ಮನೆಯಲ್ಲಿ ಲಕ್ಷ್ಮಿ ವಾಸಿಸು ವುದಿಲ್ಲ ಎಂಬ ನಂಬಿಕೆ ಇದೆ. ಒಟ್ಟಿನಲ್ಲಿ ಬಲಿಪಾಡ್ಯದಲ್ಲಿ ಲಕ್ಷ್ಮಿ ನೆಲೆಸಿ ರುವ ಎಲ್ಲೆಡೆ ದೀಪ ಬೆಳಗಿ ಸಂಭ್ರಮಿಸುವುದೇ ವಿಶೇಷ.

ಒಂದು ಸಲ ಲಕ್ಷ್ಮಿ ಗೋ ರೂಪ ಧರಸಿ ಬಂದಾಗ ಪಾರ್ವತಿ ಪೂಜಿಸಿದಳಂತೆ. ಆದ್ದರಿಂದ ಗೋಪೂಜೆಗೆ ವಿಶೇಷವಾಗಿ ಜನಪದರಲ್ಲಿ ಪ್ರಾಧಾನ್ಯತೆ ಇದೆ. ಯಾವ ತ್ತೂ ಗೋವುಗಳಲ್ಲಿ ಲಕ್ಷ್ಮಿ ನೆಲಸಿರುವಳೆಂದು ಪ್ರತೀತಿ ಇದೆ.

ದೀಪಾವಳಿ ಹಬ್ಬವು ಕತ್ತಲೆಯನ್ನು ದೂರ ಮಾಡಿ ಎಲ್ಲೆಲ್ಲೂ ದೀಪ ಬೆಳಗಿಸಿ ಬೆಳಕು ಕಾಣುವ ಹಬ್ಬ. ಇದನ್ನು ಲಕ್ಷ್ಮಿ ಪೂಜೆ ಎನ್ನುತ್ತಾರೆ. ದೀಪಾವಳಿಯ ದಿನ ದಂದು ಭೂಮಿ ತುಲಾರಾಶಿಗೆ ಪ್ರವೇಶಿಸುತ್ತದಂತೆ. ಅದಕ್ಕಾಗಿ ವ್ಯಾಪಾರಸ್ಥರು ಆ ದಿನ ತಮ್ಮ ಲೆಕ್ಕದ ಪುಸ್ತಕ ಮತ್ತು ತೂಕದ ಸಾಮಾನುಗಳನ್ನು ಪೂಜಿಸುತ್ತಾರೆ. ಜೊತೆಗೆ ಯಾವುದಾರೊಂದು ಹೊಸ ವಸ್ತುವನ್ನು ಆ ದಿನ ಕೊಂಡು ತರುವುದುಂಟು, ಈ ರೀತಿ ಕೊಂಡು ತರುವುದರಿಂದ ಒಳ್ಳೆಯದಾಗುತ್ತದೆಂಬ ನಂಬಿಕೆ ಇದೆ.

ನರಕ ಚತುರ್ದಶಿ: ದೀಪಾವಳಿ ಹಬ್ಬವು ಅನೇಕ ನಂಬಿಕೆ ಮತ್ತು ಆಚರಣೆಗಳಿಂದ ಕೂಡಿದೆ. ಭೂದೇವಿಯ ಮಗ ನಾದ ನರಕಾಸು ಎಲ್ಲ ದೇವತೆಗಳನ್ನು ಎದುರಿಸಿ ಯಕ್ಷ, ಕಿನ್ನರ, ವಿದ್ಯಾಧರ ಮೊದಲಾದ ಹರಿನಾರು ಸಾವಿರ ಮಂದಿ ಸ್ತ್ರೀಯರನ್ನು ಸೆರೆಯಲ್ಲಿಟ್ಟು ಕಿರುಕುಳ ಕೊಡ ತೊಡಗಿದಾಗ ಕೃಷ್ಣನು ನರಕಾಸುರನ್ನು ಕೊಂದು ಎಲ್ಲರನ್ನೂ ಪಾರು ಮಾಡಿದನು.

ತನ್ನ ಮಗನ ಸಾವನ್ನು ತಿಳಿದ ಭೂದೇವಿಯ ಅವ ತಾರವಾದ ಸತ್ಯಭಾಮೆ ತನ್ನ ಮಗ ಸತ್ತ ಆ ಚತು ರ್ದಶಿಯ ದಿನ ತನ್ನ ಮಗನ ಹೆಸರಲ್ಲಿ ಸ್ನಾನ ಪೂಜಾ ದಿಗಳಿಂದ ಬೆಳಕಿನ ಹಬ್ಬವನ್ನು ಆಚರಿಸುವಂತೆ ಕೃಷ್ಣ ನನ್ನು ಪ್ರಾರ್ಥಿಸಿದಾಗ ಆತ ನಿನ್ನಿಷ್ಟದಂತಾಗಲಿ ಎಂದು ವರವಿತ್ತನಂತೆ. ಅಂದಿನಿಂದ ಆ ದಿನವನ್ನು ನರಕ ಚತುರ್ದಶಿ ಎಂದು ನಾಮಕರಣ ಮಾಡಿ ಹಬ್ಬವನ್ನು ಆಚರಿಸಲಾಗುತ್ತದೆ.

ಸೋಮವಾರ, ಅಕ್ಟೋಬರ್ 24, 2011

ಜಾರ್ಖಂಡ್ನ ಜಾನಪದ ಚೇತನ ಡಾ.ರಾಮ್ದಯಾಳ್

ಜಾರ್ಖಂಡ್ನ ಬುಡಕಟ್ಟು ಜನತೆಯ ಹಕ್ಕುಗಳಿಗಾಗಿ ಸುದೀರ್ಘ ಹೋರಾಟ ನಡೆಸಿದ ಮಹಾನ್ ಚೇತನ ಡಾ.ರಾಮ್ದಯಾಳ್ ಮುಂಡಾ ಸೆಪ್ಟೆಂಬರ್ 30ರಂದು ನಿಧನರಾದಾಗ, ಆ ರಾಜ್ಯದ ಬುಡಕಟ್ಟು ಸಮುದಾಯ ಶೋಕಸಾಗರದಲ್ಲಿ ಮುಳುಗಿತು.ರಾಂಚಿ ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿಯಾಗಿರುವ ದಯಾಳ್, ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರಾಗಿಯೂ ಗಣನೀಯ ಸೇವೆ ಸಲ್ಲಿಸಿದ್ದರು. ಜಾರ್ಖಂಡ್ನ ಬುಡಕಟ್ಟು ಜನರು ಕಡುಬಡವರಾದರೂ, ಅವರ ಸಂಸ್ಕೃತಿ ಮಾತ್ರ ಶ್ರೀಮಂತವಾದುದು.ಸ್ವತಃ ಆದಿವಾಸಿ ಪಂಗಡಕ್ಕೆ ಸೇರಿದ ರಾಮ್ದಯಾಳ್ಗೆ ತನ್ನ ಜನರ ಬದುಕು, ಬವಣೆಗಳ ಸ್ಪಷ್ಟ ಅರಿವಿತ್ತು. ಜೊತೆಗೆ ಅವರ ಸಾಂಸ್ಕೃತಿಕ ಸಂಪತ್ತಿನ ಬಗೆಗೂ ಅಪಾರವಾದ ಜ್ಞಾನವಿತ್ತು. ಜಾರ್ಖಂಡ್ನ ಬುಡಕಟ್ಟು ಜನರ ಜಾನಪದ ಹಾಡು, ಸಂಗೀತವನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ತಂದ ಶ್ರೇಯಸ್ಸು ರಾಮ್ದಯಾಳ್ಗೆ ಸಲ್ಲಬೇಕು.

ರಾಂಚಿಯ ತಮಾಡ್ ಸಮೀಪದ ದಿಯೋರಿ ಎಂಬ ಗ್ರಾಮದಲ್ಲಿ 1939ರಲ್ಲಿ ಜನಿಸಿದ ದಯಾಳ್, ತನ್ನ ಪ್ರಾಥಮಿಕ ಶಿಕ್ಷಣವನ್ನು ಅಮ್ಲೆಸಾ ಪಟ್ಟಣದ ಲೂಥರ್ ಮಿಶನ್ ಶಾಲೆಯಲ್ಲಿ ಪಡೆದರು. ಬಾಲ್ಯದಿಂದಲೇ ಅವರು ತನ್ನ ತಾತ ಚಾಮು ಸಿಂಗ್ ಮುಂಡಾ ಅವರಿಂದ ಜಾನಪದ ಸಂಗೀತವನ್ನು ಕಲಿತುಕೊಂಡರು.ಮಾತ್ರವಲ್ಲದೆ, ಜಾರ್ಖಂಡ್ನ ಆದಿವಾಸಿಗಳ ವಿಶಿಷ್ಟ ಕೊಳಲು ಹಾಗೂ ಡೋಲುಗಳ ವಾದನದಲ್ಲೂ ಅವರು ಪಳಗಿದರು.ರಾಂಚಿ ವಿಶ್ವವಿದ್ಯಾನಿಲಯದಲ್ಲಿ ಮಾನವಶಾಸ್ತ್ರ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರನ್ನು ಉನ್ನತ ಅಧ್ಯಯನಕ್ಕಾಗಿ ಅಮೆರಿಕದ ಶಿಕಾಗೋ ವಿವಿಯು ಕೈಬೀಸಿ ಕರೆಯಿತು. ಅಲ್ಲಿ ಭಾಷಾ ಶಾಸ್ತ್ರದಲ್ಲಿ ಪಿಎಚ್ಡಿ ಪದವಿಯನ್ನು ಅವರು ಪಡೆದರು.

ರಾಮ್ದಯಾಳ್ ಅವರ ನರನಾಡಿಗಳಲ್ಲೂ ಜಾರ್ಖಂಡ್ನ ಜಾನಪದ ಸಂಸ್ಕೃತಿಯು ಮಿಳಿತಗೊಂಡಿತ್ತು. ಅವರ ಜಾನಪದ ಪ್ರೀತಿ ಎಷ್ಟಿತ್ತೆಂದರೆ, ಅವರು ರಾಂಚಿಯಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಬುಡಕಟ್ಟು ನರ್ತಕರು ಹಾಗೂ ಸಂಗೀತಗಾರರ ತಂಡವೊಂದನ್ನು ಕಟ್ಟಿ ಪ್ರದರ್ಶನಗಳನ್ನು ನೀಡಿದ್ದರು. ಮತ್ತೆ ಶಿಕಾಗೋ ವಿವಿಯಲ್ಲಿದ್ದಾಗಲೂ ದಕ್ಷಿಣ ಏಶ್ಯ ಜಾನಪದ ಕಲಾವಿದರ ತಂಡವೊಂದನ್ನು ರಚಿಸಿ, ಅಮೆರಿಕದ ವಿವಿಧೆಡೆ ಪ್ರದರ್ಶನಗಳನ್ನು ನೀಡಿದ್ದರು.ಆದರೆ ರಾಮ್ದಯಾಳ್ ಬುಡಕಟ್ಟು ಜನರ ಅಸ್ತಿತ್ವವನ್ನು ಜಾನಪದ ಕಲೆ ಮತ್ತು ಹಾಡಿಗಷ್ಟೇ ಸೀಮಿತಗೊಳಿಸಲಿಲ್ಲ. ಆಧುನಿಕ ಜೀವನದ ಜೊತೆ ಬುಡಕಟ್ಟು ಜನರ ಶ್ರೀಮಂತ ಸಂಸ್ಕೃತಿಯನ್ನು ಮಿಳಿತಗೊಳಿಸುವ ಪ್ರಯತ್ನವನ್ನೂ ಅವರು ಮಾಡಿದರು. 1987ರಲ್ಲಿ ರಶ್ಯದಲ್ಲಿ ನಡೆದ ಭಾರತೀಯ ಉತ್ಸವದಲ್ಲಿ ರಾಮ್ದಯಾಳ್ ತಂಡವು ಅದ್ಭುತವಾದ ಜಾನಪದ ನೃತ್ಯಪ್ರದರ್ಶನ ನೀಡಿ ಜಾಗತಿಕ ಮನ್ನಣೆಯನ್ನು ಗಳಿಸಿತು.

ಬುಡಕಟ್ಟು ಜನಾಂಗಗಳಿಗೆ ಅವುಗಳದ್ದೇ ಆದ ವಿಶಿಷ್ಟವಾದ ಹಾಗೂ ಅನನ್ಯವಾದ ಸಂಸ್ಕೃತಿಯಿದೆ. ಮಾತ್ರವಲ್ಲ, ಅದು ಭಾರತದ ವೈದಿಕ ಸಂಸ್ಕೃತಿಯಿಂದ ಸಂಪೂರ್ಣ ಭಿನ್ನವಾಗಿದೆ ಯೆಂದು ರಾಮ್ದಯಾಳ್ ಪ್ರತಿಪಾದಿಸಿದ್ದರು. ಕೇಸರಿ ಸಂಘಟನೆಗಳು ಬ್ರಾಹ್ಮಣ್ಯವಾದಿ ಆಚಾರವಿಚಾರಗಳನ್ನು, ಸಂಸ್ಕೃತಿಯನ್ನು ಬುಡಕಟ್ಟು ಜನರ ಮೇಲೆ ಹೇರುವುದನ್ನು ಅವರು ಪ್ರಬಲವಾಗಿ ವಿರೋಧಿಸಿದ್ದರು.
ಯಶಸ್ವಿ ಶಿಕ್ಷಕನಾಗಿ ಹಾಗೂ ಸಾಂಸ್ಕೃತಿಕ ಸಂಸ್ಥೆಗಳ ಸ್ಥಾಪಕನಾಗಿ ರಾಮ್ದಯಾಳ್ ತನ್ನ ಜೀವನದುದ್ದಕ್ಕೂ ಬುಡಕಟ್ಟು ಜನರ ಏಳಿಗೆಗಾಗಿ ಗಣನೀಯ ಕೊಡುಗೆ ಸಲ್ಲಿಸಿದರು. ಭಾರತೀಯ ಬುಡಕಟ್ಟು ಭಾಷೆಗಳು ಹಾಗೂ ಸಾಹಿತ್ಯದ ಬಗ್ಗೆ ಅವರು ನಡೆಸಿದ ವಿಸ್ತೃತ ಅಧ್ಯಯನವು ಅವರಿಗೆ ಅಂತಾರಾಷ್ಟ್ರೀಯ ಗೌರವವನ್ನು ಗಳಿಸಿಕೊಟ್ಟಿತು.ಬುಡಕಟ್ಟು ಜನರ ಅಭ್ಯುದಯವು ಕೇವಲ ಅವರ ಸಾಂಸ್ಕೃತಿಕ ಪುನರುತ್ಥಾನದಿಂದ ಮಾತ್ರ ಸಾಧ್ಯವಿಲ್ಲ. ಅವರಿಗೆ ರಾಜಕೀಯ ಅವಕಾಶವೂ ದೊರೆಯಬೇಕು ಎಂಬ ದೂರದೃಷ್ಟಿಯನ್ನು ದಯಾಳ್ ಹೊಂದಿದ್ದರು. ಪ್ರತ್ಯೇಕ ಜಾರ್ಖಂಡ್ ರಾಜ್ಯದ ಸ್ಥಾಪನೆಗಾಗಿ ನಡೆದ ಚಳವಳಿಯಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ರಾಜ್ಯಸಭಾ ಸದಸ್ಯರಾಗಿ ಸಂಸತ್ ಭವನದ ಮೆಟ್ಟಲೇರಿದ ದಯಾಳ್, ಅಲ್ಲಿಯೂ ಬುಡಕಟ್ಟು ಜನರ ಹಕ್ಕುಗಳ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ್ದರು. ರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯರಾಗಿಯೂ ಅವರು ಒಳ್ಳೆಯ ಹೆಸರು ಗಳಿಸಿದ್ದರು. ಅವರು ಬುಡಕಟ್ಟು ಜನರ ಸಂಸ್ಕೃತಿ, ಕಲೆ,ಸಾಹಿತ್ಯದ ಕುರಿತಾಗಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲೂ ಮುಂಡಾರಿ ಬುಡಕಟ್ಟು ಪಂಗಡದ ಜಾನಪದ ಹಾಡುಗಳ ಕುರಿತು ಅವರು ಬರೆದ ಕೃತಿಯು ಭಾರೀ ಮೆಚ್ಚುಗೆಯನ್ನು ಪಡೆದಿದೆ.

ಜಾರ್ಖಂಡ್ನ ಬುಡಕಟ್ಟು ಸಂಗೀತ ಹಾಗೂ ನೃತ್ಯಕ್ಕೆ ರಾಮ್ದಯಾಳ್ ನೀಡಿದ ಕೊಡುಗೆಯನ್ನು ಪರಿಗಣಿಸಿ, ಅವರಿಗೆ 2007ರಲ್ಲಿ ಸಂಗೀತ ನಾಟಕ್ ಅಕಾಡಮಿ ಪ್ರಶಸ್ತಿಯು ಒಲಿದು ಬಂದಿತ್ತು. ಘೋರವಾದ ಕ್ಯಾನ್ಸರ್ ಕಾಯಿಲೆ ಕಾಡುತ್ತಿದ್ದರೂ, ಅವರಲ್ಲಿ ಚೇತನ ಮಾತ್ರ ಬತ್ತಿರಲಿಲ್ಲ. ತೀರಾ ಇತ್ತೀಚೆಗಷ್ಟೇ ಅವರು ತನ್ನ 150 ಸದಸ್ಯ ಬಲದ ಜಾನಪದ ತಂಡದಿಂದ ಮುಂಬೈ ಹಾಗೂ ದಿಲ್ಲಿಯಲ್ಲಿನ ವಿಶ್ವ ಸಾಮಾಜಿಕ ವೇದಿಕೆಯಲ್ಲಿ ಜಾನಪದ ಕಲಾವೈಭವವನ್ನು ಪ್ರದರ್ಶಿಸಿದ್ದರು. ರಾಮ್ದಯಾಳ್ ಭೌತಿಕವಾಗಿ ಮರೆಯಾಗಿರಬಹುದು. ಆದರೆ ಜಾರ್ಖಂಡ್ನ ಜಾನಪದ ಶ್ರೀಮಂತಿಕೆಯನ್ನು ವಿಶ್ವಕ್ಕೆ ಪರಿಚಯಿಸಿದ ಅವರು ಆ ರಾಜ್ಯದ ಬುಡಕಟ್ಟು ಜನತೆಯ ಹೃದಯದಲ್ಲಿ ಶಾಶ್ವತವಾದ ಸ್ಥಾನ ಅಲಂಕರಿಸಿದ್ದಾರೆ.
-ರಾನಾ

ಶುಕ್ರವಾರ, ಅಕ್ಟೋಬರ್ 14, 2011

ನಾರು ನಂಬಿದ ಊರು

ಚಳ್ಳಕೆರೆಯಿಂದ ಚಿತ್ರದುರ್ಗಕ್ಕೆ ಹೋಗುವ ಮಾರ್ಗದಲ್ಲಿ ನಂದನಹಳ್ಳಿ ಎಂಬ ಚಿಕ್ಕ ಹಳ್ಳಿ ಸಿಗುತ್ತದೆ. ಈ ಊರನ್ನು ಕುರುಡಿಹಳ್ಳಿ ತಾಂಡ ಎಂತಲೂ ಕರೆಯುತ್ತಾರೆ. ಇಲ್ಲಿ ನೂರ ಐವತ್ತು ಮನೆಗಳಿವೆ. ಲಂಬಾಣಿಗರು ಬಹುಸಂಖ್ಯೆಯಲ್ಲಿದ್ದಾರೆ. ಚಿತ್ರದುರ್ಗ ಮಾರ್ಗವಾಗಿ ಹೋಗುವಾಗ ಈ ಹಳ್ಳಿ ಬರುತ್ತಲೂ ಒಂದು ಬಗೆಯ ಸೊಗಡಿನ ವಾಸನೆ ಮೂಗಿಗೆ ಬಡಿಯುತ್ತದೆ. ವಾಹನಗಳಲ್ಲಿನ ಜನರು ಮೂಗು ಮುಚ್ಚಿ ಈ ಊರನ್ನು ದಾಟುತ್ತಾರೆ. ಈ ವಾಸನೆ ಕೋಳಿಫಾರಂದೋ, ಪ್ಯಾಕ್ಟರಿಯದೋ ಅಂದುಕೊಂಡರೆ, ಅದು ಕತ್ತಾಳೆ ಪಟ್ಟಿಯನ್ನು ಹಿಂಡುವಿಕೆಯಿಂದ ಬಂದ ವಾಸನೆ. ಈ ಊರಿಗೇ ಊರೇ ಕತ್ತಾಳೆ ಪಟ್ಟಿಗಳನ್ನು ಮಿಷನ್ನಿನಲ್ಲಿ ಕಬ್ಬಿನಂತೆ ಹಿಂಡಿ ನಾರು ತೆಗೆಯುವ ಕೆಲಸ ನಂಬಿ ಬದುಕು ಕಟ್ಟಿಕೊಂಡಿದೆ. ಅಂಥ ಊರಿನ ಕಥನವಿದು.

ರಾಕ್ಷಸರ ಭುಜಪಟ್ಟಿಯಂತೆಯೂ, ಸುತ್ತಲೂ ಹಲಗುಳ್ಳ ದೊಡ್ಡ ದೊಡ್ಡ ಕತ್ತಿಯ ಆಕಾರನ್ನೂ ಹೊಂದಿದ ಕತ್ತಾಳೆ ಪಟ್ಟಿಗಳನ್ನು ರಾಕ್ಷಸ ಪಟ್ಟಿ ಎಂತಲೂ ಜನ ಕರೆಯುತ್ತಾರೆ. ಹೊಲಗಳ ಬದುವಲ್ಲಿ ಉಲುಸಾಗಿ ಬೆಳೆವ ಇದನ್ನು ರಕ್ಸಪಟ್ಟಿ, ಕತ್ತಾಳಿ ಎಂತಲೂ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಿವೆ. ಈ ಪಟ್ಟಿಯು ಕತ್ತಿಯಂತೆ ಚೂಪಾಗಿರುತ್ತದೆ, ತನ್ನ ಮೈಯ ತುದಿಗೆಲ್ಲಾ ಚಿಕ್ಕ ಚಿಕ್ಕ ಮುಳ್ಳಿನ ಸರಪಳಿ ಹೊಂದಿ, ಕೊಬ್ಬಿದ ಗೂಳಿಯಂತೆ ಮುಟ್ಟಿದವರನ್ನು ಗಾಯ ಗೊಳಿಸಿಬಿಟ್ಟೇನು ಎಂದು ಗುಟುರು ಹಾಕುವಂತೆ ಕಾಣುತ್ತದೆ. ಹಾಗಾಗಿ ಪ್ರಾಣಿಗಳಿಂದ, ಜನರಿಂದ ಬೆಳೆಯ ರಕ್ಷಣೆಗಾಗಿ ಮತ್ತು ಮಣ್ಣಿನ ಸವಕಳಿ ತಡೆಯಲು ಕತ್ತಾಳೆಯನ್ನು ಹೊಲದ ಬದುವಲ್ಲಿ, ಅರಣ್ಯದಲ್ಲಿ ಉಲುಸಾಗಿ ಬೆಳೆಸುತ್ತಾರೆ. ಈಗೀಗ ಇದನ್ನು ಬೆಳೆಸುವಿಕೆಯ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಿದೆ. ಇದೊಂದು ರೀತಿಯಲ್ಲಿ ರಾಕ್ಷಸೀ ಗುಣಗಳಿರುವ ಗಿಡ. ಇದಕ್ಕೆ ಕಲ್ನಾರು ಎಂಬ ಹೆಸರೂ ಇದೆ. ಇದನ್ನು ಹಿಂಡಿದಾಗ ಬರುವ ವಾಸನೆ ಮಾತ್ರ ತಲೆ ಚಿಟ್ ಹಿಡಿಸುವಂತದ್ದು.

ಜನಸಮುದಾಯಗಳಲ್ಲಿ ಈ ಕತ್ತಾಳೆಗೊಂದು ಚರಿತ್ರೆಯೂ ಇದೆ. ಇದು ರೈತರೊಂದಿಗೆ ಸಾವಯವ ಸಂಬಂಧ ಹೊಂದಿದ ಸಸ್ಯಜಾತಿ. ಜನಪದ ವೈದ್ಯದಲ್ಲಿ ಔಷಧಿಗೂ ಬಳಕೆಯಾಗುತ್ತದೆ. ಹಳ್ಳಿಗಳಲ್ಲಿ ಗುಡಿಸಲು ಕಟ್ಟಲು ಸಹ ಬಳಸುತ್ತಾರೆ. ನಾನು ಚಿಕ್ಕವನಾಗಿದ್ದಾಗ ಕಟ್ಟಿಗೆ ತರಲೆಂದು ಹಳ್ಳಕ್ಕೆ ಹೋದಾಗ ಕಟ್ಟಿಗೆ ಹೊರೆ ಕಟ್ಟಲು ಕತ್ತಾಳೆಯ ಒಂದು ಪಟ್ಟಿಯನ್ನು ಕಿತ್ತುಕೊಂಡು ಅದನ್ನು ಸೀಳಿ ಹಗ್ಗ ಮಾಡಿಕೊಳ್ಳುತ್ತಿದ್ದೆವು. ಆಗ ಮನೆಗೆ ಬಂದಾಗ ನಮ್ಮ ಕೈಯ ಕೆಟ್ಟ ವಾಸನೆಯನ್ನು ಮೂಗಿಗೆ ಹಿಡಿಯುತ್ತಾ ಗೆಳೆಯರನ್ನೆಲ್ಲಾ ಓಡಾಡಿಸಿಕೊಂಡು ಖುಷಿ ಪಡುತ್ತಿದ್ದೆವು. ಇನ್ನು ಬುಗುರಿ ಆಡುವಾಗ ಬುಗುರಿಗೆ ಸುತ್ತುವ ಚಾಟಿಯನ್ನು ಇದೇ ನಾರಿನಿಂದ ಹೊಸೆದುಕೊಳ್ಳುತ್ತಿದ್ದೆವು. ಆಗ ಹೊಸೆಯುವಾಗ ತೊಡೆ ಮೇಲೆ ಒತ್ತಿ ಕೆಂಪಗಾಗಿ ತೊಡೆ ಉರಿಯುತ್ತಿತ್ತು. ಒಮ್ಮೆ ನಾನು ಬುಗುರಿಯ ಚಾಟಿಗಾಗಿ ರಾಮಯ್ಯ ಎನ್ನುವವರ ನೆರಕೆಯಲ್ಲಿ ಸಿಕ್ಕಿಸಿದ ನಾರನ್ನು ಕದ್ದು ಸಿಕ್ಕಿಬಿದ್ದು ದೊಡ್ಡ ರಂಪಾಟವಾಗಿತ್ತು.
ಆಗ ನಾವು ನಾರು ತೆಗೆಯಲು ಕತ್ತಾಳೆ ಪಟ್ಟಿಯನ್ನು ಕೊಯ್ದು, ನೀರು ಹರಿವ ಹಳ್ಳದ ಬದುವಲ್ಲಿ ಗುಣಿ ತೋಡಿ ರಾತ್ರಿ ಯಾರಿಗೂ ಗೊತ್ತಾಗದ ಹಾಗೆ ಹೂತಿಡುತ್ತಿದ್ದೆವು. ಕಾರಣ ಹೂತಿಟ್ಟ ಕತ್ತಾಳೆಯನ್ನು ಕದಿಯುವ ಕೆಲಸವನ್ನೂ ಕೆಲವರು ಮಾಡುತ್ತಿದ್ದರು. ಬಹುಪಾಲು ರೈತರು ನಾರಿಗಾಗಿ ಹೀಗೆ ಕತ್ತಾಳೆಯನ್ನು ಹಳ್ಳಗಳ ಬದುವಿನಲ್ಲಿ ಹೂತಿಡುವುದು ಒಂದು ಮುಖ್ಯ ಕೆಲಸವೇ ಆಗಿತ್ತು. ಆಗ ಹಳ್ಳಗಳಲ್ಲಿ ಒರತೆಯನ್ನು ತೋಡಿ ಕುಡಿಯಲು ನೀರು ಬಳಸುತ್ತಿದ್ದರಿಂದ, ಅಂತಹ ಕುಡಿಯುವ ನೀರ ಒರತೆಯ ಅಕ್ಕಪಕ್ಕ ಕತ್ತಾಳೆಯನ್ನು ಹೂತಿಡುವಂತಿರಲಿಲ್ಲ. ಹಾಗೇನಾದರೂ ಹೂತಿಟ್ಟರೆ ಕತ್ತಾಳೆಯ ಕೊಳೆತ ನೀರಿನಂಶ ಕುಡಿಯುವ ನೀರಿನ ಝರಿಯ ಜತೆ ಸೇರಿ ನೀರು ಕೆಟ್ಟ ವಾಸನೆ ಬರುತ್ತಿತ್ತು. ಆಗ ಜನರು ಕತ್ತಾಳೆ ನಾರು ಹೂತಿಟ್ಟ ಜಾಗವನ್ನು ಶೋಧಿಸಿ ತೆಗೆಯುತ್ತಿದ್ದರು. ಹೂತಿಟ್ಟವರು ಯಾರೆಂದು ತಿಳಿದರಂತೂ ಅವರಿಗೆ ಧರ್ಮದೇಟು ತಪ್ಪುತ್ತಿರಲಿಲ್ಲ.

ಹೀಗೆ ಹೂತು ಹಾಕಿದ್ದನ್ನು ಹದಿನೈದು ದಿನದ ನಂತರ ಕಿತ್ತಾಗ ಅದು ಕೊಳೆತು ನಾರು ಬಿಟ್ಟಿರುತ್ತಿತ್ತು. ಹೀಗೆ ತೆಗೆದ ಕೊಳೆತ ಕತ್ತಾಳಿಯನ್ನು ಬಟ್ಟೆ ತೊಳೆದಂತೆ, ನೀರಲ್ಲಿ ಅದ್ದಿ ಕಲ್ಲಿಗೆ ಸೆಳೆಯುತ್ತಿದ್ದೆವು. ಅದು ಪೊರೆಯನ್ನೆಲ್ಲಾ ಬಿಟ್ಟುಕೊಂಡು ಮುದುಕಿಯ ಬಿಳಿ ಕೂದಲಿನಂತೆ ಕಂಗೊಳಿಸುತ್ತಿತ್ತು. ಅದನ್ನು ಒಣಗು ಹಾಕಿದರೆ ನಾರು ಸಿದ್ದವಾಗುತ್ತಿತ್ತು. ಹೀಗೆಲ್ಲಾ ಮಾಡುವಾಗ ಅದರ ಕೆಟ್ಟವಾಸನೆಯನ್ನು ಸಹಿಸುವ ಭಂಡ ದೈರ್ಯವೂ ಬೇಕಾಗುತ್ತಿತ್ತು. ಹಾಗೆ ಒಣಗಿದ ನಾರನ್ನು ಹೊಸೆದು ಹಸು, ಕುರಿ, ಎತ್ತು ಮುಂತಾದವುಗಳನ್ನು ಕಟ್ಟಲು ಹಗ್ಗಗಳನ್ನು ಹಿರಿಯ ಅಜ್ಜಂದಿರು ಹೊಸೆಯುತ್ತಿದ್ದರು. ಅಗತ್ಯಕ್ಕೆ ಬೇಕಾದ ತರಾವರಿ ಹಗ್ಗಗಳು ಈ ನಾರಿನಿಂದ ಸಿದ್ದಗೊಳ್ಳುತ್ತಿದ್ದವು.

ದೇಹದ ಮೇಲೆ ಚಿಕ್ಕ ಚಿಕ್ಕ ಕಪ್ಪನೆ ಹುಣ್ಣು ಏಳುವುದನ್ನು ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ನಾರುಳ್ಳಿ ಎಂದು ಕರೆಯುತ್ತಾರೆ. ಈ ನಾರುಳ್ಳಿ ನಾರಪ್ಪ ಎಂಬ ದೇವರ ಕೋಪದಿಂದ ಬಂದದ್ದೆಂದು ಈ ಭಾಗದ ಜನ ನಂಬುತ್ತಾರೆ. ದಾವಣಗೆರೆ ಜಿಲ್ಲೆ ಹರಪನಹಳ್ಳಿಯ ಬಳಿಯಿರುವ ಚಿಗಟೇರಿಯ ನಾರದ ಮುನೇಶ್ವರ ದೇವರ ಜಾತ್ರೆಯಲ್ಲಿ ತೇರಿಗೆ ನಾರನ್ನು ಎಸೆಯುವುದಾಗಿ ಹರಕೆಯನ್ನೂ ಹೊರುತ್ತಾರೆ. ತೇರಿಗೆ ಬಾಳೆ ಹಣ್ಣು ಎಸೆಯುವಂತೆ ಈಗಲೂ ಚಿಗಟೇರಿ ನಾರಪ್ಪನಿಗೆ ನಾರು ಎಸೆಯುವುದನ್ನು ಕಾಣಬಹುದು. ಜನ ಎಸೆದ ನಾರು ತೇರು ಎಳೆವ ಮಣಿಯನ್ನು (ದೊಡ್ಡದಾದ, ದಪ್ಪದಾದ ಹಗ್ಗ) ಹೆಣೆಯಲು ಬಳಕೆಯಾಗುತ್ತದೆ. ಇದೆಲ್ಲಾ ಕತ್ತಾಳೆ ನಾರು ಜನರ ಸಂಸ್ಕೃತಿಯ ಭಾಗವೂ ಆದದ್ದರ ಕುರುಹು.

ಹೀಗೆ ಕತ್ತಾಳೆಯನ್ನು ಕೊಳೆ ಹಾಕಿ ನಾರು ತೆಗೆವ ಸಾಂಪ್ರದಾಯಿಕ ವಿಧಾನವನ್ನು ಬಿಡಿಸಿಕೊಂಡು, ನಂದನಹಳ್ಳಿ ತಾಂಡದ ಜನ ಯಂತ್ರದ ಮೂಲಕ ನಾರು ತೆಗೆವ ಕೆಲಸ ಮಾಡುತ್ತಿದ್ದಾರೆ. ಈಗ್ಗೆ ಇಪ್ಪತ್ತು ವರ್ಷಗಳ ಹಿಂದಿನಿಂದಲೂ ಇದನ್ನೊಂದು ಮುಖ್ಯ ಉದ್ಯೋಗವನ್ನಾಗಿಸಿಕೊಂಡಿದ್ದಾರೆ. ಹಿಂದೆ ಐವತ್ತಕ್ಕೂ ಹೆಚ್ಚು ಯಂತ್ರಗಳಿದ್ದವಂತೆ, ಈಗ ಇಪ್ಪತ್ತೈದು ಯಂತ್ರಗಳು ನಾರು ತೆಗೆವ ಕೆಲಸ ಮಾಡುತ್ತಿವೆ. ಒಂದು ಯಂತ್ರ ಕನಿಷ್ಟ ಇಪ್ಪತ್ತು ಜನರಿಗೆ ಉದ್ಯೋಗ ಒದಗಿಸುತ್ತದೆ. ಇದೊಂದು ಸಂಚಾರಿಯಂತ್ರ. ಎಲ್ಲೆಲ್ಲಿ ಕತ್ತಾಳೆ ಯಥೇಚ್ಚವಾಗಿ ಬೆಳೆದಿರುತ್ತದೋ ಅಲ್ಲಲ್ಲಿಗೇ ಯಂತ್ರವನ್ನು ಕೊಂಡೊಯ್ದು ನಾರು ತೆಗೆವ ಕೆಲಸ ಮಾಡುತ್ತಾರೆ. ಹಾಗಾಗಿ ಕರ್ನಾಟಕದ ಬಹುಭಾಗಗಳಲ್ಲಿಯೂ, ಮಹರಾಷ್ಟ್ರ, ಆಂದ್ರ, ತಮಿಳು ನಾಡಿನ ಕೆಲ ಭಾಗಗಳಲ್ಲೂ ನಂದನಹಳ್ಳಿಯ ನಾರು ಯಂತ್ರಗಳು ಪಯಣ ಬೆಳೆಸಿವೆ.

ಹೊಲದವರೇ ತಮ್ಮ ಬದುವಲ್ಲಿರುವ ಕತ್ತಾಳೆ ಪಟ್ಟಿಯನ್ನು ಕೊಟ್ಟು ಇಂತಿಷ್ಟು ನಾರು ಪಡೆಯಬಹುದು. ಇಲ್ಲದೆ ಹೋದರೆ ೩೦೦ ರೂಪಾಯಿಗೊಂದು ಟ್ರಾಕ್ಟರ್ ಲೋಡ್ ನಂತೆ ಹೊಲಬದುವಿನ ಕತ್ತಾಳೆಯನ್ನು ಕೊಳ್ಳುತ್ತಾರೆ. ಹೀಗೆ ಕೊಯ್ದ ಕತ್ತಾಳೆ ಪಟ್ಟಿಗಳನ್ನು ಮಿಷನ್ನಿನ ಬಾಯಿಗೆ ಇಡುತ್ತಾರೆ, ಅದು ಮಾವಿನ ಹಣ್ಣಿನ ಹೋಳನ್ನು ಚೀಪಿ ಸಿಪ್ಪೆಯನ್ನು ಎಸೆಯುವಂತೆ ಅದರ ಕತ್ತಾಳೆಯ ರಸ ಹೀರಿ ಹಸಿ ನಾರನ್ನು ಹೊರ ಹಾಕುತ್ತದೆ, ಹೀಗೆ ಹೊರ ಹಾಕಿದ ನಾರನ್ನು ಬಿಸಿಲಿಗೆ ಒಣಗು ಹಾಕಲಾಗುತ್ತದೆ. ಹೀಗೆ ಒಣಗು ಹಾಕಿದ ಬಿಳಿ ನಾರು ನೂರಾರು ಅಜ್ಜಿಯರು ತಮ್ಮ ಬಿಳಿ ಕೂದಲನ್ನು ಮಾತ್ರ ಮೇಲೆ ಬಿಟ್ಟು ಭೂಮಿಯ ಒಳಗೆ ಅವಿತಿದ್ದಾರೆಂಬತೆ ಕಾಣುತ್ತದೆ. ಎರಡು ಮೂರು ದಿನ ಒಣಗಿದಾಗ ನಾರು ಸಿದ್ದವಾಗುತ್ತದೆ.

ಒಣಗಿದ ನಾರನ್ನು ಪೆಂಡಿಕಟ್ಟುತ್ತಾರೆ. ಅಂತಹ ಪೆಂಡಿಗಳನ್ನು ತೂಕ ಮಾಡಿ ಲಾರಿಗೆ ತುಂಬುತ್ತಾರೆ. ತಿಪಟೂರು ಗುಬ್ಬಿಯ ಬಳಿ ಇರುವ ಹಗ್ಗದ ಪ್ಯಾಕ್ಟರಿಗೆ ಕೆಲವರು ಮಾರಿದರೆ, ಇನ್ನು ಕೆಲವರು ಕೊಲ್ಕತ್ತಾ, ಬಾಂಬೆಯ ಹಗ್ಗದ ಪ್ಯಾಕ್ಟರಿಗಳಿಗೆ ಸಾಗಿಸುತ್ತಾರೆ. ಈಗ ೧೪ ರೂಪಾಯಿಗೆ ಕೆಜಿಯಂತೆ ಮಾರಾಟ ಮಾಡಲಾಗುತ್ತಿದೆ. ಬೆಲೆಯಲ್ಲಿ ಏರುಪೇರಾಗುವ ಸಾದ್ಯತೆಗಳೂ ಇವೆ. ಕತ್ತಾಳೆಯನ್ನು ಹಿಂಡಿ ತೆಗೆದ ರಸ ಮತ್ತು ಅದರ ಪೊರೆಯ ಕಸ ಹೊಲಕ್ಕೆ ಫಲವತ್ತಾದ ಗೊಬ್ಬರವಂತೆ. ಹಾಗಾಗಿ ಈ ಗೊಬ್ಬರವನ್ನು ಕೊಳ್ಳಲು ತುಂಬಾ ಬೇಡಿಕೆ ಇದೆ. ಹೀಗೆ ನಾರು ತೆಗೆವ ಕೆಲಸ ಮಳೆಗಾಲದ ನಾಲ್ಕು ತಿಂಗಳು ಮಾತ್ರ ನಿಲ್ಲುತ್ತದೆ. ಕಾರಣ ಮಳೆಗೆ ಕತ್ತಾಳೆ ನೆನೆದರೆ ಬೆಂಡಾಗುತ್ತದೆ, ನಾರು ನೆನೆದು ಕಪ್ಪಾಗುತ್ತದೆ ಎನ್ನುವುದು ಇಲ್ಲಿನ ಅನುಭವಿಗಳ ಮಾತು.

ನಾರನ್ನು ಒಣಗಿಸುವ, ಕೂಡಿಡುವ ಕೆಲಸಕ್ಕೆ ದಿನಕ್ಕೆ ೧೦೦ ರಿಂದ ೨೦೦ ರೂಪಾಯಿ ಕೊಡ್ತಾರೆ ಸಾರ್ ಎನ್ನುವ ಜಾನುಬಾಯಿ ‘ನಮ್ಮ ಜೀವನ್ಕ ಈ ಕತ್ತಾಳಿ ನಾರು ಆಸರಿ ಆಗೇತ್ರಿ’ ಎನ್ನುತ್ತಾರೆ. ಇದರಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿದೆ. ನಂದನಹಳ್ಳಿಯ ರಾಮಾನಾಯ್ಕ ಮುಂತಾದವರು ನಾರಿನ ಮಿಷನ್ ಹೊಂದಿದ್ದಾರೆ. ಇದಕ್ಕೆ ಸರಕಾರದ ನಾರು ಮಂಡಳಿಯಾಗಲಿ, ಇತರೆ ಗುಡಿ ಕೈಗಾರಿಕೆಯ ಯೋಜನೆಗಳಾಗಲಿ ಸಹಾಯ ಮಾಡಿಲ್ರಿ..ನಮಗ ಸಾಲ ಕೊಡೋಕೆ ಬ್ಯಾಂಕುಗಳು ಮುಂದೆ ಬರೋದು ಕಷ್ಟರೀ ಎನ್ನುತ್ತಾರೆ. ನಂದನಹಳ್ಳಿಯಲ್ಲಿರೋ ಹಗ್ಗದ ಸಣ್ಣ ಪ್ಯಾಕ್ಟರಿಯೊಂದು ಕೆಲಸ ಮಾಡದೆ ಹಾಳು ಬಿದ್ದಿರುವುದೂ ಕೂಡ ಹಣಕಾಸಿನ ಕೊರತೆಯಿಂದಲೇ ಎನ್ನುವುದು ಈ ಊರಿನವರ ಅಭಿಪ್ರಾಯ.

ಹೀಗೆ ಹೊಲದ ಬದುವಲ್ಲಿ ಸುಖಾಸುಮ್ಮನೆ ದೈತ್ಯಾಕಾರದಲ್ಲಿ ಬೆಳೆವ ಕತ್ತಾಳೆಯನ್ನು ನಂಬಿ ಒಂದು ಊರು ಬದುಕು ಕಟ್ಟಿಕೊಂಡಿರುವುದು ಅಚ್ಚರಿಯೇ ಸರಿ. ಈ ಪುಟ್ಟ ಹಳ್ಳಿ ನಾರನ್ನು ಕೊಲ್ಕತ್ತಾ ಬಾಂಬೆಯಂತಹ ಮಹಾ ನಗರಗಳ ದೊಡ್ಡ ಪ್ಯಾಕ್ಟರಿಗಳಿಗೆ ಕಳಿಸುತ್ತಿರುವುದಕ್ಕೆ ಹೆಮ್ಮೆ ಪಡುತ್ತಿದೆ. ಆದರೆ ಇಲ್ಲಿನ ನಾರಿನ ಕಚ್ಚಾ ಸಾಮಗ್ರಿಯನ್ನು ಆಧರಿಸಿ ಉತ್ಪನ್ನಗಳನ್ನು ತಯಾರಿಸುವ ಸಣ್ಣ ಕೈಗಾರಿಕೆಯೊಂದು ಸ್ಥಾಪನೆಯಾದರೆ ಈ ಹಳ್ಳಿಯ ಇನ್ನಷ್ಟು ಜನ ಸಂಪೂರ್ಣವಾಗಿ ನಾರೋದ್ಯಮದಲ್ಲೇ ತೊಡಗಿಕೊಳ್ಳುವ ಕನಸು ಕಾಣುತ್ತಿದೆ. ನಂದನಹಳ್ಳಿ ಜನರ ಇಂತಹ ಕನಸು ನನಸಾಗುವುದು ಯಾವಾಗ ಎನ್ನುವುದು ನನ್ನಂತವರಲ್ಲಿ ಪ್ರಶ್ನೆಯಾಗಿ ಕಾಡುತ್ತದೆ.

ಗುರುವಾರ, ಅಕ್ಟೋಬರ್ 6, 2011

ಬಂಗಾಳದ ಶಕ್ತಿದೇವತೆಗಳ ನೆನಪಿನಲ್ಲಿ

ಬಂಗಾಳವನ್ನು ಕಾಳಿ ದುರ್ಗೆ ಮುಂತಾದ ಶಕ್ತಿದೇವತೆಗಳ ನಾಡೆಂದು ಕರೆಯಲಾಗುತ್ತದೆ. ಅದರ ರಾಜಧಾನಿ ಕೋಲ್ಕತ್ತೆಯ ಹೆಸರು ಬಂದಿದ್ದೇ `ಕಾಳಿಘಾಟ್` ಎಂಬ ಪದದಿಂದ.

ವಿಶೇಷವೆಂದರೆ, ಬಂಗಾಳದ ಈ ಕಾಳಿ ಮೂಲತಃ ಕರ್ನಾಟಕದವಳೆಂದೂ, ಬಂಗಾಳವನ್ನಾಳಿದ ಕರ್ನಾಟಕ ಮೂಲದ ದೊರೆಗಳಾದ ಸೇನರ ಮೂಲಕ ಅಲ್ಲಿಗೆ ಹೋದವಳೆಂದೂ ಒಂದು ಅಭಿಪ್ರಾಯವಿದೆ. ಇದು ನಿಜವೇ ಆಗಿದ್ದಲ್ಲಿ, ನಾನು ಚಾಮುಂಡಿಯ ನಾಡಿನಿಂದ ಕಾಳಿಯ ನಾಡಿಗೆ ಹೋದವನು.

ಕಾಳಿಯ ಗುಡಿ ಕೋಲ್ಕತ್ತೆಯ ನಡುಮಧ್ಯದಲ್ಲಿದೆ. ನಾನಲ್ಲಿಗೆ ಹೋದಾಗ, ಯಾವುದೊ ಸಾರ್ವಜನಿಕ ರಜೆ; ಗುಡಿಯ ಮುಂದೆ ಮೈಲುದ್ದದ ಪಾಳಿ. ಕೋಲ್ಕತ್ತೆಯ ಜನ ರಜೆ ಬಂದರೆ ಬೆಳಬೆಳಗ್ಗೆಯೇ ಕಾಳಿಗುಡಿಯ ಮುಂದೆ-ಸಂಜೆಯಾದರೆ ರವೀಂದ್ರ ಸದನದಲ್ಲಿ ನಡೆಯುವ ನಾಟಕ ಸಿನಿಮಾ ನೋಡಲು- ಪಾಳಿ ನಿಲ್ಲುತ್ತಾರೆಯೊ ಏನೊ? ಗುಡಿಯ ಆವರಣದ ಅಂಗಡಿಗಳಲ್ಲಿ ದೇವಿಗರ್ಪಿಸಲು ಕೆಂಪು ದಾಸವಾಳದ ಮಾಲೆಗಳು ಹೊರೆಗಟ್ಟಲೆ ಇಳಿಬಿದ್ದಿದ್ದವು; ಬಲಿಕೊಡಲು ತಂದ ಗಿಡ್ಡತಳಿಯ ಹೋತಗಳನ್ನು ಬಗಲಲ್ಲಿ ಅವುಚಿಕೊಂಡು ಕೆಲವು ಭಕ್ತರು ನಿಂತಿದ್ದರು.

ಬಂಗಾಳದ ಬೀರಭೂಂ ಜಿಲ್ಲೆಯಲ್ಲಿ ಮತ್ತೊಂದು ಶಾಕ್ತಪೀಠವಿದೆ. ಅದುವೇ ಸಿದ್ಧಪೀಠವೆಂದು ಹೆಸರಾಗಿರುವ ತಾರಾಪೀಠ. ಈ ಕಾಳಿಯ ಹೆಸರು ತಾರಾ. ತಾಂತ್ರಿಕ ಸಾಧಕರ ಪ್ರಿಯವಾದ ದೇವತೆಯಾದ ಈಕೆ ಸ್ಮಶಾನವಾಸಿನಿ. 19ನೇ ಶತಮಾನದಲ್ಲಿ ರಾಮಕೃಷ್ಣ ಪರಮಹಂಸರ ಸಮಕಾಲೀನನಾಗಿದ್ದ ವಾಮಖೇಪ ಎಂಬ ದೊಡ್ಡ ತಾಂತ್ರಿಕ ಸಾಧಕ ಇಲ್ಲಿದ್ದನು. ತಾರಾಪೀಠದಲ್ಲಿಯೂ ಪ್ರಾಣಿಬಲಿಯಿದೆ.

ದೇವಿಯ ಎದುರಾ ಎದುರು, ಕೊಂಚ ದೂರದಲ್ಲಿ, ಬಲಿಗಂಬವಿದ್ದು, ಥಳಥಳಿಸುವ ಖಡುಗದಿಂದ ಹೋತವನ್ನು ಒಂದೇ ಏಟಿಗೆ ವಧಿಸುವಾಗ, ಜನ `ಲಲಲಲಲ` ಎಂದು ಕೂಗು ಹಾಕುವರು. ಬಲಿಯ ರಕ್ತವನ್ನು ಭಕ್ತರು ನೊಸಲಿಗೆ ತಿಲಕವಾಗಿ ಧರಿಸುವರು.

ಬಂಗಾಳ, ಅಸ್ಸಾಂ ಹಾಗೂ ನೇಪಾಳಗಳಲ್ಲಿ ಶಾಕ್ತ ದೇವತೆಗಳಿಗೆ ಪ್ರಾಣಿಬಲಿಯೂ ಬಲಿಪ್ರಾಣಿಯ ಮಾಂಸದ ಸೇವನೆಯೂ ಸಾಮಾನ್ಯ. ದೈವಗಳಿಗೂ ಅವುಗಳ ಪೂಜಾಚರಣೆಗಳಿಗೂ ಜನರ ಆಹಾರಪದ್ಧತಿಗೂ ನೇರ ಸಂಬಂಧವಿದೆಯಷ್ಟೆ.

ಅಸ್ಸಾಮಿನಲ್ಲಿದ್ದ ಕನ್ನಡ ಲೇಖಕ ಪ್ರಭಾಕರ್ (ಕಾಮರೂಪಿ) ಈ ಕುರಿತು ನನಗೆ ಹೇಳಿದ್ದರು. ಕೋಲ್ಕತ್ತೆಯಲ್ಲಿ ಕಾಲು ಶತಮಾನದಿಂದ ಇರುವ ಮಿತ್ರರಾದ ಕುಮಾರಪ್ಪನವರು, ಬಂಗಾಳದಲ್ಲಿ ಮಾಂಸಾಹಾರವಿಲ್ಲದ ಮದುವೆಗಳನ್ನೇ ನಾನು ನೋಡಲಿಲ್ಲ ಎಂದರು. ಕರ್ನಾಟಕದಲ್ಲಿ ಶುದ್ಧ ಸಸ್ಯಾಹಾರದ ಹೋಟೆಲುಗಳಿವೆ ಎಂದರೆ ಬಂಗಾಳದ ಜನ ಸೋಜಿಗ ಪಡುತ್ತಾರಂತೆ.

ಕೋಲ್ಕತ್ತೆ ಮತ್ತು ತಾರಾಪೀಠಗಳಷ್ಟು ಪ್ರಾಚೀನವಲ್ಲವಾದರೂ ಐತಿಹಾಸಿಕವಾಗಿ ಹೆಸರು ಪಡೆದಿರುವ ಕಾಳಿಯ ಕ್ಷೇತ್ರವೆಂದರೆ, ದಕ್ಷಿಣೇಶ್ವರ. ಕೋಲ್ಕತ್ತೆಯಿಂದ ಕೊಂಚ ದೂರ ಹೂಗ್ಲಿ ಹೊಳೆಯ ಆಚೆ ದಡದಲ್ಲಿ ದಕ್ಷಿಣೇಶ್ವರವಿದೆ. ಇಲ್ಲಿನ ಕಾಳಿಗೆ ಸ್ವತಃ ರಾಮಕೃಷ್ಣ ಪರಮಹಂಸರೇ ಅರ್ಚಕರಾಗಿದ್ದರು.

ಈ ಗುಡಿಯನ್ನು ಕಟ್ಟಿಸಿದವಳು ರಾಣಿ ರಾಶಮಣಿ ಎಂಬ ಸಿರಿವಂತ ವಿಧವೆ. ವಿಧವೆ ಕಟ್ಟಿಸಿದ ಗುಡಿಯೆಂದು ಯಾರೂ ಅರ್ಚನೆ ಮಾಡಲು ಮುಂದಾಗದಿದ್ದಾಗ, ರಾಮಕೃಷ್ಣರೂ ಅವರ ಅಣ್ಣನೂ ಇಲ್ಲಿಗೆ ಅರ್ಚಕರಾಗಿ ಬಂದರು. ಕರ್ನಾಟಕದ ನಮಗೆ ದಕ್ಷಿಣೇಶ್ವರವು ಕುವೆಂಪು ಕಾರಣಕ್ಕೆ ಮುಖ್ಯವಾಗಿದೆ.

ರಾಮಕೃಷ್ಣ ಆಶ್ರಮದಲ್ಲಿ ಬೆಳೆದ ಹಾಗೂ ಪರಮಹಂಸರ ಆಧ್ಯಾತ್ಮಿಕತೆಯಿಂದ ಪ್ರಭಾವಿತರಾಗಿದ್ದ ಕುವೆಂಪು, ಕಾಳಿಯನ್ನು ಬೇರೆಬೇರೆ ರೂಪಗಳಲ್ಲಿ ತಮ್ಮ ಬರೆಹಗಳಲ್ಲಿ ತರುತ್ತಾರೆ. ದಕ್ಷಿಣೇಶ್ವರಕ್ಕೆ ಹೋದವರ್ಷವೇ (1929) ಅವರು `ಕಾಳಿ ಬರುವಳು` ಕವನ ರಚಿಸಿದರು. ಬಳಿಕ `ಕ್ರಾಂತಿಕಾಳಿ` ಕವನ ಬಂದಿತು. `ಮಲೆಗಳಲ್ಲಿ ಮದುಮಗಳು` ಕಾದಂಬರಿಯಲ್ಲಿ ಚಿನ್ನಮ್ಮ ದಿಕ್ಕೆಟ್ಟು ತನ್ನ ಪ್ರಿಯತಮನಿಗಾಗಿ ಕಾಯುತ್ತಾ, ಮಲೆನಾಡಿನ ಒಂದು ಪಾಳುಗುಡಿಯಲ್ಲಿರುವ ಮಾರಿಯ ಮುಂದೆ ಅಡ್ಡಬಿದ್ದು ಬೇಡಿಕೊಳ್ಳುವ ಪ್ರಸಂಗವಿದೆ. ಅದೇ ಹೊತ್ತಿಗೆ ದಕ್ಷಿಣೇಶ್ವರದಲ್ಲಿ ಧ್ಯಾನಮಗ್ನನಾಗಿದ್ದ ಒಬ್ಬ ತರುಣ ಸನ್ಯಾಸಿಗೆ, ಕನಸಿನಲ್ಲೆಂಬಂತೆ, ಭವತಾರಿಣಿಯ ಮುಂದೆ ಹುಡುಗಿಯೊಬ್ಬಳು ಅಡ್ಡಬಿದ್ದು ಬೇಡಿಕೊಳ್ಳುತ್ತಿರುವ ದೃಶ್ಯವು ಕ್ಷಣಕಾಲ ಗೋಚರಿಸಿ ಮರೆಯಾಗುತ್ತದೆ.

ಭಕ್ತಿತುಂಬಿ ಶ್ರದ್ಧೆಯಿಂದ ಹೊಮ್ಮಿದ ಆರ್ತ ಜೀವದ ಪ್ರಾರ್ಥನೆಗೆ ಜಗನ್ಮಾತೆ- ಅವಳು ಆಖ್ಯಾತ ಹೂವಳ್ಳಿ ಹಾಡ್ಯದ ಮಾರಿಯಮ್ಮನ ರೂಪದಿಂದಿರಲಿ ಅಥವಾ ದಕ್ಷಿಣೇಶ್ವರದ ಜಗದ್‌ವಿಖ್ಯಾತ ಭವತಾರಿಣಿಯ ರೂಪದಿಂದಿರಲಿ-ಓಕೊಳ್ಳದಿರುತ್ತಾಳೆಯೇ? ಎಂದು ಕಾದಂಬರಿ ವ್ಯಾಖ್ಯಾನಿಸುತ್ತದೆ.

ಮಲೆನಾಡಿನ ವೈಷ್ಣವ ಹಿನ್ನೆಲೆಯ ಸಮುದಾಯದಲ್ಲಿ ಹುಟ್ಟಿದ ಕುವೆಂಪು, ಬಂಗಾಳದ ಪ್ರಭಾವದಿಂದ ಮಲೆನಾಡಿಗೂ ಬಂಗಾಳಕ್ಕೂ ಶಾಕ್ತಸಂಸ್ಕೃತಿಯ ಸೇತು ಕಟ್ಟಿಸಿದರು.

ದಕ್ಷಿಣೇಶ್ವರದ ಕಾಳಿಗೆ ಭವತಾರಿಣಿ ಎಂಬ ಹೆಸರೂ ಇದೆ. ತಮ್ಮ ಮಗಳು ತಾರಿಣಿಗೆ ಹೆಸರಿಡುವಾಗ ಕುವೆಂಪು ಅವರ ಮನಸ್ಸಲ್ಲಿದ್ದುದು ಈ ಭವತಾರಿಣಿಯೆ. ಸೇನರ ಮೂಲಕ ಹೋದ ಬಂಗಾಳಕ್ಕೆ ಹೋದ ಕಾಳಿ, ಕುವೆಂಪು ಮೂಲಕ ಕರ್ನಾಟಕಕ್ಕೆ ಹೊರಳಿ ಬಂದಳು.
ಬಂಗಾಳದಲ್ಲಿ ಕಾಳಿಯ ಇನ್ನೊಂದು ರೂಪವಾದ ದುರ್ಗೆಯ ಆರಾಧನೆಯೂ ಇದೆ.

ನಮ್ಮಲ್ಲಿ ನವರಾತ್ರಿಯ ಶಕ್ತಿಪೂಜೆಯಂತೆ, ಅಲ್ಲಿ ದುರ್ಗಾಪೂಜೆ ಪ್ರಸಿದ್ಧ. ತನ್ನ ಹಲವು ಕೈಗಳಲ್ಲಿ ಬಗೆಬಗೆಯ ಆಯುಧಗಳನ್ನು ಹಿಡಿದು, ಮಹಿಷಾಸುರನನ್ನು ಕೊಲ್ಲುತ್ತ, ನಿಮೀಲಿತ ನೇತ್ರಳಾಗಿ ನಿಂತಿರುವ ದುರ್ಗೆಯ ಪ್ರತಿಮೆಗಳನ್ನು ತಯಾರಿಸುತ್ತಿರುವ ನೂರಾರು ಕಲಾವಿದರನ್ನು ಬಂಗಾಳದಲ್ಲಿ ನೋಡಬಹುದು. ದುರ್ಗಾಷ್ಟಮಿಯಲ್ಲಿ ಇಡೀ ಬಂಗಾಳ ದುರ್ಗೆಯ ಮೆರವಣಿಗೆಗಳಿಂದ ತುಂಬಿಹೋಗುತ್ತದೆ.

ನಾಸ್ತಿಕರಾದ ಕಮ್ಯುನಿಸ್ಟರು ಸಹ ಈ ಜನೋತ್ಸವಗಳನ್ನು ನಿರಾಕರಿಸಲಿಲ್ಲ. ಅವರೂ ಉಮೇದಿನಿಂದ ಭಾಗವಹಿಸುತ್ತಾರೆ. ಕೋಲ್ಕತ್ತೆಯ ಕಾಳಿಘಾಟಿನ ಕಾಳಿಗುಡಿಯ ಆವರಣದೊಳಗೇ ಸಿಪಿಎಂ ಕಛೇರಿಯಿದೆ. ಬಂಗಾಳದಲ್ಲಿ ದುರ್ಗಾಪೂಜೆಯು ಧಾರ್ಮಿಕ ಆಚರಣೆಯಾಚೆ ಹೋಗಿ, ಒಂದು ನಾಡಹಬ್ಬವಾಗಿದೆ.

ಅನುಭಾವಿಗಳಾದ ರಾಮಕೃಷ್ಣ ಪರಮಹಂಸರಿಂದ ಹಿಡಿದು ಅವರ ಸಂಗಾತಿ ಶಾರದಾದೇವಿಯ ತನಕ, `ಆನಂದಮಠ` ಕಾದಂಬರಿ ಬರೆದ ಬಂಕಿಮಚಂದ್ರರಿಂದ ಹಿಡಿದು ಕಮ್ಯುನಿಸ್ಟರ ತನಕ, ಬಂಗಾಳದ ಎಲ್ಲರೂ ದೇವಿ ಆರಾಧಕರೇ. ಬಂಗಾಳದ ಚಿತ್ರಕಲಾವಿದರಿಗಂತೂ ಕಾಳಿ ಮತ್ತು ದುರ್ಗೆಯರನ್ನು ಚಿತ್ರಿಸುವುದರಲ್ಲಿ ದಣಿವೇ ಇಲ್ಲ.

ತಲೆಗೂದಲನ್ನು ಕೆದರಿಕೊಂಡು, ಕೆಂಗಣ್ಣನ್ನು ಅರಳಿಸಿ, ಮೊಳದುದ್ದ ನಾಲಗೆ ಚಾಚಿ, ಕೈಯಲ್ಲಿ ನೆತ್ತರು ಸುರಿವ ರಕ್ತಬೀಜಾಸುರನ ರುಂಡವನ್ನು ಹಿಡಿದು, ರಕ್ತಸಿಕ್ತ ಖಡ್ಗವನ್ನು ಎತ್ತಿ ಹಿಡಿದು, ಕೊರಳಲ್ಲಿ ಹಸಿಹಸೀ ರುಂಡಮಾಲೆ ಧರಿಸಿ, ನೆಲದಮೇಲೆ ಅಂಗಾತ ಬಿದ್ದಿರುವ ಶಿವನೆದೆಯ ಮೇಲೆ ಕಾಲನ್ನು ಮೆಟ್ಟಿ ನಿಂತಿರುವ ಕಾಳಿ; ಶಿವನನ್ನು ಹಸುಗೂಸನ್ನಾಗಿ ಮಾಡಿ ಎದೆಯೂಡುತ್ತಿರುವ ಕಾಳಿ; ಪ್ರಸನ್ನಳಾಗಿರುವ ಭದ್ರಕಾಳಿ; ವಾಮಾಚಾರದವರಿಗೆ ಪ್ರಿಯವಾದ ಸ್ಮಶಾನ ಕಾಳಿ-ಎಷ್ಟೊಂದು ರೂಪಗಳಲ್ಲಿ ಕಾಳಿಯನ್ನು ಅವರು ಚಿತ್ರಿಸಿದ್ದಾರೆ!

ವಿಕ್ಟೋರಿಯಾ ಮೆಮೋರಿಯಲ್ ಹಾಲಿನಲ್ಲಿ ಶತಮಾನಗಳ ಕಾಲದಿಂದ ಬಂಗಾಳದ ಕಲಾವಿದರು ಚಿತ್ರಿಸಿರುವ ಈ ಚಿತ್ರಪಟಗಳಿವೆ. ಸ್ತ್ರೀಯನ್ನು ದೇವಿ ತಾಯಿ ದೀದಿ ಮುಂತಾದ ರೂಪಗಳಲ್ಲಿ ಕಲ್ಪಿಸಿಕೊಂಡು ಆರಾಧಿಸುವ ಮನೋಧರ್ಮವೊಂದು ಬಂಗಾಳದ ಸಂಸ್ಕೃತಿಯಲ್ಲಿ ಆಳವಾಗಿ ಬೇರು ತಳೆದಂತಿದೆ.

ದಕ್ಷಿಣೇಶ್ವರದಲ್ಲಿದ್ದಾಗ ಶಾರದಾದೇವಿಯವರು ಸ್ಮಶಾನ ಕಾಳಿಯ ಆರಾಧನೆ ಮಾಡುತ್ತಿದ್ದರು. 5 ವರ್ಷದ ಚಿಕ್ಕವಯಸ್ಸಿನಲ್ಲಿ 23ರ ಹರೆಯದ ರಾಮಕೃಷ್ಣರಿಗೆ ಮದುವೆಯಾದ ಶಾರದಾದೇವಿಯವರು, ಸ್ವತಃ ತಮ್ಮ ಗಂಡನಿಂದಲೇ ಪೂಜೆಗೆ ಒಳಗಾದವರು. ಲಗ್ನವಾದರೂ ವಿರಕ್ತ ಬದುಕನ್ನು ನಡೆಸುತ್ತಿದ್ದ ಪರಮಹಂಸರು, ಕಾಳಿಯ ಪೀಠದಲ್ಲಿ ಅವರನ್ನು ಕೂರಿಸಿ `ತಾಯೀ` ಎಂದು ಕರೆಯುತ್ತ ಕುಮಾರಿಪೂಜೆ ಮಾಡುತ್ತಿದ್ದರು. ಕಾಳಿ ದುರ್ಗೆಯರನ್ನು ಬಿಟ್ಟು ಬಂಗಾಳದ ಸಂಸ್ಕೃತಿಯನ್ನು ಕಲ್ಪಿಸಿಕೊಳ್ಳುವಂತಿಲ್ಲ.

ನಂತರ ದಿನಗಳಲ್ಲಿ ಬಂಗಾಳಕ್ಕೆ ಭೂಮಿಕೆಗೆ ಬೇರೆಬೇರೆ ನಮೂನೆಯ ತಾಯಂದಿರ ಮತ್ತು ದೇವಿಯರ ಪ್ರವೇಶವಾಯಿತು. ಅವರಲ್ಲಿ ಮದರ್ ತೆರೇಸಾ ಮತ್ತು ರಾಣಿ ವಿಕ್ಟೋರಿಯಾ ಮುಖ್ಯರು. ಕೋಲ್ಕತ್ತೆಯ ಕಾಳಿಗುಡಿಯ ಮುಂಭಾಗದಲ್ಲೇ ಮದರ್ ತೆರೇಸಾ ಅವರ ಚಾರಿಟಿ ಆಫ್ ಮಿಶನ್‌ನ ಹಳೇ ಕಟ್ಟಡವಿದೆ. ಅದರ ಮುಂದೆ ಉಪ್ಪರಿಗೆಯಲ್ಲಿ ಕಿರೀಟ ಧರಿಸಿದ ಮೇರಿಯದೊಂದು ಪ್ರತಿಮೆಯಿದೆ.

ಗುಡಿಯ ಒಳಗೆ ಕಾಳಿಮಾತೆ. ಹೊರಗೆ ಮಾತೆಮೇರಿ. ಮದರ್ ತೆರೇಸಾಗಿಂತ ಕೊಂಚ ಮುಂಚೆ, ಬಂಗಾಳಕ್ಕೆ ಆಗಮಿಸಿದ `ತಾಯಿ`ಯೆಂದರೆ ರಾಣಿ ವಿಕ್ಟೋರಿಯಾ. ಈಕೆಯ ನೆನಪಿಗೆ ಕೋಲ್ಕತ್ತೆಯಲ್ಲಿ ವಿಕ್ಟೋರಿಯಾ ಮೆಮೊರಿಯಲ್ ಹಾಲ್ ನಿರ್ಮಾಣವಾಯಿತು. ಬಿಎಂಶ್ರೀಯವರು `ಕಡಲರಾಣಿ ಬ್ರಿಟಾನಿಯಾ`ಳನ್ನು ಭರತಮಾತೆಯ ನೆರವಿಗೆ ಬಂದ `ಇನಿಯ ತಂಗಿ` ಎಂದು (`ಭರತಮಾತೆಯ ನುಡಿ`) ಕರೆದರು; ಅದರಂತೆ ಕೆಲವು ಬಂಗಾಳಿಗಳು ವಿಕ್ಟೋರಿಯಾ ರಾಣಿಯನ್ನು ಭಾರತವನ್ನು ಉದ್ಧರಿಸಲು ಬಂದ ತಾಯಸ್ವರೂಪಿಣಿ ಎಂದು ಭಾವಿಸಿದರು.

ಈಸ್ಟ್ ಇಂಡಿಯಾ ಕಂಪನಿಯ ಆಳಿಕೆ ಮುಗಿದು (1857), ರಾಣಿ ಆಡಳಿತವು ಶುರುವಾದ ಬಳಿಕ, ತನ್ನ ಚಕ್ರಾಧಿಪತ್ಯಕ್ಕೆ ಸೇರಿದ ದೇಶಗಳನ್ನೆಲ್ಲ ತನ್ನ ಸ್ವಂತ ಮಕ್ಕಳಂತೆ ಭಾವಿಸಿ ಆಕೆ ಸಲಹುತ್ತಾಳೆ ಎಂದು ಬಿಂಬಿಸುವುದು, ವಸಾಹತುಶಾಹಿ ಆಡಳಿತಕ್ಕೂ ಜರೂರಾದ ಕೆಲಸವಾಗಿತ್ತು. ಹೀಗಾಗಿಯೇ ಇರಬೇಕು, ಕೋಲ್ಕತ್ತೆಯ ವಿಕ್ಟೋರಿಯ ಮೆಮೋರಿಯಲ್ ಕಟ್ಟಡದ ಮೇಲೆಲ್ಲ ತಾಯಂದಿರ ಮೂರ್ತಿಗಳಿವೆ. ಈ ತಾಯಂದಿರು ಮಕ್ಕಳನ್ನು ಮಡಿಲಲ್ಲಿಟ್ಟು ಮಲಗಿಸುತ್ತಿರುವ, ಎದೆತೆರೆದು ಹಾಲೂಡಿಸುತ್ತಿರುವ, ಆಡಿಸುತ್ತಿರುವ ಮುಂತಾದ ಬಗೆಬಗೆಯ ಕೆಲಸಗಳಲ್ಲಿ ತೊಡಗಿದ್ದಾರೆ.

ಮೆಮೋರಿಯಲ್ ಹಾಲಿನ ಮುಂದೆ ರಾಣಿಯ ದೊಡ್ಡದೊಂದು ಕಂಚಿನ ಮೂರ್ತಿಯಿದೆ. ಜನ ಗಿಜಿಗುಡುವ ಜನಸಂದಣಿಯಲ್ಲಿ, ತುಸು ಕಸಮುಸುರೆಯ ಇಕ್ಕಟ್ಟಿನಲ್ಲಿ, ಕೋಲ್ಕತ್ತೆಯ ಕಾಳಿಯ ಗುಡಿಯಿದ್ದರೆ, ವಿಕ್ಟೋರಿಯಾ ಸ್ಮಾರಕ ಕಟ್ಟಡವು, ಹೂಗಿಡ ಬೆಳೆಸಿ, ಹುಲ್ಲು ಕತ್ತರಿಸಿ ನೀಟಾಗಿರುವ ಉದ್ಯಾನದಲ್ಲಿದೆ. ಎರಡೂ ವಿಭಿನ್ನ ಜಗತ್ತುಗಳು.

ಕಾಳಿಯ ಕೈಯಲ್ಲಿ ರಕ್ಕಸರನ್ನು ಕೊಂದ ಆಯುಧಗಳಿದ್ದರೆ, ಕಂಚಿನ ಮೂರ್ತಿ ವಿಕ್ಟೋರಿಯಾ ರಾಣಿಯ ಕೈಯಲ್ಲಿ ಭೂಮಂಡಲವನ್ನೇ ಗೆದ್ದದ್ದರ ದ್ಯೋತಕವೆಂಬಂತೆ ಚೆಂಡಿನಾಕಾರದ ಭೂಗೋಳವಿದೆ. ಅದರ ಮೇಲೆ ಒಬ್ಬ ಸೈನಿಕ ತುಪಾಕಿ ಹಿಡಿದು ನಿಮಿರಿ ನಿಂತಿದ್ದಾನೆ. ರಾಣಿಯ ಸಿಂಹಾಸನದ ಬೆನ್ನಿಗೆ ಒಂದು ಸಿಂಹವೂ ಸೂರ್ಯವೂ ಇವೆ.

ಸೂರ್ಯ ಮುಳುಗದ ಸಾಮ್ರೋಜ್ಯವನ್ನು ಸೈನಿಕ ಬಲದಿಂದ ಗಳಿಸಿದ ಹೆಮ್ಮೆ ಮತ್ತು ಗಾಂಭೀರ್ಯದಲ್ಲಿ ಈ `ಪಶ್ಚಿಮ ದುರ್ಗೆ` ಆಸೀನಳಾಗಿದ್ದಾಳೆ. ಸಿಂಹಾಸನದ ಕೆಳಗಿನ ಫಲಕಗಳಲ್ಲಿ ರಾಣಿಯನ್ನು ಅಂಬಾರಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ತೆಗೆದಿರುವ -ಹೊಸ ದೇವಿಗೆ ಸ್ವಯಂ ಬಲಿಯಾಗಲು ಹೊರಟಂತಹ ಬಲಿಪಶುಗಳಂತೆ ತೋರುವ-ಭಾರತೀಯ ಬ್ರಿಟಿಷ್ ಸೈನಿಕರ ವೈಹಾಳಿಯಿದೆ. ಆದರೆ, ಈ ರಾಣಿಯ ಗರ್ವರಸಕ್ಕೆ ಭಂಗ ತರುವಂತೆ, ಚರಿತ್ರೆಯ ಹಂಗು ಮತ್ತು ಕಾಲದ ಪರಿವೆಯೇ ಇಲ್ಲದಂತೆ, ಹೊಸ ಜನಾಂಗದ ತಂದೆ ತಾಯಿಗಳಂತೆ, ವಿಕ್ಟೋರಿಯಾ ಪಾರ್ಕಿನ ತುಂಬ ಕೋಲ್ಕತ್ತೆಯ ತರುಣ ಪ್ರೇಮಿಗಳು ಪರಸ್ಪರ ತಬ್ಬಿ ಕುಳಿತಿರುವ ದೃಶ್ಯಾವಳಿಯಿದೆ.

ಬಂಗಾಳಕ್ಕೆ ಇನ್ನೊಬ್ಬ ತಾಯಿಯೂ ಇದ್ದಾಳೆ. ಆಕೆಯೆಂದರೆ, ಕೋಲ್ಕತ್ತೆ ಮತ್ತು ಹೌರಾಗಳನ್ನು ವಿಭಜಿಸಿ ಹರಿಯುವ ಗಂಗೆ; ಬಂಗಾಳದೊಳಕ್ಕೆ ಸಮುದ್ರದಿಂದ ಇಂಗ್ಲೆಂಡಿನ ಹಡಗುಗಳು ಒಳಗೆ ಬರಲು ನೀರಹಾದಿ ಹಾಸಿಕೊಟ್ಟ ಭಾಗೀರಥಿ. ವಿಶೇಷವೆಂದರೆ, ಬಂಗಾಳವನ್ನು ಬಗೆಬಗೆಯಲ್ಲಿ ಪ್ರಭಾವಿಸಿದ ಒಂದರ್ಥದಲ್ಲಿ ದೇವಿಯರು ಮತ್ತು ತಾಯಂದಿರು ಹೊರಗಿನಿಂದ ಬಂದವರು.

ಕಾಳಿ ಕರ್ನಾಟಕದಿಂದ; ಮದರ್ ತೆರೆಸಾ ಮೆಸಿಡೋನಿಯಾದಿಂದ; ವಿಕ್ಟೋರಿಯಾ ರಾಣಿ ಇಂಗ್ಲೆಂಡಿನಿಂದ; ಭಾಗೀರಥಿ ಹಿಮಾಲಯದಿಂದ. ಇವರ ಸಾಲಿಗೆ ಈಗ ಬಂಗಾಳದ ಮಣ್ಣಿನಿಂದಲೇ ಬಂದ ಹೊಸ ದೀದಿ (ಅಕ್ಕ) ಒಬ್ಬಳು ಸೇರಿಕೊಂಡಿದ್ದಾಳೆ. ಈಕೆ ಮಮತಾ ದೀದಿ. ಪಕ್ಕದ ಪೂರ್ವ ಬಂಗಾಳ ಉರುಫ್ ಬಾಂಗ್ಲಾದೇಶದ ಆಳಿಕೆಯಲ್ಲಿಯೂ ಶೇಖ್ ಹಸೀನಾ-ಖಾಲಿದಾಜಿಯಾ ಎಂಬ ಇಬ್ಬರು ಮಹಿಳೆಯರದೇ ಕಾರುಭಾರಷ್ಟೆ.

ಕೇರಳವನ್ನು ಸ್ತ್ರೀಮಲೆಯಾಳ ಎಂದು ಕರೆಯಲಾಗುತ್ತದೆ. ಪೌರಾಣಿಕ ಕತೆಗಳ ಪ್ರಕಾರ, ಯೋಗಿ ಮಚ್ಚೇಂದ್ರನಾಥನು ಮೈಮರೆತು ಇರುವಷ್ಟು ಮಹಿಳೆಯರು ಅವನನ್ನು ತಮ್ಮ ವಶದಲ್ಲಿ ಬಂಧಿಸಿದ್ದರು. ಆದರೆ ಮಹಿಳೆಯರು ಬಂಗಾಳವನ್ನು ಹಲವು ರೂಪಗಳಲ್ಲಿ ಆವರಿಸಿರುವ ಪರಿಯನ್ನು ಕಂಡರೆ, ಇದನ್ನು ಸ್ತ್ರೀಬಂಗಾಳ ಎಂದು ಕರೆಯಬಹುದು.

ವೈರುಧ್ಯವೆಂದರೆ, ದೇವಿ, ಮಾತೆ, ರಾಣಿ, ದೀದಿಗಳ ಪೂಜೆ ಮತ್ತು ಆಳಿಕೆಗೆ ಒಳಪಟ್ಟಿರುವ ಬಂಗಾಳವು, ಒಂದು ಕಾಲಕ್ಕೆ ಸ್ತ್ರೀವಿರೋಧಿಯಾಗಿತ್ತು; ಅದು ಬಾಲ್ಯ ವಿವಾಹಕ್ಕೂ ವಿಧವೆಯರನ್ನು ಜೀವಂತ ಸುಡುವುದಕ್ಕೆ ಹೆಸರಾಗಿತ್ತು. ಬ್ರಿಟಿಷರು ಸತಿಪದ್ಧತಿ ನಿಷೇಧಿಸಲು (1829), ಅವರ ಬಂಗಾಳದ ಅನುಭವವೂ ಒಂದು ಕಾರಣ. ನಂತರ ವಿಧವಾ ವಿವಾಹ ಮತ್ತು ಸ್ತ್ರೀಶಿಕ್ಷಣದಂತಹದ ಸಮಾಜ ಸುಧಾರಣೆಗಳು ಇದೇ ಬಂಗಾಳದಿಂದ ಹುಟ್ಟಿಕೊಂಡು ಭಾರತದ ತುಂಬ ಅಲೆಗಳಾಗಿ ಹರಡಿದವು.

ಈ ಸುಧಾರಣೆಗಳು ಬಂಗಾಳದಲ್ಲಿ ಮಹಿಳೆಯರ ಹೊಸದೊಂದು ಧೀಮಂತ ಪೀಳಿಗೆ ಬೆಳೆಯಲು ಕಾರಣವಾಯಿತು. ಈ ಪೀಳಿಗೆಯ ಪ್ರತಿಬಿಂಬಗಳನ್ನು ಶರಚ್ಚಂದ್ರ, ಟ್ಯಾಗೋರ್ ಮುಂತಾದವರ ಬರೆಹದಲ್ಲಿಯೂ, ಸತ್ಯಜಿತ್ ರೇ ಅವರ ಸಿನಿಮಾಗಳಲ್ಲಿಯೂ ಕಾಣಬಹುದು.

ನನಗೆ ಬಂಗಾಳದ ನಿಜವಾದ ಶಕ್ತಿದೇವತೆ ಲೇಖಕಿ ಮಹಾಶ್ವೇತಾದೇವಿ ಎಂದು ಅನಿಸುತ್ತದೆ. ಧೀಮಂತ ಹೋರಾಟಗಾರ್ತಿ ಈಕೆ ಬಂಗಾಳದ ಎಲ್ಲ ದಮನಿತ ಜನರ ನೋವಿಗೆ ಮಿಡಿಯುವ ತಾಯಿ. ಕರ್ನಾಟಕವನ್ನು ಪ್ರೀತಿಸುವ ಮಹಾಶ್ವೇತಾದೇವಿ ಇಲ್ಲಿಗೆ ಬಹಳ ಸಲ ಬಂದಿದ್ದಾರೆ. ಅವರೊಮ್ಮೆ ಬೆಂಗಳೂರಿಗೆ ಬಂದಿದ್ದಾಗ, ರವೀಂದ್ರ ಕಲಾಕ್ಷೇತ್ರದಲ್ಲಿ, `ಅಭೋಕ್ ಪೃಥಿವಿ` (ಮಲಗಿರುವ ಭೂಮಿಯೇ ಮೇಲಕ್ಕೇಳು) ಎಂಬ ತಮ್ಮ ಕವನವನ್ನು ಇಡೀ ಸಭೆಯೇ ಹಾಡುವಂತೆ ಹೇಳಿಕೊಟ್ಟಿದ್ದರು.

ಶಕ್ತಿದೇವತೆಗಳು ಬಂಗಾಳದ ಪ್ರಧಾನ ದೈವಗಳಾಗಿದ್ದರೂ, ಅಲ್ಲಿನ ವಾಸ್ತವ ಬದುಕಿನಲ್ಲಿ ಮಹಿಳೆಯರು ಎಷ್ಟು ಮೇಲಕ್ಕೆ ಎದ್ದಿದ್ದಾರೆ ಎಂಬ ಪ್ರಶ್ನೆ ಖಂಡಿತಾ ಎದುರಾಗುತ್ತದೆ.

ಬಂಗಾಳದ ತಿರುಗಾಟ ಮಾಡುವ ಯಾರಿಗೂ, ಮನೆಗಳಿಗೆ ಲಗತ್ತಾಗಿರುವ ಕೊಳಗಳಲ್ಲಿ ಮೀಯುವ, ಬಟ್ಟೆ ಒಗೆಯುವ, ಮಾರುಕಟ್ಟೆಗಳಲ್ಲಿ ಮೀನು ತರಕಾರಿ ಮಾರುವ, ಹೊಲಗದ್ದೆಗಳಲ್ಲಿ ಕಷ್ಟಪಟ್ಟು ಕೆಲಸ ಮಾಡುವ, ಪಟ್ಟಣದ ರಸ್ತೆಗಳಲ್ಲಿ ಗರಿಗರಿಯಾದ ಕಾಟನ್ ಸೀರೆ ಉಟ್ಟು ಸೈಕಲ್ ಹೊಡೆಯುವ ಮಹಿಳೆಯರು ಗೋಚರಿಸುತ್ತಾರೆ. ಇದರೊಟ್ಟಿಗೆ ಕೋಲ್ಕತ್ತೆಯ ಬೀದಿಗಳಲ್ಲಿ ಭಿಕ್ಷುಕಿಯರೂ ಮತ್ತು ವೇಶ್ಯೆಯರೂ ಸಾಕಷ್ಟು ಕಾಣಸಿಗುತ್ತಾರೆ.

ರಾಜಕೀಯ, ಆಧ್ಯಾತ್ಮಿಕ, ಧಾರ್ಮಿಕ ಲೋಕವನ್ನು ದೈವಗಳಾಗಿಯೋ ಆಳಿಕೆಗಾರರಾಗಿಯೋ ಕೆಲವು ಸ್ತ್ರೀಯರು ಎಷ್ಟೇ ಆವರಿಸಿದ್ದರೂ ಅದು ಸಾಂಕೇತಿಕ. ಉಳಿದಂತೆ ಬಂಗಾಳದ ಬಹುತೇಕ ಸಾಮಾನ್ಯ ಮಹಿಳೆಯರ ಅವಸ್ಥೆ ಭಾರತದ ಇತರ ಭಾಗದ ಮಹಿಳೆಯರಿಗಿಂತ ಬಹಳ ಬೇರೆಯಲ್ಲ.

ಕಾಳಿಯು ಬೀಜಾಸುರನನ್ನು ಕೊಂದು ಮಾಡುವ ರಣರಂಗದಲ್ಲಿ ಮಾಡುವ ಉನ್ಮತ್ತ ನೃತ್ಯದಲ್ಲಿ ಶಿವನೆದೆಯ ಮೇಲೆ ಮೈಮರೆತು ಕಾಲಿಟ್ಟಿರಬಹುದು; ಆದರೆ ವರ್ತಮಾನದಲ್ಲಿ ಬಂಗಾಳದ ಮಹಿಳೆ ಪುರುಷ ಪ್ರಜ್ಞಾಪೂರ್ವಕ ಪದಾಘಾತದಿಂದ ಹೊರಬಂದಿಲ್ಲ.

ಬಂಗಾಳ ಮೂಲದ ಚಿಂತಕ ಆಶೀಶ್ ನಂದಿಯವರು, ಬಂಗಾಳದ ಸತಿಪದ್ಧತಿ ಕುರಿತ ತಮ್ಮದೊಂದು ಲೇಖನದಲ್ಲಿ, ಬಂಗಾಳದ ಸಮಾಜದಲ್ಲಿ ಹುಟ್ಟುತ್ತಿದ್ದ ಹೊಸ ಪುರುಷ ಪ್ರಧಾನ ಸಮಾಜ ಮತ್ತು ಸಾಂಪ್ರದಾಯಕ ಸ್ತ್ರೀತ್ವಗಳ ನಡುವಣ ಸಂಘರ್ಷವನ್ನು ವಿಶ್ಲೇಷಿಸುತ್ತಾರೆ; ಮಹಾಶ್ವೇತಾದೇವಿ ಅವರ ಪ್ರಸಿದ್ಧ `ಹಜಾರ್ ಚೌರಾಶಿರ್ ಮಾ` (1084ರ ತಾಯಿ) ಕಾದಂಬರಿಯಲ್ಲಿ ಮಗನನ್ನು ಕಳೆದುಕೊಂಡು ಹೆಣಕ್ಕಾಗಿ ಹುಡುಕುವ ತಾಯಿಯೊಬ್ಬಳ ಸಂಕಟದ ಕತೆಯನ್ನು ಚಿತ್ರಿಸುತ್ತಾರೆ.

ಇದನ್ನೆಲ್ಲ ನೋಡುವಾಗ, ತಮ್ಮ ಅಸ್ತಿತ್ವ ಮತ್ತು ಸ್ವಂತಿಕೆಯನ್ನು ಸಾಬೀತುಪಡಿಸಲು ಯತ್ನಿಸುವ ಸ್ತ್ರೀಜಗತ್ತಿನ ಎದೆಯ ಮೇಲೆ ಕಾಲಿಟ್ಟು ನಿಂತಿರುವ ಪುರುಷವಾದಿ ಸಮಾಜದಲ್ಲೇ, ಆಕೆಯನ್ನು `ಶಕ್ತಿ`ಯೆಂದು ಆರಾಧಿಸುವ ಆಚರಣೆಗಳು ಹೆಚ್ಚು ವಿಜೃಂಭಣೆಯಿಂದ ಜರುಗುತ್ತವೆಯೊ ಏನೋ ಎಂದು ಭಾಸವಾಗುತ್ತದೆ. ಬಂಗಾಳವನ್ನು ಕಾಳಿ ದುರ್ಗೆ ಮುಂತಾದ ಶಕ್ತಿದೇವತೆಗಳ ನಾಡೆಂದು ಕರೆಯಲಾಗುತ್ತದೆ. ಅದರ ರಾಜಧಾನಿ ಕೋಲ್ಕತ್ತೆಯ ಹೆಸರು ಬಂದಿದ್ದೇ `ಕಾಳಿಘಾಟ್` ಎಂಬ ಪದದಿಂದ.

ಇದನ್ನೆಲ್ಲ ನೋಡುವಾಗ, ತಮ್ಮ ಅಸ್ತಿತ್ವ ಮತ್ತು ಸ್ವಂತಿಕೆಯನ್ನು ಸಾಬೀತುಪಡಿಸಲು ಯತ್ನಿಸುವ ಸ್ತ್ರೀಜಗತ್ತಿನ ಎದೆಯ ಮೇಲೆ ಕಾಲಿಟ್ಟು ನಿಂತಿರುವ ಪುರುಷವಾದಿ ಸಮಾಜದಲ್ಲೇ, ಆಕೆಯನ್ನು `ಶಕ್ತಿ`ಯೆಂದು ಆರಾಧಿಸುವ ಆಚರಣೆಗಳು ಹೆಚ್ಚು ವಿಜೃಂಭಣೆಯಿಂದ ಜರುಗುತ್ತವೆಯೊ ಏನೋ ಎಂದು ಭಾಸವಾಗುತ್ತದೆ.