ಗುರುವಾರ, ಮಾರ್ಚ್ 17, 2011

ಮೂರ್ತಿಗಳ ’ಇಂಗ್ಲೀಷ್ ಮನಸ್ಸು’ ಮತ್ತು ರೈಗಳ ’ದೇಸಿ ಮನಸ್ಸು’
(ಉಷಾಕಟ್ಟೆಮನೆ ಅವರು ತಮ್ಮ ಮೌನಕಣಿವೆ ಬ್ಲಾಗ್ ನಲ್ಲಿ ಬರೆದುಕೊಂಡ ಬರಹವಿದು. ಒಂದು ಭಾಷೆ,ಸಂಸ್ಕೃತಿ , ಜಾನಪದ ಹೇಗೆ ಒಂದರೊಳಗೊಂದು ಬೆರೆತಿರುತ್ತವೆ ಎನ್ನುವುದನ್ನು ಅಕಾಡೆಮಿಕ್ ಶೈಲಿಯ ಭಾರವಿಲ್ಲದೆ ಆಪ್ತವಾಗಿ ಬರೆದಿದ್ದಾರೆ. ತುಳು ಭಾಷೆ ಮತ್ತು ಅದರ ದೇಸಿಯ ಅಂತರ್ಗತ ಜಗತ್ತನ್ನುಆಪ್ತ ಮಾತುಕತೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ನೆಲೆಯಲ್ಲಿ ಕನ್ನಡದಲ್ಲಿ ಈಗಲೂ ಉಳಿದಿರುವ ಶಿಷ್ಟ ,ಜನಪದ ಎನ್ನುವ ಶ್ರೇಣೀಕೃತ ಮನಸ್ಥಿತಿಯ ಬಗ್ಗೆ ಸಣ್ಣ ತಕರಾರನ್ನೂ ಎತ್ತಿದ್ದಾರೆ. ಈ ಬರಹ ಕನ್ನಡ ಜಾನಪದ ಬ್ಲಾಗ ಓದುಗರ ಗಮನಕ್ಕೆ. –ಅರುಣ್)

-ಉಷಾ ಕಟ್ಟೆಮನೆ

ಇನ್ಫೋಸಿಸ್ ಟೆಕ್ನಲಾಜೀಸ್ ಸಂಸ್ಥೆಯ ಸಂಸ್ಥಾಪಕ ನಾಗವಾರ ರಾಮರಾಯ ನಾರಾಯಣಮೂರ್ತಿಯವರಿಗೆ ಕನ್ನಡ ಬರುತ್ತದೆಯೆಂದು ಕನ್ನಡ ಕುಲಕೋಟಿಗೆ ಕೊನೆಗೂ ಗೊತ್ತಾಯಿತು. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅವರು ಅಚ್ಚಕನ್ನಡದಲ್ಲಿ ಮಾತಾಡಿದರು. ಹಾಗೆಯೇ ಕನ್ನಡದ ಕುವರಿಯೆಂದೇ ಬಿಂಬಿಸಲಾಗುತ್ತಿರುವ ಬಾಲಿವುಡ್ ತಾರೆ ಐಶ್ವರ್ಯ ರೈಗೆ ಕನ್ನಡ ಬರುವುದಿಲ್ಲವೆಂದು ಕೂಡಾ ಸಾಬೀತಾಯಿತು.

ಮೂರ್ತಿಗಳ ಮಾತೃಭಾಷೆ ಕನ್ನಡ. ಹಾಗಾಗಿ ಅವರು ಕನ್ನಡದಲ್ಲಿ ತಡವರಿಸದೆ ಮಾತಾಡಿದರು. ಐಶ್ವರ್ಯಳ ಮಾತೃಭಾಷೆ ತುಳು. ಅದರಲ್ಲಾಕೆ ನಿರರ್ಗಳವಾಗಿ ಮಾತಾಡಬಲ್ಲಳು. ಕೆಲವು ವರ್ಷಗಳ ಹಿಂದೆ ಆಕೆ ಮಂಗಳೂರಿಗೆ ಬಂದಿದ್ದಳು. ಆಗ ಆಕೆಗಿನ್ನೂ ಮದುವೆಯಾಗಿರಲಿಲ್ಲ. ತನ್ನ ಹುಟ್ಟೂರಿನಲ್ಲಿ ತುಂಬಾ ಅಭಿಮಾನದಿಂದ ತುಳುವಿನಲ್ಲೇ ಭಾಷಣ ಮಾಡಿದ ಆಕೆ, “ಯಾನ್ ತುಳು ಆಣನೇ ಮದ್ಮೆ ಆಪಿನಿ” ಅಂದರೆ ’ನಾನು ತುಳು ಹುಡುಗನನ್ನೇ ಮದುವೆಯಾಗುತ್ತೇನೆ’ ಎಂದು ಹೇಳಿ ತುಳು ಹುಡುಗರಲ್ಲಿ ಪುಳಕವನ್ನು ತಂದಿದ್ದಳು.

ತುಳುವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಅವರ ಮಾತೃಭಾಷೆ ತುಳುವೇ ಆಗಿರುತ್ತದೆ ಮತ್ತು ಅವರು ತಮ್ಮ ಮಕ್ಕಳಿಗೆ ತುಳು ಕಲಿಸುತ್ತಾರೆ, ಹಾಗಾಗಿ ಅವರ ಮಕ್ಕಳ ಮಾತೃಭಾಷೆ ತುಳುವೇ ಆಗಿರುತ್ತದೆ. ಈ ತುಳುನಾಡು ಕರ್ನಾಟಕವೆಂಬ ರಾಜ್ಯದೊಳಗೆ ಇರುವ ಕಾರಣದಿಂದಾಗಿ ಅವರನ್ನು ನಾವು ಕನ್ನಡಿಗರೆಂದೇ ಪರಿಗಣಿಸುತ್ತೇವೆ. ಅದನ್ನವರು ಪ್ರೀತಿಯಿಂದಲೇ ಒಪ್ಪಿಕೊಳ್ಳುತ್ತಾರೆ. ಇದೇ ಅಭಿಮಾನದಿಂದ ಐಶ್ವರ್ಯ ರೈ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿರಬಹುದು. ಬಾಳ ಠಾಕ್ರೆಯ ಬೆದರಿಕೆಯನ್ನೂ ಧಿಕ್ಕರಿಸಿ ಆಕೆ ಸಮ್ಮೇಳನದಲ್ಲಿ ಭಾಗವಹಿಸಿದಳೆಂಬುದನ್ನು ನಾವು ಗಮನಿಸಬೇಕು. ಬೇಕಾದರೆ ಹಿಂದಿ ತಾರೆಯರಾದ ಸುನಿಲ್ ಶೆಟ್ಟಿ, ಶಿಲ್ಪಶೆಟ್ಟಿ, ನಿರ್ದೇಶಕ ರೋಹಿತ್ ಶೆಟ್ಟಿ, ಸಂಗೀತ ನಿರ್ದೇಶಕ ಸಂದೀಪ್ ಚೌಟ ಅವರನ್ನು ಮಾತಾಡಿಸಿ ನೋಡಿ ಅವರು ತಾವು ತುಳುವರೆಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾರೆ, ತಮ್ಮ ಎದುರಿನಲ್ಲಿರುವವರು ತುಳುವರೆಂದು ಗೊತ್ತಾದರೆ ತುಳುವಿನಲ್ಲೇ ಮಾತು ಮುಂದುವರೆಸುತ್ತಾರೆ. ಇಂತಹ ನಡವಳಿಕೆಯನ್ನು ಕನ್ನಡದವರಿಂದ ನಿರೀಕ್ಷಿಸಲು ಸಾಧ್ಯವೇ?
ನಾರಾಯಣಮೂರ್ತಿಯವರು ಸಾರ್ವಜನಿಕವಾಗಿ ಕನ್ನಡ ಮಾತಾಡುವುದಿಲ್ಲ. ಎಲ್ಲಿಯೂ ತಾನು ಕನ್ನಡದವನೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ. ಆದರೆ ಐಶ್ವರ್ಯ ರೈ ಸಾರ್ವಜನಿಕವಾಗಿ ತುಳು ಮಾತಾಡುತ್ತಾಳೆ, ತಾನು ತುಳುನಾಡಿನವಳು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾಳೆ. ಇದು ಕನ್ನಡಿಗರಿಗೂ ತುಳುವರಿಗೂ ಇರುವ ವ್ಯತ್ಯಾಸ.

ನನ್ನ ಮಾತೃಭಾಷೆ ತುಳು. ತುಳು ಅಂದ ತಕ್ಷಣ ನನ್ನ ಚಿತ್ತಭಿತ್ತಿಯಲ್ಲಿ ಹಲವು ವಿಚಾರಗಳು ಮೂಡಿಬರುತ್ತವೆ. ಅದು ಯಕ್ಷಗಾನ, ನಾಗಮಂಡಲ, ಭೂತರಾಧನೆ, ಕಂಬಳ, ಕೋಲ, ತಂಬಿಲ, ಡಕ್ಕೆಬಲಿ, ಕೋಳಿ ಅಂಕ, ಖೆಡ್ಡಸ, ಕೋಟಿ-ಚನ್ನಯ್ಯ, ಸಿರಿಜಾತ್ರೆ….ಹೀಗೆ ನಂಬಿಕೆ, ಆಚರಣೆಗಳ ಮೆರವಣಿಗೆ ಸಾಗಿಬರುತ್ತದೆ. ಇದನ್ನೇ ನಾವು ’ತುಳುವ ಮನಸ್ಸು’ ಎಂದು ಕರೆಯುತ್ತೇವೆ. ತುಳು ಕೇವಲ ಒಂದು ಭಾಷೆ ಮಾತ್ರ ಅಲ್ಲ. ಯಕ್ಷಗಾನ, ಕಂಬಳ, ಸಿರಿಜಾತ್ರೆ, ಭೂತರಾದನೆಯ ಹೊರತಾದ ತುಳುನಾಡನ್ನು ಕಲ್ಪಿಸಿಕೊಳ್ಳುವುದಕ್ಕೆ ನನಗೆ ಸಾಧ್ಯವಿಲ್ಲ. ಅದರೆ ಕನ್ನಡ ಎಂದ ತಕ್ಷಣ ಇಷ್ಟು ಶಕ್ತಿಯುತವಾದ ಬಿಂಬಗಳು ನನ್ನ ಚಿತ್ತಭಿತ್ತಿಯಲ್ಲಿ ಮೂಡಿಬರುವುದೇ ಇಲ್ಲ. ನಮ್ಮ ಶಿಷ್ಟ ಸಂಸ್ಕೃತಿ-ಶಿಷ್ಟ ಸಾಹಿತ್ಯವು ಜನಪದ ಸಂಸ್ಕೃತಿ-ಜನಪದ ಸಾಹಿತ್ಯವನ್ನು ಕಡೆಗಣಿಸುತ್ತಿರುವ ಪರಿಣಾಮ ಇದಾಗಿರಬಹುದೇ? ಸಂಸ್ಕೃತ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿನ ಆಸಕ್ತಿ ಜಾನಪದ ವಿಶ್ವವಿದ್ಯಾಲಯವನ್ನು ಕಟ್ಟುವುದರಲ್ಲಿ ಏಕಿಲ್ಲ?

ಕಳೆದ ವರ್ಷ ಧರ್ಮಸ್ಥಳದ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ ನಡೆಯಿತು. ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ನಿರೀಕ್ಷೆಗೂ ಮೀರಿ ತುಳುವರು ಭಾಗವಹಿಸಿದ್ದರು. ವೀರೇಂದ್ರ ಹೆಗ್ಗಡೆಯವರನ್ನು ’ಗುರ್ಕಾರ’[ ಯಜಮಾನ] ರನ್ನಾಗಿಸಿ ವೀಳ್ಯಕೊಟ್ಟ ಈ ಸಮ್ಮೇಳನಕ್ಕೆ ೩ಲಕ್ಷ ಜನರು ಬರುವವರೆಂದು ಅಂದಾಜಿಸಲಾಗಿತ್ತು. ಆದರೆ ೬ ಲಕ್ಷಕ್ಕೂ ಅಧಿಕ ತುಳು ಬಂಧುಗಳು ಪ್ರಪಂಚದಾದ್ಯಂತದಿಂದ ಉಜಿರೆಗೆ ಹರಿದು ಬಂದಿದ್ದರು. ಹಿಂದಿನ ಕಾಲದಲ್ಲಿ ಎತ್ತಿನ ಗಾಡಿ ಕಟ್ಟಿಕೊಂಡು ಮನೆ ಮಂದಿಯೆಲ್ಲಾ ಜಾತ್ರೆಗೆ ಬಂದಂತೆ ತುಳು ಬಾಂದವರು ವಾಹನಗಳನ್ನೇರಿ ಉಜಿರೆಗೆ ಬಂದಿದ್ದರು.

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ದಕ್ಷಿಣ ಭಾಗ ಮತ್ತು ಕೇರಳದ ಉತ್ತರ ಭಾಗವಾದ ಕಾಸರಗೋಡು ಜಿಲ್ಲೆಯಲ್ಲಿ ವಾಸಿಸುವ ಬಹುಸಂಖ್ಯಾತರು ಮಾತಾಡುವ ಭಾಷೆ ತುಳು.ಇದರಲ್ಲಿ ಬಹಳಷ್ಟು ಜನ ದೂರದ ಮುಂಬಯಿ, ಮದ್ಯಪ್ರಾಚ್ಯ ದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದರೂ ಅವರು ತುಳುನಾಡನ್ನು, ತುಳುಭಾಷೆಯನ್ನು ಮರೆತವರಲ್ಲ. ತಾವಿರುವೆಡೆಯಲ್ಲಿಯೇ ತಮ್ಮ ದೈವಗಳಿಗೂ ಒಂದು ’ಸ್ಥಾನ’ ಕಲ್ಪಿಸಿಕೊಳ್ಳುತ್ತಾರೆ. ವರ್ಷಕ್ಕೊಮ್ಮೆಯಾದರೂ ತಾಯ್ನಾಡಿಗೆ ಬಂದು ನೇಮ, ಕೋಲ, ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಒಂದು ಅಂದಾಜಿನ ಪ್ರಕಾರ ಸುಮಾರು ೫೦ ಲಕ್ಷ ತುಳುವರು ಪ್ರಪಂಚದಾದ್ಯಂತ ಹರಡಿಕೊಂಡಿದ್ದಾರೆ. ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ ೪ರಷ್ಟು ಜನರು ತುಳುವರಾಗಿದ್ದಾರೆ. ಪಂಚದ್ರಾವಿಡ ಭಾಷೆಯಲ್ಲಿ ಒಂದಾದ ತುಳುವಿಗೆ ಸ್ವಂತ ಲಿಪಿಯಿಲ್ಲ; ಭವ್ಯ ಸಾಹಿತ್ಯ ಪರಂಪರೆಯಿಲ್ಲ. ಕೇವಲ ಮೌಕಿಕ ಸಾಹಿತ್ಯದ ಮೂಲಕವೇ ಉಳಿದುಕೊಂಡು ಬಂದಿರುವ ಸಂಸ್ಕೃತಿಯಿದು.

ಇಷ್ಟೆಲ್ಲಾ ಹೇಳಿದುದರ ಸ್ಪಷ್ಟ ಉದ್ದೇಶ ಇಷ್ಟೇ; ಜಾನಪದದ ಜೊತೆ ಅನುಸಂಧಾನ ನಡೆಸದ ಯಾವುದೇ ಭಾಷೆ ಜೀವಂತವಾಗಿ ಉಳಿಯುವುದು ಕಷ್ಟ. ಉಳಿದರೂ ದ್ವೀಪವಾಗಿಬಿಡುತ್ತದೆ. ಸಂಸ್ಕೃತ ಭಾಷೆಯೇ ಇದಕ್ಕೆ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿದೆ. ಕನ್ನಡದ ಮಟ್ಟಿಗೆ ಹೇಳುವುದಾರೆ ಮಣ್ಣಿನ ಜೊತೆ ನೇರ ಸಂಪರ್ಕ ಹೊಂದಿರುವ ಬಹುಸಂಖ್ಯಾತ ಜನಸಮುದಾಯವಾದ ರೈತರೊಡನೆ, ಶ್ರಮಿಕವರ್ಗದ ಜೊತೆ ಗುರುತಿಸಿಕೊಂಡು, ಪ್ರಭುತ್ವದ ಭಾಷೆಯಾಗಬೇಕು. ಇಲ್ಲದಿದ್ದರೆ ಜಾಗತೀಕರಣದ ಭರಾಟೆಯಲ್ಲಿ ಕನ್ನಡ ಕೊಚ್ಚಿ ಹೋಗುವ ಸಾಧ್ಯತೆಯಿದೆ. ಅಮೇರಿಕದ ಅಭಿವೃದ್ದಿಯನ್ನು ಮಾದರಿಯನ್ನಾಗಿರಿಸಿಕೊಂಡಿರುವ ನಾರಾಯಣಮೂರ್ತಿಯಂಥ ವ್ಯಾಪಾರಸ್ಥರು ಅದಕ್ಕೆ ಕಾರಣರಾಗುತ್ತಾರೆ.

ಸಂಸ್ಕೃತಿಯೆನ್ನುವುದು ಪ್ರಾದೇಶಿಕ ವೈಶಿಷ್ಟತೆಗಳನ್ನು ಒಳಗೊಂಡಿರುತ್ತದೆ. ಆಯಾಯ ಪ್ರದೇಶದ ಪರಿಸರ, ಜನಜೀವನ, ಆಚಾರ-ವಿಚಾರ, ಆಹಾರ ಪದ್ದತಿ, ಉಡುಗೆ-ತೊಡುಗೆಗಳು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಪ್ರತಿ ಸಂಸ್ಕೃತಿಯೂ ಅನನ್ಯವಾದುದು. ಇದರ ಅಭಿವ್ಯಕ್ತಿಯೇ ಜನಪದ ಸಾಹಿತ್ಯ, ಜನಪದ ಸಂಸ್ಕೃತಿ. ಇದುವೇ ಕನ್ನಡ ಸಂಸ್ಕೃತಿಯ ಮೂಲದ್ರವ್ಯ. ಈ ಅನನ್ಯತೆಯನ್ನು ನಾಶಪಡಿಸುವ ಹುನ್ನಾರ ಬಹುರಾಷ್ಟ್ರೀಯ ಕಂಪೆನಿಗಳಿಂದ ನಡೆಯುತ್ತಿದೆ.

ಈ ಮೂಲದ್ರವ್ಯ ನಗರ ಕೇಂದ್ರಿತ ಮನಸ್ಸಿನ ಬಹುತೇಕ ಉದ್ದಿಮೆದಾರರಲ್ಲಿ ಇಲ್ಲ. ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾದ ಮಾಧ್ಯಮದಲ್ಲಿ ಇಲ್ಲ. ರಾಜಕಾರಣಿಗಳಲ್ಲಿ ಇಲ್ಲ. ಪ್ರಭುತ್ವದಲ್ಲಿ ಇಲ್ಲ. ಇದ್ದಿದ್ದರೆ ಇವತ್ತು ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಬಂದ ಕಲಾತಂಡಗಳು ವಸತಿ ವ್ಯವಸ್ಥೆಯಿಲ್ಲದೆ ಬೀದಿಯಲ್ಲಿ ಮಲಗುವ ಪ್ರಮೇಯ ಬರುತ್ತಿರಲಿಲ್ಲ. ರೈತ ನಾಯಕನೊಬ್ಬ ಇದೇ ವೇದಿಕೆಯಲ್ಲಿ ಕಣ್ಣೀರು ಹಾಕುವ ದೈನ್ಯತೆ ಉಂಟಾಗುತ್ತಿರಲಿಲ್ಲ. ಕನ್ನಡಿಗರು ಸಂಭ್ರಮಪಡಬೇಕಾಗಿದ್ದ ಸಮ್ಮೇಳನದಲ್ಲಿ ಅಪಸ್ವರದ ಧ್ವನಿ ಏಳುತ್ತಿರಲಿಲ್ಲ.

ನಿಜ. ಇಂಗೀಷ್ ಭಾಷೆಯೆನ್ನುವುದು ಜ್ನಾನದ ಕೀಲಿ ಕೈ. ಅದಕ್ಕಿರುವ ಅಗಾದ ಸಾಧ್ಯತೆಗಳ ಅರಿವು ಪ್ರತಿಯೊಬ್ಬ ಕನ್ನಡಿಗನಿಗೂ ಇದೆ. ಅದರಿಂದಾಗಿಯೇ ಗ್ರಾಮಾಂತರ ಪ್ರದೇಶದ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿದೆ. ಆದರೆ ನಮ್ಮ ಭಾವ ಪ್ರಪಂಚ ವಿಸ್ತಾರಗೊಳ್ಳುವುದು ಮಾತೃಭಾಷೆಯಿಂದ. ಕನ್ನಡದ ಮನಸ್ಸು ರೂಪುಗೊಳ್ಳುವುದು ಇಲ್ಲಿಯೇ. ಹಾಗಾಇಯೇ ಆಡಳಿತ ಭಾಷೆ ಕನ್ನಡವಾಗಬೇಕು. ನಮ್ಮ ದೈನಂಧಿನ ವ್ಯವಹಾರ ಕನ್ನಡದಲ್ಲಿಯೇ ಸರಾಗವಾಗಿ ಸಾಗುವಂತಾಗಬೇಕು. ಆದರೆ ಹಾಗಾಗಲು ಸಾಧ್ಯವೇ? ನಮ್ಮ ರಾಜಕಾರಣಿಗಳಲ್ಲಿ ಆ ಇಚ್ಛಾಶಕ್ತಿ ಬರಲು ಸಾಧ್ಯವೇ?

ಅಭಿವೃದ್ಧಿಯ ಹೆಸರಲ್ಲಿ ಪ್ರಕೃತಿಯ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಪ್ರಕೃತಿ ಮಾತೆ ಒಮ್ಮೆ ಮೈಕೊಡವಿ ಎದ್ದರೆ ಏನಾಗುತ್ತದೆಯೆಂಬುದು ಈಗ ಸುನಾಮಿಯಿಂದ ನರಳುತ್ತಿರುವ ಜಪಾನ್ ಅನ್ನು ನೋಡಿದರೆ ತಿಳಿಯುತ್ತದೆ. ಜಗತ್ತಿನಲ್ಲಿರುವ ಪರಮಾಣು ಸ್ಥಾವರಗಳಲ್ಲಿ ಕೆಲವೇ ಕೆಲವು ಸ್ಫೋಟಗೊಂಡರೂ ಸಾಮೂಹಿಕ ನರಹತ್ಯೆ ಸಂಭವಿಸಬಹುದಲ್ಲವೆ? ಇದು ಮನುಷ್ಯ ತಾನಾಗೇ ತೋಡಿಕೊಳ್ಳುತ್ತಿರುವ ಮರಣಗುಂಡಿಯಲ್ಲವೇ?

ಈ ಸಂದರ್ಭದಲ್ಲಿ ನಾವು ಮತ್ತೆ ದೇಶಿ ಚಿಂತನೆಯತ್ತ ಹೊರಳಬೇಕಾಗಿದೆ. ಅದಕ್ಕೆ ಕನ್ನಡದ ಮನಸ್ಸು ಬೇಕು; ತುಳು ಮನಸ್ಸು ಬೇಕು. ಅಂಥ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಅದಕ್ಕೆ ಸಾಹಿತ್ಯ ಸಮ್ಮೇಳನಗಳು, ವಿಶ್ವಕನ್ನಡ ಸಮ್ಮೇಳನಗಳು ನೆರವಾಗಬೇಕು. ಆದರೆ ಈಗ ನಡೆಯುತ್ತಿರುವ ಜಾತ್ರೆಯಂಥ ಸಮ್ಮೇಳನಗಳಿಂದ ಇದು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ.

ಸೋಮವಾರ, ಮಾರ್ಚ್ 14, 2011

ಜನಪದ ಕಸಬು-೨ ಕೊರಚರಟ್ಟಿ ಗ್ರಾಮದ ಪ್ಲಾಸ್ಟಿಕ್ ಹಗ್ಗ ತಯಾರಿಕೆ
ಜನಪದರು ತಮ್ಮ ಕಾಲಕ್ಕೆ ತಕ್ಕ ಹಾಗೆ ತಮ್ಮ ಹಳೆ ಕಸಬುಗಳಿಗೆ ಹೊಸ ಮಾರ್ಪಾಟುಗನ್ನು ಮಾಡಿಕೊಳ್ಳುತ್ತಾರೆ. ಆ ಮೂಲಕ ತಮ್ಮ ಆಲೋಚನೆ, ಆಚರಣಾ ಲೋಕದಲ್ಲಿಯೂ ತಕ್ಕ ಬದಲಾವಣೆ ಸಹಜವಾಗಿ ಆಗುತ್ತದೆ. ಹಾಗೆ ಜನರೇ ಸೃಷ್ಟಿಸಿಕೊಂಡ ಹೊಸ ಕಸಬು ಪ್ಲಾಸ್ಟಿಕ್ ಹಗ್ಗಗಳ ತಯಾರಿಕೆ. ಪ್ಲಾಷ್ಟಿಕ ಚೀಲಗಳಿಂದ ಎಳೆಗಳನ್ನು ಬಿಡಿಸಿ, ಅವುಗಳನ್ನು ನೂಲು ಮಾಡಿ ಹಗ್ಗಗಳನ್ನು ಮಾಡಿ ಮಾರಾಟ ಮಾಡಲಾಗುತ್ತದೆ. ಇದಕ್ಕೆ ನೆರವಾದ ವೃತ್ತಿ ಕಸಬೆಂದರೆ ಕತ್ತಾಳೆಯಿಂದ ನಾರು ತೆಗೆದು ಹಗ್ಗ ಮಾಡುವುದಾಗಿತ್ತು. ಈಗಲೂ ಕತ್ತಾಳೆ ನಾರಿನಿಂದ ನೂಲು ತೆಗೆಯುತ್ತಾರಾದರೂ ಅದರ ಪ್ರಮಾಣ ಕಡಿಮೆಯಾಗಿದೆ. ಅಥವಾ ಯಾವುದೋ ಒಂದು ಭಾಗದಲ್ಲಿ ಮಿಷನ್ ಬಳಸಿ ನಾರು ತೆಗೆಯುವುದನ್ನು ನೋಡಬಹುದು. ಅದು ಚಳ್ಳಕೆರೆಯ ಕುರುಡಿಹಳ್ಳಿಯ ಬಳಿ ಇರುವ ನಂದನಳ್ಳಿ ತಾಂಡದಲ್ಲಿ ಕಾಣುತ್ತದೆ. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲೂ ಇರಬಹುದು. ಜನಪದ ಕಸಬು ಸರಣಿಯಲ್ಲಿ ಕೂಡ್ಲಿಗಿಯ ಸಿದ್ಧರಾಮ ಹಿರೇಮಠ ಅವರು ಕೊರಚರಟ್ಟಿ ಗ್ರಾಮದ ಪ್ಲಾಸ್ಟಿಕ್ ಹಗ್ಗ ತಯಾರಿಕೆಯ ಬಗ್ಗೆ ಬರೆದಿದ್ದಾರೆ.-ಅರುಣ್-ಸಿದ್ಧರಾಮ ಹಿರೇಮಠ


ಬಿಸಾಡುವ ಕಾಗದ, ಪ್ಲಾಸ್ಟಿಕ್‌ಗಳಿಂದ, ಗೊಂಬೆ, ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸಿದರೆ, ನಗರ ಪ್ರದೇಶಗಳಲ್ಲಿ ಅದೊಂದು ಅತ್ಯುತ್ತಮ ಕಲೆಯೆಂದೇ ಪ್ರಸಿದ್ಧಿ ಪಡೆಯುತ್ತದೆ. ಅದಕ್ಕೆ ಎಲ್ಲಿಲ್ಲದ ಬೆಲೆ ಹಾಗೂ ಬೇಡಿಕೆ. ಆದರೆ ಗ್ರಾಮೀಣ ಭಾಗಗಳಲ್ಲಿ ಪ್ಲಾಸ್ಟಿಕ್‌ಗಳಿಂದ ಹಗ್ಗ ತಯಾರಿಸಿದರೆ ಅದು ಬದುಕಿಗೆ ಮಾರ್ಗವಾಗುತ್ತದೆ, ಬೆಲೆಯೂ ಕಡಿಮೆ, ಬೇಡಿಕೆಯೂ ಅಷ್ಟಕ್ಕಷ್ಟೆ. ತಾಲೂಕಿನ ಕೊರಚರಹಟ್ಟಿ ಗ್ರಾಮದಲ್ಲಿನ ಗ್ರಾಮಸ್ಥರಿಗೆ ಪ್ಲಾಸ್ಟಿಕ್ ಹಗ್ಗಗಳನ್ನು ಹೊಸೆಯುವುದೇ ಒಂದು ವೃತ್ತಿ.
ತಾಲೂಕು ಕೇಂದ್ರದಿಂದ ೩೫ ಕಿ.ಮೀ ದೂರವಿರುವ, ಬೆಳ್ಳಗಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಪುಟ್ಟ ಗ್ರಾಮ ಕೊರಚರಹಟ್ಟಿಯಲ್ಲಿ ಪ್ಲಾಸ್ಟಿಕ್‌ನಿಂದ ಹಗ್ಗ ತಯಾರಿಸುವುದೇ ಕಾಯಕವಾಗಿದೆ. ಅದೇ ಅವರ ಬದುಕಿಗೆ ಆಧಾರ.

ಕೋಳಿ ಫಾರಂಗಳಲ್ಲಿ ಸಿಗುವ ಕೋಳಿ ಆಹಾರದ ಪ್ಲಾಸ್ಟಿಕ್ ಚೀಲಗಳನ್ನು ೨ ರೂ.ಗಳಿಗೊಂದರಂತೆ ಖರೀದಿಸಿ ತರುತ್ತಾರೆ. ಅವುಗಳನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ಅವುಗಳನ್ನು ದಾರದ ರೀತಿಯಲ್ಲಿ ಕತ್ತರಿಸಿಕೊಂಡು, ಯಂತ್ರವಿರುವವರು ಯಂತ್ರದಲ್ಲಿ ಹಗ್ಗ ಹೊಸೆದರೆ, ಬಹುತೇಕ ಜನ ಕೈಯಿಂದಲೇ ಹಗ್ಗ ಹೊಸೆಯುತ್ತಾರೆ. ಹೀಗೆ ಹೊಸೆದ ಹಗ್ಗದಲ್ಲಿ ಮಡಕೆ ಮಿಣಿ, ಬಾರಿಣಿ, ಹಿಡಿಹಗ್ಗ, ಎತ್ತಿನ ಹಗ್ಗ ಹೀಗೆ ಕೃಷಿಗೆ ಬೇಕಾಗುವ ಎಲ ಬಗೆಯ ಹಗ್ಗಗಳನ್ನೂ ಸಿದ್ಧಪಡಿಸುತ್ತಾರೆ. ನಂತರ ತಾಲೂಕಿನಾದ್ಯಂತ ಎಲ್ಲೆಲ್ಲಿ ಸಂತೆಗಳಿರುತ್ತವೆಯೋ ಅಲಿ ಮಾರಾಟಕ್ಕೆ ಒಯ್ಯುತ್ತಾರೆ. ಪ್ಲಾಸ್ಟಿಕ್ ಹಗ್ಗವಾದರೆ ೨೫ ರೂ.ಗಳಂತೆ, ಮಿಣಿಯಾದರೆ ೬೦ ರೂ.ಗಳಂತೆ ಸಂತೆಯ್ಲಲಿ ಮಾರಾಟ ಮಾಡುತ್ತಾರೆ. ಹಗ್ಗಗಳನ್ನು ಕೈಯಿಂದಲೇ ಹೊಸೆದು ಸಿದ್ಧಪಡಿಸಿದರೆ ದಿನಕ್ಕೆ ೧೦೦ ರೂ.ಗಳಂತೆ ದುಡಿಯಬಹುದಾಗಿದೆ, ಯಂತ್ರವಿದ್ದಲ್ಲಿ, ೨೦೦-೩೦೦ ರೂ.ಗಳವರೆಗೂ ದುಡಿಯಬಹುದೆಂದು ಗ್ರಾಮದ ಜಯಣ್ಣ ಹೇಳುತ್ತಾನೆ.

ಗ್ರಾಮದಲ್ಲಿನ ೪೦ ಮನೆಗಳೂ ಇದೇ ವೃತ್ತಿಯನ್ನು ಅವಲಂಬಿಸಿವೆ. ಬೇಸಿಗೆಯಲ್ಲಿ ಕತ್ತಾಳೆ ನಾರಿನ ಹಗ್ಗವನ್ನು ಹೊಸೆದರೆ, ಉಳಿದ ದಿನಗಳಲ್ಲಿ ಪ್ಲಾಸ್ಟಿಕ್ ಹಗ್ಗಗಳನ್ನು ಸಿದ್ಧಪಡಿಸುತ್ತೇವೆಂದು ರಾಮಪ್ಪ ಹೇಳುತ್ತಾನೆ. ಹಗ್ಗ ಹೊಸೆವ ಯಂತ್ರವಾದರೆ ದುಡಿಮೆಗೆ ಮಾರ್ಗವಾಗುತ್ತದೆ. ಯಂತ್ರವನ್ನು ಹುಬ್ಬಳ್ಳಿಯಿಂದಲೇ ತರಬೇಕು, ಅದಕ್ಕೆ ೫,೦೦೦ ರೂ.ಗಳಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಹಣವಿದ್ದವರು ಸ್ವಂತಕ್ಕೆ ಖರೀದಿಸಿ ತಂದರೆ, ಉಳಿದವರು ಹಳೆಯ ಪದ್ಧತಿಯಂತೆಯೇ ಕೈಯಿಂದಲೇ ಹೊಸೆಯುತ್ತಾರೆ.


ಸಿದ್ಧಪಡಿಸಿದ ಹಗ್ಗವನ್ನು ಸಂಗ್ರಹಿಸಲು, ಸಿದ್ಧಪಡಿಸಲು ಅನುಕೂಲವಾಗಲೆಂದು ಕಳೆದ ೧೫ ವರ್ಷಗಳ ಹಿಂದೆಯೇ ಕೈಗಾರಿಕಾ ಇಲಾಖೆಯ ವತಿಯಿಂದ ಗೋಡೌನ್ ನಿರ್ಮಿಸಲಾಗಿದೆ. ಆದರೆ ಅದೀಗ ಯಾತಕ್ಕೂ ಬಾರದ ದುಸ್ಥಿತಿಗೆ ತಲುಪಿದೆ. ಅದರ ಷಟರ್, ಕಿಟಕಿಗಳು ಎಂದೋ ಕಿತ್ತುಹೋಗಿದ್ದು, ಒಳಗಡೆ ನೆಲ, ಗೋಡೆಗಳು ಯಾತಕ್ಕೂ ಬಾರದ ಸ್ಥಿತಿಯಲ್ಲಿವೆ. ಅಲ್ಲೀಗ ಕತ್ತಾಳೆ ನಾರಿನ ಹಗ್ಗಗಳನ್ನಿಡಲಾಗಿದೆಯಾದರೂ ಅದಕ್ಕೆ ಯಾವುದೇ ರೀತಿಯ ರಕ್ಷಣೆಯಿಲ್ಲ. ಇಡೀ ಗ್ರಾಮವೇ ಬದುಕುವುದಕ್ಕಾಗಿ ಒಂದು ವೃತ್ತಿಯನ್ನು ಕೈಗೊಂಡಿರುವಾಗ, ಸಂಬಂಧಿಸಿದ ಇಲಾಖೆ ಪ್ಲಾಸ್ಟಿಕ್ ಹಗ್ಗಗಳನ್ನು ಹೊಸೆಯುವ ಯಂತ್ರಗಳನ್ನು, ಸಂಗ್ರಹಕ್ಕಾಗಿ ಗೋಡೌನ್‌ನ್ನು ನಿರ್ಮಿಸಿಕೊಟ್ಟರೆ ಎಷ್ಟೋ ಕುಟುಂಬಗಳು ಬದುಕಲು ಮಾರ್ಗವಾಗುತ್ತದೆ ಎಂದು ಗ್ರಾಮದ ಕೆ.ಎಸ್.ಧನಂಜಯ ಹೇಳುತ್ತಾರೆ.

***

ಗುರುವಾರ, ಮಾರ್ಚ್ 10, 2011

ಗಾಣಗಟ್ಟೆ ಮಾಯಮ್ಮ: ಗ್ರಾಮ ದೇವತೆಯ ಆಧುನಿಕ ರೂಪಾಂತರ.-ಅರುಣ್

ಕನ್ನಡ ಜಾನಪದ ಅಧ್ಯಯನಗಳಲ್ಲಿ ಗ್ರಾಮ ದೈವಗಳ ಅಧ್ಯಯನ ವ್ಯಾಪಕವಾಗಿ ನಡೆದಿದೆ. ಹಿ.ಚಿ. ಬೋರಲಿಂಗಯ್ಯ ಅವರ ಉಜ್ಜನಿ ಚೌಡಮ್ಮ, ಸಿದ್ದಲಿಂಗಯ್ಯ ಅವರ ಕರ್ನಾಟಕದ ಗ್ರಾಮದೇವತೆಗಳು, ಪುರುಷೋತ್ತಮ ಬಿಳಿಮಲೆ ಅವರ ಹುಲಿಗೆಮ್ಮ, ಎಸ್‍. ಎಸ್‍. ಹಿರೇಮಠ್‍ ಅವರ ಗ್ರಾಮದೇವತೆಗಳ ಅಧ್ಯಯನಗಳು ಚಕ್ಕನೆ ನೆನಪಾಗುತ್ತವೆ. ಆನಂತರ ಪಿಹೆಚ್.ಡಿ ಮತ್ತು ಎಂಫಿಲ್‍ ಅಧ್ಯಯನಗಳಿಗಾಗಿ ಕರ್ನಾಟಕದ ಬಹುತೇಕ ಗ್ರಾಮದೇವತೆಗಳ ಅಧ್ಯಯನಗಳು ನಡೆದಿವೆ ಮತ್ತು ನಡೆಯುತ್ತಿವೆ.

ಇಂದು ಗ್ರಾಮ ದೇವತೆಗಳ ಬಗ್ಗೆ ಅಧ್ಯಯನ ನಡೆಸುವವರು ಈ ಕಾಲದಲ್ಲಿ ಆ ದೇವತೆಯ ನಂಬಿಕೆ ಮತ್ತು ಆಚರಣೆಗಳು ಆಧುನಿಕವಾಗಿ ಹೇಗೆ ರೂಪಾಂತರಗೊಂಡಿವೆ, ಮತ್ತು ಮೂಲ ಆರಾಧಕರಿಂದ ವಂಚಿತವಾಗಿ ಹೇಗೆ ಮೇಲ್ವರ್ಗದವರ ಕಪಿಮುಷ್ಟಿಯಲ್ಲಿ ಗ್ರಾಮದೈವಗಳು ಸಿಲುಕಿವೆ, ಒಂದು ಕಾಲದಲ್ಲಿ ತಳ ಸಮುದಾಯಗಳಿಗೆ ಚೈತನ್ಯ ನೀಡುವ ದೇವತೆಗಳು ಅದೇ ಸಮುದಾಯದಿಂದ ಹೇಗೆ ಪರಕೀಯವಾಗಿವೆ? ಮುಂತಾದವುಗಳ ಬಗ್ಗೆ ಅಧ್ಯಯನ ಮಾಡಬೇಕಿದೆ. ಅನೇಕ ಗ್ರಾಮದೇವತೆಗಳು ಕೇಸರೀಕರಣಕ್ಕೆ ಒಳಗಾಗಿವೆ. ಬಳ್ಳಾರಿಯ ಜನಪ್ರಿಯ ಗ್ರಾಮ ದೇವತೆ ಬಳ್ಳಾರಿ ದುರ್ಗಮ್ಮ ಇಂದು ದುರ್ಗಾಪರಮೇಶ್ವರಿ ಎಂಬ ಹೆಸರಲ್ಲಿ ಪುರೋಹಿತರ ಹಿಡಿತದಲ್ಲಿದೆ. ಇಂತಹ ಅನೇಕ ಉದಾಹರಣೆಗಳನ್ನು ಜೋಡಿಸಬಹುದು. ಈ ಕುರಿತು ಗಂಭೀರ ಅಧ್ಯಯನಗಳನ್ನು ಮಾಡುವ ಅಗತ್ಯವಿದೆ.ಈಚೆಗೆ ನಮ್ಮ ಭಾಗದಲ್ಲಿ ಅಂದರೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಾಣಗಟ್ಟೆಯ ಗ್ರಾಮದೇವತೆ ಮಾಯಮ್ಮ ಹೆಚ್ಚು ಜನಪ್ರಿಯವಾಗುತ್ತಿದೆ. ಮಾಯಮ್ಮ ಮಾಡಿದ ಪವಾಡಗಳ ಕತೆಗಳು ಹಳ್ಳಿಗಳಲ್ಲಿ ನಾನಾ ಬಗೆಯಲ್ಲಿ ಹಬ್ಬಿಕೊಳ್ಳುತ್ತಿವೆ. ಮಾಯಮ್ಮನನ್ನು ಜನರು ದುಡ್ಡಿನ ದೇವತೆ ಎಂದು ಕರೆಯುತ್ತಾರೆ. ಕಾರಣ ಈ ದೇವತೆಗೆ ಯಾವುದೇ ಹರಕೆಯನ್ನು ಹೊತ್ತರೂ ಅದು ಹಣದ ರೂಪದಲ್ಲೇ ಇರಬೇಕು . ಅದರಲ್ಲೂ ಯಾರು ಹೆಚ್ಚು ಹಣವನ್ನು ಹರಕೆಯ ರೂಪದಲ್ಲಿ ಕೊಡುತ್ತಾರೋ ಅವರ ಕೆಲಸ ಬಹು ಬೇಗ ಆಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಮೂಲತಃ ಗ್ರಾಮದೇವತೆಯ ಬಹಳ ಮುಖ್ಯ ಹರಕೆಯೆಂದರೆ ಪ್ರಾಣಿ ಬಲಿ ಎಂದು ತಿಳಿದ ಜನರು ಈ ದೇವತೆಯ ಹಣದ ಮಹಿಮೆ ಕಂಡು ದಂಗಾಗಿದ್ದಾರೆ.ಯಾಕೆ ಈ ದೇವಿ ಕೇವಲ ಹಣವನ್ನು ಹರಕೆಯನ್ನಾಗಿ ಸ್ವೀಕರಿಸುತ್ತಾಳೆ? ಇದಕ್ಕೆ ಉತ್ತರವಿಲ್ಲ. ಇಲ್ಲಿ ಪೂಜೆ ಮಾಡುವವರು ಪುರೋಹಿತರಲ್ಲ. ಮೊದಲಿನಿಂದಲೂ ಪೂಜಿಸಿಕೊಂಡುಬಂದ ನಾಯಕ ಬುಡಕಟ್ಟು ಸಮುದಾಯ. ಈ ಪೂಜಾರಿಯ ಪ್ರಕಾರ ಈ ದೇವಾಲಯಕ್ಕೆ ಪ್ರತಿ ತಿಂಗಳು ಕನಿಷ್ಟ 4 ಲಕ್ಷ ರೂ ಆದಾಯವಿದೆ. ಈ ಎಲ್ಲಾ ಆದಾಯವನ್ನು ದೇವಸ್ಥಾನದ ಅಭಿವೃದ್ದಿಗಾಗಿ ಬಳಸಲಾಗುತ್ತಿದೆ. ಸ್ಥಳೀಯರ ಪ್ರಕಾರ ಹಣ ಯಾವುದೇ ಕಾರಣಕ್ಕೂ ದುರುಪಯೋಗವಾಗುವುದಿಲ್ಲ ಎಂದು ಹೇಳುತ್ತಾರೆ.
ಅದೇನೆ ಇರಲಿ, ಈ ದೇವಿ ಮೂಲತಃ ತಳಸಮುದಾಯಗಳ ಚೈತನ್ನವನ್ನು ಹೆಚ್ಚಿಸಬೇಕಿತ್ತು, ಆದರೆ ಇಂದು ಅದೇ ದೇವಿ ಅದೇ ಭಕ್ತರಿಂದ ಕೇವಲ ಹಣ ಬೇಡುವ ಹಣದಾಹಿಯಾಗಿ ಪರಿವರ್ತನೆಯಾಗಿರುವುದು ಈ ಕಾಲದ ಮಹಿಮೆಯೇ ಸರಿ.ಈ ದೇವಿಯ ಪವಾಡದ ಕಥೆಗಳು ಮಾತ್ರ ಬಳ್ಳಾರಿ ಜಿಲ್ಲೆಯಾದ್ಯಾಂತ, ಅದರಲ್ಲೂ ಕೂಡ್ಲಿಗಿ ತಾಲೂಕಿನಾದ್ಯಾಂತ ವಿಚಿತ್ರ ರೀತಿಯಲ್ಲಿ ಜನಪದ ಕಥೆಗಳಂತೆ ಹರಡಿಕೊಂಡಿವೆ. ಅಂತೆಯೇ ಅದರ ಹಲವಾರು ಪಾಠಾಂತರಗಳೂ ಸಿಗುತ್ತವೆ. ಇವುಗಳನ್ನು ಇಂದಿನ ಜನಪದ ಅಧ್ಯಯನಕಾರರು ಸಮುದಾಯದ ಗ್ರಹಿಕೆ ಮತ್ತು ವರ್ತಮಾನದ ಜತೆ ಮುಖಾಮುಖಿ ಮಾಡುವ ಅಗತ್ಯವಿದೆ. ಗಾಣಗಟ್ಟೆಯಂತಹ ಕುಗ್ರಾಮದಲ್ಲಿ ಇಂತಹ ಬೃಹತ್ ದೇವಾಲಯದ ನಿರ್ಮಾಣ ಎಂತವರನ್ನೂ ಅಚ್ಚರಿಯನ್ನುಟ್ಟಿಸುತ್ತದೆ. ಈ ದೇವಿಯನ್ನು ಕುರಿತು ಹಂಪಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರೊ.ವಿರೂಪಾಕ್ಷಿ ಪೂಜಾರಹಳ್ಳಿಯವರು ಅಧ್ಯಯನ ಮಾಡಿ ಕಿರು ಹೊತ್ತಿಗೆಯನ್ನು ಬರೆದಿದ್ದಾರೆ. ಇದೊಂದು ಒಳ್ಳೆಯ ಪ್ರಯತ್ನ. ಆದರೆ ಇವರು ಇದನ್ನು ಕೇವಲ ಇತಿಹಾಸಕಾರನ ದೃಷ್ಟಿಯಿಂದ ನೋಡಿದ್ದಾರೆ. ಆದರೆ ಇಲ್ಲಿ ಸಂಶೋಧಕರೊಬ್ಬರು ಎತ್ತಲೇಬೇಕಾದ ಯಾವ ಪ್ರಶ್ನೆಯನ್ನು ಇವರಿಗೆ ಎತ್ತಲು ಸಾಧ್ಯವಾಗಿಲ್ಲ. ಇದು ಒಬ್ಬ ಸಂಶೋಧನಾ ವಿಧ್ಯಾರ್ಥಿ ಬರೆಯಬಹುದಾದ ಒಂದು ಪ್ರಾಥಮಿಕ ತಿಳುವಳಿಕೆಯ ಪ್ರಬಂಧವಿದ್ದಂತಿದೆ. ಇಂದು ಗ್ರಾಮದೇವತೆಗಳು ಪಡೆಯುತ್ತಿರುವ ಹೊಸ ಬಗೆಯ ಸ್ಥಿತ್ಯಂತರಗಳ ಕುರಿತು ಅಧ್ಯನ ಮಾಡುವ ಅಗತ್ಯವಿದೆ. ಇವುಗಳು ಪಡೆಯುತ್ತಿರುವ ಹೊಸ ರೂಪಾಂತರಗಳ ಬಗ್ಗೆ, ಇದಕ್ಕೆ ಜನ ಸಮುದಾಯ ಪ್ರತಿಕ್ರಿಯಿಸುತ್ತಿರುವ ಬಗ್ಗೆ ಸಾಂಸ್ಕೃತಿಕ ಅಧ್ಯಯನಗಳನ್ನು ಮಾಡುವ ಅಗತ್ಯವಿದೆ.

ಬುಧವಾರ, ಮಾರ್ಚ್ 9, 2011

ಸಂಯುಕ್ತ ಕರ್ನಾಟಕ ‘ಚೇತನ’ ಪುರವಣಿಯ ‘ಈ ಸಂಭಾಷಣೆ’

೧೦.೦೩.೨೦೧೧ ರ ಸಂಯುಕ್ತ ಕರ್ನಾಟಕ ಪತ್ರಿಕೆಯ ವಿಶೇಷ ಪುರವಣಿ ‘ಚೇತನ’ ದ ಈ ಸಂಭಾಷಣೆ ಕಾಲಂ ನಲ್ಲಿ ಪಲ್ಲವಿ ಪಾಟೀಲ ಸೇಡಂ ಅವರು ನನ್ನ ಸಂದರ್ಶನ ಮಾಡಿದ್ದಾರೆ. ಅವರು ನನ್ನನ್ನು ಗುರುತಿಸಿದ್ದು ಕನ್ನಡ ಜಾನಪದ ಬ್ಲಾಗ್ ಮೂಲಕ. ಹಾಗಾಗಿ ಪಲ್ಲವಿ ಅವರಿಗೆ ಕೃತಜ್ಞತೆಗಳು. ಈ ಸಂದರ್ಶನ ಮುಖ್ಯವಾಗಿ ಜಾನಪದದ ಬಗ್ಗೆಯೇ ಆಗಿರುವುದರಿಂದ ಈ ಸಂದರ್ಶನದ ಭಾಗವನ್ನು ಕನ್ನಡ ಜಾನಪದ ಬ್ಲಾಗ್ ನಲ್ಲೂ ಪ್ರಕಟಿಸಲಾಗಿದೆ೧. ಜನಪದ, ಜನಪದ ಸಾಹಿತ್ಯ ಎಂದರೇನು? ಜನಪದ ಸಾಹಿತ್ಯದ ಹುಟ್ಟು ಬೆಳವಣಿಗೆ ಹೇಗಾಯಿತು?

ಈ ಪ್ರಶ್ನೆಗೆ ಒಂದೆರಡು ವಾಕ್ಯಗಳಲ್ಲಿ ಉತ್ತರಿಸುವುದು ಕಷ್ಟ. ಕೆಲವು ಮುಖ್ಯ ಸಂಗತಿಗಳನ್ನು ಗುರುತಿಸಬಹುದಷ್ಟೆ. ಜನಪದ ಎಂದರೆ ಹಲವು ವ್ಯಾಖ್ಯಾನಗಳಿವೆ. ಅವು ಕಾಲಾನಂತರದಲ್ಲಿ ಬದಲಾಗಿವೆ ಕೂಡ. ಜನಸಾಮಾನ್ಯರ ಪರಂಪರೆಯ ಜ್ಞಾನವೇ ಜಾನಪದ ಎನ್ನುವುದರಿಂದ, ಯಾವುದೇ ಒಂದು ಜನರ ಸಮಾನ ಗುಂಪಿನಲ್ಲಿ ಇರಬಹುದಾದ ನಂಬಿಕೆ, ಆಚರಣೆ, ಪರಂಪರೆಯ ಜ್ಞಾನವೇ ಜಾನಪದ ಎನ್ನುವ ತನಕ ಅದರ ವ್ಯಾಖ್ಯಾನ ಗಳು ಬದಲಾಗಿವೆ. ಜನಪದ ಎಂದರೆ ಜಾನಪದದ ಒಂದು ಘಟಕ ಎಂತಲೂ, ಹಲವು ಜನಪದಗಳು ಸೇರಿ ಜಾನಪದ ಎಂತಲೂ ಕನ್ನಡದಲ್ಲಿ ಬಳಕೆಯಲ್ಲಿದೆ. ಜನಪದ ಸಾಹಿತ್ಯದ ಹುಟ್ಟು ಬೆಳವಣಿಗೆ, ಮನುಷ್ಯನ ಹುಟ್ಟು ಬೆಳವಣಿಗೆಯ ಜತೆ ಸಾವಯವ ಸಂಬಂಧವನ್ನು ಹೊಂದಿದೆ.

ಜಾನಪದ ಒಂದು ಅಧ್ಯಯನ ಶಿಸ್ತಾಗಿ ಬೆಳೆದದ್ದಕ್ಕೆ ಜಾಗತಿಕವಾಗಿ ಮತ್ತು ಭಾರತ, ಕರ್ನಾಟಕದಲ್ಲಿಯೂ ಬೇರೆ ಬೇರೆ ಹಂತಗಳಿವೆ. ೧೮೪೬ ರಲ್ಲಿ ಇಂಗ್ಲೇಂಡಿನ ಪ್ರಾಚೀನ ಅನ್ವೇಷಕ ಡಬ್ಲು.ಜೆ.ಥಾಮ್ಸ ‘ಪಾಪುಲರ್ ಎಂಟಿಕ್ವಿಟೀಸ್’ ಎನ್ನುವ ಪದಕ್ಕೆ ಸಂವಾದಿಯಾಗಿ ಮೊದಲು ‘ಪೋಕ್ ಲೋರ್’ ಎನ್ನುವ ಪದವನ್ನು ಬಳಸಿದ. ೧೯೬೬ ರಲ್ಲಿ ‘ಪೋಕ್ ಲೋರ್’ ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ‘ಪೋಕ್’ ಎಂದರೆ ‘ಜನಪದ’ ಎಂತಲೂ, ‘ಪೋಕ್ ಲೋರ್’ ಎಂದರೆ ‘ಜಾನಪದ’ ಎಂತಲೂ ಹಾ.ಮಾ. ನಾಯಕ ಅವರು ಬಳಸಿದರು. ಕನ್ನಡದಲ್ಲಿ ಜಾನಪದ ಅಧ್ಯಯನವನ್ನು ಕಟ್ಟಿಬೆಳೆಸಿದ ಹಲವು ಮಹನೀಯರಿದ್ದಾರೆ. ಅದರಲ್ಲಿ ಜಿ.ಶಂ.ಪರಮಶಿವಯ್ಯ ಅವರ ಶ್ರಮ ಕರ್ನಾಟಕದ ಮಟ್ಟಿಗೆ ನೆನಪಿಟ್ಟುಕೊಳ್ಳುವಂತದ್ದು. ಇನ್ನು ಜಾನಪದ ಅಧ್ಯಯನಗಳ ಚರಿತ್ರೆ ತುಂಬಾ ದೊಡ್ಡದಿದೆ ಇಲ್ಲಿ ಉತ್ತರಿಸುವುದು ಕಷ್ಟ.

೨. ಜನಪದ ಸಾಹಿತ್ಯ ಅಧ್ಯಯನ ಮಾಡಿದವರಿಗೆ ಉದ್ಯೋಗವಕಾಶಗಳು ಇವೆಯಾ?


ಜನಪದ ಸಾಹಿತ್ಯ ಅಧ್ಯಯನದಲ್ಲಿ ಎರಡು ವಿಧಗಳಿವೆ. ಕನ್ನಡ ಎಂಎ ನಲ್ಲಿ ಜಾನಪದವನ್ನು ಐಚ್ಚಿಕ ವಿಷಯವಾಗಿ ಓದುವುದು. ಇದನ್ನು ಕನ್ನಡ ಎಂ.ಎ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಅದಕ್ಕಿರುವ ಉದ್ಯೋಗಾವಕಾಶಗಳು ಅನ್ವಯವಾಗುತ್ತವೆ. ಎರಡನೆಯದು ಜಾನಪದವನ್ನೇ ಪ್ರತ್ಯೇಕವಾಗಿ ಎಂ.ಎ ಮಾಡುವ ಅವಕಾಶ ಇದೆ. ಹೀಗೆ ಜಾನಪದ ಎಂ.ಎ ಮಾಡಿದವರು ಪಿಯು ಅಧ್ಯಾಪಕರಾಗಬಹುದು. ಜಾನಪದ ವಿಷಯವಾಗಿ ಪಿಹೆಚ್ ಡಿ ಮಾಡಲು ಅವಕಾಶವಿದೆ. ಜಾನಪದ ಕುರಿತಂತೆ ಡಿಪ್ಲೊಮಾ ಕೋರ್ಸುಗಳಿವೆ. ಇವುಗಳಿಗೆ ಪೂರಕವಾದ ಉದ್ಯೋಗವಕಾಶಗಳು ಇನ್ನು ಸೃಷ್ಟಿಯಾಗಬೇಕಿದೆ. ಈಚೆಗೆ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಹುದ್ದೆಗೆ ಜಾನಪದ ಎಂ.ಎ ಯನ್ನು ಪರಿಗಣಿಸುತ್ತಿಲ್ಲ , ಇದೊಂದು ಅವೈಜ್ಞಾನಿಕ ಕ್ರಮ. ಏಕೆಂದರೆ ಯುಜಿಸಿ ಯಲ್ಲಿ ಇವೆರಡೂ ಪ್ರತ್ಯೇಕ ವಿಷಯಗಳು, ಆದರೆ ಕರ್ನಾಟಕದಲ್ಲಿ ಜಾನಪದ ಮತ್ತು ಕನ್ನಡವನ್ನು ಒಂದೇ ಎಂದು ಪರಿಗಣಿಸಲಾಗುತ್ತಿದೆ. ಆ ಕಾರಣಕ್ಕೆ ಕನ್ನಡ ಅಧ್ಯಾಪಕರ ಆಯ್ಕೆಯಲ್ಲಿ ಶೇಕಡವಾರು ಇಂತಿಷ್ಟು ಜಾನಪದ ಎಂ.ಎ ಮಾಡಿದವರನ್ನು ಆಯ್ಕೆ ಮಾಡುವುದು ನ್ಯಾಯಯುತವಾದುದು. ಈ ಕುರಿತು ಜಾನಪದ ವಿದ್ವಾಂಸರು, ಜಾನಪದ ಅಕಾಡೆಮಿ ಅಧ್ಯಕ್ಷರು, ಜಾನಪದ ವಿವಿಯ ವಿಶೇಷಾಧಿಕಾರಿಗಳು ಒಟ್ಟಾಗಿ ಸರಕಾರದ ಗಮನಸೆಳೆಯುವ ಅಗತ್ಯವಿದೆ.೩. ಜನಪದ ಸಂಶೋಧಕರಿಗೆ ಸರಕಾರದಿಂದ ದೊರೆಯುವ ಅವಕಾಶಗಳು, ಫೆಲೋಶಿಪ್ಸ ಏನಾದ್ರೂ ಇದಾವ?


ಯು.ಜಿ.ಸಿ ಯಿಂದ ವಿಶ್ವವಿದ್ಯಾಲಯಗಳ ಮತ್ತು ಪ್ರಥಮ ದರ್ಜೆ ಕಾಲೇಜುಗಳ ಅದ್ಯಾಪಕರುಗಳಿಗೆ ಸಮಾಜ ವಿಜ್ಞಾನದ ವಿಭಾಗಗಳಲ್ಲಿ ನೀಡುವ, ಮೈನರ್, ಮತ್ತು ಮೇಜರ್ ಪ್ರಾಜೆಕ್ಟಗಳಲ್ಲಿ ಯೋಜನಾ ಸಹಾಯಕರಾಗಿ ಕೆಲಸ ಮಾಡುವ ಅವಕಾಶಗಳಿವೆ. ಅಂತೆಯೇ ಜಾನಪದ ಸಂಶೋಧಕರಿಗೆ (ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ) ರಾಜೀವಗಾಂಧಿ ಪೆಲೋಷಿಪ್ ಇದೆ. ಅಂತೆಯೇ ಆಂತರಿಕವಾಗಿ ವಿಶ್ವವಿದ್ಯಾಲಯಗಳಲ್ಲಿ ಎಂಪಿಲ್, ಪಿಹೆಚ್.ಡಿ ಸಂಶೋಧನೆಗೆ ಸಿಗುವ ಎಲ್ಲಾ ಬಗೆಯ ಅವಕಾಶಗಳೂ ಸಹಜವಾಗಿ ಜಾನಪದ ಸಂಶೋಧಕರಿಗೂ ಸಿಗುತ್ತವೆ. ಜಾನಪದ ಸಂಶೋಧನೆಗಾಗಿ ಈಚೆಗೆ ಜಾನಪದ ಅಕಾಡೆಮಿ ಒಂದು ಲಕ್ಷ ರೂಪಾಯಿಯ ಪೆಲೋಶಿಪ್ ಕೊಟ್ಟು ಅಧ್ಯಯನ ಮಾಡಿಸುವ ಯೋಜನೆಯೊಂದನ್ನು ತಂದಿದೆ. ಅದರ ಭಾಗವಾಗಿ ಈಗಾಗಲೇ ಐದು ಜನ ಯುವ ಜಾನಪದ ಆಸಕ್ತ ಸಂಶೋಧಕರಿಗೆ ಈ ಪೆಲೋಶಿಪ್ ನೀಡಲಾಗಿದೆ. ಇನ್ನೂ ರಾಷ್ಟ್ರಮಟ್ಟದಲ್ಲಿ ಜಾನಪದ ಸಂಶೋಧನೆಗಾಗಿ ವಿಪುಲ ಅವಕಾಶಗಳು, ಪೆಲೋಶಿಪ್‌ಗಳು ಇವೆ. ಆದರೆ ಅವುಗಳ ಮಾಹಿತಿಯ ಕೊರತೆ ನಮ್ಮಲ್ಲಿದೆ.

೪. ಜಾನಪದ ವಿಶ್ವವಿದ್ಯಾಲಯ ಆಗಿದೆ, ಈ ವಿವಿ ಯಿಂದ ನೀವು ಏನನ್ನು ನಿರೀಕ್ಷಿಸುವಿರಿ?


ಜಾನಪದ ವಿಶ್ವವಿದ್ಯಾಲಯ ಆಗಿರುವುದು ಕನ್ನಡಿಗರಿಗೆ ಸಂತೋಷದ ಸಂಗತಿ. ಜರ್ಮನಿಯಲ್ಲಿ ಈಗಾಗಲೆ ಜಾನಪದ ವಿಶ್ವವಿದ್ಯಾಲಯ ಇದೆ. ಜಗತ್ತಿನಲ್ಲಿ ಇದು ಎರಡನೆಯ ಜಾನಪದ ವಿವಿ. ಈ ವಿವಿಯನ್ನು ತುಂಬಾ ಮುಂದಾಲೋಚನೆಯಿಂದ ರೂಪಿಸುವ ಅಗತ್ಯವಿದೆ. ಇತರೆ ಜಾನಪದ ವಿವಿಗಳಿಗಿಂತ ಇದು ತೀರಾ ಭಿನ್ನವಾದುದು. ಸಮಸ್ತ ಜನಸಮುದಾಯವನ್ನು ತಾಯ್ತನದಿಂದ ನೋಡುವ ಅಂತಃಕರಣದ ಮಾನವೀಯ ಗುಣ ಈ ವಿಶ್ವವಿದ್ಯಾಲಯಕ್ಕೆ ಬೇಕು. ತೀರಾ ಅಕಾಡೆಮಿಕ್ ಎನ್ನುವಂತಹ ಜನರ ಜತೆ ಸಂಪರ್ಕ ಕಡಿದುಕೊಂಡು ಜಡವಾಗುವ ಗುಣದಿಂದ ಇದು ದೂರ ಇರಬೇಕು. ಜಾನಪದ ವಿವಿ ಮೊದಲ ಆದ್ಯತೆಗಳ ಕೆಲಸದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ತನಕ ಜಾನಪದವನ್ನು ಒಂದು ಕಡ್ಡಾಯ ಪಠ್ಯವನ್ನು ಅಳವಡಿಸಿ, ಜನಪದ ಕಲಾವಿದರನ್ನು ಒಳಗೊಳ್ಳುವ ಹಾಗೆ ಪ್ರಾತ್ಯಕ್ಷಿಕೆ ಕೊಡಲು ಅನುವಾಗುವಂತಹ ಕೆಲಸ ಮಾಡಬೇಕು.

ಮುಖ್ಯವಾಗಿ ಜಾನಪದವನ್ನು ರಾಜಕಾರಣದ ಭಾಷೆಯನ್ನಾಗಿ ರೂಪಿಸಬೇಕಿದೆ. ಜಾನಪದ ಎಂದರೆ ಹಳೆಯದು ಎನ್ನುವ ಗತಕಾಲದ ವ್ಯಾಖ್ಯಾನಕ್ಕೆ ಕಟ್ಟು ಬೀಳದೆ, ಈ ಕಾಲದ ಹೊಟ್ಟೆಯೊಳಗಿಂದ ಹೊಸ ಜಾನಪದ ಹುಟ್ಟುತ್ತದೆ, ಅದನ್ನು ಸಹ ಗ್ರಹಿಸುವ ಮನಸ್ಥಿತಿ ಜಾನಪದ ವಿವಿಗೆ ಇರಬೇಕಾಗುತ್ತದೆ. ಮುಖ್ಯವಾಗಿ ಜನಪದರ ಜ್ಞಾನವನ್ನು ಮಾತ್ರ ಗೌರವಿಸಿ, ಅವರ ಬದುಕನ್ನು ಕಡೆಗಣಿಸುವ ಅಮಾನವೀಯ ಜಾನಪದ ಅಧ್ಯಯನ ವಿಧಾನಗಳಿಂದ ಈ ವಿವಿ ಮುಕ್ತವಾಗಬೇಕು. ಜಾನಪದ ಕಲಾವಿದರನ್ನು ಸಮಾಜ ಗೌರವಿಸುವಂತಹ, ಮತ್ತು ಸ್ವತಃ ಜನಪದ ಕಲಾವಿದರು ಗೌರವಯುತವಾಗಿ ಬದುಕುವಂತಹ ವಾತಾವರಣವನ್ನು ಈ ವಿವಿ ನಿರ್ಮಿಸಲು ಪ್ರಯತ್ನಿಸಬೇಕು. ಮುಖ್ಯವಾಗಿ ಆನ್ವಯಿಕ ಜಾನಪದದ ಆಲೋಚನೆ ಈ ವಿವಿಯ ಆಂತರ್ಯದ ತಾತ್ವಿಕತೆಯಾಗಬೇಕು. ಜನಪದರ ತಿಳುವಳಿಕೆಯ ಕಣ್ಣೋಟದಿಂದ ಈ ರಾಜ್ಯದ ಚರಿತ್ರೆಯನ್ನು, ಆಲೋಚನ ಕ್ರಮವನ್ನು, ವರ್ತಮಾನವನ್ನು ಗ್ರಹಿಸುವಂತೆ ತಿಳುವಳಿಕೆಯ ಕ್ರಮವನ್ನು ಬದಲಾಯಿಸುವ ಮಹತ್ವದ ಜವಾಬ್ದಾರಿ ಈ ವಿವಿಯ ಮೇಲಿದೆ.

೫. ಜಾನಪದ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳೇನು?

ನಾನು ಮೂಲತ: ಜಾನಪದದಲ್ಲಿನ ಆಸಕ್ತಿಯಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜಾನಪದ ಎಂ ಎ ಮಾಡಿದೆ. ಜಾನಪದದಲ್ಲಿ ಇನ್ನಷ್ಟು ಆಳವಾಗಿ ಅಧ್ಯಯನ ಮಾಡುವ ಆಸೆಯಿಂದ, ‘ಕನ್ನಡ ಜಾನಪದ ಅಧ್ಯಯನದ ತಾತ್ವಿಕ ನೆಲೆಗಳು’ ಎನ್ನುವ ವಿಷಯವಾಗಿ ೧೯೫೦ ರಿಂದೀಚೆಗೆ ಕರ್ನಾಟಕದಲ್ಲಿ ನಡೆದ ಜಾನಪದ ಅಧ್ಯಯನಗಳ ತಾತ್ವಿಕ ನೆಲೆಗಳನ್ನು ಕುರಿತ ಪಿ.ಹೆಚ್.ಡಿ ಮಾಡಿದೆ. ಈ ಕಾರಣಕ್ಕಾಗಿ ಕನ್ನಡ ಜಾನಪದವನ್ನು ಹೆಚ್ಚು ಓದಿಕೊಳ್ಳಲು ಸಾದ್ಯವಾಯಿತು. ಈಗ ಜಾನಪದದ ಹೊಸ ನಡಿಗೆ ಬಗೆಗೆ ಸಂಶೋದನೆ ಮಾಡುತಿದ್ದೇನೆ. ನವ ಮೌಖಿಕತೆ ಕುರಿತಂತೆ ಕೆಲಸ ಮಾಡುತ್ತಿದ್ದೇನೆ. ಅದರ ಭಾಗವಾಗಿ ಅಂತರ್ಜಾಲದಲ್ಲಿ ‘ಕನ್ನಡ ಜಾನಪದ’ ಎನ್ನುವ ಬ್ಲಾಗ್ ನಿರ್ವಹಿಸುತಿದ್ದೇನೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಈಚೆಗೆ ಕರ್ನಾಟಕದ ಜನಪದ ಹನುಮ ಪರಂಪರೆ ಬಗ್ಗೆ ಕ್ಷೇತ್ರಕಾರ್ಯ ನಡೆಸುತಿದ್ದೇನೆ. ಸದ್ಯಕ್ಕೆ ಜಾನಪದವನ್ನು ನನ್ನ ಆಸಕ್ತಿ ಕ್ಷೇತ್ರವನ್ನಾಗಿಸಿಕೊಂಡು ಇನ್ನು ಹೆಚ್ಚೆಚ್ಚು ಕೆಲಸ ಮಾಡುವ ಒತ್ತಾಸೆಯಿದೆ

Folk U Band - Live Feb 2011

ಮುಗುಚಿ ಬಿದ್ದ ಹಂಪಿಯ ಅಕ್ಕ ತಂಗೇರ ಕಲ್ಲುಗಳು : ಅದರ ಸುತ್ತ ಹುಟ್ಟಿದ ಜನಪದ ಕತೆಗಳು.
-ಅರುಣ್ಕಮಲಾಪುರ ಮಾರ್ಗವಾಗಿ ಹಂಪಿಗೆ ಹೋಗುವಾಗ, ದಾರಿಯಲ್ಲಿ ಎರಡು ಬೃಹತ್ ಬಂಡೆಗಳು ಒಂದಕ್ಕೊಂದು ಆಸರೆಯಾಗಿ ನಿಂತಂತೆ ಕಾಣುತ್ತವೆ. ಅವುಗಳನ್ನು ಹಂಪಿ ಭಾಗದಲ್ಲಿ ಅಕ್ಕತಂಗೇರ ಬಂಡಿ ಎಂದು ಕರೆಯುತ್ತಾರೆ. ಅವುಗಳು ಅಕ್ಕತಂಗಿಯರು ಅನೋನ್ಯವಾಗಿರುವ ಸಂಬಂಧಕ್ಕೆ ರೂಪಕವಾಗಿ ಈ ಬಂಡೆಗಳ ಬಗ್ಗೆ ಅನೇಕ ಜನಪದ ಕಥೆಗಳಿವೆ. ಆ ಎರಡು ಬಂಡಿಗಳಲ್ಲಿ ಒಂದು ಬಂಡಿ 9.3.2011 ರಂದು ಮದ್ಯಾಹ್ನ ಒಂದು ಗಂಟೆ ಸುಮಾರಿಗೆ ಸೀಳಿ ಅದರ ಒಂದು ಭಾಗ ಮುಗುಚಿ ಬಿದ್ದಿದೆ. ಇದು ಹಂಪಿ ಭಾಗದಲ್ಲಿ ದೊಡ್ಡ ಸುದ್ದಿಯಾಗಿದೆ. ಇದಕ್ಕೆ ಪೂರಕವಾದ ಅನೇಕ ಕಥೆಗಳು ಹುಟ್ಟಿವೆ.

ಈ ಅಕ್ಕ ತಂಗೇರ ಬಂಡಿಯ ಬಗ್ಗೆ ಜನಪದರಲ್ಲಿ ಇರುವ ಕಥನಗಳು ಹೀಗಿವೆ.

ಒಂದು- ವಿಜಯ ನಗರ ಸಾಮ್ರಾಜ್ಯವನ್ನು ಮೊದಲು ಸ್ಥಾಪಿಸುವಾಗ ಮೊದಲು ಈ ಎರಡು ಬೃಹತ್ ಕಲ್ಲುಗಳನ್ನು ನಿಲ್ಲಿಸಿದರಂತೆ, ಅವಕ್ಕೆ ಅಕ್ಕ ತಂಗಿ ಕಲ್ಲುಗಳೆಂದು ನಾಮಕರಣ ಮಾಡಿದರಂತೆ, ಈ ಎರಡೂ ಕಲ್ಲುಗಳು ಎಲ್ಲಿಯವರೆಗೂ ನಿಂತಿರುತ್ತವೆಯೋ ಅಲ್ಲಿಯತನಕ ವಿಜಯನಗರ ಸಾಮ್ರಾಜ್ಯ ವಿರಾಜಮಾನವಾಗಿ ಬೆಳಗುತ್ತದೆ ಎಂದು ನುಡಿದರಂತೆ ಎನ್ನುವ ನಂಬಿಕೆಯಿದೆ.

ಎರಡು- ಉಜ್ಜಯನಿ ರಾಜನ ಇಬ್ಬರು ಪರಾಕ್ರಮಿ ಹೆಣ್ಣುಮಕ್ಕಳು ಬೇಟೆಯಾಡುತ್ತಾ ಹಂಪಿಯ ಭಾಗಕ್ಕೆ ಬಂದರಂತೆ, ಆಗ ಹಂಪಿ ಪುಣ್ಯ ಕ್ಷೇತ್ರವಾಗಿತ್ತಂತೆ, ಆ ಪರಾಕ್ರಮಿ ಹೆಣ್ಣುಮಕ್ಕಳಿಬ್ಬರು ಹಂಪಿಯ ಬಗ್ಗೆ ಗೇಲಿ ಮಾಡಿ ನಕ್ಕರಂತೆ, ಅವರ ಗರ್ವ ಮುರಿಯಲೆಂದು ವಿರೂಪಾಕ್ಷನು ಅವರಿಬ್ಬರನ್ನು ಕಲ್ಲಾಗುವಂತೆ ಮಾಡಿದನಂತೆ.

ಮೂರು- ಇಬ್ಬರು ಹೆಣ್ಣುಮಕ್ಕಳು ಹಂಪಿ ನೋಡಲು ಬಂದರಂತೆ, ನೋಡುತ್ತಾ ನೋಡುತ್ತಾ ಜನರಿಲ್ಲದ ನಿರ್ಜನ ಪ್ರದೇಶಕ್ಕೆ ಬಂದಾಗ ದಡೂತಿ ದೇಹದ ಗಂಡಸೊಬ್ಬ ಈ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ಅವರಿಬ್ಬರ ಮೇಲೆರಗಿದನಂತೆ, ಅವರು ವಿಧಿಯಿಲ್ಲದೆ ಕಿರುಚಿಕೊಂಡರಂತೆ ಆಗ ಅವರು ಆ ದಡೂತಿ ದೇಹದ ಮನುಷಷ್ಯನಿಂದ ಅತ್ಯಾಚಾರಕ್ಕೆ ಬಲಿಯಾಗಿ ಮಾನಗೇಡಿಗಳಾಗುವುದಕ್ಕಿಂತ ಕಲ್ಲಾಗುವುದೇ ಲೇಸು ಎಂದು ಬಗೆದು ಕಲ್ಲಾದರಂತೆ.ಇಂತಹ ಇನ್ನಷ್ಟು ಕತೆಗಳು ಪ್ರಚಲಿತದಲ್ಲಿವೆ. ಪುರುಷೋತ್ತಮ ಬಿಳಿಮಲೆ ಮತ್ತು ಚಲುವರಾಜು ಅವರು ಸಂಪಾದಿಸಿದ ಹಂಪಿ ಜಾನಪದ ಎನ್ನುವ ಪುಸ್ತಕದಲ್ಲಿ ಇದರ ಪಠ್ಯಗಳನ್ನು ನೋಡಬಹುದು. ಈ ಕಲ್ಲುಗಳ ಬಗ್ಗೆ ಹಂಪಿ ಪರಿಸರದ ಹೆಣ್ಣುಮಕ್ಕಳಲ್ಲಿ ಭಾವನಾತ್ಮಕ ಸಂಬಂಧವೂ ಇದ್ದಂತಿದೆ. ಈಗ ಅಕ್ಕತಂಗೇರ ಬಂಡಿ ಬಿದ್ದಿದೆ ಎನ್ನುವ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಹಂಪಿ ಸುತ್ತಮುತ್ತಲ ಹಳ್ಳಿಗಳ ಜನ ತಂಡೋಪತಂಡವಾಗಿ ನೋಡಲು ಬರುತ್ತಿದ್ದಾರೆ. ಈ ಕಲ್ಲುಗಳ ಬಗ್ಗೆ ವಿಚಿತ್ರವಾದ ಅನುಕಂಪವೂ, ಅಯ್ಯೋ ಎನ್ನುವ ಭಾವನಾತ್ಮಕ ಉದ್ಘಾರವೂ ನೋಡಲು ಬಂದವರಲ್ಲಿ ವ್ಯಕ್ತವಾಗುತ್ತಿದೆ. ಹಾಗೆಯೇ ಈ ಕಲ್ಲು ಬಿದ್ದ ಬಗ್ಗೆಯೂ ಅನೇಕ ಕಥನಗಳು ಹುಟ್ಟಿಕೊಳ್ಳುತ್ತಿವೆ.


ಹಾಗೆ ಹುಟ್ಟಿಕೊಂಡ ಕಥನಗಳಲ್ಲಿ ಕೆಲವು ಹೀಗಿವೆ. ಒಂದು: ಇದು ಕೇಡನ್ನು ಸೂಚಿಸುತ್ತದೆ, ಈ ಭಾಗದಲ್ಲಿ ದೊಡ್ಡದಾದ ಕೇಡು ಕಾದಿದೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಎರಡು: ಈ ಕಲ್ಲು ಬಿದ್ದ ಕಾರಣ ಪ್ರಳಯದ ಮುನ್ಸೂಚನೆ ಕಾಣಿಸಿಕೊಂಡಿದೆ ಇನ್ನು ಪ್ರಳಯವಾಗುವುದು ಖಚಿತ ಎನ್ನುವುದು ಕೆಲವರ ನಂಬಿಕೆ. ಮೂರು: ತಂಗಿಯ ಆಯಸ್ಸು ಮುಗಿದಿದೆ, ಅಕ್ಕನ ಆಯಸ್ಸು ಇನ್ನು ಗಟ್ಟಿ ಇದೆ. ಹಾಗಾಗಿ ತಂಗಿ ತನ್ನ ಆಯಸ್ಸು ಮುಗಿದಿದೆ ಎಂದು ತೋರಿಸಿಕೊಟ್ಟಿದ್ದಾಳೆ ಎಂಬ ನಂಬಿಕೆ ಇದೆ. ನಾಲ್ಕು: ಈ ಕಲ್ಲಿನ ಆಕಾರದಲ್ಲಿ ಅಕ್ಕನನ್ನು ತಂಗಿ ಹೊತ್ತುಕೊಂಡಂತಿದೆ, ಹಾಗಾಗಿ ತಂಗಿ ಮುನಿಸಿಕೊಂಡು ಇನ್ನೆಷ್ಟು ದಿನ ನಾ ಹೊತ್ತಿರಲಿ ಎಂದು ತಂಗಿ ಅಕ್ಕನ ಮೇಲೆ ಬೇಸರವಾಗಿ ಮೈಕೊಡವಿದ್ದಾಳೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.ಈ ಬಗೆಯ ಜನಪದ ನಂಬಿಕೆಗಳ ಆಚೆಗೆ ನಿಂತು ನೋಡುವುದಾದರೆ, ಈ ಎರಡು ಬೃಹತ್ ಕಲ್ಲುಗಳು ನೈಸರ್ಗಿಕವಾಗಿ ನಿಂತಂತವು. ಹೀಗೆ ನಿಂತ ಕಾರಣಕ್ಕೇ ಈ ಬಗೆಯ ಕಥನಗಳು ಹುಟ್ಟಿರಲಿಕ್ಕೆ ಸಾಧ್ಯವಿದೆ. ಅಂತೆಯೇ ಇಂತಹ ಬೃಹತ್ ಬಂಡೆಗಳು ಸೀಳಿ ಉದುರಲು ಮುಖ್ಯ ಕಾರಣ ಈ ಭಾಗದಲ್ಲಿ ನಡೆಯುತ್ತಿರುವ ಮೈನಿಂಗ್ ಎನ್ನುವುದು ಎಲ್ಲರ ಅಭಿಪ್ರಾಯ. ಕಲ್ಲು ಮೈನಿಂಗ್ ನಲ್ಲಿ ಮದ್ದನ್ನು ಇಟ್ಟು ಸಿಡಿಸುತ್ತಾರೆ, ಈ ಮದ್ದು ಸಿಡಿಯುವ ಹೊತ್ತಿಗೆ ನೆಲ ಅದುರುತ್ತದೆ. ಅದರಲ್ಲೂ ಹಂಪಿ ಭಾಗದಲ್ಲಿ ಪ್ರಾಚೀನ ಅವಶೇಷಗಳು ಇರುವ ಕಾರಣ ಅವುಗಳೂ ಸಹಜವಾಗಿ ಅದುರುತ್ತವೆ. ಇದರ ಪರಿಣಾಮ ಅಕ್ಕತಂಗಿಯರ ಬಂಡೆಯ ಮೇಲಾಗಿದೆ. ಹಾಗಾಗಿ ಸರಕಾರ ಹಂಪಿಗೆ ಸುತ್ತಮುತ್ತಲು ನಡೆಯುತ್ತಿರುವ ಮೈನಿಂಗ್ ನ್ನು ನಿಲ್ಲಿಸುವುದು ಒಳಿತು.

ಸೋಮವಾರ, ಮಾರ್ಚ್ 7, 2011

ಜನಪದ ಕಸುಬು-೧ ಚಳ್ಳಕೆರೆಯ ಕಂಬಳಿ ಉದ್ಯಮ

-ಅರುಣ್ ಜೋಳದಕೂಡ್ಲಿಗಿ


(ಗಾಂಧೀಜಿ ಜನಪದರ ವೃತ್ತಿಕಸಬುಗಳನ್ನೇ ಆಧರಿಸಿದ ಪುಟ್ಟ ಪುಟ್ಟ ಕೈಗಾರಿಗೆಗಳನ್ನು ಅಭಿವೃದ್ದಿ ಪಡಿಸುವ ಗುಡಿ ಕೈಗಾರಿಕೆಗಳ ಕಲ್ಪನೆಯನ್ನು ಕೊಟ್ಟರು. ಈ ಮೂಲಕ ಜನಸಾಮಾನ್ಯರು ಸ್ವಾವಲಂಬಿಗಳಾಗಿ ಬದುಕುವ ಕನಸು ಕಂಡಿದ್ದರು. ಆದರೆ ಇಂದು ಜನಪದರ ಕಸಬು ಕೆಲವು ಕಳೆದೇ ಹೋದವು. ಕಾರಣ ಅವುಗಳು ವರ್ತಮಾನದ ಜತೆ ಸಾವಯವ ಸಂಬಂಧ ಕಡಿದುಕೊಂಡು ಪರಕೀಯ ಎನ್ನುವಂತಹ ವಾತಾವರಣ ನಿರ್ಮಾಣವಾಯಿತು. ಇಷ್ಟೆಲ್ಲದರ ನಡುವೆ ಇನ್ನೂ ಅನೇಕ ಜನಪದ ಕುಲಕಸಬುಗಳು ಜೀವಂತವಾಗಿವೆ. ಆದರೆ ಅವುಗಳು ಪಡೆದ ವ್ಯಾಪಕ ವಿಸ್ತಾರವನ್ನು ಕಡಿದುಕೊಂಡು ಒಂದು ಸಣ್ಣ ವಲಯದಲ್ಲಿ ಜೀವಿಸುತ್ತಿವೆಯಷ್ಟೆ. ಅದನ್ನು ಗುರುತಿಸಿ ಅದರ ವಲಯದ ವ್ಯಾಪ್ತಿಯನ್ನು ವರ್ತಮಾನದ ಅಗತ್ಯಗಳಿಗೆ ತಕ್ಕಂತೆ ವಿಸ್ತರಿಸಬೇಕಿದೆ. ಅಂತಹ ಜನಪದರ ಕಸಬುಗಳನ್ನು ಕನ್ನಡ ಜಾನಪದ ಬ್ಲಾಗ್ ನಲ್ಲಿ ಸರಣಿಯಾಗಿ ಪರಿಚಯಿಸುವ ಪ್ರಯತ್ನ ಮಾಡಲಾಗುವುದು. ಇಲ್ಲಿ ಮುಖ್ಯವಾಗಿ ಆಯಾ ಕಸಬು ಯಾವ ಸ್ಥಿತಿಯಲ್ಲಿ ಮುಂದುವರಿಯುತ್ತಿದೆ. ಅದನ್ನು ನಂಬಿದ ಜನರ ಬದುಕು ಹೇಗಿದೆ? ಈ ಕಸುಬಿಗೆ ಮರುಜೀವ ತುಂಬಲು ಅದನ್ನು ನಂಬಿದವರು ನಿರೀಕ್ಷಿಸುವುದೇನು? ಅದರ ಬಳಕೆಯ ವಲಯವನ್ನು ಹೆಚ್ಚಿಸಿ ಆಯಾ ಕಸಬಿಗೆ ಮರುಜೀವ ನೀಡುವ ಸಾದ್ಯತೆಗಳೇನು? ಮುಂತಾದ ಅಂಶಗಳನ್ನು ಈ ಸರಣಿಯ ಬರಹ ಒಳಗೊಂಡಿರುತ್ತದೆ)ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಭಾಗದಲ್ಲಿ ಕಂಬಳಿ ನೇಯುವ ಜನಪದ ಕಸಬು ಜೀವಂತವಾಗಿದೆ. ಇಂದು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿಯೂ ಕಂಬಳಿ ನೇಯ್ಗೆ ಇದೆ. ಆದರೆ ಅದರ ಪ್ರಮಾಣ ಮೊದಲಿಗಿಂತ ಈಗ ಕಡಿಮೆಯಾಗುತ್ತಾ ಸಾಗುತ್ತಿದೆ. ಇದು ಮೂಲತಃ ಕುರಿಸಾಕಣೆಗೆ ಹೊಂದಿಕೊಂಡಂತಹ ಉಪಕಸಬು. ಕುರಿಯ ಕೂದಲನ್ನು ಕತ್ತರಿಸಿ, ಆ ಕೂದಲಿನಿಂದ ನೂಲು ತೆಗೆದು, ಆ ನೂಲಿನಿಂದ ಕಂಬಳಿ ನೇಯುವುದು, ಆ ಕಂಬಳಿಯನ್ನು ಮಾರಾಟ ಮಾಡುವುದು ನಡೆಯುತ್ತದೆ. ಇಂದು ಕುರಿ ಸಾಕಣೆಯ ಪ್ರಮಾಣವೇ ಕಡಿಮೆಯಾಗುತ್ತಿರುವುದರಿಂದ ಸಹಜವಾಗಿ ಅದಕ್ಕೆ ಹೊಂದಿಕೊಂಡಂತಹ ಕಂಬಳಿ ನೇಯ್ಗೆಯೂ ಮೊದಲಿಗಿಂತ ಕಡಿಮೆಯಾಗಿದೆ. ಈ ನಡುವೆಯೂ ಚಳ್ಳಕೆರೆಯಲ್ಲಿ ಕಂಬಳಿ ಉದ್ಯಮ ಪ್ರತಿ ವಾರವೂ ಹತ್ತಾರು ಲಕ್ಷಗಳ ವಹಿವಾಟು ನಡೆಸುತ್ತಿದೆ. ಈ ಉದ್ಯಮವನ್ನು ನಂಬಿ ಈ ಭಾಗದ ನೂರಾರು ಹಳ್ಳಿಗಳ ಜನರು ಕಂಬಳಿ ನೇಯುವ ಕುಲಕಸಬಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಒಂದು ನೋಟ ಇಲ್ಲಿದೆ.ಚಳ್ಳಕೆರೆಯ ಸಂತೆಪೇಟೆಯ ಕಂಬಳಿಕಟ್ಟೆ ಎನ್ನುವ ಪ್ರದೇಶದಲ್ಲಿ ಪ್ರತಿ ಭಾನುವಾರ ಕಂಬಳಿಸಂತೆ ನಡೆಯುತ್ತದೆ. ಇಲ್ಲಿಗೆ ಸುತ್ತಮುತ್ತಲ ಹಳ್ಳಿಗಳಿಂದ ಕುರಿಗಾರರು, ರೈತರು, ನೇಕಾರರು ತಾವು ನೇಯ್ದು ತಂದ ಕಂಬಳಿಗಳನ್ನು ಮಾರಾಟ ಮಾಡುತ್ತಾರೆ. ಕಂಬಳಿಯನ್ನು ಕೊಳ್ಳಲು ಆಂದ್ರ, ಮಹಾರಾಷ್ಟ್ರ, ಹಿಮಾಲಯ, ಕಾಶ್ಮೀರ ಭಾಗದಿಂದಲೂ ವ್ಯಾಪಾರಸ್ತರು ಬರುತ್ತಾರೆ. ವಿಪರ್ಯಾಸ ಅಂದರೆ ಕಂಬಳಿಯ ಬಳಕೆ ಈ ಭಾಗದಲ್ಲಿಯೇ ಕಡಿಮೆಯಾಗಿದೆ. ಹಿಮಾಲಯ ಕಾಶ್ಮೀರ ಮುಂತಾದ ಹಿಮ ಚಳಿ ಹೆಚ್ಚಿರುವ ಭಾಗದಲ್ಲಿ ಕಂಬಳಿಗೆ ದೊಡ್ಡ ಬೇಡಿಕೆ ಇದೆ.ನೇಕಾರರು ಸಂತೆ ಕಂಬಳಿಯನ್ನು ಎರಡು ದಿನಕ್ಕೆ ಒಂದರಂತೆ ನೇಯ್ದರ, ನೈಸ್ ಕಂಬಳಿಯನ್ನು ವಾರಕ್ಕೆ ಒಂದರಂತೆ ನೇಯುತ್ತಾರೆ. ಒಂದು ಕಂಬಳಿಗೆ ೩೫೦ ರೂಪಾಯಿಗಳಿಂದ ಆರಂಭವಾಗಿ, ೨೦೦೦ ರೂಪಾಯಿಗಳ ತನಕ ತಾರಾವರಿ ಬೆಲೆ ಇದೆ .ಈ ಬೆಲೆಯು ಆಯಾ ಕಂಬಳಿಯ ಗುಣಮಟ್ಟ ಮತ್ತು ಕಂಬಳಿಗೆ ಬಳಸಿದ ಹುಣ್ಣೆಯ ಗುಣಮಟ್ಟವನ್ನು ಆಧರಿಸಿರುತ್ತದೆ. ಸಂತೆ ಕಂಬಳಿ ಒರಟಾಗಿದ್ದರೆ, ನೈಸ್ ಕಂಬಳಿ ತುಂಬಾ ನಯವಾಗಿಯೂ ತೆಳ್ಳಗೂ ಇರುತ್ತದೆ. ಆಧುನಿಕ ಕಾಲಮಾನಕ್ಕೆ ಒಪ್ಪುವಂತೆ ನಯವಾದ ಕಂಬಳಿಯನ್ನು ನೇಯುವ ಬದಲಾವಣೆಯೂ ಈ ನೇಯ್ಗೆಯಲ್ಲಿ ಆಗಿದೆ. ಈ ಕಂಬಳಿ ಸಂತೆಯಲ್ಲಿ ಕೇವಲ ಕಂಬಳಿ ಮಾತ್ರ ಮಾರಾಟವಾಗುವುದಿಲ್ಲ, ಅದಕ್ಕೆ ಹೊಂದಿಕೊಂಡಂತೆ ಹುಣ್ಣೆ, ಮತ್ತು ಕಂಬಳಿ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳ ಮಾರಾಟವೂ ನಡೆಯುತ್ತದೆ.
ಕುರಿಗಾರಿಕೆ ಮತ್ತು ಕಂಬಳಿ ನೇಯ್ಗೆಯಲ್ಲಿ ಇಲ್ಲಿನ ಹಲವಾರು ಸಮುದಾಯಗಳು ಭಾಗಿಯಾಗಿವೆ. ಪ್ರಮುಖವಾಗಿ ಇದರಲ್ಲಿ ಕುರುಬರು, ಗೊಲ್ಲರು, ಬೇಡರು, ಒಕ್ಕಲಿಗರ ಸಮುದಾಯಗಳಿವೆ. ಉಣ್ಣೆ ತೆಗೆಯುವುದು, ಹುಣ್ಣೆಯನ್ನು ಸ್ವಚ್ಚಗೊಳಿಸುವುದು, ನೂಲು ತೆಗೆಯುವುದು, ನೇಯುವುದರಲ್ಲಿ ಮಹಿಳೆಯರ ಭಾಗವಹಿಸುವಿಕೆ ದೊಡ್ಡ ಪ್ರಮಾಣದಲ್ಲಿ ದೆ. ಆದರೆ ಇದರ ಮಾರಾಟ, ವ್ಯವಹಾರದಲ್ಲಿ ಮಾತ್ರ ಮಹಿಳೆಯರ ಪಾತ್ರ ಶೂನ್ಯ. ಕಂಬಳಿಯ ವ್ಯಾಪಾರದಲ್ಲಿ ಪುರುಷ ಪ್ರಧಾನತೆಯೇ ಎದ್ದು ಕಾಣುತ್ತದೆ. ಕುರಿಯವರಿಂದ ನೇಕಾರರು ಕುರಿಯ ಹುಣ್ಣೆಯನ್ನು ಕತ್ತರಿಸಿಕೊಂಡು ಬಂದು, ಅದಕ್ಕೆ ಬದಲಿಯಾಗಿ ಕುರಿಯವರಿಗೆ ಕಂಬಳಿಯನ್ನು ಕೊಡುವ ಪದ್ದತಿ ಇದೆ. ಈಗೀಗ ಕುರಿಯ ಹುಣ್ಣೆ ಕತ್ತರಿಸಲು ಕುರಿಯವರೇ ನೇಕಾರರಿಗೆ ಒಂದು ಕುರಿಗೆ ಎರಡು ರೂಪಾಯಿಯನ್ನು ಈಗ ಕೊಡುತ್ತಾರೆ. ಸ್ವಚ್ಚಗೊಂಡ ಒಂದು ಮಣ ಹುಣ್ಣೆಗೆ ೩೫೦ ರಿಂದ ೪೦೦ ರೂಗಳವರೆಗೆ ಬೆಲೆ ಇದೆ.

ಈ ಕಂಬಳಿ ಉದ್ಯಮವನ್ನು ಆಧರಿಸಿಯೇ ಇಲ್ಲಿ ಸರಕಾರ ‘ಉಣ್ಣೆ ಉತ್ಪಾದನಾ ಮಾರಾಟ ಸಹಕಾರ ಮಹಾ ಮಂಡಳ’ ವನ್ನು ಸ್ಥಾಪಿಸಿದೆ. ಈ ಮಂಡಳಿ ನೇಕಾರರಿಗೆ ಹುಣ್ಣೆಯನ್ನು ಮಾರಾಟ ಮಾಡುತ್ತದೆ, ಅಂತೆಯೇ ಕಂಬಳಿಯನ್ನು ಕೊಳ್ಳುವ ಮತ್ತು ಮಾರುವ ಕೆಲಸಕ್ಕೆ ಸಹಕಾರವನ್ನೂ, ಕಂಬಳಿಗೆ ಪೂರಕವಾದ ಸಾಲ ಸೌಲಭ್ಯಗಳನ್ನೂ ಒದಗಿಸುತ್ತದೆ. ಆದರೆ ಅದು ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ನೇಕಾರರಿಗೆ ಸ್ಪಂದಿಸಿದಂತೆ ಕಾಣುವುದಿಲ್ಲ. ಇಲ್ಲಿ ಕಂಬಳಿಯನ್ನು ಆಧರಿಸಿದ ದೊಡ್ಡ ಆಚರಣ ಪರಂಪರೆಯೇ ಇದೆ. ಇದರಲ್ಲಿ ಸ್ವಲ್ಪ ಬದಲಾವಣೆಯಾಗಿದೆಯಾದರೂ ಅದರ ಸಾಂಪ್ರದಾಯಿಕ ನಂಬಿಕೆಯ ಲೋಕದಲ್ಲಿ ಅಷ್ಟು ಬದಲಾವಣೆ ಆದಂತಿಲ್ಲ. ಈ ಕಂಬಳಿ ನೇಯ್ಗೆಯ ಉದ್ಯಮದಲ್ಲಿ ಯುವ ಜನತೆಯನ್ನು ಆಕರ್ಷಿಸುವಂತಹ ಗುಣ ಕಡಿಮೆ. ಅದರಲ್ಲೂ ವಿದ್ಯಾವಂತ ಯುವ ಜನತೆ ಈ ಕಂಬಳಿ ನೇಯ್ಗೆ ಉದ್ಯಮದ ಕಡೆ ಬರುವಂತಹ ವಾತಾವರಣ ಸೃಷ್ಟಿಯಾಗಬೇಕಿದೆ. ಅಥವಾ ನಗರಗಳತ್ತ ವಲಸೆ ಹೋಗುವ ಯುವಕರನ್ನು ಕಂಬಳಿ ಉದ್ಯಮದಲ್ಲಿ ತೊಡಗಿಕೊಳ್ಳುವಂತಹ ವಾತಾವರಣ ಸೃಷ್ಟಿ ಮಾಡುವಂತಹ ಯೋಜನೆಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಹಾಗಾದಲ್ಲಿ ಈ ಕಂಬಳಿ ಉದ್ಯಮವನ್ನು ಮತ್ತಷ್ಟು ಬೆಳೆಸುವ ಸಾಧ್ಯತೆಗಳಿವೆ.

ಮಂಗಳವಾರ, ಫೆಬ್ರವರಿ 22, 2011

ಗೋ.ರು. ಚನ್ನಬಸಪ್ಪ ಅವರೊಂದಿಗೆ ಮಾತುಕತೆ( ಗೋ.ರು. ಚನ್ನಬಸಪ್ಪ ಅವರು ಹಿರಿಯ ಜಾನಪದ ತಜ್ಞರು, ಸದ್ಯದ ಕರ್ನಾಟಕ ಜಾನಪದ ಅಕಾಡೆಮಿಯ ಕ್ರಿಯಾಶೀಲ ಅಧ್ಯಕ್ಷರು. ಅವರು ಕನ್ನಡ ಜಾನಪದ ಕ್ಷೇತ್ರಕ್ಕೆ ಗುರುತರವಾದ ಸೇವೆ ಸಲ್ಲಿಸಿದ್ದಾರೆ. ಭಾರತದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಅವರ ಪಾತ್ರ ದೊಡ್ಡದು. ಮೈದುನ ರಾಮಣ್ಣ, ಗ್ರಾಮಗೀತೆಗಳು, ಬಾಗೂರು ನಾಗಮ್ಮ ಮತ್ತು ಇತರ ಹಾಡುಗಳು, ಮುಂತಾದ ಕೃತಿಗಳು ಅವರ ವಿದ್ವತ್ತಿಗೆ ಸಾಕ್ಷಿಯಾಗಿವೆ. 1977 ರಲ್ಲಿ ಅವರು ಸಂಪಾದಿಸಿದ `ಕರ್ನಾಟಕ ಜನಪದ ಕಲೆಗಳು’ ಇಂದಿಗೂ ಮಾದರಿ ಕೃತಿಯಾಗಿದೆ. ಅವರ ಇತ್ತೀಚಿನ ‘ಆಲೋಚನೆ’ ಎನ್ನುವ ಕೃತಿಯ ತನಕ ಅವರ ಜಾನಪದ ಅಧ್ಯಯನದ ಬೇರೆ ಬೇರೆ ನೆಲೆಯ ಆಲೋಚನ ವಿನ್ಯಾಸಗಳು ಜಾನಪದ ಅಧ್ಯಯನಕಾರರಿಗೆ ಉಪಯುಕ್ತವಾಗಿವೆ . ಗೋ.ರು.ಚ ಅವರ ಆಲೋಚನೆಯಲ್ಲಿ ಸಾಂಪ್ರದಾಯಿಕ ಜಾನಪದ ಅಧ್ಯಯನ ವಿದಾನಗಳು ಬದಲಾಗಿಲ್ಲವಾದರೂ, ಈಚೆಗೆ ಇದನ್ನು ಮೀರುವ ಪ್ರಯತ್ನದಲ್ಲಿದ್ದಂತೆ ಕಾಣುತ್ತದೆ. ಅವರು ಕನ್ನಡ ಜಾನಪದ ಬ್ಲಾಗಿಗಾಗಿ ಮಾತನಾಡಿದ ಮಾತುಕತೆ ಇಲ್ಲಿದೆ-ಅರುಣ್ )


ಅರುಣ್ : ಸಾರ್, ನೀವು ಜಾನಪದ ಅಕಾಡೆಮಿ ಅಧ್ಯಕ್ಷರಾದಂದಿನಿಂದ ಒಳ್ಳೆಯ ಕೆಲಸಗಳು ನಡೆಯುತ್ತಿವೆ, ಅಕಾಡೆಮಿ ಕ್ರಿಯಾಶೀಲವಾಗಿದೆ. ಸದ್ಯದ ಅಕಾಡೆಮಿಯ ಚಟುವಟಿಕೆಗಳಾವುವು?

ಗೋ.ರು.ಚ: ಅಕಾಡೆಮಿ ಜಾನಪದ ಕುರಿತಂತೆ ತುಂಬಾ ಕ್ರಿಯಾಶೀಲವಾಗಿ ಕೆಲಸ ಮಾಡ್ತಿದೆ, ಇತ್ತೀಚಿಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾನಪದದ ಬಗ್ಗೆ ಆಸಕ್ತಿಯನ್ನು ಬೆಳೆಸಲು ಜಾನಪದ ಜಗುಲಿ ಎನ್ನುವ ಕಾರ್ಯಕ್ರಮವನ್ನು ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತಿದ್ದೇವೆ. ಮೊದಲು ಕಾಲೇಜುಗಳನ್ನು ಆಯ್ಕೆ ಮಾಡಿ, ಅವರನ್ನು ಸಂಪರ್ಕಿಸಿ ಒಂದು ಜಾನಪದ ಕಾರ್ಯಕ್ರಮವನ್ನು ಆಯೋಜಿಸುವುದು. ಅದರ ಸ್ವರೂಪ ಅಂದ್ರ, ಒಬ್ರು ಜಾನಪದ ವಿದ್ವಾಂಸರು ಮಾತಾಡ್ತಾರೆ, ಮಾತಿನ ಬಳಿಕ ವಿದ್ಯಾರ್ಥಿಗಳು ಚರ್ಚೆ ಸಂವಾದ ಮಾಡ್ತಾರೆ. ಮತ್ತೆ ಆ ಭಾಗದ ಸ್ಥಳೀಯ ಕಲಾವಿದರು, ಅಥವಾ ಕರ್ನಾಟಕದ ಬೇರೆ ಬೇರೆ ಕಡೆಗಳಿಂದ ಕರೆಯಿಸಿದ ಜಾನಪದ ಕಲಾವಿದರಿಂದ ಕಲಾಪ್ರದರ್ಶನ ನಡೆಯುತ್ತೆ.
ಇನ್ನು ಕಾಲೇಜು ಅಧ್ಯಾಪಕರನ್ನು ಜಾನಪದ ಸಂಗ್ರಹ ಮಾಡಲು ಬಳಸಿಕೊಳ್ಳಬಹುದು ಎಂದು ತಿಳಿದು, ಅಧ್ಯಾಪಕರಿಗೆ ಕ್ಷೇತ್ರಕಾರ್ಯದ ತರಬೇತಿಯನ್ನು ಜಾನಪದ ವಿದ್ವಾಂಸರಿಂದ ಕೊಡಿಸ್ತೀವಿ. ಇಲಾಖೆಯವರೇ ಕೆಲವು ಅಧ್ಯಾಪಕರನ್ನು ಇದಕ್ಕಾಗಿ ನಿಯೋಜನೆ ಮಾಡ್ತಿದಾರೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗ್ತಿದೆ. ಇದನ್ನು ಇನ್ನಷ್ಟು ಕ್ರಿಯಾಶೀಲವಾಗಿ ಮಾಡಬೇಕು.
ಮತ್ತೊಂದು ಜಾನಪದ ಡಿಕ್ಷನರಿ ಕೆಲಸ ನಡೀತಿದೆ. ಇದು ಒಟ್ಟು ಕನ್ನಡದ ಸಮಗ್ರ ಜಾನಪದ ನುಡಿಗಟ್ಟುಗಳ ಕೋಶ. ಇದೊಂದು ದೊಡ್ಡ ಪ್ರಯತ್ನ. ಕರ್ನಾಟಕದ ಎಲ್ಲಾ ಭಾಗದ ಜಾನಪದ ನುಡಿಗಟ್ಟುಗಳು ಸೇರಿಸುವಂತಹ ಪ್ರಯತ್ನ. ಎಲ್ಲಾ ಭಾಗದಿಂದಲೂ ಕ್ಷೇತ್ರ ಕಾರ್ಯಕರ್ತರನ್ನು ನೇಮಿಸಿ ಕೆಲಸ ಮಾಡಿಸ್ತಿದಿವಿ. ಸದ್ಯಕ್ಕೆ ಆ ಕೆಲಸ ನಡೀತಿದೆ.
ಬೀದರ್ನಲ್ಲಿ ಏಪ್ರಿಲ್ ೨೩, ೨೪, ೨೫ ರಂದು ಅಖಿಲ ಭಾರತ ಜಾನಪದ ಸಮ್ಮೇಳನ ಮಾಡ್ತಿದಿವಿ. ಇಂತಹ ಕಾರ್ಯಕ್ರಮ ಮೊದಲ ಪ್ರಯತ್ನ. ಭಾರತದ ಬೇರೆ ಬೇರೆ ರಾಜ್ಯಗಳಿಂದ ಜಾನಪದ ವಿದ್ವಾಂಸರು, ಜನಪದ ಕಲಾವಿದರೂ ಬರ್ತಿದಾರೆ, ಸೆಂಟ್ರಲ್ ಅಕಾಡೆಮಿ ಈಶಾನ್ಯ ಭಾರತದ ಜಾನಪದ ಕಲಾವಿದರನ್ನು ಸಮ್ಮೇಳನಕ್ಕಾಗಿ ಕಳಿಸಿಕೊಡ್ತಿದಾರೆ. ಇದರ ತಯಾರಿ, ಮುಂತಾದ ಕೆಲಸಗಳನ್ನು ಮಾಡ್ತಿದಿವಿ.

ಅರುಣ್: ಸಾರ್, ನೀವು ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸುವಲ್ಲಿ ಹಗಲಿರುಳು ಶ್ರಮಿಸಿದವರು. ನಿಮ್ಮ ಮುಂದಾಳತ್ವದ ಹೋರಾಟದ ಫಲವೇ ಇಂದಿನ ಜಾನಪದ ವಿಶ್ವವಿದ್ಯಾಲಯ. ಅದಕ್ಕಾಗಿ ವಯಕ್ತಿವಾಗಿ ನಿಮ್ಮನ್ನು ಅಭಿನಂದಿಸುವೆ. ಸಾರ್, ನಿಮ್ಮ ಕನಸಿನ ಜಾನಪದ ವಿವಿಯ ಮೊದಲ ಆದ್ಯತೆಯ ಕೆಲಸ ಯಾವುದಾಗಿರಬೇಕು ?

ಗೋ.ರು.ಚ: ಹೌದು ಕರ್ನಾಟಕದ ಸಂದರ್ಭದಲ್ಲಿ ಜಾನಪದ ವಿವಿ ಆಗಿದ್ದು ದೊಡ್ಡ ಘಟನೆ. ಸರಕಾರ ಒಪ್ಪಿಗೆ ಕೊಟ್ಟಿದೆ, ನಾವು ಸರಕಾರಕ್ಕೆ ವರದಿ ಸಲ್ಲಿಸಿದಿವಿ, ಇನ್ನು ಸ್ಥಳ ಆಯ್ಕೆಯಾಗಿ ಚಟುವಟಿಕೆ ಆರಂಭವಾಗಬೇಕು ಅಷ್ಟೆ. ಜಾನಪದ ವಿವಿಯಲ್ಲಿ ಜಾನಪದಕ್ಕೆ ಸಂಬಂದಿಸಿದ್ದೆಲ್ಲಾ ಸಿಗುವಂತಾಗಬೇಕು. ಇನ್ನೂ ಸಂಗ್ರಹಿಸದೇ ಇರುವ ಜಾನಪದ ಸಾಮಗ್ರಿಗಳನ್ನು ಅವುಗಳು ನಶಿಸುವ ಮುನ್ನ ಸಂಗ್ರಹಿಸುವ ಕೆಲಸ ಮೊದಲಾಗಬೇಕು. ಹೊಸ ತಲೆಮಾರಿನಲ್ಲಿ ಜಾನಪದದ ಬಗ್ಗೆ ಆಸಕ್ತಿ ಮೂಡಿಸುವಂತಹ ಯೋಜನೆಗಳನ್ನು ರೂಪಿಸಬೇಕು. ನಶಿಸುತ್ತಿರುವ ಜಾನಪದವನ್ನು ಉಳಿಸಲು ಅನುವಾಗುವಂತಹ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ಕೊಡಬೇಕು. ಜಾನಪದ ವಿವಿಯಲ್ಲಿ ಗ್ರಾಮ ಭಾರತವನ್ನು ಬಿಂಬಿಸುವಂತೆ, ಮಾದರಿ ಗ್ರಾಮೀಣ ಹಳ್ಳಿಯೊಂದನ್ನು ಸ್ಥಾಪಿಸಲಾಗುವುದು. ಇಲ್ಲಿ ಜಾನಪದ ಆಚರಣೆ, ಕಲೆ, ಹಬ್ಬ, ಮುಂತಾದವುಗಳು ವರ್ಷಪೂರ್ತಿ ನಡೆಯುವಂತೆ ಅದನ್ನು ರೂಪಿಸಲಾಗುವುದು. ಇಲ್ಲಿ ಜಾನಪದಕ್ಕೆ ಸಂಬಂದಿಸಿದ ಎಲ್ಲ ಬಗೆಯ ಪಾರಂಪರಿಕ ಕರಕುಶಲ ವಸ್ತು ಸಾಮಗ್ರಿಗಳು ಸಿಗುವಂತೆ ಮಾಡಲಾಗುವುದು. ಇಂತಹ ಕೆಲವು ಯೋಚನೆಗಳಿವೆ.

ಅರುಣ್: ಸಾರ್, ಇಂದು ತಂತ್ರಜ್ಞಾನ ತೀವ್ರವಾಗಿ ಬೆಳೆಯುತ್ತಿದೆ. ಎಲ್ಲವೂ ಅಂತರ್ಜಾಲದಲ್ಲಿ ಸಿಗಬೇಕು ಎನ್ನುವ ಭಾವನೆ ದಟ್ಟವಾಗುತ್ತಿದೆ, ಈ ಹೊತ್ತಲ್ಲಿ ಕನ್ನಡ ಜಾನಪದ ಎಂದು ಗೂಗಲ್ ಗೆ ಕೊಟ್ಟು ಹುಡುಕಿದರೆ ಬರುವ ಪಲಿತಾಂಶಗಳು ನಿರಾಸೆ ಹುಟ್ಟಿಸುತ್ತವೆ. ಈ ನಿಟ್ಟಿನಲ್ಲಿ ಅಕಾಡೆಮಿ ಯಾಕೆ ಯೋಚಿಸಬಾರದು?

ಗೋ.ರು.ಚ: ಈ ನಿಟ್ಟಿನಲ್ಲಿ ಯೋಚಿಸೋ ಅಗತ್ಯನೂ ಇದೆ. ಈಗಾಗಲೇ ನಮ್ಮ ಅಕಾಡೆಮಿಯ ಮಾಹಿತಿ, ಪೋಟೋ ಎಲ್ಲವುಗಳನ್ನು ಜ್ಞಾನ ಆಯೋಗಕ್ಕೆ ಕೊಟ್ಟಿದ್ದೇವೆ. ಅವರು ಆಯಾ ಮಾಹಿತಿಯನ್ನು ಅಂತರ್ಜಾಲದಲ್ಲಿ ಹಾಕಿ ಎಲ್ಲರಿಗೂ ಸಿಗುವಂತೆ ಮಾಡುತ್ತೇವೆ ಎಂದಿದ್ದಾರೆ. ಇನ್ನು ಜಾನಪದ ಡಿಕ್ಷನರಿಯನ್ನು ಸಿ.ಡಿ ರೂಪದಲ್ಲೂ ಒದಗುವಂತೆ ಮಾಡುವ ಯೋಚನೆ ಇದೆ. ನೀವು ಹೇಳುವಂತೆ ಕನ್ನಡ ಜಾನಪದದ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಸಿಗುವಂತಹ ಯೋಜನೆ ಹಮ್ಮಿಕೊಳ್ಳಬೇಕಿದೆ. ಅದಕ್ಕೆ ನಿಮ್ಮಂತ ಯುವಕರು ಮುಂದಾಗಬೇಕು.


ಅರುಣ್: ಸಾರ್ ಇತ್ತೀಚೆಗೆ ಜಾನಪದ ಫೆಲೋಶಿಪ್ ಕೊಟ್ಟು ಜಾನಪದದ ಬಗ್ಗೆ ಸಂಶೋಧನೆ ಉತ್ತೇಜಿವ ಕೆಲಸವನ್ನು ಅಕಾಡೆಮಿ ಮಾಡುತ್ತಿದೆ, ಇದರ ಉದ್ದೇಶ ಮತ್ತು ಆಯ್ಕೆ ಪ್ರಕ್ರಿಯೆ ಹೇಗೆ ?

ಗೋ.ರು.ಚ: ಈ ಯೋಜನೆ ಜಾನಪದ ಸಂಶೋಧನೆಗೆ ಯುವ ಜನಾಂಗವನ್ನು ತೊಡಗಿಸುವ ಗುರಿಯನ್ನು ಹೊಂದಿದೆ. ಮೊದಲು ಪತ್ರಿಕೆಗಳಲ್ಲಿ ಜಾಹೀರಾತು ಮಾಡಲಾಗುವುದು, ನಂತರ ಬಂದ ಅರ್ಜಿಗಳಲ್ಲಿ ಆಯ್ದ ಸಂಶೋಧಕರನ್ನು ಸಂದರ್ಶನಕ್ಕೆ ಕರೆಸಿ, ಜಾನಪದ ವಿದ್ವಾಂಸರ ಸಮಿತಿ ರಚಿಸಿ, ಆ ಸಮಿತಿಯ ಮೂಲಕ ಆಯ್ಕೆ ಮಾಡಲಾಗುವುದು. ಈ ಆಯ್ಕೆಯಲ್ಲಿ ಪ್ರಾದೇಶಿಕತೆ, ಪರಿಶಿಷ್ಟ ಜಾತಿ, ಪಂಗಡ, ಮಹಿಳೆ ಮುಂತಾದ ಮೀಸಲಾತಿಯ ನ್ನು ಅನುಸರಿಸಲಾಗುವುದು. ಈ ವರ್ಷ ಐದು ಜನ ಆಯ್ಕೆಯಾಗಿದ್ದಾರೆ, ಅವರು ಆರು ತಿಂಗಳಿಗೊಮ್ಮೆ ವರದಿ ನೀಡುವುದು, ನಂತರ ಸಂಶೋಧನೆ ಮುಗಿದಾಗ ಅಕಾಡೆಮಿಗೆ ಸಲ್ಲಿಸುವುದು ಇಷ್ಟು ಇದರ ನಿಯಮ.
ಅರುಣ್: ಸಾರ್ ಇತ್ತೀಚೆಗೆ ಜಾನಪದದಲ್ಲಿ ಹಲವು ಬದಲಾವಣೆ ನಡೆಯುತ್ತಿದೆ, ಹೊಸ ಜಾನಪದ ಸೃಷ್ಟಿಯಾಗುತ್ತಿದೆ ಅದನ್ನು ನೀವು ಹೇಗೆ ಗ್ರಹಿಸುತ್ತೀರಿ?

ಗೋ.ರು.ಚ: ಬದಲಾವಣೆ ಜಗದ ನಿಯಮ, ಸಾಮಾಜಿಕ ವರ್ತನೆಗಳಲ್ಲಿ ಬದಲಾವಣೆಗಳು ನಡೆಯುತ್ತಿವೆ, ಜಾನಪದದಲ್ಲೂ ಬದಲಾವಣೆಗಳು ಆಗುತ್ತಿವೆ. ಅವುಗಳನ್ನು ಗುರುತಿಸುವ ಪ್ರಯತ್ನಗಳು ನಡೆಯಬೇಕು. ಅದಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಲು ಅಕಾಡೆಮಿಗೆ ವಿದ್ವಾಂಸರ ಸಲಹೆ ಸೂಚನೆಗಳು ಬಂದರೆ ಅದನ್ನು ಸ್ವೀಕರಿಸಿ, ಅದಕ್ಕೆ ಪೂರಕವಾದ ಕೆಲಸಗಳನ್ನು ಅಕಾಡೆಮಿ ಮಾಡುತ್ತದೆ.

ಅರುಣ್: ಕೆಲವು ಮಾತುಗಳನ್ನು ಕನ್ನಡ ಜಾನಪದ ಬ್ಲಾಗ್ ಗಾಗಿ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಸಾರ್, ಕನ್ನಡ ಜಾನಪದ ಬ್ಲಾಗ್ ನಿರಂತರ ನಿಮ್ಮ ಸಂಪರ್ಕದಲ್ಲಿರುತ್ತದೆ. ನಮಸ್ಕಾರಗಳು.

ಸೋಮವಾರ, ಫೆಬ್ರವರಿ 21, 2011

ಡಿ.ಎನ್.ಶಂಕರ ಭಟ್ಟರೊಂದಿಗೆ ಒಂದು ಮಾತುಕತೆ

ಮಾತುಕತೆ ನಡೆಸಿದವರು- ಮೇಟಿ ಮಲ್ಲಿಕಾರ್ಜುನ, ಸಿರಾಜ್ ಅಹಮದ್

( ಭಾಷಾವಿಜ್ಞಾನಿ ಡಿ.ಎನ್. ಶಂಕರ ಭಟ್ಟರನ್ನು ಹೊಸ ತಲೆಮಾರಿನ ಲೇಖಕರಾದ ಮೇಟಿ ಮಲ್ಲಿಕಾರ್ಜುನ ಮತ್ತು ಸಿರಾಜ್ ಅಹಮದ್ ಮಾತಿಗೆಳೆದಾಗ, ನಡೆದ ಸಂವಾದದ ಭಾಗವಿದು. ಈ ಬರಹ ಮಯೂರ, ಮತ್ತು ಕೆಂಡಸಂಪಿಗೆ ಬ್ಲಾಗನಲ್ಲೂ ಪ್ರಕಟವಾಗಿದೆ. ಶಂಕರ ಭಟ್ ಅವರು ಕನ್ನಡ ನುಡಿಯ ನಡೆಯ ಬಗೆಗೆ ಅಪರೂಪದ ಒಳನೋಟಗಳನ್ನು ಕೊಟ್ಟಿದ್ದಾರೆ. ಆಡು ನುಡಿ ಜನಪದ ಭಾಷೆಯ ಬಗೆಗೂ ಅವರ ಮಾತುಗಳು ಕನ್ನಡವನ್ನು ಬೇರೆ ಬೇರೆ ದಿಕ್ಕುಗಳಿಂದ ನೋಡುವಂತೆ ಒತ್ತಾಯಿಸುತ್ತವೆ. ಹಾಗಾಗಿ ಈ ಬರಹವನ್ನು ಕನ್ನಡ ಜಾನಪದ ಬ್ಲಾಗ್ ಓದುಗರ ಗಮನಕ್ಕೂ ತರಲು ಇಲ್ಲಿ ಮತ್ತೊಮ್ಮೆ ಪ್ರಕಟಿಸಲಾಗಿದೆ- ಅರುಣ್)

ಮೇಟಿ: ನೀವು ಮೂಲತಃ ಸಂಸ್ಕೃತ ವಿದ್ವಾಂಸರಾಗಿದ್ದುಕೊಂಡು ಕನ್ನಡದ ಬಗ್ಗೆ, ಭಾಷಾಶಾಸ್ತ್ರದ ಬಗ್ಗೆ ಹೇಗೆ ಆಸಕ್ತಿಯನ್ನು ಬೆಳೆಸಿಕೊಂಡಿರಿ?

ಶಂಕರ ಭಟ್ : ಹೌದು, ನಾನು ಮೂಲತಃ ಸಂಸ್ಕೃತದಲ್ಲಿ ಎಂಎ ಮಾಡಿದ್ದು. ಎಂಎನಲ್ಲಿ ಫೈಲಾಲಜಿ ಅಂತ ಒಂದು ಸಬ್ಜೆಕ್ಟ್ ಇತ್ತು. ಆಗ ಅದರ ಬಗ್ಗೆ ಒಂದು ಸ್ವಲ್ಪ ಆಸಕ್ತಿ ಹುಟ್ಟಿತು. ಅದಕ್ಕಿಂತ ಮುಖ್ಯವಾಗಿ ಕಿಟ್ಟೆಲ್ ಡಿಕ್ಷನರಿಯನ್ನು ರಿವೈಜ್ ಮಾಡಿದ ನಮ್ಮ ಅಜ್ಜ ತಾಯಿಯ ಸೋದರ ಮಾವ ಎಂ.ಮರಿಯಪ್ಪಭಟ್ಟರು ಒಂದು ಸಾರಿ, ಡೆಕ್ಕನ್ ಕಾಲೇಜಿನವರು ಕೊಯಮತ್ತೂರಿನಲ್ಲಿ ನಡೆಸುವ ಒಂದು ಸಮ್ಮರ್ ಸ್ಕೂಲ್ ಇದೆ. ಅದಕ್ಕೆ ನೀನು ಹೋಗಬಹುದು ಎಂದು ಹೇಳಿದರು. ನಲವತ್ತು ದಿನ ನಡೆದ ಆ ಸಮ್ಮರ್ ಸ್ಕೂಲ್ ನಲ್ಲಿ ಒಳ್ಳೊಳ್ಳೆಯ ವಿದ್ವಾಂಸರಿದ್ದರು. ಗ್ಲೀಸನ್ ಇದ್ದರು ಪಿ.ಬಿ.ಪಂಡಿತ್, ಕೇಲ್ಕರ್, ಘಾಟ್ಕೆ ಇದ್ದರು ಅವರೆಲ್ಲರ ಕಾರಣದಿಂದ ನನಗೆ ಭಾಷಾಶಾಸ್ತ್ರದ ಬಗ್ಗೆ ಬಹಳ ಕುತೂಹಲ ಹುಟ್ಟಿತು. ನಂತರ ಘಾಟ್ಕೆ ಅವರ ಬಳಿ ತುಳು ಭಾಷೆಯ ಬಗ್ಗೆ ಪಿಎಚ್.ಡಿ ಮಾಡಲು ಪುಣೆಗೆ ಹೋದೆ.

ಮೇಟಿ: ಎಪ್ಪತ್ತರ ದಶಕದಲ್ಲಿ ನೀವು ಕನ್ನಡದಲ್ಲಿ ಬರೆಯುತ್ತಿದ್ದಿರಿ. ನಂತರ ತೊಂಬತ್ತರ ದಶಕದವರೆಗೆ ಕನ್ನಡದಲ್ಲಿ ಯಾಕೆ ಬರೆಯಲೇ ಇಲ್ಲ?

ಶಂಕರ ಭಟ್ : ಮತ್ತೆ ಕನ್ನಡದಲ್ಲಿ ಬರೆಯಲಿಕ್ಕೆ ಚಂದ್ರಶೇಖರ ಕಂಬಾರರು ಕಾರಣ. ಒಂದು ಸಾರಿ ಯಾವುದೋ ಸೆಮಿನಾರಿಗೆ ಅಂತ ಕನ್ನಡ ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಆಗ ಅವರು ನೀವು ಕನ್ನಡದಲ್ಲಿ ಯಾವುದಾದರೂ ಒಂದು ಪುಸ್ತಕ ಕೊಡಲೇಬೇಕು ಎಂದು ಒತ್ತಾಯ ಮಾಡಿದರು. ಅವರು ಒತ್ತಾಯ ಮಾಡದಿದ್ದರೆ ನಾನು ಕನ್ನಡದಲ್ಲಿ ಮತ್ತೆ ಬರೆಯುತ್ತಿರಲಿಲ್ಲವೇನೋ. ಆಗ `ಕನ್ನಡಭಾಷೆಯ ಕಲ್ಪಿತ ಚರಿತ್ರೆ' ಎಂಬ ಪುಸ್ತಕ ಬರೆದೆ. ಅದರ ನಂತರ `ಕನ್ನಡ ಶಬ್ದ ರಚನೆ' ಎಂಬ ಪುಸ್ತಕ ಬರೆದೆ. ಎಲ್ಲ ರೆಡಿಯಾದ ಮೇಲೆ ಅಲ್ಲಿನ ಕುಲಪತಿಗಳು ಬದಲಾದರು ಅಂತ ಅದು ಅಲ್ಲಿಗೇ ನಿಂತುಹೋಯಿತು.

ಸಿರಾಜ್: ನೀವು ಎಪ್ಪತ್ತರ ದಶಕಲ್ಲಿ ಬರೆದಾಗ ನಿಮ್ಮ ಬರಹಗಳಿಗೆ ಎಂಥ ಪ್ರತಿಕ್ರಿಯೆ ಸಿಕ್ಕಿತು?

ಶಂಕರ ಭಟ್ : ಇಲ್ಲ ಯಾರೂ ಅದರ ಬಗ್ಗೆ ಗಮನ ವಹಿಸಲಿಲ್ಲ. ನನ್ನ ಮೊದಲ ಪುಸ್ತಕ ಬಂದಾಗ ಚಿದಾನಂದ ಮೂರ್ತಿಯಂಥ ವಿದ್ವಾಂಸರು ನಿಮ್ಮ ಪುಸ್ತಕವನ್ನು ಲೈಬ್ರರಿಯ ರ್ಯಾಕಿನಲ್ಲಿ ನೋಡಿದೆ ಅಂದರು. ಅದರೆ ಅದೇ ಇಂಗ್ಲಿಷ್ ನಲ್ಲಿ ಬರೆದ ಪುಸ್ತಕಗಳು ಆಮ್ ಸ್ಟರ್ ಡ್ಯಾಮ್, ಎಡಿನ್ ಬರಾ, ಜರ್ಮನಿ, ಆಕ್ಸ್ ಫರ್ಡ್ ಮುಂತಾದ ಕಡೆಗಳಲ್ಲಿ ಚರ್ಚೆಗೆ ಒಳಗಾಗಿವೆ. ಅಲ್ಲೆಲ್ಲ ನಾನು ವಿಸ್ತೃತವಾದ ಸಂಶೋಧನೆ, ಅಧ್ಯಾಪನದಲ್ಲಿ ತೊಡಗಿಕೊಂಡಿದ್ದೇನೆ.

ಸಿರಾಜ್: ನೀವು ಇಷ್ಟು ವರ್ಷ ಮಾಡಿರುವ ಕೆಲಸವನ್ನು ನೋಡಿದರೆ ಲಿಖಿತ ಭಾಷೆಗೂ ಮತ್ತು ಆಡುನುಡಿಗೂ ನಡುವೆ ಇರುವ ತಾರತಮ್ಯವನ್ನು ಅಳಿಸಿ ಹಾಕಿ ಅವೆರಡನ್ನೂ ಬ್ರಿಡ್ಜ್ ಮಾಡುವ ಕೆಲಸ ಮಾಡುತ್ತಿದ್ದೀರ ಅನ್ನಿಸುತ್ತೆ. ಇದರ ಬಗ್ಗೆ ಹೇಳಿ.

ಶಂಕರ ಭಟ್ : ನಾನು ಅವೆರಡರ ನಡುವಿನ ಅಂತರವನ್ನು ಅಳಿಸುವ ಪ್ರಯತ್ನವೇನು ಮಾಡ್ತಾಯಿಲ್ಲ. ನಾನು ಮಾಡ್ತಾಯಿರುವುದೇನಂದರೆ ಇಂದು ಎಲ್ಲರ ಕನ್ನಡ ಎಲ್ಲರದಾಗಿಲ್ಲ. ಉದಾಹರಣೆಗೆ ಪ್ರಜಾವಾಣಿ, ಉದಯವಾಣಿ, ಸಂಯುಕ್ತ ಕರ್ನಾಟಕ ಮುಂತಾದ ದಿನಪತ್ರಿಕೆಗಳು ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಪ್ರಕಟವಾದರೂ ಇವುಗಳ ಭಾಷೆ ಮಾತ್ರ ಒಂದೇ ಆಗಿರುತ್ತದೆ. ಇದನ್ನೇ ಇಂಗ್ಲಿಷ್ ನಲ್ಲಿ ಸ್ಟ್ಯಾಂಡರ್ಡ್ ಕನ್ನಡ ಎಂದೂ ಹೇಳುತ್ತಾರೆ. ಈ ಭಾಗಗಳ ಆಡುನುಡಿ ಬೇರೆಯಾಗಿರುತ್ತದೆ. ಆದರೆ ಎಲ್ಲರ ಕನ್ನಡ ಎನ್ನುವುದು ಆಡುನುಡಿಗೆ ಹತ್ತಿರವಾಗಿಲ್ಲ. ಇದು ಬರೀ ಸಂಸ್ಕೃತದಿಂದ ತುಂಬಿಹೋಗಿದೆ. ಹಾಗಾಗಿ ಮಕ್ಕಳಿಗೆ ಈ ಎಲ್ಲರ ಕನ್ನಡವನ್ನು ಕಲಿಯುವುದು ಕಷ್ಟವಾಗುತ್ತದೆ. ಉದಾಹರಣೆಗೆ, ಪ್ರಜಾವಾಣಿಯಲ್ಲಿ ನಾಯಿ ಎನ್ನುವುದಕ್ಕೆ ಶ್ವಾನವೆಂದೂ ಹಲ್ಲು ಎನ್ನುವುದಕ್ಕೆ ದಂತವೆಂದೂ ಬಳಸುತ್ತಾರೆ. ಇದು ಯಾರಿಗೂ ಅರ್ಥವಾಗುವುದಿಲ್ಲ. ಸಂಸ್ಕೃತ ಹಿರಿಮೆಯ ಸಂಕೇತ ಎಂದುಕೊಂಡಿದ್ದೇವೆ. ಇದನ್ನು ಬಿಟ್ಟು ಕನ್ನಡವನ್ನು ಬಳಸುವುದೇ ಹಿರಿಮೆ ಎಂಬುದನ್ನು ಹೇಳಬೇಕು. ಎಲ್ಲರ ಕನ್ನಡ ಅಥವಾ ಸ್ಟ್ಯಾಂಡರ್ಡ್ ಕನ್ನಡವನ್ನು ಆಡುನುಡಿಗೆ ಹತ್ತಿರ ತರಬೇಕು. ಇಲ್ಲಿ ಸಂಸ್ಕೃತ ಕಡಿಮೆ ಇರಬೇಕು ಓದುವ ಹಾಗೆ ಬರೆಯಬೇಕು. ಯಾಕಂದರೆ ಮಹಾಪ್ರಾಣಗಳನ್ನು ಬರೀತೀವಿ. ಆದರೆ ಓದುವುದಿಲ್ಲ. ಆಡುಕನ್ನಡವನ್ನು ಗಮನಿಸಿ ಬರಹಕನ್ನಡವನ್ನು ಸರಿಪಡಿಸಬೇಕು. ಆಗ ಸಂಸ್ಕೃತದ ಹೊರೆ ಕಡಿಮೆಯಾಗಿ ವೈವಿಧ್ಯತೆ ಉಳಿಯುತ್ತೆ. ಕನ್ನಡವನ್ನು ಎಲ್ಲರೂ ಕಲಿಯುವಂತೆ ಆಗುತ್ತೆ.


ಸಿರಾಜ್: ನೀವು ಬಹುವಾಗಿ ಹೇಳುವ ಸಂಸ್ಕೃತ ಹೇರಿಕೆಯ ಪ್ರಶ್ನೆ ಹೊಸದೇನಲ್ಲ. ಕವಿರಾಜಮಾರ್ಗ ಕಾಲದಲ್ಲಿಯೇ ಕನ್ನಡ ಸಂಸ್ಕೃತದ ಮುಖಾಮುಖಿ ಆಗಿ ಕನ್ನಡ ಅದನ್ನು ಜೀರ್ಣಿಸಿಕೊಂಡು ಬೆಳೆದಿದೆ ಎಂಬ ವಾದ ಇದೆ. ಮಾರ್ಗಕಾರನಲ್ಲೇ ಸಂಸ್ಕೃತ ಕನ್ನಡ ಪದಗಳನ್ನು ತಪ್ಪು ತಪ್ಪಾಗಿ ಸೇರಿಸಿ ಆಗಿರುವ ದೋಷಾದೋಷ ನಿರ್ಣಯದ ಚರ್ಚೆ ಇರುವಾಗ ಸಂಸ್ಕೃತದ ಬಗ್ಗೆ ನಿಮಗೆ ಯಾಕಿಷ್ಟು ಆತಂಕ?

ಶಂಕರ ಭಟ್ : ಇದು ಹಾಗಲ್ಲ. ಮೊನ್ನೆ ಮೊನ್ನೆಯವರೆಗೆ ಬರಹ ಓದು ಎಲ್ಲವೂ ನಮ್ಮ ಜನಸಂಖ್ಯೆಯ ಒಂದು ಪರ್ಸೆಂಟ್ ಅಥವಾ ಜೀರೋ ಪಾಯಿಂಟ್ ಒನ್ ಪರ್ಸೆಂಟ್ ಗಿಂತ ಕಮ್ಮಿ ಜನರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಓದು ಬರೆಯುವವರ ಸಂಖ್ಯೆ ನೂರು ಪರ್ಸೆಂಟ್ ಆಗಬೇಕು. ಎಲ್ಲರ ಕನ್ನಡ ಅಂದರೆ ಅದೇ. ಆದರೆ ಈ ಸಮಸ್ಯೆ ಕವಿರಾಜಮಾರ್ಗದ ಕಾಲದಲ್ಲಿ ಇರಲಿಲ್ಲ. ಹಾಗೆ ನೋಡಿದರೆ ಮಾರ್ಗಕಾರನ ಕಾಲದಲ್ಲಿ ಕನ್ನಡ ಸಂಸ್ಕೃತದ ಮುಖಾಮುಖಿ ಆಗಿಯೇ ಇರಲಿಲ್ಲ. ಆಗಿನ ಕಾಲದಲ್ಲಿ ಸಂಸ್ಕೃತವೇ ಮೊದಲು ನಂತರ ಕನ್ನಡ ಎಂಬ ಸ್ಥಿತಿ ಇತ್ತು. ಸಂಸ್ಕೃತವನ್ನು ಕನ್ನಡ ಜೀರ್ಣಿಸಿಕೊಂಡು ಬೆಳೆದಿದೆ ಎಂದು ಹೇಳುವುದು ಒಂದು ಚಿಕ್ಕ ಗುಂಪಿನ ಚಿಂತನೆ. ಆ ಗುಂಪು ಕನ್ನಡವು ಸಂಸ್ಕೃತದ ಜೊತೆಗಿನ ಮುಖಾಮುಖಿಯಲ್ಲಿ ಗೆದ್ದು ಬಂದಿದೆ ಎಂಬ ಭ್ರಮೆಯಲ್ಲಿದೆ. ಆದರೆ ನಾನು ಒಂದು ದೊಡ್ಡ ಜನಸಮೂಹದ ಪ್ರಶ್ನೆಗಳನ್ನು ಇಟ್ಟುಕೊಂಡು ನನ್ನ ಕೆಲಸದ ಮೂಲಕ ಅವನ್ನು ಬಗೆಹರಿಸಲು ಆಗುತ್ತಾ ಎಂದು ನೋಡುತ್ತಿದ್ದೇನೆ. ಇದು ಈಗ ಅಗತ್ಯವಾಗಿ ಆಗಬೇಕಾದ ಕೆಲಸ. ಇವತ್ತು ಏನಾಗಿದೆಯೆಂದರೆ ಅಪ್ಪರ್ ಕ್ಲಾಸಿನ ಜನ ತಮಗೆ ಬೇಕಾದದ್ದನ್ನೆಲ್ಲ ಇಂಗ್ಲಿಷಿನಿಂದ ಪಡೆಯುತ್ತಾರೆ, ಅವರಿಗೆ ಕನ್ನಡವೂ ಬೇಕಾಗಿಲ್ಲ ಸಂಸ್ಕೃತವೂ ಬೇಕಾಗಿಲ್ಲ. ಕನ್ನಡ ಬೇಕಾಗಿರುವುದು ಬಡವರಿಗೆ, ದಲಿತವರ್ಗದ ಮಕ್ಕಳಿಗೆ. ಅವರಿಗ್ಯಾಕೆ ಸಂಸ್ಕೃತವನ್ನು ಹೇರುತ್ತಾ ಇದೀರಿ? ಕೆ.ವಿ.ನಾರಾಯಣ ಅವರು ಹೇಳುವಂತೆ ಇವತ್ತು ಕನ್ನಡ ಉಳಿಸೋಣ ಎಂದು ಹೇಳುವವರು ಸಂಸ್ಕೃತಮಯವಾದ ಕನ್ನಡವನ್ನು ಉಳಿಸುತ್ತಿದ್ದಾರೆಯೇ ಹೊರತು ನಮ್ಮ ಎಲ್ಲರ ಕನ್ನಡವನ್ನಲ್ಲ. ನಾವು ಉಳಿಸಬೇಕಾಗಿರುವುದು ಬಡವರಿಗೆ ದಲಿತರಿಗೆ ಬೇಕಾಗಿರುವ ಕನ್ನಡವನ್ನ.

ಸಿರಾಜ್: ವಿಚಿತ್ರವೆಂದರೆ ಒಂದೇ ಕಾಲಮಾನದಲ್ಲಿ ನೀವು ಸಂಸ್ಕೃತದ ಹೇರಿಕೆ, ಅದನ್ನು ಬಿಡಿಸಿಕೊಳ್ಳುವ ಬಗ್ಗೆ ಮಾತಾಡುತ್ತಿದ್ದರೆ ಷೆಲ್ಡನ್ ಪೋಲಾಕನಂಥವರು ಕವಿರಾಜಮಾರ್ಗದ ಕಾಲದಿಂದಲೂ ಕನ್ನಡ-ಸಂಸ್ಕೃತದ ನಡುವೆ ಇರುವ ಚಲನಶೀಲ ಸಂಬಂಧದ ಬಗ್ಗೆ ಮಾತಾಡುತ್ತಾನೆ. ಅವನನ್ನು ಓದುವಾಗ ಕನ್ನಡ ಸಂಸ್ಕೃತಗಳು ಎದುರಾಳಿಗಳಲ್ಲ ಎಂಬ ಭಾವನೆ ಬರುತ್ತೆ...

ಶಂಕರ ಭಟ್ : ಮಾರ್ಗಕಾರ ಹೇಳುತ್ತಿರುವುದು ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡೇ ಹೊರತು ಭಾಷೆಯನ್ನಲ್ಲ. ಇಲ್ಲಿಯವರೆಗೆ ಭಾಷೆಯ ಬಗ್ಗೆ, ವ್ಯಾಕರಣದ ಬಗ್ಗೆ ಬರೆದಿರುವವರು ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡು ಮಾತಾಡಿದ್ದಾರೆಯೇ ಹೊರತು ಭಾಷೆಯನ್ನು ಮಖ್ಯವಾಗಿಟ್ಟುಕೊಂಡಿಲ್ಲ. ಪೋಲಾಕನ ಪುಸ್ತಕವನ್ನು ನಾನು ಓದಿಲ್ಲ. ಆದರೂ ಅವನು ಹೇಳುವ ಹಾಗೆ ಸಂಸ್ಕೃತದಿಂದ ಕನ್ನಡ ಹೊಸ ವಿಸ್ತಾರವನ್ನು ಪಡೆದುಕೊಂಡಿದೆ ಎಂಬುದರ ಬಗ್ಗೆ ಐ ಆಮ್ ನಾಟ್ ಶ್ಯೂರ್. ನಾನು ಇದನ್ನು ಒಪ್ಪುವುದು ಕಷ್ಟ.

ಸಿರಾಜ್: ರನ್ನ ನಿಘಂಟುವಿನ ಕಾಲದಿಂದಲೂ ಕನ್ನಡ ಸಂಸ್ಕೃತವನ್ನು ಬ್ರಿಡ್ಜ್ ಮಾಡುವುದೇ ಅವತ್ತಿನ ದೊಡ್ಡ ಗುರಿಯಾಗಿತ್ತು. ಷೆಲ್ಡನ್ ಪೋಲಾಕನು ಹೇಳುವಂತೆ ಕನ್ನಡವು ಸಂಸ್ಕೃತದ ಮೂಲಕ ದೊಡ್ಡದನ್ನು ಪಡೆದುಕೊಂಡಿತು ಎಂಬ ವಾದವೂ ಇದೆ.

ಶಂಕರ ಭಟ್ : ಹೀಗ್ಯಾಕೆ ಆಗುತ್ತೆ ಅಂದರೆ ಆಗ ಕನ್ನಡ ಬಳಸುವವರಿಗೆ ಕನ್ನಡವೂ ಗೊತ್ತಿತ್ತು ಸಂಸ್ಕೃತವೂ ಗೊತ್ತಿತ್ತು. ಆದರೆ ಈಗಿನವರಿಗೆ ಸಂಸ್ಕೃತ ಗೊತ್ತಿಲ್ಲ, ಗೊತ್ತಿರಬೇಕಾಗಿಯೂ ಇಲ್ಲ. ಆಗ ಒಂದು ಸಣ್ಣ ಪರ್ಸೆಂಟೇಜಿನ ಜನ ಕನ್ನಡವನ್ನು ಓದುತ್ತಿದ್ದರು. ಪೋಲಾಕನು ಹೇಳುವ ಹಾಗೆ ಎಲ್ಲವನ್ನು ಪಡೆದುಕೊಂಡಿದ್ದು ಒಂದು ಸಣ್ಣ ಸಮುದಾಯ ಮಾತ್ರ. ಅವರಿಗೆ ಸಂಸ್ಕೃತವೇ ಹೆಚ್ಚು ಗೊತ್ತಿತ್ತು, ಕನ್ನಡವೇನಿದ್ದರೂ ತಮಾಷೆಗೆ ಎನ್ನುವ ಹಾಗೆ. ಅದಕ್ಕೆ ಮೊದಲು ಗುರುಕುಲದಲ್ಲಿ ಸಂಸ್ಕೃತವನ್ನು ಕಲಿಸಿ ನಂತರ ಕನ್ನಡವನ್ನು ಕಲಿಸುತ್ತಿದ್ದರು. ಆದರೆ ಆಗಿನ ಸಮಸ್ಯೆಯೇ ಬೇರೆ ಈಗಿನ ಸಮಸ್ಯೆಗಳೇ ಬೇರೆ. ಈಗ ನಾವು ಎಲ್ಲರಿಗೂ ಭಾಷೆಯನ್ನು ಕಲಿಸಬೇಕಾಗಿದೆ, ಶಿಕ್ಷಣವನ್ನು ನೀಡಬೇಕಾಗಿದೆ. ಅಂದು ಭಾಷೆಯ ಕುರಿತ ಚಿಂತನೆಗಳು ವರ್ಗದ ಹಿತಾಸಕ್ತಿಯಿಂದ ಕೂಡಿದ್ದವು. ಈಗ ಅದು ಸಮುದಾಯದ ಹಿತಾಸಕ್ತಿಯಾಗಿ ರೂಪುಗೊಳ್ಳಬೇಕಿದೆ.ಮೇಟಿ: ಸಂಸ್ಕೃತವನ್ನು ಸೇರಿದಂತೆ ಅನ್ಯ ಭಾಷಾ ಪದಗಳನ್ನು ಬಿಡುವುದಾದರೆ ಕನ್ನಡದಲ್ಲಿ ಉಳಿಯುವುದೇನು ಎಂಬ ಪ್ರಶ್ನೆಯೂ ಇದೆಯಲ್ಲ?

ಶಂಕರ ಭಟ್ : ಆಡುಮಾತಿನಲ್ಲಿ ನೀವು ನೋಡಿದರೆ ಸಂಸ್ಕೃತ ಪದಗಳೇ ಇಲ್ಲ. ಕುಂವೀಯವರ, ಗೀತಾನಾಗಭೂಷಣ ಅವರ ಕಾದಂಬರಿಗಳಲ್ಲಿ ಸಂಸ್ಕೃತ ಪದಗಳಿಲ್ಲ ಇದ್ದರೂ ತದ್ಭವಗಳ ರೂಪದಲ್ಲಿ ಇವೆ. ನಾಯಿ ಎನ್ನುವ ಕಡೆ ಶ್ವಾನ ಎನ್ನುವ, ಹಲ್ಲು ಎನ್ನುವ ಕಡೆ ದಂತ ಎಂದು ಬಳಸುವುದು ನಮಗಿರುವ ಸಂಸ್ಕೃತದ ವ್ಯಾಮೋಹದಿಂದ. ನಾನು ಹೇಳುತ್ತಿರುವುದೇನೆಂದರೆ ಸಂಸ್ಕೃತದ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಅಂತ.

ಮೇಟಿ: ಹಾಗಾದರೆ ಕನ್ನಡಕ್ಕೆ ಎಲ್ಲವನ್ನು ವಿವರಿಸುವ ಶಕ್ತಿ ಇದೆಯೆ?

ಶಂಕರ ಭಟ್ : ಅದು ಕನ್ನಡಕ್ಕೂ ಇಲ್ಲ ಸಂಸ್ಕೃತಕ್ಕೂ ಇಲ್ಲ. ಅದನ್ನು ನಾವು ಹೊಸ ಶಬ್ದಗಳನ್ನು ಟಂಕಿಸುವ ಮೂಲಕ ಪಡೆದುಕೊಳ್ಳಬಹುದು. ಬಿ.ಆರ್.ಲಕ್ಷ್ಮಣರಾವ್ ಅವರು ಒಮ್ಮೆ ನನ್ನ ಬಳಿ ದಿನ ಬಳಕೆಯಲ್ಲಿ ಎಲ್ಲಕ್ಕೂ ಕನ್ನಡ ತಂದು ಹಾಕಿದರೆ ಕಷ್ಟವಾಗುತ್ತದೆ ಎಂದಿದ್ದರು. ಸಂಸ್ಕೃತದಲ್ಲಿ ಗ್ರೀಕಿನಲ್ಲಿ ಏನಾಗಿದೆ ಎಂದು ನೋಡಿದರೆ ಅವರು ತಮಗೆ ಬೇಕಾದ ಹಾಗೆಲ್ಲ ಹೊಸ ಶಬ್ದಗಳನ್ನು ಟಂಕಿಸಿಕೊಂಡಿದ್ದಾರೆ. ಇಂಗ್ಲéಿಷಿನಲ್ಲಿಯೂ ಕೂಡ ಗ್ರೀಕ್ ಲ್ಯಾಟಿನ್ ಪದಗಳನ್ನು ಹಾಗೇ ಬಳಸಿದ್ದಾರೆ. ಆದರೆ ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ ಪದಗಳನ್ನು ಇಂಗ್ಲಿಷಿನ ಮೂಲಕವೇ ಟಂಕಿಸಿಕೊಂಡಿದ್ದಾರೆ. ಅಲ್ಲಿ ಸಾಧ್ಯವಾಗಿದ್ದರೆ ಇಲ್ಲೇಕೆ ಆಗುವುದಿಲ್ಲ? ಸಂಸ್ಕೃತದಿಂದ ಪಡೆದುಕೊಳ್ಳುವಾಗ ಸಂಸ್ಕೃತದಿಂದಲೇ ಪಡೆದುಕೊಂಡಿದ್ದೇವೆ. ಆದರೆ ಇಂಗ್ಲಿಷಿನಿಂದ ಪಡೆದುಕೊಳ್ಳುವಾಗ ಮತ್ತೆ ಸಂಸ್ಕೃತ ಯಾಕೆ? ಉದಾಹರಣೆಗೆ ಇಂಜನಿಯರ್ ಗೆ ಅಭಿಯಂತರ, ಆಲರ್ಟರ್ನೇಷನ್ಗೆ ಪರ್ಯಯನ, ಸಾಫ್ಟವೇರ್ ಗೆ ತಂತ್ರಾಂಶ- ಹೀಗೆ ಮಾಡಿದ್ದರಿಂದ ಕನ್ನಡದಲ್ಲಿರುವ ವಿಜ್ಞಾನದ ಪದಗಳು ಬಹಳ ಕಷ್ಟಕರವಾಗಿವೆ ಅವನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ ಅಷ್ಟು ಸಂಸ್ಕೃತಮಯವನ್ನಾಗಿ ಮಾಡಿದ್ದೇವೆ.

ಸಿರಾಜ್: ಆದರೆ ಉದಾಹರಣೆಗೆ ಇಂಡೋ ಆರ್ಯನ್ ಭಾಷೆಗಳ ಮೂಲದಿಂದ ಬಂದಿರುವ ಹಲವು ಪದಗಳು ಕನ್ನಡಕ್ಕೆ ಬರುವಾಗ ಹಾಗೇ ಬಂದಿಲ್ಲ. ಅವು ಅರ್ಥವಿಸ್ತಾರವನ್ನೋ, ಅರ್ಥಸಂಕೋಚವನ್ನೋ ಪಡೆದುಕೊಂಡೇ ಬಂದಿವೆ. ಹೀಗಿರುವಾಗ ಅನ್ಯ ಭಾಷೆಗಳಿಂದ ಎರವಲು ಬೇಡ ಎನ್ನೋದು ಎಷ್ಟು ಸರಿ?

ಶಂಕರ ಭಟ್ : ನನ್ನ ಉದ್ದೇಶ ಸಂಸ್ಕೃತದ ಪದಗಳ ಸಹಾಯವಿಲ್ಲದೆ ಕನ್ನಡದಲ್ಲೇ ಬರೆಯಲು ಸಾಧ್ಯ ಎಂಬುದನ್ನು ತೋರಿಸುವುದು. ಕನ್ನಡದ ಖ್ಯಾತ ಲೇಖಕರೊಬ್ಬರಿಗೆ ಹೊಸಬರಹದಲ್ಲಿರುವ ನನ್ನ ಪುಸ್ತಕ `ಕನ್ನಡಕ್ಕೆ ಬೇಕು ಕನ್ನಡದ್ದೇ ಪದಗಳು' ಓದಲು ಕೊಟ್ಟೆ. ಅದರಲ್ಲಿ ನಾನು ಭಾಷಾಂತರಕ್ಕೆ ಬದಲಾಗಿ ನುಡಿಮಾರು, ಭಾಷೆಗೆ ಬದಲಾಗಿ ಸೊಲ್ಲು, ಉದಾಹರಣೆಗೆ ಬದಲಾಗಿ ಎತ್ತುಗೆ ಎಂದೆಲ್ಲ ಬಳಸಿ ಕನ್ನಡದಲ್ಲಿ ಇದೆಲ್ಲವನ್ನೂ ಹೇಳಲು ಸಾಧ್ಯ ಎಂದು ತೋರಿಸಲು ಪ್ರಯತ್ನಿಸಿದ್ದೆ. ಅವರು ನನಗೆ ಅರ್ಥವಾಗಲಿಲ್ಲ ಎಂದರು. ಅಂದರೆ ಅವರಿಗೆ ಸಂಸ್ಕೃತವೇ ಸಹಜವಾಗಿ ಕನ್ನಡ ಅಪರಿಚಿತವಾಗಿಬಿಟ್ಟಿದೆ.

ಮೇಟಿ: ಬೇರೆ ಭಾಷೆಯ ಪದಗಳು ಕನ್ನಡದ ಕಸುವು ಹೆಚ್ಚಿಸಿವೆ ಎಂಬ ವಾದವೂ ಇದೆ?

ಶಂಕರ ಭಟ್ : ಪ್ರೊವೈಡೆಡ್ ಭಾಷೆಗೆ ಆ ಮಿತಿ ಇದ್ದರೆ. ಇಲ್ಲದಿದ್ದರೆ ಅದು ನಾವು ಬಳಸುವ ಭಾಷೆಗೆ ಹೊರೆ. ನನ್ನ ಆಶಯ ಎಲ್ಲವನ್ನೂ ಸಾಧ್ಯವಾದಷ್ಟು ಕನ್ನಡದಲ್ಲಿ ಹೇಳುವುದು. ಅದರಲ್ಲಿ ಹತ್ತು, ಹದಿನೈದು ಪರ್ಸೆಂಟ್ ಫಾರಿನ್ ಪದಗಳಿದ್ದರೆ ತೊಂದರೆಯಿಲ್ಲ. ಪೂರ್ತಿ ಕನ್ನಡದಲ್ಲೇ ಅಗುವುದಿಲ್ಲ ಎಂದು ನನಗೂ ಗೊತ್ತಿದೆ. ಆದರೆ ಈಗಾಗಿರುವಂತೆ ಎಂಬತ್ತು ಪರ್ಸೆಂಟ್ ಸಂಸ್ಕೃತ ಕನ್ನಡದಲ್ಲಿ ಇರಬಾರದು. ಪ್ರಜಾವಾಣಿಯಲ್ಲಿ ಶಿಕ್ಷಣದಂಥ ಎಲ್ಲರಿಗೂ ಉಪಯೋಗಿಯಾಗುವ ವಿಷಯದ ಬಗ್ಗೆ ಬರೆಯುವವರು ಎಪ್ಪತ್ತೈದು ಪರ್ಸೆಂಟ್ ಸಂಸ್ಕೃತ ಪದಗಳನ್ನು ಬಳಸುತ್ತಾರೆ. ಅದನ್ನು ಸಂಸ್ಕೃತ ಲೇಖನ ಎಂದು ಕರೆದರೆ ಒಳ್ಳೆಯದು (ಜೋರು ನಗು). ಕನ್ನಡದಲ್ಲಿ ಅದನ್ನು ಹೇಳಿದರೆ ಎಲ್ಲರಿಗೂ ಗೊತ್ತಾಗುತ್ತೆ, ಪ್ರಯೋಜವಾಗುತ್ತೆ.....

ಸಿರಾಜ್: ಸಂಸ್ಕೃತದ ಪ್ರಭಾವ ಸಾರ್ವತ್ರಿಕವಾಗಿತ್ತು ಎಂದು ಹೇಳುವುದು ಎಷ್ಟು ಸರಿ? ಅದು ಜಾತಿಗಳಿಗೆ, ಉಪಜಾತಿಗಳಿಗೆ, ಪ್ರದೇಶಗಳಿಗೆ ಅನುಗುಣವಾಗಿ ಬದಲಾಗುತ್ತಾ ಹೋಗುತ್ತೆ.

ಶಂಕರ ಭಟ್ : ಅದಕ್ಕೇ ನಾನು ಹೇಳುವುದು ಕನ್ನಡ ಕಲಿಯಬೇಕಾದರೆ ಸಂಸ್ಕೃತ ಬಲ್ಲ ಮೇಲ್ಜಾತಿಯ ಮಕ್ಕಳಿಗೆ ಸ್ವಲ್ಪ ಕಷ್ಟವಾದರೆ ಕೆಳವರ್ಗದ ಮಕ್ಕಳಿಗೆ ಇನ್ನೂ ಕಷ್ಟ. ನನ್ನ ವಾದದ ಹಿಂದಿರುವ ಉದ್ದೇಶ ಏನೆಂದರೆ ನಮ್ಮಲ್ಲಿರುವ ಎಲ್ಲ ಜಾತಿ ವರ್ಗಗಳ ಮಕ್ಕಳೂ ಭಾಷೆ ಕಲಿತು ಶಿಕ್ಷಣದ ಉಪಯೋಗ ಪಡೆದುಕೊಳ್ಳುವಂತಾಗಬೇಕು ಅಂತ. ಮೊನ್ನೆ ನನಗೆ ಗೊತ್ತಿರುವ ಲೇಖಕರೊಬ್ಬರು ಯಕ್ಷಗಾನದಿಂದ ಕೆಳವರ್ಗದ ಮಕ್ಕಳಿಗೂ ಸಂಸ್ಕೃತದ ಉಚ್ಚಾರಣೆ ಸುಲಭವಾಗಿ ಬರುತ್ತೆ ಎಂದು ಹೇಳುತ್ತಿದ್ದರು. ಆದರೆ ಆ ಮಕ್ಕಳಿಗೆ ಎಷ್ಟು ಪದಗಳು ಬರುತ್ತವೆ ಎಷ್ಟರ ಅರ್ಥ ಗೊತ್ತಿದೆಯೋ ನನಗೆ ಗೊತ್ತಿಲ್ಲ.

ಸಿರಾಜ್: ಆದರೆ ಭಾಷೆಯ ಬಳಕೆಯ ವಿಷಯದಲ್ಲಿ ಇತಿಹಾಸವನ್ನು ಮತ್ತೆ ತಿರುಗುಮುರುಗಾಗಿಸಲು ಆಗುತ್ತದೆಯೆ?

ಶಂಕರ ಭಟ್ : ಕನ್ನಡದಲ್ಲಿ ಬೇರೆ ಭಾಷೆಯ ಪದಗಳು, ಅದರ ಪ್ರಭಾವ ಇದೆಲ್ಲವೂ ಕಡಿಮೆ ಪ್ರಮಾಣಕ್ಕೆ ಸೀಮಿತವಾಗಿದ್ದರೆ ಅದು ಸರಿ, ಜಾಸ್ತಿಯಾಗಿ ಅದು ಬೇರೆ ಬಗೆಯ ಕೀಳರಿಮೆಗೆ ದಾರಿ ಮಾಡುವ ಹಾಗಿದ್ದರೆ ಅದು ಹೊರೆ. ನೋಡಿ, ಈಗ ಎತ್ತುಗೆಗೆ ಬದಲಾಗಿ ಉದಾಹರಣೆ ಎನ್ನುವುದೇ ಸಹಜವೇನಲ್ಲ. ಅದರೆ ಅದೇ ಸಹಜ ಅನ್ನಿಸಿದೆ. ಇದನ್ನು ಬದಲಾಯಿಸುವುದೇ ಲ್ಯಾಂಗ್ವೇಜ್ ಪ್ಲ್ಯಾನಿಂಗ್. ಇದರ ಉದ್ದೇಶ ಕನ್ನಡವನ್ನು ಎಲ್ಲರ ಕನ್ನಡವನ್ನಾಗಿ ಮಾಡುವುದು. ಎರಡು ಸಾವಿರ ವರ್ಷದಿಂದ ಮಹಾಪ್ರಾಣಗಳನ್ನು ಬಳಸುತ್ತಾ ಬಂದಿದ್ದೇವೆ. ಅದರಿಂದ ಏನು ಲಾಭ? ಇಲ್ಲಿವರೆಗೆ ಬಳಸುತ್ತಾ ಇದೀವಿ ಅನ್ನೋದನ್ನು ಬಿಟ್ಟರೆ ಅದರಿಂದ ಯಾವ ಲಾಭವೂ ನನಗೆ ಕಾಣುವುದಿಲ್ಲ. ಈ ಹೇರಿಕೆಯ ಚರಿತ್ರೆಯನ್ನು ತೆಗೆದುಹಾಕೋಣ. ಸಂಸ್ಕೃತದ ಹೇರಿಕೆಯೂ ಒಂದು ರೀತಿ ಅಸ್ಪೃಶ್ಯತೆಯ ತರ. ಅದರಿಂದ ಏನು ಪ್ರಯೋಜನ....? ಒಂದು ಸಮಾಜ ಬೆಳೆಯಬೇಕು ಎನ್ನುವುದಾದರೆ ಅದರಲ್ಲಿ ಬದುಕುವ ಎಲ್ಲರೂ ಬೆಳೆಯಬೇಕು, ಯಾವುದೋ ಒಂದು ಕಮ್ಯುನಿಟಿ ಮಾತ್ರ ಉದ್ಧಾರ ಆಗುವುದಲ್ಲ. ಮಹಾಪ್ರಾಣಗಳನ್ನು ಕಡಿಮೆ ಮಾಡಿದರೆ ಸಮಾಜದ ಎಲ್ಲ ಮಕ್ಕಳಿಗೆ ಕನ್ನಡ ಕಲಿಯುವುದು ಸುಲಭವಾಗುತ್ತೆ, ಅದನ್ನೇ ಲ್ಯಾಂಗ್ವೇಜ್ ಪ್ಲ್ಯಾನಿಂಗ್ ನಲ್ಲಿ ನಾವು ಮಾಡಬೇಕಾಗಿರುವುದು. ಹೀಗೆ ಮಾಡುತ್ತ ಹೋದರೆ ಹಳೆಗನ್ನಡ ಸಾಹಿತ್ಯವನ್ನು ಓದುವುದು ಹೇಗೆ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ನಾನು ಹೇಳುವುದೇನೆಂದರೆ ಹಳೆಗನ್ನಡವಾಗಲಿ ಹೊಸಗನ್ನಡವಾಗಲಿ ಅದನ್ನು ಓದುವಾಗ ಹೇಗೂ ಉಚ್ಚರಿಸುವುದಿಲ್ಲವಲ್ಲ ಅಂತ. ಅದಕ್ಕಾಗೇ ಕನ್ನಡದ ಜಾಯಮಾನಕ್ಕೆ ಹೊಂದುವ ಹಾಗೆ ಬದಲಾವಣೆಗಳನ್ನು ಮಾಡಬೇಕೆಂದು ಸ್ವಲ್ಪ ಹಠದಿಂದಲೇ ಇದನ್ನೆಲ್ಲ ಮಾಡುತ್ತಿದ್ದೇನೆ.


ಮೇಟಿ: ಆದರೆ ಈ ನಡುವೆ ಕೆಲವು ಸಂಘಟನೆಗಳು ಎಲ್ಲರಿಗೂ ಸಂಸ್ಕೃತವನ್ನು ಕಲಿಸಬೇಕು ಎಂದು ಹೇಳುತ್ತಿದ್ದಾರಲ್ಲ ಅದರ ಉದ್ದೇಶ ಏನು?

ಶಂಕರ ಭಟ್ : ಯಾಕೆಂದರೆ ನಿಜವಾಗಿ ಅಂಥ ಸಂಘಟನೆಗಳಿಗೆ ಎಲ್ಲರೂ ತಮ್ಮ ಸಂಸ್ಕೃತಿಯನ್ನೇ ಕಲಿಯಬೇಕು ಎಂಬ ಉದ್ದೇಶ ಇದೆ, ಹಾಗಾಗಿ ಅದಕ್ಕೂ ಮೊದಲು ಸಂಸ್ಕೃತವನ್ನು ಕಲಿಸಿಬಿಟ್ಟರೆ ಸರಿಯಾಗುತ್ತದೆ ಎಂದು ಹೀಗೆಲ್ಲ ಅವರು ಮಾಡುತ್ತಿರಬಹುದು.

ಸಿರಾಜ್
: ಹಾಗಾದರೆ ಸಂಸ್ಕೃತ ವಿಶ್ವವಿದ್ಯಾಲಯವನ್ನು ಶುರುಮಾಡುವುದರಿಂದ ಕನ್ನಡಕ್ಕಾಗುವ ಪ್ರಯೋಜನವೇನು?

ಶಂಕರ ಭಟ್
: ಸಂಸ್ಕೃತ ವಿಶ್ವವಿದ್ಯಾನಿಲಯದ ಸ್ಥಾಪನೆಯಿಂದ ಕನ್ನಡಕ್ಕೆ ಏನು ಅಪಾಯವಿಲ್ಲ. ಆದರೆ ಒಂದಿಷ್ಟು ಹಣ ವೇಸ್ಟ್ ಆಗುತ್ತದೆ. ಬೇರೆಲ್ಲಾ ವಿಶ್ವವಿದ್ಯಾನಿಲಯಗಳು ಇರುವ ಹಾಗೆ ಅದೂ ಇರುತ್ತದೆ. ಅದರಿಂದ ಕೆಲವರಿಗೆ ಉದ್ಯೋಗ ಸಿಗಬಹುದು, ಅಷ್ಟೆ. ಹೆಚ್ಚೆಂದರೆ ಅಲ್ಲಿ ನಡೆಯುವ ಕೆಲವು ಸಂಶೋಧನೆಗಳು ಪುಸ್ತಕದ ರೂಪದಲ್ಲಿ ಬರಬಹುದು. ಕನ್ನಡದ ಉದ್ಧಾರವಾಗಬೇಕೆಂದರೆ, ಕನ್ನಡ ಬರಹದಲ್ಲಿ ಸಂಸ್ಕೃತ ಪದಗಳನ್ನು ಕಡಿಮೆ ಮಾಡಬೇಕು ಆವಾಗ ಅದು ಎಲ್ಲರ ಕನ್ನಡವಾಗುತ್ತದೆ. ಕನ್ನಡ ಭಾಷೆ ಬೆಳೆಯಬೇಕಾದರೆ, ಥೆಸಾರಸ್ಸ್ ಗಳನ್ನು ಹಾಗೂ ವಿಜ್ಞಾನ ಪಾರಿಭಾಷಿಕ ಪದಕೋಶಗಳನ್ನು ಬರೆಯಬೇಕು. ವಿಜ್ಞಾನದ ಪ್ರಯೋಗ ಹಾಗೂ ವಿಷಯಗಳನ್ನು ವಿವರಿಸುವಾಗ ನೂರಾರು ಸಂಸ್ಕೃತದ ಪದಗಳನ್ನು ಹಾಕಿ ಅದನ್ನು ಯಾರೂ ಓದದ ಹಾಗೆ ಮಾಡಿಬಿಟ್ಟಿದ್ದಾರೆ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತದೆ. ಈ ತೊಡಕನ್ನು ನಿವಾರಿಸಬೇಕೆಂದರೆ ಕನ್ನಡವನ್ನೇ ಬಳಸಬೇಕು.

ಸಿರಾಜ್: ಇನ್ನೊಂದು ಪ್ರಶ್ನೆ. ಮೂಲ ಸಂಸ್ಕೃತ ಪದಗಳು ಕನ್ನಡದಲ್ಲಿ ಹಾಗೇ ಉಳಿದುಕೊಂಡಿವೆಯಲ್ಲ.... ತತ್ಸಮ ತದ್ಭವಗಳು ಎರಡೂ ಕನ್ನಡದಲ್ಲಿ ಇರುವಾಗ ನಿಮಗೆ ಸಂಸ್ಕೃತದ ಬಗ್ಗೆ ಇಷ್ಟು ಆತಂಕ ಯಾಕೆ?

ಶಂಕರ ಭಟ್ : ನಿಜವಾಗಿ ನೋಡಿದರೆ ಸುಮಾರು ಶಬ್ದಗಳು ತದ್ಭವ ಆಗಿ ಮತ್ತೆ ಸಂಸ್ಕೃತ ಶಬ್ದಗಳೇ ಹಿಂತಿರುಗಿ ಬಂದಿವೆ. ಉದಾಹರಣೆಗೆ ಕನ್ನಡದಲ್ಲಿ ಅಂಕುಸ-ಅಂಕುಶ, ಪಸು-ಪಶು, ಭಕುತಿ-ಭಕ್ತಿ, ರಿಸಿ-ಋಷಿ, ರಕ್ಕಸ-ರಾಕ್ಷಸ -ಹೀಗೆ ಬೇರೆ ಬೇರೆ ಬಗೆಯ ರಿವರ್ಸ್ ರೂಪಾಂತರಗಳು ಕನ್ನಡದಲ್ಲಿ ಆಗಿವೆ. ಇಲ್ಲಿ ನಾವು ನಮ್ಮ ಕನ್ನಡ ರೂಪಗಳನ್ನು ಕಳೆದುಕೊಂಡಿದ್ದೇವೆ. ಮೂಲ ಕನ್ನಡದಲ್ಲಿದ್ದ ರಿಸಿಯೇ ಈಗ ಕೀಳು ರೂಪವಾಗಿ ಸಂಸ್ಕೃತದ ಋಷಿಯೇ ಅಧಿಕೃತ ಎನ್ನಿಸಿಕೊಂಡಿದೆ. ಇದು ಯಾಕೆಂದರೆ ನಮಗೆ ಸಂಸ್ಕೃತದ ಬಗ್ಗೆ ಇರುವ ಕುರುಡು ವ್ಯಾಮೋಹದ ಕಾರಣದಿಂದ.

ಮೇಟಿ: ಪರ್ಶಿಯನ್, ಅರೇಬಿಕ್, ಇಂಗ್ಲಿಷ್ ಮುಂತಾದ ಭಾಷೆಯ ಪದಗಳನ್ನು ವಿರೂಪಗೊಳಿಸಿದರೆ ಯಾರಿಗೂ ಸಮಸ್ಯೆ ಅನಿಸುವುದಿಲ್ಲ. ಆದರೆ ಸಂಸ್ಕೃತದ ಪದಗಳನ್ನು ಸರಿಯಾಗಿ ಉಚ್ಚರಿಸದಿದ್ದರೆ/ಬರೆಯದಿದ್ದರೆ ದೊಡ್ಡ ಅನಾಹುತ ಆಗಿಬಿಡುತ್ತದೆಂಬ ಭಾವನೆ ಇದೆ. ಯಾಕೆ ಹೀಗೆ?

ಶಂಕರ ಭಟ್ : ಯಾಕೆಂದರೆ ಪರ್ಶಿಯನ್-ಅರೇಬಿಕ್ ಭಾಷೆಗಳನ್ನು ಪ್ರತಿನಿಧಿಸುವ ವರ್ಗ ಬಲಶಾಲಿಯಾಗಿಲ್ಲ. ಆದರೆ ಸಂಸ್ಕೃತದ ವಿಷಯದಲ್ಲಿ ಹಾಗಲ್ಲ. ಅದನ್ನು ಪ್ರತಿನಿಧಿಸುವ ವರ್ಗ ಪ್ರಬಲವಾಗಿದೆ. ಮೇಲಾಗಿ ಕನ್ನಡ ಲಿಪಿಯನ್ನು ಬ್ರಾಹ್ಮೀಯಿಂದ ಎರವಲು ಪಡೆದುಕೊಂಡಿದ್ದರಿಂದ ಸಂಸ್ಕೃತ ಪದಗಳನ್ನು ಇರುವ ಹಾಗೇ ಉಚ್ಚರಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ.

ಮೇಟಿ: ಮಾತಿನಲ್ಲಿ 'ಹ'ಕಾರ ಮತ್ತು ಮಹಾಪ್ರಾಣಗಳನ್ನು ಲೋಪಮಾಡುವುದನ್ನು ಕಂಡರೆ ಅವರಿಂದ ಸಂಸ್ಕೃತಿಯೇ ನಾಶವಾಗಿಬಿಟ್ಟಿತು ಎಂಬ ಧೋರಣೆಯನ್ನು ಬೆಳೆಸಿಕೊಂಡಿದ್ದೇವಲ್ಲ?

ಶಂಕರ ಭಟ್ : ಇದು ಸಂಸ್ಕೃತಿಯ ಪ್ರಶ್ನೆಯೇ ಅಲ್ಲ. ಮಾತಿನಲ್ಲಿ ಅಧಿಕಾರಿ ಎಂದು ಹೇಳುವಾಗ ಮಹಾಪ್ರಾಣ ಬಳಸುವುದಿಲ್ಲ. ಅವು ಬಿದ್ದು ಹೋಗುತ್ತವೆ. ಶಕಾರವನ್ನು ಯಾರಿಗೂ ಸರಿಯಾಗಿ ಉಚ್ಚರಿಸಲು ಆಗುವುದಿಲ್ಲ. ಕನ್ನಡದವರಿರಲಿ ಸಂಸ್ಕೃತ ವಿದ್ವಾಂಸರಿಗೂ ಸರಿಯಾಗಿ ಇದನ್ನು ಉಚ್ಚರಿಸಲು ಆಗುವುದಿಲ್ಲ. ಇದನ್ನು ನಾನು ಚಾಲೆಂಜ್ ಮಾಡಿ ನೋಡಿದ್ದೇನೆ. ಕೃಪೆ ಎನ್ನುವ ಶಬ್ದವನ್ನು ಉಚ್ಚಾರಣೆಯಲ್ಲಿ ಕ್ರುಪೆ ಎಂದು ಹೇಳುತ್ತೇವೆ. ಸಂಸ್ಕೃತ ಭಾಷೆಯ ರಚನೆಯ ಪ್ರಕಾರ 'ಋ' ಒಂದು ಸ್ವರ. ಹಾಗಾಗಿ ಕ್+ಅ+ಋ ಈ ಅನುಕ್ರಮದಲ್ಲಿ ಎರಡು ಸ್ವರಗಳು ಒಟ್ಟಿಗೆ ಬರಲು ಸಾಧ್ಯವಿಲ್ಲ. ಬಹುಶಃ ಋಗ್ವೇದ ಕಾಲದಲ್ಲೂ ಹೀಗೆ ಉಚ್ಚರಿಸುತ್ತಿದ್ದರೋ ಏನೋ ಗೊತ್ತಿಲ್ಲ. ಹಾಗೇ ಮಹಾಪ್ರಾಣಗಳು ಉಚ್ಚಾರಣೆಯಲ್ಲಿ ಇಲ್ಲ ಬರಹ ಕನ್ನಡದಲ್ಲಿ ಮಾತ್ರ ಇವೆ. ಸಂಸ್ಕೃತ ಪಂಡಿತರು ಮಾತ್ರ ಇವನ್ನು ಉಚ್ಚರಿಸಬೇಕು ಎನ್ನುತ್ತಾರೆ.

ಮೇಟಿ: ಹಾಗಾದರೆ ಕನ್ನಡದಲ್ಲಿ ಅವು ಸೇರಿಕೊಂಡದ್ದು ಹೇಗೆ?

ಶಂಕರ ಭಟ್ : ಆಗಲೇ ಹೇಳಿದಂತೆ ಅವು ಬರಹದಲ್ಲಿ ಬಂದಿವೆ, ಉಚ್ಚಾರಣೆಯಲ್ಲಿ ಇಲ್ಲ. ನೀವು ಬೇರೆ ಭಾಷೆಗಳಿಗೆ ಕಂಪೇರ್ ಮಾಡಿ ನೋಡಿದರೆ ಇದು ಚೆನ್ನಾಗಿ ಗೊತ್ತಾಗುತ್ತದೆ. ಅಸ್ಸಾಮಿಯಲ್ಲಿ, ಮರಾಠಿಯಲ್ಲಿ ಬಹಳ ಸರಿಯಾಗಿ ಅವರು ಮಹಾಪ್ರಾಣಗಳನ್ನು ಉಚ್ಚರಿಸುತ್ತಾರೆ. ಸ್ವಲ್ಪಮಟ್ಟಿಗೆ ಧಾರವಾಡದ ಕಡೆ ಮರಾಠಿಯ ಕಾರಣದಿಂದ ಮಹಾಪ್ರಾಣಗಳು ಸಮಸ್ಯೆ ಆಗುವುದಿಲ್ಲ. ಆದರೆ ಮೈಸೂರಿನ ಕಡೆ ಸ-ಶ-ಷ ಗಳು ಹಾಗೂ ಮಹಾಪ್ರಾಣಗಳನ್ನು ಸರಿಯಾಗಿ ಉಚ್ಚರಿಸುವುದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಗುಲ್ಬರ್ಗದ ಕಡೆ ಕೆಲವರು ಎಜುಕೇಟೆಡ್ ಮಂದಿ ಮಾತ್ರ ಮಹಾಪ್ರಾಣ ಬಳಸುತ್ತಾರೆ. ಬೇರೆಯವರು ಅಲ್ಲ. ಇದರ ಬಗ್ಗೆ ಮಹದೇವನ್ ಎಂಬುವವರು ಸಂಶೋಧನೆ ಮಾಡಿದ್ದಾರೆ....

ಸಿರಾಜ್: ವಿವಿಧ ಭಾಷಾ ಪ್ರಬೇಧಗಳಿರುವ ನಮ್ಮ ಕರ್ನಾಟಕದಲ್ಲಿ ಒಂದು ಸ್ಟ್ಯಾಂಡರ್ಡೈಜ್ಡ್ ಕನ್ನಡದಲ್ಲಿರುವ ಪಠ್ಯಕ್ರಮವನ್ನು ಹೇರುವ ಬಗ್ಗೆ ಏನು ಹೇಳುತ್ತೀರಿ? ಸಮಸ್ಯೆ ಇರುವುದು ಭಾಷಾ ಮಾಧ್ಯಮದಲ್ಲೋ, ಪಠ್ಯ ಕ್ರಮದಲ್ಲೋ?

ಶಂಕರ ಭಟ್ : ಶಾಲೆಗೆ ಬರುವ ಮಗು ಮನೆಯಲ್ಲಿ ಮಾತಾಡುವ ಭಾಷೆಗಿಂತ ಭಿನ್ನವಾದ ಭಾಷೆಯನ್ನು ಕಲಿಯಲೇಬೇಕು. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ನೀವು ಹೇಳುವ ಸಮಸ್ಯೆಯನ್ನು ಶಿಕ್ಷಣತಜ್ಞರೇ ಪರಿಹರಿಸಬೇಕು. ಎಲ್ಲರ ಕನ್ನಡವನ್ನು ಇಟ್ಟುಕೊಳ್ಳಬೇಕು ಎಂದು ಹೊರಟಿರುವಾಗ ಈ ಸಮಸ್ಯೆಯನ್ನು ಬಗೆಹರಿಸಲು ಆಗುವುದಿಲ್ಲ. ಆದರೆ ಪಠ್ಯಕ್ರಮದಲ್ಲಿ ಕೊಳ್ಳೇಗಾಲದ ಕನ್ನಡಕ್ಕೂ ಪಠ್ಯಕ್ರಮದ ಕನ್ನಡಕ್ಕೂ ಇರುವ ವ್ಯತ್ಯಾಸ, ವಿಶೇಷತೆಗಳನ್ನು ವಿವರಿಸಿ ಹೇಳುವುದಾದರೆ ಈ ಸಮಸ್ಯೆ ಬಗೆಹರಿಸಬಹುದು. ಹಾಗೇ ಧಾರವಾಡ ಕನ್ನಡಕ್ಕೂ ಪಠ್ಯಕ್ರಮದ ಕನ್ನಡಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಬೇಕು. ಅದರ ಬಗ್ಗೆ ಮೆಟೀರಿಯಲ್ ತಯಾರು ಮಾಡಬೇಕು. ಹೀಗಾದಾಗ ಮಕ್ಕಳಿಗೆ ಮನೆಯಲ್ಲಿ ತಾವು ಮಾತಾಡುವ ಕನ್ನಡ ಪಠ್ಯಕ್ರಮದಲ್ಲಿ ಬಳಕೆಯಾಗುವ ಕನ್ನಡಕ್ಕಿಂತ ಕೀಳು ಎಂಬ ಮನೋಭಾವ ದೂರವಾಗುತ್ತದೆ. ಅಮೇರಿಕಾದಲ್ಲಿ ಇದನ್ನು ಮಾಡುತ್ತಿದ್ದಾರೆ. ಅಲ್ಲಿ ಆಡು ಭಾಷೆಗೂ ಬರಹಕ್ಕೂ ಇರುವ ವ್ಯತ್ಯಾಸವನ್ನು ತಿಳಿಸುವ ಪ್ರಯತ್ನಗಳು ನಡೆಯುತ್ತಿವೆ. ಈಗ ನಮ್ಮೆಲ್ಲರ ಮೇಲೆ ಅನ್ಯಪ್ರಭಾವ, ವ್ಯಾಕರಣ, ಮಾಧ್ಯಮ, ಪಠ್ಯಕ್ರಮ ಎಲ್ಲವನ್ನೂ ಹೊಸದಾಗಿ ರೂಪಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಇದೆ.

ಸಿರಾಜ್: ಲಿಪಿಸುಧಾರಣೆಯನ್ನು ಮೊದಲು ಬಿಎಂಶ್ರೀಯವರೂ ಸಹ ಮಾಡಿದ್ದರು. ಅದು ಫಲಕಾರಿಯಾಗಲಿಲ್ಲ. ನೀವು ಮಾಡುತ್ತಿರುವ ಲಿಪಿಸುಧಾರಣೆ ಎಷ್ಟರಮಟ್ಟಿಗೆ ಯಶಸ್ಸು ಕಾಣಬಹುದು?

ಶಂಕರ ಭಟ್ : ಅದು ನನ್ನ ಕೈಯಲ್ಲಿ ಇಲ್ಲ. ಮಾಡಿದರೆ ಒಳ್ಳೆಯದು. ಬಿಎಂಶ್ರೀಯವರು ಮಾಡಿದ ಲಿಪಿ ಸುಧಾರಣೆಯಿಂದ ಹೆಚ್ಚು ಲಾಭ ಆಗಲಿಲ್ಲ. ಅವರು ಮಾಡಿದ ಸುಧಾರಣೆಯಲ್ಲಿ ಒತ್ತಕ್ಷರಗಳನ್ನು ತೆಗೆದು ಅವನ್ನು ಪಕ್ಕಪಕ್ಕದಲ್ಲಿ ಬರೆಯುವುದು ಮುಖ್ಯವಾಗಿತ್ತು. ಅದನ್ನು ಅವರು ತಮಿಳಿನ ಮಾದರಿಯಲ್ಲಿ ಮಾಡಿದ್ದರು. ಶ್ರೀಯವರಿಗೆ ಕನ್ನಡದಲ್ಲಿರುವ ಎಲ್ಲ ಅಕ್ಷರಗಳು ಬೇಕು. ನಾನು ಹೇಳುವಂತೆ ಮಹಾಪ್ರಾಣಗಳು ಬೇಡ ಎನ್ನುವ ನಿಲುವು ಅವರಿಗೆ ಇರಲಿಲ್ಲ.

ಸಿರಾಜ್
: ಕನ್ನಡ ಮತ್ತು ತಮಿಳು ಭಾಷೆಗಳೆರಡೂ ಲಿಪಿಯನ್ನ ಬ್ರಾಹ್ಮೀಯಿಂದ ತೆಗೆದುಕೊಂಡವು. ಆದರೆ ತಮಿಳಿನಲ್ಲಿ 31 ಅಕ್ಷರಗಳನ್ನು ಮಾತ್ರ ಉಳಿಸಿಕೊಂಡರು. ನಿಮ್ಮ ಪ್ರಕಾರ ನಾವು ಸಂಸ್ಕೃತದ ಎಲ್ಲ 52 ಅಕ್ಷರಗಳನ್ನು ಕನ್ನಡದಲ್ಲಿ ಉಳಿಸಿಕೊಂಡಿದ್ದರಿಂದಲೇ ನಮ್ಮ ಎಲ್ಲ ಸಮಸ್ಯೆಗಳು ಶುರುವಾದವೆ?

ಶಂಕರ ಭಟ್ : ಕನ್ನಡಕ್ಕೆ ಈಗಿರುವಂತೆ 52 ಅಕ್ಷರಗಳ ಅಗತ್ಯವಿಲ್ಲ. ಮಹಾಪ್ರಾಣ, ಷ ಕಾರ ಇತ್ಯಾದಿಗಳನ್ನು ಹೊರತುಪಡಿಸಿ 31 ಅಕ್ಷರಗಳು ಸಾಕು. ಇದರಿಂದ ಕೆಳವರ್ಗದ ಮಕ್ಕಳಿಗೆ ಮಹಾಪ್ರಾಣ, ಷಕಾರಗಳನ್ನು ಸರಿಯಾಗಿ ಉಚ್ಚರಿಸಲು ಬರುವುದಿಲ್ಲ ಎಂಬ ಕೀಳರಿಮೆ ಕಡಿಮೆಯಾಗುತ್ತದೆ. ಶ-ಷಗಳನ್ನು ಸರಿಯಾಗಿ ಹೇಳಲು ಬರದಿದ್ದರೆ ಅದರಿಂದ ಯಾರಿಗೆ ನಷ್ಟ? ಎಲ್ಲ ಪದಗಳನ್ನು ಓದುವ ಹಾಗೆ ಬರೆಯುವುದರಿಂದ ಉಚ್ಚಾರಣೆ ಮತ್ತು ಅಚ್ಚಿನ ತಪ್ಪುಗಳು ಇಲ್ಲವಾಗುತ್ತವೆ. ಇದರಿಂದ ಬರಹಕ್ಕೂ ಮಾತಿಗೂ ಇರುವ ಅಂತರ ಕಡಿಮೆಯಾಗುತ್ತದೆ. ಇಂಗ್ಲಿಷಿನಲ್ಲಿ ಬರಹಕ್ಕೂ ಉಚ್ಚಾರಣೆಗೂ ನೇರ ಸಂಬಂಧವಿಲ್ಲ. ಅದರಿಂದಾಗಿಯೇ ಇಂಗ್ಲಿಷಿನಲ್ಲಿ ಬಹಳ ಸ್ಪೆಲ್ಲಿಂಗ್ ಸಮಸ್ಯೆಗಳಿವೆ. ಅದು ಯಾರಿಗೂ ದೊಡ್ಡ ಕೊರತೆಯಾಗಿ ಕಾಣುವುದಿಲ್ಲ. ಕೊರಿಯನ್ ಮತ್ತು ಸ್ವೀಡಿಶ್ ಭಾಷೆಗಳಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರೆ. ಸಂಸ್ಕೃತದ ಅಕ್ಷರಗಳನ್ನು ಹೊರತುಪಡಿಸಿ ಕನ್ನಡದಲ್ಲಿ ಉಚ್ಚಾರಣೆಗೂ ಬರಹಕ್ಕೂ ನೇರ ಸಂಬಂಧವಿದೆ. ಹಾಗಾಗಿ ಸಂಸ್ಕೃತದ ಅಕ್ಷರಗಳನ್ನು ಬಿಟ್ಟು ಕನ್ನಡವನ್ನು ಹೇಗೆ ಓದುತ್ತೇವೋ ಹಾಗೇ ಬರೆಯಬೇಕು. ಓದು ಕನ್ನಡವೇ ಬರಹ ಕನ್ನಡವಾಗಬೇಕು.

ಮೇಟಿ
: ಲಿಪಿ ಇರುವ ಭಾಷೆಗಳು ಮೇಲು ಲಿಪಿ ಇಲ್ಲದ ಭಾಷೆಗಳ ಕೀಳು ಎನ್ನುವ ನಂಬಿಕೆ ಯಾಕೆ ಇದೆ?

ಶಂಕರ ಭಟ್ : ಹೌದು ಜನಸಾಮಾನ್ಯರಲ್ಲಿ ಅಂತಹ ಒಂದು ನಂಬಿಕೆ ಇದೆ. ಬರಹ ಬೇಕೆಂದರೆ ಲಿಪಿ ಬೇಕು. ಬರಹ ಇಲ್ಲದಿದ್ದರೆ ಆ ಸಮುದಾಯಕ್ಕೆ ಯಾವುದೇ ತರಹದ ಅಡ್ವಾಂಟೇಜ್ ಸಿಗೋದಿಲ್ಲ. ಒಂದು ಸಮುದಾಯ ಶತ ಶತಮಾನಗಳ ಕಾಲ ಬೆಳೆಯಬೇಕೆಂದರೆ ಅವರ ಭಾಷೆಗೆ ಲಿಪಿ ಬೇಕು. ಬರಹವಿಲ್ಲದೇ ಭಾಷೆ ಇರಲಿ, ಆ ಸಮುದಾಯವೇ ಬೆಳೆಯೋದಕ್ಕೆ ಸಾಧ್ಯವಿಲ್ಲ. ಕೆಲವು ವರ್ಷಗಳ ಹಿಂದೆ ಬರಹ ಇದ್ದರೂ ಇಲ್ಲದಿದ್ದರೂ ಒಂದೇ ಆಗಿತ್ತು. ಇದು ಜನಸಾಮಾನ್ಯರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಆದರೆ ಇವತ್ತು ಎಲ್ಲರಿಗೂ ಬರಹ ಬೇಕೇ ಬೇಕು. ಅವರದೇ ಭಾಷೆಯ ಲಿಪಿಗಳು ಬೇಕೆನ್ನುವ ಅಗತ್ಯವಿಲ್ಲ. ಬೇರೆ ಭಾಷೆಯ ಲಿಪಿಯನ್ನು ಕೂಡ ಅಳವಡಿಸಿಕೊಳ್ಳಬಹುದು. ಉದಾಹರಣೆಗೆ ಮರಾಠಿ, ನೇಪಾಳಿ ಹಿಂದಿ, ಸಂಸ್ಕೃತ ಮುಂತಾದ ಭಾಷೆಗಳು ದೇವನಾಗರಿ ಲಿಪಿಯನ್ನು ಅಳವಡಿಸಿಕೊಂಡಿವೆ.

ಮೇಟಿ: ಭಾರತೀಯ ಎಲ್ಲಾ ಭಾಷೆಗಳಿಗೂ ಒಂದೇ ಲಿಪಿ ಬೇಕು ಎನ್ನುವ ವಾದಗಳು ಕೇಳಿಬರುತ್ತಿವೆ. ಇದಕ್ಕೆ ಏನು ಹೇಳುತ್ತೀರಿ?

ಶಂಕರ ಭಟ್ : ಇಲ್ಲ ಇದು ಸಾಧ್ಯವಾಗಲ್ಲ. ಒಂದೇ ಲಿಪಿ ಆಗಬೇಕು ಎನ್ನುವವರು ಹಿಂದಿಯವರು. ಅವರು ದೇವನಾಗರಿ ಲಿಪಿಯನ್ನೇ ಎಲ್ಲ ಭಾರತೀಯ ಭಾಷೆಗಳು ಅಳವಡಿಸಿಕೊಳ್ಳಬೇಕು ಎನ್ನುತ್ತಿದ್ದಾರೆ. ಅವರು ಕನ್ನಡದ ಲಿಪಿಯನ್ನೇ ಎಲ್ಲರೂ ಅಳವಡಿಸಿಕೊಳ್ಳಲಿ ಎಂದು ಹೇಳುವುದಿಲ್ಲ. ಒಂದೇ ಲಿಪಿ ಬೇಕೆನ್ನುವುದು ಫೂಲಿಶ್ ನೆಸ್. ಈಗ ಕಂಪ್ಯೂಟರ್ ನಲ್ಲಿ ಒಂದೇ ಲಿಪಿಯನ್ನು ಅಟೋಮ್ಯಾಟಿಕ್ ಆಗಿ ಮಾಡಿಕೊಳ್ಳಬಹುದು. ಪ್ರಿಂಟಿಂಗ್ ನಲ್ಲಿ ಮೊಳೆ ಜೋಡಿಸೋದು ಕಷ್ಟವಿಲ್ಲ. ಹಾಗಾಗಿ ಸಮಸ್ಯೆ ಏನು? ಬೇರೆ ಭಾಷೆಯ ಲಿಪಿ ಕಲಿಯಬೇಕೆಂದರೆ ಕೆಲವು ತಾಸುಗಳಲ್ಲಿ ಕಲಿಯಬಹುದು. ವೈಜ್ಞಾನಿಕವಾಗಿ ಹೋಲಿಸಿ ನೋಡಿದರೆ ದೇವನಾಗರಿ ಲಿಪಿ ಕಷ್ಟ. ಕನ್ನಡ ಲಿಪಿ ಸುಲಭ. ತಮಿಳು ಲಿಪಿ ಇನ್ನೂ ಸುಲಭ. ಈ ಭಾಷೆಗೆ ಒತ್ತಕ್ಷರವಿಲ್ಲ. ಇದು ಪ್ರಿಂಟ್ ಮಾಡೋಕೆ ಸರಳವಾಗಿದೆ. ಅದಕ್ಕಾಗಿ ನಮ್ಮ ಲಿಪಿಗಳನ್ನು ನಾವು ಯಾಕೆ ಬಿಡಬೇಕು?

ಸಿರಾಜ್: ಕೆಲವು ಭಾಷೆಗಳಿಗೆ ವಿಶೇಷ ಮಾನ್ಯತೆ ನೀಡುವುದು, ಉದಾಹರಣೆಗೆ ಶಾಸ್ತ್ರೀಯ ಭಾಷೆಯ ಪಟ್ಟ ಕಟ್ಟುವುದು ಈ ಬಗ್ಗೆ ಏನು ಹೇಳುತ್ತೀರ?

ಶಂಕರ ಭಟ್ : ಇದರಿಂದ ಏನೂ ಲಾಭವಿಲ್ಲ.ಯಾಕೆಂದರೆ ಒಂದು ಭಾಷೆಗೆ 2000 ವರ್ಷಗಳ ಇತಿಹಾಸ ಇದೆ ಎನ್ನುವುದು ಸಾಮಾನ್ಯ ಮನುಷ್ಯನ ಮೇಲೆ ಯಾವ ಪ್ರಭಾವವನ್ನೂ ಬೀರುವುದಿಲ್ಲ. ಭಾಷೆಯ ಚರಿತ್ರೆಯನ್ನು ಅದರ ಲಿಖಿತ ಆಧಾರಗಳ ಮೇಲೆ ನಿರ್ಧಾರ ಮಾಡುವುದು ಸರಿಯಾದ ಕ್ರಮ ಅಲ್ಲ. ಅದಕ್ಕಿಂತ ಹಿಂದಿನ ಪ್ರೋಟೋ ಡ್ರಾವಿಡಿಯನ್ ಸಹ ಇದೆಯಲ್ಲ. ಭಾಷೆಯ ಚರಿತ್ರೆಯನ್ನು ನೋಡುವಾಗ ಲಿಖಿತ ರೂಪಗಳಿಗಿಂತ ಹಿಂದಿನ ಭಾಷಾ ರೂಪಗಳನ್ನೂ ಸಹ ನೋಡಬೇಕು. ಅವುಗಳನ್ನು ಹೇಗೆ ಹುಡುಕುವುದು? ಒಂದು ಭಾಷೆ 2000 ವರ್ಷಗಳಷ್ಟು ಹಿಂದಿನದು ಎಂದರೆ ಅದಕ್ಕಿಂತ ಹಿಂದಿನ ಭಾಷಾ ರೂಪಗಳ ಚರಿತ್ರೆಯನ್ನು ಏನು ಮಾಡಬೇಕು. ಹೀಗೆ ಮಾಡುತ್ತ ಹೊದರೆ ತಮಿಳಿನವರು ಅದಕ್ಕಿಂತ ಹಿಂದೆ ಹೋಗಿ ತಮ್ಮ ಪ್ರಾಚೀನತೆಯನ್ನು ಸ್ಥಾಪಿಸುತ್ತಾರೆ. ಇದು ಎಂಡ್ ಲೆಸ್.

ಮೇಟಿ: ಋ ಕಾರವನ್ನು ಬಿಡುವ/ಉಳಿಸಿಕೊಳ್ಳುವ ಬಗ್ಗೆ ದೊಡ್ಡ ಚರ್ಚೆ ಕನ್ನಡದಲ್ಲಿ ನಡೆಯಿತು. ಸಮುದಾಯ ಸಂಸ್ಕೃತಿಗಳ ಬಗ್ಗೆ ಆಳವಾಗಿ ಚಿಂತಿಸಿದವರೂ ಸಹ ಕನ್ನಡದ್ದಲ್ಲದ ಧ್ವನಿಯ ಪರವಾಗಿ ನಿಂತಿದ್ದರು.

ಶಂಕರ ಭಟ್ : ಇದು ನನಗೆ ಆಶ್ಚರ್ಯಕರವಾಗಿ ಕಂಡಿದೆ. ಬಹಳ ಜನರಿಗೆ ಕನ್ನಡದ್ದೇ ಆದ ಅಕ್ಷರಗಳು ನಾಶವಾಗಿ ಹೋಗಿರುವ ಬಗ್ಗೆ ಏನೂ ಅನಿಸಿದ ಹಾಗೆ ಕಾಣುವುದಿಲ್ಲ. ಕನ್ನಡದ್ದೇ ಧ್ವನಿಗಳಾದ ರಳ-ಕುಳಗಳು ಬಿದ್ದುಹೋಗಿವೆ. ಕೆ.ವಿ.ಸುಬ್ಬಣ್ಣನವರು ಋ ಕಾರವನ್ನು ಬಿಡುವುದು ಕಷ್ಟ ಎಂದು ಲೇಖನ ಬರೆದಿದ್ದರು. ತಿರುಮಲೇಶ್ ಅವರೂ ಸಹ ಇದೇ ವಾದ ಮಾಡಿದ್ದರು. ಇಂಥ ಸಂಸ್ಕೃತ ಧ್ವನಿಗಳಿಂದ ಯಾವುದೇ ತರಹದ ಅಡ್ವಾಂಟೇಜ್ ಇಲ್ಲ, ಅದನ್ನು ಯಾರೂ ತೊರಿಸಿಕೊಟ್ಟಿಲ್ಲ. ಇದು ಒಂದು ರೀತಿಯಲ್ಲಿ ಅವರಿಗೆ ಸಂಸ್ಕೃತದ ಬಗ್ಗೆ ಇರುವ ಹೈ ರಿಗಾರ್ಡ್ ನಿಂದ ಬಂದಿದೆ. ಸಂಸ್ಕೃತ ದೇವ ಭಾಷೆ/ದೇವರ ಭಾಷೆ ಎಂಬ ಭಾವನೆ ಬಹಳ ಕಾಲದಿಂದ ಬಂದಿದೆ. ಅದಕ್ಕೆ ಅಷ್ಟು ಮಾನ್ಯತೆ ನೀಡುವುದರಲ್ಲಿ ನನಗೆ ನಂಬಿಕೆ ಇಲ್ಲ. ಹಾಗೆ ನೋಡಿದರೆ ಬಹಳ ಜನ ಕನ್ನಡ ಪಂಡಿತರು ಸಂಸ್ಕೃತದಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ.

ಸಿರಾಜ್: ಒಂದು ವಿಚಿತ್ರ ಇದೆ. ಕನ್ನಡದ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಕೇಳುತ್ತಾ ದೊಡ್ಡ ಕೆಲಸ ಮಾಡಿರುವ ನೀವು ಹೆಚ್ಚಾಗಿ ಬರೆದಿರುವುದು ಇಂಗ್ಲಿಷಿನಲ್ಲಿ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?

ಶಂಕರ ಭಟ್
: ಹೌದು, ನಾನು ಇಂಗ್ಲಿಷಿನಲ್ಲಿ ಯೋಚಿಸಿ, ಓದಿದ್ದನ್ನು ಈಗ ಕನ್ನಡದಲ್ಲಿ ಬರೆಯುತ್ತಿದ್ದೇನೆ. ಮೇಲಾಗಿ ಮೊದಲು ಸಂಸ್ಕೃತದಲ್ಲಿ ಇದ್ದ ಹಾಗೆ ಈಗ ಎಲ್ಲ ನಾಲೆಜ್ ಇರುವುದು ಇಂಗ್ಲಿಷಿನಲ್ಲಿ. ಕನ್ನಡದಲ್ಲಿ ನಾನು ಬರೆದದ್ದನ್ನು ಚರ್ಚಿಸುವ ವಾತಾವರಣ ಇರಲಿಲ್ಲ. ಬರೆದದ್ದನ್ನು ಓದುವವರಿಲ್ಲದಿದ್ದರೆ ಏನು ಮಾಡಬೇಕು. ಕನ್ನಡದಲ್ಲಿ ನಾನು ಎಪ್ಪತ್ತರ ದಶಕದಲ್ಲಿ ಒಂದೂವರೆ ವರ್ಷ ಕಷ್ಟ ಪಟ್ಟು ಬರೆದ ಪುಸ್ತಕವನ್ನು ಸರಿಯಾಗಿ ಚರ್ಚಿಸುವ ವಾತಾವರಣ ಇದ್ದಿದ್ದರೆ ನಾನು ಇಂಗ್ಲಿಷಿನಲ್ಲಿ ಹೆಚ್ಚು ಬರೆಯುತ್ತಿರಲಿಲ್ಲ. ಆಗ ನಾನು ಒಂದು ರೀತಿಯ ಫ್ರಸ್ಟ್ರೇಶನ್ ಗೆ ಒಳಗಾದೆ. ಆ ಪುಸಕ್ತಕ್ಕೆ ಒಂದು ರಿವ್ಯೂ ಸಹ ಬರಲಿಲ್ಲ. ಈಗ ನಿಧಾನಕ್ಕೆ ವಾತಾವರಣ ಬದಲಾಗುತ್ತಿದೆ.

ಮೇಟಿ: ಭಾಷಾ ಬಳಕೆಯಲ್ಲಿ ಸರಿತಪ್ಪುಗಳು ಇಲ್ಲ ಎಂಬ ವಾದವನ್ನು ಭಾಷಾವಿಜ್ಞಾನಿಗಳು ಮಂಡಿಸುತ್ತಾರೆ. ಆದರೆ ಈ ವಾದಕ್ಕೆ ಮನ್ನಣೆ ಸಿಕ್ಕಿಲ್ಲ ಯಾಕೆ?

ಶಂಕರ ಭಟ್ : ಮಹಾಪ್ರಾಣಗಳು ಕನ್ನಡದ ಉಚ್ಛಾರಣೆಯಲ್ಲಿಲ್ಲ ಬರವಣಿಗೆಯಲ್ಲಿ ಮಾತ್ರ ಇವೆ. ಇವು ಸಂಸ್ಕೃತದ ಬಾರೋವಿಂಗ್ಸ್ ನಲ್ಲಿ ಇವೆ. ಯಾರಿಗೆ ಸಂಸ್ಕೃತದ ಮೇಲೆ ಮೋಹವಿದೆಯೋ ಅವರು ಇದನ್ನು ಸಂಸ್ಕೃತದಂತೆ ಬರೆಯಬೇಕು ಎನ್ನುತ್ತಾರೆ. ಮುಖ್ಯವಾಗಿ ಎಲ್ಲರೂ ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ಕನ್ನಡವು ಸಂಸ್ಕೃತದ ವಿಕೃತರೂಪವಲ್ಲ. ಕನ್ನಡವನ್ನು ಹೇಗೆ ಓದುತ್ತೇವೋ ಹಾಗೇ ಬರೆಯಬೇಕು. ಬರಹಕನ್ನಡ ಸರಿ ಆಡುಕನ್ನಡ ತಪ್ಪು ಎಂಬ ವರ್ಗೀಕರಣವೇ ತಪ್ಪು. ಭಾಷಾವಿಜ್ಞಾನಿ ಸರಿ ತಪ್ಪು ಅನ್ನುವ ವರ್ಗೀಕರಣವನ್ನೇ ಒಪ್ಪುವುದಿಲ್ಲ. ಸಂಸ್ಕೃತ ಪಂಡಿತರು ಬರಹ ಮೇಲು ಮಾತು ಕೀಳು ಎನ್ನುವ ಡೈಕಾಟಮಿಯನ್ನು ಸೃಷ್ಟಿಸಿದರು.

ಮೇಟಿ: ಕನ್ನಡ ಬರಹ ಸರಿಪಡಿಸೋಣ ಎನ್ನುವ ಚಿಂತನೆಯ ಹಿಂದಿನ ಉದ್ದೇಶ ಸಂಸ್ಕೃತಿ ಉದ್ಧಾರವೇ?

ಶಂಕರ ಭಟ್ : ಇಲ್ಲ, ನಾನು ಸಂಸ್ಕೃತಿಯ ಬಗ್ಗೆ ಮಾತಾಡುವುದಿಲ್ಲ. ಅಪ್ಪರ್ ಕ್ಲಾಸ್ ಮಕ್ಕಳಿಗೆ ಕನ್ನಡ ಬರಹ ಬೇಕಾಗಿಲ್ಲ. ಕೆಳವರ್ಗದ ಮತ್ತು ಬಡವರ ಮಕ್ಕಳು ಮಾತ್ರ ಕನ್ನಡ ಮಾಧ್ಯಮ ಶಾಲೆಗೆ ಹೋಗುತ್ತಾರೆ. ಕನ್ನಡ ಬರಹದ ಉದ್ಧಾರಕ್ಕಾಗಿ ಕನ್ನಡ ಬರಹ ಸರಿಪಡಿಸಬೇಕಿದೆ. ಬರಹ ಇಲ್ಲಿಯವರೆಗೆ ಕೆಲವೇ ಕೆಲವು ಜನರ ಸೊತ್ತಾಗಿತ್ತು. ಈಗ ಅದು ಎಲ್ಲರ ಸೊತ್ತಾಗಬೇಕು. ವಿಜ್ಞಾನ ಮುಂತಾದ ವಿಷಯಗಳನ್ನು ಕಲಿಸುವಾಗ ಸಂಸ್ಕೃತದ ತ್ರಿಶಂಕು ಪದಗಳನ್ನು ಕಾಯಿನ್ ಮಾಡಿ ಕಲಿಸುತ್ತಿದ್ದರು. ಇದರಿಂದ ಮಕ್ಕಳ ಕಲಿಕೆ ಕಷ್ಟವಾಗುತ್ತಿದೆ. ಕನ್ನಡ ಪದಗಳನ್ನು ಬಳಸಿದರೆ ಮಕ್ಕಳಿಗೆ ಕಲಿಕೆ ಸಲಭವಾಗುತ್ತದೆ. ಕನ್ನಡ ಬರಹದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸೋದೇ ನಮ್ಮ ಉದ್ದೇಶ.

ಮೇಟಿ: ಭಾಷೆಯ ಉದ್ಧಾರ ಅದು ಸಂಸ್ಕೃತಿಯ ಉದ್ಧಾರವಲ್ಲವೇ?

ಶಂಕರ ಭಟ್ : ವಚನಕಾರರು ಎಲ್ಲರನ್ನು ತಲುಪಬೇಕೆಂದು, ಅದು ಬರಹದ ಮೂಲಕವಲ್ಲ ಮಾತಿನ ಮೂಲಕ ಅದಕ್ಕಾಗಿ ಅವರು ಎಲ್ಲರ ಕನ್ನಡವನ್ನು ಬಳಸಿದರು. ಅವರು ಮಾಡಿದ್ದು ಅದು ಸಾಮಾಜಿಕ ಚಳುವಳಿ. ಭಾಷಾ ಚಳುವಳಿಯಲ್ಲ. ಬೌದ್ಧರು ಪಾಲಿಯನ್ನು ಹಾಗೂ ಜೈನರು ಪ್ರಾಕೃತವನ್ನು ಬಳಸಿದರು. ಇದಕ್ಕೆ ಕಾರಣ ಹೆಚ್ಚಿನ ಜನರಿಗೆ ಇವರ ವಿಚಾರಗಳು ಅರ್ಥವಾಗಲಿ ಎನ್ನುವುದಾಗಿತ್ತು.

ಮೇಟಿ: ಇವರೆಲ್ಲರೂ ಸಂಸ್ಕೃತಿಯ ಉದ್ಧಾರಕ್ಕಾಗಿ ಭಾಷೆಯನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರಲ್ಲವೇ?

ಶಂಕರ ಭಟ್ : ಹೌದು, ಇವರು ಭಾಷೆಯನ್ನು ಒಂದು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಬರಹದಿಂದ ನಾವೆಲ್ಲರೂ ಏನು ಲಾಭ ಪಡೆಯುತ್ತೇವೋ ಅದನ್ನು ಎಲ್ಲರೂ ಪಡೆಯಲಿ ಅನ್ನುವುದೇ ನಮ್ಮ ಉದ್ದೇಶ.

ಮೇಟಿ: ಬರಹದಲ್ಲಿ ಆಗುವ ಮಾರ್ಪಾಡುಗಳನ್ನು ಗಮನಿಸಿ ಭಾಷಾಶಾಸ್ತ್ರಜ್ಞರು ಭಾಷಾಚರಿತ್ರೆಯನ್ನು ಕಟ್ಟುತ್ತಾರೆ. ಆದರೆ ನಿಮ್ಮ 'ಕನ್ನಡ ಭಾಷೆಯ ಕಲ್ಪಿತ ಚರಿತ್ರೆ' ಪ್ರಕಾರ ಆಡುನುಡಿಗಳ ಬದಲಾವಣೆಗಳನ್ನು ಒಳಗೊಳ್ಳದೆ ಇರುವುದರಿಂದ ಭಾಷಿಕ ಬದಲಾವಣೆಗಳನ್ನು ವರ್ಣಿಸುವ ಬಗೆ ಕಲ್ಪಿತವೇ ಅಥವಾ ಬರಹದಲ್ಲಿರುವುದೇ ಕಲ್ಪಿತವೇ?

ಶಂಕರ ಭಟ್ : ಹಾಗಲ್ಲ ಅದು ಭಾಷೆಯ ಚರಿತ್ರೆಯನ್ನು ಕಟ್ಟುವ ಬಗೆ ಕಲ್ಪಿತ ಹೊರತು ಬರಹದಲ್ಲಿರುವುದು ಕಲ್ಪಿತವಲ್ಲ. ಉದಾಹರಣೆಗೆ ಕನ್ನಡ ಮತ್ತು ತಮಿಳು ಎರಡು ಒಂದೇ ಆಗಿರುವ ಕಾಲಕ್ಕೆ ಮರಳಿ ಹೋಗಿ ಆ ಎರಡು ಭಾಷೆಗಳನ್ನು ಹೋಲಿಸಿ ಅವುಗಳ ಕಾಲವನ್ನು ನಿರ್ಧರಿಸುವ ಬಗೆ ಕಲ್ಪಿತವಾಗಿರುತ್ತದೆ. ಆ ಎರಡು ಭಾಷೆಯ ಪದಗಳನ್ನು ಹೋಲಿಸಿ ನೋಡಬೇಕು. ಉದಾಹರಣೆಗೆ ತಮಿಳಿನಲ್ಲಿ ವೆಳ್ಳ್ ಇದೆ ಕನ್ನಡದಲ್ಲಿ ಬಿಳಿ ಇದೆ. ಇವೆರಡನ್ನು ಕಂಪೇರ್ ಮಾಡಿ ಯಾವುದು ಮೊದಲು ಅನ್ನುವುದನ್ನು ಗುರುತಿಸಬೇಕು. ಇಂತಹ ಹೋಲಿಕೆ ಕನ್ನಡದಲ್ಲಿಯೇ ಸಾಧ್ಯವಿದೆ. ಉದಾಹರಣೆಗೆ ಬಿಳಿ ಹಾಗೂ ಬೆಳ್ಳಗೆ ಎರಡೂ ಕನ್ನಡದಲ್ಲಿವೆ. ಇದು ಬಹುಶಃ ಪೂರ್ವಹಳಗನ್ನಡದ ವಡ್ಡಾರಧನೆಯಲ್ಲಿ ವೆ>ಬೆ ಆಗಿ ಬೆಳ್ಳ್ ಅನ್ನುವುದು ಇಕಾರ ಅಥವಾ ಉಕಾರ ಬಂದಾಗ ಬಿಳಿ ಆಗಿರಬಹುದು. ಇದಕ್ಕೆ ಇಂಟರ್ನಲ್ ರೀ-ಕನ್ ಸ್ಟ್ರಕ್ಸನ್ ಎಂದು ಹೇಳುತ್ತಾರೆ. ಈ ಬದಲಾವಣೆ ಹವ್ಯಕ ಹಾಗೂ ಕೋಸ್ಟಲ್ ಕನ್ನಡದಲ್ಲಿ ಆಗಿಲ್ಲ. ಇದನ್ನು ಮೂಲದ್ರಾವಿಡಕ್ಕೆ ಹೋಲಿಸಿ ನೋಡಬಹುದು. ಇಂತಹ ರೀ-ಕನ್ ಸ್ಟ್ರಕ್ಸನ್ ಗೆ ಯಾವುದೇ ಡಾಟಾ ಇಲ್ಲ. ಹಾಗಾಗಿ ಭಾಷೆಯ ಚರಿತ್ರೆಯನ್ನ ಕಟ್ಟುವ ಬಗೆ ಕಲ್ಪಿತವಾಗಿರುತ್ತದೆ.

ಮೇಟಿ: ಹಾಗಾದರೆ ಪ್ರೊ. ಎಸ್ ಶಟ್ಟರ್ ಅವರು ಇತ್ತೀಚಿಗೆ ಬರೆದ `ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ' ಪುಸ್ತಕವು ಕನ್ನಡ ಭಾಷೆಯ ಚರಿತ್ರೆಯನ್ನು ಕಟ್ಟುವ ಕುರಿತು ಏನು ಹೇಳುತ್ತದೆ?

ಶಂಕರ ಭಟ್ : ಈ ಪುಸ್ತಕದಲ್ಲಿ ಭಾಷೆಯ ಚರಿತ್ರೆಯನ್ನು ಕಟ್ಟುವ ಚರ್ಚೆಗಳು ಬಂದಾಗಲೆಲ್ಲ ಅವರು ಅವಾಯ್ಡ್ ಮಾಡ್ತಾರೆ. ಭಾಷೆಯ ಬಗೆಗೆ ಅವರು ಹೆಚ್ಚಿನದನ್ನು ಹೇಳಲ್ಲ. ಕೆಲವು ವರ್ಡ್ಸ್ ಗಳನ್ನಿಟ್ಟುಕೊಂಡು ಚರ್ಚೆ ಮಾಡಿದರೆ, ಅದು ಭಾಷೆ ಅಥವಾ ವ್ಯಾಕರಣದ ಬಗ್ಗೆ ಏನೂ ಹೇಳಿದಂತಲ್ಲ. ಪುಸ್ತಕ ಓದಿ ನೋಡಿದೆ. ಅದು ಭಾಷೆಯ ಬದಲಾವಣೆಯ ಕುರಿತು ಏನನ್ನೂ ಹೇಳಿದಂತಿಲ್ಲ. ಭಾಷೆಯ ಚರಿತ್ರೆಯ ಬಗ್ಗೆ ಮಾತನಾಡುವಾಗ ಕೆಲವು ಸ್ಟ್ರಕ್ಚರ್ಸ್ ಅಥವಾ ಸೆಂಟನ್ಸ್ ಗಳನ್ನು ಗಮನಿಸಬೇಕಾಗುತ್ತೆ. ಕನ್ನಡ ಅಂತ ಹೇಳೋಕೆ ಕೆಲವು ಕಾರಣಗಳಿರುತ್ತವೆ. ಕನ್ನಡ ಮತ್ತು ತಮಿಳಿಗೆ ಏನು ವ್ಯತ್ಯಾಸ ಇದೆ. ಕನ್ನಡವನ್ನು ಕನ್ನಡವಾಗಿಸುವ ಹಾಗೂ ತಮಿಳನ್ನು ತಮಿಳಾಗಿಸುವ ಅಂಶಗಳು ಯಾವುವು ಎಂಬುದನ್ನು ಅವರು ಚರ್ಚಿಸಿಲ್ಲ. ಅಂದರೆ, ಕನ್ನಡದ ಅನನ್ಯತೆ ಗುರುತಿಸುವಲ್ಲಿ, ಅದರ ರಚನೆಯ ಸ್ವರೂಪ ಹೇಗಿದೆ ಅನ್ನುವುದನ್ನು ಅವರು ಗುರುತಿಸಿಲ್ಲ. ಉದಾಹರಣೆಗೆ ತಮಿಳಿನಲ್ಲಿ ಕ್>ಚ್ [ಕೇರಿ>ಚೇರಿ] ಧ್ವನಿಯಾಗಿ ಬದಲಾವಣೆ ಆಗಿದೆ. ಈ ಚೇಂಜ್ ಕನ್ನಡದಲ್ಲಿ ಆಗಿಲ್ಲ. ಈ ಚೇಂಜ್ ಯಾವಾಗ ಆಯ್ತೋ ಆವಾಗ ತಮಿಳಿಗೆ ಒಂದು ಐಡೆಂಟಿಟಿ ಸಿಕ್ಕಿದೆ. ಮತ್ತು ಕನ್ನಡಕ್ಕೂ ಒಂದು ಐಡೆಂಟಿಟಿ ಸಿಕ್ಕಿದೆ. ಇದರ ಬಗ್ಗೆ ಅವರು ಏನಾದರೂ ಹೇಳಿದ್ದಾರಾ? ಇಲ್ಲ. ಹಾಗಾಗಿ ಅದರ ಬಗ್ಗೆ ನಾನೇನು ಹೇಳಲ್ಲ. ಅದು ಸರಿಯೋ ತಪ್ಪೋ, ಅವರ ಹಿಸ್ಟಾರಿಕಲ್ ಪರ್ ಸ್ಪೆಕ್ಟಿವ್ ನನಗಿಲ್ಲ.

ಮೇಟಿ: ಶಬ್ದಮಣಿದರ್ಪಣವನ್ನು ಕುರಿತು ನೀವು ಬರೆದಿದ್ದೀರಿ. ಬಹಳ ಕಾಲದಿಂದ ಅದನ್ನು ವಿಶ್ವವಿದ್ಯಾಲಯಗಳು, ಪಂಡಿತರು ಅದನ್ನು ಎತ್ತಿಹಿಡಿಯುತ್ತ ಬಂದಿದ್ದರೂ ಒಟ್ಟಾಗಿ ಅದರ ಪ್ರಾಮುಖ್ಯತೆಯನ್ನೇ ನೀವು ಅಲ್ಲಗಳೆದಿದ್ದೀರ.....

ಶಂಕರ ಭಟ್ : ಕಾರಣ ಏನು ಅಂದರೆ ಅವನು ಅದನ್ನು ಬರೆದು ನೂರಾರು ವರ್ಷಗಳು ಕಳೆದಿದ್ದರೂ ಅದು ಸರಿಯೋ ತಪ್ಪೋ ಎಂದು ಹುಡುಕುವ ಗೋಜಿಗೇ ಹೋಗಿಲ್ಲ. ನಮ್ಮಲ್ಲಿ ಒಂದು ಕಾಮೆಂಟರಿ ಮೆಂಟಾಲಿಟಿ ಇದೆ. ರಾಮಾನುಜ ಶಂಕರಾಚಾರ್ಯರೂ ಸಹ ಕಾಮೆಂಟರಿ ಬರೆದರೇ ವಿನಾ ಇಂಡಿಪೆಂಡೆಂಟಾಗಿ ಬರೆಯಲಿಲ್ಲ. ಇದರಿಂದ ನಾವು ಬಹಳ ಕಾಲ ಸ್ವತಂತ್ರವಾಗಿ ಬೆಳೆಯಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಶಬ್ದಮಣಿದರ್ಪಣದಲ್ಲಿ ತಪ್ಪು ಕಂಡರೂ ಇದೆ ಎಂದು ಹೇಳಲಿಲ್ಲ. ಅದು ಮುಖ್ಯವಾಗಿ ಸಂಸ್ಕೃತದ ಬಗ್ಗೆ ಇದೆಯೇ ಹೊರತು ಕನ್ನಡದ ಬಗ್ಗೆ ಅಲ್ಲ. ಕನ್ನಡದ ಬಗ್ಗೆ ಕೆಲವು ಪ್ರಸ್ತಾಪಗಳು ಇದ್ದರೂ ಅವನು ಹೇಳುವುದರಲ್ಲಿ ಎಪ್ಪತ್ತೈದು ಭಾಗ ತಪ್ಪುಗಳೇ ತುಂಬಿಕೊಂಡಿವೆ. ಮೇಲಾಗಿ ಕೇಶಿರಾಜ ಕವಿಯೇ ಹೊರತು ಪಾಣಿನಿಯಂಥ ದೊಡ್ಡ ಸ್ಕಾಲರ್ ಅಲ್ಲ. ಅವನಲ್ಲೂ ಸಹ ಭಾಷೆಯ ಬಗ್ಗೆ ಬರುವ ಪ್ರಸ್ತಾಪಗಳು ಮುಖ್ಯವಾಗಿ ಸಾಹಿತ್ಯವನ್ನು ಗುರಿಯಾಗಿ ಇಟ್ಟುಕೊಂಡು ಹೇಳಿರುವಂಥವೇ ಆಗಿವೆ.

ಮೇಟಿ: ನಿಮ್ಮ ಪ್ರಕಾರ ಶಾಲಾ ವ್ಯಾಕರಣದ ಸ್ವರೂಪ ಹೇಗಿರಬೇಕು?

ಶಂಕರ ಭಟ್ : ಶಾಲೆಯಲ್ಲಿ ವ್ಯಾಕರಣ ಕಲಿಸ್ತಾರೆ ಇಲ್ಲಿಯವರೆಗೆ ಏನು ಕಲಿಸಿದರೋ ಅದರಿಂದ ಏನೂ ಪ್ರಯೋಜನವಾಗಿಲ್ಲ. ವ್ಯಾಕರಣ ಕಲಿಸೋದು ಬೇಡ ಮಕ್ಕಳು ಹೇಗಾದರೂ ಭಾಷೆ ಕಲಿತಾರೆ ಎಂದೂ ತೀರ್ಮಾನ ಮಾಡಿದ್ದರು. ಆದರೆ ಪಾಲಕರು ಹೇಳೋದೆನಂದರೆ ನೀವು ವ್ಯಾಕರಣ ಕಲಿಸಲ್ಲ ಅದಕ್ಕೆ ಮಕ್ಕಳು ಭಾಷೆಯನ್ನು ಕಲಿತಾಯಿಲ್ಲ. ವ್ಯಾಕರಣ ಕಲಿಸಬೇಕು ಆದರೆ ಯಾವ ತರಹದ ವ್ಯಾಕರಣ ಕಲಿಸಬೇಕು ಅನ್ನುವುದು ಮುಖ್ಯ. ಮಕ್ಕಳಿಗೆ ಉಪಯೋಗವಾಗುವಂತಹ ವ್ಯಾಕರಣ ಕಲಿಸಬೇಕು. ಸಂಸ್ಕೃತದ ಸಂಧಿ ಸಮಾಸಗಳನ್ನು ಕನ್ನಡದ ಮಕ್ಕಳಿಗೆ ಕಲಿಸುವುದರಿಂದ ಏನು ಲಾಭ? ವ್ಯಾಕರಣದಲ್ಲಿ ಯಾವುದು ಬೇಕು ಅಂದರೆ ಬರವಣಿಗೆ ಹಾಗೂ ಮಾತಿಗೆ ಯಾವುದು ಬೇಕು ಅದನ್ನ ಮಾತ್ರ ಕಲಿಸಿದರೆ ಸಾಕು.

ಸಿರಾಜ್: ಜಾಗತೀಕರಣದಿಂದ ಕನ್ನಡವೂ ಸೇರಿದಂತೆ ಹಲವಾರು ಭಾಷೆಗಳು ಕಣ್ಮರೆಯಾಗುವ ಅಪಾಯದ ಬಗ್ಗೆ ಏನು ಹೇಳುತ್ತೀರಿ.

ಶಂಕರ ಭಟ್ : ಇದನ್ನು ಪೂರ್ತಿ ಒಪ್ಪಲು ಸಾಧ್ಯವಿಲ್ಲ. ಭಾಷೆ ಮರೆಯಾಗುತ್ತದೆ ಅಂದರೆ ಅದನ್ನು ಮಾತನಾಡುವ ಸಮುದಾಯವೂ ಮರೆಯಾಗಿದೆ ಎಂದು ಅರ್ಥ. ಪ್ರಾಣಿ ಪಕ್ಷಿಗಳು ಮರೆಯಾಗುವ ಹಾಗೆ, ಜೀವ ವೈವಿಧ್ಯತೆ ಕಾಣೆಯಾಗುವ ಹಾಗೆ ಭಾಷೆಗಳೂ ಕ್ರಮೇಣ ಮರೆಯಾಗುತ್ತಿವೆ.

ಸಿರಾಜ್: ಸದ್ಯ ಹೆಗ್ಗೋಡಿನಲ್ಲಿ ನೀವು ನೆಲೆಸಿದ್ದೀರಿ. ನೀನಾಸಂ ಸಂಸ್ಕೃತಿಯ ಕ್ಷೇತ್ರದಲ್ಲಿ ಮಾಡುವುದನ್ನು ನೀವು ಭಾಷೆಯಲ್ಲಿ ಮಾಡುತ್ತಿದ್ದೀರಿ. ಇದು ನಿಮ್ಮ ಕೆಲಸಕ್ಕೆ ಹೇಗೆ ಪೂರಕವಾಗಿದೆ?ಶಂಕರ ಭಟ್ : ಸುಬ್ಬಣ್ಣ ಅವರು ಇದ್ದಾಗ ಹಲವು ಬಾರಿ ನನ್ನನ್ನು ಕರೆದಿದ್ದರು. ನಾನು ಸ್ವಲ್ಪ ಸಂಕೋಚದ ಮನುಷ್ಯನಾಗಿರುವುದರಿಂದ ಹೋಗಲಿಲ್ಲ. ಆದರೆ ನೀನಾಸಂನ ಕೆಲಸಕ್ಕೂ ನನ್ನ ಕೆಲಸಕ್ಕೂ ಅಂತಹ ಸಂಬಂಧ ಇಲ್ಲ. ನಾನು ಇಲ್ಲಿನ ತಂಪು ವಾತಾವರಣದ ಬಗ್ಗೆ ಕೇಳಿ ಅಕ್ಷರ ಅವರಿಗೆ ಫೋನ್ ಮಾಡಿದೆ. ಆಗ ಅವರ ಬಳಿ ಹೇಳಿದ್ದು: ನಾನು ನಿಮ್ಮಲ್ಲಿಗೆ ಬಂದು ಹವ್ಯಕರ ಭಾಷೆಯ ಬಗ್ಗೆ ಕೆಲಸಮಾಡುತ್ತೇನೆ ಎಂದು. ನಂತರ ಮಾಡಲಿಲ್ಲ, ಅವರು ಕೇಳಲಿಲ್ಲ. ಅದು ಬೇರೆ ಮಾತು.....(ನಗು). ನನ್ನ `ಮಾತಿನ ಒಳಗುಟ್ಟು' ಪುಸ್ತಕವನ್ನು ಅವರೇ ಪ್ರಿಂಟ್ ಮಡುತ್ತೇನೆ ಎಂದಿದ್ದರು. ಆದರೆ ಅದನ್ನು ನಾನು ಹೊಸ ಬರಹದಲ್ಲಿ ಬರೆದದ್ದು ಅವರಿಗೆ ಇಷ್ಟವಾಗಲಿಲ್ಲ ಅನಿಸುತ್ತೆ.

ಸಿರಾಜ್: ಕನ್ನಡ ಚಳುವಳಿಗಳ ಉದ್ದೇಶ ಈಡೇರಿದೆಯೆ? ಈ ಚಳುವಳಿಗಾರರ ಬಗ್ಗೆ ಇರುವ ದೊಡ್ಡ ಆಪಾದನೆ ಎಂದರೆ ಅವರಿಗೆ ಶ-ಸ ಉಚ್ಚಾರಣೆ ಬರುವುದಿಲ್ಲ ಎನ್ನುವುದು. ಅವರು ನಿಮ್ಮ ವಾದವನ್ನು ತಿಳಿದುಕೊಂಡರೆ ಈ ಚಳುವಳಿಗಳಿಗೆ ಹೊಸದಿಕ್ಕು ಸಿಗುತ್ತದೆ ಎಂದು ನಿಮಗೆ ಅನಿಸುತ್ತದೆಯೇ?

ಶಂಕರ ಭಟ್ : ಚಳುವಳಿಗಳ ವಿಷಯ ಬೇಡ. ಅವನ್ನು ಕುರಿತು ನಾನು ಮಾತಾಡಲು ಬಯಸುವುದಿಲ್ಲ. ಮೇಲಾಗಿ ನಾನು ಹೇಳುವ ವಿಚಾರಗಳು ಚಳುವಳಿಯಿಂದ ಈಡೇರುತ್ತವೆ ಎಂದು ನನಗೆ ಅನಿಸುವುದಿಲ್ಲ.

ಜಾನಪದ ವಿಶ್ವವಿದ್ಯಾಲಯ ಅಗತ್ಯ ಏಕೆ?

ಡಾ.ವೀರಣ್ಣ ದಂಡೆ
(ಡಾ.ವೀರಣ್ಣ ದಂಡೆ ಅವರದು ಕನ್ನಡ ಜಾನಪದ ಕ್ಷೇತ್ರದಲ್ಲಿ ಮರೆಯಲಾರದ ಹೆಸರು. ಅವರ ದೇಸಿ ಸಂಪುಟಗಳು ಜಾನಪದ ಅಧ್ಯಯನದ ಚಲನೆಯ ಹಲವು ಮಗ್ಗಲುಗಳ ಬಗ್ಗೆ ಗಮನ ಸೆಳೆಯುತ್ತವೆ. ಅದರಲ್ಲೂ ಹೈದರಾಬಾದ್ ಕರ್ನಾಟಕದ ಜಾನಪದ ಸಾಹಿತ್ಯದ ಸಂಗ್ರಹಣೆ ವಿಶ್ಲೇಷಣೆಯಲ್ಲಿ ವೀರಣ್ಣ ದಂಡೆ ಅವರು ದೊಡ್ಡ ಕೆಲಸ ಮಾಡಿದ್ದಾರೆ. ಅವರು ಹಾಲುಮತ ಮಹಾಕಾವ್ಯವನ್ನು ಸಂಗ್ರಹಿಸಿದ್ದಾರೆ, ಜಾನಪದ ಪ್ರಾಥಮಿಕ ವಿಮರ್ಶೆ ಕುರಿತ ಒಂದು ಪ್ರಯೋಗವನ್ನು ಮಾಡಿದ್ದಾರೆ. ಅವರ ಜಾನಪದ ವಿಶ್ಲೇಷಣೆಯಲ್ಲಿ ಜಾನಪದ ಅಧ್ಯಯನವನ್ನು ತುಂಬಾ ಮುಂದೆ ಕರೆದೊಯ್ಯುವ ಹೊಳನೋಟಗಳು ಇಲ್ಲವಾದರೂ, ಜಾನಪದದ ಕುರಿತು ಶ್ರದ್ಧೆಯಿಂದ ದುಡಿದಿದ್ದಾರೆ. ಆ ಕಾರಣಕ್ಕೆ ಅವರನ್ನು ಗೌರವಿಸಬೇಕು. ಅವರೀಗ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಜಾನಪದ ವಿಶ್ವವಿದ್ಯಾಲಯ ಹೇಗಿರಬೇಕು ಎನ್ನುವ ಬಗ್ಗೆ ತುಂಬಾ ವಿವರವಾಗಿ ಚರ್ಚಿಸಿದ್ದಾರೆ. ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬಹುದಾದ ಹೊಳನೋಟಗಳು ಇಲ್ಲಿವೆ. ಕನ್ನಡ ಜಾನಪದ ಬ್ಲಾಗ್ ಗಾಗಿ ಕಿರುಪುಸ್ತಕ ರೂಪದಲ್ಲಿ ರಚಿಸಿದ್ದ ಜಾನಪದ ವಿಶ್ವವಿದ್ಯಾಲಯ ಅಗತ್ಯ ಏಕೆ? ಎನ್ನುವ ಬರಹವನ್ನು ಪ್ರಕಟಿಸಲು ಅನುಮತಿ ನೀಡಿದ್ದಾರೆ. ಅದಕ್ಕಾಗಿ ವೀರಣ್ಣ ದಂಡೆ ಅವರಿಗೆ ಕೃತಜ್ಞತೆಗಳನ್ನು ಹೇಳುವೆ.
-ಅರುಣ್ ಜೋಳದಕೂಡ್ಲಿಗಿ.)

ಜಾನಪದಶಾಸ್ತ್ರ ಅಭ್ಯಾಸದ ಕ್ರಮೇಣ ಬೆಳವಣಿಗೆ:

ಕರ್ನಾಟಕ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬಂದ (೧೯೪೯) ಹೊಸದರಲ್ಲಿಯೇ ಡಾ| ಬಿ.ಎಸ್.ಗದ್ದಗಿಮಠ ಅವರಿಗೆ ಪಿಎಚ್.ಡಿ.ಸಂಶೋಧನೆಗೆ ಜನಪದ ಸಾಹಿತ್ಯದ ವಿಷಯವೊಂದನ್ನು (ಜಾನಪದ ಗೀತೆಗಳು) ಆರಿಸಿಕೊಳ್ಳುವ ಅವಕಾಶ ಕೊಟ್ಟದ್ದೇ ವಿಶ್ವವಿದ್ಯಾಲಯದ ಮಟ್ಟದಲ್ಲಿ ಜಾನಪದಶಾಸ್ತ್ರದ ಅಭ್ಯಾಸಕ್ಕೆ ನಾಂದಿಹಾಡಿದಂತಾಗಿದೆ. ಇದು ನಡೆದದ್ದು ಬಹುಶಃ ೧೯೫೧-೫೨ ಇರಬೇಕು ಎಂದು ಅಂದಾಜಿಸಬಹುದು. ಏಕೆಂದರೆ ೧೯೫೪ರಲ್ಲಿಯೇ ಅವರಿಗೆ ಪಿಎಚ್.ಡಿ.ಪದವಿ ದೊರೆತಿದೆ. ನಂತರ ೧೯೬೬ರಲ್ಲಿ ಮೈಸೂರು ವಿಶ್ವವಿದ್ಯಾಲಯ, ೧೯೬೭ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಎಂ.ಎ. ಪಠ್ಯಗಳಲ್ಲಿ ಜಾನಪದದ ಒಂದು ಪತ್ರಿಕೆಯನ್ನು ಸೇರಿಸಿದ್ದೇ ಜಾನಪದ ಅಧ್ಯಯನಕ್ಕೆ ಅಧಿಕೃತ ನಾಂದಿಯಾಯಿತು. ಮುಂದೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಜಾನಪದ ವಿಭಾಗಗಳು ಪ್ರಾರಂಭವಾದವು.

೧೯೬೭ರಲ್ಲಿ ತರೀಕೆರೆಯಲ್ಲಿ ಗೊ. ರು. ಚನ್ನಬಸಪ್ಪ ಮತ್ತವರ ಸ್ನೇಹಿತರ ಪ್ರಯತ್ನದಿಂದ ಬಹುದೊಡ್ಡ ಪ್ರಮಾಣದಲ್ಲಿ ಜಾನಪದ ಸಮಾವೇಶ ನಡೆಯಿತು. ಅದರ ಅಂಗವಾಗಿ ಕಲಾಮೇಳಗಳು, ವಿಚಾರ ಸಂಕಿರಣಗಳು ನಡೆದವು. ಸಾವಿರ ಪುಟಕ್ಕೂ ಹೆಚ್ಚಿನ ಒಂದು ದೊಡ್ಡ ಸ್ಮರಣ ಗ್ರಂಥ ’ಹೊನ್ನ ಬಿತ್ತೇವು ಹೊಲಕ್ಕೆಲ್ಲ’ ಪ್ರಕಟವಾಯಿತು. ಜಿ. ನಾರಾಯಣ ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ೧೯೭೬ರಲ್ಲಿ, ಇಡೀ ಕರ್ನಾಟದ ತುಂಬ ಇರುವ ಜನಪದ ಕಲೆಗಳನ್ನು ಗುರುತಿಸುವ, ಕಲಾಪ್ರದರ್ಶನಗಳನ್ನು ಏರ್ಪಡಿಸುವ ಪ್ರಯತ್ನಗಳು ನಡೆದವು. ಅದರ ಫಲವಾಗಿ ’ಕರ್ನಾಟಕ ಜನಪದ ಕಲೆಗಳು’ (೧೯೭೭) ಎಂಬ ಕೃತಿ ಹೊರಬಂದಿತು. ಈ ಎಲ್ಲ ಚಟುವಟಿಕೆಗಳ ಹಿಂದೆ ಇದ್ದ ಗೊರುಚ, ಎಚ್. ಎಲ್. ನಾಗೇಗೌಡ ಮತ್ತವರ ಸ್ನೇಹಿತರ ಕೆಲಸಗಳು ಸ್ಮರಣೀಯ.

ಮುಂದೆ ೧೯೮೦ರಲ್ಲಿ ಈ ಮೇಲೆ ಹೆಸರಿಸಿದ ಹಿರಿಯರ ಪ್ರಯತ್ನದಿಂದಾಗಿಯೇ ’ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ’ ಹುಟ್ಟಿಕೊಂಡಿತು. ಜಾನಪದಕ್ಕೆ ಮೀಸಲಾದ ಎಚ್. ಎಲ್. ನಾಗೇಗೌಡರ ’ಜಾನಪದ ಪರಿಷತ್ತು’ (೧೯೭೯), ಕು.ಶಿ.ಹರಿದಾಸ ಭಟ್ಟರ ’ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ’ (೧೯೮೩) ಇವು ಅಸ್ತಿತ್ವಕ್ಕೆ ಬಂದವು. ಈ ಎಲ್ಲ ಪ್ರಯತ್ನಗಳ ಫಲವಾಗಿ ಜಾನಪದಶಾಸ್ತ್ರದ ಹೆಚ್ಚಿನ ಅಭ್ಯಾಸಕ್ಕೆ ನಾಂದಿಯಾಯಿತು.
*
ಕನ್ನಡ ಸಾಹಿತ್ಯದಲ್ಲಿ ಹೊಸ ಬೆಳವಣಿಗೆಗಳಿಗೆ ನಾಂದಿ:

ಜಾನಪದಶಾಸ್ತ್ರದ ಅಭ್ಯಾಸದಿಂದಾಗಿ ಕನ್ನಡ ಸಾಹಿತ್ಯದ ಅಭ್ಯಾಸದ ನಿಟ್ಟಿನಲ್ಲಿ ಅನೇಕ ಹೊಸ ದಾರಿಗಳು ತೆರೆದುಕೊಂಡವು. ಸಾಮಾನ್ಯರ ಸಾಹಿತ್ಯದೆಡೆ ಶಿಷ್ಟಸಾಹಿತ್ಯದ ವಿದ್ವಾಂಸರು ಲಕ್ಷಹರಿಸಿದರು. ದೇಸೀ ಚಿಂತನೆಗಳು ಬೆಳೆದು ಬಂದವು. ಜನಾಂಗಿಕ ಅಧ್ಯಯನಗಳಿಗೆ ನಾಂದಿಯಾಯಿತು. ಬಹುಸಂಸ್ಕೃತಿಗಳ ಅಭ್ಯಾಸದ ಕಡೆ ಲಕ್ಷ ಹರಿಯಿತು. ವಿಶೇಷವಾಗಿ ಸಂಸ್ಕೃತಿಯ ಅಧ್ಯಯನದೆಡೆ ಕನ್ನಡ ಸಾಹಿತ್ಯ ಕಣ್ಣು ತೆರೆಯಿತು. ಸಂಶೋಧನೆಯಲ್ಲಿ ಮೌಖಿಕ ಆಕರಗಳ ಬಳಕೆ ವ್ಯಾಪಕವಾಗಿ ಪ್ರಾರಂಭವಾಯಿತು.

ಮೌಖಿಕ ಪಠ್ಯಗಳ ಶೋಧ:

ಅಗಾಧ ಪ್ರಮಾಣದಲ್ಲಿ ಮೌಖಿಕ ಸಾಹಿತ್ಯದ ಪಠ್ಯಗಳು ಶೋಧಿತವಾದವು. ಜನಪದ ಹಾಲುಮತ ಮಹಾಕಾವ್ಯ, ಮಂಟೇಸ್ವಾಮಿ, ಜುಂಜಪ್ಪ, ಮಲೆಯ ಮಾದೇಶ್ವರ ಮುಂತಾದ ಬೃಹತ್ ಪಠ್ಯಗಳು ದೊರೆತು ಇಂದು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಸಾಹಿತ್ಯವನ್ನು ನೋಡುವ ದೃಷ್ಟಿಯನ್ನೇ ಬದಲಾಯಿಸಿವೆ.೧೫ನೇ ಶತಮಾನದಲ್ಲಿ ಹುಟ್ಟಿದ ಕೊಡೇಕಲ್ಲ ಸಾಹಿತ್ಯ ಲಿಖಿತ ರೂಪದಲ್ಲಿದ್ದರೂ ಅದು ಹಾಡಿನ ಪ್ರಕಾರಕ್ಕೆ ಸೇರಿದ ಸ್ವರವಚನ ಸಾಹಿತ್ಯವೆಂಬುದು ವಿಶೇಷಸಂಗತಿ. ಇದೇ ದಾರಿಯಲ್ಲಿಯೇ ಮುಂದೆ ಪ್ರತಿಭಾವಂತ ತತ್ತ್ವಪದಕಾರರ ಶೋಧಗಳು ನಡೆದು ಕಡಕೋಳ ಮಡಿವಾಳಪ್ಪ, ಶಿಶುನಾಳ ಶರೀಫರಂಥವರ ಹಾಡುಗಳ ಶಕ್ತಿ ಕನ್ನಡಕ್ಕೆ ದೊರೆಯಿತು. ಇಷ್ಟೆಲ್ಲ ಆಗಿ ಈಗ ಜಾನಪದ ವಿಶ್ವವಿದ್ಯಾಲಯದ ಅವಶ್ಯಕತೆ ಅರಿಯುವಲ್ಲಿಗೆ ಬಂದು ನಿಂತಿದ್ದೇವೆ.

ಜಾನಪದ ವಿಶ್ವವಿದ್ಯಾಲಯದ ಬೇಡಿಕೆ :

ಈಗ ಇಪ್ಪತ್ತು ವರ್ಷಗಳ ಹಿಂದಿನ ಮಾತು. ಪಂಚಾಯತರಾಜಗಳ ಹೊಸ ಆಡಳಿತವನ್ನು ಜಾರಿಗೆ ತರಲು ಕಾರಣರಾದ ಆಗಿನ ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದ ಶ್ರೀಮಾನ್ ನಜೀರ ಸಾಹೇಬರ ವಿನಂತಿಯ ಮೇರೆಗೆ, ಕನ್ನಡದ ಮೊದಲ ಜಾನಪದ ಪ್ರಾಧ್ಯಾಪಕರಾದ ಡಾ|ಜೀಶಂಪ ಅವರು ಜಾನಪದ ಸಂಗತಿಗಳ ಸಂವರ್ಧನೆ-ಸಂರಕ್ಷಣೆ ಹೇಗೆ ಎಂಬ ವಿಚಾರಗಳನ್ನು ಬರೆದು ೧೯೮೮ರಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತಾರೆ. ಆ ಬರಹದಲ್ಲಿ ಅವರು ಜಾನಪದ ವಿಶ್ವವಿದ್ಯಾಲಯದ ಅವಶ್ಯಕತೆಯನ್ನೂ ಮಂಡಿಸುತ್ತಾರೆ. ಆ ಸಾಲುಗಳು ಹೀಗಿವೆ: ಜಾನಪದ ಸಂರಕ್ಷಣೆಯ ದೃಷ್ಟಿಯಿಂದ, ಸಂವರ್ಧನೆಯ ದೃಷ್ಟಿಯಿಂದ ವ್ಯಾಪಕವಾದ ಯೋಜನೆಯನ್ನು ಹಾಕಿಕೊಂಡು ಕೆಲಸ ಮಾಡಬೇಕಾದ ಅಗತ್ಯ ಈಗ ತುಂಬ ಇದೆ. ಜಾನಪದದಂಥ ವ್ಯಾಪಕವಾದ ಕ್ಷೇತ್ರದಲ್ಲಿ ಸರಿಯಾದ ಸಂಶೋಧನೆ, ಅಧ್ಯಯನ ನಡೆಯಬೇಕಾದ ಬೇರೆ ಬೇರೆ ಇಲಾಖೆಗಳನ್ನೊಳಗೊಂಡ ಒಂದು ವಿಶ್ವವಿದ್ಯಾಲಯವನ್ನೇ ಸ್ಥಾಪಿಸಿ, ಪ್ರಾಚೀನ ಮೌಖಿಕ ಜ್ಞಾನದ ಪ್ರಯೋಜನವನ್ನು ಪಡೆಯಬಹುದು. (ಜೀಶಂಪ, ೧೯೮೮) ಇಪ್ಪತ್ತು ವರ್ಷಗಳ ಹಿಂದೆ ಕಂಡ ಜೀಶಂಪ ಅವರ ಕನಸು ಇಂದು ಗೊ. ರು. ಚನ್ನಬಸಪ್ಪ ಅವರ ಪ್ರಯತ್ನದಿಂದ ನನಸಾಗುವ ದಾರಿಯಲ್ಲಿದೆ ಎಂಬುದು ಸಂತೋಷದ ಸಂಗತಿ.

ಲಿಖಿತ ಮೂಲದ ಶಿಸ್ತುಗಳ ಅಧ್ಯಯನದ ವಿವಿಗಳು:

ಲಿಖಿತ ಮೂಲದ ಶಿಸ್ತುಗಳನ್ನೊಳಗೊಂಡ ಈಗಿನ ವಿಶ್ವವಿದ್ಯಾಲಯಗಳು ಕೊಡುವ ಶಿಕ್ಷಣವು- ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಸಶಕ್ತವಾಗಿರುವ ಸಮುದಾಯಗಳು ಶಿಕ್ಷಣ ಪಡೆಯಲು ಹೆಚ್ಚು ಅನುಕೂಲಗಳನ್ನು ಒದಗಿಸುತ್ತ ಬಂದಿದೆ. ಹಾಗೆ ಸಶಕ್ತವಾಗಿರುವ ಸಮೂಹದಲ್ಲೂ ವಿಶೇಷವಾಗಿ ಗಂಡುಮಕ್ಕಳಿಗೆ ಮಾತ್ರ ಅದು ಹೆಚ್ಚು ಅನುಕೂಲತೆಗಳನ್ನು ಒದಗಿಸಿದೆ. ಜಾನಪದ ವಿಶ್ವವಿದ್ಯಾಲಯವು ಈ ತಾರತಮ್ಯವನ್ನು ಮೊದಲು ಹೋಗಲಾಡಿಸಲು ಪ್ರಯತ್ನಿಸುತ್ತದೆ. ಗಂಡಸರಂತೆ ಹೆಣ್ಣುಮಕ್ಕಳೂ ಜಾನಪದ ಕ್ಷೇತ್ರದಲ್ಲಿ ಪ್ರತಿಭಾವಂತರಾಗಿ ಕಾಣುತ್ತಾರೆ. ಹೀಗಾಗಿ ಜಾನಪದ ವಿಶ್ವವಿದ್ಯಾಲಯವು ಸ್ತ್ರೀಯರ ಜ್ಞಾನವನ್ನೂ ಒಳಗೊಂಡ ಒಂದು ವಿಶೇಷ ವಿಶ್ವವಿದ್ಯಾಲಯ ಎನಿಸುತ್ತದೆ. ಇದು ಕರ್ನಾಟಕದಲ್ಲಿ ಅಷ್ಟೇ ಅಲ್ಲ ಭಾರತದಲ್ಲಿಯೇ ಪ್ರಥಮ ಜಾನಪದ ವಿಶ್ವವಿದ್ಯಾಲಯ ಎನಿಸುತ್ತದೆ. ಹಾಗೆ ನೋಡಿದರೆ ಪ್ರಪಂಚದಲ್ಲಿಯೂ ಇದು ಮೊದಲನೆಯದೇ ಆಗುತ್ತದೆ.

ಸಮಾಜದ ಕಟ್ಟಕೊನೆಯ ವ್ಯಕ್ತಿಯನ್ನು ಒಳಗೊಳ್ಳುವ ವಿಶ್ವವಿದ್ಯಾಲಯ:

ಜಾನಪದವೆಂದರೆ ಮನುಷ್ಯ ಬದುಕಿನ ಅಭ್ಯಾಸವಾಗಿರುವುದರಿಂದ ಅದಕ್ಕೆ ಒಂದು ಸೀಮಿತ ಪ್ರದೇಶ, ಸೀಮಿತ ಜನಾಂಗ ಇವುಗಳ ಮಿತಿ ಇಲ್ಲ. ಜಾನಪದಶಾಸ್ತ್ರವು ಎಲ್ಲ ಜನಾಂಗಗಳ ಬದುಕಿನ ರೀತಿಯಾಗಿದೆ. ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಶಕ್ತರಲ್ಲದ, ಈ ಎಲ್ಲ ಸಂಗತಿಗಳಲ್ಲಿ ಅವಕಾಶವಂಚಿತರಾದ ಎಲ್ಲ ಜನಸಮುದಾಯಗಳ ಬದುಕಿನ ಸಂಗತಿಗಳನ್ನು ಜಾನಪದ ಅಭ್ಯಾಸ ಹೆಚ್ಚಾಗಿ ಗಮನಿಸುವುದರಿಂದ, ’ಜಾನಪದ ವಿಶ್ವವಿದ್ಯಾಲಯ’ ಎಂದರೆ ಅದು ಸಮಾಜದ ಕಟ್ಟಕೊನೆಯಲ್ಲಿರುವ ಜನರನ್ನು ಒಳಗೊಂಡು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಬರುತ್ತದೆ.

ವಿಜ್ಞಾನದ ದವಡೆಗೆ ಸಿಕ್ಕು ನುಗ್ಗಾಗಿದೆ ಬದುಕು:

ನಮ್ಮ ಬದುಕು ವಿಜ್ಞಾನದ ದವಡೆಗೆ ಸಿಕ್ಕು ತೀವ್ರವಾಗಿ ಬದಲಾವಣೆಯಾಗುತ್ತಿದೆ. ಈ ಬದಲಾವಣೆ ಬದುಕಿಗೆ ಸೌಲಭ್ಯಗಳನ್ನು ಒದಗಿಸುತ್ತಿದೆ ನಿಜ, ಆದರೆ ಅದರಿಂದ ನಮ್ಮ ಬದುಕು ತೀವ್ರವಾಗಿ ಮೌಲ್ಯಹೀನವಾಗುತ್ತಿದೆ. ಭೂಮಿಯ ಪರಿಸರವೇ ಕಲುಷಿತಗೊಂಡು ಇಂದು ಬದುಕಿಗೆ ಮಾರಕವಾಗಿ ಪರಿಣಮಿಸಿದೆ. ಇದು ಇಂದು ವಿಶ್ವಮಟ್ಟದಲ್ಲಿ ಚರ್ಚೆಯ ಸಂಗತಿಯಾಗಿದೆ. ಮಾನವನ ಕೃತ್ಯಗಳಿಂದ ಇಂದು ಪರಿಸರ ಕಲುಷಿತಗೊಂಡಿರುವುದರಿಂದ ನಮ್ಮ ಪ್ರಾಣ ಉಳಿಯಲು ಬೇಕಾದ ಶುದ್ಧವಾದ ಗಾಳಿ, ನೀರು, ಆಹಾರ ಇವು ಕೆಟ್ಟುಹೋಗುತ್ತಿವೆ. ಇದರಿಂದ ಮಾನವ ಕುಲದ ಆರೋಗ್ಯವೇ ಹಾಳಾಗುತ್ತಿದೆ. ಇದು ಜೀವಿಗಳ ಸಂತತಿಗಳಿಗೆ ಮಾರಕವಾಗಿ ಪರಿಣಮಿಸುತ್ತಿದೆ.

ಬದುಕಿನ ಮೌಲ್ಯಗಳ ಸಂರಕ್ಷಣೆ:

ಇಂತಹ ಸಮಯದಲ್ಲಿ ನಮ್ಮ ಪೂರ್ವಜರ ಬದುಕಿನ ಮಾದರಿಗಳು, ಚಿಂತನೆಗಳು ನಮ್ಮ ಸಹಾಯಕ್ಕೆ ಬರುತ್ತವೆ. ಗ್ರಾಮಾಂತರ ಬದುಕಿನ ಪರಿಗಳನ್ನು ಅರಿಯುವ, ಆಯುವ ಮತ್ತು ಅಧ್ಯಯನಕ್ಕೆ ಅಳವಡಿಸುವ ಉದ್ದೇಶಗಳು ನಮಗೆ ಇಂದು ಮುಖ್ಯವೆನಿಸುತ್ತವೆ. ಭಾರತೀಯ ಸಂಸ್ಕೃತಿಯ ಅನನ್ಯತೆಯನ್ನು, ನಮ್ಮ ಪರಂಪರೆಯ ಜ್ಞಾನದ ಅರಿವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಲು, ಅವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಜಾನಪದಶಾಸ್ತ್ರಾಭ್ಯಾಸ ಅವಶ್ಯವೆನಿಸುತ್ತದೆ. ’ಜಾನಪದ ವಿಶ್ವವಿದ್ಯಾಲಯ’ ದ ಸ್ಥಾಪನೆ ಅದಕ್ಕಾಗಿ ತುರ್ತೆನಿಸುತ್ತದೆ.

ಕೈಗಾರಿಕೆಯ ನೆಪದಲ್ಲಿ ದೇಸೀ ಉದ್ಯೋಗಗಳ ನಾಶ:

ನಾವೀಗ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣಗಳ ಗುಂಗಿನಲ್ಲಿದ್ದೇವೆ. ಇವು ನಮ್ಮ ಬದುಕನ್ನೆಲ್ಲ ಹಾಳುಮಾಡುತ್ತಿವೆ ಎಂದು ಹಲಬುತ್ತಿದ್ದೇವೆ. ಆದರೆ ಭಾರತ ಸ್ವಾತಂತ್ರ್ಯದ ಜೊತೆಗೆ ಸೌಲಭ್ಯ ಮತ್ತು ಸುಧಾರಣೆಗಳ ಹೆಸರಿನಲ್ಲಿ ನಮ್ಮ ದೇಶಕ್ಕೆ ಕಾಲಿಟ್ಟದ್ದು ಕೈಗಾರಿಕಾ ಕ್ರಾಂತಿಯ ಹೆಸರಿನಲ್ಲಿ ಯಾಂತ್ರೀಕರಣ. ಯಾಂತ್ರೀಕರಣ ಪ್ರವೇಶಿಸಿ ಗ್ರಾಮೀಣ ಬದುಕಿಗೆ ಆಸರೆಯಾದ ಸ್ವಾವಲಂಬಿ ಉದ್ಯೋಗಗಳನ್ನು ಹಾಳು ಮಾಡಿತು. ಪರಾವಲಂಬಿಗಳಾಗುವಂತೆ ಮಾಡಿತು. ಇದರಿಂದಾಗಿ ನಮ್ಮ ಗ್ರಾಮಾಂತರ ಪ್ರದೇಶದ ಕಸುಬುದಾರರ, ಕುಶಲಕರ್ಮಿಗಳ ಸಂಸಾರಗಳು ದಿವಾಳಿ ಎದ್ದವು.

ಜಾನಪದ ವಿಶ್ವವಿದ್ಯಲಾಯದ ಅಧ್ಯಯನ/ತರಬೇತಿ ವಿಬಾಗಗಳು ಹೇಗಿರಬೆಕು:

ಜಾನಪದ ವಿಶ್ವವಿದ್ಯಾಲಯದಲ್ಲಿ ಗ್ರಾಮೀಣ ಬದುಕಿನ ಬಹುಮುಖ್ಯ ಸಂಗತಿಗಳ ಅಧ್ಯಯನ, ತರಬೇತಿ, ಕಲಿಕೆ, ಪ್ರಸಾರಗಳು ನಡೆಯುವಂತೆ ವ್ಯವಸ್ಥೆಯಾಗಬೇಕು. ಅಲ್ಲಿ ಶಿಕ್ಷಣ ಕೊಡಲು ಗ್ರಾಮೀಣ ಪ್ರತಿಭಾವಂತರಿಗೆ ನೇರವಾಗಿ ಅವಕಾಶಗಳನ್ನು ಒದಗಿಸಿ ಕೊಡಬೇಕು. ಆ ನಿಟ್ಟಿನಲ್ಲಿ ಇಲ್ಲಿ ಒಂದು ಸಾಮಾನ್ಯ ನೋಟಕ್ಕೆ ೪ ಭಾಗಗಳಲ್ಲಿ ೩೧ ಅಧ್ಯಯನ/ತರಬೇತಿ ವಿಭಾಗಗಳನ್ನು ಗುರುತಿಸಿಕೊಂಡು, ಒಂದೊಂದು ವಿಭಾಗಗದಲ್ಲಿ ಏನೇನು ಸೇರಬೇಕು ಎಂದು ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ. ಇದರಿಂದ ಜಾನಪದ ವಿಶ್ವವಿದ್ಯಾಲಯದ ಒಂದು ಸಾಮಾನ್ಯ ಕಲ್ಪನೆ ಬರಲು ಸಾಧ್ಯವಾಗುತ್ತದೆ.
*
೧. ಕಸಬು/ಕರಕುಶಲ ಕಲಾ ವಿಭಾಗಗಳು:

’ಜಾನಪದ ವಿಶ್ವವಿದ್ಯಾಲಯ’ ವೊಂದು ಪ್ರಾರಂಭವಾದರೆ ಅಲ್ಲಿ ಮುಖ್ಯವಾದ ಕಲಿಕೆಯ ವಿಭಾಗಗಳು ನಮ್ಮ ಪರಂಪರೆಯ ದೇಸೀ ಕಸುಬುಗಳಿಗೆ, ಕರಕುಶಲ ಕಲೆಗಳಿಗೆ ಸಂಬಂಧಿಸಿರಬೇಕಾದುದು ಅವಶ್ಯ. ಆಗ ನೇರವಾಗಿ ಗ್ರಾಮಾಂತರ ಪ್ರದೇಶದ ದೇಸೀ ಕಸುಬುದಾರ ಮನೆತನದ ಪ್ರತಿಭಾವಂತರಿಗೆ ಅವಕಾಶಗಳು ದೊರೆಯುತ್ತವೆ. ಮತ್ತು ಈ ಕೈಸಬುಗಳನ್ನು ಕಲಿತ ಭಿನ್ನ ಸಮೂಹದ ಯುವಕರು ಕೂಡ ತಮ್ಮ ಬದುಕನ್ನು ತಾವೇ ನಿಭಾಯಿಸುವ ಸ್ವಾವಲಂಬಿ ಉದ್ಯೋಗಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ಇದರಿಂದ ಸ್ವಾವಲಂಬಿ ಭಾರತದ ನಿರ್ಮಾಣ ಗೈಯಲು ಅನುವಾಗುತ್ತದೆ.
ಈ ಹಿನ್ನೆಲೆಯಲ್ಲಿ ’ದೇಸೀ ತಾಂತ್ರಿಕ’ (ದೇಸೀ ಎಂಜಿನಿಯರಿಂಗ್) ವಿಷಯಗಳೆನಿಸುವ ಗ್ರಾಮೀಣ ಕಸುಬು ಮತ್ತು ಕರಕುಶಲ ಕಲೆಗಳಿಗೆ ಸಂಬಂಧಿಸಿದಂತೆ ಜಾನಪದ ವಿಶ್ವವಿದ್ಯಾಲಯದಲ್ಲಿ ವಿಭಾಗಗಳನ್ನು ತೆರೆದು- ತರಬೇತಿ, ಉತ್ಪನ್ನ, ಮಾರಾಟ ಮತ್ತು ಅಧ್ಯಯನಗಳು ನಡೆಯಬೇಕಾದ ಅಗತ್ಯವಿದೆ.
೧. ಶಿಲ್ಪಕಲಾ ವಿಭಾಗ : ಕಲ್ಲು ಇಲ್ಲಿಯ ಮೂಲ ವಸ್ತು. ಇವತ್ತಿಗೂ ಅಭಿಜಾತ ಶಿಲ್ಪಕಲೆ ಎಂದು ಹೇಳಿಕೊಳ್ಳುವಲ್ಲಿಯೂ ಸಾಮಾನ್ಯ ಕಲ್ಲಕುಟಿಗನೇ ನಮಗೆ ಕಾಣುತ್ತಾನೆ. ಅದಕ್ಕಾಗಿ ಇವತ್ತು ಶಿಲ್ಪಕಲೆಗಳು ಎಂದು ಹೇಳುವ ದೊಡ್ಡ ಪ್ರಸಿದ್ಧಿಯ ಶಿಲ್ಪಕಲೆಗಳೂ ಕೂಡ ಅವು ಮೂಲದಲ್ಲಿ ಗ್ರಾಮಾಂತರ ಕಲಾವಿದರಿಂದಲೇ ತಯಾರಿಸಲ್ಪಟ್ಟವಾಗಿವೆ. ಹೀಗಾಗಿ ಗೊಮ್ಮಟೇಶ್ವರನಂಥ ಶಿಲ್ಪವು ಕೂಡ ದೇಸೀ ಕಲೆಯೇ ಆಗುತ್ತದೆ. ಅದಕ್ಕಾಗಿ ಇಲ್ಲಿ ಮತ್ತೆ ಗ್ರಾಮಾಂತರ ಪ್ರದೇಶದ ಕಲ್ಲುಕುಟಿಗ ಕಲಾವಿದರನ್ನೇ ಶೋಧಿಸಿ ಬಳಸಿಕೊಂಡರೆ ಈ ಕಲೆ ಮತ್ತು ಉದ್ಯೋಗ ಎರಡೂ ಬೆಳೆಯುತ್ತವೆ.

೨. ವಾಸ್ತುಶಿಲ್ಪ ವಿಭಾಗ: ಕಲ್ಲು ಒಡೆಯುವ ಮತ್ತು ಕಟ್ಟಡ ನಿರ್ಮಿಸುವ ಕೆಲಸಗಳು ಇಲ್ಲಿ ಸೇರುತ್ತವೆ. ಒಡ್ಡರು ಮತ್ತು ಗೌಂಡಿ ಕೆಲಸಗಳು ಇಲ್ಲಿ ಸೇರಬೇಕು. ಇಂದು ಕಟ್ಟಡ ಕಾರ್ಮಿಕರ ಬೇಡಿಕೆ ವಿಪರೀತವಾಗಿ ಹೆಚ್ಚಿದೆ. ಉತ್ತಮ ಕಟ್ಟಡ ನಿರ್ಮಾಪಕರು, ಅದರಲ್ಲಿಯೇ ಪ್ರತಿಭೆವುಳ್ಳವರು ಉತ್ತಮ ವಾಸ್ತುಶಿಲ್ಪಿಗಳಾಗಿ ಬೆಳೆಯುವ ಸಾಧ್ಯತೆ ಇರುತ್ತದೆ.

೩. ಕಂಬಾರಿಕೆ ವಿಭಾಗ: ಕಬ್ಬಿಣದ ಕೆಲಸಗಳು ಇಲ್ಲಿ ಸೇರುತ್ತವೆ.

೪. ಕುಂಬಾರಿಕೆ ವಿಭಾಗ: ಮಣ್ಣನ್ನು ಬಳಸಿ ಮಾಡುವ ಕೆಲಸಗಳು ಇಲ್ಲಿ ಸೇರಬೇಕು. ಆಧುನಿಕ ಜೀವನ ಶೈಲಿಗೆ ಅನುಕೂಲಕರವಾದ ಮತ್ತು ಮನೆಯ ಅಲಂಕರಣಕ್ಕಾಗಿ ಮಣ್ಣಿನ ಪಾತ್ರೆಗಳನ್ನು ಬಳಸಬಹುದಾಗಿದೆ.

೫. ಬಡಿಗತನ ವಿಭಾಗ: ಕಟ್ಟಿಗೆ ಬಳಸಿ ಮಾಡುವ ಕೆಲಸಗಳು ಇಲ್ಲಿ ಸೇರಬೇಕು. ಈ ಉದ್ಯೋಗವಂತೂ ಇವತ್ತು ಭಾರೀ ಬೇಡಿಕೆಯಲ್ಲಿದೆ.

೬. ಅಕ್ಕಸಾಲಿ ವಿಭಾಗ: ಲೋಹದ ಕುಶಲಕರ್ಮ ಕೆಲಸಗಳು. ಇದು ಕೂಡ ಬೇಡಿಕೆಯ ಉದ್ಯೋಗವೇ ಆಗಿದೆ.

೭. ಮೇದಾರಿಕೆ ವಿಭಾಗ: ಬಿದಿರು ಮುಂತಾದ ಸಿಬಿಕೆಯಿಂದ ಬುಟ್ಟಿ, ಚಾಪೆ, ಮರ, ಬೀಸಣಿಕೆ ಇಂತಹ ಮನೆ ಬಳಕೆಯ ವಸ್ತುಗಳ ತಯಾರಿಕೆ ಮತ್ತು ಮಾರಾಟಗಳು ಇಲ್ಲಿ ಸೇರಬೇಕು. ಇವನ್ನು ಇವತ್ತಿಗೂ ಹೆಚ್ಚು ಪ್ರಚಾರಗೊಳಿಸಲು ಸಾಧ್ಯವಿದೆ.

೮. ಚಮ್ಮಾರಿಕೆ ವಿಭಾಗ: ಚರ್ಮದಿಂದ ವಸ್ತುಗಳ ತಯಾರಿಕೆ ಮತ್ತು ಮಾರಾಟ. ಇದೂ ಕೂಡ ಅಷ್ಟೇ ಬೇಡಿಕೆ ಇರುವ ವಿಭಾಗ.

೯. ನೇಕಾರಿಕೆ ವಿಭಾಗ: ಬಟ್ಟೆ, ಕಂಬಳಿಗಳನ್ನು ನೇಯುವ, ಬಣ್ಣ ಹಾಕುವ, ಮಾರಾಟದ ವ್ಯವಸ್ಥೆ ಇಲ್ಲಿ ಸೇರಬೇಕು.

೧೦. ವೇಷ-ಭೂಷಣ ವಿಭಾಗ: ಸಿಂಪಿಗನ ಕೆಲಸಗಳು ಇಲ್ಲಿ ಮುಖ್ಯ. ಫ್ಯಾಶನ್ ಡಿಸೈನ್ ಮತ್ತು ಹೊಲಿಗೆಗಳು- ವೇಷಭೂಷಣ, ಕೌದಿ, ಕುಂಚಿಗೆ-ಕುಲಾಯಿ ಮುಂತಾದವುಗಳ ತಯಾರಿಕೆ ಇಲ್ಲಿ ಸೇರಬೇಕು.
*
೨. ದೇಸೀ ವಿಜ್ಞಾನ ವಿಭಾಗಗಳು:

ದೇಸೀ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ವೈದ್ಯಕೀಯ, ಮತ್ತು ಆಹಾರ-ಪಾನೀಯ ಇವು ಜನಪದರ ವೈಜ್ಞಾನಿಕ ತಿಳುವಳಿಕೆಗಳೆನಿಸುತ್ತವೆ. ಗ್ರಾಮೀಣ ಬದುಕಿನ ಅನುಭವದ ವೈಜ್ಞಾನಿಕ ಚಿಂತನೆಗಳು ಈ ವಿಷಯಗಳಲ್ಲಿ ಹುದುಗಿರುತ್ತವೆ. ಅನಾರೋಗ್ಯದಿಂದ ಕಾಪಾಡುವ ವೈದ್ಯಕೀಯದ ಅರಿವು, ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಹೋಗಲು ಅವಶ್ಯವಾದ ಆಹಾರ-ಪಾನೀಯ ಇವುಗಳ ಅರಿವು ಅಧ್ಯಯನಕ್ಕೆ ಒಳಗಾಗಬೇಕಾದುದು ಅವಶ್ಯ. ಜೊತೆಗೆ ಇವುಗಳಿಗೆ ಸಂಬಂಧಿಸಿದಂತೆ ಉತ್ತಮ ಆಹಾರ ಬೆಳೆಗಳನ್ನು ಕೃಷಿಯಿಂದ ಮತ್ತು ಹೈನುಗಾರಿಕೆಯಿಂದ ಪಡೆಯುವುದು ಹೇಗೆ, ಕೃಷಿ ಮತ್ತು ಹೈನುಗಾರಿಕೆ ಗೈಯುವುದು ಹೇಗೆ ಮತ್ತು ಇವುಗಳಿಗೆ ಸಂಬಂಧಿಸಿದ ಇತರ ಸಂಗತಿಗಳೆಲ್ಲ ಇಲ್ಲಿ ಅಧ್ಯಯನಕ್ಕೆ ಅಳವಡುವುದು ಮುಖ್ಯ. ಅದಕ್ಕಾಗಿ ಇಲ್ಲಿಯ ವಿಭಾಗಗಳು ಹೀಗಿರಬಹುದಾಗಿದೆ:
೧. ದೇಸೀ ಕೃಷಿ ವಿಭಾಗ
೨. ದೇಸೀ ತೋಟಗಾರಿಕೆ ವಿಭಾಗ
೩. ಹೈನುಗಾರಿಕೆ ವಿಭಾಗ
೪. ದೇಸೀ ವೈದ್ಯ ವಿಭಾಗ
೫. ದೇಸೀ ಪಶುವೈದ್ಯ ವಿಭಾಗ
೬ ದೇಸೀ ಆಹಾರ-ಪಾನೀಯ ವಿಭಾಗ
*
೩. ಮನರಂಜನಾ ದೇಸೀಕಲಾ ವಿಭಾಗಗಳು:

ಬದುಕಿನ ವಿಧಿಕ್ರಿಯೆಗಳ ಅಂಗವಾಗಿ ಬಳಕೆಯಾಗುವ ಕಲೆಗಳು ಮನರಂಜನೆ ಯನ್ನೂ ಮುಖ್ಯವಾಗಿಸಿಕೊಂಡಿರುತ್ತವೆ. ಪ್ರತಿಭಾವಂತರ ಪ್ರದರ್ಶನಗಳಾಗಿರುವ ಇವುಗಳ ಮೇಲೆಯೇ ಬುದುಕು ಅವಲಂಬನೆಯಾಗಿರುತ್ತದೆ. ಕಣ್ಣು ಕಿವಿಗಳ ಮೂಲಕ ಒಳಹೊಕ್ಕು ಮನಸ್ಸನ್ನು ತಣಿಸುವ ಕಲೆಗಳು ಜಾನಪದದಲ್ಲಿ ಸಾಕಷ್ಟು ಇವೆ. ಹಾಡು, ಕುಣಿತ, ಅಭಿನಯ ಇವು ಮನುಷ್ಯನಿಗೆ ನೀರು ಗಾಳಿಗಳಷ್ಟೆ ಅವಶ್ಯ. ಅವು ನಮ್ಮ ಮನಸ್ಸನ್ನು ತಣಿಸುತ್ತವೆ, ಚೈತನ್ಯವನ್ನು ತುಂಬುತ್ತವೆ, ಬದುಕಿಗೆ ಆಸೆಯನ್ನು ಕೊಡುತ್ತವೆ. ಹೀಗಾಗಿ ಬದುಕಿನ ಮುಖ್ಯಸಂಗತಿಗಳಲ್ಲೆಲ್ಲ ಹಾಡು ಕುಣಿತಗಳು ಹುಟ್ಟಿಕೊಂಡಿವೆ.
ಇಂದು ಬುದುಕು ಬದಲಾದಂತೆ ಈ ಕಲೆಗಳು ಪ್ರಯೋಗವಾಗುವ ಸಂದರ್ಭಗಳೂ ಮರೆಯಾಗುತ್ತಿವೆ. ಮಾನವ ಬದುಕಿನ ಅಗಾಧ ಜ್ಞಾನವನ್ನು ತುಂಬಿಕೊಂಡ ಈ ಸಂದರ್ಭಗಳ ಕಲೆಗಳನ್ನು ಕಲಿಕೆ ಮತ್ತು ಅಧ್ಯಯನಕ್ಕೆ ಅಳವಡಿಸುವ ಅವಶ್ಯಕತೆ ಇದೆ. ಅವು ಮುಂದಿನ ಪೀಳಿಗೆಗೆ ದಾರಿದೀಪಗಳಾಗುವ ಸಾಧ್ಯತೆ ಇದೆ. ಪ್ರಮುಖವಾದ ಹಾಡಿನ ಮತ್ತು ಕುಣಿತದ ಪ್ರಕಾರಗಳನ್ನು ಗುರುತಿಸಿ ಅವನ್ನು ಕಲಿಸುವ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವೂ ಇದೆ.
ಹಾಗೆಯೇ ಪ್ರದರ್ಶನ ಕಲೆಗಳಲ್ಲಿ ಇರುವ ರಂಗ ಪ್ರಕಾರ ಮತ್ತು ಬೀದಿ ಪ್ರಕಾರಗಳನ್ನು ಇಂದು ಹೆಚ್ಚು ಪ್ರಚಾರಗೊಳಿಸಲಾಗುತ್ತಿದೆ. ಇದು ಗ್ರಾಮೀಣ ಭಾಗದ ಪ್ರತಿಭಾವಂತರಿಗೆ ಒಂದು ದೊಡ್ಡ ಅವಕಾಶ. ರಂಗ ಪ್ರಕಾರದ ಬಯಲಾಟಗಳನ್ನು, ಗೊಂಬೆಯಾಟಗಳನ್ನು ಅಧುನಿಕ ಬದುಕಿನ ಸಂಗತಿಗೆ ಒಗ್ಗಿಸಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ಮತ್ತೆ ಗ್ರಾಮೀಣ ಪ್ರತಿಭಾವಂತರಿಗೆ ಇಲ್ಲಿ ಅವಕಾಶಗಳು ದೊರೆಯುವಂತೆ ಆಗಬೇಕು.

೧. ಚಿತ್ರಕಲಾ ವಿಭಾಗ: ರಂಗೋಲಿ, ಹಚ್ಚೆ, ರೇಖಾಚಿತ್ರ ಕಲೆಗಳು, ಸಾಂಪ್ರದಾಯಿಕ ವಿಧಿಕ್ರಿಯಾಚರಣೆಗಳಲ್ಲಿ ಬಿಡಿಸುವ ಚಿತ್ರಗಳು-ಹೀಗೆ ಗ್ರಾಮೀಣ ಭಾಗದ ಬದುಕಿನಲ್ಲಿರುವ ಚಿತ್ರಕಲಾ ಮಾದರಿಗಳು ಇಲ್ಲಿ ಸೇರಬೇಕು.

೨. ಸಂಗೀತ ವಿಭಾಗ: ಹಾಡುಗಾರಿಕೆ ಮತ್ತು ವಾದ್ಯಗಾರಿಕೆಗಳು ಇಲ್ಲೆ ಸೇರಬೆಕು.

೩. ನೃತ್ಯ-ಕುಣಿತ ವಿಭಾಗ: ಗ್ರಾಮೀಣ ನೃತ್ಯ ಕಲೆಗಳನ್ನು ಗುರುತಿಸಿ, ಕಲಿಕೆ- ಬೋಧನೆಗಳು ಇಲ್ಲಿ ನಡೆಯಬೇಕು.

೪. ಬಯಲಾಟ ವಿಭಾಗ: ಉತ್ತರ ಕರ್ನಾಟಕದ ಬಯಲಾಟಗಳಾದ ದೊಡ್ಡಾಟ, ಸಣ್ಣಾಟ-ಪಾರಿಜಾತ, ಬೀದಿ ಬಯಲಾಟಗಳಲ್ಲದೆ, ದಕ್ಷಿಣ ಕರ್ನಾಟಕದ ಯಕ್ಷಗಾನ-ಬಯಲಾಟಗಳೂ ಇಲ್ಲಿ ಸೇರಬೇಕು. ಅಭಿನಯ, ನಿರ್ದೇಶನ, ರಂಗಪರಿಕರಗಳ ತಯಾರಿಕೆ ಇಲ್ಲಿ ಸೇರಬೇಕಾದುದು ಅವಶ್ಯ.

೫. ಯಕ್ಷಗಾನ ವಿಭಾಗ: ಕರಾವಳಿ ಭಾಗದ ಯಕ್ಷಗಾನ ಮತ್ತು ಯಕ್ಷಗಾನ-ತಾಳಮದ್ದಳೆಗಳು ಮಾತ್ರ ಈ ವಿಭಾಗಕ್ಕೆ ಸೇರಬೇಕು. ಅಭಿನಯ, ನಿರ್ದೇಶನ, ರಂಗಪರಿಕರಗಳ ತಯಾರಿಕೆ ಇಲ್ಲಿ ಸೇರಬೇಕಾದುದು ಅವಶ್ಯ.

೬. ಗೊಂಬೆಯಾಟಗಳ ವಿಭಾಗ: ಎಲ್ಲ ಪ್ರಕಾರದ ಗೊಂಬೆಯಾಟಗಳೂ ಇಲ್ಲಿ ಸೇರಬೇಕು. ಗೊಂಬೆಗಳ ತಯಾರಿಕೆ ಮತ್ತು ಕಲಾ ಪ್ರದರ್ಶನಗಳೂ ಈ ಪಠ್ಯದಲ್ಲಿ ಸೇರುತ್ತವೆ.

೭. ಪ್ರದರ್ಶನ ಕಲೆಗಳ ವಿಭಾಗ: ಬೀದಿಯ ಮೇಲೆ ಪ್ರದರ್ಶನಗೊಳ್ಳುವ ವೃತ್ತಿ ಮತ್ತು ಹವ್ಯಾಸಿ ಕಲೆಗಳು.

೪. ದೇಸೀ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ವಿಭಾಗಳು:

ಜಾನಪದ ಅಧ್ಯಯನ ವಿಭಾಗಗಳಲ್ಲಿ ಎಂಟು ವಿಷಯಗಳನ್ನು ಗುರುತಿಸಿಕೊಳ್ಳಲು ಸಾಧ್ಯವಿದೆ. ಸಾಹಿತ್ಯ, ಸಂಸ್ಕೃತಿ, ಜನಾಂಗೀಯ ಅಧ್ಯಯನ ಇಂತಹ ಗಂಭೀರ ಅಧ್ಯಯನಗಳು ಭಾರತದ ಗ್ರಾಮೀಣ ಪ್ರದೇಶಗಳ ಸಾಂಸ್ಕೃತಿಕ ಕೊಡುಗೆಳಾಗಿ, ಜ್ಞಾನದ ಶಾಖೆಗಳಾಗಿ ಮಹತ್ವದ ಅಭ್ಯಾಸಕ್ಕೆ ನಾಂದಿ ಹಾಡುತ್ತವೆ. ಅವುಗಳನ್ನು ಈ ಕೆಳಗಿನಂತೆ ಗುರುತಿಸಿಕೊಳ್ಳಬಹುದಾಗಿದೆ.

೧. ಜಾನಪದ ಸಾಹಿತ್ಯ ಅಧ್ಯಯನ
೨. ಜಾನಪದ ಸಾಮಾಜಿಕ ಅಧ್ಯಯನ
೩. ಬುಡಕಟ್ಟು ಅಧ್ಯಯನ
೪. ಜನಾಂಗೀಯ ಅಧ್ಯಯನ
೫. ಜಾನಪದ ಸಂಸ್ಕೃತಿ ಅಧ್ಯಯನ
೬. ಜಾನಪದ ನ್ಯಾಯ-ನೀತಿಶಾಸ್ತ್ರ ಅಧ್ಯಯನ
೭. ಜಾನಪದ ಅಂತರ್ ಶಿಸ್ತೀಯ ಅಧ್ಯಯನ
೮. ಜಾನಪದ ಆಟ-ಪಾಠಗಳ ಅಧ್ಯಯನ

*

ಶಾಲಾ ಪಠ್ಯಗಳಲ್ಲಿ ಜಾನಪದ ಜ್ಞಾನ ಕಲಿಕೆಯ ಸೇರ್ಪಡೆ:

ಈಗಿನ ಲಿಖಿತ ಮೂಲದ ಜ್ಞಾನ ಬೋಧನೆಯ ಅವಕಾಶವಿರುವ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವ, ಸಂಶೋಧಿಸುವ ವಿಷಯಗಳಿಗೆ ಸಹಾಯಕವಾಗಿ ಇಂದಿನ ಪ್ರಾಥಮಿಕ ಶಾಲೆಗಳಿಂದ ಕಾಲೇಜುಗಳವರೆಗೆ ಶಿಕ್ಷಣ ಸಂಸ್ಥೆಗಳು ಬೆಳೆದು ನಿಂತುದನ್ನು ನಾವು ಕಾಣುತ್ತೇವೆ. ಜಾನಪದದ ಅಭ್ಯಾಸ ಅನಾವರಣಗೊಂಡುದು ಉನ್ನತ ಶಿಕ್ಷಣವನ್ನು ಕೊಡುವ ವಿಶ್ವವಿದ್ಯಾಲಯಗಳ ಪ್ರಾಂಗಣಗಳಲ್ಲಿ. ಈಗ ಜಾನಪದದ ಅಭ್ಯಾಸವು ಪಿಎಚ್.ಡಿ. ಮತ್ತು ಎಂ.ಎ. ಪದವಿಗಳಿಗೆ ಸೀಮಿತವಾಗಿದೆ. ಅದನ್ನು ಪದವಿ, ಹೈಸ್ಕೂಲ್, ಮಾಧ್ಯಮಿಕ ಮತ್ತು ಪ್ರಾಥಮಿಕ ಮಟ್ಟದ ತರಗತಿಗಳ ಪಠ್ಯಗಳಲ್ಲಿ ಅಳವಡಿಸುವ ಪ್ರಯತ್ನವನ್ನು ಮಾಡಬೇಕಾಗಿದೆ. ಸಮಾಜದ ತಳಸಮುದಾಯಗಳಲ್ಲಿ ಇರುವ ಜಾನಪದ ಪ್ರತಿಭಾವಂತರನ್ನು ಗುರುತಿಸಿ, ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಅವರ ಅನುಭವದ ಪ್ರಯೋಜನ ಪಡೆಯುವ ವ್ಯವಸ್ಥೆಯಾಗಬೇಕಾಗಿದೆ.

ಮಕ್ಕಳಿಗೆ ಮನೆಯಲ್ಲಿ ಶಿಶುಪ್ರಾಸಗಳನ್ನು, ಕಥೆಗಳನ್ನು ಹೇಳುತ್ತೇವೆ. ಶಾಲಾ ಪಠ್ಯಗಳಲ್ಲಿ ಬಹುಸುಲಭವಾಗಿ ಜನಪದ ಕತೆಗಳನ್ನು, ಉತ್ತಮ ಹಾಡುಗಳನ್ನು ಸೇರಿಸಬಹುದಾಗಿದೆ. ಕೆಲ ವರ್ಗಗಳ ಪಠ್ಯಗಳಲ್ಲಿ ಅಲ್ಲಲ್ಲಿ ಜನಪದ ಕಥೆ, ತ್ರಿಪದಿ ಮತ್ತು ಕಥನಕಾವ್ಯಗಳ ತುಣುಕುಗಳು ಕಾಣಸಿಗುತ್ತವೆ. ಅವುಗಳ ಪ್ರಮಾಣವನ್ನು ಹೆಚ್ಚಿಸಬಹುದು. ಜೊತೆಗೆ ಜನಪದ ಕಲೆಗಳ ಪರಿಚಯ, ಕಲಾವಿದರ ಪರಿಚಯ ಸೇರಿಸಬಹುದು. ಜನಪದ ಆಟಗಳನ್ನು ಮಕ್ಕಳಿಗೆ ಕಲಿಸಬಹುದು. ಪ್ರಾಯೋಗಿಕವಾಗಿ ಜನಪದ ಹಾಡುಗಳನ್ನು ಹೇಳಿಕೊಡುವ ವವಸ್ಥೆಯನ್ನೂ ಮಾಡಬಹದು.

ಪಂಚಾಯತಿಗಳ ಬಳಕೆ:

ಪ್ರತಿ ಹಳ್ಳಿಯ ಗ್ರಾಮಪಂಚಾಯಿತಿಗಳನ್ನು ಜಾನಪದ ಸಂಗತಿಗಳ ಸಂಗ್ರಹ, ಪ್ರಚಾರ, ಸಂರಕ್ಷಣೆ ಈ ಮುಂತಾದ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಗ್ರಾಮಪಂಚಾಯತಿಯ ಕೆಳಗಡೆ ಒಬ್ಬ ಜಾನಪದ ಕ್ಷೇತ್ರಕಾರ್ಯಸಹಾಯಕನನ್ನು ಸರ್ಕಾರ ನೇಮಿಸುವ ಯೋಜನೆ ಹಾಕುವುದು ಅವಶ್ಯವಿದೆ. ಆತ ಗ್ರಾಮಗಳಲ್ಲಿ ಮೌಖಿಕ ಪರಂಪರೆಯ ಜ್ಞಾನದ ಬಗ್ಗೆ ಪ್ರಚಾರ ಮಾಡುವುದು, ಪ್ರತಿಭಾವಂತರನ್ನು ಗುರುತಿಸಿ ಸರ್ಕಾರದ- ವಿಶ್ವವಿದ್ಯಾಲಯದ ಗಮನಕ್ಕೆ ತರುವುದು ಮತ್ತು ಗ್ರಾಮಪಂಚಾಯಿತಿಯ ಅಧೀನದಲ್ಲಿ ಒಂದು ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿ, ಅದನ್ನು ಬೆಳೆಸಿಕೊಂಡು, ಕಾಪಾಡಿಕೊಂಡು ಬರುವ ಕೆಲಸವನ್ನು ಮಾಡುವುದು ಅವನ ಕರ್ತವ್ಯಗಳಾಗಬೇಕು.

ಜಾನಪದ ವಸ್ತುಸಂಗ್ರಹಾಲಯಗಳು ಪ್ರತಿಗ್ರಾಮಪಂಚಾಯತಿ ಮಟ್ಟದಲ್ಲಿ ಇರಬೇಕು. ಇಲ್ಲಿ ಜನಪದ ಸಾಹಿತ್ಯ ಮತ್ತು ಮಾಹಿತಿಗಳ ಸಂಗ್ರಹ, ಗ್ರಾಮಗಳ ನಾನಾ ಕ್ಷೇತ್ರಗಳಲ್ಲಿ ಕಾಣುವ ಪ್ರತಿಭಾವಂತರನ್ನು ಗುರುತಿಸುವ, ಅವರ ಬಗೆಗೆ ಮಾಹಿತಿಗಳನ್ನು ಕಲೆಹಾಕುವ, ಅವುಗಳನ್ನು ಸಂಗ್ರಹಾಲಯಗಳಲ್ಲಿ ದಾಖಲಿಸಿ ಇಡುವ, ಅಗತ್ಯ ಬಿದ್ದಾಗ ಸರ್ಕಾರಕ್ಕೆ ಮತ್ತು ವಿಶ್ವವಿದ್ಯಾಲಯಕ್ಕೆ ಅಗತ್ಯ ಮಾಹಿತಿಗಳನ್ನು ದೊರಕಿಸುವ ಕೆಲಸವನ್ನು ಮಾಡಬೇಕು. ತಾಲೂಕಾ ಮತ್ತು ಜಿಲ್ಲಾಮಟ್ಟದ ಪಂಚಾಯತಿಗಳ ಅಧೀನದಲ್ಲೂ ಇಂತಹ ಸಂಗ್ರಹಾಲಯಗಳು ಪ್ರಾರಂಭವಾಗಬೇಕು. ಅಲ್ಲಿಯೂ ಸಿಬ್ಬಂದಿಯ ವ್ಯವಸ್ಥೆಯಾಗಬೇಕು. ಜಿಲ್ಲಾಮಟ್ಟದಲ್ಲಿ ಜಾನಪದಕ್ಕೆ ಸಂಬಂಧಿಸಿ ಎರಡು ಘಟಕಗಳು ಕೆಲಸ ಮಾಡಬೇಕು:

೧. ಸಂಗ್ರಹಾಲಯ: ವಸ್ತು ಸಂಗ್ರಹ ಮತ್ತು ಸಂರಕ್ಷಣೆ.

೨. ಪತ್ರಾಗಾರಗಳು: ಸಾಹಿತ್ಯ/ಮಾಹಿತಿ ಸಂಗ್ರಹ ಮತ್ತು ದಾಖಲಾತಿ.


ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಆಗುವ ಪ್ರಯೋಜನಗಳು:

೧. ದೇಸೀಸಂಸ್ಕೃತಿ ಮತ್ತು ಬದುಕಿನ ಮೌಲ್ಯಗಳ ಅರಿವು, ಪುನರುತ್ಥಾನ ಮತ್ತು ಪ್ರಸಾರ

೨. ಮೌಖಿಕ ಸಾಹಿತ್ಯ-ಗ್ರಾಮೀಣ ಕಲಾ-ಕ್ರೀಡಾ ಪ್ರಕಾರಗಳ ಕಲಿಕೆ ಪ್ರಸಾರ.

೩. ಪರಂಪರೆ ಜ್ಞಾನದ ಶೋಧ-ಸಂರಕ್ಷಣೆ, ಬದುಕಿನಲ್ಲಿ ಅಳವಡಿಕೆ.

೪. ಗ್ರಾಮೀಣ ಕಸಬು ಮತ್ತು ಕರಕುಶಲ ಕಲೆಗಳ ಪುನಃಶ್ಚೇತನ

೫. ದೇಸೀ ಕೃಷಿ ಮತ್ತು ವೈದ್ಯ ಪದ್ಧತಿಗಳ ಶೋಧ ಮತ್ತು ಅಳವಡಿಕೆ. ಇದರಿಂದ ದೇಶದ ಆಹಾರ, ಆರೋಗ್ಯಗಳ ಅಭಿವೃದ್ಧಿ, ಅರಿವುಗಳ ಹೆಚ್ಚಳ. ಇದರಿಂದ ಸಮೃದ್ಧ ಭಾರತದ ನಿರ್ಮಾಣಕ್ಕೆ ನಾಂದಿ.

೬. ಗ್ರಾಮಾಂತರ ಪ್ರದೇಶದ ಪ್ರತಿಭಾವಂತ ಕಸಬುದಾರರಿಗೆ/ ಕಲಾವಿದರಿಗೆ ಪ್ರೋತ್ಸಾಹ ಮತ್ತು ಆರ್ಥಿಕ ಭದ್ರತೆ.
೭. ಭಾರತದ ಯುವಕರಿಗೆ ಸ್ವಾವಲಂಬಿ ಉದ್ಯೋಗದ ಅವಕಾಶ, ಒಂದು ಹೊಸ ಬದುಕಿನ ದಾರಿಯ ಅನ್ವೇಷಣೆ. ಇದರಿಂದ ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ನಾಂದಿ.

೮. ದೇಸಿ ಸೌಲಭ್ಯಗಳ ಅರಿವು ಮತ್ತು ಅಳವಡಿಕೆ.

೯. ಆಧುನಿಕ ಪ್ರಪಂಚದ ಆತಂಕಗಳಿಂದ (ಕೈಗಾರಿಕೀಕರಣ, ಜಾಗತೀಕರಣಗಳ ದುಷ್ಪರಿಣಾಮಗಳಿಂದ) ರಕ್ಷಣೆ.

೧೦. ನೈಸರ್ಗಿಕ ಪರಿಸರದ ಸ್ಥಿತಿಯನ್ನು ಕಾಪಾಡಿಕೊಂಡು ಹೋಗಲು ಒಂದು ಪ್ರತಿ ಯೋಜನೆ.


-ಡಾ| ವೀರಣ್ಣ ದಂಡೆ
ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಸಂಸ್ಥೆ
ಗುಲಬರ್ಗಾ ವಿಶ್ವವಿದ್ಯಾಲಯ
ಗುಲಬರ್ಗಾ-೫೮೫ ೧೦೬
ಮೊಬಾಯಿಲ್: ೯೪೪೮೭೭೮೯೯೧

ದೆಹಲಿಯಲ್ಲಿ ರಹಮತ್ ತರೀಕೆರೆ

( ಈಚೆಗಷ್ಟೆ ರಹಮತ್ ತರೀಕೆರೆ ದೆಹಲಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ವೀಕರಿಸುವ ಹೊತ್ತಿನ ಕೆಲವು ಅಪರೂಪದ ಫೋಟೋಗಳು ಇಲ್ಲಿವೆ. ಇಲ್ಲಿನ ಫೋಟೋಗಳು ಡಿ.ಬಾಲಕೃಷ್ಣ ನಾಯ್ಕ್ ಅವರ ಕೆಂಪುಕೋಟೆ ಬ್ಲಾಗ್ ನಿಂದ ಎರವಲು ಪಡೆದು ಇಲ್ಲಿ ಬಳಸಿಕೊಳ್ಳಲಾಗಿದೆ)