ಭಾನುವಾರ, ಮಾರ್ಚ್ 27, 2011

ಕರ್ನಾಟಕದ ಜನಪದ ಆಚರಣೆಗಳು: ಒಂದು ಪುನರಾವರ್ತನೆಯ ಕೃತಿ-ಅರುಣ್

ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಪ್ರಸಾರಾಂಗದಿಂದ ಹೊರಬಂದ ಕೃತಿ ಕರ್ನಾಟಕ ಜನಪದ ಆಚರಣೆಗಳು. ಇದನ್ನು ಕನ್ನಡ ವಿವಿಯ ಜಾನಪದ ವಿಭಾಗದ ಪ್ರಾಧ್ಯಾಪಕರಾದ ಡಾ.ಸ.ಚಿ.ರಮೇಶ್ ಬರೆದಿದ್ದಾರೆ. ಈ ಕೃತಿಯಲ್ಲಿ ಕರ್ನಾಟಕದ ಬೇರೆ ಬೇರೆ ಭಾಗದ ಎರಡು ನೂರು ಆಚರಣೆಗಳ ಪರಿಚಯವಿದೆ. ಈ ಆಚರಣೆಗಳನ್ನು ಓದಿದಂತೆ ಕರ್ನಾಟಕದ ಜನಪದ ಆಚರಣ ಲೋಕದ ಭಿನ್ನತೆಗಳು ಕಾಣುತ್ತವೆ. ಜಾನಪದ ಆಚರಣೆಗಳ ಪ್ರಾಥಮಿಕ ಮಾಹಿತಿಗಾಗಿ ಇದೊಂದು ಉಪಯುಕ್ತ ಕೃತಿ. ಜಾನಪದ ಕ್ಷೇತ್ರಕ್ಕೆ ಪ್ರವೇಶಿಸುವ ವಿದ್ಯಾರ್ಥಿಗಳು ಮಾಹಿತಿಯ ಕಾರಣಕ್ಕೆ ಈ ಪುಸ್ತಕವನ್ನು ನೋಡಬಹುದು.

ಡಾ.ಸ.ಚಿ ರಮೇಶ ಅವರು ಜಾನಪದ ಕ್ಷೇತ್ರದಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಬುರ್ರಕಥಾ ಈರಮ್ಮ ಹಾಡಿದ ನ್ಯಾಸಿ ಚೆನ್ನಮ್ಮನ ಕಾವ್ಯ, ಮಾರ‍್ವಾಡಿ ಶೇಟ್ ನಂತಹ ಜನಪದ ಮಹಾಕಾವ್ಯಗಳನ್ನು ಸಂಗ್ರಹಿಸಿದ್ದಾರೆ. ಕೆಲವು ಜಾನಪದ ಕೃತಿಗಳನ್ನು ಸಂಪಾದಿಸಿದ್ದಾರೆ. ಕರ್ನಾಟಕ ಜಾನಪದ ಪತ್ರಿಕೆಯ ಸಂಪಾದಕರಾಗಿಯೂ, ಜಾನಪದ ವಿಭಾಗದ ಮುಖ್ಯಸ್ಥರಾಗಿಯೂ ಜಾನಪದಕ್ಕೆ ಪೂರಕವಾದ ಸಂಗತಿಗಳಲ್ಲಿ ದುಡಿದಿದ್ದಾರೆ. ಇನ್ನೂ ಬಿಡುಗಡೆ ಆಗಬೇಕಿರುವ ದಕ್ಷಿಣ ಭಾರತೀಯ ಜಾನಪದ ಕೋಶದ ಸಂಪಾದಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಡಾ.ಸ.ಚಿ.ರಮೇಶ ಅವರು ಈ ಎಲ್ಲಾ ಕೆಲಸದ ಮೂಲಕ ಕರ್ನಾಟಕದ ಜಾನಪದ ಕ್ಷೇತ್ರಕ್ಕೆ ತಮ್ಮ ಕೃತಿಗಳನ್ನು ಸೇರ್ಪಡೆಗೊಳಿಸಿದ್ದಾರೆ. ಹಾಗಾಗಿ ಅವರ ಶ್ರಮವನ್ನು ಗೌರವಿಸಬೇಕು. ಆದರೆ ಈ ಎಲ್ಲಾ ಕೃತಿಗಳ ಮೂಲಕ ಅವರು ಹೊಮ್ಮಿಸುವ ತಿಳುವಳಿಕೆಯಲ್ಲಿ ಮಾತ್ರ ಜಾನಪದ ಅಧ್ಯಯನಗಳನ್ನು ಮುಂದೆ ಕರೆದೊಯ್ಯುವ ಒಳನೋಟಗಳಿಲ್ಲ. ಕೆಲವೊಮ್ಮೆ ಹಳಹಳಿಕೆಯಿಂದಲೋ, ಹಳೆಯದ್ದೆಲ್ಲಾ ಬಂಗಾರ ಎನ್ನುವ ತಿಳುವಳಿಕೆಯಿಂದಲೋ, ಜಾನಪದವನ್ನು ರಕ್ಷಿಸುವ ವಕ್ತಾರಿಕೆಯಿಂದ ಮಾತನಾಡುತ್ತಾರೆ. ಈ ಕಾರಣಕ್ಕೆ ಅವರ ಚಿಂತನೆ ಸವೆದ ದಾರಿಯಲ್ಲೇ ಪಯಣಿಸುತ್ತಿದೆ.

ಅಂತಹ ಸವೆದ ದಾರಿಯಲ್ಲಿ ಮುಂದುವರಿದ ಕೃತಿ ಕರ್ನಾಟಕ ಜಾನಪದ ಆಚರಣೆಗಳು. ಕರ್ನಾಟಕ ಜಾನಪದ ಆಚರಣೆಗಳ ಪರಿಚಯ ವಿಶ್ಲೇಷಣೆ ಕುರಿತಂತೆ ಕನ್ನಡದಲ್ಲಿ ಹೆಚ್ಚು ಕೆಲಸ ನಡೆದಿದೆ. ಕಂಬಾರರು ಸಂಪಾದಿಸಿದ ಜಾನಪದ ವಿಶ್ವಕೋಶದಿಂದ ಮೈಸೂರು ವಿವಿ ಜಾನಪದ ವಿಶ್ವಕೋಶ, ಜನಸಮುದಾಯಗಳ ಅಧ್ಯಯನ ಮುಂತಾದ ಅನೇಕ ಕೃತಿಗಳಲ್ಲಿ ಜನಪದ ಆಚರಣೆಯ ಮಾಹಿತಿ ವಿಶ್ಲೇಷಣೆ ಇದೆ. ಈಗ ಮತ್ತದೇ ಆಚರಣೆಗಳ ಮಾಹಿತಿ ಸಂಗ್ರಹಿಸುವವರು ಈ ತನಕ ಅನುಸರಿಸಿದ ಮಾರ್ಗವನ್ನು ಬಿಟ್ಟುಕೊಟ್ಟು ಹೊಸ ಮಾರ್ಗವನ್ನು ಅನುಸರಿಸಬೇಕು. ಆಚರಣೆಗಳನ್ನು ಜ್ಞಾನದ ನಿಧಿಗಳು, ಸಾಮರಸ್ಯದ ಬಿಂದುಗಳು ಎನ್ನುವ ದುಂಡು ಹೇಳಿಕೆಗಳನ್ನು ಇನ್ನಾದರೂ ಮೀರಬೇಕು. ಆದರೆ ಸ.ಚಿ ರಮೇಶ ಅವರು ಅದೇ ಹಳೇ ಮಾರ್ಗ, ಹಳೆಯ ಧೋರಣೆಯಲ್ಲಿ ಮಾಹಿತಿಯನ್ನು ಕಲೆಹಾಕಿದ್ದಾರೆ.

ಈ ಕೃತಿಯ ಮೊದಲ ಮಾತಿನಲ್ಲಿ ಇಲ್ಲಿನ ಮಾಹಿತಿಯನ್ನು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿರುವುದಾಗಿ ಹೇಳುತ್ತಾರೆ. ಆದರೆ ಕ್ಷೇತ್ರ ಕಾರ್ಯದ ಸುಳಿವು ಈ ಕೃತಿ ಓದುವಾಗ ಅಷ್ಟಾಗಿ ದೊರೆಯುವುದಿಲ್ಲ. ಇಲ್ಲಿನ ಆಚರಣೆಗಳಿಗೆ ಛಾಯಾಚಿತ್ರಗಳಿರದೆ, ಲೇಖಕರು ರೇಖಾಚಿತ್ರಗಳಿಗೆ ಮೊರೆ ಹೋದದ್ದು ಇದನ್ನು ಸಾಬೀತುಪಡಿಸುತ್ತದೆ. ಈಗಾಗಲೇ ಸಂಗ್ರಹಿತ ಮಾಹಿತಿಯನ್ನು ಆಧರಿಸಿ, ಆ ಮಾಹಿತಿಯನ್ನು ಚುಟುಕಾಗಿಸುವ ಕೆಲಸ ಮಾಡಿದ್ದಾರೆ. ಇಲ್ಲಿನ ಬರಹಗಳನ್ನು ಓದಿದರೆ, ಬಹುಪಾಲು ಬರಹಗಳು ಪತ್ರಿಕೆಯ ಬರಹಗಳನ್ನಾಧರಿಸಿದಂತೆ ಕಾಣುತ್ತದೆ. ಹೀಗೆ ಪತ್ರಿಕೆಗಳ ಮಾಹಿತಿಯನ್ನು ಒಪ್ಪವಾಗಿ ಕಲೆಹಾಕಿ ಪುಸ್ತಕ ಮಾಡುವುದು ವಿಶ್ವವಿದ್ಯಾಲಯದ ಅದ್ಯಾಪಕರ ಕೆಲಸವೆ? ಎನ್ನುವ ಪ್ರಶ್ನೆಯೊಂದು ಎದುರಾಗುತ್ತದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಇಂತಹ ಕೆಲಸವನ್ನು ವಹಿಸಿದ್ದರೆ ಅವರು ಇದಕ್ಕಿಂತ ಚೆನ್ನಾಗಿ ನಿರ್ವಹಿಸುತ್ತಿದ್ದರು.

ಕೆಲವು ಜನಪದ ಆಚರಣೆಗಳು ಕೆಳಸಮುದಾಯಗಳನ್ನು ಹಿಡಿತದಲ್ಲಿಕೊಳ್ಳಲು ಮೇಲ್ವರ್ಗದ ಹಿತಾಸಕ್ತಿಯಿಂದ ರೂಪುಗೊಂಡದ್ದಿದೆ. ಇನ್ನು ಜಾತಿ ಶ್ರೇಣೀಕರಣವನ್ನು ಜೀವಂತವಾಗಿಡುವ ಕಟ್ಟಳೆಯನ್ನು ಅವುಗಳ ಆಂತರ್ಯದಲ್ಲೇ ಅಡಗಿಸಿಕೊಂಡ ಆಚರಣೆಗಳಿವೆ. ಪುರುಷ ಪ್ರಧಾನ ಅಹಮಿಕೆಯನ್ನು ಮೆರೆಸಿ ಹೆಣ್ಣನ್ನು ದಮನಗೊಳಿಸುವ ನೆಲೆಯ ಆಚರಣೆಗಳೂ ಇವೆ. ಆದರೆ ಇಲ್ಲಿನ ಲೇಖಕರಿಗೆ ಈ ಯಾವ ಅನುಮಾನಗಳೂ ಕಾಡಿದಂತಿಲ್ಲ. ಅವರಿನ್ನು ಜನಪದ ಆಚರಣೆಗಳೆಲ್ಲವನ್ನು ಸಾಮರಸ್ಯದ ಜೀವಸೆಲೆಗಳೆಂದು ಬೀಸಾಗಿ ಹೇಳುವ ಹಂತದಿಂದ ಮುಂಚಲಿಸಿಲ್ಲ. ಕರ್ನಾಟಕ ಹಲವು ಧರ್ಮಗಳ ನೆಲೆ. ಆದರೆ ಇಲ್ಲಿ ಹಿಂದೂ ಧರ್ಮವನ್ನು ಹೊರತುಪಡಿಸಿದ ಅನ್ಯಧರ್ಮೀಯ ಆಚರಣೆಗಳು ಬೆರಳೆಣಿಕೆಯಷ್ಟಿವೆ. ಹೈದರಾಬಾದ ಕರ್ನಾಟಕದಲ್ಲಿ ಬಹುದೊಡ್ಡ ಆಚರಣೆಯಾದ ಮೊಹರಂ ಹಬ್ಬದ ಭಿನ್ನ ಆಚರಣೆಗಳು ಇಲ್ಲಿ ದಾಖಲಾಗಿಲ್ಲ. ಬೌದ್ಧ, ಜೈನ,ಸಿಕ್,ಕ್ರೈಸ್ತ ಮುಂದಾದ ಧರ್ಮಗಳ ಆಚರಣೆಗಳನ್ನು ಗಮನಿಸಲು ಸಾಧ್ಯವಾಗಿಲ್ಲ. ವಿಶ್ವವಿದ್ಯಾಲಯದ ಬುಡಕ್ಕೆ ಹತ್ತಿಕೊಂಡಿರುವ ಕಮಲಾಪುರದ ತಮಿಳರ ಆಚರಣೆಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಇದನ್ನು ಗಮನಿಸಿದರೆ ಈ ಕೃತಿಯನ್ನು ಕರ್ನಾಟಕದ ಜನಪದ ಆಚರಣೆಗಳು ಎಂದು ಕರೆಯುವುದೂ ಕಷ್ಟವಾಗುತ್ತದೆ. ಹೀಗೆ ಹಲವು ಗಂಭೀರ ಮಿತಿಗಳು ಈ ಕೃತಿಗಿವೆ. ಹಾಗಾಗಿ ಕರ್ನಾಟಕದ ಜನಪದ ಆಚರಣೆಗಳ ಈ ಕೃತಿ ಪುನರಾವರ್ತನೆಯ ಒಂದು ಸವಕಲು ಕೆಲಸವಾಗಿದೆ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಜನಪದ ಆಚರಣೆಗಳು ಎಂಬ ಪುಸ್ತಕದ ವಿಮರ್ಶೆಯನ್ನು ನೋಡಿದೆ. ನಿನ್ನ ವಾದ ಸರಿಯಿದೆ. ಸಮಾಜವಿಜ್ಞಾನಗಳ ಪರಿಚಯವಿಲ್ಲದಿದ್ದರೆ ಇಂತಹ ಕೆಲಸಗಳು ನಡೆಯುತ್ತವೆ. ಅಥವಾ ಒಂದು ಜ್ಞಾನಶಿಸ್ತುವಿನ ತರಬೇತಿ ಇಲ್ಲದಿದ್ದರೆ ಈ ರೀತಿಯ ವ್ಯಾಖ್ಯಾನ ಮಂಡನೆಯಾಗುತ್ತದೆ.
ಆಚರಣೆಗಳ ಹಿಂದಿನ ಜನರ ನಂಬಿಕೆಗಳು, ಅದರ ಆರ್ಥಿಕ ಹಿತಾಸಕ್ತಿಗಳು, ಭೂಮಾಲಿಕರ ಮತ್ತು ದುಡಿಯುವ ವರ್ಗದ ನಡುವಿನ ಸಂಬಂಧಗಳು, ಈ ಆಚರಣೆಗಳ ಮೂಲದಲ್ಲಿರುವ ಲಿಂಗ ಅಸಮಾನತೆ ಅಥವಾ ಲಿಂಗ ಸಮಾನತೆಯ ನೆಲೆಗಳು ಇವು ಯಾವುವು ಈ ಬಗೆಯ ದುಂಡನೆಯ ವ್ಯಾಖ್ಯಾನಗಳಲ್ಲಿ ಮುಖ್ಯವಾಗುವುದಿಲ್ಲ. ದುಂಡನೆಯ ಬರಹ ಎಂಬ ವಿವರಣೆ ಬಹಳ ಚೆನ್ನಾಗಿದೆ.ಯಾವ ಯಾವ ಜಾತಿ ಸಮುದಾಯಗಳು ಯಾವ ಯಾವ ಪಾತ್ರ ನಿರ್ವಹಿಸುತ್ತವೆ ಎಂಬುದನ್ನು ಈ ಆಚರಣೆಗಳ ಬಗೆಗಿನ ಕ್ಷೇತ್ರಕಾರ್ಯದ ಮೂಲಕ ಮಾತ್ರ ಹಿಡಿದಿಡಲು ಸಾಧ್ಯ.
ನೀನು ಮಂಡಿಸಿರುವ ನೆಲೆಯಲ್ಲಿ ಕೆಲಸ ನಡೆಯಬೆಕು.
ಶುಭವಾಗಲಿ
ಟಿ.ಆರ್. ಚಂದ್ರಶೇಖರ