ಶುಕ್ರವಾರ, ಜುಲೈ 29, 2011

ಜಾನಪದ ವಿಶ್ವವಿದ್ಯಾಲಯ ಪುಟ್ಟ ಸಂಶೋಧನ ಕೇಂದ್ರವಾಗಬೇಕು: ಪ್ರೊ.ರಹಮತ್ ತರೀಕೆರೆ ಅವರೊಂದಿಗೆ ಮಾತುಕತೆ.


ಅರುಣ್:ಇಂದು ಜಾನಪದ ಅಧ್ಯಯನಗಳನ್ನು ಸಂಸ್ಕೃತಿ ಚಿಂತನೆಯ ಭಾಗವಾಗಿ ಒಳಗು ಮಾಡಿಕೊಳ್ಳುವ ವಿಧಾನ ಯಾವುದು?

ರಹಮತ್ ತರೀಕೆರೆ: ಈಗ ಕನ್ನಡದಲ್ಲಿ ಸಂಸ್ಕೃತಿ ಚಿಂತನೆಯ ಹೊಸ ಹಾದಿಗಳು ಮೂಡುತ್ತಿವೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಈ ಚಿಂತನೆಯಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಆಕರ ಜಾನಪದದ್ದೇ ಆಗಿದೆ. ಆದರೆ ಈ ಚಿಂತನೆಯನ್ನು ನಮ್ಮ ಸಮುದಾಯಗಳ ಚಿಂತನಾಕ್ರಮದ ಭಾಗವಾಗಿ, ಮತ್ತಷ್ಟು ಸೃಜನಶೀಲವಾಗಿ ಜೀವಂತವಾಗಿ ಮಾಡಬೇಕಿದೆ. ಚರಿತ್ರೆ, ಭಾಷಾವಿಜ್ಞಾನ, ಸಮಾಜವಿಜ್ಞಾನ, ಸಾಹಿತ್ಯ, ಶಿಲ್ಪ, ಚಿತ್ರಕಲೆ ಸಿನಿಮಾ- ಹೀಗೆ ಹಲವು ಶಿಸ್ತು ಮತ್ತು ಮಾಧ್ಯಮಗಳ ಮೂಲಕ ಪ್ರವೇಶಿಸುವ ಹಾದಿಗಳನ್ನು ಹುಡುಕಬೇಕಿದೆ. ಇದು ಯಾರೊ ಒಬ್ಬಿಬ್ಬರು ಗಣ್ಯವಿದ್ವಾಂಸರು ಮಾಡುವ ಕೆಲಸವಲ್ಲ. ಇದೊಂದು ಟೀಂ ವರ್ಕ್ಸ್.


ಅರುಣ್: ಈತನಕದ ಕರ್ನಾಟಕದ ಜಾನಪದ ಅಧ್ಯಯನಗಳನ್ನು ನೀವು ಹೇಗೆ ಗ್ರಹಿಸುತ್ತೀರಿ? ಈಗ ಜಾನಪದ ಅಧ್ಯಯನಗಳು ಹೊರಳಿಕೊಳ್ಳಬೇಕಾದ ದಿಕ್ಕು ಯಾವುದು?

ರಹಮತ್ ತರೀಕೆರೆ: ಕರ್ನಾಟಕದ ಜಾನಪದ ಅಧ್ಯಯನಗಳಲ್ಲಿ ಅನೇಕರು ತೊಡಗಿದ್ದಾರೆ ಮತ್ತು ಅದ್ಭುತವಾದ ಹಾದಿಗಳನ್ನು ಸೋಸಿದ್ದಾರೆ. ಆದರೆ ಎರಡು ಸಮಸ್ಯೆಗಳಿವೆ. ೧. ಜಾನಪದವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ ಕೆಲವರಲ್ಲಿ ಅದು ಪಶ್ಚಿಮದ ಸಿದ್ಧಾಂತ ನೆರಳಿನಲ್ಲಿ ನಡೆಯುತ್ತಿರುವುದು. ೨. ಮತ್ತೆ ಕೆಲವರಲ್ಲಿ ಅದು ಸ್ವವಿಮರ್ಶೆಯಿಲ್ಲದ ವೈಭವೀಕರಣದ ದೇಶೀಯ ಸ್ವಗತಗಳಲ್ಲಿ ನರಳುತ್ತಿರುವುದು. ನಮ್ಮಲ್ಲಿ ಕಳೆದ ಒಂದು ಶತಮಾನದಿಂದ ನಡೆದಿರುವ ಸಂಗ್ರಹ ಮತ್ತು ಸಂಪಾದನೆ ಅದ್ಭುತವಾಗಿದೆ. ಮೊದಲ ಸಲಕ್ಕೆ ಹಳ್ಳಿಗಳಿಗೆ ಹೋಗಿ ಜನರ ಜತೆ ಕುಳಿತು ಕೆಲಸ ಮಾಡಿದ ಆ ಮಹನೀಯರನ್ನು ಕೃತಜ್ಞತೆಯಿಂದ ನೆನೆಯಬೇಕು. ಆದರೆ ಸಂಗ್ರಹವಾಗಿ ಪ್ರಕಟವಾಗಿರುವ ಈ ಆಕರಗಳಲ್ಲಿ ಶೇಕಡ ೫ರಷ್ಟೂ ವಿಶ್ಲೇಷಣೆಗೆ ಒಳಗಾಗಿಲ್ಲ. ಜನಪದ ಕತೆಗಳ ವಿಶ್ಲೇಷಣೆಯಂತೂ ಬಹಳ ಕಡಿಮೆ ಆಗಿದೆ. ಈ ವಿಶ್ಲೇಷಣೆ ಮತ್ತು ವ್ಯಾಖ್ಯಾನವನ್ನು ವಿದ್ವತ್ ಸಾಧನೆಗಾಗಿ ಅಲ್ಲ, ನಮ್ಮ ದುಡಿವ ಜನ ಸಮುದಾಯಗಳ ಅನುಭವ ಮತ್ತು ಸೃಜನಶೀಲತೆಯನ್ನು ಮಥಿಸಿ ತಿಳಿವನ್ನು ಮತ್ತು ವಿವೇಕವನ್ನು ಪಡೆಯುವುದಕ್ಕಾಗಿ ಮಾಡಬೇಕಿದೆ. ಇದನ್ನು ಹೇಳುವಾಗ ಸಂಗ್ರಹ ಮಾಡುವವರೊಬ್ಬರು ವಿಶ್ಲೇಷಣೆ ಮತ್ತು ವ್ಯಾಖ್ಯಾನ ಮಾಡುವವರು ಮತ್ತೊಬ್ಬರು ಎಂಬ ಶ್ರೇಣೀಕೃತ ಬೌದ್ಧಿಕ ಶ್ರಮವಿಭಜನೆ ತೊಲಗಿ, ಅವೆರಡೂ ಏಕೀಭವಿಸುವುದು ಸಾಧ್ಯವಾಗಬೇಕು. ಜನರೊಟ್ಟಿಗೆ ಕುಳಿತು ಆಕರವನ್ನು ಪಡೆಯುವಾಗಲೇ ಅದನ್ನು ವಿಶ್ಲೇಷಿಸಲು ಬೇಕಾದ ಚೌಕಟ್ಟು ಮತ್ತು ಚಿಂತನೆ ಕೂಡ ಹುಟ್ಟುತ್ತಿರುತ್ತದೆ.




ಅರುಣ್:ಈಗ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಆರಂಭವಾಗಿದೆ ಸಂಸ್ಕೃತಿ ಚಿಂತಕರಾಗಿ ನೀವು ಜಾನಪದ ವಿಶ್ವವಿದ್ಯಾಲಯದ ಮೊದಲ ಆದ್ಯತೆ ಏನಾಗಬೇಕೆಂದು ಬಯಸುತ್ತೀರಿ? ನಿಮ್ಮ ಕನಸಿನ ಜಾನಪದ ವಿವಿ ಹೇಗಿರಬೇಕು?

ರಹಮತ್ ತರೀಕೆರೆ: ನನಗೆ ತಕ್ಷಣಕ್ಕೆ ಅನಿಸುವಂತೆ, ಅದೊಂದು ಪುಟ್ಟ ಸಂಶೋಧನ ಕೇಂದ್ರವಾಗಬೇಕು. ಅದರೊಳಗೆ ಕರ್ನಾಟಕದಲ್ಲಿ ಜೀವಚಿತವಾಗಿ ಚಿಂತನೆ ಮಾಡಬಲ್ಲ ಕರ್ನಾಟಕದ ಎಲ್ಲ ಭಾಗಗಳಿಂದ ಬಂದ ತರುಣ ಸಂಶೋಧಕರ ಪಡೆಯೊಂದು ಕೆಲಸ ಮಾಡುವಂತಿರಬೇಕು. ಸಂಶೋಧನೆಗೆ ಪೂರಕವಾಗಿ ಎಂಫಿಲ್ ಪಿಎಚ್‌ಡಿ ಡಿಲಿಟ್ ಕೋರ್ಸುಗಳನ್ನು ನಡೆಸಬಹುದು. ವಿಶ್ವವಿದ್ಯಾಲಯದಲ್ಲಿ ಉದ್ಯೋಗಿಗಳಾಗಿ ಕೆಲಸ ಮಾಡುವವರಿಗಿಂತ, ತಾವಿರುವ ಸ್ಥಳಗಳಿಂದಲೇ ವಿಶ್ವವಿದ್ಯಾಲಯಕ್ಕಾಗಿ ಸಂಶೋಧನೆ ಮಾಡುವವರು ಹೆಚ್ಚಾಗಬೇಕು. ವಿಶ್ವವಿದ್ಯಾಲಯ ಅದಕ್ಕೊಂದು ವೇದಿಕೆಯಾಗಬೇಕು. ಕನ್ನಡದಲ್ಲಿ ಕವಿತೆ ಕತೆ ಬರೆಯುವ ಬಹಳ ತರುಣರಿದ್ದಾರೆ. ಸಂಶೋಧನೆ ಮಾಡುವವರು ಕಡಿಮೆಯಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಬಂದಿರುವ ನೆಪದಲ್ಲಿ ಸಂಶೋಧನೆಗೆ ಹೆಚ್ಚು ಅವಕಾಶಗಳು ಕಲ್ಪಿತವಾಗುತ್ತಿವೆ. ಇಂತಹ ಹೊತ್ತಲ್ಲಿ ಈ ವಿದ್ವತ್ ಬರ ಬಂದಿದೆ. ಈ ಪರಿಸ್ಥಿತಿಯನ್ನು ನಾವೆಲ್ಲ ಸೇರಿ ಬದಲಾಯಿಸಬೇಕು. ಬದಲಾಯಿಸಬಹುದು ಕೂಡ. ಕರ್ನಾಟಕದ ಬೇರೆಬೇರೆ ಭಾಗದಲ್ಲಿರುವ ಹೊಸ ಪ್ರತಿಭೆಗಳನ್ನು ಆರಿಸಿ, ಅವಕ್ಕೆ ಹೊಸ ಅಧ್ಯಯನ ವಿಧಾನಗಳ, ಹೊಸ ಜನರೊಡನಾಟದ ತರಬೇತಿ ಕೊಡುವುದು ಸಾಧ್ಯವಿದೆ.

ಅರುಣ್:ಈಗ ಸಾಂಸ್ಕೃತಿಕ ಅಧ್ಯಯನಗಳಿಗೆ ಪ್ರವೇಶ ಪಡೆಯುವ ಯುವ ಚಿಂತಕರಿಗೆ ಯಾವ ಬಗೆಯ ಸಿದ್ದತೆಗಳ ಅಗತ್ಯವಿದೆ?

ರಹಮತ್ ತರೀಕೆರೆ: ಅಧ್ಯಯನ ಮತ್ತು ತಿರುಗಾಟ-ಇದೊಂದು ಜೋಡಿ ಪರಿಕಲ್ಪನೆ. ಅಧ್ಯಯನ ಮತ್ತು ಚಿಂತನೆಯಿಲ್ಲದ ತಿರುಗಾಟ ಗೊಡ್ಡಾಗುತ್ತದೆ. ತಿರುಗಾಟ ಮತ್ತು ಜನರ ಒಡನಾಟವಿಲ್ಲದ ಅಧ್ಯಯನಕ್ಕೆ ಬೇಗನೇ ಮಂಕುಹಿಡಿಯುತ್ತದೆ. ಕನ್ನಡದಲ್ಲಿ ಎಷ್ಟೊಂದು ಬಗೆಯ ತಿಳುವಳಿಕೆ ಸೃಷ್ಟಿಯಾಗುತ್ತ್ತಿದೆ? ಅದನ್ನು ವಶಪಡಿಸಿಕೊಳ್ಳುವುದು ಮತ್ತು ಅದರ ಜತೆಗೆ ವಾಗ್ವಾದ ಆರಂಭಿಸುವುದು ನಮ್ಮ ಯುವಕರಿಗೆ ಸಾಧ್ಯವಾಗಬೇಕು. ಬೌದ್ಧಿಕವಾದ ಆರೋಗ್ಯಕರವಾದ ಜಗಳವಿಲ್ಲದೆ, ಪಿತ್ರಾರ್ಜಿತ ಆಸ್ತಿಯಂತೆ ಪರಂಪರೆಯ ತಿಳುವಳಿಕೆಯನ್ನು ಪಡೆದುಕೊಂಡರೆ, ಅದು ಕಟ್ಟಿಕೊಟ್ಟ ಬುತ್ತಿಯಂತೆ. ಆದರೆ ಅದರ ಜತೆ ವಿಮರ್ಶಾತ್ಮಕ ಒಟನಾಟ ಮಾಡುತ್ತಿದ್ದಂತೆ, ತಿಳುವಳಿಕೆಗೆ ನಾವೂ ಸೇರಿಸುವುದಿದೆ ಎಂದು ಹೊಳೆಯತೊಡಗುತ್ತದೆ. ಇಂತಹ ಕಸುವನ್ನು ಕೆಲವಾದರೂ ಯುವಕರು ತೋರುತ್ತಿದ್ದಾರೆ ಎನ್ನುವುದು ನೆಮ್ಮದಿಯ ಸಂಗತಿ.

ಮಂಗಳವಾರ, ಜುಲೈ 26, 2011

ಹೂವಿನ ಹಡಗಲಿಯಲ್ಲಿ ಸವಾಲ್ ಜವಾಬ್

ಪ್ರೊ.ರಹಮತ್ ತರೀಕೆರೆ




(ಪ್ರೊ.ರಹಮತ್ ತರೀಕೆರೆ ಅವರು ಜಾನಪದ ಅಧ್ಯಯನವನ್ನು ಸಾಂಸ್ಕೃತಿಕ ಅಧ್ಯಯನದ ವ್ಯಾಪ್ತಿಯಲ್ಲಿ ವಿಸ್ತರಿಸುತ್ತಿರುವವರಲ್ಲಿ ಪ್ರಮುಖರು. ಅವರ ಸವಾಲ್ ಜವಾಬ್ ಕುರಿತ ಈ ಬರಹ ಜನಪದ ಕಾವ್ಯ ಮೀಮಾಂಸೆಯನ್ನು ಜನಸಮುದಾಯದ ನೆಲೆಯಲ್ಲಿ ಹುಡುಕಲು ಪ್ರಯತ್ನಿಸಿದೆ. ವಿವಿಧ ಧರ್ಮ ಪಂಥದ ಜನ ಹೇಗೆ ಜನಪದ ಕಲಾಪ್ರಕಾರವೊಂದರಲ್ಲಿ ತಮ್ಮ ಗಡಿರೇಖೆಗಳನ್ನು ಮುರಿದು ಕೂಡಿ ಬಾಳುತ್ತಾರೆ ಎನ್ನುವುದನ್ನು ಈ ಬರಹ ಶೋಧಿಸಿದೆ. ಇದು ಪ್ರಜಾವಾಣಿಯ ಮೆ 15 2011 ರ ಸಾಪ್ತಾಹಿಕ ಪುರವಣಿಯ ನಡೆದಷ್ಟೂ ನಾಡು ಅಂಕಣದಲ್ಲಿ ಪ್ರಕಟವಾಗಿತ್ತು. –ಅರುಣ್)



ಬಳ್ಳಾರಿ ಜಿಲ್ಲೆಯ ಹಡಗಲಿಯಲ್ಲಿ ನಡೆಯುವ ರಾಜಾಬಾಗ್ ಸವಾರನ ಉರುಸು ಖ್ಯಾತವಾಗಿದೆ. ಈ ಸೀಮೆಯ ಜನಪ್ರಿಯ ಸಂತರಲ್ಲಿ ಒಬ್ಬನಾದ ರಾಜಾಬಾಗ್ ಸವಾರನು ಸೂಫಿ ಸಂತನೊ ಮಹಾನುಭಾವ ಪಂಥದ ಯೋಗಿಯೊ ಇನ್ನೂ ಅಸ್ಪಷ್ಟ. ಈತ ತಿರುಗಾಡುವಾಗ ಕೂತಿದ್ದ ಜಾಗಗಳು ತೋರುಗದ್ದಿಗೆಗಳಾಗಿದ್ದು, ಅಲ್ಲಿ ಉರುಸು ನಡೆಯುತ್ತದೆ. ಮುಖ್ಯ ದರ್ಗಾ ನವಲಗುಂದ ತಾಲೂಕು ಯಮನೂರಿನಲ್ಲಿದ್ದರೆ, ಹಡಗಲಿಯದು ಅದರ ಶಾಖೆ. ಜನರ ನಂಬಿಕೆ ಪ್ರಕಾರ, ಬಾಗಸವಾರನದು ಅತಿಮಾನುಷ ವ್ಯಕ್ತಿತ್ವ. ಈತ ಚೇಳಿನ ಕಡಿವಾಣ ಹಾಕಿದ ಹುಲಿಸವಾರಿ ಮಾಡುತ್ತ, ಹಾವಿನ ಚಾಟಿ ಹಿಡಿದು ಸಂಚರಿಸುತ್ತಿದ್ದವನು. ಪ್ರಾಣಾಂತಿಕ ಮೃಗಜಂತುಗಳನ್ನು ಹತ್ಯಾರ ಮಾಡಿಕೊಂಡಿರುವ ಈ ಸಂತನ ಉರುಸುಗಳು ಮಾತ್ರ, ಜನರನ್ನು ಜಾತಿಮತಗಳ ನಂಜಿನ ವರ್ತುಲದಾಚೆ ತಂದು ಮಿಲನಿಸುವಂತಹವು.

‘ಬಾಗ್‌ಸವಾರ್’ ಪದದಲ್ಲೇ ಮಿಲನದ ಚಿಹ್ನೆಯಿದೆ. ಸಂಸ್ಕೃತದ ವ್ಯಾಘ್ರವು ಬಾಗ್ ಆಗಿ, ಅದಕ್ಕೆ ಸವಾರನೆಂಬ ಫಾರಸಿ ಶಬ್ದ ಕೂಡಿದೆ.

ಈ ಉರುಸಿನ ವಿಶೇಷತೆಯೆಂದರೆ ಇಲ್ಲಿ ಏರ್ಪಡುವ ‘ಸವಾಲ್ ಜವಾಬ್’ ಹಾಡಿಕೆ. ಇದೊಂದು ಜಿದ್ದಾಜಿದ್ದಿ ಹಾಡಿಕೆ. ಇದು ಉತ್ತರ ಕರ್ನಾಟಕದ ಅನೇಕ ಊರುಗಳಲ್ಲಿ ಜರುಗುತ್ತದೆ. ಆದರೆ ಹಡಗಲಿಯ ವೈಭವವೇ ಬೇರೆ. ಇಲ್ಲಿ ಮೂವತ್ತರಷ್ಟು ಶಾಹಿರರು ಮತ್ತು ಗಾಯಕರು ನೆರೆಯುವರು. ನಮ್ಮ ಎರಡು ಜನಪದ ಹಾಡು ಸಂಪ್ರದಾಯಗಳಲ್ಲಿ, ಗಾಯಕರು ಎದುರಾಳಿಗಳಾಗಿ ನಿಂತು, ಪರಸ್ಪರ ಸವಾಲು ಹಾಕುತ್ತ ವಾಗ್ವಾದ ಮಾಡುವ ವಿನ್ಯಾಸವಿದೆ. ಅವೆಂದರೆ- ಹರದೇಶಿ ನಾಗೇಶಿ ಹಾಗೂ ಸವಾಲ್-ಜವಾಬ್. ಮೊದಲನೆಯದರಲ್ಲಿ ಗಂಡ್ಹೆಚ್ಚೊ ಹೆಣ್ಹೆಚ್ಚೊ ಎಂಬ ವಾಗ್ವಾದವಿದ್ದರೆ, ಎರಡನೆಯದರಲ್ಲಿ ಒಬ್ಬರು ಇಟ್ಟ ಸಮಸ್ಯೆಯನ್ನು ಮತ್ತೊಬ್ಬರು ಬಿಡಿಸುವ ಕ್ರಮವಿದೆ.

ಎರಡೂ ಕಡೆ, ತಂತಮ್ಮ ಪಕ್ಷವನ್ನು ಸಮರ್ಥಿಸಿಕೊಳ್ಳುತ್ತ ಎದುರಾಳಿಗಳ ಮೇಲೆ ಆಕ್ರಮಣ ಮಾಡುವ ಕದನಗುಣವಿದೆ. ಇದೊಂದು ಅಣಕು ಕದನ. ಕೆಲವೊಮ್ಮೆ ಇದು ಖರೇ ಕದನವೂ ಆಗಿರುವುದುಂಟು. ಎದುರಾಳಿಯಿಟ್ಟ ತೊಡಕನ್ನು ಬಿಡಿಸಲು ಸೋತವರು, ಹಾಡಿಕೆ ತ್ಯಜಿಸಿ, ಜೀವಮಾನವಿಡೀ ಗೆದ್ದವರಿಗೆ ಜೀತ ಮಾಡಿದ ನಿದರ್ಶನಗಳಿವೆ. ಇಂಥದೊಂದು ಪ್ರಕರಣದ ಮೇಲೆ ಮಧುರಚೆನ್ನರು ‘ರಮ್ಯಜೀವನ’ ಎಂಬ ಅಪೂರ್ವ ಲೇಖನ ಬರೆದಿದ್ದಾರೆ. ಅದರಲ್ಲಿ ಹಲಸಂಗಿಯ ಪ್ರತಿಭಾವಂತ ಗಾಯಕ ಖಾಜಾಸಾಬನು ಹದರಿಯ ಬಡೇಸಾಬನನ್ನು ಸೋಲಿಸಿದ ಪ್ರಕರಣವಿದೆ.


ಸೋತ ಬಡೇಸಾಬನು ಹಾಡಿಕೆಬಿಟ್ಟು, ಖಾಜಾಸಾಬನನ್ನು ಗುರುವೆಂದು ಧ್ಯಾನಿಸುತ್ತ, ದಾರುಣ ಸ್ಥಿತಿಯಲ್ಲಿ ಪ್ರಾಣಬಿಡುತ್ತಾನೆ. ಬ್ಯಾಡಗಿ ತಾಲೂಕಿನ ಕದರಮಂಡಲಗಿಯಲ್ಲಿ ನಾನು ಭೇಟಿಯಾದ ಪ್ರಸಿದ್ಧ ಗಾಯಕ ಅಲ್ಲಾಬಕ್ಷ ಅವರೂ, ಚಿಕ್ಕಪ್ರಾಯದಲ್ಲೇ ಹಿರಿಯ ಗಾಯಕನೊಬ್ಬನನ್ನು ಸೋಲಿಸಿದವರು. ಸೋತ ಆ ಗಾಯಕ ಸಾಯುವ ತನಕ ಹಾಡಲಿಲ್ಲವೆಂದು, ಅವರು ಜಯದ ಹುಮ್ಮಸ್ಸು ಮತ್ತು ವಿಷಾದ ಬೆರೆತ ದನಿಯಲ್ಲಿ ಹೇಳಿದರು. ಜನಪದ ಕಾವ್ಯಪ್ರಪಂಚ ಇಂತಹ ನೂರಾರು ಕದನ ಕೋಲಾಹಲಗಳಿಂದ ತುಂಬಿದೆ.

ನಾನು ಹಡಗಲಿಗೆ ಹೋದಾಗ ಮುಸ್ಸಂಜೆ ಕಳೆದು, ಉರುಸಿನ ಗದ್ದಲವೆಲ್ಲ ಮುಗಿಯುತ್ತಿತ್ತು. ಜನರು ಊಟಮುಗಿಸಿ ಚಾಪೆ ಚೀಲ ಪಾಣಿಗಳಾಗಿ, ದರ್ಗಾ ಮುಂದಣ ಬಯಲಲ್ಲಿ ಜಾಗ ಹಿಡಿಯುತ್ತಿದ್ದರು. ಬಯಲ ತುದಿಗೆ, ಹಲಗೆ ಹಾಸಿದ ಅಟ್ಟ ಕಟ್ಟಿ, ನಡುವೆ ಮೈಕನ್ನಿಟ್ಟು ಅದರ ಸೊಂಟಕ್ಕೊಂದು ಮಲ್ಲಿಗೆಹಾರ ಹಾಕಲಾಗಿತ್ತು.

ಗಾಯಕರೆಲ್ಲ ಚಹಾ ಕುಡಿದು, ಚುಟ್ಟ ಸೇದಿ, ಹಾಡಿಕೆಗೆ ತಯಾರಾಗುತ್ತಿದ್ದರು. ಉರುಸು ಕಮಿಟಿಗೆ ಸೇರಿದ ಆಜಾನುಬಾಹುಗಳಾದ ಇಬ್ಬರು ಹಿರಿಯರು, ಟಗರುಕೊಂಬಿನಂತೆ ನುಲಿದ ಮೀಸೆಯನ್ನು ತೀಡುತ್ತ, ಅಟ್ಟದ ಬಳಿ ಕುಳಿತಿದ್ದರು. ಅವರು ಹಡಗಲಿಯ ಮಾಜಿ ಪೈಲ್ವಾನರಂತೆ. ಏನಾದರೂ ದಾಂಧಲೆಯಾದರೆ ಪೋಲಿಸರ ನೆರವಿಲ್ಲದೆ ಸ್ವತಃ ನಿಭಾಯಿಸುವಂತಿದ್ದರು.

ರಾತ್ರಿ 11 ಹೊಡೆಯಿತು. 25ರಿಂದ 80ರ ತನಕ ವಯೋಮಾನವಿದ್ದ ಗಾಯಕರೆಲ್ಲ ಅಟ್ಟವನ್ನೇರಿ ಕುಳಿತರು. ಹಡಗಲಿಯ ಆಸುಪಾಸಿನ ಊರುಗಳಿಂದ ಬಂದಿದ್ದ ಅವರು, ಸಣ್ಣ ರೈತರು ಇಲ್ಲವೇ ಸಣ್ಣವ್ಯಾಪಾರ, ದರ್ಜಿ, ಬಡಗಿ, ಗೌಂಡಿ ಕೆಲಸ ಮಾಡಿಕೊಂಡಿದ್ದವರು. ಅವರಲ್ಲಿ ನಾನು ಹಿಂದೆ ಭೇಟಿಯಾಗಿದ್ದ ಸತ್ತೂರ ಇಮಾಂಸಾಬ್, ಕವಲೂರ ಗೌಸ್‌ಸಾಬ್, ಮುಂಡರಗಿಯ ಜಿಂದೀಪೀರಾ ಮೊದಲಾದ ಶಾಹಿರರೂ ಇದ್ದರು. ಹಾಡುಕಟ್ಟುವ ಶಾಹಿರರೇ ಬಂದಿದ್ದ ಕಾರಣ, ಮೇಳಕ್ಕೊಂದು ಖದರು ಬಂದಿತ್ತು.

ಹಾಡಿಕೆ ಶುರುವಾಯಿತು. ವ್ಯವಸ್ಥಾಪಕರು ಒಬ್ಬೊಬ್ಬ ಗಾಯಕನ ಹೆಸರನ್ನು ಹಿಡಿದು ಕರೆದಂತೆ, ಗಾಯಕರೆದ್ದು ತಮ್ಮ ಮೇಳದ ಜತೆ ಹಾಡಲಾರಂಭಿಸಿದರು. ಮುಶಾಯಿರ, ಹಿಂದೂಸ್ತಾನಿ ಸಂಗೀತ ಹಾಗೂ ಖವ್ವಾಲಿಗಳಲ್ಲಿ ಇರುವಂತೆ, ಇಲ್ಲೂ ರಸಿಕರು ನಡುವೆಯೇ ಕಲಾವಿದರನ್ನು ಉತ್ತೇಜಿಸುವ ಪ್ರತಿಕ್ರಿಯೆ ಕೊಡುತ್ತಿದ್ದರು. ಸರಿಯಾಗಿ ಹಾಡದಿದ್ದರೆ ‘ಏ ಸಾಕು ಮಾಡಪ್ಪೋ ಯಪ್ಪಾ ನಿಂದು’ ಎಂದು ತಡೆಯುತ್ತಿದ್ದರು.

ಕವಲೂರ ಗೌಸ್‌ಸಾಬ್ ಬಂದಾಗ ಕೇಕೆ ಸಿಳ್ಳು ಕೇಳಿಬಂದವು. ಗೌಸ್‌ಸಾಬರು ಕವಲೂರಿನ ಪ್ರಖ್ಯಾತ ಶಾಹಿರ ಕುಟುಂಬಕ್ಕೆ ಸೇರಿದ ಆರನೆಯ ತಲೆಮಾರಿನ ಕವಿ. ಅವರ ಹಾಡಿಕೆಯಲ್ಲಿ, ಎಲ್ಲಮ್ಮನಾಟದಲ್ಲಿ ಇರುವಂತೆ ಆಂಗಿಕ ಅಭಿನಯ ಬಹಳ.

ಹೋದ ವರ್ಷ ಕೊಟ್ಟೂರಿನ ಮೊಹರಮ್ಮಿನಲ್ಲಿ ಒಬ್ಬ ಮುದುಕಿ, ಗೌಸ್‌ಸಾಬರು ಹಾಡುವಾಗ ‘ಇವನೊಬ್ಬ ಬಂದ ತಿಕ್ಕ. ಯೇ! ಯಾಕ್ಹಂಗ ನುಲೀತಿಯೋ? ನೆಟ್ಟಗ ನಿಂತು ಹಾಡೊ’ ಎಂದು ಕುಟುಕಿದ್ದಳು. ಆಗ ಕವಲೂರ ಶಾಹಿರನು ತನ್ನ ಹಾಡಲ್ಲೇ ಆಕೆಗೆ ಝಾಡಿಸಿ ಪ್ರತ್ಯುತ್ತರ ನೀಡಿದ್ದರು. ಆದರೆ ಇಲ್ಲಿ ಅಂಥ ಚಕಮಕಿಯೇನೂ ಸಂಭವಿಸಲಿಲ್ಲ. ನಂತರ ಒಬ್ಬ ಹಣ್ಣಾದ ಗಾಯಕ, ಸಾಥಿಯಿಲ್ಲದೆ, ನಡುಗುವ ದನಿಯಲ್ಲಿ ಬಹಳ ಹೊತ್ತು ರಿವಾಯತ್ ಹಾಡಿದ. ಆಗೊಬ್ಬ ಶ್ರೋತೃ ಎದ್ದುನಿಂತು ‘ಏ ಮುದ್ಯಾತ, ಸವಾಲ್ ಜವಾಬಿದ್ದರೆ ಹಾಡು, ಅಲಾವಿ ಪದ ಬ್ಯಾಡ? ಎಂದು ಅಪ್ಪಣೆ ಮಾಡಿದ. ಕೆಲವು ಕೇಳುಗರು ತಮ್ಮ ಪ್ರಿಯ ಗಾಯಕರಿಗೆ ಅವಕಾಶ ಕೊಡಬೇಕು ಎಂದು ಅರಚುತ್ತಿದ್ದರು.


ಮೌಖಿಕ ಕಾವ್ಯ ಸಂಪ್ರದಾಯದಲ್ಲಿ ನಿಜವಾದ ಧಣಿಗಳೆಂದರೆ ಕೇಳುಗರೇ ಇರಬೇಕು. ಅದಕ್ಕೆಂದೇ ಜನಪದ ಗಾಯಕರು ಹಾಡಿನ ಮೊದಲ ಭಾಗದಲ್ಲೇ ದೈವಕ್ಕೆ ಕಡ್ಡಾಯವಾಗಿ ಗೌರವ ಸಲ್ಲಿಸುತ್ತಾರೆ. ಇಲ್ಲಿ ‘ದೈವ’ ಎಂದರೆ ಕೇಳುಗರು; ಊರಿನ ಸಮಸ್ತರು. ದೈವಸ್ಥರ ಮುಂದೆ ತಾನು ಅಲ್ಪಬುದ್ಧಿಯವನೆಂದೂ ಎಳಸು ಬಾಲಕನೆಂದೂ, ತಾನು ತಪ್ಪಿದರೆ ಉದಾರ ಮನಸ್ಸಿನಿಂದ ತಿದ್ದಬೇಕೆಂದೂ ಅವರು ವಿನಂತಿಸುತ್ತಾರೆ. ಜಗತ್ತಿನ ಕಾವ್ಯಪರಂಪರೆಯಲ್ಲಿ ಸಹೃದಯರಿಗೆ ಸಲ್ಲಿಕೆಯಾದ ಆತ್ಯಂತಿಕ ಮನ್ನಣೆಯಿರಬೇಕು ಇದು.

ಹಡಗಲಿಯಲ್ಲಿ ಕೇಳುಗರು, ಬೀಡಿಸೇದಿ ಗಗನಕ್ಕೆ ಹೊಗೆ ಬಿಡುತ್ತ, ಚಹ ಕುಡಿಯುತ್ತ, ಬೇಸರ ಬಂದಾಗ ಅಲ್ಲೇ ಚಾಪೆಯ ಮೇಲೆ ಅಡ್ಡಾಗುತ್ತ, ಒಳ್ಳೇ ಗಾಯಕ ಬಂದಾಗ ಎದ್ದು ಕೂರುತ್ತ, ಬಹುರೂಪಿಗಳಾಗಿದ್ದರು. ಕೆಲವರು ಗಾಯಕರಿಗೆ ಚಹಾ ಮಿರ್ಚಿ ಒಗ್ಗಾಣಿ ಬೀಡಿ ಇತ್ಯಾದಿ ಸೇವೆಯನ್ನೂ ಸಲ್ಲಿಸುತ್ತಿದ್ದರು. ಹಾಡು ಹಿಡಿಸಿದರೆ, ಧಿಗ್ಗನೆದ್ದು ಜೇಬಿನಿಂದ ಹತ್ತರ ನೋಟು ತೆಗೆದು ಗಾಯಕನಿಗೆ ಆಹೇರಿ ಮಾಡುತ್ತಿದ್ದರು. ಅವರಿತ್ತ ನೋಟನ್ನು ಗಾಯಕರು ಕಣ್ಣಿಗೊತ್ತಿಕೊಂಡು ಇಟ್ಟುಕೊಳ್ಳುತ್ತಿದ್ದರು. ಹಾಡಿನ ನಡುವೆಯೇ ಆಹೇರಿ ಬಂದರೆ, ‘ಹೊಳಲಿನ ವೀರಯ್ಯನವರು ಹತ್ತ ರೂಪಾಯಿ ಆಹೇರಾ ಮಾಡ್ಯಾರಲ್ಲಾ’ ಎಂಬ ಸಾಲನ್ನು, ಹಾಡಿನ ಕೊನೆಪ್ರಾಸ ಛಂದಸ್ಸು ಕೆಡದಂತೆ ಸೇರಿಸಿ, ಹಾಡಿಬಿಡುತ್ತಿದ್ದರು; ಕೆಲವರು ‘ಸೋಗಿಯ ಕೊಟ್ರಪ್ಪನವರು ನಮ್ಮ ಅಲ್ಪಕಲೆಯನ್ನು ಕಂಡು ಹತ್ತ ರೂಪಾಯಿ ಕೊಟ್ಟಿರುತ್ತಾರೆ. ಅದು ಹತ್ತ ರೂಪಾಯಲ್ಲ, ಹತ್ತ ಸಾವಿರ ಅಂದುಕೊಂಡು ಅವರಿಗೆ ನನ್ನ ಸಲಾಮು ಮಾಡುತ್ತೇನೆ’ ಎಂದು ಕೃತಜ್ಞತೆ ಸಲ್ಲಿಸುತ್ತಿದ್ದರು. ಕೆಲವರು ಪಿನ್ನಿನಲ್ಲಿ ನೋಟನ್ನು ಸಿಕ್ಕಿಸಿಕೊಂಡು ತಂದು, ಗಾಯಕರ ಅಂಗಿಯ ಮೇಲೆ, ರಾಷ್ಟ್ರಪತಿಗಳು ಪದ್ಮಭೂಷಣದ ಪದಕವನ್ನು ಸಿಕ್ಕಿಸುವಂತೆ ಸಿಕ್ಕಿಸುತ್ತಿದ್ದರು. ಗಾಯಕರೊ, ಅದನ್ನು ಸೈನ್ಯದ ಜನರಲ್‌ಗಳು ಎದೆಮೇಲೆ ಪದಕಗಳನ್ನು ಧರಿಸುವಂತೆ ಧರಿಸಿ ಮೆರೆಸುತ್ತ, ಹಾಡುತ್ತಿದ್ದರು.

ಕೆಲವು ರಸಿಕರು ತಮ್ಮ ಬೆರಳಲ್ಲಿದ್ದ ಉಂಗುರವನ್ನೇ ಕಳಚಿ ಆಹೇರಿ ಮಾಡಿರುವ, ತೋಡೆ ಮಾಡಿಸಿ ತೊಡಿಸಿರುವ, ಹೊಲ ಬರೆದುಕೊಟ್ಟಿರುವ ನಿದರ್ಶನಗಳಿವೆ. ರೋಣ ತಾಲೂಕಿನ ಪ್ರಸಿದ್ಧ ಶಾಹಿರರಾಗಿದ್ದ ಮೆಣಸಿಗಿಯ ರುದ್ರಗೌಡರಿಗೆ ಅಭಿಮಾನಿಯೊಬ್ಬರು, ಚಿನ್ನದ ಮೆಡಲನ್ನೇ ಆಹೇರಿ ಮಾಡಿದ್ದರು. ‘ಅಬ್ದುಲ್ ಹಕ್ ಸಾಹೇಬರ ನೋಡಿ ಮಿಗಿಲಾ, ಭದ್ರ ಮೊಹರ ಮಾಡಿಸಿಕೊಟ್ಟಾರಾ, ತಮ್ಮ ಹೆಸರ ಹಾಕಿಸಿ ಮಿಡಲಾ’ ಎಂದು ಅದನ್ನು ಉಲ್ಲೇಖಿಸುತ್ತ ರುದ್ರಗೌಡರು ಹಾಡುತ್ತಿದ್ದರು.

ನಾನು ಖದರಮಂಡಲಗಿ ಅಲ್ಲಾಬಕ್ಷರನ್ನು ಕಂಡಾಗ, ಅವರು ತಮಗೆ ಆಹೇರಿಯಾಗಿ ಬಂದ ವಸ್ತುಗಳನ್ನೆಲ್ಲ ತೋರಿಸಿದರು. ಕಷ್ಟಕಾಲದಲ್ಲಿ ಮಾರಿದ್ದರಿಂದ ಬೆಳ್ಳಿತೋಡೆಯಿರಲಿಲ್ಲ. ಆದರೆ ನೀರಿನ ಹಂಡೆ ಇನ್ನೂಇತ್ತು.

ಹಡಗಲಿಗೆ ಬಂದಿದ್ದ ಕವಿಗಳು, ಉರುಸುಗಳಲ್ಲಿ ಮಾತ್ರವಲ್ಲದೆ, ಮೊಹರಮ್ಮಿನ ಖತಲರಾತ್ರಿಯಲ್ಲೂ ಸವಾಲ್ ಜವಾಬ್ ಮೇಳಗಳಲ್ಲೂ ಹೋಗಿ ಹಾಡುವವರು. ಹಡಗಲಿಗೆ ಬಂದಿದ್ದ ಹ್ಯಾರಡದ ಚಮನ್‌ಸಾಹೇಬರು, ಯುವಮೇಳಗಳಲ್ಲೂ ರೇಡಿಯೊ ಟೀವಿಗಳಲ್ಲೂ ಹೋಗಿ ಹಾಡಿದವರು. ಅದರೂ ಸಾಮಾನ್ಯವಾಗಿ ಈ ಗಾಯಕರು ತಾವು ಹಾಡಿಕೆಗಾಗಿ ತಿರುಗುವ ಒಂದು ವಲಯವನ್ನು, ಹುಲಿಗಳು ತಮ್ಮ ಬೇಟೆಗೊಂದು ಸೀಮೆ ನಿರ್ಮಿಸಿಕೊಂಡಂತೆ, ನಿರ್ಮಿಸಿಕೊಂಡಿರುತ್ತಾರೆ. ಒಂದು ವಲಯದವರು ಇನ್ನೊಂದು ವಲಯದ ಎಲ್ಲೆಯನ್ನು ಮೀರುವುದಿಲ್ಲ. ಕರ್ನಾಟಕದಲ್ಲಿ ಇಂತಹ 10-15 ವಲಯಗಳಿದ್ದು, ಪ್ರತಿವಲಯವೂ ಪ್ರಸಿದ್ಧ ಹಾಡುಗಾರರನ್ನು ಸೃಷ್ಟಿಸಿದೆ. ಸೇಡಂ ಚಿತಾಪುರ ವಲಯದಲ್ಲಿ ಅರ್ಜುನಪ್ಪ ದಂಡೋತಿ ಎಂಬ ದೊಡ್ಡ ಗಾಯಕ ಆಗಿಹೋದರು. ಈಗ ಬದಾಮಿ ಭಾಗದಲ್ಲಿ ಕೆರೂರು ನದಾಫಸಾಹೇಬರು ಖ್ಯಾತರಾಗಿದ್ದಾರೆ.

ಜನಪದ ಕವಿಗಳನ್ನು ಕುರಿತು ಕನ್ನಡದ ಮೊದಲ ಕೃತಿಕಾರ, ಕವಿರಾಜಮಾರ್ಗಕಾರನು, ‘ಕುರಿತೋದದೆಯುಂ ಕಾವ್ಯಪ್ರಯೋಗ ಮತಿಗಳ್’ ಎಂದು ಕೊಂಡಾಡಿರುವನಷ್ಟೆ. ಆದರೆ ಈ ವ್ಯಾಖ್ಯಾನ ಈ ಶಾಹಿರರಿಗೆ ಅನ್ವಯಿಸುವುದಿಲ್ಲ. ಕಾರಣ, ಈ ಶಾಹಿರರು ಸನ್ನಿವೇಶಕ್ಕೆ ತಕ್ಕಂತೆ ನಿಂತಲ್ಲೇ ಪದಕಟ್ಟಿ ಹಾಡಬಲ್ಲ ಆಶುಕವಿಗಳಾದರೂ, ಇವರಿಗೆ ಪುರಾಣ ಗ್ರಂಥಗಳ ಓದಿನ ಹಿನ್ನೆಲೆಯಿದೆ. ತಾವು ರಚಿಸಿದ ಪದವನ್ನು ಬರೆದಿಡುವ ಅಕ್ಷರ ಸಂಸ್ಕೃತಿಯೂ ಇದೆ. ಹಡಗಲಿಯಲ್ಲಿ ಬಹುತೇಕ ಶಾಹಿರರು ನೋಟುಬುಕ್ಕನ್ನು ಹಿಡಿದೇ ಹಾಡಿದರು. ಸಾಮಾನ್ಯವಾಗಿ ಈ ಶಾಹಿರರು ತಾವು ರಚಿಸಿದ್ದನ್ನು, ಶಿಷ್ಯರಿಗಲ್ಲದೆ ಉಳಿದವರಿಗೆ ತೋರಿಸುವುದಿಲ್ಲ. ಪದಗಳನ್ನು ತಮಗೆ ಮಾತ್ರ ಅರ್ಥವಾಗುವಂತೆ ಮೋಡಿಯಲ್ಲಿ ಬರೆದುಕೊಂಡಿರುವುದೂ ಉಂಟು. ಇದರ ಉದ್ದೇಶ, ತಾವು ಒಡ್ಡುವ ಸವಾಲು ಎದುರಾಳಿಗೆ ತಿಳಿಯದಂತೆ ರಹಸ್ಯ ಕಾಪಾಡಿಕೊಳ್ಳುವುದು. ಹಡಗಲಿಯಲ್ಲಿ ಒಡ್ಡಲಾದ ಕೆಲವು ಸವಾಲುಗಳು ಹೀಗಿದ್ದವು: ಮೆಹಬೂಬ ಶರಣರಿಗೆ ವಿದ್ಯೆ ಕಲಿಸಿದ ಗುರುವಿನ ಹೆಸರೇನು? ಪೈಗಂಬರರ ನಿಕಾ ಓದಿಸಿದ ಮೌಲವಿಯ ಹೆಸರೇನು? ಅಶೋಕವನದಲ್ಲಿ ಯಾವ ಮರದ ಕೆಳಗೆ ಸೀತೆ ಕುಳಿತಿದ್ದಳು? ರಾಮನಿಗೆ ನದಿ ದಾಟಿಸಿದ ಅಂಬಿಗನ ಹೆಸರು ಏನು?

ಸವಾಲ್ ಜವಾಬ್ ಹಾಡಿಕೆಯಲ್ಲಿ ಶಾಹಿರರು ಮತ್ತು ಗಾಯಕರ ನಡುವೆ ಒಂದು ಸಣ್ಣಭೇದವಿದೆ. ವಸ್ತಾದಿ (ಉಸ್ತಾದ್) ಎಂದು ಕರೆಯಲಾಗುವ ಶಾಹಿರರಿಗೆ ಗುರುವಿನ ಸ್ಥಾನಮಾನ. ಇವರು ಪದಕಟ್ಟಿ, ಅದಕ್ಕೆ ಧಾಟಿ ಕೂಡಿಸಿ, ಶಿಷ್ಯರಿಗೆ ಕಲಿಸುವರು. ಶಿಷ್ಯರು ಗುರುವಿನ ಹಿಂದೆ ಹಿಮ್ಮೇಳದಲ್ಲಿ ಹಾಡಿಕೊಂಡು ತಿರುಗುತ್ತ, ಎಷ್ಟೋ ವರ್ಷಗಳ ಬಳಿಕ, ಸ್ವತಂತ್ರ ಹಾಡಿಕೆ ಶುರುಮಾಡುವರು. ಹಡಗಲಿಯಲ್ಲಿ ಸತ್ತೂರು ಇಮಾಂಸಾಹೇಬರು, ಕಾನಳ್ಳಿ ಮುಸ್ತಫಾ ಮೊದಲಾದ ಶಿಷ್ಯರ ಜತೆ, ತುಂಡುದೊರೆಗಳು ಸೈನ್ಯವನ್ನು ಬೆನ್ನಹಿಂದೆ ಕಟ್ಟಿಕೊಂಡು ರಣರಂಗದಲ್ಲಿ ತಿರುಗುವಂತೆ ತಿರುಗುತ್ತಿದ್ದರು.

ಸವಾಲ್ ಜವಾಬ್ ಪದಗಳ ರೋಚಕ ಭಾಗವೆಂದರೆ, ಹಾಡುಗಾರರು ಎದುರಾಳಿಯನ್ನು ನಿಂದಿಸುವುದು; ಎದುರಾಳಿಯ ಹಾಡು ಕರ್ಣಕಠೋರ ಆಗಿದೆಯೆಂದೂ, ಅದರಲ್ಲಿ ಸ್ವಂತಿಕೆಯಿಲ್ಲವೆಂದೂ, ಆತ ಗುರುವಿನಿಂದ ಶಾಸ್ತ್ರೋಕ್ತವಾಗಿ ಕಲಿತಿಲ್ಲವೆಂದೂ ಟೀಕೆಗಳಿರುತ್ತವೆ. ಕೆಲವೊಮ್ಮೆ ಈ ಟೀಕೆಗಳು ಬೈಗುಳದ ಮಟ್ಟಕ್ಕೂ ಇಳಿಯುವುದುಂಟು. ಬಯಲಾಟ-ಯಕ್ಷಗಾನಗಳಲ್ಲಿ ವೀರರು ಯುದ್ಧಕ್ಕೆ ಮೊದಲು ತಂತಮ್ಮ ಬಡಾಯಿ ಕೊಚ್ಚಿಕೊಳ್ಳುವುದನ್ನು ನೆನಪಿಸುವ ಈ ವಾಕ್ಸಮರವು, ಹಾಡಿಕೆಯನ್ನು ನಾಟಕೀಯಗೊಳಿಸುತ್ತದೆ; ಬಹುಶಃ ಕೇಳುಗರು ನಿದ್ದೆಗೆ ಜಾರದಂತೆ ಎಚ್ಚರದಲ್ಲೂ ಇಡುತ್ತದೆ. ಪ್ರಾಚೀನ ಕವಿಗಳಲ್ಲೂ ಸ್ವಕವಿ ಪ್ರಶಂಸೆ ಮತ್ತು ಕುಕವಿ ನಿಂದೆಯ ಪದ್ಧತಿಯಿದೆಯಷ್ಟೆ. ಪ್ರಾಚೀನರೇಕೆ, ಆಧುನಿಕ ಕವಿಯಾದ ಅಡಿಗರು ಕೆ.ಎಸ್.ನರಸಿಂಹಸ್ವಾಮಿ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದರೆನ್ನಲಾಗುವ ‘ಪುಷ್ಟಪಕವಿಯ ಪರಾಕು’ ಪದ್ಯದಲ್ಲಿರುವ ಟೀಕೆಗಳು ಏನು ಕಡಿಮೆ ಕಹಿಯಾಗಿವೆಯೇ? ಉರುಸುಗಳಲ್ಲಿ ಜಿದ್ದಾಜಿದ್ದಿ ಖವಾಲಿ ಏರ್ಪಡಿಸುವ ಸಂಘಟಕರು, ಮುದ್ದಾಮಾಗಿ ಪರಸ್ಪರ ಸೆಣಸುವ ತಂಡಗಳನ್ನೇ ಕರೆಯಿಸುವುದುಂಟು. ಅದರಂತೆ ಹಡಗಲಿಗೂ ಪರಸ್ಪರ ಹುರುಡಿಸುವ ಮೇಳಗಳು ಬಂದಿದ್ದವು. ಕೆಲವರಂತೂ ‘ಸವಾಲು ಕೇಳಿದರೆ ಜವಾಬು ಇಲ್ಲ ಕಡೀತಾನರಿ ಹಲ್ಲಾ, ಹ್ಞಾಂ! ತುಂಬಿದ ಕೊಡಾ ತುಳಕುವುದಿಲ್ಲಾ’ ಎಂದು ಎದುರಾಳಿ ನಿಂದೆಯಿಂದಲೇ ಹಾಡನ್ನು ಶುರುಮಾಡುತ್ತಿದ್ದರು. ದನಿಗೆ ವ್ಯಂಗ್ಯವನ್ನು ಬೆರೆಸಿ, ಎದುರಾಳಿಯತ್ತ ಕೈತೋರಿಸಿ ಗೇಲಿ ಮಾಡುತ್ತ ಅವರು ಹಾಡುತ್ತಿದ್ದರು. ಚಮಕಿ ಕೆಲಸ ಮಾಡಿದ ಮಿರುಗುವ ಸಾಲ್ಟಿನ್ ಅಂಗಿತೊಟ್ಟು, ಶೋಕಿಲಾಲನಂತೆ ಕಂಗೊಳಿಸುತ್ತಿದ್ದ ಕವಲೂರ ಗೌಸಸಾಹೇಬರಂತೂ, ಎದುರಾಳಿಗಳನ್ನು ಬಗೆಬಗೆಯಲ್ಲಿ ಚುಚ್ಚಿ ರಂಜಿಸುತ್ತಿದ್ದರು. ಈ ಗಾಯಕರು ಸಾಮಾನ್ಯವಾಗಿ ಬಯಲಾಟದ ನಟರೂ ಆಗಿರುವುದರಿಂದ ಅವರಲ್ಲಿ ಸಹಜವಾಗಿ ಅಭಿನಯವಿದೆ. ಇದಕ್ಕೆ ಹೋಲಿಸಿದರೆ, ಹರದೇಶಿ-ನಾಗೇಶಿ ಹಾಡಿಕೆಯಲ್ಲಿ ಪುರುಷವಾದ-ಸ್ತ್ರೀವಾದಗಳ ಮುಖಾಮುಖಿ ಇದ್ದು, ಅಲ್ಲಿ ಸಂಘರ್ಷ ಇನ್ನೂ ತೀಕ್ಷ್ಣವಾಗಿರುತ್ತದೆ; ಭಾಷೆ ಮತ್ತು ಆಂಗಿಕ ಅಭಿನಯಗಳು ಒರಟಾಗಿದ್ದು ‘ಲೈಂಗಿಕ’ ಆಯಾಮ ಪಡೆದಿರುತ್ತವೆ.

ಹಡಗಲಿಯಲ್ಲಿ ರಾತ್ರಿಯೆಲ್ಲ ತುಂಗಭದ್ರೆಯ ಹರಿವಿನಂತೆ ಹಾಡಿನ ಹೊಳೆ ಹರಿಯಿತು. ಕೆಲವರು ಇಂಪಾಗಿ ಹಾಡಿದರು; ಕೆಲವರು ದೊಡ್ಡದನಿಯಲ್ಲಿ ನೀರಸವಾಗಿ ಹಾಡಿದರು. ಪ್ರತಿಯೊಬ್ಬರಿಗೂ ಬಹುಶಃ ಆ ರಾತ್ರಿ ತಲಾ ಎರಡೆರಡು ಸಲ ಛಾನ್ಸ್ ಸಿಕ್ಕಿರಬೇಕು ಅಷ್ಟೆ. ಅಷ್ಟರಲಿ ಮೂಡಣದಲ್ಲಿ ಬೆಳಕಿನ ಚಿಹ್ನೆ ಕಾಣಲಾರಂಭಿಸಿದವು. ಇದು ಹಾಡಿಕೆ ಮುಗಿಸುವ ಸೂಚನೆ. ಮೊದಲ ನಮಾಜಿನ ಕರೆ ಕೂಗುವ ಮುನ್ನ ಕಾರ್ಯಕ್ರಮ ಮುಗಿಯಲೇಬೇಕು. ಚದುರಿಹೋಗಿದ್ದ ಗಾಯಕರೆಲ್ಲ ಮಂಚದ ಮೇಲೆ ನೆರೆದರು.

ರಾತ್ರಿಯೆಲ್ಲ ನಡೆದ ಕದನ ಮರೆತವರಂತೆ ಒಟ್ಟಿಗೆ ನಿಂತು ಏಕಸ್ವರದಲ್ಲಿ ಸಲಾಂಪದ ಹಾಡಿದರು. ಅಲ್ಲೇ ಪಕ್ಕದಲ್ಲಿ ಫೋಟೊ ತೆಗೆಯುತ್ತ ನಿಂತಿದ್ದ ನನ್ನನ್ನು, ಒಬ್ಬ ಗಾಯಕ ಸನ್ನೆಯಿಂದ ಕರೆದು, ಕೈನೀಡಿ ಅಟ್ಟದ ಮೇಲೆ ಎಳೆದುಕೊಂಡನು. ಮತ್ತೊಬ್ಬ ಗಾಯಕ ತನ್ನ ಕೊರಳಲ್ಲಿದ್ದ ಹಾರವನ್ನು ತೆಗೆದು ನನಗೆ ಹಾಕಿದನು. ಮಂಗಳ ಹಾಡಿದ ಮೇಲೆ ಗಾಯಕರೆಲ್ಲ ಅಪ್ಪಿಗೆ ಮಾಡಿ, ಹೋಟೆಲಿಗೆ ಹೋಗಿ ಚಹ ಕುಡಿದು, ತಂತಮ್ಮ ಊರುಗಳಿಗೆ ಚದುರಿಹೋದರು.

18 ವರ್ಷಗಳ ಹಿಂದೆ ಹಡಗಲಿಗೆ ಉರುಸಿಗೆ ನಾನು ಬಂದಿದ್ದೆ. ಆಗಿದ್ದ ಎಷ್ಟೋ ಗಾಯಕರು ಈಗಿರಲಿಲ್ಲ. ಮದಿಸಿದ ಸಲಗದಂತೆ ತಮ್ಮ ಅಭಿಮಾನಿಗಳ ಗುಂಪು ಕಟ್ಟಿಕೊಂಡು ಅಡ್ಡಾಡುತ್ತಿದ್ದ ಅದ್ಭುತ ಗಾಯಕ, ಇಟಗಿ ಕಾಸಿಂಸಾಹೇಬರು ತೀರಿಕೊಂಡಿದ್ದರು; ವಯಸ್ಸಾದ ಕಾರಣದಿಂದ ಹೊಳಲಿನ ಶಾಹಿರ್ ಫಕ್ರುದ್ದೀನ್ ಸಾಹೇಬರು ಬಂದಿರಲಿಲ್ಲ. ಆದರೇನಂತೆ, ಹರೆಯದ ಅನೇಕ ತರುಣರು ಹೊಸದಾಗಿ ಪದ ಕಲಿತು ಬಂದಿದ್ದರು. ಹೊಳೆ ತನ್ನ ಹರಿವು ನಿಲ್ಲಿಸಿಲ್ಲ ಅನಿಸಿತು.

ಆದರೆ ಅದರ ಹರಿವಿಗೆ ಅಲ್ಲಲ್ಲಿ ತಡೆಗಳು ಉಂಟಾಗುತ್ತಿವೆ ಎಂದು- ಒಬ್ಬ ಗಾಯಕ ತನ್ನ ಅಳಲನ್ನು ತೋಡಿಕೊಂಡ ಬಳಿಕ- ಅನಿಸಿತು. ಬಯಲಾಟದ ಕಲಾವಿದನೂ ಆಗಿದ್ದ ಆತ ಮದ್ದಲೆ ಬಾರಿಸುವುದರಲ್ಲಿ ನುರಿತವ. ಅವನ ಮಗ, ಉರುಸು ಮತ್ತು ಮೊಹರಂ ನಿಷೇಧಿಸುವ ಇಸ್ಲಾಮಿಕ್ ಪಂಥಕ್ಕೆ ಸೇರಿದವನಂತೆ; ಅವನು ‘ಅಪ್ಪಾ, ಬೇಕಾದರೆ ಸವಾಲ್ ಜವಾಬ್ ಹಾಡು; ಬಯಲಾಟ ಬೇಡ’ ಎಂದು ತಾಕೀತು ಮಾಡಿರುವನಂತೆ.
ಇದೇನು ಸೋಜಿಗವಲ್ಲ. ಉರುಸು- ಮೊಹರಂಗಳನ್ನು ಮನ್ನಿಸದ ಧಾರ್ಮಿಕ ಮೂಲಭೂತವಾದವು ಊರೂರುಗಳಲ್ಲಿ ಶುರುವಾಗಿದೆ. ಇದನ್ನೆಲ್ಲ ನೋಡುವಾಗ ಹುಲಿಸವಾರಿ ಮಾಡಿರುವುದು ರಾಜಾಬಾಗ್ ಸವಾರನಲ್ಲ; ಅವನ ಉರುಸಿನಲ್ಲಿ ಹಾಡುತ್ತಿರುವ ಈ ಗಾಯಕರು ಅನಿಸಿತು. ಪ್ರಶ್ನೆಯೆಂದರೆ, ಈ ಹಾಡು/ಕಾವ್ಯ ಸಂಪ್ರದಾಯವು, ತಾನೇರಿರುವ ಹುಲಿಯನ್ನು ತನ್ನ ಕಸುವಿನಿಂದ ಪಳಗಿಸುತ್ತದೆಯೊ ಅಥವಾ ಹುಲಿಯೇ ಇದನ್ನು ಕೆಳಕ್ಕೆ ಕೆಡವಿ ತಿಂದುಹಾಕುತ್ತದೆಯೊ?

ಈ ಸವಾಲಿಗೆ ಕಾಲವೇ ಜವಾಬು ಕೊಡಬೇಕು.

ಸೋಮವಾರ, ಜುಲೈ 25, 2011

ಡಾ.ಟಿ.ಆರ್. ಚಂದ್ರಶೇಖರ್ ಅವರೊಂದಿಗೆ ಮಾತುಕತೆ



ಡಾ.ಟಿ.ಆರ್. ಚಂದ್ರಶೇಖರ್ ಅವರು ಅಭಿವೃದ್ಧಿ ಅಧ್ಯಯನಗಳನ್ನು ಕರ್ನಾಟಕದ ಪ್ರಾದೇಶಿಕ ಅಭಿವೃದ್ಧಿಯ ನೆಲೆಯಲ್ಲಿ ನಿರ್ವಚಿಸುತ್ತಿರುವವರಲ್ಲಿ ಪ್ರಮುಖರು. ಇವರು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಈ ನಾಡಿನ ಎಲ್ಲ ಬಗೆಯ ಆತಂಕಕಾರಿ ಬೆಳವಣಿಗೆಗೆ ಭಿನ್ನವಾಗಿ ದ್ವನಿಯಾಗುತ್ತಿರುವವರು. ನಮ್ಮಂಥಹ ಯುವ ಸಮುದಾಯವನ್ನು ನಾಚಿಸುವಂತೆ ದಣಿವರಿಯದೆ ನಿರಂತರ ದುಡಿಮೆಯಲ್ಲಿ ತೊಡಗಿಸಿಕೊಂಡ ವಿದ್ವಾಂಸರು. ವಚನ ಚಳವಳಿಯನ್ನು, ಪ್ರಾದೇಶಿಕ ಅಸಮಾನತೆಯನ್ನು, ಬಡಜನರ ಶೋಚನೀಯ ಸ್ಥಿತಿಗಳನ್ನು ಅಭಿವೃದ್ಧಿ ಅಧ್ಯಯನದ ವಿಧಾನಗಳಲ್ಲಿ ಭಿನ್ನವಾಗಿ ಎದುರುಗೊಳ್ಳುತ್ತಿರುವವರು. ಕನ್ನಡ ವಿಶ್ವವಿದ್ಯಾಲಯದ ದೇಸಿ ಆಲೋಚನ ಕ್ರಮವನ್ನು ಅಭಿವೃದ್ಧಿ ಅಧ್ಯಯನಗಳ ಮೂಲಕ ಹೊಸ ನೆಲೆಗಟ್ಟನ್ನು ಕೊಡಲು ಶ್ರಮಿಸುತ್ತಿರುವವರು. ಅವರ ಬರಹಗಳಲ್ಲಿರುವ ಪ್ರಭುತ್ವದ ವಿರುದ್ಧದ ಕಿಡಿಗಳು ನನ್ನಂಥವರಿಗೆ ಹೊಸ ಬೆಳಕಾಗುತ್ತಿವೆ. ಅವರು ಜಾನಪದ ಅಧ್ಯಯನ, ಅನ್ವಯ, ಮತ್ತು ಸದ್ಯದ ಮುಖಾಮುಖಿ ಕುರಿತಂತೆ ಒಳನೋಟಗಳಿರುವ ಮಾತುಕತೆ ಇಲ್ಲಿದೆ. ಈ ಮಾತುಕತೆಯಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡ ಅವರಿಗೆ ಕನ್ನಡ ಜಾನಪದ ಬ್ಲಾಗ್ ಪರವಾಗಿ ಧನ್ಯವಾದಗಳು



ಅರುಣ್: ಸಾರ್ ಇಂದು ಅಭಿವೃದ್ಧಿ ಎನ್ನುವ ಪದವೇ ಬಂಡವಾಳಶಾಹಿಗಳ ಪರವಾದ ಪದ ಎನ್ನುವಂತಿರುವ ಈ ಹೊತ್ತಲ್ಲಿ ಅದೇ ಪದವನ್ನು ಜನಸಾಮಾನ್ಯರ ಒಳಿತಿನ ಅಭಿವೃದ್ಧಿಯ ನೆಲೆಯಲ್ಲಿ ಹೊಸ ಅರ್ಥವನ್ನು ಕೊಡುತ್ತಿದ್ದೀರಿ. ಈ ನೆಲೆಯಲ್ಲಿ ನೀವು ಜಾನಪದವನ್ನು ಹೇಗೆ ಅರ್ಥೈಸಲು ಪ್ರಯತ್ನಿಸುತ್ತೀರಿ?

ಡಾ.ಟಿ.ಆರ್.ಸಿ: ನಿಜ, ಅಭಿವೃದ್ಧಿ ಎಂಬ ನುಡಿಯು ಬಂಡವಾಳಶಾಹಿ-ಪರವಾದುದು. ಅದರಿಂದ ಅದನ್ನು ರಕ್ಷಿಸುವುದು ಹೇಗೆ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ. ಹೊಸ ಅರ್ಥ ಮಾತ್ರವಲ್ಲ. ಅದಕ್ಕೆ ಹೊಸ ಸಿದ್ಧಾಂತವನ್ನೇ ರೂಪಿಸಬೇಕಾಗಿದೆ. ಬಹಳ ಮುಖ್ಯವಾದ ಸಂಗತಿಯೆಂದರೆ ಅಭಿವೃದ್ಧಿಯನ್ನು ಸ್ಥಳೀಯತೆಗೆ ನಿಷ್ಠವನ್ನಾಗಿ ಮಾಡಬೇಕು. ಅದು ಪ್ರಧಾನವಾಗಿ ಪ್ರದೇಶ-ನಿರ್ದಿಷ್ಟವಾಗಿರಬೇಕು. ಆಗ ಸಹಜವಾಗಿ ಅದು ಸ್ಥಳಿಯ ಕಲೆ, ಕಾಯಕ, ದುಡಿಮೆ, ಸಂಪನ್ಮೂಲ, ಕಸುಬುದಾರಿಕೆ, ವಾಸ್ತು, ಸಂಸ್ಕೃತಿ ಹೀಗೆ ಎಲ್ಲವನ್ನೂ ಒಳಗೊಳ್ಳುವಂತಾಗುತ್ತದೆ. ಜಾನಪದವೆಂಬುದು ನನಗೆ ತೋರಿದಂತೆ ಸ್ಥಳಿಯ ಬದುಕನ್ನು ಕುರಿತ ಅಧ್ಯಯನ. ಸ್ಥಳೀಯ ತಂತ್ರಜ್ಞಾನ, ಸ್ಥಳೀಯ ಸಂಪನ್ಮೂಲ, ಸ್ಥಳೀಯ ಬಂಡವಾಳ, ಸ್ಥಳೀಯ ಕುಶಲತೆ, ಸ್ಥಳೀಯ ಶಿಕ್ಷಣ, ಸ್ಥಳೀಯ ಮನೆ ಕಟ್ಟುವ ತಂತ್ರ, ಜಾನುವಾರುಗಳನ್ನು ಸಾಕುವ ಕ್ರಮ ಮುಂತಾದವುಗಳನ್ನು ಕುರಿತ ಅಧ್ಯಯನವನ್ನು ನಾನು ಜಾನಪದ ಅಧ್ಯಯನವೆಂದು ಕರೆಯಲು ಇಷ್ಟಪಡುತ್ತೇನೆ. ಇಲ್ಲಿ ಒಂದು ಎಚ್ಚರ: ಸ್ಥಳಿಯತೆ ಎಂದಾಗ ಅದು ಬಾಹ್ಯದಿಂದ ಸಂಪೂರ್ಣವಾಗಿ ಪ್ರತ್ಯೇಕಗೊಂಡಿರಬೇಕಿಲ್ಲ. ವಿಶ್ವಾತ್ಮಕತೆ(ಅಖಂಡತೆ) ಮತ್ತು ವಿಶಿಷ್ಟತೆಗಳನ್ನು(ಖಂಡ ನೆಲೆಗಟ್ಟು) ಹೇಗೆ ಸಂಯೋಜಿಸಿಕೊಳ್ಳಲಾಗುತ್ತದೆ ಎಂಬುದು ಇಲ್ಲಿ ಮುಖ್ಯ. ಮತ್ತೊಂದು ಎಚ್ಚರವನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು: ಅದೇನೆಂದರೆ ನಮ್ಮ ಜಾನಪದ ಎಂಬುದು ಅನೇಕ ಅಮಾನವೀಯ ಸಂಗತಿಗಳನ್ನು ಕಾಲಕ್ರಮೇಣ ಬೆಳೆಸಿಕೊಂಡು ಬಿಟ್ಟಿದೆ. ಅವುಗಳ ಬಗ್ಗೆ ನಾವು ಜಾಗೃತರಾಗಿರಬೇಕು. ಸ್ವ-ವಿಮರ್ಶೆ/ಆತ್ಮ-ನಿರೀಕ್ಷಣೆ ಎಂಬುದು ಇಂದಿನ ಅಧ್ಯಯನಗಳ ಮೂಲದಲ್ಲಿರಬೇಕಾದ ಒಂದು ಸಂಗತಿ. ಪರಂಪರೆಯ ವೈಭವೀಕರಣವಾಗಲಿ ಅಥವಾ ಆಧುನಿಕತೆ ಬಗ್ಗೆ ವಿಮರ್ಶಾ-ರಹಿತ ಸ್ವೀಕರಣೆಯಾಗಲಿ ಅಪೇಕ್ಷಣೀಯವಲ್ಲ.


ಅರುಣ್: ಸಾರ್, ನೀವು ನಿಮ್ಮ ಬರಹಗಳು ಬಹುಪಾಲು ಕ್ಷೇತ್ರ ಕಾರ್ಯ ಮತ್ತು ಸರಕಾರದ ಯೋಜನೆಯ ವಾಸ್ತವದ ಅನುಷ್ಠಾನದ ನೆಲೆಯಲ್ಲಿ ಆಲೋಚಿಸುತ್ತಿದ್ದೀರಿ. ಹಾಗಾಗಿ ಜಾನಪದ ವೃತ್ತಿ ಮತ್ತು ನಂಬಿಕೆಯ ಜಗತ್ತನ್ನು ಆಧರಿಸಿ ಅಭಿವೃದ್ದಿ ಯೋಜನೆಗಳನ್ನು ರೂಪಿಸಲು ಸಾದ್ಯವೆ?

ಡಾ..ಟಿ.ಆರ್.ಸಿ: ಜಾನಪದ ಅಧ್ಯಯನ ಎಂದರೆ ಅದು ಇನ್ವೆರಿಯಬಲಿ ಕ್ಷೇತ್ರ ಅಧ್ಯಯನವೇ ಆಗಿರುತ್ತದೆ. ಅದಕ್ಕೆ ಬೇರೆ ಬದಾರಿಯೇ ಇಲ್ಲ. ಜಾನಪದ ವೈದ್ಯ, ಜಾನಪದ ಆಟಗಳು, ಜಾನುವಾರುಗಳ ಸಾಕಣಿಕೆ, ಜಾನಪದ ಕರಕುಶಕಕಲೆ, ಮಹಿಳೆಯರ ಜಾನಪದ ಹಸೆಯ ಕಲೆ, ಸ್ಥಳಿಯ ತಿನುಸುಗಳನ್ನು ಸಿದ್ದಪಡಿಸುವುದು, ಕೃಷಿ, ಮೀನುಗಾರಿಕೆ, ಕೋಳಿ ಸಾಕಣಿಕೆ, ಹಂದಿ ಸಾಕಣಿಕೆ ಇತ್ಯಾದಿ ಇತ್ಯಾದಿ ಸಂಗತಿಗಳನ್ನು ಒಳಗು ಮಾಡಿಕೊಂಡು ಜಾನಪದ ಅಧ್ಯಯನಗಳನ್ನು ನಡೆಸಬಹುದು. ನನ್ನನ್ನು ಹೀಗೆ ಒಂದೇ ಸಾರಿ ಜಾನಪದವನ್ನು ಆದರಿಸಿಕೊಂಡು ಅಭಿವೃದ್ಧಿ ಯೋಜನೆಗಳನ್ನು ತಿಳಿಸಿ ಎಂದರೆ ಸಾಧ್ಯವಾಗುವುದಿಲ್ಲ. ಅದನ್ನು ನಾನು ಕೂಡ ಅಧ್ಯಯನ ಮಾಡಬೇಕು.

ಈಗ ಏನಾಗಿದೆಯೆಂದರೆ ಜಾನಪದವನ್ನು ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಹಾಗೂ ಅವುಗಳ ಕೃಪಾಪೋಷಿತ ಸಂಸ್ಥೆಗಳು ವಸ್ತು ಸಂಗ್ರಹಾಲಯದ ಸಂಗತಿಗಳನ್ನಾಗಿ ನೋಡುವ ಕ್ರಮವನ್ನು ಬೆಳೆಸಿಬಿಟ್ಟಿದ್ದಾರೆ. ಜಾನಪದ ಕಲಾವಿದರನ್ನು ಒಂದು ವಿಧದಲ್ಲಿ ‘ನಮ್ಮಿಂದ ಬದುಕುವವರು’ ಎನ್ನುವಂತೆ ಕಾಣಲಾಗುತ್ತಿದೆ. ಅಲ್ಲಿ ‘ಘನತೆ’ ಎಂಬುದು ಗೈರುಹಾಜರಾಗಿ ಬಿಟ್ಟಿದೆ. ಇದನ್ನು ಅಮರ್ತ್ಯ, ಚಟರ್ಜಿ `Patient Approach' ಅಂತಾ ಕರೆಯುತ್ತಾನೆ. ಇಲ್ಲಿ ಅಗತ್ಯವಾಗಿರುವುದು`Agency Approach'. ಜನಪದರು ತಮ್ಮನ್ನು ತಾವು ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಂಡು ಬದುಕುವಂತೆ ಮಾಡಬೇಕು. ಅವರನ್ನು ಈಗ ಪರಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಅವರು ಸದಾ ನಮ್ಮ ಕೃಪೆಯಲ್ಲಿರಬೇಕು ಎಂದು ತಿಳಿಯುವುದಿದೆಯ್ಲಾ ಅದು ಅತ್ಯಂತ ಅಪಾಯಕಾರಿ. ಅದು ಅಭಿವೃದ್ಧಿಯಲ್ಲ.


ಅರುಣ್: ಜಾನಪದ ಅಧ್ಯಯನಗಳನ್ನು ಅಭಿವೃದ್ಧಿ ಅಧ್ಯಯನ ವಿಧಾನಗಳ ಮೂಲಕ ಅಂತರ್ ಶಿಸ್ತೀಯ ಅಧ್ಯಯನ ಮಾಡಲು ಸಾದ್ಯವೆ? ಹಾಗಿದ್ದಲ್ಲಿ ಒಂದೆರಡು ಸಲಹೆಗಳನ್ನು ಕೊಡಿ.

ಡಾ..ಟಿ.ಆರ್.ಸಿ: ಇದಕ್ಕೆ Anthropology ಯ ತರಬೇತಿ, ಸೈದ್ಧಾಂತಿಕ ತಿಳುವಳಿಕೆ, ವ್ಯಾಪಕ ಅಧ್ಯಯನ ಬೇಕು. ನಮಗೆ ಇಷ್ಟವಿರಲಿ ಇಲ್ಲದಿರಲಿ ಇಂಗ್ಲೀಷ್ ಭಾಷೆಯ ಅಗತ್ಯವಿದೆ. ಈಗ ನಮ್ಮಲ್ಲಿ ಅಭಿವೃದ್ಧಿ ಅಧ್ಯಯನ ಎಂದರೆ ಉತ್ಪಾದನೆ, ಹಣ, ಬ್ಯಾಂಕು ಮುಂತಾದ ಸಂಗತಿಗಳಿಗೆ ಮೀಸಲಾದುದು ಮತ್ತು ಜಾನಪದವು ಭಾವುಕವಾದ ಸಂಗತಿಗಳಿಗೆ ಸಂಬಂಧಿಸಿದುದು ಎಂಬ ನಂಬಿಕೆ ಹಬ್ಬಿ ಬಿಟ್ಟಿದೆ. ಇದು ಹೋಗಬೇಕು. ಈ ಬಗೆಯ ರಿಸ್ಕಿಗೆ, ಸಾಹಸಕ್ಕೆ ನಾವು ಸಿದ್ದವಿದ್ದೇವೆಯೇ? ಇದು ಮಿಲಿಯನ್ ಡಾಲರ್ ಪ್ರಶ್ನೆ.

ಅರುಣ್: ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಅಭಿವೃದ್ದಿ ಅಧ್ಯಯನ ವಿಭಾಗದ ಚಿಂತಕರಾದ ನೀವು ಜಾನಪದ ವಿವಿಯ ಮೊದಲ ಆದ್ಯತೆಯ ಕೆಲಸಗಳು ಏನಾಗಿರಬೇಕು, ನಿಮ್ಮ ಕನಸಿನ ಜಾನಪದ ವಿವಿ ಹೇಗಿರುತ್ತೆ?

ಡಾ.ಟಿ.ಆರ್.ಸಿ:
೧. ಅಲ್ಲಿ ಮೊದಲು Anthropology ವಿಭಾಗವನ್ನು ಆರಂಭಿಸಬೇಕು. ಪ್ರತಿ ವಿಭಾಗದಲ್ಲಿ ಸಮಾಜಶಾಸ್ತ್ರದ ತಜ್ಞರು ಇರಬೇಕು. ಅಧ್ಯಯನ ವಿಧಾನದ ಬಗ್ಗೆ ಹೆಚ್ಚು ಮಹತ್ವ ನೀಡಬೇಕು.
೨. ಅಲ್ಲಿ ಸೇರುವವರೆಲ್ಲರಿಗೂ ಇಂಗ್ಲೀಷನ ಜ್ಞಾನ ಇರಲೆಬೇಕೆಂದೇನಿಲ್ಲ. ಆದರೆ ಜಾನಪದ ವಿವಿಯು ತನ್ನಲ್ಲಿ ಒಂದು ಪೂರ್ಣ ಪ್ರಮಾಣದ ಇಂಗ್ಲೀಷ್ ವಿಭಗವನ್ನು ಆರಂಭಿಸಬೇಕು. ಅಲ್ಲಿ ಅಧ್ಯಯನ ನಡೆಯಬೇಕಾಗಿಲ್ಲ. ಅಲ್ಲಿ ವಿದ್ವಾಂಸರಿಗೆ Functional English ತರಬೇತಿ ನೀಡಬೇಕು.
೩. ಒಂದು ತಿಂಗಳ, ಒಂದು ವರ್ಷದ ಅಧ್ಯಯನಗಳಿಗೆ ಪ್ರತಿಯಾಗಿ ದೀರ್ಘಕಾಲೀನ ಅಧ್ಯಯನಗಳನ್ನು ಅದು ಪ್ರೋತ್ಸಾಹಿಸಬೇಕು.
೪. ಮಹಿಳಾ ಜಾನಪದ ಅಧ್ಯಯನ ವಿಭಾಗವನ್ನು ಅದು ಅರಂಭಿಸಬೇಕು.
೫. ಜನಪದ ಆಚರಣೆಗಳನ್ನು ಗಣ್ಯರನ್ನು ಬರಮಾಡಿಕೊಳ್ಳುವುದಕ್ಕೆ, ವೈಭವೀಕರಣಕ್ಕೆ, ಬಳಸಿಕೊಳ್ಳಬಾರದು.

ಶುಕ್ರವಾರ, ಜುಲೈ 22, 2011

ಮಣ್ಣಿನ ಬಸವನ ಹೊತ್ತವರು..

-ಅರುಣ್




ಮೊನ್ನೆ ಕಮಲಾಪುರದ ಓಣಿಯಲ್ಲಿ ಆರೇಳು ಹುಡುಗುರು, ತಲೆಯ ಮೇಲೆ ಮಣ್ಣಿನಿಂದ ಮಾಡಿದ ಬಸವಣ್ಣನನ್ನು ಮಾಡಿಕೊಂಡು ಹಾಡೇಳುತ್ತಾ, ನೀರು ಹಾಕಿಸಿಕೊಳ್ಳುತ್ತಾ, ಬಸವ ಬಸವ ಬಂದಾನ ಎನ್ನುವ ಹಾಡು ಹೇಳುತ್ತಾ ಬರುತ್ತಿದ್ದರು. ಅವರನ್ನು ನೋಡಿದಾಕ್ಷಣ ನಾವು ಬಾಲ್ಯದಲ್ಲಿ ಮಾಡುತ್ತಿದ್ದ ಗುರ್ಜವ್ವನ ನೆನಪಾಯಿತು.

ನಮಗಾಗ ಗುರ್ಜವ್ವನನ್ನು ಮಾಡುವ ಸಂಭ್ರಮ. ಸೆಗಣಿಯಿಂದ ಐದು ಗುರ್ಜವ್ವನ ಮೂರ್ತಿ ಮಾಡಿಕೊಂಡು, ಅದಕ್ಕೆ ಗರಿಕೆ, ತಂಗಡಕಿ ಹೂ ಸಿಕ್ಕಿಸಿಕೊಂಡು, ಹರಿಷಿಣ ಕುಂಕುಮ ಹಚ್ಚಿಕೊಂಡು ಮಣೆ ಮೇಲೆ ಇಟ್ಟುಕೊಂಡು ಗುರ್ಜವ್ವನನ್ನು ಮಾಡುತ್ತಿದ್ದೆವು. ಗುರ್ಜಿ ಹೋರುವವರೊಬ್ಬರನ್ನು ಆಯ್ಕೆ ಮಾಡುತ್ತಿದ್ದೆವು. ಹಾಗೆ ಹೊತ್ತವನ ಹಿಂದೆ ಸುಮಾರು ಮುವತ್ತಕ್ಕಿಂತ ಹೆಚ್ಚು ಹುಡುಗರು ಹುಯ್ಯೋ ಎನ್ನುವ ಕೇಕೆ ಹಾಕಿಕೊಂಡು ಮನೆಮನೆಗೆ ಹೋಗುತ್ತಿದ್ದೆವು. ಹಾಗೆ ಮನೆ ಮನೆಗೆ ಹೋದಾಗ ಮನೆಯವರು ಗುರ್ಜಿ ಹೊತ್ತವನ ಮೇಲೆ ನೀರು ಹಾಕುತ್ತಿದ್ದರು, ಹೊತ್ತವ ನೀರು ಹಾಕಿದಂತೆ ತಿರುಗುತ್ತಿದ್ದನು. ಆಗ ನೀರು ಚೆಲ್ಲನೆ ಸುತ್ತಲೂ ಚೆಲ್ಲಿ ಮಳೆಯ ನೆನಪನ್ನು ತರುತ್ತಿತ್ತು. ಒಂಬತ್ತು ದಿನಗಳ ಕಾಲ ಹೀಗೆ ಮನೆ ಮನೆಗೆ ಹೋಗಿ ನೀರು ಹಾಕಿಸಿಕೊಂಡು, ಗುರ್ಜಿಯ ಹಾಡನ್ನು ರಾಗಬದ್ದವಾಗಿ ಹಾಡುತ್ತಿದ್ದೆವು.

ಗುರ್ಜವ್ವ ಗುರ್ಜವ್ವಾ ಎಲ್ಯಾಡಿಬಂದೆ
ನೀರಿಲ್ಲತ್ತಾಗ ನಿಂತಾಡಿ ಬಂದೆ
ಸುರಿಯೋ ಸುರಿಯೋ ಮಳ್ರಾಯೋ.. ಮಳ್ರಾಯಾ..||

ಮಳೆರಾಯ್ನ ಹೆಂಡ್ತಿ ಏನ್ ಹಡದ್ಲು, ಗಂಡು ಹಡದ್ಲು..
ಗಂಡಿನ್ ತೆಲಿಗೆ ಎಣ್ಣಿಲ್ಲ ಬೆಣ್ಣಿಲ್ಲ
ಸುರಿಯೋ ಸುರಿಯೋ ಮಳ್ರಾಯೋ.. ಮಳ್ರಾಯಾ..||


ಬೆತ್ತಲೆಯಾಗಿದ್ದ ಗುರ್ಜಿ ಹೊತ್ತವನನ್ನು ಉಳಿದ ಹುಡುಗರು ಕಿಚಾಯಿಸುವುದು ನಡೆಯುತ್ತಿತ್ತು. ಹೀಗೆ ಮನೆಮನೆಯಲ್ಲಿ ಜೋಳ,ರಾಗಿ,ನವಣಕ್ಕಿ, ನೆಲ್ಲಕ್ಕಿ, ಬೇಳೆ, ಉಣಸೆ ಹಣ್ಣು, ಬೆಲ್ಲ, ಉಳ್ಳಿ, ಅಲಸಂದಿ,ಮಡಕಿಕಾಳು, ಹಿಟ್ಟು ಮುಂತಾದವುಗಳನ್ನು ಸಂಗ್ರಹಿಸಿ, ಕೊನೆ ದಿನ ಕಡುಬು ಅನ್ನ ಸಾಂಬಾರು ಮಾಡಿಕೊಂಡು, ಹಳ್ಳಕ್ಕೆ ಹೋಗಿ ಗುರ್ಜಿಯನ್ನು ಬಿಟ್ಟು ಕಡುಬು ತಿಂದು ನಾವುಗಳೆಲ್ಲಾ ಓಡೋಡಿ ಬರುತ್ತಿದ್ದೆವು. ಆಗ ಗುರ್ಜಿ ಹೊತ್ತವ ಕೋಲು ಹಿಡಿದು ನಮ್ಮನ್ನು ಹೊಡೆಯಲು ಬೆನ್ನಟ್ಟಿ ಬರುತ್ತಿದ್ದನು. ಒಮ್ಮೆಮ್ಮೆ ಹೀಗೆ ನಾವುಗಳೆಲ್ಲಾ ಓಡಿ ಮನೆ ಮುಟ್ಟುವ ಹೊತ್ತಿಗೆ ಕಾಕತಾಳೀಯವೆನ್ನುವಂತೆ ಮಳೆ ಬರುವ ಪ್ರಸಂಗಗಳು ನಡೆಯುತ್ತಿದ್ದವು. ಆಗ ಹಳ್ಳಿಗರು ಗುರ್ಜಿ ಮಾಡಿದ್ರಿಂದ ಮಳೆ ಬಂತು ಎಂದು ಸಂಭ್ರಮಿಸುತ್ತಿದ್ದರು. ‘ಮಕ್ಲು ಗುರ್ಜಿ ಹೊತ್ರ ಮಳಿರಾಯ ಬರದಂಗ ಇರತಾನ’ ಎಂದು ಪ್ರೀತಿಯಿಂದಲೇ ಮಳೆರಾಯನನ್ನು ಕೊಂಡಾಡುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ ಗುರ್ಜಿ ಹೋರುವ ಪದ್ದತಿ ಇದೆ. ಮೊದಲಿನ ಲವಲವಿಕೆ, ಆಪ್ತತೆ ಸ್ವಲ್ಪಮಟ್ಟಿಗೆ ಕಡಿಮೆಯಾದಂತಿದೆ.

ಕಮಲಾಪುರದ ಹುಡುಗರ ಆಚರಣೆಯು ಗುರ್ಜವ್ವನಂತೆಯೇ ಇದ್ದರೂ, ಅವರು ಬಸವಣ್ಣನನ್ನು ಹೊತ್ತಿದ್ದರು. ಇದು ಮಣೆಣೆತ್ತಿನ ಅಮವಾಸ್ಯೆಯಲ್ಲಿ ಮಾಡುವ ಒಂದು ಆಚರಣೆ. ಮಣ್ಣಿನ ಬಸವನನ್ನು ಮಾಡಿಕೊಂಡು, ಮಣೆಯ ಮೇಲೆ ಕೂರಿಸಿಕೊಂಡು ‘ಬಸವ ಬಸವ ಬಂದಾನೆ’ ಎನ್ನುವ ಪದವನ್ನು ಹಾಡಿಕೊಂಡು ಮನೆ ಮನೆಗೆ ಹೋಗಿ ದವಸ ಧಾನ್ಯವನ್ನು ನೀಡಿಸಿಕೊಂಡು ಬರುತ್ತಾರೆ. ಈ ಬಸವ ಕೂಡ ಮಳೆಯನ್ನು ಕರೆಯುವವನೆ. ಹಾಗಾಗಿ ಈ ಆಚರಣೆ ಗುರ್ಜಿಯ ಆಚರಣೆಯನ್ನೇ ಹೋಲುವಂತಹದ್ದು. ಕಮಲಾಪುರದ ಈ ಹುಡುಗರನ್ನು ಮಾತಿಗೆಳೆದೆ. ಜಗದೀಶ, ಗಜೇಂದ್ರ, ಅಕ್ಷಯ ಕುಮಾರ, ಪ್ರವೀಣ್, ಕಾಳಿದಾಸ ಇವರುಗಳೆಲ್ಲಾ ನಾಲ್ಕರಿಂದ ಹತ್ತನೆ ತರಗತಿಯಲಿ ಓದುವ, ಸರಕಾರಿ ಶಾಲೆಯ ಹುಡುಗರು. ವಿಶೇಷ ಅಂದರೆ ಇವರೆಲ್ಲಾ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಮಕ್ಕಳು. ಗುರ್ಜಿಯನ್ನು ಮಾಡುವಾಗ ಎಲ್ಲಾ ಜಾತಿಯ ಹುಡುಗರು ಇರುತ್ತಿದ್ದರು. ಆದರೆ ಬಸವಣ್ಣನನ್ನು ಹೋರಲು ಒಂದೇ ಜಾತಿಯ ಹುಡುಗರು ಹೋರುತ್ತಿದ್ದುದ ಕಂಡು ಯಾಕೆ ಹೀಗೆ ಎಂದು ಅರ್ಥವಾಗಲಿಲ್ಲ. ಮಕ್ಕಳಲ್ಲೂ ಜಾತಿಯ ವಿಂಗಡಣೆಯಾಯಿತೆ ಎಂದು ಒಂದು ಕ್ಷಣ ಭಯವಾಯಿತು.



‘ಊರಲ್ಲಿ ಎಲ್ಲರ ಮನೆಗಳಿಗೂ ಹೋಗುತ್ತೀರಾ ?’ ಎಂದು ಕೇಳಿದೆ. ಅದರಲ್ಲಿ ಬಸವನನ್ನು ಹೊತ್ತ ಕಾಳಿದಾಸ ಎನ್ನುವ ಹುಡುಗ ‘ಸಾಬರ ಮನೆಗೆ ಮಾತ್ರ ಹೋಗಲ್ರಿ’ ಎಂದನು. ‘ಮೊದಲಿಂದಲೂ ಹೋಗೋದಿಲ್ವಾ ಈಗ ಮಾತ್ರ ಹೋಗಲ್ವಾ’ ಎಂದೆ. ಆಗ ‘ಇಲ್ರಿ ಮೊದ್ಲು ಹೋಗ್ತಿದ್ವಿ ಈಗ ಹೋಗಲ್ಲ’ ಎಂದನು. ‘ಯಾಕೆ ಹೋಗಲ’ ಎಂದೆ, ಆಗ ಆ ಹುಡುಗ ‘ಒಮ್ಮೆ ಸಾಬರ ಮನೆಗೆ ಹೋದಾಗ ಸಾಬರ ಹೆಣ್ಮಗಳು ಬೈದಿದ್ರು..ರಿ ಅದಕ್ಕ ಹೋಗಲ್ಲ’ ಎಂದ. ತಕ್ಷಣ ಹತ್ತನೆ ತರಗತಿಯಲ್ಲಿ ಓದುತ್ತಿದ್ದ ಗಜೇಂದ್ರ ನನ್ನ ಜತೆ ಮಾತಾಡುತ್ತಿದ್ದ ಹುಡುಗನಿಗೆ ಚಿವುಟಿ..‘ಇಲ್ರಿ ನಾವು ಎಲ್ರು ಮನೆಗೂ ಹೋಗ್ತೀವಿ.. ಯಾರ ಮನಿನೂ ಬಿಡಲ್ಲ’ ಅಂದ. ಆಗ ಅವನು ಆ ಹುಡುಗರಿಗೆ ಕಿವಿ ಮಾತಿನಂತೆ ‘ಆ ಅಣ್ಣರು ಪೇಪರಿನ್ಯಾಗ ಬರೀತಾರ ಅವರಿಗೆ ನಾವು ಸಾಬರ ಮನೆಗೆ ಹೋಗಲ್ಲ ಅಂತ ಹೇಳಬಾರ‍್ದಲೆ’ ಎಂದನು. ಇದನ್ನು ನೋಡಿ ನಾನು ಆ ವಿಷಯವನ್ನು ಮಟುಕುಗೊಳಿಸಿದೆ. ಮಾತು ಬದಲಿಸಿ ‘ಈಗ ಮನೆಯಲ್ಲಿ ಏನೇನಿ ನೀಡಿಸಿಕೊಳ್ಳುತ್ತೀರಿ’ ಎಂದೆ. ಆಗ ಅವರಲ್ಲೊಬ್ಬ ‘ಬರೀ ಅಕ್ಕಿ, ರೊಕ್ಕ ಎರಡಾರೀ’ ಅಂದ. ನಾನು ಜೋಳ ರಾಗಿ ಬೇಳೆ ಇವ್ಯಾವನ್ನೂ ನೀಡಿಸ್ಕೊಳ್ಳಲ್ವಾ ? ಎಂದೆ . ಪ್ರವೀಣ್ ಎನ್ನುವ ಹುಡುಗ ‘ಸಾರ್..ಈಗ ಜೋಳ ರಾಗಿ ಯಾರು ಉಣ್ತಾರ ಸಾ..ಮೊದ್ಲು ನೀಡಿಸ್ಕಳ್ತಿದ್ವಿ ಈಗ ಆವ್ಯಾವನ್ನು ನೀಡಿಸ್ಕೊಳ್ಳಲ್ಲ’ ಎಂದು ಮುಗ್ದವಾಗಿಯೇ ಹೇಳಿದ.

ಇದು ಬದಲಾದ ಆಹಾರ ಕ್ರಮದ ಬಗ್ಗೆ ಮಕ್ಕಳು ತುಂಬಾ ಸೂಕ್ಷ್ಮವಾಗಿ ನೀಡಿದ ಪ್ರತಿಕ್ರಿಯೆಯಂತಿತ್ತು. ನಂತರ ನೀವ್ಯಾಕೆ ಬರಿ ಸರಕಾರಿ ಸಾಲಿ ಹುಡುಗ್ರಾ ಬಂದೀರಿ? ಕಾನ್ವೆಂಟ್‌ಗೆ ಹೋಗೋ ಇಂಗ್ಲೀಷ್ ಮೀಡಿಯಂ ಹುಡುಗ್ರು ನಿಮ್ಮ ಜತೆ ಬರಲ್ವಾ ಎಂದೆ. ‘ಇಲ್ರಿ..ಇಂಗ್ಲೀಸ್ ಮೀಡಿಯಂ ಹುಡುಗ್ರಿಗೆ ಜಾಸ್ತಿ ಹೋಮ್ ವರ್ಕ ಕೊಡ್ತಾರಲ್ಲ, ಅದುಕಾ ಅವರು ಬರೋದಿಲ್ಲ. ಅವರು ಬಂದರು ಮನಿಯವರು ಕಳಸಲ್ಲ’ ಎಂದ. ನನಗೆ ಜನಪದ ಆಚರಣೆ ಕೇವಲ ಸರ್ಕಾರಿ ಶಾಲಾ ಮಕ್ಕಳಿಂದ ಮಾತ್ರ ಉಳಿತಿರೋ ಹಾಗನ್ನಿಸಿತು. ಕೊನೆಗೆ ಆ ಹುಡುಗರು ಬಸವ ಬಸವ ಬಂದಾನ ಎನ್ನುವ ಹಾಡು ಹೇಳಿದರು.




ಬಸವ ಬಸವ ಬಂದಾನ
ಜ್ವಾಳ ಫಲವ ಹಾಕ್ಯಾನ
ಸಜ್ಜಿ ಫಲವ ಹಾಕ್ಯಾನ
ರಾಗಿ ಫಲವ ಹಾಕ್ಯಾನ
ಜ್ವಾಳ ಫಲವ ಹಾಕ್ಯಾನ
ಗೋದಿ ಫಲವ ಹಾಕ್ಯಾನ
ತೊಗರಿ ಫಲವ ಹಾಕ್ಯಾನ॒
ಬಸವೇನಂದ..ಮಳಿ ಬರಲೆಂದ ||



ಎಂದು ಹಾಡು ಹೇಳಿದ ಹುಡುಗರು ಸಾರ್..ಪೇಪರಿನಾಗ ನನ್ನ ಫೋಟೋ ಹಾಕ್ರಿ ಎಂದ. ಇನ್ನೊಬ್ಬ ರೀ ಇಷ್ಡೆಲ್ಲಾ ಕೇಳೀರಿ ಹತ್ರುಪಾಯದ್ರು ಕೊಡ್ರಿ..ಅಂದ. ಸರಿನಪ್ಪ ಅಂತೇಳಿ ಹತ್ತು ರುಪಾಯಿ ಕೊಟ್ಟು, ಕಡುಬು ಮಾಡೋ ದಿನ ಮರಿಬ್ಯಾಡ್ರೋ ನನ್ನು ಕರೀರಿ ನಾನು ಬರ್ತೀನಿ ಅಂದೆ. ಆಗ್ಲಿ ರೀ ಕರೀತಿವಿ ಬರಾಕು ನೋಡ್ರಿ ಅಂತೇಳಿ ಮಣ್ಣಿನ ಬಸವನ ಹೊತ್ತ ಹುಡುಗರು ಮುಂದಿನ ಮನೆಗೆ ಹೋದರು..

ಮಂಗಳವಾರ, ಜುಲೈ 5, 2011

ಸಣ್ಣ ರೈತರ ಬಡಗಿಗಳ ಹುಡುಕಾಟ

-ಸಿದ್ಧರಾಮ ಹಿರೇಮಠ.


(ಕೂಡ್ಲಿಗಿ ತಾಲೂಕಿನ ದಿಬ್ಬದಹಳ್ಳಿಯ ಕೃಷಿ ಸಲಕರಣೆಗಳನ್ನು ಸಿದ್ಧಪಡಿಸುವ ಬಡಗಿ ಶರಣಪ್ಪ ಹಾಗೂ ಸಣ್ಣರಂಗಪ್ಪ)

ಮುಂಗಾರು ಆರಂಭವಾದರೆ ಕೃಷಿ ಚಟುವಟಿಕೆಗಳು ಆರಂಭವೆಂದೇ ಅರ್ಥ. ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಸಲಕರಣೆಗಳಿಗಾಗಿ ರೈತರು ಬಡಗಿಗಳನ್ನು ಹುಡುಕಾಡಿದಂತೆಯೇ, ಅಳಿದುಳಿದ ಬಡಗಿಗಳೂ ರೈತರನ್ನು ಹುಡುಕಬೇಕಾದ ಪ್ರಸಂಗವೊದಗಿದೆ.
ಈ ಮೊದಲು ಬಂಡಿ, ಕುಂಟೆ, ಕೂರಿಗೆಗಳ ಕೆಲಸ ಮಾಡಿದ ಬಡಗಿಗಳು ಬೇಡಿಕೆಯಿಲ್ಲದೇ ಬೇರೆ ಕೆಲಸಗಳಲ್ಲಿ ವಾಲುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಯಂತ್ರೋಪಕರಣಗಳು ಬಂದಂತೆ, ರೈತರ ಕೃಷಿ ಸಲಕರಣೆಗಳ ತಯಾರಿಕೆಯಲ್ಲೂ ಯಂತ್ರೋಪಕರಣಗಳು ಬೇಕು ಎನ್ನುವುದು ಬಡಗಿಗಳ ಬಯಕೆಯಾಗಿದೆ. ಕುಂಟೆ, ಕೂರಿಗೆ ಮಾಡುವುದು ಕಷ್ಟದ ಕೆಲಸ. ಅವುಗಳನ್ನು ಸಿದ್ಧಪಡಿಸಲು ಕನಿಷ್ಠ ಎರಡು ದಿನಗಳಾದರೂ ಬೇಕು ಎಂದು ತಾಲೂಕಿನ ದಿಬ್ಬದಹಳ್ಳಿಯ ಬಡಗಿ ಶರಣಪ್ಪ ಹೇಳುತ್ತಾರೆ.

ಸುಮಾರು 30 ವರ್ಷಗಳಿಂದ ಕೃಷಿ ಸಲಕರಣೆಗಳನ್ನೇ ಸಿದ್ಧಪಡಿಸುತ್ತಿರುವ ಶರಣಪ್ಪ, `ಮೊದಲಿನ ಬೇಡಿಕೆ ಈಗಿಲ್ಲ' ಎನ್ನುತ್ತಾರೆ. ಕೇವಲ 2 ರೂ.ಗಳಿಗೆ ಕೂರಿಗೆ ಮಾಡಿಕೊಡುತ್ತಿದ್ದೆ, ಈಗ ಅದಕ್ಕೆ 200 ರೂ.ಗಳಾಗುತ್ತದೆ ಎನ್ನುತ್ತಾರೆ. ಕುಂಟೆ ಮಾಡಿಸಲು 200 ರೂ.ಗಳನ್ನು ರೈತರು ಕೊಡಬೇಕು. ಕಟ್ಟಿಗೆಯನ್ನು ಅವರೇ ತರಬೇಕು. ಕಟ್ಟಿಗೆಯನ್ನು ನೀವೇ ತರಬಹುದಲ್ಲ ಎಂದರೆ, `ಕಾಡೆಲ್ಲ ನಾಸ ಆಗೋಯ್ತು, ಈಗೆಲ್ಲಿಂದ ಕಟಿಗಿ ಹೊಂದಿಸ್ಲಿ ಸರ್, ಅದಕ್ಕೆ ನೀವೇ ಏನರ ಮಾಡ್ಕೊಳ್ರಿ, ಕಟಿಗೆ ತಂದುಕೊಟ್ರ ನೀವು ಹೇಳ್ದಿದು ಮಾಡಿಕೊಡ್ತೀನಿ ಅಂತ ಹೇಳ್ತೀನಿ' ಎಂದು ಶರಣಪ್ಪ ಹೇಳಿದರು.

ಈಗಾಗಲೇ ಟ್ರ್ಯಾಕ್ಟರ್ಗಳು ಬಂದು ಕೃಷಿ ಕಾರ್ಯವನ್ನು ಸುಲಭಗೊಳಿಸಿವೆಯಾದರೂ, ಅದರ ಪೆಟ್ಟು ಬಿದ್ದದ್ದು ಮಾತ್ರ ಬಡಗಿಗಳಿಗೇ. ಈಗ ಇದರಲ್ಲಿ ಯಾವ ಲಾಭವೂ ಇಲ್ಲವೆಂದು ಬಡಗಿಗಳೆಲ್ಲ ಮನೆಯ ಬಾಗಿಲು, ಕಿಟಕಿಗಳನ್ನು ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳತೊಡಗಿದ್ದಾರೆ. ಹೀಗಾಗಿ ಎಡೆಕುಂಟೆ, ಕೂರಿಗೆ ಮಾಡಿಸಬೇಕಾದರೆ ರೈತರು, ಹಳೆಯ ಬಡಗಿಗಳನ್ನೇ ಹುಡುಕುತ್ತ ಹೋಗುವ ಪರಿಸ್ಥಿತಿ ಬಂದೊದಗಿದೆ. `ಎಷ್ಟೋ ವರ್ಸದಿಂದ ಇದೇ ಬದುಕನ್ನೇ ಮಾಡ್ಕೊಂಡು ಬಂದೀವಿ, ಈಗ ಒಮ್ಮೆಲೇ ಕೆಲ್ಸ ನಿಂತುಬಿಟ್ರೆ ನಾವು ಬದ್ಕೋದಾದ್ರು ಹೆಂಗೆ?' ಎಂದು ಪ್ರಶ್ನಿಸುತ್ತಾರೆ ದಿಬ್ಬದಹಳ್ಳಿಯ ಬಡಗಿ ಸಣ್ಣರಂಗಪ್ಪ. `ನಾವು ಇದೇ ಕೆಲ್ಸದಾಗೇ ಬಂದ್ವಿ, ಕೈಯಿಂದ ಕೆಲ್ಸ ಮಾಡೋದು ಹೆಂಗಂತ ನಾವು ತಿಳ್ಕೊಂಡೀವಿ, ಈಗಿನ ಹುಡುಗ್ರು ಇದ್ಕೆಲ್ಲ ಮಾಡ್ತಾರನ್ನೋ ನಂಬ್ಕಿ ನಮಗ್ಲಿಲ್ಲ, ಈಗಿನವ್ರು ಶ್ರಮ ಬ್ಯಾಡಂತಾರ, ನಮ್ಮ ಕಾಲಕ್ಕ ಇದೆಲ್ಲ ಮುಗ್ದೋಗಿಬಿಡ್ತು ಅನ್ನಿಸ್ತದೆ' ಎಂದು ಶರಣಪ್ಪ, ಸಣ್ಣರಂಗಪ್ಪ ವಿಶಾದ ವ್ಯಕ್ತಪಡಿಸಿದರು.
(ಕೂಡ್ಲಿಗಿಯಲ್ಲಿ ಕೃಷಿ ಸಲಕರಣೆಗಳನ್ನು ಸಿದ್ಧಪಡಿಸುವ ಬಡಗಿ ಮಾಬುಸಾಬ್)


ಮುಂಗಾರು ಆರಂಭವನ್ನು ಹೊರತುಪಡಿಸಿದರೆ, ನಂತರ ಕೃಷಿ ಸಲಕರಣೆಗಳ ಕೆಲಸವೇ ಇಲ್ಲ ಎಂಬುದು ಕೂಡ್ಲಿಗಿಯ ಬಡಗಿ ಮಾಬುಸಾಬ್ರ ಹೇಳಿಕೆ. ಮೂರು ತಲೆಮಾರುಗಳಿಂದಲೂ ಇದೇ ವೃತ್ತಿಯನ್ನು ಅವಲಂಬಿಸಿದ್ದೇವೆ, ಬಂಡಿಗೆ ಈ ಮೊದಲಿದ್ದ ಬೇಡಿಕೆ ಈಗ ಇಲ್ಲ. ಇತ್ತೀಚೆಗೆ ಟೈರ್ ಬಂಡಿಗಳು ಹೆಚ್ಚಾಗಿವೆ. ಎತ್ತುಗಳ ಸಂಖ್ಯೆಯೂ ಕಡಿಮೆಯಾಗಿ, ಈಗ ಎಲ್ಲದಕ್ಕೂ ರೈತರು ಮಿನಿಲಾರಿಯನ್ನೇ ಬಳಸುತ್ತಾರೆ ಎಂದು ಮಾಬುಸಾಬ್ ಹೇಳಿಕೆ. ಯಂತ್ರಗಳ ಬಳಕೆಯಿಂದಾಗಿ ನಮ್ಮಂತಹ ಸಣ್ಣ ಕೆಲಸಗಾರರಿಗೆ ಕುತ್ತು ಬಂದಿದೆ ಎಂದು ಮಾಬುಸಾಬ್ ನಿಟ್ಟುಸಿರುಬಿಡುತ್ತಾರೆ. `ಎಲ್ಲದ್ಕೂ ಮಿಶಿನ್ ಬಂದ್ಬಿಟ್ವು ಸರ್, ನೆಲಾ ಉಳೊದಕ್ಕೆ, ಬಿತ್ನೆ ಮಾಡಾಕೆ, ರಾಸಿ ಒಕ್ಕಾಕೆ, ಇನ್ನೇನು ತುತ್ತು ಮಾಡಿ ಉಣಿಸೋ ಮಿಶಿನ್ ಬಂದ್ಬಿಟ್ರೆ, ನಾವೆಲ್ಲ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕ್ಕೊಳೋದೆ' ಎಂದು ಮಾಬುಸಾಬ್ ವ್ಯಥೆಯಿಂದ ಹೇಳುತ್ತಾರೆ.

ಹಣವಿದ್ದವರು ಯಂತ್ರಗಳನ್ನು ಬಳಕೆ ಮಾಡಿದರೆ, ಸಣ್ಣ ರೈತರು ಹಳೆಯ ಕೃಷಿ ಸಲಕರಣೆಗಳನ್ನೇ ಬಳಸುತ್ತಾರೆ. ಅಂತಹವರು ಮಾತ್ರ ಈಗ ಕೃಷಿ ಸಲಕರಣೆಗಳ ಬಡಗಿಗಳನ್ನು ಹುಡುಕುತ್ತಾರೆ. ಹೀಗಾಗಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿದ್ದರೂ, ಬಡಗಿಗಳು ಮೊದಲಿನ ಬೇಡಿಕೆ ಇಲ್ಲದೇ ನಿರುದ್ಯೋಗಿಗಳಂತಾಗಿದ್ದಾರೆ. ರೈತರಿಗೆ ಕೃಷಿ ಕಷ್ಟಕರವಾಗುತ್ತಿರುವಂತೆಯೇ, ಅವರನ್ನೇ ಅವಲಂಬಿಸಿರುವ ಸಣ್ಣ ಕೆಲಸಗಾರರಿಗೂ ಕಷ್ಟಗಳು ಬರುತ್ತಿವೆ.

ಶುಕ್ರವಾರ, ಜುಲೈ 1, 2011

ಕುಲುಮೆ ಜತೆಗಿನ ಬದುಕು



ಬೆಳಗ್ಗೆ ಐದು ಗಂಟೆಗಾಗಲೆ ಎದ್ದು, ಲ್ಯಾಪ್ ಟಾಪ್ ಆನ್ ಮಾಡಿ ಲೇಖನವೊಂದನ್ನು ಟೈಪ್ ಮಾಡುತ್ತಾ ಕುಳಿತಿದ್ದೆ. ಐದು ಮುವತ್ತರ ಹೊತ್ತಿಗೆ ಜುರ್ರರ್ರಾ.. ಎನ್ನುವ ಶಬ್ದ ಕೇಳತೊಡಗಿತು. ಆಗ ಎದ್ದವನೇ ಶಬ್ದ ಬಂದ ಕಡೆಗೆ ನಡೆದೆ. ಅಲ್ಲಿ ಕಮ್ಮಾರ ಚಂದ್ರಪ್ಪ ಆಗಲೆ ಕುಲುಮೆ ಪೂಜೆ ಮಾಡಿ, ಕುಲುಮೆಯಲ್ಲಿ ಒಂದಷ್ಟು ಒಣ ಕಸ, ಚೂರುಪಾರು ಹಾಳೆ ಮುಂತಾದವನ್ನು ತುರುಕಿ ಬೆಂಕಿ ಕಡ್ಡಿ ಗೀರಿ, ಸುತ್ತಲೂ ಇದ್ದಿಲು ತುಂಬಿ..ಮೆಲ್ಲಗೆ ಪಂಕವನ್ನು ತಿರುಗಿಸತೊಡಗಿದ್ದ. ಆಗ ಜುರ್ರರ್ರಾ.. ಎನ್ನುವ ಶಬ್ದ ಮಲ್ಲಗೆ ನೀರವ ಮೌನವನ್ನು ಸೀಳಿ ಎಳೆ ಎಳೆಯಾಗಿ ಬರತೊಡಗಿತ್ತು. ಚಂದ್ರಪ್ಪನ ದಿನದ ಕಾಯಕ ಈ ಶಬ್ದದ ಸುಪ್ರಭಾತದೊಂದಿಗೆ ಆರಂಭವಾಗಿತ್ತು.



ನಾನು ಹೋದುದನ್ನು ನೋಡಿದ ಆತ ‘ಓ ಬಾರಪ್ಪ ನೀ ಯಾವಾಗ ಬಂದಿದ್ದೆ, ತಂಗಿ ಅರಾಮಿದಾಳ’ ಎಂದು ಕುಶಲೋಪರಿಯನ್ನು ವಿಚಾರಿಸಿದರು. ನಾನು ಹೂಂ..ಎಂದು ಕುಲುಮೆಯ ಪಕ್ಕ ಆತ ಬೆಂಕಿ ಹೊತ್ತಿಸುತ್ತಿದ್ದನ್ನು ನೋಡುತ್ತಾ ಕೂತೆ. ಸ್ವಲ್ಪ ಹೊತ್ತು ಆಗುತ್ತಿದ್ದಂತೆ ಹರಿಜನ ಭರಮಪ್ಪ ಒಂದೆರಡು ಕುಳ ತಂದ, ಪೂಜಾರ ಪಕ್ಕೀರಪ್ಪ ಕೊಡಲಿಯನ್ನು ಹಿಡಿದು ಅಣಿಯಲೆಂದು ತಂದ. ಹೀಗೆ ಒಬ್ಬೊಬ್ಬರು ನಿಧಾನಕ್ಕೆ ಸೇರುತ್ತಾ ಊರಿನ ಕುಶಲೋಪರಿಯ ಜತೆ ಕುಲುಮೆಗೆ ಜೀವಂತಿಕೆ ಬರತೊಡಗಿತು. ಕೆಲವರು ಕುಲುಮೆಯ ಬೆಂಕಿಯಲ್ಲಿ ಬೀಡಿ ಹಚ್ಚಿಕೊಂಡು ಹೊಗೆ ಬಿಡತೊಡಗಿದರು.



ಪಕ್ಕೀರಜ್ಜ ನನ್ನ ನೋಡುತ್ತಾ.. ಅರುಣಪ್ಪಾ..ನಿನ್ನೆ ನಮ್ಮ ದೇಶ ಗೆಲ್ತಂತೆ ಅಲಾ..ಟಿವ್ಯಾಗ ರಾತ್ರಿ ಹನ್ನೊಂದು ಗಂಟ್ಯಾಗ ಹೇಳಕತ್ತಿದ್ರು. ಎಂದು ಕೇಳಿದ. ನಾನು ಔದು ಎಂದು ತಲೆ ಅಲ್ಲಾಡಿಸಿದೆ. (ಹಿಂದಿನ ದಿನ ರಾತ್ರಿ ವಿಶ್ವಕಪ್ ಕ್ರಿಕೆಟ್ ನಲ್ಲಿ ೨೪.೦೩.೨೦೧೧ ಭಾರತ ಆಷ್ಟ್ರೇಲಿಯಾದ ವಿರುದ್ಧ ಐದು ವಿಕೆಟ್ ಗಳ ಜಯ ಗಳಿಸಿತ್ತು) ಉಳಿದವರು ಏನೂ ಅರ್ಥವಾಗದಂತೆ ಆ ವಿಷಯ ನಮಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ನೋಡುತ್ತಿದ್ದರು. ತಕ್ಷಣ ಭರಮಪ್ಪ ..‘ಅಲ್ಲಪ್ಪಾ ಏನೋ ಪ್ರಳಯ ಆಗತತಿ ಅಂತ ಟೀವ್ಯಾಗ ಹೇಳತಿದ್ರಲ್ಲ ನಿಜ ಏನು? ಎಂದು ಕೇಳಿದ. ಆಗ ಎಲ್ಲರ ಕಿವಿ ನನ್ನ ಬಳಿ ತಿರುಗಿದವು. ಎಲ್ಲರ ಆಸಕ್ತಿ ನಾನು ಏನು ಹೇಳುತ್ತಿದ್ದೇನೆ ಎನ್ನುವ ಕಡೆಗೇ ಇತ್ತು. ನಾನು ನಿಧಾನಕ್ಕೆ ಮಾತು ಆರಂಭಿಸಿ ‘ವಿಜ್ಞಾನಿಗಳ ಪ್ರಕಾರ ನಮ್ಮ ಕಡೆ ಏನೂ ಅಗೊಲ್ಲ ಅಂತ ಹೇಳ್ಯಾರ, ಸಮುದ್ರದ ಹತ್ರ ಇದ್ದವರಿಗೆ ಸುನಾಮಿ ಲಕ್ಷಣಗಳು ಕಾಣಿಸಿಕೊಳ್ಬಹುದು’ ಅಂದೆ.



ಅದಕ್ಕೆ ಚಂದ್ರಪ್ಪ ತಕ್ಷಣ ಪ್ರತಿಕ್ರಿಯೆ ನೀಡಿ..‘ನಮಿಗೆ ಕುಡಿಯಾಕ ನೀರಿಲ್ಲ, ಇನ್ನ ನಮ್ಮನ್ನ ಮುಳುಗ್ಸಿ ಸಾಯ್ಸೋ ನೀರೆಲ್ಲಿಂದ ಬರ‍್ತಾತಿ ಬಿಡು’ ಎಂದಾಗ ಎಲ್ಲರ ಮುಖದಲ್ಲಿ ಸಣ್ಣದಾಗಿ ನಗು ಹುಕ್ಕಿತು. ಆಗ ಚಂದ್ರಪ್ಪನ ಮಕ್ಕಳು ಮಲ್ಲೇಶ್. ಕಾಳಪ್ಪ ಬಂದರು. ಮಲ್ಲೇಶ್ ಬಂದವನೇ ಅಪ್ಪನ ಕೆಲಸಕ್ಕೆ ಸಹಾಯಕನಾಗಿ ಕೆಲಸ ಮಾಡತೊಡಗಿದ. ನಾನು ಮಲ್ಲೇಶನ ಹತ್ತಿರ ಮಾತಿಗೆ ಕೂತೆ. ಕಾರಣ ಚಂದ್ರಪ್ಪನ ಕಿವಿ ಕೇಳುತ್ತಿಲ್ಲವಾದ್ದರಿಂದ ಆತನ ಜತೆ ಮಾತಾಡಿ ಆತನಿಂದ ಉತ್ತರ ಪಡೆಯುವುದು ಕಷ್ಟವಾಗಿತ್ತು.



ಚಂದ್ರಪ್ಪ ಕಮ್ಮಾರಿಕೆ ಮತ್ತು ಬಡಿಗಿತನ ಎರಡನ್ನು ಮೂವತ್ತು ವರ್ಷಗಳಿಂದ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜೋಳದ ಕೂಡ್ಲಿಗಿಯಲ್ಲಿ ಮಾಡುತ್ತಾ ಬಂದಿದ್ದಾನೆ. ಈಗ ಆತನೊಂದಿಗೆ ಆತನ ಇಬ್ಬರು ಮಕ್ಕಳು ಅದೇ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ಕಮ್ಮಾರಿಕೆಗೆ ಒಂದೇ ಜಾತಿಗೆ ಸೀಮಿತವಾದ ಉದ್ಯೋಗವಲ್ಲ. ಅದು ಹಲವಾರು ಜಾತಿ ಧರ್ಮದವರನ್ನು ಒಳಗೊಂಡಿದೆ. ಹಾಗಾಗಿ ಒಂದೊಂದು ಊರಲ್ಲಿ ಬೇರೆ ಬೇರೆಯ ಜಾತಿಯವರು ಕಮ್ಮಾರಿಕೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಕಮ್ಮಾರಿಕೆಯನ್ನು ಆಧರಿಸಿದ ರೈತಾಪಿ ಕೆಲಸಗಳಲ್ಲಿ ಕಮ್ಮಾರಿಕೆಯನ್ನು ನಿಲ್ಲಿಸುವಂತಹ ತೀವ್ರ ಬದಲಾವಣೆಗಳೇನು ಸಂಭವಿಸಿಲ್ಲ. ಹಾಗಾಗಿ ಜಾನಪದ ವಿದ್ವಾಂಸರು ವೃತ್ತಿ ಕಸಬುಗಳು ಅವನತಿಯ ಹಾದಿ ತಲುಪಿವೆ ಎನ್ನುವ ಮಾತು ಸ್ವಲ್ಪ ಮಟ್ಟಿಗೆ ಹುಸಿ ಎನ್ನಿಸಿತು.



ಬಹುತೇಕ ವೃತ್ತಿ ಕಸಬಿನಿಂದ ಸಂಕಷ್ಟ ಅನುಭವಿಸಿದವರು ಸಹಜವಾಗಿ ತಮ್ಮ ಮಕ್ಕಳು ಅದೇ ವೃತ್ತಿಯಲ್ಲಿ ಮುಂದುವರೆಯಲು ಇಷ್ಟಪಡುವುದಿಲ್ಲ. ಆದರೆ ಕಮ್ಮಾರ ಚಂದ್ರಪ್ಪ ಹೆಚ್ಚು ಓದದ ತನ್ನ ಮಕ್ಕಳನ್ನೂ ಕಮ್ಮಾರಿಕೆಯಲ್ಲಿಯೇ ಮುಂದುವರಿಯುವಂತೆ ತರಬೇತಿ ನೀಡುತ್ತಿದ್ದಾರೆ. ಚಂದ್ರಪ್ಪನದೇ ಮಾತಿನಲ್ಲಿ ಹೇಳುವುದಾದರೆ, ‘ಹಿಂದಿನ ಕಾಲ್ದಾಗ ಹಗ್ಲು ರಾತ್ರಿ ಕತ್ತಿ ಮಾಡಿದಂಗ ಮಾಡಿದ್ರು..ಹೊಟ್ಟಿಗೆ ಬಟ್ಟಿಗೆ ಸಾಕಾಗ್ತಿರ‍್ಲಿಲ್ಲ..ಈಗ್ಲೇ ವಾಸಿ ದಿನ ಪೂರ್ತಿ ದುಡಿದ್ರೆ ಕಡಿಮೆ ಅಂದ್ರೂ ಆರುನೂರಾದ್ರೂ ಆಗ್ತಾತಿ..ಈಗಿನ ದುಬಾರಿ ಕಾಲ್ದಾಗೂ ನಾವು ಅರಾಮಾಗಿದಿವಿ’ ಎಂದರು. ಇದು ಹೇಗೆಂದು ಕೇಳುತ್ತಾ ಹೋದಂತೆ ಕಮ್ಮಾರಿಕೆಯ ಹೊಸ ಚಲನೆಗಳು ಕಾಣತೊಡಗಿದವು.



ಇಂದು ಗ್ರಾಮೀಣ ಭಾಗದಲ್ಲಿ ಕೃಷಿ ಕೆಲಸಕ್ಕೆ ಟ್ರಾಕ್ಟರ್ ಮೇಲಿನ ಅವಲಂಬನೆ ಹೆಚ್ಚಾಗುತ್ತಿದೆ. ಟ್ರಾಕ್ಟರ್ ಮಡಕೆ ಹೊಡೆಯಲು, ಹರಗಲು ಬಳಸುವ ಕುಳಗಳು ಮೊಂಡಾದಾಗ ಅವುಗಳನ್ನು ಅಣಿದು ಚೂಪು ಮಾಡಲು ಕಮ್ಮಾರರ ಹತ್ತಿರವೆ ಬರಬೇಕು. ಒಂದು ಟ್ರಾಕ್ಟರ್ ಕುಳವನ್ನು ಅಣಿಯಲು ಕಮ್ಮಾರರು ಇನ್ನೂರ ಐವತ್ತು ರೂಪಾಯಿಯ ಚಾರ್ಜಮಾಡುತ್ತಾರೆ. ಅಂದರೆ ಹತ್ತಾರು ಎತ್ತಿನ ಮಡಕೆ ಕುಳ ಅಣಿಯುವುದರಿಂದ ಬರುವ ಹಣ ಒಂದು ಟ್ರಾಕ್ಟರ್ ಮಡಕೆ ಅಣಿಯುವುದರಿಂದ ಬರುತ್ತದೆ. ಅಂದರೆ ಅತ್ಯಾಧುನಿಕ ಯಂತ್ರವಾದ ಟ್ರಾಕ್ಟರ್ ಕೂಡ ಕಮ್ಮಾರನ ಕುಲುಮೆಯನ್ನು ಆಶ್ರಯಿಸಿರುವುದು ಇದರಿಂದ ತಿಳಿಯುತ್ತದೆ. ಹೀಗೆ ಅಧುನಿಕ ಎನ್ನುವ ಪರಿಕರಗಳು ಕುಲುಮೆಗೆ ಬರತೊಡಗಿರಿವುದರಿಂದ ಅದರ ಆದಾಯವೂ ಹೆಚ್ಚಿದೆ. ಹೀಗೆ ಸಾಂಪ್ರದಾಯಿಕ ವೃತ್ತಿ ಕಸಬುಗಳ ಹೊಸ ಚಲನೆಯನ್ನು ನೋಡುತ್ತಾ ಹೋದರೆ, ಅದರ ಆದಾಯದ ಹೊಸ ಮೂಲಗಳು ಹುಟ್ಟಿಕೊಂಡಿರುವುದು ಗೋಚರಿಸುತ್ತರದೆ


ಚಂದ್ರಪ್ಪ ಬದುಕಿನ ಆಸರೆಯಾದ ಕುಲುಮೆಯನ್ನು ದೇವರೆಂದೇ ನಂಬಿದ್ದಾರೆ. ತಮ್ಮ ಭಾವನೆಗಳನ್ನು ಕೆಲವು ನಂಬಿಕೆ ಆಚರಣೆಯ ಮೂಲಕ ವ್ಯಕ್ತಪಡಿಸುತ್ತಾರೆ. ದಿನಾಲು ಕುಲುಮೆಯಲ್ಲಿ ಬೆಂಕಿ ಹೊತ್ತಿಸುವ ಮೊದಲು ಸೂರ್ಯನಿಗೆ (ಪೂರ್ವದಿಕ್ಕಿಗೆ)ಪೂಜೆ ಮಾಡುತ್ತಾರೆ. ಅಮವಾಸ್ಯೆ ಹುಣ್ಣಿಮೆಯ ದಿನ ವಿಶೇಷ ಪೂಜೆ ಮಾಡುತ್ತಾರೆ. ದಸರಾ ಹಬ್ಬದಲ್ಲಿ ಕಮ್ಮಾರಿಕೆಯ ಎಲ್ಲಾ ಪರಿಕರಗಳನ್ನು ಇಟ್ಟು ಆಯುಧ ಪೂಜೆ ಮಾಡುತ್ತಾರೆ. ಆಗ ಒಂದು ವಾರಗಳ ಕಾಲ ಕುಲುಮೆಯಲ್ಲಿ ಬೆಂಕಿ ಹತ್ತಿಸುವುದಿಲ್ಲ. ಇದೊಂದು ರೀತಿಯ ವಾರ್ಷಿಕ ರಜೆ. ಕುಲುಮೆಯಲ್ಲಿ ಚಾನು ಬಿದ್ದರೆ, ಕೈ ಕಾಲು ಸುಟ್ಟರೆ ಏನಾದರೂ ಅಪಶಕುನವಾಗಿದೆ ಎನ್ನುವ ನಂಬಿಕೆ ಇವರಿಗಿದೆ.



ಒಂದೆಡೆ ಜನಸಾಮಾನ್ಯರ ಹೆಸರಲ್ಲಿ ಕೋಟಿ ಕೋಟಿ ರೂಗಳ ಯೋಜನೆಗಳನ್ನು ಆರಂಭಿಸಿ ಹಣ ದೋಚುವ ಬಂಡ ರಾಜಕಾರಣಿಗಳಿದ್ದರೆ, ಇನ್ನೊಂದೆಡೆ ಚಂದ್ರಪ್ಪನಂತಹ ಕಮ್ಮಾರರು ಕುಲುಮೆ, ಪಂಕ, ಚಕ್ರ, ಅಡಿಗಲ್ಲು, ಸುತ್ತಿಗಿ, ಇಕ್ಕಳ, ನೀರಬಾನಿ, ಮಸಗಲ್ಲು, ಚಾನು ಮುಂತಾದ ಪರಿಕರಗಳೊಂದಿಗೆ ನಿತ್ಯವೂ ಒಡನಾಡುತ್ತಾ ಬದುಕಿಗೆ ಹೊಸ ಚೈತನ್ಯವನ್ನು ಪಡೆಯುತ್ತಿರುತ್ತಾರೆ.